Tag: gram panchayat member

  • ರಸ್ತೆ ಬದಿ ನಿಂತಿದ್ದ ವೇಳೆ ಓಮ್ನಿ ಕಾರು ಡಿಕ್ಕಿ- ಗ್ರಾಮಪಂಚಾಯ್ತಿ ಸದಸ್ಯ ದುರ್ಮರಣ

    ರಸ್ತೆ ಬದಿ ನಿಂತಿದ್ದ ವೇಳೆ ಓಮ್ನಿ ಕಾರು ಡಿಕ್ಕಿ- ಗ್ರಾಮಪಂಚಾಯ್ತಿ ಸದಸ್ಯ ದುರ್ಮರಣ

    ಮಡಿಕೇರಿ: ತಮ್ಮ ಪಾಡಿಗೆ ಸ್ನೇಹಿತರೊಂದಿಗೆ ರಸ್ತೆ ಬದಿ ನಿಂತಿದ್ದ ಗ್ರಾಮಪಂಚಾಯ್ತಿ ಸದಸ್ಯರೊಬ್ಬರಿಗೆ ಏಕಾಏಕಿ ಓಮ್ನಿ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಹರಿಶ್ಚಂದ್ರ ಪುರದಲ್ಲಿ ತಡರಾತ್ರಿ ನಡೆದಿದೆ.

    ವಿರಾಜಪೇಟೆ ತಾಲೂಕಿನ ಗೊಣಿಕೊಪ್ಪಲು ಗ್ರಾಮಪಂಚಾಯ್ತಿ ಸದಸ್ಯ ಕಲೀಮುಲ್ಲಾ ಮೃತ ದುರ್ದೈವಿ. ಆರೋಪಿಯನ್ನು ಚಾಲಕ ಬಾಲ ಎಂದು ಗುರುತಿಸಲಾಗಿದೆ. ರಾತ್ರಿ ರಸ್ತೆ ಬದಿಯಲ್ಲಿ ನಿಂತು ಸ್ನೇಹಿತರ ಜೊತೆ ಕಲೀಮುಲ್ಲಾ ಮಾತನಾಡುತ್ತಿದ್ದರು. ಈ ವೇಳೆ ಓಮ್ನಿ ಕಾರೊಂದು ಏಕಾಏಕಿ ಬಂದು ಕಲೀಮುಲ್ಲಾ ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದನು.

    ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕಲೀಮುಲ್ಲಾರನ್ನ ಅವರ ಸ್ನೇಹಿತರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಲೀಮುಲ್ಲಾ ನಿಧನರಾಗಿದ್ದಾರೆ. ಹಾಗೆಯೇ ಅಪಘಾತ ನಡೆದ ವೇಳೆ ಕಲೀಮುಲ್ಲಾ ಪಕ್ಕದಲ್ಲಿದ್ದ ಮತ್ತೊಬ್ಬ ಸ್ನೇಹಿತ ಕೂಡ ಗಾಯಗೊಂಡಿದ್ದಾರೆ.

    ಸದ್ಯ ಈ ಘಟನೆ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಓಮ್ನಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು  ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಸಾಲವಾಗಿ ಮದ್ಯ ಕೇಳಿದ್ದಕ್ಕೆ ಗ್ರಾ.ಪಂ ಸದಸ್ಯ, ತಮ್ಮನಿಂದ ವ್ಯಕ್ತಿಯ ಬರ್ಬರ ಕೊಲೆ

    ಸಾಲವಾಗಿ ಮದ್ಯ ಕೇಳಿದ್ದಕ್ಕೆ ಗ್ರಾ.ಪಂ ಸದಸ್ಯ, ತಮ್ಮನಿಂದ ವ್ಯಕ್ತಿಯ ಬರ್ಬರ ಕೊಲೆ

    ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಗ್ರಾಮ ಪಂಚಾಯತಿ ಸದಸ್ಯ ಹಾಗೂ ತಮ್ಮ ಸೇರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹುಲುಗುಮ್ಮನಹಳ್ಳಿಯಲ್ಲಿ ನಡೆದಿದೆ.

    ಹುಲುಗುಮ್ಮನಹಳ್ಳಿಯ ಕೃಷ್ಣಕುಮಾರ್ (33) ಕೊಲೆಯಾದ ವ್ಯಕ್ತಿ. ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ ಹಾಗೂ ನಾಗೇಶ್ ಕೊಲೆ ಮಾಡಿದ ಆರೋಪಿಗಳು. ಕೊಲೆಯ ಬಳಿಕ ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

    ಆಗಿದ್ದೇನು?:
    ಮದ್ಯ ಸೇವನೆಗೆ ಒಳಗಾಗಿದ್ದ ಕೃಷ್ಣಕುಮಾರ್, ಕುಡಿದ ಅಮಲಿನಲ್ಲಿ ಗ್ರಾಮದಲ್ಲಿ ಚಾಕು ಹಿಡಿದು ಕೆಲವರಿಗೆ ಬೆದರಿಸುತ್ತಿದ್ದ. ಇತ್ತ ಸಣ್ಣ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಗೇಶ್, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿದ್ದ ಕೃಷ್ಣಕುಮಾರ್ ಮದ್ಯವನ್ನು ಸಾಲ ಕೊಡಿ ಎಂದು ನಾಗೇಶ್‍ಗೆ ಕೇಳಿದ್ದ. ಆದರೆ ಈ ಹಿಂದಿನ ಸಾಲದ ಹಣವನ್ನೇ ಪಾವತಿಸಿಲ್ಲ. ಹೀಗಾಗಿ ಮದ್ಯವನ್ನು ಸಾಲ ಕೊಡಲ್ಲ ಎಂದು ನಾಗೇಶ್ ಹೇಳಿದ್ದ ಎನ್ನಲಾಗಿದೆ.

    ಮದ್ಯದ ವಿಚಾರವಾಗಿ ನಾಗೇಶ್ ಹಾಗೂ ಕೃಷ್ಣಕುಮಾರ್ ನಡುವೆ ಮಾತಿ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಕೃಷ್ಣಪ್ಪ ತಮ್ಮನ ಜೊತೆಗೆ ಸೇರಿ ಕೃಷ್ಣಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ನಾಗೇಶ್ ಇಟ್ಟಿಗೆ ಹಾಗೂ ಕಲ್ಲಿನಿಂದ ಕೃಷ್ಣಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಬಿದ್ದ ಕೃಷ್ಣಕುಮಾರ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಎಸ್‍ಪಿ ಸಂತೋಷ್ ಬಾಬು ಅವರು ಪರಿಶೀಲನೆ ನಡೆಸಿದರು. ಮೃತ ಕೃಷ್ಣಕುಮಾರ್ ಅಕ್ಕ ಹಾಗೂ ಹೆಂಡತಿ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮದ ವಿಶೇಷ ಜಾತ್ರೆಯಲ್ಲಿ ಗ್ರಾ.ಪಂ ಸದಸ್ಯನ ಭೀಕರ ಹತ್ಯೆ

    ಗ್ರಾಮದ ವಿಶೇಷ ಜಾತ್ರೆಯಲ್ಲಿ ಗ್ರಾ.ಪಂ ಸದಸ್ಯನ ಭೀಕರ ಹತ್ಯೆ

    – ತಮ್ಮನ ಮಗ್ಳ ಪ್ರೇಮ ವಿವಾಹದಿಂದ ಕೊಲೆಯಾದ್ರಾ.?

    ಮಂಡ್ಯ: ಹಳೇ ವೈಷಮ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.

    ತಿಮ್ಮೇಗೌಡ(50) ಮೃತ ಪಂಚಾಯಿತಿ ಸದಸ್ಯ. ಗ್ರಾಮದೇವತೆ ದೇವೀರಮ್ಮನಿಗೆ ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ದೇವಿಗೆ ಪೂಜೆ ಸಲ್ಲಿಸುವ ವಿಶೇಷ ಜಾತ್ರೆ ನಡೆಯಲಿದ್ದು, ಜಾತ್ರೆಯ ಸಂದರ್ಭದಲ್ಲೇ ಹಳೇ ದ್ವೇಷ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಗಲಾಟೆ ತೆಗೆದು ಗ್ರಾಪಂ ಸದಸ್ಯನ ಭೀಕರ ಹತ್ಯೆ ಮಾಡಲಾಗಿದೆ.

    ಕೊಲೆಯಾದ ತಿಮ್ಮೇಗೌಡರಿಗೆ ಲಾಂಗು, ಮಚ್ಚಿನಿಂದ ಹಲ್ಲೆ ಮಾಡಿ ಬಳಿಕ ಚಾಕು ಇರಿದು ಕೊಲೆ ಮಾಡಲಾಗಿದೆ. ಬಿಡಿಸಲು ಬಂದ ನಾಲ್ಕು ಮಂದಿಗೂ ಗಂಭೀರ ಗಾಯಗಳಾಗಿವೆ. ವಿನಾಯಕ, ಗೌತಮ್, ಮಹೇಶ್, ಸ್ವಾಮೀಗೌಡಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ತಿಮ್ಮೇಗೌಡರ ತಮ್ಮನ ಮಗಳನ್ನು ಅದೇ ಗ್ರಾಮದ ಮದನ್ ಪ್ರೇಮ ವಿವಾಹ ವಾಗಿದ್ದನು. ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಿಮ್ಮೇಗೌಡರು ನ್ಯಾಯ ಪಂಚಾಯಿತಿ ಮಾಡಿಸಿದ್ದರು. ವಿಚ್ಛೇದನ ನೀಡುವಂತೆ ಪಂಚಾಯಿತಿಯಲ್ಲಿ ತೀರ್ಮಾನ ಆಗಿತ್ತು. ಈ ಹಳೇ ದ್ವೇಷದ ಹಿನ್ನೆಲೆಯಿಂದ ಮದನ್ ಮತ್ತು ಸಹಚರರು ಉತ್ಸವದ ವೇಳೆ ಗಲಾಟೆ ಮಾಡಿ ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ಈ ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv