Tag: Grama Panchayat

  • ಗ್ರಾಮ ಪಂಚಾಯ್ತಿ ಚುನಾವಣೆ ವಿಚಾರ – ಸೋತ ಗುಂಪಿನಿಂದ ಹಲ್ಲೆ, ನಿವೃತ್ತ ಶಿಕ್ಷಕ ಸಾವು

    ಗ್ರಾಮ ಪಂಚಾಯ್ತಿ ಚುನಾವಣೆ ವಿಚಾರ – ಸೋತ ಗುಂಪಿನಿಂದ ಹಲ್ಲೆ, ನಿವೃತ್ತ ಶಿಕ್ಷಕ ಸಾವು

    ದಾವಣಗೆರೆ: ಗ್ರಾಮ ಪಂಚಾಯ್ತಿ ಚುನಾವಣೆಯ ಹಿನ್ನೆಲೆ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಕೃಷ್ಣಪ್ಪ (68) ಸಾವನ್ನಪ್ಪಿದ ನಿವೃತ್ತ ಶಿಕ್ಷಕ. ಇವರ ಪುತ್ರ ವಿಜಯೇಂದ್ರಗೆ ತೀವ್ರ ಗಾಯಗಳಾಗಿವೆ. ಗಾಯಾಳುವನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

    ದೇವಿಕೆರೆ ಪಂಚಾಚಾಯ್ತಿ ವ್ಯಾಪ್ತಿಯ ಮಿನಿಗರಹಳ್ಳಿ ಗ್ರಾಮದಲ್ಲಿ ಸೋತ ಗುಂಪಿನಿಂದ ಕೃಷ್ಣಪ್ಪ ಮೇಲೆ ಕಟ್ಟಿಗೆಯಿಂದ ಮೇಲೆ ಹಲ್ಲೆ ಮಾಡಲಾಗಿದೆ. ಪರಿಣಾಮ ಗಂಭೀರ ಗಾಯಗೊಂಡು ಕೃಷ್ಣಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೃತ ಕೃಷ್ಣಪ್ಪ ಸಂಬಂಧಿ ಗೆಲುವು ಸಾಧಿಸಿದ್ದರು. ಸೋಲು ಕಂಡವರು ಇಂದು ಉದ್ದೇಶ ಪೂರ್ವಕವಾಗಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಇನ್ನು ಕೃಷ್ಣಪ್ಪ ಶವವನ್ನು ಮರಣೋತ್ತರ ಪರೀಕ್ಷೆಗೆ ಜಗಳೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ, ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ.

    ಸ್ಥಳಕ್ಕೆ ಜಗಳೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗ್ರಾ.ಪಂ. ಎಲೆಕ್ಷನ್ ವಿಜಯೋತ್ಸವದ ವೇಳೆ ವಾಹನ ಪಲ್ಟಿ – ಓರ್ವ ಸಾವು

    ಗ್ರಾ.ಪಂ. ಎಲೆಕ್ಷನ್ ವಿಜಯೋತ್ಸವದ ವೇಳೆ ವಾಹನ ಪಲ್ಟಿ – ಓರ್ವ ಸಾವು

    ಮಂಗಳೂರು: ಗ್ರಾಮ ಪಂಚಾಯ್ತಿ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ನೆಟ್ಲ ನಿವಾಸಿ ನರೇಶ್ (30) ಎಂದು ಗುರುತಿಸಲಾಗಿದೆ. ನಿನ್ನೆ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಅಂತೆಯೇ ಗೋಳ್ತಮಜಲು ಗ್ರಾಮ ಪಂಚಾಯ್ತಿಯಲ್ಲಿ ಗೆದ್ದವರಿಂದ ಸಂಭ್ರಮಾಚರಣೆ ನಡೆಸಲಾಗುತ್ತಿತ್ತು.

