Tag: Govu

  • ಅರ್ಜುನ್ ಸರ್ಜಾ ತಮ್ಮ ಆಕಳು ಕರುವಿಗೆ ಇಟ್ಟ ಹೆಸರು ‘ರಾಧೆ-ಕೃಷ್ಣ’

    ಅರ್ಜುನ್ ಸರ್ಜಾ ತಮ್ಮ ಆಕಳು ಕರುವಿಗೆ ಇಟ್ಟ ಹೆಸರು ‘ರಾಧೆ-ಕೃಷ್ಣ’

    ಟ ಅರ್ಜುನ್ ಸರ್ಜಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಅದರಲ್ಲೂ ದೇಸಿ ಹಸುಗಳನ್ನು ಸಾಕುವುದೆಂದರೆ ಪ್ರಾಣ. ಅವರ ಮನೆಯಲ್ಲಿ ದೇಸಿ ಗೋವುಗಳನ್ನು ಸಾಕಲಾಗಿದೆ. ಅಲ್ಲದೇ, ನಿತ್ಯವೂ ಅವುಗಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಾರಂತೆ ಅರ್ಜುನ್ ಸರ್ಜಾ. ಇವರು ಮಾತ್ರವಲ್ಲ, ಮಕ್ಕಳು ಕೂಡ ಮೂಕ ಪ್ರಾಣಿಗಳ ಜೊತೆ ತಮ್ಮದೇ ಆದ ಭಾಷೆಯಲ್ಲೂ ಮಾತನಾಡುತ್ತಾರಂತೆ.

    ಅರ್ಜುನ್ ಸರ್ಜಾ ಮನೆಯಲ್ಲಿ ಎರಡು ಪುಟಾಣಿ ಕರುಗಳಿದ್ದು. ಒಂದು ಕರುವಿಗೆ ರಾಧೆ ಮತ್ತು ಕರುವಿಗೆ ಕೃಷ್ಣ ಎಂದು ಹೆಸರಿಟ್ಟು ಪ್ರೀತಿ ತೋರುತ್ತಿದ್ದಾರೆ. ಸರ್ಜಾ ಕುಟುಂಬ ದೈವಭಕ್ತರು ಆಗಿರುವುದರಿಂದ ಗೌರವದಿಂದ ಆ ಕರುಗಳಿಗೆ ಅಂತಹ ಹೆಸರು ಇಟ್ಟಿದ್ದಾರಂತೆ. ಅರ್ಜುನ್ ಪುತ್ರಿ, ನಟಿಯೂ ಆಗಿರುವ ಐಶ್ವರ್ಯಗೆ ಆ ಕರುಗಳೆಂದರೆ, ಎಲ್ಲಿಲ್ಲದ ಪ್ರೀತಿಯಂತೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ದಕ್ಷಿಣ ಸಿನಿಮಾ ರಂಗದ ಖ್ಯಾತ ಈ ನಟ ಕೃಷಿ ಭೂಮಿಯಲ್ಲೂ ಕಾಯಕ ಮಾಡುತ್ತಾರಂತೆ. ಅಲ್ಲದೇ, ಮಕ್ಕಳಿಗೆ ಅದನ್ನು ಹೇಳಿಕೊಟ್ಟಿದ್ದಾರಂತೆ. ಒಂದು ಕಡೆ ಆಂಜನೇಯನ ಭಕ್ತರಾಗಿ ಮತ್ತೊಂದು ಕಡೆ ಪ್ರಾಣಿಗಳ ಪ್ರಿಯರಾಗಿ ಅರ್ಜುನ್ ಅನೇಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಅದರಲ್ಲೂ ಅವರು ನಿರ್ಮಾಣ ಮಾಡಿರುವ ಆಂಜನೇಯನ ದೇವಸ್ಥಾನವನ್ನು ಅಭಿಮಾನಿಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲವಂತೆ.

  • ಕರುವಿಗಾಗಿ 3 ಕಿಲೋಮೀಟರ್ ಓಡಿದ ಗೋಮಾತೆ

    ಕರುವಿಗಾಗಿ 3 ಕಿಲೋಮೀಟರ್ ಓಡಿದ ಗೋಮಾತೆ

    – ಕರುವಿನ ಸ್ಥಿತಿ ನೋಡಿ ಕಣ್ಣೀರಿಟ್ಟ ತಾಯಿಗೋವು

    ಭುವನೇಶ್ವರ: ವಾಹನವೊಂದು ಕರುವಿಗೆ ಡಿಕ್ಕಿ ಹೊಡೆದ ಪರಿಣಾಮ ಕರು ತೀವ್ರವಾಗಿ ಗಾಯಗೊಂಡಿತ್ತು. ಅದರ ಪಕ್ಕದಲ್ಲೇ ಇದ್ದ ತಾಯಿ ಗೋವು ಅದನ್ನು ನೋಡಿ ಮರುಗುತ್ತಿತ್ತು ಇಂಥದೊಂದು ಘಟನೆ ಒಡಿಶಾದಲ್ಲಿ ಕಂಡುಬಂದಿದೆ.

    ವಾಹನ ಡಿಕ್ಕಿ ಹೊಡೆದು ಕರು ಗಾಯಗೊಂಡು ನರಳುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಗಾಯಗೊಂಡ ಕರುವನ್ನು ತಳ್ಳುವ ಗಾಡಿಯೊಂದರಲ್ಲಿ ಹಾಕಿಕೊಂಡು ಜಿಲ್ಲಾ ಪಶುವೈದ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಗಾಯಗೊಂಡ ಕರುವನ್ನು ಸ್ಥಳೀಯರು ಚಿಕಿತ್ಸೆಗೆ ಕರೆದೊಯ್ಯುವಾಗ ತಾಯಿಗೋವು ಕೂಡ ಕರು ಇದ್ದ ತಳ್ಳುವ ಗಾಡಿಯನ್ನು ಹಿಂಬಾಲಿಸಿಕೊಂಡು ಹೋಗಿದೆ. ಸರಿಸುಮಾರು ಮೂರು ಕಿಲೋಮೀಟರ್ ದೂರ ಹಿಂಬಾಲಿಸಿಕೊಂಡು ಹೋಗಿದೆ.

    ಗಾಯಗೊಂಡ ತನ್ನ ಕರುವಿಗಾಗಿ ಮರುಗಿದ ಆ ಗೋಮಾತೆಯ ಮಾತೃಪ್ರೇಮಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೂ ಕರುವಿನ ರಕ್ಷೆಣೆಗೆ ಬಂದಿದ್ದ ಸ್ಥಳೀಯರ ಕುರಿತಾಗಿಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕರು ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಚೇತರಿಸಿಕೊಳ್ಳುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಕೊರೊನಾ ನಿರ್ವಹಣೆಯಲ್ಲಿ ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾಗಿದೆ: ಪ್ರಮೋದ್ ಮುತಾಲಿಕ್

    ಕೊರೊನಾ ನಿರ್ವಹಣೆಯಲ್ಲಿ ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾಗಿದೆ: ಪ್ರಮೋದ್ ಮುತಾಲಿಕ್

    – ಸರ್ಕಾರ ಈ ಕುರಿತು ಉತ್ತರಿಸಬೇಕು

    ಧಾರವಾಡ: ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ನೋಟದಲ್ಲಿ ಕೊರೊನಾ ಪ್ರಕ್ರಿಯೆಯಲ್ಲಿ ಗೊಂದಲ ಕಾಣುತ್ತಿದೆ. ರಾಜ್ಯ ಸರ್ಕಾರ ಡಾ.ಕಜೆಯವರ 70 ಲಕ್ಷ ಆಯುರ್ವೇದಿಕ್ ಮಾತ್ರೆ ಖರೀದಿಸಿದೆ ಅದನ್ನು ಎಲ್ಲಿಯೂ ವಿತರಿಸುತ್ತಿಲ್ಲ. ಇದರಿಂದ ಸರ್ಕಾರದ ಮೇಲೆ ಸಂಶಯ ಬರುತ್ತದೆ. ವಿರೋಧ ಪಕ್ಷದವರ ಆರೋಪ ಸತ್ಯಕ್ಕೆ ಹತ್ತಿರವಾದದ್ದು, ಅಲೋಪತಿಕ್ ಮಾಫಿಯಾ ದೊಡ್ಡದಿದೆ. ಈ ಲಾಬಿಗೆ ಕಜೆಯವರ ಔಷಧ ಬಲಿಯಾಗಿದೆ ಎಂದು ಅಭಿಪ್ರಾಯಪಟ್ಟರು.

    ಇದೇ ವೇಳೆ ಬಕ್ರೀದ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಗೋವುಗಳನ್ನು ರಕ್ಷಣೆ ಮಾಡಬೇಕು. ವಿಜಯಪುರದ ಡಿಸಿ ನಿರ್ಧಾರ ಒಳ್ಳೆಯದಿದೆ, ಅಕ್ರಮ ಗೋವು ಸಾಗಾಟ ತಡೆಗೆ ಎಂಟು ತಂಡ ರಚಿಸಿ ಡಿಸಿ ಒಳ್ಳೆಯ ಕ್ರಮ ಕೈಗೊಂಡಿದ್ದಾರೆ. ಇದೇ ರೀತಿಯ ಕ್ರಮ ಎಲ್ಲಡೆ ಆಗಬೇಕು. ಈಗಾಗಲೇ ಅನೇಕ ಕಡೆ ಗೋವು ಕಳ್ಳತನವಾಗಿವೆ, ಅವು ನಮ್ಮ ಗಮನಕ್ಕೆ ಬಂದಿವೆ ಎಂದ ಅವರು, ಕೂಡಲೇ ಈ ಬಗ್ಗೆ ಎಲ್ಲ ಡಿಸಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಹಸುಕರುಗಳ ಹೊಸ ಲೋಕ ಗೋಮಂಡಲ

    ಹಸುಕರುಗಳ ಹೊಸ ಲೋಕ ಗೋಮಂಡಲ

    ಮಂಗಳೂರು: ಭಾರತೀಯ ಪರಂಪರೆಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಅಂತಹ ಗೋಮಾತೆಯ ಪೂಜೆಯನ್ನು ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತದೆ. ಆದರೆ ನಗರ ವಾಸಿಗಳಿಗೆ ಇಂತಹ ಅವಕಾಶ ಸಿಗೋದು ಕಡಿಮೆ. ಹೀಗಾಗಿ ಮಂಗಳೂರು ನಗರದಲ್ಲಿ ನಗರವಾಸಿಗಳಿಗಾಗಿ ಬೃಹತ್ ಗೋಮಂಡಲ ಅನ್ನುವ ಗೋವುಗಳ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

    ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಗೋಮಂಡಲ ಆಯೋಜಿಸಲಾಗಿದ್ದು, ಜನರು ಗೋಮಾತೆಗೆ ಪೂಜೆ ಸಲ್ಲಿಸಿ ಪುನೀತರಾದರು. ಪಜೀರು ಬೀಜಗುರಿ ಗೋವನಿತಾಶ್ರಯ ಟ್ರಸ್ಟ್‍ನ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್ ಗೋಮಂಡಲ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು. ಗೋಮಂಡಲದ ಸುತ್ತಲೂ ವೃತ್ತಾಕಾರದಲ್ಲಿ ದನ ಕರುಗಳನ್ನು ಇರಿಸಲಾಗಿತ್ತು. ಇಲ್ಲಿರುವ ಎಲ್ಲ ಗೋವುಗಳಿಗೆ ವಿಶೇಷ ಗೋಪೂಜೆ, ಗೋ ಆರತಿ ಮತ್ತು ಆಹಾರ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಗೋಧೂಳಿ ಲಗ್ನದ ಪ್ರಾತ್ಯಕ್ಷಿಕೆ ಇಲ್ಲಿ ನಡೆಯಿತು.

    ಗೋಮಂಡಲದ ಅಂಗವಾಗಿ ಗೋಪಾಲಕೃಷ್ಣನ ಮೂರ್ತಿಯನ್ನೊಳಗೊಂಡ ರಥವನ್ನು ಪ್ರತಿಷ್ಠಾಪಿಸಲಾಗಿತ್ತು. ನೂರಾರು ಗೋವುಗಳ ಮಧ್ಯೆ ಎರಡು ದಿನಗಳಲ್ಲಿ ಮೂರು ಹೊತ್ತು ಪೂಜೆ, ಸೌತಡ್ಕ ಗಣಪತಿ ದೇವರ ಮಾದರಿಯಲ್ಲಿರುವ ಗಣಪತಿ ಮೂರ್ತಿ ಹಾಗೂ ಅಪರೂಪದ ಬಸವರೂಪಿ ಹಾವೇರಿಯ ಶ್ರೀ ಮೂಕಪ್ಪ ಸ್ವಾಮಿಯ ದರ್ಶನ ಇತ್ಯಾದಿಗಳಿತ್ತು.

    ಗೋಮಂಡಲದಲ್ಲಿ ಐದು ಅಡಿ ಉದ್ದದ ಶಿವಲಿಂಗ ಪ್ರತಿಷ್ಠಾಪಿಸಿ, ಅದರ ಪಕ್ಕದಲ್ಲಿ 8 ವರ್ಷದ ನಂದಿಯನ್ನು ನಿಲ್ಲಿಸಿರುವುದು ಆಕರ್ಷಕವಾಗಿತ್ತು. ಟ್ರಸ್ಟ್ ನ ಹಟ್ಟಿಯಲ್ಲಿರುವ ಸುಮಾರು 6 ಅಡಿ ಎತ್ತರದ ಬೃಹತ್ ಹೋರಿಯನ್ನು ನಂದಿಯಾಗಿ ನಿಲ್ಲಿಸಲಾಗಿತ್ತು. ಟ್ರಸ್ಟ್ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಕಪಿಲಾ, ಅಮೃತಾ, ಗಂಗಾ ಮತ್ತು ಗೌರಿ ಹಟ್ಟಿಗಳಲ್ಲಿರುವ 300ಕ್ಕೂ ಹೆಚ್ಚು ಗೋವುಗಳ ಪೈಕಿ 100 ಗೋವುಗಳನ್ನು ಗೋಮಂಡಲಕ್ಕೆ ಕರೆ ತರಲಾಗಿತ್ತು.

    ಅಂಚೆ ಚೀಟಿ ಪ್ರದರ್ಶನ:
    ಪ್ರಶಾಂತ್ ಶೇಟ್ ಅವರು ಸಂಗ್ರಹಿಸಿದ 74 ದೇಶಗಳ ಗೋವಿನ ಚಿತ್ರವುಳ್ಳ ಅಂಚೆ ಚೀಟಿ ಪ್ರದರ್ಶನವು ಗಮನ ಸೆಳೆಯಿತು. ಸಾವಯವ ವಸ್ತುಗಳ ಮಳಿಗೆ, ದೇಸೀಯ ಉತ್ಪನ್ನಗಳ ಮಳಿಗೆಗಳು ಸಹಿತ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಿದ್ದವು. ಆಗಮಿಸಿದ ಗೋಭಕ್ತರು, ಮಕ್ಕಳು ದನಕರುಗಳ ನಡುವೆ ಸೆಲ್ಫಿ ತೆಗೆದು ಸಂಭ್ರಮಿಸಿದರು.

    ಶ್ರೀ ಮೂಕಪ್ಪ ಸ್ವಾಮಿಯ ದರ್ಶನ:
    ಹಾವೇರಿಯ ಅಪರೂಪದ ಶ್ರೀ ಮೂಕಪ್ಪ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸವರೂಪಿಯಾದ ಮೂಕಪ್ಪ ಸ್ವಾಮಿಯನ್ನು ಪೂಜೆ ಮಾಡಿದ ಜನ ದರ್ಶನ ಪಡೆದು ಪುನೀತರಾದರು. ದನ ಕರುಗಳನ್ನೇ ನೋಡದ ಎಳೆಯ ಮಕ್ಕಳಿಗೆ ದನಕರುಗಳನ್ನು ನೋಡುವುದು ಹೊಸ ಅನುಭವವಾಗಿತ್ತು. ಈ ಹಿಂದೆ 2012ರಲ್ಲಿ ಸಣ್ಣ ಮಟ್ಟದಲ್ಲಿ ಗೋಮಂಡಲ ನಡೆಸಲಾಗಿತ್ತು.

    ಪರಿಸರ ಸಂರಕ್ಷಣೆಯೊಂದಿಗೆ ಗೋ ಸಂರಕ್ಷಣೆಯ ಅಗತ್ಯ. ಪಶು ಸಂಗೋಪನೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಬೃಹತ್ ಗೋಮಂಡಲ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    ಅಯೋಧ್ಯೆ ರಾಮ ಮಂದಿರ:
    ಮಂಗಳೂರಿನ ಶಾರದಾ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ರೋಹಿತ್ ರಚಿಸಿದ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅಯೋಧ್ಯೆಯ ರಾಮ ಮಂದಿರವೇ ನೆಹರೂ ಮೈದಾನದಲ್ಲಿ ಸೃಷ್ಟಿಯಾದಂತೆ ಭಾಸವಾಗುವಂತಿದೆ ಈ ಮಾದರಿ.

  • ಪೊಲೀಸರು ಹಿಡಿದುಕೊಟ್ಟ ಗೋವುಗಳ ರೋದನ ಕೇಳದಾಯಿತೇ ಮಂಗಳೂರಿನ  ಗೋ ಭಕ್ತರಿಗೆ !

    ಪೊಲೀಸರು ಹಿಡಿದುಕೊಟ್ಟ ಗೋವುಗಳ ರೋದನ ಕೇಳದಾಯಿತೇ ಮಂಗಳೂರಿನ ಗೋ ಭಕ್ತರಿಗೆ !

    -ಕಸಾಯಿಗಳ ಕೈಯಿಂದ ಪೊಲೀಸರು ರಕ್ಷಿಸಿದ್ರೂ ಗೋವುಗಳನ್ನು ಸಾಕಲ್ಲ ಎಂದ ಗೋಶಾಲೆಗಳು !
    -ಫಂಡ್ ಇಲ್ಲವೆಂದು ಗೋವಿನ ಸಾಕಣೆಗೆ ನಿರಾಕರಿಸಿದ ಬಜರಂಗದಳ, ವಿಹಿಂಪ ಮುಖಂಡರು !

    ಮಂಗಳೂರು: ಕರಾವಳಿಯಲ್ಲಿ ಗೋ ಕಳ್ಳತನ, ಗೋಹತ್ಯೆ ವಿಚಾರದಲ್ಲಿ ಗಲಾಟೆ ನಡೆದಿದ್ದನ್ನು ಕೇಳಿದ್ದೇವೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದೊಯ್ದ ವಿಚಾರ ಹಿಂದೂ – ಮುಸ್ಲಿಮರ ಮಧ್ಯೆ ಹಿಂಸೆಗೆ ಕಾರಣವಾಗಿದ್ದನ್ನು ಕಂಡಿದ್ದೇವೆ. ಪೊಲೀಸರು ಗೋ ಹಂತಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹಿಂದೂ ಸಂಘಟನೆಗಳು ಬೀದಿ ರಂಪ ಮಾಡಿದ್ದನ್ನೂ ಸಹ ನೋಡಿದ್ದೇವೆ. ಗೋರಕ್ಷಣೆಯ ವಿಚಾರದಲ್ಲಿ ರಂಪಾಟಕ್ಕೆ ವೇದಿಕೆಯಾಗಿರುವ ಹಿಂದೂ ಸಂಘಟನೆಗಳ ಶಕ್ತಿ ಕೇಂದ್ರ ಮಂಗಳೂರಿನಲ್ಲಿ ತದ್ವಿರುದ್ಧ ಘಟನೆಯೊಂದು ನಡೆದಿದ್ದು, ಸಂಘಟನೆಗಳ ಮಾನವನ್ನೇ ಹರಾಜಾಗುವಂತೆ ಮಾಡಿದೆ.

    ಮಂಗಳೂರಿನ ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಗಸ್ತಿನಲ್ಲಿದ್ದಾಗ, 10 ಚಕ್ರದ ಕಂಟೇನರ್ ಲಾರಿಯೊಂದು ಅನುಮಾನಾಸ್ಪದ ನೆಲೆಯಲ್ಲಿ ತೆರಳುತ್ತಿದ್ದುದು ಕಂಡುಬಂದಿತ್ತು. ಸುರತ್ಕಲ್ ನಿಂದ ಫಾಲೋ ಮಾಡುತ್ತಾ ಬಂದ ಪೊಲೀಸರು, ಪಂಪ್ ವೆಲ್ ವೃತ್ತದಲ್ಲಿ ಲಾರಿಯನ್ನು ಅಡ್ಡಗಟ್ಟಿದಾಗ, ಮುಚ್ಚಿದ ಕಂಟೇನರ್ ನಲ್ಲಿ ಗೋವುಗಳನ್ನು ತುಂಬಿಕೊಂಡಿದ್ದು ಗಮನಕ್ಕೆ ಬಂದಿದೆ. 24 ದೊಡ್ಡ ಗಾತ್ರದ ಹೈಬ್ರಿಡ್ ತಳಿಯ ಹೋರಿಗಳು ಮತ್ತು ಏಳು ಎಮ್ಮೆಗಳನ್ನು ಒಂದೇ ಲಾರಿಯಲ್ಲಿ ತುಂಬಿಸಲಾಗಿತ್ತು. ಯಾವುದೇ ದಾಖಲೆ ಪತ್ರಗಳಿಲ್ಲದೆ, ಉಸಿರುಕಟ್ಟಿದ ಸ್ಥಿತಿಯಲ್ಲಿ ಸಾಗಿಸುತ್ತಿದ್ದ ಕಾರಣ, ಗೋವುಗಳನ್ನು ಪೊಲೀಸರೇ ರಕ್ಷಣೆ ಮಾಡಿದ್ದರು.

    ಹುಬ್ಬಳ್ಳಿಯಿಂದ ಮಂಗಳೂರಿನ ಮೂಲಕ ಕೇರಳಕ್ಕೆ ಸಾಗಿಸಲ್ಪಡುತ್ತಿದ್ದ ಗೋವುಗಳು ಪೊಲೀಸರ ಕಾರ್ಯಾಚರಣೆಯಿಂದ ಬದುಕುಳಿದಿದ್ದವು. ಲಾರಿಯಲ್ಲಿದ್ದ ಇಬ್ಬರು ಮತ್ತು ಲಾರಿಗೆ ಬೆಂಗಾವಲಾಗಿ ಬರುತ್ತಿದ್ದ ಇನ್ನೋವಾ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಬಳಿಕ ಪ್ರಕರಣವನ್ನು ಮಂಗಳೂರಿನ ನಗರ ಠಾಣೆಗೆ ವರ್ಗಾಯಿಸಿದ್ದರು. ಆದರೆ, ವಶಕ್ಕೆ ಪಡೆದ ಗೋವುಗಳನ್ನು ಸಲಹುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿ ಮಂಗಳೂರಿನ ಗೋಶಾಲೆಗಳಲ್ಲಿ ಗೋವುಗಳನ್ನು ತಾತ್ಕಾಲಿಕ ನೆಲೆಯಲ್ಲಿ ಇರಿಸಿಕೊಳ್ಳಲು ಪೊಲೀಸರು ಮನವಿ ಮಾಡಿದ್ದರು. ಆದರೆ, ದೊಡ್ಡ ಗಾತ್ರದ ಎತ್ತು ಮತ್ತು ಎಮ್ಮೆಗಳಾಗಿದ್ದರಿಂದ ಅವುಗಳ ಪಾಲನೆಗೆ ಗೋಶಾಲೆಗಳು ನಿರಾಕರಿಸಿದ್ದವು.

    ಗೋವುಗಳನ್ನು ಪೊಲೀಸ್ ಠಾಣೆಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲದ ಕಾರಣ ಕೊನೆಗೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿಗೆ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕಾಶ್ ಶೆಟ್ಟಿ ಮರುದಿನ ತನ್ನ ಬಜ್ಪೆ ಬಳಿಯ ಕೆಂಜಾರಿನ ಎಸ್ಟೇಟಿಗೆ ಕೊಂಡೊಯ್ದು ಗೋವುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಿದ್ದಾರೆ. ಆದರೆ, ಇಲ್ಲಿ ಪ್ರಶ್ನೆ ಇರುವುದು ಗೋ ಹತ್ಯೆ ವಿಚಾರದಲ್ಲಿ ಬೀದಿ ರಂಪ ಮಾಡುವ ಹಿಂದೂ ಸಂಘಟನೆಗಳದ್ದು.

    ಗೋ ಕಳ್ಳರನ್ನು ಪೊಲೀಸರು ಹಿಡಿಯಲ್ಲವೆಂದು ಆರೋಪಿಸಿ ಪ್ರತಿಭಟನೆ ಮಾಡುವ ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ, ಪೊಲೀಸರು ಹಿಡಿದು ಕೊಟ್ಟ ಗೋವುಗಳನ್ನು ಸಲಹುವುದಕ್ಕೆ ಸಾಧ್ಯವಿಲ್ಲವೇ? ಅಲ್ಲದೆ, ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಗೆ ಸೇರಿದ ಬಹಳಷ್ಟು ಗೋಶಾಲೆಗಳಿವೆ. ಗೋವುಗಳನ್ನು ಸಲಹಲು ಸರ್ಕಾರಿ ಫಂಡ್ ಇಲ್ಲವೆನ್ನುವ ಈ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಸರ್ಕಾರದ ಅನುದಾನ ಲಭಿಸಿದ್ದನ್ನು ನೆನಪಿಸಬೇಕು.

    ಮಂಗಳೂರು ನಗರ ಹೊರವಲಯದ ಪಜೀರಿನಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ ಸೇರಿದ ಗೋಶಾಲೆಗೆ 12 ಲಕ್ಷ ರೂ. ಸೇರಿದಂತೆ ಮಂಗಳೂರಿನ ವಿವಿಧ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ 25 ಲಕ್ಷ ರೂ.ಗಳ ಚೆಕ್ ವಿತರಿಸಿದ್ದರು. ಆದರೆ, ಈಗ ಗೋವುಗಳ ಪಾಲನೆಗೆ ಮಾತ್ರ ಗೋಶಾಲೆಗಳಿಗೆ ಫಂಡ್ ಇಲ್ಲವೆಂದು ಹಿಂದೂ ಸಂಘಟನೆಗಳು ನೆಪ ಹೇಳುತ್ತಿರುವುದು ಮೂರು ಮುಕ್ಕಾಲಿನ ಮರ್ಯಾದೆಯನ್ನೂ ಕಳಕೊಂಡಂತಾಗಿದೆ.

    ವಿಶೇಷ ಅಂದರೆ, ಬಹುತೇಕ ಗೋಶಾಲೆಗಳಿಗೆ ಸರ್ಕಾರದ ಗೋಮಾಳ ಭೂಮಿಯನ್ನು ಉಚಿತವಾಗಿ ಕೊಡಲಾಗಿದೆ. ಗೋವುಗಳ ಪಾಲನೆಯ ಉದ್ದೇಶದಿಂದಲೇ ಪಜೀರು ಗೋಶಾಲೆಗೆ ಹತ್ತು ಎಕರೆ ಗೋಮಾಳ ಭೂಮಿಯನ್ನು ನೀಡಲಾಗಿತ್ತು ಅನ್ನೋದನ್ನು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿ ಹೇಳುತ್ತಾರೆ. ಅಲ್ಲದೆ, ಪಜೀರು ಗೋಶಾಲೆ ವಿಶ್ವ ಹಿಂದು ಪರಿಷತ್ತಿನ ಮುಖಂಡರಿಗೆ ಸೇರಿದ್ದರೂ, ಗೋವುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಗೋವಿನ ವಿಚಾರದಲ್ಲಿ ಬೀದಿ ರಾಜಕೀಯ ಮಾಡುವ ಸಂಘಟನೆಗಳ ಮುಖವಾಡವನ್ನೇ ಕಳಚುವಂತೆ ಮಾಡಿದೆ.

    ಎರಡು ತಿಂಗಳ ಹಿಂದೆ ಮಂಗಳೂರಿನ ಸ್ಮಾರ್ಟ್ ಸಿಟಿಯ ಅನುದಾನದಡಿ 15 ಕೋಟಿ ಮೊತ್ತವನ್ನು ಕುದ್ರೋಳಿ ಕಸಾಯಿಖಾನೆಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಸಾಯಿಖಾನೆಗೆ ಹಣ ನೀಡುತ್ತಾರೆ, ಗೋಶಾಲೆಗೆ ಅನುದಾನ ನೀಡಲ್ಲ ಅನ್ನುವ ಆರೋಪವನ್ನು ಹಿಂದೂ ಸಂಘಟನೆಗಳು ಮಾಡಿದ್ದವು. ಅಲ್ಲದೆ, ಕುದ್ರೋಳಿ ಕಸಾಯಿಖಾನೆಗೆ ಅನುದಾನ ನೀಡದಂತೆ ಪ್ರತಿಭಟನೆಯನ್ನೂ ನಡೆಸಿದ್ದವು. ಇದೇ ವಿಚಾರ ಮಂಗಳೂರಿನ ಸಂಸದ ನಳಿನ್ ಕುಮಾರ್ ಮತ್ತು ಸಚಿವ ಯು.ಟಿ.ಖಾದರ್ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿತ್ತು.

    ದೊಡ್ಡ ಗಾತ್ರದ ಹೋರಿಗಳನ್ನು ದೇವಸ್ಥಾನಗಳಲ್ಲಿ ಸಾಕಲು ಅವಕಾಶ ಇದ್ದರೂ, ಈ ಕೆಲಸವನ್ನು ಸಂಘಟನೆಗಳು ಮಾಡಲು ತಯಾರಿಲ್ಲ. ಮಂಗಳೂರಿನ ಗೋರಕ್ಷಕರು ಈಗೆಲ್ಲಿದ್ದಾರೆ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv