Tag: government

  • ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    – ಪ್ಯಾಕೇಜ್ ಘೋಷಣೆಗೆ ಆಗ್ರಹ

    ನೆಲಮಂಗಲ: ರಾಜ್ಯ ಸರ್ಕಾರ ಗೂಡ್ಸ್ ವಾಹನ ಚಾಲಕರಿಗೆ ವಾಹನಗಳ ವಿಮಾಕಂತು ಹಾಗೂ ತೆರಿಗೆಗಳನ್ನು ಒಂದು ವರ್ಷ ಮುಂದೂಡುವ ಜೊತೆ ಚಾಲಕರಿಗೆ ಸಹಾಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ಸಂಸ್ಥಾಪಕ ಅಧ್ಯಕ್ಷ ಎಂಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.

    ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವಾರದ ಬಳಿ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ ಗೂಡ್ಸ್ ವಾಹನಗಳ ಚಾಲಕರಿಗೆ ಆಹಾರ ಪ್ಯಾಕೇಟ್ ನೀಡಿ ಮಾತನಾಡಿದ ಎಂಪಿ ರವೀಶ್, ಕೊರೊನಾ ಸಂಕಷ್ಟದಲ್ಲಿ ವೈದ್ಯಕೀಯ ಸಲಕರಣೆಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ಸಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಚಾಲಕರು ಕೊರೊನಾ ಸೋಂಕಿನಿಂದ ನಲುಗುತ್ತಿದ್ದಾರೆ. ಸರಿಯಾದ ಬಾಡಿಗೆಗಳು ಸಿಗದೇ ಗೂಡ್ಸ್ ವಾಹನಗಳು ನಷ್ಟ ಅನುಭವಿಸುತ್ತಿದ್ದು ಸರ್ಕಾರ ನಮ್ಮ ವಾಹನಗಳ ಇಎಮ್‍ಐ ಪಾವತಿಯಲ್ಲಿ ವಿನಾಯಿತಿ, ವಿಮಾಕಂತು ಹಾಗೂ ತೆರಿಗೆಯನ್ನು ಒಂದು ವರ್ಷ ಮುಂದೂಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಕಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಬೇಕು, ನಮ್ಮ ಬೇಡಿಕೆಯ ಮನವಿ ಸ್ಪಂದನೆ ಸಿಗದಿದ್ದರೇ ರಾಜ್ಯಾದ್ಯಂತ ಗೂಡ್ಸ್ ವಾಹನಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡಲಾಗುತ್ತದೆ ಎಂದರು. ಮಾದವರದ ಬಳಿ ಬೆಂಗಳೂರು ಹಾಗೂ ನೈಸ್ ರಸ್ತೆಯ ಮೂಲಕ ಹೋಗುವ ಗೂಡ್ಸ್ ವಾಹನಗಳ ಚಾಲಕರಿಗೆ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದಿಂದ ಒಂದು ಸಾವಿರದಷ್ಟು ನೀರಿನ ಬಾಟಲ್, ಆಹಾರದ ಪ್ಯಾಕೇಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಹೆಚ್.ವಿಜಯಕುಮಾರ್, ರಾಜ್ಯಾಧ್ಯಕ್ಷ ಎಂ.ಮುನಿಕೃಷ್ಣ, ಉಪಾಧ್ಯಕ್ಷ ಕುಪ್ಪುಸ್ವಾಮಿ, ರಾಜ್ಯ ಸಹಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.

  • ಹಾಸನದಲ್ಲಿ ಮದ್ಯಪ್ರಿಯರಿಗೆ ಬಂಪರ್, ರೈತರಿಗೆ ಶಾಕ್ – ಇದೆಂಥಾ ನ್ಯಾಯ ಎಂದು ರೈತರ ಆಕ್ರೋಶ

    ಹಾಸನದಲ್ಲಿ ಮದ್ಯಪ್ರಿಯರಿಗೆ ಬಂಪರ್, ರೈತರಿಗೆ ಶಾಕ್ – ಇದೆಂಥಾ ನ್ಯಾಯ ಎಂದು ರೈತರ ಆಕ್ರೋಶ

    ಹಾಸನ: ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ ಆದರೆ ಗೊಬ್ಬರ ಖರೀದಿಸಲು ಅವಕಾಶವಿಲ್ಲ ಇದೆಂಥಾ ನ್ಯಾಯ ಎಂದು ಜಿಲ್ಲಾಡಳಿತ ಎಡಬಿಡಂಗಿ ಕ್ರಮದ ಬಗ್ಗೆ ರೈತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಸತ್ತೀಗೌಡ ಎಂಬ ರೈತರೊಬ್ಬರು ವೀಡಿಯೋ ಮೂಲಕ ಮಾತನಾಡಿ, ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ಅಗತ್ಯ ವಸ್ತು ಖರೀದಿಸಲು ಅವಕಾಶ ನೀಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ

    ರೈತರಿಗೆ ಬಹುಮುಖ್ಯವಾಗಿ ಬೇಕಾದ ಗೊಬ್ಬರದಂಗಡಿ, ಬಿತ್ತನೆ ಬೀಜದ ಅಂಗಡಿಗಳನ್ನು ಬಾಗಿಲು ಮುಚ್ಚಿಸಲಾಗಿದೆ. ಆದರೆ ವೈನ್ ಶಾಪ್ ಗಳನ್ನು ತೆರೆಯಲು ರಾಜಾರೋಷವಾಗಿ ಅವಕಾಶ ಕಲ್ಪಿಸಿದ್ದಾರೆ. ನಿಮ್ಮದು ಅದೆಂಥ ಸರ್ಕಾರ, ನಿಮಗೆ ಮಾನ ಮರ್ಯಾದೆ ಇಲ್ಲ. ಮುಂಗಾರು ಸಮಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ರೈತರಿಗೆ ಬಹುಮುಖ್ಯವಾಗಿ ಬೇಕಾದ ಕೃಷಿ ಚಟುವಟಿಕೆ ಅಂಗಡಿಗಳನ್ನು ಬಾಗಿಲು ಹಾಕಿಸಿದ್ದೀರಲ್ಲ, ನಿಮಗೆ ನಾಚಿಕೆಯಾಗಬೇಕು ಎಂದು ಬಾಗಿಲು ತೆರೆದಿರುವ ಮದ್ಯದಂಗಡಿ ಮತ್ತು ಬಾಗಿಲು ಹಾಕಿರುವ ಗೊಬ್ಬರದಂಗಡಿ ಎರಡರ ಮುಂದೆಯೂ ನಿಂತು ಕಿಡಿಕಾರಿದ್ದಾರೆ.

    ಏಳು ದಿನಗಳ ಕಾಲ ಲಾಕ್‍ಡೌನ್
    ಇಂದಿನಿಂದ ಏಳು ದಿನಗಳ ಕಾಲ ಹಾಸನ ಜಿಲ್ಲೆ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಏಳು ದಿನಗಳ ಲಾಕ್ ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಗೆ ಮಾತ್ರ ಅವಕಾಶ ನೀಡಿದೆ. ಪ್ರತಿ ದಿನ ಆಹಾರ, ಹಣ್ಣು, ತರಕಾರಿ ಮತ್ತು ಎಲ್ಲಾ ದಿನಸಿ ಅಗತ್ಯ ವಸ್ತುಗಳು ಹೋಂ ಡೆಲಿವರಿಗೆ ಮಾತ್ರ ವಿನಾಯಿತಿ ಕಲ್ಪಿಸಲಾಗಿದೆ. ಉಳಿದಂತೆ ವೈದ್ಯಕೀಯ ಸೇವೆ, ನ್ಯಾಯಬೆಲೆ ಅಂಗಡಿ, ಹಾಲಿನಬೂತ್ ಗಳನ್ನು ಪ್ರತಿ ದಿನ ತೆರೆಯಲು ಅನುಮತಿ ನೀಡಲಾಗಿದೆ.

    ಈ ಹಿನ್ನೆಲೆಯಲ್ಲಿ ಇಂದು ಸೋಮವಾರವಾದ್ದರಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಹಳ್ಳಿಯಿಂದ ಜನ ಆಗಮಿಸಿದ್ದರು. ಆದರೆ ಗ್ರಾಮೀಣ ಭಾಗದ ಜನರನ್ನು ಪಟ್ಟಣದ ಹೊರಗಡೆಯೇ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದು, ಇಂದಿನಿಂದ ಜೂನ್ 14 ರವರೆಗೆ ಸಂಪೂರ್ಣ ಲಾಕ್‍ಡೌನ್ ಇದೆ, ಮನೆಗೆ ವಾಪಸ್ ಹೋಗಿ ಎಂದಿದ್ದಾರೆ. ಲಾಕ್ ಡೌನ್ ಮುಂದುವರಿಕೆ ಬಗ್ಗೆ ಅರಿವಿಲ್ಲದ ಜನರು ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆಯಿತು. ಚನ್ನರಾಯಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಒಂದು ವಾರಗಳ ಕಾಲ ಸಂಪೂರ್ಣ ಲಾಕ್‍ಡೌನ್ ಮಾಡಿದ್ದೀರಿ. ಈ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಲು ವಿಫಲರಾಗಿದ್ದೀರಿ. ನಮ್ಮ ಬಳಿ ದಿನನಿತ್ಯದ ವಸ್ತುಗಳೂ ಇಲ್ಲ. ಸೋಮವಾರ ಖರೀದಿಸಲು ಅವಕಾಶ ಇದೆ ಎಂದು ಕೊಂಡಿದ್ದೆವು ಈಗ ಏನು ಮಾಡಬೇಕು ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದರು. ಹಾಸನದಲ್ಲಿ ಬೆಳಿಗ್ಗೆ 7.30 ರಿಂದಲೇ ಬ್ಯಾಂಕ್‍ಗಳ ಮುಂದೆ ಜನರು ಕ್ಯೂ ನಿಂತಿದ್ದರು. ತರಕಾರಿ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಹೆಚ್ಚಿತ್ತು.

  • ಲಾಕ್‍ಡೌನ್ ಬಳಿಕ ಬೆಂಗಳೂರಿಗೆ ಜನರ ವಲಸೆ -ಹಳ್ಳಿಯಿಂದ ಬರುವವರ ಸಂಖ್ಯೆ ಹೆಚ್ಚಳ

    ಲಾಕ್‍ಡೌನ್ ಬಳಿಕ ಬೆಂಗಳೂರಿಗೆ ಜನರ ವಲಸೆ -ಹಳ್ಳಿಯಿಂದ ಬರುವವರ ಸಂಖ್ಯೆ ಹೆಚ್ಚಳ

    ನೆಲಮಂಗಲ: ಲಾಕ್‍ಡೌನ್ ಮುಂಚಿತವಾಗಿ ತಮ್ಮ-ತಮ್ಮ ಊರಿಗೆ ತೆರಳಿದ್ದ ವಲಸಿಗರು, ಕಳೆದ ಕೆಲ ದಿನಗಳಿಂದ ರಾಜಧಾನಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ಹೊರವಲಯ ನೆಲಮಂಗಲ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.

    ನೆಲಮಂಗಲದ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಕಂಡುಬಂದಿದ್ದು, ಹಳ್ಳಿಯಿಂದ ಮತ್ತೆ ಜನ ಬೆಂಗಳೂರಿನತ್ತ ಬರುತ್ತಿದ್ದಾರೆ. ಸರ್ಕಾರದಿಂದ ಅನ್‍ಲಾಕ್ ಘೋಷಣೆ ಆಗದಿದ್ದರು ಕೂಡ ಜನ ಬೆಂಗಳೂರಿಗೆ ಬಂದು ಸೇರುತ್ತಿದ್ದಾರೆ. ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕಂಡು ಬರುತ್ತಿದ್ದು, ಬೆಳಗ್ಗೆ 10 ಗಂಟೆಯ ತನಕ ವಾಹನಗಳ ಭರಾಟೆ ಜೋರಾಗಿದೆ. 17 ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ನೆಲಮಂಗಲ ತಾಲೂಕು ಹೊಂದಿದ್ದು, ಊರಿಗೆ ತೆರಳಿದ್ದ ಜನರು ಹಳ್ಳಿಗಳಿಂದ ಲಗೇಜು, ಹೆಂಡತಿ ಮಕ್ಕಳ ಜೊತೆಗೆ ಬೆಂಗಳೂರು ನಗರದತ್ತ ಪಯಣ ಬೆಳೆಸಿದ್ದಾರೆ.  ಇದನ್ನೂ ಓದಿ: ನೆಲಮಂಗಲ ಟೋಲ್ ಬಳಿ ಬಿರು ಬಿಸಿಲಲ್ಲಿ ಬಸ್‍ಗಾಗಿ ಕಾದು ಸುಸ್ತಾದ ಪ್ರಯಾಣಿಕರು

    ಎಂಟನೇ ಮೈಲಿ ಬಳಿ ಬ್ಯಾರಿಕೇಡ್ ತಳ್ಳಿ ಹೋಗುತ್ತಿರುವ ವಾಹನ ಸವಾರರ ದೃಶ್ಯ ಬೆಳ್ಳಂ ಬೆಳಗ್ಗೆ ಕಂಡುಬಂದಿದೆ. 8ನೇ ಮೈಲಿ ಬಳಿ ಪೊಲೀಸರ ಚೆಕ್ ಪೊಸ್ಟ್ ಬ್ಯಾರಿಕೇಡ್ ಜಖಂ ಆಗಿದ್ದು, ವಾಹನ ದಟ್ಟಣೆ ಹಿನ್ನೆಲೆ ಬ್ಯಾರಿಕೇಡ್ ತಳ್ಳಿ ನಗರ ಪ್ರವೇಶ ಮಾಡುತ್ತಿರುವವರನ್ನು ಕಂಡರು ಕೂಡ ಪೊಲೀಸರು ಸುಮ್ಮನಾಗಿದ್ದಾರೆ. ಬಿದ್ದ ಬ್ಯಾರಿಕೇಡ್ ಸರಿಸಿ ಪೊಲೀಸರು ತಪಾಸಣೆ ಮಾಡದೇ ವಲಸಿಗರಿಗೆ ಸರಾಗ ಸಂಚಾರ ಮಾಡಿಕೊಟ್ಟಿದ್ದಾರೆ.

  • ರೈತರಿಗೆ ಉಚಿತ ಗೊಬ್ಬರ, ಬಿತ್ತನೆ ಬೀಜ ಕೊಡಿ ಸಿಎಂಗೆ ಸಿದ್ದರಾಮಯ್ಯ ಮನವಿ

    ರೈತರಿಗೆ ಉಚಿತ ಗೊಬ್ಬರ, ಬಿತ್ತನೆ ಬೀಜ ಕೊಡಿ ಸಿಎಂಗೆ ಸಿದ್ದರಾಮಯ್ಯ ಮನವಿ

    -ಬಿಜೆಪಿ ಬಾಯಿ ಮಾತಿನಲ್ಲಿ ಮಾತ್ರ ರಾಷ್ಟ್ರಪ್ರೇಮದ ಮಾತು

    ಬೆಂಗಳೂರು: ಸರ್ಕಾರದ ನೀತಿಗಳು ಮತ್ತು ಕೋವಿಡ್ ಮುಂತಾದ ಕಾರಣಗಳಿಂದಾಗಿ ಇಂದು ರೈತರ ಬಳಿ ಬಿತ್ತನೆ ಚಟುವಟಿಕೆಗಳಿಗೆ ಕೈಯಲ್ಲಿ ಹಣವಿಲ್ಲದಂತಾಗಿದೆ. ಹಾಗಾಗಿ ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಉಚಿತವಾಗಿ ನೀಡಲು ಕ್ರಮವಹಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೂಡಲೇ ಸಾಲ ವಿತರಣೆ ಚಟುವಟಿಕೆಗಳನ್ನು ಆರಂಭಿಸಬೇಕು. ಹೆಸರು, ಉದ್ದು, ಅಲಸಂಡೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಹೇಗಾದರೂ ಮಾಡಿ ಸಂಗ್ರಹಿಸಿ ಬೇಡಿಕೆ ಇದ್ದಷ್ಟು ನೀಡಲು ಕೂಡಲೇ ಸಮರೋಪಾದಿಯಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಸಂಪೂರ್ಣ ವಿಫಲವಾಗಿದೆ – ಸಿದ್ದರಾಮಯ್ಯ

    ಪತ್ರದಲ್ಲಿ ಏನಿದೆ?

    ಈ ವರ್ಷ ಕೇವಲ ಶೇ. 19ರಷ್ಟು ಅಂದರೆ 410 ಕ್ವಿಂಟಾಲ್ ಹೆಸರು ಕಾಳು ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ. ಕಳೆದ ವರ್ಷ ತುಮಕೂರಿಗೆ 851 ಕ್ವಿಂಟಾಲ್ ಕಾಳನ್ನು ವಿತರಿಸಿದ್ದರೆ ಈ ವರ್ಷ ಕೇವಲ 90 ಕ್ವಿಂಟಾಲ್ ವಿತರಿಸಲಾಗಿದೆ. ಹಾಸನಕ್ಕೆ 618 ಕ್ವಿಂಟಾಲಿಗೆ ಬದಲಾಗಿ 87.5 ಕ್ವಿಂಟಾಲ್, ಮೈಸೂರಿಗೆ 418 ಕ್ವಿಂಟಾಲ್ ಬೇಡಿಕೆಗೆ ಬದಲಾಗಿ 165.50, ಚಾಮರಾಜನಗರಕ್ಕೆ 222 ಕ್ವಿಂಟಾಲಿನ ಬದಲು 67.5 ಕ್ವಿಂಟಾಲ್ ನೀಡಲಾಗಿದೆ. ಇದನ್ನು ದ್ರೋಹವೆನ್ನದೆ ಇನ್ನು ಯಾವ ಭಾಷೆಯಲ್ಲಿ ಹೇಳಬೇಕು?

    ಈ ವರ್ಷದ ಪೂರ್ವ ಮುಂಗಾರಿನಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಸರಾಸರಿಗಿಂತ ಶೇ. 15-20 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಸರ್ಕಾರ ಬಿತ್ತನೆ ಬೀಜ ಸರಬರಾಜು ಮಾಡದೆ ತೊಂದರೆ ಮಾಡಿದೆ. ನನಗಿರುವ ಮಾಹಿತಿಯ ಪ್ರಕಾರ ಈ ವರ್ಷ ಬೇಡಿಕೆಯನ್ನು ಅಂದಾಜು ಮಾಡದೆ, ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ಸಂಗ್ರಹಣೆ ಮಾಡಿಕೊಳ್ಳದೆ ಮೈಮರೆಯಲಾಗಿದೆ. ಕಡೆಗೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಳೆದ ವರ್ಷ ಬಿತ್ತನೆ ಬೀಜ ಪಡೆದ ರೈತರಿಗೆ ಈ ವರ್ಷ ನೀಡಲಾಗದು ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಹೇಳಿ ಕಳಿಸಿದ್ದಾರೆ. ಕೃಷಿ ಇಲಾಖೆಯೂ ಸಹ ಸುತ್ತೋಲೆಗಳನ್ನು ಹೊರಡಿಸಿದೆ. ಇದನ್ನೂ ಓದಿ:ಅದಾನಿ, ಅಂಬಾನಿ ಪರ ಕಾನೂನನ್ನು ಹಿಂಪಡೆಯಿರಿ- ಸಿದ್ದರಾಮಯ್ಯ

    ಈಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿತ್ತನೆ ಕೆಲಸಗಳು ಪ್ರಾರಂಭವಾಗುತ್ತವೆ. ಅಲ್ಲಿಗೂ ಸಹ ಸಾಕಷ್ಟು ಪ್ರಮಾಣದ ಬಿತ್ತನೆ ಕಾಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ. ನನಗೆ ಇರುವ ಮಾಹಿತಿ ಪ್ರಕಾರ ಕೃಷಿ ಇಲಾಖೆ 8391 ಕ್ವಿಂಟಾಲಿಗೆ ಬದಲು ಕೇವಲ 5000 ರಿಂದ 5500 ಕ್ವಿಂಟಾಲ್ ಹೆಸರು ಕಾಳನ್ನು ವಿತರಿಸಲು ಈಗ ಹೊರಟಿದೆ. ಇದು ಸರಿಯಾದ ಕ್ರಮವಲ್ಲ.

    ಇದೆಲ್ಲದರಿಂದ ಆಗುವ ಪರಿಣಾಮಗಳೇನು?
    ರೈತರಿಗೆ ಸಮರ್ಪಕ ಬಿತ್ತನೆ ಬೀಜ ಸಿಗದೆ ಬಿತ್ತನೆ ಮಾಡದಿದ್ದರೆ ಅಥವಾ ರೈತರು ತಮ್ಮ ಬಳಿ ಇದ್ದ ಗುಣಮಟ್ಟವಿಲ್ಲದ ಬೀಜಗಳನ್ನು ಬಿತ್ತನೆ ಮಾಡಿದರೆ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದರಿಂದ ರೈತರಿಗೆ ಆದಾಯ ಖೋತಾ ಆಗುತ್ತದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಕಾಳುಗಳನ್ನು ಬಳಸುವ ಗ್ರಾಹಕರಿಗೆ ಸುಲಭದ ದರದಲ್ಲಿ ಕೈಗೆಟುಕದೆ ದ್ವಿದಳ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಲಾರಂಭಿಸುತ್ತಾರೆ. ಇದರಿಂದ ಒಟ್ಟಾರೆ ರಾಷ್ಟ್ರದ ಜನರ ಆರೋಗ್ಯದ ಮಟ್ಟ ಕುಸಿತವಾಗುತ್ತದೆ. ಇದನ್ನೂ ಓದಿ:ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ: ನಾಡಿದ್ದು ಡಿಸ್ಚಾರ್ಜ್

