Tag: government

  • ವೈದ್ಯರಿಗೆ 5 ಸಾವಿರ ಪ್ರೋತ್ಸಾಹ ಭತ್ಯೆ ಘೋಷಿಸಿದ ಗುಜರಾತ್ ಸರ್ಕಾರ

    ವೈದ್ಯರಿಗೆ 5 ಸಾವಿರ ಪ್ರೋತ್ಸಾಹ ಭತ್ಯೆ ಘೋಷಿಸಿದ ಗುಜರಾತ್ ಸರ್ಕಾರ

    ಗಾಂಧಿನಗರ: ಗುಜರಾತ್ ಸರ್ಕಾರ ಕೋವಿಡ್ ಚಿಕಿತ್ಸೆ ನೀಡುವಲ್ಲಿ ತೊಡಗಿಸಿಕೊಂಡಿರುವ ವೈದ್ಯರಿಗೆ ಮಾಸಿಕವಾಗಿ 5,000 ರೂ. ಪ್ರೋತ್ಸಾಹ ಭತ್ಯೆ ನೀಡುವುದಾಗಿ ಘೋಷಿಸಿದೆ.

    ಕೋವಿಡ್-19 ಚಿಕಿತ್ಸೆ ನೀಡುವ ಕಾರ್ಯದಲ್ಲಿ ನಿರತರಾಗಿರುವ ತರಬೇತುದಾರ ಹಾಗೂ ವೈದ್ಯರಿಗೆ 2021ರ ಜೂನ್ 30ರವರೆಗೂ ತಿಂಗಳಿಗೆ 5,000ರೂ.ವನ್ನು ಪ್ರೋತ್ಸಾಹ ಭತ್ಯೆ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ಕಚೇರಿ ಆದೇಶ ಹೊರಡಿಸಿದೆ.

    ಶುಕ್ರವಾರ ಗುಜರಾತ್‍ನಲ್ಲಿ 8,920 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೂ 3,84,688 ಕೊರೊನಾ ಪ್ರಕರಣಗಳು ದಾಖಲಾಗಿದೆ. ಸೋಂಕಿನಿಂದ 94 ಮಂದಿ ಮೃತಪಟ್ಟಿದ್ದಾರೆ ಎಂದು ಗುಜರಾತ್ ಆರೋಗ್ಯ ಇಲಾಖೆ ತಿಳಿಸಿದೆ.

    ದಾಖಲೆ ಬರೆದ ಕೊರೊನಾ?:
    ದೇಶದಲ್ಲಿ ಮರಣಮಾರಿ ಕೊರೊನಾ ವೈರಸ್ ತನ್ನ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದೆ. 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು ತಗುಲಿದ್ದು, 1,341 ಸೋಂಕಿತರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‍ಗಢ ಮತ್ತು ಕರ್ನಾಟಕ ಹೊಸ ಕೊರೊನಾ ಪ್ರಕರಣಗಳಲ್ಲಿ ಮುನ್ನಲೆಯಲ್ಲಿವೆ. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,45,26,609ಕ್ಕೆ ಏರಿಕೆಯಾಗಿದ್ದು, 16,79,740 ಸಕ್ರಿಯ ಪ್ರಕರಣಗಳಿವೆ. ಸಾವನ್ನಪ್ಪಿದವರ ಸಂಖ್ಯೆ 1,75,649ಕ್ಕೆ ಏರಿಕೆಯಾಗಿದೆ. ಇದುವರೆಗೂ 11,99,37,641 ಜನ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಅತ್ಯಧಿಕ 63,7298 ಕೊರೊನಾ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ 27,360, ದೆಹಲಿ 19,486, ಛತ್ತೀಸ್‍ಗಢ 14,912 ಮತ್ತು ಕರ್ನಾಟಕದಲ್ಲಿ 14,859 ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಪ್ರಕರಣ ಪೈಕಿ ಮಹಾರಾಷ್ಟ್ರದಲ್ಲಿಯೇ ಶೇ.27.15ರಷ್ಟು ವರದಿಯಾಗಿವೆ. ಐದು ರಾಜ್ಯಗಳಿಂದಲೇ ಶೇ.59.79 ಕೊರೊವಾ ಪ್ರಕರಣಗಳು ದಾಖಲಾಗಿವೆ.

  • ಕೊರೊನಾಗೆ ಲಾಕ್‍ಡೌನ್ ಅವಶ್ಯಕತೆ ಇಲ್ಲ: ಡಿ.ಕೆ ಶಿವಕುಮಾರ್

    ಕೊರೊನಾಗೆ ಲಾಕ್‍ಡೌನ್ ಅವಶ್ಯಕತೆ ಇಲ್ಲ: ಡಿ.ಕೆ ಶಿವಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಪ್ರಾರಂಭವಾಗಿರುವುದರಿಂದ ಲಾಕ್‍ಡೌನ್ ಮಾಡಿ ಏನು ಪ್ರಯೋಜನ ಇಲ್ಲ. ಇದರ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ಡಿ.ಕೆ ಶಿವಕುಮಾರ್, ನನ್ನ ವೈಯುಕ್ತಿಕ ಅಭಿಪ್ರಾಯ ಲಾಕ್‍ಡೌನ್ ಬೇಡ. ಲಾಕ್‍ಡೌನ್ ಗಿಂತ ಜೀವ ಹಾಗೂ ಜೀವನ ಮುಖ್ಯ. ಸರ್ಕಾರ ಅವರದೇನೋ ಮುಚ್ಚಿಕೊಳ್ಳೋಕೆ ಲಾಕ್‍ಡೌನ್ ಮತ್ತೊಂದು ಎಂಬ ಸುದ್ದಿ ಹಬ್ಬಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ನಮಗಿನ್ನು ಸರ್ವ ಪಕ್ಷಗಳ ಸಭೆಯ ನೋಟಿಸ್ ಬಂದಿಲ್ಲ. ಬಂದ ನಂತರ ಪಕ್ಷದ ನಾಯಕರುಗಳು ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈ ಹಿಂದೆ ನಾವು ಕೊಟ್ಟ ಸಲಹೆಗಳನ್ನು ಅವರು ಪಾಲಿಸಿಲ್ಲ. ಅವರಿಗೆ ಏನ್ ಬೇಕು ಅದನ್ನು ಮಾಡಿಕೊಂಡಿದ್ದರು ಮತ್ತು ಕೊರೊನಾ ಸಂದರ್ಭದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನನ್ನ ವೈಯುಕ್ತಿಕ ಅಭಿಪ್ರಾಯ ಲಾಕ್ ಡೌನ್ ಮಾಡಬಾರದು. ಲಾಕ್‍ಡೌನ್ ಮಾಡಿದರೆ ಜನ ಮನೆಯಿಂದ ಹೊರ ಬರುವುದಂತು ಬಂದೆ ಬರುತ್ತಾರೆ. ಸರ್ಕಾರ ಕಂಪನಿಗಳಿಗೆ ಮತ್ತು ಅಲ್ಲಿನ ನೌಕರರಿಗೆ ಸಹಾಯ ಮಾಡಿಲ್ಲ, ಅವರ ಮನೆಯ ಬಾಡಿಗಳನ್ನು ಕಟ್ಟಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರ ಮಾದರಿ ಅಥವ ಬೇರೆಯಾವುದೆ ಮಾದರಿಯ ಬಗ್ಗೆ ನಾನು ಮಾತನಾಡುವುದಿಲ್ಲ, ಸರ್ಕಾರ ನಮ್ಮನ್ನು ಕರೆಸಿ ಮಾತನಾಡಿದ ಮೇಲೆ ನಮ್ಮ ಸಲಹೆಯನ್ನು ಪರಿಗಣಿಸಬೇಕು ಸುಮ್ಮನೆ ಸಭೆ ನಡೆಸಿ ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳೋದಲ್ಲ ಎಂದರು.

    ದೇಶದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಇದನ್ನೆಲ್ಲ ಸರ್ಕಾರ ಗಮನಹರಿಸಬೇಕು. ಇದರಿಂದ ಜನಸಾಮಾನ್ಯರು ಜೀವನ ನಡೆಸಲು ಪರದಾಡುತ್ತಿದ್ದಾರೆ ಎಂದು ತಿಳಿಸಿದರು.

  • ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿದ್ರೆ ಏನು ಉಪಯೋಗ?: ಹೆಚ್‍ಡಿಕೆ

    ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿದ್ರೆ ಏನು ಉಪಯೋಗ?: ಹೆಚ್‍ಡಿಕೆ

    ಕೇಂದ್ರ, ರಾಜ್ಯ ಸರ್ಕಾರಗಳೂ ಕೋವಿಡ್ ವಿಷಯದಲ್ಲಿ ಎಡವಿದೆ
    – ಕಾಳಸಂತೆಯಲ್ಲಿ ರೆಮ್‍ಡಿಸಿವಿರ್

    ಬೆಂಗಳೂರು: ಕೊರೊನಾ ನಿಯಂತ್ರಣ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಪಕ್ಷಗಳನ್ನು ಸಭೆಗೆ ಕರೆದಿದ್ದಾರೆ. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕವಾಗಿ ಆಕ್ರೋಶ ಹೊರಹಾಕಿದ್ದಾರೆ.

    ಕೋವಿಡ್ ನಿಯಂತ್ರಣಕ್ಕಾಗಿ ಬಿಗಿ ಕ್ರಮ ಕೈಗೊಳ್ಳುವುದರ ಬಗ್ಗೆ ವಿಪಕ್ಷಗಳೊಂದಿಗೆ ಸಭೆ ನಡೆಸುವುದಾಗಿಯೂ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಕೋವಿಡ್ ಚಿಕಿತ್ಸೆಗೆ ಬೇಕಾಗುವ ಮೂಲಸೌಕರ್ಯ ಹೊಂದಿಸಿಟ್ಟುಕೊಳ್ಳದ, ರೋಗದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳದ, ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೊರೊನಾ 2ನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಗಳಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದೆಲ್ಲದರ ಮಧ್ಯೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ರೆಮ್‍ಡಿಸಿವಿರ್ ಎಂಬ ಚುಚ್ಚು ಮದ್ದಿಗೆ ದೇಶದಲ್ಲಿ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ರೆಮ್‍ಡಿಸಿವಿರ್ ಚುಚ್ಚುಮದ್ದನ್ನು ಇಷ್ಟ ಬಂದಂತೆ ರಫ್ತು ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಟೀಕೆಗಳು ಬರುತ್ತಲೇ, ಔಷಧಿಗೆ ಅಭಾವ ಎದುರಾಗುತ್ತಲೇ ರಫ್ತು ನಿಷೇಧಿಸಿದೆ. ಆದರೆ, ಈಗ ಕಾಲ ಮಿಂಚಿದೆ. ಒಂದೆಡೆ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗಿದೆ. ಆದರೆ, ದೇಶದ ಆಸ್ಪತ್ರೆಗಳು ರೆಮ್‍ಡಿಸಿವಿರ್‍ಗಾಗಿ ಕಾದು ಕೂರುವ ಪರಿಸ್ಥಿತಿ ಉದ್ಭವಿಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮಧ್ಯೆ ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ, ನಕಲಿ ಔಷಧ ಪೂರೈಕೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಒಂದೆಡೆ ಔಷಧದ ದಾಸ್ತಾನು ಮಾಡದೇ ವಿಫಲವಾಗಿರುವ ಸರ್ಕಾರ, ಕಾಳ ಸಂತೆ, ನಕಲಿ ಹಾವಳಿ ನಿಯಂತ್ರಿಸದೇ ಅದಕ್ಷತೆ ಮೆರೆದಿದೆ. ಇಲ್ಲಿ ಕೇಂದ್ರ, ರಾಜ್ಯ ಎಂಬ ಮಾತಿಲ್ಲ. ಎರಡೂ ಸರ್ಕಾರಗಳೂ ಕೋವಿಡ್ ವಿಷಯದಲ್ಲಿ ಎಡವಿವೆ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಆದರೆ, ಎಚ್ಚರಿಕೆಗಳನ್ನು ಕಡೆಗಣಿಸಿ, ನಾಗರಿಕರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ನಡೆಗಳು ಖಂಡನೀಯ. ಸರ್ಕಾರಗಳು ಕನಿಷ್ಠ, ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನಾದರೂ ದಾಸ್ತಾನು ಮಾಡಿಕೊಳ್ಳಬೇಕು. ಅದಿಲ್ಲದೇ, ಸಭೆಗಳನ್ನು ನಡೆಸಿ ಪ್ರಯೋಜನವಿಲ್ಲ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

  • ಬಸ್ಸನ್ನು ನೀವು ಓಡಿಸಿ, ಇಲ್ಲ ನಮಗೆ ಬಿಡಿ – ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಆಗ್ರಹ

    ಬಸ್ಸನ್ನು ನೀವು ಓಡಿಸಿ, ಇಲ್ಲ ನಮಗೆ ಬಿಡಿ – ಸರ್ಕಾರಕ್ಕೆ ಖಾಸಗಿ ಬಸ್ ಮಾಲೀಕರ ಆಗ್ರಹ

    ಚಿಕ್ಕಮಗಳೂರು: ಒಂದೋ ನೀವೇ ಬಸ್ ಓಡಿಸಿಕೊಳ್ಳಿ ಇಲ್ಲ, ನಮಗೆ ಬಿಡಿ. ಹೀಗೆ ನಿಮಗೆ ಬೇಕಾದಾಗ ಒಂದೊಂದೇ ಬಸ್ ತಂದು ಬಿಟ್ಟುಕೊಂಡರೆ ನಮಗೆ ನಷ್ಟವಾಗುತ್ತೆ ಎಂದು ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದಿದೆ.

    ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕಕರು ಬಸ್‍ಗಳನ್ನು ತೆಗೆಯದ ಕಾರಣ ಸರ್ಕಾರ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳು ಸಾರ್ವಜನಿಕ ಸೇವೆಗೆ ಮುಂದಾಗಿತ್ತು. ಆದರೆ ದಿನಕಳೆದಂತೆ ಒಬ್ಬೊಬ್ಬ ಡ್ರೈವರ್-ಕಂಡೆಕ್ಟರ್‍ಗಳು ಸೇವೆಗೆ ಬರುತ್ತಿರುವುದರಿಂದ ಒಂದೊಂದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ರಸ್ತೆಗೆ ಇಳಿಯುತ್ತಿವೆ. ಇದು ಖಾಸಗಿ ಬಸ್ ಮಾಲೀಕರು-ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೋ ನೀವೇ ಬಸ್ ಓಡಿಸಿಕೊಳ್ಳಿ. ಇಲ್ಲ ನಮಗೆ ಬಿಡಿ ಎಂದು ಖಾಸಗಿ ಬಸ್ ಚಾಲಕರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಸಿದ್ದಾರೆ.

    ನಾವು ಯಾರ ಬಳಿಯೂ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿಲ್ಲ. ಸರ್ಕಾರದ ದರ ನಿಗದಿಯಂತೆ ಸಾರ್ವಜನಿಕರ ಸೇವೆಗೆ ಬಂದಿದ್ದೇವೆ. ಇಡೀ ರಾತ್ರಿ ಸೊಳ್ಳೆಯಿಂದ ಕಚ್ಚಿಸಿಕೊಂಡು ಕ್ಯೂನಲ್ಲಿ ನಿಂತು ಬೆಳಗ್ಗೆ ಬಸ್ ಓಡಿಸುವವರು ನಾವು. ನೀವು ಡ್ರೈವರ್-ಕಂಡೆಕ್ಟರ್ ಬಂದ ಕೂಡಲೇ ಬಸ್ ತಂದರೆ ನಮಗೆ ಕಷ್ಟ ಹಾಗೂ ನಷ್ಟವಾಗುತ್ತದೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಹೋಗುವಾಗ ಜನ ಕರೆದುಕೊಂಡು ಹೋಗಿ ಬರುವಾಗ ಖಾಲಿ ಬಸ್ ಬರುತ್ತಿದೆ. ಡಿಸೇಲ್ ದರ ಸೇರಿದಂತೆ ಇತರೇ ಖರ್ಚುಗಳಿಂದ ಏನೂ ಉಳಿಯುತ್ತಿಲ್ಲ. ಅಧಿಕಾರಿಗಳು ಹೇಳಿರುವುದರಿಂದ ನಾವು ಬಂದಿರುವುದು, ನೀವು ಹೀಗೆ ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

  • ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ- ಸಾರಿಗೆ ನೌಕರರು

    ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ- ಸಾರಿಗೆ ನೌಕರರು

    – ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ

    ಮಡಿಕೇರಿ: 6ನೇ ವೇತನ ಆಯೋಗ ಜಾರಿ ಮಾಡುವಂತೆ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ ಇದ್ದು ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ ಸರ್ಕಾರಕ್ಕೆ ಮತ ಹಾಕುವುದಿಲ್ಲ ಎಂದು ಪ್ರತಿಭಟನಾ ನಿರತ ನೌಕರರು ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಚಾಲಕ ಕಂ ನಿರ್ವಾಹಕ ಮನು, ನಾನು ಕೂಡ ಪಕ್ಕ ಹಿಂದೂ ಕಾರ್ಯಕರ್ತ, ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದೆ. ಆದರೆ ಪ್ರತಿಭಟನೆ ಕೈಬಿಟ್ಟು ಬಸ್‍ಗಳನ್ನು ಚಲಾಯಿಸುವಂತೆ ನನಗೆ ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿಸಿದ್ದಾರೆ.

    ಮತ್ತೊಂದೆಡೆ ಪುತ್ತೂರು ವಿಭಾಗದ ಅಧಿಕಾರಿಗಳು ಮಡಿಕೇರಿಯಲ್ಲಿ ಪ್ರತಿಭಟನೆ ನೇತೃತ್ವ ವಹಿಸುತ್ತಿದ್ದ ಮುಖಂಡರನ್ನು ರಾಮನಗರ ಡಿಪೋಗೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ನಾವು ಇಂತಹ ಬೆದರಿಕೆಗೆಲ್ಲ ಹೆದರುವುದಿಲ್ಲ ಯಡಿಯೂರಪ್ಪ, ಲಕ್ಷ್ಮಣ ಸವದಿ ಅವರಿಗೆ ನಾವು ಹೆದರುವುದಿಲ್ಲ. ಇದೊಂದು ಹಠಮಾರಿ ಸರ್ಕಾರವಾಗಿದ್ದು, ಮುಂದಿನ ಬಾರಿ ನಾವು ಬಿಜೆಪಿಗೆ ವೋಟು ಹಾಕಲ್ಲ. ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮಡಿಕೇರಿ ಘಟಕದ ಟಿಸಿ ನೌಕರರ ಕ್ವಾಟ್ರಸ್‍ಗಳಲ್ಲಿ ಇದ್ದ ಹನ್ನೊಂದು ಕುಟುಂಬಗಳ ಕೆಎಸ್‍ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗಾಗಿ ಕ್ವಾಟ್ರಸ್ ಮಾಡಲಾಗಿದೆ. ಇಲ್ಲದಿದ್ದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆಯ ನೊಟೀಸ್ ನೀಡಲಾಗಿದೆ. ಇದಕ್ಕೂ ಅಸಮಾಧಾನ ವ್ಯಕ್ತಪಡಿಸಿರುವ ನೌಕರರ ಕುಟುಂಬದವರು, ಎಚ್‍ಆರ್‍ಎ ಕಟ್ ಮಾಡಿಕೊಂಡು ನಮಗೆ ಕ್ವಾಟ್ರಸ್ ನೀಡಿದ್ದಾರೆ. ಒಂದು ಮನೆಯಲ್ಲಿ ಬಾಡಿಗೆ ಇದ್ದರೂ ಒಂದು ತಿಂಗಳ ಮುಂಚಿತವಾಗಿ ಮಾಹಿತಿ ನೀಡಿ ಮನೆ ಖಾಲಿ ಮಾಡಿಸುತ್ತಾರೆ. ಆದರೆ ಇದೀಗ ಕನಿಷ್ಠ ಮಾನವೀಯತೆ ಇಲ್ಲದವರಂತೆ ಸರ್ಕಾರ ನಡೆದುಕೊಳ್ಳುತ್ತಿದ್ದು, ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗಬೇಕು. ಕಳೆದ 20 ವರ್ಷಗಳಿಂದ ಸಂಸ್ಥೆಗಾಗಿ ದುಡಿದಿದ್ದೇವೆ. ಇಂದಿಗೂ ಕೇವಲ 10 ಸಾವಿರ ಸಂಬಳ ಸಿಗುತ್ತಿದೆ. ಕಳೆದ ಒಂದು ವರ್ಷದಿಂದ ಓಟಿಯೂ ಸಿಗುತ್ತಿಲ್ಲ. ಹೀಗಾದರೆ ನಮ್ಮ ಬದುಕು ಹೇಗೆ ಎನ್ನುವುದು ನೌಕರರ ಕುಟುಂಬದವರ ಪ್ರಶ್ನೆಯಾಗಿದೆ.

  • ಹಿಂದೂ ದೇವಾಲಯ ನಿರ್ಮಾಣಕ್ಕೆ ಕೋಟಿಗಟ್ಟಲೇ ಹಣ ನೀಡಿದ ಪಾಕಿಸ್ತಾನ

    ಹಿಂದೂ ದೇವಾಲಯ ನಿರ್ಮಾಣಕ್ಕೆ ಕೋಟಿಗಟ್ಟಲೇ ಹಣ ನೀಡಿದ ಪಾಕಿಸ್ತಾನ

    ಇಸ್ಲಾಮಬಾದ್: ಹಿಂದೂ ದೇವಾಲಯಗಳ ಮರು ನಿರ್ಮಾಣಕ್ಕಾಗಿ 3.48 ಕೋಟಿ ರೂಪಾಯಿಗಳನ್ನು ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ ಬಿಡುಗಡೆ ಮಾಡಿದೆ.

    ಕಳೆದ ವರ್ಷ ಡಿಸೆಂಬರ್‍ನಲ್ಲಿ ಕೆಲವು ಸ್ಥಳೀಯ ಸಂಘಟನೆಗಳ ಗುಂಪಿನಿಂದ ದೇವಾಲಯಗಳು ಹಾನಿಗೊಳಗಾಗಿದ್ದವು. ಖೈಬರ್ ಪಕ್ತುನ್ಖ್ವಾ ಕರಾಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಪರಮಹಂಸಜೀ ಮಹಾರಾಜ್ ಅವರ ಸಮಾಧಿಯನ್ನು ಧ್ವಂಸ ಮಾಡಲಾಗಿತ್ತು.

    ಶತಮಾನಗಳಷ್ಟು ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ ಸಮಾಧಿ ಮೇಲೆ ನಡೆದ ದಾಳಿಗೆ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದೇವಾಯಲಯ ಪುನರ್ ನಿರ್ಮಾಣ ಮಾಡಬೇಕೆಂದು ಅಲ್ಲಿನ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

    ದೇಗುಲ ನಿರ್ಮಾಣ ಶೀಘ್ರವಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಪ್ರಾಂತೀಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈಗ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ ದೇವಾಲಯ ಮರು ನಿರ್ಮಾಣ ಕಾರ್ಯಕ್ಕಾಗಿ ಔಕಾಫ್ ಇಲಾಖೆಗೆ 3,48,29,000 ಹಣವನ್ನು ನೀಡಿದೆ ಎಂದು ತಿಳಿದು ಬಂದಿದೆ.

  • 25 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತೆ ಸರ್ಕಾರಕ್ಕೆ ಸೋನುಸೂದ್ ಮನವಿ

    25 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತೆ ಸರ್ಕಾರಕ್ಕೆ ಸೋನುಸೂದ್ ಮನವಿ

    ಮುಂಬೈ: ಬಾಲಿವುಡ್ ನಟ ಸೋನುಸೂದ್ ಬುಧವಾರ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ನಂತರ, 25 ವರ್ಷಕ್ಕೂ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಸೋನು ಸೂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, 25 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಬೇಕೆಂದು ನಾನು @MoHFW_INDIA ಗೆ ಒತ್ತಾಯಿಸುತ್ತೇನೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಣ್ಣ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವೈರಸ್‍ಗೆ ಒಳಗಾಗುತ್ತಿದ್ದಾರೆ. ಸದ್ಯ 25ಕ್ಕೂ ಹೆಚ್ಚು ವರ್ಷ ಮೇಲ್ಪಟ್ಟವರಿಗೆ ಲಸಿಕೆ ಘೋಷಿಸಬೇಕು. ನಾನು ಹೆಚ್ಚಿನ ಪ್ರಕರಣಗಳ ಸಂಖ್ಯೆಯನ್ನು ಯುವಕರಲ್ಲಿ ಕಾಣುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ವಲಸಿಗರು ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಸೋನು ಸೂದ್, ಇದೀಗ ಲಸಿಕೆ ಪಡೆಯುವಂತೆ ಜನರಿಗೆ ಪ್ರೋತ್ಸಾಹ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಸಂಜೀವಿನಿ ‘ಎ ಶಾಟ್ ಆಫ್ ಲೈಫ್’ ವ್ಯಾಕ್ಸಿನೇಷನ್ ಡ್ರೈವ್ ಅಭಿಯಾನವನ್ನು ಪ್ರಾರಂಭಿಸಿದರು.

  • ಮಧ್ಯಪ್ರದೇಶದ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್- ಸರ್ಕಾರಿ ಇಲಾಖೆಗಳಲ್ಲಿ ವಾರದ 5 ದಿನ ಮಾತ್ರ ಸೇವೆ

    ಮಧ್ಯಪ್ರದೇಶದ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್- ಸರ್ಕಾರಿ ಇಲಾಖೆಗಳಲ್ಲಿ ವಾರದ 5 ದಿನ ಮಾತ್ರ ಸೇವೆ

    ಭೋಪಾಲ್: ಕೊರೊನಾ ಸೋಂಕು ಮಧ್ಯಪ್ರದೇಶದಲ್ಲಿ ಹೆಚ್ಚಳ ಕಾಣುತ್ತಿದ್ದಂತೆ, ರಾಜ್ಯ ಸರ್ಕಾರ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ಹೇರಲು ಮುಂದಾಗಿದೆ. ಇದರೊಂದಿಗೆ ಸರ್ಕಾರಿ ಇಲಾಖೆಗಳು ವಾರದ ಐದು ದಿನಗಳು ಮಾತ್ರ ಕಾರ್ಯನಿರ್ವಹಿಸುವಂತೆ ಸರ್ಕಾರ ಸೂಚನೆ ಹೊರಡಿಸಿದೆ.

    ಈಗಾಗಲೇ ಮಧ್ಯಪ್ರದೇಶದಲ್ಲಿ ನೈಟ್ ಕರ್ಫ್ಯೂ ಕುರಿತು ಘೋಷಣೆ ಮಾಡಿದ್ದ ಸರ್ಕಾರ, ಇದೀಗ ಇಂದಿನಿಂದ ಎಲ್ಲಾ ನಗರ ಪ್ರದೇಶಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಕರ್ಫ್ಯೂ ಜಾರಿ ಮಾಡಿದೆ. ಇದು ಸರ್ಕಾರದ ಮುಂದಿನ ಆದೇಶದ ವರೆಗೆ ಮುಂದುವರಿಯುವುದಾಗಿ ಸರ್ಕಾರ ತಿಳಿಸಿದೆ.

    ಮಧ್ಯಪ್ರದೇಶದಲ್ಲಿ ನೈಟ್ ಕರ್ಫ್ಯೂ ನೊಂದಿಂಗೆ ಸರ್ಕಾರಿ ಕಚೇರಿಗಳು ವಾರದ ಕೇವಲ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೆ ವಾರದ ಐದು ದಿನ ಮುಂದಿನ ಮೂರು ತಿಂಗಳುಗಳವರೆಗೆ ಈ ಕ್ರಮ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಹೊರಬಿದ್ದಿದೆ.

    ಈ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾಣುತ್ತಿರುವುದರಿಂದಾಗಿ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವನ್ನು ವಹಿಸಲಾಗುತ್ತಿದ್ದು, ಇಂದು ರಾತ್ರಿ 6 ಗಂಟೆಯಿಂದ ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ಇರಲಿದೆ. ಹಾಗೆ ರಾಜ್ಯದಲ್ಲಿ ಶನಿವಾರ ರಾತ್ರಿ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೆ ಲಾಕ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 4,043 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ.

  • ರಾಮನಗರದ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

    ರಾಮನಗರದ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

    – ಟೊಯೋಟಾ ಕಿರ್ಲೋಸ್ಕರ್ ನೆರವಿನಿಂದ ಹೈಟೆಕ್ ಆದ ಸರ್ಕಾರಿ ಶಾಲೆ
    – 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

    ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಮರು ನಿರ್ಮಾಣ ಮಾಡಿರುವ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರದ ಅನುದಾನದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆ ಮಾಡಿದರು.

    ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ:
    ಸುಮಾರು 4.28 ಕೋಟಿ ರೂ. ವೆಚ್ಚದಲ್ಲಿ 22 ಕೊಠಡಿಗಳನ್ನು ನಿರ್ಮಾಣ ಮಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಇಡೀ ಕನ್ನಡ ಮಾದರಿ ಪ್ರಾಥಮಿಕ ಶಾಲೆಗೆ ಜಾಗತಿಕ ಗುಣಮಟ್ಟದ ಸ್ಪರ್ಶ ನೀಡಿದೆ. ಖಾಸಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಯಾವ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿದೆ. ಸುಸಜ್ಜಿತ ಲ್ಯಾಬ್, ಅಡುಗೆ ಮನೆ, ಹೈಟೆಕ್ ಗ್ರಂಥಾಲಯ, ಅಂಗನವಾಡಿ ಮಕ್ಕಳಿಗೂ ಒಂದು ಕೊಠಡಿ, ಸ್ಮಾರ್ಟ್ ಕ್ಲಾಸ್ ರೂಮ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಡೀ ಜಿಲ್ಲೆಯಲ್ಲಿ ಅತ್ಯುತ್ತಮ ಸೌಲಭ್ಯಗಳುಳ್ಳ ಸರಕಾರಿ ಶಾಲೆ ಇದಾಗಿದೆ. ಕಂಪನಿಯ ಆಡಳಿತ ಮಂಡಳಿ ತನ್ನ ಸಿಎಸ್‍ಆರ್ ನಿಧಿಯಿಂದ ಈ ಶಾಲೆ ಆಧುನೀಕರಣಗೊಳಿಸಿದೆ.

    ಶಾಲೆಯ ಕಟ್ಟಡ ಲೋಕಾರ್ಪಣೆ ಬಳಿಕ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೆರವು ನೀಡಿರುವುದು ಸಂತಸ ಉಂಟು ಮಾಡಿದೆ. ಈ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಶಾಲೆ- ಕಾಲೇಜುಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನು ಸರ್ಕಾರ ಮಾಡುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡುತ್ತಿದ್ದೇವೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದರು.

    ನೂತನ ಕಟ್ಟಡ ಲೋಕಾರ್ಪಣೆ:
    ಇದೇ ವೇಳೆ ಡಿಸಿಎಂ ಅವರು ಪ್ರಥಮ ದರ್ಜೆ ಕಾಲೇಜನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. 1982-83ರಲ್ಲಿ ಆರಂಭವಾದ ಈ ಕಾಲೇಜು ರಾಮನಗರದ ಮಟ್ಟಿಗೆ ಒಂದು ಪ್ರಮುಖ ಲ್ಯಾಂಡ್‍ಮಾರ್ಕ್ ಆಗಿದ್ದು, ಇದೀಗ ಡಿಸಿಎಂ ಒತ್ತಾಸೆಯಿಂದ ಅತ್ಯಾಧುನಿಕ ಕಟ್ಟಡವೊಂದು ತಲೆಎತ್ತಿದೆ. ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು, 648 ಚ.ಮೀ ವಿಸ್ತೀರ್ಣವುಳ್ಳ ಕಟ್ಟಡದಲ್ಲಿ ಎನ್‍ಎಸ್‍ಎಸ್, ಎನ್‍ಸಿಸಿ, ಪ್ರಯೋಗಾಲಯ ಹಾಗೂ ಕ್ಲಾಸ್ ರೂಮ್‍ಗಳಿವೆ.

    ಈ ಕಾಲೇಜಿನಲ್ಲಿರುವ ಒಟ್ಟು 29 ತರಗತಿ ಕೊಠಡಿಗಳ ಪೈಕಿ, 8 ತರಗತಿ ಕೊಠಡಿಗಳನ್ನು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಗಳಲ್ಲಿ ಪ್ರೊಜೆಕ್ಟರ್, ಯುಪಿಎಸ್, ಆಕ್ಸೆಸ್ ಪಾಯಿಂಟುಗಳು, ಆಂಡ್ರಾಯ್ಡ್ ಬಾಕ್ಸ್‍ಗಳು, ವೈಟ್ ಬೋರ್ಡುಗಳಿವೆ. ಆಧುನಿಕ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಡಿಜಿಟಲ್ ಕಲಿಕೆಯ ಸೌಕರ್ಯ ದೊರೆಯಬೇಕು ಎನ್ನುವ ಸದುದ್ದೇಶ ಈ ಯೋಜನೆಯ ಹಿಂದಿದೆ ಎಂದು ಡಿಸಿಎಂ ಹೇಳಿದರು.

    ಖಾಸಗಿ ಸಹಭಾಗಿತ್ವ ಬೇಕು
    ಕಾಲೇಜು ಕಟ್ಟಡ ಉದ್ಘಾಟನೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, ರಾಜ್ಯವು ಶೈಕ್ಷಣಿಕವಾಗಿ ಉತ್ತಮ ವಾತಾವರಣ ಹೊಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಇಡೀ ಶೈಕ್ಷಣಿಕ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಆಧುನೀಕರಣಗೊಳಿಸಲು ಖಾಸಗಿಯರ ನೆರವು ಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ರಾಜ್ಯ ಸರ್ಕಾರ ಶಿಕ್ಷಣದ ಬೆಳವಣಿಗೆಗಾಗಿ ಉಪಕ್ರಮವನ್ನು ಶುರು ಮಾಡಿದ್ದು, ಇದರ ಅಡಿಯಲ್ಲಿ ಖಾಸಗಿ ವಲಯದ ಅನೇಕ ಧಾನಿಗಳು ನೆರವಿಗೆ ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವ ಸರ್ಕಾರದ ಉದ್ದೇಶಕ್ಕೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಉಪಕ್ರಮದಡಿ ಕಾಗ್ನಿಸೆಂಟ್ ಸಂಸ್ಥೆ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 12,000 ಡೀಬಾಂಡೆಡ್ ಕಂಪ್ಯೂಟರ್ ಗಳನ್ನು ನೀಡಿದ್ದು, ಅವುಗಳಲ್ಲಿ 40 ಕಂಪ್ಯೂಟರ್‍ಗಳನ್ನು ಈ ಕಾಲೇಜಿಗೆ ಒದಗಿಸಿ ಒಂದು ಕಂಪ್ಯೂಟರ್ ಪ್ರಯೋಗಾಲಯವನ್ನೂ ರೂಪಿಸಲಾಗಿದೆ. ಈಗ ಈ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

    ಈ ಸಂದರ್ಭದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ ಮುಂತಾದವರು ಭಾಗವಹಿಸಿದ್ದರು.

  • ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಾರಿಗೆ ನೌಕರರು

    ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಾರಿಗೆ ನೌಕರರು

    – ಹಲವು ಬೇಡಿಕೆ ಈಡೇರಿಸುವಂತೆ ಪತ್ರದಲ್ಲಿ ಮನವಿ

    ಮಡಿಕೇರಿ: ಆರನೇ ವೇತನ ಜಾರಿಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಕೊಡಗಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.

    ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆಯಿಂದಲೇ ಬಸ್ಸುಗಳು ಮಡಿಕೇರಿಯ ಡಿಪೋ ಬಿಟ್ಟು ರಸ್ತೆಗೆ ಇಳಿಯಲಿಲ್ಲ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಖಾಸಗಿ ಬಸ್ ಮತ್ತು ಕ್ಯಾಬ್ ಗಳು ತಮ್ಮ ಸೇವೆ ಆರಂಭಿಸಿದ್ದರಿಂದ ಪ್ರಯಾಣಿಕರು ನಿರಾಳರಾದರು. ಸರ್ಕಾರಿ ಬಸ್ ಒಂದೇ ಒಂದು ಕೂಡ ಡಿಪೋ ಬಿಟ್ಟು ಹೊರಗೆ ಬಾರದಿದ್ದರಿಂದ ಮಡಿಕೇರಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಹೊಡೆಯುತಿತ್ತು. ದೂರ ದೂರದ ಹೊರ ಜಿಲ್ಲೆಗಳಿಗೆ ಹೋಗಬೇಕಾಗಿದ್ದ ಕೆಲವರು ಬಸ್‍ಗಳ ವ್ಯವಸ್ಥೆ ಇಲ್ಲದೆ ಪರದಾಡಿದರು.

    ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಗಮಿಸಿದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಮುಷ್ಕರ ನಡೆಸುವ ಮೂಲಕ ನಿಮ್ಮ ಸಂಸ್ಥೆಗೆ ನೀವೇ ನಷ್ಟ ಮಾಡುತ್ತಿದ್ದೀರಿ. ಅನ್ನ ಕೊಡುವ ಸಂಸ್ಥೆಗೆ ಮಣ್ಣು ಹಾಕುತ್ತಿದ್ದೀರಿ ಎಂದು ಗರಂ ಆದರು. ಅಷ್ಟೇ ಅಲ್ಲ ನಿಮ್ಮ ಪ್ರತಿಭಟನೆಯನ್ನು ಕೈಬಿಡಿ, ನಾವು ಕೂಡ ಕಳೆದ ಒಂದು ವರ್ಷದಿಂದ ಅರ್ಧ ಸಂಬಳ ತೆಗೆದುಕೊಳ್ಳುತ್ತಿದ್ದೇವೆ. ಕೋವಿಡ್ ನಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇದು ಸರಿಯಾದ ಬಳಿಕ ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ ಎಂದರು. ಇದಕ್ಕೆ ನೌಕರರು ಕೂಡ ಸರ್ಕಾರ ಈಗ ಆರನೇ ವೇತನ ಜಾರಿಮಾಡಲಿ, ಆರ್ಥಿಕ ಸಂಕಷ್ಟದಿಂದ ಹೊರಬಂದ ಬಳಿಕವೇ ನಮಗೆ ಸಮಾನ ವೇತನ ನೀಡಲಿ ಎಂದು ಆಗ್ರಹಿಸಿ ಅಪ್ಪಚ್ಚು ರಂಜನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.