Tag: gps

  • ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ

    ನವದೆಹಲಿ: ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಟೋಲ್ ಪ್ಲಾಜಾಗಳನ್ನು (Toll Plaza) ನೋಡುತ್ತವೆ. ಅಲ್ಲಿ ಟೋಲ್ (Toll) ಪಾವತಿಗಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಿರಿಕಿರಿ ಆಗುವುದುಂಟು. ಆದರೆ ಭವಿಷ್ಯದಲ್ಲಿ ಈ ಟೋಲ್ ಪ್ಲಾಜಾಗಳಿಂದ ಕಿರಿಕಿರಿ ಆಗುವುದೇ ಇಲ್ಲ.

    ಈ ಕುರಿತು ಮಾತನಾಡಿರುವ ಕೇಂದ್ರ ನಿತಿನ್ ಗಡ್ಕರಿ (Nitin Gadkari), ಶೀಘ್ರದಲ್ಲೇ ಸ್ವಯಂಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸುವ ವ್ಯವಸ್ಥೆ ಅಳವಡಿಸಲಾಗುವುದು. ಸ್ವಯಂ ಚಾಲಿತವಾಗಿ ವಾಹನ ಸಂಖ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿದೆ. ಇದು ವಾಹನ ಮಾಲೀಕರ ಬ್ಯಾಂಕ್ ಖಾತೆಗಳಿಂದ (Bank Account) ಶುಲ್ಕವನ್ನು ಖಡಿತಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಆರಗ ಜ್ಞಾನೇಂದ್ರ

    ಫಾಸ್ಟ್ಯಾಗ್‌ಗಳನ್ನು (FASTags) ಪರಿಚಯಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI) ಟೋಲ್ ಆದಾಯವು ವರ್ಷಕ್ಕೆ 15 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಅದಕ್ಕಾಗಿ ಈಗ ಆಟೋ ಮೊಬೈಲ್ ನಂಬರ್‌ಪ್ಲೇಟ್(ಸ್ವಯಂಚಾಲಿನ ನಂಬರ್‌ಪ್ಲೇಟ್ ರೀಡರ್ ಕ್ಯಾಮೆರಾ) (Automatic Number Plate Reader Cameras) ತ್ರಜ್ಞಾನವನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೇಜಾವರ ಶ್ರೀಗಳ ಎದೆ ಮೇಲೆ ಕಾಲಿಟ್ಟು ಸೊಪ್ಪು ತಿಂದ ಆಡು

    2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ (Toll Plaza) ವಾಹನಗಳು ಕಾಯುತ್ತಿದ್ದ ಸಮಯ ಸರಿಸುಮಾರು 8 ನಿಮಿಷಗಳಿತ್ತು. 2020 ರಿಂದ 2022ರ ಅವಧಿಯಲ್ಲಿ ಫಾಸ್ಟ್ಯಾಗ್‌ಗಳನ್ನು ಪರಿಚಯಿಸಿದ ನಂತರ ವಾಹನಗಳ ಸರಾಸರಿ ಸಮಯವು 47 ಸೆಕೆಂಡುಗಳಿಗೆ ಇಳಿಕೆಯಾಯಿತು. ಹೀಗಿದ್ದೂ ಕೆಲವು ನಗರಗಳಲ್ಲಿ ಸಂದಿಗ್ಧ ಸಮಯಗಳಲ್ಲಿ ಹೆಚ್ಚಿನ ವಿಳಂಬವಾಗುತ್ತಿವೆ. ಅದಕ್ಕಾಗಿ ಸಂಪೂರ್ಣ ಬದಲಿ ವ್ಯವಸ್ಥೆ ಕಲ್ಪಿಸಲು ಸ್ವಯಂಚಾಲಿನ ಟೋಲ್ ಸಂಗ್ರಹಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದೆ ಎಂದಿದ್ದಾರೆ.

