Tag: Grama Panchayat

  • ನಿಂಬೆಹಣ್ಣು ಇಟ್ಕೊಳ್ಳೋ ಪ್ರಶ್ನೆಗೆ ರೇವಣ್ಣ ಖಡಕ್ ಉತ್ತರ

    ನಿಂಬೆಹಣ್ಣು ಇಟ್ಕೊಳ್ಳೋ ಪ್ರಶ್ನೆಗೆ ರೇವಣ್ಣ ಖಡಕ್ ಉತ್ತರ

    – ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ

    ಹಾಸನ: ನಿಂಬೆಹಣ್ಣು ಇಟ್ಟುಕೊಳ್ಳುವುದು ಯಾಕೆ ಎಂಬ ಪ್ರಶ್ನೆಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಉತ್ತರಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರೇವಣ್ಣ ಯಾವಾಗಲೂ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಳ್ತಾರೆ ಎಂಬ ಸಚಿವ ಸೋಮಶೇಖರ್ ಆರೋಪಕ್ಕೆ ಪ್ರತಿಕ್ರಿಯಿಸಿದರು. ದುಷ್ಟ ಶಕ್ತಿಗಳನ್ನ ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕು, ಅದಕ್ಕೆ ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಶತ್ರು ವೈರಿಗಳನ್ನು ಎದುರಿಸಲು ನಿಂಬೆಹಣ್ಣು ಇಟ್ಟುಕೊಂಡಿದ್ದೀನಿ. ಮಾಟ-ಮಂತ್ರ ಮಾಡ್ತಾರಲ್ಲಾ ಅವನ್ನ ಎದುರಿಸಲು ನಿಂಬೆಹಣ್ಣು ಇಟ್ಟುಕೊಳ್ಳಬೇಕಲ್ವಾ. ಇನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರೇ ನಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ಇನ್ನು ನಾನು ನಿಂಬೆಹಣ್ಣು ಇಟ್ಟುಕೊಳ್ಳೋದ್ರಲ್ಲಾ ತಪ್ಪೇನಿದೆ ಎಂದು ರೇವಣ್ಣ ಇದೇ ವೇಳೆ ಪ್ರಶ್ನಿಸಿದರು.

    ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾ.ಪಂ ಚುನಾವಣೆ ನಡೆಯುತ್ತಿದೆ. ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ಈಗ ಸರ್ಕಾರ ಗ್ರಾಪಂ ಚುನಾವಣೆ ನಡೆಸುತ್ತಿದೆ. ಚುನಾವಣೆ ನ್ಯಾಯಯುತವಾಗಿ ನಡೆಯಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದರು.

    ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಯ ಅಭ್ಯರ್ಥಿಗಳಿಗೆ ಪಿಡಿಓ ಹಾಗೂ ಕಾರ್ಯದರ್ಶಿಗಳು 10 ರಿಂದ 20 ಸಾವಿರ ಹಣ ನೀಡುವಂತೆ ದೊಡ್ಡಮಟ್ಟದ ಬಿಜೆಪಿ ನಾಯಕರು ಸೂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಗ್ರಾಪಂ, ಪಿಡಿಓ ಮತ್ತು ವಂತಿಕೆ ನೀಡಬೇಕು ಎಂದು ಬಿಜೆಪಿ ನಾಯಕರು ಸೂಚಿಸಿದ್ದಾರೆ. ಹಣ ಕೊಡುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳೇ ಬಂದು ನಮಗೆ ಹೇಳಿದ್ದಾರೆ ಎಂದು ಸರ್ಕಾರದ ವಿರುದ್ಧ ರೇವಣ್ಣ ಹೊಸ ಬಾಂಬ್ ಸಿಡಿಸಿದರು.

    ಗ್ರಾಮ ಪಂಚಾಯ್ತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಿದ್ದೀವಿ. ವೆಂಕಟರಮಣಸ್ವಾಮಿ ಗೋವಿಂದಾ, ಗೋವಿಂದಾ ಅಂತ ಜನಗಳ ಪಾದಕ್ಕೆ ಕೈಮುಗಿತೀವಿ ಅಂತ ರೇವಣ್ಣ ತಿಳಿಸಿದ್ದಾರೆ.

    ಹಾಸನದ ವಿಮಾನ ನಿಲ್ದಾಣವನ್ನು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಮಾಡಿದ ಅವರು, ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳ್ತಾರೆ ಎಂದು ಟೀಕೆ ಮಾಡಿದರು. ವ್ಯಾಪಾರ ಮಾಡುವಂತಹ ಗ್ರಾಮ ಸ್ವರಾಜ್ ಸಮಾವೇಶ ಮಾಡುತ್ತಿದ್ದಾರೆಂದು ರೇವಣ್ಣ ಆಕ್ರೋಶ ಹೊರಹಾಕಿದರು.

    ಹಾಸನ ಬೇಲೂರು ರಸ್ತೆಗೆ 800 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಾವು ಅನುಮೋದನೆ ಮಾಡಿದ್ದೆವು. ಬಿಳಿಕೆರೆಯಿಂದ ಯಡೇಗೌಡನಹಳ್ಳಿ ಮತ್ತು ಹಾಸನದಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಯನ್ನ ನಾವು ಅನುಮೋದನೆ ಮಾಡಿದ್ದೆವು. ಬಿಳಿಕೆರೆಯಿಂದ ಬೇಲೂರಿಗೆ ರಾಷ್ಟ್ರೀಯ ಹೆದ್ದಾರಿಯನ್ನ ಸರ್ಕಾರದ ರದ್ದು ಮಾಡಿದೆ. ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಸೋಲಿಸಿದರು. ನಾವು ಯಾವಾಗಲೂ ರಾಷ್ಟ್ರೀಯ ಪಕ್ಷಗಳಿಂದ ದೂರ ಇದ್ದೇವೆ. 2023ಕ್ಕೆ ಇನ್ನೊಂದು ಟವಲ್ ಹಾಕ್ತೀವಿ, 2021 ಕ್ಕೂ ಅಥವಾ 2022ಕ್ಕೋ ನೋಡೋಣ. ಕಾಂಗ್ರೆಸ್ ಮತ್ತು ಬಿಜೆಪಿ ಬಿಡೋರೇ ಹೆಚ್ಚಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಮನೆ ಮುಂದೆ ಧರಣಿ ಎಚ್ಚರಿಕೆ

    ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಮನೆ ಮುಂದೆ ಧರಣಿ ಎಚ್ಚರಿಕೆ

    ಚಿಕ್ಕಮಗಳೂರು:ಗ್ರಾಮ ಪಂಚಾಯತ್‌ ಚುನಾವಣೆಗೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ ಅಂತವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ ನೀಡಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆನ್‌ಲೈನ್‌ ಸೇರಿದಂತೆ ಯಾವುದೇ ವಿಧದಲ್ಲೂ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದು ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ಸರ್ವಜನಿಕರು ಸೂಚಿಸಿದ್ದಾರೆ.

    ಶತಮಾನಗಳ ಬದುಕೆ ಬೀದಿಗೆ ಬೀಳುವಾಗ ಚುನಾವಣೆ ಬೇಕೇ ಎಂಬ ಪ್ರಶ್ನೆ ಮಲೆನಾಡಿಗರಲ್ಲಿ ಮೂಡಿದೆ. ಈಗಾಗಲೇ ಮಲೆನಾಡಿಗರ ಬದುಕಿನ ಮೇಲೆ ಹುಲಿ ಯೋಜನೆ, ಬಫರ್ ಝೋನ್‌, ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ತೂಗುಗತ್ತಿ ತೂಗುತ್ತಿದೆ. ಸರ್ಕಾರದ ಈ ಯೋಜನೆಗಳಿಂದ ಜಿಲ್ಲೆಯ ಮಲೆನಾಡು ಭಾಗದ ನೂರಾರು ಗ್ರಾಮಗಳೇ ಕಣ್ಮರೆಯಾಗಲಿವೆ. ಈ ಕಾರಣಕ್ಕೆ ಮಲೆನಾಡಿಗರು ಚುನಾವಣಾ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.

    ಖಾಂಡ್ಯ ಹೋಬಳಿಯ ಕಡವಂತಿ, ಹುಯಿಗೆರೆ, ದೇವದಾನ ಹಾಗೂ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಲ್ಲಲ್ಲಿ ಬ್ಯಾನರ್ ಕಟ್ಟಿದ್ದು, ಚುನಾವಣೆಗಿಂತ ಬದುಕು ದೊಡ್ಡದ್ದಾಗಿರುವ ಕಾರಣ ಮಲೆನಾಡಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಜೋರಾಗಿದೆ.

    ಈಗಾಗಲೇ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತೀ ಭೂತ್ ಗೆ ಒಂದೊಂದು ಬ್ಯಾನರ್ ಕಟ್ಟಲು ಮುಂದಾಗಿದ್ದಾರೆ. ಯಾರೂ ನಾಮಪತ್ರ ಸಲ್ಲಿಸದೇ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು ಮುಂದಾಗಿದ್ದಾರೆ. ಇದು ನಮ್ಮ ಅಳಿವು-ಉಳಿವಿನ ಪ್ರಶ್ನೆ. ಜೀವನವನ್ನ ಬಲಿ ಕೊಡುವ ಬದಲು ಚುನಾವಣೆ ಬಹಿಷ್ಕಾರ ಮಾಡಿ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ.

