Tag: grama panchayath

  • ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ

    ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ

    – ಮೂರು ಕೋಟಿಗೂ ಅಧಿಕ ಬಿಲ್ ಬಾಕಿ!

    ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಬರೋಬ್ಬರಿ ಮೂರು ಕೋಟಿಗೂ ಅಧಿಕ ರೂ.ಗಳ ಬಿಲ್ ಮೊತ್ತವನ್ನು ಗ್ರಾಮ ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ.

    ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಕಳೆದ ಏಳೆಂಟು ವರ್ಷಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಶ್ರವಣಬೆಳಗೂಳಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು ಪೂರೈಸಬೇಕು. ಅದಕ್ಕಾಗಿ ಹೇಮಾವತಿ ನದಿಯಿಂದ ನೀರು ತರಲಾಗಿದ್ದು, ಬೃಹತ್ ಯಂತ್ರಗಳು ಚಾಲನೆಯಲ್ಲಿರುತ್ತವೆ.

    ಇಷ್ಟೇ ಅಲ್ಲದೇ ಮಹಾಮಸ್ತಕಾಭಿಷೇಕ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಎಲ್ಲ ಕಾರಣದಿಂದ ಶ್ರವಣಬೆಳಗೂಳ ಗ್ರಾಮಪಂಚಾಯಿತಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಗ್ರಾಮ ಪಂಚಾಯಿತಿಗೆ ಬರುವ ಕಡಿಮೆ ಆದಾಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಶ್ರವಣಬೆಳಗೂಳಕ್ಕೆ ಬಿಲ್ ಪಾವತಿ ಮಾಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯ ಶಾಸಕ ಬಾಲಕೃಷ್ಣ ಮನವಿ ಮಾಡಿದ್ದಾರೆ.

    ಪಂಚಾಯಿತಿಗೆ ಬರುವ ಆದಾಯದ ಇತಿಮಿತಿಯಲ್ಲಿ ತಿಂಗಳಿಗೆ ಎರಡು ಲಕ್ಷದಷ್ಟು ಬಿಲ್ ಕಟ್ಟುತ್ತಿದ್ದಾರೆ. ಆದರೆ ಒಂದು ತಿಂಗಳಿಗೆ ಸುಮಾರು 4 ಲಕ್ಷದವರೆಗೆ ಬಿಲ್ ಬರುವ ಕಾರಣ ಪ್ರತಿ ತಿಂಗಳು ವಿದ್ಯುತ್ ಬಿಲ್ ಬಾಕಿ ಉಳಿಯುತ್ತಲೇ ಇದೆ. ಕೆಇಬಿಯವರು ಕೂಡ ಹಲವಾರು ಬಾರಿ ಬಿಲ್ ಪಾವತಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶ್ರವಣಬೆಳಗೊಳ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವುದರಿಂದ ಸರ್ಕಾರ ಗ್ರಾಮ ಪಂಚಾಯಿತಿಗೆ ವಿದ್ಯುತ್ ಬಿಲ್ ಕಟ್ಟಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿರುವ ಬಾಹುಬಲಿ ಪ್ರತಿಮೆ ಸೇರಿದಂತೆ ಇನ್ನಿತರ ಇತಿಹಾಸ ಪ್ರಸಿದ್ಧ ಬಸದಿಗಳು ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸುತ್ತವೆ.

  • ಗ್ರಾಮದಲ್ಲಿನ ಜಗಳದಿಂದ ಬೇಸತ್ತ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಗ್ರಾಮದಲ್ಲಿನ ಜಗಳದಿಂದ ಬೇಸತ್ತ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಗ್ರಾಮದಲ್ಲಿನ ಜಗಳದಿಂದ ಮನನೊಂದ ಗ್ರಾಮ ಪಂಚಾಯತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪಂಚಾಯತಿ ಸದಸ್ಯೆ ಲಕ್ಷ್ಮಿ ರೇವಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಜಮೀನಿನ ವಿಚಾರದಲ್ಲಿ ಗ್ರಾಮದಲ್ಲಿ ಹಲವು ದಿನಗಳಿಂದ ಜಗಳವಾಗುತ್ತಿದ್ದು, ಶುಕ್ರವಾರ ನಡೆದ ಜಗಳದಿಂದ ಮನನೊಂದ ಲಕ್ಷ್ಮಿ ರೇವಣ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಚಿಕಿತ್ಸೆಗಾಗಿ ನೆಲಮಂಗಲ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಗ್ರಾಮ ಪಂಚಾಯತ್ ಮೇಲೆ ಬಣ್ಣ ಮಾಸಿದ ರಾಷ್ಟ್ರಧ್ವಜ- ಸಾರ್ವಜನಿಕರ ಆಕ್ರೋಶ

    ಗ್ರಾಮ ಪಂಚಾಯತ್ ಮೇಲೆ ಬಣ್ಣ ಮಾಸಿದ ರಾಷ್ಟ್ರಧ್ವಜ- ಸಾರ್ವಜನಿಕರ ಆಕ್ರೋಶ

    ಮಂಡ್ಯ: ಬಣ್ಣ ಮಾಸಿದ ರಾಷ್ಟ್ರಧ್ವಜವನ್ನು ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮಪಂಚಾಯತ್ ಕಚೇರಿ ಮೇಲೆ ಹಾರಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

    ಗ್ರಾಮ ಪಂಚಾಯತ್ ಕಚೇರಿ ಮೇಲೆ ಹಾರಿಸುತ್ತಿರುವ ರಾಷ್ಟ್ರ ಧ್ವಜ ಹಳೆಯದಾಗಿದೆ. ಹಲವು ದಿನಗಳಿಂದಲೂ ಒಂದೇ ಧ್ವಜ ಬಳಸುತ್ತಿರುವುದರಿಂದ ಧ್ವಜದ ಕೇಸರಿ ಬಣ್ಣ ಭಾಗಶಃ ಬಿಳಿಯ ಬಣ್ಣದಂತೆ ಕಾಣುತ್ತಿದೆ.

