Tag: government

  • ಕಾರವಾರದಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರೀಡಾಂಗಣ – ಉ.ಕದಲ್ಲೇ ಏಕೆ?

    ಕಾರವಾರದಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರೀಡಾಂಗಣ – ಉ.ಕದಲ್ಲೇ ಏಕೆ?

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಎರಡನೇ ಅಂತಾರಾಷ್ಟ್ರೀಯ ಕ್ರೀಡಾಂಗಣ ತಲೆ ಎತ್ತಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಸಂತೋಷ್ ಮೇನನ್ ಅವರನ್ನು ಅವರ ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಸದ್ಯ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕಾಗಿ ಕಾರವಾರ-ಗೋವಾ ಗಡಿ ಭಾಗದ ಕಾಳಿನದಿ ಅರಬ್ಬಿ ಸಮದ್ರ ಸೇರುವ ಸಂಗಮ ಸ್ಥಳವಾದ ಸದಾಶಿವಗಡ್‍ನಲ್ಲಿ 12 ಎಕರೆ ಜಮೀನನನ್ನು ನಿಗದಿ ಮಾಡಲಾಗಿದ್ದು, ಪ್ರಸಕ್ತ ಬಜೆಟ್‍ನಲ್ಲಿ ಅನುಮೋದನೆ ಪಡೆದು ಕಾರ್ಯ ಪ್ರಾರಂಭಿಸಲಾಗುತ್ತದೆ.

    ಇಲ್ಲಿಯೇ ಯಾಕೆ?
    ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣವಿದೆ. ಅದನ್ನು ಹೊರತುಪಡಿಸಿದರೆ ಜಿಲ್ಲೆಯ ಮಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೊದಲು ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಕಾರಣ ಇಲ್ಲಿನ ಪರಿಸರ. ಹೌದು ಕಾರವಾರ ನೈಸರ್ಗಿಕವಾಗಿ ಅದ್ಭುತ ಪ್ರದೇಶವಾಗಿದೆ. ಜೊತೆಗೆ ಗೋವಾ ರಾಜ್ಯ ಕೂಡ ಸಮೀಪದಲ್ಲಿಯೇ ಇದೆ. ರಾಷ್ಟ್ರ ಕವಿ ರವೀಂದ್ರನಾಥ ಠಾಗೂರ್ ರವರಿಗೆ ಗೀತಾಂಜಲಿ ಕವನ ಸಂಕಲನ ಬರೆಯಲು ಸ್ಫೂರ್ತಿ ನೀಡಿದ ಹಾಗೂ ಅವರಿಂದ ಬಾಯಿತುಂಬಾ ಕರ್ನಾಟಕದ ಕಾಶ್ಮೀರ ಎಂದು ಹೊಗಳಿಸಿಕೊಂಡ ಪ್ರದೇಶವು ಇದೇ ಕಾರವಾರದ ಸಮುದ್ರ ತೀರ.

    ಒಂದೆಡೆ ಕಾಳಿ ನದಿ, ಇನ್ನೊಂದೆಡೆ ಅರಬ್ಬಿ ಸಮುದ್ರ ಇದರ ಸಂಗಮವಾಗುವುದೇ ಕಾರವಾರದ ಸದಾಶಿವಗಡದಲ್ಲಿ. ಇಲ್ಲಿಯೇ ರಾಜ್ಯ ಸರ್ಕಾರ 12 ಎಕರೆ ವಿಸ್ಥಾರವಾದ ಜಾಗವನ್ನು ಕಾಯ್ದಿರಿಸಿದೆ. ಆರು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ, ಉಳಿದ ಆರು ಎಕರೆ ಪ್ರದೇಶದಲ್ಲಿ ಪಾರ್ಕಿಂಗ್, ಕಚೇರಿ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲು ನಿರ್ಧಾರ ಮಾಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಅನುಮೋದನೆ ಪಡೆದು 2030ರ ವೇಳೆಗೆ ಕಾರ್ಯಾರಂಭ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಸದ್ಯ ಈ ಕ್ರೀಡಾಂಗಣಕ್ಕೆ ಸಂಪರ್ಕ ಸಾಧಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪತ ಕಾಮಗಾರಿ ಪೂರ್ಣವಾಗುತ್ತಿದೆ.

    ಅಂಕೋಲದಲ್ಲಿ ನೌಕಾದಳದ ಸಹ ಭಾಗಿತ್ವದ ನಾಗರೀಕ ವಿಮಾನ ನಿಲ್ದಾಣ ಪ್ರಸ್ಥಾಪ ಜಾರಿಯಾಗುವ ಸಾಧ್ಯತೆಗಳಿವೆ. ಕಾರವಾರದಿಂದ ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ 70 ಕಿಲೋಮೀಟರ್ ಅಂತರವಿದ್ದರೆ, ಅಂತಾರಾಷ್ಟ್ರೀಯ ಮಾದರಿಯ ಹೋಟೆಲ್‍ಗಳು 40ರಿಂದ 50 ಕಿಮೀ ವ್ಯಾಪ್ತಿಯಲ್ಲಿದ್ದು ಆಟಗಾರರು, ಅಂತಾರಾಷ್ಟ್ರೀಯ ಅತಿಥಿಗಳಿಗೆ ಉಳಿದುಕೊಳ್ಳಲು ಉತ್ತಮ ಅವಕಾಶ ಹಾಗೂ ವ್ಯವಸ್ಥೆಗಳಿವೆ. ಇದಲ್ಲದೇ ಜನರಿಗೆ ಸಂಚರಿಸಲು ಕೊಂಕಣ ರೈಲ್ವೆ ಮಾರ್ಗ ಸಹ ಉತ್ತಮವಾಗಿದ್ದು ರಾಜ್ಯ ಮತ್ತು ಹೊರ ರಾಜ್ಯದ ನಾನಾ ಭಾಗದಿಂದ ಇಲ್ಲಿಗೆ ಬರಲು ರೈಲ್ವೆ ವ್ಯವಸ್ಥೆ ಸಹ ಇದೆ. ಶೀಘ್ರದಲ್ಲೇ ಹುಬ್ಬಳ್ಳಿ ಅಂಕೋಲ ಭಾಗಕ್ಕೂ ರೈಲ್ವೇ ಮಾರ್ಗ ಮಾಡಲು ಸಿದ್ಧತೆ ನಡೆದಿದೆ.

    ಜಿಲ್ಲೆಯ ಅಭಿವೃದ್ಧಿಗೆ ಪೂರಕ
    ಕಾರವಾರ ನೈಸರ್ಗಿಕ ಸಂಪತ್ಬರಿತ ತಾಲೂಕಾಗಿದ್ದರೂ ಅತೀ ಹಿಂದುಳಿದ ಅಭಿವೃದ್ಧಿ ಕಾಣದ ತಾಲೂಕಿನಲ್ಲಿ ಇದು ಒಂದಾಗಿದೆ. ಮೀನುಗಾರಿಕೆ ಇಲ್ಲಿನ ಮುಖ್ಯ ಕಸಬು. ಆದರೇ ಈ ಪ್ರದೇಶದಲ್ಲಿ ದೊಡ್ಡ ಕಾರ್ಖಾನೆಯಾಗಲಿ, ಕಂಪನಿಗಳಾಗಲಿ ಇಲ್ಲ. ಇಲ್ಲಿನ ಜನರು ಉದ್ಯೋಗಕ್ಕಾಗಿ ನೆರೆಯ ಗೋವಾವನ್ನು ಅವಲಂಬಿಸಿದ್ದಾರೆ. ಪ್ರವಾಸೋದ್ಯಮ ಉತ್ತಮ ಅವಕಾಶ ಇದ್ದರೂ ಸಹ ಏಷ್ಯಾದ ಅತಿದೊಡ್ಡ ನೌಕಾ ನೆಲೆಯಾದ ಕದಂಬ ನೌಕಾ ನೆಲೆಗಾಗಿ ಸಮುದ್ರ ಭಾಗದ ತೀರ ಪ್ರದೇಶ ಸೇರಿದಂತೆ ಹಲವು ಭಾಗವನ್ನು ದೇಶದ ಹಿತಕ್ಕಾಗಿ ದಾರೆ ಎರೆದಿದ್ದಾರೆ.

    ಇಂತಹ ಸ್ಥಿತಿಯಲ್ಲಿ ಪ್ರವಾಸೋದ್ಯಮ ಅವಕಾಶ ಸಹ ಕ್ಷೀಣಿಸಿತ್ತು. ಆದರೇ ಕಳೆದ ಹತ್ತು ವರ್ಷಗಳಲ್ಲಿ ಕಾರವಾರ ಭಾಗ ಸಾಕಷ್ಟು ಬದಲಾವಣೆಯಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಇಲ್ಲಿನ ಜನರು ಪ್ರವಾಸೋದ್ಯಮದಲ್ಲಿ ಉದ್ಯೋಗ ಹುಡುಕಿಕೊಂಡಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರೀಡಾಂಗಣವಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿ ಸಹ ಆಗಲಿದೆ. ಅಂತಾರಾಷ್ಟ್ರೀಯ ಮನ್ನಣೆಯ ಜೊತೆ ನೆರೆಯ ಗೋವಾದಂತೆ ಕಾರವಾರವೂ ಅಭಿವೃದ್ಧಿಯಾಗಲಿದೆ.

  • ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಬಡ್ಡಿರಹಿತ ಸಾಲ ನೀಡಲಿ: ಯು.ಟಿ ಖಾದರ್

    ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಬಡ್ಡಿರಹಿತ ಸಾಲ ನೀಡಲಿ: ಯು.ಟಿ ಖಾದರ್

    ಮಂಗಳೂರು: ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಬಡ್ಡಿರಹಿತ ಸಾಲ ನೀಡಲಿ. ವಿದ್ಯಾರ್ಥಿಗಳ ಹಾಗೂ ಮ್ಯಾನೇಜ್ಮೆಂಟ್ ಬಗ್ಗೆ ಕೂಡ ಸರ್ಕಾರ ಗಮನಹರಿಸಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೋವಿಡ್‍ನಿಂದಾಗಿ ಬರಲು ಪುರುಸೋತ್ತಿಲ್ಲ. ಫೀಸ್ ಕಟ್ಟಬೇಡಿ ಅಂತ ಸರ್ಕಾರ ಹೇಳಿದೆ. ಹೀಗಾಗಿ ಫೀಸ್ ಕಟ್ಟಲು ಕೆಲವರು ತಯಾರಿದ್ದರೂ ಕಟ್ಟಲಿಲ್ಲ. ಹೀಗಾದ್ರೆ ಶಾಲೆಗಳು ಉಳಿಯೋದು ಹೇಗೆ ಎಂದು ಪ್ರಶ್ನಿಸಿದರು.

    ಕೆಲ ಶಾಲಾ ಆಡಳಿತ ಮಂಡಳಿಗೆ ಕಟ್ಟಡದ ಬಾಡಿಗೆ ಕೊಡಲು ಸಾಧ್ಯವಿರುವುದಿಲ್ಲ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಾರೆ. ಆದ್ದರಿಂದ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ನೀಡಲಿ. ಹಾಗೆಯೇ ವಿದ್ಯಾರ್ಥಿಗಳ ಬಗ್ಗೆ ಹಾಗೂ ಮ್ಯಾನೆಜ್‍ಮೆಂಟ್ ಬಗ್ಗೆ ಕೂಡ ಸರ್ಕಾರ ಗಮನಹರಿಸಲಿ ಎಂದು ಒತ್ತಾಯಿಸಿದರು.

    ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ವಿಚಾರದಲ್ಲಿ ಬೇಜವಬ್ದಾರಿ ತೋರುತ್ತಿದೆ. ಹೆತ್ತವರು ನೆಮ್ಮದಿಯಿಂದ ಇರುವಂತೆ ಮಾಡುವುದು ಶಿಕ್ಷಣ ಇಲಾಖೆ ಕರ್ತವ್ಯವಾಗಿದೆ. ಸರ್ಕಾರದ ಸಚಿವರು ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಗರಂ ಆದರು.

    ಲಾಜಿಕ್ ಇಲ್ಲದೆ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಪರೀಕ್ಷೆಯ ದಿನಾಂಕ ನಿಗದಿ ಮಾಡಲು ಗೊಂದಲ ಮಾಡಿದರು. ಪರೀಕ್ಷೆ ಮುಗಿದಿಲ್ಲ. ಆಗಲೇ ಆನ್ ಲೈನ್ ಶಿಕ್ಷಣ ಬೇಕಾ, ಬೇಡ್ವಾ ಅನ್ನೋ ಬಗ್ಗೆ ಮಾತನಾಡುತ್ತಿದ್ದೀರಿ. 5ನೇ ತರಗತಿವರೆಗೂ ಆನ್ ಲೈನ್ ಶಿಕ್ಷಣ ಬೇಡ ಅನ್ನೋದಕ್ಕೆ ನಾನು ಸಮ್ಮತಿಸುತ್ತೇನೆ. ಆದರೆ ಕಾರ್ಪೊರೇಟ್ ಆಪ್ ನ್ನು ಯಾಕೆ ಬ್ಯಾನ್ ಮಾಡಲ್ಲ ಎಂದು ಸರ್ಕಾರವನ್ನು ಮಾಜಿ ಸಚಿವರು ಪ್ರಶ್ನೆ ಮಾಡಿದರು.

    ರಾಜ್ಯದ ಎಲ್ಲಾ ಮಕ್ಕಳಿಗೂ ಸ್ಮಾರ್ಟ್ ಫೋನ್ ಕೊಡಿಸುವ ಸಾಮರ್ಥ್ಯ ಇರಲ್ಲ. ಸೈಕಲ್ ಕೊಡುವ ಸ್ಕೀಮ್ ಬಿಟ್ಟು ಅದನ್ನು ಬೇರೆ ವ್ಯವಸ್ಥೆಗೆ ಬಳಸಿಕೊಳ್ಳಿ. ಎಲ್ಲದಕ್ಕೂ ಮೊದಲು ಟೆಸ್ಟ್ ಬುಕ್ ಪ್ರಿಂಟ್ ಮಾಡಿಸಿ ಎಂದು ಇದೇ ವೇಳೆ ಸರ್ಕಾರಕ್ಕೆ ಸಲಹೆ ನೀಡಿದರು.

  • ಹೆಮ್ಮಾರಿ ಕೊರೊನಾ ಕಂಟ್ರೋಲ್‍ಗೆ ಸರ್ಕಾರದ ಡಬಲ್ ಪ್ಲಾನ್

    ಹೆಮ್ಮಾರಿ ಕೊರೊನಾ ಕಂಟ್ರೋಲ್‍ಗೆ ಸರ್ಕಾರದ ಡಬಲ್ ಪ್ಲಾನ್

    – ಮನೆ, ಸ್ಟೇಡಿಯಂಗಳಲ್ಲೂ ಚಿಕಿತ್ಸೆಗೆ ಚಿಂತನೆ

    ಬೆಂಗಳೂರು: ರಾಜ್ಯಕ್ಕೆ ಕೊರೊನಾ ಮಹಾಕಂಟಕ ತಪ್ಪುವ ಲಕ್ಷಣಗಳೇ ಕಾಣುತ್ತಿಲ್ಲ. ಇವತ್ತು ಒಂದೇ ದಿನ 271 ಕೇಸ್ ದಾಖಲಾಗಿದೆ. ಇದರಲ್ಲಿ ಬಳ್ಳಾರಿ 97, ಬೆಂಗಳೂರು 36 ಕೇಸ್‍ಗಳಿವೆ. ಈ ಮೂಲಕ 6,516ಕ್ಕೆ ಸೋಂಕಿನ ಸಂಖ್ಯೆ ಏರಿದೆ. ಗರಿಷ್ಠ ಒಂದೇ ದಿನ 7 ಮಂದಿ ಸಾವನ್ನಪ್ಪಿದ್ದಾರೆ.

    ಮೂರ್ನಾಲ್ಕು ತಿಂಗಳು ಕೊರೊನಾ ಜೊತೆಯೇ ನಾವೆಲ್ಲಾ ಸಹಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜೂನ್ ತಿಂಗಳಲ್ಲಿ ಕೋವಿಡ್-19 ಆರ್ಭಟಿಸುತ್ತಿರುವ ಹೊತ್ತಲ್ಲೇ ಜುಲೈ, ಆಗಸ್ಟ್ ನಂತರವೂ ಕೊರೊನಾ ಸೋಂಕು ಉತ್ತುಂಗಕ್ಕೆ ಏರಲಿದೆ ಎಂದು ರಾಜ್ಯ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ 600 ಕೇಸ್ ದಾಟಿದ್ದು, ಕಳೆದ 10 ದಿನದಿಂದ ಕೇಸ್‍ಗಳು ಡಬಲ್ ಆಗುತ್ತಲೇ ಇವೆ. ಇದರಿಂದಾಗಿ ಮುಂಬೈ, ದೆಹಲಿ ಪರಿಸ್ಥಿತಿ ಬಂದೊದಗುತ್ತಾ ಎನ್ನುವ ಆತಂಕ ಎದುರಾಗಿದೆ.

    ರಾಕೆಟ್ ವೇಗದಲ್ಲಿ ಜಿಗಿಯುತ್ತಿರುವ ಕೊರೋನಾ ಕಂಟ್ರೋಲ್‍ಗೆ ಸರ್ಕಾರ ‘ಪ್ಲಾನ್’ ಬಿ ಮತ್ತು ಪ್ಲಾನ್ `ಸಿ’ ರೆಡಿ ಮಾಡಿಕೊಂಡಿದೆ. ಈ ಮೂಲಕ ಸೋಂಕನ್ನು ನಿಯಂತ್ರಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ‘ಪ್ಲಾನ್’ ಬಿ ಮನೆಯಲ್ಲೇ ಐಸೋಲೇಷನ್ ತೆರೆಯುವುದಾಗಿದೆ.

    ಪ್ಲಾನ್ ಬಿ-ಮನೆಯಲ್ಲೇ ಐಸೋಲೇಷನ್:
    ಹೋಂ ಕ್ವಾರಂಟೈನ್ ಆಯ್ತು ಈಗ ಹೋಂ ಐಸೋಲೇಷನ್ ಪ್ಲಾನ್‍ಗೆ ಸರ್ಕಾರ ಮುಂದಾಗಿದೆ. ಸೋಂಕಿನ ಲಕ್ಷಣ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಶೇ.70ರಷ್ಟು ಕೊರೊನಾ ಪಾಸಿಟಿವ್ ಬಂದವರಲ್ಲಿ ಕೋವಿಡ್-19 ಲಕ್ಷಣಗಳೇ ಇಲ್ಲ. ಈ ನಿಟ್ಟಿನಲ್ಲಿ ಸೋಂಕಿನ ಲಕ್ಷಣ ಇಲ್ಲದ ಸೋಂಕಿತರಿಗೆ ಮನೆಯಲ್ಲಿಯೇ ಐಸೊಲೇಷನ್ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ವೃದ್ಧರು, ಮಕ್ಕಳು, ಗರ್ಭಿಣಿಯರು, ವಿವಿಧ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸೇರಿದಂತೆ ಗಂಭೀರ ಪ್ರಕರಣಗಳಿಗೆ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

    ಮನೆಯಲ್ಲೇ ಚಿಕಿತ್ಸೆ ಹೇಗೆ?:
    ಗಂಭೀರ ಲಕ್ಷಣ ಇಲ್ಲದಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಪೂರಕವಾಗಿ ಮನೆಯಲ್ಲೇ ಇರುವ ಪ್ರತ್ಯೇಕ ಕೋಣೆಯಲ್ಲಿ ಐಸೋಲೇಷನ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಷ್ಟೇ ಅಲ್ಲದೆ ಸೋಂಕಿತರ ಕುಟುಂಬಸ್ಥರು ಹೊರಗೆ ಬರುವಂತ್ತಿಲ್ಲ. ಸೋಂಕಿತರಿರುವ ಇಡೀ ಮನೆಯನ್ನೇ ಕಂಟೈನ್ಮೆಂಟ್ ಮಾಡಲಾಗುತ್ತದೆ. ಮನೆ ಬಳಿ ಪೊಲೀಸ್, ಬಿಬಿಎಂಪಿ ಸಿಬ್ಬಂದಿಯ ನೇಮಕ ಸಾಧ್ಯತೆ ಇದೆ ಎನ್ನಲಾಗಿದೆ.

    ಸೋಂಕಿತ, ಮತ್ತವರ ಕುಟುಂಬಸ್ಥರಿಗೆ ವೈದ್ಯರ ತಂಡದ ನಿಗಾ ಇಡಲಾಗುತ್ತದೆ. ಅವಶ್ಯಕತೆ ಬಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ನೀಡುವ ಬಗ್ಗೆಯೂ ಪ್ಲಾನ್ ಮಾಡಲಾಗುತ್ತದೆ. ನಿತ್ಯ ವಿಟಮಿನ್ ಔಷಧಿ ನೀಡಿ ಆರೋಗ್ಯ ಸಿಬ್ಬಂದಿಯಿಂದ ಚಿಕಿತ್ಸೆ ಕೊಡಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ರಾಜ್ಯ ಸರ್ಕಾರದ ಈ ಪ್ಲಾನ್ ದೆಹಲಿ ಮಾಡೆಲ್ ಆಗಿದೆ. ಈಗಾಗೇ ದೆಹಲಿಯ ಖಾಸಗಿ ಆಸ್ಪತ್ರೆಗಳಿಂದ ‘ಹೋ ಕೇರ್ ಪ್ಯಾಕೇಜ್’ ಅನ್ನು ಪರಿಚಯಿಸಲಾಗಿದೆ.

    ಏನಿದು ದೆಹಲಿ ಮಾಡೆಲ್?
    ಗಂಭೀರ ಗುಣಲಕ್ಷಣ ಇಲ್ಲದ ಕೊರೊನಾ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರದಿಂದ ಹೋಂ ಕೇರ್ ಪ್ಯಾಕೇಜ್ ಪ್ರಕಟವಾಗಿದೆ. ಕೊರೊನಾ ಪೀಡಿತರಿಗೆ ಹೋಂಕೇರ್ ಕಿಟ್ ವಿತರಣೆ ಮಾಡಲಾಗುತ್ತದೆ. ಕಿಟ್‍ನಲ್ಲಿ ಡಿಜಿಟಲ್ ಥರ್ಮಾಮೀಟರ್, ಆಕ್ಸಿ ಮೀಟರ್ ಮತ್ತು ಡಿಜಿಟಲ್ ಬಿಪಿ ಯಂತ್ರ ಇರುತ್ತವೆ. ಆರಂಭದಲ್ಲಿ ವೈದ್ಯರಿಂದಲೇ ರೋಗಿಯ ತಪಾಸಣೆ ನಡೆಸಲಾಗುತ್ತದೆ. ಬಳಿಕ ಹೋಂ ಕೇರ್ ಕಿಟ್ ಮೂಲಕ ರೋಗಿಯಿಂದಲೇ ಸ್ವಯಂ ತಪಾಸಣೆ ನಡೆಸಲಾಗುತ್ತದೆ. ನಿತ್ಯವೂ ಎರಡು ಬಾರಿ ರೋಗಿಯ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ಸೋಂಕಿನ ತೀವ್ರತೆ ಕಂಡುಬಂದರೆ ರೋಗಿಯನ್ನು ಮನೆಯಿಂದ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ.

    ಪ್ಲಾನ್-ಸಿ:
    ಒಂದು ಕಡೆ ಮನೆಯಲ್ಲೇ ಚಿಕಿತ್ಸೆ ಮಾಡುವುದು ಸರ್ಕಾರದ ಪ್ಲಾನ್ ಬಿ ಆಗಿದ್ದರೆ, ಇನ್ನೊಂದು ಕಡೆ ಪ್ಲಾನ್ `ಸಿ’ ರೆಡಿ ಮಾಡಿದೆ. ದೆಹಲಿ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಅಸ್ಸಾಂ ಮಾದರಿಯಲ್ಲಿ ಈ ಪ್ಲಾನ್ ‘ಸಿ’ ರೆಡಿಯಾಗಿದೆ.

    ಸರ್ಕಾರದ ‘ಪ್ಲಾನ್-ಸಿ’ ಹೀಗಿದೆ!
    ಬಯಲು ಪ್ರದೇಶ, ಸ್ಟೇಡಿಯಂಗಳು ತಾತ್ಕಾಲಿಕವಾಗಿ ಆಸ್ಪತ್ರೆಯಾಗಲಿವೆ. ದೊಡ್ಡ ಬಯಲು ಪ್ರದೇಶಗಳಲ್ಲಿ ಟೆಂಟ್, ಶಿಬಿರ ರೀತಿ ನಿರ್ಮಾಣ ಮಾಡಲಾಗುತ್ತದೆ. ಬೆಂಗಳೂರಿನ 3ರಿಂದ 4 ಸ್ಥಳಗಳು ಆಸ್ಪತ್ರೆಯಾಗಿ ಮಾರ್ಪಾಡು ಸಾಧ್ಯತೆ ಇದೆ. ಕಂಠೀರವ ಸ್ಟೇಡಿಯಂ, ಬಳ್ಳಾರಿ ರಸ್ತೆಯ ತ್ರಿಪುರವಾಸಿನಿ, ತುಮಕೂರು ರಸ್ತೆಯ ಇಂಟರ್ ನ್ಯಾಷನಲ್ ಎಕ್ಸಿಬಿಷೇನ್ ಸೆಂಟರ್ ಹಾಗೂ ವೈಟ್‍ಫೀಲ್ಡ್ ರಸ್ತೆಯಲ್ಲಿ ತಾತ್ಕಾಲಿಕ ಆಸ್ಪತ್ರೆಗೆ ಸರ್ಕಾರ ಚಿಂತನೆ ನಡೆಸಿದೆ.

  • ದಿನಕ್ಕೊಂದು ರೂಲ್ಸ್- ಸರ್ಕಾರದ ಎಡವಟ್ಟಿಗೆ ಜುಲೈನಲ್ಲಿ ಕೊರೊನಾ ಸ್ಫೋಟ?

    ದಿನಕ್ಕೊಂದು ರೂಲ್ಸ್- ಸರ್ಕಾರದ ಎಡವಟ್ಟಿಗೆ ಜುಲೈನಲ್ಲಿ ಕೊರೊನಾ ಸ್ಫೋಟ?

    ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಇಂದಿಗೆ ಕೊರೊನಾ ಪ್ರಕರಣಗಳು 6, 244 ಮತ್ತು ಬೆಂಗಳೂರಿನಲ್ಲಿ 584 ಕ್ಕೆ ಏರಿಕೆ ಆಗಿದೆ. ಈ ಪ್ರಮಾಣದಲ್ಲಿ ಏರಿಕೆಯಾಗಲಿಕ್ಕೆ ಕಾರಣ ಸರ್ಕಾರವೇ ಅಂತ ಆರೋಗ್ಯ ತಜ್ಞರು ಅಸಮಾಧಾನ ಹೊರ ಹಾಕಿದ್ದಾರೆ.

    ದಿನಕ್ಕೊಂದು ರೂಲ್ಸ್ ಮಾಡ್ತಾ ಇರೋದು, ಬೇಕಾಬಿಟ್ಟಿ ನಿಯಮಗಳು ಸಡಿಲಿಕೆ ಮಾಡುತ್ತಿರುವುದೇ ಕೊರೊನಾ ಪ್ರಕರಣ ಪತ್ತೆ ಜಾಸ್ತಿ ಆಗಲು ಕಾರಣ ಎಂದು ಸ್ವತಃ ಆರೋಗ್ಯ ತಜ್ಞರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ಟೇಟ್ ಕೋವಿಡ್ ವಾರ್ ರೂಂ ನೀಡಿದ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬೇಕಾಬಿಟ್ಟಿಯಾಗಿ ನಿಯಮಗಳನ್ನು ಸಡಿಲಿಕೆ ಮಾಡುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಇಲಾಖೆ, ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ದಿನಕ್ಕೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದು ಕೊರೊನಾ ಹೆಚ್ವಳಕ್ಕೆ ದಾರಿ ಮಾಡಿಕೊಟ್ಟಂತಾಗಿದ್ದು, ಈ ಮೂಲಕ ಜುಲೈನಲ್ಲಿ ಕೊರೊನಾ ಮಹಾಸ್ಪೋಟ ಆಗುವ ಆತಂಕ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಬೇಕಾಬಿಟ್ಟಿ ಸಡಿಲಿಕೆ ಮಾಡಿದ ನಿಯಮಗಳೇನು?
    14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ. ಸೂಕ್ತ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲದೆಯೇ ರೋಗ ಲಕ್ಷಣ ಇಲ್ಲದವರಿಗೆ ಹೋಂ ಕ್ವಾರಂಟೈನ್‍ಗೆ ಸೂಚಿಸಲಾಗಿದೆ. ವಾರ್ ರೂಂ ವಿಶ್ಲೇಷಣೆ ಕಡೆಗಣಿಸಲಾಗುತ್ತಿದೆ. ಕರ್ನಾಟಕ ಕೋವಿಡ್ ವಾರ್ ರೂಂ, ಒಟ್ಟು ಸೋಂಕಿತರಲ್ಲಿ ಶೇ.96 ಮಂದಿ ರೋಗ ಲಕ್ಷಣವನ್ನೇ ಹೊಂದಿಲ್ಲ ಎಂದು ತಿಳಿಸಿದೆ. ಹೀಗಿರುವಾಗ ವಾರ್ ರೂಂ ವಿಶ್ಲೇಷಣೆಯನ್ನು ಕಡೆಗಣಿಸಿ ಕೇವಲ ರೋಗ ಲಕ್ಷಣ ಹೊಂದಿದವರಿಗೆ ಮಾತ್ರವೇ ಪರೀಕ್ಷೆ ನಡೆಸಲು ಅದೇಶಿಸಿದೆ.

    ಸೋಂಕಿತರ ಕುರಿತು ಇನ್ನಿಲ್ಲದ ಕಾಳಜಿ ತೋರಿದ ಸರ್ಕಾರ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಾಗ ರೋಗಿಗಳನ್ನು ಪತ್ತೆ ಹಚ್ಚುವ ಪರೀಕ್ಷೆಯಲ್ಲೂ ನಿಯಮ ಸಡಿಲಿಸಿದೆ. ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಕ್ವಾರಂಟೈನ್ ಮತ್ತು ಪರೀಕ್ಷೆ ಕೈ ಬಿಟ್ಟಿದೆ. 12 ದಿನಕ್ಕೆ ಇದ್ದ ನಿಗಾ ಅವಧಿಯನ್ನು 10 ದಿನಗಳಿಗೆ ಇಳಿಸಿದ್ದು, ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಏಳೇ ದಿನಕ್ಕೆ ಮನೆಗೆ ಕಳುಹಿಸಲಾಗುತ್ತಿದೆ.

    ಮೊದಲಿಗೆ ಹೊರಗಿನಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತಿತ್ತು. ಕ್ವಾರಂಟೈನ್ ಮುಗಿಸಿ ಮನೆಗೆ ಹೋಗುವ ಮುನ್ನವೂ ಪರೀಕ್ಷೆಗೆ ನಡೆಸಲಾಗುತ್ತಿತ್ತು. ನಂತರ ವಿಮಾನ ಹಾಗೂ ರೈಲಿನಲ್ಲಿ ಬರುವವರಿಗೆ ಸ್ವತಃ ಖಾಸಗಿಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒಬ್ಬರಿಗೆ 650 ರೂ. ದರ ನಿಗದಿಪಡಿಸಿ, ಟೆಸ್ಟ್‍ಗೆ ಸೂಚಿಸಲಾಗಿತ್ತು. ಇದೀಗ ಕೇವಲ 7 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರಷ್ಟೇ ಪರೀಕ್ಷೆ ನಡೆಸಲು ಸೂಚಿಸಿದೆ.

    ಸೋಂಕು ಹೆಚ್ಚಿರುವ ಕಂಟೈನ್ಮೆಂಟ್ ವಲಯಗಳಲ್ಲಿ ರ‍್ಯಾಂಡಮ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ರೋಗ ಲಕ್ಷಣವೇ ಇಲ್ಲದ ಬಹಳಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಇದೀಗ ರ‍್ಯಾಂಡಮ್ ಪರೀಕ್ಷೆಯನ್ನು ತ್ಕಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಈ ರೀತಿ ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದು ಮತ್ತು ಕೋವಿಡ್ ವಾರ್ ರೂಂ ವರದಿ ಕಡೆಗಣನೆ ರಾಜ್ಯಕ್ಕೆ ಮಾರಕವಾಗ್ತಿವೆ ಎನ್ನಲಾಗುತ್ತಿದೆ. ಈ ಎಲ್ಲಾ ರಣಗಳಿಂದ ಜುಲೈನಲ್ಲಿ ಕೊರೊನಾ ಸ್ಫೋಟವಾಗುವ ಸಾಧ್ಯತೆ ಇದೆ ಎಂದು ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದಾರೆ.

  • ಸರ್ಕಾರದಿಂದ ಬಿಗ್ ಶಾಕ್- ಕೊರೊನಾ ವಾರಿಯರ್ಸ್‍ಗಿಲ್ಲ ಭದ್ರತೆ

    ಸರ್ಕಾರದಿಂದ ಬಿಗ್ ಶಾಕ್- ಕೊರೊನಾ ವಾರಿಯರ್ಸ್‍ಗಿಲ್ಲ ಭದ್ರತೆ

    ಬೆಳಗಾವಿ: ದೇಶದಲ್ಲಿ ಕೊರೊನಾ ಮಹಾಮಾರಿ ಕದಂಬಬಾಹು ಚಾಚುತ್ತಾ ರಣಕೇಕೆ ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರ, ಶಂಕಿತರ ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಿ ಎಡವಟ್ಟು ಮಾಡುತ್ತಿದ್ದು, ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಸೋಂಕಿತರು ಗುಣಮುಖರಾಗಲು ಅದಮ್ಯ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್‍ಗೆ ಸರ್ಕಾರ ಆಘಾತ ನೀಡಿದೆ.

    ಕೋವಿಡ್ ವಾರ್ಡಿನಲ್ಲಿ ಹಾಗೂ ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರ್ಕಾರ ಲಾಡ್ಜ್‍ಗಳಲ್ಲಿ ಇರಲು ವ್ಯವಸ್ಥೆ ಮಾಡಿತ್ತು. ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 7 ದಿನ ಕೆಲಸ ಮಾಡಿದ ಬಳಿಕ 14 ದಿನಗಳ ಕಾಲ ಹೋಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿರಬೇಕು ಅಂತ ನಿಯಮ ಕೂಡ ರೂಪಿಸಿತ್ತು. ಆದರೆ ಇದೀಗ ವೈದ್ಯಕೀಯ ಸಿಬ್ಬಂದಿ ಲಾಡ್ಜ್ ತೊರೆಯುವಂತೆ ಸೂಚಿಸಿ, ಮನೆಯಿಂದಲೇ ಕೆಲಸಕ್ಕೆ ಬರುವಂತೆ ಸೂಚಿಸಿದೆ. ಕೆಲ ಸಿಬ್ಬಂದಿ ಮನೆ ಚಿಕ್ಕದಿರುತ್ತೆ, ಪ್ರತ್ಯೇಕ ರೂಮಿನಲ್ಲಿ ಐಸೊಲೇಷನ್ ಇರಲಾಗಲ್ಲ. ಕೆಲವರ ಮನೆಯಲ್ಲಿ ಮಕ್ಕಳು, ವಯೋವೃದ್ಧರು ಇರ್ತಾರೆ ಅವರ ಪರಿಸ್ಥಿತಿ ಏನು ಅಂತ ಕೋವಿಡ್ ವಾರ್ಡ್ ವೈದ್ಯಕೀಯ ಸಿಬ್ಬಂದಿ, ಕುಟುಂಬಸ್ಥರು ಚಿಂತಿಸುತ್ತಿದ್ದಾರೆ.

    ಬೆಳಗಾವಿಯ ಐಸಿಎಂಆರ್‍ನಲ್ಲಿರುವ ಕೋವಿಡ್ ಟೆಸ್ಟ್ ಲ್ಯಾಬ್‍ನಲ್ಲಿ ಕೆಲಸ ಮಾಡುವ 10 ಸಿಬ್ಬಂದಿಗೂ ಲಾಡ್ಜ್ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಬೇರೆ ಊರುಗಳಿಂದ ಬರುವವರಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರಿಗೆ ಮನೆಯಿಂದಲೇ ಬರಲು ತಿಳಿಸಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಡಿಹೆಚ್‍ಒ ಡಾ.ಎಸ್.ವಿ ಮುನ್ಯಾಳ್, ಮೊದಲು ಸೋಂಕಿನ ಪ್ರಮಾಣ ಜಾಸ್ತಿ ಇತ್ತು. ಹೀಗಾಗಿ ಕೋವಿಡ್ ವಾರ್ಡಿನಲ್ಲಿ, ಕೋವಿಡ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 7 ದಿನಗಳ ಕೆಲಸ ಬಳಿಕ ಕ್ವಾರಂಟೈನ್‍ನಲ್ಲಿ ಇಡಲಾಗುತ್ತಿತ್ತು. ರಾಜ್ಯಮಟ್ಟದಿಂದ ಬಂದ ನಿರ್ದೇಶನದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

    ಒಟ್ಟಿನಲ್ಲಿ ಹೊರರಾಜ್ಯದಿಂದ ಬಂದವರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾಗ ವರದಿ ಬರುವ ಮುನ್ನವೇ ಅವರನ್ನು ಬಿಡುಗಡೆ ಮಾಡಿ ಅವರ ಮನೆಯವರಿಗೆ ಆತಂಕಕ್ಕೀಡುವಂತೆ ಮಾಡಿದ್ದು ಒಂದೆಡೆಯಾದರೆ, ಹೈರಿಸ್ಕ್‍ನಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ಆದರೆ ಇದರ ವಿರುದ್ಧ ಧ್ವನಿ ಎತ್ತಿದ್ರೆ ಎಲ್ಲಿ ಕೆಲಸಕ್ಕೆ ಕುತ್ತು ಬರುತ್ತೋ ಅಂತ ಮಾತನಾಡುತ್ತಿಲ್ಲವೇನೋ ಗೊತ್ತಿಲ್ಲ. ಸರ್ಕಾರ ಕೈಗೊಳ್ಳುವ ನಿರ್ಧಾರದಿಂದ ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ತೊಂದರೆಯಾಗದಿರಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.

  • ದೆಹಲಿಯಲ್ಲಿ ಶಾಲೆ ತೆರೆಯಬೇಡಿ – ಝೀರೋ ಅಕಾಡೆಮಿಕ್ ಇಯರ್ ಘೋಷಿಸಲು ಪೋಷಕರ ಒತ್ತಾಯ

    ದೆಹಲಿಯಲ್ಲಿ ಶಾಲೆ ತೆರೆಯಬೇಡಿ – ಝೀರೋ ಅಕಾಡೆಮಿಕ್ ಇಯರ್ ಘೋಷಿಸಲು ಪೋಷಕರ ಒತ್ತಾಯ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಎದುರಿಸುತ್ತಿದೆ. ಈ ನಡುವೆ ಹೊಸ ಶೈಕ್ಷಣಿಕ ವರ್ಷದ ಆರಂಭಿಸುವ ಬಗ್ಗೆ ಚರ್ಚೆ ಶುರುವಾಗಿದ್ದು, ಈ ಬಾರಿ ಶಾಲೆಗಳನ್ನೇ ತೆರೆಯುವುದೇ ಬೇಡ ಎಂದು ಶಿಕ್ಷಕರು ಮತ್ತು ಪೋಷಕರು ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಡಿಸಿಎಂ ಮನಿಷ್ ಸಿಸೊಡಿಯಾ ಪ್ರತಿಕ್ರಿಯಿಸಿದ್ದು, ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಆರೋಗ್ಯ ಸಚಿವ ಸತ್ಯಂದ್ರ ಜೈನ್ ಹೇಳಿದ್ದಾರೆ. ಈ ಹಂತದಲ್ಲಿ ಶಾಲೆಗಳನ್ನು ಪುನಾರಂಭಿಸುವುದು ಸರಿಯಲ್ಲ ಎಂದು ಪೋಷಕರ ಅಭಿಪ್ರಾಯಪಟ್ಟಿದ್ದಾರೆ.

    ಶಾಲೆಗಿಂತ ಮಕ್ಕಳ ಆರೋಗ್ಯ ಮುಖ್ಯವಾಗಿದ್ದು ಈ ವರ್ಷ ಪೂರ್ತಿ ಶಾಲೆಗಳನ್ನು ತೆರೆಯುವುದು ಬೇಡ. ಈ ವರ್ಷವನ್ನು ‘ಝೀರೋ ಅಕಾಡೆಮಿಕ್ ಇಯರ್’ ಎಂದು ಘೋಷಿಸುವಂತೆ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಇಸ್ರೇಲ್‍ನಲ್ಲಿ ಶಾಲೆಗಳನ್ನು ಆರಂಭಿಸಿದ ಕಾರಣಕ್ಕೆ ಕೊರೊನಾ ಸೋಂಕು ಮತ್ತಷ್ಟು ಹರಡಿ ಇಡೀ ದೇಶವನ್ನೇ ಕಷ್ಟಕ್ಕೆ ಸಿಲುಕಿಸಿತ್ತು. ಇಸ್ರೇಲ್ ನಲ್ಲಿ ಶಾಲೆ ತೆರೆದು ಆಗಿರುವ ಅನಾಹುತಗಳನ್ನು ಮರೆಯಬಾರದು. ಭಾರತದಲ್ಲಿ ಶಾಲೆಗಳನ್ನು ತೆರೆದರೆ ಏನಾಗಲಿದೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಮತ್ತು ದೆಹಲಿಯ ವಿವಿಧ ಶಾಲೆಗಳಲ್ಲಿನ ಪೋಷಕರ ಸಂಘಗಳು ಆತಂಕ ವ್ಯಕ್ತಪಡಿಸಿವೆ.

    ದೆಹಲಿಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಬಂದಿದೆ. ಆ ಪೈಕಿ ನಾಲ್ವರು ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಆದರಿಂದ ಸದ್ಯ ಶಾಲೆ ತೆರೆಯುವುದು ಒಳ್ಳೆಯದಲ್ಲ ಎನ್ನುವುದು ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಅಭಿಪ್ರಾಯಪಟ್ಟಿದೆ.

  • ಮುಂಜಾಗ್ರತಾ ಕ್ರಮ ಕೈಗೊಂಡು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡ್ಲೇಬೇಕು: ಸಿದ್ದರಾಮಯ್ಯ

    ಮುಂಜಾಗ್ರತಾ ಕ್ರಮ ಕೈಗೊಂಡು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡ್ಲೇಬೇಕು: ಸಿದ್ದರಾಮಯ್ಯ

    – ಪರೀಕ್ಷೆ ಬೇಡ ಎಂಬುದಕ್ಕೆ ನನ್ನ ವಿರೋಧ ಇದೆ
    – ಅಮಿತ್ ಶಾಗೆ ಒಂದು, ನಮ್ಗೊಂದು ನಿಯಮನಾ?

    ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಡ ಎಂಬುದಕ್ಕೆ ನನ್ನ ವಿರೋಧ ಇದೆ. ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಲೇ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10ನೇ ತರಗತಿ ಪರೀಕ್ಷೆ ನಡೆಸಲೇಬೇಕು. ಬೇಡ ಎನ್ನುವುದು ಸರಿಯಲ್ಲ. ಇದು ವಿದ್ಯಾರ್ಥಿಗಳ ಮಹತ್ವದ ಘಟ್ಟವಾಗಿರುತ್ತದೆ ಎಂದ ಅವರು, ಇದೇ ವೇಳೆ ದಾಖಲಾತಿ ಶುಲ್ಕ ಕಡಿಮೆ ಮಾಡಬೇಕೆಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಸರ್ಕಾರ ಎಲ್ಲವನ್ನೂ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿ. ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳು ಓದುತ್ತಿದ್ದಾರೆಂದು ಗಮನಿಸಿ ಎಂದು ಸಿದ್ದರಾಮಯ್ಯ ಹೇಳಿದರು.

    ಇದೇ ವೇಳೆ ಡಿಕೆಶಿ ಪದಗ್ರಹಣಕ್ಕೆ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪರಿಂದ ಈ ರೀತಿಯ ಕೀಳುಮಟ್ಟದ ರಾಜಕಾರಣ ನಿರೀಕ್ಷೆ ಮಾಡಿರಲಿಲ್ಲ. ದೆಹಲಿಯಲ್ಲಿ ಅಮಿತ್ ಶಾಗೆ ಒಂದು ರೂಲ್ಸ್. ನಮಗೆ ಒಂದು ನಿಯಮನಾ? ನಾವು ಸಾಮಾಜಿಕ ಅಂತರ ಕಾಯ್ದುಕೊಂಡೇ ಕಾರ್ಯಕ್ರಮ ನಡೆಸುತ್ತಿದ್ದೆವು ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು.

    ಮೊದಲ ಮೌಖಿಕವಾಗಿ ಕೇಳಿದಾಗ ಸರ್ಕಾರ ಒಪ್ಪಿತ್ತು. ಪತ್ರದ ಮೂಲಕ ಅನುಮತಿ ಕೇಳಿದಾಗ ಅನುಮತಿ ನಿರಾಕರಿಸಲಾಗಿದೆ. ಇದನ್ನು ನಾವು ರಾಜಕೀಯವಾಗಿಯೇ ಹೆದರಿಸುತ್ತೇವೆ. ಇನ್ನೊಮ್ಮೆ ಪತ್ರ ಕೊಡುವುದಾಗಲಿ, ಮನವಿ ಮಾಡುವುದಾಗಲಿ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸಂಘಟನೆ ಆಗುತ್ತದೆ ಎಂಬ ಆತಂಕದಲ್ಲಿ ಈ ರೀತಿ ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

    ನಂತರ ದೇವೇಗೌಡರು ರಾಜ್ಯಸಭೆಗೆ ಆಯ್ಕೆ ವಿಚಾರವಾಗಿ ಮಾತನಾಡಿ, ಅವರ ಆಯ್ಕೆ ಬಗ್ಗೆ ನನಗೇನು ಗೊತ್ತಿಲ್ಲ. ಕಾಂಗ್ರೆಸ್‍ನಿಂದ ಒಂದು ಅಭ್ಯರ್ಥಿ ಹಾಕಲು ನಿರ್ಧಾರ ಮಾಡಲಾಗಿತ್ತು. ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಫೈನಲ್ ಮಾಡಿದ್ದೇವು. ಈಗ ಅವರು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ್ದದ್ದು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮಹಾರಾಷ್ಟ್ರದಿಂದ ಬಂದವ್ರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮಹಾರಾಷ್ಟ್ರದಿಂದ ಬಂದವ್ರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

    ಬೆಂಗಳೂರು: ಮಹಾರಾಷ್ಟ್ರದಿಂದ ಬಂದವರಿಗೆ ಕೊನೆಗೂ ಹೋಂ ಕ್ವಾರಂಟೈನ್ ರದ್ದು ಮಾಡಲಾಗಿದೆ.

    ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸ್ಫೋಟವಾಗಿದ್ರೂ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಿ ಹೋಂ ಕ್ವಾರಂಟೈನ್ ಮಾಡುವ ನಿರ್ಧಾರವನ್ನು ಸಚಿವರು ಪ್ರಕಟಿಸಿದ್ದರು. ಸರ್ಕಾರದ ಈ ನಡೆ ವಿರೋಧಿಸಿ ಪಬ್ಲಿಕ್ ಟಿವಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು.

    ಕೊನೆಗೂ ಪಬ್ಲಿಕ್ ಆಗ್ರಹಕ್ಕೆ ಮಣಿದು ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಬದಲು 7 ದಿನ ಸಾಂಸ್ಥಿಕ ಕ್ವಾರಂಟೈನ್ ನಿರ್ಧಾರ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಇಲ್ಲ. ಬದಲಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

    ಐಸಿಎಂಆರ್ ಸೂಚಿತ ಲ್ಯಾಬ್‍ನಲ್ಲಿ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಇಲ್ಲ. 2 ದಿನಗಳ ಹಿಂದಿನ ಲ್ಯಾಬ್ ವರದಿ ಇದ್ದಲ್ಲಿ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಲಾಗುವುದು. ಬೇರೆ ರಾಜ್ಯದಿಂದ ಬಂದವರಿಗೆ ಮಾತ್ರ 14 ದಿನ ಹೋಂ ಕ್ವಾರಂಟೈನ್ ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದೆ.

  • ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

    ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾ ಸ್ಫೋಟ ಆಗುತ್ತಿದೆ. ಇನ್ನೂ ಅರ್ಧಲಕ್ಷ ಸ್ಯಾಂಪಲ್ ಟೆಸ್ಟ್‌ಗಳ ವರದಿ ಬರಬೇಕಿದೆ. ಮುಂಬೈನಿಂದ ಒಂದೂವರೆ ಲಕ್ಷ ಮಂದಿ ಕನ್ನಡಿಗರು ರಾಜ್ಯಕ್ಕೆ ಬರಲು ಸಜ್ಜಾಗಿದ್ದಾರೆ. ಕೊರೊನಾ ಸ್ಫೋಟದ ಸದ್ಯದ ತೀವ್ರತೆ ಗಮನಿಸಿದರೆ ಮುಂದಿನ 10 ದಿನದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಬಹುದು ಎಂದು ಅಂದಾಜಿಸಲಾಗಿದೆ.

    ಕೊರೊನಾ ಸೋಂಕಿತರಿಗೆ ಎಲ್ಲಿ ಹೇಗೆ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿದೆ. 7 ಸಾವಿರ ಬೆಡ್‍ಗಳನ್ನು ರೆಡಿ ಮಾಡಿದೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ದೇಶದಲ್ಲಿ ಎಲ್ಲೂ ಇರದ ದುಬಾರಿ ದರಗಳನ್ನು ಕೊರೊನಾ ಚಿಕಿತ್ಸೆಗೆ ನಿಗದಿ ಮಾಡಲು ಮುಂದಾಗಿದೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಸರ್ಕಾರವನ್ನು ಪ್ರಶ್ನೆ ಮಾಡಿದೆ.

    ಕೊರೊನಾ ತಾಂಡವ ಆಡುತ್ತಿರುವ ಮಹಾರಾಷ್ಟ್ರದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಇಷ್ಟೊಂದು ದರ ಇಲ್ಲ. ನಮ್ಮ ರಾಜ್ಯದಲ್ಲೇಕೆ ದುಪ್ಪಟ್ಟು ದರ ವಿಧಿಸಲು ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿದೆ ಎನ್ನುವ ಪ್ರಶ್ನೆಯನ್ನ ಪಬ್ಲಿಕ್ ಟಿವಿ ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರವನ್ನು ಸರ್ಕಾರ ಒಪ್ಪಲು ಆಗಲ್ಲ. ಯಾವುದೇ ಕಾರಣಕ್ಕೂ ಅವರು ಹೇಳಿದ ದರ ಫಿಕ್ಸ್ ಮಾಡಲ್ಲ. ಶೀಘ್ರವೇ ಸರ್ಕಾರವೇ ಕೊರೊನಾ ಚಿಕಿತ್ಸೆಗೆ ಒಂದು ದರ ನಿಗದಿ ಮಾಡಲಿದೆ. ಒಂದು ಸಣ್ಣ ಕಂಪ್ಲೆಂಟ್ ಬಂದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರ:
    > ಜನೆರಲ್ ವಾರ್ಡ್ – 10,000 ರೂ.
    > ಸ್ಪೆಷಲ್ ವಾರ್ಡ್ – 20,000 ರೂ.
    > ಐಸಿಯು ವಾರ್ಡ್ – 25,000 ರೂ.
    > ವೆಂಟಿಲೇಟರ್ – 35,000 ರೂ.

    ಆದರೆ ಕೊರೋನಾ ಪೀಡಿತ ಮಹಾರಾಷ್ಟ್ರದಲ್ಲಿ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದರ ಭಾರೀ ಕಡಿಮೆ ಇದೆ.

    ‘ಮಹಾ’ ಖಾಸಗಿ ಆಸ್ಪತ್ರೆಗಳ ದರ:
    > ಜನೆರಲ್ ವಾರ್ಡ್ – 4,000 ರೂ.
    > ಸ್ಪೆಷಲ್ ವಾರ್ಡ್ – 6,000 ರೂ.
    > ಐಸಿಯು ವಾರ್ಡ್ – 7,500 ರೂ.
    > ವೆಂಟಿಲೇಟರ್ – 9,000 ರೂ.

  • ಜೂನ್ 8 ಅಲ್ಲ 15ರಿಂದ ಸಿಗಂದೂರು ಚೌಡೇಶ್ವರಿ ತಾಯಿ ದರ್ಶನ

    ಜೂನ್ 8 ಅಲ್ಲ 15ರಿಂದ ಸಿಗಂದೂರು ಚೌಡೇಶ್ವರಿ ತಾಯಿ ದರ್ಶನ

    ಶಿವಮೊಗ್ಗ: ಸೋಮವಾರದಿಂದ ರಾಜ್ಯದ ಬಹುತೇಕ ದೇವಾಲಯಗಳು ಓಪನ್ ಆಗಲಿವೆ. ಈಗಾಗಲೇ ದೇವಸ್ಥಾನಗಳು ಕೂಡ ಸಲಕ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಸದ್ಯಕ್ಕೆ ಭಕ್ತರಿಗೆ ಸಿಗಂದೂರು ಚೌಡೇಶ್ವರಿ ತಾಯಿ ದರ್ಶನ ಸಿಗುವುದಿಲ್ಲ.

    ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಜೂನ್ 15 ನಂತರ ತೆರೆಯಲು ಹಾಗೂ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಚೌಡೇಶ್ವರಿ ತಾಯಿ ದೇವಾಲಯಕ್ಕೆ ಹೆಚ್ಚಾಗಿ ಕರಾವಳಿ ಹಾಗೂ ಬೆಂಗಳೂರು ಭಾಗದ ಜನರು ಬರುತ್ತಾರೆ. ಆದರೆ ಈಗ ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಕಾರಣ ದೇವಸ್ಥಾನ ತೆರೆಯಲು ಆಡಳಿತ ಮಂಡಳಿ ಹಿಂದೇಟು ಹಾಕಿದೆ ಎಂದು ತಿಳಿದು ಬಂದಿದೆ.

    ಮುಜರಾಯಿ ದೇವಾಲಯಗಳ ರೂಪುರೇಷೆ ನೋಡಿಕೊಂಡು ದೇವಾಲಯ ತೆರೆಯಲು ದೇವಸ್ಥಾನದ ಟ್ರಸ್ಟ್ ನಿರ್ಧಾರ ಮಾಡಿದೆ. ಸದ್ಯಕ್ಕೆ ಪ್ರತಿದಿನ ಚೌಡೇಶ್ವರಿ ತಾಯಿಗೆ ಅರ್ಚಕರಿಂದ ಪೂಜೆ, ಪ್ರಸಾದ ನಡೆಯುತ್ತಿದೆ.

    ಕೊರೊನಾ ಲಾಕ್‍ಡೌನ್ 5.0ನಲ್ಲಿ ಕೇಂದ್ರ ಸರ್ಕಾರವು ದೇವಾಲಯ ತೆರೆಯಲು ಅನುಮತಿ ನೀಡಿತ್ತು. ಹೀಗಾಗಿ ಜೂನ್ 8ರಿಂದ ದೇವಾಲಯ ತೆರೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಎಂಟು ಸೂತ್ರಗಳನ್ನು ಹೊರಡಿಸಿದೆ.

    ಎಂಟು ನಿಯಮಗಳು ಏನು?
    1. ನಿತ್ಯ ಸ್ವಚ್ಛತೆ ಜೊತೆಗೆ ಒಳಗೆ-ಹೊರಗೆ ಡಿಸ್ ಇನ್ಫೆಕ್ಟರ್ ಸಿಂಪಡಣೆ ಕಡ್ಡಾಯ.
    2. ಭದ್ರತಾ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ದೇವಾಲಯದ ಖರ್ಚಿನಲ್ಲೇ ನೇಮಿಸಿ.
    3. ದೇವಾಲಯದ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ, ಒಳಾಂಗಣದಲ್ಲಿ ಅರ್ಚಕರಿಗೆ ಮಾಸ್ಕ್ ವಿನಾಯಿತಿ.
    4. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ, ಸ್ಯಾನಿಟೈಸರ್ ಹಾಕಿದ ನಂತರವೇ ದೇವಸ್ಥಾನಕ್ಕೆ ಎಂಟ್ರಿ.
    5. ಥರ್ಮಲ್ ಸ್ಕ್ರೀನಿಂಗ್‍ನಲ್ಲಿ ಜ್ವರ ಪತ್ತೆಯಾದರೆ ದೇವಸ್ಥಾನಕ್ಕೆ ನೋ ಎಂಟ್ರಿ.
    6. ಮಾಸ್ಕ್ ಧರಿಸದ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶವಿಲ್ಲ.
    7. ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್, ಲೈನ್ ರೂಪಿಸುವುದು ಕಡ್ಡಾಯ.
    8. ದೇವಸ್ಥಾನದ ಶೌಚಾಲಯ ಆಗಾಗ ಸ್ವಚ್ಛಗೊಳಿಸಿ, ಅಗತ್ಯ ಡಿಸ್ ಇನ್ಫೆಂಕಟರ್ ಸಿಂಪಡಿಸಬೇಕು.