Tag: Grama Panchyat

  • ಡೆಂಗ್ಯೂನಿಂದ ವ್ಯಕ್ತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಡೆಂಗ್ಯೂನಿಂದ ವ್ಯಕ್ತಿ ಸೇರಿ ಇಬ್ಬರು ಮಕ್ಕಳು ದುರ್ಮರಣ

    ಬೆಳಗಾವಿ: ಒಂದು ಕಡೆ ಮಳೆ ಇಲ್ಲದೆ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದಾರೆ. ಈಗ ಬರದ ಜೊತೆಗೆ ಈ ಭಾಗದಲ್ಲಿ ಡೆಂಗ್ಯೂ ರೋಗ ತಾಂಡವವಾಡುತ್ತಿದೆ.

    ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದಲ್ಲಿ ಡೆಂಗ್ಯೂ ರೋಗದಿಂದ ಇಬ್ಬರು ಮಕ್ಕಳು ಹಾಗೂ ಓರ್ವ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚು ಮಂದಿ ಪಕ್ಕದ ಮಹಾರಾಷ್ಟ್ರದ ಮೀರಜ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶೇಜಲ ಸಂಗಪ್ಪ ರೇವಾಗೋಳ (9), ಅಂಕಿತಾ ಅನಿಲ್ ಮಠಪತಿ (5) ಹಾಗೂ ಧರೆಪ್ಪ ಎಂಬವರು ಡೆಂಗ್ಯೂ ರೋಗಕ್ಕೆ ಬಲಿಯಾಗಿದ್ದಾರೆ. ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದಲೇ ಈ ಭಾಗದಲ್ಲಿ ಡೆಂಗ್ಯೂ ತಾಂಡವವಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಸುಪ್ರಸಿದ್ಧ ಖಿಳೇ ಗಾಂವ ಬಸವಣ್ಣ ದೇವಸ್ಥಾನ ಹೊಂದಿರುವ ಈ ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅಧಿಕಾರಿಗಳು ಈಗಲಾದರೂ ಡೆಂಗ್ಯೂ ಇಲ್ಲಾ ಎನ್ನುವ ಮೊಂಡು ವಾದವನ್ನು ಬಿಟ್ಟು ಈ ಭಾಗದಲ್ಲಿ ಡೆಂಗ್ಯೂ ರೋಗ ಇನ್ನಷ್ಟು ಜನರನ್ನು ಬಲಿ ತೆಗೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ.

  • ಸೈನಿಕನ ಪೋಷಕರಿಗೆ ನೀರು ಕೊಡದೇ ಸತಾಯಿಸುತ್ತಿದ್ದಾರೆ ಅಧಿಕಾರಿಗಳು!

    ಸೈನಿಕನ ಪೋಷಕರಿಗೆ ನೀರು ಕೊಡದೇ ಸತಾಯಿಸುತ್ತಿದ್ದಾರೆ ಅಧಿಕಾರಿಗಳು!

    ತುಮಕೂರು: ಸೈನಿಕನೋರ್ವನ ಮನೆಗೆ ಗ್ರಾಮ ಪಂಚಾಯತಿಯವರು ಕುಡಿಯುವ ನೀರಿನ ಸಂಪರ್ಕ ನೀಡದೇ ದೌರ್ಜನ್ಯ ನೀಡುತ್ತಿರುವ ಪ್ರಕರಣ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.

    ಕೋಣನಕುರಿಕೆ ಗ್ರಾಮದ ಗಿರಿಯಪ್ಪ ಹಾಗೂ ನಾಗಮ್ಮ ದಂಪತಿ ಮಗ ವೆಂಕಟೇಶ್ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಊರಲಿದ್ದ ಸೈನಿಕನ ತಂದೆ ತಾಯಿಗೆ ಗುಜ್ಜನಡು ಗ್ರಾಮ ಪಂಚಾಯತಿಯಿಂದ ನೀರಿನ ಸಂಪರ್ಕ ನೀಡದೆ ತೊಂದರೆ ನೀಡುತಿದ್ದಾರೆ.

    ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ನೀರಿನ ಸಂಪರ್ಕ ನೀಡುತ್ತಿಲ್ಲ ಎಂದು ಗಿರಿಯಪ್ಪ ಆರೋಪಿಸಿದ್ದಾರೆ. ಪರಿಣಾಮ ಕಳೆದ ಐದಾರು ತಿಂಗಳಿನಿಂದ ದೂರದಿಂದ ನೀರು ಹೊತ್ತು ತಂದು ಜೀವನ ನಡೆಸುತ್ತಿದ್ದಾರೆ.

    ನನ್ನ ಸಮಸ್ಯೆಯನ್ನು ಸಾಕಷ್ಟು ಬಾರಿ ಹೇಳಿದರೂ ಗ್ರಾಮ ಪಂಚಾಯತ್ ಸದಸ್ಯರು ಕೇಳುತ್ತಲೇ ಇಲ್ಲ ಎಂದು ಗಿರಿಯಪ್ಪ ತಿಳಿಸಿದ್ದಾರೆ.