Tag: gps

  • GSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ! – ಏನಿದು ನಾವಿಕ್‌? ಲಾಭ ಏನು?

    GSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ! – ಏನಿದು ನಾವಿಕ್‌? ಲಾಭ ಏನು?

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ISR) ಶತಕದ ಸಾಧನೆ ಮಾಡಿ ಸಂಭ್ರಮಿಸಿದೆ. ಇಂದು ಬೆಳಗ್ಗೆ 100ನೇ ರಾಕೆಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

    ಬೆಳಗ್ಗೆ 6:30ಕ್ಕೆ ಆಂಧ್ರ ಪ್ರದೇಶದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರನೈಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮೂಲಕ ನಾವಿಕ್ (NavIC) ಯೋಜನೆಯ ಎರಡನೇ ತಲೆಮಾರಿನ ಉಪಗ್ರಹ ಎನ್‌ವಿಎಸ್-02 ಉಡಾವಣೆಯನ್ನು ಯಶಸ್ವಿಗೊಳಿಸಿದೆ.

    ಉಪಗ್ರಹ ಉಡಾವಣೆಯ ಬಳಿಕ ಮಾತನಾಡಿದ ಇಸ್ರೋ ಮುಖ್ಯಸ್ಥ ನಾರಾಯಣನ್‌, ನಿಗದಿ ಪಡಿಸಿದ ಕಕ್ಷೆಗೆ ಉಪಗ್ರಹ ನಿಖರವಾಗಿ ತಲುಪಿದೆ. 100ನೇ ಉಡಾವಣೆ ಇಸ್ರೋ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು.

     

    ಶ್ರೀಹರಿಕೋಟಾದಿಂದ ಆಗಸ್ಟ್ 10, 1979 ರಂದು ಮೊದಲ ರಾಕೆಟ್‌ ಉಡಾವಣೆಯಾಗಿತ್ತು. ಈಗ ಸುಮಾರು 46 ವರ್ಷಗಳ ಬಳಿಕ ಇಸ್ರೋ 100ನೇ ರಾಕೆಟ್‌ ಹಾರಿಸಿದೆ. ಇಲ್ಲಿಯವರೆಗೆ ಶ್ರೀಹರಿಕೋಟಾದಲ್ಲಿ ಎಲ್ಲಾ ದೊಡ್ಡ ರಾಕೆಟ್ ಉಡಾವಣೆಗಳು ಭಾರತ ಸರ್ಕಾರದಿಂದ ನಡೆದಿವೆ. ಇದನ್ನೂ ಓದಿ: ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

    ಏನಿದು ನಾವಿಕ್‌?
    ಇಸ್ರೋದ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಗೆ ಮೊದಲು ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (IRNSS) ಎಂದು ಕರೆಯಲಾಗಿತ್ತು. ಈಗ ಇದನ್ನು ಕಾರ್ಯಾಚರಣೆ ಉದ್ದೇಶದಿಂದ NavIC (Navigation with Indian Constellation) ಹೆಸರಿನಿಂದ ಕರೆಯಲಾಗುತ್ತದೆ.

    ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ.

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿತ್ತು.

    ನಾವಿಕ್ ಯೋಜನೆಗೆ ಭಾರತ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಮೆರಿಕದ ನಿರ್ಧಾರದ ಬಳಿಕ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ತನ್ನದೇ ಆದ ಜಿಪಿಎಸ್‌ ಅನ್ನು ಹೊಂದಬೇಕು. ಈ ಯೋಜನೆಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಘೋಷಿಸಿದ್ದರು. ಈ ಘೋಷಣೆಯ ನಂತರ ಭಾರತೀಯ ವಿಜ್ಞಾನಿಗಳು ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ ನಿರ್ಮಿಸಲು ಮುಂದಾದರು. ಈ ಯೋಜನೆಗಾಗಿ ಒಟ್ಟು 1,420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿತ್ತು.

    ಲಾಭ ಏನು?
    ಇದು ಭಾರತದಾದ್ಯಂತ ಇರುವ ಮತ್ತು ಗಡಿಯಾಚೆಗೆ 1,500 ಕಿಲೋಮೀಟರ್ ತನಕ ದೂರದಲ್ಲಿರುವ ಬಳಕೆದಾರರಿಗೆ ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ರಕ್ಷಣೆ , ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಒಟ್ಟು 4 ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂಗಳು ಇವೆ. ಅವುಗಳೆಂದರೆ ಜಿಪಿಎಸ್ (ಅಮೆರಿಕ) ಗ್ಲೋನಾಸ್ (ರಷ್ಯಾ), ಗೆಲಿಲಿಯೋ (ಯುರೋಪಿಯನ್ ಒಕ್ಕೂಟ), ಬೀಡೌ (ಚೀನಾ). 2 ಪ್ರಾದೇಶಿಕ ವ್ಯವಸ್ಥೆಗಳೆಂದರೆ, ಕ್ಯುಝಿಎಸ್‌ಎಸ್ (ಜಪಾನ್) ಹಾಗೂ ಐಆರ್‌ಎನ್‌ಎಸ್‌ಎಸ್ ಅಥವಾ ನಾವಿಕ್ (ಭಾರತ).

     

  • ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು

    ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು

    ಲಕ್ನೋ: ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ (Uttar Pradesh) ಫರೀದ್‌ಪುರದಲ್ಲಿ ನಡೆದಿದೆ. ಕಾರಿನಲ್ಲಿದ್ದ (Car) ಮೂವರು ಗೂಗಲ್‌ ಮ್ಯಾಪ್‌ ಬಳಸಿಕೊಂಡು ತೆರಳುತ್ತಿದ್ದರು. ಸೇತುವೆ ಸಂಪೂರ್ಣ ನಿರ್ಮಾಣವಾಗಿರದ ಕಾರಣ ಕಾರು ಮಧ್ಯದಲ್ಲಿ ನದಿಗೆ ಬಿದ್ದಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಮೃತರನ್ನು ಫರೂಕಾಬಾದ್‌ನ ವಿವೇಕ್ ಕುಮಾರ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಆತನ ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಬ್ಬರು ಸಹೋದರರು ಹಾಗೂ ಮತ್ತೋರ್ವ ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿದ್ದರು. ಈ ವೇಳೆ ಫರೀದ್‌ಪುರದಲ್ಲಿ ರಾಮಗಂಗಾ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆಯಿಂದ 50 ಅಡಿ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಕಾರನ್ನು ನದಿಯಿಂದ ಹೊರತೆಗೆದಿದ್ದಾರೆ. ಅಷ್ಟರಲ್ಲೇ ಅದರಲ್ಲಿದ್ದ ಮೂವರು ಸಾವಿಗೀಡಾಗಿದ್ದರು.

    ಈ ವರ್ಷ ಉಂಟಾದ ಪ್ರವಾಹದಿದ ಸೇತುವೆಯ ಕುಸಿದಿತ್ತು. ಸೇತುವೆಯನ್ನು ಮರು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಇದು GPS ನಲ್ಲಿ ನವೀಕರಿಸಲಾಗಿಲ್ಲ. ಇದರಿಂದ ಚಾಲಕನ ಗಮನಕ್ಕೆ ಬಂದಿಲ್ಲ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತರ ಕುಟುಂಬಸ್ಥರು, ಸೇತುವೆ ಅಪೂರ್ಣಗೊಂಡಿದೆ. ಬರುವ ವಾಹನಗಳಿಗೆ ಎಚ್ಚರಿಕೆ ನೀಡಲು ಯಾವುದೇ ಬ್ಯಾರಿಕೇಡ್‌ಗಳಿಲ್ಲ ಹಾಗೂ ಸೂಚನಾ ಫಲಕಗಳಿಲ್ಲ ಎಂದು ದೂರಿದ್ದಾರೆ.

  • ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ – ಸುರಕ್ಷತೆಗೆ ಜಿಪಿಎಸ್ ಅಳವಡಿಸಲು ಮುಂದಾದ KMF

    ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ – ಸುರಕ್ಷತೆಗೆ ಜಿಪಿಎಸ್ ಅಳವಡಿಸಲು ಮುಂದಾದ KMF

    ಬೆಂಗಳೂರು: ತಿರುಪತಿ ಲಡ್ಡು ಪಾವಿತ್ರ್ಯತೆಗೆ ಧಕ್ಕೆ ವಿವಾದದ (Tirupati Laddu Controversy) ಬೆನ್ನಲ್ಲೇ ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಟಿಟಿಡಿ (TTD) ಬೇರೆ ಭಾಗಗಳಿಂದ ತರಿಸುತ್ತಿದ್ದ ತುಪ್ಪವನ್ನು ನಿಲ್ಲಿಸಿ, ಪ್ರತಿ ನಿತ್ಯ ನಂದಿನಿ ತುಪ್ಪವನ್ನೇ ತರಿಸಿಕೊಳ್ಳಲು ಮುಂದಾಗಿದೆ. ನಿತ್ಯ ಒಂದೊಂದು ಟ್ಯಾಂಕರ್‌ ಆಮದು ಮಾಡಿಕೊಳ್ಳಲು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಮುಂದಾಗಿದೆ.

    ಈ ಹಿಂದೆ ವಾರಕ್ಕೆ ಮೂರು ಟ್ಯಾಂಕರ್‌ಗಳನ್ನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಒಟ್ಟಾರೆ 3 ತಿಂಗಳಿಗೆ 350 ಟನ್‌ ತುಪ್ಪ ನೀಡುವಂತೆ ಕೆಎಂಎಫ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಿಂದೆ ಟಿಟಿಡಿ ಮಾಡಿಕೊಂಡ ಒಪ್ಪಂದ ಇನ್ನೂ ಒಂದೂವರೆ ತಿಂಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ ಪ್ರತಿನಿತ್ಯ ಒಂದೊಂದು ಟ್ಯಾಂಕರ್‌ ತುಪ್ಪ ತರಿಸಿಕೊಳ್ಳಲು 6 ತಿಂಗಳ ಒಪ್ಪಂದ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ಕೆಎಂಎಫ್ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

    ತಿರುಪತಿ ಲಡ್ಡು ವಿವಾದ ಬಳಿಕ ಕೆಎಂಎಫ್ ಅಲರ್ಟ್:
    ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್‌ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ. ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ವಾಹನಗಳಿಗೆ ಜಿಪಿಎಸ್ (GPS) ಅಳವಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ತಿರುಪತಿ ಲಡ್ಡಿಗೆ ದನದ ಕೊಬ್ಬು ಬೆರಸುವುದು ಘೋರ ಅಪರಾಧ – ಎಂ.ಬಿ ಪಾಟೀಲ್‌ ವಿಷಾದ

    ಕೆಎಂಎಫ್ ವಾಹನಗಳಿಗೆ ಅಳವಡಿಸುವ ಜಿಪಿಎಸ್ ವಿಶೇಷತೆ?
    * ಟಿಟಿಡಿಗೆ ಕೆಎಂಎಫ್‌ನಿಂದ ಸರಕು ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಕೆ.
    * ತುಪ್ಪ ಇರುವ ಟ್ಯಾಂಕರ್‌ಗೆ ಜಿಪಿಎಸ್ ಸ್ಕ್ಯಾನರ್ ಲಾಕ್ ಅಳವಡಿಕೆ.
    * ಇಲ್ಲಿ ಟ್ಯಾಂಕರ್ ಒಮ್ಮೆ ಲಾಕ್ ಆದ್ರೆ ಟಿಟಿಡಿಯಲ್ಲಿಯೇ ಓಪನ್ ಮಾಡಲು ಅವಕಾಶ.
    * ಟಿಟಿಡಿಯಲ್ಲಿ ಓಪನ್ ಮಾಡಬೇಕು ಅಂದ್ರೆ ಪಾಸ್ ವರ್ಡ್ ಕಡ್ಡಾಯ.
    * ಟ್ಯಾಂಕರ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಕೆಎಂಎಫ್ ಅಧಿಕಾರಿಗಳಿಗೆ ಒಟಿಪಿ ರವಾನೆ.
    * ಒಟಿಪಿ ನಂಬರ್ ಹೇಳಿದ್ರೆ ಮಾತ್ರ ಓಪನ್ ಆಗಲಿರುವ ತುಪ್ಪದ ಟ್ಯಾಂಕರ್.

  • ಬೆಂಗಳೂರಿನಲ್ಲಿ 21 ಲಕ್ಷ ಖಾತೆಗಳ ಡಿಜಿಟಲೀಕರಣ ಮಾಡಿದ ಬಿಬಿಎಂಪಿ

    ಬೆಂಗಳೂರಿನಲ್ಲಿ 21 ಲಕ್ಷ ಖಾತೆಗಳ ಡಿಜಿಟಲೀಕರಣ ಮಾಡಿದ ಬಿಬಿಎಂಪಿ

    – ಫೇಸ್‌ಲೆಸ್ ಸಂಪರ್ಕ ರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ
    – ಕೆಲವೇ ದಿನಗಳಲ್ಲಿ ಖಾತೆಗಳಿಗೆ ಜಿಪಿಎಸ್ ಆಧಾರಿತ ಮಾಹಿತಿ ಅಳವಡಿಕೆ

    ಬೆಂಗಳೂರು: ಆಸ್ತಿ ಮಾಲೀಕರಿಗೆ, ಖಾತಾದಾರರಿಗೆ ಬಿಬಿಎಂಪಿ ಗುಡ್‌ನ್ಯೂಸ್ ಕೊಟ್ಟಿದೆ. 21 ಲಕ್ಷ ಖಾತೆಗಳನ್ನ ಡಿಜಿಟಲೀಕರಣ ಮಾಡಿ, ಫೇಸ್‌ಲೆಸ್ ಮಾಡಿದೆ. ಪಾಲಿಕೆ ಶೀಘ್ರದಲ್ಲೇ ರೂಲ್ ಔಟ್ ಬಿಡುಗಡೆ ಆಗಲಿದ್ದು, ಖಾತೆಗಳಿಗೆ ಜಿಪಿಎಸ್ ಆ್ಯಡ್ ಮಾಡಲಿದೆ.

    ಜನ ಖಾತೆ ಮಾಡಿಸಬೇಕು, ಖಾತೆ ಪಡೆಯುಬೇಕು, ಖಾತೆ ಬಗ್ಗೆ ಮಾಹಿತಿ ಬೇಕು ಎಂದರೆ ಕಂದಾಯ ಕಚೇರಿಗಳಿಗೆ ಹೋಗಿ ಮಾಹಿತಿ ಪಡೆಯಬೇಕಿತ್ತು. ಈಗ ಬಿಬಿಎಂಪಿ ಮತ್ತಷ್ಟು ಸುಲಭ ಮಾಡಿದೆ. ಒಂದೆರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2,500 ಆಸ್ತಿಗಳನ್ನು ಇ-ಖಾತಾ ಮಾಡಿದ್ದ ಬಿಬಿಎಂಪಿ 21 ಲಕ್ಷ ಆಸ್ತಿ ಖಾತೆಗಳನ್ನು ಈಗ ಡಿಜಿಟಲೀಕರಣ ಮಾಡಿದೆ. ಇದೀಗ ಫೇಸ್‌ಲೆಸ್ ಸಂಪರ್ಕ ರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜಿಪಿಎಸ್ ಆಧಾರಿತ ಮಾಹಿತಿಯನ್ನು ಪಡೆದು ಅದನ್ನು ಡಿಜಿಟಲೀಕರಣಗೊಳಿಸಲಿದೆ.

    ಬಿಬಿಎಂಪಿ ರಿಜಿಸ್ಟರ್‌ಗಳಲ್ಲಿನ 21 ಲಕ್ಷ ಖಾತೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ರೋಲ್-ಔಟ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಆಗ ಜನ ತಮ್ಮ ಖಾತಾ ಡಿಜಿಟಲೀಕರಣ ಆಗಿರೋದನ್ನ ಸರಿಪಡಿಸಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಸಿಬ್ಬಂದಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ನಿಮ್ಮ ಆಸ್ತಿಯ ಜಿಪಿಎಸ್ ಮಾಹಿತಿಯನ್ನು ಸೆರೆಹಿಡಿಯುತ್ತಾರೆ. ಪಾಲಿಕೆಯ ಇ-ಖಾತಾ ಪಡೆಯಲು ಪ್ರತಿ ಆಸ್ತಿಯ ಜಿಪಿಎಸ್ ಕಡ್ಡಾಯವಾಗಿದೆ. ಸದರಿ ಪ್ರಾಪರ್ಟಿ ಜಿಪಿಎಸ್ ನಿಮ್ಮ ಆಸ್ತಿಯ ವಿಶಿಷ್ಟ ಗುರುತು ಆಗಿರುತ್ತದೆ. ಎಲ್ಲಾ ಬಿಬಿಎಂಪಿಯ ಇ-ಖಾತಾ ಸೇವೆಗಳ ಫೇಸ್‌ಲೆಸ್, ಸಂಪರ್ಕ ರಹಿತ ಮತ್ತು ಆನ್‌ಲೈನ್ ವಿತರಣೆಗೆ ಇದು ಬಹಳ ಮುಖ್ಯವಾಗಿರುತ್ತದೆ.

    ಜಿಪಿಎಸ್‌ನಿಂದ ಅನುಕೂಲಗಳೇನು?
    * ಸ್ವತ್ತುಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿಡಲು ಜಿಪಿಎಸ್ ಅಳವಡಿಕೆ
    * ಜಿಪಿಎಸ್‌ನ್ನು ಸ್ಥಳಕ್ಕೆ ಅನುಗುಣವಾಗಿ ನಿಯೋಜಿಸುವುದು ಇದರ ಉದ್ದೇಶ
    * ಒಂದು ಬಾರಿ ಜಿಪಿಎಸ್ ಮಾಡಿಸಿದ್ರೆ ಬೇರೆ ಯಾರೂ ಭೂಮಿ ಪಡೆಯಲು ಸಾಧ್ಯವಿಲ್ಲ
    * ಬಿಬಿಎಂಪಿ ಬಳಿ ಸ್ವತ್ತುಗಳ ಪಟ್ಟಿಯಿದ್ದು ಸದರಿ ಸ್ವತ್ತುಗಳ ಸ್ಥಳ, ನಕ್ಷೆ ಇರುವುದಿಲ್ಲ
    * ಆಸ್ತಿಯ ಜಿಪಿಎಸ್ ಸಂಗ್ರಹಣೆಯಿಂದ ಇತರೆ ದಾಖಲೆ ಬಳಸಿ ಪರಭಾರೆ ಮಾಡುವುದರಿಂದ ರಕ್ಷಣೆ
    * ಬಹುಮಹಡಿ ಫ್ಲಾಟ್‌ಗಳು ಒಂದೇ ರೀತಿಯ ಜಿಪಿಎಸ್ ಹೊಂದಿರುತ್ತದೆ
    * ಫ್ಲಾಟ್ ಸಂಖ್ಯೆ, ಇತರ ವಿವರಗಳನ್ನ ಪಾಲಿಕೆ ದಾಖಲಿಸೋದ್ರಿಂದ ಆಸ್ತಿಯನ್ನ ಗುರುತಿಸಬಹುದು
    * ಇದು ಸುರಕ್ಷಿತ ಮತ್ತು ಸಂರಕ್ಷಿತ ಆಸ್ತಿ, ಭೂ ದಾಖಲೆಗಳ ಮೂಲಭೂತ ಬಿಲ್ಡಿಂಗ್ ಬ್ಲಾಕ್ ಆಗಿದೆ

    ಬಿಬಿಎಂಪಿ 21 ಲಕ್ಷ ಆಸ್ತಿ ಖಾತಾಗಳಿಗೆ ಡಿಜಿಟಲೀಕರಣ ಮಾಡಿ ಜಿಪಿಎಸ್ ಅಳವಡಿಕೆ ಮಾಡ್ತಿದೆ. ರೂಲ್ ಔಟ್ ಬಿಡುಗಡೆ ಆದ ಬಳಿಕ ಖಾತಾ ಡಿಜಿಟಲೀಕರಣ ಆಗಿದೆಯಾ ಇಲ್ವ ಅಂತಾ ಜನ ಪರಿಶೀಲನೆ ಮಾಡಿ ಕಂದಾಯ ಕಚೇರಿಗಳಿಗೆ ತೆರಳಿ ಇ-ಖಾತಾ ಮಾಡಿಕೊಳ್ಳಬಹುದು. ಜಿಪಿಎಸ್ ಅಳವಡಿಕೆ ಮಾಡ್ತೇವೆ ಅಂದಿದ್ದು, ಯಾವಾಗ ಅಳವಡಿಕೆ ಕಾರ್ಯ ಆರಂಭ ಆಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

  • ಯೋಧರಿಗಾಗಿ ಇಂದೋರ್‌ ಐಐಟಿಯಿಂದ ಹೈಟೆಕ್‌ ಬೂಟುಗಳ ಆವಿಷ್ಕಾರ! ವಿಶೇಷತೆ ಏನು?

    ಯೋಧರಿಗಾಗಿ ಇಂದೋರ್‌ ಐಐಟಿಯಿಂದ ಹೈಟೆಕ್‌ ಬೂಟುಗಳ ಆವಿಷ್ಕಾರ! ವಿಶೇಷತೆ ಏನು?

    ಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ಗಡಿ ಕಾಯುವ ಯೋಧರಿಗಾಗಿ (Soldiers) ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಇಂದೋರ್‌ (IIT Indore) ವಿಶೇಷವಾದ ಬೂಟುಗಳನ್ನು ವಿನ್ಯಾಸಗೊಳಿಸಿದೆ. ಈ ಬೂಟುಗಳು ತುಂಬಾ ವಿಶೇಷವಾಗಿದ್ದು, ಯೋಧರಿಗೆ ಬಹಳ ಅನುಕೂಲವಾಗಿದೆ. ಈ ಬೂಟುಗಳಲ್ಲಿ ವಿಶೇಷ ಏನಿದೆ? ಇದರಿಂದ ಸೇನಾಪಡೆಗೆ ಏನು ಉಪಯೋಗ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

    ಯೋಧರ ಸುರಕ್ಷತೆಗಾಗಿ ಇಂದೋರ್‌ ಐಐಟಿ ವಿಶೇಷ ಬೂಟುಗಳನ್ನು ಅನಾವರಣಗೊಳಿಸಿದ್ದು, ಈ ಬೂಟುಗಳು ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಯೋಧ ಇರುವ ಸ್ಥಳವನ್ನು ಸಹ ಈ ಬೂಟುಗಳ ಸಹಾಯದಿಂದ ತಿಳಿದುಕೊಳ್ಳಬಹುದಾಗಿದೆ.

    ಬೂಟುಗಳ ಅಡಿಭಾಗದಲ್ಲಿ ವಿದ್ಯುತ್‌ ಉತ್ಪಾದನೆ:
    ಈ ಸುಧಾರಿತ ಶೂಗಳ ವಿಶೇಷತೆ ಏನೆಂದರೆ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ. ಸೈನಿಕನ ಚಲನವಲನದಿಂದ ಚಲನ ಶಕ್ತಿಯನ್ನು ಸೆರೆಹಿಡಿಯುವ ವಿಶಿಷ್ಟ ತಂತ್ರಜ್ಞಾನದೊಂದಿಗೆ ಶೂಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಶಕ್ತಿಯನ್ನು ನಂತರ ಶೂಗಳ ಅಡಿಭಾಗದಲ್ಲಿ ಅಳವಡಿಸಲಾಗಿರುವ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ವಿದ್ಯುತ್ ಅನ್ನು ಸಣ್ಣ ಉಪಕರಣಗಳಿಗೆ ಬಳಸಬಹುದು, ಕ್ಷೇತ್ರದಲ್ಲಿ ಸೈನಿಕರಿಗೆ ಅನುಕೂಲಕರ ಮತ್ತು ಪೋರ್ಟಬಲ್ ಶಕ್ತಿಯ ಮೂಲವನ್ನು ನೀಡುತ್ತದೆ.

