Tag: government

  • ಶಾಸಕರನ್ನ ಖರೀದಿಸಿ ಸರ್ಕಾರ ನಡೆಸಲಾಗುತ್ತೆ, ಸಿಬ್ಬಂದಿ ವೇತನ ನೀಡಲು ಆಗಲ್ವಾ – ಬಿಸಿಯೂಟ ನೌಕರರ ಪ್ರತಿಭಟನೆ

    ಶಾಸಕರನ್ನ ಖರೀದಿಸಿ ಸರ್ಕಾರ ನಡೆಸಲಾಗುತ್ತೆ, ಸಿಬ್ಬಂದಿ ವೇತನ ನೀಡಲು ಆಗಲ್ವಾ – ಬಿಸಿಯೂಟ ನೌಕರರ ಪ್ರತಿಭಟನೆ

    ಶಿವಮೊಗ್ಗ: ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿ ಜಿಲ್ಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

    ನಗರದ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಸಿಬ್ಬಂದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಬಂದ ದಿನದಿಂದ ಬಿಸಿಯೂಟ ಸಿಬ್ಬಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಸಿಯೂಟ ಸಿಬ್ಬಂದಿಗೆ ವೇತನ ನೀಡುವಂತೆ ಹಲವು ದಿನದಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅಲ್ಲದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಆದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.

    ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದಾದರೆ ಸರ್ಕಾರ ಏಕೆ ನಡೆಸುತ್ತೀರಾ? ಶಾಸಕರುಗಳನ್ನು ಖರೀದಿ ಮಾಡಲು ಹಣವಿದೆ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಬಳಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.

    ಇನ್ನಾದರೂ ಬಿಸಿಯೂಟ ಸಿಬ್ಬಂದಿಗೆ ವೇತನ ನೀಡಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಬಿಸಿಯೂಟದ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

  • ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ – ಷರತ್ತುಗಳು ಅನ್ವಯ

    ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ – ಷರತ್ತುಗಳು ಅನ್ವಯ

    ಬೆಂಗಳೂರು: ಕರ್ನಾಟಕ ಸರ್ಕಾರ ಗಣೇಶೋತ್ಸವ ಆಚರಿಸುವ ಸಂಬಂಧ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಆಗಸ್ಟ್ 14 ರಂದು ಬಿಡುಗಡೆ ಮಾಡಿದ್ದ ಮಾರ್ಗಸೂಚಿಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿರಲಿಲ್ಲ. ಆದರೆ ಈಗ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿಯನ್ನು ನೀಡಲಾಗಿದೆ.

    ಬದಲಾದ ಮಾರ್ಗಸೂಚಿಯಲ್ಲಿ ಏನಿದೆ?
    1. ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ಖಾಸಗಿ/ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು.
    2. ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸುವುದು.
    3. ಪಾರಂಪರಿಕ ಗಣೇಶೋತ್ಸವಕ್ಕಾಗಿ, ಗಣೇಶೋತ್ಸವ ಸಮಿತಿಗಳು/ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೋರೇಷನ್/ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯಯನ್ನು ಪಡೆಯತಕ್ಕದ್ದು. ಒಂದು ವಾರ್ಡಿಗೆ/ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಪ್ರೋತ್ಸಾಹಿಸುವುದು.
    4. ಇಂತಹ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು. ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು.

    5. ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ಸಾಂಸ್ಕೃತಿಕ/ಸಂಗೀತ/ನೃತ್ಯ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ.
    6. ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆ ಹೊರಡಿಸತಕ್ಕದ್ದಲ್ಲ/ ಮಾಡತಕ್ಕದಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.
    7. ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು. ಸರ್ಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ/ಜಿಲ್ಲಾಡಳಿತ/ಹತ್ತಿರದ ಸ್ಥಳೀಯ ಸಂಸ್ಥೆಗಳ/ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕರ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವುದು.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, “ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ” ಎಂದು ವಿನಯಪೂರ್ವಕವಾಗಿ ವಿನಂತಿ ಮಾಡಿದ್ದಾರೆ.

  • ಸಾವು ಯಾವಾಗ ಬರುತ್ತೋ ಗೊತ್ತಿಲ್ಲ, ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ: ಹೆಚ್‍ಡಿಡಿ

    ಸಾವು ಯಾವಾಗ ಬರುತ್ತೋ ಗೊತ್ತಿಲ್ಲ, ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ: ಹೆಚ್‍ಡಿಡಿ

    ಹಾಸನ: ಸಾವು ಯಾವಾಗ ಬರುತ್ತೋ ಯಾವಾಗ ಹೋಗುತ್ತೋ ಗೊತ್ತಿಲ್ಲ. ಆದರೆ ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ.ದೇವೇಗೌಡರು ಹೇಳಿದ್ದಾರೆ.

    ಇಂದು ಹಾಸನದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಭೂಸುಧಾರಣಾ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಅಭಿವೃದ್ಧಿ ಕಾಯ್ದೆ ಸೇರಿದಂತೆ ರೈತರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿ ಹಿಂತೆಗೆದುಕೊಳ್ಳಲು ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತ್ತು.

    ಪ್ರತಿಭಟನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು, ಸಂಸದರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, ಈ ಪಕ್ಷ ಹುಟ್ಟಿರೋದೆ ರೈತರಿಗೋಸ್ಕರ. ಈ ವಯಸ್ಸಲ್ಲಿ ಕೊರೊನಾದಿಂದ ದೇವೇಗೌಡರಿಗೆ ಏನು ತೊಂದರೆಯಾಗುತ್ತೊ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಯಾವುದಕ್ಕೂ ಧೃತಿಗೆಡಲ್ಲ. ಸಾವು ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ಯಾರಿಗೂ ಗೊತ್ತಿಲ್ಲ ಎಂದರು.

    ಲೂಟಿಕೋರರಿಗೆ ಅನುಕೂಲವಾಗುತ್ತೆ ಎಂದು ರೈತ ವಿರೋಧಿ ಕಾಯ್ದೆ ತರಲು ಮುಂದಾಗಿದ್ದಾರೆ. ಇದು ನನಗೆ ಗೊತ್ತಿದೆ. ಇದು ವ್ಯಕ್ತಿ ದ್ವೇಷದ ಹೋರಾಟವಲ್ಲ. ನಮ್ಮ ರೈತರನ್ನು ಉಳಿಸುವುದಕ್ಕೆ ಹೋರಾಟ ಮಾಡುತ್ತಿದ್ದೇವೆ. ಇಂದು ನಮ್ಮ ರಾಜಕಾರಣಿಗಳಿಗೆ ಹಣ ಮಾಡುವ ಸ್ವಾರ್ಥ ಹೆಚ್ಚಿದೆ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

  • ಬೆಂಗ್ಳೂರು ವಿಶ್ವದಲ್ಲೇ ದಿ ಡೈನಾಮಿಕ್ ಸಿಟಿ, ಶಾಂತಿ ಕದಡಿದ್ರೆ ಸರ್ಕಾರ ಸುಮ್ಮನಿರಲ್ಲ: ಸುಧಾಕರ್

    ಬೆಂಗ್ಳೂರು ವಿಶ್ವದಲ್ಲೇ ದಿ ಡೈನಾಮಿಕ್ ಸಿಟಿ, ಶಾಂತಿ ಕದಡಿದ್ರೆ ಸರ್ಕಾರ ಸುಮ್ಮನಿರಲ್ಲ: ಸುಧಾಕರ್

    ಚಿಕ್ಕಬಳ್ಳಾಪುರ: ಬೆಂಗಳೂರು ಮಹಾನಗರ ಇಡೀ ವಿಶ್ವದಲ್ಲೇ ದಿ ಡೈನಾಮಿಕ್ ಸಿಟಿ. ಅನೇಕ ದೇಶಗಳ ಹಲವರು ಇಲ್ಲಿ ವಾಸ ಮಾಡುತ್ತಿದ್ದಾರೆ. 30 ಲಕ್ಷ ಮಂದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಂಗಳೂರು ಮಹಾನಗರದಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ರಾಜ್ಯ ಸರ್ಕಾರ ಸುಮ್ಮನಿರಲ್ಲ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಕಳೆದ ರಾತ್ರಿಯಿಂದ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಯನ್ನ ಗಮನಿಸಿದ್ದೀನಿ. ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ಪಿತೂರಿ ಅನ್ನೋದು ನನಗೆ ಭಾಸವಾಗುತ್ತದೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಕಾನೂನನ್ನ ಯಾರೂ ಕೂಡ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೂ ಕೂಡ ಕೆಲವರು ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಸೂಕ್ತ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. ಇಂತಹ ಘಟನೆಗಳನ್ನ ಬಹುಶಃ ಬೆಂಗಳೂರಲ್ಲಿ ನಾವು ನೋಡಿರಲಿಲ್ಲ. ರಾತ್ರಿ 2-3 ಸಾವಿರ ಮಂದಿ ಆಟೋ, ಲಾರಿಗಳಲ್ಲಿ ಕಲ್ಲುಗಳನ್ನ ತುಂಬಿಕೊಂಡು ಬಂದು ಗಲಭೆ ಮಾಡುತ್ತಿದ್ದರು. ಕಾಶ್ಮೀರದಂತಹ ನಗರಗಳಲ್ಲಿ ಇಂತಹ ಘಟನೆಗಳನ್ನ ಕಂಡಿದ್ದೀವಿ. ಆದರೆ ಬೆಂಗಳೂರಲ್ಲಿ ನೋಡೇ ಇರಲಿಲ್ಲ. ಹೀಗಾಗಿ ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.

    ಇದೇ ವೇಳೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸುಧಾಕರ್, ಕಾಂಗ್ರೆಸ್ ನಾಯಕರು ಹೇಳಿಕೆಗೋಸ್ಕರ ಹೇಳಿಕೆ ನೀಡಬಾರದು. ತನಿಖೆ ನಂತರ ಪಿತೂರಿ ಯಾವ ಸಂಘಟನೆ ಕೈವಾಡ ಅಂತ ಬಯಲಾಗಲಿದೆ ಎಂದರು. ಬಿಜೆಪಿಗೆ ಕೀಳುಮಟ್ಟದ ರಾಜಕಾರಣ ಮಾಡುವ ಪಕ್ಷವಲ್ಲ. ಸರ್ಕಾರಕ್ಕೆ ಕೊರೊನಾ ನಿಗ್ರಹ, ಪ್ರವಾಹ ಪರಿಸ್ಥಿತಿಯ ಸವಾಲುಗಳಿದ್ದು, ಅದರ ನಡುವೆ ದುಷ್ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕಿದೆ ಎಂದು ಸುಧಾಕರ್ ಹೇಳಿದರು.

  • ಹೋಟೆಲ್‍ನಲ್ಲಿ ಅಗ್ನಿ ಅವಘಡ- ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಘೋಷಣೆ

    ಹೋಟೆಲ್‍ನಲ್ಲಿ ಅಗ್ನಿ ಅವಘಡ- ಮೃತರ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ ಘೋಷಣೆ

    ಹೈದರಾಬಾದ್: ಕೋವಿಡ್ 19 ರೋಗಿಗಳಿದ್ದ ಹೋಟೆಲ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಆಂಧ್ರ ಸರ್ಕಾರ ತಲಾ 50 ಲಕ್ಷ ಪರಿಹಾರ ಘೋಷಣೆ ಮಾಡಿದೆ.

    ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಕೋವಿಡ್ 19 ಸೌಲಭ್ಯವಿದ್ದ ಹೋಟೆಲ್ ನಲ್ಲಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಸಜೀವ ದಹನವಾಗಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

    ಈ ಸಂಬಂಧ ಮಾತನಾಡಿದ್ದ, ಕೃಷ್ಣ ಡಿಸಿ ಮೊಹಮ್ಮದ್ ಇಮ್ತಿಯಾಜ್, ಈ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 22 ಮಂದಿ ಕೊರೊನಾ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕಟ್ಟಡದಲ್ಲಿದ್ದ ಎಲ್ಲರನ್ನೂ ಸ್ಥಳಾಂತರಿಸಿದ್ದೇವೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಘಟನೆಗೆ ನಿಖರ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಹೋಟೇಲ್ ನಲ್ಲಿದ್ದ ಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಪ್ರಧಾನಿಯವರು ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

  • ಮಳೆ, ನೆರೆಯಿಂದ ಮನೆಗಳಿಗೆ ಹಾನಿ- 5 ಲಕ್ಷದವರೆಗೆ ಸರ್ಕಾರ ಪರಿಹಾರ ಘೋಷಣೆ

    ಮಳೆ, ನೆರೆಯಿಂದ ಮನೆಗಳಿಗೆ ಹಾನಿ- 5 ಲಕ್ಷದವರೆಗೆ ಸರ್ಕಾರ ಪರಿಹಾರ ಘೋಷಣೆ

    ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿಯ ನಡುವೆ ವರುಣ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿ ಸಾಕಷ್ಟು ಹಾನಿಯುಂಟಾಗಿದೆ. ಈ ಹಿನ್ನೆಲೆ ಸರ್ಕಾರ ಕೆಲವೊಂದಷ್ಟು ಪರಿಹಾರಗಳನ್ನು ಘೋಷಿಸಿದೆ.

    ಮಳೆ, ನೆರೆ ಹಾನಿಯಿಂದ ಮನೆಗಳಿಗೆ ಹಾನಿಯುಂಟಾಗಿದ್ದು, ಮನೆ ಪುನರ್ ನಿರ್ಮಾಣ ಹಾಗೂ ದುರಸ್ತಿ ಕಾರ್ಯಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ 10 ಸಾವಿರ ರೂ., ಶೇ.75 ಕ್ಕಿಂತ ಹೆಚ್ಚು ಸಂಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ.

    ಹಾಗೆಯೇ ಶೇ.25 ರಿಂದ 75 ರಷ್ಟು ಹಾನಿಯಾದ ಮನೆಗಳನ್ನು ಹೊಸದಾಗಿ ಕೆಡವಿ ಕಟ್ಟಲು 5 ಲಕ್ಷ ರೂ, ಶೇ.25 ರಿಂದ 75ರಷ್ಟು ಹಾನಿಯಾದ ಮನೆಗಳ ದುರಸ್ತಿಗೆ 3 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಶೇ.15 ರಿಂದ ಶೇ.25 ರಷ್ಟು ಅಲ್ಪ ಹಾನಿಯಾದ ಮನೆಗಳ ದುರಸ್ತಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ.

    ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಅಭಿವೃದ್ಧಿಪಡಿಸಲಾದ ತಂತ್ರಾಂಶದ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಮನೆ ಹಾನಿಯಾದ ಮಾಹಿತಿಯನ್ನು ವಸತಿ ಇಲಾಖೆಯ ವತಿಯಿಂದ ಹೊರಡಿಸಲಾಗುವ ಮಾರ್ಗಸೂಚಿಯನ್ವಯ ತಂತ್ರಾಂಶದಲ್ಲಿ ದಾಖಲಿಸುವುದಾಗಿ ತಿಳಿಸಲಾಗಿದೆ.

  • ಸರ್ಕಾರಕ್ಕೊಂದು ಅಗ್ನಿಪರೀಕ್ಷೆ, ಎಚ್ಚರ ತಪ್ಪಿದ್ರೆ ಜನರ ಬದುಕು ಮೂರಾಬಟ್ಟೆ: ಕುಮಾರಸ್ವಾಮಿ

    ಸರ್ಕಾರಕ್ಕೊಂದು ಅಗ್ನಿಪರೀಕ್ಷೆ, ಎಚ್ಚರ ತಪ್ಪಿದ್ರೆ ಜನರ ಬದುಕು ಮೂರಾಬಟ್ಟೆ: ಕುಮಾರಸ್ವಾಮಿ

    ಬೆಂಗಳೂರು: ಒಂದು ಕಡೆ ಕೊರೊನಾ ಸೋಂಕಿನ ಭೀತಿ, ಈಗ ನೆರೆಪೀಡಿತ ಪರಿಸ್ಥಿತಿ ಸರ್ಕಾರಕ್ಕೊಂದು ಅಗ್ನಿಪರೀಕ್ಷೆ. ಎಚ್ಚರ ತಪ್ಪಿದರೆ ಜನರ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಎಚ್.ಡಿ.ಕುಮಾರಸ್ವಾಮಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೊದಲಿಗೆ “ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನತೆ ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಸ್ಪಂದಿಸುವ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನ ಮಾಡುವಂತೆ” ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಈ ಬಾರಿಯೂ ರಾಜ್ಯ ಅತಿವೃಷ್ಟಿಯ ಸಂಕಷ್ಟಕ್ಕೆ ಸಿಲುಕಿದ್ದು, ವಿಶೇಷವಾಗಿ ರೈತರು ಕಂಗಾಲಾಗಿದ್ದಾರೆ. ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂಗಾರಿನ ಅಬ್ಬರ ಭೀತಿಯ ವಾತಾವರಣ ಸೃಷ್ಟಿಸಿದೆ. ಜಿಲ್ಲಾವಾರು ವಿಶೇಷ ಕಾರ್ಯಪಡೆ ರಚಿಸುವ ಮೂಲಕ ನೆರೆ ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಅತಿವೃಷ್ಟಿ ಸಂತ್ರಸ್ತರಿಗೆ ಕೂಡಲೇ ಆಸರೆ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಮನೆ-ಮಠ ಕಳೆದುಕೊಂಡವರಿಗೆ, ಜೀವ ಹಾನಿಗೊಳಗಾದವರಿಗೆ ತಡಮಾಡದೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದಿದ್ದಾರೆ.

    “ಸತತ ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ವಿಶೇಷ ಆರ್ಥಿಕ ನೆರವು ನೀಡಬೇಕು. ರಾಜ್ಯ ಸರ್ಕಾರ ಕೂಡ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಬೇಕು” ಎಂದು ಎಚ್‍ಡಿಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಅತಿವೃಷ್ಟಿ ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆಯಾಗದಂತೆ ಸಕಾಲಿಕ ಎಚ್ಚರಿಕೆಯನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಒಂದು ಕಡೆ ಕೊರೊನಾ ಸೋಂಕಿನ ಭೀತಿ, ಈಗ ನೆರೆಪೀಡಿತ ಪರಿಸ್ಥಿತಿ ಸರ್ಕಾರಕ್ಕೊಂದು ಅಗ್ನಿಪರೀಕ್ಷೆ. ಎಚ್ಚರ ತಪ್ಪಿದರೆ ಜನರ ಬದುಕು ಮೂರಾಬಟ್ಟೆಯಾಗುತ್ತದೆ ಎಂದಿದ್ದಾರೆ.

    ಸಚಿವರು ಮತ್ತು ಅಧಿಕಾರಿಗಳು ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ, ಅಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿಯ ಉಸ್ತುವಾರಿ ನೋಡಿಕೊಳ್ಳುವ ಮೂಲಕ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಕುಮಾರಸ್ವಾಮಿ ಟ್ವೀಟರ್ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

  • ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

    ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದ್ದ ಕಾಫಿನಾಡ ಏಕೈಕ ಕಾರ್ಖಾನೆ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್‍ಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದ್ದು, ಕಾರ್ಖಾನೆಯನ್ನು ನೆಚ್ಚಿಕೊಂಡು ನಾಲ್ಕೈದು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ.

    ಪ್ರಸ್ತುತ ಕಾರ್ಖಾನೆಯಲ್ಲಿ 60 ಜನ ಪರ್ಮೆಂಟ್ ಉದ್ಯೋಗಿಗಳು, 12 ಜನ ಟ್ರೈನಿಸ್, 10 ಆಫೀಸರ್ಸ್ ಸೇರಿದಂತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 180 ಕಾರ್ಮಿಕರು ಕಾರ್ಖಾನೆಯಿಂದ ಬದುಕು ಕಟ್ಟಿಕೊಂಡಿದ್ದರು. ಆದರೀಗ ಕಾರ್ಖಾನೆಗೆ ಬೀಗ ಬೀಳುತ್ತೆಂದು ನೌಕರರು ಕಂಗಾಲಾಗಿದ್ದಾರೆ. ಕಂಪನಿಯನ್ನು ಅವಲಂಬಿಸಿ 20ಕ್ಕೂ ಹೆಚ್ಚು ಫೆಲ್ಟಿಂಗ್ ಅಂಗಡಿಗಳೂ ಇವೆ. ಈಗ ಕಂಪನಿಗೆ ಬೀಗ ಬೀಳುತ್ತೆಂದು ಎಲ್ಲರೂ ಅತಂತ್ರರಾಗಿದ್ದಾರೆ.

    1984ನೇ ಇಸವಿಯಿಂದಲೂ ಕೂಡ ನೌಕರರು ಈ ಕಾರ್ಖಾನೆಯನ್ನು ಬೆಮೆಲ್ ಕಂಪನಿ ಜೊತೆ ವೀಲಿನ ಮಾಡಿಕೊಳ್ಳುವಂತೆ ನೌಕರರು ಮನವಿ ಹಾಗೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ದಿ.ಸಂಸದ ಡಿ.ಸಿ.ಶ್ರೀಕಂಠಪ್ಪ ಕೂಡ ಕಾರ್ಖಾನೆಯನ್ನ ಬೆಮೆಲ್‍ಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. 1992ರಿಂದ ಕಾರ್ಖಾನೆ ಸಾಕಷ್ಟು ಲಾಭ ಕಂಡಿತ್ತು. ಟ್ಯಾಕ್ಸ್ ಪೇ ಮಾಡ್ತಿದ್ದ ಸಂಸ್ಥೆ 2003ರಲ್ಲಿ ಬಿ.ಎಫ್.ಆರ್ ನಿಂದ ಹೊರಕ್ಕೆ ಬಂದಿತ್ತು. 2017-18ನೇ ಇಸವಿಯಲ್ಲೂ ಕಾರ್ಖಾನೆಗೆ ಸಾಕಷ್ಟು ಲಾಭ ಬಂದಿತ್ತು. ಈ ಕಾರ್ಖಾನೆಯನ್ನ ಸಬ್ಸಿಟ್ಯೂಟ್ ಆಗಿ ಇಟ್ಟುಕೊಂಡಿದ್ದ ಬೆಮೆಲ್‍ಗೆ ಕೇಂದ್ರ ಸರ್ಕಾರದ ನೀತಿ ಆಯೋಗ ಬೆಮೆಲ್‍ಗೆ ವಿಜ್ಞಾನ ಇಂಡಸ್ಟ್ರೀಸ್‍ನ ಮರ್ಜ್ ಮಾಡಿಕೊಳ್ಳುವಂತೆ ಸೂಚಿಸಿತ್ತು.

    ಆದರೆ ಬೆಮಲ್ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಈ ಕಾರ್ಖಾನೆಯನ್ನು ಮರ್ಜ್ ಮಾಡಿಕೊಳ್ಳದ ಬೆಮೆಲ್, ಪ್ರೈವೈಟೈಸ್ ಮಾಡಲು ಟೆಂಡರ್ ಕೂಡ ಕರೆದಿತ್ತು. ಆದರೆ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದ ಹಿನ್ನೆಲೆ ಇದೀಗ ಈ ಕಾರ್ಖಾನೆಗೆ ಬೀಗ ಬೀಳುವ ಕಾಲ ಸನ್ನಿತವಾಗಿದ್ದು ನೌಕರರು ಅತಂತ್ರಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ, ನೌಕರರ ನೋವನ್ನ ಅರಿತು, ಕಾರ್ಖಾನೆಯನ್ನ ಬೆಮೆಲ್‍ಗೆ ಮರ್ಜ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಕಾಫಿನಾಡಿಗರು ಕೂಡ ಜಿಲ್ಲೆಯಲ್ಲಿರೋ ಏಕೈಕ ಕಾರ್ಖಾನೆಯನ್ನ ಉಳಿಸಿಬೇಕೆಂದು ಆಗ್ರಹಿಸಿದ್ದಾರೆ.

  • ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ – ಶಿವಣ್ಣ ಮನೆಯಲ್ಲಿ ಇಂದು ಸಭೆ

    ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ – ಶಿವಣ್ಣ ಮನೆಯಲ್ಲಿ ಇಂದು ಸಭೆ

    ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸ್ಯಾಂಡಲ್‍ವುಡ್‍ನ ಕಾರ್ಮಿಕರ ಬಗ್ಗೆ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮನೆಯಲ್ಲಿ ಸಭೆ ನಡೆಯಲಿದೆ.

    ಶಿವಣ್ಣನ ಮನೆಯಲ್ಲೇ ಸಭೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಸ್ಯಾಂಡಲ್‍ವುಡ್‍ನ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಅದರ ಸಂಸ್ಥೆಗಳು ಸಭೆಯಲ್ಲಿ ಭಾಗಿಯಾಗಲಿವೆ. ಇಂದು ಮಧ್ಯಾಹ್ನ ಸುಮಾರು 12:30ಕ್ಕೆ ನಾಗವಾರದ ಶಿವರಾಜ್ ಕುಮಾರ್ ಮನೆಯಲ್ಲಿ ಮಹತ್ವದ ಸಭೆ ನಡೆಯಲಿದೆ.

    ಕೊರೊನಾದಿಂದ ಕಳೆದ ನಾಲ್ಕು ತಿಂಗಳಿಂದ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇತ್ತ ಸರ್ಕಾರ ಎಲ್ಲಾ ವರ್ಗಕ್ಕೂ ಪ್ಯಾಕೇಜ್ ಘೋಷಿಸಿದೆ. ಆದರೆ ಚಿತ್ರರಂಗಕ್ಕೆ ಯಾವುದೇ ಪ್ಯಾಕೇಜ್ ಫೋಷಣೆ ಮಾಡಿಲ್ಲ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಅಸಮಾಧಾನ ಇದೆ. ಹೀಗಾಗಿ ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

    ಶಿವಣ್ಣನ ಮನೆಯಲ್ಲಿ ಸಭೆ ನಡೆದ ನಂತರ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಡುವ ಸಾಧ್ಯತೆ ಇದೆ. ಸಭೆಯಲ್ಲಿ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಚಿತ್ರಮಂದಿರದ ಮಾಲೀಕರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಅಂಬುಲೆನ್ಸ್ ಸೇವೆಗೆ ದರ ನಿಗದಿ ಮಾಡುತ್ತೇವೆಂದ ರಾಮುಲು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಅಂಬುಲೆನ್ಸ್ ಸೇವೆಗೆ ದರ ನಿಗದಿ ಮಾಡುತ್ತೇವೆಂದ ರಾಮುಲು

    ಬೆಂಗಳೂರು: ಖಾಸಗಿ ಆಸ್ಪತ್ರೆಗಳ ರೀತಿಯಲ್ಲೇ ಖಾಸಗಿ ಅಂಬುಲೆನ್ಸ್‍ಗಳಿಗೂ ದರ ನಿಗದಿ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.

    ಕೊರೊನಾ ಬೆಂಗಳೂರಿನಲ್ಲಿ ರಣಕೇಕೆ ಹಾಕುತ್ತಿದೆ. ಬೆಡ್ ಸಿಗದೇ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದೇ ರೋಗಿಗಳು ಸಾಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಅಂಬುಲೆನ್ಸ್ ಏಜೆನ್ಸಿಗಳು ದುಡ್ಡು ಮಾಡುವ ದಂಧೆ ಮಾಡುತ್ತೀವೆ ಎಂದು ಬೆಳಗ್ಗೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿ ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ದುಡ್ಡಿನ ದಂಧೆಗೆ ಇಳಿದ ಖಾಸಗಿ ಅಂಬುಲೆನ್ಸ್ ಏಜೆನ್ಸಿ

    ಈಗ ಈ ವಿಚಾರದ ಬಗ್ಗೆ ವಿಧಾನ ಸೌಧದಲ್ಲಿ ಮಾತನಾಡಿರುವ ಶ್ರೀರಾಮುಲು, ಖಾಸಗಿ ಆಂಬ್ಯುಲೆನ್ಸ್ ಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲಿ ಮಾಡೋವಾಗ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಅದಕ್ಕೆ ಪಾಲಿಸಿ ತಂದಿತ್ತು. ಈಗ ಅಂಬುಲೆನ್ಸ್ ವಿಚಾರವಾಗಿ ಪಾಲಿಸಿ ತರುತ್ತೇವೆ. ಸಿಎಂ ಯಡಿಯೂರಪ್ಪ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಿ ಇದಕ್ಕೆ ಒಂದು ಪಾಲಿಸಿ ಜಾರಿಗೆ ತರುತ್ತೇವೆ. ಜನರಿಗೆ ಅನುಕೂಲವಾಗುವಂತೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.