– ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
– ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ
ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.
ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.
ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
– ವಿದ್ಯುತ್ ಬಿಲ್, ಪೆಟ್ರೋಲ್, ಡೀಸೆಲ್ ದರ ಕಡಿತ ಮಾಡಿ
– ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯ
ಬೆಂಗಳೂರು: ದೇಶದ ಜಿಡಿಪಿ ಕುಸಿತವಾಗೋ ಮುನ್ಸೂಚನೆ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಹಣ ಉಳಿಸುವ ಮಾರ್ಗಗಳನ್ನ ಸರ್ಕಾರ ಹುಡುಕಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯ ಮಾಡಿದ್ದಾರೆ. ಮೊದಲಿಗೆ, “ರಿಸರ್ವ್ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯನ ಕೈಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ‘ಕಾಸ್ಟ್ ಆಫ್ ಲಿವಿಂಗ್’ ಕಡಿಮೆ ಮಾಡುವುದು ಸರ್ಕಾರಗಳ ಆದ್ಯತೆ ಆಗಲಿದೆ” ಎಂದಿದ್ದಾರೆ.
ರಿಸರ್ವ ಬ್ಯಾಂಕ್ ಒಳಗೊಂಡಂತೆ ಅನೇಕ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ತೀವ್ರ ಕುಸಿತಕ್ಕೆ ಇಳಿಯುವ ಮುನ್ಸೂಚನೆ ಕೊಟ್ಟಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಸಾಮಾನ್ಯನ ಕೈಯಲ್ಲಿ ಹಣ ಉಳಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ 'ಕಾಸ್ಟ್ ಆಫ್ ಲಿವಿಂಗ್' ಕಡಿಮೆ ಮಾಡುವುದು ಸರಕಾರಗಳ ಆದ್ಯತೆ ಆಗಲಿದೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) April 27, 2020
ಲಾಕ್‍ಡೌನ್ ತೆಗೆದ ತಕ್ಷಣವೇ ಆರ್ಥಿಕ ಸ್ಥಿತಿ ಯಥಾಸ್ಥಿತಿಗೆ ಮರಳಲಾರದು. ಜಿಡಿಪಿ ಬೆಳವಣಿಗೆ ಈ ಹಿಂದೆ ಇದ್ದ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗಬಹುದು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಈ ಹಠಾತ್ ಶಾಕ್‍ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಬೇಕು. ಇದಕ್ಕೆ ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲು, ಕಾಲೇಜುಗಳ ಫೀಸ್ ಕಡಿತ ಮಾಡಿ. ಅಲ್ಲದೇ ವಿದ್ಯುತ್ ಬಿಲ್, ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ ಎಂದು ಅಭಿಪ್ರಾಯವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
ಈ ಹಠಾತ್ ಶಾಕ್ ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಲು ಅನುವಾಗುವಂತೆ ಬಾಡಿಗೆ ಮುಂದೂಡಿಕೆ ಬದಲಾಗಿ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲು/ಕಾಲೇಜುಗಳ ಫೀಸ್ ಕಡಿತ, ವಿದ್ಯುತ್ ಬಿಲ್ ಕಡಿತ, ಪೆಟ್ರೋಲ್/ಡೀಸೆಲ್ ದರ ಕಡಿತ ಘೋಷಣೆ ಮಾಡುವುದು ಸೂಕ್ತ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) April 27, 2020
ಅನೇಕ ಖಾಸಗಿ ಕಂಪನಿಗಳು ಈಗಾಗಲೇ ಸಿಬ್ಬಂದಿ ಕಡಿತ ಮತ್ತು ಸಂಬಳ ಕಡಿತ ಮಾಡುವ ತೀರ್ಮಾನ ತೆಗೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ. ಹೀಗಾಗಿ ಸರ್ಕಾರ ಜನಕಲ್ಯಾಣ ಯೋಜನೆಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗಿರುವುದರಿಂದ ಕುಬೇರ ಉದ್ಯೋಗಪತಿಗಳಿಂದ ಕೊರೊನಾ ತೆರಿಗೆಯನ್ನು ಸಂಗ್ರಹಿಸಲಿ” ಎಂದಿದ್ದಾರೆ.
“ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ರೈತರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಜೀವನೋಪಾಯಗಳ ರಕ್ಷಣೆ ಮಾಡುವುದು ತುರ್ತಿನ ಆದ್ಯತೆಯಾಗಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರು ಇತ್ಯಾದಿ ನಗರ ಪ್ರದೇಶದ ಬಡ ಸಮುದಾಯಕ್ಕೋಸ್ಕರ ಸರಕಾರ ಹೆಚ್ಚಿನ ಪರಿಹಾರ ಒದಗಿಸುವ ಕೆಲಸ ಮಾಡಬೇಕಾಗಿದೆ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) April 27, 2020
ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಎಲ್ಲ ವರ್ಗದ ಜನ ಆತಂಕದಲ್ಲಿದ್ದಾರೆ. ದೇಶದ ಬೆನ್ನೆಲುಬು ರೈತನು ಕೂಡ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಕಷ್ಟ ನಷ್ಟ ಅನುಭವಿಸುವಂತಾಗಿದೆ.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಎಂಬಲ್ಲಿ ಕೇರಳದ ಎರ್ನಾಕುಲಂ ಮೂಲದ ಶೈಜು 100 ಎಕರೆ ಜಮೀನನ್ನು ಲೀಸ್‍ಗೆ ಪಡೆದು ಅನಾನಸ್ ಕೃಷಿ ಮಾಡಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಭರ್ಜರಿ ಫಸಲು ಕೂಡ ಬಂದಿತ್ತು. ಆದರೆ ಬೆಳೆ ಕಟಾವಿಗೆ ಬರುವ ಹೊತ್ತಿನಲ್ಲಿ ಲಾಕ್‍ಡೌನ್ ಆದ ಕಾರಣ ಸುಮಾರು 300 ಟನ್ ಅನಾನಸ್ ಬೆಳೆ ಜಮೀನಿನಲ್ಲೇ ಉಳಿಯುವಂತಾಗಿದೆ.
ಎರ್ನಾಕುಲಂ ಮೂಲದ ಕೃಷಿಕ ಶೈಜು, ಅನಾನಸ್ ಬೆಳೆಯುವ ಉದ್ದೇಶದಿಂದ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂ. ಸಾಲ ಮಾಡಿ ಅನಾನಸ್ ಕೃಷಿ ಮಾಡಿದ್ದರು. ಲಾಕ್‍ಡೌನ್ ಇಲ್ಲದಿದ್ದರೆ ಕೃಷಿಕ ಬೆಳೆದ ಅನಾನಸ್ ಉತ್ತರ ಭಾರತದಲ್ಲಿ ಉತ್ತಮ ಬೆಲೆಗೆ ಮಾರಾಟ ಆಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಅನಾನಸ್ ಬೆಳೆ ಹಾಳಾಗುತ್ತಿದೆ. ಹೀಗಾಗಿ ಸರ್ಕಾರ ನೆರವಿಗೆ ಬರುವಂತೆ ಕೃಷಿಕ ಶೈಜು ಮನವಿ ಮಾಡಿದ್ದಾರೆ.
ಬೆಂಗಳೂರು: ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡುವ ಮೂಲಕ ನನ್ನ ಮೇಲಿರುವ ಸಿಟ್ಟಿಗೆ ರಾಮನಗರ ಜನತೆ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟವಿ ಜೊತೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಎರಡೆರಡು ಬಾರಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ಅಧಿಕಾರಿಗಳ ಮಾತು ಕೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತ ನಿರ್ಧಾರ ಮಾಡ್ಕೊಬೇಡಿ ಎಂದು ಹೇಳಿದ್ದೆ. ನನಗೆ ಪ್ರಾರಂಭಿಕ ಹಂತದಲ್ಲೇ ಬಂದ ಮಾಹಿತಿ ಪ್ರಕಾರ, ಸರ್ಕಾರಿ ಅಧಿಕಾರಿ ಪ್ರಸ್ತುತ ಇರುವ ಎಡಿಜಿಪಿ ಅವರೇ ಖುದ್ದು ಪಾದರಾಯನಪುರದ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಬಳಿ ಮಾತನಾಡಿದ್ದೆ. ಅವರೂ ನನ್ನ ಮಾತಿಗೆ ಸ್ಪಂದಿಸಿದ್ದರು. ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುವ ಬಗ್ಗೆ ಮರು ಚಿಂತನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದರು.
ಆದರೆ 4 ಗಂಟೆ ಬಳಿಕ ಮೊದಲ ಬ್ಯಾಚ್ 49 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ಕಳುಹಿಸಿದರು. ಮರುದಿನ ಇನ್ನೂ 72 ಮಂದಿಯನ್ನು ಕರೆದುಕೊಂಡು ಬಂದರು. ಈಗ ಮೊದಲ ಬ್ಯಾಚ್‍ನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಮಧ್ಯರಾತ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. 2ನೇ ಬ್ಯಾಚ್‍ನಲ್ಲಿದ್ದ 72 ಮಂದಿಯಲ್ಲಿ 3 ಜನಕ್ಕೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೂಡ ನನ್ನ ಬಳಿ ಮಾಹಿತಿ ಇದೆ. ಈ ಮೂವರನ್ನೂ ಕೂಡ ಜೈಲಿನಿಂದ ಆಸ್ಪತ್ರೆಗೆ ಪ್ರಚಾರ ಆಗದಂತೆ ಶಿಫ್ಟ್ ಮಾಡಬೇಕು ಎಂದು ನೋಡುತ್ತಿದ್ದಾರೆ. ಹೀಗಾಗಿ ನಾನು ಸರ್ಕಾರಕ್ಕೆ ಹೇಳುತ್ತಿದ್ದೇನೆ, ಇಂತಹ ಸನ್ನಿವೇಷವನ್ನ ರಾಜಕಾರಣಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು.
