Tag: government

  • ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    – ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
    – ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ

    ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

    ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.

    ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

    ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

    ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

  • ಬರೋಬ್ಬರಿ 1 ತಿಂಗಳ ಕಾಲ ಸಾರಿಗೆ ಸೇವೆ ಬಂದ್!

    ಬರೋಬ್ಬರಿ 1 ತಿಂಗಳ ಕಾಲ ಸಾರಿಗೆ ಸೇವೆ ಬಂದ್!

    – ಕೊರೊನಾ ತಡೆಗೆ ಸರ್ಕಾರದ ಮಾಸ್ಟರ್ ಪ್ಲಾನ್

    ಬೆಂಗಳೂರು: 21 ದಿನ ಲಾಕ್‍ಡೌನ್ ಮಾಡಿದರೂ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯುತ್ತಾ, ಇಲ್ಲವಾ ಎಂದು ಜನರು ಗೊಂದಲದಲ್ಲಿದ್ದಾರೆ. ಹೀಗಾಗಿ ಕೊರೊನಾ ಸೋಂಕು ತಡೆಗೆ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಲಾಕ್‍ಡೌನ್ ಸಡಿಲಿಕೆ ಆದರೂ ಕೂಡ ಸಾರ್ವಜನಿಕ ಸಾರಿಗೆ ಇರಲ್ಲ. ಅಂದರೆ ಬರೋಬ್ಬರಿ ಒಂದು ತಿಂಗಳ ಕಾಲ ಸಾರಿಗೆ ಸೇವೆ ಬಂದ್ ಮಾಡಲು ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಒಂದು ತಿಂಗಳು ಕಾಲ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು ಯಾವುದೂ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

    ಇನ್ನೂ ಆಟೋ, ಕ್ಯಾಬ್‍ಗಳ ಓಡಾಟಕ್ಕೂ ಸರ್ಕಾರ ಬ್ರೇಕ್ ಹಾಕುವುದಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ. ತಜ್ಞರ ಮಾಹಿತಿ ಅನುಸಾರ ಸರ್ಕಾರದಿಂದ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಆದರೆ ಜನ ಓಡಾಡುವುದಕ್ಕೆ ಸಡಿಲಿಕೆ ಮಾಡಲು ಚಿಂತನೆ ನಡೆಸಿದೆ. ಜೊತೆಗೆ ಖಾಸಗಿಯಾಗಿ ವಾಹನ ಓಡಿಸಲು ಕೂಡ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.

    ಸದ್ಯಕ್ಕೆ ಇಂದಿನಿಂದ ಬೇಕರಿ, ಕಾಂಡಿಮೆಂಟ್ಸ್ ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಸರ್ಕಾರ ಒಂದು ತಿಂಗಳು ಕಾಲ ಸಾರಿಗೆ ಸೇವೆಯನ್ನ ಬಂದ್ ಮಾಡಿದರೆ, ಅನಿವಾರ್ಯವಾಗಿ ಜನರು ಸಾರಿಗೆ ಸೇವೆ ಇಲ್ಲದೆ ಓಡಾಡಬೇಕಾಗುತ್ತದೆ.

  • ಸರ್ಕಾರದ ದಿಟ್ಟ ಕ್ರಮದಿಂದ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ: ಆರ್. ಅಶೋಕ್

    ಸರ್ಕಾರದ ದಿಟ್ಟ ಕ್ರಮದಿಂದ ರಾಜ್ಯದಲ್ಲಿ ಕೊರೊನಾ ಹತೋಟಿಯಲ್ಲಿದೆ: ಆರ್. ಅಶೋಕ್

    ನೆಲಮಂಗಲ: ಅಸಂಘಟಿತ ವಲಯ, ಕಡು ಬಡವರು ಹಾಗೂ ನಿರ್ಗತಿಕರ ಹಸಿವು ನೀಗಿಸಲು ಸರ್ಕಾರ ಸರ್ವ ಸನ್ನದ್ಧವಾಗಿದ್ದು, ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

    ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಸೆಲೆಕ್ಷನ್ ಕಾರ್ನರ್ ನಲ್ಲಿ ಯಡಿಯೂರಪ್ಪ ಕ್ಯಾಂಟೀನ್‍ಗೆ ಚಾಲನೆ ನೀಡಿ ಆರ್. ಅಶೋಕ್ ಅವರು ಮಾತನಾಡಿದರು. ಲಾಕ್‍ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಕೊರೊನಾ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡವರಿಗೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದರು.

    ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ಹಣ ವ್ಯಯಿಸಲಾಗಿದೆ. ಇತ್ತ 395 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಂದಿದ್ದು, ಕಡು ಬಡವರ ಊಟ ವಸತಿ ಸೇರಿದಂತೆ ತುರ್ತು ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. ಅಸಂಘಟಿತ ವಲಯದ ಒಂದು ಲಕ್ಷ ಕಾರ್ಮಿಕರಿಗೆ 15 ಕೆಜಿ ಆಹಾರ ಪದಾರ್ಥ ಗಳಿರುವ ಚೀಲವನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿ ನೀಡಲಾಗಿದೆ. ಇನ್ನೂ 30 ಸಾವಿರ ಕಾರ್ಮಿಕರಿಗೆ ಸಾಮಾಗ್ರಿನೀಡಲಾಗುವುದು, ಅದನ್ನು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಕಂದಾಯ ಇಲಾಖೆಯಿಂದ ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಇತರೆ ಮಾಸಾಶನಗಳನ್ನು ಎರಡು ತಿಂಗಳಿಗೆ ಮುಂಗಡವಾಗಿ ಬಿಡುಗಡೆಗೊಳಿಸಲಾಗಿದೆ. ರೈತರ ತೋಟಗಾರಿಕಾ, ಕೃಷಿ ಉತ್ಪನ್ನಗಳ ಮಾರಾಟ, ಸಾಗಾಟಕ್ಕೆ ಈಗಾಗಲೇ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಮಾರುಕಟ್ಟೆಗೆ ಬರಲು ತೊಂದರೆಯಾಗುವ ರೈತರ ಉತ್ಪನ್ನಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಈ ವೇಳೆ ಮಾಜಿ ಶಾಸಕ ಮುನಿರಾಜು ಅವರು ಮಾತನಾಡಿ, ಬಡವರ ಹಸಿವು ನೀಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕ್ಷೇತ್ರದ ಮಟ್ಟದಲ್ಲಿ ಪಡಿತರ ಚೀಟಿ ಇಲ್ಲದ ಕಡು ಬಡವರಿಗೆ ತಿಂಡಿ, ಊಟ ಹಾಗೂ ಅಗತ್ಯ ದಿನಸಿಗಳನ್ನು ಯಡಿಯೂರಪ್ಪ ಕ್ಯಾಂಟೀನ್ ಮೂಲಕ ಪೂರೈಸಲಾಗುತ್ತಿದೆ. ಎಷ್ಟೇ ಜನ ಬಂದರೂ ಶುಚಿ, ರುಚಿಯ ಆಹಾರ ಪಟ್ಟಣಗಳನ್ನು ವಿತರಿಸಲಾಗುವುದು ಜೊತೆಗೆ ಸೋಂಕು ಹರಡದಂತೆ ಜಾಗೃತಿಯನ್ನೂ ಮೂಡಿಸಲಾಗುವುದು ಎಂದರು.

    ದಾಸರಹಳ್ಳಿ ಬಿಜೆಪಿ ಕ್ಷೇತ್ರಾಧ್ಯಕ್ಷ ಎನ್. ಲೋಕೇಶ್, ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಕ್ಯಾಂಟೀನ್ ನಡೆಸಲಾಗುತ್ತಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ತನಕ ಮುಂದುವರಿಸಲಾಗುವುದು ಎಂದರು. ಈ ವೇಳೆ ಬೆಂಗಳೂರು ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಬಿಎಂ ನಾರಾಯಣ್, ಗಂಗರಾಜು, ರವಿಗೌಡ ಮತ್ತಿತರು ಉಪಸ್ಥಿತರಿದ್ದರು.

  • ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ – ಆತ್ಮಹತ್ಯೆ ಮಾಡಿಕೊಳ್ಳೋದೊಂದೆ ನಮಗೆ ದಾರಿ

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ – ಆತ್ಮಹತ್ಯೆ ಮಾಡಿಕೊಳ್ಳೋದೊಂದೆ ನಮಗೆ ದಾರಿ

    ಮಡಿಕೇರಿ: ಕೊರೊನಾ ಇಡೀ ವಿಶ್ವವನ್ನೇ ಬಾಧಿಸಿದೆ. ಅದರಲ್ಲೂ ರೈತರು, ಕೂಲಿ ಕಾರ್ಮಿಕರು, ನಿರ್ಗತಿಕರ ಜೀವನ ಅಯೋಮಯವಾಗಿದೆ. ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಿಸಿರುವುದರಿಂದ ಅನ್ನದಾತರು ತಾವು ಬೆಳೆದಿದ್ದ ಬೆಳೆಗಳನ್ನು ಕಟಾವು ಮಾಡಲಾಗದೇ, ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಗ್ರಾಮದ ರೈತನೊಬ್ಬ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆ ಇದೀಗ ಮಣ್ಣು ಪಾಲಾಗಿದೆ. ಬ್ಯಾಡಗೊಟ್ಟ ಗ್ರಾಮದಲ್ಲಿ 5 ಎಕರೆ ಜಮೀನಿನಲ್ಲಿ ಸುಮಾರು 5 ಲಕ್ಷ ಬಂಡವಾಳ ಹಾಕಿ ಎಲೆ ಕೋಸು ಬೆಳೆ ಬೆಳೆದಿದ್ದರು. ದೇಶವನ್ನೇ ಲಾಕ್‍ಡೌನ್ ಮಾಡಿದ್ದರಿಂದ ಉತ್ತಮ ಬೆಲೆ ಹೊಂದಿದ್ದ ಎಲೆ ಕೋಸು ಬೆಲೆ ಕುಸಿಯುವುದರ ಜೊತೆಗೆ ಕೊಳ್ಳುವವರು ಇಲ್ಲದೆ, ಮಾರುಕಟ್ಟೆಯನ್ನು ತಲುಪಿಸಲು ಸಾಧ್ಯವಾಗದೆ ಎಲೆಕೋಸು ಹೊಲದಲ್ಲೇ ಕೊಳೆತು ಹೋಗುತ್ತಿದೆ.

    ಉತ್ತಮ ಫಸಲು ಬಂದರೂ ಅದರಿಂದ ಲಾಭ ಸಿಗಲಿಲ್ಲ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಉಚಿತವಾಗಿ ತೆಗೆದುಕೊಂಡು ಹೋಗಲು ಬಿಟ್ಟಿದ್ದೇವೆ. ಮಧ್ಯವರ್ತಿಗಳು ಕೆ.ಜಿಗೆ 50 ಪೈಸೆ ಅಥವಾ 1 ರೂಪಾಯಿಗೆ ಕೇಳುತ್ತಾರೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ನಮಗೆ ದಾರಿ ಎಂದು ರೈತ ಚಂದ್ರಶೆಟ್ಟಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕೆಲ ತಿಂಗಳುಗಳವರೆಗೆ ದೇಶಾದ್ಯಂತ ನಿಷೇದಾಜ್ಞೆ ಜಾರಿ ಇರುವ ಕಾರಣದಿಂದ ರೈತರ ಸಂಕಷ್ಟಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವಾಗಬೇಕಾಗಿದೆ ಎಂದು ಮನವಿ ಮಾಡಿಕೊಂಡರು.

  • ಕೊರೊನಾ ವಿರುದ್ಧ ಹೋರಾಟದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ: ತಬ್ಲಿಘಿ ಜಮಾತ್ ಮುಖ್ಯಸ್ಥ

    ಕೊರೊನಾ ವಿರುದ್ಧ ಹೋರಾಟದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ: ತಬ್ಲಿಘಿ ಜಮಾತ್ ಮುಖ್ಯಸ್ಥ

    – ಜಮಾತ್‍ಗೆ ಬಂದವರು ಹೆಲ್ತ್ ಸೆಂಟರ್‌ಗೆ ತೆರಳಿ

    ನವದೆಹಲಿ: ಕೊರೊನಾ ವಿರುದ್ಧ ಹೋರಾಟದಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ, ಸರ್ಕಾರದ ನಿಯಮಗಳನ್ನು ನಾವು ಪಾಲಿಸುತ್ತೇವೆ. ಜಮಾತ್‍ಗೆ ಬಂದವರು ಹೆಲ್ತ್ ಸೆಂಟರ್ ಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಿ ಎಂದು ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಮನವಿ ಮಾಡಿದ್ದಾರೆ.

    ಘಟನೆ ಬಳಿಕ ಹೋಂ ಕ್ವಾರಂಟೈನ್‍ನಲ್ಲಿರುವ ಅವರು ತಮ್ಮ ಅನುಯಾಯಿಗಳಿಗೆ ಆಡಿಯೋ ಸಂದೇಶವನ್ನು ರವಾನಿಸಿದ್ದಾರೆ. ಆಡಿಯೋದಲ್ಲಿ ಮಾತನಾಡಿರುವ ಅವರು, ನಿಜಾಮುದ್ದಿನ್ ಘಟನೆ ಬಳಿಕ ನನ್ನ ಮೇಲೆ ದೂರು ದಾಖಲಾಗಿದೆ ನಾನು ತಲೆ ಮರೆಸಿಕೊಂಡಿದ್ದೇನೆ ಎಂದು ವರದಿಯಾಗಿದೆ. ಆದರೆ ಅದೆಲ್ಲವೂ ಸುಳ್ಳು ನಾನು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ನಲ್ಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇದಲ್ಲದೇ ಕೊರೊನಾ ವಿರುದ್ಧ ಹೋರಾಟದಲ್ಲಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕುಟುಂಬದ ಮತ್ತು ದೇಶದ ಒಳಿತಿಗಾಗಿ ನಾವು ಎಲ್ಲರೂ ಸಹಕರಿಸಬೇಕು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಜಮಾತ್‍ಗೆ ಬಂದವರು ಹೆಲ್ತ್ ಸೆಂಟರ್ ಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.