    ಐದು ವರ್ಷಗಳ ಅವಧಿಯ ಸದಸತ್ವಕ್ಕೆ ಬದುಕನ್ನ ಬಲಿ ಕೊಡುವ ಬದಲು ಸರ್ಕಾರಕ್ಕೆ ಎಚ್ಚರಿಕೆ ನೀಡೋಣ ಎಂದು ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಮುಂದಾಗಿದೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಮತದಾರರು ಮತದಾನ ಮಾಡದೆ ಚುನಾವಣೆ ಬಹಿಷ್ಕಾರಕ್ಕೆ ಬೆಂಬಲ ನೀಡಬೇಕೆಂದು ಖಾಂಡ್ಯ ಹೋಬಳಿ ಹಿತರಕ್ಷಣಾ ಸಮಿತಿ ಮತದಾರರಲ್ಲಿ ಮನವಿ ಮಾಡಿದೆ.

  • ಹೊರ ಜಿಲ್ಲೆ, ಊರಿನಿಂದ ಬಂದ್ರೆ ಕಡ್ಡಾಯ ಕ್ವಾರಂಟೈನ್- ಗ್ರಾಮ ಪಂಚಾಯತ್‍ನಿಂದ ಊಟದ ವ್ಯವಸ್ಥೆ

    ಹೊರ ಜಿಲ್ಲೆ, ಊರಿನಿಂದ ಬಂದ್ರೆ ಕಡ್ಡಾಯ ಕ್ವಾರಂಟೈನ್- ಗ್ರಾಮ ಪಂಚಾಯತ್‍ನಿಂದ ಊಟದ ವ್ಯವಸ್ಥೆ

    ಚಾಮರಾಜನಗರ: ಜಿಲ್ಲೆಯ ಒಂದು ಗ್ರಾಮಕ್ಕೆ ಅಕ್ಕಪಕ್ಕದ ಹಳ್ಳಿಯವರು ಸಹ ಬರುವಂತಿಲ್ಲ. ಒಂದು ವೇಳೆ ಬಂದ್ರೆ ಗ್ರಾಮದ ಯಜಮಾನರಿಗೆ ವಿಷಯ ತಿಳಿಸುವುದು ಕಡ್ಡಾಯ. ಸಂಜೆ 6 ಗಂಟೆಯ ನಂತರ ಇಡೀ ಗ್ರಾಮವೇ ಸ್ವಯಂಲಾಕ್ ಡೌನ್. ಕೊರೊನಾದಿಂದ ಸ್ವಯಂ ರಕ್ಷಣೆಗೆ ಮುಂದಾಗಿದುವ ಮೂಲಕ ಚಾಮರಾಜನಗರ ಜಿಲ್ಲೆಗೆ ಮಾದರಿಯಾಗಿದೆ ಈ ಗ್ರಾಮ.

    ಹಸಿರುವಲಯದಲ್ಲಿದ್ದ ಚಾಮರಾಜನಗರಲ್ಲಿ ಸದ್ಯ ಕೋವಿಡ್ -19 ದ್ವಿಶತಕ ದಾಟಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ಕೊರೊನಾದಿಂದ ಮೂವರು ಸಾವ್ನಪ್ಪಿದ್ದು, 40 ಸಕ್ರೀಯ ಪ್ರಕರಣಗಳಿವೆ. ತಾಲೂಕಿನ ಹಲವು ಗ್ರಾಮಗಳಿಗೆ ಹೊರಗಿನಿಂದ ಬಂದವರಿಗೆ ನಿಷೇದ ಹೇರಲಾಗಿದೆ. ಆದರೆ ಮುಳ್ಳೂರು ಗ್ರಾಮ ಬೇರೆ ಗ್ರಾಮಗಳಿಗೆ ಹೋಲಿಸಿದ್ರೆ ಡಿಫರೆಂಟ್.

