Tag: government

  • ಜಾಗತಿಕ ಆವಿಷ್ಕಾರ ಮೈತ್ರಿಕೂಟದ 11ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರ ಜೊತೆ ಡಿಸಿಎಂ ಮಾತುಕತೆ

    ಜಾಗತಿಕ ಆವಿಷ್ಕಾರ ಮೈತ್ರಿಕೂಟದ 11ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರ ಜೊತೆ ಡಿಸಿಎಂ ಮಾತುಕತೆ

    – ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಪಿಎಚ್‍ಸಿಗೊಂದು ಕೋವಿಡ್ ಕಾರ್ಯಪಡೆ

    ಬೆಂಗಳೂರು: ಕೋವಿಡ್-19 ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಹಾಗೂ ಪರಸ್ಪರ, ಸಹಕಾರ, ನೆರವು ಇತ್ಯಾದಿಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಂದು ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರ ಜೊತೆ ಮಹತ್ವದ ಮಾತುಕತೆ ನಡೆಸಿದರು.

    ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಚುಯಲ್ ಸಭೆಯಲ್ಲಿ ಕೋವಿಡ್ ಎದುರಿಸಲು ಕೈಗೊಳ್ಳಲಾಗಿರುವ ಕಾರ್ಯತಂತ್ರ, ವ್ಯಾಕ್ಸಿನೇಷನ್, ವೈದ್ಯಕೀಯ ಸೌಲಭ್ಯ, ಪರಸ್ಪರ ಸಹಕಾರ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಮೆರಿಕ, ಕೆನಡಾ, ನೆದರ್‍ಲ್ಯಾಂಡ್ಸ್, ಬ್ರಿಟನ್, ಜರ್ಮನಿ, ಇಸ್ರೇಲ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಸ್ವಿಡ್ಜರ್ಲೆಂಡ್, ಜಪಾನ್ ಮುಂತಾದ ದೇಶಗಳ ದಕ್ಷಿಣ ಭಾರತ್ ಕಾನ್ಸುಲೇಟ್ ಜನರಲ್‍ಗಳ ಜತೆ ಡಿಸಿಎಂ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಕೋವಿಡ್‍ನಂಥ ಸೋಂಕಿನ ವಿರುದ್ಧ ಹೋರಾಟ ನಡೆಸಲು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ದೇಶಗಳ ಜತೆಗೆ ಎಲ್ಲ ರೀತಿಯ ಸಹಕಾರ ಸಂಬಂಧ ಹೊಂದಲು ಕರ್ನಾಟಕ ಸಿದ್ಧವಿದೆ. 3 ವಾರಗಳ ಹಿಂದೆ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಪ್ಪಳಿಸಿದೆ. ಸರ್ಕಾರವು ಸೋಂಕು ಹರಡುವುದಕ್ಕಿಂತ ವೇಗವಾಗಿ ಹಾಸಿಗೆ ನಿರ್ವಹಣೆ, ಆಮ್ಲಜನಕ ಪೂರೈಕೆ, ಔಷಧಿ ಲಭ್ಯತೆ, ಹೋಮ್ ಐಸೋಲೇಷನ್‍ನಂಥ ಪರಿಹಾರ ಕಾರ್ಯಗಳನ್ನು ಕೈಗೊಂಡು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದರು.

    ರಾಜ್ಯದಲ್ಲಿ ಈಗ ಆಕ್ಸಿಜನ್, ಔಷಧಿ, ಬೆಡ್‍ಗಳ ಕೊರತೆಯನ್ನು ಬಹುತೇಕ ನೀಗಿಸಲಾಗಿದೆ. ಮತ್ತೊಂದೆಡೆ ಸಂಭನೀಯ 3ನೇ ಅಲೆಯನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಹೋಮ್ ಐಸೋಲೇಷನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪ್ರತಿಯೊಬ್ಬ ಸೋಂಕಿತರಿಗೂ ಕೋವಿಡ್ ಕೇರ್‍ನಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

    ವಿವಿಧ ದೇಶಗಳ ನೆರವು ಹೀಗಿದೆ:
    ಜಾಗತಿಕ ಆವಿಷ್ಕಾರ ಮೈತ್ರಿಕೂಟ (GIA) ದೇಶಗಳ ರಾಜತಾಂತ್ರಿಕರು ಸಭೆಯಲ್ಲಿ ನೀಡಿದ ನೆರವಿನ ಮಾಹಿತಿ ಇಲ್ಲಿದೆ.

    ಜಪಾನ್ :
    ದಕ್ಷಿಣ ಭಾರತದ ಜಪಾನ್ ಕಾನ್ಸುಲೇಟ್ ಜನರಲ್ ಅಕಿಕೊ ಸುಗಿತಾ ಅವರು ಭಾರತ ಮತ್ತು ಕರ್ನಾಟಕಕ್ಕೆ ನೀಡಿರುವ ನೆರವಿನ ಮಾಹಿತಿ ನೀಡಿದರು. ಈಗಾಗಲೇ ರಾಜ್ಯದಲ್ಲಿದ್ದ ಬಹತೇಕ ಜಪಾನಿಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಜಪಾನ್ ಸರ್ಕಾರ ಭಾರತಕ್ಕೆ 50 ದಶಲಕ್ಷ ಡಾಲರ್ ಅನುದಾನ ಘೋಷಿಸಿದೆ. 800 ವೆಂಟಿಲೇಟರ್‍ ಗಳು ಮತ್ತು ಆಮ್ಲಜನಕ ಸಿಲಿಂಡರ್‍ ಗಳನ್ನು ಒದಗಿಸಲಾಗಿದೆ ಎಂದ ಅಕಿಕೊ ಸುಗಿತಾ ಅವರು, ಉತ್ಪಾದನಾ ಮತ್ತು ಅತ್ಯಗತ್ಯ ಕೈಗಾರಿಕೆಗಳ ಕಾರ್ಯಚಟುವಟಿಕೆ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಮನವಿ ಮಾಡಿದರು. ಜಪಾನಿನ ಅನೇಕ ಕಂಪನಿಗಳು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪುನಾರಂಭಿಸುವ ಆಶಯ ಹೊಂದಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದರು.

    ದಕ್ಷಿಣ ಕೊರಿಯಾ:
    ದಕ್ಷಿಣ ಕೊರಿಯಾದ ಕಾನ್ಸುಲೇಟ್ ಜನರಲ್ ಯಂಗ್ ಸೀಪ್ ಕ್ವಾನ್ ಅವರು ಮಾತನಾಡಿ, ಈಗಾಗಲೇ 1,500 ಕೊರಿಯನ್ ಪ್ರಜೆಗಳು ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕುವುದು ತುಂಬಾ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವರಿಗೆ ನೆರವಾಗಬೇಕು ಎಂದು ವಿನಂತಿ ಮಾಡಿದರು. ಜಾಗತಿಕ ಮಟ್ಟದಲ್ಲಿರುವ ಲಸಿಕೆಗಳ ಕೊರತೆಯನ್ನು ನೀಗಿಸಲು ವ್ಯಾಕ್ಸಿನ್ ತಯಾರಿಕೆ ಘಟಕಗಳನ್ನು ಸ್ಥಾಪನೆ ಮಾಡಲು ದಕ್ಷಿಣ ಕೊರಿಯಾ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತವೂ ಸೇರಿ ಜಗತ್ತಿನ ಎಲ್ಲ ದೇಶಗಳ ಜೊತೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಿದೆ ಎಂದ ಅವರು, ಭಾರತಕ್ಕೆ ಐದು ವಿಮಾನಗಳಲ್ಲಿ ವೈದ್ಯಕೀಯ ಸರಂಜಾಮುಗಳ ಪೂರೈಕೆ, ಆಮ್ಲಜನಕ ಸಿಲಿಂಡರ್‍ ಗಳು, ವೈದ್ಯಕೀಯ ಮತ್ತು ತಪಾಸಣೆ ಕಿಟ್‍ಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಸ್ತುಗಳು ಭಾರತಕ್ಕೆ ಬಂದಿವೆ. ಅಲ್ಲದೆ, ಇಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿರುವ ಕೊರಿಯಾದ ಎಲ್‍ಜಿ, ಸ್ಯಾಮ್‍ಸಂಗ್ ಮುಂತಾದವು ರಾಜ್ಯಕ್ಕೆ ಆರ್ಥಿಕ ನೆರವು ನೀಡುತ್ತಿವೆ ಎಂದರು.

    ಸ್ವಿಡ್ಜರ್ಲೆಂಡ್:
    ಸ್ವಿಡ್ಜರ್ಲೆಂಡ್ ದೇಶದ ಕಾನ್ಸುಲೇಟ್ ಜನರಲ್ ಸೆಬಾಸ್ಟಿಯನ್ ಹಗ್ ಅವರು ಮಾತನಾಡಿ, ಭಾರತಕ್ಕೆ ಎಲ್ಲ ರೀತಿಯ ನೆರವು ಮತ್ತು ತಾಂತ್ರಿಕ ಮಾಹಿತಿ ಹಂಚಿಕೊಳ್ಳಲು ನಮ್ಮ ದೇಶ ಸಿದ್ಧವಿದೆ. ಭಾರತಕ್ಕೆ 13 ಟನ್ ವೈದ್ಯಕೀಯ ವಸ್ತುಗಳ ನೆರವು ನೀಡಲಾಗಿದೆ. 600 ಆಮ್ಲಜನಕ ಸಾಂದ್ರಕಗಳನ್ನು ಕಳಿಸಿಕೊಡಲಾಗಿದೆ. 40ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಭಾರತಕ್ಕೆ 7 ದಶಲಕ್ಷ ಸ್ವಿಸ್ ಫ್ರಾಂಕ್‍ಗಳಷ್ಟು ನೆರವು ಕೊಟ್ಟಿದೆ. ಅಲ್ಲದೆ, ಜಾಗತಿಕ ಆವಿಷ್ಕಾರ ಪಾಲುದಾರ ಕೂಟದ ಸದಸ್ಯರು ಹೆಚ್ಚು ಹೆಚ್ಚು ಸಭೆಗಳನ್ನು ನಡೆಸುವ ಮೂಲಕ ನೆರವು ಮತ್ತು ಮಾಹಿತಿ ಹಂಚಿಕೆಗೆ ಹೆಚ್ಚು ಸಹಾಯಕವಾಗುತ್ತದೆ ಎಂದು ಸೆಬಾಸ್ಟಿಯನ್ ಹಗ್ ಸಲಹೆ ಮಾಡಿದರು. ಇದಕ್ಕೆ ಡಿಸಿಎಂ ಅವರು ಒಪ್ಪಿಗೆ ಸೂಚಿಸಿದರು.

    ನೆದರ್‍ ಲ್ಯಾಂಡ್ಸ್:
    ಯಾವುದೇ ಸಂದರ್ಭದಲ್ಲೂ ನೆದರ್‍ ಲ್ಯಾಂಡ್ಸ್ ಭಾರತದ ಜೊತೆ ಇರುತ್ತದೆ ಎಂದು ಆ ದೇಶದ ಕಾನ್ಸುಲೇಟ್ ಜನರಲ್ ಆದ ಗೆರ್ಟ್ ಹೈಜ್ಕೂಪ್ ಅವರು ಭರವಸೆ ನೀಡಿದರು. ಇಂತಹ ಸಭೆಗಳನ್ನು ಹೆಚ್ಚೆಚ್ಚು ನಡೆಸಬೇಕು ಎಂದು ಸಲಹೆ ನೀಡಿದರಲ್ಲದೆ ನೆರೆಯ ಮಹಾರಾಷ್ಟ್ರದಲ್ಲಿ ರಾಯಭಾರ ಕಚೇರಿ ಮತ್ತು ದೂತಾವಾಸದ ಸಿಬ್ಬಂದಿಯನ್ನು ಅಗತ್ಯ ಸಿಬ್ಬಂದಿ ಎಂದು ಪರಿಗಣಿಸಲಾಗುತ್ತದೆ. ಕರ್ನಾಟಕವು ಹಾಗೆ ಪರಿಗಣಿಸಬೇಕು ಎಂದು ಕೋರಿದರು. ಈಗಾಗಲೇ ನೆದರ್‍ ಲ್ಯಾಂಡ್ಸ್ 3 ವಿಮಾನಗಳಷ್ಟು ವೈದ್ಯಕೀಯ ಸರಂಜಾಮುಗಳನ್ನು ಭಾರತಕ್ಕೆ ತಲುಪಿಸಿದೆ. ಫಿಲಿಪ್ಸ್ ಕಂಪನಿ ತಯಾರಿಸಿದ 10,000 ಆಮ್ಲಜನಕ ಸಾಂದ್ರಕಗಳನ್ನೂ ಕೂಡ ಒದಗಿಸಿದೆ ಎಂದು ಹೈಜ್ಕೂಪ್ ಮಾಹಿತಿ ನೀಡಿದರು.

    ಅಮೆರಿಕ:
    ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಜನರಲ್ ಜುಡಿತ್ ರವಿನ್ ಅವರು, 100 ಮಿಲಿಯನ್ ಯುಎಸ್ ಡಾಲರ್‍ ನಷ್ಟು ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಆಮ್ಲಜನಕ, ವೈದ್ಯಕೀಯ ಸರಂಜಾಮು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಿದೆ. ಇದೆಲ್ಲವನ್ನೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಲಕ ಕೊಡಲಾಗುತ್ತಿದೆ ಎಂದರು. ಅಲ್ಲದೆ, ಭಾರತ-ಅಮೆರಿಕ ಜಂಟಿಯಾಗಿ ಕೋವಿಡ್ ಪರಿಹಾರ ನಿಧಿಗಾಗಿ ಕೆಲಸ ಮಾಡಲಿವೆ. ಭಾರತದಲ್ಲಿ 20 ದಶಲಕ್ಷ ಡೋಸ್ ಲಸಿಕೆ ತಯಾರಿಸಲು ಕೈಜೋಡಿಸಲಿದೆ ಎಂದರು.

    ಇದೇ ಸಭೆಯಲ್ಲಿ ಮಾತನಾಡಿದ ಜರ್ಮನಿ ಕಾನ್ಸುಲೇಟ್ ಜನರಲ್ ಆಶಿಮ್ ಬರ್ಕಾಟ್ ಅವರು, ಸೋಂಕು ತಡೆಗಟ್ಟಲು ಕರ್ನಾಟಕದಲ್ಲಿ ಜಾರಿಗೆ ತಂದಿರುವ ಲಾಕ್‍ಡೌನ್ ಕ್ರಮ ಸರಿ ಇದೆ ಎಂದರಲ್ಲದೆ, ಭಾರತಕ್ಕೆ ಎಲ್ಲ ರೀತಿಯ ನೆರವು ನೀಡಲು ಜರ್ಮನಿ ಸಿದ್ಧವಿದೆ ಎಂದರು. ಇಸ್ರೇಲ್ ಕಾನ್ಸುಲೇಟ್ ಜನರಲ್ ಜೋನಾಥನ್ ಝಡ್ಕಾ, ಕೆನಡಾದ ನಿಕೋಲಾಸ್ ಗೆರಾರ್ಡ್, ಡೆನ್ಮಾರ್ಕ್‍ನ ಜೆ ಬೆಜೂರಿಮ್ ಹಾಗೂ ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ ಮುಂತಾದವರು ಮಾತನಾಡಿದರು.

  • ಕೊರೊನಾ ಮೂರನೇ ಅಲೆ ಅಪ್ಪಳಿಸುವುದು ಖಚಿತ: ರಾಹುಲ್ ಗಾಂಧಿ

    ಕೊರೊನಾ ಮೂರನೇ ಅಲೆ ಅಪ್ಪಳಿಸುವುದು ಖಚಿತ: ರಾಹುಲ್ ಗಾಂಧಿ

    ನವದೆಹಲಿ: ಸರ್ಕಾರದ ವಿನಾಶಕಾರಿ ನೀತಿಯಿಂದಾಗಿ ಕೊರೊನಾ ಮೂರನೇ ಅಲೆ ಅಪ್ಪಳಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕವಾಗಿ ಎಚ್ಚರಿಕೆ ನೀಡಿದ್ದಾರೆ.

    ರಾಷ್ಟ್ರೀಯ ಲಸಿಕೆ ವಿತರಣಾ ಯೋಜನೆ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಸರ್ಕಾರದ ವಿನಾಶಕಾರಿ ನೀತಿ, ಸಂತ್ರಸ್ತರ ಶವ ನದಿಯಲ್ಲಿ ತೇಲುತ್ತಿರುವುದರ ಕುರಿತಾಗಿ ಗಂಗಾ  ಮಾತೆ ದುಃಖಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಭಾರತ ಸರ್ಕಾರದ ಲಸಿಕೆ ವಿತರಣಾ ಯೋಜನೆ ವಿನಾಶಕಾರಿ ಮೂರನೇ ಅಲೆಯನ್ನು ಖಚಿತಪಡಿಸುತ್ತದೆ. ಇದನ್ನು ಮತ್ತೆ ಸರಿದೂಗಿಸಲು ಅಸಾಧ್ಯ. ಭಾರತಕ್ಕೆ ಸರಿಯಾದ ಲಸಿಕೆ ವಿತರಣೆ ಯೋಜನೆಯ ಅಗತ್ಯವಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

    ಗಂಗಾ ನದಿಯ ಉದ್ದಕ್ಕೂ 1140 ಕಿ.ಮೀ ಪ್ರದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ ಎಂದು ಹೇಳುವ ಮಾಧ್ಯಮ ವರದಿಗಳನ್ನು ಟ್ಯಾಗ್ ಮಾಡಿ, ಗಂಗಾ ಎಂದು ಹೇಳುತ್ತಿದ್ದ ಒಬ್ಬರು ಇಂದು ತಾಯಿ ಗಂಗಾ ಮಾತೆಯನ್ನು ದುಃಖಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಲಸಿಕೆ ಯೋಜನೆ ಮತ್ತು ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ರಾಹುಲ್ ಹಾಗೂ ಅವರ ಕಾಂಗ್ರೆಸ್ ಪಕ್ಷ ಪ್ರಧಾನಿ ಮತ್ತು ಅವರ ಸರ್ಕಾರದ ವಿರುದ್ಧ ಕಟುಟೀಕೆ ಮಾಡುತ್ತಿದೆ.

  • ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರು: ಇಷ್ಟು ದಿನ ನಗರಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಸಾಂಕ್ರಾಮಿಕ ರೋಗ, ಇದೀಗ ಹಳ್ಳಿಗಳಿಗೂ ಕಾಲಿಟ್ಟಿದೆ. ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಜಿಲ್ಲೆಗಳಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ.

    ಯಾಕೆ ಹೆಚ್ಚಾಯ್ತು?
    ಆರಂಭದ ಹಂತದಲ್ಲಿ ಸರ್ಕಾರ ಕೇವಲ ಬೆಂಗಳೂರಿನತ್ತ ಗಮನವನ್ನು ಕೇಂದ್ರೀಕರಿಸಿತು. ಜಿಲ್ಲೆಗಳಿಗೆ ಬೆಂಗಳೂರಿನಿಂದ ಗುಳೆ ಹೊರಡುವ ಸಮಯದಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸುವ ಗೋಜಿಗೆ ಹೋಗದೇ ಸುಮ್ಮನಾಯಿತು. ಹೀಗಾಗಿ ನಗರದತ್ತ ಇದ್ದ ಕೊರೊನಾ ಇದೀಗ ಹಳ್ಳಿಗಳಿಗಳಲ್ಲಿಯೂ ಹಬ್ಬುತ್ತಿದೆ.

    ಮಾರ್ಗಸೂಚಿ ಸಡಿಲಿಕೆ ಮಾಡಿದ್ದರಿಂದ ಉಸ್ತುವಾರಿ ಸಚಿವರುಗಳು ಆಯಾಯ ಜಿಲ್ಲೆಯ ಪರಿಸ್ಥಿತಿಯನ್ನು ಮನಕಂಡು ಟಫ್ ರೂಲ್ಸ್ ತರುವುದಕ್ಕೆ ಹೊರಟಿದ್ದರು. ಆದರೆ ಸರ್ಕಾರ ಆರ್ಥಿಕತೆಗೆ ಹೊಡೆತ ಬೀಳಬಹುದು ಎಂಬ ಕಾರಣ ನೀಡಿ ಟಫ್ ರೂಲ್ಸ್‍ಗೆ ಅವಕಾಶ ನೀಡಲಿಲ್ಲ.

    ಗ್ರಾಮೀಣ ಭಾಗದಲ್ಲಿ ಖಾಕಿ ಫೋರ್ಸ್‍ನ್ನು ಜನರನ್ನು ನಿಯಂತ್ರಿಸಲು ಇನ್ನಷ್ಟು ಹೆಚ್ಚಾಗಿ ಬಳಸಬೇಕಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಜನರು ಓಡಾಟ ನಡೆಸಿದರು. ಅಲ್ಲದೆ ಮದುವೆ ಸಮಾರಂಭಗಳಿಗೆ ಅವಕಾಶ ಕೊಂಡಿದ್ದರಿಂದ ಸ್ಥಳೀಯ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹೆಚ್ಚಿನ ಜನ ಸೇರುತ್ತಿದ್ದರು.

    ಲಾಕ್‍ಡೌನ್ ಮೇಲೆ ನಿಗಾ ಇಡಲು ಜಿಲ್ಲಾಡಳಿತ ವಿಫಲವಾಗಿತ್ತು. ಇನ್ನೂ ಹೆಚ್ಚು ಕೇಸ್ ಇರುವ ಭಾಗದಲ್ಲಿ ಮಾರ್ಕೆಟ್‍ಗಳ ತೆರೆದಿದ್ದರಿಂದ ಜನರು ಹೆಚ್ಚಾಗಿ ಸೇರುತ್ತಿದ್ದರು. ಜಿಲ್ಲೆಗಳಲ್ಲಿ ಟೆಸ್ಟಿಂಗ್‍ನತ್ತ ಕೂಡ ಗಮನವೇ ಹರಿಸಿಲ್ಲ. ಟೆಸ್ಟಿಂಗ್ ಹೆಚ್ಚಿಸಬೇಕಾಗಿತ್ತು.

    ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್‍ನಲ್ಲಿ ಜಿಲ್ಲಾಡಳಿತ ಕೂಡ ಎಡವಿತು. ಈ ಎಲ್ಲಾ ಕಾರಣಗಳಿಂದ ನಗರಗಳಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

  • ಮೇ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ -ಸುರೇಶ್ ಕುಮಾರ್

    ಮೇ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ -ಸುರೇಶ್ ಕುಮಾರ್

    ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಬಾಕಿ ಉಳಿದಿರುವ ಅಹಾರ ಧಾನ್ಯಗಳನ್ನು ಮೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್ ಕುಮಾರ್ ಅವರು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿದಂತೆ ಆಹಾರ ಧಾನ್ಯಗಳನ್ನು ಲಾಕ್‍ಡೌನ್ ಅವಧಿ ಮುಗಿದ ತಕ್ಷಣವೇ ವಿತರಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಈ ಆಹಾರ ಧಾನ್ಯಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದ್ದು, ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರ ಧಾನ್ಯ ಕೆಎಸ್‍ಎಫ್‍ಸಿ ಗೋದಾಮುಗಳಲ್ಲಿ ಏಕ ಕಾಲದಲ್ಲಿ ಸಂಗ್ರಹಣೆ ಮಾಡಿ ವಿತರಿಸಲು ಕಷ್ಟಸಾಧ್ಯವಾಗಿರುವುದರಿಂದ ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ ಈಗಾಗಲೇ ಒಂದು ಹಂತದ ವಿತರಣೆ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಮೊದಲ ಹಂತದ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಉಳಿದ ಅವಧಿಯಾದ 2021ರ ನವೆಂಬರ್ ನಿಂದ 2021ಮಾರ್ಚ್ ವರೆಗಿನ 132 ದಿನಗಳಿಗೆ ಸಂಬಂಧಿಸಿದ ಆಹಾರ ಧಾನ್ಯಗಳನ್ನು ಕೆಲವು ಶಾಲೆಗಳಿಗೆ ವಿತರಿಸಲಾಗಿದೆ. ಲಾಕ್‍ಡೌನ್ ಘೋಷಣೆಯಾದ್ದರಿಂದ ಕೆಲವು ಶಾಲೆಗಳಿಗೆ ಎರಡನೇ ಹಂತದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್‍ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ ಮೇ ಅಂತ್ಯದೊಳಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ತೊಗರಿ ಬೇಳೆ ಸರಬರಾಜುದಾರರಿಗೆ ಏ. 27ರಂದು ಮತ್ತು ಅಡುಗೆ ಎಣ್ಣೆ ಸರಬರಾಜುದಾರರಿಗೆ ಮೇ 7ರಂದು ಸರಬರಾಜು ಕಾರ್ಯಾದೇಶ ನೀಡಲಾಗಿದೆ. ದಾಸ್ತಾನಿನಲ್ಲಿರುವ ಆಹಾರ ಧಾನ್ಯಗಳನ್ನು ಡಿಡಿಪಿಐ ಮತ್ತು ಜಿಪಂ ಸಿಇಒಗಳೊಂದಿಗೆ ಚರ್ಚಿಸಿ ತಕ್ಷಣವೇ ಕೂಡಲೇ ವಿತರಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಶಾಲೆಗಳ ಮುಖ್ಯಸ್ಥರು ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಿ, ಸೂಚಿತ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ವಹಿಸಲಾಗುತ್ತದೆ. ಶಾಲೆಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಆರು ತಿಂಗಳ ಅವಧಿಗೆ ಒಂದು ಬಾರಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಇದನ್ನು ಸರಿಪಡಿಸಲಾಗುತ್ತದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯ ವಿತರಣೆಗೆ ನೀಲನಕ್ಷೆ ತಯಾರಿಸಲು ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.

    ಆರ್.ಟಿ.ಇ ಹಣ ಮರುಪಾವತಿಗೆ ಸೂಚನೆ:
    ಈಗಾಗಲೇ ಬಹುತೇಕ ಶಾಲೆಗಳಿಗೆ ಆರ್.ಟಿ.ಇ ಅನುದಾನ ಮರುಪಾವತಿಸಲಾಗಿದೆ. ಉಳಿದ ಶಾಲೆಗಳಿಗೆ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಕ್ರಮ ವಹಿಸಿದ್ದು, ಬಾಕಿ ಆರ್.ಟಿ.ಇ ಹಣವನ್ನು ಮೇ ಅಂತ್ಯದೊಳಗೆ ಬಿಡುಗಡೆ ಮಾಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬಾಕಿ ಹಣ ನೀಡದೇ ಬಾಕಿ ಉಳಿಸಿಕೊಂಡಿರುವ ಬಿಇಒ ಮತ್ತು ಡಿಡಿಪಿಐಗಳಿಗೆ ಎಚ್ಚರಿಕೆ ನೀಡಿ ತಕ್ಷಣವೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕೇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವರು ಸೂಚಿಸಿದರು.

    ಶಿಸ್ತು ಕ್ರಮ: ಅನಗತ್ಯವಾಗಿ ಶಾಲೆಗಳಿಗೆ ನೀಡಬೇಕಾದ ಹಣವನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಕೂಡಲೇ ಪ್ರಸ್ತಾವನೆ ಮಂಡಿಸಲೂ ಸಹ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಭಾಗವಹಿಸಿದ್ದರು.

    ಖಾಸಗಿ ಪಿಯು ಆಡಳಿತ ಮಂಡಳಿಗಳೊಂದಿಗೆ ಚರ್ಚೆ:
    ಇದೇ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ದಾವಣಗೆರೆ, ಶಿವಮೊಗ್ಗ ಮತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ ಖಾಸಗಿ ಅನುದಾನರಹಿತ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಎದುರಿಸುತ್ತಿರುವ ಸವಾಲುಗಳು, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಅನುಸರಿಸಬೇಕಾದ ಕ್ರಮಗಳು, ಪರೀಕ್ಷಾ ಪ್ರಕ್ರಿಯೆ ಕುರಿತಂತೆ ಸಚಿವರ ಗಮನ ಸೆಳೆದರು.

    ಸಭೆಯಲ್ಲಿ ಮಾಜಿ ವಿಧಾನಪರಿಷತ್ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಸೇರಿದಂತೆ ಆ ಭಾಗದ 45ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್ ಹಾಜರಿದ್ದರು.

  • ಲಸಿಕೆ ಬರಲು ದಿನ ಅಲ್ಲ, ತಿಂಗಳುಗಟ್ಟಲೇ ಆಗಬಹುದು – ಸಿಎಸ್ ರವಿಕುಮಾರ್

    ಲಸಿಕೆ ಬರಲು ದಿನ ಅಲ್ಲ, ತಿಂಗಳುಗಟ್ಟಲೇ ಆಗಬಹುದು – ಸಿಎಸ್ ರವಿಕುಮಾರ್

    ಬೆಂಗಳೂರು: ರಾಜ್ಯಕ್ಕೆ ಲಸಿಕೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಉತ್ಪಾದಿಸುವವರು ನಮಗೆ ಕೊಡಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

    45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಉಚಿತವಾಗಿ ಲಸಿಕೆ ಕೊಡುತ್ತಿದೆ. ಅದರಲ್ಲಿಯೂ 18-45 ವರ್ಷ ಒಳಗಿನವರಿಗೆ ರಾಜ್ಯ ಸರ್ಕಾರವೇ ಲಸಿಕೆ ಖರೀದಿ ಮಾಡಿ ಎರಡು ಫೇಸ್ ಲ್ಲಿ ಲಸಿಕೆ ಹಾಕುತ್ತಿದೆ. ನಾವು ಮೂರು ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಅದರಲ್ಲಿ ನಮಗೆ ಒಂದು ಕೋಟಿ ಲಸಿಕೆ ಬಂದಿದೆ ಎಂದು ತಿಳಿಸಿದ್ದಾರೆ.

    86 ಲಕ್ಷ ಜನರಿಗೆ ಫಸ್ಟ್ ಡೋಸ್‍ನನ್ನು ನೀಡಿದ್ದು, ಇದರಲ್ಲಿ 25 ಲಕ್ಷ ಜನಕ್ಕೆ ಎರಡನೇ ಡೋಸ್ ನೀಡಿದ್ದೇವೆ. ಆದರೆ ಇನ್ನೂ 60 ಲಕ್ಷ ಜನರಿಗೆ ಸೆಕೆಂಡ್ ಡೋಸ್ ನೀಡಬೇಕಾಗಿದೆ. ಸೆಕೆಂಡ್ ಡೋಸ್ ಕಡಿಮೆ ಆಗುತ್ತಿರುವುದರ ಬಗ್ಗೆ ಈಗಾಗಲೇ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಸಕಾಲದಲ್ಲಿ ಲಸಿಕೆ ಸಿಗದಿದ್ದರೆ ಏನು ಮಾಡುವುದು. ಅವರ ಪರಿಸ್ಥಿತಿ ಏನು ಪರಿಹಾರ ಏನು ಎಂದು ಕೇಳಿದ್ದೇವೆ. ಕೇಂದ್ರ ಏನು ಹೇಳುತ್ತದೆ ಎಂಬುವುದನ್ನು ಕಾದುನೋಡಬೇಕಾಗಿದೆ ಎಂದಿದ್ದಾರೆ.

    ಲಸಿಕೆ ಯಾವಾಗ ರಾಜ್ಯಕ್ಕೆ ಬರುತ್ತದೆ ಎಂಬ ಪ್ರಶ್ನೆಗೆ, ಲಸಿಕೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ನಾವು ಆರ್ಡರ್ ಮಾಡಿದ್ದೇವೆ. ಉತ್ಪಾದಿಸುವವರು ನಮಗೆ ಕೊಡಬೇಕು. ಲಸಿಕೆ ಬರಲು ದಿನ ಅಲ್ಲ. ತಿಂಗಳು ಗಟ್ಟಲೆ ಆಗಬಹುದು. ನಾವು ಕಾಯುತ್ತಿದ್ದೇವೆ. ಜನವರಿ 16 ರಿಂದ ಲಸಿಕೆ ಹಾಕಲು ಶುರು ಮಾಡಿ ಮೇಗೆ ನಾಲ್ಕು ತಿಂಗಳಾಗಿದೆ. ನಾಲ್ಕು ತಿಂಗಳಲ್ಲಿ ಬಂದಿರುವುದು ಒಂದು ಕೋಟಿ ಡೋಸ್. ಆದರೆ ಇನ್ನೂ ಆರೂವರೆ ಕೋಟಿ ಡೋಸ್ ಬೇಕು. ಎಲ್ಲರಿಗೂ ಎರಡು ಡೋಸ್ ಹಾಕಬೇಕು. ಲಸಿಕೆ ಯಾವಾಗ ಬರುತ್ತದೆ ಎಂದು ನಾನಂತು ಹೇಳುವುದಕ್ಕೆ ಆಗುವುದಿಲ್ಲ. ಇದು ಉತ್ಪಾದನೆ ಮೇಲೆ ಅವಲಂಬಿತವಾಗಿದೆ ಅಸಹಾಯಕತೆಯಿಂದ ನುಡಿದರು.

    ಮಾರ್ಚ್ ಮತ್ತು ಫೆಬ್ರವರಿಯಲ್ಲಿ ಜನರನ್ನು ಮನೆಗೆ ಹೋಗಿ ಕರೆದುಕೊಂಡು ಬರ್ತಿದ್ದೇವು. ಈಗ ಅವರೇ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದಾರೆ. ಒಟ್ಟು 6.5 ಕೋಟಿ ಲಸಿಕೆ ಬೇಕಾಗಿದೆ. ನಾವು ಮೂರು ಕೋಟಿ ಆರ್ಡರ್ ಮಾಡಿದ್ದೇವೆ. ಲಸಿಕೆ ಬಂದ ನಂತರ ಕೊಡುತ್ತೇವೆ. ಅದರಲ್ಲಿಯೂ ಮೊದಲ ಆದ್ಯತೆ ಸೆಕೆಂಡ್ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ. ನಮ್ಮ ಕೈಯಲ್ಲಿ ಏನಿದೆ ಆ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ರಾಜ್ಯದಲ್ಲಿ ಆಕ್ಸಿಜನ್ ಸಪ್ಲೈ ಸಮಸ್ಯೆ ಇಲ್ಲ ಎಂದು ಹೇಳಲ್ಲ. ಕೇಂದ್ರ ಸರ್ಕಾರ ಸಹಾಯ ಮಾಡಿದೆ. ಇನ್ನಷ್ಟು ಆಕ್ಸಿಜನ್ ಬೇಕು. ಇರೋದರಲ್ಲಿ ಮ್ಯಾನೇಜ್ ಮಾಡ್ತಿದ್ದೇವೆ. ಆಕ್ಸಿಜನ್ ಕಂಟೈನರ್‍ಗಳನ್ನ ಕೇಂದ್ರ ನಮಗೆ ಕಳಿಸಿಕೊಟ್ಟಿದೆ. ಕೋಲಾರ ಮತ್ತು ಕಲ್ಬುರ್ಗಿಯಲ್ಲಿ ಇದನ್ನ ಉಪಯೋಗಿಸಿಕೊಳ್ಳುತ್ತೀದ್ದೇವೆ ಎಂದು ಹೇಳಿದರು.

    ಜಿಲ್ಲೆಗಳಲ್ಲಿ ಹೆಚ್ಚುವರಿ ಆಕ್ಸಿಜನ್ ಬೆಡ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ, ಆಕ್ಸಿಜನ್ ಇಲ್ಲದೇ ವೆಂಟಿಲೇಟರ್ ಸೌಲಭ್ಯ ಇಲ್ಲದೇ ಆಕ್ಸಿಜನ್ ಬೆಡ್ ಎಂದು ಹೇಳಬೇಡಿ ಎಂದು ಹೇಳಿದ್ದೇನೆ. ಆಕ್ಸಿಜನ್ ಸೇರಿದಂತೆ ಸಂಪೂರ್ಣ ಸೌಲಭ್ಯ ಇದ್ದರೆ ಮಾತ್ರ ಆಕ್ಸಿಜನ್ ಬೆಡ್ ಆಗುತ್ತೆ. ನಾರ್ಮಲ್ ಬೆಡ್‍ಗೆ ಆಕ್ಸಿಜನ್ ಕೊಟ್ಟು ಅದನ್ನ ಆಕ್ಸಿಜನ್ ಬೆಡ್ ಎಂದು ಹೇಳಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

    ಒಡಿಶಾ ಮತ್ತು ವಿಶಾಖಪಟ್ಟಣದಿಂದ ನಾವು ಆಕ್ಸಿಜನ್ ತರಿಸಿಕೊಳ್ಳಬಹುದು. ಆದರೆ ಸಾಗಾಣಿಕೆ ಕಷ್ಟ ಎಂದು ವಿದೇಶದಿಂದ ಕೇಂದ್ರ ನಮಗೆ ಸಹಾಯ ಮಾಡಿದೆ. ಬಹರೇನ್ ನಿಂದ ಬಂದ ಆಕ್ಸಿಜನ್ ಕಂಟೈನರ್ ಗಳನ್ನ ಕೇಂದ್ರ ನೀಡಿದೆ. ರಾಜ್ಯಕ್ಕೆ ಇನ್ನಷ್ಟು ಆಕ್ಸಿಜನ್ ಬೇಕಿದೆ ಎಂದು ರವಿಕುಮಾರ್ ತಿಳಿಸಿದರು.

  • ರಾಜ್ಯಕ್ಕೆ ವಿಶೇಷ ಪ್ಯಾಕೆಜ್ ಘೋಷಣೆ ಇಂದು ಸಿಎಂ ಜೊತೆ ಚರ್ಚೆ- ಆರ್ ಅಶೋಕ್

    ರಾಜ್ಯಕ್ಕೆ ವಿಶೇಷ ಪ್ಯಾಕೆಜ್ ಘೋಷಣೆ ಇಂದು ಸಿಎಂ ಜೊತೆ ಚರ್ಚೆ- ಆರ್ ಅಶೋಕ್

    ಬೆಂಗಳೂರು: ಕೊರೊನಾದಿಂದಾಗಿ ರಾಜ್ಯದಲ್ಲಿ ಲಾಕ್‍ಡೌನ್ ಹೇರಲಾಗಿದೆ. ಈ ನಡುವೆ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಇಂದು ಸಿಎಂ ನಿವಾಸದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್ ಅಶೋಕ್, ರಾಜ್ಯದ ಜನರಿಗೆ ಆಗುತ್ತಿರುವ ತೊಂದರೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿಯಿಂದ ಗೊತ್ತಾಗುತ್ತಿದೆ. ಅದಕ್ಕೆ ನಾವು ಸಂಜೆ ಸಿಎಂ ಮನೆಯಲ್ಲಿ ಸಭೆ ಸೇರುತ್ತಿದ್ದೇವೆ. ಬೆಡ್‍ಗಳ ಲಭ್ಯತೆ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಸರ್ಕಾರದ ಒಬ್ಬ ಅಧಿಕಾರಿ ಡಾಕ್ಟರ್ ಜೊತೆಗೆ ಪಿಪಿಇ ಕಿಟ್ ಹಾಕಿಕೊಂಡು ರಿಯಾಲಿಟಿ ಚೆಕ್ ಮಾಡಬೇಕು. ಕಿಮ್ಸ್ ನಲ್ಲಿ ಇದೀಗ 30 ಆಕ್ಸಿಜನ್ ಬೆಡ್ ಕೊಡಲು ಮುಂದೆ ಬಂದಿದ್ದಾರೆ. ಬೆಂಗಳೂರಿನ 17 ಕಡೆ ಕೋವಿಡ್ ಕೇರ್ ಸೆಂಟರ್ ಇವೆ ಅಲ್ಲಿ ಬಂದು ದಯವಿಟ್ಟು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿಮಾಡಿಕೊಂಡರು.

    ಸರ್ಕಾರದಿಂದ 600 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಮುಂದಾಗಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಳ್ಳಿ ಅಲ್ಲಿ ನಿಮ್ಮನ್ನು ಯಾವ ಹಂತದಲ್ಲಿ ಇಟ್ಟು ಟ್ರೀಟ್ಮೆಂಟ್ ಕೊಡಬೇಕು ಎಂದು ಅವರು ನಿರ್ಧಾರ ಮಾಡುತ್ತಾರೆ. ಇಂದು ಹೊಸಕೆರೆ ಹಳ್ಳಿಯಲ್ಲಿ ಒಂದು ಕಟ್ಟಡ ನಿರ್ಮಾಣ ಆಗುತ್ತಿದೆ. ಅದನ್ನು ಮಕ್ಕಳ ಆಸ್ಪತ್ರೆ ಮಾಡುತ್ತೇವೆ ಅದರ ಕೆಲಸಕಾರ್ಯಗಳು ಮುಂದುವರಿಯುತ್ತಿದ್ದು, ಪ್ರಾಯೋಗಿಕವಾಗಿ ಅಲ್ಲಿ ಏನ್ ಬೇಕು ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ. ವ್ಯಾಕ್ಸಿನ್ ಕೇಂದ್ರದಿಂದ ಬರ್ತಿದೆ ಅದನ್ನು ಎಲ್ಲಾ ಕಡೆ ತಲುಪಿಸುವ ಕಾರ್ಯದಲ್ಲೂ ತೊಡಗಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟ್ ತೆಗೆದುಕೊಳ್ಳಲು ಆರ್ಡರ್ ಮಾಡಿದ್ದೇವೆ. ಡಿಸಿಗಳಿಗೆ ಇವತ್ತಿನಿಂದಲೇ ಆರ್ಡರ್ ಮಾಡಲು ಹೇಳಿದ್ದೇವೆ. ಡಿಸಾಸ್ಟರ್ ಮ್ಯಾನೆಜ್‍ಮೆಂಟ್ ಅಡಿಯಲ್ಲಿ 30 ಕೋಟಿ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

  • ಏಕಾಏಕಿ ಬೇಡಿಕೆ ಬಂದ ಹಿನ್ನೆಲೆ ಲಸಿಕೆ ಸಮಸ್ಯೆಯಾಗಿದೆ – ಬೊಮ್ಮಾಯಿ

    ಏಕಾಏಕಿ ಬೇಡಿಕೆ ಬಂದ ಹಿನ್ನೆಲೆ ಲಸಿಕೆ ಸಮಸ್ಯೆಯಾಗಿದೆ – ಬೊಮ್ಮಾಯಿ

    ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಕೊರತೆಯಾಗಿರುವುದು ನಿಜ. ಏಕಾಏಕಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ನಾವು ಲಸಿಕೆ ತರಿಸಿಕೊಳ್ಳಲು ಕ್ರಮವಹಿಸಿದ್ದೇವೆ. ಲಸಿಕೆ ಸಿಗುವುದಿಲ್ಲ ಎಂದು ಜನ ಆತಂಕದಿಂದ ಕೇಂದ್ರಗಳಿಗೆ ಬಂದಿದ್ದಾರೆ. ಲಸಿಕೆ ಸಿಗಲಿದೆ ಯಾರೂ ಆತಂಕಪಡಬೇಕಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಯಿ, ರಾಜ್ಯದಲ್ಲಿ ಲಸಿಕೆ ಸಮಸ್ಯೆ ಪೂರೈಕೆಯಲ್ಲಿ ಕೆಲ ವ್ಯತ್ಯಯದಿಂದ ಆಗಿದೆ. ಲಸಿಕೆ ಸಿಗುವುದಿಲ್ಲ ಎಂದು ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು. ಬೆಂಗಳೂರಿನಲ್ಲಿ ನೊಡೆಲ್ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸತ್ತವರ ಬಗ್ಗೆ ಮಾಹಿತಿ ನೀಡದ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಬೆಡ್ ಖಾಲಿಯಾದ ತಕ್ಷಣ ಮಾಹಿತಿ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೀಗಾಗಿ ಮುಂದೆ ಬೆಡ್ ಅಭಾವ ಇರದಂತೆ ಕ್ರಮವಹಿಸಲಾಗುತ್ತಿದೆ. ರಾಜ್ಯದಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚಿಸಲಾಗುವುದು. ಈ ಬಗ್ಗೆ ಹೊಟೇಲ್ ಸಂಘ ಹಾಗೂ ಖಾಸಗಿ ಆಸ್ಪತ್ರೆಗಳ ಜತೆ ಚರ್ಚೆಮಾಡಲಾಗಿದೆ. ಈಗಾಗಲೇ 1200 ಆ ರೀತಿ ಬೆಡ್‍ಗಳನ್ನು ಖಾಸಗಿ ಆಸ್ಪತ್ರೆಗಳು ಮಾಡಿಕೊಂಡಿವೆ. ಮತ್ತೆ 2 ಸಾವಿರ ಬೆಡ್ ಗಳ ಸ್ಟೆಪ್ ಡೌನ್ ಆಸ್ಪತ್ರೆ ಮೂರು ದಿನಗಳಲ್ಲಿ ನಿರ್ಮಾಣವಾಗಲಿದೆ. ಅಲ್ಲಿ ಸರ್ಕಾರ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡಿ ರೋಗಿಗಳ ಪ್ರಾಣ ರಕ್ಷಣೆ ನೆರವು ನೀಡಲು ಮುಂದಾಗುತ್ತದೆ ಎಂದು ಮಾಹಿತಿ ನೀಡಿದರು.

    ಬಳಿಕ ಲಾಕ್‍ಡೌನ್ ನಲ್ಲಿ ಲಾಠಿ ಬೀಸಲು ಅವಕಾಶ ಕೊಡದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಲಾಠಿ ಬೀಸೋದು, ವೆಹಿಕಲ್ ಸೀಜ್, ಕೇಸ್ ಹಾಕೋದೇ ಮುಖ್ಯ ಅಲ್ಲ. ಕೋವಿಡ್ ನಿಂದ ಸಾವು ನೋವುಗಳಾಗುತ್ತಿದೆ. ಜನ ಅರ್ಥಮಾಡಿಕೊಂಡು ಸಹಕಾರ ನೀಡಬೇಕು ಜನರ ಸುರಕ್ಷತೆಗಾಗಿ ಮಾಡಿರುವ ಲಾಕ್ ಡೌನ್ ಇದು. ಹೊರಗೆ ಬರಬೇಡಿ ಸರ್ಕಾರಕ್ಕೆ ಸಹಕಾರ ಕೊಡಿ ಎಂದು ಮನವಿ ಮಾಡಿಕೊಂಡರು.

    ರಾಜ್ಯದಲ್ಲಿ ಕೊರೊನಾ ಟೆಸ್ಟ್ ಗಳನ್ನು ಕಡಿಮೆಮಾಡುತ್ತಿಲ್ಲ. ಅದಕ್ಕೊಂದು ಪ್ರೊಸಿಜರ್ ಇದೆ ಅದರ ಪ್ರಕಾರ ಟೆಸ್ಟ್ ಮಾಡಲಾಗುತ್ತಿದೆ. ಕಿಟ್ ಗಳ ಲಭ್ಯ ಇದೆ ಕಿಟ್ ಗಳು ಸಮರ್ಪಕವಾಗಿದೆ. ಈವರೆಗೆ 30 ಬೆಡ್ ಗಳ ಖಾಸಗಿ ಆಸ್ಪತ್ರೆಗಳನ್ನು ಪರಿಗಣಿಸಿರಲಿಲ್ಲ. ಅಂತಹ ಹಾಸ್ಪಿಟಲ್ ಗಳ ಮೂಲಕವೂ ಸುಮಾರು 2ಸಾವಿರ ಬೆಡ್ ಪಡೆಯಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ನೆರವು ನೀಡಿ ಆ ಸೌಲಭ್ಯವನ್ನೂ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಹಲವು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಐಸಿಯುಗಳೂ ಸಿಗಲಿದೆ. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಬೆಡ್ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

  • ರಾಜ್ಯಕ್ಕೆ 30 ಮೆಟ್ರಿಕ್ ಟನ್ ಸಾಮಥ್ರ್ಯದ 6 ಟ್ಯಾಂಕರ್ ನೀಡಿದೆ: ಜಗದೀಶ್ ಶೆಟ್ಟರ್

    ರಾಜ್ಯಕ್ಕೆ 30 ಮೆಟ್ರಿಕ್ ಟನ್ ಸಾಮಥ್ರ್ಯದ 6 ಟ್ಯಾಂಕರ್ ನೀಡಿದೆ: ಜಗದೀಶ್ ಶೆಟ್ಟರ್

    – ಧಾರವಾಡ ಜಿಲ್ಲಾ ವ್ಯಾಪ್ತಿಗೆ 2 ಟ್ಯಾಂಕರ್

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 14 ದಿನಗಳ ಕಾಲ ಕಠಿಣ ಲಾಕ್‍ಡೌನ್ ಜಾರಿ ಮಾಡಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು. ಸರ್ಕಾರದ ಮಾರ್ಗದರ್ಶನಗಳನ್ನು ಪಾಲಿಸಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು. ಈ 14 ದಿನಗಳ ಕಾಲ ನಮ್ಮನ್ನು ನಾವು ನಿಯಂತ್ರಿಸಿದರೆ, ವೈರಾಣುವನ್ನು ನಿಯಂತ್ರಿಸಿದಂತೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಲಾಕ್‍ಡೌನ್ ಹಾಗೂ ಜಿಲ್ಲೆಯ ಆರೋಗ್ಯ ಸ್ಥಿತಿಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದ ಆಕ್ಸಿಜನ್ ಸರಬಾರಜು ಮಾಡಿ, ಆಕ್ಸಿಜನ್ ಕೊರತೆ ನೀಗಿಸಲು ಪ್ರಯತ್ನಿಸುತ್ತಿವೆ. ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಜೊತೆಯಲ್ಲಿ ಸಂಪರ್ಕದಲ್ಲಿದ್ದು, ಹೆಚ್ಚಿನ ಆಕ್ಸಿಜನ್ ಪಡೆಯಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಸಮನ್ವಯಗೊಳಿಸಿ ಆಕ್ಸಿಜನ್ ವಿತರಣೆ ಸರಬರಾಜನ್ನು ಕ್ರಮಬದ್ದ ಗೊಳಿಸಲಾಗುತ್ತಿದೆ ಎಂದರು.

    ತಳ್ಳುಗಾಡಿಯಲ್ಲಿ ತರಕಾರಿ, ರೇಷನ್ ಡೋರ್ ಡೆಲವರಿಗೆ ಮನವಿ: ಜನರು ಅಗತ್ಯವಸ್ತಗಳ ಖರೀದಿಗಾಗಿ ಸುಮ್ಮನೆ ಬೀದಿಗೆ ಬರುವುದು ತಪ್ಪಬೇಕಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಲು ಅವಕಾಶ ಕಲ್ಪಿಸಿಲಾಗಿದೆ. ಕಿರಾಣಿ ಅಂಗಡಿಗಳಿಗೆ ನಿಶ್ಚಿತವಾದ ಗ್ರಾಹರು ಇರುತ್ತಾರೆ. ಅವರಿಂದ ಪೋನ್ ಮೂಲಕ ಆರ್ಡರ್ ಪಡೆದು ಮನೆಗೆ ದಿನಸಿ ಪದಾರ್ಥಗಳನ್ನು ಕಳುಹಿಸಿದರೆ ಅನುಕೂಲವಾಗುತ್ತದೆ. ಗ್ರಾಹರು ಅಗತ್ಯ ವಸ್ತುಗಳು, ಔಷಧಗಳ ನೆಪ ಮಾಡಿಕೊಂಡು ನಗರದಲ್ಲಿ ಓಡಾಟ ಮಾಡಬಾರದು. ಪ್ರತಿ ಏರಿಯಾಗಳಲ್ಲಿ ಕಿರಾಣಿ ಹಾಗೂ ಔಷಧ ಅಂಗಡಿಗಳಿವೆ ಅಲ್ಲಿಯೇ ಖರೀದಿಸಿಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಭಾರತ ಸರ್ಕಾರ ಆಕ್ಸಿಜನ್ ಪ್ರಮಾಣವನ್ನು ಹೆಚ್ಚು ಮಾಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 30 ಟನ್ ಸಾಮಥ್ರ್ಯದ ಆರು ಟ್ಯಾಂಕರ್‍ಗಳನ್ನು ಕೇಂದ್ರ ಸರ್ಕಾರ ನೀಡಿದೆ. ನಾಳೆಯೆ ಟ್ಯಾಂಕರ್‍ಗಳು ರಾಜ್ಯಕ್ಕೆ ಆಗಮಿಸಲಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

    ಆಕ್ಸಿಜನ್ ಸರಬರಾಜು ಮಾಡಲು ಅನುಕೂಲವಾಗುವಂತೆ 6 ಟ್ಯಾಂಕರ್‍ಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಧಾರವಾಡ ಜಿಲ್ಲೆಯಿಂದ ಬೆಳಗಾವಿ ಹಾಗೂ ಬಿಜಾಪುರ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಆಗುವುದರಿಂದ 2 ಟ್ಯಾಂಕರ್‍ಗಳನ್ನು ಜಿಲ್ಲೆಗೆ ನೀಡಲಾಗಿದೆ. ಕೇಂದ್ರ ಸರ್ಕಾರ 150 ಆಕ್ಸಿಜನ ಘಟಕಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಿದೆ. 1,500 ಆಕ್ಸಿಜನ್ ಸಾಂದ್ರಕಗಳನ್ನು ನೀಡಲಾಗಿದೆ. ಸರ್ವರಿಗೂ ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಯ್ಯುಷ್ಮಾನ್ ಭಾರತ ಸ್ಕೀಂ ನಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಾರಿ ಕೋವಿಡ್ ಅಲೆ ಅನಿರೀಕ್ಷಿತವಾದದ್ದು, ಯಾರು ಊಹಿಸದ ರೀತಿಯಲ್ಲಿ ಇದರ ಪರಿಣಾಮವಾಗುತ್ತಿದೆ. ಇದರ ಸರಪಳಿಯನ್ನು ಮುರಿಯಬೇಕಾಗಿದೆ ಎಂದರು.

    ಕೋವಿಡ್ ಸಂದರ್ಭದಲ್ಲಿ ಪೊಲೀಸರು ಬೀದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸಹ ನಮ್ಮನಿಮ್ಮಂತೆ ಮನುಷ್ಯರು. ಅನಗತ್ಯವಾಗಿ ಪೊಲೀಸರ ಕಣ್ಣು ತಪ್ಪಿಸಿ ಓಡಾವುದು ಮಾಡಬೇಡಿ. ನಾವೆಲ್ಲರು ಬದುಕಿದ್ದರೆ ಮುಂದಿನ ಸಂಗತಿಗಳನ್ನು ಅಚ್ಚುಕಟ್ಟಾಗಿ ಮಾಡಬಹುದು. ಈ ಅಲೆ ಸರಪಳಿ ಮುರಿದರೆ ಕೋವಿಡ್ ನಿಯಂತ್ರಣಕ್ಕೆ ತರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆ ಆಗದಂತೆ ಪ್ರತಿದಿನ ಮೇಲು ಉಸ್ತಾವಾರಿಯನ್ನು ನೋಡಿಕೊಳ್ಳಲಾಗುತ್ತಿದೆ. ಎಚ್ಚರದಿಂದ ಇರಿ ಮೈ ಮರಿಯಬೇಡಿ. ಸಾರ್ವಜನಿಕರ ರಕ್ಷಣೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸದಾ ಸಿದ್ಧವಿದೆ ಎಂದು ನುಡಿದಿದ್ದಾರೆ.

    ಮನೆಗಳಿಗೆ ತೆರಳಿ 50 ಸಾವಿರ ಕೋವಿಡ್ ಔಷಧ ಕಿಟ್ ವಿತರಣೆ: ಧಾರವಾಡ ಜಿಲ್ಲೆಯಲ್ಲಿ 25 ರಿಂದ 50 ಸಾವಿರ ಕೋವಿಡ್ ಔಷದ ಕಿಟ್ ಗಳನ್ನು ತಯಾರಿಸಿ ಮನೆಗಳಿಗೆ ತೆರಳಿ ಹಂಚಲು ತಯಾರಿ ನಡೆಸಲಾಗುತ್ತಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಔಷಧ ಉಗ್ರಾಣದಿಂದ ಅಗತ್ಯ ಇರುವ ವೈಟಮಿನ್ ಹಾಗೂ ಜಿಂಕ್ ಸೇರಿದಂತೆ ಇತರೆ ಔಷಧಗಳನ್ನು ಪಡೆಯಲು ಇಂಡೆಂಟ್ ಸಲ್ಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

    ನಿಯಮಗಳನ್ನು ಉಲಂಘಿಸುವವರ ಮೇಲೆ ಕಠಿಣ ಕ್ರಮ: ಪೋಲಿಸ್ ಆಯುಕ್ತ ಲಾಭುರಾಮ್ ಮಾತನಾಡಿ ಅವಳಿ ನಗರದಲ್ಲಿ ಸರ್ಕಾರದ ನಿಯಮಾನುಸಾರ ಚೆಕ್ ಪೋಸ್ಟ್‍ಗಳನ್ನು ಹಾಕಿ ತಪಾಸಣೆ ನಡೆಸಲಾಗುತ್ತಿದೆ. ನಿಯಮಗಳನ್ನು ಉಲಂಘಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕಳೆದ ಮೂರು ದಿನಗಳಲ್ಲಿ ಅವಳಿ ನಗರದಲ್ಲಿ ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ. ಪ್ರಮುಖ ಏರಿಯಾಗಳಲ್ಲಿ ರಸ್ತೆಗಳನ್ನು ಬ್ಯಾರಿಕೇಡ್ ಗಳಿಂದ ಬ್ಲಾಕ್ ಮಾಡಿ ಜನ ಸಂಚಾರವನ್ನು ನಿಯಂತ್ರಿಸಲಾಗುವುದು. ಕೋವಿಡ್ ತುರ್ತು ಪರಿಸ್ಥಿತಿ ಹೊರತು ಪಡಿಸಿ ಯಾವುದೇ ಅನಗತ್ಯ ಓಡಾಟಕ್ಕೆ ಅವಕಾಶವಿಲ್ಲ ಎಂದರು.

    ಸಭೆಯಲ್ಲಿ ಶಾಕರುಗಳಾದ ಪ್ರಸಾದ್ ಅಬ್ಬಯ್ಯ, ಅರವಿಂದ ಬೆಲ್ಲದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಧಾರವಾಡ ಪೊಲೀಸ್ ವರಿಷಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ ಹುಬ್ಬಳ್ಳಿ ತಹಶೀಲ್ದಾರ ಶಶಿಧರ ಮಾಡ್ಯಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಕೊಡಗಿನ ಮಾರ್ಗಸೂಚಿಯಲ್ಲಿ ಮಂಗಳವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

    ಕೊಡಗಿನ ಮಾರ್ಗಸೂಚಿಯಲ್ಲಿ ಮಂಗಳವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

    ಮಡಿಕೇರಿ: ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಮೇ10 ರಿಂದ 24ರವರೆಗೆ ಲಾಕ್‍ಡೌನ್ ಘೋಷಿಸಿ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಆದೇಶಿಸಿತ್ತು. ಈ ಆದೇಶದಿಂದ ಜಿಲ್ಲೆಯ ಜನರಲ್ಲಿ ಕೊಂಚ ಗೊಂದಲ ಉಂಟಾಗಿತ್ತು. ಈ ನಿಟ್ಟಿನಲ್ಲಿ ಇದೀಗಾ ಜಿಲ್ಲಾಡಳಿತ ಜನ ಸಾಮಾನ್ಯರಿಗೆ ಗೊಂದಲ ಅಗಬರದು ಎಂದು ಕೊಡಗಿನಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಕಠಿಣ ನಿಯಮಾವಳಿಗಳೇ ಮುಂದುವರೆಯಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯ ವ್ಯಾಪಿ ಪ್ರತಿದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆಯಾದರೂ ಕೊಡಗು ಜಿಲ್ಲೆಯಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ವಸ್ತುಗಳ ಖರೀದಿಗೆ ಅವಕಾಶವಿದೆ. ಇತರ ದಿನಗಳಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಹಾಲು ಮತ್ತು ಪತ್ರಿಕೆಗಳ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ.

    ಮಂಗಳವಾರ ಮತ್ತು ಶುಕ್ರವಾರ ಜನಜಂಗುಳಿಯಾಗದಂತೆ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಮಾಸ್ಕ್ ಕಡ್ಡಾಯವಾಗಿ ಧರಿಸಿ ಅಂತರ ಕಾಯ್ದುಕೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಸ್ಥಳೀಯವಾಗಿ ಇರುವ ಅಂಗಡಿಗಳಿಂದಲೇ ವಸ್ತುಗಳನ್ನು ಖರೀದಿ ಮಾಡಿ, ದೂರದ ಪ್ರದೇಶಕ್ಕೆ ಹೋಗಬೇಡಿ, ವಾಹನಗಳನ್ನು ಬಳಸಬೇಡಿ ಎಂದು ಸಲಹೆ ನೀಡಿದು ಕೊಡಗಿನ ಜನರ ಗೊಂದಲ ಕ್ಕೆ ಜಿಲ್ಲಾಡಳಿತ ತೇರೆ ಎಳೆದಿದೆ.

  • ಮಂಡ್ಯದ ಹಲವು ಹಳ್ಳಿಗಳನ್ನು ಸೀಲ್‍ಡೌನ್ ಮಾಡಿದ ಅಧಿಕಾರಿಗಳು

    ಮಂಡ್ಯದ ಹಲವು ಹಳ್ಳಿಗಳನ್ನು ಸೀಲ್‍ಡೌನ್ ಮಾಡಿದ ಅಧಿಕಾರಿಗಳು

    ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಜಿಲ್ಲೆಯಲ್ಲಿ ಹಳ್ಳಿಗಳಿಗೂ ಕೊರೊನಾ ವ್ಯಾಪಿಸಿದ್ದು, ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಇದೀಗ ಅಧಿಕಾರಿಗಳು ಗ್ರಾಮಗಳನ್ನು ಸೀಲ್‍ಡೌನ್ ಮಾಡಲು ಮುಂದಾಗಿದ್ದಾರೆ.

    ಕೊರೊನಾ ಜಿಲ್ಲೆಯಲ್ಲಿ ವ್ಯಾಪಿಸಿರುವ ಪರಿಣಾಮ ಮಂಡ್ಯ ತಾಲೂಕಿನಲ್ಲಿ 8 ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಹನಕೆರೆ, ಬಸರಾಳು, ಹುಲಿವಾನ, ಕೀಲಾರ, ಮಂಗಲ, ಹೆಮ್ಮಿಗೆ, ತೂಬಿನಕೆರೆ ಹಾಗೂ ಹಳುವಾಡಿ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಗ್ರಾಮಗಳಲ್ಲಿ ಪೈಕಿ ಒಂದೊಂದು ಗ್ರಾಮದಲ್ಲಿ 40ಕ್ಕೂ ಕೊರೊನಾ ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ನಮ್ಮೂರುಗಳಲ್ಲಿ 150ಕ್ಕೂ ಹೆಚ್ಚು ಕೇಸ್‍ಗಳು ಇವೆ ಎಂದು ಹೇಳುತ್ತಿದ್ದಾರೆ.

    ಕೆಆರ್‌‌ಪೇಟೆ ತಾಲೂಕಿನಲ್ಲಿ ಎರಡು ಗ್ರಾಮಗಳನ್ನು ಸೀಲ್ ಮಾಡಲಿದೆ. ಚೌಡಸಮುದ್ರ, ಕೊಮ್ಮೇನಹಳ್ಳಿ ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊಮ್ಮೇನಹಳ್ಳಿ ಗ್ರಾಮದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದ ತಾಲೂಕಿನ ಹಲವು ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದರಿಂದ ಜನರಿಗೆ ಆತಂಕ ಸೃಷ್ಟಿಯಾಗಿದೆ.