Tag: government

  • ಸರ್ಕಾರದಿಂದ ಮತ್ತೆ ಮಾರ್ಗಸೂಚಿ ಪರಿಷ್ಕರಣೆ – ನಾಳೆಯಿಂದ ರಾಜ್ಯಾದ್ಯಂತ ಮಾರುಕಟ್ಟೆಗಳು ಸ್ತಬ್ಧ

    ಸರ್ಕಾರದಿಂದ ಮತ್ತೆ ಮಾರ್ಗಸೂಚಿ ಪರಿಷ್ಕರಣೆ – ನಾಳೆಯಿಂದ ರಾಜ್ಯಾದ್ಯಂತ ಮಾರುಕಟ್ಟೆಗಳು ಸ್ತಬ್ಧ

    ಬೆಂಗಳೂರು: ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ತನ್ನ ಮಾರ್ಗಸೂಚಿಯನ್ನ ಪರಿಷ್ಕರಣೆ ಮಾಡಿದೆ. ನಾಳೆಯಿಂದ ಎಲ್ಲಾ ರೀತಿಯ ಸಂತೆಗಳು, ವಾರದ ಸಂತೆಗಳ ಬಂದ್ ಆಗಲಿವೆ.

     

    ಎಪಿಎಂಸಿ ಮತ್ತು ದಿನಸಿ ಅಂಗಡಿಗಳು ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ನೀಡಲಾಗಿದೆ. ಈ ಮೊದಲು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿತ್ತು. ಜನಸಂದಣಿ ತಡೆಯುವ ಹಿನ್ನೆಲೆ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

    ಮಾರುಕಟ್ಟೆ ಬಂದ್ ಆದ್ರೂ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಾಪ್ ಕಾಮ್ಸ್ ತೆರೆಯಲು ಅನುಮತಿ ನೀಡಲಾಗಿದೆ. ತಳ್ಳುವ ಗಾಡಿಗಳ ಮೂಲಕ ಹಣ್ಣು, ತರಕಾರಿ ಮಾರಲು ಅವಕಾಶ ಕಲ್ಪಿಸಲಾಗಿದ್ದು, ದುಬಾರಿ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

  • ಆಕ್ಸಿಜನ್ ಸಿಗದೆ ವೈದ್ಯ ಸೇರಿ ಎಂಟು ಜನರ ಸಾವು

    ಆಕ್ಸಿಜನ್ ಸಿಗದೆ ವೈದ್ಯ ಸೇರಿ ಎಂಟು ಜನರ ಸಾವು

    ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಓರ್ವ ವೈದ್ಯ ಸೇರಿ 8 ಜನ ಕೊರೊನಾ ರೋಗಿಗಳು ಮೃತಪಟ್ಟಿರುವ ಕುರಿತು ಡೆಲ್ಲಿ ಹೈಕೋರ್ಟ್ ಆಸ್ಪತ್ರೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.

    ಈ ಕುರಿತು ಹೈಕೋರ್ಟಿಗೆ ಸ್ಪಷ್ಟನೆ ನೀಡಿರುವ ಬಾತ್ರಾ ಆಸ್ಪತ್ರೆ, ನಮಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗಲಿಲ್ಲ. ನಮಗೆ ಮಧ್ಯಾಹ್ನ 12 ಗಂಟೆಗೆ ಆಕ್ಸಿಜನ್ ಬೇಕಾಗಿತ್ತು. ಆದರೆ ನಮಗೆ ಸಿಕ್ಕಿದ್ದು ಮಧ್ಯಾಹ್ನ 1.35 ಗಂಟೆಗೆ. ಹಾಗಾಗಿ ನಮ್ಮ ಆಸ್ಪತ್ರೆಯ ವೈದ್ಯರನ್ನು ಸೇರಿ 8 ಜನರನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ.

    ನಾವು ಹಲವು ಗಂಟೆಗಳ ಕಾಲ ಆಕ್ಸಿಜನ್ ಇಲ್ಲದೆ ಪರದಾಡುವಂತಾಯಿತು. ಹಾಗಾಗಿ ನಮ್ಮ ಆಸ್ಪತ್ರೆಯ ಒಬ್ಬ ವೈದ್ಯರು ಸೇರಿ 8 ಜನರನ್ನು ಕಳೆದುಕೊಂಡಿದ್ದೇವೆ ಎಂದು ಬಾತ್ರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್.ಸಿ.ಎಲ್ ಗುಪ್ತಾ ತಿಳಿಸಿದ್ದಾರೆ.

    ಆಕ್ಸಿಜನ್ ಮುಗಿಯಲು ಕೇವಲ 10 ನಿಮಿಷಗಳು ಬಾಕಿ ಇರುವಂತೆ ಬಾತ್ರಾ ಆಸ್ಪತ್ರೆಯಲ್ಲಿ 326 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

    ಈ ಕುರಿತು ದೆಹಲಿ ಸರ್ಕಾರದ ಸಚಿವರಾದ ರಾಘವ್ ಚಡ್ಡಾ ಮಾತನಾಡಿ, ನಮ್ಮ ಆಕ್ಸಿಜನ ಪೂರೈಕೆಯ ಟ್ಯಾಂಕರ್ ಬಾತ್ರಾ ಆಸ್ಪತ್ರೆಗೆ 5 ನಿಮಿಷದಲ್ಲಿ ತಲುಪಿದೆ. ಅದರೆ ಅವರಿಗೆ ಪ್ರತಿದಿನ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದವರು ಮಾಡಿದ ತಪ್ಪಿನಿಂದಾಗಿ ಈ ರೀತಿಯಾಗಿದೆ. ನಾವು ಆಕ್ಸಿಜನ್ ತಲುಪಿಸುತ್ತಿದ್ದಂತೆ ಆಸ್ಪತ್ರೆಯಲ್ಲಿ 8 ಜನ ರೋಗಿಗಳು ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಎಲ್ಲಾ ಘಟನೆಗಳ ಬಳಿಕ ಏಪ್ರಿಲ್ 1ರ ಬಳಿಕ ದೆಹಲಿಯ ಆಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಂಗಳಲ್ಲಿ ದಾಖಲಾಗಿರುವ ರೋಗಿಗಳ ವಿವರ ಕೊಡುವಂತೆ ವೈದ್ಯಕೀಯ ಅಧೀಕ್ಷಕರು, ಆಸ್ಪತ್ರೆ ಮಾಲಿಕರು ಮತ್ತು ನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.

    ಈ ಪ್ರಕಾರ ಆಸ್ಪತ್ರೆಗಳು 4 ದಿನಗಳ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೂರ್ಣ ಮಾಹಿತಿಯನ್ನು ಕೋರ್ಟ್‍ಗೆ ಸಲ್ಲಿಸಬೇಕಾಗಿದೆ. ಈ ಕೊರೊನಾ ಎಂಬ ಕಷ್ಟಕಾಲದಲ್ಲಿ ಆಸ್ಪತ್ರೆಗಳು ಎದುರಿಸಿದ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗಳು ಪಾಠ ಕಲಿತು ಮುಂದೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಗುರಿ ಇಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಅಭಿಪ್ರಯಾಪಟ್ಟಿದೆ.

  • ಜನರ ಜೀವ ಉಳಿಸೋದು ಸರ್ಕಾರಕ್ಕೆ ದೊಡ್ಡ ಕೆಲಸ ಅಲ್ಲ – ಕಿರುತೆರೆ ನಟ ರಕ್ಷಿತ್

    ಜನರ ಜೀವ ಉಳಿಸೋದು ಸರ್ಕಾರಕ್ಕೆ ದೊಡ್ಡ ಕೆಲಸ ಅಲ್ಲ – ಕಿರುತೆರೆ ನಟ ರಕ್ಷಿತ್

    ಬೆಂಗಳೂರು: ಜನರ ಜೀವ ಉಳಿಸೋದು ಸರ್ಕಾರಕ್ಕೆ ದೊಡ್ಡ ಕೆಲಸ ಅಲ್ಲ. ದಯವಿಟ್ಟು ಜನರ ಜೀವ ಉಳಿಸಿ ಎಂದು ಕಿರುತೆರೆ ಕಲಾವಿದ ರಕ್ಷಿತ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ನಾನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದು ಬಹಳ ಕಡಿಮೆ. ಆದರೆ ಇಂದು ನಾನು ಕೆಲವು ಮಾಹಿತಿಗಳನ್ನು ನೀಡಲು ಇಷ್ಟ ಪಡುತ್ತೇನೆ. ರಾಜ್ಯದಲ್ಲಿ 14 ಆಕ್ಸಿಜನ್ ಪ್ಲಾಂಟ್‍ಗಳ ಅವಶ್ಯಕತೆ ಇದೆ. ಒಂದು ಆಕ್ಸಿಜನ್ ಪ್ಲಾಂಟ್‍ಗೆ 25 ರಿಂದ 30 ಕೋಟಿ ಖರ್ಚಾಗುತ್ತದೆ. ಸರ್ಕಾರಕ್ಕೆ ಇದು ದೊಡ್ಡ ಮೊತ್ತವಲ್ಲ. ನಿಮ್ಮ ರಾಜಕೀಯದ ಜಗಳವನ್ನು ನಿಲ್ಲಿಸಿ ಜನರ ಜೀವ ಉಳಿಸಿ ರಕ್ಷಿತ್ ಹೇಳಿದ್ದಾರೆ.

    ಹಲವು ವರ್ಷಗಳ ಬಳಿಕ ರಕ್ಷಿತ್ ಸೋಶಿಯಲ್ ಮೀಡಿಯಾದ ಮೂಲಕ ಬಡವರು ಆಕ್ಸಿಜನ್ ಪಡೆಯುವುದು ಎಷ್ಟು ಕಷ್ಟ ಎಂಬುವುದನ್ನು ವೀಡಿಯೋ ಮಾಡಿ ವಿವರಿಸಿದ್ದಾರೆ. ಅಮೃತ ವರ್ಷಿಣಿ ಧಾರವಾಹಿಯಲ್ಲಿ ನಾಯಕನಾಗಿ ಹಾಗೂ ಯಜಮಾನಿ ಧಾರವಾಹಿಯ ಪ್ರಮುಖ ಪಾತ್ರದಲ್ಲಿ ರಕ್ಷಿತ್ ಅಭಿನಯಿಸಿದ್ದರು.

  • ತೆಲಂಗಾಣದಲ್ಲಿ ಮೇ 8ರವರೆಗೂ ನೈಟ್‌ ಕರ್ಫ್ಯೂ ವಿಸ್ತರಣೆ

    ತೆಲಂಗಾಣದಲ್ಲಿ ಮೇ 8ರವರೆಗೂ ನೈಟ್‌ ಕರ್ಫ್ಯೂ ವಿಸ್ತರಣೆ

    ಹೈದರಾಬಾದ್: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತೆಲಂಗಾಣ ಸರ್ಕಾರವು ನೈಟ್‌ ಕರ್ಫ್ಯೂವನ್ನು ಶುಕ್ರವಾರದಿಂದ ಮೇ 8 ವರೆಗೆ, 7 ದಿನಗಳ ಕಾಲ ವಿಸ್ತರಿಸಿದೆ. ಇಂದು ರಾತ್ರಿ 9 ಗಂಟೆಯಿಂದ ರಾಜ್ಯವ್ಯಾಪ್ತಿ ನೈಟ್‌ ಕರ್ಫ್ಯೂ ಜಾರಿಗೆ ಬರಲಿದ್ದು, ಮೇ 8ರ ಬೆಳಗ್ಗೆ 5 ಗಂಟೆವರೆಗೂ ಮುಂದುವರೆಯಲಿದೆ ಎಂದು ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.

    ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿ.ವಿಜಯ್ಸೆನ್ ರೆಡ್ಡಿಯನ್ನೊಳಗೊಂಡಂತೆ ತೆಲಂಗಾಣ ಹೈಕೋರ್ಟ್‍ನ ವಿಭಾಗೀಯ ಪೀಠವು ಶುಕ್ರವಾರ ನೈಟ್‌ ಕರ್ಫ್ಯೂ ಮುಕ್ತಾಯಗೊಂಡ ನಂತರ ರಾಜ್ಯ ಸರ್ಕಾರ ಏನು ಮಾಡುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ತೆಲಂಗಾಣ ಸರ್ಕಾರ ನೈಟ್‌ ಕರ್ಫ್ಯೂ ವಿಸ್ತರಿಸಿರುವ ಬಗ್ಗೆ ಅಡ್ವೊಕೇಟ್ ಜನರಲ್ ಬಿ. ಎಸ್ ಪ್ರಸಾದ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

    ತೆಲಂಗಾಣದಲ್ಲಿ ಶುಕ್ರವಾರ 7,646 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು 4.35 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದೆ ಮತ್ತು 53 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ 2,261ಕ್ಕೆ ಏರಿಕೆಯಾಗಿದೆ.

  • ಕದ್ದು ಮುಚ್ಚಿ ಮಾರೋದು ಬಿಜೆಪಿಯ ಸಂಸ್ಕೃತಿ: ಹೆಚ್.ಡಿ.ಕುಮಾರಸ್ವಾಮಿ

    ಕದ್ದು ಮುಚ್ಚಿ ಮಾರೋದು ಬಿಜೆಪಿಯ ಸಂಸ್ಕೃತಿ: ಹೆಚ್.ಡಿ.ಕುಮಾರಸ್ವಾಮಿ

    – ಜಿಂದಾಲ್‍ಗೆ 3,667 ಎಕರೆ ಭೂಮಿ ಮಾರಾಟ ಮಾಡಲು ನಿರ್ಧಾರ
    – ಬಿಜೆಪಿ ಜಿಂದಾಲ್ ಮುಂದೆ ಮಂಡಿಯೂರಲು ಒಂದು ಕಾರಣವಿದೆ

    ಬೆಂಗಳೂರು: ಜಿಂದಾಲ್ ಕಂಪನಿಗೆ ಸರ್ಕಾರ 3,667 ಎಕರೆ ಭೂಮಿ ಮಾರಾಟಕ್ಕೆ ಬಿಎಸ್‍ವೈ ಸರ್ಕಾರಕ್ಕೆ ಮುಂದಾಗಿರುವ ನಡೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಈ ನಿರ್ಧಾರವನ್ನ ವಿರೋಧಿಸಿದ್ದ ಬಿಜೆಪಿ, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಅವರ ಮುಂದೆ ಸಾಲು ಸಾಲು ಪ್ರಶ್ನೆಗಳನ್ನಿರಿಸಿದ್ದಾರೆ.

    ‘ಬಿಎಸ್‍ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ…’ ಜಿಂದಾಲ್‍ಗೆ 3,677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಹೋರಾಟಗಳಿವು. ಆದರೆ ಇಂದು ಬಿಜೆಪಿ ಅದೇ ಜಿಂದಾಲ್‍ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ.

    ವಿರೋಧಕ್ಕಾಗಿಯೇ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿಯ ‘ಸಂಸ್ಕೃತಿ’. ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ, ನನ್ನ ವಿರುದ್ಧ ಸಲ್ಲದ ಆರೋಪ ಮಾಡಿದ್ದ ಬಿಎಸ್‍ವೈ ಇಂದು ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ?

    ಆಗ ಕಾಂಗ್ರೆಸ್ ಶಾಸಕರಾಗಿದ್ದ, ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಆನಂದ್ ಸಿಂಗ್ ಜಿಂದಾಲ್‍ಅನ್ನು ‘ಈಸ್ಟ್ ಇಂಡಿಯಾ ಕಂಪನಿ’ ಎಂದಿದ್ದರು. ಜಿಂದಾಲ್ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್‍ಗೆ ಭೂಮಿ ನೀಡಿದೆ. ಆನಂದ್ ಸಿಂಗ್ ಈಗ ಈಸ್ಟ್ ಇಂಡಿಯಾ ಕಂಪನಿ ಪರವಾಗಿದ್ದಾರಾ?

    ಜಿಂದಾಲ್‍ಗೆ ಭೂಮಿ ನೀಡುವ ವಿಚಾರವಾಗಿ ಅಂದು ಮೈತ್ರಿ ಸರ್ಕಾರದ ಭಾಗವಾಗಿದ್ದುಕೊಂಡೇ ಟೀಕೆ ಮಾಡಿದ್ದ, ದಾಖಲೆ, ಪತ್ರಗಳನ್ನು ಬಿಡುಗಡೆ ಮಾಡಿದ್ದ ಎಚ್.ಕೆ ಪಾಟೀಲ್ ಅವರು ಈಗ ಏನು ಮಾಡುತ್ತಿದ್ದಾರೆ. ಅವರ ದಾಖಲೆ ಪತ್ರಗಳೆಲ್ಲವೂ ಎಲ್ಲಿ ಅಡಗಿಕೊಂಡಿವೆ? ಈಗ ಅವುಗಳನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಯಾರು ಅಡ್ಡ ಇದ್ದಾರೆ?

    ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಗೃಹ ಸಚಿವರೇ ‘ಗೊತ್ತಿಲ್ಲ’ ಎಂಬ ಉತ್ತರ ನೀಡಿದ್ದಾರೆ. ಸ್ವತಃ ಗೃಹ ಸಚಿವರಿಗೇ ಮಾಹಿತಿ ಇಲ್ಲ ಎಂದರೆ ಏನು ಅರ್ಥ? ಇದನ್ನು ನಂಬಲು ಸಾಧ್ಯವೇ.

    ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡಬೇಕಾದ್ದು ಕಾನೂನು. ಅದನ್ನೇ ನನ್ನ ಸರ್ಕಾರ ಮಾಡಲು ಹೊರಟಿತ್ತು. ಆದರೆ ಬಿಜೆಪಿ ಕಿತಾಪತಿ ಮಾಡಿತ್ತು. ಜನರಲ್ಲಿ ಮೂಡಬಹುದಾದ ಸಂಶಯ ನಿವಾರಣೆ ಮಾಡಿ ನಂತರ ಭೂಮಿ ನೀಡುವ ನಿರ್ಧಾರಕ್ಕೆ ಬಂದ ನನ್ನ ಸರ್ಕಾರ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಬಿಜೆಪಿಗೆ ಈಗ ಜ್ಞಾನೋದಯವಾಗಿದೆ.

    ಬಿಜೆಪಿ ಸರ್ಕಾರ ಜಿಂದಾಲ್ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪರಿಗೆ ಚನ್ನಾಗಿ ಗೊತ್ತಿದೆ. ಅದನ್ನು ಅವರೇ ಬಹಿರಂಗಪಡಿಸಲಿ. ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಅಂತಿಮವಾಗಿ ಕ್ರಯ ಮಾಡಿಕೊಡಲೇಬೇಕಾದ ಕಾನೂನು ಬಿಜೆಪಿಗೆ ಈಗಲಾದರೂ ಅರಿವಿಗೆ ಬಂದಿದ್ದರೆ ಸಾಕು. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ.

  • ಸರ್ಕಾರದ ನಿರ್ಲಕ್ಷ್ಯದಿಂದ ಹೆಚ್ಚಿನ ಸಾವು ಆಗುತ್ತಿದೆ- ರಾಹುಲ್ ಗಾಂಧಿ

    ಸರ್ಕಾರದ ನಿರ್ಲಕ್ಷ್ಯದಿಂದ ಹೆಚ್ಚಿನ ಸಾವು ಆಗುತ್ತಿದೆ- ರಾಹುಲ್ ಗಾಂಧಿ

    ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದಾಗಿ ಮನುಷ್ಯನ ದೇಹದಲ್ಲಿ ಆಮ್ಲಜನಕದ ಕೊರತೆ ಮಾತ್ರ ಉಂಟಾಗುತ್ತದೆ. ಆದರೆ ಮೋದಿ ಸರ್ಕಾರದ ನಿರ್ಲಕ್ಷ್ಯ ತೊರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

    ಕೊರೋನಾ ವೈರಸ್ ಸೋಂಕಿನಿಂದಾಗಿ ಮನುಷ್ಯನ ದೇಹದಲ್ಲಿ ಆಮ್ಲಜನಕದ ಕೊರತೆ ಮಾತ್ರ ಉಂಟಾಗುತ್ತದೆ. ಆದರೆ ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗೆ ಅನಿವಾರ್ಯವಾಗಿ ಬೇಕಾದ ಆಮ್ಲಜನಕ ಜನಕದ   ಸಿಲಿಂಡರ್‌ಗಳು  ಮತ್ತು ಐಸಿಯು ಬೆಡ್ ಕೊರತೆಯುಂಟಾಗಿದೆ. ಇದರಿಂದಲೇ ಸಾವಿರಾರು ಮಂದಿ ನಿತ್ಯ ಸಾವಿಗೀಡಾಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ದೇಶದಲ್ಲಿ ಇಂದು 3.32 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದು ಈ ವರೆಗಿನ ದಾಖಲೆಯಾಗಿ ಉಳಿದಿದೆ. ಅಂತೆಯೇ 2,263 ಸೋಂಕಿತರು ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಕೊರೊನಾ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

  • ಕೊರೊನಾ ನಿಯಮ ಉಲ್ಲಂಘಿಸಿ ಶ್ರೀರಾಮುಲು ಚುನಾವಣಾ ಪ್ರಚಾರ

    ಕೊರೊನಾ ನಿಯಮ ಉಲ್ಲಂಘಿಸಿ ಶ್ರೀರಾಮುಲು ಚುನಾವಣಾ ಪ್ರಚಾರ

    ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಆದರೆ ಇದೆಲ್ಲವನ್ನು ಮರೆತಿರುವಂತೆ ಕಾಣುತ್ತಿರುವ ಸಚಿವರಾದ ಶ್ರೀರಾಮುಲು, ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿರುವ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

    ಕೊರೊನಾ ಎರಡನೇ ಅಲೆ ದೇಶದಾದ್ಯಂತ ಜೋರಾಗಿರುವುದರಿಂದಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮದ ಪ್ರಕಾರ ಕೇವಲ ಐದೇ ಜನ ಸೇರಿಸಿ ಚುನಾವಣಾ ಪ್ರಚಾರ ಮಾಡುವಂತೆ ಸರ್ಕಾರ ಖಡಕ್ ಆದೇಶ ಕೊಟ್ಟಿದೆ. ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ರಾಮುಲು, ಬಳ್ಳಾರಿ ಪಾಲಿಕೆ ಚುನಾವಣೆ ಹಿನ್ನಲೆ ವಿವಿಧ ವಾರ್ಡ್‍ಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಪ್ರಚಾರದಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.


    ಮೊನ್ನೆಯಷ್ಟೇ ಜನ ಸಂದಣಿಯಲ್ಲಿ ರಾಮುಲು ಪ್ರಚಾರ ಮಾಡಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಮತ್ತೆ ಇವತ್ತು ಬಳ್ಳಾರಿಯ 16 ನೇ ವಾರ್ಡಿನಲ್ಲಿ ರಾಮುಲು ನೂರಾರು ಜನರನ್ನು ಸೇರಿಸಿಕೊಂಡು ಪ್ರಚಾರ ಮಾಡಿದ್ದಾರೆ. ನಿತ್ಯ ಬಳ್ಳಾರಿಯಲ್ಲಿ ಕರೊನಾ ಸ್ಫೋಟ ಅದ್ರೂ ಕೂಡ ಕೇರ್ ಮಾಡದೆ ರಾಮುಲು ಪ್ರಚಾರದಲ್ಲಿ ತೋಡಗಿಕೊಂಡಿರುವುದನ್ನು ಕಂಡ ಸಾರ್ವಜನಿಕರು ಸರ್ಕಾರ ಮಾಡಿದ ರೂಲ್ಸ್ ಗಳಿಗೆ ಸಚಿವರಿಂದಲೇ ಬೆಲೆ ಇಲ್ವ ಎಂದು ಪ್ರಶ್ನಿಸುವಂತಾಗಿದೆ.

  • ಸರ್ಕಾರದ ಮಾರ್ಗಸೂಚಿಗೆ ಹೆಚ್‍ಡಿಕೆ ಅಸಮಾಧಾನ

    ಸರ್ಕಾರದ ಮಾರ್ಗಸೂಚಿಗೆ ಹೆಚ್‍ಡಿಕೆ ಅಸಮಾಧಾನ

    ಬೆಂಗಳೂರು: ಸರ್ಕಾರದ ಮಾರ್ಗಸೂಚಿ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಕೋವಿಡ್ ತಡೆಯುವ ಕುರಿತು ಸರ್ಕಾರ ಮ್ಯಾರಥಾನ್ ಸಭೆಗಳನ್ನು ಮಾಡಿದೆ, ವಿರೋಧ ಪಕ್ಷದ ನಾಯಕರ ಸಲಹೆ ಪಡೆದಿದೆ. ಜನರನ್ನು ಸೋಂಕಿನಿಂದ ದೂರವಿಡಲು ಮಾರ್ಗಸೂಚಿಗಳನ್ನು ಮಂಗಳವಾರ ಪ್ರಕಟಿಸಿದೆ. ಆದರೆ ಈಗಾಗಲೇ ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು, ಅವರ ಜೀವ ಉಳಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರ್ಕಾರ ಮಾತಾಡಬೇಕು ಎಂದಿದ್ದಾರೆ.

    ಮಂಗಳವಾರದ ಸಭೆಯ ನಂತರ ಜನರಿಗೆ ಕೇವಲ ಮಾರ್ಗಸೂಚಿಗಳನ್ನು ಮಾತ್ರ ಸೂಚಿಸಲಾಯಿತು. ಸೋಂಕಿನಿಂದ ದೂರ ಇರುವ ಸಲಹೆ ನೀಡಲಾಯಿತು. ಆದರೆ ಈಗಾಗಲೇ ಅಸ್ಪತ್ರೆಗಳಲ್ಲಿರುವವರ ರಕ್ಷಣೆಗಾಗಿ ಏನು ಮಾಡಲಾಗಿದೆ, ಏನೇನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಭೆಯ ನಂತರ ಸರ್ಕಾರ ಹೇಳಿಲ್ಲ ಏಕೆ..? ಸೋಂಕಿತರ ಪರಿಸ್ಥಿತಿಯನ್ನು ಸರ್ಕಾರ ಅರಿತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

    ಕೋವಿಡ್‍ನ ಎರಡನೇ ಅಲೆ ಬರುವುದಾಗಿ ಸರ್ಕಾರಕ್ಕೆ ತಜ್ಞರು, ವಿಪಕ್ಷ ನಾಯಕರು ಹೇಳುತ್ತಲೇ ಬಂದಿದ್ದಾರೆ. ವರದಿಗಳನ್ನು ಪಡೆದುಕೊಂಡ ಸರ್ಕಾರ ಈ ವರೆಗೆ ಏನು ಮಾಡಿಕೊಂಡಿತ್ತು? ಕೋವಿಡ್ ಬಂದಿದ್ದು ಒಂದೂವರೆ ವರ್ಷಗಳ ಹಿಂದೆ. ಮುಂದೊಂದು ದಿನ ರಾಕ್ಷಸ ರೂಪಿಯಾಗಬಹುದಾದ ಈ ರೋಗದ ವಿರುದ್ಧ ಸರ್ಕಾರ ಈವರೆಗೆ ಮಾಡಿಕೊಂಡ ಸಿದ್ಧತೆಗಳು ಏನಾಗಿದ್ದವು? ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಔಷಧ, ಪರಿಕರಗಳ ಅಭಾವದ ಬಗ್ಗೆ ನಾನು ಈಗಾಗಲೇ ಮಾತಾಡಿದ್ದೇನೆ, ಎಚ್ಚರಿಕೆಯನ್ನೂ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಇದರ ಬಗ್ಗೆ ಏನು ಕ್ರಮ ಕೈಗೊಂಡಿದೆ ಸರ್ಕಾರ? ಚಿಕಿತ್ಸೆಯೇ ದುರ್ಬಲವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ಹಂತದಲ್ಲಿ ಕುಗ್ಗಿ ಹೋಗಿರುವ ಜನರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಕ್ರಮ ಕೈಗೊಂಡಿದೆಯೇ? ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಚಿಂತಾಜನಕ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ಆಮ್ಲಜನಕ ಸಿಗುತ್ತಿಲ್ಲ. ರೆಮ್‍ಡಿಸಿವಿರ್ ಔಷಧವೂ ಸಿಗುತ್ತಿಲ್ಲ ಎಂಬುದರ ಬಗ್ಗೆ ಕೆಲವು ದಿನಗಳಿಂದ ಎಚ್ಚರಿಸುತ್ತಲೇ ಬಂದಿದ್ದೇನೆ ಅಂದ್ರು.

    ಅತ್ಯಗತ್ಯವಾಗಿರುವ ಈ ಸವಲತ್ತುಗಳನ್ನು ಸರ್ಕಾರ ಹೊಂದಿಸುವ ಪ್ರಯತ್ನ ಮಾಡಿದೆಯೇ? ಇದನ್ನು ಮೊದಲು ಹೇಳಲಿ. ಒಂದೆಡೆ ಸೂಕ್ತ ಚಿಕಿತ್ಸೆ ಸಿಗದೇ ಸೋಂಕಿತರು ಪರದಾಡುತ್ತಿದ್ದಾರೆ. ಆರೋಗ್ಯ ಸೇವೆ ಒದಗಿಸಲಾಗದ ಸರ್ಕಾರದ ದೈನೇಸಿ ಸ್ಥಿತಿಯ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಲ್ಲವೇ?, ಜನರ ರಕ್ಷಣೆಗಾಗಿ ಮಾಡಿಕೊಂಡಿರುವ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರ್ಕಾರ ಹೇಳಬೇಕಲ್ಲವೇ?, ಜನರನ್ನು ಯಾವುದೇ ಹಂತದಲ್ಲಿ ಸರ್ಕಾರ ರಕ್ಷಣೆ ಮಾಡುತ್ತದೆ. ಅವರ ಜೀವಕ್ಕೆ ಆಧಾರವಾಗಿರುತ್ತದೆ ಎಂಬ ವಿಶ್ವಾಸವನ್ನು ತುಂಬುವುದು ಅಗತ್ಯ ಎಂದಿದ್ದಾರೆ. ಅದು ಬಿಟ್ಟು ಯಾವುದೇ ಕಠಿಣ ಕ್ರಮಗಳನ್ನು ಕೈಗೊಂಡರೂ ಅದು ನಗಣ್ಯ. ಈ ವಿಷಯವನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಕೊರತೆ ನೀಗಿಸುವ ಕ್ರಮಗಳ ಬಗ್ಗೆ ಸರ್ಕಾರ ಮಾತಾಡಬೇಕು ಎಂದು ತಿಳಿಸಿದ್ದಾರೆ.

  • ತೆಲಂಗಾಣದಲ್ಲಿ ಮೇ 1ರವರೆಗೂ ನೈಟ್ ಕರ್ಫ್ಯೂ ಘೋಷಿಸಿದ ಸರ್ಕಾರ

    ತೆಲಂಗಾಣದಲ್ಲಿ ಮೇ 1ರವರೆಗೂ ನೈಟ್ ಕರ್ಫ್ಯೂ ಘೋಷಿಸಿದ ಸರ್ಕಾರ

    ಹೈದರಾಬಾದ್: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಮೇ 1ರವರೆಗೂ ತೆಲಂಗಾಣ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.

    ತೆಲಂಗಾಣ ಸರ್ಕಾರದ ಆದೇಶದಂತೆ ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

    ಈ ಹಿಂದೆ ತೆಲಂಗಾಣ ಹೈಕೋರ್ಟ್ ಕೂಡ ಕೋವಿಡ್-19 ಸೋಂಕನ್ನು ತಡೆಗಟ್ಟಲು ರಾತ್ರಿ ಹಾಗೂ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸುವಂತೆ ಸರ್ಕಾರಕ್ಕೆ ತಿಳಿಸಿತ್ತು. ಸೋಮವಾರ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‍ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

  • ರಾಜಕೀಯ ಅಲ್ಲ, ಧಾರ್ಮಿಕ ಕಾರ್ಯಕ್ರಮದ ಅನಿವಾರ್ಯತೆ ಇದೆ: ರಘುಪತಿ ಭಟ್

    ರಾಜಕೀಯ ಅಲ್ಲ, ಧಾರ್ಮಿಕ ಕಾರ್ಯಕ್ರಮದ ಅನಿವಾರ್ಯತೆ ಇದೆ: ರಘುಪತಿ ಭಟ್

    – ಆದೇಶ ವಾಪಾಸ್ ಪಡೆಯುವಂತೆ ಆಗ್ರಹ

    ಉಡುಪಿ: ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಎಂಬ ಆದೇಶವನ್ನು ತಕ್ಷಣ ವಾಪಸ್ ಪಡೆಯಿರಿ. ರಾಜಕೀಯ ಕಾರ್ಯಕ್ರಮಗಳ ಅವಶ್ಯಕತೆ ಇಲ್ಲ, ಧಾರ್ಮಿಕ ಕಾರ್ಯಕ್ರಮಗಳ ಅನಿವಾರ್ಯತೆಯಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರ್ಯಕ್ರಮಗಳಿಗೆ ನೂರು ಜನ ಭಾಗವಹಿಸುವ ಅವಕಾಶ ಕೊಟ್ಟಿದ್ದೀರಿ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಕಾರ್ಯಕ್ರಮ ಅನಿವಾರ್ಯ ಇಲ್ಲ. ನಮ್ಮ ಜಿಲ್ಲೆಯ ಯಾವುದೇ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ. ಜನರ ಭಾವನೆಗಳಿಗೆ ಅಡ್ಡಿ ಮಾಡದೆ ತಕ್ಷಣ ಆದೇಶ ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಉಡುಪಿಯಲ್ಲಿ ಧಾರ್ಮಿಕ ಕೇಂದ್ರಗಳೇ ಹೆಚ್ಚು. ಸಿಎಂ, ಆರೋಗ್ಯ ಸಚಿವ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಜನ ಕಂಕಣ ಬದ್ಧರಾಗಿದ್ದಾರೆ. ಮುಹೂರ್ತ ನಿಗದಿಯಾಗಿದೆ. ಎಲ್ಲಾ ಸಿದ್ಧತೆಗಳು ನಡೆದಿವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಾನೊಬ್ಬ ಆಡಳಿತ ಪಕ್ಷದ ಸದಸ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡದಿರುವುದು ಜನಪ್ರಿಯ ಸರಕಾರದ ಲಕ್ಷಣವಲ್ಲ ಎಂದು ಹೇಳಿದರು.

    ಕೋವಿಡ್ ನಿಯಮಾವಳಿಗಳನ್ನು ರೂಪಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ. ಭಾಗವಹಿಸುವ ಭಕ್ತರ ಸಂಖ್ಯೆಯನ್ನು ನಿಗದಿಪಡಿಸಿ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಧಾರ್ಮಿಕ ಕಾರ್ಯಕ್ರಮಗಳು ಅತ್ಯಗತ್ಯ. ಜನಸಂದಣಿ ಗೆ ನಿಯಂತ್ರಣ ಹೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ. ಹಿಂದುಳಿದ ಜನಾಂಗದವರೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದುಡಿಯುತ್ತಾರೆ. ಎರಡು ಮೂರು ತಿಂಗಳು ದುಡಿದು ಒಂದು ವರ್ಷದಿಂದ ಮಾಡುತ್ತಾರೆ. ಬಡ ಜನರಿಗೆ ಇದರಿಂದ ಆರ್ಥಿಕ ಹೊಡೆತ ಬೀಳುತ್ತದೆ. ಕರಾವಳಿಯ ಜೀವನಪದ್ಧತಿಯನ್ನು ಅರ್ಥಮಾಡಿಕೊಳ್ಳಿ. ಉಡುಪಿ ನಗರಕ್ಕೆ ನೈಟ್ ಕಪ್ರ್ಯೂ ನ ಅಗತ್ಯವೂ ಇಲ್ಲ. ಕೊರೋನ ನಿಯಂತ್ರಣಕ್ಕೆ ಲಾಕ್ಡೌನ್ ಪರಿಹಾರ ಅಲ್ಲ ಎಂದರು.