Tag: Grama Panchayat

  • ಗ್ರಾಮಪಂಚಾಯತ್‍ನಲ್ಲಿ ಅಕ್ರಮ ಪ್ರಶ್ನಿಸಲು ಬಂದ ಗ್ರಾಮಸ್ಥರನ್ನು ಕಂಡು ಓಡಿ ಹೋದ PDO

    ಗ್ರಾಮಪಂಚಾಯತ್‍ನಲ್ಲಿ ಅಕ್ರಮ ಪ್ರಶ್ನಿಸಲು ಬಂದ ಗ್ರಾಮಸ್ಥರನ್ನು ಕಂಡು ಓಡಿ ಹೋದ PDO

    ತುಮಕೂರು: ತಾಲೂಕಿನ ಮಲ್ಲಸಂದ್ರ ಗ್ರಾಮ ಪಂಚಾಯತ್‌ನಲ್ಲಿ ಮಿತಿಮೀರಿದ ಅಕ್ರಮ ನಡೆಯುತಿದ್ದು, ಅದನ್ನು ಪ್ರಶ್ನಿಸಿಲು ಸಾರ್ವಜನಿಕರು ಗ್ರಾ.ಪಂ. ಕಚೇರಿಗೆ ಹೋಗುತಿದ್ದಂತೆ ಪಿಡಿಒ ಎದ್ನೋ ಬಿದ್ನೋ ಎಂದು ಓಡಿ ಹೋದ ಘಟನೆ ನಡೆದಿದೆ.

    ಪಿಡಿಒ ಮಂಜಣ್ಣ ಗ್ರಾಮ ಪಂಚಾಯತ್‍ನಲ್ಲಿ ಅಕ್ರಮ ಖಾತೆ ಮಾಡಿಕೊಡುವುದು. ಒಬ್ಬರ ಜಮೀನು ಇನ್ನೊಬ್ಬರಿಗೆ ಖಾತೆ ಮಾಡಿಕೊಡಲಾಗುತ್ತಿದೆ ಅನ್ನೋದು ಸ್ಥಳೀಯರ ಆರೋಪ. ಅಲ್ಲದೇ ಅಬ್ಬತನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದ ಜಮೀನನ್ನು ಖಾಸಗಿ ಅವರಿಗೆ ಲಂಚದ ಹಣ ಪಡೆದು ಮಾರಾಟ ಮಾಡಿದ ಅರೋಪವಿದೆ. ಜೊತೆಗೆ ಹಾಲನೂರು ಗ್ರಾಮದ ಪಾರ್ವತಮ್ಮ ಎನ್ನುವವರ ಸೈಟನ್ನು ಗೋವಿಂದ ಹಾಗೂ ವೆಂಕಟಪ್ಪ ಎನ್ನುವವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆ ಕೂಡ ಮಂಜಣ್ಣರ ಮೇಲಿದೆ. ಇದನ್ನೂ ಓದಿ: ಜಡ್ಜ್ ಭೇಟಿ ವೇಳೆ ಬಾಗಿಲು ಮುಚ್ಚಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್

    ಈ ಎಲ್ಲಾ ಅಕ್ರಮಗಳನ್ನು ಪ್ರಶ್ನಿಸಲು ಗ್ರಾಮಸ್ಥರು ಗ್ರಾಮ ಪಂಚಾಯತ್‍ಗೆ ತೆರಳಿದ್ದಾರೆ. ಮಂಜಣ್ಣ ಅಕ್ರಮ ಎಸಗಿದಕ್ಕೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ಅಕ್ರಮಗಳ ಸೂಕ್ತ ದಾಖಲೆ ತೋರಿಸಿ ಹಗರಣ ಬಯಲಿಗೆ ತರುತ್ತಿದ್ದಂತೆ ಪಿಡಿಒ ಕಕ್ಕಾಬಿಕ್ಕಿಯಾಗಿದ್ದಾರೆ. ಉತ್ತರ ಕೊಡಲಾಗದೆ ತತ್ತರಿಸಿದ್ದಾರೆ. ಫೋನ್ ಕರೆ ಬಂದ ನೆಪದಲ್ಲಿ ಮಾತನಾಡುತ್ತಾ ಬೈಕ್ ಹತ್ತಿ ತಪ್ಪಿಸಿಕೊಂಡು ಓಡಿಹೋಗಿದ್ದಾರೆ.

    ಕಳೆದ 7 ವರ್ಷದಿಂದ ಇದೇ ಗ್ರಾಮ ಪಂಚಾಯತ್‍ನಲ್ಲಿ ಮಂಜಣ್ಣ ಠಿಕಾಣಿ ಹೂಡಿದ್ದು, ರಾಜಕೀಯ ಪ್ರಭಾವದಿಂದ ವರ್ಗಾವಣೆಯೂ ಆಗದೇ ಅಕ್ರಮ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರ ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

  • ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳು!

    ಕೋಟಿ ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳು!

    – ಕತ್ತಲಲ್ಲಿ ಮುಳುಗಿದ ಬಾಗಲಕೋಟೆಯ 100ಕ್ಕೂ ಹೆಚ್ಚು ಗ್ರಾಮಗಳು

    ಬಾಗಲಕೋಟೆ: ಗ್ರಾಮ ಪಂಚಾಯ್ತಿಗಳು ಗ್ರಾಮದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ, ಅಭಿವೃದ್ದಿಗಾಗಿ ಹುಟ್ಟು ಹಾಕಿದ ಸ್ಥಳೀಯ ಸಂಸ್ಥೆಗಳು. ಗ್ರಾಮದಲ್ಲಿ ರಸ್ತೆ, ವಿದ್ಯುತ್, ನೀರು ಎಲ್ಲವನ್ನೂ ಕಲ್ಪಿಸಬೇಕಾಗಿರೋದು ಗ್ರಾಪಂ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಆ ಜಿಲ್ಲೆಯಲ್ಲಿ ಗ್ರಾ.ಪಂಗಳೇ ಗ್ರಾಮಗಳನ್ನು ಅಂಧಕಾರದಲ್ಲಿ ಮುಳುಗಿಸಿವೆ. ಗ್ರಾ.ಪಂ ಬೇಜವಾಬ್ದಾರಿತನದಿಂದ 35ಕ್ಕೂ ಹೆಚ್ಚು ಹಳ್ಳಿಗಳು ಕತ್ತಲಮಯವಾಗಿವೆ. ರಾತ್ರಿ ಬೀದಿಯಲ್ಲಿ ಜನರು ಭಯದಲ್ಲಿ ಸಂಚರಿಸಬೇಕಾಗಿದೆ.

    ಹೌದು. ಬಾಗಲಕೋಟೆ ಜಿಲ್ಲೆಯಲ್ಲಿ ಗ್ರಾಪಂ ನ ಬೇಜವಾಬ್ದಾರಿತನದಿಂದ ಹಳ್ಳಿ ಜನರು ರಾತ್ರಿಯಾದರೆ ಕತ್ತಲಲ್ಲಿ ಕನವರಿಸಬೇಕಾಗಿದೆ. ಯಾಕೆಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂಗಳಿಂದ ಬರೊಬ್ಬರಿ 47 ಕೋಟಿ ಕರೆಂಟ್ ಬಿಲ್ ಬಾಕಿ ಇದೆ. ಇದರಿಂದ ಹೆಸ್ಕಾಮ್ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 35 ಕ್ಕೂ ಅಧಿಕ ಗ್ರಾಪಂ ಕಚೇರಿ ಹಾಗೂ ಆ ಗ್ರಾಪಂ ವ್ಯಾಪ್ತಿಯಲ್ಲಿನ ನೂರಕ್ಕೂ ಹೆಚ್ಚು ಹಳ್ಳಿಗಳ ಬೀದಿದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ರಾತ್ರಿ ಕತ್ತಲಲ್ಲಿ ಕನವರಿಸಬೇಕಾಗಿದೆ. ಬೀದಿಯಲ್ಲಿ ಭಯದಲ್ಲಿ ಸಂಚರಿಸಬೇಕಾಗಿದೆ. ರಸ್ತೆಯಲ್ಲಿ ಹುಳು ಹುಪ್ಪಡಿಗಳು ಓಡಾಡುತ್ತವೆ. ಕತ್ತಲಲ್ಲಿ ಯಾರಿಗಾದರೂ ಏನಾದರೂ ತೊಂದರೆ ಆದರೆ ಯಾರು ಜವಾಬ್ದಾರಿ, ಕೂಡಲೇ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಕತ್ತಲಿಂದ ಮುಕ್ತಿ ನೀಡಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

    ಸದ್ಯ ಬಾಗಲ ತಾಲೂಕಿನ ಮುನಾಳ, ಗದ್ದನಕೇರಿ, ಸೀಗಿಕೇರಿ, ನೀರಲಕೇರಿ ಗ್ರಾಪಂಗಳು, ಹುನಗುಂದ ತಾಲೂಕು, ಇಳಕಲ್ ತಾಲೂಕಿನ ಗ್ರಾಪಂ ಸೇರಿ ಒಟ್ಟು 35 ಕ್ಕೂ ಅಧಿಕ ಗ್ರಾಪಂ ವ್ಯಾಪ್ತಿಯ ಬೀದಿದೀಪಗಳ ವಿದ್ಯುತ್ ಕಡಿತ ಮಾಡಲಾಗಿದೆ. ಆದರೆ ಕುಡಿಯುವ ನೀರು ಸರಬರಾಜು ಮಾಡೋದಕ್ಕೆ ಬೇಕಾದ ವಿದ್ಯುತ್ ಕಡಿತ ಮಾಡಿಲ್ಲ ಎನ್ನೋದು ಸ್ವಲ್ಪ ಸಮಾಧಾನಕರ ಸಂಗತಿ. ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಪಂ ನಿಂದ ಪ್ರತಿ ತಿಂಗಳು ಮೂರು ಕೋಟಿ ಬಿಲ್ ಬರಬೇಕು. ಆದರೆ ಸರಿಯಾಗಿ ತುಂಬದ ಕಾರಣ 2016-17 ನೇ ಸಾಲಿನಿಂದ ಇದುವರೆಗೂ ಹೆಸ್ಕಾಮ್ ಬಾಗಲಕೋಟೆ ವೃತ್ತದಲ್ಲಿ 24,79,81 ಸಾವಿರ, ಜಮಖಂಡಿ ವೃತ್ತದಿಂದ 5,562 ಸಾವಿರ, ಮುಧೋಳ ವೃತ್ತದಿಂದ 17,19,67 ಸಾವಿರ. ಒಟ್ಟು 47,5,12 ಸಾವಿರ ಬಾಕಿ ಉಳಿದಿದೆ. ಇದನ್ನೂ ಓದಿ: ಅತ್ತೆ ಮನೆಗೆ ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ

    ಹೆಸ್ಕಾಮ್ ಎಮ್ ಡಿ ಆದೇಶದ ಪ್ರಕಾರ ಬಾಕಿ ಉಳಿಸಿಕೊಂಡ ಹಿನ್ನೆಲೆ ಸಂಪರ್ಕ ಕಡಿತ ಮಾಡುತ್ತಿದ್ದೇವೆ. ಇದು ಅನಿವಾರ್ಯ ಯಾವ ಪಂಚಾಯ್ತಿಯಿಂದ ಬಾಕಿ ಪಾವತಿಸಲಾಗುತ್ತದೆ ಪುನಃ ಸಂಪರ್ಕ ಕಲ್ಪಿಸುತ್ತೇವೆ. ಬಾಕಿ ನೀಡದವರೆಗೂ ವಿದ್ಯುತ್ ಸಂಪರ್ಕ ಕಡಿತ ಕಾರ್ಯ ಮುಂದುವರಿಯುತ್ತದೆ ಅಂತ ಹೆಸ್ಕಾಮ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗ್ರಾಪಂ ಪಿಡಿಒ ಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೆಸ್ಕಾಮ್ ಅಧಿಕಾರಿಗಳ ಜೊತೆಯೂ ಮಾತಾಡಲಾಗಿದೆ. ಇನ್ನೆರಡು ದಿನದಲ್ಲಿ ಸಮಸ್ಯೆ ಸರಿಯಾಗುವ ವಿಶ್ವಾಸ ಇದೆ. ಗ್ರಾಪಂ ಅನುದಾನದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತೇವೆ ಅಂತಿದ್ದಾರೆ. ಒಟ್ಟಿನಲ್ಲಿ ಗ್ರಾಮದ ಶ್ರೇಯೋಭೀವೃದ್ದಿಗೆ ಇರಬೇಕಿದ್ದ ಗ್ರಾಪಂಗಳಿಂದಲೇ ಗ್ರಾಮಕ್ಕೆ ಕತ್ತಲು ಆವರಿಸುತ್ತಿದೆ. ಆದಷ್ಟು ಬೇಗ ಜಿಪಂ ಅಧಿಕಾರಿಗಳು ಹೆಸ್ಕಾಮ್ ಅಧಿಕಾರಿಗಳು ಚರ್ಚೆ ಮಾಡಿ ಈ ಸಮಸ್ಯೆ ಬಗೆಹರಿಸಬೇಕಾಗಿದೆ.

  • ಮನೆಗಳ ಬಿಲ್ ಆಗ್ತಿಲ್ಲ, ಸಮಸ್ಯೆ ಬಗೆಹರಿಸಿ ಅಂದಿದ್ದಕ್ಕೆ, ವಸತಿ ಸಚಿವ ಸೋಮಣ್ಣ ಗರಂ

    ಮನೆಗಳ ಬಿಲ್ ಆಗ್ತಿಲ್ಲ, ಸಮಸ್ಯೆ ಬಗೆಹರಿಸಿ ಅಂದಿದ್ದಕ್ಕೆ, ವಸತಿ ಸಚಿವ ಸೋಮಣ್ಣ ಗರಂ

    ಗದಗ: ಸಮಸ್ಯೆ ಹೇಳಿಕೊಂಡು ಫೋನ್ ಮಾಡಿದ ಜಿಲ್ಲೆಯ ಸವಡಿ ಗ್ರಾಮ ಪಂಚಾಯತಿ ಸದಸ್ಯರಿಗೆ ಸಚಿವ ವಿ.ಸೋಮಣ್ಣ ಖಾರವಾಗಿ ಮಾತನಾಡಿದ್ದಾರೆ. ಗ್ರಾಮ ಪಂಚಾಯತ್ ಮೇಂಬರ್ ಆದರೆ ನೀನೇನು ದೇವ್ರೆನಪ್ಪ ಅಂತಾ ಸಿಟ್ಟಿನಲ್ಲಿ ಉತ್ತರಿಸಿದ್ದಾರೆ.

    ಸವಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ ನೂರಾರು ಮನೆಗಳು ನಿರ್ಮಾಣವಾಗುತ್ತಿವೆ. ಅವುಗಳಿಗೆ 3 ಹಂತದಲ್ಲಿ ಬಿಲ್ ಆಗಬೇಕು. ಮನೆಗಳು ಪೂರ್ಣ ಹಂತಕ್ಕೆ ಬಂದರೂ ಬಿಲ್ ಆಗಿರಲಿಲ್ಲ. ಈ ಬಗ್ಗೆ ಫಲಾನುಭವಿಗಳು ಗ್ರಾಮ ಪಂಚಾಯತ್ ಸದಸ್ಯರನ್ನು ಪದೇ ಪದೇ ಕೇಳುತ್ತಿದ್ದರು. ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದೆ. ಕೋವಿಡ್ ನೆಪದಲ್ಲಿ ಅಧಿಕಾರಿಗಳು ಇತರೆ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುತ್ತಿಲ್ಲ. ಮನೆಗಳ ಬಿಲ್ ಬಗ್ಗೆ ಕೇಳಲು ಹೋದರೆ, ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.

    ಇದರಿಂದ ಗ್ರಾಮ ಪಂಚಾಯತಿ ಸದಸ್ಯ ಮೊಹ್ಮದ್ ರಫಿಕ್ ಕರ್ನಾಚಿ ಎಂಬವರು ಸಚಿವ ಸೋಮಣ್ಣ ಅವರಿಗೆ ಫೋನ್ ಮಾಡಿದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ ಮಾತಾಡಿದ ಸಚಿವರು, ನಾನು ಗ್ರಾಮ ಪಂಚಾಯತಿ ಸದಸ್ಯ ಅಂತಾ ಮೊಹ್ಮದ್ ಹೇಳಿದ ಕೂಡಲೇ ಗರಂ ಆಗಿ, ಮೇಂಬರ್ ಆದರೆ ನೀನೇನು ದೇವ್ರಾ ಅಂತಾ ಗದರಿ, ಬಿಲ್ ಬರಲಿಲ್ಲ ಅಂದರೆ ಪಿಡಿಓ ಕೇಳುತ್ತಾರೆ. ನೀನಲ್ಲಾ, ಫೋನ್ ಪಿಡಿಓ ಕೈನಲ್ಲಿ ಕೊಡು ಅಂತಾ ಏಕವಚನದಲ್ಲಿಯೇ ಮಾತಾನಾಡಿದ್ದಾರೆ.

    ನಾವು ಯಾವುದನ್ನು ಪೆಂಡಿಂಗ್ ಇಟ್ಟುಕೊಂಡಿಲ್ಲ. ಎಲ್ಲಾ ಕೆಲಸ ಮಾಡುತ್ತಿದ್ದೇವೆ. ಪಿಡಿಓಗೆ ಫೋನ್ ಕೊಡು ಅಂದಿದ್ದಾರೆ. ಪಿಡಿಓ ಅವರು ಸರಿಯಾಗಿ ಬರುತ್ತಿಲ್ಲ ಅಂದ ಕೂಡಲೇ, ಅದೇನಿದೆ ರಿಪೋರ್ಟ್ ಹಾಕು ತನಿಖೆ ಮಾಡಿಸುತ್ತೇನೆ ಎಂದು ಗರಂ ಮಾತುಗಳನ್ನಾಡಿದರು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಸಂಕಷ್ಟದಲ್ಲಿರುವ ಜನರ ಪರವಾಗಿ ನಿಂತ ಗ್ರಾಮ ಪಂಚಾಯತ್ ಸದಸ್ಯನಿಗೆ ಸಚಿವರು ಹೀಗೆ ಮಾತಾನಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಉರುಳಾದ ಜೋಕಾಲಿ – ಕ್ಷಣಾರ್ಧದಲ್ಲಿ ಹೋಯ್ತು ಬಾಲಕನ ಜೀವ

  • ವಿದ್ಯಾರ್ಥಿನಿ ಮೊಬೈಲ್‍ಗೆ ಗ್ರಾ.ಪಂ. ಸದಸ್ಯನಿಂದ ಅಶ್ಲೀಲ ಮೆಸೇಜ್

    ವಿದ್ಯಾರ್ಥಿನಿ ಮೊಬೈಲ್‍ಗೆ ಗ್ರಾ.ಪಂ. ಸದಸ್ಯನಿಂದ ಅಶ್ಲೀಲ ಮೆಸೇಜ್

    ಚಿಕ್ಕಬಳ್ಳಾಪುರ: ಅಪ್ರಾಪ್ತ ವಿದ್ಯಾರ್ಥಿನಿಗೆ ಗ್ರಾಮ ಪಂಚಾಯ್ತಿ ಸದಸ್ಯನೋರ್ವ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರ ಅಪ್ರಾಪ್ತ ಬಾಲಕಿ ಆನ್‍ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ನನ್ನ ಮೊಬೈಲ್ ನಂಬರ್ ಪಡೆದಿರೋ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಎಂಬಾತ ಅಶ್ಲೀಲ ಮೆಸೇಜ್ ಫೋಟೋಸ್ ಕಳುಹಿಸಿದ್ದಾನೆ.

    ಈತನ ಜೊತೆಗೆ ಈತನ ಸ್ನೇಹಿತ ಕೇಶವ್ ಸಹ ಕರೆ ಮಾಡಿ, ಶ್ರೀನಿವಾಸ್ ಗೆ ನೀನು ಇಷ್ಟ ಅಂತ ಹೇಳಿ 1,000 ರೂಪಾಯಿ ಕೊಡ್ತಾನೆ ಬಾ ಅಂತ ಒತ್ತಾಯ ಮಾಡಿದ್ನಂತೆ. ಕರೆ ಮಾಡಿ ಅಶ್ಲೀಲವಾಗಿ ಮಾತನಾಡೋದು ಪ್ರಶ್ನೆ ಮಾಡಿದಾಗ ಕುಡಿದು ಹಲ್ಲೆ ಮಾಡಲು ಸಹ ಮುಂದಾಗಿದ್ದಾನೆ ಅಂತ ದೂರಿನಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ಈ ಕೇಸಿಗೆ ಮಂಗಳ ಹಾಡಿದ್ದೇವೆ, ಇದನ್ನು ಬಿಟ್ಟುಬಿಡಿ – ದರ್ಶನ್

    ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿಗಳಾದ ಶ್ರೀನಿವಾಸ್ ಹಾಗೂ ಕೇಶವ್ ಇಬ್ಬರು ಸಹ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಗುಡಿಬಂಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

  • ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ

    ಚಿತ್ರದುರ್ಗ: ಲಂಚ ಪಡೆಯುತ್ತಿದ್ದ ಪಿಡಿಓ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾ.ಪಂ ಪಿಡಿಓ ಶ್ರೀನಿವಾಸ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮನೆಯ ಇ-ಸ್ವತ್ತು ಹಾಗೂ ಜಾಬ್ ಕಾರ್ಡ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಗ್ರಾಮದ ಗುರುಶಾಂತಪ್ಪ ಎಂಬುವರ ಬಳಿ ಪಿಡಿಓ ಶ್ರೀನಿವಾಸ್ ಅವರು, 2ಸಾವಿರ ರೂಪಾಯಿ ಲಂಚ ಕೊಟ್ಟರೆ ಮಾತ್ರ, ತಮ್ಮ ಕೆಲಸ ಮಾಡಿಕೊಡುವುದಾಗಿ ಬೇಡಿಕೆ ಇಟ್ಟಿದ್ದರು. ಇಂದು ಪಿಡಿಓ ಸಾಹೇಬ್ರು ಲಂಚ ಸ್ವೀಕರಿಸುವ ವೇಳೆ  ಗ್ರಾಮಪಂಚಾಯ್ತಿ ಕಚೇರಿ ಮೇಲೆ ಎಸಿಬಿ ಎಸ್ ಐ ಪ್ರವೀಣ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿನಡೆಸಿದ್ದು, ಶ್ರೀನಿವಾಸ್‍ನನ್ನು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.

    ಭ್ರಷ್ಟಚಾರಕ್ಕೆ ಬ್ರೇಕ್ ಹಾಕಲು ಸರ್ಕಾರ ಹಲವು ತಂತ್ರಜ್ಞಾನಗಳನ್ನು ಜಾರಿಗೊಳಿಸಿದೆ. ಆದರೂ ಅಧಿಕಾರಿಗಳು ಮಾತ್ರ ಅವರ ಕೈ ಕಸುಬನ್ನು ಬಿಟ್ಟಿಲ್ಲ, ಇದಕ್ಕೆ ತಾಜಾ ಉಧಾಹರಣೆಈ ಘಟನೆಯಾಗಿದೆ.

  • ಡಾ.ಬಿ.ಆರ್ ಅಂಬೇಡ್ಕರ್ ನಿಂದಿಸಿ ಬೆಲೆ ತೆತ್ತ ಗ್ರಾಮ ಪಂಚಾಯ್ತಿ ಸದಸ್ಯ

    ಡಾ.ಬಿ.ಆರ್ ಅಂಬೇಡ್ಕರ್ ನಿಂದಿಸಿ ಬೆಲೆ ತೆತ್ತ ಗ್ರಾಮ ಪಂಚಾಯ್ತಿ ಸದಸ್ಯ

    ಚಾಮರಾಜನಗರ: ಗ್ರಾಮ ಪಂಚಾಯ್ತಿ ಸದಸ್ಯನೋರ್ವ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಘಟನೆ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮ ಪಂಚಾಯ್ತಿ ಸದಸ್ಯ ಹೊಸ ಹಂಪಾಪುರ ಗ್ರಾಮದ ನಾಗರಾಜು ಅಲಿಯಾಸ್ ನಾಗಟ್ಟಿ ರಾಜೀನಾಮೆ ನೀಡಿದ ಸದಸ್ಯ. ಜೂನ್.25 ರಂದು ಗ್ರಾಮ ಪಂಚಾಯ್ತಿಯಲ್ಲಿ ವಿಚಾರವೊಂದರ ಬಗ್ಗೆ ಮಾತನಾಡುವಾಗ ಅಂಬೇಡ್ಕರ್ ಬಗ್ಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸನಿಹದಲ್ಲಿದ್ದ ಕೆಲವರು ಈ ಮಾತನ್ನು ಕೇಳಿಸಿಕೊಂಡಿದ್ದು, ಹಳೇ ಹಂಪಾಪುರ ಗ್ರಾಮಸ್ಥರಿಗೆ ಈ ವಿಚಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಯುವಕರ ಗುಂಪೊಂದು ನಾಗರಾಜು ಅವರನ್ನು ಪ್ರಶ್ನಿಸಲು ಮುಂದಾಗಿದ್ದು ಸಂಪರ್ಕಕಕ್ಕೆ ಆತ ಸಿಕ್ಕಿರಲಿಲ್ಲ.

    ಈ ಬಗ್ಗೆ ದಲಿತ ಮುಂಖಡರು ಪಂಚಾಯ್ತಿ ಮಾಡಲು ಸೇರಿದ್ದು ನಾಗರಾಜು ಸಭೆಗೆ ಹಾಜರಾಗಿಲ್ಲ. ಬಳಿಕ ಅದೇ ರೀತಿ ಕರೆಯಲಾಗಿದ್ದ ಮತ್ತೊಂದು ಸಭೆಗೆ ಬಂದ ನಾಗರಾಜು ನಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅದಕ್ಕೊಪ್ಪದ ದಲಿತ ಮುಖಂಡರು ಅಂಬೇಡ್ಕರ್ ಅವರನ್ನು ನಿಂದಿಸಿರುವುದು ನಮಗೆ ತಿಳಿದಿದೆ. ಆದ್ದರಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡಬೇಕೆಂದು ಸೂಚಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಸಿಡಿ ತನಿಖೆಯ ಎಸ್‍ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆ

    ಪರಿಣಾಮ ಜೂ.28 ರಂದು ನಾಗರಾಜು ತಮ್ಮ ರಾಜೀನಾಮೆ ಪ್ರತಿಯನ್ನು ಉಪವಿಭಾಗಧಿಕಾರಿ, ತಾಲೂಕು ಪಂಚಾಯ್ತಿಯ ಇಒ ಸೇರಿದಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ನೀಡಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜು ಪೂಜೆ ಸಲ್ಲಿಸಿದ್ದಾರೆ.

  • ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಒಂದು ವಾರ ಸೀಲ್‍ಡೌನ್

    ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್ ಒಂದು ವಾರ ಸೀಲ್‍ಡೌನ್

    ಮಂಗಳೂರು: ಕೊರೊನಾ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 17 ಗ್ರಾಮ ಪಂಚಾಯತ್‍ನ್ನು ಒಂದು ವಾರಗಳ ಕಾಲ ಸಂಪೂರ್ಣ ಸೀಲ್‍ಡೌನ್ ಮಾಡಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

     

    ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ 17 ಗ್ರಾಮ ಪಂಚಾಯತ್‍ಗಳಲ್ಲಿ 50ಕ್ಕಿಂತ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ತಾಲೂಕಿನ ನೀರುಮಾರ್ಗ ಹಾಗೂ ಕೊಣಾಜೆ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯುರು, ಮಿತ್ತಬಾಗಿಲು, ಮಾಲಾಡಿ, ನೆರಿಯಾ, ಲಾಯಿಲಾ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು. ಕಡಬ ತಾಲೂಕಿನ ಸುಬ್ರಹ್ಮಣ್ಯ, ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್

    ಜೂ.14ರ ಬೆಳಗ್ಗೆ 9 ಗಂಟೆಯಿಂದ ಜೂ. 21 ರ ಬೆಳಗ್ಗೆ 9 ಗಂಟೆವರೆಗೆ ಸೀಲ್‍ಡೌನ್ ಮಾಡಿ ಆದೇಶ ಮಾಡಲಾಗಿದ್ದು, ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಗ್ರಾಮಕ್ಕೆ ಒಳ ಪ್ರವೇಶ ಮತ್ತು ನಿರ್ಗಮನ ಸಂಪೂರ್ಣ ಬಂದ್ ಆಗಲಿದೆ. ಈ ಗ್ರಾಮ ಪಂಚಾಯತ್‍ನ ಜನರಿಗೆ ಅಗತ್ಯ ವಸ್ತು ಪೂರೈಸಲು ಪಾವತಿ ಆಧಾರದ ಮೇಲೆ ಕಾರ್ಯಪಡೆ ರಚಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

  • ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೊರೊನಾ ವಾರಿಯರ್ಸ್: ಈಶ್ವರಪ್ಪ

    ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೊರೊನಾ ವಾರಿಯರ್ಸ್: ಈಶ್ವರಪ್ಪ

    ಶಿವಮೊಗ್ಗ: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು-ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಗ್ರಾಮೀಣ ಜನರ ಸಹಕಾರ ಪಡೆದು ಕೊರೊನಾ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

    ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೈಸೂರು ಮತ್ತು ಬೆಂಗಳೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಆಯಾ ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

    ಕೋವಿಡ್ ನಿಯಂತ್ರಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಪ್ರಮುಖವಾದುದ್ದಾಗಿದೆ. ಕೊರೊನಾ 2ನೇ ಅಲೆಯು ಅತ್ಯಂತ ಅಪಾಯಕಾರಿಯಾಗಿದ್ದು, ಅದರ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅಗತ್ಯವಿದೆ. ಈ ಹಿಂದೆ ರಚಿಸಲಾಗಿದ್ದ ಕಾರ್ಯಪಡೆಗಳು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿದ್ದವು. ಈ ಕಾರ್ಯಪಡೆಗಳನ್ನು ಇನ್ನಷ್ಟು ಬಲಿಷ್ಠಗೊಳಿಸಿ ಹೆಚ್ಚಿನ ಜವಾಬ್ದಾರಿ ನೀಡಬೇಕಾದ ಅಗತ್ಯವಿದೆ. ಹಾಗಾದಾಗ ಸೋಂಕು ಹತೋಟಿಗೆ ಬರುವ ಸಾಧ್ಯತೆ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.

    ಈ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯ್ತಿ ಸಿಬ್ಬಂದಿ ಕೂಡ ಇತರೆ ಇಲಾಖೆಗಳ ಸಿಬ್ಬಂದಿಯಂತೆ ಕೊರೊನಾ ವಾರಿಯರ್ಸ್ ಗಳಾಗಿ ಪರಿಗಣಿಸಿ, ಅವರಿಗೆ ಎಲ್ಲಾ ರೀತಿಯ ನೆರವು ಸಹಕಾರ ಒದಗಿಸಲಾಗುವುದು ಎಂದರು. ಅಲ್ಲದೇ ಸೋಂಕು ನಿಯಂತ್ರಣದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯದ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯ್ತಿಯನ್ನು ಉತ್ತಮ ಗ್ರಾಮ ಪಂಚಾಯ್ತಿ ಹಾಗೂ ತಾಲೂಕಿನ ಮೂವರನ್ನು ಉತ್ತಮ ಸೇವಕ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಗುವುದು.

    ವಿಡಿಯೋ ಸಂವಾದದಲ್ಲಿ ಪಂಚಾಯಿತ್ ರಾಜ್ ಇಲಾಖೆಯ ಆಯುಕ್ತ ಅತೀಕ್ ಅಹ್ಮದ್, ಕಾರ್ಯದರ್ಶಿ ಶ್ರೀಮತಿ ಉಮಾ ಮಹದೇವನ್ ಸೇರಿದಂತೆ ಇತರರು ಹಾಜರಿದ್ದರು.

  • ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಗ್ರಾಮಸ್ಥರಿಗೆ ಕೋವಿಡ್-19 ಚಿಕಿತ್ಸಾ ವೆಚ್ಚ ಭರಿಸಲು ಮುಂದಾದ ಗ್ರಾಮಪಂಚಾಯತ್

    ಮುಂಬೈ: ಗ್ರಾಮಸ್ಥರಿಗೆ ಕೋವಿಡ್-19 ಸೋಂಕು ಕಂಡು ಬಂದರೆ ಅಂತವರ ಕೊರೊನಾ ಪರೀಕ್ಷೆಯಿಂದ ಹಿಡಿದು, ಆಸ್ಪತ್ರೆ ಹಾಗೂ ಚಿಕಿತ್ಸಾ ವೆಚ್ಚವನ್ನು ಪೂರ್ತಿ ಭರಿಸಲು ಖತಿವಾಲಿ ಗ್ರಾಮಪಂಚಾಯತ್ ಸಜ್ಜಾಗಿದೆ.

