Tag: Gram Panchayat Elections

  • ಮುತ್ತಿಗೆ ಹಾಕುವುದು ಒಂದು ರೀತಿಯ ಭಯೋತ್ಪಾದನೆಯೇ: ನಳಿನ್ ಕುಮಾರ್

    ಮುತ್ತಿಗೆ ಹಾಕುವುದು ಒಂದು ರೀತಿಯ ಭಯೋತ್ಪಾದನೆಯೇ: ನಳಿನ್ ಕುಮಾರ್

    – ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ

    ಉಡುಪಿ: ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ. ಈ ರೀತಿಯ ಯಾವುದೇ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಿಎಫ್‍ಐ ಕಾರ್ಯಕರ್ತರು ಅವರ ಕಚೇರಿಗೆ ಮುತ್ತಿಗೆ ಹಾಕಿದ ಕುರಿತು ಪ್ರತಿಕ್ರಿಯಿಸಿದ ಅವರು, ಪಿಎಫ್‍ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ. ಕಾನೂನು ತನ್ನದೇ ಕ್ರಮಕೈಗೊಳ್ಳುತ್ತದೆ. ಈ ತರದ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಬಂಧನ ಆದಾಗ ಕಾನೂನು ಪ್ರಕಾರ ಹೋರಾಟ ಮಾಡಬೇಕೇ ಹೊರತು ಮುತ್ತಿಗೆ ಹಾಕುವುದಲ್ಲ. ಮುತ್ತಿಗೆ ಹಾಕುವುದೇ ಒಂದು ರೀತಿಯ ಭಯೋತ್ಪಾದನಾ ಚಟುವಟಿಕೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಗಂಭೀರತೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.

    ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಗೋಡೆ ಬರಹದಲ್ಲಿ ಬರೆಯಲಾಗಿತ್ತು. ಎಲ್ಲ ಕೃತ್ಯದ ಹಿಂದೆ ಭಯೋತ್ಪಾದನಾ ಚಟುವಟಿಕೆ ಇದೆ ಅನ್ನಿಸುತ್ತಿದೆ. ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಎಲ್ಲದಕ್ಕೂ ಉತ್ತರ ನೀಡಲು ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದರು.

    ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಉತ್ತಮ ಪೂರ್ವತಯಾರಿ ಮಾಡಿಕೊಂಡಿತ್ತು. ಬಿಜೆಪಿ ಹಮ್ಮಿಕೊಂಡ ಕುಟುಂಬ ಮಿಲನ, ಪಂಚರತ್ನ ಯೋಜನೆಗಳು ಯಶಸ್ವಿಯಾಗಿವೆ. ನಮ್ಮ ಕಾರ್ಯಕರ್ತರಿಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ. ರಾಜ್ಯಾದ್ಯಂತ ಬಿಜೆಪಿ ಪರ ಒಲವು ಕಂಡುಬರುತ್ತಿದೆ. ಎರಡೂ ಹಂತದ ಚುನಾವಣೆಯಲ್ಲಿ ಉತ್ತಮ ಶೇಕಡಾವಾರು ಮತದಾನ ಆಗಿದೆ ಎಂದರು.

    ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳಿಗೆ ಕೊರತೆಯಾಗಿತ್ತು. ಮತಗಟ್ಟೆಯಲ್ಲಿ ಕೆಲಸ ಮಾಡಲು ಕಾರ್ಯಕರ್ತರೇ ಇರಲಿಲ್ಲ. ಸದ್ಯ ಕಾಂಗ್ರೆಸ್ ಮುಳುಗುವ ಹಡಗು ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಕ್ಸಿಜನ್‍ನಲ್ಲಿದೆ ಎಂದು ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

  • ಮತಗಟ್ಟೆಯಲ್ಲಿ ನಿಂಬೆಹಣ್ಣು ಅವಿತಿಟ್ಟು ವಾಮಾಚಾರ – ಮತದಾನಕ್ಕೆ ಬರಲ್ಲ ಎಂದ ಗ್ರಾಮಸ್ಥರು

    ಮತಗಟ್ಟೆಯಲ್ಲಿ ನಿಂಬೆಹಣ್ಣು ಅವಿತಿಟ್ಟು ವಾಮಾಚಾರ – ಮತದಾನಕ್ಕೆ ಬರಲ್ಲ ಎಂದ ಗ್ರಾಮಸ್ಥರು

    – ಮತಗಟ್ಟೆ ಸುತ್ತ ನಿಂಬೆಹಣ್ಣು ಕಂಡು ಗ್ರಾಮಸ್ಥರಿಗೆ ಭಯ
    – ಮತ ಸೆಳೆಯೋಕೆ ವಾಮಾಚಾರ

    ಚಿಕ್ಕಬಳ್ಳಾಪುರ: ಮತಗಟ್ಟೆ ಸುತ್ತ ಮಣ್ಣಲ್ಲಿ ನಿಂಬೆಹಣ್ಣನ್ನು ಇಟ್ಟಿದ್ದಕ್ಕೆ ಭಯಗೊಂಡು ನಾಳೆ ಮತದಾನ ಮಾಡದೇ ಇರಲು ಚಿಕ್ಕಬಳ್ಳಾಪುರದ ಕೆಲ ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ನಾಳೆ ರಾಜ್ಯದ್ಯಾಂತ ಮೊದಲನೇ ಹಂತದ ಗ್ರಾಮಪಂಚಾಯತಿ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣಾಧಿಕಾರಿಗಳು ಚುನಾವಣೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಆದರೆ ಜನ ನಾಳೆ ನಾವು ಮತಕೇಂದ್ರದ ಬಳಿ ಕಾಲೇ ಇಡಲ ಅಂತಿದ್ದಾರೆ. ಅಂದಹಾಗೆ ಬಶೆಟ್ಟಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಂಬಾಲಹಳಿ ಗ್ರಾಮದ ಮತಕೇಂದ್ರ 112 ರಲ್ಲಿ ಮತಕೇಂದ್ರದ ಪ್ರವೇಶ ದ್ವಾರ ಸೇರಿದಂತೆ ಶಾಲಾ ಕಟ್ಟಡದ ಸುತ್ತಲೂ ಗುಣಿ ಅಗೆದು ನಿಂಬೆಹಣ್ಣುಗಳನ್ನು ಇಡಲಾಗಿದೆ.

    ಕಂಬಾಲಹಳ್ಳಿ ಗ್ರಾಮದ ಮತ ಕೇಂದ್ರದಲ್ಲಿ ಕಂಬಾಲಹಳ್ಳಿ, ಮಾರಗಾನಪರ್ತಿ, ಸೇರಿದಂತೆ ದೊಡ್ಡಗುಮ್ಮನಹಳ್ಳಿಯ ಗ್ರಾಮಸ್ಥರು ಮತದಾನ ಮಾಡ್ತಾರೆ. ಆದರೆ ಈಗ ಈ ಮೂರು ಗ್ರಾಮದ ಗ್ರಾಮಸ್ಥರು ಜಪ್ಪಯ್ಯ ಎಂದರೂ ನಾವ್ ನಾಳೆ ಮತದಾನ ಮಾಡಲ್ಲ. ನಮಗೆ ವಾಮಾಚಾರದ ಭೀತಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ.

    ಇದೆಲ್ಲವೂ ಚುನಾವಣೆಗೆ ಸ್ಪರ್ಧಿಸಿರುವ ದಾಸಮ್ಮನವರ ಮಗ ರಾಮಾಂಜಿ ಹಾಗೂ ಆಕೆಯ ಗಂಡ ವೆಂಕಟಪ್ಪನ ಕೃತ್ಯ, ಅಮ್ಮನ ಪರ ಮತಗಳನ್ನ ಸೆಳೆಯೋಕೆ ಮಗ ಈ ರೀತಿ ನಿಂಬೆಹಣ್ಣುಗಳಿಗೆ ವಾಮಾಚಾರ ಮಾಡಿಸಿ ತಂದಿಟ್ಟಿದ್ದಾನೆ ಎಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.