    ಈ ಗ್ರಾಮದಲ್ಲಿ ಸುಮಾರು 10ರಿಂದ 12ಸಾವಿರ ಜನರು ವಾಸ ಮಾಡುತ್ತಿದ್ದಾರೆ. ಅಲ್ಲದೆ 14 ವಿವಿಧ ಜಾತಿಯ ಜನರಿದ್ದಾರೆ. ಎಲ್ಲರೂ ಸಹ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ. ಇಲ್ಲಿವರೆಗೂ ಮುಳ್ಳೂರು ಗ್ರಾಮದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಗ್ರಾಮಕ್ಕೆ ಅಕ್ಕ ಪಕ್ಕದ ಗ್ರಾಮಗಳಿಂದ ಬರುವವರ ಮಾಹಿತಿಯನ್ನ ಮುಖಂಡರಿಗೆ ನೀಡುವುದು ಕಡ್ಡಾಯವಾಗಿದೆ. ಯಾರೇ ಹೊರಗಿನಿಂದ ಬಂದ್ರು 14 ದಿನಗಳ ಕಾಲ ಕ್ವಾರೈಂಟನ್ ಆಗುವುದು ಕಡ್ಡಾಯವಾಗಿದ್ದು, ಅವರಿಗೆಲ್ಲಾ ಊಟದ ವ್ಯವಸ್ಥೆಯನ್ನ ಪಂಚಾಯಿತಿ ಮೂಲಕ ಪೂರೈಸಲಾಗುತ್ತಿದೆ.

    ಗ್ರಾಮದಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಾತ್ರ ಅಂಗಡಿ-ಮುಂಗಟ್ಟು ಮತ್ತು ಇನ್ನಿತರೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದ್ದು, ನಂತರ ಸ್ವಯಂ ಇಡೀ ಗ್ರಾಮವೇ ಲಾಕ್‍ಡೌನ್ ಆಗುತ್ತದೆ. ಮುಖಕ್ಕೆ ಮಾಸ್ಕ್ ಧರಿಸದಿದ್ದರೆ 100 ರೂಪಾಯಿ ದಂಡ ಜೊತೆಗೆ ಗ್ರಾಮದಲ್ಲಿ ಗುಂಪುಗೂಡುವುದನ್ನ ನಿಷೇಧಿಸುವ ಮೂಲಕ ಚಾಮರಾಜನಗ ಜಿಲ್ಲೆಯ ಇತರೆ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

    ಗ್ರಾಮದ ಮುಖಂಡರ ಈಗಾಗಲೇ ಗ್ರಾಮದಲ್ಲಿ ಗ್ರಾಮಸಭೆ ನಡೆಸಿದ್ದು, ಈ ಮೇಲಿನ ಎಲ್ಲಾ ನಿರ್ಣಯಗಳಿಗೆ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡಿದ್ದಾರೆ. ಇದಕ್ಕೆ ಗ್ರಾಮದ ಜನರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನ ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕೊರೊನಾ ಬರದಿರಲಿ ಎಂದು ಮುಖಂಡರು ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ: ಈಶ್ವರಪ್ಪ

    ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ: ಈಶ್ವರಪ್ಪ

    ಶಿವಮೊಗ್ಗ: ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ ಚುನಾವಣೆ ನಡೆಸುವುದಾಗಲಿ, ಕೋವಿಡ್ ಆಗಲಿ ನಮ್ಮ ಕೈಯಲ್ಲಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಬಗ್ಗೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ, ಆಯೋಗದ ನಿಲುವು ಏನು ಎಂಬ ಪ್ರಶ್ನೆ ಮಾಡಿತ್ತು. ಹೀಗಾಗಿ ಚುನಾವಣಾ ಆಯೋಗ ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದೆ ಎಂದರು.

    ಆದರೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದರೂ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಕೊರೊನಾ ಯಾವಾಗ ಮುಗಿಯುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಕೊರೊನಾ ಮುಗಿಯುತ್ತಿದ್ದಂತೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದರು.

  • ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    – ಗ್ರಾಮ ಪಂಚಾಯಿತಿಯಿಂದ ವಿನೂತನ ಕ್ರಮ

    ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಲಾಕ್‍ಡಾನ್ ಜಾರಿ ಮಾಡಿದೆ. ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಮನೆಯಲ್ಲೇ ಉಳಿಯುವಂತೆ ಮಾಡಲು ಪೊಲೀಸರು, ಅಧಿಕಾರಿಗಳು ಹರ ಸಾಹಸ ಮಾಡುತ್ತಿದ್ದಾರೆ. ಆದರೆ ಕೇರಳದ ಗ್ರಾಮ ಪಂಚಾಯತಿಯೊಂದು ವಿಶೇಷ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದೆ.