    ಈ ಆವಿಷ್ಕಾರವು ಸೈನಿಕರಿಗೆ ವಿಶ್ವಾಸಾರ್ಹ ಶಕ್ತಿಯ ಮೂಲವನ್ನು ಒದಗಿಸುವ ಮೂಲಕ ಸ್ವಾಯತ್ತತೆಯನ್ನು ಹೆಚ್ಚಿಸುವುದಲ್ಲದೇ ಬಾಹ್ಯ ವಿದ್ಯುತ್ ಸರಬರಾಜುಗಳ ಮೇಲಿನ ಅವರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. 

    GPS, RFID ಜೊತೆಗೆ ನೈಜ-ಸಮಯದ ಸ್ಥಳ ಟ್ರ್ಯಾಕಿಂಗ್:
    ವಿದ್ಯುತ್ ಉತ್ಪಾದಿಸುವುದರ ಜೊತೆಗೆ, ಈ ವಿಶೇಷ ಶೂಗಳು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಮತ್ತು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನಗಳೊಂದಿಗೆ ಅಳವಡಿಸಲ್ಪಟ್ಟಿವೆ. ಈ ವ್ಯವಸ್ಥೆಗಳು ಶೂ ಧರಿಸಿರುವ ಸೈನಿಕನ ಸ್ಥಳ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತವೆ. ಇದರಿಂದ ಮಿಲಿಟರಿ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು.

    GPS ಮೂಲಕ ಸೈನಿಕರ ನಿಖರವಾದ ಸ್ಥಳವನ್ನು ಯಾವುದೇ ಕ್ಷಣದಲ್ಲಿ ನಿರ್ಧರಿಸಬಹುದು.ಅಲ್ಲದೇ ಇದು ಕಾರ್ಯತಂತ್ರದ ಯೋಜನೆಯನ್ನು ಸುಗಮಗೊಳಿಸುತ್ತದೆ. ಇದರಿಂದ ವಿವಿಧ ಕಾರ್ಯಾಚರಣೆಯ ಸನ್ನಿವೇಶಗಳಲ್ಲಿ ಸೈನಿಕರ ಚಲನವಲನಗಳು ಮತ್ತು ಇರುವಿಕೆಯನ್ನು ಸುಲಭವಾಗಿ ಕಂಡುಕೊಳ್ಳಬಹುದು.

    DRDO ನೊಂದಿಗೆ ಸಹಯೋಗ:
    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇಂದೋರ್ ಈಗಾಗಲೇ ಈ ಶೂಗಳ 10 ಜೋಡಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಪೂರೈಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಹಯೋಗವು ಭಾರತೀಯ ಸಶಸ್ತ್ರ ಪಡೆಗಳಿಗೆ ಪ್ರಮಾಣಿತ ಸಾಧನವಾಗಿ ಪರಿಣಮಿಸುವ ಈ ಶೂಗಳ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ. ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೇ ಸಿಬ್ಬಂದಿಗಳ ಸುರಕ್ಷತೆಯನ್ನು ಕೂಡ ಇದು ಖಾತ್ರಿಪಡಿಸುತ್ತದೆ.

    ವಿದ್ಯುತ್ ಉತ್ಪಾದನೆ ಮತ್ತು ನೈಜ-ಸಮಯದ ಸ್ಥಳ ಟ್ರ್ಯಾಕಿಂಗ್ ಅನ್ನು ಸಂಯೋಜಿಸುವ ಮೂಲಕ, IIT ಇಂದೋರ್ ಸೈನಿಕರು ಎದುರಿಸುತ್ತಿರುವ ಪ್ರಾಯೋಗಿಕ ಸವಾಲುಗಳನ್ನು ಪರಿಹರಿಸಿದೆ. ಈ ಬೂಟುಗಳು ಮತ್ತಷ್ಟು ಪರೀಕ್ಷೆ ಮತ್ತು ನಿಯೋಜನೆಗೆ ಒಳಗಾಗುವುದರಿಂದ, ಅವು ಸೈನಿಕರ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುತ್ತವೆ ಎಂದು ನಿರೀಕ್ಷಿಸಲಾಗಿದೆ. ಪ್ರಯಾಣದಲ್ಲಿರುವಾಗ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಮತ್ತು ಲೊಕೇಶನ್‌ ಟ್ರ್ಯಾಂಕಿಂಗ್‌ ಸಿಸ್ಟಮ್ ಸೇನಾಪಡೆಗೆ ಮತ್ತಷ್ಟು ಬಲ ತುಂಬುತ್ತದೆ.

    ಐಐಟಿ ಇಂದೋರ್ ನಿರ್ದೇಶಕ ಪ್ರೊಫೆಸರ್ ಸುಹಾಸ್  ಜೋಶಿ  ಈ ಕುರಿತು ಮಾತನಾಡಿ, ಈ ಶೂಗಳ ನವೀನ ವೈಶಿಷ್ಟ್ಯಗಳು ಸೇನಾ ಸಿಬ್ಬಂದಿಯ ಸುರಕ್ಷತೆ, ಸಮನ್ವಯ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಅಧಿಕಾರಿಗಳ ಪ್ರಕಾರ, ಪ್ರೊಫೆಸರ್ ಐಎ ಪಳನಿ ಅವರ ಮಾರ್ಗದರ್ಶನದಲ್ಲಿ ತಯಾರಿಸಲಾದ ಈ ಬೂಟುಗಳು ಟ್ರಿಬೋ-ಎಲೆಕ್ಟ್ರಿಕ್ ನ್ಯಾನೊಜೆನರೇಟರ್ (TENG) ತಂತ್ರಜ್ಞಾನದೊಂದಿಗೆ ಶಕ್ತಗೊಂಡಿದ್ದು, ಪ್ರತಿ ಹಂತದಲ್ಲೂ ವಿದ್ಯುತ್ ಉತ್ಪಾದಿಸಬಹುದು. ಅಡಿಭಾಗದಲ್ಲಿರುವ ಸಾಧನದಲ್ಲಿ ವಿದ್ಯುತ್ ಸಂಗ್ರಹವಾಗುತ್ತದೆ. ಇದರಿಂದ ಸಣ್ಣ ಉಪಕರಣಗಳನ್ನು ಕಾರ್ಯನಿರ್ವಹಿಸಲು ಬಳಸಬಹುದು ಎಂದು ತಿಳಿಸಿದ್ಧಾರೆ..

    ಜಿಪಿಎಸ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ತಂತ್ರಜ್ಞಾನಗಳನ್ನು ಹೊಂದಿರುವ ಈ ಶೂಗಳು ನೈಜ ಸಮಯದಲ್ಲಿ ಸಿಬ್ಬಂದಿಯ ಸ್ಥಳವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    TENG ತಂತ್ರಜ್ಞಾನವನ್ನು ಅಲ್ಝೈಮರ್‌ನಿಂದ ಬಳಲುತ್ತಿರುವವರು ಕೂಡ ಬಳಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಶಾಲಾ ಮಕ್ಕಳು ಮತ್ತು ಪರ್ವತಾರೋಹಿಗಳ ಸ್ಥಳವನ್ನು ಪತ್ತೆಹಚ್ಚಲು, ಕಾರ್ಖಾನೆಗಳಲ್ಲಿನ ಕಾರ್ಮಿಕರ ಹಾಜರಾತಿ ಮತ್ತು ಕೆಲಸದ ಮೇಲ್ವಿಚಾರಣೆಗೆ ಈ ಬೂಟುಗಳು ಸಹಾಯ ಮಾಡಬಹುದು ಎಂದು ವರದಿಗಳು ತಿಳಿಸಿವೆ.

