Tag: Graduate Students

  • ಲ್ಯಾಪ್‍ಟಾಪ್ ವಿತರಣೆಯಲ್ಲಿನ ತಾರತಮ್ಯವೇ ಹಿಂದಿನ ಸರ್ಕಾರ ಮನೆಗೆ ಹೋಗಲು ಕಾರಣ: ಸುಧಾಕರ್

    ಲ್ಯಾಪ್‍ಟಾಪ್ ವಿತರಣೆಯಲ್ಲಿನ ತಾರತಮ್ಯವೇ ಹಿಂದಿನ ಸರ್ಕಾರ ಮನೆಗೆ ಹೋಗಲು ಕಾರಣ: ಸುಧಾಕರ್

    ಚಿಕ್ಕಬಳ್ಳಾಪುರ: ನಮ್ಮ ಸರ್ಕಾರ ತಾರತಮ್ಯ ಮಾಡದೇ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ವಿತರಣೆ ಮಾಡುತ್ತಿದೆ. ಆದರೆ ಹಿಂದಿನ ಸರ್ಕಾರ ಕೇವಲ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‍ಟಾಪ್ ವಿತರಣೆ ಮಾಡುವ ಮೂಲಕ ತಾರತಮ್ಯ ಮಾಡಿದ್ದವು. ಹೀಗಾಗಿ ಆ ಸರ್ಕಾರ, ಪಕ್ಷಗಳು ಮನೆಗೆ ಹೋದವು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟಾಂಗ್ ನೀಡಿದರು.

    ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ 238 ವಿದ್ಯಾರ್ಥಿನಿಯರಿಗೆ ಹಾಗೂ ಪ್ರಥಮ ದರ್ಜೆ ಕಾಲೇಜಿನ 439 ವಿದ್ಯಾರ್ಥಿಗಳಿಗೆ ಜ್ಞಾನದೀಪ್ತಿ ಯೋಜನೆಯಡಿ ಉಚಿತ ಲ್ಯಾಪ್‍ಟಾಪ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದರು. ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಶಕ್ತಿ ನೀಡುವ ಪರಿಕಲ್ಪನೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡುತ್ತಿದ್ದಾರೆ. ಅರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ವರ್ಷ ಪದವಿ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸುವ ಕೆಲಸ ಮಾಡಲಾಗುವುದು ಎಂದರು.

    ಕಳೆದ ಸರ್ಕಾರಗಳು ಕೇವಲ ಎಸ್‍ಇ ಹಾಗೂ ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‍ಟಾಪ್ ವಿತರಣೆ ಮಾಡುವ ಮೂಲಕ ತಾರತಮ್ಯ ಮಾಡಿದ್ದವು. ಹೀಗಾಗಿ ಆ ಸರ್ಕಾರ, ಪಕ್ಷಗಳು ಮನೆಗೆ ಹೋದವು. ಇದೀಗ ಯಾವುದೇ ತಾರತಮ್ಯ ಮಾಡದೆ ನಾವೆಲ್ಲರೂ ಭಾರತೀಯರು ಒಂದೇ ಎಂದು ಹೇಳುವ ಬದ್ಧತೆ ಇರುವುದು ಬಿಜೆಪಿ ಪಕ್ಷ ಹಾಗೂ ಸರ್ಕಾರಕ್ಕೆ ಮಾತ್ರ ಎಂದರು.

    ಇದೇ ವೇಳೆ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಅದರ ಜೊತೆ ಸೇರಿರುವ ಕೆಲ ಪಕ್ಷಗಳು ಉದ್ದದೇಶ ಪೂರ್ವಕವಾಗಿಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದ ವೇಳೆ ಕೃತ್ಯ ನಡೆಸಿವೆ. ಭಾರತದ ಗೌರವ ಘನತೆ ಮಣ್ಣುಪಾಲು ಮಾಡಲು ಈ ರೀತಿಯ ದುರುದ್ದೇಶದ ತಂತ್ರ ನಡೆಸಿದ್ದರು ಎಂದರು.