    ಸರ್ಕಾರ ಒಟ್ಟು ಎರಡು ರೀತಿಯ ಆಯ್ಕೆಗಳನ್ನು ಎದುರುನೋಡುತ್ತಿದೆ. ಮೊದಲಿಗೆ ಟೋಲ್ ಅನ್ನು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುವುದು, 2ನೇ ಅಯ್ಕೆಯಾಗಿ ಕಾರಿನಲ್ಲಿ ಜಿಪಿಎಸ್ ಅಳವಡಿಸಿ ಉಪಗ್ರಹ ಆಧಾರಿತವಾಗಿ ಟೋಲ್ ಸಂಗ್ರಹ ಮಾಡುವ ವಿಧಾನವನ್ನು ಎದುರು ನೋಡುತ್ತಿದೆ. ಉಪಗ್ರಹ ವಿಧಾನ ಅನುಸರಿಸಿದರೆ ಫಾಸ್ಟ್ಯಾಗ್‌ ಬದಲಾಗಿ ಜಿಪಿಎಸ್ ಅಳವಡಿಸಬೇಕಾಗುತ್ತದೆ. ಯಾವ ಆಯ್ಕೆಯನ್ನು ಈಗಲೇ ಅಂತಿಮಗೊಳಿಸಿಲ್ಲ. ಆದರೆ ಟೋಲ್ ಪ್ಲಾಜಾಗಳಿಂದ ಮುಕ್ತಿ ನೀಡುವುದು ಖಚಿತ. ಸ್ವಯಂ ಚಾಲಿತ ಟೋಲ್ ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

    ಏಷ್ಯಾ ಪೆಸಿಫಿಕ್ ವಲಯದಲ್ಲೇ ಫಸ್ಟ್ – ಸ್ವದೇಶಿ ನ್ಯಾವಿಗೇಷನ್ ಬಳಸಿ ಲ್ಯಾಂಡಿಂಗ್

    ನವದೆಹಲಿ: ಏಷ್ಯಾ ಪೆಸಿಫಿಕ್ ವಲಯದಲ್ಲಿ ಮೊದಲ ಬಾರಿಗೆ ಇಂಡಿಗೋ ಸ್ವದೇಶಿ ನ್ಯಾವಿಗೇಷನ್ ಸಿಸ್ಟಮ್ ‘ಗಗನ್’ ಅನ್ನು ಬಳಸಿಕೊಂಡು ವಿಮಾನವನ್ನು ಲ್ಯಾಂಡ್ ಮಾಡಿದೆ.

    ಎಟಿಆರ್-72 ವಿಮಾನ ಜಿಯೋ ಆಗ್ಮೆಂಟೆಡ್ ನ್ಯಾವಿಗೇಷನ್(ಗಗನ್) ಜಿಪಿಎಸ್ ಬಳಸಿಕೊಂಡು ಬುಧವಾರ ರಾಜಸ್ಥಾನದ ಕಿಶನ್‌ಗಢ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು.

    ಗಗನ್ ಅನ್ನು ಸೆಂಟರ್-ರನ್ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ವಿದ್ಯುತ್‌ ಸಮಸ್ಯೆ – ಕಲ್ಲಿದ್ದಲು ಸಾಗಾಟಕ್ಕೆ 650ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳ ಸಂಚಾರ ರದ್ದು

    ವಿಮಾನ ಲ್ಯಾಂಡಿಂಗ್ ಮಾಡಲು ರನ್‌ವೇ ಸಮೀಪಿಸುವ ಸಂದರ್ಭದಲ್ಲಿ ಪಾರ್ಶ್ವ ಹಾಗೂ ಲಂಬ ಮಾರ್ಗದರ್ಶನವನ್ನು ಇದು ನೀಡುತ್ತದೆ. ಕೆಲವು ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್(ಐಎಲ್‌ಎಸ್) ಇಲ್ಲದೇ ಇರುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ.

    ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಗಗನ್ ವಾಯುಪ್ರದೇಶವನ್ನು ಆಧುನೀಕರಿಸುತ್ತದೆ. ವಿಮಾನ ಸಂಚಾರದಲ್ಲಿ ವಿಳಂಬವಾಗುವುದನ್ನು ಕಡಿಮೆ ಮಾಡುತ್ತದೆ ಹಾಗೂ ಇಂಧನ ಉಳಿತಾಯ, ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಚೇತನ್ ಸಕಾರಿಯಾ ‘ಡ್ರ್ಯಾಗನ್ ಬಾಲ್ Z’ ಸಂಭ್ರಮಾಚರಣೆ ಹಿಂದಿದೆ ಭಾವನಾತ್ಮಕ ಸಂಬಂಧ

    ಭಿನ್ನ ಹೇಗೆ?
    ಗಗನ್ ಸ್ಯಾಟಲೈಟ್ ಬೇಸ್ಡ್ ಲ್ಯಾಂಡಿಂಗ್ ಸಿಸ್ಟಮ್‌ನಂತೆಯೇ ಪೈಲಟ್‌ಗಳಿಗೆ ಲ್ಯಾಂಡಿಂಗ್ ವೇಳೆ ಸಹಾಯ ಮಾಡುತ್ತದೆ. ಭೂಮಿಯಿಂದ 550 ಮೀ. ಗಿಂತಲೂ ಹೆಚ್ಚಿನ ದೂರದಲ್ಲಿಯೂ ಇದು ಪೈಲಟ್‌ಗಳಿಗೆ ರನ್‌ವೇ ಗೋಚರಿಸುವಂತೆ ಮಾಡಿ, ವಿಮಾನವನ್ನು ಲ್ಯಾಂಡ್ ಮಾಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಒಂದು ವ್ಯತ್ಯಾಸವೆಂದರೆ ಸೈಡ್ ಗ್ರೌಂಡ್ ಬೇಸ್ಡ್ ಸಿಸ್ಟಮ್‌ನಲ್ಲಿ ಕೇವಲ 200 ಅಡಿ ಎತ್ತರದಿಂದ ಪೈಲೆಟ್ ಲ್ಯಾಂಡಿಂಗ್ ನಿರ್ಧಾರವನ್ನು ತೆಗೆದುಕೊಳ್ಳಬಹುದು.

    ಇಂದು ಪ್ರಯೋಗಿಕವಾಗಿ ಬಳಕೆಯಾದ ವಿಮಾನದಲ್ಲಿ 250 ಅಡಿ ಎತ್ತರದಿಂದಲೇ ಪೈಲಟ್ ನಿರ್ಧಾರವನ್ನು ತೆಗೆದುಕೊಂಡು ಲ್ಯಾಂಡ್ ಮಾಡಿದ್ದಾರೆ. ಇಂಡಿಗೋ ಪೈಲಟ್ ಗಗನ್ ಸ್ಯಾಟಲೈಟ್ ಮೂಲಕ ಲಂಬ ಮತ್ತು ಪಾರ್ಶ್ವದ ನ್ಯಾವಿಗೇಶನ್ ನೋಡಿಕೊಂಡು ಲ್ಯಾಂಡಿಂಗ್ ಮಾಡಿದ್ದಾರೆ.

    ಭಾರತದ ಗಗನ್ ಹೊರತುಪಡಿಸಿ ವಿಶ್ವದಲ್ಲಿ ಕೇವಲ 3 ಕಡೆಗಳಲ್ಲಿ ಇಂತಹ ವ್ಯವಸ್ಥೆಗಳಿವೆ. ಅವುಗಳೆಂದರೆ ಅಮೆರಿಕ(ಡಬ್ಲ್ಯುಎಎಸ್), ಯುರೋಪ್(ಇಜಿಎನ್‌ಒಎಸ್) ಹಾಗೂ ಜಪಾನ್‌ನ (ಎಮ್‌ಎಸ್‌ಎಎಸ್).

    ಜುಲೈ ತಿಂಗಳಿನಲ್ಲಿ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೂ ಗಗನ್ ಉಪಕರಣವನ್ನು ಅಳವಡಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ನೀಡಿದೆ.