    ಕೇರಳದ ಮಲಪ್ಪುರಂ ಜಿಲ್ಲೆಯ ತಜ್ಹೆಕ್ಕೊಡ್ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ನಿವಾಸಿಗಳಿಗೆ ಲಾಕ್‍ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಮನವಿ ಮಾಡಿದೆ. ಅಲ್ಲದೇ ಯಾರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಾರೋ ಅಂತಹವರಿಗೆ ಮೊದಲ ಮೂರು ಬಹುಮಾನಗಳಾಗಿ ಗೋಲ್ಡ್, ಫ್ರೀಡ್ಜ್ ಹಾಗೂ ವಾರ್ಷಿಂಗ್ ಮಿಷನ್ ನೀಡುವುದಾಗಿ ಹೇಳಿದೆ. ಅಲ್ಲದೇ ಇತರೇ 50 ಬಹುಮಾನಗಳನ್ನು ಕೂಡ ನೀಡುವುದಾಗಿ ತಿಳಿಸಿದೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಂಚಾಯತ್ ಅಧ್ಯಕ್ಷ ಎಕೆ ನಸಾರ್, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಕುಟುಂಗಳಿವೆ. ಕೆಲ ಮಂದಿಯನ್ನು ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸ್ವಯಂ ಸೇವಕರನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

    ಮೇ 3ರ ಬಳಿಕ ಲಾಕ್‍ಡೌನ್ ಅಂತ್ಯವಾಗುವ ಸೂಚನೆ ಇದೆ. ಆ ವೇಳೆಗೆ ಸ್ವಯಂ ಸೇವಕರಿಂದ ಮಾಹಿತಿ ಸಂಗ್ರಹಿಸಿ ಮನೆಯಿಂದ ಯಾರು ಹೊರಹೋಗಿಲ್ಲ ಎಂದು ಹೇಳುವ ಎಲ್ಲರಿಗೂ ಅಫಿಡವಿಡ್ ಕೇಳುತ್ತೇವೆ. ಅಂತಹ ಎಲ್ಲಾ ಕುಟುಂಗಳಿಗೂ ಕೂಪನ್ ನೀಡಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.

    ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ರಸ್ತೆ ಮೇಲೆ ಕೊರೊನಾ ಜಾಗೃತಿ ಚಿತ್ರ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೊರೊನಾದಂತೆ ವೇಷ ಧರಿಸಿ ಜಾಗೃತಿ ಮೂಡಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೂ ಸಾಕಷ್ಟು ಮಂದಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಕೇರಳದ ಗ್ರಾಮಪಂಚಾಯಿತಿ ಹೊಸ ಕಾರ್ಯಕ್ರಮಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಭ್ರಷ್ಟಾಚಾರ ಬಯಲು ಮಾಡಿದಕ್ಕೆ ಮಾರಣಾಂತಿಕ ಹಲ್ಲೆ!

    ಭ್ರಷ್ಟಾಚಾರ ಬಯಲು ಮಾಡಿದಕ್ಕೆ ಮಾರಣಾಂತಿಕ ಹಲ್ಲೆ!

    ದಾವಣಗೆರೆ: ಗ್ರಾಮ ಪಂಚಾಯ್ತಿಯಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆ, ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

    ಕುಂದೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲು ಮಾಡಿದಕ್ಕೆ ಹಲ್ಲೆ ಮಾಡಲಾಗಿದೆ. ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡ ಪ್ರಸನ್ನ ಕುಮಾರ್ ಮೇಲೆ ಪಂಚಾಯ್ತಿಯ ಕೆಲ ಸದಸ್ಯರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪ್ರಸನ್ನ ಅವರನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಸನ್ನ ಕುಮಾರ್ ಅವರು ಕುಂದೂರು ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಪಾಯಿ ಹಗರಣ ಬಯಲಿಗೆಳೆದಿದ್ದರು. ಅಲ್ಲದೆ ಭ್ರಷ್ಟಾಚಾರ ಬಯಲಿಗೆಳೆದು ಗ್ರಾಮ ಪಂಚಾಯತಿ ಉಪಾಧ್ಯಕ್ಷನ ಸ್ಥಾನವನ್ನು ವಜಾಗೊಳಿಸಿದ್ದರು. ಇದರಿಂದಾಗಿ ಪ್ರಸನ್ನ ಅವರ ಮೇಲೇ ಪಂಚಾಯ್ತಿಯ ಕೆಲ ಸದಸ್ಯರಿಗೆ ದ್ವೇಷ ಹುಟ್ಟಿಕೊಂಡಿತ್ತು. ಆದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ ಹಾಗೂ ಅವರ ಪತಿ, ಮಾಜಿ ಅಧ್ಯಕ್ಷೆ ಗೌರಮ್ಮ ಹಾಗೂ ಅವರ ಮಗ ಮತ್ತು ಕೊಮ್ರಿ ಮಂಜುನಾಥ ಹಾಗೂ ಆಂಜನೇಯ ಎಂಬವರು ಪ್ರಸನ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಘಟನೆ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಮನೆ ಕಟ್ಟಲು ಬೋರ್ ವೆಲ್ ಕಟ್ ಮಾಡಿ ಮುಚ್ಚಿದ!

    ಬೆಂಗಳೂರು: ಆನೇಕಲ್‍ನಲ್ಲಿ ವ್ಯಕ್ತಿಯೊಬ್ಬ ಬೋರ್ ವೆಲ್ ಕಟ್ ಮಾಡಿ ಮುಚ್ಚಿದ್ದಾನೆ. ಇಲ್ಲಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕಳಸಾಪುರ ಗ್ರಾಮದ ಗೋಮಾಳ ಜಾಗದಲ್ಲಿ ಹಲವು ಬಡವರು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

    1999ರಲ್ಲಿ ಇಲ್ಲಿನ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೇ ಸರ್ಕಾರಿ ಜಾಗದಲ್ಲಿ ಬೋರ್ ವೆಲ್ ಕೊರೆಸಿ ಅದಕ್ಕೆ ಹ್ಯಾಂಡ್ ಪಂಪ್ ಹಾಕಿಸಲಾಗಿತ್ತು. ಆದ್ರೆ ಇದೇ ಜಾಗದಲ್ಲಿ ಆನಂದ್ ಎಂಬಾತ ಮನೆ ಕಟ್ಟುತ್ತಿದ್ದು ಬೋರ್ ವೆಲ್ ಕಟ್ ಮಾಡಿ ಮುಚ್ಚಿ ಹಾಕಿದ್ದಾನೆ. ಇವನಿಗೆ ಪಂಚಾಯ್ತಿಯ ಕೆಲವರ ಬೆಂಬಲವಿದ್ದು, ನ್ಯಾಯ ಕೇಳೋಕೆ ಹೋದ್ರೆ ಜನರನ್ನು ಬೆದರಿಸ್ತಿದ್ದಾನಂತೆ.

    20 ವರ್ಷಗಳಿಂದ ಈ ಜಾಗದಲ್ಲಿ ವಾಸವಿರುವ ಜನ 94 ಸಿ ಅಡಿ ಅರ್ಜಿ ಹಾಕಿಕೊಂಡಿದ್ದಾರೆ. ಆದ್ರೆ ಈತ ಯಾವುದೇ ದಾಖಲೆಯಿಲ್ಲದೆ ಮನೆ ಕಟ್ಟುತ್ತಿದ್ದು, ಜನರ ಕುಡಿಯುವ ನೀರಿಗೂ ಕಂಟಕವಾಗಿದ್ದಾನೆ. ದೂರು ನೀಡಿದ ಬಳಿಕ ಸ್ಥಳಕ್ಕೆ ಬಂದ ಪಿಡಿಓ ಗಂಗಾಧರ್ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ರು.

  • ಗ್ರಾ.ಪಂ ಸದಸ್ಯನಿಂದ ದೋಖಾ- ಮದ್ವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿ ಸ್ವಂತ ಮಗು ಮಾರಿದನೇ?

    ಗ್ರಾ.ಪಂ ಸದಸ್ಯನಿಂದ ದೋಖಾ- ಮದ್ವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿ ಸ್ವಂತ ಮಗು ಮಾರಿದನೇ?

    ಶಿವಮೊಗ್ಗ: ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಂಬಂಧಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಅಲ್ಲದೆ, ತನ್ನದೇ ಮಗುವನ್ನು ಮಾರಾಟ ಮಾಡಿದ್ದಾನೆ ಎಂಬ ಆರೋಪಕ್ಕೂ ತುತ್ತಾಗಿದ್ದಾನೆ.

    ಈ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ನಡೆದಿದೆ. ರಿಪ್ಪನ್‍ಪೇಟೆ ಗ್ರಾ.ಪಂ ಗೆ ಮಳವಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸದಸ್ಯ ಕೆ.ಚಂದ್ರಶೇಖರ್ ಈ ರೀತಿ ವಂಚನೆ ಮಾಡಿರುವ ವ್ಯಕ್ತಿ. ಮನೆಯಲ್ಲಿ ಯಾರೂ ಇಲ್ಲದಾಗ ಸಂಬಂಧಿ ಯುವತಿ ಮೇಲೆ ಬಲಾತ್ಕಾರದಿಂದ ಅತ್ಯಾಚಾರ ಮಾಡಿದ್ದ ಚಂದ್ರಶೇಖರ್ ತನ್ನ ಚಾಳಿಯನ್ನು ಮುಂದುವರೆಸಿದ್ದ.

    ಯುವತಿ ಗರ್ಭಿಣಿಯಾದಾಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿಸಿದ್ದ. ಆದ್ರೆ ಅವಧಿಗೆ ಮುಂಚೆ ಮಗು ಜನಿಸಿದ್ದರಿಂದ ಚಿಕಿತ್ಸೆಗೆ ಎಂದು ನನ್ನ ಬಳಿ ಸಹಿ ಹಾಕಿಸಿಕೊಂಡು ಮಗುವನ್ನು ಮಾರಾಟ ಮಾಡಿದ್ದಾನೆ ಎಂದು ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಹೆರಿಗೆ ನಂತರವೂ ಮದುವೆಗೆ ಒಪ್ಪದಿದ್ದಾಗ ಗ್ರಾಮದ ಹಿರಿಕರು ಪಂಚಾಯತಿ ಮಾಡಿ, ಈತನನ್ನು ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಮತ್ತು ಆತನ ತಂದೆ ಸೇರಿ ಯುವತಿಯನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಪ್ರಬಲನಾಗಿರುವ ಚಂದ್ರಶೇಖರ್ ವಿರುದ್ಧ ಸಂತ್ರಸ್ತೆ ಯುವತಿ ಹಾಗೂ ಆಕೆಯ ಸಂಬಂಧಿಗಳು, ಗ್ರಾಮಸ್ಥರು ಸೇರಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    ಚಂದ್ರಶೇಖರ್ ಮಗುವನ್ನು ಏನು ಮಾಡಿದ? ಈತ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದು ನಿಜವೇ? ಮೋಸ ಹೋದ ಯುವತಿಗೆ ನ್ಯಾಯ ಸಿಗುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲು ಪೊಲೀಸರ ತನಿಖೆ ನಡೆಯಬೇಕಿದೆ.

  • ಟಾಯ್ಲೆಟ್ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅಡ್ಡಿ-ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ

    ಟಾಯ್ಲೆಟ್ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅಡ್ಡಿ-ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ

    ದಾವಣಗೆರೆ: ಶೌಚಾಲಯ ನಿರ್ಮಾಣ ವಿಚಾರಕ್ಕೆ ನಡೆದ ಜಗಳದಲ್ಲಿ ಯುವತಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹರಪ್ಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅನ್ನಪೂರ್ಣ (21) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಯುವತಿಯ ಕುಟುಂಬದವರು ಗ್ರಾಮಪಂಚಾಯತ್ ಜಾಗದಲ್ಲಿ ಶೌಚಾಲಯ ಕಟ್ಟಿಸುತ್ತಿದ್ದರು. ಆ ಸ್ಥಳದಲ್ಲಿ ಶೌಚಾಲಯ ನಿರ್ಮಿಸಲು ಗ್ರಾಮ ಪಂಚಾಯತ್‍ನಿಂದ ವರ್ಕ್ ಅರ್ಡರ್ ಸಹ ಲಭಿಸಿತ್ತು. ಈ ಹಿನ್ನಲೆಯಲ್ಲಿ ಯುವತಿಯ ಕುಟುಂಬ ಸದಸ್ಯರು ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದರು.

    ಶೌಚಾಲಯ ನಿರ್ಮಾಣ ಮಾಡುವ ಸ್ಥಳದ ಸ್ವಲ್ಪ ದೂರದಲ್ಲಿ ದೇವಾಲಯವಿದ್ದು, ಇದರಿಂದ ಈ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಬೇಡ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್‍ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸೋಮವಾರ ಶೌಚಾಲಯ ನಿರ್ಮಾಣದ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಈ ಜಾಗದಲ್ಲಿ ನಿರ್ಮಾಣ ಮಾಡಬೇಡಿ ಎಂದು ಹೇಳಿದ್ದಾರೆ.

    ಈ ವೇಳೆ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ ಹಲವು ವರ್ಷಗಳ ಬಳಿಕ ಈ ವರ್ಷ ನಮಗೆ ಶೌಚಾಲಯ ನಿರ್ಮಾಣಕ್ಕೆ ಅನುಮತಿ ಲಭಿಸಿದೆ. ಹೀಗಾಗಿ ನಾವು ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಅನ್ನಪೂರ್ಣ ಕುಟುಂಬಸ್ಥರು ಪ್ರತಿ ಉತ್ತರ ನೀಡಿದ್ದಾರೆ.

    ಮಾತಿಗೆ ಮಾತು ಬೆಳೆದು ಅನ್ನಪೂರ್ಣ ತಂದೆ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಪಂಚಾಯತ್ ಅಧ್ಯಕ್ಷರ ಬೆಂಬಲಿಗರ ನಡುವೆ ಜಗಳ ಆರಂಭವಾಗಿದೆ. ಈ ಜಗಳದಲ್ಲಿ ಯುವತಿಯ ತಂದೆ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ. ಇದರಿಂದ ಮನನೊಂದ ಅನ್ನಪೂರ್ಣ ತಮ್ಮ ಮನೆಗೆ ತೆರಳಿ ಪೊಲೀಸರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನಿಸಿದ್ದಾರೆ.

    ಅನ್ನಪೂರ್ಣ ಆತ್ಮ ಹತ್ಯೆಗೆ ಯತ್ನಿಸಿದನ್ನು ಕಂಡ ಕುಟುಂಬಸ್ಥರು ಆಕೆಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲು ಪ್ರಯತ್ನಿಸಿದ್ದಾರೆ, ಆದರೆ ತೀವ್ರ ಸುಟ್ಟಗಾಯಗಳಾಗಿದರಿಂದ ಅನ್ನಪೂರ್ಣ ಸಾವನ್ನಪ್ಪಿದ್ದಾರೆ.

    ಸದ್ಯ ಅನ್ನಪೂರ್ಣ ಅವರ ಶವವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು. ಶವಗಾರದ ಮುಂದೆ ಕುಟುಂಬಸ್ಥ ಅಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=UI_oUomu2wI

  • ಶೌಚಾಲಯಕ್ಕಾಗಿ ಧರಣಿ ಕುಳಿತ ತಾಲೂಕ್ ಪಂಚಾಯತ್ ಅಧಿಕಾರಿ!

    ಶೌಚಾಲಯಕ್ಕಾಗಿ ಧರಣಿ ಕುಳಿತ ತಾಲೂಕ್ ಪಂಚಾಯತ್ ಅಧಿಕಾರಿ!

    ತುಮಕೂರು: ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಹೇಳಿ ಮಹಿಳೆಯರು ಮತ್ತು ಮಕ್ಕಳು ಧರಣಿ ಮಾಡಿರುವುದು ನೋಡಿದ್ದೇವೆ. ಆದರೆ ತಾಲೂಕಿನ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯೇ ಶೌಚಾಲಯ ಕಟ್ಟಿಸಿಕೊಳ್ಳದ ಜನರ ವಿರುದ್ದ ಧರಣಿ ಕುಳಿತ ಘಟನೆ ತುಮಕೂರಿನಲ್ಲಿ ನಡೆದಿದೆ.

    ಇಒ ಡಾ. ಕೆ.ನಾಗಣ್ಣ ಬೆಳದರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಕ್ಕೆನಳ್ಳಿಯಲ್ಲಿ ಧರಣಿ ಕುಳಿತಿದ್ದರು. ಈ ಗ್ರಾಮದಲ್ಲಿ 200 ಮನೆಗಳಿದ್ದು 85 ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಕಾರ್ಯಾದೇಶ ಕೊಟ್ಟರೂ ಮನೆಯವರು ಶೌಚಾಲಯ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ ಸ್ವಚ್ಚ ಭಾರತ ಮಿಷನ್ ಯೋಜನೆಗೆ ಹಿನ್ನಡೆಯಾಗುತಿತ್ತು.

    ಜನರ ವಿರುದ್ಧ ಅಸಮಾಧಾನಗೊಂಡ ಇಒ ನಾಗಣ್ಣ ಜನರ ವಿರುದ್ಧ ಧರಣಿ ಕುಳಿತಿದ್ದರು. ಬಳಿಕ ಶೌಚಾಲಯ ಕಟ್ಟಿಸಿಕೊಳ್ಳದ ಮನೆಯವರು ಬಂದು ಕಟ್ಟಿಸಿಕೊಳ್ಳುವ ಭರವಸೆ ಕೊಟ್ರು. ನಂತರ ಅಂದ್ರೆ ಶನಿವಾರ ಮಧ್ಯಾಹ್ನದ ವೇಳೆಗೆ ಧರಣಿ ವಾಪಸ್ ತೆಗೆದುಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಕೂಡಾ ಬಂದು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುತ್ತೇವೆ ಎಂದು ಇಒ ನಾಗಣ್ಣರಿಗೆ ಭರವಸೆ ನೀಡಿದ್ದರು.