Tag: Gram Panchayat

  • ಸಾರ್ವಜನಿಕರ ಹಣ ದುರುಪಯೋಗ- 15 ಮಂದಿಯ ಪಂಚಾಯ್ತಿ ಸದಸ್ಯತ್ವ ರದ್ದು

    ಸಾರ್ವಜನಿಕರ ಹಣ ದುರುಪಯೋಗ- 15 ಮಂದಿಯ ಪಂಚಾಯ್ತಿ ಸದಸ್ಯತ್ವ ರದ್ದು

    ರಾಯಚೂರು: ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎನ್ನುವ ಹಾಗೇ ಕೇವಲ ಸಾವಿರಾರು ರೂಪಾಯಿ ಆಸೆಗೆ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡು ಜಿಲ್ಲೆಯ ಎಲೆಬಿಚ್ಚಾಲಿ ಗ್ರಾಮ ಪಂಚಾಯ್ತಿಯ 15 ಸದಸ್ಯರು ತಮ್ಮ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ.

    ಎಲೆ ಬಿಚ್ಚಾಲಿ ಗ್ರಾಮ ಪಂಚಾಯ್ತಿಯಲ್ಲಿ 2016-2017ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಅನುದಾನವನ್ನು ಅಧ್ಯಕ್ಷೆಯ ಪತಿ, ಮಾವ ವೈಯಕ್ತಿಕ ಹೆಸರಿನಲ್ಲಿ ಚೆಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿಗಳು ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿ ಒಟ್ಟು 15 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಹಣ ದುರುಪಯೋಗದ ಬಗ್ಗೆ ತನಿಖೆ ನಡೆಸಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2018 ಡಿಸೆಂಬರ್ 14ರಂದು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪ್ರಾದೇಶಿಕ ಆಯುಕ್ತರು 15 ಜನರ ಸದಸ್ಯತ್ವ ರದ್ದುಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸ್ಸಿನ ಆಧಾರದ ಮೇಲೆ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ)ರ ಅಡಿಯಲ್ಲಿ ಸದಸ್ಯತ್ವವನ್ನ ರದ್ದುಗೊಳಿಸಲಾಗಿದೆ.

    ಗ್ರಾ.ಪಂ ಸದಸ್ಯರುಗಳಾದ ಮಲ್ಲೇಶ 9,400 ರೂ., ವೀರನಗೌಡ 17,200 ರೂ., ಹನುಮಂತ 8,000 ರೂ., ಕಾಮಾಕ್ಷಮ್ಮ 10,900 ರೂ., ಜಯಶೀಲ 3,600 ರೂ. ಪಡೆದುಕೊಂಡಿದ್ದು, ಉಳಿದ 3 ಸಾವಿರ ಹಣವನ್ನ ಸಹ ಮರಳಿ ಖಾತೆಗೆ ಜಮಾ ಮಾಡಿಲ್ಲ. ಬಸಪ್ಪ 16,700 ರೂ., ರಮೇಶ್ 3,100 ರೂ., ದೌಲತ್ ಸಾಬ್ 4,800 ರೂ., ಚೆಕ್ ಪಡೆದ್ದುಕೊಡಿದ್ದರು. ಇದನ್ನ ವಾಪಾಸ್ ಡಿಡಿ ಮೂಲಕ ನೀಡುವುದಾಗಿ ತಿಳಿಸಿದ್ದರು. ಇನ್ನುಳಿದ ಏಳು ಜನರಲ್ಲಿ ಚೆಕ್ ಮೂಲಕ ಪಂಚಾಯ್ತಿ ಅಧ್ಯಕ್ಷೆ ಮಹಾಂತಮ್ಮ 4,500 ರೂಪಾಯಿ, ಉಪಾಧ್ಯಕ್ಷೆ ಯಲ್ಲಮ್ಮ 4,900 ರೂ., ಪಾರ್ವತಮ್ಮ 4,900 ರೂ., ಸುಜಾತ ಹಾಗೂ ಹುಲಿಗೆಮ್ಮ ತಲಾ 8,900 ರೂ., ಅಮೀನಾ ಬೇಗಂ 4,500 ರೂ., ಸುಶೀಲಮ್ಮ 6,000 ರೂ. ಹಣ ಪಡೆದಿರುವುದು ಖಾತರಿಯಾಗಿದೆ.

    ಗ್ರಾಮ ಪಂಚಾಯ್ತಿಯ 17 ಜನ ಸದಸ್ಯರ ಪೈಕಿ 15 ಜನ ಸದಸ್ಯರು ಭ್ರಷ್ಟಾಚಾರ ಆರೋಪದ ಮೇಲೆ ಸದಸ್ಯತ್ವ ಕಳೆದುಕೊಂಡಿದ್ದಾರೆ. ಇಷ್ಟು ಜನ ಸದಸ್ಯತ್ವ ಕಳೆದುಕೊಳ್ಳುವ ಮೂಲಕ ಗ್ರಾಮ ಪಂಚಾಯ್ತಿ ಅಪಖ್ಯಾತಿಗೆ ಒಳಗಾಗಿದೆ.

  • ಒಂದು ಪಿಡಿಒ ಹುದ್ದೆಗೆ ಮೂವರ ಪೈಪೋಟಿ – ಗ್ರಾಮ ಪಂಚಾಯಿತಿ ಸದಸ್ಯರಿಂದ ಮೌನ ಪ್ರತಿಭಟನೆ

    ಒಂದು ಪಿಡಿಒ ಹುದ್ದೆಗೆ ಮೂವರ ಪೈಪೋಟಿ – ಗ್ರಾಮ ಪಂಚಾಯಿತಿ ಸದಸ್ಯರಿಂದ ಮೌನ ಪ್ರತಿಭಟನೆ

    ನೆಲಮಂಗಲ: ಒಂದು ಪಿಡಿಒ ಹುದ್ದೆಗೆ ಮೂವರು ಕಿತ್ತಾಟ ನಡೆದ ಘಟನೆ ಡಾಬಸ್ ಪೇಟೆ ಪಂಚಾಯತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ವರ್ತನೆಗೆಯನ್ನು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೈಗಾರಿಕಾ ಪಂಚಾಯತಿಯಾದ ಡಾಬಸ್ ಪೇಟೆಯಲ್ಲಿ, ಪಂಚಾಯತಿ ಸದಸ್ಯರು ಮೌನ ಪ್ರತಿಭಟನೆ ನಡೆಸಿದ್ದಾರೆ.

    ಗ್ರಾಮ ಪಂಚಾಯತಿ ಪಿಡಿಒಗಳಾದ ದಿನೇಶ್ ಮತ್ತು ರವೀಂದ್ರ ಬೇಡ ಎಂದು ಗ್ರಾಮ ಪಂಚಾಯತಿ ಸದಸ್ಯರು ಸ್ಥಳೀಯ ಶಾಸಕ ಕೆ.ಶ್ರೀನಿವಾಸಮೂರ್ತಿ ಅವರಿಗೆ ಒತ್ತಾಯ ಮಾಡಿದ್ದರು. ಈ ಹಿಂದೆ ಪಿಡಿಒ ಆಗಿದ್ದ ದಿನೇಶ್ ಕುಮಾರ್ ಗೆ ವರ್ಗಾವಣೆಯಾಗಿದ್ದು, ಅವರು ಹುದ್ದೆಯನ್ನು ತೆರವು ಮಾಡಿಲ್ಲ.

    ಇತ್ತ ಇದೇ ಹುದ್ದೆಗೆ ನೇಮಕವಾಗಿರುವ ರವೀಂದ್ರ ಅವರು ಮೇಲೆ, ಅವರು ಈ ಹಿಂದೆ ಕಾರ್ಯನಿರ್ವಹಿಸಿದ್ದ ಪಂಚಾಯತಿಯಲ್ಲಿ ಅಕ್ರಮದ ಆರೋಪ ಹೇಳಿ ಬಂದಿತ್ತು. ಆದ್ದರಿಂದ ಈ ಇಬ್ಬರು ನಮಗೆ ಬೇಡ ಎಂದು ಪಂಚಾಯಿತಿ ಸದಸ್ಯರು ಒತ್ತಾಯ ಮಾಡಿದ್ದರು. ಅಲ್ಲದೇ ತಾತ್ಕಾಲಿಕವಾಗಿ ಬೇರೆ ಪಿಡಿಓ ನೇಮಕಾತಿಗೆ ಜಿಲ್ಲಾ ಪಂಚಾಯತಿ ಸಿಇಒಗೆ ಒತ್ತಾಯಿಸಿದರು. ಇತ್ತ ಗ್ರಾಮ ಪಂಚಾಯತಿ ಸದಸ್ಯರಾದ ಜೆಡಿಎಸ್ ಮತ್ತು ಬಿಜೆಪಿ ಬಣದ ನಡುವೆ ಕಿತ್ತಾಟ ನಡೆದಿದೆ. ಅಲ್ಲದೇ ಪಿಡಿಒ ಸ್ಥಾನಕ್ಕೆ ನಿರಂಜನಮೂರ್ತಿ ಎಂಬ ಅಧಿಕಾರಿಯ ಹೆಸರು ಕೇಳಿ ಬರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

    ಇದೇ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಕೆ.ಶ್ರೀನಿವಾಸಮೂರ್ತಿ, ಪಿಡಿಒಗಳ ಹಗ್ಗಾಜಗ್ಗಾಟ ಸಂಗತಿ ನನಗೂ ತಿಳಿದು ಬಂದಿದೆ. ಇಂದು ಎಲ್ಲಾ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಸದಸ್ಯರು ಪಿಡಿಒ ಅಧಿಕಾರಿಯಾಗಿ ಹೊಸಬರನ್ನು ನೇಮಿಸಲು ಒತ್ತಾಯಿಸಿದ್ದಾರೆ. ಅದರಂತೆಯೇ ಮುಂದಿನ ದಿನಗಳಲ್ಲಿ ತಾತ್ಕಾಲಿಕ ಪಿಡಿಒ ನೇಮಕಾತಿಗೆ ಒತ್ತಾಯಿಸಲಿದ್ದೇವೆ ಎಂದರು. ಈ ವೇಳೆ ಸೋಂಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಿ ಆಂಜನಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಇಂದ್ರಮ್ಮ, ಶ್ರೀನಿವಾಸಮೂರ್ತಿ, ಚಂದ್ರಣ್ಣ, ಪುರುಷೋತ್ತಮ್, ವಿ.ಎಸ್.ಎಸ್.ಎನ್.ವೆಂಕಟೇಶ್ ಹಾಜರಿದ್ದರು.

  • ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಯುವಕರ ಸ್ವಚ್ಛತಾ ಆಂದೋಲನ

    ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಯುವಕರ ಸ್ವಚ್ಛತಾ ಆಂದೋಲನ

    ಹಾವೇರಿ: ಗ್ರಾಮದ ನೈರ್ಮಲ್ಯ ಹಾಗೂ ಸ್ವಚ್ಛತೆ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಹಾವೇರಿ ತಾಲೂಕು ಬೆಳವಿಗಿ ಗ್ರಾಮದಲ್ಲಿ ಯುವಕರ ತಂಡ ಹಾಗೂ ಕರವೇ ಕಾರ್ಯಕರ್ತರು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವಚ್ಛತಾ ಆಂದೋಲನ ನಡೆಸಿದರು.

    ಯುವಶಕ್ತಿಯ ಪಡೆಯನ್ನ ಕಟ್ಟಿಕೊಂಡು ಗ್ರಾಮದ ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ್ಯ ಹಾಗೂ ಸುಮಾರು ದಿನಗಳಿಂದ ತುಂಬಿ ನಿಂತಿರುವ ಚರಂಡಿಗಳನ್ನು ಕ್ಲೀನ್ ಮಾಡುವ ಕಾರ್ಯ ಮಾಡಿದರು. ಗ್ರಾಮದ ಶಾಲಾ ಆವರಣದ ಸುತ್ತಮುತ್ತಲು. ಬಸ್ ನಿಲ್ದಾಣದ ಬಳಿ ಹಾಗೂ ಗ್ರಾಮಕ್ಕೆ ಬರುವ ಪ್ರಮುಖ ರಸ್ತೆಯನ್ನು ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ಹಲವು 20 ಕ್ಕೂ ಅಧಿಕ ಗ್ರಾಮದ ಯುವಕರ ತಂಡ ಸ್ವಚ್ಛತಾ ಅಭಿಯಾನ ಮಾಡಿದರು.

    ಗ್ರಾಮದ ಹೊರಗೆ ಇರೋ ರಸ್ತೆಯಲ್ಲಿ ಬರ್ಹಿದೆಸೆ ಹೋಗುವುದನ್ನ ನಿಲ್ಲಿಸಿ, ಮನೆಗೆ ಒಂದು ಶೌಚಾಲಯ ನಿರ್ಮಾಣ ಮಾಡಿಕೊಳ್ಳಿ, ಯಾವುದೇ ರೋಗ ರುಜಿನಗಳು ಬರೋದಿಲ್ಲ. ಬೆಳವಿಗಿ ಗ್ರಾಮವನ್ನ ಮುಂದಿನ ದಿನಗಳಲ್ಲಿ ಸ್ವಚ್ಛ ಸುಂದರ ಗ್ರಾಮವನ್ನಾಗಿ ಮಾಡುವ ಗುರಿಯನ್ನು ಯುವಕರ ತಂಡ ಹೊಂದಿದೆ. ಈ ತಂಡದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಹೈ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ

    ಬಳ್ಳಾರಿ: ಜನ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಬಳ್ಳಾರಿಯಲ್ಲಿ ನಡೆದಿರುವ ಘಟನೆ ಒಂದು ಉದಾಹರಣೆಯಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ಥಾನಕ್ಕಾಗಿ ತಮ್ಮ ಜಾತಿ ಪ್ರಮಾಣ ಪತ್ರವನ್ನೇ ಬದಲಿಸಿ, ಕಳೆದ ನಾಲ್ಕು ವರ್ಷಗಳಿಂದ ಸುಳ್ಳು ಪ್ರಮಾಣ ಪತ್ರ ನೀಡಿ ಅಧ್ಯಕ್ಷೆಯಾಗಿ ಅಧಿಕಾರ ಅನುಭವಿಸಿದ್ದರೂ ಆ ಸ್ಥಾನವನ್ನು ಮಹಿಳೆಯೊಬ್ಬರು ಬಿಟ್ಟು ಕೊಡುತ್ತಿಲ್ಲ. ಜೊತೆಗೆ ಹೈಕೋರ್ಟ್ ಆದೇಶ ಮಾಡಿದ್ದರೂ ಕ್ಯಾರೇ ಎನ್ನುತ್ತಿಲ್ಲ.

    ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಆದರೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾತ್ರ ತಮಗೂ ಹೈಕೋರ್ಟ್ ಆದೇಶಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದು ನ್ಯಾಯಾಲಯದ ಆದೇಶ ಪಾಲಿಸದೆ ದರ್ಪ ತೋರುತ್ತಿದ್ದಾರೆ. ಈ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಪ್ರವರ್ಗ 2ಎ ಗೆ ಮೀಸಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಎಂಬುವವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅಧ್ಯಕ್ಷೆ ಸ್ಥಾನವನ್ನು ಅಲಂಕಾರ ಮಾಡಿದ್ದಾರೆ. ನಕಲಿ ಪ್ರಮಾಣ ಪತ್ರ ಎನ್ನುವುದು ಗ್ರಾಮದ ಎಲ್ಲರಿಗೂ ಗೊತ್ತಿದ್ದರೂ ಏನು ಮಾಡದ ಪರಿಸ್ಥಿತಿ ಇತ್ತು. ಆದರೆ ಪ್ರವರ್ಗ 2ಎ ಗೆ ಸೇರಿದ ಮತ್ತೊಬ್ಬ ಗ್ರಾಮ ಪಂಚಾಯ್ತಿ ಸದಸ್ಯೆ ರೇಖಾ ಸೊನ್ನದ ಅವರು ಇದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಧಾರವಾಡ ಹೈಕೋರ್ಟ್ ಬೆಂಚ್ ರೇಖಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಯರಳ್ಳಿ ರತ್ನಮ್ಮಾ ಅವರು ಸಲ್ಲಿಸಿದ್ದ ನಕಲಿ ಜಾತಿ ಪ್ರಮಾಣ ಪತ್ರವನ್ನು ನಕಲಿ, ಕೂಡಲೇ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗೆ ಇಳಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿತ್ತು.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳು ಕಳೆದರೂ ಈ ಆದೇಶವನ್ನು ಯಾರು ಪಾಲಿಸುತ್ತಿಲ್ಲ. ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷೆ ಯರಳ್ಳಿ ರತ್ನಮ್ಮಾ ಕೂಡ ಅಧ್ಯಕ್ಷೆ ಸ್ಥಾನವನ್ನು ಬಿಟ್ಟು ಕೊಡಲು ತಯಾರಿಲ್ಲ. ಇತ್ತ ಹೂವಿನಹಡಗಲಿ ತಾಲೂಕಿನ ಮಾನ್ಯ ತಹಶೀಲ್ದಾರರು ಸಹ ಹೈಕೋರ್ಟ್ ಆದೇಶ ಪಾಲಿಸದೆ ತಮಗೂ ಆದೇಶಕ್ಕೂ ಸಂಬಂಧ ಇಲ್ಲ ಎಂಬಂತೆ ಇದ್ದಾರೆ.

    ಹೈಕೋರ್ಟ್ ಆದೇಶ ಮಾಡಿ 8 ತಿಂಗಳೇ ಕಳೆದಿವೆ. ಜೊತೆಗೆ ಇನ್ನು ಎರಡು ತಿಂಗಳಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ನಿಗದಿ ಆಗಲಿದೆ. ಆದರೆ ಎರಡು ತಿಂಗಳಾದರೂ ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡಲಿ ಎಂಬುದು ರೇಖಾ ಅವರ ವಾದವಾಗಿದ್ದು, ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲ ಎಂಬಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ.

  • ಗ್ರಾಮ ಪಂಚಾಯ್ತಿ ಎಡವಟ್ಟು – ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ

    ಗ್ರಾಮ ಪಂಚಾಯ್ತಿ ಎಡವಟ್ಟು – ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ

    ಮಡಿಕೇರಿ: ಹಿಂದೂ ಸಂಪ್ರದಾಯದ ಪ್ರಕಾರ ಯಾರೇ ಸತ್ತರೂ ಆ ಮೃತದೇಹಕ್ಕೆ ಒಮ್ಮೆ ಶವಸಂಸ್ಕಾರ ಮಾಡಿ ಮುಕ್ತಿ ಕಾಣಿಸಲಾಗುತ್ತೆ. ಆದರೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಮಾತ್ರ ಒಂದೇ ಶವಕ್ಕೆ ಎರಡೆರಡು ಬಾರಿ ಅಂತ್ಯಸಂಸ್ಕಾರ ಮಾಡಲಾಗಿದೆ.

    ಹೌದು. ಇದನ್ನು ಬಗ್ಗೆ ತಿಳಿದರೆ ವಿಚಿತ್ರ ಅನಿಸುತ್ತೆ. ಎರಡೆರಡು ಬಾರಿ ಯಾಕೆ ಶವಸಂಸ್ಕಾರ ಮಾಡಿದರು ಎಂಬ ಪ್ರಶ್ನೆ ಕೂಡ ತಲೆಗೆ ಬರುತ್ತೆ. ಅಸಲಿಗೆ ಇದಕ್ಕೆ ಕಾರಣ ಗ್ರಾಮ ಪಂಚಾಯ್ತಿಯ ಎಡವಟ್ಟು. ಕಳೆದ ಗುರುವಾರವಷ್ಟೇ ನಾಪೋಕ್ಲು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಗ್ರಾಮದ ಕಸವಿಲೇವಾರಿ ಮಾಡುವುದಕ್ಕಾಗಿ ಹಿಂದೂ ರುದ್ರ ಭೂಮಿಯಲ್ಲಿ ಬೃಹತ್ ಗುಂಡಿ ತೆಗೆದಿತ್ತು. ಈ ವೇಳೆ ಭೂಮಿಯಲ್ಲಿ ಸಿಕ್ಕ ಶವಗಳನ್ನು ಗುಂಡಿತೆಗೆದ ಮಣ್ಣಿನಡಿಯಲ್ಲಿ ಹಾಕಿ ಮುಚ್ಚಲಾಗಿತ್ತು.

    ಪಂಚಾಯತ್ ವಿರುದ್ಧ ಪ್ರಕರಣ ದಾಖಲಾಗಿ ಆ ಗುಂಡಿಯನ್ನು ಪುನಃ ಮುಚ್ಚುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಒಂದು ಶವದ ಇಡೀ ಅಸ್ಥಿಪಂಜರ ದೊರೆತಿತ್ತು. ಹೀಗಾಗಿ ಆ ಅಸ್ಥಿಪಂಜರಕ್ಕೆ ಪುನಃ ಇಂದು ಹಿಂದೂ ಸಂಪ್ರದಾಯಂತೆ ಶವಸಂಸ್ಕಾರ ನೆರವೇರಿಸಲಾಯಿತು. ಆದರೆ ಒಂದೇ ಶವಕ್ಕೆ ಎರಡೆರಡು ಬಾರಿ ಸಂಸ್ಕಾರ ಮಾಡುವಂತೆ ಮಾಡಿದ ಪಂಚಾಯ್ತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ತಪ್ಪಿಗೆ ರುದ್ರ ಭೂಮಿಯಲ್ಲಿವ ಶವವನ್ನು ಹೊರತೆಗೆದರಲ್ಲ ಎಂದು ಕಿಡಿಕಾರಿದ್ದಾರೆ.

  • ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ

    ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ

    ಮಡಿಕೇರಿ: ಗ್ರಾಮ ಪಂಚಾಯತಿ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ರಸ್ತೆ ಮಧ್ಯ ಇರುವುದರಿಂದ ಗುತ್ತಿಗೆದಾರ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದ ಘಟನೆ ಕೊಡಗಿನಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೊಂದಿಬಸವನ ಹಳ್ಳಿಯಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭ ಗ್ರಾಮಸ್ಥರು ವಿದ್ಯುತ್ ಕಂಬ ತೆಗೆದು ಕೆಲಸ ಮಾಡುವಂತೆ ಗುತ್ತಿಗೆದಾರಿಗೆ ತಿಳಿಸಿದ್ದಾರೆ. ಅದರೆ ವಿದ್ಯುತ್ ಇಲಾಖೆಗೆ ಸರಿಯಾದ ಮಾಹಿತಿ ನೀಡದೇ ಕಾಮಗಾರಿ ಮಾಡಿಕೊಂಡು ರಸ್ತೆಗೆ ಅಡ್ಡಲಾದ ಕರೆಂಟ್ ಕಂಬದ ವರೆಗೆ ಕೆಲಸ ಮಾಡಿ ಅರ್ಧಕ್ಕೆ ಕೈ ಬಿಟ್ಟಿದ್ದಾರೆ.

    ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ವಿದ್ಯುತ್ ಕಂಬ ತೆರವು ಮಾಡಿ ರಸ್ತೆ ಕಾಮಗಾರಿಗೆ ಅನುವು ಮಾಡಿಕೊಂಡುವಂತೆ ವಿದ್ಯುತ್ ಇಲಾಖೆಗೆ ಮಾನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಕಂಬವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು ರಸ್ತೆ ಕಾಮಗಾರಿ ಕೆಲಸ ಅರಂಭವಾಗಿದೆ.

  • ಗ್ರಾಮ ಪಂಚಾಯತ್ ತೆರಿಗೆ ಕಟ್ಟದ ಪರಮೇಶ್ವರ್

    ಗ್ರಾಮ ಪಂಚಾಯತ್ ತೆರಿಗೆ ಕಟ್ಟದ ಪರಮೇಶ್ವರ್

    – ಕುಲವನಹಳ್ಳಿ ಗ್ರಾಮ ಪಂಚಾಯತ್ ನೋಟಿಸಿಗೆ ಕ್ಯಾರೇ ಎನ್ನದ ಕಾಲೇಜ್
    – 45 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದೆ ಸಿದ್ಧಾರ್ಥ್ ಕಾಲೇಜ್

    ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಮೆಡಿಕಲ್ ಕಾಲೇಜು ಗ್ರಾಮ ಪಂಚಾಯಿತಿಗೆ ಪಾವತಿಸಬೇಕಿದ್ದ 45,26,688 ರೂ. ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದೆ.

    ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯತಿಗೆ ವ್ಯಾಪ್ತಿಯಲ್ಲಿ ಇರುವ ಮೆಡಿಕಲ್ ಕಾಲೇಜ್ ಗ್ರಾಮ ಪಂಚಾಯಿತಿಗೆ ಲಕ್ಷ ಲಕ್ಷ ತೆರಿಗೆಯನ್ನು ಕಟ್ಟಬೇಕಿದೆ. ಈ ವಿಚಾರವಾಗಿ ಗ್ರಾಮ ಪಂಚಾಯತಿ ಕಾರ್ಯಾಲಯ ಸಾಕಷ್ಟು ಬಾರಿ ನೋಟಿಸ್ ನೀಡಿದ್ದರೂ ಕಾಲೇಜು ಆಡಳಿತ ಮಂಡಳಿ ತೆರಿಗೆ ಮಾತ್ರ ಕಟ್ಟಿರಲಿಲ್ಲ.

    ಈ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಬ್ಲಾಕ್ ಮಾಡಿ ಅಕ್ರಮವಾಗಿ ಹಣ ಸಂಗ್ರಹಣೆ ಮಾಡುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ. ಈ ವಿಚಾರವಾಗಿ ಇಬ್ಬರು ವಿದ್ಯಾರ್ಥಿಗಳು ನಮ್ಮ ಸೀಟ್‍ನ್ನು ಬ್ಲಾಕ್ ಮಾಡಲಾಗಿತ್ತು ಎಂದು ಐಟಿ ಅಧಿಕಾರಗಳ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ಓದಿ: ಪರಮೇಶ್ವರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಸೀಟ್ ಬ್ಲಾಕ್ ಹೇಗೆ?
    ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟ್ ಗಳು ವಿದ್ಯಾರ್ಥಿಗಳಿಗೆ ಲಭ್ಯ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಸೀಟ್ ಸಿಕ್ಕುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದವರು ಅಥವಾ ಪರೀಕ್ಷೆಯೇ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ.

    ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟ್ ಬ್ಲಾಕ್ ಅವ್ಯವಹಾರಕ್ಕೆ ಬಳಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಯೊಬ್ಬ ಯಾವುದೋ ರಾಜ್ಯದ ಕಾಲೇಜು ಸೇರುತ್ತೇನೆ ಎಂದು ಹೇಳುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಕಾಲೇಜಿಗೆ ದಿಢೀರ್ ಯಾವುದೋ ಕಾರಣ ನೀಡಿ ರದ್ದು ಪಡಿಸುವುದಾಗಿ ಮಾಹಿತಿ ನೀಡುತ್ತಾನೆ. ಈ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ ಕೌನ್ಸಿಲಿಂಗ್ ನಡೆಸಿ ಮತ್ತೆ ಈ ಸೀಟ್ ಅನ್ನು ಹಂಚಿಕೆ ಮಾಡಲು ಸಾಧ್ಯವೇ ಇಲ್ಲ.

    ಈ ಸಂದರ್ಭದಲ್ಲಿ ಮ್ಯಾನೇಜ್‍ಮೆಂಟ್ ಈ ಸೀಟ್ ಅನ್ನು ಬೇರೊಬ್ಬ ವಿದ್ಯಾರ್ಥಿಗೆ ಲಕ್ಷ, ಕೋಟಿ ರೂ.ಗೆ ಮಾರಾಟ ಮಾಡುತ್ತದೆ. ಸೀಟ್ ಬ್ಲಾಕ್ ಮಾಡುವ ವಿಚಾರ ಮೊದಲೇ ಪೂರ್ವ ನಿರ್ಧಾರವಾಗಿರುತ್ತದೆ. ಅಂತಿಮವಾಗಿ ದಲ್ಲಾಳಿ, ವಿದ್ಯಾರ್ಥಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಈ ತಮ್ಮ ತಮ್ಮ ಪಾಲನ್ನು ಹಂಚಿಕೊಳ್ಳುತ್ತಾರೆ.

  • ಎರಡು ಮಕ್ಕಳ ನಿಯಮ ಉಲ್ಲಂಘನೆ – ಗ್ರಾ.ಪಂ.ಅಧ್ಯಕ್ಷೆ ಸ್ಥಾನದಿಂದ ಶಾಸಕನ ಪತ್ನಿ ಅನರ್ಹ

    ಎರಡು ಮಕ್ಕಳ ನಿಯಮ ಉಲ್ಲಂಘನೆ – ಗ್ರಾ.ಪಂ.ಅಧ್ಯಕ್ಷೆ ಸ್ಥಾನದಿಂದ ಶಾಸಕನ ಪತ್ನಿ ಅನರ್ಹ

    ಭುವನೇಶ್ವರ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ಒಡಿಶಾ ಶಾಸಕರ ಪತ್ನಿಯನ್ನು ಜಿಲ್ಲಾ ನ್ಯಾಯಾಲಯ ಅನರ್ಹಗೊಳಿಸಿದೆ.

    1994ರ ಸಮಿತಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಂಠಮಾಲ್ ಜಿಲ್ಲೆಯ ದಾರಿಂಗಬಡಿ ಪಂಚಾಯಿತಿ ಅಧ್ಯಕ್ಷೆ ಸುಭ್ರೆಂತಿ ಪ್ರಧಾನ್ ಅವರನ್ನು ಕಂಠಮಾಲ್ ಜಿಲ್ಲಾ ನ್ಯಾಯಾಧೀಶರು ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. ಸುಭ್ರೆಂತಿ ಅವರು ಜಿ ಉದಯಗಿರಿ ಕ್ಷೇತ್ರದ ಶಾಸಕ ಸಲುಗಾ ಪ್ರಧಾನ್ ಅವರ ಪತ್ನಿಯಾಗಿದ್ದಾರೆ.

    ಪಂಚಾಯತ್ ಸದಸ್ಯರು ಅಥವಾ ಅಧ್ಯಕ್ಷರಾಗಬೇಕಾದಲ್ಲಿ ಕೇವಲ ಇಬ್ಬರು ಮಕ್ಕಳನ್ನು ಮಾತ್ರ ಹೊಂದಿರಬೇಕು ಎಂಬ ಕಾನೂನಿದೆ. ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಪ್ರಧಾನ್ ಅವರಿಗೆ ಮೂವರು ಮಕ್ಕಳಿದ್ದರು. ಹೀಗಾಗಿ ಅವರನ್ನು ಕೋರ್ಟ್ ಅನರ್ಹ ಮಾಡಿ ಆದೇಶ ಪ್ರಕಟಿಸಿದೆ.

    ತಜುಂಗಿಯಾ ಪಂಚಾಯಿತಿಯ ಸದಸ್ಯ ರೂಡಾ ಮಲ್ಲಿಕ್ ಪಂಚಾಯಿತಿಯ ಅಧ್ಯಕ್ಷೆಯಾಗುವ ಸಲುವಾಗಿ ತಮ್ಮ ಮಕ್ಕಳ ಸಂಖ್ಯೆಯನ್ನು ಮರೆಮಾಚಿದ್ದಾರೆ ಆರೋಪಿಸಿ ದೂರು ನೀಡಿದ್ದರು.

    1991ರ ಜನಗಣತಿಯ ನಂತರ ಜಾರಿಗೆ ಬಂದಿರುವ ಎರಡು ಮಕ್ಕಳನ್ನು ಹೊಂದುವ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದವರಿಗೆ ಹಾಗೂ ಮಹಿಳೆಯರಿಗೆ ತಾರತಮ್ಯವಾಗಿದೆ ಎಂದು ಟೀಕಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸುಪ್ರೀಂ ಕೋರ್ಟ್ ನುವಾಪಾ ಜಿಲ್ಲೆಯ ಮಾಜಿ ಬುಡಕಟ್ಟು ಜನಾಂಗ ಸರ್ಪಂಚ್ ಅವರನ್ನು ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ವಜಾಗೊಳಿಸಲಾಗಿತ್ತು.

  • ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಚ್ಚಿನಿಂದ ತಂದೆಯ ಕತ್ತು ಕೊಯ್ದು ಮಗ

    ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಚ್ಚಿನಿಂದ ತಂದೆಯ ಕತ್ತು ಕೊಯ್ದು ಮಗ

    ಚಿತ್ರದುರ್ಗ: ಮೊಬೈಲ್ ಕಸಿದುಕೊಂಡಿದ್ದಕ್ಕೆ ಸ್ವಂತ ಅಪ್ಪನನ್ನೇ ಅಪ್ರಾಪ್ತ ಬಾಲಕ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್.ಡಿ ಕಾವಲು ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಯಪ್ಪ (48) ಅವರನ್ನು ಯಾರೋ ದುಷ್ಕರ್ಮಿಗಳು ಕತ್ತು ಕೊಯ್ದ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.

    ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಸ್ಥಳಕ್ಕೆ ಬಂದ ಪೊಲೀಸರು, ಮನೆಯಲ್ಲಿ ಇದ್ದವರನ್ನು ವಿಚಾರಿಸಿದ್ದಾರೆ. ಮನೆಯಲ್ಲಿ ಜಯಪ್ಪನ ಹೆಂಡತಿ ಸಂಬಂಧಿಕರ ಮನೆಗೆ ಹೋಗಿದ್ದು, ಮನೆಯಲ್ಲಿ ಅಪ್ಪ ಮಗ ಮಾತ್ರ ಇದ್ದರು ಎಂದು ಗೊತ್ತಾಗಿದೆ.

    ಆಗ ಮಗ 16 ವರ್ಷದ ಪುನೀತ್‍ನನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಮ್ಮ ತಂದೆಯನ್ನು ನಾನೇ ಕೊಲೆ ಮಾಡಿದ್ದು ಎಂದು ಅಪ್ರಾಪ್ತ ಬಾಲಕ ಒಪ್ಪಿಕೊಂಡಿದ್ದಾನೆ. ರಾತ್ರಿ ಮೊಬೈಲ್ ನೋಡುತ್ತಿದ್ದ ಮಗನ ಮೇಲೆ ಗದರಿದ ಅಪ್ಪ ಮೊಬೈಲ್ ಕಸಿದುಕೊಂಡು ಬೈದು ಹೋಗಿ ಮಲಗಿದ್ದಾನೆ. ಮೊಬೈಲ್ ಕಸಿದುಕೊಂಡಿದಕ್ಕೆ ಕೋಪಗೊಂಡಿದ್ದ ಪುನೀತ್ ಬೆಳಗಿನ ಜಾವ ಮನೆಯಲ್ಲಿ ಇದ್ದ ಮಚ್ಚಿನಿಂದ ತಂದೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಆರೋಪಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

  • ಕತ್ತು ಕೊಯ್ದು ಗ್ರಾ.ಪಂ ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆ

    ಕತ್ತು ಕೊಯ್ದು ಗ್ರಾ.ಪಂ ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆ

    ಚಿತ್ರದುರ್ಗ: ಕತ್ತು ಕೊಯ್ದು ಗ್ರಾ.ಪಂ ಬಿಲ್ ಕಲೆಕ್ಟರ್‍ರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಆರ್.ಡಿ ಕಾವಲುನಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಜಯಪ್ಪ (48) ಎಂದು ಗರುತಿಸಲಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ರಾತ್ರಿ ಮನೆಯಲ್ಲಿ ಜಯಪ್ಪ ಒಬ್ಬನೇ ಮಲಗಿದ್ದಾಗ ದುಷ್ಕರ್ಮಿಗಳು ಬಂದು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.