Tag: Gram Panchayat Election

  • ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಗುಂಪುಗಳಿಂದ ಹೋರಾಟ

    ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕಾಗಿ ಎರಡು ಗುಂಪುಗಳಿಂದ ಹೋರಾಟ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಗೆ ಜಾತಿಗಳ ನಡುವೆ ಹಗ್ಗ ಜಗ್ಗಾಟ ಶುರುವಾಗಿದೆ.

    ಬಾಲೇಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳಾ ಕೋಟಾ ಬಂದಿದ್ದು, ಅಧ್ಯಕ್ಷ ಖುರ್ಚಿಗಾಗಿ ಎರಡು ಸಮುದಾಯಗಳು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿವೆ.

    ಗ್ರಾಮದ ಘಂಟಿಚೋರ್ ಹಾಗೂ ದಲಿತ ಸಮುದಾಯದ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಘಂಟಿಚೋರ್ ಸಮುದಾಯದವರು ಪ್ರವರ್ಗ-1ಕ್ಕೆ ಒಳಪಡುತ್ತಾರೆ. ಆದರೆ ಎಸ್.ಸಿ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳನ್ನುದುರುಪಯೋಗ ಪಡೆಸಿಕೊಳ್ಳುವ ಮೂಲಕ ನಿಜವಾದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದಲಿತ ಹೋರಾಟಗಾರರು ಆರೋಪಿಸಿದ್ದಾರೆ.

    ಘಂಟಿಚೋರರು ಎಸ್.ಸಿ ಹೌದೋ ಅಲ್ಲವೋ ಎಂಬುದರ ಬಗ್ಗೆ ಧಾರವಾಡ ಹೈ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಈ ಪ್ರಕರಣ ಇತ್ಯರ್ಥ ಆಗುವ ವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಂದೂಡಬೇಕೆಂದು ದಲಿತರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

    ಘಂಟಿಚೋರರು ಎಸ್.ಸಿ ಎಂದು ಈ ಹಿಂದೆಯೇ ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೂ ನೀವು ಎಸ್.ಸಿ ಅಲ್ಲ, ಪ್ರವರ್ಗ-1ಕ್ಕೆ ಒಳಪಡುತ್ತೀರಿ ಎಂದು ನಮಗೆ ಅವಮಾನ ಮಾಡುವ ಜೊತೆಗೆ ಜಾತಿ ನಿಂದನೆ ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಹೋರಾಟಕ್ಕಿಳಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನ್ಯಾಯ ಕೊಡಿಸಬೇಕೆಂದು ಘಂಟಿಚೋರ್ ಸಮುದಾಯದವರೂ ಹೋರಾಟಕ್ಕೆ ಇಳಿದಿದ್ದಾರೆ. ಬಾಲೇಹೊಸೂರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಇಂದೇ ಕೊನೆಯ ದಿನವಾಗಿದ್ದು, ಈ ಬಗ್ಗೆ ಎರಡೂ ಸಮುದಾಯದವರು ಹೋರಾಟಕ್ಕಿಳಿದಿದ್ದಾರೆ. ಆಯ್ಕೆ ಪ್ರಕ್ರಿಯೆ ಮುಂದೂಡಬೇಕು ಇಲ್ಲವೇ, ತಹಶೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೊಂದಲಕ್ಕೆ ಇತಿಶ್ರೀ ಹಾಡಬೇಕು ಎಂದು ಎರಡೂ ಕಡೆಯ ಹೋರಾಟಗಾರರು ಪಟ್ಟುಹಿಡಿದಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣೆ ವೈಷಮ್ಯ – ಕಣ್ಣಿಗೆ ಖಾರದ ಪುಡಿ ಎರಚಿ ಗಲಾಟೆ

