Tag: Govind M Karjol

  • ಗೋವಿಂದ್ ಕಾರಜೋಳ ಕೊರೊನಾದಿಂದ ಗುಣಮುಖ- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗೋವಿಂದ್ ಕಾರಜೋಳ ಕೊರೊನಾದಿಂದ ಗುಣಮುಖ- ಆಸ್ಪತ್ರೆಯಿಂದ ಡಿಸ್ಚಾರ್ಜ್

    – ಹೋಂ ಐಸೋಲೇಟ್ ಆಗಿರುವ ಡಿಸಿಎಂ

    ಬಾಗಲಕೋಟೆ: ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕೊರೊನಾದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನು ಗುಣಮುಖವಾಗಿದ್ದೇನೆ. ನನಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಮಗಳ ರೂಪದಲ್ಲಿ ಆರೈಕೆ ಮಾಡಿದ ಸ್ಟಾಫ್ ನರ್ಸ್ ಗಳಿಗೆ ಅಭಾರಿಯಾಗಿದ್ದೇನೆ. ಶೀಘ್ರ ಗುಣಮುಖವಾಗುವಂತೆ ಶುಭ ಹಾರೈಸಿದ ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು. ವೈದ್ಯರ ಸಲಹೆಯ ಮೇರೆಗೆ ನಾನು ಹೋಮ್ ಕ್ವಾರಂಟೈನ್ ನಲ್ಲಿದ್ದು, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ಎಂದಿನಂತೆ ನಿರ್ವಹಿಸುತ್ತಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಸೆಪ್ಟೆಂಬರ್ 22 ರಂದು ಕಾರಜೋಳ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಇದೀಗ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಹೋಂ ಐಸೋಲೇಟ್ ಆಗಿದ್ದಾರೆ. ಈ ಹಿನ್ನೆಲೆ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಚಿಕಿತ್ಸೆಯಿಂದಾಗಿ ಗುಣಮುಖರಾಗಿರುವುದಾ ತಿಳಿಸಿದ್ದಾರೆ. ಅಲ್ಲದೆ ಕಡತಗಳಿಗೆ ಸಹಿ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

  • ಪ್ರವಾಸದಲ್ಲಿದ್ದರೂ ಪ್ರವಾಹದಲ್ಲಿ ಕೊಚ್ಚಿ ಹೋದ ರೈತನ ಕುಟಂಬಕ್ಕೆ ಸಾಂತ್ವನ ಹೇಳದ ಸಿದ್ದು

    ಪ್ರವಾಸದಲ್ಲಿದ್ದರೂ ಪ್ರವಾಹದಲ್ಲಿ ಕೊಚ್ಚಿ ಹೋದ ರೈತನ ಕುಟಂಬಕ್ಕೆ ಸಾಂತ್ವನ ಹೇಳದ ಸಿದ್ದು

    – ಡಿಸಿಎಂ ಕಾರಜೋಳ, ಅಧಿಕಾರಿಗಳಿಂದಲೂ ನಿರ್ಲಕ್ಷ್ಯ

    ಬಾಗಲಕೋಟೆ: ಸರ್ಕಾರ ನೆರೆ ಪ್ರವಾಹದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 48 ಗಂಟೆಯಲ್ಲಿ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಓರ್ವ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೂರು ದಿನಗಳಾದರೂ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಿರಲಿ, ಸೌಜನ್ಯಕ್ಕೂ ಜನಪ್ರತಿನಿಧಿಗಳು, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿಲ್ಲ.

    ಜಿಲ್ಲೆಯ ಬಾದಾಮಿ ತಾಲೂಕಿನ ಶಿರಬಡಗಿ ಗ್ರಾಮದ ರೈತ ರಾಮಪ್ಪ ಹೊನ್ನಣ್ಣವರ(50) ಕಳೆದ 22 ರಂದು ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದರು. ಆದರೆ ಪ್ರವಾಹಕ್ಕೆ ಬಲಿಯಾದ ರೈತನ ಕುಟುಂಬದ ಕಡೆಗೆ ವಿರೋಧ ಪಕ್ಷದ ನಾಯಕರೂ ಆಗಿರುವ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಸೇರಿದಂತೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಭೇಟಿ ನೀಡಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ರೈತ ಮೃತಪಟ್ಟ ದಿನವೇ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದರು. ಆದರೆ ಪ್ರವಾಸದ ವೇಳೆ ಶಿರಬಡಗಿ ರೈತನ ಬಗ್ಗೆ ಸಿದ್ದರಾಮಯ್ಯ ಗಮನ ಕೊಡದೇ ಇರುವುದು ಇದೀಗ ಟೀಕೆಗೆ ಗುರಿಯಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಅಧಿಕಾರಿಗಳು ಸಹ ಮೃತ ರೈತನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿಲ್ಲ. ರೈತನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅಧಿಕಾರಿಗಳು ಕುಟುಂಬಸ್ಥರಿಗೆ ಇಲ್ಲಿಯವರೆಗೆ ಯಾವುದೇ ಭರವಸೆ ನೀಡದ ಕಾರಣ ಯಾರೂ ನಮ್ಮ ಗೋಳು ಕೇಳುತ್ತಿಲ್ಲ ಎಂದು ಮೃತ ರೈತನ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

  • ಯಾರೋ ಬಾಲಕಿ ಮೂಲಕ ಪತ್ರ ಓದಿಸಿ, ವಿಡಿಯೋ ಮಾಡಿದ್ದಾರೆ: ಕಾರಜೋಳ

    ಯಾರೋ ಬಾಲಕಿ ಮೂಲಕ ಪತ್ರ ಓದಿಸಿ, ವಿಡಿಯೋ ಮಾಡಿದ್ದಾರೆ: ಕಾರಜೋಳ

    ಬೆಂಗಳೂರು: ಯಾರೋ ಬಾಲಕಿ ಮೂಲಕ ಪತ್ರ ಓದಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅಲ್ಲಿ ಯಾವುದೇ ರೀತಿಯ ಪ್ರವಾಹ ಉಂಟಾಗಿಲ್ಲ. ರಸ್ತೆಯಲ್ಲಿ ನೀರು ನಿಂತಿದೆಯಷ್ಟೇ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

    ಸಂತ್ರಸ್ತ ಬಾಲಕಿ ಪತ್ರ ಓದುವ ಮೂಲಕ ಪರಿಹಾರಕ್ಕೆ ಮನವಿ ಮಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಮುಧೋಳ ತಾಲೂಕಿನ ರನ್ನ ಬೆಳಗಲಿ ಪ್ರವಾಹಕ್ಕೆ ಒಳಗಾಗಿಲ್ಲ, ಅದು ಕೋಡಿಹಾಳ ರಸ್ತೆ ರೈತರ ಹೊಲಗಳಿಗೆ ಹಾಗೂ ಸಣ್ಣ ಜನ ವಸತಿ ಇರುವ ಜಾಗಕ್ಕೆ ಹೋಗುವ ರಸ್ತೆ. ಅಲ್ಲಿ ಕೇವಲ ಮಳೆ ನೀರು ನಿಂತಿದೆ, ಪ್ರವಾಹ ಉಂಟಾಗಿಲ್ಲ. ಯಾರೋ ಒಬ್ಬರು ಈ ಪತ್ರವನ್ನು ಮಗುವಿನ ಕಡೆಯಿಂದ ಓದಿಸಿದ್ದಾರೆ. ಅಲ್ಲದೆ ಅದು ಪಿಡಬ್ಲ್ಯೂಡಿ ರಸ್ತೆಯಲ್ಲ ಪಟ್ಟಣ ಪಂಚಾಯಿತಿಗೆ ಸೇರಿದ ರಸ್ತೆ. ನಾನು ನಾಳೆ ಕ್ಷೇತ್ರಕ್ಕೆ ಹೊರಟಿದ್ದೇನೆ. ನೀವು ಬರುವುದಾದರೆ ಬೆಳಗಲಿಗೇ ಬನ್ನಿ. ನೀವೇ ಬಂದು ಬೆಳಗಲಿಯಲ್ಲಿ ನೋಡಿ, ಅಲ್ಲಿ ಸಮಸ್ಯೆ ಆಗಿಲ್ಲ ಎಂದರು.

    ಈ ರಸ್ತೆಯನ್ನು ರಿಪೇರಿ ಮಾಡಲು ಸಹ ಸೂಚಿಸುತ್ತೇನೆ. ಈಗ ಮಳೆ ಇರುವುದರಿಂದ ಸಾಧ್ಯವಾಗಿಲ್ಲ. ಮಳೆ ನಿಂತ ನಂತರ ರಸ್ತೆ ರಿಪೇರಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

    ಇಡೀ ರಾಜ್ಯದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾಗಿರುವ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಣ್ಣಿನ ಮನೆಗಳು ಹೆಚ್ಚಿವೆ. ಹೀಗಾಗಿ ಮನೆಗಳು ಬೀಳುತ್ತಿವೆ. ಮಳೆ ನಿಂತ ಮೇಲೆ ಸರ್ವೇ ನಡೆಸಿ, ಮನೆ ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ. ಹಿಂದೆಂದೂ ಕಂಡರಿಯದ ಪ್ರವಾಹ ಸಂಭವಿಸಿದೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು, ಸಂಕಷ್ಟದಲ್ಲಿರುವವರ ಜನರ ಪರಿಹಾರಕ್ಕೆ ನೆರವಾಗಬೇಕು. ಈ ವಿಚಾರ ರಾಜಕೀಯಕ್ಕೆ ಬಳಕೆ ಮಾಡೋದು ಬೇಡ. ಇಡೀ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಯಾಗಿದೆ, ಸರ್ಕಾರ ರಚನೆಯಾದಾಗಿನಿಂದ ನಾವೂ ಅದೇ ಕೆಲಸದಲ್ಲಿದ್ದೇವೆ ಎಂದರು.

    ಬಾಗಲಕೋಟೆಯಲ್ಲಿ 195 ಹಳ್ಳಿಗಳಿಗೆ ಪರಿಹಾರ ಕೊಟ್ಟಿದ್ದೇವೆ. ಹಲವು ಸಲ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಯಾರೋ ರಾಜಕೀಯ ಮಾಡುವವರು ಶಾಸಕರು ಎಲ್ಲಿ ಎಂದು ಕೇಳುತ್ತಿದ್ದಾರೆ. ನಾನು ಕ್ಷೇತ್ರದಲ್ಲೇ ಇದ್ದೇನೆ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು.

  • ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅನರ್ಹರನ್ನು ಸೇರಿಸಿಕೊಳ್ಳುತ್ತೇವೆ – ಸಿದ್ದರಾಮಯ್ಯ

    ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅನರ್ಹರನ್ನು ಸೇರಿಸಿಕೊಳ್ಳುತ್ತೇವೆ – ಸಿದ್ದರಾಮಯ್ಯ

    ಚಿಕ್ಕಮಗಳೂರು: ಯಾರೇ ಆದರೂ ಸರಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ್ದಾರೆ.

    ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಂದರೆ ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಯಾರು ಬೇಕಾದರೂ ಬರಬಹುದು. ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಎಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ ಎಂದು ಯಾರು ಮತ್ತೆ ಕಾಂಗ್ರೆಸ್‍ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬುದರ ಕುರಿತು ಗುಟ್ಟು ಬಿಟ್ಟುಕೊಡಲಿಲ್ಲ.

    ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ. ಆದರೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತು ಭರವಸೆ ನೀಡುವುದಿಲ್ಲ. ಟಿಕೆಟ್ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ನಾನು ಹೇಳುವುದಿಲ್ಲ. ಟಿಕೆಟ್ ನೀಡುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ. ಆದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಪಕ್ಷಕ್ಕೆ ಸೇರುವ ಕುರಿತು ಕೆಲವರು ನನ್ನೊಂದಿಗೆ ಮಾತನಾಡಿದ್ದಾರೆ. ಅದೆಲ್ಲವನ್ನೂ ಹೇಳಲಾಗುವುದಿಲ್ಲ. ಎಲ್ಲವನ್ನೂ ನಿಮಗೆ ಹೇಳಿಬಿಟ್ಟರೆ ಹೇಗೆ? ಕೆಲವನ್ನು ಹೇಳುವುದಿಲ್ಲ. ಬಹುತೇಕ ವಿಷಯಗಳನ್ನು ಹೇಳುತ್ತೇವೆ. ಕೆಲವನ್ನು ಮಾತ್ರ ಹೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಸಿದ್ದರಾಮಯ್ಯನವರ ಹೇಳಿಕೆಗೆ ದೆಹಲಿಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅನರ್ಹ ಶಾಸಕರು ಕಾಂಗ್ರೆಸ್ ಸೇರುವ ಸಂದರ್ಭ ಬಂದಾಗ ನೋಡಿಕೊಳ್ಳೋಣ. ಸದ್ಯಕ್ಕೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಮಾತನಾಡಲು ನಿರಾಕರಿಸಿದರು.

  • ಪ್ರತಾಪ್ ಸಿಂಹ ಮಾತ್ರವಲ್ಲ, ಶ್ರೀಸಾಮಾನ್ಯರಿಗೂ ಭಾಷೆ ಬಳಸುವಾಗ ಜ್ಞಾನ ಇರಬೇಕು – ಡಿಸಿಎಂ ಕಾರಜೋಳ ಟಾಂಗ್

    ಪ್ರತಾಪ್ ಸಿಂಹ ಮಾತ್ರವಲ್ಲ, ಶ್ರೀಸಾಮಾನ್ಯರಿಗೂ ಭಾಷೆ ಬಳಸುವಾಗ ಜ್ಞಾನ ಇರಬೇಕು – ಡಿಸಿಎಂ ಕಾರಜೋಳ ಟಾಂಗ್

    ಬಾಗಲಕೋಟೆ: ಸಂಸದ ಪ್ರತಾಪ್ ಸಿಂಹ ಮಾತ್ರವಲ್ಲ, ಶ್ರೀಸಾಮಾನ್ಯರಿಗೂ ಸಹ ಭಾಷೆ ಬಳಸುವಾಗ ಜ್ಞಾನ ಇರಬೇಕು ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪರಿಹಾರಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ಅವರೊಬ್ಬರೇ ಅಲ್ಲ, ಶ್ರೀಸಾಮಾನ್ಯರೂ ಸಹ ಭಾಷೆ ಬಳಸುವಾಗ ಜ್ಞಾನ ಇರಬೇಕು. ಭಾಷೆ ಬಳಸುವಾಗ ಎಚ್ಚರವಹಿಸಬೇಕು. ಮನಬಂದಂತೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

    ಕೇಂದ್ರ ಸರ್ಕಾರ ನಿಶ್ಚಿತವಾಗಿಯೂ ಪರಿಹಾರ ಹಣ ಕೊಡುತ್ತದೆ. ಅದರಲ್ಲಿ ಯಾವುದೇ ಅನುಮಾನ ಮಾಧ್ಯಮದ ಮಿತ್ರರಿಗೆ ಬೇಡ. ಈಗಾಗಲೇ ಸರ್ವೆ ಕಾರ್ಯ ಆಗಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವರು ಹಾಗೂ ಗೃಹ ಸಚಿವರು ಎಲ್ಲರೂ ನೋಡಿಕೊಂಡು ಹೋಗಿದ್ದಾರೆ. ಖಂಡಿತವಾಗಿಯೂ ಬೇರೆ ಕಾರಣಗಳಿಂದಾಗಿ ಪರಿಹಾರ ನೀಡುವಲ್ಲಿ ಸ್ವಲ್ಪ ವಿಳಂಬ ಆಗಿರಬಹುದು. ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕೇಂದ್ರದ ಪರಿಹಾರ ಅಗತ್ಯವಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದಿಂದ ನಮಗೆ ಹೆಚ್ಚಿನ ಪರಿಹಾರ ಸಿಗಬೇಕು. ಕಾನೂನಾತ್ಮಕವಾಗಿ ಅಲ್ಲದೇ ಹೆಚ್ಚಿನ ತೊಂದರೆ ಇರುವುದರಿಂದ ಪರಿಹಾರ ಸಿಗಬೇಕು. ಕೇಂದ್ರ ಸರ್ಕಾರದ ಅನುದಾನ ಸಹಾಯ ಸಹಕಾರ ಅವಶ್ಯಕವಾಗಿದೆ ಎಂದು ತೇಜಸ್ವಿಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.

    ಯಡಿಯೂರಪ್ಪನವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂಬ ಪಂಚಮಸಾಲಿ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಇವೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.