  • ಪಕ್ಷಿಗಳ ಟ್ರ್ಯಾಕಿಂಗ್ – ಕೊಕ್ಕರೆ ಬೆಳ್ಳೂರಿನಲ್ಲಿ ವಿನೂತನ ಪ್ರಯತ್ನ

    ಪಕ್ಷಿಗಳ ಟ್ರ್ಯಾಕಿಂಗ್ – ಕೊಕ್ಕರೆ ಬೆಳ್ಳೂರಿನಲ್ಲಿ ವಿನೂತನ ಪ್ರಯತ್ನ

    ಮಂಡ್ಯ: ಅರಣ್ಯ ಇಲಾಖೆ ಈಗ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದು, ಹೆಜ್ಜಾರ್ಲೆ ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಗೂ ಜಿಪಿಎಸ್ ಅಳವಡಿಸುವ ಮೂಲಕ ಅವುಗಳ ಸಂಚಾರ ಕ್ರಮ ಅಧ್ಯಯನಕ್ಕೆ ನಿರ್ಧರಿಸಿದೆ.

    ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪ್ರಸಿದ್ಧ ಪಕ್ಷಿಧಾಮ. ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಹೆಚ್ಚಾಗಿ ಬರುವ ಹೆಜ್ಜಾರ್ಲೆ(ಪೆಲಿಕಾನ್) ಮತ್ತು ಬಣ್ಣದಕೊಕ್ಕರೆ(ಪೆಂಡೆಂಟ್ ಸ್ಟ್ರೋಕ್)ಗಳು ಕೊಕ್ಕರೆ ಬೆಳ್ಳೂರಿನಲ್ಲಿ ಸಂತಾನಾಭಿವೃದ್ಧಿ ಮುಗಿಸಿ ಬೇರೆಡೆ ಹೋಗುತ್ತವೆ. ಈಗ ಇಂತಹ ಹೆಜ್ಜಾರ್ಲೆಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅವು ಸಂಚಾರ ಕ್ರಮ ತಿಳಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಾಯೋಗಿಕವಾಗಿ 10-12 ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಕಲಾಗಿದೆ.

    ಪಕ್ಷಿಗಳ ಸಂತಾನಾಭಿವೃದ್ಧಿ ವೇಳೆ ಮರದಿಂದ ಕೆಳಗೆ ಬೀಳುವ ಮರಿಗಳನ್ನ ರಕ್ಷಿಸಿ ಪೋಷಿಸುವ ಅರಣ್ಯ ಇಲಾಖೆ 3-4 ತಿಂಗಳ ಆರೈಕೆ ಬಳಿಕ ಅವುಗಳನ್ನು  ಹಾರಲು ಬಿಡುತ್ತವೆ. ಈ ವೇಳೆ ಪಕ್ಷಿಗಳ ಕಾಲು-ರೆಕ್ಕೆಗಳಿಗೆ ಪೆಟಾಜಿಯಲ್ ನಂಬರ್ ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ಆ.15ರ ನಂತರ ಲಾಕ್ ಆಗುತ್ತಾ ಬೆಂಗಳೂರು? – ಟಫ್ ರೂಲ್ಸ್ ಬಗ್ಗೆ ಅಶೋಕ್ ಸುಳಿವು

    ಕಳೆದ ಮಾರ್ಚ್‍ನಲ್ಲಿ 4 ಹೆಜ್ಜಾರ್ಲೆ ಮರಿಗಳಿಗೆ ಕೆ-01, ಕೆ-02, ಕೆ-03, ಕೆ-04 ಎಂಬ ನಂಬರ್ ಹಾಕಿ ಬಿಡಲಾಗಿದೆ. ಹಾಗೆಯೇ ಏಪ್ರಿಲ್‍ನಲ್ಲಿ 9 ಬಣ್ಣದ ಕೊಕ್ಕರೆಗಳಿಗೆ ಎಪಿಯು/ಕೆ-5551, ಎಪಿಎಸ್/ಕೆ-5552, ಎವೈನ್/ಕೆ-5554 ಎಂದು ನಂಬರ್ ಟ್ಯಾಗ್ ಹಾಕಿ ಬಿಡುಗಡೆಗೊಳಿಸಲಾಗಿದೆ. ಈ ನಂಬರ್ ಟ್ಯಾಗ್‍ಗಳಿಂದ ಸಂತಾನೋತ್ಪತ್ತಿ ಬಳಿಕ ತೆರಳಿದ ಪಕ್ಷಿಗಳು ಮತ್ತೆ ಕೊಕ್ಕರೆ ಬೆಳ್ಳೂರಿಗೆ ಬರುತ್ತವಾ ಅಥವಾ ಬೇರೆ ಯಾವುದಾದರೂ ಸ್ಥಳಗಳಿಗೆ ತೆರಳುತ್ತವಾ ಎಂಬುದನ್ನು ಟ್ಯಾಗ್ ಗಮನಿಸಿದವರಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

    ಕೊಕ್ಕರೆ ಬೆಳ್ಳೂರಿಗೆ ಎಲ್ಲಿಂದ ಪಕ್ಷಿಗಳು ಬರುತ್ತವೆ? ಸಂತಾನೋತ್ಪತ್ತಿ ಬಳಿಕ ಆ ಪಕ್ಷಿಗಳು ಎಲ್ಲಿಗೆ ತೆರಳುತ್ತವೆ ಎಂಬುದನ್ನ ಅಧ್ಯಯನ ಮಾಡಲು ಹೆಜ್ಜಾರ್ಲೆ ಹಾಗೂ ಬಣ್ಣದ ಕೊಕ್ಕರೆಗಳಿಗೆ ಜಿಪಿಎಸ್ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. 4 ಲಕ್ಷ ರೂ. ಮೌಲ್ಯದ ಜಿಪಿಎಸ್ ಉಪಕರಣಗಳನ್ನು  ತರಿಸಿಕೊಳ್ಳಲಾಗುತ್ತಿದ್ದು,  ಪಕ್ಷಿಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಅವುಗಳ ಸಂಚಾರ ಕ್ರಮ ತಿಳಿಯಲು ಸಹಕಾರಿಯಾಗಲಿದೆ.

  • ಹೋಂ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ಜಿಪಿಎಸ್ ಕಣ್ಣು – ಬೆಳ್ತಂಗಡಿಯಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ

    ಹೋಂ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ಜಿಪಿಎಸ್ ಕಣ್ಣು – ಬೆಳ್ತಂಗಡಿಯಲ್ಲಿ ದೇಶದಲ್ಲಿಯೇ ಮೊದಲ ಪ್ರಯತ್ನ

    ಬೆಂಗಳೂರು/ಮಂಗಳೂರು: ಹೋಂ ಕ್ವಾರಂಟೈನ್ ಆದವರು ಎಲ್ಲಿದ್ದಾರೆ? ಹೇಗಿದ್ದಾರೆ? ಎನ್ನುವ ಭಾವಚಿತ್ರ ಸಮೇತ ಲೈವ್ ಅಪ್ಡೇಟ್ ಕೊಡುವ ಮಾಹಿತಿ ಮೊದಲ ಬಾರಿಗೆ ಕಾರ್ಯರೂಪಕ್ಕೆ ಬರಲಿದೆ. ವಾರ್ ರೂಮ್‍ನಲ್ಲಿಯೇ ಕೂತು ಗೃಹಬಂಧನದಲ್ಲಿದ್ದವರ ಮೇಲೆ ಹದ್ದಿನಗಣ್ಣು ಇಡಲಾಗುತ್ತದೆ.

    ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರ ಕೈಗೆ ಸ್ಟಾಂಪ್ ಹಾಕಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಅವರ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಬಳಕೆಗೆ ದಕ್ಷಿಣ ಕನ್ನಡದ ಬೆಳ್ತಂಗಡಿ ಸಜ್ಜಾಗಿದೆ.

    ಹೋಂ ಕ್ವಾರಂಟೈನ್ ಸ್ಟಾಂಪ್ ಹಾಕಿಸಿಕೊಂಡವರನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಐಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ. COVID19 BLT DATABASE ಅನ್ನುವ ಈ ಆಪ್ ಬೆಳ್ತಂಗಡಿ ತಾಲೂಕು ಆಡಳಿತ, ತಹಶೀಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ನಾಗರೀಕ ಸರಬರಾಜು ಇಲಾಖೆ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐಸರ್ಚ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆಪ್ ಬಳಸಿ ಸೋಂಕಿತರ ಮೇಲೆ ನಿಗಾ ಇಡುವ ಕಾರ್ಯಕ್ಕೆ ಮುಂದಾಗಿದೆ.

    ಈ ಪ್ರಯತ್ನ ದೇಶದಲ್ಲೇ ಮೊದಲನೆಯಾದಾಗಿದೆ. ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು, ಇಲಾಖೆಗಳ ಉಪಯೋಗಕ್ಕೆ ನೀಡಲಾಗುತ್ತದೆ. ತಾಲೂಕಿನ ತಣ್ಣೀರುಪಂಥ ಗ್ರಾಮದಲ್ಲಿ ಒಂದು ಕೋವಿಡ್-19 ಪ್ರಕರಣ ಬೆಳಕಿಗೆ ಬಂದ ಬಳಿಕ ಈ ತಂತ್ರಜ್ಞಾನ ಬಳಸಲು ಯೋಜನೆ ಮಾಡಲಾಯಿತು. ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ಅಧಿಕಾರಿಗಳಿಗೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ.

    ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮ್‍ನಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಈ ಆ್ಯಪ್ ಕೋವಿಡ್-19 ಶಂಕಿತರನ್ನು ಟ್ರಾಕ್ ಮಾಡುವ ಮುಖಾಂತರ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಸಹಕರಿಸಲಿದೆ.

  • ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    – ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ
    – ರೆಡ್‍ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್‍ಡ್ರಾಗನ್ ಚಿಪ್

    ಬೆಂಗಳೂರು: ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ ಇಸ್ರೋ ನಿರ್ಮಿತ ಸ್ವದೇಶಿ ಜಿಪಿಎಸ್ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

    ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದ ಫೋನ್ ಗಳು ಅಮೆರಿಕದ ಜಿಪಿಎಸ್(ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್ ಗಳು ನಾವಿಕ್(ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) ಬಳಸಲಿವೆ.

    ಫೋನಿನಲ್ಲಿ ‘ನಾವಿಕ್’ ನೀಡಲಿರುವ ಮೊದಲ ಕಂಪನಿ ಕ್ಸಿಯೋಮಿ ಆಗಿದ್ದು, ಈ ಸಂಬಂಧ ಕ್ಸಿಯೋಮಿ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಮನುಕುಮಾರ್ ಜೈನ್ ಬೆಂಗಳೂರಿನ ಇಸ್ರೋ ಕಂಪನಿಗೆ ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    “ಭಾರತದ ಟೆಕ್ ಲೋಕದಲ್ಲಿ ಹೊಸ ಅಧ್ಯಾಯ. ಇಸ್ರೋ ನಾವಿಕ್ ವಿಶೇಷತೆಯನ್ನು ನೀಡುವ ವಿಶ್ವದ ಮೊದಲ ಫೋನ್ ರೆಡ್ ಮಿ ಆಗಲಿದೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ” ಎಂದು ಮನುಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ.

    ‘ನಾವಿಕ್’ ವಿಶೇಷತೆ ಅಷ್ಟು ಸುಲಭವಾಗಿ ಫೋನಿನಲ್ಲಿ ಬರಲು ಸಾಧ್ಯವಿಲ್ಲ. ಫೋನ್ ತಯಾರಿಕಾ ಕಂಪನಿ ಮತ್ತು ಚಿಪ್ ತಯಾರಿಕಾ ಕಂಪನಿ ಇಸ್ರೋ ಜೊತೆ ಮಾತುಕತೆ ನಡೆಸಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಇಸ್ರೋ ಜೊತೆ ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಕ್ವಾಲಕಂ ಮಾತುಕತೆ ನಡೆಸಿ ಈ ವರ್ಷದ ಜನವರಿಯಲ್ಲಿ ಸ್ನಾಪ್‍ಡ್ರಾಗನ್ ಚಿಪ್ ಬಿಡುಗಡೆ ಮಾಡಿತ್ತು. ಈ ಚಿಪ್ ಬಳಸಿಕೊಂಡು ಕ್ಸಿಯೋಮಿ ಕಂಪನಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಿ ಫೋನ್ ಬಿಡುಗಡೆ ಮಾಡಲಿದೆ.

    2020ರಲ್ಲಿ ಬಿಡುಗಡೆಯಾಗಲಿರುವ ವಿವಿಧ ಬೆಲೆಯ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ ಚಿಪ್ ಬಳಸಿ ನಾವಿಕ್ ಬೆಂಬಲಿಸುವ ಫೋನ್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ಸಿಯೋಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕ್ವಾಲಕಂ ಸ್ನಾಪ್‍ಡ್ರಾಗನ್ 720ಜಿ, 662 ಮತ್ತು 460 ಚಿಪ್ ಗಳು ನಾವಿಕ್ ಬೆಂಬಲಿಸಲಿದೆ. ಮಧ್ಯಮ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್‍ಫೋನ್ ಗಳಲ್ಲಿ ಬಳಸುವ ಉದ್ದೇಶಕ್ಕಾಗಿ ಈ ಚಿಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಚಿಪ್ ಗಳು ವೈಫೈ 6, ಬ್ಲೂಟೂತ್ 5.1 ಜೊತೆಗೆ 4ಜಿ ನೆಟ್‍ವರ್ಕಿಗೆ ಬೆಂಬಲ ನೀಡುತ್ತದೆ. ಕ್ವಾಲಕಂ ಬಿಡುಗಡೆ ಮಾಡಿದ ಚಿಪ್ ನಾವಿಕ್ ಅಲ್ಲದೇ ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೋನಾಸ್’, ಯುರೋಪಿಯನ್ ಒಕ್ಕೂಟದ ‘ಗೆಲಿಲಿಯೊ’, ಚೀನಾದ ‘ಬೈಡೂ’ವನ್ನು ಬೆಂಬಲಿಸುತ್ತದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)7 ಉಪಗ್ರಹಗಳನ್ನು ಹೊಂದಿದೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು.

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿದೆ. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿತ್ತು.

  • ಜಿಪಿಎಸ್ ರೇಪ್ ಪ್ರೂಫ್ ಒಳಉಡುಪು ತಯಾರಿಸಿದ ಯುವತಿ

    ಜಿಪಿಎಸ್ ರೇಪ್ ಪ್ರೂಫ್ ಒಳಉಡುಪು ತಯಾರಿಸಿದ ಯುವತಿ

    ಲಕ್ನೋ: ಇತ್ತೀಚೆಗೆ ಪ್ರತಿನಿತ್ಯ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳದ ಪ್ರಕರಣಗಳು ನಡೆಯುತ್ತಿವೆ. ಆದ್ರೆ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರಿಗೆ ಸೂಕ್ತ ಕಾಲದಲ್ಲಿ ಸಹಾಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಯುವತಿಯರ ರಕ್ಷಣೆಗಾಗಿ ಉತ್ತರ ಪ್ರದೇಶ ರಾಜ್ಯದ ಫಾರುಖಾಬಾದ್‍ನ ಯುವತಿ ಜಿಪಿಎಸ್ ಉಳ್ಳ ಒಳಉಡುಪನ್ನು ತಯಾರಿಸಿದ್ದಾರೆ.

    ಸೀನು ಕುಮಾರಿ ಎಂಬವರು ಈ ವಿಶೇಷ ಒಳ ಉಡುಪನ್ನು ತಯಾರಿಸಿದ್ದಾರೆ. ಈ ಒಳ ಉಡುಪಿನಲ್ಲಿ ಚಿಕ್ಕದಾದ ಲಾಕ್ ಅಳವಡಿಸಲಾಗಿದ್ದು, ಅದಕ್ಕೆ ಪಾಸ್‍ವರ್ಡ್ ನೀಡಲಾಗುತ್ತದೆ. ಪಾಸ್‍ವರ್ಡ್ ನೀಡುವರೆಗೂ ಅದು ತೆರೆಯುವದಿಲ್ಲ. ಹಾಗೆಯೇ ಬಟ್ಟೆಯಲ್ಲಿ ಜಿಪಿಎಸ್ ಯಂತ್ರವನ್ನು ಜೋಡಣೆ ಮಾಡಲಾಗಿದೆ. ಜಿಪಿಎಸ್ ನೀವಿರುವ ಸ್ಥಳದ ಮಾಹಿತಿಯನ್ನು ನಿಮ್ಮ ಪೋಷಕರಿಗೆ ನೀಡುತ್ತದೆ. ಉಡುಪಿನ ಮಧ್ಯಭಾಗದಲ್ಲಿ ಲಾಕ್ ಜೋಡಿಸಲಾಗಿದ್ದು, ಕೊನೆಗೆ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೀನು ಕುಮಾರಿ ಈ ವಿಶಿಷ್ಟ ತಂತ್ರಜ್ಞಾನವುಳ್ಳ ಒಳಉಡುಪನ್ನು ತಯಾರಿಸಲು 4300 ರೂ.ಗಳನ್ನು ಖರ್ಚು ಮಾಡಿದ್ದಾರೆ.

    ಒಂದು ವೇಳೆ ಯಾವುದೇ ಕಾಮುಕರು ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ರೆ, ಜಿಪಿಎಸ್ ಮೂಲಕ ನಾವು ಫೀಡ್ ಮಾಡಿರುವ ಮೆಸೇಜ್ ಕಳುಹಿಸಿಬಹುದು. ಈ ವೇಳೆ ದುಷ್ಕರ್ಮಿಗಳ ಮುಖವನ್ನು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸೀನುಕುಮಾರಿ ತಾವು ತಯಾರಿಸಿರುವ ಒಳ ಉಡುಪಿನ ಮಾದರಿಯನ್ನು ಅಲಹಬಾದ್ ನ್ಯಾಷನಲ್ ಇನೋವೆಷನ್ ಫೌಂಡೇಶನ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ.

    https://www.youtube.com/watch?time_continue=181&v=2tPXShZjzbA

  • ಗುಡ್‍ನ್ಯೂಸ್: ಮುಂದಿನ ವರ್ಷ ಸ್ವದೇಶಿ ಜಿಪಿಎಸ್ ಸಾರ್ವಜನಿಕ ಬಳಕೆಗೆ ಲಭ್ಯ: ನಾವಿಕ್ ವಿಶೇಷತೆ ಏನು?

    ಗುಡ್‍ನ್ಯೂಸ್: ಮುಂದಿನ ವರ್ಷ ಸ್ವದೇಶಿ ಜಿಪಿಎಸ್ ಸಾರ್ವಜನಿಕ ಬಳಕೆಗೆ ಲಭ್ಯ: ನಾವಿಕ್ ವಿಶೇಷತೆ ಏನು?

    ನವದೆಹಲಿ: ಭಾರತದ ಸ್ವದೇಶಿ ಜಿಪಿಎಸ್ ನಾವಿಕ್(ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) 2018ರ ಮೊದಲಾರ್ಧದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‍ಎನ್‍ಎಸ್‍ಎಸ್)7 ಉಪಗ್ರಹಗಳನ್ನು ಹೊಂದಿದ್ದು ಈಗ ನಿಖರತೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತಿದ್ದು, ಮುಂದಿನ ವರ್ಷ ಮೊದಲಾರ್ದದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ ಅಹಮದಾಬಾದ್‍ನಲ್ಲಿರುವ ಸ್ಪೇಸ್ ಅಪ್ಲಿಕೇಶನ್ ಸೆಂಟರ್(ಎಸ್‍ಎಎಸ್) ನಿರ್ದೇಶಕ ತಪನ್ ಮಿಶ್ರಾ ಹೇಳಿದ್ದಾರೆ.

    ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ ‘ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

    ಐಆರ್‍ಎನ್‍ಎಸ್‍ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2016ರ ಏಪ್ರಿಲ್ 28ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ ‘ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡುಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿತ್ತು. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿದೆ.