Tag: government

  • ಒಂದು ವರ್ಷದ ನಂತ್ರ ಸಿದ್ದರಾಮಯ್ಯಗೆ ಫಾರ್ಚ್ಯೂನರ್ ಕಾರು ನೀಡಿದ ಸರ್ಕಾರ

    ಒಂದು ವರ್ಷದ ನಂತ್ರ ಸಿದ್ದರಾಮಯ್ಯಗೆ ಫಾರ್ಚ್ಯೂನರ್ ಕಾರು ನೀಡಿದ ಸರ್ಕಾರ

    ಬೆಂಗಳೂರು: ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒಂದು ವರ್ಷದ ಬಳಿಕ ಹೊಸ ಕಾರಿನ ಭಾಗ್ಯ ಸಿಕ್ಕಿದೆ. ಇದನ್ನೂ ಓದಿ: ಕ್ಯಾಸಿನೋಗೆ ಹೋದ್ರು ಅನ್ನೋದು ತಪ್ಪಲ್ಲ: ಜಮೀರ್ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

    ವಿಪಕ್ಷ ನಾಯಕ ಆದ ಬಳಿ ಸರ್ಕಾರ ಅವರಿಗೆ ಹೊಸ ಕಾರು ನೀಡಬೇಕು. ಕಳೆದ ವರ್ಷ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನಸಭಾ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಕೂಡ ತಾವು ವಿಪಕ್ಷ ನಾಯಕ ಆದ ತಕ್ಷಣ ಕಾರು ಕೊಡುವಂತೆ ಮನವಿ ಮಾಡಿಕೊಂಡಿದ್ದರು.

    ಒಂದು ವರ್ಷ ಆದರೂ ಸಿದ್ದರಾಮಯ್ಯ ಅವರಿಗೆ ಸರ್ಕಾರ ಕಾರು ನೀಡಿರಲಿಲ್ಲ. ಇದೀಗ ಸಿದ್ದರಾಮಯ್ಯ ಅವರ ಮನವಿ ಸ್ಪಂದಿಸಿದ ಸ್ಪೀಕರ್ ಅವರಿಗೆ ಕಾರು ನೀಡಲು ಸೂಚನೆ ನೀಡಿದ್ದರು. ಅದರಂತೆಯೇ ಒಂದು ವರ್ಷದ ನಂತರ ಸರ್ಕಾರ ಸಿದ್ದರಾಮಯ್ಯ ಅವರಿಗೆ ಟೊಯೋಟಾ ಕಂಪನಿಯ ಫಾರ್ಚ್ಯೂನರ್ ಕಾರನ್ನು ನೀಡಿದೆ.

    ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕ ಜಮೀರ್ ಕೊಲಂಬೋಗೆ ಹೋಗಿದ್ದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾವೆ. ಇದೀಗ ಸಿದ್ದರಾಮಯ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಜಮೀರ್ ಅಹ್ಮದ್ ಕ್ಯಾಸಿನೋಗೆ ಹೋಗಿರುವದನ್ನ ಒಪ್ಪಿಕೊಂಡಿದ್ದಾರೆ. ಈ ವಿಷಯದ ಕುರಿತು ನಾನು ಹೆಚ್ಚು ಮಾತನಾಡಲ್ಲ. ಬೇಕಿದ್ರೆ ಅವರನ್ನೇ ನೀವು ಕೇಳಬೇಕು. ನಾನು ವಿದೇಶಕ್ಕೆ ಹೋದಾಗ ಕ್ಯಾಸಿನೋ ಆಡುವ ಜಾಗವನ್ನ ನೋಡಿದ್ದೇನೆ. ಆದ್ರೆ ಅಲ್ಲಿ ಆಡಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದು ಅಪರಾಧವಲ್ಲ ಎಂದು ಹೇಳಿದ್ದಾರೆ.

    ಡ್ರಗ್ಸ್ ಬಹಳ ವರ್ಷದಿಂದಲೇ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದರೆ ನಿಷ್ಪಕ್ಷಪಾತವಾಗಿ ಆಗಲಿ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಪ್ರಕರಣ ಬಳಸಿಕೊಳ್ಳಬಾರದು. ಪ್ರಕರಣದ ತನಿಖೆಯನ್ನ ರಾಜಕೀಯ ದುರುದ್ದೇಶದಿಂದ ನಡೆಸಬಾರದು. ಜಮೀರ್ ಡ್ರಗ್ಸ್ ದಂಧೆಯಲ್ಲಿದ್ದರಾ? ಅದು ಗೊತ್ತಿಲ್ಲ. ಇನ್ನು ಜಮೀರ್ ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸುತ್ತಾರೆ. ಫಾಝಿಲ್ ಎಂಬಾತ ಡ್ರಗ್ಸ್ ದಂಧೆಯಲ್ಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

  • ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ: ಪ್ರಶಾಂತ್ ಸಂಬರಗಿ

    – ಫೈಲ್ ಹಿಡಿದು ಸಿಸಿಬಿ ಕಚೇರಿಗೆ ಸಂಬರಗಿ

    ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ ಎಂದು ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹೇಳಿದ್ದಾರೆ.

    ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆ ಪ್ರಶಾಂತ್ ಸಂಬರಿಗಿ ಇಂದು ವಿಚಾರಣೆಗೆ ಹಾಜಾರಾಗಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸತ್ಯಕ್ಕೆ ಆಯಸ್ಸು ಜಾಸ್ತಿ ಇದೆ. ಇಂದು ಸತ್ಯದ ದೀಪ ಬೆಳಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ಸರ್ಕಾರಕ್ಕೆ ತೆರಿಗೆ ಕಟ್ಟುವ ನಾನು ಇವತ್ತು ಸರ್ಕಾರಕ್ಕೆ ಇನ್ನೊಂದು ಆದಾಯವನ್ನು ತಂದು ಕೊಡುತ್ತೇನೆ. ಜಮೀರ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತಿದ್ದೇನೆ. ಜಮೀರ್ ಅಹಮ್ಮದ್ ಖಂಡಿತ ಅವರ ಆಸ್ತಿಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತೆ. ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ನನ್ನ ಬಳಿ ಇದೆ ಎಂದು ಫೈಲ್ ತೋರಿಸಿದ ಪ್ರಶಾಂತ್ ಸಂಬರಗಿ, ಸಿಸಿಬಿ ಕಚೇರಿಗೆ ತೆರಳಿದ್ದಾರೆ. ಇದನ್ನು ಓದಿ: ಹಿಂದೆ ಹೇಳಿದ್ದ 3 ಸ್ಫೋಟಕ ಒಗಟುಗಳಲ್ಲಿ ಮೂರು ಸತ್ಯವಾಗಿದೆ – ಪ್ರಶಾಂತ್‌ ಸಂಬರಗಿ

    ಈ ಹಿಂದೆ ಮಾತನಾಡಿದ್ದ ಸಂಬರಗಿ, ಜಮೀರ್ ಅವರು ಕಳೆದ ವರ್ಷ ಜೂನ್ ತಿಂಗಳಲ್ಲಿ ಶ್ರೀಲಂಕಾದ ರಾಜಧಾನಿ ಕೊಲಂಬೋಗೆ ನಟಿ ಸಂಜನಾ ಜೊತೆ ಹೋಗಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಜಮೀರ್ ಅಹಮ್ಮದ್, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ, ನಾನು ಸಂಜನಾ ಜೊತೆ ಕೊಲಂಬೋಗೆ ಹೋಗಿದ್ದರೆ ನಾನು ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ಹೇಳಿದ್ದರು.

    ಇದಕ್ಕೂ ಮುನ್ನಾ ಮಾತನಾಡಿದ್ದ ಅವರು, ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8, 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‍ಪೋರ್ಟ್ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದಿದ್ದರು.

    ಜೊತೆಗೆ ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್ ಹಾಕಿದ್ದಾರೆ. ಈ ರೀತಿ ಕೇಸ್ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದರು.

  • ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ – ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ

    ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ – ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ

    ಹಾಸನ: ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದ್ದು, ಆ ಮೂಲವನ್ನು ಬೈಯ್ಯಲು ಹೋದರೆ ಯಾರ್ಯಾರಿಗೋ ಬೇಜಾರಾಗುತ್ತೆ ಎಂದು ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಅರಸೀಕೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡ್ರಗ್ಸ್ ದಂಧೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲಾ ದೇಶದಲ್ಲೂ ಡ್ರಗ್ಸ್ ಇದೆ. ನಮ್ಮ ಭಾರತದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಕೆಟ್ಟದ್ದು ಎಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಯಾವುದೇ ಬೀಚ್‍ಗೆ ಹೋಗಿ ಅಲ್ಲಿ ಕುಡಿದು ಮಲಗಿರುವವರೆಲ್ಲಾ ಡ್ರಗ್ಸ್ ತೆಗೆದುಕೊಂಡು ಮಲಗಿರುತ್ತಾರೆ. ಎಲ್ಲಿ ಲಾಭವಿದೆ ಅಲ್ಲಿ ಅದಕ್ಕೆ ಬಿಸಿನೆಸ್‍ದಾರರು ಹುಟ್ಟಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಈ ದೇಶ, ರಾಜ್ಯದಲ್ಲಿ ಡ್ರಗ್ಸ್ ಅಡಿಕ್ಟ್ ಆಗಿದೆ ಎಂದರು.

    ಈ ಬಗ್ಗೆ ವಿಧಾನಸೌಧದಲ್ಲಿ ಈ ಹಿಂದೆ 3-4 ಗಂಟೆಗಳ ಕಾಲ ಚರ್ಚೆಯಾಗಿತ್ತು. ಆಗಲೇ ನಾನು ಡ್ರಗ್ಸ್ ಬಗ್ಗೆ ವಿರೋಧ ಮಾಡಿದ್ದೆ. ಈ ಹಿಂದೆ ಶಾಸಕ ಕಳಕಪ್ಪ ಬಂಡಿ, ನನ್ನ ಮಗ ಎಂಬಿಬಿಎಸ್ ಓದುತ್ತಿದ್ದಾನೆ ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾನೆ. ನನ್ನ ಮಗನನ್ನ ಉಳಿಸಿಕೊಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು. ಅಂದೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಈಗ ನಿಯಂತ್ರಣಕ್ಕೆ ತರಬಹುದಿತ್ತು. ಈಗಲಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

    ಎಂಬಿಬಿಎಸ್ ಮತ್ತು ಪಿಜಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಯಾರ ಕೈಯಲ್ಲಿದ್ದಾರೆ. ಇದೆಲ್ಲವೂ ಸರ್ಕಾರಕ್ಕೆ ಗೊತ್ತಿಲ್ಲವೇ. ಅದರ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ. ಆ ಮೂಲವನ್ನ ಬೈಯ್ಯಲು ಹೋದರೆ ಯಾರಿಗಾದರೂ ಬೇಜಾರಾಗುತ್ತೆ. ಯಾರೋ ನಾಲ್ಕು ಜನ ಆರ್ಥಿಕವಾಗಿ ಮುಂದುವರಿಯಲು ಯುವಕರನ್ನ ಹಾಳು ಮಾಡುವ ಕೆಟ್ಟ ಪ್ರವೃತ್ತಿ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.

  • ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಪ್ಲಾನ್ ಏನು: ಡಿಕೆಶಿ ಪ್ರಶ್ನೆ

    ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಪ್ಲಾನ್ ಏನು: ಡಿಕೆಶಿ ಪ್ರಶ್ನೆ

    ಬೆಂಗಳೂರು: ನಮ್ಮ ಬದುಕು ಬದಲಾಯಿಸಿದ ಶಿಕ್ಷಕರಿಗೆ ಇಂದು ಕೃತಜ್ಞತೆ ಸಲ್ಲಿಸುವ ದಿನ. ಅಲ್ಲದೆ ದಾರಿ ತೋರಿರುವ ಗುರುವನ್ನು ಸ್ಮರಿಸಿಕೊಳ್ಳುವ ದಿನ ಇಂದಾಗಿದೆ. ಇಂದು ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ಶಿಕ್ಷಕರ ದಿನಾಚರಣೆಯಂದೇ ಸರಣಿ ಟ್ವೀಟ್ ಮಾಡಿರುವ ಡಿಕೆಶಿ, ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಖಾಸಗಿ ಶಾಲೆಗಳ 40,000ಕ್ಕೂ ಹೆಚ್ಚು ಶಿಕ್ಷಕರು ಕೆಲಸ ಕಳೆದುಕೊಂಡಿರುವಾಗ, 2,00,000ಕ್ಕೂ ಹೆಚ್ಚು ಶಿಕ್ಷಕರಿಗೆ ಸಂಬಳವಿಲ್ಲದೇ ಒದ್ದಾಡುತ್ತಿರುವಾಗ, ಮಕ್ಕಳ ಭವಿಷ್ಯ ರೂಪಿಸುವವರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸ ಮಾಡುವಾಗ ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಪ್ಲಾನ್ ಏನು ಎಂದು ಪ್ರಶ್ನಿಸಿ ಶಿಕ್ಷಕರಿಗೆ ಶಿಕ್ಷೆ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಬರೆದುಕೊಂಡಿದ್ದಾರೆ.

    ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.62.5ರಷ್ಟು ಮಕ್ಕಳಿಗೆ ಮಾತ್ರ ಸ್ಮಾರ್ಟ್ ಫೋನ್, ಲ್ಯಾಪ್‍ಟಾಪ್‍ನ ಲಭ್ಯತೆ ಇದೆ. ಶೇ.53.75ರಷ್ಟು ಮಕ್ಕಳಿಗೆ ಮಾತ್ರ ಇಂಟರ್ನೆಟ್ ಸಂಪರ್ಕ ಲಭ್ಯವಿದೆ. ಈ ಎಲ್ಲಾ ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳು ಆನ್‍ಲೈನ್ ಶಿಕ್ಷಣ ಪಡೆಯುವುದಾದರೂ ಹೇಗೆ ಎಂದು ಕೂಡ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಈ ಕುರಿತಂತೆ ಸರ್ಕಾರ ಈ ಕೂಡಲೇ ನಿದ್ದೆಯಿಂದೆದ್ದು ಹಳಿತಪ್ಪಿರುವ ಶಿಕ್ಷಣದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಾಗೂ ಶಿಕ್ಷಕರಿಗೆ ನೆರವಾಗಲು ಕಾಂಗ್ರೆಸ್ಸಿನ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

  • ಬೇರೆಯವರಿಗಿಂತ ರಾಜಕಾರಣಿ ಮಕ್ಕಳು ಕೆಡಲು ಹೆಚ್ಚು ಅವಕಾಶ ಇದೆ: ವಿಶ್ವನಾಥ್

    ಬೇರೆಯವರಿಗಿಂತ ರಾಜಕಾರಣಿ ಮಕ್ಕಳು ಕೆಡಲು ಹೆಚ್ಚು ಅವಕಾಶ ಇದೆ: ವಿಶ್ವನಾಥ್

    ಮಂಡ್ಯ: ಡ್ರಗ್ಸ್ ಜಾಲವನ್ನು ಅತ್ಯಗತ್ಯವಾಗಿ ಭೇದಿಸಲೇಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳು ಹಾಳಾಗಿ ಬಿಡುತ್ತವೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಡ್ರಗ್ಸ್ ಮಾಫಿಯಾದ ಬಗ್ಗೆ ಮಾತನಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ವಿಶ್ವನಾಥ್, ಡ್ರಗ್ಸ್ ಜಾಲವನ್ನು ಅತ್ಯಗತ್ಯವಾಗಿ ಭೇದಿಸಲೇಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳು ಹಾಳಾಗಿ ಬಿಡುತ್ತವೆ. ಈಗ ಯಾರನ್ನಾದರೂ ಸಾಯಿಸಿ ದೊಡ್ಡವನಾಗಬೇಕು ಎನ್ನೋ ಸ್ಥಿತಿ ಇದೆ. ಹೀಗಾಗಿ ಸರ್ಕಾರ ಈ ಜಾಲವನ್ನು ಭೇದಿಸಬೇಕು ಎಂದರು.

    ಸಂಘ ಸಂಸ್ಥೆಗಳು, ತಂದೆ-ತಾಯಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಮ್ಮೆಲ್ಲರಿಗೂ ಹೆಚ್ಚಿನ ಜವಾಬ್ದಾರಿ ಇದೆ. ಒಂದು ಮಗುವಿಗೆ ಶಿಕ್ಷಣ, ಸಮಾಜದ ಸೌಲಭ್ಯವನ್ನು ಹೇಗೆ ಕೊಡುತ್ತಿಯೋ ಅದೇ ರೀತಿ ಮಗುವನ್ನು ಸಂರಕ್ಷಣೆ ಮಾಡುವುದು ಕೂಡ ಸಮಾಜದ ಎಲ್ಲರ ಹೊಣೆಯಾಗಿದೆ ಎಂದು ವಿಶ್ವನಾಥ್ ಹೇಳಿದರು.

    ಎಲ್ಲ ಮಕ್ಕಳು ಒಂದೇ ರೀತಿ. ಆದರೆ ರಾಜಕಾರಣಿ ಮಕ್ಕಳು ಕೆಡಲು ಬೇರೆಯವರಿಗಿಂತ ಹೆಚ್ಚು ಅವಕಾಶ ಇರುತ್ತದೆ. ಯಾಕೆಂದರೆ ರಾಜಕಾರಣಿ ಮಕ್ಕಳು ಆರ್ಥಿಕವಾಗಿ ಚೆನ್ನಾಗಿ ಇರುತ್ತಾರೆ. ಜೊತೆಗೆ ವಿಶೇಷವಾದ ಸವಲತ್ತುಗಳು ಇರುತ್ತವೆ. ಹೀಗಾಗಿ ರಾಜಕಾರಣಿ ಮಕ್ಕಳು ಹಾಳಾಗಲು ಹೆಚ್ಚು ಅವಕಾಶವಿದೆ ಎಂದು ವಿಶ್ವನಾಥ್ ತಿಳಿಸಿದರು.

  • ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಮಂಗಳೂರು: ಭಕ್ತರ ಹಾಗೂ ಅರ್ಚಕರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವೆಗಳನ್ನು ಆರಂಭಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡೆ ಕವಿತಾ ಸನಿಲ್ ಆಗ್ರಹಿಸಿದ್ದಾರೆ.

    ಮಂಗಳೂರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಸಾಕಷ್ಟು ದೇಗುಲಗಳಿವೆ, ಅದರಲ್ಲೂ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಕೊರೊನಾದಿಂದಾಗಿ ವಿಶೇಷ ಪೂಜಾ ಸೇವೆಗಳು ನಡೆಯುತ್ತಿಲ್ಲ. ಹೀಗಾಗಿ ದೇಗುಲದ ಅರ್ಚಕರಿಗೆ ತಮ್ಮ ಕಷ್ಟವನ್ನು ಯಾರ ಹತ್ತಿರವೂ ಹೇಳಲಾಗುತ್ತಿಲ್ಲ ಎಂದರು.

    ಅರ್ಚಕರಿಗೆ ದೇವರ ಕೆಲಸ ಬಿಟ್ಟು ಬೇರೆ ಏನೂ ಕೆಲಸ ಮಾಡುವ ಹಾಗಿಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ದೇಗುಲಗಳ ಬಾಗಿಲನ್ನು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಬಾರ್, ವೈನ್ ಶಾಪ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅವರು ಯಾವ ರೀತಿ ಸಾಮಾಜಿಕ ಅಂತರ ಪಾಲಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದರು.

    ಆದ್ದರಿಂದ ದೇವಸ್ಥಾನಗಳಲ್ಲಿ ಸೇವೆಯನ್ನು ಅರಂಭಿಸಿದರೆ ಅರ್ಚಕರ ವೃಂದ, ಅಡಳಿತ ಮಂಡಳಿಯವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸವನ್ನು ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಸರ್ಕಾರ ಶೀಘ್ರದಲ್ಲೇ ದೇವಸ್ಥಾನಗಳಲ್ಲಿ ಸೇವೆ ಅರಂಭಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

  • ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರಣವಾಡಿ ಗ್ರಾಮದಲ್ಲಿನ ಸಂಗೋಳಿ ರಾಯಣ್ಣ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಕನ್ನಡಪರ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮರು ಸ್ಥಾಪನೆಗೆ ಆಗ್ರಹಿಸಲಾಯಿತು.

    ಸಂಕೇಶ್ವರ ಪಟ್ಟಣದ ಬೀರದೇವರ ದೇವಸ್ಥಾನದಿಂದ ಸಂಗೋಳಿ ರಾಯಣ್ಣ ವೃತ್ತದವರೆಗೆ ರಾಯಣ್ಣ ಅಭಿಮಾನಿಗಳು ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು. ಸ್ವಾತಂತ್ರ್ಯ ದಿನಾಚರಣೆ ದಿನದಂದು ಪೀರಣವಾಡಿಯಲ್ಲಿ ರಾಯಣ್ಣ ಪ್ರತಿಮೆಯನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಕನ್ನಡಿಗರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಪಮಾನ ಮಾಡಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತಕೊಂಡು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ವಾಲ್ಮೀಕಿ ಸಂಘ, ಹಾಲುಮತ ಸಮಾಜ ಸೇರಿದಂತೆ ರಾಯಣ್ಣ ಅಭಿಮಾನಿಗಳು ಪಾಲ್ಗೊಂಡಿದ್ದರು.

  • ಕೊರೊನಾ ವಾರಿಯರ್ ಆತ್ಮಹತ್ಯೆ ಎಫೆಕ್ಟ್- ಡ್ಯಾಮೇಜ್ ಕಂಟ್ರೋಲ್‍ಗೆ ಸರ್ಕಾರದ ಪ್ಲಾನ್

    ಕೊರೊನಾ ವಾರಿಯರ್ ಆತ್ಮಹತ್ಯೆ ಎಫೆಕ್ಟ್- ಡ್ಯಾಮೇಜ್ ಕಂಟ್ರೋಲ್‍ಗೆ ಸರ್ಕಾರದ ಪ್ಲಾನ್

    – ‘ಟಾರ್ಗೆಟ್’ ಕೊಟ್ಟ ಸರ್ಕಾರಕ್ಕೆ ಇದೀಗ ಹೊಸ ಕಂಡೀಷನ್

    ಬೆಂಗಳೂರು/ಮೈಸೂರು: ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ಸದ್ಯ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದೆ. ಕೋವಿಡ್ ವಾರಿಯರ್ಸ್ ಮೇಲಿನ ಒತ್ತಡ ನಿವಾರಣೆಗೆ ಸರ್ಕಾರ ದೂರು ಪೆಟ್ಟಿಗೆ ವ್ಯವಸ್ಥೆ ಏರ್ಪಡಿಸುವ ಚಿಂತನೆಯಲ್ಲಿದೆ.

    ಕೊರೊನಾ ವಾರಿಯರ್ಸ್ ಮೇಲಿನ ಒತ್ತಡ ನಿವಾರಣೆಗೆ ಸರ್ಕಾರದ ಕಂಪ್ಲೆಂಟ್ ಬಾಕ್ಸ್ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಸುತ್ತಿದೆ. ಕೊರೊನಾ ಸೇವೆ ನಿರ್ವಹಿಸುತ್ತಿರುವ ಇಲಾಖೆ, ಕಚೇರಿ, ಆಸ್ಪತ್ರೆಗಳಲ್ಲಿ ಪ್ರತ್ಯೇಕ ದೂರು ಪೆಟ್ಟಿಗೆ ಏರ್ಪಡಿಸಿ ಆ ಮೂಲಕ ಸಿಬ್ಬಂದಿಗೆ ಅನಗತ್ಯವಾಗಿ ಹೆಚ್ಚಿನ ಒತ್ತಡ ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲು ಮುಂದಾಗಿದೆ.

    ಹೇಗೆ ಕೆಲಸ ಮಾಡಲಿವೆ?
    ಕೊರೊನಾ ಸೇವೆಯಲ್ಲಿರುವ ಸಿಬ್ಬಂದಿ ಮೇಲೆ ಯಾರಾದರೂ ಒತ್ತಡ, ಹಿಂಸೆ, ಅಕ್ರಮ, ಲೋಪ, ಕಂಡುಬಂದಲ್ಲಿ ದೂರು ಪೆಟ್ಟಿಗೆ ಪತ್ರ ಬರೆದು ಹಾಕಬಹುದು. ದೂರು ನೀಡುವ ವೇಳೆ ಯಾಕೆ? ಯಾವ ವಿಭಾಗ ಎಂಬ ವಿವರ ನೀಡಬೇಕಿದೆ. ಆದರೆ ದೂರು ಕೊಡುವವರು ತಮ್ಮ ಹೆಸರು ಹೇಳುವ ಅಗತ್ಯವಿರುವುದಿಲ್ಲ. ದೂರು ಬಾಕ್ಸ್ ನಲ್ಲಿ ಬರೆದು ಹಾಕಲು ಇಷ್ಟವಿಲ್ಲದಿದ್ದರೆ ಮೇಲ್ ಮೂಲಕವೂ ದೂರು ಸಲ್ಲಿಸಬಹುದಾಗಿದೆ.

    ದೂರು ಪೆಟ್ಟಿಗೆ ಮೂಲಕ ಬಂದ ದೂರುಗಳ ಪರಿಶೀಲನೆಗೆ ಇಲಾಖಾವಾರು ಅಧಿಕಾರಿಗಳ ಕಮಿಟಿ ರಚನೆ ಮಾಡಿ, ಸಮಿತಿ ಪರಿಶೀಲನೆ ಬಳಿಕ ದೂರಿನಲ್ಲಿ ಸತ್ಯಾಂಶ ಇದ್ದರೆ ಸರ್ಕಾರದ ಗಮನಕ್ಕೆ ತರಬಹುದಾಗಿದೆ. ಆ ಬಳಿಕ ಸರ್ಕಾರದ ಮಟ್ಟದಲ್ಲಿ ಕ್ರಮ ಜರುಗಿಸಿಲು ಚಿಂತನೆ ನಡೆಸಲಾಗುತ್ತದೆ. ಆದರೆ ದೂರು ಪೆಟ್ಟಿಗೆ ದುರ್ಬಳಕೆ ಮಾಡಿಕೊಂಡರೆ ಅಂಥವರ ವಿರುದ್ಧವೂ ಕ್ರಮದ ಎಚ್ಚರಿಕೆ ನೀಡಲಾಗಿದೆ.

    ಹೊಸ ಸಂಕಷ್ಟ?
    ಇತ್ತ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಾಧಿಕಾರಿಗಳಿಗೆ ‘ಟಾರ್ಗೆಟ್’ ಕೊಟ್ಟ ಸರ್ಕಾರಕ್ಕೆ ಇದೀಗ ವೈದ್ಯರ ಸಂಘ ಹೊಸ ನಿಬಂಧನೆಗಳನ್ನು ಹಾಕಿದೆ. ಮಾರ್ಕೆಟ್, ಬಸ್ ಸ್ಟಾಂಡ್, ಆಟೋ ಸ್ಟಾಂಡ್ ಹಾಗೂ ಗಣೇಶ ಪೆಂಡಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೂ ಕೊರೊನಾ ಟೆಸ್ಟ್ ಮಾಡಲ್ಲ. ಸೋಂಕಿತರ ಮನೆ ಬಳಿ ತೆರಳಿ ಬೇಕಿದ್ದರೆ ಟೆಸ್ಟ್ ಮಾಡುತ್ತೇವೆ ಎಂದು ವೈದ್ಯರ ಸಂಘ ಸ್ಪಷ್ಟಪಡಿಸಿದೆ. ವೈದ್ಯರ ಈ ಷರತ್ತಿನಿಂದ ಸರ್ಕಾರ ಸದ್ಯ ಇಕ್ಕಟ್ಟಿಗೆ ಸಿಲುಕಿದೆ.

    ಸದ್ಯ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಣಾಮ ಕೊರೊನಾ ಟೆಸ್ಟಿಂಗ್ ಹೆಚ್ಚು ಮಾಡದಿದ್ದರೆ ಅಪಾಯ ಖಚಿತ ಎಂದು ಹೇಳಬಹುದಾಗಿದೆ. ಮಾರ್ಕೆಟ್, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡಿದ್ದಕ್ಕೆ ಕೇಸ್ ಸಂಖ್ಯೆ ಹೆಚ್ಚಳವಾಗುತ್ತದೆ. ಆದರೆ, ಈಗ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟಿಂಗ್ ಮಾಡಲ್ಲ ಎಂದು ವೈದ್ಯರು ಹೊಸ ಷರತ್ತು ವಿಧಿಸಿದ್ದು, ಟೆಸ್ಟ್ ಮಾಡದಿದ್ದರೆ ಟೆಸ್ಟಿಂಗ್ ರೇಟ್ ಕಡಿಮೆ ಆಗುತ್ತದೆ. ಈ ಬೆಳವಣಿಗೆಯಿಂದ ಕೊರೊನಾ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೊದಲು ದಿನಕ್ಕೆ ಕೇವಲ 5 ಸಾವಿರ ಟೆಸ್ಟ್ ನಡೆಯುತ್ತಿತ್ತು. ಆದರೆ ಈಗ 25 ಸಾವಿರ ಟೆಸ್ಟ್ ಮಾಡುತ್ತಿದ್ದು, ಟೆಸ್ಟಿಂಗ್ ಸಂಖ್ಯೆ ಮತ್ತೆ ಐದು ಸಾವಿರಕ್ಕೆ ಬಂದು ನಿಂತರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಸಂಕಷ್ಟದ ನಡುವೆ ವಾರಿಯರ್ಸ್‍ಗೆ ಕಿರುಕುಳ- ಟಾರ್ಗೆಟ್ ಮಿಸ್ಸಾದ್ರೆ ತಲೆದಂಡ ಫಿಕ್ಸ್!

    ಕೊರೊನಾ ಸಂಕಷ್ಟದ ನಡುವೆ ವಾರಿಯರ್ಸ್‍ಗೆ ಕಿರುಕುಳ- ಟಾರ್ಗೆಟ್ ಮಿಸ್ಸಾದ್ರೆ ತಲೆದಂಡ ಫಿಕ್ಸ್!

    ಬೆಂಗಳೂರು: ಸರ್ಕಾರ ಕೊರೊನಾ ವಾರಿಯರ್ಸ್ ಗೆ ಟೆಸ್ಟಿಂಗ್ ಟಾರ್ಗೆಟ್ ನೀಡುತ್ತಿದ್ದು, ಸರ್ಕಾರದ ಈ ಕಿರಿಕ್‍ನಿಂದ ಆರೋಗ್ಯಾಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮೈಸೂರು ವೈದ್ಯಾಧಿಕಾರಿ ನಾಗೇಂದ್ರ ಸಾವು ಬೆನ್ನಲ್ಲೆ ಕೊರೊನಾ ವಾರಿಯರ್ಸ್ ಗೆ ಸರ್ಕಾರದ ಇಲಾಖೆಯಿಂದ ಟಾರ್ಗೆಟ್ ಟಾರ್ಚರ್ ಬಿಚ್ಚಿಕೊಳ್ಳುತ್ತಿದೆ. ಹಿರಿಯ ಅಧಿಕಾರಿಗಳು ನೀಡುತ್ತಿರುವ ಟಾರ್ಚರ್ ಕಥೆಯನ್ನು ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದಾವೆ. ಅದರಲ್ಲಿ ಪ್ರತಿ ಕೇಂದ್ರಗಳಿಗೆ 250 ಜನರನ್ನು ಟೆಸ್ಟ್ ಮಾಡಬೇಕು ಎಂದು ಆರಂಭದಲ್ಲಿ ಟಾರ್ಗೆಟ್ ನೀಡಲಾಗಿತ್ತು, ಈಗ ಅದು 500ಕ್ಕೆ ಏರಿಕೆಯಾಗಿದೆಯಂತೆ. ಅದರಲ್ಲಿ 300 ಅಂತೂ ನಿತ್ಯವೂ ಆಗಲೇಬೇಕು ಎಂದು ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರನ್ನು ಟೆಸ್ಟ್ ಮಾಡಬಹುದು. ಆದರೆ ಗುಣಲಕ್ಷಣಗಳು ಇಲ್ಲದೇ ಇರುವ ಜನರನ್ನು ಟೆಸ್ಟ್ ಮಾಡಿ ಅಂದರೆ ಎಲ್ಲಿ ಬರುತ್ತಾರೆ ಎಂದು ಸಿಬ್ಬಂದಿ ದೂರಿದ್ದಾರೆ.

    ಟಾರ್ಗೆಟ್ ರೀಚ್ ಆಗದೇ ಇದ್ದರೆ ತಲೆದಂಡ ಫಿಕ್ಸ್. ಈಗಾಗಲೇ ಅನೇಕ ಅಧಿಕಾರಿಗಳು ಕೊರೊನಾ ಟೆಸ್ಟಿಂಗ್ ಆಗದೇ ಇದ್ದಿದ್ದಕ್ಕೆ ಕೆಲಸವನ್ನು ಕಳಕೊಂಡಿದ್ದಾರಂತೆ. ಕ್ಯಾಂಪ್‍ಗಳನ್ನು ಮಾಡಿ ಸುಖಾಸುಮ್ಮನೆ ಜನರನ್ನು ಟೆಸ್ಟ್ ಮಾಡಿ ಟಾರ್ಗೆಟ್ ರೀಚ್ ಮಾಡುತ್ತಿದ್ದೇವೆ. ಈಗ ಬೆಂಗಳೂರಿನಲ್ಲಿ ಕ್ಯಾಂಪ್‍ಗಳನ್ನು ಮಾಡಿ ಆಟೋ ಡ್ರೈವರ್ಸ್ ತರಕಾರಿ ವ್ಯಾಪಾರಿಗಳನ್ನು ರೋಗದ ಲಕ್ಷಣ ಇಲ್ಲದೆ ಇದ್ದರೂ ಕರೆದು ಟೆಸ್ಟಿಂಗ್ ಮಾಡುತ್ತಿದ್ದೇವೆ. ಒಂದಿನಾನೂ ರಜೆಯೇ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಲ್ಯಾಬ್ ಟೆಕ್ನಿಷನ್ಸ್ ಗಳಿಗಷ್ಟೇ ವೈಜ್ಞಾನಿಕವಾಗಿ ಸ್ವಾಬ್ ಕಲೆಕ್ಷನ್ ಗೊತ್ತಿರುತ್ತೆ. ಆದರೆ ಈಗ ಸರ್ಕಾರ ಸಿಕ್ಕ ಸಿಕ್ಕವರಿಗೆ ಟ್ರೈನಿಂಗ್ ಕೊಟ್ಟು ಸ್ವಾಬ್ ಕಲೆಕ್ಷನ್ ಮಾಡಿ ಎಂದು ಕಳಿಸುತ್ತಿದ್ದಾರೆ. ಇದರಿಂದ ಪರಿಣಿತರಲ್ಲದವರು ಮೂಗಿನ ದ್ರಾವಣ ತೆಗೆಯುವಾಗ ಅನೇಕರಿಗೆ ರಕ್ತ ಬಂದಿದೆ. ಲ್ಯಾಬ್ ಟೆಕ್ನಿಷನ್ಸ್ ಕೊರತೆ ಇದ್ದರೂ ಸರ್ಕಾರದ ಟಾರ್ಚರ್ ನಿಂದ ಇಲಾಖೆಯ ಕಿರಿಕ್‍ನಿಂದ ಇಂತವರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಧಿಕಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.

  • ಆಡಿದ ಮಾತು, ಬಿಟ್ಟ ಬಾಣ ಎಂದಿಗೂ ಮರಳಿ ಬಾರವು- ಹೆಚ್‍ಡಿಕೆಗೆ ಸುಧಾಕರ್ ತಿರುಗೇಟು

    ಆಡಿದ ಮಾತು, ಬಿಟ್ಟ ಬಾಣ ಎಂದಿಗೂ ಮರಳಿ ಬಾರವು- ಹೆಚ್‍ಡಿಕೆಗೆ ಸುಧಾಕರ್ ತಿರುಗೇಟು

    ಬೆಂಗಳೂರು: ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವಲ್ಲಿ ನಮ್ಮ ಸರ್ಕಾರ ಸಮರ್ಥವಿದೆ. ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ರೈತರಿಗೂ ಯೂರಿಯಾ ಗೊಬ್ಬರ ಪೂರೈಸುವಲ್ಲಿ ಸಶಕ್ತವಾಗಿದೆ. ಆಡಿದ ಮಾತು, ಬಿಟ್ಟ ಬಾಣ, ಕಳೆದ ಸಮಯ ಮತ್ತು ಕೈತಪ್ಪಿ ಹೋದ ಅವಕಾಶ ಇವು ಎಂದಿಗೂ ಮರಳಿ ಬಾರವು ಎಂದು ಮಾತಿನ ಛಾಟಿ ಬೀಸಿದ್ದಾರೆ.

    ಹೆಚ್‍ಡಿಕೆ ಹೇಳಿದ್ದೇನು?
    ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು.

    ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು.

    ವಾಡಿಕೆಗಿಂತ ಈ ಬಾರಿ ರಾಜ್ಯದಾದ್ಯಂತ ಶೇಕಡ 25ರಷ್ಟು ಹೆಚ್ಚು ಬಿತ್ತನೆ ಆಗಿದೆ. ಕೃಷಿ ಇಲಾಖೆ ಇದನ್ನು ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

    ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ತುರ್ತು ಸೂಕ್ತ ವ್ಯವಸ್ಥೆ ಮಾಡುವಂತೆ ಹೆಚ್‍ಡಿಕೆ ಸರಣಿ ಟ್ವೀಟ್ ಮಾಡಿ ಸರ್ಕಾರವನ್ನು ಒತ್ತಾಯಿಸಿದ್ದರು.