    ಸಂಭ್ರಮದ ವೇಳೆ ಜೀಪ್ ಪಲ್ಟಿಯಾಗಿದೆ. ಪರಿಣಾಮ ನರೇಶ್ ಸಾವನ್ನಪ್ಪಿದ್ರೆ, ಜೀಪ್ ನಲ್ಲಿದ್ದ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ ಹಾಗೂ ಯೋಗೀಶ್ ಗೆ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 113 ತಾಲೂಕುಗಳಲ್ಲಿ ಮೊದಲ ಹಂತದ ಲೋಕಲ್ ಫೈಟ್ – ಸಂಜೆ 5 ಗಂಟೆವರೆಗೆ ಮತದಾನ

    113 ತಾಲೂಕುಗಳಲ್ಲಿ ಮೊದಲ ಹಂತದ ಲೋಕಲ್ ಫೈಟ್ – ಸಂಜೆ 5 ಗಂಟೆವರೆಗೆ ಮತದಾನ

    ಬೆಂಗಳೂರು: ಇಂದು ಲೋಕಲ್ ಕದನಕ್ಕೆ ಮತದಾರನ ಮುನ್ನುಡಿ ಹಾಕಲಿದ್ದಾನೆ. ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಇಂದು ನಡೆಯುತ್ತಿದೆ. 113 ತಾಲೂಕುಗಳ 2,930 ಗ್ರಾಮ ಪಂಚಾಯ್ತಿಗಳಿಗೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಇದೆ. ಸಂಜೆ 4 ರಿಂದ 5 ಗಂಟೆವರೆಗೆ ಕೊರೊನಾ ಸೋಂಕಿತರ ಮತದಾನ ಇರಲಿದೆ.

    ಉಪಚುನಾವಣೆಗೆ ನಿಗದಿಪಡಿಸಿದ ಮಾರ್ಗಸೂಚಿಯೇ ಈ ಚುನಾವಣೆಗೂ ಅನ್ವಯವಾಗಲಿದೆ. ಕೊರೊನಾ ಮುಂಜಾಗ್ರತೆಗಳೊಂದಿಗೆ ‘ಹಳ್ಳಿ ಫೈಟ್’ ನಡೆಯುತ್ತಿದೆ. ಚುನಾವಣಾ ಸಿಬ್ಬಂದಿ, ಮತದಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮತದಾನ ವೇಳೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಲಾಗಿದೆ.

    ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದರಲ್ಲಿ ಇಂದು ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ 43,238 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಅಖಾಡದಲ್ಲಿ ಒಟ್ಟು 1,21,760 ಮಂದಿ ಸ್ಪರ್ಧೆ ನಡೆಯುತ್ತಿದೆ. ಈಗಾಗಲೇ 4,377 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿಯಿಂದ ಅದೃಷ್ಟ ಪರೀಕ್ಷೆ ನಡೆಯಲಿದೆ. ಇಂದು ವೇತನಸಹಿತ ರಜೆ ಹಿನ್ನೆಲೆ, ಹಳ್ಳಿಗಳತ್ತ ಮತದಾರರು ಹೆಜ್ಜೆ ಹಾಕುತ್ತಿದ್ದಾರೆ. ಡಿಸೆಂಬರ್ 30ರಂದು ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

  • ಗ್ರಾಮ ಪಂಚಾಯತ್‌ ಚುನಾವಣೆ ಸ್ಪರ್ಧೆಗಿಳಿದ ಅಂಕೋಲದ ಎಂಎಲ್‌ಎ

    ಗ್ರಾಮ ಪಂಚಾಯತ್‌ ಚುನಾವಣೆ ಸ್ಪರ್ಧೆಗಿಳಿದ ಅಂಕೋಲದ ಎಂಎಲ್‌ಎ

    ಕಾರವಾರ: ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಎಂಎಲ್ಎ ಬದಲಾಗ್ತಾರೆ. ಆದ್ರೆ ಆಯ್ಕೆಯಾದ ಎಂಎಲ್ಎಗಳು ಗ್ರಾಮಕ್ಕೆ ಭೇಟಿ ನೀಡುವುದು ಕೂಡ ಅಪರೂಪ. ಆದರೆ ಅಂಕೋಲಾದ ಗ್ರಾಮವೊಂದರಲ್ಲಿ 75 ವರ್ಷದ ʼಎಂಎಲ್‌ಎʼ ಆರನೇ ಬಾರಿ ಲೋಕಲ್ ದಂಗಲ್‌ಗೆ ಧುಮುಕಿದ್ದಾರೆ.

