Tag: government

  • ಎಲ್ಲರಿಗೂ ಹಬ್ಬಿಸಿ ಬಂದ್ಮೇಲೆ ಕೊರೊನಾ ರಿಪೋರ್ಟ್ ಕೊಡ್ತಾರೆ: ಶಿವಲಿಂಗೇಗೌಡ

    ಎಲ್ಲರಿಗೂ ಹಬ್ಬಿಸಿ ಬಂದ್ಮೇಲೆ ಕೊರೊನಾ ರಿಪೋರ್ಟ್ ಕೊಡ್ತಾರೆ: ಶಿವಲಿಂಗೇಗೌಡ

    – ರ‍್ಯಾಪಿಡ್‌  ಟೆಸ್ಟಿನಲ್ಲಿ ಪಾಸಿಟಿವ್, ಆರ್‌ಟಿಪಿಸಿಆರ್ ಟೆಸ್ಟಿನಲ್ಲಿ ನೆಗೆಟಿವ್
    – 300 ರೂ. ಕಿಟ್‍ನ, 2500 ರೂ.ಗೆ ಮಾರುತ್ತಾರೆ

    ಬೆಂಗಳೂರು: ಎಲ್ಲರಿಗೂ ಹಬ್ಬಿಸಿ ಬಂದ ಮೇಲೆ ಕೊರೊನಾ ರಿಪೋರ್ಟ್ ಕೊಡುತ್ತಾರೆ ಎಂದು ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

    ಇಂದು ಸದನದಲ್ಲಿ ಗುಡುಗಿದ ಶಿವಲಿಂಗೇಗೌಡರು, ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ಮೂರೂವರೆ ಲಕ್ಷ ವಸೂಲಿ ಮಾಡುತ್ತಾರೆ. ಸಚಿವರು ಆಸ್ಪತ್ರೆಗಳನ್ನು ಹೊಗಳಿಕೊಂಡಿದ್ದೇ ಹೊಗಳಿಕೊಂಡಿದ್ದು, ಏನ್ ಕಡಿದು ಕಟ್ಟೆ ಹಾಕಿದ್ರು ಅಂತ ಹೊಗಳಿದ್ದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

    300 ರೂ.ಗೆ ಕಿಟ್ ಸಿಗುತ್ತೆ, ಅದನ್ನು 2500 ರೂ.ಗೆ ಮಾರುತ್ತಾರೆ. ಯಾವ್ಯಾವ ಕಂಪನಿಯಿಂದ ನೀವು ಮೆಡಿಕಲ್ ಕಿಟ್ ಪಡೆದಿದ್ದೀರಾ? ಅದನ್ನು ಎಲ್ಲೆಲ್ಲಿಂದ ತಂದು ಕೊಡುತ್ತಾರೆ ನಿಮಗೆ ಗೊತ್ತಾ? ಆಕ್ಸಿಜನ್ ಹಾಕಿದರೆ ಮಧ್ಯಾಹ್ನಕ್ಕೆ ಮುಗಿಯುತ್ತೆ. ರಾತ್ರಿಹೊತ್ತಿಗೆ ಪೇಶೆಂಟ್ ಹೋಗಿಬಿಡುತ್ತಾನೆ. ಇದರಲ್ಲಿ ಏನೇನಾಗಿದೆ ದೇವರೇ ನೋಡಿಕೊಳ್ಳುತ್ತಾನೆ. ಅಂತವರಿಗೆ ದೊಡ್ಡ ರೋಗ ಬರುತ್ತೆ ಎಂದು ಶಿವಲಿಂಗೇಗೌಡ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

    ರ‍್ಯಾಪಿಡ್  ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಆರ್.ಟಿ.ಪಿ.ಸಿ.ಆರ್ ನಲ್ಲಿ ನೆಗೆಟಿವ್ ಬರುತ್ತೆ. ರಿಪೋರ್ಟ್ ಬರೋದು ಮೂರ್ನಾಲ್ಕು ದಿನ ಆಗುತ್ತೆ. ಅಲ್ಲಿ ತನಕ ಟೆಸ್ಟ್ ಮಾಡಿಸಿದವನು ಎಲ್ಲ ಕಡೆ ಸುತ್ತಾಡಿಕೊಂಡು ಎಲ್ಲರಿಗೂ ಸೋಂಕು ಅಂಟಿಸಿ ಹೋಗುತ್ತಾನೆ. ಇದೇನಾ ವ್ಯವಸ್ಥೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

  • ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ

    ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಶಾಲೆಗಳು ಆರಂಭವಾಗಲಿ: ಕಿಮ್ಮನೆ

    – ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡ್ಬಾರ್ದು

    ಶಿವಮೊಗ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮುನ್ನ ಯಾವುದೇ ಕಾರಣಕ್ಕೂ ಶಾಲೆಗಳ ಪುನರ್ ಆರಂಭಕ್ಕೆ ಸರ್ಕಾರ ಮುಂದಾಗಬಾರದು. ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡಬಾರದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸರಿಯಾಗಿ ನಿಯಂತ್ರಣಕ್ಕೆ ಬಾರದ ಹೊರತು ಶಾಲೆ ಓಪನ್ ಮಾಡುವ ಪ್ರಯತ್ನ ನಡೆಸಬಾರದು ಎಂದರು.

    ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಇರುವುದೇ ಒಂದು ದೊಡ್ಡ ದುರಂತ. ಕೊರೊನಾ ಕಡಿಮೆ ಇದ್ದ ಅವಧಿಯಲ್ಲಿ ಎಲ್ಲಾ ಬಂದ್ ಮಾಡಿದರು. ಸದ್ಯ ಕೊರೊನಾ ಸೋಂಕು ಹೆಚ್ಚಾಗಿದೆ. ಈ ವೇಳೆ ಎಲ್ಲಾ ಓಪನ್ ಮಾಡಿದ್ದಾರೆ. ಕೊರೊನಾದಿಂದಾಗಿ ಜನ ಸಾಯುತ್ತಿದ್ದಾರೆ. ಈಗಿರುವಾಗ ಶಾಲೆ ಆರಂಭದ ಬಗ್ಗೆ ಮಾತನಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದ ನಂತರವೇ ಶಾಲೆ ಆರಂಭಿಸುವುದು ಒಳ್ಳೆಯದು ಎಂದರು.

    ಮೊದಲೆಲ್ಲಾ ಕೊರೊನಾ ಹರಡಲು ಮುಸ್ಲಿಮರೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಈಗ ಏನು ಹೇಳುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.

  • ಕೋವಿಡ್ ನಿರ್ವಹಣೆಗೆ ಸರ್ಕಾರ ನೀಡಿದ್ದ ಲಕ್ಷ, ಲಕ್ಷ ಹಣವನ್ನೇ ಎಗರಿಸಿದ ಖದೀಮರು

    ಕೋವಿಡ್ ನಿರ್ವಹಣೆಗೆ ಸರ್ಕಾರ ನೀಡಿದ್ದ ಲಕ್ಷ, ಲಕ್ಷ ಹಣವನ್ನೇ ಎಗರಿಸಿದ ಖದೀಮರು

    – ತಹಶೀಲ್ದಾರ್ ಸಹಿ, ಮೊಹರು ನಕಲಿಸಿ ಹಣ ಲಪಟಾಯಿಸಿದ್ರು

    ಯಾದಗಿರಿ: ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ ಅನ್ನೋ ಆರೋಪ ರಾಜ್ಯದಲ್ಲಿ ಎದ್ದಿರುವ ಬೆನ್ನಲ್ಲೇ ಸುರಪುರದಲ್ಲಿ ಕೋವಿಡ್ ನಿರ್ವಹಣೆಗಾಗಿ ಸರ್ಕಾರ ನೀಡಿದ್ದ ಲಕ್ಷ- ಲಕ್ಷ ಹಣವನ್ನೇ ಎಗರಿಸಲಾಗಿದೆ. ಕೋವಿಡ್ ಹಣಕ್ಕೆ ಕನ್ನ ಹಾಕಿರುವ ಖದೀಮರು, ನಕಲಿ ಸಹಿ ಮಾಡಿ ಅರ್ಧ ಕೋಟಿಗಿಂತ ಅಧಿಕ ಹಣ ಲೂಟಿ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದರ ಸಹಿ ಮತ್ತು ಮೊಹರು ನಕಲು ಮಾಡಿ, ಸುರಪುರ ಪಟ್ಟಣದ ಎಕ್ಸಿಸ್ ಬ್ಯಾಂಕ್ ನಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ಖಾತೆಯಿಂದ 75,59,900 ರೂ. ಹಣ ದೋಚಲಾಗಿದೆ. ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ ಚೆಕ್ ಹಣ ವರ್ಗಾವಣೆಗೊಂಡಿದೆ. ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಮಾಲೀಕೆ ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಎಂಬವರ ಖಾತೆಗೆ ಸಂಪೂರ್ಣ ಹಣ ವರ್ಗಾವಣೆಗೊಂಡಿದೆ. ಲಕ್ಷ್ಮೀ ಪತಿ ರಾಜು ಕಟ್ಟಿಮನಿ ತಹಶೀಲ್ದಾರ್ ಅವರ ಸಹಿ ಮತ್ತು ಮೊಹರು ನಕಲು ಮಾಡಿ ಹಣವನ್ನು ಲಪಟಾಯಿಸಿದ್ದಾರೆ.

    ವಂಚನೆಯಾದ ಬಗ್ಗೆ ತಹಶೀಲ್ದಾರ್ ಅವರು ಸುರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನೈಸರ್ಗಿಕ ವಿಕೋಪದಡಿ ಸರ್ಕಾರದಿಂದ ತಹಶೀಲ್ದಾರ್ ಖಾತೆಗೆ ಕೋಟ್ಯಂತರ ರೂ. ಹಣ ಜಮಾ ಆಗಿತ್ತು, ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿರ್ವಹಣೆಗೆ ತಹಶೀಲ್ದಾರ್ ಖಾತೆಗೆ ಜಿಲ್ಲಾಡಳಿತದಿಂದಲ್ಲೂ ಸಹ ಲಕ್ಷಾಂತರ ರೂಪಾಯಿ ಜಮಾ ಮಾಡಲಾಗಿತ್ತು.

    ಕಳೆದ ಹಲವು ದಿನಗಳ ಹಿಂದೆ ತಹಶೀಲ್ದಾರ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು, ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ಸಹಿ ಮತ್ತು ಮೊಹರು ನಕಲು ಮಾಡಿ ಹಣವನ್ನು ದೋಚಲಾಗಿದೆ.

  • ಸೆ.25ಕ್ಕೆ ಕರ್ನಾಟಕ ಬಂದ್ ಇರಲ್ಲ- ಕೋಡಿಹಳ್ಳಿ ಚಂದ್ರಶೇಖರ್

    ಸೆ.25ಕ್ಕೆ ಕರ್ನಾಟಕ ಬಂದ್ ಇರಲ್ಲ- ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಕರ್ನಾಟಕ ಬಂದ್ ಕುರಿತು ನಡೆಯುತ್ತಿದ್ದ ಚರ್ಚೆಗೆ ತೆರೆ ಬಿದ್ದಿದ್ದು, ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ, ಸರ್ಕಾರದ ಮುಂದಿನ ನಡೆ ನೋಡಿಕೊಂಡು ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಇಂದು ಜೂಮ್ ಮೀಟಿಂಗ್‍ನಲ್ಲಿ ವಿವಿಧ ರೈತ ಮುಖಂಡರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸೆಪ್ಟೆಂಬರ್ 25ರಂದು ಕರ್ನಾಟಕ ಬಂದ್ ಇರುವುದಿಲ್ಲ. ಕೇವಲ ರಾಷ್ಟ್ರಿಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಇದೀಗ ಅಧಿವೇಶನ ನಡೆಯುತ್ತಿದ್ದು, ಸದನಲ್ಲಿ ಈ ಕುರಿತು ಚರ್ಚಿಸಿ ಸರ್ಕಾರ ಬಿಲ್ ಹಿಂಪಡೆಯದಿದ್ದರೆ ಬಂದ್ ದಿನಾಂಕವನ್ನು ಪ್ರಕಟ ಮಾಡುತ್ತೇವೆ ಎಂದರು.

    ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ಬಂದ್‍ಗೆ ಕರೆ ಕೊಟ್ಟಿದೆ. ಪಂಜಾಬ್ ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಚಳುವಳಿ ತೀವ್ರವಾಗಿ ನಡೆಯುತ್ತಿದೆ. ಈ ಬಂದ್‍ಗೆ ನಾವು ಬೆಂಬಲ ಕೊಡುತ್ತೇವೆ. ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆಯನ್ನು ಕೈಬಿಟ್ಟರೆ ರಾಜ್ಯ ರೈತಸಂಘದಿಂದ ಬಂದ್ ಇರಲ್ಲ. ಒಂದು ವೇಳೆ ಇದೇ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದರೆ ಬಂದ್ ಮಾಡುತ್ತೇವೆ. ಪ್ರತಿಭಟನೆ ನೋಡಿ ಯಡಿಯೂರಪ್ಪನವರು ಮನಸ್ಸು ಬದಲಿಸಬಹುದು, ಕಾದುನೋಡುತ್ತೇವೆ ಎಂದು ತಿಳಿಸಿದರು.

  • ಸಿಎಂ ಹಸಿರು ಶಾಲು ಹಾಕ್ತಾರೆ, ರಾಜ್ಯದಲ್ಲಿ ರೈತರ ಕೊಲೆ ಆಗ್ತಿದೆ-ಅನ್ನದಾತರ ರಣಕಹಳೆ

    ಸಿಎಂ ಹಸಿರು ಶಾಲು ಹಾಕ್ತಾರೆ, ರಾಜ್ಯದಲ್ಲಿ ರೈತರ ಕೊಲೆ ಆಗ್ತಿದೆ-ಅನ್ನದಾತರ ರಣಕಹಳೆ

    -ಭೂಸುಧಾರಣೆ, ಎಪಿಎಂಸಿ, ವಿದ್ಯುತ್ ಕಾಯ್ದೆ ವಿರುದ್ಧ ರೈತರ ಸಮರ
    -ಕೇಂದ್ರ ಸರ್ಕಾರದ ವಿರುದ್ಧ ನೇಗಿಲಯೋಗಿಯ ಕೂಗು
    -ಕೊರೊನಾಗೆ ಹೆದರಲ್ಲ, ನ್ಯಾಯ ನಮಗೆ ಬೇಕು

    ಬೆಂಗಳೂರು: ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇಂದು ಅಧಿವೇಶನದ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿರುವ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಸದನದಲ್ಲಿ ಮೂರು ಕಾಯ್ದೆಗಳನ್ನ ಕೈ ಬಿಡುವಂತೆ ರೈತ ಸಂಘಟನೆಗಳು ಆಗ್ರಹಿಸಿವೆ.

    ರೈತ, ಕಾರ್ಮಿಕ, ದಲಿತ ಸಂಘಟನೆ ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳಿಂದ ಬೃಹತ್ ರ‌್ಯಾಲಿ ಆರಂಭಿಸಲಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಇಬ್ಬರೂ ಮುಖಂಡರ ನಡುವೆ ಒಗ್ಗಟ್ಟು ಕಾಣಿಸುತ್ತಿಲ್ಲ. ವಿವಿಧ ಸಂಘಟನೆಗಳ ಬ್ಯಾನರ್ ಹಿಡಿದುಕೊಂಡಿರುವ ರೈತರ ಅಧಿವೇಶನ ಮುಗಿಯುವರೆಗೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

    ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕಿನವರೆಗೂ ರೈತರು ರ‌್ಯಾಲಿ ಹೊರಟ್ಟಿದ್ದು, ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ 500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಿದೆ.

    ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ತನಕ ಹೋರಾಟ ನಡೆಯಲಿದ್ದು, ಯಾವುದೇ ಕಾರಣಕ್ಕೂ ವಿಧಾನಸೌಧ ಮುತ್ತಿಗೆ ಇಲ್ಲ. ಶಾಂತಿಯುತವಾಗಿ ಜನತಾ ಸಂಸತ್ ಹೋರಾಟ ನಡೆಯಲಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಮತೋರ್ವ ರೈತ ಮುಖಂಡ ಚಾಮರಸ ಪಾಟೀಲ್, ಸಿಎಂ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ಪರ ಅಂತಾರೆ. ಆದ್ರೆ ರಾಜ್ಯದಲ್ಲಿ ರೈತರ ಕೊಲೆ ಆಗುತ್ತಿದೆ ಎಂದು ಆರೋಪಿಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ರೈತರು ಬೀದಿಗೆ ತಂದಿದೆ. ನಾವು ಸರ್ಕಾರವನ್ನು ಬೀದಿಗೆ ತರ್ತಿವಿ. ರೈತರ ಮಕ್ಕಳು ನಾವ್ ಅಂತಾರೆ. ನೀವೇ ಕೇಳಿಕೊಳ್ಳಿ ಸುಗ್ರೀವಾಜ್ಞೆ ಮಾರಕವಾಗಿದೆ. ಅಹೋ ರಾತ್ರಿ ಧರಣಿ ಮಾಡುತ್ತೇವೆ. ಈಗ ವಿಧಾನಸೌಧ ಮುತ್ತಿಗೆ ಹಾಕಿ ಬೀದಿಗೆ ತರುತ್ತೇವೆ ಎಂದು ಹೇಳಿದರು.

  • ಕುಮಾರಸ್ವಾಮಿ ವಿರುದ್ಧ ಕಟ್ಟು ಕಥೆಗಳನ್ನು ಕಟ್ಟಲಾಗುತ್ತಿದೆ – ಹೆಚ್‍ಡಿಡಿ ಕಿಡಿ

    ಕುಮಾರಸ್ವಾಮಿ ವಿರುದ್ಧ ಕಟ್ಟು ಕಥೆಗಳನ್ನು ಕಟ್ಟಲಾಗುತ್ತಿದೆ – ಹೆಚ್‍ಡಿಡಿ ಕಿಡಿ

    ನವದೆಹಲಿ: ಕುಮಾರಸ್ವಾಮಿ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರ ಪ್ರತಿ ಕೆಲಸದಲ್ಲೂ ತಪ್ಪು ಕಂಡು ಹಿಡದು ಟೀಕಿಸುವ ವ್ಯವಸ್ಥಿತ ಕೆಲಸವಾಗುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆರೋಪಿಸಿದ್ದಾರೆ.

    ಸಿಎಂ ಬಿ.ಎಸ್. ಯಡಿಯೂರಪ್ಪ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಕಟ್ಟು ಕಥೆಗಳನ್ನು ಕಟ್ಟಲಾಗುತ್ತಿದೆ ಎಂದರು.

    ಹಿಂದೆ ಸರ್ಕಾರ ಇದ್ದ ಸಂದರ್ಭದಲ್ಲಿ ರೇವಣ್ಣ ವಿರುದ್ಧ ಅಪಪ್ರಚಾರ ಮಾಡಲಾಯಿತು. ರೇವಣ್ಣ ಅವರನ್ನು ಸೂಪರ್ ಸಿಎಂ ಎಂದು ಆರೋಪಿಸುತ್ತಿದ್ದರು. ಕುಮಾರಸ್ವಾಮಿ ಯಡಿಯೂರಪ್ಪ ಭೇಟಿ ಮಾಡಿ ಕ್ಷೇತ್ರಕ್ಕೆ ಸಂಬಂಧಿಸಿದ್ದರ ಬಗ್ಗೆ ಮಾತನಾಡಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ ಎಂದರು.

    ಈಗ ಬಿಎಸ್‍ವೈ ಸರ್ಕಾರದಲ್ಲಿ ಬಿ.ವೈ ವಿಜಯೇಂದ್ರ ಅವರ ಹಸ್ತಕ್ಷೇಪದ ಆರೋಪ ಮಾಡಲಾಗುತ್ತಿದೆ. ವಿಪಕ್ಷಗಳಲ್ಲ ಸ್ವಪಕ್ಷೀಯರೇ ಹೈಕಮಾಂಡ್ ದೂರು ನೀಡಿದ್ದಾರೆ. ಇಂತಹ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

  • ಶಿಥಿಲಗೊಂಡು ಸೋರುತ್ತಿದೆ ಹಾಸನದ ನೇರ್ಲಿಗೆ ಸರ್ಕಾರಿ ಪ್ರಾಥಮಿಕ ಶಾಲೆ

    ಶಿಥಿಲಗೊಂಡು ಸೋರುತ್ತಿದೆ ಹಾಸನದ ನೇರ್ಲಿಗೆ ಸರ್ಕಾರಿ ಪ್ರಾಥಮಿಕ ಶಾಲೆ

    – ಮಕ್ಕಳನ್ನು ಶಾಲೆಗೆ ಕಳುಹಿಸಲು ಆತಂಕ

    ಹಾಸನ: ಕೊರೊನಾದಿಂದ ಉಂಟಾದ ಆರ್ಥಿಕ ಸಂಕಷ್ಟ ಪೋಷಕರನ್ನು ದಿಕ್ಕೆಡಿಸಿದ್ದು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗೆ ಸೇರಿಸುವ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಆದರೆ ಸರ್ಕಾರಿ ಶಾಲೆಗಳ ದುಸ್ಥಿತಿ ಈಗ ಪೋಷಕರನ್ನು ಮತ್ತಷ್ಟು ಆತಂಕ್ಕೀಡು ಮಾಡುತ್ತಿದೆ.

    ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 95 ವರ್ಷಕ್ಕೂ ಹೆಚ್ಚು ಹಳೆಯದಾದ ಈ ಶಾಲೆಯು ಶಿಥಿಲವಾಗಿದ್ದು ಯಾವಾಗ ಬೇಕಾದರೂ ಬಿದ್ದು ಹೋಗುವ ಹಂತದಲ್ಲಿದೆ. ಮಳೆ ಬಂದಾಗ ಶಾಲೆ ಎಲ್ಲೆಂದರಲ್ಲಿ ಸೋರುತ್ತೆ. ಇಂತಹ ಶಾಲೆಯಲ್ಲಿ ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದು ಮಕ್ಕಳು ಪಾಠ ಕೇಳಬೇಕಾದ ದುಸ್ಥಿತಿ ಇದೆ.

    ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನ ಆಗುತ್ತಿಲ್ಲ ಅನ್ನೋದು ಗ್ರಾಮಸ್ಥರ ಅಳಲಾಗಿದೆ. ಕೊರೊನಾ ಸಮಯದಲ್ಲಿ ಶಾಲೆಯನ್ನು ತೆರೆದು ಪಾಠ ಆರಂಭಿಸಿದರೆ ಮಕ್ಕಳಿಗೆ ರೋಗ ಹರಡೋ ಸಾಧ್ಯತೆ ಹೆಚ್ಚಾಗಿ ಅವರ ಪ್ರಾಣಕ್ಕೆ ಸಂಕಟವಾಗಬಹುದೆಂಬ ದುಗುಡದಲ್ಲಿ ಸರ್ಕಾರ ಇದೆ. ಆದರೆ ಈ ದುಸ್ಥಿತಿಯಲ್ಲಿರುವ ಕಟ್ಟಡವೇ ಮಕ್ಕಳ ಜೀವಕ್ಕೆ ಕಂಟಕವಾಗಬಹುದು. ಈ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.

    ಮಕ್ಕಳ ಆರೋಗ್ಯದ ಕಾರಣಕ್ಕಾಗಿ ಕೊರೊನಾ ಸಮಯದಲ್ಲಿ ಶಾಲೆ ತೆರೆಯಬೇಕೋ ಬೇಡವೋ ಎಂದು ಚಿಂತಿಸುವ ಸರ್ಕಾರಕ್ಕೆ, ಶಿಥಿಲಗೊಂಡಿರುವ ಕಟ್ಟಡಗಳು ಕೂಡ ಮಕ್ಕಳ ಪ್ರಾಣಕ್ಕೆ ಕಂಟಕವಾಗಬಹುದು ಎಂಬ ಚಿಂತನೆ ಯಾಕೆ ಬಂದಿಲ್ಲ ಎಂದು ಜನರ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಸರ್ಕಾರ ಗಮನಹರಿಸಿ ನೂತನ ಕಟ್ಟಡದ ನಿರ್ಮಿಸಿಕೊಡುವ ಮೂಲಕ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ 40 ಕೋಟಿ ಬಿಡುಗಡೆ

    ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರದಿಂದ 40 ಕೋಟಿ ಬಿಡುಗಡೆ

    ಮಡಿಕೇರಿ: ಕೊಡಗು ಜಿಲ್ಲೆ ಮೂರು ವರ್ಷಗಳಿಂದಲೂ ನಿರಂತರವಾಗಿ ಪ್ರಾಕೃತಿಕ ವಿಕೋಪದಿಂದ ತತ್ತರಿಸಿದೆ. ಜೊತೆಗೆ ಈ ಬಾರಿ ಕೊರೊನಾ ಮಹಾಮಾರಿ ಕೂಡ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಕೊಡಗಿಗೆ 40 ಕೋಟಿ ಬಿಡುಗಡೆ ಮಾಡಿದೆ.

    ಹೌದು. ಭಾರತದ ಸ್ಕಾಟ್‍ಲೆಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಕಾಡಿನೊಳಗೆ ನಡೆದ ಅನುಭವ ನೀಡುವ ಕಾವೇರಿ ನಿಸರ್ಗಧಾಮ, ಮಂಜು ಮುಸುಕಿದ ವ್ಹೀವ್ ಪಾಯಿಂಟ್ ಇರುವ ರಾಜಾಸೀಟ್, ಮುಗಿಲೆತ್ತರದ ಬೆಟ್ಟಗಳಿಗೆ ಚುಂಬಿಸಿ ಒಂದಾಗುವ ಮಂಜಿನಗರಿ ಮಾಂದಲ್‍ಪಟ್ಟಿ, ಭೋರ್ಗರೆದು, ಧುಮ್ಮಿಕ್ಕಿ ಬೆಳ್ನೊರೆಯ ಹಾಲಿನಂತೆ ಕಂಗೊಳಿಸುವ ಅಬ್ಬಿ, ಮಲ್ಲಳ್ಳಿ ಜಲಪಾತಗಳು. ಹೀಗೆ ಸಾಲು ಸಾಲು ಪ್ರವಾಸಿತಾಣಗಳು ಪ್ರವಾಸಿಗರ ಕಣ್ಮನ ಕೋರೈಸುತ್ತವೆ.

    ಆದರೆ ಮೂರು ವರ್ಷಗಳಿಂದ ಎದುರಾದ ಪ್ರಾಕೃತಿಕ ವಿಕೋಪದ ಜೊತೆಗೆ ಕೊವಿಡ್ ನಿಂದಾಗಿ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ಸ್ತಬ್ಧವಾಗಿತ್ತು. ವಾರದ ಹಿಂದೆಯಷ್ಟೇ ಮತ್ತೆ ಪ್ರವಾಸಿಗರಿಗೆ ವೀಕ್ಷಣೆಗೆ ಮುಕ್ತವಾಗಿರುವ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ 40 ಕೋಟಿ ರೂಪಾಯಿಯ ಅನುದಾನಕ್ಕೆ ಅಸ್ತು ಎಂದಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಾವಿರಾರು ಹೋಂಸ್ಟೇ, ರೆಸಾರ್ಟ್‍ಗಳು ಕೂಡ ನಡೆಯುತ್ತಿದ್ದವು. ಅವೆಲ್ಲವೂ ಸಂಪೂರ್ಣ ಸ್ತಬ್ಧವಾಗಿದ್ದು, ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಕೊರೊನಾ ಇನ್ನೂ ಕೂಡ ಹರಡುತ್ತಲೇ ಇರುವುದರಿಂದ ನಾವು ಸಹ ಎಲ್ಲಿಯೂ ಎಚ್ಚರ ತಪ್ಪದೇ ಸಾಕಷ್ಟು ಮುಂಜಾಗ್ರತೆಗಳನ್ನು ವಹಿಸಬೇಕಾಗಿದೆ.

    ಬರುವ ಪ್ರವಾಸಿಗರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ತೋರಿಸಲು ಮತ್ತು ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದು ಹೋಂಸ್ಟೇ ಮತ್ತು ರೆಸಾರ್ಟ್ ಮಾಲಿಕ ಸತ್ಯ ಹೇಳುತ್ತಾರೆ.

    ಒಟ್ಟಿನಲ್ಲಿ ಮೂರು ವರ್ಷಗಳಿಂದ ತತ್ತರಿಸಿ ಹೋಗಿರುವ ಪ್ರವಾಸೋದ್ಯಮಕ್ಕೆ ಪುನಃಶ್ಚೇತನ ನೀಡಲು ಸರ್ಕಾರ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆ ಅನುದಾನ ಸರಿಯಾಗಿ ಬಳಕೆಯಾಗಿ ಪ್ರವಾಸಿತಾಣಗಳ ಸಹಜ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.

  • ರಾಜ್ಯದಲ್ಲಿ ಇಂದಿನಿಂದ ಹೆಲ್ತ್ ಎಮರ್ಜೆನ್ಸಿ- ಕೋವಿಡ್ ಸೇರಿದಂತೆ ಯಾವುದೇ ಟ್ರೀಟ್‍ಮೆಂಟ್ ಕೊಡಲ್ಲ ಡಾಕ್ಟರ್ಸ್

    ರಾಜ್ಯದಲ್ಲಿ ಇಂದಿನಿಂದ ಹೆಲ್ತ್ ಎಮರ್ಜೆನ್ಸಿ- ಕೋವಿಡ್ ಸೇರಿದಂತೆ ಯಾವುದೇ ಟ್ರೀಟ್‍ಮೆಂಟ್ ಕೊಡಲ್ಲ ಡಾಕ್ಟರ್ಸ್

    ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಎದುರಾಗಲಿದೆ. ಕೊರೊನಾ ರಿಪೋರ್ಟ್ ಸೇರಿ ಬೇರೆ ಯಾವುದೇ ಆರೋಗ್ಯ ಸಂಬಂಧಿ ರಿಪೋರ್ಟ್ ಸಿಗಲ್ಲ. ಯಾಕಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು, ಇಂದಿನಿಂದ ಆರೋಗ್ಯ ಸೇವೆಯಲ್ಲಿ, ಕೆಲಸಗಳಲ್ಲಿ ತೊಡಗಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.

    ಆರೋಗ್ಯ ವರದಿಗಳನ್ನ ಸರ್ಕಾರಕ್ಕೆ ಸಲ್ಲಿಸದೇ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಒಂದು ವಾರದೊಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆ ಬಂದ್ ಮಾಡುತ್ತೇವೆ. ಕೇವಲ ಎಮರ್ಜೆನ್ಸಿ ಮಾತ್ರ ಓಪನ್ ಇರಲಿದೆ ಅನ್ನೋ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.

    ಐಎಎಸ್ ಅಧಿಕಾರಿಗಳ ತಮ್ಮನ್ನು ಮುಕ್ತ ಮಾಡಬೇಕು. ನಂಜನಗೂಡು ಆಸ್ಪತ್ರೆ ವೈದ್ಯರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ವೈದ್ಯಕೀಯ ಸಂಘ ಸರ್ಕಾರದ ಮುಂದೆ ಇಟ್ಟಿದೆ.

    ಬೇಡಿಕೆಗಳು ಏನೇನು?
    * ಸರ್ಕಾರದಿಂದ ಡಾಕ್ಟರ್ಸ್ ಡೇ ಮಾಡುವಂತೆ ಬೇಡಿಕೆ
    * ಕೋವಿಡ್ ವೇಳೆ ಮೃತ ಪಟ್ಟ ವೈದ್ಯರಿಗೆ ಸರ್ಕಾರ ಪರಿಹಾರ ನೀಡಿಲ್ಲ, ಪರಿಹಾರ ನೀಡುವಂತೆ ಬೇಡಿಕೆ
    * ಪ್ರಮುಖವಾಗಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯ
    * ಬಿಬಿಎಂಪಿಗೆ ನೀಡಿರುವ 48 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನ ವಾಪಸ್ ನೀಡುವಂತೆ ಒತ್ತಾಯ
    * ಡಿಸಿ ಮತ್ತು ಸಿಇಓಗಳ ದಬ್ಬಾಳಿಕೆಯನ್ನ ತಪ್ಪಿಸಿಬೇಕು

    ಪ್ರತಿಭಟನೆ ಯಾವ ರೀತಿ ಇರುತ್ತೆ ?
    * ಇಂದಿನಿಂದ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಆನ್‍ಲೈನ್ ಆಗಲಿ ಅಥವಾ ಆಫ್‍ಲೈನ್ ಆಗಲಿ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಕೋವಿಡ್ ರಿಪೋರ್ಟ್ ಗಳನ್ನು ಸಲ್ಲಿಸದಿರಲು ನಿರ್ಧಾರ
    * ರಾಷ್ಟ್ರೀಯ ಕಾರ್ಯಕ್ರಮಗಳ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಮಲೇರಿಯಾ, ಜಂತುಹುಳು, ಕುಷ್ಟರೋಗ ಸೇರಿದಂತೆ ಇನ್ನಿತರ ವರದಿಗಳನ್ನ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
    * ಡಿಸಿ ಮತ್ತು ಸಿಇಓ ಮೀಟಿಂಗ್ ಗಳಲ್ಲಿ ಭಾಗವಹಿಸದಿರಲು ನಿರ್ಧಾರ

    ಸರ್ಕಾರ ವೈದ್ಯರ ಪ್ರತಿಭಟನೆಯಿಂದ ಆಗುವ ಅನಾಹುತಗಳೇನು?
    * ಕೋವಿಡ್ ವರದಿಗಳನ್ನ ನೀಡದಿದ್ದರೆ ಮತ್ತಷ್ಟು ಕೋವಿಡ್ ಕೇಸ್ ಹೆಚ್ಚಾಗ್ತಾವೆ
    * ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಕ್ಲೋಸ್ ಮಾಡಿದ್ರೆ ಕೋವಿಡ್ ಉಲ್ಬಣಗೊಳ್ಳುತ್ತೆ
    * ರಾಜ್ಯದಲ್ಲಿ ಸಾವು ನೋವು ಹೆಚ್ಚಾಗುವ ಸಾಧ್ಯತೆ
    * ರಾಷ್ಟ್ರೀಯ ಕಾರ್ಯಕ್ರಮಗಳ ವರದಿ ನೀಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹೋಗುತ್ತೆ
    * ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಲ್ಬಣಗೊಳ್ಳುತ್ತೆ
    * ಡಿಸಿ ಮತ್ತು ಸಿಇಓ ಮೀಟಿಂಗ್‍ಗಳಿಗೆ ವೈದ್ಯರು, ವೈದ್ಯಾಧಿಕಾರಿಗಳು ಅಟೆಂಡ್ ಆಗದಿದ್ದರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಷ್ಟ

    ಇಂದಿನಿಂದ ಒಂದು ವಾರದ ಒಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆಗಳನ್ನು ಕ್ಲೋಸ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಇದೇ ತಿಂಗಳ 21 ರಿಂದ ಆಸ್ಪತ್ರೆ ಕ್ಲೋಸ್ ಮಾಡಲು ನಿರ್ಧಾರ ಮಾಡಲಾಗಿದ್ದು, ಎಮರ್ಜೆನ್ಸಿ ಮಾತ್ರ ಓಪನ್ ಮಾಡಲಾಗುತ್ತಿದೆ. ಅಲ್ಲದೇ ಸೆಪ್ಟೆಂಬರ್ 21 ರಿಂದ ಬೆಂಗಳೂರು ಚಲೋ ಆರಂಭ ಮಾಡಲಿದ್ದಾರೆ. ಬೆಂಗಳೂರು ಚಲೋ ಆರಂಭ ಮಾಡಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.

  • ಹೆಸರಿಗೆ ಮಾತ್ರ ಸರಳ ದಸರಾ – ಬಿಡುಗಡೆಯಾಗಿದೆ 15 ಕೋಟಿ ಹಣ

    ಹೆಸರಿಗೆ ಮಾತ್ರ ಸರಳ ದಸರಾ – ಬಿಡುಗಡೆಯಾಗಿದೆ 15 ಕೋಟಿ ಹಣ

    – ಸರಳ ದಸರೆಗೆ 15 ಕೋಟಿ ಯಾಕೆ?
    – ಚರ್ಚೆಗೆ ಗ್ರಾಸವಾಗಿದೆ ಸರ್ಕಾರದ ನಡೆ

    ಮೈಸೂರು: ಕೊರೊನಾ ಭೀತಿಯಲ್ಲಿ ಈ ಬಾರಿ ಅತಿ ಸರಳ ದಸರಾ ನಡೆಸಲು ಸರ್ಕಾರ ಮುಂದಾಗಿದೆ. ಅತಿ ಸರಳ ದಸರಾ ಅಂದರೆ ದಸರಾ ವೆಚ್ಚವೂ ಅತಿ ಕಡಿಮೆ ಆಗಬೇಕು. ಆದರೆ ಸರ್ಕಾರ ಸರಳ ದಸರಕ್ಕೂ ಎಂದಿನಂತೆ 15 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿದೆ. ಇದನ್ನೂ ಓದಿ: ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    ಸರಳ ದಸರಾಗೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂಪಾಯಿ ನೀಡುತ್ತಿದೆ. ಅಲ್ಲಿಗೆ ದಸರಾಗೆ 15 ಕೋಟಿ ರೂಪಾಯಿ ಸಿಕ್ಕಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದಸರಾ ಉದ್ಘಾಟನೆ, ವಿಜಯದಶಮಿ ದಿನ ಅರಮನೆಯ ಒಳಗೆ ಜಂಬೂ ಸವಾರಿ ಹಾಗೂ ಅರಮನೆ ಆವರಣದಲ್ಲಿ 8 ದಿನ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ನಡೆಯಲಿದೆ. ಇಷ್ಟು ಮಾಡಲು 15 ಕೋಟಿ ರೂಪಾಯಿ ಏಕೆ ಎಂಬುದೇ ದೊಡ್ಡ ಪ್ರಶ್ನೆ.ಇದನ್ನೂ ಓದಿ: ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆ – ಏನಿರುತ್ತೆ? ಏನಿರಲ್ಲ?

    ರಾಜಕಾರಣಿಗಳು, ಅಧಿಕಾರಿಗಳು ಹಣ ಮಾಡಲು ಇಷ್ಟೊಂದು ಪ್ರಮಾಣದಲ್ಲಿ ಹಣ ನಿಗದಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಈ ಬಾರಿ ಯಾವುದೇ ದಸರಾ ಉಪ ಸಮಿತಿಗಳಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ, ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿದೆ. ಇವುಗಳು ಇಲ್ಲದೇ ಇರುವಾಗ 15 ಕೋಟಿ ಹಣವನ್ನು ಎಲ್ಲಿ ಹೇಗೆ ಖರ್ಚು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆಯೇ ಬೇರೆ ರೀತಿ ಇದೆ. ಸರ್ಕಾರ ಹಣ ನೀಡಿರುವುದು ಕೇವಲ ದಸರಾ ಆಚರಣೆಗೆ ಮಾತ್ರವಲ್ಲ. ಸಮಗ್ರ ಮೈಸೂರು ಅಭಿವೃದ್ಧಿಗಾಗಿ. ಇದರಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಅಗತ್ಯಗಳಿಗೆ ಹಣ ಬಳಸಲಾಗುತ್ತದೆ. ಒಂದು ರೂಪಾಯಿಯೂ ದುರುಪಯೋಗ ಆಗಲು ಬಿಡುವುದಿಲ್ಲ. ಹಣದ ಬಳಕೆ ಪರಿಪೂರ್ಣ ಲೆಕ್ಕವನ್ನು ದಸರಾ ನಂತರ ನೀಡುತ್ತೇನೆ. ಕೊರೊನಾ ಸಂಕಷ್ಟ ಕಾಲದಲ್ಲೂ ದಸರಾಗೆ ಹಣ ನೀಡಿದೆ. ಇದರ ಸದುಪಯೋಗ ಮಾಡಿಕೊಳ್ಳುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ದಸರಾಗೆ ಉಳಿದಿರುವುದು ಇನ್ನೂ 30 ದಿನ ಮಾತ್ರ. ಇನ್ನೂ ರಸ್ತೆ ಕಾಮಗಾರಿಯ ರೂಪುರೇಷೆ ಸಿದ್ಧವಾಗಿಲ್ಲ. ಇದರ ನಡುವೆ ಮಳೆಯೂ ಬರುತ್ತಿದೆ. ಕಾಮಗಾರಿ ನಡೆಸಲು ಮಳೆ ಅಡಿಯಾಗುತ್ತದೆ. ಹೀಗಾಗಿ ಈ ಬಾರಿಯ ದಸರಾಗೆ ಬಿಡುಗಡೆಯಾಗಿರುವ ಹಣದ ಬಗ್ಗೆ ಭಾರೀ ಅನುಮಾನ ಮೂಡಿದೆ.