    ದಿನ ಬೆಳಗ್ಗೆ ಧ್ವಜ ಹಾರಿಸಿ ಸಂಜೆ ಇಳಿಸಲಾಗುತ್ತೆ. ದಿನ ನಿತ್ಯ ಧ್ವಜ ನೋಡುವ ಅಧಿಕಾರಿಗಳಿಗೆ ಬಣ್ಣ ಮಾಸಿದ ರಾಷ್ಟ್ರ ಧ್ವಜವನ್ನು ಹಾರಿಸಬಾರದು ಎಂಬ ಪರಿಜ್ಞಾನವಿಲ್ಲ. ಸರ್ಕಾರಿ ಸಂಬಳ ತೆಗೆದುಕೊಂಡರೂ ರಾಷ್ಟ್ರ ಧ್ವಜದ ಬಗ್ಗೆ ಕನಿಷ್ಟ ಸೌಜನ್ಯ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

  • ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ

    ರಸ್ತೆಗಾಗಿ ಪ್ರಧಾನಿಗೆ ಪತ್ರ ಬರೆದ ಉಡುಪಿಯ 85ರ ನಿವೃತ್ತ ಶಿಕ್ಷಕ- ಪ್ರಧಾನಿಯ ರಿಪ್ಲೈ ಬಂದ್ರೂ ರಾಜ್ಯಸರ್ಕಾರದಿಂದ ನೋ ರಿಪ್ಲೈ

    ಉಡುಪಿ: ಇಲ್ಲಿನ ನಿವೃತ್ತ ಶಿಕ್ಷಕರೊಬ್ಬರು ತನ್ನೂರಿಗೊಂದು ರಸ್ತೆ ಬೇಕು ಅಂತ ಕಳೆದ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾಮ ಪಂಚಾಯತ್ ಹಾಗೂ ರಾಜ್ಯ ಸರ್ಕಾರದ ಮೊರೆ ಹೋದ್ರೂ ಪ್ರಯೋಜನವಾಗದೆ ಕೊನೆಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

    ನಿವೃತ್ತ ಶಿಕ್ಷಕರಾಗಿರೋ ಗಣಪತಿ ರಸ್ತೆಗಾಗಿ ಹೋರಾಡುತ್ತಿರುವವರು. ಉಡುಪಿಯ ಹೆಬ್ರಿ ಸಮೀಪದ ಕಳ್ತೂರಿನವರಾದ ಇವರಿಗೆ 85 ವರ್ಷ ವಯಸ್ಸು. ಊರುಗೋಲು ಹಿಡ್ಕೊಂಡು ತಿರುಗೋ ಇವರು ನಮಗೆ ಏನಾದ್ರೂ ಸೌಲಭ್ಯ ಕೊಡಿ ಅಂತಿಲ್ಲ. ಬದಲಾಗಿ ನಮ್ಮೂರಿಗೊಂದು ರಸ್ತೆ ಮಾಡಿಕೊಡಿ ಅಂತಿದ್ದಾರೆ. ಇದಕ್ಕಾಗಿ ಈ ಜೀವ 25 ವರ್ಷಗಳಿಂದ ಹೋರಾಟ ಮಾಡ್ತಿದ್ದಾರೆ. ಗ್ರಾ.ಪಂ ನಿಂದ ಹಿಡಿದು ರಾಜ್ಯ ಸರ್ಕಾರದವರೆಗೂ ಪತ್ರ ಬರೆದು ಬರೆದು ಸುಸ್ತಾದ್ರು. ಆದ್ರೂ ಕೆಲಸ ಆಗಿಲ್ಲ. ಪ್ರಯತ್ನ ಬಿಡದೇ ಕೊನೆಗೆ ಪ್ರಧಾನಿಗೂ ಪತ್ರ ಬರೆದೇ ಬಿಟ್ಟರು.

    ಪ್ರಧಾನಿ ಕಚೇರಿಗೆ ಪತ್ರ ಬರೆದು 6 ತಿಂಗಳೊಳಗೆ ಅಲ್ಲಿಂದ ರಿಪ್ಲೈ ಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಪ್ರಧಾನಿ ಹೇಳಿ 6 ತಿಂಗಳು ಕಳೆದಿದೆ. ಆದ್ರೆ ರಾಜ್ಯ ಸರ್ಕಾರ ಅದರ ಬಗ್ಗೆ ಯೋಚನೆ ಮಾಡೋದ್ ಬಿಡಿ, ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಟ್ಟಿಲ್ಲ.

    ಒಟ್ಟಿನಲ್ಲಿ ಇಳಿ ವಯಸ್ಸಿನಲ್ಲೂ ತಮ್ಮೂರಿಗೆ ಒಂದು ರಸ್ತೆ ಆಗ್ಬೇಕು ಅಂತಾ ಹೋರಾಡ್ತಿರೋ ಈ ಹಿರಿ ಜೀವದ ಪ್ರಯತ್ನವನ್ನು ಮೆಚ್ಚಲೇ ಬೇಕು. ಆದ್ರೆ ಸರ್ಕಾರ ಮಾತ್ರ ರಸ್ತೆಯಲ್ಲಿ ಓಡಾಡುವ ಭಾಗ್ಯ ಕರುಣಿಸ್ತಿಲ್ಲ. ಹೀಗಾಗಿ ಕಳ್ತೂರಿಗೆ ಗದ್ದೆಯಂತಹ ರಸ್ತೆಯೇ ಗತಿ ಆಗಿದೆ.