Tag: government

  • ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಮದ್ಯದಂಗಡಿ ತೆರೆದದ್ದು ತಪ್ಪು: ಚೌಕಿಮಠ ಸ್ವಾಮೀಜಿ ಕಿಡಿ

    ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಮದ್ಯದಂಗಡಿ ತೆರೆದದ್ದು ತಪ್ಪು: ಚೌಕಿಮಠ ಸ್ವಾಮೀಜಿ ಕಿಡಿ

    ರಾಯಚೂರು: ತನ್ನ ಬೊಕ್ಕಸ ತುಂಬಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರ ಮದ್ಯದಂಗಡಿ ತೆರೆದಿರುವುದು ಸರಿಯಲ್ಲ ಎಂದು ರಾಯಚೂರಿನ ಚಿಕ್ಕಸೂಗುರಿನ ಚೌಕಿಮಠದ ಸಿದ್ದಲಿಂಗ ಮಹಾಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ಮದ್ಯಪಾನ ನಿಷೇಧಕ್ಕೆ ಕೆಲ ಸಂಘ ಸಂಸ್ಥೆಗಳು ನಿರಂತರ ಹೋರಾಟ ನಡೆಸಿದ್ದರೂ ಸಾಧ್ಯವಾಗದ್ದನ್ನ ಕೊರೊನಾ ವೈರಸ್ ಮಾಡಿತ್ತು. ಲಾಕ್‍ಡೌನ್ ವೇಳೆ ಶೇ. 90ರಷ್ಟು ಜನ ಸಂಪೂರ್ಣವಾಗಿ ಮದ್ಯಪಾನ ತ್ಯಜಿಸಿದ್ದರು. ಇನ್ನಷ್ಟು ದಿನ ಮುಂದುವರೆದಿದ್ದರೆ ಉಳಿದ ಜನರು ಮದ್ಯಪಾನ ಬಿಡುತ್ತಿದ್ದರು. ಆದ್ರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಆಸೆಗೆ ಮದ್ಯದಂಗಡಿಗಳನ್ನ ತೆರೆದಿದೆ ಎಂದು ಕಿಡಿಕಾರಿದರು.

    ಕೂಲಿಕಾರರನ್ನ ಅವರ ಊರುಗಳಿಗೆ ಕರೆದುಕೊಂಡು ಬರಲಾಗುತ್ತಿದೆ. ಆದರೆ ಯಾರೂ ನಿಯಮಗಳನ್ನ ಪಾಲಿಸುತ್ತಿಲ್ಲ. ಸ್ವತಃ ಮಂತ್ರಿಗಳೇ ಕ್ವಾರಂಟೈನ್‍ಗೆ ಹೋಗುತ್ತಿರುವಾಗ ಸರ್ಕಾರ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.

    ಮಠ ಹಾಗೂ ಮಠಾಧೀಶರನ್ನ ಸರ್ಕಾರ ನಿರ್ಲಕ್ಷಿಸದೇ ನಮ್ಮ ಸಲಹೆಗಳನ್ನ ಪರಿಗಣಿಸಬೇಕು. ಉತ್ತರ ಕರ್ನಾಟಕದ ಮಠಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶ್ರೀಮಂತ ಮಠಗಳಿಗೆ ಸರ್ಕಾರಗಳು 10 ಕೋಟಿ, 20 ಕೋಟಿ ರೂ. ಅನುದಾನ ನೀಡಿದೆ. ಅಂತೆಯೆ ನಮ್ಮ ಮಠಗಳಿಗೂ ಅನುದಾನ ನೀಡಬೇಕು ಎಂದು ಸ್ವಾಮಿಜಿ ಮನವಿ ಮಾಡಿದರು.

  • ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

    ಶಿವಮೊಗ್ಗ: ನಾಳೆಯಿಂದ ಕಂಟೈನ್‍ಮೆಂಟ್ ಜೋನ್‍ಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಮದ್ಯದಂಗಡಿಗಳು ತೆರೆಯಲಿವೆ. ಆದರೆ ಮದ್ಯ ಖರೀದಿಗೆ ಸರ್ಕಾರ ಕೆಲ ಷರತ್ತುಗಳು ಮತ್ತು ಮಿತಿಯನ್ನು ಹೇರಿದೆ.

    ಕೊರೊನಾ ಲಾಕ್‍ಡೌನ್ ನಿಂದ ಹಲವಾರು ದಿನಗಳಿಂದ ಮುಚ್ಚಿದ್ದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರವೂ ಕೆಲ ನಿಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಒಂದು ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ಮದ್ಯ ನೀಡಬೇಕು ಎಂದು ನಿಗದಿ ಮಾಡಿದೆ.

    ಪ್ರತಿಯೊಬ್ಬ ಗ್ರಾಹಕನಿಗೆ 2.3 ಲೀ. ಮದ್ಯ ಅಥವಾ 6 ಕ್ವಾಟರ್, 4 ಬಾಟಲ್ ಬೀರ್ ಅಥವಾ 6 ಪಿಂಟ್ ಬಾಟಲಿಗಳನ್ನು ಮಾತ್ರ ಮಾರಾಟ ಮಾಡಬೇಕು ಅದಕ್ಕಿಂತ ಹೆಚ್ಚಿನ ಮದ್ಯವನ್ನು ಒಬ್ಬನೇ ಗ್ರಾಹಕನಿಗೆ ಮಾರಾಟ ಮಾಡುವಂತಿಲ್ಲ. ಅಲ್ಲದೇ ಗ್ರಾಹಕನಿಗೆ ಕೇವಲ ಪಾರ್ಸಲ್ ಮಾತ್ರ ನೀಡಬೇಕು ಕೌಂಟರ್ ನಲ್ಲಿ ಕುಡಿಯುವುದಕ್ಕೆ ಅವಕಾಶ ನೀಡಬಾರದು. ಜೊತೆಗೆ ಮದ್ಯದ ಅಂಗಡಿಯಲ್ಲಿ ಕೇವಲ 5 ಮಂದಿ ಮಾತ್ರ ಇರಬೇಕು. ಇವರು ಮಾಸ್ಕ್, ಕೈಗವಸು, ಸ್ಯಾನಿಟೈಜರ್ ಬಳಕೆ ಮಾಡಬೇಕು ಎಂದು ಸೂಚಿಸಿದೆ.

    ಇದರ ಜೊತೆಗೆ ಮದ್ಯದಂಗಡಿಗೆ ಬಂದು ಮದ್ಯಕೊಳ್ಳುವವರು ಗುಂಪಿನಲ್ಲಿ ಬರಬಾರದು. ಸುಮಾರು ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಂಗಡಿ ಮುಂಭಾಗದಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳಬೇಕು. ಬ್ಯಾರಿಕೇಡ್ ಅಳವಡಿಸಬೇಕು. ಸಿಸಿ ಕ್ಯಾಮರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಂಗಡಿ ಮಾಲೀಕರೆ ನೇಮಿಸಿಕೊಳ್ಳುವ ಮೂಲಕ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

    ಷರತ್ತುಗಳು ಏನು?
    1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
    2. ವೈನ್‍ಶಾಪ್, ಎಂಆರ್‍ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
    3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
    4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
    5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
    6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
    7. ಮದ್ಯಕೊಂಡು ಕೊಳ್ಳುವವರಿಗೆ ಮಾಸ್ಕ್ ಕಡ್ಡಾಯ
    8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
    9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
    10. 6 ಅಡಿ ಸಾಮಾಜಿಕ ಅಂತರ ಇರಬೇಕು