    ಅಂಕೋಲಾದ ಮಂಜುಗುಣಿ ಗ್ರಾಮದ ಲೀಲಾವತಿ ನಾಯ್ಕ ಸತತ ಆರನೇ ಬಾರಿ ಸ್ಪರ್ಧೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 1993 ರಿಂದ ಇಲ್ಲಿಯವರೆಗೆ ಇವರು ಲೋಕಲ್ ಅಖಾಡಕ್ಕೆ ಧುಮುಕಿ ಸಕ್ಸಸ್ ಆಗಿದ್ದಾರೆ. ಒಮ್ಮೆ ಉಪಾಧ್ಯಕ್ಷೆಯಾಗಿ ಕಳೆದ ಬಾರಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದ ಲೀಲಾವತಿ ಮಂಜುಗುಣಿ ಭಾಗದ ಖಾಯಂ ಎಂಎಲ್ಎ ಎಂದೇ ಪ್ರಸಿದ್ಧರಾಗಿದ್ದಾರೆ.

    ಯಾವುದೇ ಕೆಲಸ ಇರಲಿ ತಕ್ಷಣವೇ ಓಡಿ ಬರುವ ಲೀಲಾವತಿ, ಊರವರ ಪಾಲಿನ ಎಂಎಲ್ಎ ಕೂಡ ಹೌದು. ತಮ್ಮ ಹೆಸರಿನ ‘ಎಂಎಲ್ಎ’ ಎಂಬ ವಿಸಿಟಿಂಗ್ ಕಾರ್ಡ್ ಹಿಡಿದು ಆಯಾ ಇಲಾಖೆಗೆ ತೆರಳಿ ಗ್ರಾಮದ ಯಾವುದೇ ಕೆಲಸ ಇರಲಿ ಮಾಡಿಯೇ ಮುಗಿಸುವುದು  ಇವರ ವಿಶೇಷ.

    ಲೀಲಾವತಿ ಓದಿದ್ದು ಮೂರನೇ ತರಗತಿ. ಹೆಚ್ಚಾಗಿ ಅಕ್ಷರಭ್ಯಾಸ ಪಡೆಯದ ಇವರು ಈ ಹಿಂದೆ ಬೆಳಂಬಾರ ಗ್ರಾಮ ಪಂಚಾಯತ್ ಇದ್ದಾಗ 1993ರಲ್ಲಿ ಮಂಜುಗುಣಿ ಭಾಗದ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2015ರಲ್ಲಿ ಊರ ಹತ್ತಿರವೇ ಹೊನ್ನೆಬೈಲ್ ಗ್ರಾಮ ಪಂಚಾಯತ್ ಆಗುವಲ್ಲಿ ಇವರ ಶ್ರಮ ಕೂಡ ಇದೆ ಎನ್ನುತ್ತಾರೆ ಸ್ಥಳೀಯರು.

    ಗ್ರಾಮಕ್ಕೆ ಬೇಕಾಗುವ ರಸ್ತೆ, ವಿದ್ಯುತ್, ಬಸ್ ವ್ಯವಸ್ಥೆ ಸೇರಿದಂತೆ ಊರ ನಾಗರಿಕರ ಬೇಡಿಕೆಗಳಿಗೆ ಸ್ಪಂದಿಸಿದ ಕಾರಣಕ್ಕೆ ಊರಲ್ಲಿಯೇ ಲೀಲಾವತಿ ಉತ್ತಮ ಜನನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಇಲ್ಲಿಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾರು ಕಾಲಿಡುವುದಿಲ್ಲ. ಊರವರಿಗೆ ಲೀಲಾವತಿಯವರೇ ಎಲ್ಲಾ. ಹೀಗಾಗಿ ಲೀಲಾವತಿ ಈ  ಚುನಾವಣೆಯಲ್ಲೂ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಇಲ್ಲಿನ ಜನತೆ.

    ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯೆಯಾದರೂ ಇವರು ಸ್ವಂತ ಮನೆ ಮಾಡಿಕೊಂಡಿಲ್ಲ. ಚಿಕ್ಕದಾದ ಮನೆಯಲ್ಲಿಯೇ ವಾಸವಾಗಿದ್ದಾರೆ. ಯಾವುದೇ ಸ್ವಾರ್ಥ ಹೊಂದದೇ ಗ್ರಾಮದ ನಾಗರಿಕರಿಗೆ ಬೇಕಾಗುವ ವಸತಿ ಯೋಜನೆ, ಶೌಚಾಲಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ತಲುಪಿಸುತ್ತಿದ್ದಾರೆ. ಗ್ರಾಮದ ನಾಗರಿಕರು ಫಲಾನುಭವಿಯಾಗಲು ಬೇಕಾಗುವ ಕೆಲಸವನ್ನ ಮಾಡಿಕೊಡುತ್ತಿದ್ದಾರೆ. ತಮ್ಮೂರಿನಲ್ಲಿ ಇನ್ನೂ ಕೆಲಸ ಕೆಲಸಗಳು ಬಾಕಿ ಇದೆ. ಈ ಬಾರಿ ಆಯ್ಕೆಯಾದಲ್ಲಿ ಖಂಡಿತವಾಗಿಯೇ ಅವೆಲ್ಲಾ ಕೆಲಸಗಳನ್ನ ಮಾಡಿಕೊಡಬೇಕು ಅಂತಾರೆ ಲೀಲಾವತಿ.

    ಅಕ್ಷರ ಜ್ಞಾನ ಹೆಚ್ಚಿಲ್ಲದಿದ್ದರೂ ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಏನೂ ಬೇಕಾದರೂ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸೋಲಿಲ್ಲದೇ ಸತತ ಗೆಲುವು ಕಾಣುತ್ತಿರುವ ಲೀಲಾವತಿಯೇ ಸಾಕ್ಷಿಯಾಗಿದ್ದಾರೆ.

  • ಚುನಾವಣೆಗೂ ಮುನ್ನ ಆಪರೇಷನ್‌ ಕಮಲ – ಬಿಜೆಪಿ ಸೇರಿದ ಕೈ ಅಭ್ಯರ್ಥಿ

    ಚುನಾವಣೆಗೂ ಮುನ್ನ ಆಪರೇಷನ್‌ ಕಮಲ – ಬಿಜೆಪಿ ಸೇರಿದ ಕೈ ಅಭ್ಯರ್ಥಿ

    ಮಂಗಳೂರು: ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣಾ ಕಾವು ಹೆಚ್ಚಾಗಿದ್ದು,ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ. ಇದರ‌ ನಡುವೆ ಕಾಂಗ್ರೆಸ್ ಬೆಂಬಲಿತ ಮಹಿಳಾ ಅಭ್ಯರ್ಥಿ ಚುನಾವಣೆ ನಡೆಯುವ ಮೊದಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಅಚ್ಚರಿಯ ಘಟನೆ ಪುತ್ತೂರಿನಲ್ಲಿ‌ ನಡೆದಿದೆ.

    ಚುನಾವಣೆ ಬಂದಾಗ ಪಕ್ಷಾಂತರ ಆಗೋದು ಮಾಮೂಲಿ‌ ಆದರೂ ಇಲ್ಲಿ ಅಭ್ಯರ್ಥಿಯೇ ಪಕ್ಷಾಂತರ ಆಗುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಕ್ಷೇತ್ರಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಅನಿತಾ ಕೂವೆಂಜ ನಾಮಪತ್ರ ಸಲ್ಲಿಸಿದ್ದರು.

    ಕಳೆದ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಇದೀಗ ಕಾಂಗ್ರೆಸ್‌ ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದ ಅನಿತಾ ಚುನಾವಣೆ ನಡೆಯಲು ಇನ್ನೂ ಕೆಲ ದಿನ‌ ಬಾಕಿ ಇರುವಾಗಲೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿ ಕಾಂಗ್ರೆಸ್‌ ನಾಯಕರಿಗೆ ಶಾಕ್‌ ಕೊಟ್ಟಿದ್ದಾರೆ.

    ಇಂದು ಬಿಜೆಪಿಯ ಪುತ್ತೂರು ಕಚೇರಿಯಲ್ಲಿ ಕಾಣಿಸಿಕೊಂಡ ಅನಿತಾರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಪಕ್ಷದ ಧ್ವಜ ನೀಡುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು.

  • ಗ್ರಾ.ಪಂ ಚುನಾವಣೆಗೆ ಪತ್ನಿ ಅವಿರೋಧ ಆಯ್ಕೆಯಾದ ಮರುದಿನವೇ ಪತಿ ನೇಣಿಗೆ ಶರಣು!

    ಗ್ರಾ.ಪಂ ಚುನಾವಣೆಗೆ ಪತ್ನಿ ಅವಿರೋಧ ಆಯ್ಕೆಯಾದ ಮರುದಿನವೇ ಪತಿ ನೇಣಿಗೆ ಶರಣು!

    ಚಾಮರಾಜನಗರ: ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈ ಮಧ್ಯೆ ಕೆಲವೆಡೆಗಳಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿದೆ. ಇದೀಗ ಪತ್ನಿ ಗ್ರಾಮ ಪಂಚಾಯತ್ ಚುನಾವಣೆಗೆ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಿಂಗರಾಜು(27) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಪತ್ನಿ ಅವಿರೋಧವಾಗಿ ಆಯ್ಕೆಯಾದ ಮರುದಿನವೇ ನೇಣಿಗೆ ಶರಣಾಗಿದ್ದಾರೆ. ಚಾಮರಾಜನಗರ ತಾಲೂಕಿನ ದೊಡ್ಡರಾಯ ಪೇಟೆಯಲ್ಲಿ ಈ ಘಟನೆ ನಡೆದಿದೆ.

    ಪತ್ನಿ ಗಗನ ಗ್ರಾ.ಪಂ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಯ್ಕೆಯಾದ ಮರುದಿನವೇ ಪತಿ ನೇಣಿಗೆ ಶರಣಾಗಿದ್ದಾರೆ. ನಿನ್ನೆ ರಾತ್ರಿ ಸ್ನೇಹಿತರಿಗೆ ಪಾರ್ಟಿ ಕೊಟ್ಟು ನಿಂಗರಾಜು ಮನೆಗೆ ಬಂದಿದ್ದಾರೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮದುವೆಯಾಗಿ 4 ವರ್ಷವಾದರೂ ಈ ದಂಪತೊಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ಮಕ್ಕಳಾಗಲಿಲ್ಲ ಎಂದು ಮನನೊಂದು ನೇಣಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ತಾಯಿ ಮಹದೇವಮ್ಮ, ಪತ್ನಿ ಗಗನ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 72 ವರ್ಷಗಳಿಂದ ಚುನಾವಣೆ ಇಲ್ಲದೆ ಗ್ರಾಮ ಪಂಚಾಯ್ತಿಗೆ ಅವಿರೋಧ ಆಯ್ಕೆ

    72 ವರ್ಷಗಳಿಂದ ಚುನಾವಣೆ ಇಲ್ಲದೆ ಗ್ರಾಮ ಪಂಚಾಯ್ತಿಗೆ ಅವಿರೋಧ ಆಯ್ಕೆ

    – ಈ ಬಾರಿಯೂ 33 ಸ್ಥಾನಗಳಿಗೆ ಅವಿರೋಧ ಆಯ್ಕೆ

    ಚಿಕ್ಕೋಡಿ(ಬೆಳಗಾವಿ): ಚುನಾವಣೆ ಘೊಷಣೆ ಆಗ್ತಿದ್ದಂತೆ ಒಂದೇ ಗಲ್ಲಿಯಲ್ಲಿ ಬೆಳೆದ ಗೆಳೆಯರು ಪರಸ್ಪರ ವಿರೋಧಿಗಳಾಗೋದು ಕಾಮನ್. ಕೆಲವೊಂದು ಬಾರಿ ಅಣ್ಣ ತಮ್ಮಂದಿರಲ್ಲಿಯೇ ಕಲಹ ಶುರುವಾಗಿಬಿಡುತ್ತೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಜನ ಕಳೆದ 7 ದಶಕಗಳಿಂದ ಗ್ರಾ.ಪಂ ಚುನಾವಣೆ ಮಾಡಿ ಕೈಗೆ ಶಾಯಿ ಹಾಕಿಕೊಂಡ ಉದಾಹರಣೆಯೇ ಇಲ್ಲ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬ್ಯಾಲೇಟ್ ಪೇಪರ್ ನೋಡೆ ಇಲ್ಲ. ಬದಲಾಗಿ ಕತ್ತಿ ಸಹೋದರರು ಗ್ರಾಮದ ಸದಸ್ಯರನ್ನು ಸೇರಿಸಿ ತೆಗೆದುಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬದ್ಧವಾಗಿ ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

    ಗ್ರೂಪ್ ಪಂಚಾಯ್ತಿ, ಮಂಡಲ ಪಂಚಾಯ್ತಿ ಕಾಲದಿಂದಲೂ ಸಹ ಬೆಲ್ಲದ ಬಾಗೇವಾಡಿಯಲ್ಲಿ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ. 1977ರಲ್ಲಿ ಗ್ರಾಮದಲ್ಲಿ ಒಂದು ಬಾರಿ ಒಂದೇ ವಾರ್ಡಿಗೆ ಚುನಾವಣೆ ನಡೆದಿದ್ದು, ಬಿಟ್ಟರೆ ಇಲ್ಲಿಯವರೆಗೂ ಸಹ ಗ್ರಾಮಸ್ಥರು ಅವಿರೋಧ ಆಯ್ಕೆ ಮಾಡುತ್ತಾ ಬಂದಿದ್ದಾರೆ.

    ಸದ್ಯ ಗ್ರಾಮದ 9 ವಾರ್ಡುಗಳಿಗೆ 33 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಬೆಲ್ಲದ ಬಾಗೇವಾಡಿ ಗ್ರಾಮದ ತಮ್ಮ ಸ್ವಗೃಹಕ್ಕೆ ಕರೆಸಿ ಸನ್ಮಾನ ಮಾಡಿ ಗ್ರಾಮದ ಏಳ್ಗೆಗಾಗಿ ಶ್ರಮಿಸುವಂತೆ ಮನವಿ ಮಾಡಿದರು. ಅವಿರೋಧ ಆಯ್ಕೆಯಾದ ಸದಸ್ಯರು ಮಾತನಾಡಿ ಕತ್ತಿ ಸಹೋದರರ ಪ್ರಯತ್ನದಿಂದ ಅವಿರೋಧ ಆಯ್ಕೆ ಆಗಿದ್ದು, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು.

  • ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಹಾಕಿದ್ದ 44 ಮಂದಿ ಮೇಲೆ ಕೇಸ್

    ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಹಾಕಿದ್ದ 44 ಮಂದಿ ಮೇಲೆ ಕೇಸ್

    ಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಕ್ರಿಯೆಗಳು ಜರುಗುತ್ತಿದ್ದು, ಈ ಮೂಲಕ ಲೋಕಲ್ ವಾರ್ ಗರಿಗೆದರಿದೆ. ಈ ಮಧ್ಯೆ ಮಂಡ್ಯದಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ ಅಭ್ಯರ್ಥಿ ಸ್ಥಾನವನ್ನು ಹರಾಜು ಹಾಕಲಾಗಿದ್ದು, ಇದೀಗ 44 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಹೌದು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ಕುರಿ-ಕೋಳಿಗಳ ರೀತಿ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ಹರಾಜು ಹಾಕಲಾಗಿತ್ತು. ಲಕ್ಷಾಂತ ರೂಪಾಯಿಗಳಿಗೆ ಗ್ರಾಮ ಪಂಚಾಯ್ತಿ ಸ್ಥಾನವನ್ನು ಲಾಳನಕೆರೆ ಗ್ರಾಮಸ್ಥರು ಮನೆಯೊಂದರಲ್ಲಿ ಬಿಡ್ ಮೂಲಕ ಹರಾಜು ಹಾಕಿದ್ದರು.

    ಗ್ರಾಮದ ಅಭಿವೃದ್ಧಿ, ದೇವಸ್ಥಾನದ ನಿರ್ಮಾಣದ ಹೆಸರಿನಲ್ಲಿ ಮೂರು ಸ್ಥಾನಗಳಿಗೆ ಒಟ್ಟು 17.40 ಲಕ್ಷ ರೂ.ಗೆ ಈ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

    ಸದ್ಯ ಬಿಂಡಿಗನವಿಲೆ ಠಾಣೆಯಲ್ಲಿ 44 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

  • ಮಂಡ್ಯ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನ ಹರಾಜು

    ಮಂಡ್ಯ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನ ಹರಾಜು

    ಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಕ್ರಿಯೆಗಳು ಜರುಗುತ್ತಿದ್ದು, ಈ ಮೂಲಕ ಲೋಕಲ್ ವಾರ್ ಗರಿಗೆದರಿದೆ. ಇನ್ನೊಂದೆಡೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ನೆಪ ಇಟ್ಟುಕೊಂಡು ಗ್ರಾಮ ಪಂಚಾಯ್ತಿಗಳಲ್ಲಿ ಅಭ್ಯರ್ಥಿ ಸ್ಥಾನವನ್ನು ಹರಾಜು ಹಾಕಲಾಗುತ್ತಿದೆ. ಹರಾಜು ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆಯಲ್ಲಿ ಕುರಿ-ಕೋಳಿಗಳ ರೀತಿ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನವನ್ನು ಹರಾಜು ಹಾಕುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಲಕ್ಷಾಂತ ರೂಪಾಯಿಗಳಿಗೆ ಗ್ರಾಮ ಪಂಚಾಯ್ತಿ ಸ್ಥಾನವನ್ನು ಲಾಳನಕೆರೆ ಗ್ರಾಮಸ್ಥರು ಮನೆಯೊಂದರಲ್ಲಿ ಬಿಡ್ ಮೂಲಕ ಹರಾಜು ಹಾಕಿದ್ದಾರೆ.

    ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಯವರೆಗೆ ಸವಲತ್ತುಗಳು ದೊರಕಬೇಕೆಂಬ ಉದ್ದೇಶದಿಂದ ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಭಾರತ ದೇಶದಲ್ಲಿ ಮಾಡಕೊಳ್ಳಲಾಗಿದೆ. ಆದರೆ ಇದೀಗ ಗ್ರಾಮ ಪಂಚಾಯ್ತಿ ಸ್ಥಾನಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಹರಾಜು ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗುತ್ತಿದೆ.

  • 5 ಎ ಕಾಲುವೆಗೆ ಆಗ್ರಹ – ಗ್ರಾ.ಪಂ ಚುನಾವಣೆ ಸಂಪೂರ್ಣ ಬಹಿಷ್ಕಾರ

    5 ಎ ಕಾಲುವೆಗೆ ಆಗ್ರಹ – ಗ್ರಾ.ಪಂ ಚುನಾವಣೆ ಸಂಪೂರ್ಣ ಬಹಿಷ್ಕಾರ

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಎನ್.ಆರ್.ಬಿ.ಸಿ 5ಎ ಕಾಲುವೆಗಾಗಿ ಹೋರಾಟ ನಡೆಸಿರುವ ರೈತರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೇ ಮಸ್ಕಿ ಉಪ ಚುನಾವಣೆ ಬಹಿಷ್ಕರಿಸಿರುವ ಜನ, ಈಗ ಗ್ರಾಮ ಪಂಚಾಯತಿ ಚುನಾವಣೆಯನ್ನೂ ಬಹಿಷ್ಕರಿಸಿದ್ದಾರೆ. ಸರ್ಕಾರ ರೈತ ಪರ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.