    ಗ್ರಾಮ ಪಂಚಾಯ್ತಿ ಚುನಾವಣೆ ವೈಷಮ್ಯ – ಕಣ್ಣಿಗೆ ಖಾರದ ಪುಡಿ ಎರಚಿ ಗಲಾಟೆ

    – 12 ಯುವಕರು ಕ್ಯಾಂಟಿನ್‍ಗೆ ನುಗ್ಗಿ ಗಲಾಟೆ

    ಮಡಿಕೇರಿ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆಂದು, ಯುವಕರ ಗುಂಪೊಂದು ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದರೂ ವೈಷಮ್ಯ ಮುಂದುವರಿದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ 12 ಯುವಕರು ಸೇರಿ ಕ್ಯಾಂಟೀನ್‍ಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಜನವರಿ 3 ರಂದು ಕೊಡಗು ಜಿಲ್ಲೆ ಕುಶಾಲನಗರ ಸಮೀಪದ, ಬೈಲುಕುಪ್ಪೆಯ ಕ್ಯಾಂಟೀನ್‍ಗೆ ಏಕಾಏಕಿ ಬಂದು ನುಗ್ಗಿದ 12 ಜನ ಯುವಕರ ಗುಂಪು, ಗಲಾಟೆ ಮಾಡಿದೆ. ಈ ವೇಳೆ ಕ್ಯಾಂಟೀನ್ ಮಾಲೀಕ ಅಸ್ಕರ್ ಅಲಿ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.

     

    ಈ ಗಲಾಟೆಯಲ್ಲಿ ಕ್ಯಾಂಟೀನ್‍ನಲ್ಲಿ ಟೀ ಕಡಿಯುತ್ತಿದ್ದ ಗ್ರಾಹಕನ ತಲೆಗೂ ಗಂಭೀರ ಗಾಯಗಳಾಗಿವೆ. ಬಳಿಕ ಕಿಡಿಗೇಡಿಗಳು ರಸ್ತೆಗೆ ಬಡಿಗೆಗಳಿಂದ ಹೊಡೆದು ಕ್ರೌರ್ಯ ಮೆರೆದಿದ್ದಾರೆ. ಈ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಾಟೆಗೆ ಸಹಕರಿಸಿದ ಇಬ್ಬರ ಬಂಧಿಸಲಾಗಿದೆ.

  • ಗ್ರಾ.ಪಂ. ರಾಜಕೀಯ ಜಗಳದಲ್ಲಿ 4 ವರ್ಷದ ಮಗು ಬಲಿ?

    ಗ್ರಾ.ಪಂ. ರಾಜಕೀಯ ಜಗಳದಲ್ಲಿ 4 ವರ್ಷದ ಮಗು ಬಲಿ?

    ಕಲಬುರಗಿ: ಗ್ರಾಮ ಪಂಚಾಯ್ತಿ ರಾಜಕೀಯ ಜಗಳದಲ್ಲಿ ನಾಲ್ಕು ವರ್ಷದ ಕಂದಮ್ಮ ಬಲಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಪೊಲೀಸರ ಹಲ್ಲೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ನಾಲ್ಕು ವರ್ಷದ ಭಾರತಿ ಮೃತ ಮಗು. ಡಿಸೆಂಬರ್ 30ರಂದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ರಾಜಕೀಯ ಸಂಘರ್ಷ ನಡೆದಿತ್ತು. ಈ ವೇಳೆ ಪೊಲೀಸರು ಸಂಗೀತಾ ಎಂಬವರು ಸೇರಿದಂತೆ 10 ಜನರನ್ನು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಂಗೀತಾ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಅಡ್ಡ ಬಂದು ಮಗುವಿಗೂ ಏಟು ಬಿದ್ದಿತ್ತು ಎನ್ನಲಾಗಿದೆ.

    ಗಾಯಗೊಂಡಿದ್ದ ಮಗುವನ್ನ ಸಹ ತಾಯಿಯೊಂದಿಗೆ ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ತೀವ್ರ ಅಸ್ವಸ್ಥಗೊಂಡ ಮಗುವನ್ನು ಶುಕ್ರವಾರ ರಾತ್ರಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಭಾರತಿ ಮೃತಪಟ್ಟಿದೆ. ಜೇವರ್ಗಿ ಪೊಲೀಸರ ಹಲ್ಲೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಭಾರತಿ ಪೋಷಕರು ಆರೋಪಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮಗುವನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಕೊಪ್ಪಳದಲ್ಲಿ ಮತವನ್ನ ಸ್ಕೇಲ್‍ನಿಂದ ಅಳೆದ ಸಿಬ್ಬಂದಿ

    ಕೊಪ್ಪಳದಲ್ಲಿ ಮತವನ್ನ ಸ್ಕೇಲ್‍ನಿಂದ ಅಳೆದ ಸಿಬ್ಬಂದಿ

    ಕೊಪ್ಪಳ: ಬ್ಯಾಲೆಟ್ ಪೇಪರ್ ನ್ನು ಚುನಾವಣಾ ಸಿಬ್ಬಂದಿ ಸ್ಕೇಲ್ ನಿಂದ ಅಳೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಅಭ್ಯರ್ಥಿಗಳ ಚಿಹ್ನೆ ನಡುವೆ ಮತದಾರರ ಮತ ಚಲಾಯಿಸಿದ್ದರು.

    ಗೊಂಡಬಾಳ ಗ್ರಾಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆ ನಡೆದಿತ್ತು. ಟಿವಿ ಚಿನ್ಹೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿನ್ಹೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದ. ಈ ಮತ ಎಣಿಕೆಯಿಂದ ಹೊರ ಗಿಟ್ಟು ಮತ ಎಣಿಕೆ ಮಾಡಲಾಗಿತ್ತು.

    ಕೊನೆಗೆ ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ಸ್ಕೇಲ್ ನಿಂದ ಅಳತೆ ಮಾಡಲಾಯ್ತು. ಟಿವಿ ಚಿನ್ಹೆಗೆ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆ ಗಾಳೆಪ್ಪ ಪೂಜಾರ ಅವರಿಗೆ ಮತ ಎಂದು ಘೋಷಣೆ ಮಾಡಲಾಯ್ತು.

     

  • ಇಂದು 2ನೇ ಹಂತದ ಗ್ರಾ.ಪಂ. ಚುನಾವಣೆ – 2,709 ಗ್ರಾಮಗಳಲ್ಲಿ ಮತದಾನ

    ಇಂದು 2ನೇ ಹಂತದ ಗ್ರಾ.ಪಂ. ಚುನಾವಣೆ – 2,709 ಗ್ರಾಮಗಳಲ್ಲಿ ಮತದಾನ

    ಬೆಂಗಳೂರು: ಗ್ರಾಮ ಪಂಚಾಯ್ತಿಗೆ ಇಂದು 2ನೇ ಹಂತದ ಮತದಾನ. 109 ತಾಲೂಕುಗಳ 2,709 ಗ್ರಾಮ ಪಂಚಾಯ್ತಿಗಳ 39,378 ಸ್ಥಾನಗಳಿಗೆ ಮತದಾನ ಶುರುವಾಗಿದೆ.

    2,832 ಪಂಚಾಯ್ತಿಗಳ ಪೈಕಿ 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ರೆ, 216 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. 1 ಲಕ್ಷದ 2 ಸಾವಿರದ 432 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕೊರೊನಾ ಸೋಂಕು ತಡೆ, ಸುಗಮ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

    ವಿಜಯಪುರ ಜಿಲ್ಲೆಯ ನಾಗಠಾಣದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರ ಸಹೋದರಿಯರು ಪರಸ್ಪರ ಅಖಾಡಕ್ಕೆ ಇಳಿದಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿಯ ವಾರ್ಡ್ ನಂಬರ್ 4ರಲ್ಲಿ ಸಹೋದರಿಯರಾದ ನೀಲಾಬಾಯಿ ಮತ್ತು ಕಸ್ತೂರಿ ಬಾಯಿ ಫೈಟ್ ಮಾಡ್ತಿದ್ದಾರೆ. ನಂಜನಗೂಡಿನ ಹಾರೋಪುರದ ತಾಯೂರು ಗ್ರಾಮ ಪಂಚಾಯ್ತಿ ಮತಕೇಂದ್ರದ ಮುಂದೆ ವಾಮಾಚಾರ ಮಾಡಲಾಗಿದೆ.

    ಉಡುಪಿ ಜಿಲ್ಲೆಯ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬೆಳ್ಳಾಲ ಮೂಡುಮುಂದ ವಾರ್ಡ್ ನಲ್ಲಿ ತಮ್ಮ ಮತ ಚಲಾಯಿಸಿದರು. ಬೆಳ್ಳಂಬೆಳಗ್ಗೆ ಬಂದು ಸಾಲಿನಲ್ಲಿ ನಿಂತಿದ್ದ ಶಾಸಕ ಸುಕುಮಾರ ಶೆಟ್ಟಿ ಮತಗಟ್ಟೆಯಲ್ಲಿ ಮೊದಲ ವೋಟ್ ಮಾಡಿದರು.

  • ಗ್ರಾ.ಪಂ. ಚುನಾವಣೆ ದಿನವೇ ಅಭ್ಯರ್ಥಿ ನೇಣಿಗೆ ಶರಣು

    ಗ್ರಾ.ಪಂ. ಚುನಾವಣೆ ದಿನವೇ ಅಭ್ಯರ್ಥಿ ನೇಣಿಗೆ ಶರಣು

    ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ದಿನವೇ ಅಭ್ಯರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.

    ದಾಮೋದರ್ ಯಲಿಗಾರ್ ಆತ್ಮಹತ್ಯೆಗೆ ಶರಣಾದ ಗರಗ ಗ್ರಾಮದ 2ನೇ ವಾರ್ಡಿನ ಅಭ್ಯರ್ಥಿ. ಚುನಾವಣೆಯಲ್ಲಿ ಸೋಲಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ದಾಮೋದರ್ ಅ ವರ್ಗದಡಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಘಟನೆಯ ಸುದ್ಧಿ ತಿಳಿಯುತ್ತಿದಂತೆ ಗ್ರಾಮಸ್ಥರು ಮನೆ ಮುಂದೆ ಜಮಾವಣೆಯಾಗಿದ್ದು, ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

    ದಾಮೋದರ ಯಲಿಗಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿದ್ದರು. ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಾಗಿದ್ದ ದಾಮೋದರ್, ವಿಶಾಲ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು.

     

  • ಗ್ರಾ.ಪಂ. ಎಲೆಕ್ಷನ್- ರಾತ್ರಿ ಗ್ರಾಮದ ಪ್ರತಿ ಮನೆಗೆ ಕುಂಕುಮ ಎರಚಿದ್ರು

    ಗ್ರಾ.ಪಂ. ಎಲೆಕ್ಷನ್- ರಾತ್ರಿ ಗ್ರಾಮದ ಪ್ರತಿ ಮನೆಗೆ ಕುಂಕುಮ ಎರಚಿದ್ರು

    ವಿಜಯಪುರ: ಜಿಲ್ಲೆಯಲ್ಲಿ 111 ಗ್ರಾಮ ಪಂಚಾಯತಗಳಿಗೆ ಮಂಗಳವಾರ ಮತದಾನ ನಡೆಯಲಿದೆ. ಇದರ ಬೆನ್ನಲ್ಲೆ ಗ್ರಾಮ ಚುನಾವಣೆಗೆ ವಾಮಾಚಾರದ ಬಿಸಿ ತಟ್ಟಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ವಾರ್ಡ್ ನಂಬರ್ 2ರ ಮನೆಮನೆಗೆ ಕಿಡಗೇಡಿಗಳು ಕುಂಕುಮ ಎರಚಿದ್ದಾರೆ. ನಾಳೆ ಮತದಾನ ನಡೆಯಲಿದ್ದು ಗ್ರಾಮದಲ್ಲಿ ವಾಮಾಚಾರದ ಶಂಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

    ಹಡಲಗೇರಿ ಗ್ರಾಮದಲ್ಲಿ 2 ಸ್ಥಾನಗಳಿಗೆ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರಾ. ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಳು ಅಭ್ಯರ್ಥಿಗಳ ಪೈಕಿಯೇ ಒಬ್ಬರು ಹೀಗೆ ಮಾಡಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

    ಏಳೂ ಜನ ಅಭ್ಯರ್ಥಿಗಳು ಈ ಬಗ್ಗೆ ಗ್ರಾಮದ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸತ್ಯ ಒಪ್ಪಿಕೊಂಡರೆ ಮಾತ್ರ ನಾಳೆ ಮತದಾನ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನ ಗ್ರಾಮಾಸ್ಥರು ನೀಡಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಸದ್ಯ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್‍ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

  • ರಾಜಕೀಯ ವೈಷಮ್ಯಕ್ಕೆ ರೈತ ಸಂಗ್ರಹಿಸಿಟ್ಟಿದ್ದ ಮೇವು ಬೆಂಕಿಗಾಹುತಿ!

    ರಾಜಕೀಯ ವೈಷಮ್ಯಕ್ಕೆ ರೈತ ಸಂಗ್ರಹಿಸಿಟ್ಟಿದ್ದ ಮೇವು ಬೆಂಕಿಗಾಹುತಿ!

    ಗದಗ: ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆ ರಾಜಕೀಯ ದ್ವೇಷಕ್ಕೆ ರೈತನ ಶೇಂಗಾ ಬೆಳೆಯ ಮೇವು ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆ ಶಿರಹಟ್ಟಿ ತಾಲೂಕಿನ ಪರಸಾಪೂರ ಗ್ರಾಮದ ಜಮೀನಿನಲ್ಲಿ ಕಂಡುಬಂದಿದೆ.

    ಹನುಮಂತ ಬೇರಗಣ್ಣವರ್ ಎಂಬವರಿಗೆ ಸೇರಿದ ಬಣವಿ (ಮೇವು) ಸುಟ್ಟು ಭಸ್ಮವಾಗಿದೆ. ಮಾಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಸಾಪೂರ 6ನೇ ವಾರ್ಡ್ ನಿಂದ ಅಭ್ಯರ್ಥಿಯಾಗಿ ಹನುಮಂತ ಕಣಕ್ಕಿಳಿದ್ದರು. ಹೇಗಾದರು ಮಾಡಿ ಅವನನ್ನು ಹತ್ತಿಕ್ಕಬೇಕು ಎನ್ನುವ ದೃಷ್ಟಿಯಿಂದ ಶೇಂಗಾ ಬಣವಿಗೆ ಬೆಂಕಿ ಇಟ್ಟಿರುವ ಆರೋಪ ಕೇಳಿಬರುತ್ತಿದೆ. ರಾಜಕೀಯ ವೈಷಮ್ಯಕ್ಕೆ ಅಭ್ಯರ್ಥಿಯ ಶೇಂಗಾ ಬಣವಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಇಟ್ಟು ದ್ವೇಷ ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    5 ಎಕರೆಯಲ್ಲಿ ಬೆಳೆದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹೊಟ್ಟು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವಷ್ಟರಲ್ಲಿ ಮೇವು ಸುಟ್ಟು ಕರಕಲಾಗಿದೆ. ಸ್ಥಳದಲ್ಲಿ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣೆ – ತಂಬೂರಿ, ಜೋಳಿಗೆ ಹಿಡಿದು ಮತಭಿಕ್ಷೆ

    ಗ್ರಾಮ ಪಂಚಾಯ್ತಿ ಚುನಾವಣೆ – ತಂಬೂರಿ, ಜೋಳಿಗೆ ಹಿಡಿದು ಮತಭಿಕ್ಷೆ

    ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣಾ ಅಖಾಡ ದಿನಕಳೆದಂತೆ ರಂಗೇರುತ್ತಿದೆ. ಹೀಗಿರುವಾಗ ಕಲಾವಿದರೊಬ್ಬರು ಜೋಳಿಗೆ ಹಿಡಿದು ತಂಬೂರಿ ಪದಗಳನ್ನು ಹಾಡುತ್ತಾ ಮತ ಭಿಕ್ಷೆ ಕೇಳುತ್ತಿರುವ ದೃಶ್ಯ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಕಂಡು ಬಂದಿದೆ.

    ಚಾಮರಾಜನಗರ ತಾಲೂಕಿನ ದೊಡ್ಡಮೊಳೆ ಗ್ರಾಮದ ಪಿ.ಸಿದ್ದಶೆಟ್ಟಿ ಅವರು ತಂಬೂರಿ ಕಲಾವಿದರಾಗಿದ್ದಾರೆ. ಇವರು ಗ್ರಾಮದ ಒಂದನೇ ಬ್ಲಾಕ್‍ನ ಸಾಮಾನ್ಯ ಕ್ಷೇತ್ರದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಿಭಿನ್ನವಾಗಿ ಮತ ಭೇಟೆ ಮಾಡುತ್ತಿರುವ ಪಿ. ಸಿದ್ದಶೆಟ್ಟಿ ತಂಬೂರಿ ಹಿಡಿದು, ಜೋಳಿಗೆ ಹಾಕಿ ಮತಬೇಟೆಗೆ ಮುಂದಾಗಿದ್ದಾರೆ. ಇವರು ಹೀಗೆ ವಿಭಿನ್ನವಾಗಿ ಮತ ಕೇಳುವ ಮೂಲಕವಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಕಳೆದ ಐದು ಬಾರಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇವರು ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಇವರಿಗೆ ಕಾರು, ಜೀಪ್, ಗರಗಸ, ಹಾರ್ಮೋನಿಯಂ ಚಿಹ್ನೆಯಾಗಿ ಪಡೆದು ಪರಾಭವಗೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಅವರ ಕಾಯಕದ ಸಾಧನವೇ ಆದ ತಂಬೂರಿ ಚಿಹ್ನೆಯಾಗಿ ದೊರೆತಿದ್ದು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

  • ಗ್ರಾಮ ಪಂಚಾಯ್ತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ

    ಗ್ರಾಮ ಪಂಚಾಯ್ತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಪಿ.ಪಿ.ಬೋಪಣ್ಣ ಜೈಲಿನಿಂದ ನಾಮಪತ್ರ ಸಲ್ಲಿಸಿದ್ದಾರೆ. ಕೊಡಗಿನ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ವಿದ್ಯಮಾನ ನಡೆದಿದೆ. ಎರಡು ಅವಧಿಗೆ 10 ವರ್ಷ ಪಾಲಿಬೆಟ್ಟ ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಬೋಪಣ್ಣ ಸೇವೆ ಸಲ್ಲಿಸಿದ್ರು.

    ಈ ಬಾರಿ ಚುನಾವಣೆಗೆ ನಿಲುವ ಎಲ್ಲಾ ತಯಾರಿಸುತ್ತಿರುವ ಹಿನ್ನೆಲೆಯಲ್ಲಿ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಅದರೂ ಪಂಚಾಯತಿ ಚುನಾವಣೆಗೆ ನಿಲ್ಲಬೇಕು ನಾಮಪತ್ರ ಸಲ್ಲಿಕೆ ಮಾಡಲು ಅಸಾಧ್ಯವಾಗಿತ್ತು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಅವರ ಮೂಲಕ ಜಾಮೀನು ಪಡೆಯಲು ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿದರು. ಜಾಮೀನು ಸಿಗದ ಹಿನ್ನೆಲೆ ನ್ಯಾಯಾಲಯದ ಒಪ್ಪಿಗೆ ಪಡೆದು ಜೈಲಿನಿಂದಲೇ ಬೋಪಣ್ಣ ಸೂಚಕರ ಸಹಾಯದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಜಿಲ್ಲಾ ಪಂಚಾಯತಿ ಸದಸ್ಯ ಧರ್ಮಜ ಉತ್ತಪ್ಪ ನಾಮಪತ್ರ ಸಲ್ಲಿಕೆ ಮಾಡುವ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಿದ್ರು. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಮಾತಾನಾಡಿ, ಅಭಿವೃದ್ಧಿಗೆ ಕೆಲಸ ಮಾಡಿರುವ ಬೋಪಣ್ಣ ಅವರು ರಾಷ್ಟ್ರ ಮಟ್ಟದಲ್ಲಿ ಪಂಚಾಯತಿ ಗೆ ಪ್ರಶಸ್ತಿ ಬರಲು ಶ್ರಮಿಸಿದ್ದರು ಎಂದು ಹೇಳಿದ್ದಾರೆ.