Tag: Governor’s rule

  • ರಾಜ್ಯಪಾಲ ಆಡಳಿತದಿಂದ ಉಗ್ರ ನಿಗ್ರಹ ಸುಲಭ: ಜಮ್ಮು ಕಾಶ್ಮೀರ ಡಿಐಜಿ

    ರಾಜ್ಯಪಾಲ ಆಡಳಿತದಿಂದ ಉಗ್ರ ನಿಗ್ರಹ ಸುಲಭ: ಜಮ್ಮು ಕಾಶ್ಮೀರ ಡಿಐಜಿ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಯಿಂದಾಗಿ ಉಗ್ರ ನಿಗ್ರಹ ಸುಲಭ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್ ಪಿ ವೈದ್ ರವರು ತಿಳಿಸಿದ್ದಾರೆ.

    ರಾಜ್ಯಪಾಲರ ಆಡಳಿತ ಜಾರಿಯಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಆಳ್ವಿಕೆ ಹಿನ್ನೆಲೆ ಇನ್ನು ಯಾವುದೇ ಕಾರಣಕ್ಕೂ ಉಗ್ರರ ವಿರುದ್ಧ ಕಾರ್ಯಾಚರಣೆ ನಿಲ್ಲದು. ಪೊಲೀಸರು ಹಾಗೂ ಸೇನೆಯು ನಿರಾಂತಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

    ರಂಜಾನ್ ನಿಮಿತ್ತ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಅಲ್ಲದೇ ಯಾವುದೇ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳದಂತೆ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಗ್ರರ ದಾಳಿ ತೀವ್ರಗೊಂಡ ಪರಿಣಾಮ ಅನೇಕ ಮಂದಿಯ ಸಾವಿಗೆ ಕಾರಣವಾಯಿತು ಎಂದು ಹೇಳಿದರು.

    ರಂಜಾನ್ ಮುಗಿದಿದ್ದು, ರಾಜ್ಯಪಾಲರ ಆಳ್ವಿಕೆಯಿಂದ ಪೊಲೀಸರು ಹಾಗೂ ಸೇನೆಗೆ ಬಲ ಬಂದಿದೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯೇ ನಮ್ಮ ಗುರಿ ಎಂದು ತಿಳಿಸಿದರು.

    ರಾಜ್ಯಪಾಲರ ಆಡಳಿತ ಕಣಿವೆ ರಾಜ್ಯದಲ್ಲಿ ಪರಿಣಾಮ ಬೀರಲಿದೆ. ಪೊಲೀಸರು ಮತ್ತು ಸೇನೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಣೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಿಡಿಪಿ ಮೈತ್ರಿಯಿಂದ ಬಿಜೆಪಿ ಹಿಂದೆ ಸರಿದ ಪರಿಣಾಮ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಮುರಿದು ಬಿದ್ದಿತ್ತು. ಪರಿಣಾಮವಾಗಿ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿದ ಜಾರಿಗೆ ಬಂದಿದೆ.

  • ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ರಾಷ್ಟ್ರಪತಿ ಅಂಕಿತ!

    ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ರಾಷ್ಟ್ರಪತಿ ಅಂಕಿತ!

    ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ಆದೇಶ ನೀಡಿದ್ದಾರೆ.

    ಜಮ್ಮು ಕಾಶ್ಮೀರದ ರಾಜ್ಯಪಾಲರಾದ ಎನ್ ಎನ್ ವೋಹ್ರಾರವರು ಕಣಿವೆ ರಾಜ್ಯದಲ್ಲಿ ಆದ ರಾಜಕೀಯ ಬದಲಾವಣೆಗಳಿಂದ ಸರ್ಕಾರ ಅಸ್ತಿತ್ವ ಕಳೆದುಕೊಂಡಿತ್ತು. ಹೀಗಾಗಿ ರಾಜ್ಯದಲ್ಲಿ ಸಂವಿಧಾನದ ಅಧಿನಿಯಮ 92ರ ಪ್ರಕಾರ ರಾಜ್ಯಪಾಲರ ಆಡಳಿತ ಜಾರಿಗೊಳಿಸುವಂತೆ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿದ್ದರು.

    ವರದಿಯನ್ನು ಆಧರಿಸಿ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ಅಸ್ತಿತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಕಣಿವೆ ರಾಜ್ಯದಲ್ಲಿ ಮುಂದಿನ 24 ಗಂಟೆಗಳೊಳಗೆ ರಾಜ್ಯಪಾಲರ ಆಡಳಿತ ಜಾರಿಗೊಳಿಸುವಂತೆ ಆದೇಶ ನೀಡಿದ್ದಾರೆ.

    ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿ, “ದೇಶದ ಭದ್ರತೆಯ ದೃಷ್ಟಿಯಿಂದ ಜಮ್ಮು-ಕಾಶ್ಮೀರದ ಪಿಡಿಪಿ ಜೊತೆಗಿನ ಮೈತ್ರಿಯಿಂದ ಬಿಜೆಪಿ ಹಿಂದೆ ಸರಿಯುತ್ತಿದೆ” ಎಂಬ ನಿರ್ಧಾರವನ್ನು ಕೈಗೊಂಡಿದ್ದರು.

    ಈ ಹಿನ್ನೆಲೆಯಲ್ಲಿ ಪಿಡಿಪಿಯ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಅಸ್ತಿತ್ವ ಕಳೆದುಕೊಂಡಿತ್ತು. ಪಿಡಿಪಿಯ ಮುಫ್ತಿ ಹಾಗೂ ಬೆಂಬಲಿಗರು ತಮ್ಮ ರಾಜೀನಾಮೆಯನ್ನು ಮಂಗಳವಾರ ಸಂಜೆ ರಾಜ್ಯಪಾಲ ಎನ್ ಎನ್ ವೋಹ್ರಾರವರಿಗೆ ಸಲ್ಲಿಸಿದ್ದರು. ಇದನ್ನೂ ಓದಿ: ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

    ಏನಿದು ರಾಜ್ಯಪಾಲರ ಆಳ್ವಿಕೆ?
    ಭಾರತದಾದ್ಯಂತ ಯಾವುದೇ ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರಗಳು ಆಡಳಿತ ನಡೆಸುವಲ್ಲಿ ಸಾಧ್ಯವಾಗದೇ ಇದ್ದಾಗ, ಸಂವಿಧಾನದ 92ನೇ ಅಧಿನಿಯಮದ ಪ್ರಕಾರ ರಾಷ್ಟ್ರಪತಿಯರ ಆಳ್ವಿಕೆ ಜಾರಿಗೆ ಬರುತ್ತದೆ. ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಬದಲು ರಾಜ್ಯಪಾಲರು ಆಡಳಿತ ನಡೆಸುತ್ತಾರೆ. ರಾಜ್ಯಪಾಲರ ಆಡಳಿತ ಬಂದ ನಂತರ ಮುಂದಿನ 6 ತಿಂಗಳುಗಳ ಕಾಲ ರಾಜ್ಯಪಾಲರೇ ರಾಷ್ಟ್ರಪತಿಯವರ ನೇತೃತ್ವದಲ್ಲಿ ಆಡಳಿತ ನಡೆಸುತ್ತಾರೆ. ನಂತರ ಚುನಾವಣೆ ನಡೆಸಿ, ಬಹುಮತ ಪಡೆದ ಪಕ್ಷಕ್ಕೆ ಅಧಿಕಾರ ಹಸ್ತಾಂತರಿಸುತ್ತಾರೆ.

    ಭಾರತ ಸಂವಿಧಾನದಲ್ಲಿ ಇತರೇ ರಾಜ್ಯಗಳನ್ನು ಹೋಲಿಸಿದರೆ, ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಲ್ಲದೇ ಕಣಿವೆ ರಾಜ್ಯಕ್ಕೆ ಸೀಮಿತವಾಗುವ ಸಂವಿಧಾನ ಹಾಗೂ ಆಡಳಿತವನ್ನು ಜಾರಿಗೊಳಿಸುವ ನೀತಿಯನ್ನು ರೂಪಿಸಿದೆ. ಇದನ್ನೂ ಓದಿ: ಪಿಡಿಪಿ ಮೈತ್ರಿ ಕಳೆದುಕೊಂಡ ಬಿಜೆಪಿ: ಜಮ್ಮು ಕಾಶ್ಮೀರದಲ್ಲಿ ಮುಂದೇನು?