Tag: government

  • ಶಾಶ್ವತವಾಗಿ ಮದ್ಯಪಾನ ನಿಷೇಧಿಸಿ – ಸರ್ಕಾರಕ್ಕೆ ರೈತ ಮುಖಂಡರ ಮನವಿ

    ಶಾಶ್ವತವಾಗಿ ಮದ್ಯಪಾನ ನಿಷೇಧಿಸಿ – ಸರ್ಕಾರಕ್ಕೆ ರೈತ ಮುಖಂಡರ ಮನವಿ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಲಾಕ್‍ಡೌನ್‍ನಿಂದಾಗಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಆದರೆ ಈಗ ಮುಚ್ಚಿರುವ ಮದ್ಯದ ಅಂಗಡಿಗಳನ್ನು ಮತ್ತೆ ತೆರೆಯಲು ಅವಕಾಶ ಕೊಡದೆ, ಶಾಶ್ವತವಾಗಿ ಮುಚ್ಚುವಂತೆ ಶಿವಮೊಗ್ಗದಲ್ಲಿ ರೈತ ಸಂಘದ ಮುಖಂಡರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ರೈತ ಸಂಘದ ಮುಖಂಡರು ಕೊರೊನಾ ವೇಳೆ ಮದ್ಯಪಾನ ನಿಷೇಧದಿಂದಾಗಿ ಕುಡಿತಕ್ಕೆ ಒಳಗಾದವರ ಕುಟುಂಬಗಳು ನೆಮ್ಮದಿಯಿಂದ ಇವೆ. ಹೀಗಾಗಿ ಇದೇ ರೀತಿ ಮದ್ಯದ ಅಂಗಡಿಗಳನ್ನು ಶಾಶ್ವತವಾಗಿ ಬಂದ್ ಮಾಡಿದರೇ ಮದ್ಯ ವ್ಯಸನಿಗಳ ಕುಟುಂಬಸ್ಥರು ನೆಮ್ಮದಿಯಿಂದ ಇರುತ್ತಾರೆ. ಆದ್ದರಿಂದ ಸರ್ಕಾರ ಹೇಗೋ ಕಳೆದ ಒಂದು ತಿಂಗಳಿನಿಂದ ಮದ್ಯದ ಮೇಲೆ ನಿರ್ಬಂಧ ವಿಧಿಸಿದೆ. ಇದನ್ನು ಹೀಗೆ ಮುಂದುವರಿಸುವಂತೆ ರೈತ ಮುಖಂಡರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಈಗಾಗಲೇ ಮದ್ಯ ಸಿಗದೆ ಮದ್ಯ ಪ್ರಿಯರು ಕಂಗಾಲಾಗಿದ್ದಾರೆ. ಈ ಮದ್ಯೆ ರೈತ ಮುಖಂಡರು ಶಾಶ್ವತವಾಗಿ ಮದ್ಯ ನಿಷೇಧಿಸಿ ಎಂದು ಮನವಿ ಸಲ್ಲಿಸಿರುವುದು ಎಣ್ಣೆ ಪ್ರಿಯರ ಕೆಂಗಣ್ಣಿಗೆ ಕಾರಣವಾಗಿದೆ.

  • ಬಿಜೆಪಿ ಸರ್ಕಾರದ ಮುತುವರ್ಜಿ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಾಗಿದೆ: ಡಿಕೆಶಿಗೆ ಬಿ.ಸಿ ಪಾಟೀಲ್ ತಿರುಗೇಟು

    ಬಿಜೆಪಿ ಸರ್ಕಾರದ ಮುತುವರ್ಜಿ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಾಗಿದೆ: ಡಿಕೆಶಿಗೆ ಬಿ.ಸಿ ಪಾಟೀಲ್ ತಿರುಗೇಟು

    – ರಾಜ್ಯದಲ್ಲಿ ಯಾವ್ದೇ ಕೋಮು ಗಲಭೆಗಳಿಲ್ಲ, ಈಗ ಇರೋದು ಕೊರೊನಾ ಮಾತ್ರ
    – ಪಕ್ಷಭೇದ ಬಿಟ್ಟು ಕೊರೊನಾ ಯುದ್ಧದಲ್ಲಿ ಹೋರಾಡೋಣ

    ಚಿತ್ರದುರ್ಗ: ಇದು ಯಾರೂ ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ. ಇಂತಹ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ-ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

    ಈ ಸರ್ಕಾರದಲ್ಲಿರುವ ಶಾಸಕರುಗಳ ಹೇಳಿಕೆಗಳು ಕೋಮು ಗಲಭೆಗಳನ್ನು ಸೃಷ್ಟಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿರು. ರಾಜ್ಯದಲ್ಲಿ ಎಲ್ಲೂ ಸಹ ಕೋಮು ಗಲಭೆಗಳ ಆತಂಕದ ಪರಿಸ್ಥಿತಿ ಇಲ್ಲ. ನಮ್ಮ ರಾಜ್ಯದಲ್ಲಿ ಈಗ ಇರೋದು ಕೇವಲ ಕೊರೊನಾ ಮಾತ್ರವೆಂದು ಮಾತಿನ ಚಾಟಿ ಬೀಸಿದರು.

    ಇದೇ ವೇಳೆ ಈ ಸರ್ಕಾರ ಕೃಷಿ ಹಾಗೂ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಕೇವಲ ಘೋಷಣೆಗಳಿಗೆ ಸೀಮಿತವಾಗಿದೆ ಎಂಬ ಡಿಕೆಶಿ ಟೀಕೆಗೆ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿ, ಕೆಪಿಸಿಸಿಯ ಹಾಲಿ ಅಧ್ಯಕ್ಷರು ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಆದರೂ ಬಿಜೆಪಿ ಸರ್ಕಾರ ಕಂಗೆಡದೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ತಿರುಗೇಟು ನೀಡಿದರು.

    ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿ ಕಾರ್ಯ ಕೈಗೊಂಡಿವೆ. ಇಂಥ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಪರಿಶ್ರಮವಹಿಸಲಾಗಿದೆ. ಬಡವರಿಗೆ ಹಾಲು, ಪಡಿತರ ಪೂರೈಕೆ ಮಾಡಲಾಗ್ತಿದೆ. ರೈತರು ಬೆಳೆದ ಪದಾರ್ಥಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

    ಹಾಗೆಯೇ ಗಂಗಾವತಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಬೆಳೆ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ. ಪರಿಹಾರ ಬಿಡುಗಡೆ ಮಾಡಿದ್ದಾರೆ. ಸಬ್ಸಿಡಿ ದರದಲ್ಲಿ ಬಿತ್ತನೆಬೀಜ, ರಸಗೊಬ್ಬರ ಲಭ್ಯವಾಗುವಂತೆ ಮಾಡಿದ್ದೇವೆ. ರಾಜ್ಯದ್ಯಂತ ಇವುಗಳ ಪೂರೈಕೆಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ಕೃಷಿಯುತ್ಪನ್ನಗಳ ಸಾಗಣೆ, ಮಾರಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ. ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ತೊಂದರೆಯಾಗಲ್ಲ. ಹಾಲನ್ನು ಸರ್ಕಾರವೇ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ. ಸರ್ಕಾರ ವಹಿಸಿರುವ ಇಷ್ಟೆಲ್ಲ ಮುತುವರ್ಜಿ, ಕಾರ್ಯ ತತ್ಪರತೆ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಗಾಗಿದೆ. ಹೀಗಾಗಿ ಅವರು ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

    ಕೊರೊನಾ ಮಹಾಮಾರಿಯನ್ನು ಎಲ್ಲರೂ ಪಕ್ಷಭೇದ ಮರೆತು ಎದುರಿಸಬೇಕಾಗಿದೆ. ಇಂತಹ ಸಮಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಚಿವರು ಮತ್ತೊಮ್ಮೆ ಪುನರುಚ್ಚರಿಸಿದರು.

  • ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಸೂಚನೆ

    ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಸೂಚನೆ

    ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

    ಕೊರೊನಾ ಭೀತಿಯಿಂದ ಕೆಲ ಸರ್ಕಾರಿ ಇಲಾಖೆಗಳಿಗೆ ರಜೆ ನೀಡಲಾಗಿತ್ತು. ಈಗ ಸೂಚಿಸಿರುವ ಎಲ್ಲ ಸರ್ಕಾರಿ ಅಧಿಕಾರಿಗಳು ಮರಳಿ ಕೆಲಸಕ್ಕೆ ಹಾಜರಗಬೇಕು ಎಂದು ವಿಜಯ್ ಭಾಸ್ಕರ್ ಸುತ್ತೋಲೆ ಹೊರಡಿಸಿ ಸೂಚಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ರಾಜ್ಯದಲ್ಲಿರುವ ಎಲ್ಲಾ ಖಜಾನೆಗಳನ್ನು ಸೇರಿದಂತೆ ಆರ್ಥಿಕ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮತ್ತು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವರ್ಗದ ಅಧಿಕಾರಿ/ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

    ಮೇಲ್ಕಾಣಿಸಿದ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸರ್ಕಾರಿ ನಿಗಮ ಮಂಡಳಿಗಳಲ್ಲಿ ಮತ್ತು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಎ ವೃಂದದ ಎಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಆದರೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ ಅಥವಾ ಸಿಬ್ಬಂದಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

  • ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ತಿರುವನಂತಪುರಂ: ಕೊರೊನಾ ವೈರಸ್‍ಗೆ ಇಡೀ ಜಗತ್ತಿನಾದ್ಯಂತ ಹರಡಿದ್ದು, ಜನರು ಭಯಭೀತಾಗಿದ್ದಾರೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ವೃದ್ಧ ದಂಪತಿ ಕೊರೊನಾ ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ ಕೇರಳದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ.

    ಇಡೀ ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೇರಳ ‘ಕೊರೊನಾ ಹಾಟ್‍ಸ್ಟಾಟ್’ ಎನ್ನಿಸಿಕೊಂಡಿತ್ತು. ಆದರೆ ಈಗ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

    ಇಷ್ಟು ದಿನ ಕೇರಳದಲ್ಲಿ ಒಂದೇ ದಿನಕ್ಕೆ ಅನೇಕ ಕೊರೊನಾ ಪಾಸಿಟಿವ್ ಕಂಡುಬರುತ್ತಿತ್ತು. ಆದರೆ ಸೋಮವಾರ ಮೂರು ಕೊರೊನಾ ಪ್ರಕರಣ ದಾಖಲಾಗಿವೆ. ಇನ್ನೂ ಭಾನುವಾರ ಕೇವಲ ಎರಡು ಪ್ರಕರಣ ಮಾತ್ರ ದೃಢಪಟ್ಟಿತ್ತು. ಈ ಮೂಲಕ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 378 ಇದೆ. ಇವರಲ್ಲಿ ಈಗಾಗಲೇ 200 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಕೇರಳದಲ್ಲಿ ಈಗ ಕೇವಲ 178 ಮಂದಿ ಕೊರೊನಾ ರೋಗಿಗಳಿದ್ದಾರೆ.

    ಪ್ರತಿದಿನ ಕೊರೊನಾ ಪಾಸಿಟಿವ್ ಪ್ರಕರಣಗಳಿಂತ ವೈರಸ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

    ಕೊರೊನಾ ನಿಯಂತ್ರಿಸಿದ್ದು ಹೇಗೆ?
    1. ಈ ಹಿಂದೆ ಕೇರಳದಲ್ಲಿ ನಿಫಾ ವೈರಸ್ ಕಂಡು ಬಂದಿತ್ತು. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಹೀಗಾಗಿ ಕೇರಳ ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮೊದಲೇ ಅಗತ್ಯ ಪೂರ್ವ ಯೋಜನೆಗಳನ್ನು ಕೈಗೊಂಡಿತ್ತು.
    2. ಕೊರೊನಾ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾದ ತಕ್ಷಣ ಸರ್ಕಾರ ಅಪಾಯಕಾರಿ ಪ್ರದೇಶಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಅಲ್ಲಿಂದ ಇತರಿಗೆ ಸೋಂಕು ತಗುಲದಂತೆ ಕ್ರಮಕೈಗೊಂಡಿತ್ತು.
    3. ಕೊರೊನಾ ವೈರಸ್ ವಿದೇಶದಿಂದ ಬಂದವರಿಂದಲೇ ಹೆಚ್ಚಾಗಿ ಹರಡುತ್ತದೆ ಎನ್ನಲಾಗಿತ್ತು. ಹೀಗಾಗಿ ಎಚ್ಚೆತ್ತ ಕೇರಳ ಸರ್ಕಾರ ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬಂದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತ್ತು. ಅಲ್ಲದೇ 5 ಸಾವಿರ ಐಸೋಲೇಷನ್ ವಾರ್ಡ್ ತೆರೆದಿತ್ತು.

    4. ವಿದೇಶ ಹಾಗೂ ಬೇರೆ ರಾಜ್ಯ ಪ್ರಯಾಣ ಮಾಡಿದ್ದವರ ಮಾಹಿತಿಯನ್ನು ಕೊಡದೆ ಮುಚ್ಚಿಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
    5. ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿತ್ತು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿತು.
    6. ಆ್ಯಪ್ ಮೂಲಕ ಕೊರೊನಾ ವೈರಸ್ ಬಗ್ಗೆ ಜನರಿಗೆ ಮಾಹಿತಿ ನೀಡಿತ್ತು.

  • ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ: ಹೆಚ್‍ಡಿಡಿ ನೇತೃತ್ವದಲ್ಲಿ ಸಭೆ

    ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ: ಹೆಚ್‍ಡಿಡಿ ನೇತೃತ್ವದಲ್ಲಿ ಸಭೆ

    ಹಾಸನ: ಕೊರೊನಾ ಸಂಕಷ್ಟದಲ್ಲೂ ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಜೆಡಿಎಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

    ಇಂದು ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ ಭೇಟಿ ನೀಡಿ ಜನಸಾಮಾನ್ಯರಿಗೆ ಹಂಚಲು ಆಹಾರ ಧಾನ್ಯಗಳ ಕಿಟ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರು ಸಂಸದರ ನಿವಾಸದಲ್ಲಿ ಚರ್ಚೆ ನಡೆಸಿದರು.

    ಈ ವೇಳೆ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜೆಡಿಎಸ್ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಕೊರೊನಾ ಎಂದುಕೊಂಡು ನಮಗೆ ಯಾವ ಅನುದಾನ ಕೊಟ್ಟಿಲ್ಲ ಎಂದರು. ಆಗ ಮಾತನಾಡಿದ ಹೆಚ್‍ಡಿ.ರೇವಣ್ಣ, ಸರ್ಕಾರದಿಂದ ಬಂದ ಹಣ ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂದರೆ ಉಸಿರಿಲ್ಲ. ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮವಿಲ್ಲ, ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಧ್ವನಿಗೂಡಿಸಿದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ, ಕಾರ್ಡ್ ಇಲ್ಲದವರಿಗೂ ರೇಷನ್ ಕೊಡುತ್ತೇವೆ ಅಂದರು. ಇದುವರೆಗೂ ಯಾರಿಗೆ ಕೊಟ್ಟಿದ್ದಾರೆ. ನಮ್ಮ ನಮ್ಮ ತಾಲೂಕು ಉಳಿಸಿಕೊಳ್ಳೋಣ ನಡೀರಿ ಈ ಕಷ್ಟ ಕಾಲದಲ್ಲಿ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ಚರ್ಚೆಗೆ ಫುಲ್ ಸ್ಟಾಪ್ ಇಟ್ಟರು.

  • ಮದ್ಯಪ್ರಿಯರಿಗೆ ಗುಡ್‍ನ್ಯೂಸ್ – ಇಂದಿನಿಂದ ಬಾರ್‌ಗಳು ಓಪನ್

    ಮದ್ಯಪ್ರಿಯರಿಗೆ ಗುಡ್‍ನ್ಯೂಸ್ – ಇಂದಿನಿಂದ ಬಾರ್‌ಗಳು ಓಪನ್

    – ಐದು ದಿನಗಳ ಕಾಲ ಎಣ್ಣೆ ಮಾರಾಟಕ್ಕೆ ಅವಕಾಶ

    ದಿಸ್ಪುರ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಮದ್ಯ ಪ್ರಿಯರು ಅಂಗಡಿ ಓವನ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು. ಇದೀಗ ಲಾಕ್‍ಡೌನ್ ನಡುವೆಯೇ ಅಸ್ಸಾಂ ಮತ್ತು ಮೇಘಾಲಯದ ಮದ್ಯದಂಗಡಿಗಳು ಇಂದಿನಿಂದ ಮತ್ತೆ ತೆರೆಯಲು ನಿರ್ಧರಿಸಿವೆ ಎಂದು ಉಭಯ ರಾಜ್ಯಗಳ ಅಬಕಾರಿ ಇಲಾಖೆಗಳು ತಿಳಿಸಿವೆ.

    ಅಸ್ಸಾಂನಲ್ಲಿ, ಮದ್ಯದಂಗಡಿಗಳು, ಸಗಟು ಗೋದಾಮುಗಳು ಮತ್ತು ಸಾರಾಯಿ ಮಳಿಗೆಗಳು ಸೇರಿದಂತೆ ಲಿಕ್ಕರ್ ಶಾಪ್ ಇಂದಿನಿಂದ ಪ್ರತಿದಿನ 7 ಗಂಟೆಗಳ ಕಾಲ ತೆರೆಯಲ್ಪಡುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಇಂದಿನಿಂದ ಏಪ್ರಿಲ್ 17 ವರೆಗೆ ಅಂದರೆ ಶುಕ್ರವಾರದವರೆಗೆ ಮದ್ಯದಂಗಡಿ ತೆರೆದಿರುತ್ತವೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಶಾಪ್ ಓಪನ್ ಆಗಿರುತ್ತವೆ. ಇದನ್ನೂ ಓದಿ: ಏಪ್ರಿಲ್ 14ರ ಬಳಿಕ ಸಿಗುತ್ತಾ ಮದ್ಯ? – 2 ದಿನದಲ್ಲಿ ಸ್ಪಷ್ಟ ನಿರ್ಧಾರ

    ಮೇಘಾಲಯದಲ್ಲಿ ಮದ್ಯದಂಗಡಿಗಳು ಮತ್ತು ಗೋದಾಮುಗಳು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ತೆರೆದಿರುತ್ತವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಕೈ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಘಾಲಯದಲ್ಲೂ ಏಪ್ರಿಲ್ 17ವರೆಗೆ ಮಾತ್ರ ಮದ್ಯದಂಗಡಿ ತೆರೆದಿರುತ್ತವೆ.

    ಅನುಮತಿ ನೀಡಲಾಗಿರುವ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮದ್ಯದಂಗಡಿಗಳು ತೆರೆದಿರುತ್ತವೆ. ಅಂಗಡಿಯಲ್ಲಿ ಕನಿಷ್ಟ ಸಿಬ್ಬಂದಿ ಕೆಲಸ ಮಾಡಬಹುದು. ಅಲ್ಲದೇ ಬಾಟಲ್ ಕೊಡುವಾಗ ಮತ್ತು ಹಣ ಪಡೆಯುವಾಗ ಗ್ರಾಹಕರು ಮತ್ತು ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಅಲ್ಲದೇ ಶಾಪ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಅವರಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ಮಾಲೀಕರೇ ಮಾಡಬೇಕು ಎಂದು ಅಸ್ಸಾಂ ಅಬಕಾರಿ ಇಲಾಖೆ ತಿಳಿಸಿದೆ.

    ಮೇಘಾಲಯ ಅಬಕಾರಿ ಆಯುಕ್ತ ಪ್ರವೀಣ್ ಬಕ್ಷಿ ಅವರು, ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ. ಜೊತೆಗೆ ಪ್ರತಿ ಮನೆಗೆ ಒಬ್ಬ ವ್ಯಕ್ತಿ ಮಾತ್ರ ಅಂಗಡಿಗೆ ಬಂದು ಮದ್ಯ ಖರೀದಿ ಮಾಡಬೇಕು. ಅಲ್ಲದೇ ಒಂದು ಪ್ರದೇಶ ಅಥವಾ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಗ್ರಾಹಕರು ಮತ್ತು ಶಾಪ್‍ನಲ್ಲಿ ಕೆಲಸ ಮಾಡುವವರಿಗೆ ಸ್ಯಾನಿಟೈಸರ್ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಕೋವಿಡ್ 19 ವೈರಸ್‍ನಿಂದ ಸರ್ಕಾರ ಮದ್ಯದಂಗಡಿಗಳನ್ನು ಮುಚ್ಚಿತ್ತು. ಆದರೆ ಜನರು ಮತ್ತೆ ಮದ್ಯದಂಗಡಿ ತೆರೆಯುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದರು. ಬಿಜೆಪಿ ಸೇರಿದಂತೆ ಮೇಘಾಲಯ ಮೈತ್ರಿ ಪಾಲುದಾರರು ಮದ್ಯದಂಗಡಿಗಳನ್ನು ಮುಚ್ಚುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಮೇಘಾಲಯದಲ್ಲಿ ವರದಿಯಾಗಿಲ್ಲ.

  • 40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

    40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

    ಮಂಡ್ಯ: ದೇಶವ್ಯಾಪಿ ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ. ಮಂಡ್ಯದ ರೈತ 40 ಲಕ್ಷ ರೂ.ವೆಚ್ಚ ಮಾಡಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ ಬೆಳೆ ಕಟಾವಿಗೆ ಬಂದರೂ ಕೊಳ್ಳುವವರೇ ಇಲ್ಲದಂತಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದ ರೈತ ಶಿವಲಿಂಗೇಗೌಡರು 40 ಲಕ್ಷ ವೆಚ್ಚದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ ಹಳದಿ, ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ಬೆಳೆದಿದ್ದರು. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ದಪ್ಪ ಮೆಣಸಿನಕಾಯಿ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುವ ಭೀತಿಯಲ್ಲಿ ಶಿವಲಿಂಗೇಗೌಡರು ಇದ್ದಾರೆ. ಮೆಣಸಿನಕಾಯಿ ಕಟಾವಿಗೆ ಬಂದಿದ್ದು, ಗಿಡದಲ್ಲೇ ಕೊಳೆಯುತ್ತಿದೆ.

    ರೇಷ್ಮೆ ಬೇಸಾಯ ಬಿಟ್ಟು ತೋಟಗಾರಿಕೆ ಬೆಳೆಯತ್ತ ಮುಖಮಾಡಿದ್ದ ರೈತ ಶಿವಲಿಂಗೇಗೌಡರಿಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಹೊಡೆತ ಬಿದ್ದಿದೆ. ಕಟಾವಿಗೆ ಬರುತ್ತಿದ್ದಂತೆ ದೇಶವ್ಯಾಪಿ ಲಾಕ್ ಡೌನ್ ಆಗಿದ್ದು, ಕೊಳ್ಳುವರಿಲ್ಲದ್ದಕ್ಕೆ ರೈತ ಮೆಣಸಿನಕಾಯಿಯನ್ನು ಕಟಾವು ಮಾಡಿಲ್ಲ. ಒಂದೆಡೆ ಸರ್ಕಾರವೇ ರೈತರ ತರಕಾರಿ, ಹಣ್ಣುಗಳನ್ನು ಖರೀದಿಸಲಿದೆ. ಹಾಪ್‍ಕಾಮ್ಸ್ ಮೂಲಕ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ. ಆದರೆ ಯಾರೊಬ್ಬರೂ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.

    ಸರ್ಕಾರ ಹಾಪ್ ಕಾಮ್ಸ್ ಮೂಲಕ ತರಕಾರಿ ಖರೀದಿಸುವ ಭರವಸೆ ನೀಡಿದ್ದಕ್ಕೆ ಶಿವಲಿಂಗೇಗೌಡರು ಅಧಿಕಾರಿಗಳನ್ನು ಭೇಟಿ ಮಾಡಿ ಮೆಣಿಸಿನಕಾಯಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

  • ಏಪ್ರಿಲ್ 14ರ ಬಳಿಕ ಸಿಗುತ್ತಾ ಮದ್ಯ? – 2 ದಿನದಲ್ಲಿ ಸ್ಪಷ್ಟ ನಿರ್ಧಾರ

    ಏಪ್ರಿಲ್ 14ರ ಬಳಿಕ ಸಿಗುತ್ತಾ ಮದ್ಯ? – 2 ದಿನದಲ್ಲಿ ಸ್ಪಷ್ಟ ನಿರ್ಧಾರ

    ಬೆಂಗಳೂರು: ಏಪ್ರಿಲ್ 14ರ ನಂತರ ಮದ್ಯ ಸಿಗುತ್ತಾ? ಮದ್ಯ ಪ್ರೇಮಿಗಳ ಈ ಪ್ರಶ್ನೆಗೆ ಶೀಘ್ರವೇ ಶುಭಸುದ್ದಿ ಸಿಗುವ ಲಕ್ಷಣ ಕಾಣಿಸಿದೆ.

    ಏಪ್ರಿಲ್ 30ರವರೆಗೆ ಲಾಕ್‍ಡೌನ್ ವಿಸ್ತರಿಸುವ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಎಂ ಯಡಿಯೂರಪ್ಪ, ಇನ್ನೆರಡು ದಿನದಲ್ಲಿ ನಿರ್ಧಾರವಾಗಲಿದೆ. ಮದ್ಯ ಮಾರಾಟದ ಬಗ್ಗೆಯೂ ಆಗಲೇ ನಿರ್ಧಾರ ಮಾಡುತ್ತೇವೆ. ಪ್ರಧಾನಿ ಮೋದಿ ಮಾರ್ಗಸೂಚಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಬಾರ್‍ಗಳಿಗೆ ಅವಕಾಶ ನೀಡದೇ ಎಂಎಸ್‍ಐಎಲ್ ಅಂಗಡಿಗಳ ಮೂಲಕ ಮದ್ಯ ಮಾರಾಟಕ್ಕೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಎರಡು ದಿನಗಳ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟವಾದ ನಿರ್ಧಾರ ಪ್ರಕಟವಾಗಲಿದೆ.

    ರಾಜ್ಯದಲ್ಲಿ ಮದ್ಯ ಸಿಗದೇ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಕುಗುತ್ತಿದ್ದಾರೆ ಎನ್ನುವ ವಿಚಾರವನ್ನು ಮನಶಾಸ್ತ್ರಜ್ಞರು ತಿಳಿಸಿದ್ದರು.

    ಮದ್ಯ ಸಿಗದ ಕಾರಣ ದುಬಾರಿ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದ ಹಲವು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂಗಡಿಗೆ ಕನ್ನ ಹಾಕಿ ಮದ್ಯವನ್ನು ಕಳ್ಳತನ ಮಾಡಿದ್ದ ಪ್ರಕರಣಗಳು ದಾಖಲಾಗಿದ್ದವು.

  • ರೈತರ ಉತ್ಪನ್ನಗಳನ್ನ ಸರ್ಕಾರವೇ ಖರೀದಿಸಿ ಮಾರಾಟ ಮಾಡಲಿ: ಎಚ್‍ಡಿಕೆ

    ರೈತರ ಉತ್ಪನ್ನಗಳನ್ನ ಸರ್ಕಾರವೇ ಖರೀದಿಸಿ ಮಾರಾಟ ಮಾಡಲಿ: ಎಚ್‍ಡಿಕೆ

    – ಸರ್ಕಾರ ಮೂಗಿಗೆ ತುಪ್ಪ ಸವರೋ ಬಗ್ಗೆ ಮಾತನಾಡ್ತಿದೆ
    – ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ತಡಮಾಡದೇ ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಕುಮಾರಸ್ವಾಮಿ ಈ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ರೈತರಿಗೆ ಪರಿಹಾರ ನೀಡಬೇಕೆಂದು ಹೇಳಿದ್ದಾರೆ. ಮೊದಲಿಗೆ “ಲಾಕ್ ಡೌನ್ 3ನೇ ವಾರದ ಮುಕ್ತಾಯಕ್ಕೆ ಬರುತ್ತಿದ್ದರೂ ಬೆಳೆದ ಬೆಳೆ ಮಾರಾಟವಾಗದೆ ಜಮೀನಿನಲ್ಲೇ ಕೊಳೆಯುತ್ತಿರುವುದನ್ನು ಕಂಡು ರೈತರು ‘ಹೆತ್ತ ಮಕ್ಕಳು’ ಅಕಾಲ ಮರಣಕ್ಕೀಡಾದಂತೆ ಸಂಕಟ ಪಡುತ್ತಿದ್ದಾರೆ. ರೈತರ ಸಂಕಷ್ಟ ಪರಿಹರಿಸಲು ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತರು ಬೆಳೆದ ಬೆಳೆಗಳನ್ನು ಸಮೀಕ್ಷೆ ಮಾಡಿ ಮೂರು ದಿನದಲ್ಲಿ ಪರಿಹಾರ ನೀಡಲಿ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ.

    ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಸುಗಮ ಮಾರಾಟ, ಸಾಗಾಣಿಕೆ ಮತ್ತು ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಇನ್ನೂ ಕ್ರಿಯಾಶೀಲವಾಗಿಲ್ಲ. ಬರೀ ಚಿಂತನ-ಮಂಥನದಲ್ಲೇ ಕಾಲ ಕಳೆಯುವುದನ್ನು ಬಿಟ್ಟು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದಿದ್ದಾರೆ.

    ರಾಜ್ಯಾದ್ಯಂತ ದಾಳಿಂಬೆ, ದ್ರಾಕ್ಷಿ, ಬಾಳೆ, ಕಲ್ಲಂಗಡಿ, ಕರ್ಬುಜ, ಮಾವು ಸೇರಿದಂತೆ ಹೂವು ತರಕಾರಿ ಉತ್ಪನ್ನಗಳನ್ನು ಬೆಳೆದ ರೈತರು ಸಾಗಣೆ, ಮಾರುಕಟ್ಟೆ ಸಿಗದೆ ಅಲ್ಲೇ ಕೊಳೆಸುವ, ಮಾರುಕಟ್ಟೆಯಲ್ಲಿ ಸುರಿದು ಹೋಗುತ್ತಿರುವ ಪ್ರಸಂಗಗಳು ದಿನನಿತ್ಯ ಹೆಚ್ಚಾಗುತ್ತಿವೆ ಎಂದು ಬೇಸರದಿಂದ ಹೇಳಿದ್ದಾರೆ.

    ಸರ್ಕಾರ ‘ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ’ ಎನ್ನುವ ಮೂಗಿಗೆ ತುಪ್ಪ ಸವರುವ ಮಾತನಾಡುತ್ತಿದೆಯೇ ಹೊರತು ಕಂಗಾಲಾದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಇದಕ್ಕೆ ರಾಜ್ಯದಾದ್ಯಂತ ರೈತರು ಪರಿತಪಿಸುತ್ತಿರುವ ನೂರಾರು ಉದಾಹರಣೆಗಳು ಪುಷ್ಟಿ ನೀಡುತ್ತಿವೆ.

    ಕೈಗೆ ಬಂದ ಬೆಳೆಯು ಮಾರಾಟವಾಗದೆ ಮುಂದೇನು? ಎಂದು ಚಿಂತಾಕ್ರಾಂತರಾಗಿರುವ ರೈತರಿಗೆ ಸಹಾಯ ಹಸ್ತಚಾಚಲು ಆಮೆ ವೇಗದಲ್ಲಿರುವ ಸರ್ಕಾರ, ಮುಂಗಾರು ಬೆಳೆಗೆ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕ ಕೊರತೆ ಉಂಟಾಗದಂತೆ ಎಚ್ಚರ ವಹಿಸುತ್ತಿರುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

    “ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ತಡಮಾಡದೇ ಕ್ರಮಕೈಗೊಳ್ಳಬೇಕು. ಲಾಕ್‍ಡೌನ್ ಮುಂದುವರಿಕೆ ನಿಚ್ಚಳವಾಗಿರುವ ಹಿನ್ನೆಲೆಯಲ್ಲಿ ತುರ್ತು ಕಾರ್ಯೋನ್ಮುಖವಾಗಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

  • ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

    ಧಾರವಾಡದಲ್ಲಿ ಏ. 30ರವರೆಗೆ ಕಡಲೆ ಖರೀದಿಗೆ ನೋಂದಣಿ – ಮೇ 12ರವರೆಗೆ ಖರೀದಿ ಪ್ರಕ್ರಿಯೆ

    ಧಾರವಾಡ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಯೋಜನೆ ಅಡಿ ಜಿಲ್ಲೆಯ 13 ಖರೀದಿ ಕೇಂದ್ರಗಳಲ್ಲಿ ಏಪ್ರಿಲ್ 30ರವರೆಗೆ ರೈತರಿಂದ ನೋಂದಾಯಿಸಿ ಕೊಂಡು, ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕಡಲೆ ಖರೀದಿ ಕುರಿತು ರೈತ ಮುಖಂಡರು ಹಾಗೂ ಕೃಷಿ ಉತ್ಪನ್ನ ಮಾರಾಟ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಈ ವೇಳೆ ಮಾತನಾಡಿದ ಡಿಸಿ ದೀಪಾ ಚೋಳನ್ ಅವರು, ಹಿಂಗಾರು ಹಂಗಾಮಿನ ಕಡಲೆ ಕಾಳು ಉತ್ಪನ್ನವನ್ನು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಯೋಜನೆ ಅಡಿ ಖರೀದಿಸಿಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯನ್ನು ಏಜೇನ್ಸಿಯಾಗಿ ಗುರುತಿಸಲಾಗಿದೆ. ಎಫ್.ಎ.ಕ್ಯೂ ಗುಣಮಟ್ಟದ ಕಡಲೆ ಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಲಿಗೆ 4,875 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಹುಬ್ಬಳ್ಳಿ, ಧಾರವಾಡ ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಣಾಂಗಗಳು ಸೇರಿದಂತೆ ಜಿಲ್ಲೆಯ ಹುಬ್ಬಳ್ಳಿ, ಉಪ್ಪಿನಬೆಟಗೇರಿ, ನೂಲ್ವಿ, ಹೆಬಸೂರು, ಕುಂದಗೋಳ, ಯಲಿವಾಳ, ಯರಗುಪ್ಪಿ, ಅಣ್ಣಿಗೇರಿ, ನವಲಗುಂದ, ಮೊರಬ ಹಾಗೂ ತಿರ್ಲಾಪುರ ಗ್ರಾಮಗಳಲ್ಲಿ ಆರಂಭಿಸಿರುವ 13 ಸ್ಥಳಗಳಲ್ಲಿ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತರ ನೋಂದಣಿಗೆ ಏಪ್ರಿಲ್ 30ರವರೆಗೆ ಅವಕಾಶವಿದೆ. ಮೇ 12ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು. ರಾಜ್ಯ ಮತ್ತು ಕೇಂದ್ರ ಉಗ್ರಾಣ ನಿಗಮಗಳಿಗೆ ಈ ಪ್ರಕ್ರಿಯೆಗೆ ಸಹಕಾರ ನೀಡಲು ತಿಳಿಸಲಾಗುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ಗೋವಿನಜೋಳ ಖರೀದಿಗೆ ಮಾಜಿ ಶಾಸಕ ಕೊನರಡ್ಡಿ ಆಗ್ರಹ:
    ಕಡಲೆ ಖರೀದಿ ಕೇಂದ್ರ ಬಂದ್ ಮಾಡಬಾರದಿತ್ತು, ರೈತರು ಗೋವಿನಜೋಳ ಮನೆಯಲ್ಲಿಟ್ಟುಕೊಂಡು ಕುಳಿತಿದ್ದಾರೆ. ಮೊನ್ನೆ ಕೃಷಿ ಸಚಿವರು ಗೋವಿನಜೋಳ ಖರೀದಿ ಕೇಂದ್ರ ಆರಂಭಿಸ್ತೇವೆ ಅಂದಿದ್ದರು. ಆದರೆ ಇನ್ನೂ ಆರಂಭವಾಗಿಲ್ಲ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಅವರು, ಸರ್ಕಾರ ಎರಡ್ಮೂರು ತಿಂಗಳ ರೇಷನ್ ಮುಂಚಿತ ಕೊಡ್ತೇವಿ ಎಂದಿದೆ. ಆದರೆ ಅಧಿಕಾರಿಗಳು ಬೆರಳಚ್ಚು ಕೇಳುತ್ತಲೇ ಇದ್ದಾರೆ. ಸರ್ಕಾರದ ನಿಯಮ ಸರಿಯಾಗಿ ಜಾರಿಯಾಗಬೇಕು ಎಂದು ಮನವಿ ಮಾಡಿದರು. ಹಾಗೆಯೇ ರೈತರ ಉತ್ಪನ್ನ ತರಲು ತೊಂದರೆ ಕೊಡಬಾರದು. ಕೃಷಿ ಚಟುವಟಿಕೆಗಳಿಗೆ ತೊಂದರೆ ಮಾಡಬಾರದು ಎಂದು ಡಿಸಿಗೆ ಕೇಳಿದ್ದೇವೆ, ಜೊತೆಗೆ ಸಿಎಂ ಪರಿಹಾರ ನಿಧಿಗೆ 50 ಸಾವಿರ ನೀಡಿದ್ದೇವೆ ಎಂದರು.