Tag: gram panchayat member

  • ಜಾತಿನಿಂದನೆ, ಲೈಂಗಿಕ ಕಿರುಕುಳ ಆರೋಪ – ಗ್ರಾಮ ಪಂಚಾಯತಿ ಸದಸ್ಯ ಅರೆಸ್ಟ್

    ಜಾತಿನಿಂದನೆ, ಲೈಂಗಿಕ ಕಿರುಕುಳ ಆರೋಪ – ಗ್ರಾಮ ಪಂಚಾಯತಿ ಸದಸ್ಯ ಅರೆಸ್ಟ್

    ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ದೂರಿನ ಅಡಿ ಸಿರಿಗೆರೆ (Sirigere) ಗ್ರಾಮ ಪಂಚಾಯತಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

    ಚಿತ್ರದುರ್ಗ (Chitradurga) ತಾಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಬಂಧಿತ ಆರೋಪಿ. ಇದನ್ನೂ ಓದಿ: ಶಮಿ ಮಗಳ ಹೋಳಿ ಆಚರಣೆ ಸರಿಯಲ್ಲ – ಇದು ಷರಿಯಾ ವಿರುದ್ಧ ಎಂದ ಜಮಾತ್ ಅಧ್ಯಕ್ಷ

    ಆರೋಪಿ ದೇವರಾಜ್, ಜಾತಿನಿಂದನೆ ಮಾಡುತ್ತಿದ್ದರು. ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ಹಾಗೂ ಪಿಡಿಓಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪಂಚಾಯತಿಯ ಕ್ಲರ್ಕ್ ಜಯರಾಮ್ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಬೀದರ್‌ನಲ್ಲಿ ಏಕಾಏಕಿ ಕಾಗೆಗಳ ಸರಣಿ ಸಾವು – ಹಕ್ಕಿ ಜ್ವರದ ಆತಂಕ?

    ಜಯರಾಮ್ ಅವರು ನೀಡಿದ ದೂರಿನಾಧಾರ ಆರೋಪಿ ದೇವರಾಜ್‌ರನ್ನು ಭರಮಸಾಗರ ಪೊಲೀಸರು ಬಂಧಿಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಮಗಾರಿ ಬಿಲ್ ಮಂಜೂರಾಗದಿದ್ದಕ್ಕೆ ಪೆಟ್ರೋಲ್ ಕ್ಯಾನ್ ಹಿಡಿದು ಗ್ರಾಪಂ ಸದಸ್ಯೆ ಹೈಡ್ರಾಮಾ

    ಕಾಮಗಾರಿ ಬಿಲ್ ಮಂಜೂರಾಗದಿದ್ದಕ್ಕೆ ಪೆಟ್ರೋಲ್ ಕ್ಯಾನ್ ಹಿಡಿದು ಗ್ರಾಪಂ ಸದಸ್ಯೆ ಹೈಡ್ರಾಮಾ

    – ಕಮಿಷನ್‌ ಕೊಡದೇ ಇದ್ದಿದ್ದಕ್ಕೆ ಬಿಲ್ ಮಾಡಿಲ್ಲ ಅಂತ ಆರೋಪ

    ಬೀದರ್: ಕಾಮಗಾರಿ ಬಿಲ್ ಮಂಜೂರಾಗದೇ ಇದ್ದಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಪೆಟ್ರೋಲ್‌ ಕ್ಯಾನ್ ಹಿಡಿದು ಹೈಡ್ರಾಮಾ ಸೃಷ್ಟಿಸಿದ ಘಟನೆ ಬೀದರ್ (Bidar) ಜಿಲ್ಲೆಯ ಹುಲಸೂರು (Hulsoor)  ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದಿದೆ.

