ತುಮಕೂರು: ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿರುವುದು ನನಗೆ ಅಚ್ಚರಿ ತಂದಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರ ರಚನೆ ನನಗೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಇದರ ಬದಲು ಎಲ್ಲಾ ಸಮಾಜ ಜಾತಿಯಲ್ಲಿ ಇದ್ದಂತಹ ಹಿಂದುಳಿದವರು ಹಾಗೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅಂಥವರಿಗೆ ಹೆಚ್ಚು ಒತ್ತುಕೊಡುವ ಕೆಲಸ ಸರ್ಕಾರ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಎಲ್ಲಾ ಸಮಾಜದಲ್ಲೂ ತುಂಬಾ ಬಡವರಿದ್ದಾರೆ. ಬಡತನದ ಶ್ರೇಣಿ ಹೆಚ್ಚಿದೆ. ಆರ್ಥಿಕವಾಗಿ ಕಷ್ಟದಲ್ಲಿದ್ದವರಿಗೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು. ಸರ್ಕಾರ ಒತ್ತು ಕೊಡುತ್ತಿದೆ. ಈ ನಡುವೆ ಕೆಲ ಬೆಳವಣಿಗೆಗಳು ನಡೀತಿದೆ. ಇಡೀ ರಾಜ್ಯದ ಅಭಿವೃದ್ಧಿಗೆ ಇಡೀ ಸರ್ಕಾರ ಇರೋದು ಎಂದು ಅಸಮಾಧಾನ ಹೊರಹಾಕಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಅವಕಾಶ ಕೊಡುವ ವ್ಯವಸ್ಥೆ ಕಲ್ಪಿಸಿಕೊಟ್ಟರೆ ತುಂಬಾ ಸಂತೋಷ. ಒಂದು ಜಾತಿ ಪ್ರಾಧಿಕಾರ ಮಾಡಿದರೆ ಮುಂದು ಪ್ರತಿಯೊಬ್ಬರೂ ಕೇಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಆದೇಶ
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯದ ನಾಯಕರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಯಡಿಯೂರಪ್ಪನವರು ಇಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ರಾಯಚೂರು: ಉಪಚುನಾವಣೆ ಘೋಷಣೆಗೂ ಮುನ್ನವೇ ಮಸ್ಕಿ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ.
ನೆನೆಗುದಿಗೆ ಬಿದ್ದಿರುವ ಕ್ಷೇತ್ರದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 110 ಕೋಟಿ ರೂಪಾಯಿಯ ಯೋಜನೆಗಳಿಗೆ ಮಂಜೂರು ಮಾಡಲಾಗಿದೆ.
ಮಸ್ಕಿ ನಾಲಾ ಯೋಜನೆಯ ಕಾಲುವೆ ಅಧುನೀಕರಣ, ನೀರಾವರಿ ಇಲಾಖೆಯ ರಸ್ತೆಗಳು, ಲೋಕೊಪಯೋಗಿ ಇಲಾಖೆ, ಬಿಆರ್ ಜಿಎಫ್ ಯೋಜನೆಯಲ್ಲಿ ಅನುದಾನ ನಿಡಲಾಗಿದೆ. ಅನುದಾನ ಬಿಡುಗಡೆಯ ಬಗ್ಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಚುನಾವಣೆ ದಿನಾಂಕ ಘೋಷಣೆಯ ಮುನ್ನ ಅಭಿವೃದ್ಧಿ ಪರ ಎಂದು ಬಿಂಬಿಸಲು ಯತ್ನಿಸಲಾಗಿದೆ.
ಧಾರವಾಡ: ಒಂದು ಕಡೆ ಬಡವರ ಪರ ಸರ್ಕಾರ ಎಂದು ಹೇಳಿಕೊಳ್ಳುತ್ತೆ. ಆದರೆ ಅದೇ ಬಡವರಿಗೆ ಒಂದು ಹೊತ್ತಿನ ಅನ್ನ ಹಾಕೋಕೆ ಆಗ್ತಿಲ್ಲ. ಹೀಗಾಗಿ ಬಡ ಮಕ್ಕಳು ಈಗ ಬೀದಿಯಲ್ಲಿ ಭಿಕ್ಷೆಗೆ ಇಳಿದು ಬಿಟ್ಟಿದ್ದಾರೆ.
ಹೌದು. ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ನಗರದಲ್ಲಿ ಹೆಚ್ಚಿನ ವಿದ್ಯಾವಂತರು, ಬುದ್ಧಿವಂತರು ಇದ್ದಾರೆ ಎಂದು ಹೇಳ್ತಾರೆ. ಆದರೆ ಅದೇ ಧಾರವಾಡದಲ್ಲಿ ಈಗ ಮಕ್ಕಳು ಹಸಿವು ನೀಗಿಸಿಕೊಳ್ಳಲು ಎಲ್ಲಿ ನೋಡಿದ್ರಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ. ಧಾರವಾಡ ನಗರದಲ್ಲಿ ಕೆಲ ಪೋಷಕರೇ ತಮ್ಮ ಮಕ್ಕಳನ್ನ ಭಿಕ್ಷೆ ಬೇಡಲು ಮಾರುಕಟ್ಟೆಯಲ್ಲಿ ತೆಗೆದುಕೊಂಡು ಬಂದಿದ್ರೆ, ಇನ್ನೂ ಕೆಲವು ಮಕ್ಕಳು ತಮ್ಮ ಮನೆಯಲ್ಲೇ ಗೊತ್ತಿಲ್ಲದಂತೆ ಬಂದು ಭಿಕ್ಷೆ ಬೇಡುತ್ತಿದ್ದಾರೆ. ಧಾರವಾಡದಲ್ಲಿ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಹಳ್ಳಿಯಿಂದ ಬಂದಿದ್ದ ಮೂರನೇ ತರಗತಿ ಬಾಲಕಿಯೊಬ್ಬಳು, ತಾಯಿಗೆ ಹುಷಾರಿಲ್ಲ. ಅದಕ್ಕೆ ನಾನು ಕಾಯಿಪಲ್ಲೆ ತರಲು ಬಂದಿದ್ದೆ ಎಂದು ಸುಳ್ಳು ಹೇಳಿದ್ದಾಳೆ.
