Tag: government

  • 3 ದಿನದಲ್ಲಿ ಸೌಲಭ್ಯ ನೀಡದಿದ್ರೆ ಬೆಂಗ್ಳೂರು ಚಲೋ- ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ

    3 ದಿನದಲ್ಲಿ ಸೌಲಭ್ಯ ನೀಡದಿದ್ರೆ ಬೆಂಗ್ಳೂರು ಚಲೋ- ಸರ್ಕಾರಕ್ಕೆ ಡಿಕೆಶಿ ಎಚ್ಚರಿಕೆ

    ನೆಲಮಂಗಲ: ಕೋವಿಡ್ 19 ಹೋರಾಟದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆ ಮತ್ತು ಇನ್ನಿತರ ಸೌಲಭ್ಯ ನೀಡಲು ಸರ್ಕಾರಕ್ಕೆ ಮೂರು ದಿನ ಗಡುವು ನೀಡಿದ್ದೇವೆ. ಒಂದು ವೇಳೆ ಸರ್ಕಾರ ಈ ಸೌಲಭ್ಯ ನೀಡಲು ಮುಂದಾಗದಿದ್ದರೆ ಬೆಂಗಳೂರು ಚಲೋಗೆ ಸಿದ್ಧ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ 19 ರೋಗಕ್ಕೆ ಕೇಂದ್ರ ಹಾಗೂ ರಾಜ್ಯದ ಹಣವನ್ನ ಒಟ್ಟಿಗೆ ನೀಡಿ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆ ಎಲ್ಲಾ ಆದಷ್ಟೂ ಬೇಗ ಮಾಡಿಸಿ. ಆಶಾ ಕಾರ್ಯಕರ್ತೆಯರಿಗೆ 3,000 ಸಹಾಯ ಧನ ನೀಡಿ. ಇಡೀ ರಾಜ್ಯದಲ್ಲಿ ಶೇ.10 ರಷ್ಟು ಜನರಿಗೆ ಮಾತ್ರ ಕೊಟ್ಟಿದ್ದು, ಯಡಿಯೂರಪ್ಪ ಸರ್ಕಾರ ನುಡಿದಂತೆ ನಡೆಯಲಿಲ್ಲ ಎಂದು ಗುಡುಗಿದ್ದಾರೆ.

    ಮಾರಣಾಂತಿಕ ಕೋವಿಡ್ ಸಂದರ್ಭದಲ್ಲಿಯೂ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ನೀವು ಅಗತ್ಯ ಸೌಲಭ್ಯ ಕೊಡಲಿಲ್ಲ ಅಂದ್ರೆ ನಾನೇ ಹೋರಾಟ ನಡೆಸುವೆ. ಎಲ್ಲಾ ಆಶಾ ಕಾರ್ಯಕರ್ತೆಯರ ಬೆಂಬಲ ಪಡೆದು ಬೆಂಗಳೂರು ಚಲೋ ಕಾರ್ಯಕ್ರಮವನ್ನ ರೂಪಿಸುವೆ. ರಾಜ್ಯದ ಎಲ್ಲಾ ಹೆಣ್ಣು ಮಕ್ಕಳು ಬಂದು ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಬಿಐಇಸಿಯ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್ ವಿಚಾರವಾಗಿ ಕಾಂಗ್ರೆಸ್ ಪಕ್ಷದವರಿಗೆ ಕ್ವಾಲಿಟಿ ಬಗ್ಗೆ ಗೊತ್ತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಅವರಷ್ಟು ಬುದ್ಧಿವಂತರಲ್ಲ, ಬದಲಾಗಿ ನಾವು ಪ್ರಜ್ಞಾವಂತರು, ಆ ಬೆಡ್‍ಗಳು ನಮ್ಮ ಮಕ್ಕಳಿಗೆ ಬೇಕಿಲ್ಲ. ಅವುಗಳನ್ನ ಮಂತ್ರಿಗಳು ಶಾಸಕರ ಮನೆಗೆ ಹಾಕಿಕೊಳ್ಳಲಿ, ಲಾಕ್‍ಡೌನ್ ಬಳಕೆ ಮಾಡಲು ಬರಲಿಲ್ಲ. ಇನ್ನೂ ಒಂದು ತಿಂಗಳು ಮಾಡಿದರೂ ನಿಮ್ಮ ಕೈಯಲ್ಲಿ ಎಲ್ಲವನ್ನ ಸರಿಪಡಿಸಿಕೊಳ್ಳಲು ಆಗಲ್ಲ. ನಿಮಗೆ ಅಧಿಕಾರದಲ್ಲಿರಲು ಯಾವುದೇ ಅರ್ಹತೆ ಇಲ್ಲ ಎಂದು ಕಿಡಿಕಾರಿದರು.

    ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರದ್ದು ಬಿಡಿ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಪ್ರಜ್ಞೆ ಇದೆಯಾ ಎಂದು ಪ್ರಶ್ನಿಸಿದ ಡಿಕೆಶಿ, ನಿಮಗೆ ನೀವೇ ಅರ್ಥಮಾಡಿಕೊಳ್ಳಿ ಎಂದು ಸರ್ಕಾರಕ್ಕೆ ಟಾಂಗ್ ನೀಡಿದರು. ನಂತರ ನೆಲಮಂಗಲದಲ್ಲಿ ಆಶಾ ಕಾರ್ಯಕರ್ತೆಯೊದಿಗೆ ಚರ್ಚೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದ್ದು, ಕೆಪಿಸಿಸಿ ಅಧ್ಯಕ್ಷರ ಮುಂದೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅಳಲು ತೊಡಿಕೊಂಡರು. ನೆಲಮಂಗಲ ನಗರದ ವೀವರ್ರ್ ಕಾಲೋನಿಯಲ್ಲಿ ಡಿಕೆಶಿ ಆಶಾ ಕಾರ್ಯಕರ್ತೆಯರನ್ನು ಸಂತೈಸಿದರು. ವೇತನ ಸೇರಿದಂತೆ ಕೋವಿಡ್ ವೇಳೆ ಸಾಕಷ್ಟು ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸರ್ಕಾರದಿಂದ ಸೂಕ್ತ ಸೌಲಭ್ಯ ಕೊಡಿಸುವಂತೆ ಡಿಕೆಶಿ ಬಳಿ ಮನವಿ ಮಾಡಿದರು.

  • ಹಬ್ಬಗಳ ಸೀಸನ್ ಬೆಂಗ್ಳೂರಿಗೆ ಟೆನ್ಶನ್- ಕೊರೊನಾ ಟೈಂನಲ್ಲಿ ಹೊಸ ಸವಾಲು

    ಹಬ್ಬಗಳ ಸೀಸನ್ ಬೆಂಗ್ಳೂರಿಗೆ ಟೆನ್ಶನ್- ಕೊರೊನಾ ಟೈಂನಲ್ಲಿ ಹೊಸ ಸವಾಲು

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಒಂದು ವಾರಗಳ ಕಾಲ ಘೋಷಣೆ ಮಾಡಿದ್ದ ಲಾಕ್‍ಡೌನ್ ಇಂದು ಮುಗಿಯಲಿದೆ. ಇದೀಗ ಸಿಲಿಕಾನ್ ಸಿಟಿಗೆ ಕೊರೊನಾ ಸಂದರ್ಭದಲ್ಲಿ ಹೊಸ ಸವಾಲು ಎದುರಾಗಲಿದೆ.

    ಶ್ರಾವಣ ಮಾಸ ಆರಂಭದ ಬೆನ್ನಲ್ಲೆ ಹಬ್ಬಗಳ ಸೀಸನ್ ಆರಂಭವಾಗಲಿದೆ. ಈ ಹಬ್ಬಗಳ ಸೀಸನ್ ಬೆಂಗಳೂರಿಗೆ ಟೆನ್ಶನ್ ಆಗಿದೆ. ಈ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸಾಲಾಗಿ ಹಬ್ಬಗಳು ಶುರುವಾಗುತ್ತವೆ. ಇದರಿಂದ ಜನರ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಒಂದು ವಾರದ ಲಾಕ್‍ಡೌನ್ ತೆರವಿನ ಬಳಿಕ ಹೊಸ ಚಾಲೆಂಜ್ ಎದುರಾಗಲಿದೆ.

    ಹಬ್ಬಗಳ ಸಮಯದಲ್ಲಿ ಬೆಂಗಳೂರಿನಿಂದ ಅನೇಕರು ತಮ್ಮ ತಮ್ಮ ಊರಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಳವಾಗುತ್ತೆ. ಹೀಗಾಗಿ ಬೆಂಗಳೂರಿನಿಂದ ವೈರಸ್ ಹಳ್ಳಿಗಳ ಭಾಗಕ್ಕೆ ಶಿಫ್ಟ್ ಆಗುವ ಸಾಧ್ಯತೆಯ ಬಗ್ಗೆ ಆತಂಕ ಶುರುವಾಗಿದೆ.

    ಏಕಾಏಕಿ ಲಾಕ್‍ಡೌನ್ ತೆರವು ಇನ್ನೊಂದಿಷ್ಟು ಅವಾಂತರಕ್ಕೆ ಕಾರಣವಾಗಲಿದೆ. ಹಾಗಾಗಿ ಹಬ್ಬಗಳ ಸಮಯದಲ್ಲಿ ಆದಷ್ಟು ಬಿಗಿ ಕ್ರಮ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು, ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ.

    ಈಗಾಗಲೇ ಅಂತರ್ ಜಿಲ್ಲೆ ಓಡಾಟದಿಂದ ದೊಡ್ಡ ಕಂಟಕ ಎದುರಾಗಿದೆ. ಹಾಗಾಗಿ ಮುಂದಿನ ಹೆಜ್ಜೆ ಇಡೋವಾಗ ಎಚ್ವರಿಕೆಯಿಂದ ಇಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನಿಂದ ನಿರ್ಗಮನ/ ಆಗಮನದ ಬಗ್ಗೆ ನಿಗಾ ವಹಿಸಲು ಸೂಚನೆ ನೀಡುವ ಸಾಧ್ಯತೆ ಇದೆ.

  • ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಹೈಕಮಾಂಡ್ ಗರಂ

    ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಹೈಕಮಾಂಡ್ ಗರಂ

    ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಹೈಕಮಾಂಡ್ ಗರಂ ಆಗಿದೆ ಎಂದು ತಿಳಿದು ಬಂದಿದೆ.

    ಎಂಟು ವಲಯಗಳ ಉಸ್ತುವಾರಿ ಸಚಿವರು 10 ದಿನಗಳ ವರ್ಕ್ ರಿಪೋರ್ಟ್ ಅನ್ನು ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದಾರೆ. 10 ದಿನಗಳ ವರ್ಕ್ ರಿಪೋರ್ಟಿನಲ್ಲಿ ವಲಯವಾರು ಕೊರೊನಾ ನಿಯಂತ್ರಣ, ನಿರ್ವಹಣೆಗೆ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಆದರೆ ಅಷ್ಟ ದಿಕ್ಪಾಲಕರ ವರ್ಕ್ ರಿಪೋರ್ಟ್​ಗೆ ಸಿಎಂ ಯಡಿಯೂರಪ್ಪ ಅತೃಪ್ತಿ ಆಗಿದ್ದಾರೆ. ಇದೀಗ ಅಷ್ಟ ಸಚಿವರ ಕಾರ್ಯ ನಿರ್ವಹಣೆ ಬಗ್ಗೆಯೂ ಬಿಜೆಪಿ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ.

    ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಬಿಜೆಪಿ ಹೈಕಮಾಂಡ್ ಅತೃಪ್ತಿಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ವಿಚಾರದಲ್ಲಿ ಹೆಚ್ಚು ಪಾಸಿಟಿವ್ ಬರುತ್ತಿದೆ. ಆದರೆ ಸರ್ಕಾರ ಮತ್ತು ಪಕ್ಷ ಏನು ಮಾಡುತ್ತಿದೆ. ಇಬ್ಬರ ನಡುವೆ ಸಮನ್ವಯತೆ ಇಲ್ಲವೇ ಇಲ್ಲ. ಬಿಜೆಪಿ ಅಧ್ಯಕ್ಷರು ಎಷ್ಟು ಜನ ಸಚಿವರನ್ನ ಕರೆದು ಸಭೆ ಮಾಡಿದ್ದೀರಿ? ಎಂದು ಹೈಕಮಾಂಡ್, ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದೆ.

    ಅಲ್ಲದೇ ವಿರೋಧ ಪಕ್ಷಗಳ ಆರೋಪಕ್ಕೆ ಪಕ್ಷ, ಸರ್ಕಾರ ಏನು ಉತ್ತರ ಕೊಟ್ಟಿದೆ? ಕರ್ನಾಟಕದಲ್ಲಿ ಆಗುವ ಪ್ರತಿ ಫೇಲ್ಯೂರ್‌ಗೆ ಪಕ್ಷ, ಸರ್ಕಾರ ಇಬ್ಬರು ಹೊಣೆ ಎಂದು ಹೈಕಮಾಂಡ್ ಗರಂ ಆಗಿದೆ ಎನ್ನಲಾಗಿದೆ. ಹೀಗಾಗಿ ಉಪಕರಣಗಳ ಖರೀದಿ ಬಗ್ಗೆ ಸಂಪೂರ್ಣ ಮಾಹಿತಿ ರವಾನಿಸುವಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

    ಹೈಕಮಾಂಡ್ ಗರಂ ಆಗಲು ಕಾರಣ?
    ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯಾವ ಸಚಿವರ ಜೊತೆಯೂ ಸಭೆ ನಡೆಸಿಲ್ಲ. ಅಲ್ಲದೇ ಸರ್ಕಾರದ ಜೊತೆ ಸಭೆ ನಡೆಸುವ ಪ್ರಯತ್ನವನ್ನು ಮಾಡಿಲ್ಲ ಎಂಬುದು ರಾಜ್ಯ ಸರ್ಕಾರದ ಮೇಲೆ ಹೈಕಮಾಂಡ್ ಗರಂ ಆಗಲು ಕಾರಣ ಎನ್ನಲಾಗಿದೆ.

    ಇದರ ಜೊತೆಯಲ್ಲಿ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಸರಿಯಾಗಿ ಉತ್ತರ ಕೊಡುತ್ತಿಲ್ಲ. ಅಲ್ಲದೇ ಬೆಂಗಳೂರಿನಿಂದ ಬೇರೆ ಬೇರೆ ಕಡೆಗೆ ಜನರು ವಲಸೆ ಹೋಗುತ್ತಿರುವುದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಮತ್ತೊಂದು ಉಪಕರಣಗಳ ಖರೀದಿಯಲ್ಲಿ ಹಗರಣ ಆಗಿದೆ ಎಂದು ಆರೋಪಿಗಳು ಕೇಳಿ ಬರುತ್ತಿತ್ತು. ಈ ಎರಡು ಪ್ರಕರಣಗಳು ಹೈಕಮಾಂಡ್ ಅಂಗಳಕ್ಕೆ ಹೋಗಿದೆ. ಆದರೆ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ಎಲ್ಲಾ ಕಾರಣಗಳಿಂದ ಹೈಕಮಾಂಡ್ ರಾಜ್ಯ ಸರ್ಕಾರದ ಮೇಲೆ ಹೈಕಮಾಂಡ್ ಗರಂ ಆಗಿದೆ ಎಂದು ಹೇಳಲಾಗುತ್ತಿದೆ.

    ಹೈಕಮಾಂಡ್ ಗರಂ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ನಳೀನ್ ಕುಮಾರ್ ಕಟೀಲ್ ಬಂದು ಭೇಟಿ ಮಾಡಿದ್ದು, ಸುಮಾರು ಒಂದು ಗಂಟೆಗಳ ಕಾಲ ಬಿಸಿಬಿಸಿ ಚರ್ಚೆ ಮಾಡಿದ್ದಾರೆ. ಜೊತೆಗೆ ಹೈಕಮಾಂಡ್ ಗರಂ ಬಗ್ಗೆ ಉಭಯ ನಾಯಕರು ಗಂಭೀರ ಮಾತುಕತೆ ನಡೆಸಿದ್ದಾರೆ.

  • ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ?- ಸಚಿವರಲ್ಲಿ ಗೊಂದಲವೋ, ಗೊಂದಲ

    ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ?- ಸಚಿವರಲ್ಲಿ ಗೊಂದಲವೋ, ಗೊಂದಲ

    – ಲಾಕ್‍ಡೌನ್ ಬಗ್ಗೆ ಸರ್ಕಾರದ ಪ್ಲ್ಯಾನ್ ಏನು?

    ಬೆಂಗಳೂರು: ಲಂಗು ಲಗಾಮಿಲ್ಲದೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೊರೊನಾ ಮಾರಿ ಬೆಂಗಳೂರಲ್ಲಿ ಕಂಟ್ರೋಲ್ ಸಿಗುತ್ತಿಲ್ಲ. ಒಂದು ವಾರ ಸಾವಿರ ರೇಂಜ್‍ನಲ್ಲಿದ್ದ ಸೋಂಕು ಈಗ 2 ಸಾವಿರ ರೇಂಜ್‍ಗೆ ಬಂದಿದೆ. ಕಳೆದ ಮೂರು ದಿನಗಳಿಂದ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗ್ತಿವೆ. ಇದನ್ನರಿತ ಸರ್ಕಾರ ಒಂದು ವಾರ ಬೆಂಗಳೂರಿಗೆ ಬೀಗ ಜಡಿದಿದೆ. ಅದರಲ್ಲಿ ಈಗ 3 ದಿನ ಕಳೆದು ಹೋಗಿದೆ. ಉಳಿದಿರೋದು ಇನ್ನೂ ನಾಲ್ಕು ದಿನ ಮಾತ್ರ. ಅಷ್ಟರಲ್ಲಿ ಕೊರೊನಾ ಕಂಟ್ರೋಲ್‍ಗೆ ಸಿಗುತ್ತಾ? ಚೈನ್ ಲಿಂಕ್ ಕಟ್ ಮಾಡೋಕೆ ಆಗುತ್ತಾ? ಲಾಕ್‍ಡೌನ್ ಮುಂದುವರಿಯುತ್ತಾ? ಈ ಪ್ರಶ್ನೆ ನಿಮಗಂತೂ ಕಾಡುತ್ತಿದೆದೆ. ಆದ್ರೆ ಇದಕ್ಕೆ ಸ್ವತಃ ಸರ್ಕಾರದಲ್ಲೂ ಗೊಂದಲ ಇದೆ.

    ಬೆಂಗಳೂರಲ್ಲಿ ಕೊರೊನಾ ಕಂಟ್ರೋಲ್‍ಗೆ ಬರ್ತಿಲ್ಲ. ಸಿಎಂ ಸದ್ಯ ಒಂದು ವಾರ ಲಾಕ್‍ಡೌನ್ ಮಾಡಿದ್ದಾರೆ. ಲಾಕ್‍ಡೌನ್ ವಿಸ್ತರಿಸುವ ಸಂದರ್ಭ ಬಂದರೂ ಬರಬಹುದು ಅನ್ನೋ ಮೂಲಕ ಸಚಿವ ನಾರಾಯಣಗೌಡ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಪರೋಕ್ಷವಾಗಿ ಲಾಕ್‍ಡೌನ್ ಇದೆ ಅನ್ನೋ ಸುಳಿವು ನೀಡಿದ್ದಾರೆ. ಆದರೆ ಸಚಿವ ಆರ್ ಅಶೋಕ್ ಇವರ ಮಾತನ್ನ ಅಲ್ಲಗೆಳೆದಿದ್ದಾರೆ.

    ಲಾಕ್‍ಡೌನ್ ಮೊದಲು ಕೂಡ ಆರ್. ಅಶೋಕ್ ಹೀಗೆ ಸ್ಪಷ್ಟವಾಗಿಯೇ ಹೇಳಿದ್ರು. ಆದ್ರೆ ಕೊನೆಗೆ ಒಂದು ವಾರ ಲಾಕ್‍ಡೌನ್ ಮಾಡಿದರು. ಈಗಲೂ ಕೂಡ ಸಚಿವ ಆರ್.ಅಶೋಕ್ ಅದನ್ನೇ ಹೇಳ್ತಿದ್ದಾರೆ. ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಕೆ ಇಲ್ಲ. ಸಿಎಂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಸೀಲ್‍ಡೌನ್ ಬಗ್ಗೆ ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆಯುತ್ತಾರೆ ಎಂದು ಆರ್.ಅಶೋಕ್ ತಿಳಿಸಿದರು. ಆರ್. ಅಶೋಕ್ ಬೆನ್ನಿಗೆ ಮತ್ತೊಬ್ಬ ಸಚಿವ ಎಸ್. ಟಿ ಸೋಮಶೇಖರ್ ಕೂಡ ಲಾಕ್‍ಡೌನ್ ಇಲ್ಲ ಎಂದಿದ್ದಾರೆ. ಸೋಂಕಿರುವ ಕಡೆ ಸೀಲ್‍ಡೌನ್ ಮಾಡಬಹುದು ಅಷ್ಟೇ ಅಂದಿದ್ದಾರೆ. ಲಾಕ್‍ಡೌನ್ ವಿಸ್ತರಣೆ ಸಂಬಂಧ ಬಿಎಸ್‍ವೈ ಸಂಪುಟದ ಸಚಿವರಲ್ಲೇ ಗೊಂದಲಗಳಿವೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಲು ಶುರು ಮಾಡಿದ್ದಾರೆ.

    ಸರ್ಕಾರದ ಲಾಕ್‍ಡೌನ್ ಪ್ಲ್ಯಾನ್ ಏನು?
    * ಲಾಕ್‍ಡೌನ್ ವಿಸ್ತರಣೆ ಮಾಡಿದ್ರೂ ಮಾಡಬಹುದು.
    * ಲಾಕ್‍ಡೌನ್ ಮಾಡದೇ ಬೆಂಗಳೂರು ಬಿಗಿಗೊಳಿಸಬಹುದು.
    * ಕಂಟೈನ್ಮೆಂಟ್ ಝೋನ್‍ಗಳಲ್ಲಿ ಮತ್ತಷ್ಟು ಸೀಲ್‍ಡೌನ್ ಮಾಡಬಹುದು.
    * ಸಂಡೇ ಲಾಕ್‍ಡೌನ್ ಬದಲು ಶನಿವಾರವೂ ಮಾಡಬಹುದು.
    * ಲಾಕ್‍ಡೌನ್ ಬದಲು ಸೋಂಕು ನಿಯಂತ್ರಿಸಬಹುದು.

    ಲಾಕ್‍ಡೌನ್ ಮಾಡಲು ಕಷ್ಟವ್ಯಾಕೆ?
    * ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡೋದು ಕಷ್ಟ.
    * ಮತ್ತೆ ಲಾಕ್‍ಡೌನ್ ಮಾಡಿದ್ರೆ ರಾಜ್ಯದ ಆರ್ಥಿಕತೆಗೆ ಪೆಟ್ಟು.
    * ಬೆಂಗಳೂರು ಆದಾಯವನ್ನೇ ನಂಬಿಕೊಂಡಿರುವ ಸರ್ಕಾರ.
    * ರಾಜ್ಯದ ಬೊಕ್ಕಸಕ್ಕೆ ಶೇ.60ರಷ್ಟು ಆದಾಯ ಬೆಂಗಳೂರು ಮೊಲವೇ.
    * ಒಂದು ವೇಳೆ ಲಾಕ್‍ಡೌನ್ ಮಾಡಿದ್ರೆ ರಾಜ್ಯದ ಆರ್ಥಿಕತೆಗೆ ಪೆಟ್ಟು.

  • ಆಗಸ್ಟ್ 10ರೊಳಗೆ ಸೋಂಕಿತರ ಸಂಖ್ಯೆ 20ಲಕ್ಷ ದಾಟಿದ್ರೂ ಅಚ್ಚರಿಯಿಲ್ಲ: ರಾಗಾ ಎಚ್ಚರಿಕೆ

    ಆಗಸ್ಟ್ 10ರೊಳಗೆ ಸೋಂಕಿತರ ಸಂಖ್ಯೆ 20ಲಕ್ಷ ದಾಟಿದ್ರೂ ಅಚ್ಚರಿಯಿಲ್ಲ: ರಾಗಾ ಎಚ್ಚರಿಕೆ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

    ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೂಡಲೇ ಸರ್ಕಾರ ಎಚ್ಚೆತ್ತು ಕೊರೊನಾ ಹರಡುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲವೆಂದಲ್ಲಿ ಇದು ಹೀಗೆಯೇ ಮುಂದುವರಿದರೆ ಆಗಸ್ಟ್ 10ರೊಳಗೆ ಸೋಂಕಿತರ ಸಂಖ್ಯೆ 20 ಲಕ್ಷ ದಾಟುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ರಾಗಾ, ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಒಂದು ವೇಳೆ ಕೋವಿಡ್ 19 ಪ್ರಕರಣಗಳ ಪತ್ತೆ ಹೀಗೆಯೇ ಮುಂದುವರಿದರೆ ಆಗಸ್ಟ್ 10ರಳಗೆ 20 ಲಕ್ಷ ದಾಟುತ್ತದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ಮತ್ತಷ್ಟು ಹರಡುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಗುರುವಾರವಷ್ಟೇ ಟ್ವೀಟ್ ಮಾಡಿದ್ದ ರಾಹುಲ್, ಇದೇ ವಾರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟುತ್ತದೆ ಎಂದು ಹೇಳಿದ್ದರು. ಅಂತೆಯೇ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದ್ದು, ಒಂದೇ ದಿನ 687 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ಇದೂವರೆಗೆ 25 ಸಾವಿರ ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಅಮೆರಿಕ ಹಾಗೂ ಬ್ರೆಜಿಲ್ ನಂತರ ಭಾರತ ಮೂರನೇ ಸ್ಥಾನದಲ್ಲಿದೆ.

  • ವೆಂಟಿಲೇಟರ್ ಹೆಸರಲ್ಲಿ ಭಾರೀ ಅವ್ಯವಹಾರ- ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

    ವೆಂಟಿಲೇಟರ್ ಹೆಸರಲ್ಲಿ ಭಾರೀ ಅವ್ಯವಹಾರ- ಸರ್ಕಾರದ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ

    ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದೆ ಎಂದು ಹಾಸನದ ಅರಕಲಗೂಡಿನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆರೋಪ ಮಾಡಿದ್ದಾರೆ.

    ಅರಕಲಗೂಡು ಪಟ್ಟಣ ಪಂಚಾಯತ್‍ನಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಿನಲ್ಲಿ ಭಾರೀ ಲೂಟಿ ಮಾಡುತ್ತಿದೆ. ಒಂದು ವೆಂಟಿಲೇಟರ್ ಖರೀದಿಗೆ 8.5 ಲಕ್ಷ ಚಾರ್ಜ್ ಮಾಡಿದೆ. ಆದರೆ ನಾನು ಕೇವಲ 2.5 ಲಕ್ಷವನ್ನು ನೀಡಿ ಸಂಸದರ ನಿಧಿಯಿಂದ ಸಕಲೇಶಪುರ ಆಸ್ಪತ್ರೆಗೆ ವೆಂಟಿಲೇಟರ್ ನೀಡಿದ್ದೇನೆ ಎಂದಿದ್ದಾರೆ.

    ರಾಜ್ಯ ಸರ್ಕಾರ ವೆಂಟಿಲೇಟರ್ ಹೆಸರಲ್ಲಿ 40 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದೆ. ಸಾರ್ವಜನಿಕರ ಹಣ ದುರುಪಯೋಗ ಆಗುತ್ತಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.

  • ಶಕ್ತಿ ವರ್ಧಕ ಕಿಟ್, ಸ್ಯಾನಿಟೈಸರ್ ಪ್ರತಿ ಮನೆಗೂ ಸರ್ಕಾರ ಒದಗಿಸಲಿ- ಎಚ್‍ಡಿಕೆ ಸಲಹೆ

    ಶಕ್ತಿ ವರ್ಧಕ ಕಿಟ್, ಸ್ಯಾನಿಟೈಸರ್ ಪ್ರತಿ ಮನೆಗೂ ಸರ್ಕಾರ ಒದಗಿಸಲಿ- ಎಚ್‍ಡಿಕೆ ಸಲಹೆ

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಹಲವು ಸಲಹೆ ಕೊಟ್ಟಿದ್ದಾರೆ.

    ಎಚ್.ಡಿ. ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಮೊದಲಿಗೆ “ಕೊರೊನಾ ವ್ಯಾಪಕ ಹೆಚ್ಚಳ ಹಿನ್ನೆಲೆಯಲ್ಲಿ ವಿಟಮಿನ್ ಸಿ ಔಷಧಿ ಹಾಗೂ ಆಯುಷ್ ಸಚಿವಾಲಯ ದೃಢೀಕರಿಸಿದ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ (Immunity Booster) ಮತ್ತು ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ಸರ್ಕಾರ ಒದಗಿಸಲಿ” ಎಂದು ಸಲಹೆ ನೀಡಿದ್ದಾರೆ.

    ಈ ಆರೋಗ್ಯ ಕಿಟ್‍ಗಳು ಪ್ರತಿ ಮೆಡಿಕಲ್ ಹಾಗೂ ಇತರ ಅಂಗಡಿಗಳಲ್ಲಿ ಮಾರಾಟಕ್ಕೂ ದೊರೆಯಲಿ. ಇದಲ್ಲದೆ ರೋಗ ಲಕ್ಷಣ ಕಂಡು ಬಂದವರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧಿಗಳನ್ನು ಪೂರೈಸಬೇಕು. ಆಗ ಮಾತ್ರ ಕರ್ನಾಟಕ ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಎಂದರು.

    “ಎಲ್ಲರಿಗೂ ಆರೋಗ್ಯ ಕಿಟ್ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ಕಿಟ್ ನೀಡಲು ಸರ್ಕಾರ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಸೂಚಿಸಿದರು.

    ಇದರ ಜೊತೆಗೆ ಕೇಂದ್ರ ಸರ್ಕಾರ ಈ ಸೋಂಕು ತಡೆಗೆ ಬಳಸಬಹುದಾದ ಯೋಗ್ಯ ಔಷಧಿಗಳ (upplement) ಪಟ್ಟಿ ಒದಗಿಸಬೇಕು. ಅದನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುವಂತೆ ಸಾಮೂಹಿಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ.

    “ಸರ್ಕಾರ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೊನಾ ವೈರಸ್ ತಡೆಯುವಲ್ಲಿ ಎಡವುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನಾದರೂ ಜವಾಬ್ದಾರಿಯಿಂದ, ದೂರದೃಷ್ಟಿಯಿಂದ ಸರ್ಕಾರ ಕಾರ್ಯ ಸಾಧುವಾದ ಯೋಜನೆಗಳನ್ನು ಜಾರಿಗೊಳಿಸಲು ತಕ್ಷಣ ಕಾರ್ಯೋನ್ಮುಖರಾಗುವಂತೆ ಆಗ್ರಹಿಸುತ್ತೇನೆ” ಎಂದು ಟ್ವಿಟ್ಟರಿನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್ ಜೊತೆಗೆ ಬೆಂಗಳೂರಿನಲ್ಲಿ ಸೀಲ್‍ಡೌನ್‍ಗೂ ಸಿದ್ಧರಾಗಿ- ಯಾವ್ಯಾವ ಏರಿಯಾ ಸೀಲ್?

    ಲಾಕ್‍ಡೌನ್ ಜೊತೆಗೆ ಬೆಂಗಳೂರಿನಲ್ಲಿ ಸೀಲ್‍ಡೌನ್‍ಗೂ ಸಿದ್ಧರಾಗಿ- ಯಾವ್ಯಾವ ಏರಿಯಾ ಸೀಲ್?

    ಬೆಂಗಳೂರು: ಸಿಲಿಕಾನ್ ಸಿಟಿ ಜನರು ಒಂದು ವಾರದ ಲಾಕ್‍ಡೌನ್ ಕಾಲಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್‍ಗೆ ಪಾಲಿಕೆ ಪ್ಲ್ಯಾನ್ ಸಿದ್ಧಗೊಳಿಸುತ್ತಿದೆ.

    ಹೌದು.ಕೊರೊನಾ ಹೆಚ್ಚಿರುವ ವಾರ್ಡ್‌ಗಳನ್ನು ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್ ಮಾಡಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಕಳೆದ 15 ದಿನಗಳಲ್ಲಿ ಕೊರೊನಾ ಸ್ಫೋಟಗೊಂಡ ವಾರ್ಡ್‌ಗಳಲ್ಲಿ ಟಫ್ ಸೀಲ್‍ಡೌನ್ ಜಾರಿಯಾಗುವ ಸಾಧ್ಯತೆಯಿದೆ. ಸೀಲ್‍ಡೌನ್ ಜಾರಿಯಾದರೆ ತುರ್ತು ಮತ್ತೊಂದು ಕಾರಣ ಹೇಳಿ ಓಡಾಡಲು ಸಾಧ್ಯವಿಲ್ಲ.

    ಭಾನುವಾರ ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತನ್ನು ರುದ್ರ ನರ್ತನವನ್ನು ಮುಂದುವರಿಸಿದ್ದು, ಒಂದೇ ದಿನ 2,627 ಕೊರೊನಾ ಪ್ರಕರಣಗಳು ಕರುನಾಡಿನಲ್ಲಿ ವರದಿಯಾಗಿವೆ. ಅದಲ್ಲರೂ ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾನುವಾರ 1,525 ಜನರಲ್ಲಿ ಸೋಂಕು ಸೇರಿಕೊಂಡಿದೆ. ಬೆಂಗಳೂರಿನಲ್ಲಿ 206 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ನಗರದಲ್ಲಿ 14,067 ಸಕ್ರಿಯ ಪ್ರಕರಣಗಳಿವೆ. ಭಾನುವಾರ ಒಂದೇ ದಿನ ಬೆಂಗಳೂರಿನಲ್ಲಿ 45 ಜನರನ್ನು ಕೊರೊನಾ ರಾಕ್ಷಸಿ ಬಲಿ ಪಡೆದಿದೆ. ಹೀಗಾಗಿ ಲಾಕ್‍ಡೌನ್ ಜೊತೆಗೆ ಸೀಲ್‍ಡೌನ್ ಮಾಡಲು ಬಿಬಿಎಂಪಿ ಪ್ಲ್ಯಾನ್ ಮಾಡಿದೆ.

    ಎಲ್ಲಿ ಸೀಲ್‍ಡೌನ್?
    ಶಾಂತಲಾನಗರ, ಸುಧಾಮನಗರ, ಚಾಮರಾಜಪೇಟೆ, ಜಯನಗರ, ಬಾಣಸವಾಡಿ, ವಸಂತನಗರ, ಗಣೇಶಮಂದಿರ ವಾರ್ಡ್, ಹೊಂಬೆಗೌಡ ನಗರ, ಮಾರುತಿ ಸೇವಾ ನಗರ, ಕೊಟ್ಟಿಗೆಪಾಳ್ಯ, ಅರಕೆರೆ, ಮತ್ತಿಕೆರೆ, ಸಂಪಂಗಿರಾಮನಗರ, ರಾಜಗೋಪಾಲ್ ನಗರ, ಯಲಚೇನಹಳ್ಳಿ, ಎಚ್‍ಎಟಿ ವಾರ್ಡ್, ವಿಶ್ವೇಶ್ವರಪುರಂ, ಡಾ.ರಾಜ್‍ಕುಮಾರ್ ವಾರ್ಡ್

    ಸೀಲ್‍ಡೌನ್ ಹೇಗಿರಲಿದೆ?
    * ಕಳೆದ 15 ದಿನಗಳಲ್ಲಿ ಸೋಂಕು ಹೆಚ್ಚಿದ ವಾರ್ಡ್‌ಗಳು ಸೀಲ್
    * ಪಾಸಿಟಿವ್ ಹೆಚ್ಚಿರುವ ಕಡೆಗಳಲ್ಲಿ ಶೀಟ್‍ಗಳನ್ನು ಹಾಕಲಾಗುತ್ತದೆ.
    * ಲಾಕ್‍ಡೌನ್‍ನಲ್ಲಿ ಕೊಂಚವಾದರೂ ರಿಲ್ಯಾಕ್ಸ್ ಇರುತ್ತದೆ
    * ಆದರೆ ಸೀಲ್‍ಡೌನ್‍ನಲ್ಲಿ ಕಠಿಣ ನಿಯಮ ಜಾರಿ
    * ಲಾಕ್‍ಡೌನ್‍ನಲ್ಲಿ ಕೊಂಚವಾದರೂ ರಿಲ್ಯಾಕ್ಸ್ ಇರುತ್ತೆ

    * ಆದರೆ ಟಫ್ ಸೀಲ್‍ಡೌನ್‍ನಲ್ಲಿ ನೋ ರಿಲ್ಯಾಕ್ಸ್
    * ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ
    * ಹಣ ಪಾವತಿಸಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
    * ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ
    * ನಿಯಂತ್ರಿತ ವಲಯದ ಒಂದು ಕಡೆ ಮಾತ್ರ ಗೇಟ್ ಬಳಸಲು ತೀರ್ಮಾನ
    * ಲಾಕ್‍ಡೌನ್ ಜಾಗದಲ್ಲಿ ಓಡಾಟಕ್ಕೆ ಅವಕಾಶ
    * ಸೀಲ್‍ಡೌನ್ ಜಾಗದಲ್ಲಿ ಯಾವುದೇ ನಿಯಮ ಉಲ್ಲಂಘನೆಗೆ ಅವಕಾಶ ಇಲ್ಲ

  • 1 ವಾರ ಲಾಕ್‍ಡೌನ್‍ಗೂ ಮುನ್ನ ಎರಡು ದಿನ ಲಾಕ್ ಫ್ರೀ – 2 ದಿನ ಫ್ರೀ ನೀಡಿದ್ದು ಯಾಕೆ?

    1 ವಾರ ಲಾಕ್‍ಡೌನ್‍ಗೂ ಮುನ್ನ ಎರಡು ದಿನ ಲಾಕ್ ಫ್ರೀ – 2 ದಿನ ಫ್ರೀ ನೀಡಿದ್ದು ಯಾಕೆ?

    ಬೆಂಗಳೂರು: ಲಾಕ್‍ಡೌನ್ ಮಾಡಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ರಾತ್ರಿ ಒಂದು ವಾರಗಳ ಕಾಲ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

    ಹೆಮ್ಮಾರಿಗೆ ಬ್ರೇಕ್ ಹಾಕಲು ಒಂದು ವಾರ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್ ಆಗಲಿದೆ. ಜುಲೈ 14 ಮಂಗಳವಾರ ರಾತ್ರಿ 8 ಗಂಟೆಯಿಂದ ಕಂಪ್ಲೀಟ್ ಲಾಕ್ ಆಗಲಿದ್ದು, ಜುಲೈ 22 ಬುಧವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಆದರೆ ಸರ್ಕಾರ ಈ ಮಧ್ಯೆ ಜನರಿಗೆ ಎರಡು ದಿನ ಲಾಕ್ ಫ್ರೀ ಕೊಟ್ಟಿದೆ. ಅಂದರೆ ಸೋಮವಾರ ಮತ್ತು ಮಂಗಳವಾರ ರಾತ್ರಿ 8 ರವರೆಗೂ ಲಾಕ್ ಫ್ರೀ ನೀಡಲಾಗಿದೆ.

    ಲಾಕ್‍ಡೌನ್ ಟೈಂಗೆ ಕಾರಣ?
    * ತುರ್ತು ಕಾರಣಗಳಿಗಾಗಿ ಬೆಂಗಳೂರಿಗೆ ಬಂದೋರು ವಾಪಸ್ ತಮ್ಮ ಊರಿಗೆ ತೆರಳಲಿ.
    * ಜನರು ಲಾಕ್‍ಡೌನ್ ಅಂತ ದಿಢೀರ್ ಆತಂಕವಾಗೋದು ಬೇಡ.
    * ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ದಿನಸಿ ವಸ್ತುಗಳು ಖರೀದಿ ಮಾಡಿಕೊಳ್ಳಲು ಸಮಯ.
    * ದಿಢೀರ್ ಲಾಕ್‍ಡೌನ್‍ನಿಂದ ಜನ ತಮ್ಮ ತಮ್ಮ ಊರಿಗೆ ಹೋಗೋಕೆ ಮುಂದಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಹೀಗಾಗಿ ಎರಡು ದಿನ ಅವಕಾಶ ಕೊಟ್ಟು ಟ್ರಾಫಿಕ್ ಜಾಮ್ ತಡೆಯಬಹುದು.
    * ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರೋರು ಅಗತ್ಯ ಚಿಕಿತ್ಸಾ ಸಾಮಾಗ್ರಿ ಖರೀದಿ ಮಾಡಿಕೊಳ್ಳಲಿ ಅಂತ.
    * ಬಿಪಿ, ಶುಗರ್ ಇನ್ನಿತರ ಕಾಯಿಲೆ ಇರೋರು ಅಗತ್ಯ ಔಷಧಿಗಳನ್ನ ಖರೀದಿ ಮಾಡಕೊಳ್ಳಲಿ ಅಂತ.

    ಈ ಎಲ್ಲಾ ಕಾರಣಗಳಿಂದ ಸರ್ಕಾರ ಜನರಿಗೆ ಎರಡು ದಿನ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಎರಡೂ ದಿನಗಳಲ್ಲಿ ದೊಡ್ಡ ಮಟ್ಟದ ವಲಸೆ ಸಾಧ್ಯತೆ ಇದೆ.

    ಈಗಾಗಲೇ ಬೆಂಗಳೂರಿಂದ ಹಲವು ಜನ ಬೇರೆ ಜಿಲ್ಲೆಗಳಿಗೆ ಕಾರ್ಯನಿಮಿತ್ತ ಹೋಗಿದ್ದಾರೆ. ಅವರೆಲ್ಲಾ ಮರಳಿ ಬೆಂಗಳೂರಿಗೆ ಬರಲಿದ್ದಾರೆ. ಇತ್ತ ನಗರದಲ್ಲಿ ಇರುವವರು ತಮ್ಮ ತಮ್ಮ ಊರುಗಳಿಗೆ ದೊಡ್ಡ ಪ್ರಮಾಣದಲ್ಲಿ ಸೋಮವಾರ, ಮಂಗಳವಾರ ಹೋಗಲಿದ್ದಾರೆ. ಹೀಗಾಗಿ ಈ ಎರಡೂ ದಿನವೂ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಎರಡು ದಿನ ಸಮಯ ಕೊಟ್ಟು ಸರ್ಕಾರ ಎಡವಟ್ಟು ಮಾಡಿತಾ ಎಂಬ ಪ್ರಶ್ನೆಯೂ ಮೂಡಿದೆ.

  • ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    – ಅವ್ಯವಸ್ಥೆಯ ಆಗರವಾಗಿದೆ ವಿಕ್ಟೋರಿಯಾ ಆಸ್ಪತ್ರೆ
    – ಮಾತ್ರೆಗಳನ್ನು ಕೊಡಿ ಎಂದು ನರ್ಸ್‍ಗೆ ಅವಾಜ್ ಆಕ್ತಿದ್ದಾರೆ ಸೋಂಕಿತರು

    ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ರಾಜ್ಯದ ಆಸ್ಪತ್ರೆಗಳ ಸ್ಥಿತಿಗತಿಯೇ ಹೇಳುತ್ತವೆ. ವೈದ್ಯರು, ನರ್ಸ್, ಬೆಡ್ ಕೊರತೆ ಮಧ್ಯೆ ಈಗ ಮೆಡಿಸನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಸೋಂಕಿತರು ತೀವ್ರ ಆತಂಕಕ್ಕೀಡಾಗಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರೆಗಳ ಕೊರತೆ ಉಂಟಾಗಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಎರಡು ದಿನದಿಂದ ಹೌಸ್ ಕೀಪಿಂಗ್‍ನವರು ಕೆಲಸಕ್ಕೆ ಬಾರದ್ದಕ್ಕೆ ಆಸ್ಪತ್ರೆ ಗಬ್ಬು ನಾರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು, ನರ್ಸ್‍ಗಳ ಕೊರತೆ ಮಧ್ಯೆ ಹೇಗೋ ಮಾತ್ರೆಗಳನ್ನು ನುಂಗಿ ಗುಣಮುಖರಾಗುತ್ತಿದ್ದ ಕೊರೊನಾ ಸೋಂಕಿತರಿಗೆ ಇದೀಗ ಮಾತ್ರೆಗಳ ಸಮಸ್ಯೆಯೂ ಎದುರಾಗಿದ್ದು, ಗುಣಮುಖರಾಗುವುದು ಹೇಗೆ ಎಂಬ ಭಯ ಎದುರಾಗಿದೆ.

    ಕೊರೊನಾಗೆ ವ್ಯಾಕ್ಸಿನ್ ಇಲ್ಲದಿದ್ದರೂ, ಗುಣ ಲಕ್ಷಣಗಳನ್ನು ಆಧರಿಸಿ ಮೆಡಿಸಿನ್ ನೀಡಲಾಗುತ್ತಿತ್ತು. ಆದರೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಸನ್ ಕೊರತೆ ಎದುರಾಗಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ನರ್ಸ್‍ಗಳು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಮೆಡಿಸಿನ್ ತುಂಬಾ ಕಡಿಮೆ ಇದೆ. ದಯವಿಟ್ಟು ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ. ಆದರೂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಈ ಮಧ್ಯೆಯೇ ಎರಡು ಮೂರು ದಿನದಿಂದ ಆಸ್ಪತ್ರೆ ಸ್ವಚ್ಛಗೊಳಿಸಲು ಹೌಸ್ ಕೀಪಿಂಗ್ ನವರನ್ನೂ ಕಳುಹಿಸಿಲ್ಲ. ಇದರಿಂದಾಗಿ ವಾರ್ಡ್‍ಗಳು ಗಬ್ಬು ವಾಸನೆ ಹೊಡೆಯುತ್ತಿವೆ. ಮಾತ್ರೆಗಳು ಇಲ್ಲದ್ದಕ್ಕೆ ರೋಗಿಗಳು ಸುತ್ತುವರೆದು ನಮಗೆ ಬೆದರಿಕೆ ಹಾಕುತ್ತಿದ್ದಾರೆ, ನಾವೇನು ಮಾಡುವುದು. ನಮ್ಮ ಬಳಿ ಉತ್ತರವಿಲ್ಲ ದಯವಿಟ್ಟು ಮೆಡಿಸಿನ್ ಕಳುಹಿಸಿ ಎಂದು ನರ್ಸ್‍ಗಳು ಗೋಳಿಡುತ್ತಿದ್ದಾರೆ.

    ಆಸ್ಪತ್ರೆಗಳಲ್ಲಿ ಇಷ್ಟೆಲ್ಲ ಅವ್ಯವಸ್ಥೆ ತಾಂಡವಾಡುತ್ತಿದ್ದರೂ ಸರ್ಕಾರ ಮಾತ್ರ ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳ್ಳುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆಯೂ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದ್ದು, ಈ ಕುರಿತು ಸಹ ಕ್ರಮ ಕೈಗೊಂಡಿಲ್ಲ.