  • ಕೊರೊನಾ ಎಫೆಕ್ಟ್ – ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಕುಷ್ಟರೋಗಿಗಳು

    ಕೊರೊನಾ ಎಫೆಕ್ಟ್ – ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಕುಷ್ಟರೋಗಿಗಳು

    ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆ ರಾಯಚೂರಿನ ಕುಷ್ಟರೋಗಿಗಳ ಕಾಲೋನಿ ಜನಕ್ಕೆ ತುತ್ತು ಅನ್ನಕ್ಕೂ ಕಷ್ಟವಾಗಿದೆ. ಹೊರಗೆ ಭಿಕ್ಷೆ ಬೇಡಿ ಬದುಕುತ್ತಿದ್ದ ಜನರಿಗೆ ರಸ್ತೆಯಲ್ಲಿ ಜನರೇ ಇಲ್ಲದ ಕಾರಣಕ್ಕೆ ಭಿಕ್ಷೆಯೂ ಇಲ್ಲವಾಗಿದೆ.

    ಮಾಶಾಸನ, ರೇಷನ್ ಯಾವುದೂ ಸಿಗದೆ ಇಲ್ಲಿನ ಕುಷ್ಟ ರೋಗಿಗಳು ಹಾಗೂ ಇಲ್ಲಿನ ನೂರಾರು ಜನ ನಿವಾಸಿಗಳು ಊಟಕ್ಕಾಗಿ ಪರದಾಡುತ್ತಿದ್ದಾರೆ. ಊಟ ಕೊಡಿ, ರೇಷನ್ ಕೊಡಿ ಎಂದು ಜಿಲ್ಲಾಡಳಿತಕ್ಕೆ ಇಲ್ಲಿನ ಜನ ಒತ್ತಾಯ ಮಾಡಿದ್ದಾರೆ. ಎಲ್ಲೆಡೆ ಪಡಿತರ ಆರಂಭವಾಗಿದ್ದರೂ ಇವರಿಗೆ ಇನ್ನೂ ಪಡಿತರ ನೀಡುತ್ತಿಲ್ಲ. ಒಂದು ವಾರದಿಂದ ನಮ್ಮ ಬಗ್ಗೆ ವಿಚಾರಿಸುವವರೇ ಇಲ್ಲದಾಗಿದೆ. ನಾವು ಬದುಕುವುದು ಹೇಗೆ ನಮಗೆ ಸಹಾಯ ಮಾಡಿ ಎಂದು ಕಾಲೋನಿ ನಿವಾಸಿಗಳು ಒತ್ತಾಯಿಸಿದ್ದಾರೆ.

    ಸರ್ಕಾರ ಇಲ್ಲಿನ ಕುಷ್ಟರೋಗಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಪ್ರತ್ಯೇಕ ಬಡಾವಣೆಯನ್ನೇ ಮಾಡಿದೆ. ಆದರೆ ಕೊರೊನಾ ವೈರಸ್ ಭೀತಿಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದರಿಂದ ಇಲ್ಲಿನ ನಿವಾಸಿಗಳಿಗೆ ಊಟವೇ ಸಿಗುತ್ತಿಲ್ಲ. ಯಾರಾದರೂ ದಾನಿಗಳು ತಂದುಕೊಟ್ಟರೆ ಮಾತ್ರ ಊಟ ಎನ್ನುವಂತ ಪರಿಸ್ಥಿತಿಯಲ್ಲಿದ್ದಾರೆ.

  • ಕೊರೊನಾ ಬಗ್ಗೆ ರಾಮನಗರ ಜನ ಭಯಪಡೋ ಅವಶ್ಯಕತೆಯಿಲ್ಲ: ಮಾಜಿ ಸಿಎಂ

    ಕೊರೊನಾ ಬಗ್ಗೆ ರಾಮನಗರ ಜನ ಭಯಪಡೋ ಅವಶ್ಯಕತೆಯಿಲ್ಲ: ಮಾಜಿ ಸಿಎಂ

    ರಾಮನಗರ: ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ಜಿಲ್ಲೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

    ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 26 ಮಂದಿ ವೈದ್ಯಾಧಿಕಾರಿಗಳು ಇದ್ದು, 4 ಜನ ವೈದ್ಯರ ಕೊರತೆ ಇದೆ. ವೈದ್ಯರ ಮೂರು ಬ್ಯಾಚ್‍ಗಳನ್ನು ಮಾಡಿ ಕೆಲಸ ಮಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೋವಿಡ್- 19 ವಿರುದ್ಧ ಹೋರಾಟಕ್ಕೆ ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದಿದ್ದಾರೆ. ದೇಶವೇ ಲಾಕ್‍ಡೌನ್ ಆಗಿರುವುದರಿಂದ ರಾಮನಗರ ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು, ನಿರ್ಗತಿಕರಿಗೆ ಸಂಕಷ್ಟ ಎದುರಾಗಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿನ ನಿರ್ಗತಿಕರಿಗೆ ಎನ್‍ಜಿಓ ಮೂಲಕ ಸಹಾಯವಾಗುತ್ತಿದೆ. ಈ ಕುರಿತು ನಮ್ಮಿಂದ ಹೇಗೆ ಸಹಾಯ ಮಾಡಬಹುದು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

    ಎಪಿಎಂಸಿಯಲ್ಲಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಈಗಾಗಲೇ ಬೆಳಗಾವಿ ಚಿಂಚೊಳ್ಳಿಯಲ್ಲಿ ಕಲ್ಲಂಗಡಿ ಬೆಳೆದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸಹ ನಾನು ಮಾಹಿತಿ ಕಲೆ ಹಾಕಿದ್ದೇನೆ. ರೇಷ್ಮೆ ಗೂಡು ಬೆಳೆಗಾರರ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ರಾಮನಗರ ಮಾತ್ರವಲ್ಲದೆ ರಾಜ್ಯದಲ್ಲಿ ಬೆಳೆಗಾರರ ಅನುಕೂಲಕ್ಕಾಗಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಳೆದ ಮೂರು ದಿನಗಳಿಂದ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಕ್ರಮಕ್ಕೆ ಅನುವು ಮಾಡಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಕೆಲ ಸಾರ್ವಜನಿಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಲವರು ಮದ್ಯ ವ್ಯಸನಿಗಳಿದ್ದಾರೆ. ಏಕಾಏಕಿ ಮದ್ಯ ನಿಲ್ಲಿಸಿದ್ದರಿಂದ ಮದ್ಯವ್ಯಸನಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನಕ್ಕೆ ಮುಂದಾಗಿದೆ. ಮದ್ಯವ್ಯಸನಿಗಳಿಗೆ ನಿಮಾನ್ಸ್ ನಲ್ಲಿ ಕೌನ್ಸಿಲಿಂಗ್ ಮಾಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

    ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ತಡೆಗೆ ಮುಂಜಾಗ್ರತಾ ಕ್ರಮ ಹಾಗೂ ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ನಿರ್ಗತಿಕರು, ಬಡವರ ಅನುಕೂಲಕ್ಕಾಗಿ ಜನಪ್ರತಿನಿಧಿಗಳಿಂದ ಕೂಲಿ ಕಾರ್ಮಿಕರಿಗೆ ನೆರವು ನೀಡಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್, ಸಂಸದ ಡಿ.ಕೆ ಸುರೇಶ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

  • ಹೋಮ್ ಕ್ವಾರಂಟೈನ್‍ನಲ್ಲಿರೋರು ಫೋಟೋ ಕಳಿಸಿಲ್ಲ ಅಂದ್ರೆ ಮನೆಗೆ ಬರ್ತಾರೆ ಅಧಿಕಾರಿಗಳು

    ಹೋಮ್ ಕ್ವಾರಂಟೈನ್‍ನಲ್ಲಿರೋರು ಫೋಟೋ ಕಳಿಸಿಲ್ಲ ಅಂದ್ರೆ ಮನೆಗೆ ಬರ್ತಾರೆ ಅಧಿಕಾರಿಗಳು

    ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಸರ್ಕಾರ ಏನೇ ಕಠಿಣ ಕ್ರಮ ತೆಗೆದುಕೊಂಡು ಜನರು ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರೆ. ಆದ್ದರಿಂದ ಕೊರೊನಾ ಹಬ್ಬುವಿಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೋಮ್ ಕ್ವಾರಂಟೈನ್‍ನಲ್ಲಿರುವವರ ಮೇಲೆ ನಿಗಾ ಬಿಗಿಗೊಳಿಸಿದೆ.

    ಈಗಾಗಲೇ ಕ್ವಾರಂಟೈನ್‍ನಲ್ಲಿರುವವರು ಕೊರೊನಾ ವಾಚ್ ಮೊಬೈಲ್ ಆಪ್ ಡೌನ್‍ಲೋಡ್ ಮಾಡಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಇದೀಗ ಪ್ರತಿ ಗಂಟೆಗೆ ಒಮ್ಮೆ ತಮ್ಮ ಫೋಟೋಗಳನ್ನು ಈ ಆಪ್‍ನಲ್ಲಿ ಅಪ್ಲೋಡ್ ಮಾಡುವಂತೆ ಸರ್ಕಾರ ಖಡಕ್ ಸೂಚನೆ ಕೊಟ್ಟಿದೆ.

    ಹೋಮ್ ಕ್ವಾರಂಟೈನ್‍ನಲ್ಲಿರುವವರು ಪ್ರತಿ ಗಂಟೆಗೊಮ್ಮೆ ತಮ್ಮ ಫೋಟೋಗಳನ್ನು ಕೊರೊನಾ ವಾಚ್ ಆಪ್‍ನಲ್ಲಿ ಅಪ್ಲೋಡ್ ಮಾಡಬೇಕು. ಫೊಟೋ ಜೊತೆಗೆ ಲೊಕೇಶನ್ ಸಹ ಕಳಿಸುವುದು ಕಡ್ಡಾಯ. ಒಂದು ವೇಳೆ ಫೋಟೋ ಕಳಿಸದಿದ್ದರೆ ಅಥವಾ ಬೇರೆ ಕಡೆ ಇದ್ದು ಮನೆಯೊಳಗಿರುವ ಹಳೆಯ ಫೋಟೋ ಕಳಿಸಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.

