Tag: Gram Panchayat

  • ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್‍ವೈ

    ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್‍ವೈ

    ಬೆಂಗಳೂರು: ಕೊರೊನಾ ಸ್ಥಿತಿಗತಿ ತಿಳಿದುಕೊಂಡು ಲಾಕ್ಡೌನ್ ವಿಸ್ತರಣೆ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಜನರು ಸಹಕರಿಸಿದರೆ ಲಾಕ್‍ಡೌನ್ ಮುಂದುವರಿಸುವ ಸಂದರ್ಭ ಉದ್ಭವ ಆಗಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಮುಂದುವರಿಸುವುದಾ ಎನ್ನುವ ಕುರಿತಾಗಿ ನಾವು ಮೂರು ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ಹಲವರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಜೂನ್ 7ರ ತನಕ ಲಾಕ್ ಡೌನ್ ಮುಂದುವರಿಯಲಿದೆ. ಕೊರೊನಾ ಸ್ಥಿತಿಗತಿ ತಿಳಿದುಕೊಂಡು ಲಾಕ್‍ಡೌನ್ ವಿಸ್ತರಣೆ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಜನರು ಸಹಕರಿಸಿದರೆ ಲಾಕ್‍ಡೌನ್ ಮುಂದುವರಿಸುವ ಸಂದರ್ಭ ಉದ್ಭವ ಆಗಲ್ಲ. ಇಲ್ಲದಿದ್ದರೆ ಪರಿಸ್ಥಿತಿ ನೋಡಿ ತೀರ್ಮಾನ ಮಾಡಬೇಕಾಗುತ್ತೆ ಎಂದಿದ್ದಾರೆ.

    ಸದ್ಯ ಪಾಸಿಟಿವಿಟಿ ರೇಟ್ 16% ತಲುಪಿದೆ. ನಾಲ್ಕೈದು ದಿನಗಳಲ್ಲಿ 8ಕ್ಕೆ ಇಳಿದರೂ ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಬಹುದು. ನಂತರ ಪಾಸಿಟಿವಿಟಿ ರೇಟ್ 6%ಕ್ಕಿಂತ ಕೆಳಗೆ ಇಳಿದ್ರೆ ಲಾಕ್‍ಡೌನ್ ವಿನಾಯ್ತಿ ಕೊಡುವ ಸಾಧ್ಯತೆ ಇದೆ.  ಇದನ್ನೂ ಓದಿ: ಸಿಎಂ ಬದಲಾವಣೆ ವದಂತಿ – ಬಿಎಸ್‍ವೈ ಬಣ ಹೇಳೋದು ಏನು? ರೇಸ್‍ನಲ್ಲಿ ಯಾರಿದ್ದಾರೆ?

    5 ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಗೃಹ ಕಚೇರಿ ಕೃಷ್ಣಾದಿಂದ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವೀಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ್, ಕಂದಾಯ ಸಚಿವ ಆರ್.ಅಶೋಕ್ ಭಾಗಿಯಾಗಿದ್ದರು. 5 ಜಿಲ್ಲೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಭಾಗಿ ಮೈಸೂರು, ಹಾಸನ, ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಜಿಲ್ಲೆಗಳ ಕೊರೊನಾ ಸ್ಥಿತಿಗತಿ, ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ಲಾಕ್‍ಡೌನ್ ವಿಸ್ತರಣೆ ಭವಿಷ್ಯ ನಿರ್ಧಾರವಾಗುತ್ತದೆ.

  • ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

    ಅನಾಥ ಶವದ ವಿಧಿವಿಧಾನ ನೆರವೇರಿಸಿದ ಗ್ರಾಮ ಪಂಚಾಯಿತಿ ಸದಸ್ಯರು

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಮಾರುಕಟ್ಟೆಯಲ್ಲಿ ಅನಾಥವಾಗಿ ಜೀವನ ನಡೆಸುತ್ತಿದ್ದ ಗೌರಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಮಡಿಕೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಡಿಕೇರಿಯಲ್ಲಿ ಶವಸಂಸ್ಕಾರ ಮಾಡಲು ಹಿಂದೇಟು ಹಾಕಲಾಗಿತ್ತು.