    ನಮ್ಮ ಜಮೀನುಗಳಿಗೆ ನೀರು ಕೊಡಿ, ಅಲ್ಲಿಯವರೆಗೂ ನಾವು ಯಾವುದೇ ಚುನಾವಣೆಯಲ್ಲೂ ಮತ ಹಾಕುವುದಿಲ್ಲ. ಚುನಾವಣೆ ಪ್ರಕ್ರಿಯೆಯನ್ನೇ ನಿಲ್ಲಿಸಿ ಅಂತ ರಾಯಚೂರಿನ ಮಸ್ಕಿ ತಾಲೂಕಿನ ರೈತರು ಆಗ್ರಹಿಸಿದ್ದಾರೆ. ಡಿಸೆಂಬರ್ 27ರಂದು ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ ಅಂತ ಮಸ್ಕಿ ತಾಲೂಕಿನ ಪಾಮನಕಲ್ಲೂರು, ಅಂಕುಶದೊಡ್ಡಿ, ವಟಗಲ್ ಹಾಗು ಅಮಿನಗಡ್ ಗ್ರಾಮಸ್ಥರು ದೇವರ ಮುಂದೆ ಪ್ರತಿಜ್ಞೆ ಮಾಡಿದ್ದಾರೆ. ಯಾರೂ ನಾಮಪತ್ರ ಸಲ್ಲಿಸುವುದಿಲ್ಲ, ಮತದಾನವೂ ಮಾಡುವುದಿಲ್ಲ ಅಂತ ಪ್ರಮಾಣ ಮಾಡಿದ್ದಾರೆ.

    ಅಮಿನಗಡ್‍ದಲ್ಲಿ 15, ವಟಗಲ್‍ನಲ್ಲಿ 15 ಪಾಮನಕಲ್ಲೂರುನಲ್ಲಿ 21 ಹಾಗೂ ಅಂಕುಶದೊಡ್ಡಿಯಲ್ಲಿ 18 ಸದಸ್ಯರ ಆಯ್ಕೆಗೆ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಈ ಬಾರಿ ನಡೆಯುವುದು ಅನುಮಾನವಿದೆ. ಈ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹಂತ ಹಂತವಾಗಿ ಇನ್ನಷ್ಟು ಗ್ರಾಮಗಳು ಮತದಾನ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿವೆ.

    ಕೃಷ್ಣ ತುಂಗಭದ್ರಾ ನದಿ ನೀರಿನಿಂದ ವಂಚಿತರಾಗಿರುವ ಎರಡು ನದಿಗಳ ಮಧ್ಯದ 40 ಹಳ್ಳಿ ಜನ 5 ಎ ಕಾಲುವೆಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಸುಮಾರು 1.72 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ 5 ಎ ಕಾಲುವೆ ನಿರ್ಮಾಣಕ್ಕೆ 12 ವರ್ಷಗಳಿಂದ ಹೋರಾಟ ನಡೆಸಿದ್ದರು ಯಾವುದೇ ಸ್ಪಂದನೆ ಸಿಕ್ಕಲ್ಲ. ವಿರೋಧ ಪಕ್ಷಗಳು ರೈತರ ಪರ ಧ್ವನಿ ಎತ್ತಿಲ್ಲ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 17 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಿದ್ದರು ಕೂಡ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಪಂಚಾಯತಿ ಚುನಾವಣೆ ಬಹಿಷ್ಕರಿಸುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

    ಮಸ್ಕಿಯ ಪಾಮನಕಲ್ಲೂರಿನಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಗ್ರಾಮಗಳ ರೈತರು ಪಾದಯಾತ್ರೆ ಮೂಲಕ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಸದ್ಯ ನಾಲ್ಕು ಗ್ರಾಮಗಳು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದು ಮುಂದೆ 40 ಗ್ರಾಮಗಳ ಜನ ಒಟ್ಟಾಗಿ ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ. ಬೆಂಗಳೂರು ಚಲೋ ನಡೆಸಿ ರಾಜಧಾನಿ ಮುತ್ತಿಗೆಯಂತ ಹೋರಾಟಗಳನ್ನ ಹಮ್ಮಿಕೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.