    ಮಹಾರಾಷ್ಟ್ರದ ಖತಿವಾಲಿ ಗ್ರಾಮಪಂಚಾಯತ್ ತನ್ನ ಗ್ರಾಮದ ಜನರಿಗೆ ಕೊರೊನಾ ಸೋಂಕು ಬಂದರೆ ಅವರ ಚಿಕಿತ್ಸಾ ವೆಚ್ಚ, ಆಸ್ಪತ್ರೆ ಖರ್ಚು ಎಲ್ಲವನ್ನು ಪಂಚಾಯತ್ ವತಿಯಿಂದ ಕೊಡುವುದಾಗಿ ನಿರ್ಧಾರ ಕೈಗೊಂಡಿದೆ. ಗ್ರಾಮಸ್ಥರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದ ಬಿಲ್‍ನ್ನು ಪಂಚಾಯತ್‍ಗೆ ಕೊಟ್ಟರೆ ಪಂಚಾಯತ್ ವೆಚ್ಚವನ್ನು ಭರಿಸುವುದಾಗಿ ಪಂಚಾಯತ್‍ನ ಸದಸ್ಯರು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಶಹಾಪುರ ತಾಲೂಕಿನಲ್ಲಿ ಖತಿವಾಲಿ ಗ್ರಾಮವಿದ್ದು, ಗ್ರಾಮದಲ್ಲಿ 6000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ತಾಲೂಕಿನಲ್ಲಿ ಕೇವಲ 1 ಕೊರೊನಾ ಚಿಕಿತ್ಸಾ ಆಸ್ಪತ್ರೆ ಇದ್ದು, ಈ ಆಸ್ಪತ್ರೆಗಾಗಿ ಖತಿವಾಲಿ ಗ್ರಾಮದಿಂದ 8 ಕಿಲೋ ಮೀಟರ್ ಬರಬೇಕಾಗಿದೆ. ಅದಲ್ಲದೆ ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗಿ ಭರ್ತಿಗೊಂಡಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಅದರೆ ಗ್ರಾಮದ ಜನರಿಗೆ ಖಾಸಗಿ ಅಸ್ಪತ್ರೆಯ ವೆಚ್ಚ ಭರಿಸುವ ಸಾಮರ್ಥ್ಯ ವಿಲ್ಲದೆ ಇರುವುದರಿಂದಾಗಿ ಪಂಚಾಯತ್‍ನಿಂದ ಆಸ್ಪತ್ರೆ ಖರ್ಚು ಭರಿಸುವ ನಿರ್ಧಾರ ಮಾಡಲಾಗಿದೆ.

    ಈಗಾಗಲೇ ಶಹಾಪುರ ತಾಲೂಕಿನಲ್ಲಿ 6,660 ಕೊರೊನಾ ಕೇಸ್ ದಾಖಲಾಗಿದ್ದು,ಇದೀಗ 241 ಸಕ್ರಿಯ ಪ್ರಕರಣಗಳಿವೆ. 170 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಈ ಕುರಿತು ಮಾತನಾಡಿರುವ ಖತಿವಾಲಿ ಗ್ರಾಮಪಂಚಾಯತ್ ಸದಸ್ಯರಾದ ದೇವಿದಾಸ್ ಜಾಧವ್, ಕೊರೊನಾದಿಂದಾಗಿ ಗ್ರಾಮದ ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಹೊರಭಾಗದ ಜನರ ಆಗಮನವನ್ನು ನಿಷೇಧಿಸಿದ್ದೇವೆ. ಆದರು ಕೂಡ ಗ್ರಾಮದಲ್ಲಿ ಸೋಂಕು ಕಂಡುಬರುತ್ತಿದೆ. ಗ್ರಾಮದ ಜನರು ಸರಿಯಾದ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್ ವತಿಯಿಂದ ಚಿಕಿತ್ಸಾ ವೆಚ್ಚಭರಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

  • ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ವೈಷಮ್ಯ- ಸಿನಿಮಾ ಸ್ಟೈಲಲ್ಲಿ ಸ್ಕೆಚ್ ಹಾಕಿ ಕೊಲೆ

    ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ವೈಷಮ್ಯ- ಸಿನಿಮಾ ಸ್ಟೈಲಲ್ಲಿ ಸ್ಕೆಚ್ ಹಾಕಿ ಕೊಲೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೋಗೇನಹಳ್ಳಿ ಬಳಿ ಫೆಬ್ರವರಿ 6 ರಂದು ಲಕ್ಷ್ಮೀನರಸಿಂಹಪ್ಪರನ್ನ ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ತನಿಖೆ ನಡೆಸಿದ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ, ಆರೋಪಿಗಳಾದ ರಾಜಾರೆಡ್ಡಿ, ಶ್ರೀರಾಮರೆಡ್ಡಿ, ನರಸಿಂಹರೆಡ್ಡಿಯನ್ನ ಬಂಧಿಸಿದ್ದು, ಮತ್ತೋರ್ವ ಆರೋಪಿ ಮಂಜುನಾಥ ನಾಪತ್ತೆಯಾಗಿದ್ದಾನೆ.

    ಕೊಲೆ ಮಾಡಿದ್ದು ಹೇಗೆ?
    ಕೊಲೆಯಾದ ಲಕ್ಷ್ಮೀನರಸಿಂಹಪ್ಪ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆರೋಪಿ ಶ್ರೀರಾಮರೆಡ್ಡಿ ಪತ್ನಿ ವಿರುದ್ಧ ಮತ್ತೋರ್ವ ಅಭ್ಯರ್ಥಿಯನ್ನ ಕಣಕ್ಕಿಳಿಸಿ ರಾಜಕೀಯ ಸೆಣಸಾಟ ನಡೆಸಿದ್ದ. ಆದರೂ ಚುನಾವಣೆಯಲ್ಲಿ ಶ್ರೀರಾಮರೆಡ್ಡಿ ಪತ್ನಿಯೇ ಜಯಶಾಲಿಯಾಗಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಆದರೆ ಚುನಾವಣಾ ಫಲಿತಾಂಶದ ನಂತರ ದ್ವೇಷದಿಂದ ಇಬ್ಬರೂ ಕಿತ್ತಾಡಿದ್ದರು. ಈ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜೀ ಪಂಚಾಯಿತಿ ಮೂಲಕ ಬಗೆಹರಿದಿತ್ತು.

    ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಚು ರೂಪಿಸಿದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳ ಜೊತೆ ಸೇರಿ ಲಕ್ಷ್ಮೀನರಸಿಂಹಪ್ಪ ಕೊಲೆ ಮಾಡಿದ್ದಾನೆ. ಲಕ್ಷ್ಮೀನರಸಿಂಹಪ್ಪ ವಿರುದ್ದ ಒಳಗೊಳಗೆ ದ್ವೇಷ ಕಾರುತ್ತಿದ್ದ ಶ್ರೀರಾಮರೆಡ್ಡಿ, ತನ್ನ ಸಂಬಂಧಿಗಳಾದ ಮಂಜುನಾಥ ರೆಡ್ಡಿ, ರಾಜಾರೆಡ್ಡಿ ಹಾಗೂ ನರಸಿಂಹರೆಡ್ಡಿ ಜೊತೆ ಲಕ್ಷ್ಮೀನರಸಿಂಹಪ್ಪ ಕೊಲೆಗೆ ಸಿನಿಮಾ ಶೈಲಿಯಲ್ಲಿ ಪಕ್ಕಾ ಪ್ಲಾನ್ ಮಾಡಿದ್ದಾನೆ.

    ಡಾಬಾದಲ್ಲಿ ಮದ್ಯ ಸೇವಿಸುತ್ತಾ ಪ್ಲಾನ್ ಮಾಡಿದ ನಾಲ್ವರು, ಪ್ಲಾನ್ ನಂತೆ ಲಕ್ಷ್ಮೀನರಸಿಂಹಪ್ಪನಿಗೆ ರಾಜಾರೆಡ್ಡಿ ಕರೆ ಮಾಡಿ ವರದಯ್ಯಗಾರಿಪಲ್ಲಿಯಲ್ಲಿದ್ದ ಲಕ್ಷ್ಮೀನರಸಿಂಹಪ್ಪನನ್ನು ಆತನ ಬೈಕ್ ಮೂಲಕವೇ ಏನೂ ಅರಿಯದಂತೆ ಕರೆದುಕೊಂಡು ಬಂದಿದ್ದಾನೆ. ಮೊದಲೇ ಪ್ಲಾನ್ ಮಾಡಿದಂತೆ ಲಕ್ಷ್ಮೀನರಸಿಂಹಪ್ಪ ಬರೋ ದಾರಿ ಮಧ್ಯೆ ಮೋರಿ ಕೆಳಗೆ ಅವಿತು ಕೂತಿದ್ದ ಶ್ರೀರಾಮರೆಡ್ಡಿ ಹಾಗೂ ನರಸಿಂಹರೆಡ್ಡಿ, ಲಕ್ಷ್ಮೀನರಸಿಂಹಪ್ಪನ ಬೈಕ್ ಅಡ್ಡ ಹಾಕಿ ದಾಳಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಈ ವೇಳೆ ಲಕ್ಷ್ಮೀನರಸಿಂಹಪ್ಪನನ್ನು ಕರೆದುಕೊಂಡು ಬಂದ ರಾಜಾರೆಡ್ಡಿಯೇ ಆತನ ತಲೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲಕ್ಷ್ಮೀ ನರಸಿಂಹಪ್ಪ ತಮ್ಮ ವಿರುದ್ಧ ಬೇರೆ ಅಭ್ಯರ್ಥಿ ಕಣಕ್ಕಿಳಿಸಿದ ಪರಿಣಾಮ ಚುನಾವಣೆಯಲ್ಲಿ ಲಕ್ಷ ಲಕ್ಷ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂತು. ಅಲ್ಲದೆ ಸದಾ ಲಕ್ಷ್ಮೀನರಸಿಂಹಪ್ಪ ನಮಗೆ ರಾಜಕೀಯ ಎದುರಾಳಿಯಾಗಿ ನಮ್ಮ ವಿರುದ್ಧ ನಿಲ್ಲುತ್ತಾನೆ ಎಂದು ಲಕ್ಷ್ಮೀನರಸಿಂಹರೆಡ್ಡಿಯನ್ನ ಕೊಂದು ಹಾಕಿದ್ದಾರೆ. ಸದ್ಯ ಮೂವರು ಆರೋಪಿಗಳನ್ನ ಬಂಧಿಸಿರುವ ಗುಡಿಬಂಡೆ ಪೊಲೀಸರು ನಾಪತ್ತೆಯಾಗಿರೋ ಮಂಜುನಾಥ್‍ಗಾಗಿ ಬಲೆ ಬೀಸಿದ್ದಾರೆ.