    ನಿಜವಾದ ರಾಷ್ಟ್ರಪ್ರೇಮವೆಂದರೆ ತನ್ನ ಜನರಿಗೆ ಉತ್ತಮ ಆಹಾರವನ್ನು ನೀಡಿ ಸದೃಢರಾಗಿಸುವುದೂ ಹೌದಲ್ಲವೆ? ಕೇವಲ ಬಾಯಿ ಮಾತಿನಲ್ಲಿ ರಾಷ್ಟ್ರಪ್ರೇಮದ ಮಾತನಾಡಿ ಅದಾನಿ, ಧಮಾನಿ, ಅಂಬಾನಿಗಳ ಕೈಗೆ ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯನ್ನು ಕೊಟ್ಟು, ಅವರಿಗೆ ಜನರನ್ನು ಹುರಿದು ಮುಕ್ಕಲು ಬಿಟ್ಟು ಜನರ ಬಳಿ ಇರುವ ಬಿಡಿಗಾಸುಗಳನ್ನು ಲೂಟಿ ಹೊಡೆಯಲು ಅವಕಾಶ ಮಾಡಿಕೊಟ್ಟು ಹಸಿರು ಶಾಲನ್ನು ಹೆಗಲ ಮೇಲೆ ಹಾಕಿಕೊಂಡರೆ ಅದು ರೈತ ಪ್ರೇಮವಾಗುತ್ತದೆಯೇ? ವೇಷಗಳನ್ನು ಧರಿಸಿ ಘೋಷಣೆಗಳನ್ನು ಕೂಗಿದರೆ ಅದು ರಾಷ್ಟ್ರಪ್ರೇಮವಾಗುತ್ತದೆಯೇ? ಸುಳ್ಳು ಘೋಷಣೆಗಳ ಕೆಸರಿನಲ್ಲಿ ಮುಳುಗಿಸಿ ಜನರನ್ನು ಭೀಕರ ಶೋಷಣೆ ಮಾಡುವುದರಿಂದ ದೇಶ ಪ್ರಗತಿ ಹೊಂದಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

  • ಯಡಿಯೂರಪ್ಪನವರ ಖುರ್ಚಿ ಭದ್ರವಾಗಿದೆ, ಸಿಎಂ ಖುರ್ಚಿ ಖಾಲಿ ಇಲ್ಲ: ಬಿ.ಸಿ.ಪಾಟೀಲ್

    ಯಡಿಯೂರಪ್ಪನವರ ಖುರ್ಚಿ ಭದ್ರವಾಗಿದೆ, ಸಿಎಂ ಖುರ್ಚಿ ಖಾಲಿ ಇಲ್ಲ: ಬಿ.ಸಿ.ಪಾಟೀಲ್

    ಹಾವೇರಿ: ಯಡಿಯೂರಪ್ಪನವರ ಖುರ್ಚಿ ಭದ್ರವಾಗಿದೆ. ಸಿಎಂ ಖುರ್ಚಿ ಖಾಲಿ ಇಲ್ಲ. ಅವರೆ ಮುಂದುವರಿಯುತ್ತಾರೆ. ಇನ್ನು ಎರಡು ವರ್ಷಗಳ ಕಾಲ ಯಡಿಯೂರಪ್ಪನವರೆ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆ ಸಹ ಯಡಿಯೂರಪ್ಪನವರ ನಾಯಕತ್ವದಲ್ಲೇ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣಿಸಿ- ಡಿಸಿಎಂಗೆ ಸುರೇಶ್ ಕುಮಾರ್ ಮನವಿ

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರ್ಯಾರೋ ಎಲ್ಲೆಲ್ಲೋ ಮಾತನಾಡುತ್ತಾರೆ ಅಂತಾ ಅದಕ್ಕೆಲ್ಲ ಉತ್ತರ ಕೊಡೋಕೆ ಆಗೋದಿಲ್ಲ. ಸಿ.ಪಿ.ಯೋಗೇಶ್ವರಗೆ ಪರೋಕ್ಷವಾಗಿ  ಟಾಂಗ್ ನೀಡಿದರು. ಈಗ ಅದನ್ನ ಮಾತನಾಡೋ ವಿಚಾರವಲ್ಲ. ಅದನ್ನ ಮಾತಾಡೋಕೆ ರಾಜ್ಯದ, ರಾಷ್ಟ್ರದ ಅಧ್ಯಕ್ಷರಿದ್ದಾರೆ. ಅವರೆ ಮಾತಾಡ್ತಾರೆ, ನಾವು ಕೊರೊನಾ ಬಗ್ಗೆ ಮಾತಾಡೋಣ ಎಂದರು. ಇದನ್ನೂ ಓದಿ: ವೆಂಕಯ್ಯ ನಾಯ್ಡು ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಮಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

     

    ಮೈಸೂರಿನಲ್ಲಿ IAS ಅಧಿಕಾರಿಗಳು ಬಹಿರಂಗವಾಗಿ ಸಾರ್ವಜನಿಕವಾಗಿ ಕಿತ್ತಾಡೋದು ಸರಿಯಲ್ಲ. ಅಧಿಕಾರಿಗಳು ನಿಯಮಗಳ ಅಡಿ ಕೆಲಸ ಮಾಡಬೇಕು. ಯಾರೂ ಸರ್ಕಾರಕ್ಕಿಂತ, ಇಲಾಖೆಗಿಂತ ದೊಡ್ಡವರಲ್ಲ. ಅವರ ಇತಿಮಿತಿ ಅರಿತು ಕೆಲಸ ಮಾಡಬೇಕು. ಈ ರೀತಿ ಬೀದಿರಂಪ ಮಾಡುವುದರಿಂದ ಸರ್ಕಾರದ ಘನತೆಗೆ ಕುಂದು ಬರುತ್ತದೆ. ನಮ್ಮ ಮುಖ್ಯಮಂತ್ರಿಗಳು ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತಾರೆ ಎಂದು  ಹೇಳಿದ್ದಾರೆ.  ಇದನ್ನೂ ಓದಿ: ಶಿಲ್ಪಾ ನಾಗ್ ರಾಜೀನಾಮೆ ಬೆನ್ನಲ್ಲೇ ಹೊಸ ಟೆನ್ಶನ್ -ಕಠಿಣ ನಿರ್ಧಾರಕ್ಕೆ ಬಂದ್ರಾ ಜಿಲ್ಲಾ ಉಸ್ತುವಾರಿ ಸಚಿವ?

    ರಾಜ್ಯದಲ್ಲಿ ಎಲ್ಲೂ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ. ಕೃತಕ ಅಭಾವ ಸೃಷ್ಟಿಸೋರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೃತಕ ಅಭಾವ ಸೃಷ್ಟಿಸಿದರೆ ಪೊಲೀಸ್ ಕೇಸ್ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

  • ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

    ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಕೊರೊನಾದಿಂದಾಗಿ ರಾಜ್ಯದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ರದ್ದುಗೊಂಡಿದೆ. ಪಬ್ಲಿಕ್ ಟಿವಿಯ ಸಲಗೆ ಸ್ವೀಕರಿಸಿರುವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರ ಹೊಸ ಮಾನದಂಡವನ್ನು ಪ್ರಕಟಿಸಿದೆ.

    ನಿನ್ನೆ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಗ್ರೇಡ್ ಆಧಾರದಲ್ಲಿ ಪಾಸ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದಿದ್ದರು. ಆದರೆ ಇಂದು ಎಲ್ಲಾ ವಿದ್ಯಾರ್ಥಿಗಳ ಪಾಸ್ ಮಾಡಲು ಮಾನದಂಡದಲ್ಲಿ ಕೆಲ ಬದಲಾವಣೆಯನ್ನು ತರಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    ಇದೇ ವಿಚಾರವಾಗಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ರವರು ನಡೆಸಿಕೊಡುವ ಬಿಗ್ ಬುಲೆಟಿನ್ ನಲ್ಲಿ ನಿನ್ನೆ ಪ್ರಥಮ ಪಿಯುಸಿ ಜೊತೆಗೆ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಪರಿಗಣಿಸಿ ಅಂತ ಸಲಹೆ ನೀಡಿದ್ರು. ಸಲಹೆಯನ್ನ ಸ್ವೀಕಾರ ಮಾಡಿರುವ ಶಿಕ್ಷಣ ಸಚಿವರು ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಪರಿಗಣಿಸಿ ಗ್ರೇಡ್ ಮಾನದಂಡ ಸಿದ್ದ ಮಾಡಿ ಅಂತ ಶಿಕ್ಷಣ‌ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಶಿಕ್ಷಣ ಇಲಾಖೆ ‌ಪ್ರಧಾನ ಕಾರ್ಯದರ್ಶಿ, ಪಿಯುಸಿ ಬೋರ್ಡ್ ನಿರ್ದೇಕರು ಹಾಗೂ ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕರಿಗೆ ಪತ್ರ ಬರೆದು ಮಾನದಂಡ ರೂಪಿಸಲು ಸೂಚನೆ ನೀಡಿದ್ದಾರೆ.

    ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಪ್ರಕಾರ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಲು ವಿದ್ಯಾರ್ಥಿಯ ಪ್ರಥಮ ಪಿಯುಸಿ ಪರೀಕ್ಷೆಯ ಅಂಕಗಳ ಜೊತೆಗೆ ಎಸ್‍ಎಸ್‍ಎಲ್‍ಸಿ ಅಂಕಗಳು ಸೇರಿ ಮಾನದಂಡ ಇಟ್ಟುಕೊಂಡು ಫಲಿತಾಂಶ ನೀಡಲು ಸರ್ಕಾರದ ತೀರ್ಮಾನಿಸಿದೆ.

    ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳ ಎಷ್ಟು ಪ್ರಮಾಣದಲ್ಲಿ ಅಂಕ ಪರಿಗಣನೆ ಮಾಡಬೇಕು ಎಂದು ನಿರ್ಧಾರ ವಾಗಿಲ್ಲ. ಶೀಘ್ರವೇ ಈ ಕುರಿತು ಪಿಯುಸಿ ಬೋರ್ಡ್ ಸರಿಯಾದ ನಿರ್ಧಾರ ತೆಗೆದುಕೊಂಡು ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

    ಕಳೆದ ವರ್ಷ ತಜ್ಞರು ನೀಡಿದ ಸಲಹೆಯ ಆಧಾರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು.  ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಆದೆ ಕೊರೊನಾ ಕಾಲದಲ್ಲಿ ಪರೀಕ್ಷೆ ನಡೆಸುವುದು ಬಹಳ ಅಪಾಯಕಾರಿ. ಪರೀಕ್ಷೆ ನಡೆಸದೇ ಹೋದರೂ ಸರ್ಕಾರಕ್ಕೆ ಸಮಸ್ಯೆಯಾಗಲಿದೆ. ಒಟ್ಟಿನಲ್ಲಿ ಪರೀಕ್ಷೆ ಎಂಬ ಅಡಕತ್ತರಿಯಲ್ಲಿ ಶಿಕ್ಷಣ ಇಲಾಖೆ ಸಿಲುಕಿತ್ತು.

    ಪರೀಕ್ಷೆ ಇಲ್ಲದೆ ಪಾಸ್ ಏನಾಗಬಹುದು?
    ಶೈಕ್ಷಣಿಕ ಗುಣಮಟ್ಟಕ್ಕೆ ಭಾರೀ ಹೊಡೆತ ಬೀಳುವುದರ ಜೊತೆಗೆ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು. ನೀಟ್, ಸಿಇಟಿ ಸೀಟ್ ಹಂಚಿಕೆಯಲ್ಲಿ ಭಾರೀ ಗೊಂದಲವಾಗಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲು ಏರಬಹುದು. ಅತ್ಯುತ್ತಮ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಬಹುದು. ಕೆಲ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಇದನ್ನೂ ಓದಿ: ಸುರೇಶ್ ಕುಮಾರ್ ಆತ್ಮವಂಚನೆ ಮಾಡಿಕೊಂಡು ಪಿಯುಸಿ ಪರೀಕ್ಷೆ ರದ್ದು ಮಾಡಿದ್ದಾರೆ – ಅಮರೇಗೌಡ

    ಪರೀಕ್ಷೆ ನಡೆಸಿದ್ರೆ ಏನಾಗಬಹುದು?
    ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೋವಿಡ್ ಅಪಾಯವಾಗಿ ಸೋಂಕು ಸ್ಫೋಟ ಆಗಬಹುದು. ಕೋವಿಡ್ ಸಾವು ನೋವು ಹೆಚ್ಚಾಗಬಹುದು.

    ತಜ್ಞರು ಏನು ಹೇಳಿದ್ರು?
    ಕೊರೊನಾ ಸಮಯದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ಅಲ್ಲ. ಪರೀಕ್ಷೆಗೆ ಸರ್ಕಾರ ಆತುರ ಪಡಬಾರದು. ಪರೀಕ್ಷೆ ಮಾಡಲೇಬೇಕು ಅಂದರೆ ಸೋಂಕು ನಿಯಂತ್ರಣಗೊಂಡ ಬಳಿಕ ನಡೆಸಬಹುದು. ಶಾಲಾ-ಕಾಲೇಜುಗಳ ಹಂತದಲ್ಲಿಯೇ ಆಫ್‍ಲೈನ್ ಬದಲು ಆನ್‍ಲೈನ್ ಪರೀಕ್ಷೆ ನಡೆಸಬೇಕು.

    ಪರೀಕ್ಷೆ ಬೇಡ ಎನ್ನುವವರ ವಾದ ಏನು?
    ಕೊರೊನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಬಾರದು. ಮಕ್ಕಳ ಶಿಕ್ಷಣಕ್ಕಿಂತ ಮಕ್ಕಳ ಜೀವ ನಮಗೆ ಮುಖ್ಯ. ಈ ಕೊರೊನಾ ವರ್ಷದಲ್ಲಿ ಪರೀಕ್ಷೆಯೇ ಬೇಡ. ಸಿಬಿಎಸ್‍ಇ ಮಾದರಿಯಲ್ಲಿ ಎಲ್ಲರನ್ನು ಪಾಸ್ ಮಾಡಿ.

    ಪರೀಕ್ಷೆ ಬೇಕು ಎನ್ನುವವರ ವಾದ ಏನಿತ್ತು?
    ಸರ್ಕಾರ ಪರೀಕ್ಷೆ ರದ್ದು ಮಾಡಬಾರದು. ಸೆಕೆಂಡ್ ಪಿಯುಸಿ ಪರೀಕ್ಷೆ ಮುಖ್ಯ. ಸಾಮೂಹಿಕವಾಗಿ ಪಾಸ್ ನಿರ್ಧಾರ ಸರಿಯಲ್ಲ. ಒಂದು ವೇಳೆ ಎಲ್ಲರನ್ನೂ ಪಾಸ್ ಮಾಡಿದರೆ ಅಷ್ಟು ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳಲ್ಲಿ ಸೀಟ್ ಸಿಗಲಾರದು. ಬೇಡಿಕೆ ಜಾಸ್ತಿಯಾದರೆ ಕಾಲೇಜುಗಳೇ ಪರೀಕ್ಷೆ ನಡೆಸಿ ಪ್ರವೇಶ ನೀಡಬಹುದು. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ನಡೆಸಬೇಕಾಗುತ್ತದೆ. ಇಲ್ಲ ಅಂದ್ರೆ ನೀಟ್, ಸಿಇಟಿ ವೇಳೆ ಮಕ್ಕಳಿಗೆ ತೊಂದರೆ ಆಗುತ್ತದೆ.

  • ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ‘ಗೋ’ರಕ್ಷಣೆ? – ಕುಮಾರಸ್ವಾಮಿ

    ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ‘ಗೋ’ರಕ್ಷಣೆ? – ಕುಮಾರಸ್ವಾಮಿ

    ಬೆಂಗಳೂರು: ರಾಸುಗಳಿಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ ನಡೆಸದೇ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋ ರಕ್ಷಣೆ ಎಂದು ಟ್ವಿಟ್ಟರ್‍ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?

    `ಗೋ` ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ. ಸಾಂಕ್ರಾಮಿಕ ರೋಗ ಕಾಲುಬಾಯಿ ಜ್ವರ ಭೀಕರ ಕಾಯಿಲೆ. ಅದು ಬಹುಬೇಗ ಹರಡುತ್ತದೆ. ಹಸುಗಳು ನರಳಾಡಿ ಸಾಯುತ್ತವೆ. ಗೋವುಗಳ ಪಾಡು ನೋಡಲಾಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸದೇ ಇರುವುದೇ ಇದಕ್ಕೆ ಕಾರಣ ಎಂಬ ಅಂಶ ಬಯಲಾಗಿದೆ. ಇದನ್ನೂ ಓದಿ: ಕೋವಿಡ್‍ನಿಂದ ಮೃತರಾದ ಶಿಕ್ಷಕರಿಗೆ ಪರಿಹಾರ ಕೊಡಿ- ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

    ಕಳೆದ ಅಕ್ಟೋಬರ್‍ ನಲ್ಲಿ ಕೇಂದ್ರ ಸರ್ಕಾರ ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೋವಿಡ್-19 ಕಾರಣದಿಂದ ಲಸಿಕೆ ಹಾಕಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ. ಲಸಿಕೆ ಅಭಿಯಾನ ನಡೆಸದೇ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದೆ ನಿಂತು ಮಾಡಿದ ಗೋವಧೆಯಲ್ಲವೇ. ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾ. ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಹೈನೋದ್ಯಮವನ್ನು ಕಂಗೆಡಿಸುವ ಈ ಕಾಯಿಲೆ ಸಾಂಕ್ರಾಮಿಕವಾಗುವುದನ್ನು ತಡೆಯಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಮುಂದೆ ಜೂನ್‍ನಲ್ಲಿ ನಡೆಯಲಿರುವ ಲಸಿಕೆ ಅಭಿಯಾನವನ್ನು ಯಾವ ಕಾರಣಕ್ಕೂ ತಪ್ಪಿಸದಂತೆ ನೋಡಿಕೊಳ್ಳಬೇಕು. ಇದನ್ನೂ ಓದಿ: ಲಸಿಕೆ ಅಭಿಯಾನದಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ತಾರತಮ್ಯವಾಗುತ್ತಿದೆ-ಹೆಚ್.ಡಿ ಕುಮಾರಸ್ವಾಮಿ

    ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಬೇಕು. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಲುಬಾಯಿ ಜ್ವರಬಂದಿತ್ತು. ಆಗ ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಇದರಿಂದ ಎಚ್ಚೆತ್ತ ಸರ್ಕಾರ ಕೂಡ ಪರಿಹಾರ ನೀಡಿತ್ತು. ಗೋವುಗಳ ಬಗ್ಗೆ ದೊಡ್ಡದಾಗಿ ಮಾತಾಡುವ ಬಿಜೆಪಿ ಈಗ ಗೋವುಗಳ ರಕ್ಷಣೆ ಮಾಡಲಿ ಎಂದು ಬರೆದುಕೊಂಡಿದ್ದಾರೆ.

  • ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ 10ನೇ ತರಗತಿ ಪರೀಕ್ಷೆ ನಡೆಸುವುದು ಅರ್ಥಹೀನ-ನಿರಂಜನಾರಾಧ್ಯ ವಿ.ಪಿ

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ 10ನೇ ತರಗತಿ ಪರೀಕ್ಷೆ ನಡೆಸುವುದು ಅರ್ಥಹೀನ-ನಿರಂಜನಾರಾಧ್ಯ ವಿ.ಪಿ

    ಬೆಂಗಳೂರು: ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿರುವುದು ಸ್ವಾಗತಾರ್ಹ ವಿಷಯ. ಇದು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನವನ್ನು ಗೌರವಿಸಿದಂತಾಗಿದೆ. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಡೆಸುವುದಾಗಿ ಪ್ರಕಟಿಸಿರುವುದು ಅರ್ಥಹೀನವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಅಭಿಪ್ರಾಯಪಟ್ಟಿದ್ದಾರೆ.

    ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದ ನಿರಂಜನಾರಾಧ್ಯ ಅವರು, ಸಾಮಾನ್ಯವಾಗಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ನಾವು ಮಂಡಳಿ ಪರೀಕ್ಷೆಗಳಿಲ್ಲದೆ ತೇರ್ಗಡೆಗೆ ಪರಿಗಣಿಸುವಾಗ ಪ್ರಥಮ ಪಿಯುಸಿಯಲ್ಲಿ ಅವರ ಸಾಧನೆ, ತರಗತಿ ಪರೀಕ್ಷೆಗಳ ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಅಂಕ, ಅಂದರೆ ಒಂದು ವರ್ಷದ ಸಾಧನೆಯನ್ನು ಪರಿಗಣಿಸಿ ಎಲ್ಲರನ್ನೂ ತೇರ್ಗಡೆ ಮಾಡುವ ಕ್ರಮ ಅನುಸರಿಸುತ್ತೇವೆ. ಅದರ ಜೊತೆಗೆ ಅಗತ್ಯವಿದ್ದಲ್ಲಿ ಅವರು ಹಿಂದಿನ ಮಂಡಳಿ ಪರೀಕ್ಷೆಯಾದ 10ನೇ ತರಗತಿಯ ಸಾಧನೆಯನ್ನು ಪರಿಗಣಿಸಬಹುದಾಗಿದೆ. ಇಲ್ಲಿ ಸಾಧನೆಯನ್ನು ಓರೆಗಲ್ಲಿಗೆ ಹಚ್ಚಲು ಹೆಚ್ಚಿನ ಆಯಾಮಗಳು ಕಷ್ಟ ಎಂದಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೇಗೆ ನಡೆಯುತ್ತೆ? ಪಿಯುಸಿ ವಿದ್ಯಾರ್ಥಿಗಳು ಹೇಗೆ ಪಾಸ್?

    10ನೇ ತರಗತಿಯಲ್ಲಿರುವ ಮಕ್ಕಳ ಸಂಚಿತ (ಕ್ಯುಮ್ಯುಲೇಟೀವ್) ಸಾಧನೆಯನ್ನು ಪರಿಗಣಿಸಿ ಮಂಡಳಿ ಪರೀಕ್ಷೆಯಿಲ್ಲದೆ ವಸ್ತುನಿಷ್ಠವಾಗಿ ಹಾಗೂ ವೈಜ್ಞಾನಿಕವಾಗಿ ತೇರ್ಗಡೆಗೊಳಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಮತ್ತು ದೀರ್ಘಕಾಲದ ಸಾಧನೆಯನ್ನು ಪರಿಗಣಿಸಬಹುದಾಗಿದೆ. ಸಾಮಾನ್ಯವಾಗಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು 1 ರಿಂದ 10 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿರುತ್ತಾರೆ. ಅಥವಾ ಕನಿಷ್ಠ ಮೂರು ವರ್ಷಗಳಾದರು ಒಂದು ಶಾಲೆಯಲ್ಲಿ( 8, 9 ಮತ್ತು 10 ನೇ ತರಗತಿ) ಮಕ್ಕಳ 10 ವರ್ಷದ ಸಂಚಿತ ಸಾಧನೆ ಅಥವಾ ಮೂರು ವರ್ಷದ ಸಂಚಿತ ಸಾಧನೆ ಹೆಚ್ಚು ವಸ್ತುನಿಷ್ಠವಾಗಿರುವುದಲ್ಲದೆ ಕಲಿಕೆಯ ಹಲವು ಆಯಾಮಗಳನ್ನು ಪರಿಗಣಿಸಿ ಮಕ್ಕಳನ್ನು ತೇರ್ಗಡೆಗೊಳಿಸುವ ವಿಫುಲ ಅವಕಾಶಗಳಿವೆ ಎಂದರು. ಇದನ್ನೂ ಓದಿ: ಪರಿಸ್ಥಿತಿ ಸುಧಾರಣೆಯಾದ್ರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಎಂ ಬಿಎಸ್‍ವೈ 

    ಪರಿಸ್ಥಿತಿ ಹೀಗಿರುವಾಗ, ಸರ್ಕಾರ 10 ನೇ ತರಗತಿಯನ್ನು ರದ್ದುಗೊಳಿಸದಿರುವುದು ಅವೈಜ್ಞಾನಿಕ ಮಾತ್ರವಲ್ಲ ಶೈಕ್ಷಣಿಕವಾಗಿ ತಪ್ಪು ನಿರ್ಧಾರ. ಜೊತೆಗೆ ಈಗಾಗಲೇ ಉಳಿದ ಎರಡು ಮಂಡಳಿಗಳಾದ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಮಂಡಳಿಗಳು ತಮ್ಮ ಪರೀಕ್ಷೆಗಳನ್ನು ರದ್ದು ಮಾಡಿರುವಾಗ, ರಾಜ್ಯ ಮಂಡಳಿಯ ಪಠ್ಯಕ್ರಮಕ್ಕೆ ಸಂಯೋಜನೆಗೊಂಡಿರುವ ಮಕ್ಕಳ ಮೇಲೆ ಪರೀಕ್ಷೆ ಹೇರುವುದು ಅಮಾನವೀಯ, ತಾರತಮ್ಯ ಮತ್ತು ಶೈಕ್ಷಣಿಕವಾಗಿ ಅಪಕ್ವ-ಅಪ್ರಬುದ್ಧ ನಿರ್ಧಾರ. ಈ ಮಕ್ಕಳು ಕಳೆದ 14 ತಿಂಗಳುಗಳಿಂದ ಸಂಕಷ್ಟಕ್ಕೆ ಗುರಿಯಾಗಿದ್ದು, ಸರಿಯಾದ ಕಲಿಕಾ ವ್ಯವಸ್ಥೆಯಿಲ್ಲದೆ ಮಾನಸಿಕವಾಗಿ ಸೊರಗಿರುವ ಈ ಸಂದರ್ಭದಲ್ಲಿ ಸಮಾನಾಂತರ ತರಗತಿಯಲ್ಲಿ ಕಲಿಯುತ್ತಿರುವ ಅವರ ಗೆಳೆಯರು ಮಂಡಳಿ ಪರೀಕ್ಷೆಯಿಲ್ಲದೆ ತೇರ್ಗಡೆ ಹೊಂದಿ ಇವರು ಮಾತ್ರ ರಾಜ್ಯ ಪಠ್ಯಕ್ರಮದಲ್ಲಿ ಓದಿದಕ್ಕಾಗಿ ಪರೀಕ್ಷೆ ಬರೆಯುವುದು ಎಷ್ಟು ಸಮಂಜಸ? ಇದು ತಾರತಮ್ಯವಲ್ಲವೇ? ಇದು ಅತ್ಯಂತ ಅವೈಜ್ಞಾನಿಕ ನಿರ್ಧಾರ ಎಂದು ಟೀಕಿಸಿದ್ದಾರೆ.

    ಸಚಿವರೂ ಕೂಡಲೇ ತಮ್ಮ ನಿರ್ಧಾರವನ್ನು ಹಿಂಪಡೆದು ಮಕ್ಕಳ ಹಾಗೂ ಪಾಲಕರ ಆತಂಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು 10ನೇ ತರಗತಿ ಪರೀಕ್ಷೆಗಳನ್ನು ಕೂಡ ರದ್ದು ಮಾಡುವಂತೆ ವಿನಂತಿಸುತ್ತೇನೆ. ಜೊತೆಗೆ ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾಗದೆ ಈಗ ಪೂರಕ ಪರೀಕ್ಷೆಗಳಿಗೆ ಸಿದ್ಧವಾಗಿದ್ದ ಪುನರಾವರ್ತಿ ವಿದ್ಯಾರ್ಥಿಗಳನ್ನು ಸಹ ತೇರ್ಗಡೆಗೊಳಿಸಿ ಅವರು ತಮ್ಮ ಮುಂದಿನ ಶಿಕ್ಷಣ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ತೀರ್ಮಾನವನ್ನು ಪ್ರಕಟಿಸಬೇಕು ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು

    10ನೇ ಅಥವಾ 12ನೇ ತರಗತಿಯ ಮಕ್ಕಳಾಗಲಿ ಅಥವಾ ಇತರೆ ಯಾವುದೇ ತರಗತಿಯ ಮಕ್ಕಳ ಕಲಿಕೆ ಕಳೆದ 15 ತಿಂಗಳಿಗಳಿಂದ ಸಮರ್ಪಕವಾಗಿ ನಡೆದಿಲ್ಲವೆಂಬ ಸತ್ಯವನ್ನು ಒಪ್ಪಿ, ಈ ಮಕ್ಕಳು ಮುಂದಿನ ಯಾವುದೇ ತರಗತಿಗಳಿಗೆ ತೇರ್ಗಡೆಯಾಗಿ ಹೋಗುವ ಸಂದರ್ಭದಲ್ಲಿ, 2021-22ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಅವರಿಗೆ ಮೂರು ತಿಂಗಳ ವೇಗ ವರ್ಧಿತ ಕಲಿಕಾ ಸೇತು ಬಂಧ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿನ ನಷ್ಟವನ್ನು ತುಂಬಿ ಕೊಡುವುದು ಹಾಗೂ ಬುನಾದಿ ಜ್ಞಾನವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಮತ್ತು ಆದ್ಯತೆಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ. ಸರ್ಕಾರ ಪರೀಕ್ಷೆಗಳ ಸುಳಿಯಿಂದ ಹೊರಬಂದು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಪಿಜಿ ಉದ್ಯಮ ನಷ್ಟದಲ್ಲಿದ್ದು, ಸರ್ಕಾರ ಇತ್ತ ಗಮನ ಹರಿಸಲಿ: ಅರುಣ್ ಕುಮಾರ್

    ಪಿಜಿ ಉದ್ಯಮ ನಷ್ಟದಲ್ಲಿದ್ದು, ಸರ್ಕಾರ ಇತ್ತ ಗಮನ ಹರಿಸಲಿ: ಅರುಣ್ ಕುಮಾರ್

    ಬೆಂಗಳೂರು: ಕೊರೋನಾದಿಂದ ಪಿಜಿ ಉದ್ಯಮ ನಷ್ಟದಲ್ಲಿದೆ. ಸರ್ಕಾರ ನಮ್ಮ ಬಗ್ಗೆ ಗಮನ ಹರಿಸಲಿ ಎಂದು ರಾಜ್ಯ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.

    ಬಿಲ್ಡಿಂಗ್ ಬಾಡಿಗೆ ಕಟ್ಟಲಾಗದೇ ಪರದಾಡ್ತಿದ್ದೇವೆ. ಸರ್ಕಾರ ಕೂಡಲೇ ಪಿಜಿ ಮಾಲೀಕರಿಗೆ ಪ್ರತ್ಯೇಕ ಪ್ಯಾಕೇಜ್ ಜೊತೆಗೆ ಲಾಕ್ ಡೌನ್ ಅವಧಿಯ ನೀರು ಹಾಗೂ ವಿದ್ಯುತ್ ಬಿಲ್ ನ್ನು ಕಡಿತಗೊಳಿಸಬೇಕು. ಕೊರೊನಾ ಹೊಡೆತದಿಂದ ಆರ್ಥಿಕ ಚಟುವಟಿಕೆಗಳು ಸ್ಥಬ್ಧಗೊಂಡಿದ್ದು, ವಿವಿಧ ವಲಯಗಳಿಗೆ ಸರ್ಕಾರ ಈಗಾಗಲೇ ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ ಪಿಜಿ ಉದ್ಯಮದ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ನೋವು ತೋಡಿಕೊಂಡರು.

    ಪಿಜಿಯಲ್ಲಿರುವ ಹಲವರು ತಮ್ಮೂರುಗಳಿಗೆ ಹೋಗಿದ್ದು, ಪಿಜಿಗಳೆಲ್ಲವೂ ಖಾಲಿಯಾಗಿವೆ. ಬಾಡಿಗೆ ಕಟ್ಟುವಂತೆ ಬಿಲ್ಡಿಂಗ್ ಮಾಲೀಕರು ಒತ್ತಾಯಿಸ್ತಿದ್ದಾರೆ. ಪಿಜಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡಿ, ಖಾಲಿ ಬಿಲ್ಡಿಂಗ್ ಗೂ ಬಾಡಿಗೆ ಕಟ್ಟಲಾಗದ ಅಸಹಾಯಕ ಸ್ಥಿತಿಯಲ್ಲಿ ಪಿಜಿ ಮಾಲೀಕರಿದ್ದಾರೆ. ಮಾನ್ಯ ಮುಖ್ಯ ಮಂತ್ರಿಗಳು ದಯವಿಟ್ಟು ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ನಡೆಯಲಿ – ಶಾಸಕ ಅಮರೇಗೌಡ

    ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ನಡೆಯಲಿ – ಶಾಸಕ ಅಮರೇಗೌಡ

    ಕೊಪ್ಪಳ: ಯಾವುದೇ ಕಾರಣಕ್ಕೂ 10ನೇ ತರಗತಿ ಮತ್ತು 12ನೇ ತರಗತಿಯ ಪರೀಕ್ಷೆಗಳು ರದ್ದು ಪಡಿಸಬಾರದು ಎಂದು ಶಾಸಕ ಅಮರೇಗೌಡ ಬಯ್ಯಾಪೂರರವರು ಒತ್ತಾಯಿಸಿದ್ದಾರೆ.

    ಕೊಪ್ಪಳದ ಕುಷ್ಟಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಿಯುಸಿ ಕಾಲೇಜ್ ಪ್ರಾಚಾರ್ಯರು ಮತ್ತು ಪ್ರೌಢ ಶಾಲಾ ಶಿಕ್ಷಕರೊಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅದರಂತೆ ಮಕ್ಕಳು ಕೂಡ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ರದ್ದು ಪಡಿಸುವುದು ಸರಿಯಲ್ಲ ಎಂದಿದ್ದಾರೆ.

    ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆ ಉತ್ತೀರ್ಣರಾಗಿದ್ದೇವೆ ಎಂದು ಮಕ್ಕಳು ನೌಕರಿ ಸೇರುವ ಅವಕಾಶ ಇದೆ. ಆದರೆ ಪರೀಕ್ಷೆ ರದ್ದುಗೊಳಿಸಿ ಕೇವಲ ಗ್ರೇಡ್ ನೀಡಿದರೆ, ಅವರಿಗೆ ಸರಿಯಾದ ಅಂಕಗಳು ಸಿಗದೇ ನೌಕರಿಯಿಂದ ವಂಚಿತಗೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವನ್ನು ಹೊರ ಹಾಕಿದ್ದಾರೆ.

    ಕೇಂದ್ರ ಸರ್ಕಾರ ಸಿಬಿಎಸ್‍ಸಿ 12 ತರಗತಿ ಪರೀಕ್ಷೆಗಳು ರದ್ದುಗೊಳಿಸಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅಮರೇಗೌಡ ಬಯ್ಯಾಪೂರರವರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪರೀಕ್ಷೆಗಳು ರದ್ದುಗೊಳಿಸಬಾರದು. ಬದಲಾಗಿ ಸುರಕ್ಷಿತ ಕ್ರಮಗಳು ಕೈಗೊಂಡು ಪರೀಕ್ಷೆ ನಡೆಸಬೇಕೆಂದು ಸಲಹೆ ನೀಡಿದರು.