  • ಮಳೆಗೆ ಮನೆ ಬಿದ್ದು ವರ್ಷವೇ ಕಳೆಯಿತು – ದನದ ಕೊಟ್ಟಿಗೆಯಲ್ಲೇ ಆಶಾ ಕಾರ್ಯಕರ್ತೆ ಕುಟುಂಬ ವಾಸ

    ಮಳೆಗೆ ಮನೆ ಬಿದ್ದು ವರ್ಷವೇ ಕಳೆಯಿತು – ದನದ ಕೊಟ್ಟಿಗೆಯಲ್ಲೇ ಆಶಾ ಕಾರ್ಯಕರ್ತೆ ಕುಟುಂಬ ವಾಸ

    – ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಿಲ್ಲ

    ಶಿವಮೊಗ್ಗ: ಕೊರೊನಾ ವೈರಸ್ ಕಾಣಿಸಿಕೊಂಡ ದಿನದಿಂದ ವೈದ್ಯರು, ದಾದಿಯರ ರೀತಿ ಆಶಾ ಕಾರ್ಯಕರ್ತೆಯರು ಸಹ ತಮ್ಮ ಜೀವವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಇಂತಹ ಆಶಾ ಕಾರ್ಯಕರ್ತೆಗೆ ಇರುವುದಕ್ಕೆ ಒಂದು ಸೂರಿಲ್ಲ. ಗುಡಿಸಿಲಿನಲ್ಲಿ ವಾಸಿಸುತ್ತಿರುವ ಈ ಕುಟುಂಬ ಪ್ರತಿದಿನ ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡು ಕಾಲದೂಡುವಂತಾಗಿದೆ.

    ಶಿವಮೊಗ್ಗದ ರಾಮೇನಕೊಪ್ಪದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೀತಿ ಎಂಬವರ ಮನೆ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ. ದನದ ಕೊಟ್ಟಿಗೆಗೂ ಯೋಗ್ಯವಲ್ಲದ ಮನೆಯಲ್ಲಿ ಕುಟುಂಬದ ವೃದ್ಧರು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ವಾಸಮಾಡುತ್ತಿದ್ದಾರೆ.

    ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಮಳೆಗೆ ಪ್ರವಾಹ ಬಂದು ಇದ್ದ ಮನೆ ಬಿದ್ದು ಹೋಗಿದೆ. ಅಂದಿನಿಂದ ಈ ಕುಟುಂಬ ದನದ ಕೊಟ್ಟಿಗೆಯಲ್ಲಿ ವಾಸಿಸುತ್ತಿದೆ. ಅದು ಯಾವಾಗ ಬೀಳುತ್ತದೋ ಎಂಬ ಭಯದ ನಡುವೆ ಈ ಕುಟುಂಬ ಕಾಲದೂಡುತ್ತಿದೆ. ಸಂಜೆ ಆಯಿತು ಅಂದರೆ ಹಾವು, ಚೇಳುಗಳ ಕಾಟ ಇದೆ.

    ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈ ಕುಟುಂಬಕ್ಕೆ ಇದುವರೆಗೂ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಹೀಗಾಗಿ ಕೊಟ್ಟಿಗೆಯಲ್ಲಿಯೇ ವಾಸಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಹ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

    ಸರ್ಕಾರ ಪ್ರತಿವರ್ಷ ಗ್ರಾಮ ಪಂಚಾಯ್ತಿ, ಸ್ಥಳೀಯ ಸಂಸ್ಥೆ ಮೂಲಕ ಆಶ್ರಯ ವಸತಿ ಯೋಜನೆಯಡಿ ಸಾವಿರಾರು ಮನೆಗಳನ್ನು ಕೊಡುತ್ತೇವೆ ಎಂದು ಹೇಳುತ್ತೆ. ಆದರೆ ಅವೆಲ್ಲಾ ಎಲ್ಲಿ ನಿರ್ಮಾಣ ಆಗುತ್ತಿದೆ ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಹ ಇದೇ ಜಿಲ್ಲೆಯವರು, ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲೆಯಲ್ಲಿಯೇ ಇಂತಹ ಸ್ಥಿತಿ ಇದ್ದರೆ ಇನ್ನೂ ರಾಜ್ಯದ ಇತರೆಡೆಗಳ ಸ್ಥಿತಿ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಕಂಟೈನ್‍ಮೈಂಟ್ ವಲಯ ಹೊರತುಪಡಿಸಿ ರಾಜ್ಯಾದ್ಯಂತ ಸಿಗುತ್ತೆ ಎಣ್ಣೆ – ಷರತ್ತುಗಳು ಏನು?

    ಕಂಟೈನ್‍ಮೈಂಟ್ ವಲಯ ಹೊರತುಪಡಿಸಿ ರಾಜ್ಯಾದ್ಯಂತ ಸಿಗುತ್ತೆ ಎಣ್ಣೆ – ಷರತ್ತುಗಳು ಏನು?