    ಕಾರ್ಯಪ್ರವೃತ್ತರಾದ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪೌರಕಾರ್ಮಿಕ ರಾಮಚಂದ್ರ ಮತ್ತು ಇತರ ಸಿಬ್ಬಂದಿ ಮೃತದೇಹವನ್ನು ಶನಿವಾರ ಸುಂಟಿಕೊಪ್ಪಕ್ಕೆ ತಂದು ಹಿಂದೂ ರುದ್ರ ಭೂಮಿಯಲ್ಲಿ ಶವಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

    ಬೂದಿ ಮುಚ್ಚಿದ ಶಬೀರ್: ಹಿಂದೂ ಪದ್ಧತಿಯಂತೆ ಸತ್ತ ಮೂರನೇ ದಿನಕ್ಕೆ ಬೂದಿ ಮುಚ್ಚುವ ಕಾರ್ಯ ನಡೆಯಬೇಕು. ಗೌರಮ್ಮ ಅವರು ಅನಾಥರಾಗಿದ್ದರಿಂದ ಕುಟುಂಬಸ್ಥರ ಬದಲಾಗಿ ಗ್ರಾಮ ಪಂಚಾಯತಿಯೇ ಅದರ ಹೊಣೆಗಾರಿಕೆ ಹೊತ್ತುಕೊಂಡಿತು. ಭಾನುವಾರ ಬೆಳಗ್ಗೆ ಮುಸ್ಲಿಂ ಸಮುದಾಯದ ಗ್ರಾಮ ಪಂಚಾಯತಿ ಸದಸ್ಯ ಎ. ಶಬೀರ್ ಅವರು ಬೂದಿಯನ್ನು ರಾಶಿ ಮಾಡಿ ಹಿಂದೂ ಪದ್ದತಿಯಂತೆ ಕಾರ್ಯವನ್ನು ತಮಗೆ ಗೊತ್ತಿದ್ದ ಮಟ್ಟಿಗೆ ನೆರವೇರಿಸಿದರು. ಅಲ್ಲದೇ ಜಗತ್ತಿನಲ್ಲಿ ಎಲ್ಲರೂ ಒಂದೇ ಹಿಂದೂ ಮುಸ್ಲಿಂ ಎಂದು ಭೇದಭಾವ ಮಾಡಬರದು ಸತ್ತ ದೇಹದ ಗೌರವ ಕೊಡುವುದು ಮುಖ್ಯ ಎಂದು ಹೇಳಿ ವಿಧದ ನೇರವೇರಿದರು.

    ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಕೆ. ಪ್ರಸಾದ್, ಸದಸ್ಯ ಹೆಚ್.ಯು. ರಫೀಕ್ ಖಾನ್, ಪೌರಕಾರ್ಮಿಕ ರಾಮಚಂದ್ರ ರವರು ಈ ವಿಧಿವಿಧಾನದಲ್ಲಿ ಕೈ ಜೋಡಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

  • ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

    ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

    ಚಾಮರಾಜನಗರ: ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರನ್ನು ನೀವು ಯಾವ ಪಕ್ಷ ಎಂದು ಕೇಳಿದ ಜಿಲ್ಲಾ ಪಂಚಾಯಿತಿ ಸಿಇಒಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ನರೇಗಾದಡಿ ಜಲಶಕ್ತಿ ಯೋಜನೆಗಳ ಪರಿಶೀಲನೆಗೆ ಹನೂರು ತಾಲೂಕು ಹೂಗ್ಯಂ ಗ್ರಾಮಕ್ಕೆ ತೆರಳಿದ್ದ ಚಾಮರಾಜನಗರ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್‍ಗೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯೆಯನ್ನು ಸಿಇಒ ನೀವು ಯಾವ ಪಕ್ಷ ಎಂದು ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ನಾವು ಯಾವ ಪಕ್ಷವಾದರೇನು? ಕೆಲಸ ಮಾಡಲು ಬಂದಿದ್ದೀರಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.

    ಬಿಜೆಪಿಯಾದರೆ ಒಂದು ರೀತಿ, ಕಾಂಗ್ರೆಸ್ ಆದರೆ ಮತ್ತೊಂದು ರೀತಿ ಕೆಲಸ ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರಿಸಲಾಗದೆ ಸಿಇಒ ತಬ್ಬಿಬ್ಬಾಗಿದ್ದಾರೆ. ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    – ಗ್ರಾಮಸ್ಥರೇ ಕಚೇರಿಗೆ ಬೀಗ ಹಾಕಿದ್ರು

    ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿ ಬಾಗಿಲನ್ನೂ ಹಾಕದೆ ಬಾಗಿಲ ಬಳಿಯೇ ನಿದ್ದೆಗೆ ಜಾರಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಮಾರ್ಚ್ 7 ಭಾನುವಾರವಾದ್ದರಿಂದ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಅರುಣ್ ಹಾಗೂ ಅಟೆಂಡರ್ ಅವಿನಾಶ್ ಗ್ರಾಮ ಪಂಚಾಯಿತಿಯಲ್ಲೇ ಸಂಡೇ ಸ್ಪೆಷಲ್ ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಬಳಿಕ ಫುಲ್ ಟೈಟ್ ಆದ ಇಬ್ಬರೂ ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲನ್ನೂ ಹಾಕಿಲ್ಲ. ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಿದ್ದೆಗೆ ಜಾರಿದ್ದಾರೆ.

    ರಾತ್ರಿ 11 ಗಂಟೆಯಾದರೂ ಗ್ರಾಮ ಪಂಚಾಯಿತಿ ಬಾಗಿಲು ಹಾಕದ್ದನ್ನ ಗಮನಿಸಿದ ಸ್ಥಳೀಯರು, ಹೋಗಿ ನೋಡಿದ್ದಾರೆ. ಸಿಬ್ಬಂದಿ ನಶೆಯಲ್ಲಿ ತೇಲುತ್ತಿದ್ದು, ಗಾಢ ನಿದ್ದೆಗೆ ಜಾರಿದ್ದರು. ಇದನ್ನು ಕಂಡ ಸ್ಥಳಿಯರೇ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿಕೊಂಡು ಬಂದಿದ್ದಾರೆ. ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇಬ್ಬರನ್ನೂ ಕೆಲಸದಿಂದ ವಜಾಗಿಳಿಸುವಂತೆ ಆಗ್ರಹಿಸಿದ್ದಾರೆ.

  • TDP, YSRCP ಕಾರ್ಯಕರ್ತರ ನಡುವೆ ಸಂಘರ್ಷ – 16 ಮಂದಿಗೆ ಗಂಭೀರ ಗಾಯ

    TDP, YSRCP ಕಾರ್ಯಕರ್ತರ ನಡುವೆ ಸಂಘರ್ಷ – 16 ಮಂದಿಗೆ ಗಂಭೀರ ಗಾಯ

    ಹೈದರಾಬಾದ್: ಶ್ರೀಕಾಕುಲಂನ ಮೆಟ್ಟವಲಸ ಗ್ರಾಮದಲ್ಲಿ ತೆಲಗು ದೇಶಂ ಪಕ್ಷ(ಟಿಡಿಪಿ) ಹಾಗೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ(ವೈಎಸ್ಆರ್‌ಸಿಪಿ) ನಡುವೆ ಮಂಗಳವಾರ ಸಂಭವಿಸಿದ ಘರ್ಷಣೆಯಲ್ಲಿ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆ ಕುರಿತಂತೆ ಮಾತನಾಡಿದ ಶ್ರೀಕಾಕುಲಂ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಎಂ. ಅಹ್ಮದ್, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಹೀಗಾಗಿ ತೆಲಗು ದೇಶಂ ಪಕ್ಷ(ಟಿಡಿಪಿ) ಹಾಗೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ(ವೈಎಸ್ಆರ್‌ಸಿಪಿ) ನಡುವೆ ಘರ್ಷಣೆ ನಡೆದಿದೆ ಹಾಗೂ ಘಟನೆಯಲ್ಲಿ ಸುಮಾರು 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ರಾಜಮ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇದೀಗ ಶ್ರೀಕಾಕುಲಂನ ಮೆಟ್ಟವಲಸ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರು ಆಯೋಜಿಸಲಾಗಿದೆ ಎಂದರು.

    ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಟಿಡಿಪಿ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದರು. ಇದನ್ನು ಸಹಿಸಲಾಗದ ವೈಎಸ್ಆರ್‌ಸಿಪಿ ಪಕ್ಷದ ಕೆಲ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಕೆಲವು ಪೋಸ್ಟ್ ಗಳನ್ನು ಮಾಡಿದ್ದಾರೆ. ವೈಎಸ್ಆರ್‌ಸಿಪಿ ಪಕ್ಷ ಅವಹೇಳನಕಾರಿ ಪೋಸ್ಟ್ ಮಾಡಿದೆ ಎಂದು ಟಿಡಿಪಿ ಪಕ್ಷದವರು ಆರೋಪಿಸಿದರು. ಈ ಹಿನ್ನೆಲೆ ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ಕೋಪ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸಿದ್ದಾರೆ.

  • ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು- ಗೆದ್ದ ಮಹಿಳೆಯ ಮಗನನ್ನೇ ಕೊಂದ ಪಾಪಿ

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು- ಗೆದ್ದ ಮಹಿಳೆಯ ಮಗನನ್ನೇ ಕೊಂದ ಪಾಪಿ

    ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆಯ ರಾಜಕೀಯ ದ್ವೇಷ ಹಿನ್ನೆಲೆ ಯುವಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಶರಣಬಸವ (28) ಕೊಲೆಯಾದ ಯುವಕ. ಚುನಾವಣೆಯಲ್ಲಿ ಸೋತ ಹಿನ್ನೆಲೆ ದ್ವೇಷದಿಂದ ಸೋತ ಜಗದೀಶ್ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದವರ ಮಗನನ್ನೇ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ.

    ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಜಗದೀಶ್ ನಿಂದ ಶರಣಬಸವನ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ. ಕಳೆದ ಚುನಾವಣೆಯಲ್ಲಿ ಶರಣಬಸವನ ತಾಯಿ ಹನುಮಂತಮ್ಮ ಗೆದ್ದಿದ್ದಳು, ಈ ಬಾರಿ ಚುನಾವಣೆಯಲ್ಲಿ ಸದಸ್ಯ ಸ್ಥಾನ ಬಿಟ್ಟು ಕೊಡಿ ಎಂದು ಜಗದೀಶ್ ಕುಟುಂಬದವರು ಕೇಳಿದ್ದರು. ಆದರೆ ಶರಣಬಸವ ಕುಟುಂಬ ಚುನಾವಣೆಯಿಂದ ಹಿಂದೆ ಸರಿದಿರಲಿಲ್ಲ. ಇದರಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ನಿನ್ನೆ ರಾತ್ರಿ ಮನೆಯ ಮುಂದೆ ಕುಳಿತಿರುವಾಗ ಹತ್ತು ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ.

    ಗಲಾಟೆಯಲ್ಲಿ ಶರಣಬಸವನಿಗೆ ಗಂಭೀರ ಗಾಯವಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಹನುಮಂತಮ್ಮ, ಅಮರೇಶ ಗಾಯಗೊಂಡಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಜಗದೀಶ್ ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

  • ಸೊಕ್ಕೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

    ಸೊಕ್ಕೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

    ದಾವಣಗೆರೆ: ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿ 16 ಕಾಂಗ್ರೆಸ್ ಒಂದು ಇದರಲ್ಲಿ ಕಾಂಗ್ರೆಸ್ ಕೈ ಜೋಡಿಸಿದ್ದು ಸ್ವಾತಿ ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

  • ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿದ್ದ ಅಭ್ಯರ್ಥಿಯ ಅಪಹರಣ

    ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿದ್ದ ಅಭ್ಯರ್ಥಿಯ ಅಪಹರಣ

    ಹಾಸನ: ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆ ದಿನಾಂಕವೂ ನಿಗದಿಯಾಗಿದೆ. ಅಧ್ಯಕ್ಷಗಾದಿ ಹಿಡಿಯಲು ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಹೊತ್ತಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಇಂದು ಹಾಸನ ತಾಲೂಕಿನ ಮಡೆನೂರು ಗ್ರಾಮಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಬಿಸಿಎಂ(ಎ)ಯಿಂದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದರು. ಕಾರೇಕೆರೆಯಿಂದ ಜಯಗಳಿಸಿದ್ದ ಭಾಗ್ಯಮ್ಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದರು.

    ಆದರೆ ಗ್ರಾಮ ಪಂಚಾಯತಿ ಚುನಾವಣೆ ನಂತರ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ ನಮ್ಮ ಅಮ್ಮನನ್ನು ಜ.28 ರಂದು ಸ್ವಗ್ರಾಮ ಕಾರೇಕೆರೆಗೆ ಆಗಮಿಸುತ್ತಿದ್ದಾಗ ಅಪಹರಿಸಲಾಗಿದೆ. ಲೋಕೇಶ್ ಎಂಬವರನ್ನು ಅಧ್ಯಕ್ಷರನ್ನಾಗಿ ಮಾಡಲು ಮಡೆನೂರು, ಕಾರೇಕೆರೆ ಗ್ರಾಮದ ವೆಂಕಟೇಶ್, ಹಿರಿಯಣ್ಣಗೌಡ, ಸುರೇಂದ್ರ ಎಂಬವರು ನಮ್ಮ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಭಾಗ್ಯಮ್ಮ ಅವರ ಮಗ ಆರೋಪಿಸಿದ್ದಾರೆ.

    ಈ ಕುರಿತಂತೆ ಶಾಂತಿಗ್ರಾಮ ಪೊಲೀಸ್ ಠಾಣೆಗೆ ಭಾಗ್ಯಮ್ಮ ಅವರಿಗೆ ಆರೋಗ್ಯ ಸಮಸ್ಯೆಯಿದ್ದು ನನ್ನ ತಾಯಿಯನ್ನು ಆದಷ್ಟು ಬೇಗ ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಗ್ರಾಮ ಪಂಚಾಯತ್‌ನಲ್ಲಿ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

    ಗ್ರಾಮ ಪಂಚಾಯತ್‌ನಲ್ಲಿ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

    ಹುಬ್ಬಳ್ಳಿ: ಗ್ರಾಮ ಪಂಚಾಯತವೊಂದರಲ್ಲಿ ಪತ್ನಿ ಅಧ್ಯಕ್ಷೆಯಾಗಿ ಪತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಬರೆದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮ ಪಂಚಾಯತಿಯ ಸದಸ್ಯರಾಗಿ ದಂಪತಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷೆಯಾಗಿ ಪತ್ನಿ, ಉಪಾಧ್ಯಕ್ಷ ಸ್ಥಾನದಲ್ಲಿ ಪತಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ವಿಶಾಲಾಕ್ಷಿ ಚೆನ್ನಬಸನಗೌಡ ಹನಮಂತಗೌಡ್ರ ಅಧ್ಯಕ್ಷೆಯಾಗಿಯೂ, ಇವರ ಪತಿ ಚೆನ್ನಬಸಬನಗೌಡ ಹನಮಂತಗೌಡ್ರ ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ದಂಪತಿ ಆಯ್ಕೆ ಮಾಡಲು ವರೂರು ಹಾಗೂ ಕಂಪ್ಲಿಕೊಪ್ಪ ಗ್ರಾಮದ ಸ್ಥಳೀಯರು ಶ್ರಮಿಸಿದ್ದು, ಯಾವುದೇ ರೀತಿಯ ತೊಂದರೆಗಳಿಲ್ಲದೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಪಂಚಾಯತಿಗೆ ಆಯ್ಕೆಯಾದ ನೂತನ ಸದಸ್ಯರು ಹಾಗೂ ಗ್ರಾಮಸ್ಥರು ಪಕ್ಷಾತೀತವಾಗಿ ಪತಿ- ಪತ್ನಿಯನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ದಂಪತಿಯಿಂದ ಆಶಿಸುತ್ತಿದ್ದಾರೆ.

  • ಚುನಾವಣೆ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ: ಸಿದ್ದಲಿಂಗ ಸ್ವಾಮೀಜಿ

    ಚುನಾವಣೆ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ: ಸಿದ್ದಲಿಂಗ ಸ್ವಾಮೀಜಿ

    ಮಡಿಕೇರಿ: ಇಂದಿನ ದಿನಗಳಲ್ಲಿ ಚುನಾವಣೆ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಹಣವಿಲ್ಲದೆ ಏನೂ ಇಲ್ಲ ಎನ್ನುವಂತಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ಬೇರು ಮಟ್ಟದಲ್ಲಿ ಭದ್ರಗೊಳ್ಳಬೇಕೆಂದು ಗ್ರಾಮಪಂಚಾಯಿತಿ ಚುನಾವಣೆ ಮಾಡಲಾಗುತ್ತದೆ. ಆದರೆ ಹಣವಿಲ್ಲದೆ ಗೆದ್ದವರು ಯಾರಿದ್ದಾರೆ? ಮತದಾರರೇ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಕಡಿವಾಣವೆಲ್ಲಿ ಎಂದು ಪ್ರಶ್ನಿಸಿದರು.

    ಜಿಲ್ಲಾ, ತಾಲೂಕು ಪಂಚಾಯಿತಿಗಿಂತ ಗ್ರಾಮ ಪಂಚಾಯಿತಿ ಚುನಾವಣೆಗೆ ಪೈಪೋಟಿ ಹೆಚ್ಚಿದೆ. ಈ ಬಾರಿ ಅನುದಾನ ಹೆಚ್ಚು ಬರುತದೆ ಎಂದು ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡುವವರಿಗಿಂತ ಗ್ರಾಮ ಪಂಚಾಯಿತಿ ಚುನಾವಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

    ಪ್ರಧಾನಿ ಮೋದಿಯವರ ಆಶಯದಂತೆ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೆ ಬರಬೇಕು. ಆಗ ರಾಷ್ಟ್ರದ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.