ಮತ್ತೊಂದು ಕಡೆ ನಗರದ ಕಂಠಿ ಗಲ್ಲಿ ಬಳಿ ಇರುವ ಜೋಪಡಿಯ ಮಕ್ಕಳಂತೂ ಪ್ರತಿ ದಿನ ಇದೇ ನಗರದ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯ ಸಾಮಾನ್ಯವಾಗಿವೆ. ಈ ಮಕ್ಕಳ ಪೋಷಕರನ್ನು ಕೇಳಿದ್ರೆ, ಮಕ್ಕಳು ಹಸಿವು ನೀಗಿಸಲು ಭಿಕ್ಷೆ ಬೇಡುತ್ತಿದ್ದಾರೆ, ನಾವು ದುಡಿಯೊಕೆ ಹೊದಾಗ ಎಲ್ಲಿಯಾದ್ರೂ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಸರ್ಕಾರ ಇದೇ ಬಿಸಿಯೂಟ ಆರಂಭಿಸಿದ್ರೆ, ಮಕ್ಕಳು ಶಾಲೆಯಲ್ಲಿ ಊಟ ಮಾಡಿ ಬರುತ್ತಿದ್ದವು. ಆದರೆ ಈಗ ಊಟ ಇಲ್ಲದೇ ಭಿಕ್ಷೆ ಬೇಡುವಂತೆ ಆಗಿದೆ ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಸರ್ಕಾರದ ಬಿಸಿಯೂಟ ಇಲ್ಲದೇ ಮಕ್ಕಳು ಬೀದಿಗೆ ಬಂದು ಭಿಕ್ಷೆ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವಂತೆ ಆಗಿದೆ. ಆದರೆ ಸರ್ಕಾರ ಈ ಮಕ್ಕಳನ್ನ ಭಿಕ್ಷೆ ಬೇಡುವುದರಿಂದ ದೂರ ಉಳಿಸಬೇಕಾಗಿದೆ.
ಬೆಳಗಾವಿ/ಚಿಕ್ಕೋಡಿ: ತಿನ್ನಲು ಕರ್ನಾಟಕದ ಅನ್ನ, ಉಸಿರಾಡಲು ಕನ್ನಡದ ಗಾಳಿ, ಕುಡಿಯಲು ಕನ್ನಡದ ನೀರು ಬೇಕು. ಆದರೆ ಕೆಲವರಿಗೆ ಕನ್ನಡ ಭಾಷೆ ಮಾತ್ರ ಬೇಡವಾಗಿದೆ.
ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಡಗರ ಸಂಭ್ರಮ ರಾಜ್ಯದೆಲ್ಲೆಡೆ ಇರುತ್ತದೆ. ಆದರೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಾಜ್ಯೋತ್ಸವ ಸಂಭ್ರಮಾಚರಣೆ ಕೇವಲ ಸರ್ಕಾರದ ಕಾರ್ಯಾಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದರಲ್ಲೂ ನಿಪ್ಪಾಣಿ ನಗರ ಹಾಗೂ ನಿಪ್ಪಾಣಿ ತಾಲೂಕಿನ ಬಹುತೇಕ ಕಡೆ ಕನ್ನಡವೇ ಮಾಯವಾಗಿ ಬಿಟ್ಟಿದೆ.
ನಿಪ್ಪಾಣಿ ನಗರ ಸಂಪೂರ್ಣ ಮರಾಠಿ ಭಾಷೆಯ ಪ್ರಭಾವಕ್ಕೆ ಒಳಗಾಗಿ ಕನ್ನಡ ಭಾಷೆ ತನ್ನ ಪ್ರಭಾವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಈ ನಗರದಲ್ಲಿನ ಬಹುತೇಕ ಅಂಗಡಿಗಳ ಫಲಕಗಳು ಮರಾಠಿಮಯವಾಗಿವೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ನಿಪ್ಪಾಣಿ ನಗರದಲ್ಲಿ ಕನ್ನಡದ ಫಲಕಗಳು ಸಿಗುವುದೇ ಅಪರೂಪ. ಇಲ್ಲಿನ ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಇಲ್ಲಿ ಕನ್ನಡವೇ ಮಾಯವಾಗಿದೆ.
ಶೇ.70 ರಷ್ಟು ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ಸರ್ಕಾರದ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಲ್ಲಿನ ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿ ಭಾಷೆಯಲ್ಲಿಯೇ ಬರೆಸಲಾಗಿದೆ. ಇಲ್ಲಿನ ಜನಪ್ರತಿನಿಧಿಗಳಂತೂ ಕನ್ನಡ ಭಾಷೆಯನ್ನೇ ಮರೆತು ನಿಪ್ಪಾಣಿ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಶಾಸಕರು ಹಾಗೂ ನಿಪ್ಪಾಣಿ ತಾಲೂಕಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಂಗಡಿಗಳ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿಪ್ಪಾಣಿ ಚಲೋ ನಡೆಸಿ ಕನ್ನಡದ ನಾಮಫಲಕಗಳನ್ನು ಅಳವಡಿಸಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ನಿಪ್ಪಾಣಿ ತಾಲೂಕಾಡಳಿತವೇ ಹೊಣೆಯಾಗಲಿದೆ ಎಂದು ಕರವೇ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ನೂರಾರು ಗ್ರಾಮಗಳು ಜಲಾವೃತವಾಗಿವೆ. ಅದೇ ರೀತಿ ಬೆಂಗಳೂರಿನಲ್ಲಿ ಸಹ ನಿರೀಕ್ಷೆಗೂ ಮೀರಿ ಮಳೆಯಾಗಿ ಬಹಳ ಅನಾಹುತವಾಗಿದೆ. ಒಂದೆಡೆ ಕೊರೊನಾ ಮತ್ತೊಂದೆಡೆ ಅತಿವೃಷ್ಟಿಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೆಲ್ಲಾವನ್ನು ಎದುರಿಸುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಎಲ್ಲಾ ಸಂಕಷ್ಟವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ಉದ್ಘಾಟನೆ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಮುಂದುವರಿದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ, ಕಳೆದ ನಾಲ್ಕೈದು ದಿನದಲ್ಲಿ ಬೆಂಗಳೂರಿನಲ್ಲಿ ಕಂಡು ಕೇಳರಿಯದ ಮಳೆ ಆಗಿದೆ. ಶನಿವಾರ ಮುಂಜಾನೆಯಿಂದ ಸಂಜೆಯವರೆಗೆ ಹಲವು ವಾರ್ಡ್ ಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಸುಮಾರು 600ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು.
ಹಾನಿಗೊಳಗಾದ ಪ್ರತಿಯೊಂದು ಮನೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಚೆಕ್ ವಿತರಣೆ ಸಹ ನಡೆಯುತ್ತಿದೆ. ಸಂಕಷ್ಟ ಬಂದಾಗ ಅದಕ್ಕೆ ಹೆದರಿ ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದನ್ನು ಎದುರಿಸಿ ಜನರ ಸಮಸ್ಯೆಗೆ ಸ್ಪಂದಿಸಿ ಅವರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಮಾಡುವುದು ಒಬ್ಬ ಮುಖ್ಯಮಂತ್ರಿಯ ಕರ್ತವ್ಯ. ಆ ದಿಕ್ಕಿನಲ್ಲಿ ಎಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಆರ್.ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಹಳ ದೊಡ್ಡ ಅಂತರ ಗೆಲ್ಲುತ್ತಾರೆ. ಅದೇ ರೀತಿ ಶಿರಾದಲ್ಲಿ ಸಹ ನೂರಕ್ಕೆ ನೂರರಷ್ಟು ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ನಾನು ವಿರೋಧ ಪಕ್ಷದ ನಾಯಕರಿಗೆ ವಿಧಾನ ಸಭೆಯಲ್ಲಿ ಒಂದು ಮಾತು ಹೇಳಿದ್ದೆ. ಬರುವಂತಹ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವುದೇ ನನ್ನ ಗುರಿ ಎಂದಿದ್ದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ದೃಷ್ಟಿಯಿಂದ ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡುತ್ತೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನು ಎರಡೂವರೆ ವರ್ಷ ಕಾಲ ನಿರಂತರವಾಗಿ ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ ಮಾಡುವುದಾಗಿ ಸಿಎಂ ಬಿಎಸ್‍ವೈ ಹೇಳಿದರು.
ಚಿಕ್ಕಮಗಳೂರು: ಮನೆಗೆ ಒಂದು ಟಿವಿ ಇದ್ದರೆ ಜಗಳ ನಡೆಯುವುದು ಸಾಮಾನ್ಯ. ಒಬ್ಬರು ನ್ಯೂಸ್ ನೋಡಬೇಕು ಅಂತಾರೆ. ಮತ್ತೊಬ್ಬರು ಸಿನಿಮಾ ಬೇಕು ಅಂತಾರೆ. ಮಗದೊಬ್ಬರು ಧಾರಾವಾಹಿ ಬೇಕು ಅಂತಾರೆ. ಕೆಲವರು ಸಿಟ್ಟಾಗಿ ರೂಂ ಸೇರುತ್ತಾರೆ. ಆದರೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಸಮೀಪದ ಗೋಪಾಲ ಕಾಲೋನಿಯಲ್ಲಿ ಇಡೀ ಗ್ರಾಮಕ್ಕೆ ಇರೋದೊಂದೆ ಟಿವಿ.
ಆಶ್ಚರ್ಯ ಅನ್ನಿಸಿದರು ನಂಬಲೇಬೇಕು. ಇಲ್ಲಿ ಸುಮಾರು 80-90 ಮನೆಗಳಿವೆ. 150 ಜನರಿದ್ದಾರೆ. ಈ 150 ಜನರಿಗೆ ಇರುವುದೊಂದೆ ಟಿವಿ. ಅದರಲ್ಲೇ ಎಲ್ಲರೂ ನೋಡಬೇಕು. ಅದು ಕೂಡ ಸಂಜೆ ಆರಕ್ಕೆ ಬಂದು ಬೆಳಗ್ಗೆ ಆರಕ್ಕೆ ಹೋಗೋ ಕರೆಂಟ್‍ನಲ್ಲಿ. ಈ ಗ್ರಾಮದಲ್ಲಿ ಕರೆಂಟ್ ಕೂಡ ಇಲ್ಲ. ಇಂದಿಗೂ ಇಲ್ಲಿ ಸಿಮೇಎಣ್ಣೆ ದೀಪದ ಬೆಳಕಲ್ಲಿ ಜನ ಬದುಕುತ್ತಿದ್ದಾರೆ. ಬೀದಿ ದೀಪವನ್ನು ಸಮುದಾಯ ಭವನಕ್ಕೆ ಎಳೆದುಕೊಂಡಿದ್ದಾರೆ. ಅದರಲ್ಲೇ ಮೊಬೈಲ್ ಚಾರ್ಜ್, ಟಿವಿ ಎಲ್ಲಾ. ಆದರೆ ಇಡೀ ಊರಿಗೆ ಒಂದೇ ಒಂದು ಟಿವಿ ಇದ್ದರೂ ಕೂಡ ಒಂದೇ ಒಂದು ದಿನ ಕೂಡ ಗ್ರಾಮಸ್ಥರ ಮಧ್ಯೆ ಮನಸ್ತಾಪ ಬಂದಿಲ್ಲ ಅನ್ನೋದು ಮತ್ತೊಂದು ವಿಶೇಷ.
ಗ್ರಾಮಸ್ಥರ ಮಧ್ಯ ಈ ಒಗ್ಗಟ್ಟಿಗೆ ಗ್ರಾಮಸ್ಥರೇ ಮಾಡಿಕೊಂಡ ನಿರ್ಣಯವೇ ಕಾರಣ. ಅದನ್ನ ಕೇಳಿದರೆ ನೀವು ಮತ್ತೊಮ್ಮೆ ಆಶ್ಚರ್ಯಚಕಿತರಾಗುತ್ತೀರಾ. ಯಾಕೆಂದರೆ ಬುಧವಾರ ಮಲೆಯಾಳಿಗಳು. ಗುರುವಾರ ತಮಿಳಿಗರು. ಶುಕ್ರವಾರ ಮುಸ್ಲಿಮರು. ಶನಿವಾರ-ಭಾನುವಾರ ಹಿಂದುಗಳು. ಸೋಮವಾರ ಧಾರಾವಾಹಿ. ಮಂಗಳವಾರ ಸಿನಿಮಾ. ಬುಧವಾರ ಮತ್ತದೆ ರೊಟೀನ್. ಭಾರತದ ಕ್ರಿಕೆಟ್ ಮ್ಯಾಚ್ ಇದ್ದರೆ ಯಾರೂ ನೋಡುವಂತಿಲ್ಲ. ಹುಡುಗರು ಕ್ರಿಕೆಟ್ ನೋಡುತ್ತಾರೆ. ಅಷ್ಟೆ ಅಲ್ಲದೆ ಇವರು ದಿನಕ್ಕೆ ಟಿವಿ ನೋಡೋದು ಕೇವಲ ನಾಲ್ಕೈದು ಗಂಟೆಯಷ್ಟೇ. ಸಂಜೆ ಆರರಿಂದ ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆವರೆಗೆ ಅಷ್ಟೇ. ಇರೋದು ಎರಡೇ ಪ್ಲಗ್. ಒಂದು ಟಿವಿಗೆ ಮತ್ತೊಂದು ಮೊಬೈಲ್‍ಗೆ. ಒಬ್ಬರಾದ ಮೇಲೆ ಒಬ್ಬರು ಮೊಬೈಲ್ ಚಾರ್ಜ್‍ಗೆ ಹಾಕಿಕೊಳ್ಳಬೇಕು. ಕಳೆದ ಒಂದೂವರೆ ದಶಕದಿಂದಲೂ ಇವರ ಟಿವಿ ಬದುಕು ಹೀಗೆ ಇರೋದು.
ಇಲ್ಲಿ ವಾಸವಿರೋರೆಲ್ಲಾ ಕುದುರೆಮುಖ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಬಹುತೇಕರು ಹುಟ್ಟಿ ಬೆಳೆದಿರೋದು ಇದೇ ಊರಲ್ಲಿ. ಕಂಪನಿ ಕ್ಲೋಸ್ ಆದ ಮೇಲೆ ಸುತ್ತಮುತ್ತಲಿನ ಹಳ್ಳಿ, ತೋಟಗಳಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಪಡಿತರ ಚೀಟಿ ಪ್ರಕಾರ ಇಲ್ಲಿ 250 ಕುಟುಂಬಗಳು ವಾಸವಿವೆ. ಆದರೆ ಮಕ್ಕಳ ಓದು, ಕೂಲಿ, ಬದುಕಿನ ಅನಿವಾರ್ಯವಾಗಿ ಸುತ್ತಮುತ್ತಲಿನ ಊರುಗಳಲ್ಲಿ ವಾಸವಿದ್ದಾರೆ. ಇಲ್ಲಿ 80-90 ಕುಟುಂಬಗಳು ವಾಸವಿವೆ. ಕುದುರೆಮುಖ ಅಂದರೆ ಕೇಳೋದೆ ಬೇಡ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ವರ್ಷದಲ್ಲಿ ಸರಿಸುಮಾರು ಆರೇಳು ತಿಂಗಳು ಕರೆಂಟ್ ಇರಲ್ಲ. ಇದ್ದಾಗ ಸಂಜೆ ಆರರ ಬಳಿಕ ಬರುವ ಕರೆಂಟನ್ನೇ ಇವರು ನೆಚ್ಚಿಕೊಂಡಿದ್ದಾರೆ.
ಆಗ ಸಂಜೆ ಆರರಿಂದ ರಾತ್ರಿ 10 ರಿಂದ 11 ಗಂಟೆವರೆಗೆ ಟಿವಿ ನೋಡುತ್ತಾರೆ. 2005 ರಿಂದ ಇವರ ಟಿವಿ ಬದುಕು ಹೀಗೆ ಇರೋದು. ಆದರೆ ಇಂದಿಗೂ ಗ್ರಾಮಸ್ಥರ ಮಧ್ಯೆ ಒಂದೇ ಒಂದು ಸಣ್ಣ ಮನಸ್ತಾಪ ಕೂಡ ಬಂದಿಲ್ಲ. ದುರಂತ ಅಂದರೆ, ಇದೀಗ ಈ ಟಿವಿ ಕೂಡ ಕೆಟ್ಟೋಗಿದೆ. ಈಗ ಇವರಿಗೆ ಕರೆಂಟ್ ಇದ್ದಾಗ ರಾತ್ರಿ ಚಾರ್ಚ್ ಆದ ಮೊಬೈಲ್ ಬದುಕಾಗಿದೆ. 2021ನೇ ಇಸವಿಯಲ್ಲಿ ಕರೆಂಟ್ ಇಲ್ಲದ ಗ್ರಾಮ ಅಂದರೆ ಇದೊಂದೆ ಅಂತ ನೋವಿನಿಂದ ಮಾತನಾಡುತ್ತಾರೆ ಇಲ್ಲಿನ ಜನ.
ಇಲ್ಲಿನ ಜನ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಊರನ್ನು ಎಂ.ಪಿ. ಅಥವಾ ಎಂ.ಎಲ್.ಎ. ಇವರಿಬ್ಬರೇ ಅಭಿವೃದ್ಧಿ ಮಾಡಬೇಕು. ಇವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಲ್ಲ. ಆದರೆ ಶಾಸಕರು ಹಾಗೂ ಸಂಸದರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಅಂತಾರೆ ಸ್ಥಳೀಯರು.
ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಇದೆ. ಅದೇ ರೀತಿ ವಿಧಾನ ಪರಿಷತ್‍ನಲ್ಲಿಯೂ ಬಹುಮತ ಬೇಕಿದೆ. ಪದವೀಧರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಬೆಂಬಲಿಸಿ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್ ಅವರು, ಈಗಾಗಲೇ ಜನರು ಬಿಜೆಪಿಯ ಕಾರ್ಯ ವೈಖರಿಯನ್ನು ನೋಡಿದ್ದಾರೆ. ಅಲ್ಲದೇ ಜನರಿಗೆ ಬಿಜೆಪಿಯ ಬಗ್ಗೆ ವಿಶ್ವಾಸವಿದೆ ಎಂದರು. ಕೆಐಎಡಿಬಿ ದರ ಏರಿಕೆ ಕುರಿತು ಮಾತನಾಡಿದ ಅವರು, ನಿರ್ದೇಶನದ ಮೇರೆಗೆ ಪರಿಷ್ಕೃತ ದರವನ್ನು ನಿಗದಿ ಮಾಡಲಾಗಿದೆ. ಈ ಕುರಿತು ಇನ್ನೊಮ್ಮೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಬೆಳಗಾವಿ ಲೋಕಸಭಾ ಉಪ ಚುನಾವಣೆ ಕುರಿತು ಮಾತನಾಡಿದ ಅವರು, ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಟಿಕೆಟ್ ಯಾರಿಗೆ ನೀಡಬೇಕು ಎಂಬುದರ ಕುರಿತು ಇನ್ನೂ ಚರ್ಚೆಯಾಗಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಗುವುದು ಎಂದ ಅವರು, ನನಗೆ ಟಿಕೆಟ್ ನೀಡಲು ಚರ್ಚೆಯಾಗಿದೆ ಎಂದು ಯಾರೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಲೋಕಸಭಾ ಟಿಕೆಟ್ ನನಗೆ ಸಿಕ್ಕರೆ ನನ್ನ ಕುಟುಂಬಸ್ಥರಿಗೆ ವಿಧಾನಸಭೆ ಟಿಕೆಟ್‍ಗಾಗಿ ಬೇಡಿಕೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಆ ರೀತಿ ಯಾವುದೇ ಚರ್ಚೆಯಾಗಿಲ್ಲ. ಕೇವಲ ಊಹಾಪೋಹಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದರು.
ಮೈಸೂರು: ಶಾಸಕರಿಗೆ ಸರ್ಕಾರ ನೀಡುವ ವೈದ್ಯಕೀಯ ವೆಚ್ಚವನ್ನು ಪಡೆಯುವ ವಿಚಾರದಲ್ಲಿ ಮೈಸೂರಿನ ಶಾಸಕ ಜಿ.ಟಿ. ದೇವೇಗೌಡ ಮಾದರಿಯಾಗಿದ್ದಾರೆ.
ಕೊರೊನಾ ಸೋಂಕಿನ ನಿಯಂತ್ರಣಕ್ಕೆ ತರಲು ಸರ್ಕಾರ ಹೆಣಗಾಡುತ್ತಿದೆ. ಇದರ ನಡುವೆಯೇ ಆರ್ಥಿಕ ಸಂಕಷ್ಟ ಸುಧಾರಣೆ ಮಾಡಲು ಸಾಲವನ್ನು ಪಡೆಯಲು ಮುಂದಾಗಿದೆ. ಇದೇ ವೇಳೆ ಕೊರೊನಾಗೆ ತುತ್ತಾಗಿ ಗುಣಮುಖರಾಗಿರುವ ಜನಪ್ರತಿನಿಧಿಗಳ ಮತ್ತು ಕುಟುಂಬಸ್ಥರ ಆಸ್ಪತ್ರೆ ಬಿಲ್ ವೆಚ್ಚದ ಹೊರೆಯೂ ಸರ್ಕಾರ ಮೇಲೆ ಬಿದ್ದಿದೆ. ಆದರೆ ಇದಕ್ಕೆ ಜಿ.ಟಿ. ದೇವೇಗೌಡ ವಿರುದ್ಧವಾಗಿದ್ದು, ಅವರು ಎಂದಿಗೂ ಸರ್ಕಾರದಿಂದ ವೈದ್ಯಕೀಯ ವೆಚ್ಚವನ್ನು ತೆಗೆದುಕೊಂಡಿಲ್ಲ.
ಜಿ.ಟಿ. ದೇವೇಗೌಡ, ಇದುವರೆಗೂ ಸರ್ಕಾರದಿಂದ ವೈದ್ಯಕೀಯ ಬಿಲ್ ಪಡೆದಿಲ್ಲ. ಪ್ರಥಮ ಬಾರಿ ಶಾಸಕರಾದಗಲೇ ತಮ್ಮ ವೈದ್ಯಕೀಯ ವೆಚ್ಚ ಪಡೆಯುವುದನ್ನು ನಿರಾಕರಿಸಿ ತಮಗೆ ಬಳಸುವ ಹಣವನ್ನು ಬಡವರ ಚಿಕಿತ್ಸೆಗೆ ಬಳಸುವಂತೆ ಹೇಳಿದ್ದಾರೆ. ಹೀಗಾಗಿ ಇವರು ಸರಕಾರದಿಂದ ಯಾವತ್ತಿಗೂ ವೈದ್ಯಕೀಯ ವೆಚ್ಚ ಪಡೆದೆ ಇಲ್ಲ. ಜಿ.ಟಿ. ದೇವೇಗೌಡ ಈ ಹೆಜ್ಜೆ ರಾಜ್ಯದ ಶಾಸಕರಿಗೆ ಮಾದರಿಯಾಗಿದೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸರ್ಕಾರಕ್ಕೆ ಬಿಲ್- ರಾಜ್ಯದ ಶಾಸಕರ ಕೊರೊನಾ ‘ಬಿಲ್’ವಿದ್ಯೆ
ಕೊರೊನಾ ಸೋಂಕಿಗೆ ತುತ್ತಾಗಿರುವ ರಾಜ್ಯದ ಹಲವು ಜನ ಪ್ರತಿನಿಧಿಗಳು, ಅವರ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ವೇಳೆ ಚಿಕಿತ್ಸೆ ಪಡೆದ ಆಸ್ಪತ್ರೆಯ ವೆಚ್ಚದ ಬಿಲ್ ಮರುಪಾವತಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಕುಟುಂಬಸ್ಥರ ಕೋವಿಡ್ ಬಿಲ್ ಲಕ್ಷ ಲಕ್ಷ ಆಗಿದ್ದು, ಆಸ್ಪತ್ರೆ ವೆಚ್ಚದ ಬಿಲ್ ಗಳನ್ನು ವಿಧಾನಸಭೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
ಬೆಂಗಳೂರು: ಪಬ್ಲಿಕ್ ಟಿವಿಯ ನಿರಂತರ ವರದಿಯ ಬೆನ್ನಲ್ಲೇ ವಿವಾದಾತ್ಮಕ ಯೋಜನೆಯನ್ನು ಕೈ ಬಿಡಲು ಸರ್ಕಾರ ನಿರ್ಧರಿಸಿದ್ದು, ವಿದ್ಯಾಗಮ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ.
ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲಾವಾರು ಅಂಕಿ-ಅಂಶ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಅಂಕಿ-ಅಂಶಗಳ ವಿಶ್ಲೇಷಣೆ ಆಗೋವರೆಗೂ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿದ್ಯಾಗಮ ಸ್ಥಗಿತಕ್ಕೆ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ಗೆ ಸಿಎಂ ಯಡಿಯೂರಪ್ಪ ಕರೆ ಮಾಡಿದ್ದರು. ಜನರಿಂದ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಸಚಿವರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ನಂತರ ಸಿಎಂ ವಿದ್ಯಾಗಮ ತಾತ್ಕಾಲಿಕ ಸ್ಥಗಿತಕ್ಕೆ ಸೂಚಿಸಿದ್ದರು. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕ ಸ್ಥಗಿತಕ್ಕೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವುದನ್ನು ಗಮನಿಸಿದ್ದೇನೆ. ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ. ಆದರೂ ವಿವಿಧ ವಲಯಗಳಿಂದ ಪ್ರಕಟವಾಗುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಿದೆ. ಹೀಗಾಗಿ ಜಿಲ್ಲಾವಾರು ಅಂಕಿ ಅಂಶಗಳ ಸ್ವೀಕಾರ ಹಾಗೂ ಅದರ ಸಮರ್ಪಕ ವಿಶ್ಲೇಷಣೆ ಪೂರ್ಣಗೊಳ್ಳುವವರೆಗೂ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.
ಆರೋಪ:
ನೂರಾರು ಶಿಕ್ಷಕರು, 30ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಗಮದಿಂದ ಕೊರೊನಾ ಸೋಂಕು ತಾಗಿದೆ ಎಂದು ಆರೋಪ ಮಾಡಲಾಗಿತ್ತು. ಅಲ್ಲದೇ ವಿದ್ಯಾಗಮ ಯೋಜನೆಯಲ್ಲಿದ್ದ 160ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿದ್ಯಾಗಮದಿಂದ ಸೋಂಕು ಬಂದಿದ್ದು, ಅನೇಕ ಸಂದರ್ಭದಲ್ಲಿ ಸಾವಿಗೀಡಾಗಿರುವ ಶಿಕ್ಷಕರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ವಿದ್ಯಾಗಮ ಯೋಜನೆಯ ನಂತರ ಶಿಕ್ಷಕರು, ಪೋಷಕರು, ಮಕ್ಕಳಲ್ಲಿ ಕೋವಿಡ್ ಭೀತಿ ಹೆಚ್ಚಾಗುತ್ತಿದೆ ಎಂದು ವಿದ್ಯಾಗಮ ಯೋಜನೆ ರದ್ದಿಗೆ ಶಿಕ್ಷಕರು ಹಾಗೂ ಪೋಷಕರಿಂದ ಒತ್ತಾಯಿಸುತ್ತಿದ್ದರು.
ಏನಿದು ವಿದ್ಯಾಗಮ ಯೋಜನೆ ಏಕೆ?
ಶಾಲೆಗಳು ಪ್ರಾರಂಭವಾಗುವವರೆಗೂ ವಿದ್ಯಾರ್ಥಿಗಳು ವಿದ್ಯೆ ಕಲಿಕೆಯಿಂದ ದೂರವಾಗಬಾರದೆನ್ನುವ ಕಾರಣಕ್ಕೆ ವಿದ್ಯಾಗಮ ಯೋಜನೆ ಜಾರಿ ಮಾಡಲಾಗಿತ್ತು. ಗ್ರಾಮೀಣ ಪ್ರದೇಶದ, ನಗರ ಪ್ರದೇಶದ ಸರ್ಕಾರಿ ಮಕ್ಕಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿತ್ತು. ರಾಜ್ಯ ಸರ್ಕಾರ ಆಗಸ್ಟ್ 4ರಂದು ಅಧಿಕೃತ ಆದೇಶ ಜಾರಿಗೆ ತಂದಿತ್ತು. ಸುಮಾರು 47 ಲಕ್ಷ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ಯೋಜನೆ ಜಾರಿಗೆ ತಂದಿತ್ತು.
ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗದಂತೆ ಮಕ್ಕಳಿರುವ ಜಾಗಕ್ಕೆ ಹೋಗಿ ಶಿಕ್ಷಕರು ಪಾಠ ಮಾಡಬೇಕು. ಒಂದೇ ಊರಿನ ಒಂದೇ ತರಗತಿಯ ವಿದ್ಯಾರ್ಥಿಗಳ ಗುಂಪು ಮಾಡಬೇಕು. ಗ್ರಾಮದ ದೇವಸ್ಥಾನ, ಸಮುದಾಯ ಭವನ, ಖಾಲಿ ಮನೆ ಹೀಗೆ ಪಾಠ ಮಾಡಲು ಸೂಕ್ತವಾದ ಶುಚಿತ್ವ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು. ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವಂತಿರಲಿಲ್ಲ.
ವಿದ್ಯಾರ್ಥಿಗಳ ಬಳಿ ಇರುವ ಮೊಬೈಲ್ ಸೌಲಭ್ಯದ ಆಧಾರದ ಮೇಲೆ ಮೂರು ಗುಂಪುಗಳನ್ನಾಗಿ ಮಾಡಬೇಕಿತ್ತು. ಮೊದಲ ಗುಂಪಿನಲ್ಲಿ ಯಾವುದೇ ಮೊಬೈಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳ ಸೇರ್ಪಡೆ, ಇವರ ಬಳಿ ಶಿಕ್ಷಕರೇ ಹೋಗಿ ಪಾಠ ಮಾಡಬೇಕಿತ್ತು. ಬೇಸಿಕ್ ಮೊಬೈಲ್ ಸೌಲಭ್ಯ ಇರುವ ವಿದ್ಯಾರ್ಥಿಗಳು, ಇವರಿಗೆ ದೂರವಾಣಿ ಮೂಲಕ ಶಿಕ್ಷಕರು ಪಾಠ ಮಾಡಬಹುದಿತ್ತು. ಮೂರನೇ ಗುಂಪಿನಲ್ಲಿ ಸ್ಮಾರ್ಟ್ ಪೋನ್ ಹೊಂದಿರುವ ವಿದ್ಯಾರ್ಥಿಗಳು, ಇವರಿಗೆ ಅನ್‍ಲೈನ್ ಕ್ಲಾಸ್ ಮಾಡಬಹುದಿತ್ತು.
ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಸೇತುಬಂಧ ಕಾರ್ಯಕ್ರಮದಲ್ಲಿನ ತರಗತಿಗಳ ಬಗ್ಗೆ ಗೊಂದಲ ಇದ್ದವರು ಮನೆಗೆ ಬರುವ ಶಿಕ್ಷಕರು ಬಗೆಹರಿಸಬಹುದಿತ್ತು
ವಿದ್ಯಾಗಮ ಜಾರಿಗೆ ಮೊದಲು ಸರ್ಕಾರ ಏನು ಮಾಡಬೇಕಿತ್ತು?
* ಆಯಾ ಗ್ರಾಮಗಳಲ್ಲಿ ಸೂಕ್ತವಾದ ವಿಶಾಲ ಸ್ಥಳಗಳನ್ನು ಗುರುತಿಸಬೇಕಿತ್ತು
* ಶಾಲೆಗಳಲ್ಲಿ ಪಾಠ ಮಾಡಬಾರದು ಅಂತ ನಿಯಮವಿದ್ದರೂ ಶಾಲೆಯ ಹೊರಗೆ ಕೂರಿಸಿ ಕೆಲವೆಡೆ ಪಾಠ
* ಎಲ್ಲ ಗ್ರಾಮಗಳಲ್ಲೂ ಖಾಲಿ ಮನೆ, ಸಮುದಾಯ ಭವನ, ಸೂಕ್ತ ಸ್ಥಳ ಇದೆಯಾ ಎಂಬ ಸರ್ವೇ ಮಾಡಿಸಬೇಕಿತ್ತು
* ಎಸ್ ಡಿಎಂಸಿ ಅಧ್ಯಕ್ಷರು, ಪೋಷಕರ ನೇತೃತ್ವದಲ್ಲಿ ಸರ್ವೇ ನಡೆಸಿ ಬಳಿಕ ಸಲಹೆಯ ಆಧಾರದ ಮೇಲೆ ವಿದ್ಯಾಗಮ ಜಾರಿ ಮಾಡಬೇಕಿತ್ತು
* ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಉಚಿತ ಕೊರೊನಾ ತಪಾಸಣೆ ಸೌಲಭ್ಯ ನೀಡಬೇಕಿತ್ತು
* ವಿದ್ಯಾಗಮಕ್ಕೆ ತೆರಳುವ ಶಿಕ್ಷಕರಿಗೆ ಸಾಮಾಜಿಕ ಅಂತರದಡಿ ಸಾರಿಗೆ ವ್ಯವಸ್ಥೆ ಮಾಡಬೇಕಿತ್ತು
* ಸೇತುಬಂಧ ಕಾರ್ಯಕ್ರಮ ವೀಕ್ಷಣೆಗೆ ಹಲವು ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ನೀಡಬೇಕಿತ್ತು
* ಆನ್‍ಲೈನ್ ವಂಚಿತ ಮಕ್ಕಳು ಎನ್ನುವ ಸರ್ಕಾರಕ್ಕೆ ಉಚಿತ ಲ್ಯಾಪ್‍ಟಾಪ್ ಮಾದರಿಯಲ್ಲಿ ಉಚಿತ ಸ್ಮಾರ್ಟ್ ಫೋನ್ ಕೊಡಿಸಬೇಕಿತ್ತು
* ಯಾವುದೇ ಸಿದ್ಧತೆ, ಮುಂದಾಲೋಚನೆ ಇಲ್ಲದೆ ವಿದ್ಯಾಗಮ ಆರಂಭಿಸಬಾರದಿತ್ತು
* ಜೀವ ಮೊದಲು, ಶಿಕ್ಷಣ ನಂತರ ಎಂಬ ಪರಿಜ್ಞಾನ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇರಬೇಕಿತ್ತು
ಬೆಂಗಳೂರು: ಸಾಂತ್ವನ ಕೇಂದ್ರಗಳನ್ನು ಮುಚ್ಚದಂತೆ ಒತ್ತಾಯ ಮತ್ತು ಮಹಿಳಾ ಸಾಂತ್ವನ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಸರ್ಕಾರಕ್ಕೆ ಆಗ್ರಹಿಸಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. “ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಸರ್ಕಾರ ಮಾತು ತಪ್ಪಿದೆ. ನೊಂದ ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಈ ಬಗ್ಗೆ ಮೌನಕ್ಕೆ ಶರಣಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಸರ್ಕಾರ ಮಾತು ತಪ್ಪಿದೆ. ನೊಂದ ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಈ ಬಗ್ಗೆ ಮೌನಕ್ಕೆ ಶರಣಾಗಿದೆ. 1/5
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 10, 2020
ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳಿಗೆ ಸರ್ಕಾರ ಬೀಗ ಜಡಿಯಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇದುವರೆಗೂ ಸಾಂತ್ವನ ಕೇಂದ್ರಗಳಿಗೆ ಒಂದು ನಯಾಪೈಸೆ ಬಿಡುಗಡೆ ಮಾಡದಿರುವುದು ಕೋವಿಡ್ 19 ಸಂಕಷ್ಟದಲ್ಲಿ ಸ್ತ್ರೀಯರಿಗೆ ಮತ್ತೊಂದು ಬರೆ ಎಳೆದಂತಾಗಿದೆ ಎಂದಿದ್ದಾರೆ.
ಕೌಟುಂಬಿಕ ಹಿಂಸಾಚಾರ ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಶ್ವಸಂಸ್ಥೆಯ ಆಶಯ ಬದಿಗೊತ್ತಿರುವುದು ಖಂಡನೀಯ. ಕಳೆದ ಎರಡು ದಶಕಗಳಿಂದ ಸಾಂತ್ವನ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ,ಆತ್ಮವಿಶ್ವಾಸ ಮೂಡಿಸುತ್ತಿವೆ. 3/5
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 10, 2020
ಕೌಟುಂಬಿಕ ಹಿಂಸಾಚಾರ ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಶ್ವಸಂಸ್ಥೆಯ ಆಶಯ ಬದಿಗೊತ್ತಿರುವುದು ಖಂಡನೀಯ. ಕಳೆದ ಎರಡು ದಶಕಗಳಿಂದ ಸಾಂತ್ವನ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲಾ, ತಾಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ, ಆತ್ಮವಿಶ್ವಾಸ ಮೂಡಿಸುತ್ತಿವೆ ಎಂದು ಎಚ್‍ಡಿಕೆ ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಆರಂಭಗೊಂಡಿದ್ದ ಸಾಂತ್ವನ ಕೇಂದ್ರಗಳ ಸಿಬ್ಬಂದಿಗೂ ವೇತನವಿಲ್ಲ. ದೂರು ದುಮ್ಮಾನ ಪರಿಹರಿಸುವವರು ಯಾರು? ಎಂದು ಸರ್ಕಾರವನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಲಾಕ್ ಡೌನ್ ಕಾಲದಲ್ಲಿ ಸಾಂತ್ವನ ಕೇಂದ್ರಗಳನ್ನು ಮುಚ್ಚಿ, ಮದ್ಯದಂಗಡಿಗಳನ್ನು ತೆರೆದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಸಾಂತ್ವನ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. 5/5
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 10, 2020
“ಲಾಕ್‍ಡೌನ್ ಕಾಲದಲ್ಲಿ ಸಾಂತ್ವನ ಕೇಂದ್ರಗಳನ್ನು ಮುಚ್ಚಿ, ಮದ್ಯದಂಗಡಿಗಳನ್ನು ತೆರೆದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಸಾಂತ್ವನ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದರು.