Tag: govt school

  • ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ಹೈದರಾಬಾದ್: ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಓರ್ವ ಉತ್ತಮ ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ಅನೇಕ ಘಟನೆಗಳನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಜಗ್ಗಿತಲ ಪಟ್ಟಣದ 12 ವರ್ಷದ ನ್ಯೂಸ್ ಪೇಪರ್ ಹುಡುಗ ಸಚಿವರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ಸೈಕಲ್ ಮೂಲಕ ಹುಡುಗ ನ್ಯೂಸ್ ಪೇಪರ್ ಹಾಕುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವೀಡಿಯೋವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದು, ಇದೇ ವೀಡಿಯೋ ಸಚಿವರ ಗಮನ ಸೆಳೆದಿದೆ.

    ವೀಡಿಯೋದಲ್ಲಿ ಏನಿದೆ?
    ಹುಡುಗ ಸೈಕಲ್‍ನಲ್ಲಿ ಪೇಪರ್ ಹಾಕುವಾಗ ಬೈಕ್ ಮೇಲೆ ಬರುವ ವ್ಯಕ್ತಿ ಹುಡುಗನ ಹತ್ತಿರ ಬೈಕ್ ನಿಲ್ಲಿಸಿ ನಿನ್ನ ಶಾಲೆ ಯಾವುದು ಎಂದು ಪ್ರಶ್ನಿಸುತ್ತಾರೆ. ಸರ್ಕಾರಿ ಹೈಸ್ಕೂಲ್ ಎಂದು ಉತ್ತರಿಸುತ್ತಾನೆ. ಅದು ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದಾಗ ಹಳೆ ಬಸ್ ನಿಲ್ದಾಣದ ಬಳಿ ಇದೆ ಎಂದು ಹುಡುಗ ಉತ್ತರಿಸುತ್ತಾನೆ. ಈ ವಯಸ್ಸಿನಲ್ಲೇ ಪೇಪರ್ ಹಾಕುತ್ತಿದ್ದಿಯ ಎಂದು ಕೇಳಿದಾಗ, ಹಾಕಬಾರದಾ ಎಂದು ಹುಡುಗನೇ ಮುರು ಪ್ರಶ್ನಿಸುತ್ತಾನೆ. ಹಾಗೇನು ಇಲ್ಲ, ನೀನು ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಆದರೆ ಓದಿಕೊಳ್ಳುವ ವಯಸ್ಸಿನಲ್ಲಿ ಈ ರೀತಿ ಕೆಲಸ ಮಾಡುತ್ತಿದ್ದೀಯಲ್ಲ ಅದಕ್ಕೆ ಕೇಳಿದೆ ಎಂದು ಬೈಕ್ ಸವಾರ ಹೇಳುತ್ತಾರೆ.

    ಬೈಕ್ ಸವಾರರ ಪ್ರಶ್ನಗೆ ಉತ್ತರಿಸಿದ ಬಾಲಕ ಚೆನ್ನಾಗಿ ಓದುತ್ತೇನೆ. ಹಾಗೇ ಕೆಲಸವನ್ನು ಮಾಡುತ್ತೇನೆ. ಅದರಲ್ಲೇನು ತಪ್ಪಿದೆ ಎನ್ನುತ್ತಾರೆ. ತಪ್ಪೇನು ಇಲ್ಲ ಓದಿಕೊಳ್ಳುವ ವಯಸ್ಸಿನಲ್ಲಿ ನೀನು ಇಷ್ಟು ಕಷ್ಟಪಡುತ್ತಿದ್ದೀಯಲ್ಲ ಅದು ನನಗೆ ಇಷ್ಟವಾಯಿತ್ತು ಅದಕ್ಕೆ ಕೇಳಿದೆ ಎನ್ನುತ್ತಾರೆ. ಈಗ ಕಷ್ಟಪಟ್ಟರೆ ಏನಾದರೂ ಸಾಧಿಸಬಹುದು ಎಂದು ಹೇಳುತ್ತಾನೆ.

    ಈ ವೀಡಿಯೋ ಟ್ವೀಟ​ರ್‌​ನಲ್ಲಿ ಶೇರ್ ಮಾಡಿಕೊಂಡಿರುವ ಕೆ.ಟಿ ರಾಮರಾವ್, ಜಗ್ಗಿತಲ ಪಟ್ಟಣದ ಈ ವೀಡಿಯೋ ನಿಜಕ್ಕೂ ನನಗೆ ಇಷ್ಟವಾಯಿತು. ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ ಪ್ರಕಾಶ್ ಅವರ ನಂಬಿಕೆ, ಚಿಂತನೆ ಮತ್ತು ಅಭಿವ್ಯಕ್ತಿಯ ಸ್ಥಿರತೆ ನನಗೆ ಇಷ್ಟವಾಯಿತ್ತು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕನ ಕುರಿತಾಗಿ ಮೆಚ್ಚುಗೆ ವ್ಯಕ್ತವಾಗಿದೆ.

  • ತಮಿಳುನಾಡು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಪದವಿ ಪ್ರವೇಶದ ವೇಳೆ ಶೇ.7.5 ಮೀಸಲಾತಿ

    ತಮಿಳುನಾಡು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಪದವಿ ಪ್ರವೇಶದ ವೇಳೆ ಶೇ.7.5 ಮೀಸಲಾತಿ

    ಚೆನ್ನೈ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ತಮಿಳುನಾಡು ಸರ್ಕಾರ ಗುಡ್‍ನ್ಯೂಸ್ ನೀಡಿದೆ. 6 ರಿಂದ 12ನೇ ತರಗತಿಯವರೆಗೆ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿ ವೇಳೆ ಶೇ.7.5 ಮೀಸಲಾತಿ ಕಲ್ಪಿಸುವ ಮಸೂದೆ ಮಂಡನೆಯಾಗಿದೆ.

    ಎಂಜಿನಿಯರಿಂಗ್, ಕೃಷಿ, ಮೀನುಗಾರಿಕೆ ಮತ್ತು ಕಾನೂನಿನಂತಹ ವೃತ್ತಿಪರ ಶಿಕ್ಷಣದಲ್ಲಿ ಶೇ.7.5 ಮೀಸಲಾತಿ ನೀಡುವ ಮಸೂದೆಯನ್ನು ಮುಖ್ಯಮಂತ್ರಿ ಸ್ಟಾಲಿನ್ ವಿಧಾನಸಭೆಯಲ್ಲಿ ಇಂದು ಮಂಡಿಸಿದ್ದಾರೆ.

    ಮೀಸಲಾತಿ ಜಾರಿಯಾದರೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳು, ಖಾಸಗಿ ಕಾಲೇಜುಗಳು, ಸರ್ಕಾರಿ ಅನುದಾನಿತ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ನೀಡಲಾಗುವ ಪದವಿ ಕೋರ್ಸ್‍ಗಳ ಪ್ರವೇಶದ ವೇಳೆ ಮೀಸಲಾತಿಯನ್ನು ಪಡೆಯಲಿದ್ದಾರೆ.  ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು! 

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ಸಂಬಂಧ ನಿವೃತ್ತ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ ಮುರುಗೇಶನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗದ ಶಿಫಾರಸಿನಂತೆ ಕಳೆದ ತಿಂಗಳು ಮಸೂದೆ ಮಂಡಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿತ್ತು. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಸರ್ಕಾರ ತಿಳಿಸಿತ್ತು.

    ಮಸೂದೆಯನ್ನು ಮಂಡಿಸಿ ಮಾತನಾಡಿದ ಸ್ಟಾಲಿನ್, ಬಡತನ ಮತ್ತು ಅರಿವಿನ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳಿಂದ ವೃತ್ತಿಪರ ಕೋರ್ಸ್ ಪ್ರವೇಶಿಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ. ಈ ಸಂಖ್ಯೆ ಏರಿಸಲು ಈ ಮಸೂದೆ ನೆರವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    ಸರ್ಕಾರಿ ಶಾಲೆಯಲ್ಲಿ ಓದಿದವರ ಪೈಕಿ 2020-21ರಲ್ಲಿ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಕೇವಲ ಶೇ.0.83 ವಿದ್ಯಾರ್ಥಿಗಳು ದಾಖಲಾಗಿದ್ದರು. ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ರಮವಾಗಿ ಶೇ.6.31 ಮತ್ತು ಶೇ.0.44 ರಷ್ಟು ಮಂದಿ ದಾಖಲಾಗಿದ್ದರೆ, ಪಶುವೈದ್ಯಕೀಯ ವಿಜ್ಞಾನದಲ್ಲಿ ಶೇ.3.7, ಮೀನುಗಾರಿಕೆಯಲ್ಲಿ ಶೇ.4.89, ತಿರುಚಿಯಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಶೇ.1ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದರು.

  • ಸರ್ಕಾರಿ ಶಾಲೆಗೆ ನಟ ಡಾಲಿಯಿಂದ ಪ್ರೊಜೆಕ್ಟರ್ ಕೊಡುಗೆ

    ಸರ್ಕಾರಿ ಶಾಲೆಗೆ ನಟ ಡಾಲಿಯಿಂದ ಪ್ರೊಜೆಕ್ಟರ್ ಕೊಡುಗೆ

    ಬೆಂಗಳೂರು: ಸಿನಿಮಾ ನಟ-ನಟಿಯರು ಶಾಲೆಗಳನ್ನು ದತ್ತು ಪಡೆಯುವುದು ಹಾಗೂ ಶಾಲೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದೀಗ ಇವರ ಸಾಲಿಗೆ ಡಾಲಿ ಧನಂಜಯ್ ಕೂಡ ಸೇರಿಕೊಂಡಿದ್ದಾರೆ.

    ಹೌದು. ಸದ್ಯ ಸ್ಯಾಂಡಲ್‍ವುಡ್ ನಲ್ಲಿ ಬ್ಯುಸಿ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ತಮ್ಮ ವೈವಿಧ್ಯಮಯ ನಟನೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಡಾಲಿ, ಹಳ್ಳಿಯ ಸರ್ಕಾರಿ ಶಾಲೆಯೊಂದಕ್ಕೆ ಪ್ರೊಜೆಕ್ಟರ್ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

    ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರೊಜೆಕ್ಟರ್ ಕೊಡಿಸಿದ್ದಾರೆ. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಹೀಗಾಗಿ ಅಲ್ಲಿನ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಟನಿಗೆ ಧನ್ಯವಾದ ಅರ್ಪಿಸಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯಿಸಿರುವ ಡಾಲಿ, ನಾನು ಹಳ್ಳಿಯಿಂದ ಬಂದವನು. ನಮ್ಮ ತಂದೆ ಸರ್ಕಾರಿ ಶಾಲೆಯ ಶಿಕ್ಷಕ. ಹೀಗಾಗಿ ನನಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಕೊಂಚ ಅರಿವಿದೆ. ಹಳ್ಳಿಯ ಶಾಲೆಗಳಲ್ಲಿ ತಂತ್ರಜ್ಞಾನ ಹೆಚ್ಚಾದರೆ ಮಕ್ಕಳು ಸಹ ಎಲ್ಲ ರೀತಿಯ ಕೋರ್ಸ್‍ಗಳನ್ನು ಮಾಡಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ. ಆ ನಿಟ್ಟಿನಲ್ಲಿ ನನ್ನದು ಬಹಳ ಚಿಕ್ಕ ಕೊಡುಗೆ ಎಂದು ಹೇಳಿದ್ದಾರೆ.

    ಡಾಲಿ ಸಹಾಯ ಇದೇ ಮೊದಲಲ್ಲ, ಈ ಹಿಂದೆ ಅಂದರೆ ಕೊರೊನಾ ಸಮಯದಲ್ಲಿ ಕೂಡ ಮುಖ್ಯಮಂತ್ರಿ ನಿಧಿಗೆ ಸಹಾಯ ಮಾಡಿದ್ದರು. ಲಾಕ್‍ಡೌನ್ ಸಮಯದಲ್ಲಿ ಸಾಕಷ್ಟು ಮಂದಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದರು. ಅಲ್ಲದೆ ಕಷ್ಟದಲ್ಲಿರುವವರಿಗೆ ಫುಡ್ ಪ್ಯಾಕೆಟ್, ಅನ್ನದಾನ ಮಾಡಿದ್ದರು.

    ಒಟ್ಟಿನಲ್ಲಿ ಕೇವಲ ನಟನೆ ಮಾಡಿಕೊಂಡು ಶೋಕಿ ಜೀವನ ನಡೆಸದೆ ತಮ್ಮನ್ನು ತಾವು ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಡಾಲಿಯ ಈ ಕಾರ್ಯ ಅಭಿಮಾನಿಗಳು ಹಾಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

     

    View this post on Instagram

     

    A post shared by Dhananjaya (@dhananjaya_ka)

  • ಪುನೀತ್, ಜೇಮ್ಸ್ ತಂಡದಿಂದ ಸರ್ಕಾರಿ ಶಾಲೆಗೆ 1 ಲಕ್ಷ ದೇಣಿಗೆ

    ಪುನೀತ್, ಜೇಮ್ಸ್ ತಂಡದಿಂದ ಸರ್ಕಾರಿ ಶಾಲೆಗೆ 1 ಲಕ್ಷ ದೇಣಿಗೆ

    ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಜೇಮ್ಸ್ ಚಿತ್ರತಂಡ ಸರ್ಕಾರಿ ಶಾಲೆಗೆ 1 ಲಕ್ಷ ದೇಣಿಗೆ ನೀಡಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಸರ್ಕಾರಿ ಶಾಲೆಗೆ ಜೇಮ್ಸ್ ಚಿತ್ರತಂಡ ಒಂದು ಲಕ್ಷ ಹಣ ದೇಣಿಗೆ ನೀಡಿದೆ. ಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯಗಳ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳ ಉತ್ತೇಜನಕ್ಕಾಗಿ ಈ ದೇಣಿಗೆ ನೀಡಲಾಗಿದೆ. ಸರ್ಕಾರಿ ಶಾಲೆಗೆ ಒಂದು ಲಕ್ಷ ಹಣ ನೀಡಿದ್ದಕ್ಕೆ ಗ್ರಾಮಸ್ಥರು, ಶಾಲಾ ಸಿಬ್ಬಂದಿ ಜೇಮ್ಸ್ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಹಿಂದೆ ಕೊಪ್ಪಳದಿಲ್ಲಿ ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ಅರಿತ ಪೊಲೀಸರು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಪುನೀತ್ ಅವರನ್ನು ಆಹ್ವಾನಿಸಿದ್ದರು. ಸಿನಿಮಾ ಶೂಟಿಂಗ್ ಮಧ್ಯೆ ಇದು ಕೂಡ ನನ್ನ ಕರ್ತವ್ಯ ಎಂದು ಅಷ್ಟೇ ಖುಷಿಯಿಂದ ಅಪ್ಪು ಕಾರ್ಯಕ್ರಮದಲ್ಲಿ ಹಾಜರಾಗಿ ಜನರಿಗೆ ಕೊರೊನಾ ಬಗ್ಗೆ ತಿಳಿ ಹೇಳಿದ್ದರು. ಕೊರೊನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು.

    ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಲಾಕ್‍ಡೌನ್ ವೇಳೆ ಬಿಡುವು ಪಡೆದಿದ್ದರು. ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಎನ್ನಲಾಗಿದ್ದು, ಹೀಗಾಗಿಯೇ ಜೇಮ್ಸ್ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

  • ಬಿರುಕು ಬಿಟ್ಟ ಕೊಠಡಿ, ಶಿಥಿಲಾವಸ್ಥೆ ಕಟ್ಟಡದಲ್ಲಿ ಪಾಠ- ಸಿದ್ದರಾಮಯ್ಯ ಮಗನ ಕ್ಷೇತ್ರದ ಶಾಲೆಯ ದುಸ್ಥಿತಿ

    ಬಿರುಕು ಬಿಟ್ಟ ಕೊಠಡಿ, ಶಿಥಿಲಾವಸ್ಥೆ ಕಟ್ಟಡದಲ್ಲಿ ಪಾಠ- ಸಿದ್ದರಾಮಯ್ಯ ಮಗನ ಕ್ಷೇತ್ರದ ಶಾಲೆಯ ದುಸ್ಥಿತಿ

    ಮೈಸೂರು: ಒಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಈಗ ಅವರ ಮಗ ಪ್ರತಿನಿಧಿಸುತ್ತಿರೋ ವರುಣಾ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚುವ ಸ್ಥಿತಿಗೆ ಬಂದಿದೆ.

    ನಂಜನಗೂಡು ತಾಲೂಕಿನ ಹಾಡ್ಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಬಾರಿ ಪ್ರತಿನಿಧಿಸಿ ಈಗ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರೋ ವರುಣಾ ವಿಧಾನಸಭಾ ಕ್ಷೇತ್ರದಲ್ಲಿದೆ. ಮಕ್ಕಳು ಪ್ರಾಣದ ಹಂಗು ತೊರೆದು ಇಲ್ಲಿ ಪಾಠ ಪ್ರವಚನಗಳನ್ನ ಕೇಳುವ ದುಃಸ್ಥಿತಿ ಈ ಶಾಲೆಯಲ್ಲಿದೆ. 1ನೇ ತರಗತಿಯಿಂದ 5ನೇ ತರಗತಿವರೆಗೆ ಸುಮಾರು 100 ಮಕ್ಕಳು ಈ ಶಾಲೆಯಲ್ಲಿ ಜೀವ ಕೈಯಲ್ಲಿ ಬಿಗಿ ಹಿಡಿದುಕೊಂಡು ಓದುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಬೇಕು ಎನ್ನುತ್ತಿದ್ದಾರೆ ಮಾಜಿ ಸಿಎಂ..!

    ಯಾವುದೇ ಕ್ಷಣದಲ್ಲಾದರೂ ಈ ಶಾಲೆಯ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ. ಶಿಥಿಲವಾಗಿರುವ ಕಟ್ಟಡದಲ್ಲೇ ತರಗತಿಗಳು ನಡೆಯುತ್ತಿವೆ. ಕಟ್ಟಡದಲ್ಲಿ ಭಾರೀ ಬಿರುಕುಗಳು ಇರುವ ಕಾರಣ ಶಾಲೆಯ ಹೊರಭಾಗದ ಜಗುಲಿಯೇ ಕ್ಲಾಸ್ ರೂಂಗಳಾಗಿದೆ. ಬಿಸಿಲು ಬಂದಾಗ ಬಿರುಕು ಬಿಟ್ಟ ಕೊಠಡಿಯಲ್ಲಿ ಮಕ್ಕಳು ಆಶ್ರಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಇದನ್ನೂ ಓದಿ: ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

    ಒಂದರ್ಥದಲ್ಲಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಜೀವದ ಹಂಗು ತೊರೆದು ಈ ಶಾಲೆಗೆ ಬರುತ್ತಿದ್ದಾರೆ. ಪರ್ಯಾಯ ಕಟ್ಟಡಕ್ಕಾಗಿ ಗ್ರಾಮಸ್ಥರು, ಶಾಲೆಯ ಎಸ್‍ಡಿಎಂಸಿ ಸದಸ್ಯರು, ಸ್ಥಳೀಯ ಶಾಸಕರಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತ ಎಸ್‍ಡಿಎಂಸಿ ಸದಸ್ಯ ಎಸ್.ಟಿ.ರವಿ ಆರೋಪಿಸಿದ್ದಾರೆ.

    ಶಾಲಾ ಕಟ್ಟಡದ ಈ ಸ್ಥಿತಿ ಕಂಡು ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಹೆದರುವ ಸ್ಥಿತಿ ಬಂದಿದೆ. ಖಾಸಗಿ ಶಾಲೆಗಳ ಹಾವಳಿಯ ಮಧ್ಯೆ ಈ ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದ್ದರು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಚ್ಚಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕುಮಾರ್ ಹೇಳಿದ್ದಾರೆ.

    ಈ ಸರ್ಕಾರಿ ಶಾಲೆ ಉಳಿಯಬೇಕು. ಇಲ್ಲಿನ ಮಕ್ಕಳು ನೆಮ್ಮದಿಯಾಗಿ ಪಾಠ ಕೇಳಬೇಕಾದರೆ ತುರ್ತಾಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕರು ಮುಂದಾಗಬೇಕು. ಇಲ್ಲದೆ ಇದ್ದರೆ ಈ ಶಾಲೆ ಮುಚ್ಚಿ ಹೋಗುವುದು ನಿಶ್ಚಿತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಶಾಲೆಗಳಲ್ಲಿ ಸಿಹಿ ಭೋಜನ ನೀಡ್ತಿದ್ದಾರೆ ಹುಕ್ಕೇರಿಯ ಅರಿಹಂತ

    ಸರ್ಕಾರಿ ಶಾಲೆಗಳಲ್ಲಿ ಸಿಹಿ ಭೋಜನ ನೀಡ್ತಿದ್ದಾರೆ ಹುಕ್ಕೇರಿಯ ಅರಿಹಂತ

    ಚಿಕ್ಕೋಡಿ: ರಾಜ್ಯಾದ್ಯಂತ ಬಿಸಿಯೂಟ ಯೋಜನೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅನ್ನಸಾಂಬರ್ ಕೊಡಲಾಗ್ತಿದೆ. ಆದ್ರೆ, ಪಬ್ಲಿಕ್ ಹೀರೋ ಬೆಳಗಾವಿಯ ಹುಕ್ಕೇರಿಯ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಅರಿಹಂತ ಪಾಟೀಲರ ಶ್ರಮದಿಂದ 120 ಶಾಲೆಗಳಲ್ಲಿ ವಾರಕ್ಕೆ 2 ದಿನ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅರಿಹಂತ ಬಿರಾದಾರ ಪಾಟೀಲ ಅವರ ವಿಶೇಷ ಕಾಳಜಿಯಿಂದ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ 2 ದಿನ ಶಾಲಾ ಮಕ್ಕಳಿಗೆ ಈ ವಿಶೇಷ ಭೋಜನ ನೀಡಲಾಗುತ್ತಿದೆ. ಅನ್ನ ಸಾಂಬಾರು ಅನ್ನೋ ನಿಯಮದ ಜೊತೆಗೆ ಹುಗ್ಗಿ, ಪರೋಟಾ, ಗುಲಾಬ್ ಜಾಮೂನನ್ನೂ ನೀಡಲಾಗ್ತಿದೆ ಅಂತ ಬಾಗೇವಾಡಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಜಯ ಖಾನಾಪೂರೆ ತಿಳಿಸಿದ್ದಾರೆ.

    ಅರಿಹಂತ ಬಿರಾದಾರ ಪಾಟೀಲರು 5 ವರ್ಷಗಳಿಂದ ಹುಕ್ಕೇರಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿದ್ದಾರೆ. ಸರ್ಕಾರ ನೀಡುವ ದವಸ ಧಾನ್ಯಗಳ ಜೊತೆಗೆ ದಾನಿಗಳು, ಶಿಕ್ಷಕರ ಸಹಾಯದಿಂದ ಕೆಲ ಪದಾರ್ಥಗಳನ್ನು ತರಿಸಿ 120ಕ್ಕೂ ಹೆಚ್ಚು ಅಡುಗೆ ಕೇಂದ್ರಗಳಲ್ಲಿ ಈ ವಿಶೇಷ ಊಟ ನೀಡುತ್ತಿದ್ದಾರೆ.

    ಅರಿಹಂತ ಅವರ ಈ ಯೋಜನೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಗಣನೀಯ ಏರಿಕೆ ಕಂಡಿದೆ.

    https://www.youtube.com/watch?v=8KqAbbUwah4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮಸ್ಥರು, ದಾನಿಗಳನ್ನು ಒಗ್ಗೂಡಿಸಿ ಶಾಲೆ ನಿರ್ಮಿಸಿದ್ರು ರಾಯಚೂರಿನ ಸೋಮಶೇಖರ್

    ಗ್ರಾಮಸ್ಥರು, ದಾನಿಗಳನ್ನು ಒಗ್ಗೂಡಿಸಿ ಶಾಲೆ ನಿರ್ಮಿಸಿದ್ರು ರಾಯಚೂರಿನ ಸೋಮಶೇಖರ್

    ರಾಯಚೂರು: ಮನಸ್ಸಿದ್ದರೆ ಮಾರ್ಗ ಅಂಥ ಸಾಧನೆ ಮಾಡಿರೋ ಹಲವರ ಬಗ್ಗೆ ನಾವು ತೋರಿಸಿದ್ದೇವೆ. ಈ ಪಟ್ಟಿಗೆ ಲಿಂಗಸುಗೂರಿನ ಬೇಡರಕಾಲರಕುಂಟಿ ಗ್ರಾಮದ ಮೇಷ್ಟ್ರು ಹಾಗೂ ಊರಿನ ಜನ ಸೇರಿದ್ದಾರೆ.

    ಹೌದು. ರಾಯಚೂರಿನ ಲಿಂಗಸುಗೂರು ತಾಲೂಕಿನ ಬೇಡರಕಾಲರಕುಂಟಿ ಗ್ರಾಮದ ಆಂಜನೇಯ ದೇವಾಲಯದ ಬಳಿ 2 ಕೋಣೆಯಲ್ಲಿ ನಡೆಯುತ್ತಿದ್ದ ಶಾಲೆಯು ಮುಖ್ಯೋಪಧ್ಯಾಯ ಸೋಮಶೇಖರ್ ಅವರಿಂದಾಗಿ ಈಗ ಭವ್ಯವಾಗಿ ತಲೆ ಎತ್ತಿದೆ.

    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಜಾಗ ಕೊಟ್ಟಿದ್ದರು. ಆದರೆ, ಆ ಪ್ರದೇಶ ತಗ್ಗು-ಗುಂಡಿಯಿಂದ ತುಂಬಿದ್ದ ಕಾರಣ ಸರ್ಕಾರ ಅನುದಾನ ಕೊಡಲು ಮೀನಾಮೇಷ ಎಣಿಸಿತ್ತು. ಆದರೆ, ಗ್ರಾಮಸ್ಥರನ್ನೆಲ್ಲಾ ಒಗ್ಗೂಡಿಸಿದ ಹೆಡ್ ಮಾಸ್ಟರ್ ಸೋಮಶೇಖರ್ ಅವರು ಸಮತಟ್ಟು ಮಾಡಿ, ಸುಂದರ ಶಾಲೆ-ಉದ್ಯಾನವನ ನಿರ್ಮಿಸಿದ್ದಾರೆ. ಈಗ 1 ರಿಂದ 5ನೇ ತರಗತಿವರೆಗೆ 93 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರಿದ್ದಾರೆ ಅಂತ ಗ್ರಾಮದ ಮುಖಂಡ ಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ.

    ಶಾಲೆ ಆವರಣದಲ್ಲಿ ಹಾಳಾಗಿದ್ದ ಬಾವಿಯನ್ನ ದುರಸ್ತಿ ಮಾಡಿ, 250 ಗಿಡ ನೆಟ್ಟು ಅದಕ್ಕೆ ನೀರುಣಿಸ್ತಿದ್ದಾರೆ. ಬಿಸಿಯೂಟಕ್ಕೆ ಇಲ್ಲಿನ ತರಕಾರಿಗಳನ್ನೇ ಬಳಸಲಾಗುತ್ತದೆ. ತಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ. ಔಡಲ ಬೀಜಗಳನ್ನ ಮಾರಾಟ ಮಾಡಿ ಶಾಲಾ ಖರ್ಚಿಗೆ ಬಳಸ್ತಿದ್ದಾರೆ. ಜೊತೆಗೆ, ಗ್ರಾಮಸ್ಥರು ಹಾಗೂ ಇತರೆ ದಾನಿಗಳಿಂದ ಶಾಲೆಗೆ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಊಟಕ್ಕಾಗಿ ಬೆಂಚ್ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯೋಪಾಧ್ಯಾಯ ಸೋಮಶೇಖರ್ ಹೇಳುತ್ತಾರೆ.

    ಇಷ್ಟೇ ಅಲ್ಲ, ಮಕ್ಕಳಿಗೆ ಹೆಚ್ಚುವರಿ ತರಗತಿಗಳನ್ನ ತೆಗೆದುಕೊಂಡು ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ಇತರೆ ಪರೀಕ್ಷೆಗಳಿಗಾಗಿ ಕೋಚಿಂಗ್ ನೀಡ್ತಿದ್ದಾರೆ.

    https://www.youtube.com/watch?v=n0dbOUTqjto

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಐದು ದಶಕಗಳಿಂದ ಸರ್ಕಾರಿ ಶಾಲೆಗಿಲ್ಲ ದುರಸ್ತಿ-ಬಿರುಕು ಬಿಟ್ಟಿದೆ ಗೋಡೆ, ಕಿತ್ತು ಹೋಗಿದೆ ಮೇಲ್ಛಾವಣಿ!

    ಐದು ದಶಕಗಳಿಂದ ಸರ್ಕಾರಿ ಶಾಲೆಗಿಲ್ಲ ದುರಸ್ತಿ-ಬಿರುಕು ಬಿಟ್ಟಿದೆ ಗೋಡೆ, ಕಿತ್ತು ಹೋಗಿದೆ ಮೇಲ್ಛಾವಣಿ!

    ಕಲಬುರಗಿ: ಸರ್ಕಾರ ಶಾಲೆಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೆ, ಇಷ್ಟಾದ್ರು ಕಲಬುರಗಿ ಒಂದು ಶಾಲೆಯಲ್ಲಿ ಮಾತ್ರ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುತ್ತಾರೆ.

    ಹೌದು, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕಿತ್ತು ಹೋಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಶಿಕ್ಷಕರು ಜೀವ ಕೈಯಲ್ಲಿ ಹಿಡಿದು ಪಾಠ ಮಾಡುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳು ಕೂಡ ಮೇಲ್ಛಾವಣಿ ನೋಡುತ್ತಾ ಪಾಠ ಕೇಳುತ್ತಿದ್ದಾರೆ. ಸದ್ಯ ಈ ಶಾಲೆ ಬಲಿಗಾಗಿ ಕಾದಿದೆ. ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ಈ ಶಾಲೆ ಯಾವ ಸಮಯದಲ್ಲಾದ್ರು ಕುಸಿದು ಬೀಳಬಹುದು. ಇದನ್ನೂ ಓದಿ: ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!

    ಅಂದಹಾಗೆ ಈ ಶಾಲೆ ನಿರ್ಮಾಣವಾಗಿದ್ದು 1960ರಲ್ಲಿ. 5 ದಶಕಗಳಷ್ಟು ಹಳೆಯದಾದ ಈ ಶಾಲೆ ಇದುವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣ ಬಂದರೂ ಸಹ, ಶಿಕ್ಷಣ ಇಲಾಖೆ ಮಾತ್ರ ಈ ಶಾಲೆಯತ್ತ ಗಮನ ಹರಿಸದೆ ಇರೋದು ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಕಟ್ಟಡವನ್ನ ದುರಸ್ತಿ ಮಾಡಿಸಿ ಅಂತಾ ಬಿಇಓ, ಡಿಡಿಪಿಐ ಹಾಗೂ ಜಿಲ್ಲಾ ಪಂಚಾಯತ್‍ಗೆ ಸಾಕಷ್ಟು ಬಾರಿ ಮನವಿ ಮಾಡಿದ್ರು, ಕ್ಯಾರೇ ಅಂದಿಲ್ಲ. ಇದನ್ನೂ ಓದಿ: ಬಿಸಿಯೂಟ ತಿಂದು ಕಲುಷಿತ ನೀರಿನಲ್ಲಿ ತಟ್ಟೆ ತೊಳೆಯುತ್ತಿರೋ ಮಕ್ಕಳು- ಇದು ಶಿಕ್ಷಣ ಸಚಿವರ ಜಿಲ್ಲೆಯ ದುಸ್ಥಿತಿ

    ಸದ್ಯ ಮಳೆಗಾಲ ಬೇರೆ ಆರಂಭವಾಗಿದೆ. ಶಾಲೆಯ ಎಲ್ಲಾ ಕೋಣೆಗಳು ಸೋರುತ್ತಿವೆ. ಇನ್ನಾದ್ರು ಶಿಕ್ಷಣ ಇಲಾಖೆ ಈ ಶಾಲೆಗೆ ದುರಸ್ತಿ ಭಾಗ್ಯ ಕರುಣಿಸುತ್ತಾ ಕಾದು ನೋಡ್ಬೇಕು.

  • ಸರ್ಕಾರಿ ಶಾಲೆಗಳಲ್ಲಿನ ಇಂಗ್ಲೀಷ್, ಕನ್ನಡಕ್ಕೆ ಮಾರಕ – ಸಾಹಿತಿ ಎಸ್‍ಜಿ ಸಿದ್ದರಾಮಯ್ಯ ಗರಂ

    ಸರ್ಕಾರಿ ಶಾಲೆಗಳಲ್ಲಿನ ಇಂಗ್ಲೀಷ್, ಕನ್ನಡಕ್ಕೆ ಮಾರಕ – ಸಾಹಿತಿ ಎಸ್‍ಜಿ ಸಿದ್ದರಾಮಯ್ಯ ಗರಂ

    ಬೆಂಗಳೂರು: ಕನ್ನಡ ಶಾಲೆಗಳ ವಿಲೀನ ಹಾಗೂ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸುವ ಸರ್ಕಾರದ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‍ಜಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಇದು ಕನ್ನಡಕ್ಕೆ ಮಾರಕವಾಗುವ ಕೆಲ್ಸ, ಇದನ್ನು ಒಪ್ಪೋದಕ್ಕೆ ಸಾಧ್ಯವೇ ಇಲ್ಲ. ಶಾಲೆಯ ವಿಲೀನ ಮಾಡ್ತಾರೆ ಅಂದ್ರೆ ಅದು, ಸರ್ಕಾರಿ ಶಾಲೆಯನ್ನ ಮುಚ್ಚುವ ಪ್ರಕ್ರಿಯೆಯಾಗಿದೆ. ಸರ್ಕಾರದಿಂದಲೇ ಆಂಗ್ಲ ಮಾಧ್ಯಮ ಶಾಲೆ ತೆರೆಯುತ್ತಾರೆ ಅಂದ್ರೇ ಅದು ಕನ್ನಡಕ್ಕೆ ಕೊಡಲಿಯೇಟು. ಇದು ಆತಂಕಕಾರಿ ತೀರ್ಮಾನ. ಇದು ಸರ್ಕಾರದ ತಪ್ಪು ಹೆಜ್ಜೆ. ಈ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಡ್ತೇವೆ ಅಂತ ಹೇಳಿದ್ದಾರೆ.

    ಶಿಕ್ಷಣದಲ್ಲಿ ಇದೀಗ ದಂಧೆ ಶುರುವಾಗಲು ಮಠಾಧೀಶರು ಕಾರಣ ಅಂತಾ ಆರೋಪಿಸಿದ್ದಾರೆ. ಕೆಲ ಮಠಾಧೀಶರು, ರಾಜಕೀಯ ನಾಯಕರು ಹಾಗೂ ಕೆಲ ಅಧಿಕಾರಿಗಳಿಂದ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಸರ್ಕಾರ ಇದನ್ನು ಮೊದಲು ಶುದ್ಧೀಕರಿಸಬೇಕು ಅಂತಾ ಆಗ್ರಹಿಸಿದ್ರು.

  • ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

    ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

    ಚಿಕ್ಕಬಳ್ಳಾಪುರ: ನಾನಾ ಕಾರಣಗಳನ್ನು ನೀಡಿ ಸ್ವತಃ ಸರ್ಕಾರವೇ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಸಾಗುತ್ತಿದೆ. ಆದರೆ ಆಂಧ್ರದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಮುಚ್ಚಿಹೋಗಬೇಕಿದ್ದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ತಲೆ ಎತ್ತಿ ನಿಂತಿದೆ.

    ಸಹೃದಯಿ ದಾನಿಗಳ ಸಹಕಾರ, ಸ್ನೇಹಿತರ ಸಾಥ್ ನಿಂದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯವಂತೆ ಮಾಡಿದ್ದಾರೆ ಈ ಶಾಲೆಯ ಶಿಕ್ಷಕ. ಇಡೀ ಗ್ರಾಮದಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಕನ್ನಡ ಭಾಷೆ ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾಯಕ ಮಾಡಿದ ಅಪರೂಪದ ಶಿಕ್ಷಕ ಇವರು.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಟಿಕೆ ನಾಗೇಶ್ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನದವರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ದರು. ಅಲ್ಲದೇ ಶಾಲೆಗೆ ಮೊದಲ ಬಾರಿ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಅಲ್ಲದೇ ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ.

    ಆದರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದ್ದಾರೆ. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಸಕಲ ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಯಶಸ್ವಿಯಾಗಿದ್ದಾರೆ. ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲಿಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ.

    ಈ ಹಿಂದೆ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7ನೇ ತರಗತಿಯವರೆಗೂ 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ಫೇಸ್‍ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಸಹಾಯ ಪಡೆಯುವ ಮೂಲಕ ವರ್ಷ ಇಡೀ ಉಚಿತವಾಗಿ ನೀಡುತ್ತಾರೆ. ಬಿಸಿಯೂಟ ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

    ವಿಶೇಷವಾಗಿ ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನು ಖಾಸಗಿ ಶಾಲೆ ಬಿಡಿಸಿ, ತಮ್ಮ ಶಾಲೆಯಲ್ಲಿ ಉಚಿತವಾಗಿ ಪಾಠ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ.

    ಆಂಧ್ರದ ಗಡಿಭಾಗ, ತೆಲುಗು ಭಾಷೆಯ ಪ್ರಭಾವ, ಪೋಷಕರ ಇಂಗ್ಲಿಷ್ ವ್ಯಾಮೋಹ ಸೇರಿದಂತೆ ಹಲವು ಕಾರಣಗಳಿಂದ ನಂಜಯ್ಯಗಾರಿಹಳ್ಳಿಯ ಸುತ್ತಮುತ್ತಲ ಐದು ಸರ್ಕಾರಿ ಶಾಲೆಗಳಿಗೆ ಸರ್ಕಾರ ಈಗಾಗಲೇ ಬೀಗ ಜಡಿದಿದೆ.

    ಆದರೆ ಶಿಕ್ಷಕ ನಾಗೇಶ್ ಅವರ ಸ್ವಂತ ಪರಿಶ್ರಮದಿಂದ ನಂಜಯ್ಯಗಾರಹಳ್ಳಿಯ ಈಗ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಇದಲ್ಲದೆ 4 ವರ್ಷದ ತಮ್ಮ ಮಗನನ್ನ ಕೂಡ ತಮ್ಮದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾಗಿದ್ದಾರೆ ಈ ದಂಪತಿ.

    https://www.youtube.com/watch?v=UPD9JzGXBd0