ಇಂದು ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಈ ಆರೋಪಿಗಳನ್ನು ರಾಮನಗರದಿಂದ ಮತ್ತೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತೆ, ಅಲ್ಲಿ ಹಜ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ. ಅಧಿಕಾರಿಗಳು ಆರೋಪಿಗಳನ್ನು ಕರೆತರುವಾಗ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಕರೆದುಕೊಂಡು ಬಂದಿದ್ದಾರೆ. ಇದರಲ್ಲಿ ಅಧಿಕಾರಿಗಳ ಲೋಪವಿದೆ. ಹೀಗಾಗಿ ರಾಮನಗರದಿಂದ ಬೆಂಗಳೂರಿಗೆ ಶಿಫ್ಟ್ ಮಾಡುವಾಗಲಾದರೂ ವೈದ್ಯರ ಸಲಹೆಗಳನ್ನು ಪಡೆದು ಸಿಬ್ಬಂದಿ, ಅಧಿಕಾರಿಗಳಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಸಿಟ್ಟು ಯಾಕೆ..?
ನಾನು ಸಿಎಂ ಆಗಿದ್ದಾಗ ಎಡಿಜಿಪಿ ಅಲೋಕ್ ಮೋಹನ್ ಅವರು ಬೆಂಗಳೂರಿನ ಸಿಟಿ ಕಮಿಷನರ್ ಆಗಬೇಕೆಂದು ಎರಡು ಮೂರು ಬಾರಿ ನನ್ನ ಬಳಿ ಬಂದಿದ್ದರು. ಆಗ ನಾನು ಅವರಿಗೆ ಸ್ಪಂದನೆ ಮಾಡಿರಲಿಲ್ಲ. ಹೀಗಾಗಿ ಅವರಿಗೆ ನನ್ನ ಮೇಲಿದ್ದ ಸಿಟ್ಟನ್ನು ನನ್ನ ಜಿಲ್ಲೆಯ ಜನರ ಮೇಲೆ ತೋರಿಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಯಾಕೆ ಅವರು ರಾಮನಗರ ಜೈಲನ್ನೇ ಆರಿಸಿ, ಆರೋಪಿಗಳನ್ನು ಅಲ್ಲಿಗೇ ಶಿಫ್ಟ್ ಮಾಡಿ ಎಂದರು? ನಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಅವರು ಮಾತ್ರ ಒತ್ತಡ ಹಾಕಿ ರಾಮನಗರ ಜೈಲಿಗೇ ಆರೋಪಿಗಳನ್ನು ಶಿಫ್ಟ್ ಮಾಡಿದರು. ಇದೆಲ್ಲಾ ಕಾಕತಾಳಿಯ ಇರಬಹುದು. ಆದರೆ ಇಂದು ಬೆಳಗ್ಗೆ ಅವರು ನಡೆದುಕೊಂಡ ರೀತಿ ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಗೃಹ ಸಚಿವರು ಗುರುವಾರ ರಾತ್ರಿಯೇ ಆರೋಪಿಗಳನ್ನು ಶಿಫ್ಟ್ ಮಾಡುತ್ತೇವೆ ಎಂದಿದ್ದರು. ಇತ್ತ ಬೆಳಗ್ಗೆ ಸ್ಥಳೀಯ ಅಧಿಕಾರಿಗಳು ಜೈಲಿನ ಮುಂದೆ ಬಸ್ಸುಗಳನ್ನು ತಂದು ಆರೋಪಿಗಳನ್ನು ಶಿಫ್ಟ್ ಮಾಡಲು ಮುಂದಾದಾಗ, ಎಡಿಜಿಪಿ ಅವರು ಅವರ ಮೇಲೆ ತಮ್ಮ ಅಧಿಕಾರ ಪ್ರಯೋಗ ಮಾಡಿದ್ದಾರೆ. ಶಿಫ್ಟ್ ಮಾಡಲು ನಾನು ಅನುಮತಿ ಕೊಡಬೇಕು. ಯಾರ ಅನುಮತಿ ಪಡೆದು ಶಿಫ್ಟ್ ಮಾಡಲು ನಿರ್ಧಾರ ತೆಗೆದುಕೊಂಡಿರಿ ಎಂದು ಎಡಿಜಿಪಿ ರೇಗಾಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಯೇ ನೇರ ಹೊಣೆ:
ನನ್ನ ಮೇಲಿನ ಸಿಟ್ಟಿಗೆ ಎಡಿಜಿಪಿ ರಾಮನಗರ ಜನತೆಯ ಜೀವದ ಜೊತೆ ಚೆಲ್ಲಾಟ ಆಡಿದ್ದು ಸರಿಯಲ್ಲ. ಅಧಿಕಾರಿಯ ಉದ್ಧಟತನಕ್ಕೆ ಜೈಲಿನ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಿತಿ ಏನಾಗಬೇಡ? ನನ್ನ ಮೇಲಿನ ಸಿಟ್ಟಿಗೆ ಹೀಗೆ ಮಾಡಿದ್ದಾರೆ ಎನಿಸುತ್ತಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗಕ್ಕೆ ಶಿಫ್ಟ್ ಮಾಡಿದಾಗಲೇ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ನನ್ನ ಜಿಲ್ಲೆಯ ಜನರಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರ ಹಾಗೂ ಈ ಸಲಹೆ ಕೊಟ್ಟ ಅಧಿಕಾರಿಯೇ ನೇರ ಹೊಣೆ ಹೊರಬೇಕು ಎಂದಿದ್ದೆ. ನನ್ನ ಪ್ರಕಾರ ಈ ವಿಚಾರದಲ್ಲಿ ಸರ್ಕಾರದ ದಾರಿ ತಪ್ಪಿಸಲಾಗಿದೆ. ಅಧಿಕಾರಿ ಹೇಳಿದ ತಕ್ಷಣ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡಬಾರದಾಗಿತ್ತು. ನಾವು ಹೇಳಿದ ರೀತಿ ಕೆಲಸ ಮಾಡಿ ಎಂದು ಸರ್ಕಾರ ಎಚ್ಚರಿಕೆ ಕೊಟ್ಟು ಕೆಲಸ ಮಾಡಿಸಬೇಕಿತ್ತು. ಹೀಗಾಗಿ ಸರ್ಕಾರದಿಂದಲೂ ಲೋಪ ಆಗಿದೆ ಎಂದು ಕಿಡಿಕಾಡಿದರು.
ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುತ್ತಾರೆ ಎಂದಾಗಲೇ ರಾಮನಗರದ ಹಲವು ಮಂದಿ ನನಗೆ ಬೆಳಗ್ಗೆಯಿಂದಲೇ ಕರೆ ಮಾಡುತ್ತಾ ಹೆದ್ದಾರಿಯಲ್ಲೇ ವಾಹನಗಳನ್ನು ತಡೆಯುತ್ತೇವೆ ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದರು. ಆಗ ನಾನು ಕಾರ್ಯಕರ್ತರಿಗೆ ಹಾಗೂ ಜನರಿಗೆ ಹಾಗೆ ಮಾಡಬೇಡಿ ಎಂದಿದ್ದೆ. ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳಲು ಹೋಗಬೇಡಿ ಎಂದು ಮನವಿ ಮಾಡಿದ್ದೆ. ಇಷ್ಟೆಲ್ಲ ಆದ ನಂತರವೂ ಈ ಘಟನೆ ನಡೆದು ಹೋಗಿದೆ ಎಂದು ಎಚ್‍ಡಿಕೆ ಅಸಮಾಧಾನ ಹೊರಹಾಕಿದರು.
ಇಲ್ಲಿಯವರೆಗೆ ನಾನೆಂದೂ ಸರ್ಕಾರಕ್ಕೆ ಮುಜುಗರ ತರುವಂತೆ ರಾಜಕೀಯ ಮಾಡಿಲ್ಲ. ಸರ್ಕಾರಕ್ಕೆ ಬೆಂಬಲ ಕೊಟ್ಟಿದೆ. ಕೊರೊನಾ ಸೋಂಕಿತರು ಇದ್ದಾರೆ ಎಂದು ಗೊತ್ತಿದ್ದರೂ ಯಾಕೆ ಅವರು ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿದರು? ಸಲಹೆ ಕೊಟ್ಟವರು ಯಾರು? ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ 1,500 ಬೆಡ್‍ಗಳಲ್ಲಿ ಈ 120 ಆರೋಪಿಗಳನ್ನು ಇರಿಸಲು ಆಗುತ್ತಿರಲಿಲ್ಲವಾ? ರಾಮನಗರಕ್ಕೇ ಯಾಕೆ ಕರೆತಂದಿರಿ? ಸೋಂಕು ಇಲ್ಲದೇ ರಾಮನಗರದ ಜನ ಶಾಂತ ರೀತಿಯಿಂದ ಇದ್ದಾರೆ. ಆದರೆ ಇಂದು ಈ ಘಟನೆಯಿಂದ ಜನರನ್ನು ಆತಂಕಕ್ಕೀಡು ಮಾಡಿದ್ದೀರಿ. ಜನರ ಜೊತೆಗೆ ಅಧಿಕಾರಿಗಳೇ ಹೆದರಿ ಹೋಗಿದ್ದಾರೆ. ಈ ಪರಿಸ್ಥಿತಿಗೆ ಕಾರಣ ನೀವೇ ತಾನೆ? ಹೀಗೆ ಮಾಡೋದಾಗಿದ್ದರೇ 1 ತಿಂಗಳು ಯಾವ ಪುರುಷಾರ್ಥಕ್ಕೆ ನೀವು ಲಾಕ್‍ಡೌನ್ ಮಾಡಿದ್ದು? ಜನ ನಿಮ್ಮ ಮಾತು ಕೇಳಿದಕ್ಕೆ ಈ ರೀತಿ ವಾತಾವರಣ ಸೃಷ್ಟಿಸಿದ್ದೀರಾ? ಎಂದು ಗೃಹ ಸಚಿವರಿಗೆ ಹೆಚ್‍ಡಿಕೆ ಪ್ರಶ್ನಿಸಿದರು.