    ಈ ಸೂಚನೆ ಪಾಲಿಸದವರನ್ನು ಮಾಸ್ ಕ್ವಾರಂಟೈನ್‍ಗೆ ಕಳಿಸುವ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೇ ಈ ಸೂಚನೆ ಪಾಲಿಸದಿದ್ದರೆ ಕೂಡಲೇ ಅವರ ಮನೆಗೆ ಅಧಿಕಾರಿಗಳು ಬಂದು ಮಾಸ್ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದೆ.

  • ಮೀಡಿಯಾದಲ್ಲಿ ಮಿಂಚಲು ವ್ಯವಸ್ಥೆಯನ್ನ ಅವ್ಯವಸ್ಥೆ ಮಾಡಬೇಡಿ: ಸಂಸದ ಸುರೇಶ್

    ಮೀಡಿಯಾದಲ್ಲಿ ಮಿಂಚಲು ವ್ಯವಸ್ಥೆಯನ್ನ ಅವ್ಯವಸ್ಥೆ ಮಾಡಬೇಡಿ: ಸಂಸದ ಸುರೇಶ್

    – ಸರ್ಕಾರ ಸಾರ್ವಜನಿಕರ ಹಿತಕಾಯುವ ಕೆಲಸ ಮಾಡುತ್ತಿದೆ

    ರಾಮನಗರ: ಸೋಶಿಯಲ್ ಮೀಡಿಯಾ, ಮಾಧ್ಯಮದಲ್ಲಿ ಮಿಂಚಲು ಗುಂಪು ಗುಂಪಾಗಿ ಸೇರಬೇಡಿ. ದೇಣಿಗೆ ಮತ್ತೊಂದು ಮಗದೊಂದು ಅಂತೇಳಿ ಬೀದಿಗೆ ಬರಬೇಡಿ. ಬಂದು ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಬೇಡಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಸಾರ್ವಜನಿಕರೇ ನಿಮ್ಮ ಬದುಕು, ನಿಮ್ಮ ಜೀವ ನಿಮ್ಮ ಕೈನಲ್ಲಿಯೇ ಇದೆ. ನೀವು ಮನೆಯಲ್ಲಿಯೇ ಉಳಿದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಲ್ಲದೇ ಯಾರೂ ಹೊರಗೆ ಬರಬೇಡಿ ಅಂದರೂ ಹೊರಗೆ ಬರುತ್ತಿದ್ದಾರೆ ದೇಣಿಗೆ, ಮಾನವೀಯತೆ ಅಂತೇಳಿ ಓಡಾಡುತ್ತಿದ್ದಾರೆ. ಸಾರ್ವಜನಿಕರ ಹಿತಕಾಯುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

    ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ಅದನ್ನ ಬಿಟ್ಟು ದೇಣಿಗೆ ಸಂಗ್ರಹ ಅಂತೆಲ್ಲ ಓಡಾಡಬೇಡಿ, ಸರ್ಕಾರವಿದೆ ಏನೇ ಸಹಾಯ ಮಾಡುವುದಿದ್ದರು ಸರ್ಕಾರ, ಜಿಲ್ಲಾಡಳಿತಕ್ಕೆ ನೀಡಿ ಅದನ್ನು ಬಡವರು ನಿರ್ಗತಿಕರಿಗೆ ತಲುಪಿಸುವ ವ್ಯವಸ್ಥೆ ಆಗುತ್ತೆ. ಹೋಂ ಕ್ವಾರಂಟೈನ್‍ನಲ್ಲಿ ಇರುವವರನ್ನು ಕೇವಲ 14 ದಿನಕ್ಕೆ ಹೊರಗೆ ಬಿಡಬೇಡಿ. ಅಮೆರಿಕದಲ್ಲಿ 14 ದಿನಗಳ ಬಳಿಕವೇ ಸಾಕಷ್ಟು ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಪ್ರತಿ ದಿನ ಆಟೋ ಮೂಲಕ ಪ್ರಚಾರ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಬೆಳೆದಂತಹ ರೇಷ್ಮೆಯನ್ನು ರೀಲರ್‍ಗಳು ಖರೀದಿಸುತ್ತಿಲ್ಲ. ಇದರಿಂದ ರೇಷ್ಮೆ ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ರೇಷ್ಮೆ ಮಾರುಕಟ್ಟೆಯು ಬಂದ್ ಆಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ನಷ್ಟ ತುಂಬಿಕೊಡಬೇಕು ಎಂದು ಬೇಡಿಕೆ ಸಲ್ಲಿಸಿದರು.

    ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳ ಬಳಿಯೇ ಹೆಚ್ಚಿನ ಜನ ಸೇರುತ್ತಾರೆ. ಹೀಗಾಗಿ ಅಲ್ಲಿಗೆ ಒಬ್ಬ ಸಿಬ್ಬಂದಿ ನೇಮಿಸಬೇಕು. ನೀರಿನ ಕಾರ್ಖಾನೆಗಳ ಮೂಲಕವೇ ನೀರು ಪೂರೈಸಲು ಸೂಚನೆ ನೀಡಬೇಕು. ಇಂದಿರಾ ಕ್ಯಾಂಟಿನ್ ಮೂಲಕ ದಿನಕ್ಕೆ ಕನಿಷ್ಟ 500 ಪ್ಯಾಕೆಟ್ ಆಹಾರಗಳನ್ನು ಸಿದ್ಧಪಡಿಸಿ, ನಿರ್ಗತಿಕರಿಗೆ ನೀಡಬೇಕು. ಇಷ್ಟು ಮಾತ್ರವಲ್ಲದೇ ಜಿಲ್ಲಾಡಳಿತವು ಇರುವ ಅನುದಾನದಲ್ಲಿ ಶೇ.10ರಷ್ಟು ಮಾತ್ರವೇ ಆರೋಗ್ಯಕ್ಕೆ ಖರ್ಚು ಮಾಡಬೇಕು ಎಂಬ ಸರ್ಕಾರ ನಿಯಮ ಸರಿ ಇಲ್ಲ. ಇದನ್ನು ಸಡಿಲಿಸಬೇಕು ಎಂದು ಅಗ್ರಹಿಸಿದರು.

    ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಬೇಕು. ಸರ್ಕಾರದಿಂದಲೇ ಉಚಿತವಾಗಿ ಮಾಸ್ಕ್ ಗಳನ್ನು ನೀಡುವ ಕೆಲಸವಾಗಬೇಕು. ಗ್ರಾಮಗಳಲ್ಲಿ ಟೈಂಪಾಸ್ ಮಾಡುವವರಿಗೆ ಸಾಕಷ್ಟು ಅರಿವು ಮೂಡಿಸಬೇಕು ಎಂದು ಮನವಿ ಸಲ್ಲಿಸಿದರು.

  • ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ

    – ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗೋದು ಬೇಡ
    – ನಾನು ಭಾರತಕ್ಕೆ ಬರಲ್ಲ, ಬಂದ್ರೆ ಸೋಂಕು ಆಗಬಹುದು

    ರೋಮ್: ಲಾಕ್‍ಡೌನ್ ಪಾಲನೆ ಮಾಡಿ, ಇಲ್ಲದಿದ್ದರೆ ಅನಾಹುತ ಆಗಬಹುದು. ಇಟಲಿಯಲ್ಲೂ ಕೊರೊನಾ ಸೋಂಕು ಪತ್ತೆ ಆದ ಕೂಡಲೇ ಲಾಕ್‍ಡೌನ್ ಹೇರಿದರು. ಆದರೂ ಲಾಕ್‍ಡೌನ್ ಮೀರಿ ಜನ ಊರೆಲ್ಲ ಸುತ್ತಾಡಿದರು. ಈಗ ಲಾಕ್‍ಡೌನ್ ಮೀರಿದ್ದಕ್ಕೆ ಇಟಲಿಯಲ್ಲಿ ಸಾವು ಹೆಚ್ಚಾಯಿತು ಎಂದು ಇಟಲಿಯಿಂದ ಕನ್ನಡತಿ ಭಾರತೀಯರಿಗೆ ಸಂದೇಶ ರವಾನಿಸಿದ್ದಾರೆ.

    ಮೈಸೂರು ಮೂಲದ ಅನುಶ್ರೀ ಇಟಲಿಯಲ್ಲಿ ನೆಲೆಸಿದ್ದು, ಅಲ್ಲಿಂದಲೇ ವಿಡಿಯೋ ಮಾಡಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಈಗ ಇಟಲಿಯಿಂದ ಮಾತನಾಡುತ್ತಿದ್ದೇನೆ. ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅದರಲ್ಲಿ ಇಟಲಿ ಕೂಡ ಟಾಪ್ ಲಿಸ್ಟಲಿದೆ. ಇಟಲಿಯಲ್ಲೂ 6 ಸಾವಿರಕ್ಕೂ ಅಧಿಕ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

    ಮೊದಲಿಗೆ ಇಟಲಿಯ ಮಿಲನ್‍ನಲ್ಲಿ ಕೊರೊನಾ ವೈರಸ್ ಕಂಡು ಬಂದಿತ್ತು. ಕೊರೊನಾ ವೈರಸ್ ಪತ್ತೆಯಾದ ಒಂದೇ ವಾರಕ್ಕೆ ಇಟಲಿ ಸರ್ಕಾರ ಲಾಕ್‍ಡೌನ್ ಮಾಡಿತ್ತು. ಆದರೆ ಜನರು ಸರ್ಕಾರ ಮಾಡಿದ ನಿಯಮವನ್ನು ಪಾಲಿಸದೇ ಮನೆಯಿಂದ ಹೊರಗಡೆ ಓಡಾಡಲು ಶುರು ಮಾಡಿದರು. ಬೇರೆ ಬೇರೆ ಊರಿಗಳಿಗೆ ಓಡಾಡಲು ಶುರು ಮಾಡಿದರು. ಇದರಿಂದ ಇಡೀ ಇಟಲಿ ದೇಶಾದ್ಯಂತ ವೈರಸ್ ವ್ಯಾಪಿಸಿದ್ದು, ಈಗ ಇಟಲಿ ಸಂಪೂರ್ಣ ಲಾಕ್‍ಡೌನ್ ಆಗಿದೆ.

    ನಾನು ಫೆ.23ರಂದು ಕೊನೆಯ ಬಾರಿಗೆ ಆಫಿಸ್‍ಗೆ ಹೋಗಿದ್ದೆ. ಸುಮಾರು ಒಂದು ತಿಂಗಳಾಯಿತು. ನಾನು ಮನೆಯಲ್ಲಿಯೇ ಇದ್ದೇನೆ, ಹೊರಗಡೆ ಹೋಗಿಲ್ಲ. ಆದರೆ ನಮ್ಮ ಜೀವನ ಕಷ್ಟವಾಗಿಲ್ಲ. ಎರಡು ವಾರಕ್ಕೊಮ್ಮೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಮಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದರು.

    ಇಟಲಿಯಲ್ಲಿ ಎರಡನೇ ವಾರ ಕೊರೊನಾ ವೈರಸ್ ಇದ್ದಾಗ 245 ಪ್ರಕರಣ ಇತ್ತು. ಈಗ ಇದೇ ಪರಿಸ್ಥಿತಿಯಲ್ಲಿ ನಮ್ಮ ಭಾರತ ಕೂಡ ಇದೆ. ಭಾರತಕ್ಕೆ ಕೊರೊನಾ ವೈರಸ್ ಬಂದು 2 ವಾರ ಆಗಿದೆ. ಇಲ್ಲಿಯವರೆಗೂ 511 ಪಾಸಿಟಿವ್ ಪ್ರಕರಣ ಆಗಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮನೆಯಲ್ಲಿರಿ. ಹೊರಗೆ ಬರಬೇಡಿ, ಎಲ್ಲೂ ಹೋಗಬೇಡಿ. ನಮ್ಮ ಭಾರತ ಇನ್ನೊಂದು ಇಟಲಿ ಆಗುವುದು ಬೇಡ. ಇಟಲಿ ಸಣ್ಣ ದೇಶ ಸುಮಾರು 6.5 ಕೋಟಿ ಜನಸಂಖ್ಯೆ ಇದೆ. ನಮ್ಮ ಕರ್ನಾಟಕದಷ್ಟೂ ಇಲ್ಲ. ನಮ್ಮ ಇಂಡಿಯಾದಲ್ಲಿ 1.3 ಬಿಲಿಯನ್ ಜನಸಂಖ್ಯೆ ಇದೆ. ದಯವಿಟ್ಟು ಯೋಚನೆ ಮಾಡಿ ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗುವುದು ಬೇಡ. ಸುಮ್ಮನೆ ಬೇರೆ ಕಡೆಗೆ ಪ್ರಯಾಣ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

    ನಾನು ಭಾರತಕ್ಕೆ ಬರಬಹುದು. ಯಾರೂ ಕೂಡ ಬರಬೇಡ ಎಂದು ಹೇಳಿಲ್ಲ. ನಾನು ಒಂದು ತಿಂಗಳಿಂದ ಮನೆಯಲ್ಲಿದ್ದೀನಿ. ಯಾವುದೇ ಕೊರೊನಾ ಲಕ್ಷಣ ನನಗಿಲ್ಲ. ನಾನು ಆರಾಮಾಗಿ ಪ್ರಯಾಣ ಮಾಡಬಹುದು. ಆದರೆ ಪ್ರಯಾಣ ಮಾಡುವಾಗ ಕೊರೊನಾ ವೈರಸ್ ಸೋಂಕು ಆಗಬಹುದು. ನಾನು ಬಂದು 14 ದಿನ ಕ್ವಾರಂಟೈನ್‌ನಲ್ಲಿ ಇರುವಾಗ ಇನ್ನೂ ನಾಲ್ವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ನಾನು ಭಾರತಕ್ಕೆ ಬರುತ್ತಿಲ್ಲ. ಭಾರತದಲ್ಲಿ ಇನ್ನೂ ಹೆಚ್ಚಾಗಿ ಕೊರೊನಾ ವೈರಸ್ ಆಗುವುದು ಬೇಡ. ಯಾರೂ ಪ್ರಯಾಣ ಮಾಡಬೇಡಿ. ಮನೆಯಲ್ಲಿರಿ ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.