ಬೆಂಗಳೂರು: ಕೊರೊನಾ ವೈರಸ್ ನಿಂದ ಕಳೆದ ಎರಡೂವರೆ ತಿಂಗಳುಗಳಿಂದ ಮುಚ್ಚಿದ್ದ ಹೋಟೆಲ್ ತೆರೆಯುವಂತೆ ಸರ್ಕಾರ ಸೂಚನೆ ನೀಡಿದೆ.
ಕೊರೊನಾ ಭೀತಿಯಿಂದ ಹೋಟೆಲ್‍ಗಳು ಮುಚ್ಚಿದ್ದವು. ಆದರೆ ಇದರ ನಡುವೆ ಪಾರ್ಸೆಲ್ ನೀಡುವುದಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ಹಂತ ಹಂತವಾಗಿ ಲಾಕ್‍ಡೌನ್ ಅನ್ನು ಸಡಿಲಿಕೆ ಮಾಡುತ್ತಿದ್ದು, ಹೋಟೆಲ್ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಜೊತೆಗೆ ಕೆಲ ಮಾರ್ಗ ಸೂಚಿಯನ್ನು ಸೂಚಿಸಲಾಗಿದೆ.
ಮಾರ್ಗಸೂಚಿ ಏನು?
ಹೋಟೆಲ್‍ಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು ಹಾಗೂ ಹೋಟೆಲ್‍ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು ಕಡ್ಡಾಯವಾಗಿರುತ್ತದೆ. ಪ್ರತ್ಯೇಕ ಆಗಮನ ಮತ್ತು ನಿರ್ಗಮನ ಇರಬೇಕು. ಹೋಟೆಲ್ ರಿಸೆಪ್ಷನ್‍ನಲ್ಲಿ ಗೆಸ್ಟ್‍ಗಳು ಐ.ಡಿ. ಕಾರ್ಡ್, ಟ್ರಾವೆಲ್ ಹಿಸ್ಟರಿಯನ್ನು ಕಡ್ಡಾಯವಾಗಿ ನೀಡಬೇಕು. ಸಂಪರ್ಕ ರಹಿತ ಪ್ರಕ್ರಿಯೆ ಅಂದರೆ ಕ್ಯೂ ಆರ್ ಕೋಡ್ ಅನ್ನು ಹೋಟೆಲ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಅತಿಥಿಗಳ ಲಗೇಜ್‍ಗೆ ಕ್ರಿಮಿನಾಶಕ ಸಿಂಪಡಿಸಬೇಕು. ಹೋಟೆಲ್ ಅತಿಥಿಗಳು ಕಂಟೈನ್ಮೆಂಟ್ ಝೋನ್‍ಗೆ ಭೇಟಿ ನೀಡಬಾರದು. ರೆಸ್ಟೋರೆಂಟ್‍ನಲ್ಲಿ ಸಾಮಾಜಿಕ ಅಂತರ ಕಾಪಾಡುವ ರೀತಿ ಸೀಟುಗಳನ್ನು ವ್ಯವಸ್ಥೆ ಮಾಡಿರಬೇಕು. ಡಿಜಿಟಲ್ ಪೇಮೆಂಟ್‍ಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಫೆಟ್ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಹೋಟೆಲ್‍ಗಳಿಗೆ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮಡಿಕೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಾಹುಲಿ ಇದ್ದಂತೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ, ಸುಭದ್ರವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕೊಡಗಿನ ಜಂಬೂರಿನಲ್ಲಿ 2018ರ ಪ್ರವಾಹ ಸಂತ್ರಸ್ತರಿಗೆ ಮನೆ ಹಸ್ತಾಂತರ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವರು, ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ. ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅವರು ರಾಜ್ಯದಲ್ಲಿ ಪ್ರವಾಹ ಉಂಟಾದಾಗ ಹಾಗೂ ಇದೀಗ ಕೋವಿಡ್-19 ವೈರಸ್ ಆಗಿರುವ ಸಂದರ್ಭದಲ್ಲಿ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಹೀಗಾಗಿ ಮುಂದೆಯೂ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.
ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಇಬ್ಬರು ಸಿಎಂಗಳಿದ್ದರು ಎನಿಸುತ್ತದೆ. ಇಲ್ಲದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ಆಡಳಿತಗಳು ಇದ್ದವು ಎನಿಸುತ್ತದೆ. ಆದರೆ ಬಿ.ಎಸ್.ಯಡಿಯೂರಪ್ಪ ಅವರು ಸಮರ್ಥರಿದ್ದಾರೆ. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು. ಅವರಿಗೆ ಯಾರ ಸಲಹೆಗಳು ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರು: ಪಿಯುಸಿ ಮೌಲ್ಯಮಾಪನಕ್ಕೂ ಕೊರೊನಾ ಭೀತಿ ತಟ್ಟಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದಿರಲು ಉಪನ್ಯಾಸಕರು ನಿರ್ಧಾರ ಮಾಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ಆಯಾ ಜಿಲ್ಲೆಗಳಲ್ಲಿ ವಿಕೇಂದ್ರಿಕರಣಗೊಳಿಸುವಂತೆ ಉಪನ್ಯಾಸಕರ ಸಂಘ ಮನವಿ ಮಾಡಿತ್ತು. ಕೊರೊನಾ ಸಮುದಾಯಕ್ಕೆ ಹರಡುತ್ತಿದೆ ಎಂದು ಈ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಉಪನ್ಯಾಸಕರ ಬೇಡಿಕೆಗೆ ಈಡೇರಿಸದ ಕಾರಣ ನಾಳೆಯಿಂದ ಪ್ರಾರಂಭವಾಗಬೇಕಿದ್ದ ವಿಜ್ಞಾನ ವಿಷಯದ ಮೌಲ್ಯಮಾಪನ ಮಾಡದೇ ಇರಲು ಉಪನ್ಯಾಸಕರ ಸಂಘದಿಂದ ನಿರ್ಧಾರ ಮಾಡಿದೆ.
ಬೆಂಗಳೂರಿಗೆ ಬಂದು ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕೊರೊನಾ ಸಮಯದಲ್ಲಿ ಸರ್ಕಾರದ ಈ ನಡೆಗೆ ಉಪನ್ಯಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನಕ್ಕೆ ಅವಕಾಶ ಕೊಡಿ. ಇಲ್ಲವೇ ಕೊರೊನಾ ಕಡಿಮೆ ಆಗುವವರೆಗೂ ಮೌಲ್ಯಮಾಪನ ಸ್ಥಗಿತ ಮಾಡಿ ಎಂದು ಸರ್ಕಾರಕ್ಕೆ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಆಗ್ರಹಿಸಿದ್ದಾರೆ.
– ಪರೀಕ್ಷೆ ಮುಗಿಸಿ ಬರುವರೆಗೂ ವಿದ್ಯಾರ್ಥಿನಿಗಾಗಿ ಕಾಯ್ತಿದ್ದ ದೋಣಿ
– 4 ಸಾವಿರ ಖರ್ಚು ಆದ್ರೂ 18 ರೂ. ಪಡೆದ ಸಿಬ್ಬಂದಿ
ತಿರುವನಂತಪುರಂ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗಳು ಪುನರಾರಂಭಗೊಂಡಿವೆ. ಇದೀಗ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರಕ್ಕೆ ಹೋಗಲು 70 ಆಸನ ಸಾಮರ್ಥ್ಯದ ಬೋಟ್ ಓಡಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಂಜಿರಮ್‍ನಲ್ಲಿ ನಡೆದಿದೆ. ಇದೀಗ ಕೇರಳ ಜಲಸಾರಿಗೆ ವಿಭಾಗ (ಎಸ್‍ಡಬ್ಲ್ಯೂಟಿಡಿ)ದ ಅಧಿಕಾರಿಗಳ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಂದ್ರ ಬಾಬು ಜಲಸಾರಿಗೆ ಅಧಿಕಾರಿಗಳು ಮೂಲಕ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಸಂದ್ರ ಕೂಲಿ ಕಾರ್ಮಿಕ ದಂಪತಿಯ ಪುತ್ರಿಯಾಗಿದ್ದಾಳೆ. ಕಳೆದ ಒಂದು ವರ್ಷದಿಂದ ಸಂದ್ರ ಬಾಬು ಕೊಟ್ಟಾಯಂ ಜಿಲ್ಲೆಯ ಕಾಂಜಿರಾಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಳೆ. ವಿದ್ಯಾರ್ಥಿನಿ ಆಲಪ್ಪುಳದಲ್ಲಿರುವ ಎಂಎನ್ ಬ್ಲಾಕ್‍ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು.
ದ್ಯಾರ್ಥಿನಿ ಎಂಎನ್ ಬ್ಲಾಕ್‍ನಿಂದ ತನ್ನ ಶಾಲೆಗೆ ತಲುಪಲು ಕೊಟ್ಟಾಯಂ ಜಿಲ್ಲೆಯ ಗಡಿ ಗ್ರಾಮವಾದ ಕಾಂಜಿರಮ್‍ಗೆ ಸರ್ಕಾರಿ ಬೋಟ್ ಸೇವೆ ಇದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಕುಟ್ಟನಾಡ್ ಪ್ರದೇಶದ ನಾನ ಕಡೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಬೋಟ್‍ಗಳ ಸಂಚಾರ ನಿಂತಿವೆ. ಈ ಮಧ್ಯೆ ಕೇರಳ ಸರ್ಕಾರ 12ನೇ ತರಗತಿ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿತ್ತು. ಹೀಗಾಗಿ ಬೋಟ್ ಸಂಚಾರವಿಲ್ಲದೆ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ಹೋಗಲು ಸಾಧ್ಯವಿರಲಿಲ್ಲ.
ಈ ವೇಳೆ ಕೇರಳ ಜಲಸಾರಿಗೆ ಇಲಾಖೆ ವಿದ್ಯಾರ್ಥಿನಿ ನೆರವಿಗೆ ಬಂದಿದ್ದು, ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದೆ. ಮೇ 29 ಮತ್ತು 30 ರಂದು ಎರಡು ದಿನ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರಕ್ಕೆ ಹೋಗಲು 70 ಆಸನಗಳ ಸಾಮರ್ಥ್ಯದ ಬೋಟ್‍ಅನ್ನು ಆಕೆಯಾಗಿ ಓಡಿಸಲಾಗಿದೆ. ಈ ಬೋಟ್‍ನಲ್ಲಿ ಚಾಲಕ, ನೇವಿಗೇಟರ್, ಬೋಟ್ ಮಾಸ್ಟರ್ ಮತ್ತು ಇಬ್ಬರು ಸಹಾಯಕರು ಸೇರಿ ಒಟ್ಟು ಐದು ಸಿಬ್ಬಂದಿಯನ್ನು ನೇಮಿಸಲಾಗಿತ್ತು.
ವಿದ್ಯಾರ್ಥಿನಿಯನ್ನ ಸೋಮವಾರ ಬೆಳಗ್ಗೆ 11.30ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಕಾಂಜಿರಮ್‍ನ ಎಸ್‍ಎನ್‍ಡಿಪಿ ಹೈಯರ್ ಸೆಕೆಂಡರಿ ಶಾಲೆಯ ಮುಂಭಾಗದಲ್ಲಿರುವ ಜೆಟ್ಟಿಯಲ್ಲಿ ಇಳಿಸಲಾಯಿತು. ಅಲ್ಲಿಯೇ ವಿದ್ಯಾರ್ಥಿನಿಗಾಗಿ ಬೋಟ್ ಕಾಯುತ್ತಿತ್ತು. ಮತ್ತೆ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮುಗಿಸಿದ ಬಳಿಕ ಬೋಟ್ ಮೂಲಕ ಮನೆಗೆ ತಲುಪಿಸಿದ್ದೇವೆ ಎಂದು ಬೋಟ್ ಅಧಿಕಾರಿ ತಿಳಿಸಿದ್ದಾರೆ.
ಇಲಾಖೆ ಸಚಿವ ಮತ್ತು ಎಸ್‍ಡಬ್ಲ್ಯೂಟಿಡಿ ನಿರ್ದೇಶಕ ಶಾಜಿ ವಿ.ನಾಯರ್ ಅವರು ಪರೀಕ್ಷೆ ಬರೆಯಲು ನನಗೆ ಸಹಾಯ ಮಾಡಿದರು. ಮೊದಲು ನನ್ನ ಪೋಷಕರು ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಸಾರಿಗೆ ಇಲಾಖೆಯನ್ನು ಸಂಪರ್ಕಿಸಿದ್ದರು. ಎಸ್‍ಡಬ್ಲ್ಯೂಟಿಡಿ ಸಚಿವರು ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಸಹಾಯವಾಗಿದೆ ಎಂದು ಸಂದ್ರ ಸಂತಸದಿಂದ ಹೇಳಿದ್ದಾಳೆ.
ಈ ಬಗ್ಗೆ ಮಾತನಾಡಿದ ಶಾಜಿ ವಿ.ನಾಯರ್ ಮಾತನಾಡಿ, ಈ ಸೇವೆಯನ್ನು ನಿರ್ವಹಿಸಲು ಸರ್ಕಾರ ಮತ್ತು ಸಚಿವರು ಸಂಪೂರ್ಣ ಬೆಂಬಲ ನೀಡಿದರು. ವಿದ್ಯಾರ್ಥಿನಿಯ ಪ್ರಯಾಣಕ್ಕೆ 4,000 ರೂಪಾಯಿ ಖರ್ಚಾಗಿದೆ. ಆದರೆ ಆಕೆಯಿಂದ ಒಂದು ದಿನದ ಪ್ರಯಾಣಕ್ಕೆ ನಿಗದಿತ ಪ್ರಯಾಣ ದರ 18 ರೂ. ಮಾತ್ರ ಪಡೆಯಲಾಗಿದೆ. ಆರ್ಥಿಕ ನಷ್ಟದ ಬಗ್ಗೆ ನಾವು ಯೋಚಿಸಲಿಲ್ಲ. ಏಕೆಂದರೆ ವಿದ್ಯಾರ್ಥಿನಿ ತನ್ನ ಪರೀಕ್ಷೆಯನ್ನು ಬರೆಯುವುದು ನಮಗೆ ಮುಖ್ಯವಾಗಿತ್ತು ಎಂದು ಹೇಳಿದರು.
ನವದೆಹಲಿ: ಲಾಕ್‍ಡೌನ್ 4.0 ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಲಾಕ್‍ಡೌನ್ 5.0 ನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜೂನ್ 30ರವರೆಗೆ ಲಾಕ್‍ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪ್ರಮುಖವಾಗಿ ಜೂನ್ 2ರಿಂದ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಅಲ್ಲದೆ ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್ ಕರ್ಫ್ಯೂ ವಿಧಿಸಿದೆ. ಚಿತ್ರಪ್ರದರ್ಶನ ನಿಷೇಧವನ್ನು ಮುಂದುವರಿಸಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಕಠಿಣ ನಿಯಮಾವಳಿಗಳನ್ನು ತರುತ್ತಿದೆ.
ಈ ಬಗ್ಗೆ ಇಂದು ಸಂಜೆಯೊಳಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಇನ್ನೂ ಜೂನ್ 8ರಿಂದ 3 ಹಂತಗಳಲ್ಲಿ ಲಾಕ್‍ಡೌನ್ ಅನ್‍ಲಾಕ್ ಆಗುತ್ತಿದೆ. ಆ 3 ಹಂತಗಳಲ್ಲಿ ಯಾವುದೆಲ್ಲಾ ಓಪನ್ ಆಗುತ್ತಿದೆ.