ಪಾದರಾಯನಪುರ ಆರೋಪಿಗಳು ಬಿಟ್ಟರೆ ರಾಮನಗರದಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಆದರೆ ಈಗ ರಾಮನಗರದ ಜೈಲಿನ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಅವರಿಗೆ ಮನೆ ಮಾಲೀಕರು ಮನೆಯನ್ನು ಖಾಲಿ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಈ ಅಧಿಕಾರಿಗಳು, ಸಿಬ್ಬಂದಿಗೆ ಸೋಂಕು ತಗುಲಿದರೆ ಇಡೀ ಜಿಲ್ಲೆಗೆ ಸಮಸ್ಯೆ ಪ್ರಾರಂಭವಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಕಿಡಿಕಾರಿದರು.
ನನ್ನ ಮಗನ ಮದುವೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಗಳನ್ನು ಪಾಲಿಕೊಂಡು, ನನ್ನ ತೋಟದ ಮನೆಯಲ್ಲಿ ಮಾಡಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ಇದು ತಪ್ಪು, ದೇವೇಗೌಡರನ್ನ ಬಂಧಿಸಿ ಎನ್ನುವ ರೀತಿ ಸುದ್ದಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ನಮ್ಮ ಕೆಲ ಸ್ನೇಹಿತರು ಹೇಳಿಕೆ ಕೊಟ್ಟರು. ಈಗ ಈ ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿರುವ ಬಗ್ಗೆ ಮಹಾನುಭಾವರು ಏನು ಹೇಳುತ್ತಾರೆ? ಯಾರನ್ನ ಹೊಣೆ ಮಾಡುತ್ತಾರೆ? ಯಾರನ್ನ ಜೈಲಿಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.
ಐಸಿಎಂಆರ್ ಸಲಹೆಗಳನ್ನು ಪಾಲಿಸುವಲ್ಲಿ ಸರ್ಕಾರ ಮಹಾನ್ ಅಪರಾಧ ಮಾಡಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿದ್ದು ಸರ್ಕಾರ ಮಾಡಿರುವ ವಿವೇಕರಹಿತ ತೀರ್ಮಾನ ಎಂಬುದು ನನ್ನ ಅಭಿಪ್ರಾಯ. ಕೇಂದ್ರದ ಸಲಹೆ, ನಿಯಮಗಳನ್ನ ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದರು.
ಕೋಲ್ಕತ್ತಾ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯಗಳು ಅನೇಕ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿವೆ. ಈ ನಡುವೆ ಪಶ್ಚಿಮ ಬಂಗಾಳ ಸರ್ಕಾರ ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದೆ.
ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ)ಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಕೊರೊನಾ ವೈರಸ್ ಮೊಬೈಲ್ ಫೋನ್‍ಗಳ ಮೂಲಕ ಹರಡುವ ಸಾಧ್ಯತೆ ಇದೆ. ಅಲ್ಲದೇ ಡಬ್ಲ್ಯುಎಚ್‍ಒ ಮಾರ್ಗಸೂಚಿಗಳ ಅನುಸಾರ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳು ತಮ್ಮ ಮೊಬೈಲ್ ಫೋನ್‍ಗಳನ್ನು ಹೊರಗಡೆ ಇಟ್ಟು ಬರಬೇಕು. ನಂತರ ಆಸ್ಪತ್ರೆಯಿಂದ ಹೋಗುವಾಗ ಫೋನ್‍ಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ಹೇಳಿದ್ದಾರೆ.
ದೇಶಾದ್ಯಂತ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕೊರತೆ ಉಂಟಾಗಿದೆ. ಅಲ್ಲದೇ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರಿಗೂ ಸಾಕಷ್ಟು ಸುರಕ್ಷತಾ ಕ್ರಮಗಳ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ಎಂಟು ವೈದ್ಯಕೀಯ ಸಂಸ್ಥೆಗಳು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತೆ ಒದಗಿಸುವಂತೆ ಮನವಿ ಮಾಡಲಾಗಿದೆ.
“ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅನುಮತಿಯೊಂದಿಗೆ ಅಧಿಕ ಕೊರೊನಾ ವೈರಸ್ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಪ್ರದೇಶದಲ್ಲಿ ಕನಿಷ್ಠ ಒಂದು ಕೇಂದ್ರವನ್ನು ತೆರೆಯಬೇಕು. ಅಲ್ಲದೇ ಐಸಿಎಂಆರ್ ಮಾರ್ಗಸೂಚಿಗಳ ಅನುಸಾರ ಪರೀಕ್ಷೆಯನ್ನು ಮಾಡಬೇಕು. ಪ್ರತಿ ಉಪವಿಭಾಗದ ಮಟ್ಟದಲ್ಲಾದರೂ ಮಾದರಿ ಸಂಗ್ರಹ ಕೇಂದ್ರ ಇರಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ 14 ವೈದ್ಯಕೀಯ ಕಾಲೇಜುಗಳು ಕೊರೊನಾ ವೈರಸ್ ಪರೀಕ್ಷೆ ನಡೆಸಲು ಪ್ರಾರಂಭಿಸಿವೆ. ಐಸಿಎಂಆರ್ ಕಮಾಂಡ್ ಆಸ್ಪತ್ರೆ, ಅಲಿಪೋರ್ ಹಾಗೂ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಮೊದಲಿಗೆ ಹಾಟ್‍ಸ್ಟಾಟ್‍ಗಳಲ್ಲಿ ಶೀಘ್ರದಲ್ಲೇ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಇತರ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗುತ್ತದೆ.
Novel #coronavirus spreads through mobile phones&a decision has been taken, as per WHO guidelines, to control the spread of infection. All doctors, medical staff, & patients must deposit their mobile phones outside and collect it while leaving the hospital: WB Chief Secy (22.04) pic.twitter.com/6hTMptCgPP
ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಸರ್ಕಾರಿ ಕಚೇರಿ, ಐಟಿ-ಬಿಟಿ, ಗೂಡ್ಸ್ ಸರ್ವೀಸ್, ಕೃಷಿ ಚಟುವಟಿಕೆ, ಎಪಿಎಂಸಿ ಮತ್ತು ಇನ್ನಿತರ ತುರ್ತು ಸೇವೆಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿ ಆಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಬೈಕ್ ಮತ್ತು ಕಾರುಗಳು ನಿಂತಿವೆ. ಇದನ್ನೂ ಓದಿ: ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?
ಹೆಬ್ಬಾಳದ ಕೊಡಿಗೇಹಳ್ಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಪ್ರತಿಯೊಂದು ವಾಹನದ ಪಾಸ್ ಚೆಕ್ ಮಾಡಿ ಬಿಡುತ್ತಿದ್ದಾರೆ. ಹೀಗಾಗಿ ಪಾಸ್ ಚೆಕ್ ಮಾಡುವ ಸಂದರ್ಭದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತುಕೊಳ್ಳುತ್ತಿವೆ. ಈ ಮಧ್ಯೆ ಅನಗತ್ಯವಾಗಿ ಓಡಾಡುವ ವಾಹಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.
ಇನ್ನೂ ಕೆ.ಆರ್.ಸರ್ಕಲ್‍ನಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದು, ಪಾಸ್ ಇಲ್ಲದೆ ಇರುವ ವಾಹನಗಳನ್ನ ಸೀಜ್ ಮಾಡುತ್ತಿದ್ದಾರೆ. ಕೆಲಸಕ್ಕೆ ತೆರಳುತ್ತಿರುವ ಸಿಬ್ಬಂದಿಯ ಐಡಿ ಕಾರ್ಡ್ ಚೆಕ್ ಮಾಡಿ ಬಿಡಲಾಗುತ್ತಿದೆ. ಅಲ್ಲದೇ ಕಾವೇರಿ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಟೌನ್‍ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ 1400 ರೂಪಾಯಿ ಪೆನ್ಷನ್ ಹಣ 9 ತಿಂಗಳುಗಳಿಂದ ಬಾರದ ಕಾರಣ ಎರಡು ಕಾಲಿನಲ್ಲಿ ಸ್ವಾಧೀನವಿಲ್ಲದ ಮಹಿಳೆಯೊಬ್ಬಳು ಓರ್ವ ಮಗನೊಂದಿಗೆ ಸರಿಯಾಗಿ ಊಟವಿಲ್ಲದೆ ಸಂಕಟ ಪಡುತ್ತಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದಲ್ಲಿ ನಡೆದಿದೆ.
ವಿಕಲಚೇತನೆ ಭಾಗ್ಯಲಕ್ಷ್ಮಿ ತನ್ನ ಮಗನೊಂದಿಗೆ ಅರಸೀಕೆರೆ ಪಟ್ಟಣದಲ್ಲಿ ವಾಸವಿದ್ದು ಹೂಕಟ್ಟಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಲಾಕ್‍ಡೌನ್ ಆದ ನಂತರ ಹೂ ಕಟ್ಟುವ ಕಾಯಕಕ್ಕೂ ಕುತ್ತು ಬಿದ್ದಿದೆ. ಪರಿಣಾಮ ದಿನದ ದುಡಿಮೆಯಿಲ್ಲದೆ, ಓರ್ವ ಮಗನನ್ನು ಸಾಕಲಾಗದೇ ವಿಕಲಚೇತನೆ ಭಾಗ್ಯಲಕ್ಷ್ಮಿ ಸಂಕಟ ಪಡುತ್ತಿದ್ದಾರೆ.
ಭಾಗ್ಯಲಕ್ಷ್ಮಿಗೆ ಎರಡು ಕಾಲಿನಲ್ಲಿ ಸ್ವಾಧೀನ ಇಲ್ಲ. ಹೀಗಾಗಿ ಸರ್ಕಾರದಿಂದ 1400 ರೂಪಾಯಿ ಪೆನ್ಷನ್ ಬರುತ್ತಿತ್ತು. ಅಕೌಂಟ್ ನಂಬರ್‍ನಲ್ಲಿ ತಾಂತ್ರಿಕ ದೋಷವಿದೆ ಎಂದು ಹೇಳಿ ಕಳೆದ ಒಂಬತ್ತು ತಿಂಗಳಿಂದ ಅಧಿಕಾರಿಗಳು ಭಾಗ್ಯಲಕ್ಷ್ಮಿಗೆ ಬರುತ್ತಿದ್ದ ಪೆನ್ಷನ್ ನಿಲ್ಲಿಸಿದ್ದಾರೆ. ಇದರಿಂದ ಮೊದಲೇ ಬಡತನದಲ್ಲಿ ದಿನ ದೂಡುತ್ತಿದ್ದ ಭಾಗ್ಯಲಕ್ಷ್ಮಿ ಬದುಕು ಕೊರೊನಾ ಲಾಕ್‍ಡೌನ್ ನಂತರ ನಿತ್ಯ ನರಕವಾಗಿದೆ.
ಒಂದು ಹೊತ್ತಿನ ಊಟಕ್ಕೂ, ಅಗತ್ಯ ವಸ್ತುಕೊಳ್ಳಲು ಪರದಾಡುವಂತಾಗಿದೆ. ಭಾಗ್ಯಲಕ್ಷ್ಮಿ ಪೆನ್ಷನ್ ಹಣಕ್ಕಾಗಿ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾಗಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ಮಹಿಳೆಗೆ ರಾಜ್ಯ ಸರ್ಕಾರ ಆದಷ್ಟು ಬೇಗ ನೆರವಿನ ಹಸ್ತ ಚಾಚಿ ಸ್ಪಂದಿಸಬೇಕಿದೆ.
ಧಾರವಾಡ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆಗಳು ಉಂಟಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು(ನರೇಗಾ) ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಪಂಚಾಯತ್‍ಗಳಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭವಾಗವೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ದೇವಲಿಂಗಿಕೊಪ್ಪದ ಕೆರೆಗೆ ನೀರಿನ ಕಾಲುವೆ ನಿರ್ಮಾಣ ಕಾರ್ಯ, ಬೀರುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಂಡಲಗಟ್ಟಿ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿ ಸೇರಿದಂತೆ ರಸ್ತೆ, ದನದ ಕೊಟ್ಟಿಗೆ, ಜಂಗಲ್ ಕಟಾವು ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಾರಂಭವಾಗಿವೆ.
ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳಿಗೆ ಸರ್ಕಾರ ನಿಯಮಾವಳಿಗಳನ್ನು ನೀಡಿದೆ. ಕೃಷಿಹೊಂಡ, ಬದು ನಿರ್ಮಾಣ, ಎರೇಹುಳು ಗೊಬ್ಬರ ಘಟಕದಂತಹ ಚಟುವಟಿಕೆಗಳಿಗೆ ಹೆಚ್ಚು ಅವಕಾಶವಿದೆ. ಉದ್ಯೋಗ ಬಯಸುವವರಿಗೆ ಹಾಗೂ ಕೂಲಿಗಾರರಿಗೆ ಕೆಲಸ ನೀಡಲಾಗುವುದು. ಕೂಲಿ ದರವನ್ನು ಏ. 1ರಿಂದ 249 ರೂಪಾಯಿಗಳಿಂದ 275 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ ಸತೀಶ್ ತಿಳಿಸಿದ್ದಾರೆ.
ಹೈದರಾಬಾದ್: ಜ್ವರ, ಕೆಮ್ಮು ಮತ್ತು ಶೀತ ಎಂದು ಬಂದು ಮಾತ್ರೆ ತೆಗದುಕೊಂಡು ಹೋಗುವವರ ವಿವರವನ್ನು ಪಡೆದುಕೊಳ್ಳಿ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮೆಡಿಕಲ್ ಶಾಪ್‍ಗಳಿಗೆ ಸೂಚನೆ ನೀಡಿವೆ.
ದೇಶದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ದೇಶನ್ನೇ ಲಾಕ್‍ಡೌನ್ ಮಾಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಂಕಿತರ ಪತ್ತೆಗಾಗಿ ರಾಜ್ಯ ಸರ್ಕಾರಗಳು ವಿವಿಧ ನಿಯಮಗಳನ್ನು ಅನುಸರಿಸುತ್ತಿವೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ.
ಲಾಕ್‍ಡೌನ್ ಇದ್ದರೂ ದೇಶದ್ಯಾಂತ ಮೆಡಿಕಲ್ ಶಾಪ್‍ಗಳು ಓಪನ್ ಇವೆ. ಈ ಮೆಡಿಕಲ್‍ಗಳಿಗೆ ನಮಗೆ ಶೀತ, ಕೆಮ್ಮು ಮತ್ತು ಜ್ವರ ಇದೆ ಎಂದು ಮಾತ್ರೆ ತೆಗೆದುಕೊಳ್ಳಲು ಬರುವವರ ವಿವರವನ್ನು ಮೆಡಿಕಲ್ ಶಾಪ್ ಮಾಲೀಕರು ಪಡೆದುಕೊಳ್ಳಬೇಕು. ಜೊತೆಗೆ ಪ್ರತಿದಿನ ನಾವು ಸೂಚಿಸಿದ ಸ್ಥಳೀಯ ಅಧಿಕಾರಿಗಳಿಗೆ ಅದನ್ನು ನೀಡಬೇಕು. ಆ ಅಧಿಕಾರಿಗಳು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದು ಸರ್ಕಾರಗಳು ತಿಳಿಸಿವೆ.
ಇತ್ತೀಚೆಗೆ ಕೊರೊನಾ ಲಕ್ಷಣಗಳು ಇಲ್ಲದಿರುವ ವ್ಯಕ್ತಿಗಳಲ್ಲಿ ಸೋಂಕು ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗುತ್ತಿದೆ. ಕೆಲವರು ರೋಗದ ಲಕ್ಷಣ ಇದ್ದರೂ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿಲ್ಲ ಆದ್ದರಿಂದ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ. ಈಗಾಗಲೇ ಅಂಧ್ರಪ್ರದೇಶದಲ್ಲಿ 603 ಕೊರೊನಾ ಪ್ರಕರಣಗಳು ಮತ್ತು ತೆಲಂಗಾಣದಲ್ಲಿ 800 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಇಡೀ ಭಾರತದಲ್ಲಿ 15,712 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 507 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 2,231 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಈವರೆಗೆ ಇಡೀ ವಿಶ್ವದಲ್ಲಿ 23,29,651 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 1,60,721 ಜನರು ಮೃತಪಟ್ಟಿದ್ದಾರೆ. ವಿಶ್ವವ್ಯಾಪಿ 5,95,433 ಜನರು ರೋಗದಿಂದ ಗುಣವಾಗಿ ಹೊರಬಂದಿದ್ದಾರೆ.
ಹುಬ್ಬಳ್ಳಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸವಾರರಿಗೆ ರಿಲಾಕ್ಸ್ ನೀಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯತನಕ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಿದ್ದು, ನನಗೆ ಸರಿ ಅನ್ನಿಸುತ್ತಿಲ್ಲ ಎಂದರು.
ಇಲ್ಲಿಯವರೆಗೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಇಲ್ಲ. ಆದರೆ ದ್ವಿಚಕ್ರ ವಾಹನ ಸವಾರರಿಗೆ ರಿಲ್ಯಾಕ್ಸ್ ನೀಡಿದರೆ ಗತಿ ಏನು ಎಂದು ಪ್ರಶ್ನಿಸಿದ ಅವರು, ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದರೇ ಅವರು ಗ್ರಾಮೀಣ ಭಾಗಕ್ಕೆ ಹೋಗುತ್ತಾರೆ. ಯಾರಲ್ಲಿ ಕೊರೊನಾ ಇರುತ್ತೆ ಎಂದು ಯಾರಿಗೆ ಗೊತ್ತು. ಆಗ ಏನಾದರು ಗ್ರಾಮೀಣ ಪ್ರದೇಶದಲ್ಲಿ ಸೋಂಕು ಬಂದರೆ ಏನ್ ಗತಿ ಎಂದು ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕ ಹಿತಾಸಕ್ತಿಯಿಂದ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲನೆ ಮಾಡಬೇಕು. ಸಿಎಂಗೆ ನಾನು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರದ ನಿರ್ಧಾರದಂತೆ ಲಾಕ್‍ಡೌನ್ ಇರುವ ಮೇ 3ರವರೆಗೂ ಇದೇ ಪರಸ್ಥಿತಿ ಮುಂದುವರಿಸಬೇಕಿತ್ತು. ಈವಾಗಲೇ ಜನ ಮುಗಿಬಿಳುತ್ತಾರೆ ಈ ರೀತಿ ರಿಲ್ಯಾಕ್ಸ್ ನೀಡಿದರೆ ಹೇಗೆ ಎಂದು ಬಸವರಾಜ್ ಹೊರಟ್ಟಿ ಅಸಮಾಧಾನ ಹೊರ ಹಾಕಿದರು.