    ಬೆಂಗಳೂರು: ಲಾಕ್‍ಡೌನ್ ನಡುವೆ ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್‍ನ್ಯೂಸ್ ನೀಡಿದೆ. ಸೋಮವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ.

    ರಾಜ್ಯದಲ್ಲಿ ಸೋಮವಾರದಿಂದ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಿ ಅಬಕಾರಿ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಶನಿವಾರ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ರೆಡ್‍ಝೋನ್ ಸೇರಿದಂತೆ ಉಳಿದ ಕಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ. ನಂತರ ರಾಜ್ಯ ಸರ್ಕಾರ ಲಾಕ್‍ಡೌನ್ 3.0 ಮಾರ್ಗಸೂಚಿಗಳನ್ನು ಪ್ರಕಟಿಸಿತು. ಇದು ಮೇ 4ರಿಂದ ಮೇ 17ರವರೆಗೂ ಜಾರಿಯಲ್ಲಿ ಇರುತ್ತದೆ. ಇದನ್ನೂ ಓದಿ: ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ಷರತ್ತುಗಳು ಏನು?
    1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
    2. ವೈನ್‍ಶಾಪ್, ಎಂಆರ್‌ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
    3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
    4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
    5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
    6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
    7. ಮದ್ಯ ಕೊಂಡುಕೊಳ್ಳುವ ಗ್ರಾಹಕರಿಗೆ ಮಾಸ್ಕ್ ಕಡ್ಡಾಯ
    8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
    9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
    10. 6 ಅಡಿ ಸಾಮಾಜಿಕ ಅಂತರ ಇರಬೇಕು

    ಅಬಕಾರಿ ಇಲಾಖೆಯೇನೋ ಎಣ್ಣೆ ಸಿಗುತ್ತೆ ಅಂತ ಹೇಳಿದೆ. ಆದರೆ ಅದನ್ನ ಉಳಿಸಿಕೊಳ್ಳೋದು ಮಾತ್ರ ಎಣ್ಣೆ ಪ್ರಿಯರ ಕೈಲಿದೆ. ಯಾಕೆಂದರೆ ಸರಿಯಾಗಿ ನಿಯಮ ಪಾಲಿಸದಿದ್ರೆ, ನೂಕು ನುಗ್ಗಲು ಉಂಟಾದರೆ ತಕ್ಷಣ ಮದ್ಯದಂಗಡಿ ಮುಚ್ಚುವುದಾಗಿ ಅಬಕಾರಿ ಸಚಿವ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.

    ಕೆಲವು ವಿರೋಧಗಳ ನಡುವೆಯೇ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಉಳಿಸಿಕೊಳ್ಳೋದು, ಬಿಡೋದು ಎಣ್ಣೆ ಪ್ರಿಯರಿಗೆ ಬಿಟ್ಟಿದೆ. ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯ ಜನರಿಗೂ ಎಣ್ಣೆ ಬೇಕು ಅಂದರೆ ಸರಿಯಾಗಿ ಲಾಕ್‍ಡೌನ್ ನಿಯಮ ಪಾಲಿಸಿ ಸೋಂಕು ಮುಕ್ತ ಝೋನ್ ಆಗಬೇಕಿದೆ.

    ಕರ್ನಾಟಕ ಸರ್ಕಾರ ಲಾಕ್‍ಡೌನ್ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಶನಿವಾರ ತನ್ನ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕರ್ನಾಟಕವನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನಾಗಿ ಸರ್ಕಾರ ವಿಂಗಡನೆ ಮಾಡಿದೆ. ಕೊನೆಯ 21 ದಿನದಿಂದ ಪ್ರಕರಣ ಪತ್ತೆ ಆಗದ ಸ್ಥಳಗಳು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ. ಗ್ರೀನ್ ಹಾಗೂ ರೆಡ್ ಝೋನ್ ಬೈಫರಿಕೇಟ್ ಮಾಡಲಾಗದ ಸ್ಥಳ ಅರೆಂಜ್ ಝೋನ್ ಪಟ್ಟಿಯಲ್ಲಿರಲಿವೆ. ರಾಜ್ಯ ಸರ್ಕಾರ ಬಹುತೇಕ ಕೇಂದ್ರದ ಮಾರ್ಗಸೂಚಿಗಳನ್ನು ಯಥಾವತ್ತು ಪಾಲಿಸಿದೆ. ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

  • ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು: ಶಾಸಕ ಎನ್.ಮಹೇಶ್

    ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು: ಶಾಸಕ ಎನ್.ಮಹೇಶ್

    ಚಾಮರಾಜನಗರ: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಈ ಮಧ್ಯೆ ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇನ್ನೂ ಎರಡು ತಿಂಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು. ಹಳ್ಳಿಗಳಿಗೆ ಒಂದು ಬಾರಿ ಭೇಟಿ ಕೊಟ್ಟು ನೋಡಿ, ಎಷ್ಟೋ ಜನ ಆರೋಗ್ಯ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಣ್ಣೆ ಹಾಕುವುದಿಲ್ಲ ಎಂದರೆ ಸತ್ತು ಹೋಗುತ್ತಾರೆ, ನರ ದೌರ್ಬಲ್ಯ ಬರುತ್ತೆ ಅಂತಾ ಹೇಳ್ತಿದೋರು ಕೂಡ ಆರಾಮವಾಗಿದ್ದಾರೆ. ಮದ್ಯ ಪ್ರಿಯರ ಆರೋಗ್ಯ ದೃಷ್ಟಿಯಿಂದ ಮದ್ಯ ಮಾರಾಟವನ್ನು ಎರಡು ತಿಂಗಳು ಮುಂದೆ ಹಾಕಿ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

    ಕಳ್ಳಭಟ್ಟಿ ದಂಧೆ ಹೆಚ್ಚಾಗಿದ್ದರೆ ಪೊಲೀಸರ ಮೂಲಕ ಬ್ರೇಕ್ ಹಾಕೋಣ. ಅದನ್ನು ಬಿಟ್ಟು ನೆಗಡಿ ಬಂತು ಎಂದು ಮೂಗು ಕತ್ತರಿಸಿಕೊಳ್ಳಲಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಮದ್ಯ ಮಾರಾಟಕ್ಕೆ ನಿಷೇಧವಿತ್ತು. ಎಣ್ಣೆ ಪ್ರಿಯರು, ರಾಜಕಾರಣಿಗಳು ಸಹ ಮದ್ಯದಂಗಡಿ ತೆರೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸೋಮವಾರದಿಂದ ಮದ್ಯ ಮಾರಾಟ ಕೂಡ ನಡೆಯಲಿದೆ. ಹೀಗಿರುವಾಗ ಶಾಸಕ ಎನ್ ಮಹೇಶ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  • ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ವಿರೋಧ

    ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ವಿರೋಧ

    ಚಿತ್ರದುರ್ಗ: ದಾವಣಗೆರೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಹೀಗಾಗಿ ಸಂಪೂರ್ಣ ಬಂದ್ ಆಗಿದ್ದ ಚಿತ್ರದುರ್ಗ ಜಿಲ್ಲೆ ಈಗ ಯಾವುದೇ ಕೊರೊನಾ ಪ್ರಕರಣ ಇಲ್ಲದೇ ಗ್ರೀನ್ ಝೋನ್‍ನಲ್ಲಿದೆ. ಹೀಗಾಗಿ ಎಂದಿನಂತೆ ಎಲ್ಲಾ ಚಟುವಟಿಕೆಗಳು ಆರಂಭಗೊಂಡಿವೆ. ಅಲ್ಲದೇ ವಾಹನ ಸಂಚಾರ ದಟ್ಟಣೆಯಾಗಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ ವಹಿವಾಟು ಚುರುಕಾಗಿದೆ. ಆದರೆ ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಶುಕ್ರವಾರ ಒಂದೇ ದಿನ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರೋದು ಕೋಟೆನಾಡಿನ ಜರನಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

    ಆದ್ದರಿಂದ ಗ್ರೀನ್ ಝೋನ್‍ನಲ್ಲಿರುವ ಚಿತ್ರದುರ್ಗದಲ್ಲೂ ಇನ್ನಷ್ಟು ದಿನ ಲಾಕ್‍ಡೌನ್ ಮುಂದುವರೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಂದು ವೇಳೆ ಲಾಕ್‍ಡೌನ್ ಸಡಿಲಿಕೆಯಿಂದ ಜನರ ಓಡಾಟ ಹೆಚ್ಚಾಗಿ ಕೊರೊನಾ ಸೋಂಕು ಜಿಲ್ಲೆಗೂ ಕಾಲಿಡಬಹುದು. ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ. ಹೀಗಾಗಿ ಲಾಕ್‍ಡೌನ್ ಮುಂದುವರೆಸಿ ಎಂದು ಜನರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಎಚ್‍ಡಿಕೆ ಆರೋಪ

    ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಎಚ್‍ಡಿಕೆ ಆರೋಪ

    – ಸಿಎಂ ಕಚೇರಿಯಲ್ಲಿ ಸಲಹೆಗಾರರಿಗೆ ನೀಡುವ ಹಣವನ್ನ ಇಡೀ ದೇಶಕ್ಕೆ ಹಂಚಬಹುದು

    ಕೋಲಾರ: ಸರ್ಕಾರಕ್ಕೆ ಲಾಕ್‍ಡೌನ್ ಮೇಲಿರುವ ಕಾಳಜಿ, ರೈತರ ಮೇಲೆ ಇಲ್ಲ. ಜನ ಸಾಮಾನ್ಯರ ನೋವಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೋಲಾರದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಕಿಟ್‍ಗಳನ್ನು ವಿತರಣೆ ಮಾಡಿದರು. ಮುಳಬಾಗಿಲಿನ ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಅವರು ತಾಲೂಕಿನಲ್ಲಿ 46 ಸಾವಿರ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ವೇಳೆ ಮುಂಬೈನಿಂದ ಮಂಡ್ಯಗೆ ಶವ ತಂದ ವಿಚಾರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಸತ್ತ ವ್ಯಕ್ತಿಯ ಕೊರೊನಾ ತಪಾಸಣೆ ಮಾಡದೆ ಹೇಗೆ ಮಂಡ್ಯಗೆ ತಂದರು? ಮಹಾರಾಷ್ಟ್ರದಿಂದ ಇಲ್ಲಿಗೆ ತರಲು ಅವಕಾಶ ಕೊಟ್ಟವರು ಯಾರು? ಮಂಡ್ಯದಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇವೆಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ಇರಲಿಲ್ವಾ ಎಂದು ಪ್ರಶ್ನಿಸಿದರು.

    ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು. ಕೆಲ ಜನರು ಮುಂಬೈನಿಂದ ಬಂದಿದ್ದಾರೆ. ಅವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

    ಮೇ 18ರೊಳಗೆ ಇಡೀ ದೇಶದಲ್ಲಿ 38 ಸಾವಿರ ಜನ ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಜನರ ಜೀವದ ಜೊತೆ ಚೆಲ್ಲಾಟವಾಡದೆ ಸರ್ಕಾರ ತೀರ್ಮಾನ ಮಾಡಬೇಕು. ಈಗಾಗಲೇ ಕೆಲ ಚಟುವಟಿಕೆಗಳಿಗೆ ರಿಲ್ಯಾಕ್ಸ್ ನೀಡಲಾಗಿದೆ. ಮುಂದೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.

    ಸರ್ಕಾರವು ದುಂದುವೆಚ್ಚ ನಿಲ್ಲಿಸಬೇಕು. ನನ್ನ ಆಡಳಿತದ ಅವಧಿಯಲ್ಲಿ ಬಿಡುಗಡೆ ಮಾಡಿದ ಹಣದಲ್ಲಿ ಈಗಲೂ ಕೆಲಸ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ದುಂದು ವೆಚ್ಚ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ಸಲಹೆಗಾರರಿಗೆ ನೀಡುವ ಹಣವನ್ನು ಇಡೀ ದೇಶಕ್ಕೆ ಹಂಚಬಹುದಾಗಿದೆ. ಬೇರೆ ರಾಜ್ಯಗಳಲ್ಲಿ ಸರ್ಕಾರ ನೀಡುತ್ತಿರುವ ಪ್ಯಾಕೇಜ್‍ಗಳ ಮಾಹಿತಿ ತರಿಸಿಕೊಳ್ಳಲಿ, 9 ಸಾವಿರ ಕೋಟಿ ರೂ.ವನ್ನು ಎಫ್.ಡಿನಲ್ಲಿ ಸರ್ಕಾರ ಇಟ್ಟುಕೊಂಡಿದೆ. ಅದನ್ನು ಉಪಯೋಗಿಸಿಕೊಳ್ಳಲಿ ಎಂದು ಹೇಳಿದರು.

  • ವಿದ್ಯಾರ್ಥಿಗಳಿಗೆ ಬಿಗ್ ಶಾಕ್ – ಮೆಡಿಕಲ್, ಡೆಂಟಲ್ ಸೀಟುಗಳ ಶುಲ್ಕ ಹೆಚ್ಚಳ

    ವಿದ್ಯಾರ್ಥಿಗಳಿಗೆ ಬಿಗ್ ಶಾಕ್ – ಮೆಡಿಕಲ್, ಡೆಂಟಲ್ ಸೀಟುಗಳ ಶುಲ್ಕ ಹೆಚ್ಚಳ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ನಡುವೆ ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿಗಳಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ದಿಢೀರನೇ ಸರ್ಕಾರ ಪಿಜಿ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಿದೆ.

    ಖಾಸಗಿ ಕಾಲೇಜ್‍ಗಳು, ಖಾಸಗಿ ವಿವಿಗಳು, ಡೀಮ್ಡ್ ವಿವಿಗಳ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30ರಷ್ಟು ಶುಲ್ಕ ಅಧಿಕವಾಗಿದೆ. ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕವನ್ನು ಸರ್ಕಾರ ಹೆಚ್ಚಿಸಿದೆ.

    ಪ್ರತಿ ವರ್ಷ 10-15% ಶುಲ್ಕ ಹೆಚ್ಚಳ ಆಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇನ್ನೆರಡು ದಿನಗಳಲ್ಲಿ ಸಿಟಿಇ ಕೌನ್ಸಿಲಿಂಗ್ ಇದೆ. ಈಗ ದಿಢೀರ್ ಅಂತ ಸರ್ಕಾರ ಹೊಸ ಶುಲ್ಕದ ಪಟ್ಟಿ ಬಿಡುಗಡೆ ಮಾಡಿದೆ.

    2020- 21ನೇ ಸಾಲಿನ ಶುಲ್ಕ ವಿವರ.
    ಮೆಡಿಕಲ್ – ಖಾಸಗಿ ಕೋಟಾ
    ಕ್ಲಿನಿಕಲ್              –  11,34,705 ರೂ.
    ಪ್ಯಾರಾ ಕ್ಲಿನಿಕಲ್   –  2,83,677 ರೂ.
    ಪ್ರಿ-ಕ್ಲಿನಿಕಲ್          –   1,42,698 ರೂ.

    ಮೆಡಿಕಲ್ – ಖಾಸಗಿ ಕಾಲೇಜ್‍ನಲ್ಲಿ ಸರ್ಕಾರಿ ಕೋಟಾ
    ಕ್ಲಿನಿಕಲ್              – 6,98,280 ರೂ.
    ಪ್ಯಾರಾ ಕ್ಲಿನಿಕಲ್  – 1,74,570 ರೂ.
    ಪ್ರಿ-ಕ್ಲಿನಿಕಲ್         – 87,286 ರೂ.

    ಡೆಂಟಲ್ ಕೋರ್ಸ್
    ಖಾಸಗಿ ಕಾಲೇಜು ಕೋಟಾ – 6,05,176 ರೂ.
    ಖಾಸಗಿ ಕಾಲೇಜಲ್ಲಿ ಸರ್ಕಾರಿ ಕೋಟಾ – 3,57,076 ರೂ.

    ಸರ್ಕಾರಿ ಕಾಲೇಜುಗಳ ಸೀಟು ಶುಲ್ಕ ಹೆಚ್ಚಳ ಇಲ್ಲ. ಆದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಮತ್ತು ಮ್ಯಾನೇಜ್‍ಮೆಂಟ್ ಕೋಟಾದ ಶುಲ್ಕವನ್ನು ಮಾತ್ರ ಸರ್ಕಾರ ಹೆಚ್ಚಳ ಮಾಡಿದೆ.

  • ಹಸಿರು ವಲಯದಲ್ಲಿರೋ ರಾಮನಗರದಲ್ಲಿ ಕೈಗಾರಿಕೆ ಪ್ರಾರಂಭಿಸಲು ಅನುಮತಿ ಕೊಡಿ- ಸರ್ಕಾರಕ್ಕೆ ಹೆಚ್‍ಡಿಕೆ ಆಗ್ರಹ

    ಹಸಿರು ವಲಯದಲ್ಲಿರೋ ರಾಮನಗರದಲ್ಲಿ ಕೈಗಾರಿಕೆ ಪ್ರಾರಂಭಿಸಲು ಅನುಮತಿ ಕೊಡಿ- ಸರ್ಕಾರಕ್ಕೆ ಹೆಚ್‍ಡಿಕೆ ಆಗ್ರಹ

    ಬೆಂಗಳೂರು: ರಾಮನಗರದಲ್ಲಿ ಕೈಗಾರಿಕೆ ಪ್ರಾರಂಭ ಮಾಡಲು ಅನುಮತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರು ಮಾಜಿ ಸಿಎಂ, ರಾಮನಗರ ಜಿಲ್ಲೆಯಾದ್ಯಂತ ಕಾರ್ಖಾನೆಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಹಸಿರು ನಿಶಾನೆ ತೋರಬೇಕು. ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಉದ್ದಿಮೆದಾರರು ಮತ್ತು ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ಹೊರಗಿನಿಂದ ಬರುವ ಕಾರ್ಮಿಕರಿಗೆ ತಾತ್ಕಾಲಿಕ ನಿರ್ಬಂಧ ಮುಂದುವರಿಸಿದರೂ, 9 ಜಿಲ್ಲೆಗಳಿಗೆ ನೀಡಿರುವಂತೆ ರಾಮನಗರ ಜಿಲ್ಲೆಯ ಕಾರ್ಮಿಕರು ದುಡಿದು ತಿನ್ನಲು ತಕ್ಷಣವೇ ವಿನಾಯಿತಿ ಘೋಷಿಸಬೇಕು ಎಂದಿದ್ದಾರೆ.

    ಕೊರೊನಾ ವೈರಸ್ ಮುಕ್ತವಾಗಿರುವ ಜಿಲ್ಲೆಗಳಲ್ಲಿ ನೀಡಿರುವ ವಿನಾಯ್ತಿಯನ್ನು ತಕ್ಷಣವೇ ರಾಮನಗರ ಜಿಲ್ಲೆಗೂ ಅನ್ವಯಿಸಿ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಯವರಿಗೆ ಟ್ವೀಟ್ ಮೂಲಕ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ಕೊಡಗು, ಉಡುಪಿ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ ಹಾಗೂ ರಾಮನಗರವನ್ನು ಹಸಿರು ಜಿಲ್ಲೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಕೈಗಾರಿಕೆ, ಅಂಗಡಿಗಳು, ಹೋಟೆಲ್ ತೆರೆಯಲು ಮೊದಲಾದವುಗಳಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ ರಾಮನಗರಕ್ಕೆ ಮಾತ್ರ ಕೈಗಾರಿಕೆ ಆರಂಭಿಸಲು ಅವಕಾಶ ನೀಡಿಲ್ಲ. ಯಾಕೆಂದರೆ ಪಾದರಾಯನಪುರದ ಪುಂಡರನ್ನು ಮೊದಲು ರಾಮನಗರ ಜೈಲಿಗೆ ಹಾಕಿದ್ದು, ಆ ನಂತರ ಕೆಲವರ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಮನಗರ ಹಸಿರು ಜಿಲ್ಲೆ ಎಂದು ಘೋಷಣೆಯಾದರೂ ಅವಕಾಶ ನೀಡಿಲ್ಲ.

    ಬೆಂಗಳೂರು ನಗರದ ಸಮೀಪವೇ ರಾಮನಗರ ಇರುವ ಕಾರಣ ಒಂದು ವೇಳೆ ಅನುಮತಿ ನೀಡಿದರೆ ಜನರ ಓಡಾಟ ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರ ಇಲ್ಲಿ ಕೈಗಾರಿಕೆಗೆ ಅನುಮತಿ ನೀಡಿಲ್ಲ.