    ದನದ ಕೊಟ್ಟಿಗೆ, ಸೇರಿದಂತೆ ರೈತರ ಕಾಮಗಾರಿಗಳಿಗೆ ಬಿಲ್‌ ಮಂಜೂರು ಆಗದೇ ಇದ್ದಿದ್ದಕ್ಕೆ ಹುಲಸೂರು ಗ್ರಾಮ ಪಂಚಾಯಿತಿ ಸದಸ್ಯೆ ಯಾಸ್ಮಿನ್ ಎಂಬುವವರ ಅಸಮಧಾನ ಹೊರ ಹಾಕಿದ್ದಾರೆ. ಪೆಟ್ರೋಲ್ ಕ್ಯಾನ್ ಜೊತೆ ತಾಲೂಕು ಪಂಚಾಯಿತಿ ಕಚೇರಿಗೆ ಬಂದು ಗ್ರಾಪಂ ಸದಸ್ಯೆ ರೈತರ ಕಾಮಗಾರಿ ಬಿಲ್ ಆಗದೇ ಇದ್ರೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ತೇನೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು. ಇದನ್ನೂ ಓದಿ: ನಾಯಿಗಳಂತೆ ಅತ್ಯಾಚಾರಿಗಳನ್ನೂ ಸಂತಾನಹರಣಗೊಳಿಸಬೇಕು: ರಾಜಸ್ಥಾನ ರಾಜ್ಯಪಾಲ

    ತಾಪಂ ಕಚೇರಿಗೆ ಪೆಟ್ರೋಲ್ ಸಮೇತ ತೆರಳಿ ತಾಪಂ ಇಓ ಕಚೇರಿಯಲ್ಲೇ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು. ಕಮಿಷನ್‌ ನೀಡದೇ ಇದ್ದಿದ್ದಕ್ಕೆ ಟಾರ್ಗೆಟ್ ಮಾಡಿ ಬಿಲ್ ಮಾಡಿಲ್ಲ, ರೈತರು ತಮ್ಮ ಜಮೀನು, ಮನೆಗಳಲ್ಲಿ ನಿರ್ಮಿಸಿದ ಕಾಮಗಾರಿಗೆ ಬಿಲ್ ಮಾಡಿಲ್ಲ ಎಂದು ಅಸಮಧಾನ ಹೊರ ಹಾಕಿದ್ರು. ಇದನ್ನೂ ಓದಿ: ಬೈಕಲ್ಲಿ ಬಂದು ನೀರು ಕೇಳಿದ್ರು, ಬಳಿಕ ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ್ರು – ಯುಪಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ!

    ಶೀಘ್ರದಲ್ಲೇ ರೈತರ ಬಿಲ್ ಮಂಜೂರಾಗದೇ ಇದ್ರೆ ಪೆಟ್ರೋಲ್ ಸುರಿದುಕೊಂಡು ಇಲ್ಲೇ ಸಾಯ್ತೀನಿ ಎಂದು ಸದಸ್ಯೆ ಹೈಡ್ರಾಮ ಮಾಡಿದ್ರು‌.

     

  • ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

    ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

    ತುಮಕೂರು: ಮಧುಗಿರಿ-ಕೊರಟಗೆರೆಯ ಕೆಶಿಪ್ ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್‍ನಲ್ಲಿದ್ದ ಅಂದಾಜು ನಲವತ್ತೈದು ಗ್ರಾಂ ಚಿನ್ನಾಭರಣಗಳನ್ನು ಗ್ರಾಮ ಪಂಚಾಯಿತಿ ಸದಸ್ಯ ರೊಬ್ಬರು ನೋಡಿ ನಂತರ ಮಧುಗಿರಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

    ಕಾಟಗಾನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದರವರು ಬೆಳಿಗ್ಗೆ 7:30 ರ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನ ಪಂಕ್ಚರ್ ಅದ ಕಾರಣ ದಾಸರಹಳ್ಳಿಯಲ್ಲಿ ಹೋಗುತ್ತಿದ್ದಾಗ ದತ್ತಾತ್ರಯ ಆಶ್ರಮದ ಬಳಿ ಎರ್ ಬ್ಯಾಗ್ ಬಿದ್ದಿರುವುದನ್ನು ಕಂಡಿದ್ದಾರೆ. ಬ್ಯಾಗ್‍ನ್ನು ತೆಗೆದು ನೋಡಿದಾಗ ಬಟ್ಟೆಗಳು ಕಂಡು ಬಂದು ಬ್ಯಾಗನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಲಿಂಗಸುಗೂರಿನ ಶಿಕ್ಷಕ ಚಂದ್ರು ಆಯ್ಕೆ