ಇಂಡಿಯಾ ಅನ್‍ಲಾಕ್- ಹಂತ 1 (ಜೂನ್ 8ರ ನಂತರ ಇವು ಓಪನ್ ಆಗ್ತವೆ)
* ಧಾರ್ಮಿಕ ಸ್ಥಳಗಳು
* ಹೊಟೇಲ್, ರೆಸ್ಟೋರೆಂಟ್ಸ್ , ಆತಿಥ್ಯ ಸ್ಥಳಗಳು
* ಶಾಪಿಂಗ್ ಮಾಲ್‍ಗಳು
(ಕೇಂದ್ರ ಸಚಿವಾಲಯಗಳು/ ಇಲಾಖೆಗಳು/ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಲಿದೆ)
ಇಂಡಿಯಾ ಅನ್‍ಲಾಕ್- ಹಂತ 2 (ಜೂನ್ 8ರ ನಂತರ ಓಪನ್ ಇಲ್ಲ – ಜುಲೈನಲ್ಲಿ ನಿರ್ಧಾರ)
* ಶಾಲೆಗಳು, ಕಾಲೇಜ್‍ಗಳು, ತರಬೇತಿ/ಟ್ಯೂಷನ್ ಸಂಸ್ಥೆಗಳು
* ರಾಜ್ಯಗಳು, ಶೈಕ್ಷಣಿಕ ಸಂಸ್ಥೆಗಳು, ಪೋಷಕರ ಜೊತೆ ಚರ್ಚಿಸಿ ತೀರ್ಮಾನ
* ಜುಲೈ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ಷರತ್ತುಬದ್ಧ ಅನುಮತಿ
ಇಂಡಿಯಾ ಅನ್‍ಲಾಕ್- ಹಂತ 3 (ಪರಿಸ್ಥಿತಿ ಆಧರಿಸಿ ತೀರ್ಮಾನ, ಅಂದರೆ ಸದ್ಯಕ್ಕೆ ಇವೆಲ್ಲಾ ಓಪನ್ ಆಗಲ್ಲ. ಓಪನ್‍ಗೆ ದಿನಾಂಕ ನಿಗದಿಯಾಗಿಲ್ಲ)
* ಅಂತಾರಾಷ್ಟ್ರೀಯ ವಿಮಾನಯಾನ
* ಮೆಟ್ರೋ ರೈಲು ಸೇವೆ
* ಥಿಯೇಟರ್, ಜಿಮ್, ಸ್ವಿಮ್ಮಿಂಗ್‍ಪೂಲ್
* ಮನರಂಜನಾ ಪಾರ್ಕ್, ಬಾರ್
* ಆಡಿಟೋರಿಯಂ, ಅಸೆಂಬ್ಲಿ ಹಾಲ್
* ಸಾಮಾಜಿಕ/ರಾಜಕೀಯ/ಕ್ರೀಡೆ/ಎಂಟರ್ ಟೈನ್ಮೆಂಟ್/ಸಾಂಸ್ಕೃತಿಕ/ಧಾರ್ಮಿಕ ಕಾರ್ಯಕ್ರಮ
ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಸದ್ಯ ಇರುವ ಸಡಿಲಿಕೆಗಳೊಂದಿಗೆ ಯಥಾಸ್ಥಿತಿ ಮುಂದುವರಿಯಲಿದೆ. ಜೂನ್ 30ರವರೆಗೆ ಲಾಕ್‍ಡೌನ್ ನಿಯಮಗಳು ಅನ್ವಯವಾಗಲಿವೆ. ವೈದ್ಯಕೀಯ ಸೇವೆ, ಮೆಡಿಕಲ್, ದಿನಬಳಕೆ ಸರಕು ಪೂರೈಕೆ ಸೇರಿದಂತೆ ಅವಶ್ಯಕ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.
ಜಿಲ್ಲೆಯ ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಇಪ್ಪತ್ತೆರಡು ಮಂದಿ ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಟ್ರಯಲ್ ಬೇಸ್ ಆಗಿ ಐದು ಮಂದಿ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧ. ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದರೆ ಒಂದು ವಾರದೊಳಗೆ ಅವರ ರಾಜೀನಾಮೆ ಕೊಡಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದ್ದಾರೆ.
ಇದೇ ವೇಳೆ ಬಿಜೆಪಿ ಪಕ್ಷದ ಒಳಗೆ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆ ಕುರಿತು ಮಾತನಾಡಿರುವ ರಮೇಶ್ ಜಾರಕಿಹೊಳಿ, ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ ಇದ್ದೇನೆ. ಬಿಜೆಪಿ ಸರ್ಕಾರ ಸೇಫ್ ಆಗಿದೆ. ಯಾವುದೇ ಭಿನ್ನಮತವೂ ಇಲ್ಲ. ಉಮೇಶ್ ಕತ್ತಿ ನನ್ನ ಸ್ನೇಹಿತರು, ನಿನ್ನೆ ಫೋನ್ ಮಾಡಿ ಚರ್ಚಿಸಿದರು. ಚರ್ಚೆ ಮಾಡುವುದು ಭಿನ್ನಮತ ಅಲ್ಲ. ಅವರಿಗೆ ಯಾವ ರೀತಿ ಅಸಮಾಧಾನ ನಡೆದಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅವರೊಡನೆ ಮತ್ತೆ ಚರ್ಚಿಸುತ್ತೇನೆ. ಬಿಜೆಪಿ ಸರ್ಕಾರ ಮೂರು ವರ್ಷ ಅಷ್ಟೇ ಅಲ್ಲ, ಅದರ ಮುಂದಿನ ಐದು ವರ್ಷ ಕಾಲವು ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮಾಡಲಾಗಿದ್ದ ಲಾಕ್‍ಡೌನ್ 4.0 ಮುಗಿಯಲು ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೂನ್ 1 ರಿಂದ ಹೊಸ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಎಲ್ಲ ರಾಜ್ಯಗಳ ಸಿಎಂಗಳ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸುತ್ತಿದ್ದು, ಲಾಕ್‍ಡೌನ್ ಸ್ವರೂಪದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಲಾಕ್‍ಡೌನ್ ರಿಲೀಫ್ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆದಿದ್ದಾರೆ. ಹೀಗಾಗಿ ಜನರಿಗೆ ಜೂನ್ 1ರಿಂದ ಕರ್ನಾಟಕದಲ್ಲಿ ಹೇಗಿರಲಿದೆ ಎಂಬ ಕುತೂಹಲ ಉಂಟಾಗಿದೆ. ಕರ್ನಾಟಕದಲ್ಲಿ ಜೂನ್ 1 ರಿಂದ ಏನಿರಬಹುದು? ಏನಿರಲ್ಲ ಎಂಬುದನ್ನು ನೋಡುವುದಾದರೆ..
ಜೂನ್ 1ರಿಂದ ಏನಿರಬಹುದು? ಹೋಟೆಲ್:
– ಹೊಟೇಲ್, ರೆಸ್ಟೋರೆಂಟ್‍ಗಳಿಗೆ ತೆರೆಯಲು ಅನುಮತಿ
– ತಳ್ಳುಗಾಡಿಯಲ್ಲಿರುವ ಫುಟ್‍ಪಾತ್ ಕ್ಯಾಂಟೀನ್ ತೆರೆಯಲು ಅವಕಾಶ
– ಪಾರ್ಸೆಲ್ ಜೊತೆಗೆ ಕೂತು ತಿನ್ನುವುದಕ್ಕೂ ಅವಕಾಶ
– ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
ಶಾಪಿಂಗ್ ಮಾಲ್:
– ಸೋಮವಾರಿಂದ ಶಾಪಿಂಗ್ ಮಾಲ್‍ಗಳು ಓಪನ್
– ಒಂದು ಪಾಳಿಯಲ್ಲಿ ಶೇ.50ರಷ್ಟು ಸಿಬ್ಬಂದಿಗಷ್ಟೇ ಕೆಲಸಕ್ಕೆ ಅವಕಾಶ
– ಶಾಪಿಂಗ್ ಮಾಲ್‍ಗಳಲ್ಲಿರುವ ಸೂಪರ್ ಮಾರ್ಕೆಟ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಉಡುಪುಗಳು, ಫೂಟ್‍ವೇರ್, ಜ್ಯುವೆಲ್ಲರಿ, ಕನ್ನಡಕ ಮಾರಾಟಕ್ಕೆ ಅವಕಾಶ
– ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
ಮೆಟ್ರೋ ರೈಲು:
– ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ಅನುಮತಿ
– ಹಗಲು ಹೊತ್ತಲ್ಲಿ ಮಾತ್ರ ಮೆಟ್ರೋ ರೈಲುಗಳ ಸಂಚಾರ
– ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
ಟೆಂಪಲ್:
– ಜೂನ್ 1ರಿಂದ ದೇವಸ್ಥಾನ, ಮಸೀದಿ, ಚರ್ಚ್ ಗಳು ತೆರೆಯಲು ಅನುಮತಿ
– ಭಕ್ತರ ಸಂಖ್ಯೆಯ ಮೇಲೆ ಮಿತಿ ಹೇರುವುದು
– ನಿರ್ದಿಷ್ಟ ಸಮಯದಲ್ಲಷ್ಟೇ ಪೂಜೆ, ಪ್ರಾರ್ಥನೆ, ನಮಾಜ್‍ಗೆ ಅವಕಾಶ
– ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಕಡ್ಡಾಯ
ಶೂಟಿಂಗ್:
– ಸಿನಿಮಾ ಚಿತ್ರೀಕರಣಕ್ಕೆ ಷರತ್ತುಬದ್ಧ ಅನುಮತಿ
– ಸಿನಿಮಾ, ಧಾರಾವಾಹಿಗಳ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ
ಜಿಮ್:
– ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಿಗೆ ಷರತ್ತುಬದ್ಧ ಅನುಮತಿ
– ನಿರ್ದಿಷ್ಟ ಸಮಯದಲ್ಲಷ್ಟೇ ಜಿಮ್ ತರಬೇತಿಗೆ ಅವಕಾಶ
– ಜಿಮ್, ಫಿಟ್ನೆಸ್ ಸೆಂಟರ್ ದಿನಬಿಟ್ಟು ದಿನ ಬರುವ ನಿಯಮ ಸಾಧ್ಯತೆ
– ವಯೋವೃದ್ಧರು, ಮಕ್ಕಳಿಗೆ ಪ್ರವೇಶ ನಿರ್ಬಂಧ ವಿಧಿಸಬಹುದು
ನೈಟ್ ಕರ್ಫ್ಯೂ:
– ನೈಟ್ ಕರ್ಫ್ಯೂ ಅವಧಿಯಲ್ಲಿ ಕಡಿತ ಸಾಧ್ಯತೆ
– ಸದ್ಯ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ 12 ಗಂಟೆಗಳ ಕರ್ಫ್ಯೂ
– 12 ಗಂಟೆಗಳ ಕರ್ಫ್ಯೂವನ್ನ 8 ಗಂಟೆಗೆ ಇಳಿಸುವ ನಿರೀಕ್ಷೆ
– ಬಿಎಂಟಿಸ್ ಬಸ್‍ಗಳ ಸಂಚಾರ ರಾತ್ರಿ 9 ಅಥವಾ 10 ಗಂಟೆವರೆಗೆ ವಿಸ್ತರಣೆ
ಜೂನ್ 1ರಿಂದ ಏನಿರಲ್ಲ?
* ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ತೆರೆಯುವುದು ಅನುಮಾನ
* ಶಾಲೆ-ಕಾಲೇಜುಗಳು ಶುರುವಾಗುವ ಸಾಧ್ಯತೆ ಇಲ್ಲ
* ಕೋಚಿಂಗ್ ಸೆಂಟರ್‌ಗಳು, ಟ್ರೈನಿಂಗ್ ಸೆಂಟರ್‌ಗಳು ಬಂದ್ ಸಾಧ್ಯತೆ
* ಲಾಡ್ಜ್ ಗಳು ಓಪನ್ ಆಗುವ ನಿರೀಕ್ಷೆ ಇಲ್ಲ
* ಮಾಲ್‍ಗಳಲ್ಲಿರುವ ಫುಡ್‍ಕೋರ್ಟ್, ಮನರಂಜನಾ ಕೇಂದ್ರಗಳೂ ಬಂದ್ ನಿರೀಕ್ಷೆ
* ನೈಟ್‍ಕ್ಲಬ್, ಪಬ್ ಬಂದ್ ಮುಂದುವರಿಕೆ ನಿರೀಕ್ಷೆ
* ಪ್ರವಾಸಿ ತಾಣಗಳ ಬಂದ್ ಮುಂದುವರೆಯಲಿದೆ
* ಸ್ವಿಮ್ಮಿಂಗ್ ಪೂಲ್‍ಗಳು, ಕ್ರೀಡಾಕೂಟಕ್ಕೆ ಅನುಮತಿ ಇಲ್ಲ
* ಸಾರ್ವಜನಿಕ ಸಭೆ, ಸಮಾರಂಭ, ದೇವರ ಉತ್ಸವ, ರಥೋತ್ಸವ ಬಂದ್
* ಮದುವೆಗಳ ಮೇಲೆ ಈಗಿರುವ ಷರತ್ತು ಯಥಾವತ್ತು ಮುಂದುವರಿಯುವ ನಿರೀಕ್ಷೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೊರೊನಾ ವೈರಸ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದೇನೆ. ಅಸಂಘಟಿತ ಕಾರ್ಮಿಕರು, ಕುಲ ಕಸಬು ಮಾಡುವ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವಂತೆ ತಿಳಿಸಿದ್ದೇನೆ. ಆದರೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರವು ಸವಿತಾ ಸಮಾಜ, ನೇಕಾರರು, ಮಡಿವಾಳ ಸಮಾಜದ ಕುಟುಂಬಗಳಿಗೆ ತಲಾ 5 ಸಾವಿರ ರೂ. ನೀಡುವ ಭರವಸೆ ನೀಡಿದೆ. ಆದರೆ ಈವರೆಗೂ ಯಾರಿಗೂ ಹಣ ಪಾವತಿಯಾಗಿಲ್ಲ. ರೈತರು, ಹಣ್ಣು, ತರಕಾರಿ, ಹೂ ಬೆಳೆಗಾರರಿಗೆ ನೀಡಿದ ಸಹಾಯಧನದ ಭರವಸೆ ಹಾಗೆ ಉಳಿದಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣದಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಇತ್ತ ಬಡವ ಕಷ್ಟಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೇಲೆ ನನಗೆ ಯಾವುದೇ ನಂಬಿಕೆ, ವಿಶ್ವಾಸ ಉಳಿದಿಲ್ಲ ಎಂದರು.
ಬೆಂಗಳೂರು: ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಬಿಎಂಟಿಸಿ ಇಂದಿನಿಂದ ಪ್ರಯಾಣಿಕರಿಗೆ ಟಿಕೆಟ್ ನೀಡಲು ಶುರು ಮಾಡಿದೆ. ಹೀಗಾಗಿ ಇವತ್ತಿನಿಂದ ಪ್ರಯಾಣಿಕರು ಬಿಎಂಟಿಸಿಯಲ್ಲಿ ಟಿಕೆಟ್ ಪಡೆದು ಪ್ರಯಾಣಿಸಬಹುದು.
ಈಗಾಗಲೇ ಬಿಎಂಟಿಸಿ ಬಸ್‍ಗಳ ಓಡಾಟ ಶುರುವಾಗಿದ್ದು, ಪಾಸ್ ಇದ್ದವರಿಗಷ್ಟೇ ಅಲ್ಲ, ಟಿಕೆಟ್ ಪಡೆದೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ ಇವತ್ತಿನಿಂದ ಹೆಚ್ಚುವರಿಯಾಗಿ 4 ಸಾವಿರ ಬಿಎಂಟಿಸಿ ಬಸ್‍ಗಳ ಸಂಚಾರ ಆರಂಭ ಮಾಡುತ್ತಿವೆ.
ಲಾಕ್‍ಡೌನ್ ಬಳಿಕ ಪ್ರಯಾಣಿಕರಿಗೆ ಅನುಕೂಲವಾಗಲಿ ಅಂತ ಸರ್ಕಾರ ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಓಡಿಸಲು ನಿರ್ಧಾರ ಮಾಡಿತ್ತು. ಕಳೆದ 8 ದಿನಗಳಿಂದ ಟಿಕೆಟ್ ವಿತರಣೆ ಮಾಡದೇ ದೈನಂದಿನ ಪಾಸ್ ತೆಗೆದುಕೊಂಡು ಬಸ್ ಹತ್ತಲು ಹೇಳಿತ್ತು. ದಿನದ ಪಾಸ್ 70 ರುಪಾಯಿ, ವಾರದ ಪಾಸ್ 300 ರುಪಾಯಿ, ತಿಂಗಳ ಪಾಸ್ 1,150 ರುಪಾಯಿ ಅಂತ ನಿಗದಿ ಮಾಡಿದ್ದರು. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸಿದ್ದೇ ಹೆಚ್ಚು. ಕೇವಲ 5 ರೂಪಾಯಿ ಕೊಟ್ಟು ಹೋಗಬೇಕಾದ ಸ್ಥಳಕ್ಕೆ 70 ರೂಪಾಯಿ ಕೊಡಬೇಕು ಅಂದರೆ ಹೇಗೆ ಅಂತ ಜನ ಆರಂಭದ ದಿನಂದಲೇ ಆಕ್ರೋಶ ಹೊರಹಾಕಿದ್ದರು.
ಪ್ರಯಾಣಿಕರ ಸಮಸ್ಯೆ ಅರಿತ ಪಬ್ಲಿಕ್ ಟಿವಿ ಅವರ ನೋವಿಗೆ ಧ್ವನಿಯಾಗಿ ಈ ಬಗ್ಗೆ ನಿರಂತರವಾಗಿ ವರದಿ ಬಿತ್ತರಿಸಿತ್ತು. ಆದರೂ ಪ್ರಯಾಣದರ ಕಡಿಮೆಯಾಗಲೇ ಇಲ್ಲ. ಪಬ್ಲಿಕ್ ಟಿವಿ ವರದಿಯ ಬೆನ್ನಲ್ಲೆ ಮಣಿದ ಸರ್ಕಾರ ಹಾಗೂ ಬಿಎಂಟಿಸಿ ಆಡಳಿತ ದುಬಾರಿ ದರಕ್ಕೆ ಬ್ರೇಕ್ ಹಾಕಿದೆ. ದಿನದ ಪಾಸ್ ದರವನ್ನು 70 ರೂಪಾಯಿಯಿಂದ 50 ರೂಪಾಯಿಗೆ ಇಳಿಕೆ ಮಾಡಿದೆ. ಜೊತೆಗೆ ಟಿಕೆಟ್‍ಗಳನ್ನು ವಿತರಿಸಲು ಒಪ್ಪಿಗೆ ನೀಡಿದ್ದಾರೆ. ಸ್ಟೇಜ್‍ಗಳ ಆಧಾರದ ಮೇಲೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಜೊತೆಗೆ ಅಗತ್ಯ ಇದ್ದರೆಷ್ಟೇ ಪ್ರಯಾಣ ಮಾಡಿ, ಟಿಕೆಟ್‍ಗೆ ಸರಿ ಹೋಗುವಷ್ಟು ಚಿಲ್ಲರೆ ತನ್ನಿ. ಮಾಸ್ಕ್, ಗ್ಲೌಸ್ ಧರಿಸಿ ಎಂದು ಮನವಿ ಮಾಡಿಕೊಂಡಿದೆ.
ಇನ್ಮುಂದೆ ಪ್ರಯಾಣಿಕರು ಕ್ಯೂ ಆರ್ ಕೋಡ್, ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ಪಾವತಿಸಬಹುದಾಗಿದೆ. 1000 ಬಸ್‍ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗುದೆಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ.
ಬಿಎಂಟಿಸಿ ಪ್ರಯಾಣಿಕರು ಕಳೆದ ಒಂದು ವಾರದಿಂದ ಸಂಚಾರ ಮಾಡಲು ಕಷ್ಟ ಪಡುತ್ತಿದ್ದರು. ಆದರೆ ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ಪಾಸ್ ದರವನ್ನು ಇಳಿಸಿ, ಮತ್ತಷ್ಟು ವಿವಿಧ ಪಾಸ್‍ಗಳನ್ನ ನೀಡುವ ತೀರ್ಮಾನ ಮಾಡಿದೆ. ಇಂದಿನಿಂದ ಪ್ರಯಾಣಿಕರು ಯಾವುದೇ ಹೊರೆ ಇಲ್ಲದೆ ಓಡಾಟ ಮಾಡುವ ಅವಕಾಶ ಸಿಕ್ಕಿದೆ.
ಬೆಂಗಳೂರು: ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಬಿಎಂಟಿಸಿ ನಾಳೆಯಿಂದ ಪ್ರಯಾಣಿಕರಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದೆ.
ಪ್ರಯಾಣಿಕರ ಆಕ್ರೋಶವೇನಿತ್ತು?
ಇಂದಿನಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮತ್ತೆ ತಮ್ಮ ಸಂಚಾರವನ್ನು ಪುನಾರಂಭಿಸಿದೆ. ಆದರೆ ಬಿಎಂಟಿಸಿಯಲ್ಲಿ ಪಾಸ್ ಇರುವವರು ಮಾತ್ರ ಓಡಾಡಲು ಅವಕಾಶ ನೀಡಲಾಗಿತ್ತು. ಇದರಿಂದ ಒಂದು, ಎರಡು ಸ್ಟಾಟ್‍ಗೆ ದಿನದ ಪಾಸ್ ತೆಗೆದುಕೊಳ್ಳಿ ಎಂದು ಕಂಡಕ್ಟರ್ ಹೇಳುತ್ತಿದ್ದಾರೆ. ಬಿಎಂಟಿಸಿ ಪ್ರಯಾಣಿಕರಿಗೆ ಬಸ್ ಟಿಕೆಟ್ ಕೊಡುವ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕಂಡಕ್ಟರ್ ಪ್ರಯಾಣಿಕರಿಗೆ ಪಾಸ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಪಾಸ್ ದರ ದುಬಾರಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
1-2 ಸ್ಟಾಪ್‍ಗೆ 10 ರೂಪಾಯಿ ಕೊಡುತ್ತಿದ್ದೇವೆ. ಈಗ ಟಿಕೆಟ್ ಕೊಡುತ್ತಿಲ್ಲ. ಪಾಸ್ ತೆಗೆದುಕೊಳ್ಳಿ ಎಂದು ಕಂಡಕ್ಟರ್ ಹೇಳುತ್ತಿದ್ದಾರೆ. ಒಂದು ದಿನದ ಪಾಸ್ 70 ರೂಪಾಯಿ ಇದೆ. ನನ್ನ ಪತ್ನಿ ಗಾರ್ಮೆಂಟ್ಸ್ ಗೆ ಹೋಗೋದು. ಲಾಕ್‍ಡೌನ್‍ನಿಂದ ಸಂಬಳ ಇಲ್ಲ. ಹೀಗಿರುವಾಗ ಪಾಸ್ ತೆಗೆದುಕೊಂಡು ಹೋಗಿ ಅನ್ನೋದು ಸರಿಯಲ್ಲ. ಬಿಎಂಟಿಸಿ ಟಿಕೆಟ್ ವ್ಯವಸ್ಥೆ ಮಾಡಬೇಕು ಎಂದು ಮತ್ತೊಬ್ಬ ಪ್ರಯಾಣಿಕ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು.
ಈ ವರದಿಯ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ ನಾಳೆಯಿಂದ ಟಿಕೆಟ್ ನೀಡಲು ನಿರ್ಧರಿಸಿದೆ. ನಾಳೆಯಿಂದ ಬಸ್‍ಗಳಲ್ಲಿ ಟಿಕೆಟ್ ನೀಡಲು ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸರ್ಕಾರ ಬಿಎಂಟಿಸಿ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನಾಳೆಯಿಂದ ಬಿಎಂಟಿಸಿ ಟಿಕೆಟ್ ನೀಡಲಿದೆ. ಈ ಮೂಲಕ ಬಿಎಂಟಿಸಿ ಪಾಸ್ ಬದಲು ಟಿಕೆಟ್ ನೀಡಲು ನಿರ್ಧಾರ ಮಾಡಿದೆ.
ಸ್ಲಾಬ್ ರೀತಿಯಲ್ಲಿ ಟಿಕೆಟ್ ದರ ಫಿಕ್ಸ್ ಮಾಡಲಾಗಿದೆ. 5 ರೂ, 10 ರೂ, 15, 20, 25 ರೂ. ಮಾದರಿಯಲ್ಲಿ ಬಿಎಂಟಿಸಿ ಟಿಕೆಟ್ ನೀಡಲಿದೆ. ಚಿಲ್ಲರೆ ಸಮಸ್ಯೆ, ಪದೇ ಪದೇ ಕೈ ಬದಲಾವಣೆ ಮಾಡೋದು ತಪ್ಪಿಸಲು ಸ್ಲಾಬ್ ಮಾದರಿ ಟಿಕೆಟ್ ನೀಡಲಿದೆ ಎಂದು ಪಬ್ಲಿಕ್ ಟಿವಿಗೆ ಬಿಎಂಟಿಸಿ ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಸ್ಲಾಬ್ ರೀತಿ ಟಿಕೆಟ್
* 2 ಕಿ.ಮೀ – 5 ರೂ.
* 3 ರಿಂದ 4 ಕಿ.ಮೀ – 10 ರೂ.
* 5 ರಿಂದ 6 ಕಿ.ಮೀ – 15 ರೂ.
* 7 ರಿಂದ 14 ಕಿ.ಮೀ – 20 ರೂ.
* 15 ರಿಂದ 40 ಕಿ.ಮೀ – 25 ರೂ.
* 41 ಕಿಮೀ ಹೆಚ್ಚಿನ ದೂರ – 30 ರೂ.