    ಇನ್ನೂ ಈ ಶೂಗಳು ಕ್ರೀಡಾಪಟುಗಳ ಚಲನವಲನವನ್ನು, ಪ್ರದರ್ಶನವನ್ನು ನಿಖರವಾಗಿ ವಿಶ್ಲೇಷಿಸಲು ಸಹಾಯ ಮಾಡುತ್ತದೆ.ಬ ಅಲ್ಲದೇ ಕಾರ್ಯನಿರತ ಪೋಷಕರು ತಮ್ಮ ಮಕ್ಕಳ ಇರುವಿಕೆಯ ಬಗ್ಗೆ ಶಾಲೆಯ ದಿನದಾದ್ಯಂತ ಮೇಲ್ವಿಚಾರಣೆ ಮಾಡಬಹುದು ಮತ್ತು ನಿಖರವಾದ ಹಾಜರಾತಿ ದಾಖಲೆಗಳನ್ನು ನಿರ್ವಹಿಸಲು ಶಾಲೆಗಳು RFID ತಂತ್ರಜ್ಞಾನವನ್ನು ಬಳಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್‌ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?

    ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್‌ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?

    – ಹವಾಮಾನ ವೈಪರೀತ್ಯ ಪತ್ತೆ ಹಚ್ಚುತ್ತಿದ್ದ ಸಾಧನ
    – ದೇಶದ 5 ಭಾಗಗಳಲ್ಲಿ ಅಳವಡಿಸಿದ್ದ ಕೇಂದ್ರ ಸರ್ಕಾರ

    ಕಾರವಾರ: ಸಮುದ್ರದಲ್ಲಿ ಬದಲಾಗುವ ವಾತಾವರಣದ ಮನ್ಸೂಚನೆ ನೀಡುತ್ತಿದ್ದ ಡೈರಕ್ಷನಲ್ ವೇವ್ ರೈಡರ್ ಬಾಯ್‌ನನ್ನು (Wave Rider Buoy) ಕಳ್ಳರು ಕದ್ದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Karawara) ಅರಬ್ಬಿ ಸಮುದ್ರದಲ್ಲಿ (Arabian Sea) ನಡೆದಿದೆ‌.

    ಚಂಡಮಾರುತ, ಗಾಳಿಯ ಪ್ರಮಾಣ, ಮಳೆಯ ಮುನ್ಸೂಚನೆಯನ್ನು ವೇವ್ ರೈಡರ್ ಬಾಯ್‌ ನೀಡುತ್ತಿತ್ತು. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಕೇಂದ್ರವು ಅಧ್ಯಯನ ದೃಷ್ಟಿಯಿಂದ ಕಾರವಾರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕಡಲ ಜೀವಶಾಸ್ತ್ರ ಅಧ್ಯಯನ ಕೇಂದ್ರಕ್ಕೆ ನೀಡಿತ್ತು.

    ವೇವ್ ರೈಡರ್‌ ಬಾಯ್‌ಗೆ ನೆದರ್‌ಲ್ಯಾಂಡ್‌ನ (Netherlands) ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಕೋಟಿ ಬೆಲೆಯ ವಸ್ತುಗಳನ್ನು ಅಳವಡಿಸಿ ಕಾರವಾರದ ಕದಂಬ ನೌಕಾ ನೆಲೆ ಇರುವ ಅರಬ್ಬಿ ಸಮುದ್ರ ಭಾಗದಲ್ಲಿ ಇದನ್ನು ಅಳವಡಿಸಲಾಗಿತ್ತು.

    ವೇವ್ ರೈಡರ್‌ ಬಾಯ್‌ಗೆ  ಸಂಬಂಧಿಸಿದಂತೆ ಪಬ್ಲಿಕ್‌ ಟಿವಿ ಹಿಂದೆ ಮಾಡಿದ್ದ ವಿಡಿಯೋವನ್ನು ಇಲ್ಲಿ ನೀಡಲಾಗಿದೆ


    ಗಾಳಿಯ ರಭಸಕ್ಕೆ ಸಂಪರ್ಕದ ಹಗ್ಗ ತುಂಡಾದರೂ ಮಂಗಳೂರಿನ ಭಾಗಕ್ಕೆ ತೇಲಿಹೋಗಬೇಕಿತ್ತು. ಆದರೆ ಜಿಪಿಎಸ್‌ನಲ್ಲಿ (GPS) ಮಹಾರಾಷ್ಟ್ರದ ರತ್ನಗಿರಿ ಭಾಗದ ಹೊರಭಾಗದ ಜಾಗವನ್ನು ತೋರಿಸಿದೆ. ಹೀಗಾಗಿ ಇದನ್ನು ಕದ್ದಿರುವ ಸಾಧ್ಯತೆಯನ್ನು ಇದರ ಉಸ್ತುವಾರಿ ಹೊತ್ತಿರುವ ಜಗನ್ನಾಥ್ ರಾಥೋಡ್ ತಿಳಿಸಿದ್ದಾರೆ.  ಇದನ್ನೂ ಓದಿ: ಪ್ರಧಾನಿಯಿಂದ ಭಾನುವಾರ ದೇಶದ ಅತಿ ಉದ್ದದ ತೂಗುಸೇತುವೆ ʻಸುದರ್ಶನ ಸೇತುʼ ಲೋಕಾರ್ಪಣೆ

    ಈಗಾಗಲೇ ನೌಕಾದಳ, ಕರಾವಳಿ ಕಾವಲುಪಡೆ ಹಾಗೂ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು ರಿಲಯನ್ಸ್ ಫೌಂಡೇಶನ್‌ ಸಂಸ್ಥೆ ಸಹ ಇದರ ಹುಡುಕಾಟಕ್ಕೆ ಕೈ ಜೋಡಿಸಿದೆ.

    ವೇವ್ ರೈಡರ್ ಬಾಯ್‌ ಕೋಟಿಗಟ್ಟಲೇ ಬೆಲೆ ಬಾಳಿದರೂ ಯಾರ ಉಪಯೋಗಕ್ಕೂ ಬಾರದು. ಇದರ ಕಬ್ಬಿಣದ ವಸ್ತುವನ್ನು ಮಾರಾಟ ಮಾಡಬೇಕಷ್ಟೇ. ಕದಂಬ ನೌಕಾದಳ ಭಾಗದಲ್ಲಿ ಅಳವಡಿಸಿದ್ದರೂ ನೌಕಾದಳದ ಭದ್ರತೆ ನಡುವೆ ಕಳವಾಗಿದ್ದು ಹೇಗೆ ಎಂಬ ಗಂಭೀರ ಭದ್ರತಾ ಲೋಪದ ಪ್ರಶ್ನೆ ಎದ್ದಿದೆ.

    ಉಪಯೋಗ ಏನು?
    ಕಳೆದ ಹಲವು ವರ್ಷಗಳಿಂದ ಹವಾಮಾನ ವೈಪರೀತ್ಯ ಸೇರಿದಂತೆ ದೇಶದ ಕಡಲಿನಲ್ಲಾಗುವ ಬದಲಾವಣೆಯನ್ನು ತಕ್ಷಣ ಗುರುತಿಸಿ ಮಾಹಿತಿ ರವಾನೆ ಮಾಡಲು ಹವಾಮಾನ ಇಲಾಖೆಗೆ ಕಷ್ಟಸಾಧ್ಯವಾಗುತಿತ್ತು. ಇದರಿಂದ ಮಳೆ, ಸಮುದ್ರದಲ್ಲಿ ವೈಪರಿತ್ಯ ಆಗುವ ಮೊದಲೇ ನಿಖರವಾಗಿ ಮಾಹಿತಿ ನೀಡಲಾಗುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರ ದೇಶದ ಕರಾವಳಿ ಭಾಗದಲ್ಲಿ ಹೊಸ ತಂತ್ರಜ್ಞಾನ ಹೊಂದಿದ ಎಂಕೆ-4 ಮಾದರಿಯ ಡೈರಕ್ಷನಲ್ ವೇವ್ ರೈಡರ್ ಬಾಯ್ ಅನ್ನು ಕಾರವಾರದ ಅರಬ್ಬಿ ಸಮುದ್ರ ಸೇರಿದಂತೆ ದೇಶದ 5 ಭಾಗಗಳಲ್ಲಿ ಅಳವಡಿಸಿತ್ತು. ಇದನ್ನೂ ಓಧಿ: ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

    ಈ ಮೂಲಕ ಕರ್ನಾಟಕ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಆಗುವ ಪ್ರತಿ ಬದಲಾವಣೆ, ಹವಾಮಾನ, ಮೀನುಗಳ ಸಾಂದ್ರತೆಯ ಮಾಹಿತಿಯನ್ನು ಇದು ನೀಡುತ್ತಿತ್ತು. ಇದೇ ಮೊದಲ ಬಾರಿಗೆ ಬ್ಯಾಟರಿ ಜೊತೆಗೆ ಸೋಲಾರ್ ಶಕ್ತಿ ಬಳಸಿಕೊಂಡು ಈ ಬಾಯ್ ಕಾರ್ಯ ನಿರ್ವಹಿಸುತ್ತಿತ್ತು.

    ಇದರಿಂದಾಗಿ ಮೀನುಗಾರರಿಗೆ ಯಾವ ಪ್ರದೇಶದಲ್ಲಿ ಎಷ್ಟು ಮೀನುಗಳಿವೆ ಎಂಬುದನ್ನು 24 ಗಂಟೆಗೆ ಮೊದಲೇ ಮಾಹಿತಿ ನೀಡಿ ಮತ್ಸ್ಯ ಬೇಟೆಗೆ ಸಹಕಾರಿಯಾಗುತ್ತಿತ್ತು. ಜೊತೆ ಹವಾಮಾನ ವೈಪರಿತ್ಯದಿಂದ ಹಿಡಿದು ಸಮುದ್ರದಲ್ಲಿ ಆಗುವ ಬದಲಾವಣೆಯ ಪ್ರತಿ ಕ್ಷಣದ ಮಾಹಿತಿಯನ್ನ ಈ ಬಾಯ್ ನೀಡುತ್ತಿತ್ತು.

    ಹಿಂದಿನ ಬಾಯ್‌ಗಿಂತ ದ್ವಿಗುಣ ಮಟ್ಟದಲ್ಲಿ ಕಾರ್ಯಕ್ಷಮತೆಯನ್ನ ಹೊಂದಿದೆ. ಹವಾಮಾನ ವೈಪರಿತ್ಯ, ಅಲೆಗಳ ಎತ್ತರ, ಅಲೆಗಳ ದಿಕ್ಕು, ಅಲೆಗಳ ಮಾದರಿ, ಸಮುದ್ರ ಮೇಲ್ಮೈ ಉಷ್ಣತೆ ಅಳತೆ, ಸಮುದ್ರಭಾಗದಲ್ಲಿ ಮೀನುಗಳ ಸಾಂದ್ರತೆಗಳ ಮಾಹಿತಿ ನೀಡುತ್ತಿತ್ತು.

  • ಇನ್ಮುಂದೆ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ಕಡ್ಡಾಯ

    ಇನ್ಮುಂದೆ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ಕಡ್ಡಾಯ

    – ಪ್ಯಾನಿಕ್ ಬಟನ್, ಲೊಕೆಷನ್ ಟ್ರ್ಯಾಕಿಂಗ್‌ ಡಿವೈಸ್ ಅಳವಡಿಕೆಗೆ 7,599 ರೂ. ಫಿಕ್ಸ್
    – ಡಿವೈಸ್ ಅಳವಡಿಸದಿದ್ರೇ ಎಫ್‌ಸಿ ನವೀಕರಣವಾಗಲ್ಲ
    – ಸಾರಿಗೆ ಇಲಾಖೆಯ ಆದೇಶಕ್ಕೆ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ವಿರೋಧ
    – ಕರ್ನಾಟಕ ಲಾರಿ ಅಸೋಸಿಯೇಷನ್‌ನಿಂದ ರಾಮಲಿಂಗಾರೆಡ್ಡಿಗೆ ಪತ್ರ

    ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Transport Department) ಇದೇ ತಿಂಗಳಿನಿಂದ ಮಹತ್ವದ ಆದೇಶವೊಂದನ್ನು ಜಾರಿಗೊಳಿಸಿದೆ. ಪರ್ಮಿಟ್ ವಾಹನಗಳು (Permit Vehicle) ಕಡ್ಡಾಯವಾಗಿ ಪ್ಯಾನಿಕ್ ಬಟನ್, GPS ಡಿವೈಸ್ ಅಳವಡಿಕೆ ಮಾಡುವಂತೆ ಆದೇಶದಲ್ಲಿ ಸೂಚಿಸಿದ್ದು, ಇದಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

    ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಈ ಬೆನ್ನಲ್ಲೇ ಡಿಸೆಂಬರ್ 1 ರಿಂದ (ಶುಕ್ರವಾರ) ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ (Panic Button) ಹಾಗೂ ಲೋಕೇಷನ್ ಟ್ರಾಕಿಂಗ್ ಡಿವೈಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇದೆನ್ನೂ ಓದಿ: ಬೆಂಗಳೂರಿನ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ತಾಳಮದ್ದಳೆ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಉತ್ಸವ

    ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಕೇಂದ್ರಸರ್ಕಾರ ದೇಶದ ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ/ಪರ್ಮಿಟ್ ವಾಹನಗಳಿಗೆ GPS ಡಿವೈಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಲು ಸೂಚಿಸಿತ್ತು. ಈ ಹಿನ್ನೆಲೆ ಇದೇ ತಿಂಗಳಿನಿಂದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಡಿವೈಸ್ ಅಳವಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ 2035.90 ಲಕ್ಷ ರೂ.ಗಳ ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಹೀಗಾಗಿ ಪರ್ಮಿಟ್ ವಾಹನಗಳ ಮಾಲೀಕರು ಅರ್ಹ ಕಂಪನಿಗಳಿಂದ 7,599 ರೂ. ನೀಡಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಡಿಸೆಂಬರ್ 1 ರಿಂದ ಈ ಯೋಜನೆ ಪ್ರಾರಂಭವಾಗಿದ್ದು, ಒಂದು ವರ್ಷದೊಳಗೆ (30-11-24) ರ ಒಳಗೆ ಪರ್ಮಿಟ್ ವಾಹನಗಳು ಈ ಡಿವೈಸ್ ಹಾಕಿಸಿಕೊಳ್ಳಬೇಕು. ಇಲ್ಲದಿದ್ದರೇ ಸಾರಿಗೆ ಇಲಾಖೆ ವಾಹನಗಳ ಎಫ್‌ಸಿ ನವೀಕರಣಕ್ಕೆ ಬ್ರೇಕ್ ಹಾಕುವುದಾಗಿ ಎಚ್ಚರಿಸಿದೆ.

    ಸರ್ಕಾರದ ಈ ಆದೇಶಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಲಾರಿ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜಶರ್ಮಾ, ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಸಿದ ನಂತರ ಜಿಪಿಎಸ್, ಪ್ಯಾನಿಕ್ ಬಟನ್ ಹೇಗೆ, ಯಾರು ಕಂಟ್ರೋಲ್ ಮಾಡ್ತಾರೆ ಅನ್ನೋ ಮಾಹಿತಿ ಕೊಟ್ಟಿಲ್ಲ. ಜೊತೆಗೆ ಈ ಡಿವೈಸ್ ಅಳವಡಿಸಲು ಖಾಸಗಿ ಕಂಪನಿಗಳಲ್ಲಿ 3,000-3,500 ರೂಪಾಯಿ ಆಗುತ್ತೆ. ಆದ್ರೆ ಸರ್ಕಾರ ಸೆಲೆಕ್ಟ್ ಮಾಡಿದ 13 ಕಂಪನಿಗಳಿಗೆ 8,500 ರೂಪಾಯಿ ಯಾಕೆ ಕೊಡಬೇಕು. ಇದ್ರ ಬಗ್ಗೆ ಚರ್ಚೆಯಾಗಲಿ, ಅಲ್ಲಿಯವರೆಗೂ ಈ ಆದೇಶ ವಾಪಾಸ್ ಪಡೆಯಲಿ ಅಂತ ಆಗ್ರಹಿಸಿದ್ದಾರೆ.

    ಕರ್ನಾಟಕ ರಾಜ್ಯ ಲಾರಿ ಅಸೋಸಿಯೇಷನ್‌ನಿಂದಲೂ ವಿರೋಧ ವ್ಯಕ್ತವಾಗಿದ್ದು, ಈ ಆದೇಶವನ್ನು ಪರಿಶೀಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಬರೆದಿದ್ದಾರೆ. ಇದೆನ್ನೂ ಓದಿ: ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ: ಭ್ರೂಣ ಹತ್ಯೆ ಕುರಿತು ನರ್ಸ್ ಮಂಜುಳ ಸ್ಫೋಟಕ ಮಾಹಿತಿ

  • ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    ತಿರುವನಂತಪುರಂ: ರಾತ್ರಿ ವೇಳೆ ಭಾರೀ ಮಳೆಯ ನಡುವೆ ಜಿಪಿಎಸ್ ಎಡವಟ್ಟಿನಿಂದ ಕಾರೊಂದು (Car) ನದಿಯಲ್ಲಿ ಮುಳುಗಿ ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳದ (Kerala) ಎರ್ನಾಕುಲಂನಲ್ಲಿ (Ernakulam) ನಡೆದಿದೆ.

    ಮೃತರನ್ನು ಡಾ.ಅದ್ವೈತ್ (29) ಹಾಗೂ ಡಾ.ಅಜ್ಮಲ್ ಆಸಿಫ್ (29) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇತರ ಮೂವರು ಹೊರಬಂದು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ಸುಮಾರು 11:30ರ ವೇಳೆಗೆ ನಡೆದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆಗೆದ ಭೂಪ- ಬಂಧನ

    ಡಾ.ಅದ್ವೈತ್ ಅವರ ಹುಟ್ಟುಹಬ್ಬದ ಸಲುವಾಗಿ ಶಾಪಿಂಗ್‍ಗೆ ಕೊಚ್ಚಿಗೆ ಹೋಗಿದ್ದರು. ಶಾಪಿಂಗ್ ಮುಗಿಸಿ ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಾಗುತ್ತಿತ್ತು. ದಾರಿಯ ಪರಿಚಯ ಇರದ ಕಾರಣ ಜಿಪಿಎಸ್ ನೆರವು ಪಡೆದುಕೊಂಡಿದ್ದಾರೆ. ಈ ವೇಳೆ ನೀರು ತುಂಬಿದ ರಸ್ತೆಯಲ್ಲಿ ಕಾರು ಸಂಚರಿಸಿದೆ. ಈ ವೇಳೆ ದಾರಿಯನ್ನು ನೇರವಾಗಿಯೇ ಜಿಪಿಎಸ್ ಮ್ಯಾಪ್‍ನಲ್ಲಿ ತೋರಿಸಿದೆ. ಇದರಿಂದ ಅದೇ ಮಾರ್ಗದಲ್ಲಿ ಸಂಚರಿಸಿದ್ದಾರೆ. ಈ ವೇಳೆ ಕಾರು ನದಿಯಲ್ಲಿ ಮುಳುಗಿದೆ.

    ಬದುಕುಳಿದವರಲ್ಲಿ ಒಬ್ಬರಾದ ಡಾ.ಗಾಜಿಕ್ ತಬ್ಸೀರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಹೊರತಾಗಿಯೂ ನಾನು ಚಾಲನೆ ಮಾಡದ ಕಾರಣ, ಇದು ಅಪ್ಲಿಕೇಶನ್‍ನ ತಾಂತ್ರಿಕ ದೋಷವೋ ಅಥವಾ ಮಾನವ ದೋಷವೋ ಎಂದು ನಾನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಗಭೂಷಣ್ ಕಾರು ಅಪಘಾತ: ಮದ್ಯಪಾನದ ರಿಪೋರ್ಟ್ ನೆಗೆಟಿವ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ನವದೆಹಲಿ: ಆಪಲ್ (Apple) ಕಂಪನಿ ಸೆಪ್ಟೆಂಬರ್ 13ರಂದು ತನ್ನ ಐಫೋನ್ 15 (iPhone 15) ಜಾಗತಿಕವಾಗಿ ಅನಾವರಣಗೊಳಿಸಿದೆ. ಕಂಪನಿ ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 15 ಪ್ರೋ, ಐಫೋನ್ 15 ಪ್ರೋ ಮ್ಯಾಕ್ಸ್ ಹ್ಯಾಂಡ್‌ಸೆಟ್‌ಗಳು ಭಾರತದ ನ್ಯಾವಿಗೇಷನ್ ಸಿಸ್ಟಂ ನಾವಿಕ್ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟೆಲೇಷನ್) ಅನ್ನು ಬೆಂಬಲಿಸಲಿದೆ ಎಂದು ತಿಳಿಸಿದೆ.

    ಐಫೋನ್ ನಾವಿಕ್ (NavIC) ಅನ್ನು ತನ್ನ ಉತ್ಪನ್ನಗಳಲ್ಲಿ ಬೆಂಬಲಿಸುವಂತೆ ಮಾಡುತ್ತಿರುವುದು ಇದೇ ಮೊದಲು. ಆದರೆ ಇದು ಐಫೋನ್ 15 ಹಾಗೂ ಐಫೋನ್ 15 ಪ್ಲಸ್ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರ.

    ನಾವಿಕ್ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದಿಂದ ನಡೆಸಲ್ಪಡುತ್ತದೆ. ಐಫೋನ್ 15ನಲ್ಲಿ ಇದರೊಂದಿಗೆ ಗೆಲಿಲಿಯೋ ಹಾಗೂ ಗ್ಲೋನಾಸ್ ನ್ಯಾವಿಗೇಷನ್ ವ್ಯವಸ್ಥೆಗಳು ಕೂಡಾ ಲಭ್ಯವಿರಲಿದೆ.

    ಏನಿದು ನಾವಿಕ್‌?
    ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದ ಫೋನ್ ಗಳು ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಆಂಡ್ರಾಯ್ಡ್‌ ಫೋನ್‌ಗಳು ವಿಕ್ (ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) ಬಳಸುವ ಸಾಧ್ಯತೆಯಿದೆ.

    ʼನಾವಿಕ್’ ವಿಶೇಷತೆ ಅಷ್ಟು ಸುಲಭವಾಗಿ ಫೋನಿನಲ್ಲಿ ಬರಲು ಸಾಧ್ಯವಿಲ್ಲ. ಫೋನ್ ತಯಾರಿಕಾ ಕಂಪನಿ ಮತ್ತು ಚಿಪ್ ತಯಾರಿಕಾ ಕಂಪನಿ ಇಸ್ರೋ ಜೊತೆ ಮಾತುಕತೆ ನಡೆಸಿ ನಾವಿಕ್ ಬೆಂಬಲಿಸುವ ಸಾಫ್ಟ್‌ವೇರ್ ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಈ ಹಿಂದೆ ಇಸ್ರೋ ಜೊತೆ ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಕ್ವಾಲಕಂ ಮಾತುಕತೆ ನಡೆಸಿತ್ತು.

    ಕ್ವಾಲಕಂ ಸ್ನಾಪ್‍ಡ್ರಾಗನ್ 720ಜಿ, 662 ಮತ್ತು 460 ಚಿಪ್‌ಗಳು ನಾವಿಕ್ ಬೆಂಬಲಿಸಲಿದೆ. ಮಧ್ಯಮ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್‍ಫೋನ್ ಗಳಲ್ಲಿ ಬಳಸುವ ಉದ್ದೇಶಕ್ಕಾಗಿ ಈ ಚಿಪ್ ಅಭಿವೃದ್ಧಿ ಪಡಿಸಲಾಗಿದೆ. ಕ್ವಾಲಕಂ ಬಿಡುಗಡೆ ಮಾಡಿದ ಚಿಪ್ ನಾವಿಕ್ ಅಲ್ಲದೇ ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೋನಾಸ್’, ಯುರೋಪಿಯನ್ ಒಕ್ಕೂಟದ ‘ಗೆಲಿಲಿಯೊ’, ಚೀನಾದ ‘ಬೈಡೂ’ವನ್ನು ಬೆಂಬಲಿಸುತ್ತದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್) 7 ಉಪಗ್ರಹಗಳನ್ನು ಹೊಂದಿದೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಇನ್ನು ಮುಂದೆ ಕಾರ್ಡ್ ಬೇಡ – UPI ಬಳಸಿ ATMನಿಂದ ಕ್ಯಾಶ್ ಪಡೆಯಬಹುದು

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ನಾವಿಕ್ ಯೋಜನೆಗೆ ಭಾರತ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1,420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಐಫೋನ್ ನಿಷೇಧಿಸಿದ ಚೀನಾ

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಒಟ್ಟು 4 ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂಗಳು ಇವೆ. ಅವುಗಳೆಂದರೆ ಜಿಪಿಎಸ್ (ಅಮೆರಿಕ) ಗ್ಲೋನಾಸ್ (ರಷ್ಯಾ), ಗೆಲಿಲಿಯೋ (ಯುರೋಪಿಯನ್ ಒಕ್ಕೂಟ), ಬೀಡೌ (ಚೀನಾ). 2 ಪ್ರಾದೇಶಿಕ ವ್ಯವಸ್ಥೆಗಳೆಂದರೆ, ಕ್ಯುಝಿಎಸ್‌ಎಸ್ (ಜಪಾನ್) ಹಾಗೂ ಐಆರ್‌ಎನ್‌ಎಸ್‌ಎಸ್ ಅಥವಾ ನಾವಿಕ್ (ಭಾರತ).

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS

    20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS

    ಯಾದಗಿರಿ: ಸಾಮಾನ್ಯವಾಗಿ ಸಣ್ಣ ಪುಟ್ಟ ಅಂಗಡಿಗಳಲ್ಲಿ 1-2 ಮೂಟೆ ಅಕ್ಕಿ (Rice) ಕದಿಯುವುದನ್ನು, ಐಷಾರಾಮಿ ಜೀವನ ನಡೆಸಲು ಹಣ ಕದಿಯೋದನ್ನು ನಾವು ಕೇಳಿರುತ್ತೇವೆ. ಆದರೆ ಬಡವರ ಹೊಟ್ಟೆ ತುಂಬಿಸುವ ಸಲುವಾಗಿ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಸಾಗಾಟ ಮಾಡುತ್ತಿದ್ದ ಅಕ್ಕಿ ತುಂಬಿದ ಲಾರಿಯನ್ನೇ ಕಳ್ಳತನ ಮಾಡಿರುವ ವಿಚಿತ್ರ ಘಟನೆ ಯಾದರಿಗಿಯಲ್ಲಿ (Yadagiri) ನಡೆದಿದೆ.

    ಬಡವರ ಹಸಿವು ನೀಗಿಸುವ ಸಲುವಾಗಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿ ಕಾರ್ಡುದಾರ ಕುಟುಂಬಕ್ಕೆ ಐದೈದು ಕೆಜಿ ಅಕ್ಕಿಯನ್ನು ನೀಡುತ್ತಿದೆ. ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕೃತ ಪರವಾನಗಿ ಪಡೆದಿರುವ ವಾಹನಗಳ ಮೂಲಕ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತದೆ. ಆದರೆ ನಿಯಮಗಳನ್ನು ಮೀರಿರುವ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ 420 ಮೂಟೆಯ ಬರೋಬ್ಬರಿ 20 ಟನ್ ಪಡಿತರ ಅಕ್ಕಿ (Ration Rice) ಲಾರಿ (Lorry) ಮೇತವಾಗಿ ಕಳ್ಳತನ ಆಗಿದೆ.

    ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿವಿಧ ಗ್ರಾಮಗಳ ಪಡಿತರ ಕೇಂದ್ರಗಳಿಗೆ ವಿತರಿಸಲು ಲಾರಿಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ತುಂಬಿಕೊಂಡು ಹೋಗಲಾಗಿತ್ತು. ಅಕ್ಕಿ ತುಂಬಿದ್ದ ಲಾರಿಯನ್ನು ಶಹಾಪುರದ ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದಾಗ ಲಾರಿ ಸಮೇತ ಅಕ್ಕಿಯನ್ನು ಕಳವು ಮಾಡಲಾಗಿದೆ. ಎಪಿಎಂಸಿಯಲ್ಲಿ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ 4 ಲಾರಿಗಳನ್ನು ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಲಾರಿಯಲ್ಲಿ 420 ಮೂಟೆಯ 20 ಟನ್ ಅಕ್ಕಿ ಇತ್ತು.

    ಚಾಲಕ ಕೀಯನ್ನು ಲಾರಿಯಲ್ಲೇ ಬಿಟ್ಟಿದ್ದ. ಮಾತ್ರವಲ್ಲದೇ ತಾನು ರಾತ್ರಿ ಲಾರಿಯಲ್ಲಿ ಮಲಗುವುದನ್ನು ಬಿಟ್ಟು ತನ್ನ ಸ್ವಗ್ರಾಮ ಸುರಪುರಕ್ಕೆ ಹೋಗಿದ್ದ. ಊರಿನಿಂದ ಬೆಳಗ್ಗೆ ವಾಪಸ್ ಬಂದು ನೋಡಿದರೆ ನಿಲ್ಲಿಸಿದ್ದ ಜಾಗದಲ್ಲಿ ಲಾರಿಯೇ ಇರಲಿಲ್ಲ. ಎಪಿಎಂಸಿ ಸೇರಿ ಇಡೀ ಪಟ್ಟಣದಲ್ಲಿ ಲಾರಿ ಹುಡುಕಿದರೂ ಎಲ್ಲಿಯೂ ಸಿಗಲಿಲ್ಲ. ಇದರಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯ ಇರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.

    ಈಗಾಗಲೇ ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಪಡಿತರ ಅಕ್ಕಿ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಇರಬೇಕಿದ್ದರೂ ಇಲ್ಲಿ ಅದು ಸಂಪೂರ್ಣ ಉಲ್ಲಂಘನೆಯಾಗಿದೆ. ಜಿಪಿಎಸ್ (GPS) ಇಲ್ಲದ ವಾಹನದಲ್ಲಿ ಅಕ್ಕಿ ಸಾಗಾಟಕ್ಕೆ ಅಧಿಕಾರಿಗಳು ಹೇಗೆ ಅವಕಾಶ ಮಾಡಿಕೊಟ್ಟರು ಎನ್ನುವ ಸಂಶಯ ವ್ಯಕ್ತವಾಗಿದೆ. ಇದನ್ನೂ ಓದಿ: ತುಂಗಾನದಿಗೆ ಅಲ್ಯುಮಿನಿಯಂ ಅಂಶ ಸೇರ್ಪಡೆ – ಪ್ರಯೋಗಾಲಯದಿಂದ ನೀರಿನ ವರದಿ ಬಹಿರಂಗ

    ಇಲ್ಲಿ ಗುತ್ತಿಗೆದಾರನ ತಪ್ಪು ಎಷ್ಟಿದೆಯೋ ಅಷ್ಟೇ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಹೀಗಾಗಿ 2 ದಿನಗಳಿಂದ ವಾಹನ ಹುಡುಕಾಟ ಮಾಡುತ್ತಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ ಲಾರಿಯನ್ನು ಹುಡುಕಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸ್ ತನಿಖೆಯೂ ಚುರುಕುಗೊಂಡಿದೆ. ಮಾತ್ರವಲ್ಲದೇ ನಗರದ ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಮಾಡಲಾಗುತ್ತಿದೆ.

    ಅಧಿಕಾರಿಗಳು ಮಾಡೋ ಕೆಲಸ ಸರಿಯಾಗಿ ಮಾಡಿದರೆ ಯಾವುದೇ ಎಡವಟ್ಟು ಆಗುವುದಿಲ್ಲ ಎನ್ನುವುದಕ್ಕೆ ಯಾದಗಿರಿಯಲ್ಲಿ ನಡೆದಿರುವ ಈ ಪ್ರಕರಣ ಸಾಕ್ಷಿ. ಹೀಗಾಗಿ ಇಲಾಖೆ ಕೂಡಲೆ ಎಚ್ಚೆತ್ತುಕೊಂಡು ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೇ ಇಲಾಖೆಗೆ ಆಗಿರುವ ನಷ್ಟ ಭರಿಸುವ ಜೊತೆಗೆ ಮತ್ತೊಮ್ಮೆ ಈ ರೀತಿಯ ಅವಾಂತರ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್‌