    ಅನುಮಾನಗೊಂಡು ಹಿಂದಿರುಗಿ ಪರಿಶೀಲಿಸಿದಾಗ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಕಂಡು ಅದನ್ನು ತೆಗೆದುಕೊಂಡು ದಾಸರಹಳ್ಳಿಗೆ ಹೋಗಿದ್ದಾರೆ. ದಾಸರಹಳ್ಳಿಯಿಂದ ಹಿಂದಿರುಗಿದಾಗ ಮಳೆ ಇದ್ದ ಕಾರಣ ನಿಧಾನವಾಗಿ ಬಂದಿದ್ದಾರೆ. ಆದರೆ ಬ್ಯಾಗು ಅಲ್ಲಿರಲಿಲ್ಲ ನಂತರ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಡವೆಯಿದ್ದ ಪ್ಯಾಕನ್ನು ಮಧುಗಿರಿ ಸಿಪಿಐ ಎಂ. ಎಸ್. ಸರ್ದಾರ್ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ನೀಡಿದ್ದಾರೆ. ಆದರೆ ಚಿನ್ನಾಭರಣದ ವಾರಸುದಾರರು ಯಾರೆಂದು ಪತ್ತೆಯಾಗಿಲ್ಲ.

  • ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಗ್ರಾ.ಪಂ. ಸದಸ್ಯ ಏಕಾಂಗಿ ಪ್ರತಿಭಟನೆ

    ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಗ್ರಾ.ಪಂ. ಸದಸ್ಯ ಏಕಾಂಗಿ ಪ್ರತಿಭಟನೆ

    ಚಿಕ್ಕಮಗಳೂರು: ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯ ಏಕಾಂಗಿಯಾಗಿ ಅದೇ ಗ್ರಾಮ ಪಂಚಾಯಿತಿ ಮುಂದೆ ಧರಣಿಗೆ ಕೂತಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಿ.ಕಣಬೂರಿನಲ್ಲಿ ನಡೆದಿದೆ.

    ಗ್ರಾಮ ಪಂಚಾಯಿತಿಯ ಸದಸ್ಯ ಅಶ್ರಫ್ ಬಿ.ಕಣಬೂರು ಗ್ರಾಮ ಪಂಚಾಯಿತಿ ಮುಂದೆ ಏಕಾಂಗಿಯಾಗಿ ಧರಣಿ ಕೂತಿದ್ದಾರೆ. ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಕಟ್ಟಡಗಳು ಹಾಗೂ ಅವುಗಳಿಗೆ ನೀಡಿರುವ ವಿದ್ಯುತ್ ಮೀಟರ್ ಬೋರ್ಡ್‍ಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ಸದಸ್ಯರು ಸಭೆ ಸೇರಿ ತೀರ್ಮಾನಿಸಿದ್ದರು. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯನೇ ಪಂಚಾಯಿತಿ ವಿರುದ್ಧ ಧರಣಿ ಕೂತಿದ್ದಾರೆ.

    ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಕ್ರಮ ಕಟ್ಟಡದ ಜಾಗವನ್ನ ತೆರವುಗೊಳಿಸುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಏಕಾಂಗಿಯಾಗಿ ಹೋರಾಟಕ್ಕಿಳಿದಿದ್ದಾರೆ. ಗ್ರಾಮ ಪಂಚಾಯಿತಿಯ ಉಳಿದ ಸದಸ್ಯರು ಮನವೊಲಿಸಿದರು ಮನವೊಲಿಕೆಗೆ ಬಗ್ಗದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಅಶ್ರಫ್ ಈ ಹಿಂದೆ ಕೂಡ ಹಲವಾರು ಬಾರಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಬಾಳೆಹೊನ್ನೂರು ಬಸ್ ನಿಲ್ದಾಣದ ಬಳಿ, ಗ್ರಾಮ ಪಂಚಾಯಿತಿ ಮುಂಭಾಗ ಸೇರಿದಂತೆ ಹಲವು ಸಂದರ್ಭಗಳಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಈಗ ಗ್ರಾಮ ಪಂಚಾಯಿತಿ ಸದಸ್ಯರಾಗಿ ಅದೇ ಗ್ರಾಮ ಪಂಚಾಯಿತಿ ವಿರುದ್ಧ ಹೋರಾಟಕ್ಕೆ ಕೂತಿದ್ದಾರೆ.

  • ಮಾಸ್ಕ್ ಧರಿಸಿ ಅಂದಿದ್ದಕ್ಕೆ ಗ್ರಾ.ಪಂ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

    ಮಾಸ್ಕ್ ಧರಿಸಿ ಅಂದಿದ್ದಕ್ಕೆ ಗ್ರಾ.ಪಂ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಹಳ್ಳಿಗಳಲ್ಲಿ ಕೊರೊನಾ ಶರವೇಗದ ಸ್ವರೂಪ ಪಡೆದುಕೊಳ್ಳುತ್ತಿದೆ. ಕೊರೊನಾ ತಡೆಗಟ್ಟುವ ಸಲುವಾಗಿ ಯುವಕರಿಗೆ ಮಾಸ್ಕ್ ಧರಿಸಿ ಅಂತ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ರಾಜಕೀಯ ಜಿದ್ದಿಗೆ ಮಾರಕಾಸ್ತ್ರಗಳಿಂದ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂಚಾಯತ್ ಸದಸ್ಯ ತಮ್ಮೇಗೌಡ ಹಾಗೂ ಈತನನ್ನ ರಕ್ಷಿಸಲು ಹೋದ ಮಂಜು ಶಂಕರ್ ಹಲ್ಲೆಗೊಳಗಾದವರಾಗಿದ್ದಾರೆ. ಇದೇ ಗ್ರಾಮದ ಮರಿಯಪ್ಪರ ಮಗ ಚಾಣಕ್ಯ ಗೌಡ, ಅಕ್ಷಯ್ ಗೌಡ, ಪ್ರಶಾಂತ್, ಶ್ರೇಯಸ್ ಮತ್ತಿತರರು ಹಲ್ಲೆ ಮಾಡಿದ್ದಾರೆ. ಅಂದಹಾಗೆ ಡೈರಿ ಬಳಿ ಇದ್ದ ತಮ್ಮೇಗೌಡ ಹಲ್ಲೆ ಮಾಡಿದ ಚಾಣಕ್ಯ ಹಾಗೂ ಇತರರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳಸಿ ಮಾರಕಾಸ್ತ್ರಗಳಿಂದ ತಮ್ಮೇಗೌಡ ಮೇಲೆ ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ತಮ್ಮೇಗೌಡ ತಲೆಗೆ ಗಂಭೀರ ಗಾಯವಾಗಿದ್ದು, ಈತನ ರಕ್ಷಣೆಗ ಬಂದ ಈತನ ಬಾಮೈದ ಮಂಜು ಶಂಕರ್‍ಗೂ ಹಲ್ಲೆ ಮಾಡಿದ್ದಾರೆ. ಇಬ್ಬರನ್ನು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಗೆ ಮತ್ತೊಂದು ಹಳೇ ದ್ವೇಷವೂ ಕಾರಣವಾಗಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹಾಲಿನ ಡೈರಿ ಅಧ್ಯಕ್ಷರಾಗಿದ್ದ ಡಿ.ಸಿ.ಮರಿಯಪ್ಪ ವಿರುದ್ಧ ಹಾಲಿ ಡೈರಿ ಕಾರ್ಯದರ್ಶಿ ತಮ್ಮೇಗೌಡ ಗೆದ್ದಿದ್ದರು. ಇಬ್ಬರೂ ದಾಯಾದಿಗಳಾಗಿದ್ರೂ ತಮ್ಮೇಗೌಡರ ಗೆಲುವನ್ನು ಮರಿಯಪ್ಪನ ಕಡೆಯವರು ಸಹಿಸಲಾಗದೇ ಹಳೇ ದ್ವೇಷ ಸಾಧಿಸಿ ನಿನ್ನೆ ಸಂಜೆ ಮರಿಯಪ್ಪರ ಮಗ ಚಾಣಕ್ಯಗೌಡ, ಅಕ್ಷಯ್ ಗೌಡ, ಪ್ರಶಾಂತ್, ಶ್ರೇಯಸ್ ಮತ್ತಿತರರು ಮಾರಕಾಸ್ತ್ರಗಳಿಂದ ತಮ್ಮೇಗೌಡ ಮತ್ತವರ ಬಾಮೈದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

  • ಮೊನ್ನೆಯಷ್ಟೇ ಆಯ್ಕೆಯಾಗಿದ್ದ ಗ್ರಾಮ ಪಂಚಾಯಿತಿ ನೂತನ ಸದಸ್ಯ ಸಾವು

    ಮೊನ್ನೆಯಷ್ಟೇ ಆಯ್ಕೆಯಾಗಿದ್ದ ಗ್ರಾಮ ಪಂಚಾಯಿತಿ ನೂತನ ಸದಸ್ಯ ಸಾವು

    ಚಿಕ್ಕಬಳ್ಳಾಪುರ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದ ನೂತನ ಸದಸ್ಯ ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ರಮಾಪುರದಲ್ಲಿ ನಡೆದಿದೆ.

    ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರಮಾಪುರ ಗ್ರಾಮದಿಂದ ಸ್ಪರ್ಧಿಸಿದ್ದ 57 ವರ್ಷದ ಚಂದ್ರಣ್ಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೊಣಕಾಲಿನ ಶಸ್ತ್ರಚಿಕಿತ್ಸಗೆ ಓಳಗಾಗಿದ್ದ ಚಂದ್ರಣ್ಣ, ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಒಟ್ಟು 431 ಮತಗಳನ್ನು ಪಡೆದಿದ್ದ ಚಂದ್ರಣ್ಣ, ಸತತ ಮೂರನೇ ಬಾರಿಗೆ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಚಂದ್ರಣ್ಣ ಸಾವಿಗೆ ಕ್ಷೇತ್ರದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸಂತಾಪ ಸೂಚಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರದಲ್ಲಿ ಸಾಕಷ್ಟು ಒಡಾಟ ಮಾಡಿದ್ದ ಚಂದ್ರಣ್ಣ ಅವರಿಗೆ ಮೊಣಕಾಲಿನ ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

  • ಸಾಮಾನ್ಯ ಸಭೆಗಳಿಗೆ ಗೈರು – 6 ಮಂದಿ ಗ್ರಾಮಪಂಚಾಯತಿ ಸದಸ್ಯರು ಅನರ್ಹ

    ಸಾಮಾನ್ಯ ಸಭೆಗಳಿಗೆ ಗೈರು – 6 ಮಂದಿ ಗ್ರಾಮಪಂಚಾಯತಿ ಸದಸ್ಯರು ಅನರ್ಹ

    ಚಿಕ್ಕಬಳ್ಳಾಪುರ: ನಿರಂತರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾದ ಹಿನ್ನಲೆ 6 ಜನ ಗ್ರಾಮ ಪಂಚಾಯ್ತಿ ಸದಸ್ಯರು ಅನರ್ಹಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

    ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾರವರು ಈ ಆದೇಶ ಹೊರಡಿಸಿದ್ದಾರೆ. ಅಂದಹಾಗೆ ಸಾತನೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಎ ಕೆ ಜಿಲಾನಿ, ಕೆ. ಬಚ್ಚಪ್ಪ, ಸೌಭಾಗ್ಯ, ಶ್ವೇತಾ ಎಂ ಹಾಗೂ ಮಾಜಿ ಪಂಚಾಯಿತಿ ಉಪಾಧ್ಯಕ್ಷೆ ಟಿ ಪ್ರಮೀಳಾ, ಹಾಗೂ ಹಾಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯ ಭಾರತಿ ಅನರ್ಹಗೊಂಡಿದ್ದಾರೆ.

    ಲಂಚ ಪಡೆದು ಲೋಕಾಯುಕ್ತ ಹಾಗೂ ಎಸಿಬಿಯಿಂದ ಸಿಕ್ಕಿಬಿದ್ದಿದ್ದ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಎಂಬಾತನನ್ನ ಮರಳಿ ಪಂಚಾಯಿತಿಗೆ ಸೇರಿಸಿಕೊಳ್ಳಲು ಈ ಆರು ಜನ ಅನರ್ಹಗೊಂಡ ಸದಸ್ಯರು ಮುಂದಾಗಿದ್ದರು ಎನ್ನಲಾಗಿದೆ. ಹೀಗಾಗಿ ತಮಗೆ ಸಹಾಯವಾಗುತ್ತಿದ್ದ ಬಿಲ್ ಕಲೆಕ್ಟರ್ ಮಂಜುನಾಥ್ ನನ್ನು ಕಳೆದ 2018 ರ ಸಾಮಾನ್ಯ ಸಭೆಯಲ್ಲಿ ಮರಳಿ ಪಂಚಾಯಿತಿಗೆ ಸೇರಿಸಿಕೊಳ್ಳುವಂತೆ ನಡವಳಿಕೆಯನ್ನು ಸಿದ್ಧಪಡಿಸಿದ್ದರು.

    ಲಂಚ ಪಡೆದು ಎಸಿಬಿ ಹಾಗೂ ಲೋಕಾಯುಕ್ತರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಂಜುನಾಥ್‍ನನ್ನ ತೆಗೆದುಕೊಳ್ಳಲು ನಡವಳಿಕೆ ಸಿದ್ಧಪಡಿಸಿದ್ದ 6 ಜನರ ಸದಸ್ಯರನ್ನ ಅನರ್ಹಗೊಳಿಸುವಂತೆ ಪಿಡಿಓ ರಮೇಶ್ ಶಿಫಾರಸ್ಸು ಮಾಡಿದ್ದರು. ಆದರೆ ಈ ಘಟನೆಯಾದ ನಂತರ ನಡೆದ ನಿರಂತರ ನಾಲ್ಕು ಸಭೆಗಳಿಗೆ ಈ 6 ಜನ ಪಂಚಾಯಿತಿ ಸದಸ್ಯರು ಗೈರಾಗಿದ್ದರು. ಈ ಬಗ್ಗೆಯೂ ಸರ್ಕಾರಕ್ಕೆ ಪಿಡಿಓ ಶಿಫಾರಸ್ಸು ಮಾಡಿದ್ದು, ಇದೀಗ ವಿಧಾನಸಭೆಯಲ್ಲಿ ಎಂಎಲ್‍ಎಗಳು ಅನರ್ಹವಾಗುವಂತೆ ಸದ್ಯ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಸದಸ್ಯ ಸ್ಥಾನದಿಂದ ವಜಾಗೊಂಡು ಅನರ್ಹಗೊಂಡಿದ್ದಾರೆ.

    ಭ್ರಷ್ಟ ಮಂಜುನಾಥ್‍ಗೆ ಸಹಾಯ ಮಾಡಲು ಹೋಗಿ ತಮ್ಮ ಸದಸ್ಯತ್ವ ಸ್ಥಾನವನ್ನೇ ಈ ಸದಸ್ಯರು ಕಳೆದುಕೊಂಡಿದ್ದಾರೆ. ಸತತವಾಗಿ ಎರಡು ವರ್ಷಗಳ ಕಾಲ ಸಾಮಾನ್ಯ ಸಭೆಗಳಿಗೆ ಹಾಜರಾಗದೇ ಇದ್ದ ಕಾರಣ ಇದೇ ಸದಸ್ಯರಿಂದ ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ದೊರಕುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಆಗದೆ ಪರದಾಡುವಂತಾಗಿತ್ತು. ಸದ್ಯ ನಿರಂತರ ಗೈರು ಹಿನ್ನಲೆ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ 1993 ರ 48 (4) ರ ಪ್ರಕಾರ ಉಪಾಧ್ಯಕ್ಷೆಯನ್ನ ಹಾಗೂ 1993 ಪ್ರಕರಣ 43 ಎ ಪ್ರಕಾರ ಸದಸ್ಯರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪಂಚಾಯಿತಿ ಸದಸ್ಯರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

  • ಮೊದ್ಲು ಲಾಂಗು, ಮಚ್ಚು ಹಿಡಿದು ಟಿಕ್‍ಟಾಕ್ – ಆಮೇಲೆ ಸ್ಕೆಚ್ ಹಾಕಿ ಅಟ್ಯಾಕ್

    ಮೊದ್ಲು ಲಾಂಗು, ಮಚ್ಚು ಹಿಡಿದು ಟಿಕ್‍ಟಾಕ್ – ಆಮೇಲೆ ಸ್ಕೆಚ್ ಹಾಕಿ ಅಟ್ಯಾಕ್

    ಚಿಕ್ಕಬಳ್ಳಾಪುರ: ಟಿಕ್‍ಟಾಕ್‍ನಲ್ಲಿ ಲಾಂಗು, ಮಚ್ಚು ಹಿಡಿದು ಟಗರು ಸಿನಿಮಾದ ಹಾಡಿಗೆ ರಿಹರ್ಸಲ್ ಮಾಡಿ, ಮರ್ಡರ್ ಮಾಡೇ ಮಾಡ್ತೀನಿ ಎಂದು ಗ್ರಾಮ ಪಂಚಾಯ್ತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ಬಳಿ ಆರೋಪಿಗಳು ಕೃತ್ಯವೆಸೆಗಿದ್ದರು. ಹೊಸಕೋಟೆ ತಾಲೂಕಿನ ತರಬಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ತ್ಯಾಗರಾಜು ಮೇಲೆ ಮೂವರು ಯುವಕರು ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ತ್ಯಾಗರಾಜು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು, ಆರೋಪಿಗಳಾದ ಗಂಭೀರನಹಳ್ಳಿ ಗ್ರಾಮದ ಸೋಮು ಅಲಿಯಾಸ್ ಸೋಮಶೇಖರ್, ಪಾಂಡು ಅಲಿಯಾಸ್ ಮಂಜು ಹಾಗೂ ನಂದನ್ ಅಲಿಯಾಸ್ ನಂದಕುಮಾರ್ ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೂ ಮುನ್ನ ಪಾಂಡು ಹಾಗೂ ನಂದಕುಮಾರ್ ಪ್ರಕರಣದಲ್ಲಿ ಭಾಗಿಯಾಗದ ತನ್ನ ಮತ್ತೋರ್ವ ಸ್ನೇಹಿತ ಮಂಜುನಾಥ್ ಜೊತೆ ಮಾಡಿರುವ ಟಿಕ್‍ಟಾಕ್ ರಿಹರ್ಸಲ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಹಳೆ ವೈಷಮ್ಯದ ಹಿನ್ನಲೆ ಕೊಲೆಗೆ ಪ್ಲಾನ್:
    ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ತ್ಯಾಗರಾಜು ಹಾಗೂ ಆರೋಪಿ ಸೋಮು ನಡುವೆ ಜಗಳ ನಡೆದಿತ್ತು. ಈ ವೇಳೆ ಸೋಮು ಮನೆಗೆ ನುಗ್ಗಿದ್ದ ತ್ಯಾಗರಾಜು ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಹಳೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎನ್ನುವುದು ತಿಳಿದುಬಂದಿದೆ.

    ಹಳೆ ಪ್ರಕರಣದ ದ್ವೇಷ ಇಟ್ಟುಕೊಂಡಿದ್ದ ಸೋಮು ಸ್ನೇಹಿತರೊಂದಿಗೆ ಸೇರಿ ಈ ಕೃತ್ಯವೆಸೆಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಸೋಮು ಜೊತೆ ಗುರುತಿಸಿಕೊಂಡಿದ್ದ ಪಾಂಡು ಹೆಸರನ್ನ ಗಾಯಗೊಂಡಿದ್ದ ತ್ಯಾಗರಾಜು ಪೊಲೀಸರು ವಿಚಾರಣೆ ನಡೆಸಿದ ವೇಳೆ ಹೇಳಿದ್ದರು. ಈ ಆಧಾರದ ಮೇಲೆ ಮೂವರನ್ನ ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಆಂಧ್ರ ಗಡಿಭಾಗದಲ್ಲಿ ಕನ್ನಡದ ಕಂಪು – ಕನ್ನಡ ಹಾಡಿನಿಂದಲೇ ಜಾಗೃತಿ ಮೂಡಿಸುವ ಗ್ರಾ.ಪಂ. ಸದಸ್ಯ

    ಆಂಧ್ರ ಗಡಿಭಾಗದಲ್ಲಿ ಕನ್ನಡದ ಕಂಪು – ಕನ್ನಡ ಹಾಡಿನಿಂದಲೇ ಜಾಗೃತಿ ಮೂಡಿಸುವ ಗ್ರಾ.ಪಂ. ಸದಸ್ಯ

    ಚಿತ್ರದುರ್ಗ: ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಶಾಲಾ ಕಾಲೇಜುಗಳಲ್ಲೇ ಕನ್ನಡ ಮಾತನಾಡೋದು, ಓದೋದು ಕಡಿಮೆ. ಹೀಗಾಗಿ ಉದ್ಯಾನವನಗಳಲ್ಲಿ ಮತ್ತು ಜನನಿಬಿಡ ಪ್ರದೇಶದಲ್ಲಿ ಕನ್ನಡ ಹಾಡನ್ನು ಹಾಡುತ್ತಾ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ.

    ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್ ಪಲ್ಲವಿ ಅವರು ಕನ್ನಡದ ಜಾಗೃತಿ ಹಾಡುಗಳ ಮೂಲಕ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗಾಗಿ ಶ್ರಮವಹಿಸುತಿದ್ದಾರೆ.

    ಲೋಕೇಶ್ ಪಲ್ಲವಿ ಅವರು ಕಳೆದ 15 ವರ್ಷಗಳಿಂದ ಜಾಗೃತಿ ಗೀತೆಗಳು, ಜಾನಪದ ಗೀತೆಗಳು, ಚಿತ್ರ ಗೀತೆಗಳು ಹಾಗೂ ದೇಶ ಭಕ್ತಿಗೀತೆಗಳನ್ನು ಸ್ವಯಂ ರಚಿಸಿ ಹಾಡುತ್ತಿದ್ದಾರೆ. ಇವರು ಆಂಧ್ರ ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಹಿರೆಕೇರೂರಹಳ್ಳಿಯ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದು, ಜಿಲ್ಲೆಯಾದ್ಯಂತ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಅನುಭವಿಸುವ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ, ಬಾಲಕಾರ್ಮಿಕ ಪದ್ಧತಿ ಹಾಗೂ ಸಾಮಾಜಿಕ ಅಸಮಾನತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಕರೆತರುವಂತಹ ಆಕರ್ಷಕ ಹಾಡುಗಳನ್ನು ರಚಿಸಿರುವುದರ ಜೊತೆಗೆ ಹಲವು ಚಿತ್ರಗೀತೆಗಳನ್ನು ಸಹ ಲೋಕೇಶ್ ರಚಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಹಾಗೂ ಜಾಗೃತಿ ಭಾವ ಕಂಡ ಜಿಲ್ಲೆಯ ಜನರು ಕೂಡ ಇವರನ್ನು ಮನಸಾರೆ ಹೊಗಳಿದ್ದು, ಸಾಮಾಜಿಕ ಪಿಡುಗುಗಳನ್ನು ನಿವಾರಣೆ ಮಾಡುವಲ್ಲಿ ಲೋಕೇಶ್ ಅವರ ಸೇವೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಹೆಚ್ಚಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.

    ಆಂಧ್ರ ಗಡಿಭಾಗದಲ್ಲಿದ್ದರೂ ಸಹ ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ತಮ್ಮ ಗಾಯನದ ಕಲೆಯನ್ನು ಉಳಿಸಿಕೊಳ್ಳುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡ್ತಿರೋ ಲೋಕೇಶ್ ಕಾರ್ಯ ಇತರರಿಗೆ ಮಾದರಿಯಾಗಿದೆ.

  • ಆಸ್ಪತ್ರೆಯಿಂದ ಮನೆಗೆ ಹೊರಟವರು ಮಸಣಕ್ಕೆ

    ಆಸ್ಪತ್ರೆಯಿಂದ ಮನೆಗೆ ಹೊರಟವರು ಮಸಣಕ್ಕೆ

    – ಗ್ರಾ.ಪಂ ಸದಸ್ಯ ಸೇರಿ ಇಬ್ಬರು ಬೈಕ್ ಸವಾರರ ದರ್ಮರಣ

    ಮಂಗಳೂರು: ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಸವಾರ ಹಾಗೂ ಸಹಸವಾರ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಬಳಿಯ ಕನ್ಯಾನದಲ್ಲಿ ನಡೆದಿದೆ.

    ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ, ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ವಾಲ್ಟರ್ ಡಿಸೋಜಾ (45) ಹಾಗೂ ಕನ್ಯಾನದ ಪಂಜಾಜೆ ನಿವಾಸಿ ವಿಲ್ಸನ್ ಡಿಸೋಜಾ (52) ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ಬುಧವಾರ ಕನ್ಯಾನದ ಸರ್ಕಾರಿ ಆಸ್ಪತ್ರೆಗೆ ತೆರಳಿ, ಬಳಿಕ ಅಲ್ಲಿಂದ ಮನೆಯ ಕಡೆಗೆ ತಮ್ಮ ಬೈಕ್‍ನಲ್ಲಿ ಸಾಗುತ್ತಿದ್ದರು. ಈ ವೇಳೆ ಸವಾರನ ನಿಯಂತ್ರಣ ತಪ್ಪಿ ಬೈಕ್ ರಸ್ತೆಯಲ್ಲೇ ಸ್ಕಿಡ್ ಆಗಿ ಬಿದ್ದಿದ್ದರು.

    ಈ ವೇಳೆ ಇಬ್ಬರ ತಲೆಗೆ ಬಲವಾದ ಹೊಡೆತ ಬಿದ್ದು ರಕ್ತಸ್ರಾವವಾಗಿತ್ತು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.