Tag: government

  • ಕೊರೊನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮ ತೃಪ್ತಿದಾಯಕವಾಗಿಲ್ಲ- ಕಾಗೋಡು ತಿಮ್ಮಪ್ಪ

    ಕೊರೊನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮ ತೃಪ್ತಿದಾಯಕವಾಗಿಲ್ಲ- ಕಾಗೋಡು ತಿಮ್ಮಪ್ಪ

    – ಮನೆ ಮನೆಗೆ ತೆರಳಿ ಲಸಿಕೆ ಹಾಕುವಂತೆ ಆಗ್ರಹ

    ಶಿವಮೊಗ್ಗ: ಕೊರೊನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿದಾಯಕವಾಗಿಲ್ಲ. ಸರ್ಕಾರ ಜನರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ರಾಜ್ಯವನ್ನು ಕೊರೊನಾ ಮುಕ್ತವಾಗಿಸುವ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಗ್ರಹಿಸಿದ್ದಾರೆ.

    ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಬಡವರಿಗೆ ಅಹಾರದ ಕಿಟ್ ವಿತರಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, ಸಂಕಷ್ಟದ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವುದು ಉತ್ತಮ ಕೆಲಸ ಇದನ್ನು ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪುತ್ತಿಲ್ಲ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಪ್ರಿಯತಮೆಯ ಕೊಲೆಗೈದು ಸಹೋದರನ ಸಹಾಯದಿಂದ ಹೂತು ಹಾಕಿದ!

    ಕಷ್ಟಕಾಲದಲ್ಲಿ ರಾಜ್ಯದ ಬಡವರಿಗೆ ನ್ಯಾಯ ದೊರಕುತ್ತಿಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಬಡವರ ಕಷ್ಟವನ್ನು ನೋಡಬೇಕು ಇದನ್ನು ಹೊರತು ಪಡಿಸಿ ಪಕ್ಷ, ರಾಜಕೀಯ ಮಾಡಬಾರದು ಎಂದು ಕಿವಿಮಾತು ನೀಡಿದರು. ಈ ವೇಳೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಕುಮಾರಿ, ತಾ.ಪಂ. ಮಾಜಿ ಸದಸ್ಯ ಸೋಮಶೇಖರ್, ಗ್ರಾ.ಪಂ ಸದಸ್ಯ ಗಿರೀಶ್, ಪರಶುರಾಮ, ಮತ್ತಿತರರು ಉಪಸ್ಥಿತರಿದ್ದರು.

  • ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜಿನ ಜೊತೆಗೆ ಎಂಜಿನಿಯರಿಂಗ್, ಲಾ ಕಾಲೇಜು : ಸುಧಾಕರ್

    ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜಿನ ಜೊತೆಗೆ ಎಂಜಿನಿಯರಿಂಗ್, ಲಾ ಕಾಲೇಜು : ಸುಧಾಕರ್

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಕಾರಿಡಾರ್‍ನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

    ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಈಗಾಗಲೇ ವೈದ್ಯಕೀಯ ಕಾಲೇಜು ಕ್ಯಾಂಪಸ್ ನಿರ್ಮಾಣ ಭರದಿಂದ ಸಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಜೂನ್ ಅಥವಾ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟಿಸಲಾಗುವುದು. ಹಾಗೆಯೇ ನರ್ಸಿಂಗ್, ಪ್ಯಾರಾ ಮೆಡಿಕಲ್, ಫಾರ್ಮಸಿ ಕೋಸ್‍ಗಳನ್ನೂ ಆರಂಭಿಸಲಾಗುವುದು. ಆಯುಷ್ ಆಸ್ಪತ್ರೆ ಮತ್ತು ಕಾಲೇಜು ಆರಂಭಕ್ಕೂ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಇದರ ಜೊತೆಗೆ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಸಹಿತ ಉನ್ನತ ಶಿಕ್ಷಣದ ಎಲ್ಲಾ ಕೋರ್ಸ್‍ಗಳ ಆರಂಭಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಲಿಕಾ ನಿರ್ವಹಣಾ ವ್ಯವಸ್ಥೆಯಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆ ರಾಜಧಾನಿಗೆ ಸಮೀಪ ಇರುವುದರಿಂದ ಉನ್ನತ ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ಸವಲತ್ತುಗಳನ್ನು ಅಭಿವೃದ್ಧಿಪಡಿಸಿದರೆ, ತಾನೇ ತಾನಾಗಿ ಈ ಎರಡೂ ಕ್ಷೇತ್ರದ ಕೇಂದ್ರವಾಗಿ ಬೆಳವಣಿಗೆ ಹೊಂದಲಿದೆ. ಆ ನಿಟ್ಟಿನಲ್ಲಿ ನೀಲನಕ್ಷೆ ರೂಪಿಸಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಮಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಈ ಎರಡೂ ಖಾತೆಗಳನ್ನು ನೀಡಿರುವುದು ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

    ಸದ್ಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಿದೆ. ಶಿಕ್ಷಣಕ್ಕೆ ದಾಖಲಾಗುವ ಶೇ.75 ರಷ್ಟು ಮಂದಿಯಾದರೂ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವಂತಾಗಬೇಕು. ಅದಕ್ಕೆ ತಕ್ಕನಾಗಿ ಸವಲತ್ತುಗಳನ್ನು ನಾವು ಒದಗಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯನ್ನು ಮಾದರಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಕಾರಿಡಾರ್‍ನ್ನಾಗಿ ರೂಪಿಸಲಾಗುವುದು ಎಂದರು.

    ಕಾಲೇಜುಗಳ ಅಭಿವೃದ್ಧಿಗೆ ಕ್ರಮ: ನಗರದ ಕಾಲೇಜುಗಳ ಅಭಿವೃದ್ಧಿಗೆ ಒಟ್ಟು 6.67 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಯೋಗಾಲಯ, ಹೆಚ್ಚುವರಿ ಕೊಠಡಿಗಳು, ಶೌಚಾಲಯ ನಿರ್ಮಾಣಗಳಿಗೆ ಹಣ ನೀಡಲಾಗಿದೆ. ಹಾಗೆಯೇ ಜಿಲ್ಲೆಯ ಪ್ರಥಮ ಮಹಿಳಾ ಕಾಲೇಜು ನಿರ್ಮಾಣಕ್ಕೂ ಡಿಎಂಎಫ್ ನಿಧಿ ಅಡಿಯಲ್ಲಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಆರಂಭಗೊಂಡಿರುವ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಇದೇ ವರ್ಷ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಕಾಲೇಜು ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿ ಹೆಚ್ಚು ಮುತುವರ್ಜಿ ವಹಿಸಿ ಕಾಲೇಜು ಆವರಣವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಬೋಧನೆ ಜತೆಗೆ ಶುಚಿತ್ವಕ್ಕೂ ಒತ್ತು ನೀಡಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

    ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಶಿಕ್ಷಣ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮೊದಲ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ನೀಡುತ್ತಿದೆ. ಕಲಿಕಾ ನಿರ್ವಹಣಾ ವ್ಯವಸ್ಥೆಯಡಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 4,200 ಮಂದಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಉಚಿತವಾಗಿ ನೀಡುತ್ತಿದ್ದು ಇದರ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಜಿಲ್ಲೆಗೆ ಒಳ್ಳೇಯ ಹೆಸರು ತರಬೇಕು ಎಂದರು.

    ಮೊದಲು ಕಾಲೇಜು ಆರಂಭ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತಜ್ಞರ ಅಭಿಪ್ರಾಯ ಪಡೆದು ಕೆಲ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ ಮೊದಲು ಕಾಲೇಜುಗಳನ್ನು ಆರಂಭಿಸಲಾಗುವುದು. ಆ ನಂತರವಷ್ಟೇ ಶಾಲೆಗಳ ಆರಂಭದ ಬಗ್ಗೆ ನಿರ್ಧರಿಸಲಾಗುವುದು. ಆದಷ್ಟು ಶೀಘ್ರದಲ್ಲೇ ಎಲ್ಲಾ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಫಸ್ಟ್: ಸೋಮವಾರ ನಡೆದ ಲಸಿಕಾ ಮೇಳದಂದು ಜಿಲ್ಲೆಯಲ್ಲಿ ನಲವತ್ತು ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿ, ಡಿಎಚ್‍ಒ, ನರ್ಸ್‍ಗಳು ಹಾಗೂ ಇತರೆ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಜನರಿಗೆ ಲಸಿಕೆಯನ್ನು ಆದ್ಯತೆ ಮೇರೆಗೆ ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಆ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆ ಎಂದೂ ಕರ್ನಾಟಕವು ಕೊರೊನಾ ಮುಕ್ತ ರಾಜ್ಯ ಆಗಬೇಕು. ನಿನ್ನೆಯವರೆಗೆ ರಾಜ್ಯದ ಎರಡೂ ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ 11.24 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ: ಮುಂದೆ ಬರುತ್ತದೆ ಎಂದು ನಿರೀಕ್ಷಿಸಲಾಗಿರುವ ಕೊರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಐವತ್ತರಿಂದ ಅರವತ್ತು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಸಿದ್ಧಪಡಿಸಲಾಗುತ್ತಿದೆ. ಇದರ ಜತೆಗೆ ವಿಶೇಷ ನಿಗಾ ಘಟಕಗಳನ್ನೂ ಸ್ಥಾಪಿಸಲಾಗುವುದು. ಒಟ್ಟಾರೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

    ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೆಳ ಹಂತದ ಚಿಕಿತ್ಸಾ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ 250 ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಹೊಸದಾಗಿ ವೈದ್ಯರು, ನರ್ಸ್ ಮತ್ತು ಇತರೆ ಸಿಬ್ಬಂದಿಗಳನ್ನೂ ದೊಡ್ಡ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕಾಳಜಿ ವಹಿಸಿ ಆದ್ಯತೆ ನೀಡುತ್ತಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು. ಇದನ್ನೂ ಓದಿ:  ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ

  • ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ

    ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ

    – ಆಯುಕ್ತರ ತನಿಖೆ ಬಗ್ಗೆಯೆ ಈಗ ಅನುಮಾನ

    ಮೈಸೂರು: ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಡಿಸಿ ಅಧಿಕೃತ ಸರ್ಕಾರಿ ನಿವಾಸದ ಆವರಣದಲ್ಲಿ ನಿರ್ಮಿಸಿದ್ದ ಈಜುಕೊಳ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದದ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈಗ ತನಿಖಾ ವರದಿ ಬಂದಿದೆ. ಆದರೆ ಈ ತನಿಖಾ ವರದಿಯೂ ವಿವಾದಕ್ಕೆ ಒಳಗಾಗಿದೆ.

    ಕಾರಣ ಒಂದೇ ದಿನದಲ್ಲಿ ಈ ತನಿಖಾ ವರದಿಯ ಅಂಶಗಳು ಬದಲಾಗಿವೆ. ಒಂದೇ ದಿನದಲ್ಲಿ ಎರಡು ರೀತಿಯ ತನಿಖಾ ರಿಪೋರ್ಟ್ ಅನ್ನು ಮೈಸೂರು ಪ್ರಾದೇಶಿಕ ಆಯುಕ್ತರು ಬರೆದಿದ್ದಾರೆ. ಈಜುಕೊಳದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಪ್ರಾದೇಶಿಕ ಆಯುಕ್ತರು, ಈಜುಕೊಳ ನಿರ್ಮಾಣದ ತನಿಖೆ ವಿಚಾರದಲ್ಲಿ ಒಂದೇ ದಿನದಲ್ಲಿ ಎರಡು ತನಿಖಾ ವರದಿ ಬರೆದಿರೋದು ಈಗ ಬೆಳಕಿಗೆ ಬಂದಿದೆ. ಮೊದಲ ವರದಿಯಲ್ಲಿ ಒಟ್ಟು 6 ನ್ಯೂನತೆ ನಮೂದು ಮಾಡಲಾಗಿತ್ತು. ಸರ್ಕಾರಕ್ಕೆ ಸಲ್ಲಿಕೆಯಾದ ಎರಡನೇ ವರದಿಯಲ್ಲಿ ಕೇವಲ ಎರಡೇ ನ್ಯೂನತೆ ನಮೂದಾಗಿರೋದು ಅಚ್ಚರಿಗೆ ಕಾರಣವಾಗಿದೆ. ಮೊದಲ ವರದಿಯಲ್ಲಿ ಪ್ರಮುಖವಾಗಿ ಈಜುಕೊಳದ ನಿರ್ಮಾಣಕ್ಕೆ ತಯಾರಾಗಿದ್ದ 32 ಲಕ್ಷ ರೂ ಅಂದಾಜುಪಟ್ಟಿಗೆ ಲೋಕೋಪಯೋಗಿ ಇಲಾಖೆ ಅನುಮೋದನೆ ಪಡೆದಿಲ್ಲ ಹಾಗೂ ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳಿಲ್ಲ ಎಂದು ನಮೂದು ಮಾಡಲಾಗಿತ್ತು. ಆದರೆ, ಎರಡನೇ ತನಿಖಾ ವರದಿಯಲ್ಲಿ ಪ್ರಮುಖವಾದ ಈ ಎರಡು ಅಂಶ ದಿಢೀರ್ ಎಂದು ಕೈ ಬಿಟ್ಟಿದ್ದಾರೆ. ಇದನ್ನೂ ಓದಿ: ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿದ್ರು ರೋಹಿಣಿ ಸಿಂಧೂರಿ – ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

    ಪ್ರಾದೇಶಿಕ ಆಯುಕ್ತರು ಕೊಟ್ಟ ಮೊದಲ ವರದಿಯಲ್ಲಿ ಈಜುಕೊಳ ನಿರ್ಮಾಣದಲ್ಲಿ ಆಗಿರೋ ಆರ್ಥಿಕ ವಿಚಾರ ಗೌಪ್ಯವಾಗಿರೋದೆ ಪ್ರಮುಖ ಲೋಪ ಎಂದು ಪರೋಕ್ಷವಾಗಿ ನಮೂದಾಗಿತ್ತು. ಆದರೆ ಇದೇ ಅಂಶವನ್ನೇ ಕೈಬಿಟ್ಟು ದಿಢೀರ್ ಎರಡನೇ ಎಡಿಟೆಡ್ ವರದಿ ಕೊಡಲಾಗಿದೆ. ಹಾಗಾದರೆ ಪ್ರಾದೇಶಿಕ ಆಯುಕ್ತರು ಸರ್ಕಾರವನ್ನೇ ಯಾಮಾರಿಸಿದ್ರು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಬಗ್ಗೆಯೆ ಅನುಮಾನಗಳು ಸೃಷ್ಟಿಯಾಗಿದೆ.

  • ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    ಪದವಿ ಶಿಕ್ಷಣದಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ದ್ರೋಹ -ಸಿದ್ದರಾಮಯ್ಯ

    ಬೆಂಗಳೂರು: ಮೂರು ವರ್ಷಗಳ ಅವಧಿಯ ಪದವಿ ಶಿಕ್ಷಣದಲ್ಲಿ ಭಾಷಾ ವಿಷಯಗಳನ್ನು ನಾಲ್ಕು ಸೆಮಿಸ್ಟರ್‍ ಗಳ ಅವಧಿಗಳಲ್ಲಿ ಕಲಿಸುತ್ತಿದ್ದು, ಅದನ್ನು ಒಂದು ವರ್ಷದ ಅವಧಿಯ ಎರಡು ಸೆಮಿಸ್ಟರ್‍ ಗಳಿಗೆ ಮಿತಿಗೊಳಿಸಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಸಿದ್ದರಾಮಯ್ಯ ಅವರು, ಹೊಸ ಶಿಕ್ಷಣ ನೀತಿಯ ಭಾಗವಾಗಿ ಈಗ ಇರುವ ಮೂರು ವರ್ಷದ ಬದಲಾಗಿ ನಾಲ್ಕು ವರ್ಷದ ಪದವಿ ಕೋರ್ಸನ್ನು ಅಳವಡಿಸಲು ಉದ್ದೇಶಿಸಲಾಗಿದೆ.ಅದಕ್ಕೋಸ್ಕರ ಪಠ್ಯಕ್ರಮ ರಚನೆಗೆ ಸಂಬಂಧಪಟ್ಟಂತೆ ನೇಮಿಸಲಾಗಿದ್ದ ಕಾರ್ಯಪಡೆಯ ಪಠ್ಯಪುಸ್ತಕ ರಚನೆಯ ಉಪಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್‍ಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಮಿತಿಗೊಳಿಸಿ ಶಿಫಾರಸ್ಸುಗಳನ್ನು ಮಾಡಿದೆ. ಈ ಶಿಫಾರಸ್ಸುಗಳು `ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿವೆ’ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉದ್ದೇಶಗಳಲ್ಲಿ ದೇಶ ಭಾಷೆಗಳಿಗೆ ಪ್ರಾಮುಖ್ಯ ನೀಡಬೇಕು ಎಂಬ ಅಂಶವೂ ಇದೆ. ಆದರೆ ರಾಜ್ಯದ ಈ ಸಮಿತಿಯು ಕನ್ನಡದ ಪಾಲಿಗೆ ಮಹಾ ದ್ರೋಹವೆಸಗುವಂತಹ ಶಿಫಾರಸ್ಸುಗಳನ್ನು ಮಾಡಿದೆ ಎಂಬ ಆರೋಪಗಳನ್ನು ನಾಡಿನ ಹಿರಿಯರು ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಸೆಮಿಸ್ಟರ್‍ನಲ್ಲಿ ಗರಿಷ್ಠವೆಂದರೆ 90 ದಿನಗಳ ಅವಧಿಯ ಬೋಧನೆ ಇರುತ್ತದೆ. ಪ್ರತಿ ವಿಷಯಕ್ಕೆ ಸಾಮಾನ್ಯವಾಗಿ ವಾರಕ್ಕೆ 4 ಗಂಟೆಯ ಅವಧಿಯಿರುತ್ತದೆ. ಒಂದು ಸೆಮಿಸ್ಟರ್‍ನಲ್ಲಿ ಒಂದು ವಿಷಯಕ್ಕೆ 48 ಗಂಟೆ ಬೋಧನಾ ಅವಧಿ ಇರುತ್ತದೆ. ಎರಡು ಸೆಮಿಸ್ಟರುಗಳಿಂದ ಗರಿಷ್ಠ 96 ಗಂಟೆಗಳು ಇರುತ್ತವೆ. ಕೇವಲ 96 ಗಂಟೆಗಳ ಅವಧಿಯಲ್ಲಿ ಯಾವ ವಿಷಯವನ್ನು ಕಲಿಸಲು ಸಾಧ್ಯ? ವಿಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಕಾನೂನು ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯುವ ವಿದ್ಯಾರ್ಥಿ ತನ್ನ ಕಲಿಕೆಯುದ್ದಕ್ಕೂ ಬೌದ್ಧಿಕತೆಯನ್ನು ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರವಾದ ಮನಸ್ಸನ್ನೂ ಕಟ್ಟಿ ಕೊಳ್ಳಬೇಕಾಗುತ್ತದೆ. ಹೀಗಿರುವಾಗ ಸರ್ಕಾರವು ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿದರೆ ಅವರು ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಕನ್ನಡದ ಶ್ರೇಷ್ಠ ಅಭಿವ್ಯಕ್ತಿಗಳಾದ ವಚನಗಳನ್ನು, ಪಂಪ, ರನ್ನ, ಕುಮಾರವ್ಯಾಸ ಮತ್ತು ಹರಿದಾಸರ ಕಾವ್ಯಗಳನ್ನು ವಿದ್ಯಾರ್ಥಿಗಳು ಕಲಿಯುವುದು ಹೇಗೆ? ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮೇರು ಸಾಹಿತಿಗಳಾದ ಕುವೆಂಪು, ಕಾರಂತ ಬೇಂದ್ರೆ, ಮಾಸ್ತಿ, ಮುಂತಾದವರು ರೂಪಿಸಿದ ಜೀವನೋತ್ಸಾಹದ ಬದುಕಿನ ದರ್ಶನಗಳನ್ನು ಮಕ್ಕಳು ಕಲಿಯುವುದು ಹೇಗೆ? ದೇಶದ ಸಂಸ್ಕೃತಿ, ಭಾಷೆ, ಮಹಾಕಾವ್ಯಗಳು, ಪುರಾಣಗಳು, ಕಲೆ, ಜನಪದ ಮುಂತಾದ ಪರಂಪರೆಗಳ ಬಗ್ಗೆ ಮಾತನಾಡುವ ಬಿಜೆಪಿಯು ಪದವಿ ಕಲಿಯುವ ನಮ್ಮ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನು ಕಲಿಯದಂತೆ ಮಾಡಿ ಕೇವಲ ಅದಾನಿ, ಅಂಬಾನಿಗಳಂಥ ಲೂಟಿಕೋರರ ಮಾದರಿಗಳನ್ನು ಕಲಿಸಲು ಹೊರಟಿದೆಯೆ ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು-ಸುರೇಶ್ ಕುಮಾರ್

    ನಮ್ಮ ದೇಶಕ್ಕೆ ಜ್ಞಾನ ಇರುವ, ದುಡ್ಡು ಇರುವ ಜನರ ಅಗತ್ಯ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಮಾನವೀಯ ಹೃದಯ ಇರುವ ಮನುಷ್ಯರ ಅಗತ್ಯವಿದೆ. ಅಂಥದ್ದಕ್ಕೆ ವಿರುದ್ಧವಾದ ನಿಲುವುಗಳನ್ನು ರೂಪಿಸುವುದಕ್ಕಾಗಿ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ಉಪಸಮಿತಿಯವರು ಭಾಷೆಗಳ ಕಲಿಕೆಯನ್ನು ಎರಡು ಸೆಮಿಸ್ಟರುಗಳಿಗೆ ಇಳಿಸಿದ್ದಾರೆ. ಸರ್ಕಾರ ಈ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದ್ದೆ ಆದರೆ ಅದು ಬಹಳ ದೊಡ್ಡ ಮಟ್ಟದ ಕನ್ನಡ ದ್ರೋಹವಾಗುತ್ತದೆ, ಸರಿಪಡಿಸಲಾಗದ ಜನದ್ರೋಹವಾಗುತ್ತದೆ. ಪದವಿಯಲ್ಲಿ ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ವ್ಯಾಕರಣ, ಛಂದಸ್ಸುಗಳನ್ನು ಕಲಿಸುವುದಿಲ್ಲ. ಬದಲಾಗಿ ವಿದ್ಯಾರ್ಥಿಯ ಕೋರ್ಸಿಗೆ ಪೂರಕವಾದ ಪಠ್ಯವನ್ನೂ ಕಲಿಸಲಾಗುತ್ತದೆ. ಉದಾಹರಣೆಗೆ ವಿಜ್ಞಾನವನ್ನು ಕಲಿಯುವ ವಿದ್ಯಾರ್ಥಿಗಳು ಶಿವರಾಮ ಕಾರಂತರ, ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಕಲಿಯುತ್ತಾರೆ. ಅದೇ ರೀತಿ ಗೆಲಿಲಿಯೋ, ಸ್ಟೀಫನ್ ಹಾಕಿಂಗ್, ಐನ್‍ಸ್ಟೆನ್, ಜಗದೀಶ್ ಚಂದ್ರ ಬೋಸ್, ಅಬ್ದುಲ್ ಕಲಾಂ ಮುಂತಾದವರ ಜೀವನದ ಸಾಧನೆಗಳನ್ನು, ಮಾದರಿಗಳನ್ನು ಮಾತೃಭಾಷೆಯಲ್ಲಿ ಕಲಿಯುತ್ತಾರೆ. ಹಾಗೆಯೇ ವಾಣಿಜ್ಯದ ವಿದ್ಯಾರ್ಥಿಗಳೂ ಸಹ ಯಶಸ್ವಿ ಸಂವಹನವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯುತ್ತಾರೆ. ಹಾಗೂ ಉತ್ತಮ ಉದ್ಯಮಿ ಆಗುವುದರ ಜೊತೆಯಲ್ಲಿ ಉತ್ತಮ ಮನುಷ್ಯನಾಗುವುದು ಹೇಗೆ ಎಂಬುದನ್ನೂ ಕಲಿಯುತ್ತಾರೆ.

    ಆದ್ದರಿಂದ 4 ವರ್ಷದ ಕೋರ್ಸಿಗೆ ಅನುಗುಣವಾಗಿ ಈಗ 3 ವರ್ಷಕ್ಕೆ ಅಥವಾ ಆರು ಸೆಮಿಸ್ಟರ್‍ಗಳಿಗೆ ಭಾಷಾ ವಿಷಯವನ್ನು ಬೋಧಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೆ ಮಾಡುವುದರಿಂದ ನಮ್ಮ ಮಕ್ಕಳು ಉತ್ತಮ ಪರಂಪರೆಗಳಿಗೆ ವಾರಸುದಾರರಾಗಲು ಸಾಧ್ಯವಾಗುತ್ತದೆ. ಹಾಗೂ ರಾಷ್ಟ್ರಕ್ಕೆ ಬೇಕಾದ ಉತ್ತಮ ಮನುಷ್ಯರು ರೂಪುಗೊಳ್ಳಲು ಸಹಾಯವಾಗುತ್ತದೆ. ಅದರ ಬದಲಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕನ್ನಡದ ಕುತ್ತಿಗೆಯನ್ನು ಹಿಸುಕುವ ಕೆಲಸಕ್ಕೆ ಸರ್ಕಾರ ಮುಂದಾಗುವುದಾದರೆ ಅದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ. ಈ ನಾಡು ಎಂದಿಗೂ ನಾಡು, ನುಡಿಗೆ ದ್ರೋಹ ಎಸಗಿದವರನ್ನು ಕ್ಷಮಿಸಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ರೂಪಿಸಬೇಕಾಗಿದೆ. ಹಾಗಾಗಿ ಹೊಸ ಪಠ್ಯಕ್ರಮವನ್ನು ರೂಪಿಸುವಾಗ ಸಂಬಂಧಿಸಿದ ತಜ್ಞರುಗಳ ಕುಳಿತು ಚರ್ಚಿಸಿ ಆರೋಗ್ಯಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ ನಾಡು-ನುಡಿಗಳನ್ನು ಕಟ್ಟಲು ಪೂರಕವಾಗುವ ಪಠ್ಯಗಳನ್ನು ರೂಪಿಸಬೇಕು. ಆರು ಸೆಮಿಸ್ಟರ್‍ ಗಳಲ್ಲೂ ಕನ್ನಡ ಭಾಷಾ ವಿಷಯವನ್ನು ಎಲ್ಲಾ ಪದವಿ ಮಕ್ಕಳಿಗೂ ಕಡ್ಡಾಯವಾಗಿ ಕಲಿಸಲೇಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

  • ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೋವಿಡ್ ಚಿಕಿತ್ಸಾ ವೆಚ್ಚ 3 ಲಕ್ಷ ರೂ. ಪ್ಯಾಕೇಜ್ ಘೋಷಿಸಿ: ಎಂಬಿ ಪಾಟೀಲ್ ಆಗ್ರಹ

    ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೋವಿಡ್ ಚಿಕಿತ್ಸಾ ವೆಚ್ಚ 3 ಲಕ್ಷ ರೂ. ಪ್ಯಾಕೇಜ್ ಘೋಷಿಸಿ: ಎಂಬಿ ಪಾಟೀಲ್ ಆಗ್ರಹ

    ಬೆಂಗಳೂರು: ಕೋವಿಡ್ ಮಹಾಮಾರಿಯಿಂದ ಬಳಲಿದ ಬಿಪಿಎಲ್ ಕುಟುಂಬ ವರ್ಗದವರಿಗೆ ಚಿಕಿತ್ಸಾ ವೆಚ್ಚವಾಗಿ 3ಲಕ್ಷ ರೂ. ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಮಾಜಿ ಸಚಿವ ಎಂ ಬಿ ಪಾಟೀಲ್ ಆಗ್ರಹಿಸಿದ್ದಾರೆ. ಈ ಸಂಬಂಧ ಎಂ.ಬಿ ಪಾಟೀಲ್ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

    ಎಂ ಬಿ ಪಾಟೀಲ್ ಬರೆದ ಪತ್ರದ ವಿವರ ಹೀಗಿದೆ:
    ಶ್ರೀ ಬಿ.ಎಸ್.ಯಡಿಯೂರಪ್ಪನವರು
    ಸನ್ಮಾನ್ಯ ಮುಖ್ಯಮಂತ್ರಿಗಳು
    ಕರ್ನಾಟಕ ಸರ್ಕಾರ
    ವಿಧಾನಸೌಧ ಬೆಂಗಳೂರು- ಇವರಿಗೆ

    ವಿಷಯ: ಕೋವಿಡ್ ಮಹಾಮಾರಿಯಿಂದ ಬಳಲಿದ ಬಿ.ಪಿ.ಎಲ್ ಕುಟುಂಬ ವರ್ಗದವರಿಗೆ ಚಿಕಿತ್ಸಾ ವೆಚ್ಚ 3ಲಕ್ಷ ರೂ. ಪ್ಯಾಕೇಜ್ ಘೋಷಣೆ ಮಾಡುವ ಕುರಿತು.

    ಕೋವಿಡ್ ಮಹಾಮಾರಿಯಿಂದ ಕರ್ನಾಟಕದ ಸಾವಿರಾರು ಬಡಕುಟುಂಬಗಳು ಜೀವ ಹಾನಿ ಸೇರಿದಂತೆ ತೀವ್ರತರ ಆರ್ಥಿಕ ಹಾನಿ ಅನುಭವಿಸಿವೆ. ಅನೇಕರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೇ, ಕೆಲವರು ಸರ್ಕಾರಿ ಆಸ್ಪತ್ರೆಯ ರೆಫರೆನ್ಸ್ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಂತವರಿಗೆ ಮಾತ್ರ ವಿಮಾ ಯೋಜನೆಯ ಎ.ಬಿ.ಎಆರ್.ಕೆ(ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ), ಭೀಮಾ ಯೋಜನೆಯ ಪ್ರಯೋಜನ ದೊರೆತಿದೆ. ಆದರೆ ಸರಿಯಾದ ಮಾಹಿತಿ ಇಲ್ಲದ ಕಾರಣ ಹಲವರು ರೋಗ ಲಕ್ಷಣ ಕಂಡುಬಂದ ತಕ್ಷಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ 7,8,10 ಮತ್ತು 12 ಲಕ್ಷ ರೂ. ಈ ರೀತಿಯಾಗಿ ವಿಪರೀತ ಹಣ ತಮ್ಮ ಕುಟುಂಬಸ್ಥರನ್ನು ಉಳಿಸಲು ಖರ್ಚು ಮಾಡಿದ್ದಾರೆ. ಬಡವರಾದ ಇವರು ಸಾಲ-ಸೋಲ ಮಾಡಿ ಇಷ್ಟೇಲ್ಲ ಖರ್ಚು ಮಾಡಿ, ಕೆಲವರು ಚಿಕಿತ್ಸೆಗೆ ಸ್ಪಂದಿಸಿ ಬದುಕುಳಿದಿದ್ದಾರೆ. ಕೆಲವರು ಮರಣವನ್ನು ಅಪ್ಪಿರುವುದು ವಿಷಾಧನೀಯ ಸಂಗತಿ.

    ಮನೆ, ಒಡವೆ ಮಾರಿ, ಅಡವಿಟ್ಟು ಚಿಕಿತ್ಸೆಗಾಗಿ ಸಾಲ ಪಡೆದ ಬಿ.ಪಿ.ಎಲ್ ಕುಟುಂಬಗಳಿಗೆ ಸಹಾಯಹಸ್ತ ಚಾಚುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಕರ್ನಾಟಕದ ಕೊರೊನಾ ಬಾಧಿತ ಬಿ.ಪಿ.ಎಲ್ ಕುಟುಂಬಗಳಿಗೆ 3ಲಕ್ಷ ರೂ.ಗಳನ್ನು ಅವರು ಖರ್ಚು ಮಾಡಿರುವ ಚಿಕಿತ್ಸಾ ವೆಚ್ಚ ಮರು ಪಾವತಿಸಲು ಅನುಕೂಲವಾಗುವಂತೆ ಒಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ತಮ್ಮಲ್ಲಿ ವಿನಂತಿಸುತ್ತೇನೆ. ಇದನ್ನೂ ಓದಿ: ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿಂದ ಬಾಧಿತ ಬಿ.ಪಿ.ಎಲ್. ಕುಟುಂಬಗಳ ವಿವರ ಪಡೆದು, ಜಿಲ್ಲಾಧಿಕಾರಿಗಳ ಮುಖಾಂತರವೇ ಈ ಆರ್ಥಿಕ ಪ್ಯಾಕೇಜ್ ಆ ಕುಟುಂಬಗಳಿಗೆ ತಲುಪುವಂತೆ ನೋಡಿಕೊಳ್ಳಲು ವಿನಂತಿಸಲಾಗಿದೆ ಎಂದು ಎಂಬಿ ಪಾಟೀಲ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

  • ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ರಾಜ್ಯ ಸರ್ಕಾರ ವಜಾಕ್ಕೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕು – ಸಿದ್ದರಾಮಯ್ಯ

    ಬೆಂಗಳೂರು: ಭ್ರಷ್ಟಾಚಾರ ಹಾಗೂ ಫೋನ್ ಕದ್ದಾಲಿಕೆ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡಿರುವುದರಿಂದ ರಾಜ್ಯಪಾಲರು ಕೂಡಲೇ ಕೇಂದ್ರಕ್ಕೆ ಪತ್ರ ಬರೆದು ರಾಜ್ಯ ಸರ್ಕಾರವನ್ನು ವಜಾ ಮಾಡಲು ಶಿಫಾರಸ್ಸು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು, ಸ್ವಾಮೀಜಿಗಳ ಬಗ್ಗೆ ನಾನು ಮಾತಾಡಲ್ಲ. ಆದರೆ ಬಿಜೆಪಿಯಲ್ಲಿ ಕುರ್ಚಿಗೆ ಕಚ್ಚಾಟ ನಡೀತಿದೆ, ಆಡಳಿತ ಕುಸಿದಿದೆ, ಲೀಡರ್ ಇಲ್ಲ, ಸರ್ಕಾರ ಇಲ್ಲ, ರಾಜ್ಯ ದಿವಾಳಿ ಆಗಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಅವರ ಪಕ್ಷದವರೇ ಹೇಳಿಕೆ ನೀಡಿ ದಾಖಲೆ ಬಿಡುಗಡೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ

    ರಾಜ್ಯಾದ್ಯಂತ ಭ್ರಷ್ಟಾಚಾರದ ವಾಸನೆ ಹೊಡಿತೀದೆ ಎಂದು ಬಿಜೆಪಿ ಪಕ್ಷದವರೇ ಗಂಭೀರ ಆರೋಪ ಹೊರಿಸಿದ್ದಾರೆ. ಹಾಗಾಗಿ ರಾಜ್ಯಪಾಲರು ಕೂಡಲೇ ಕೇಂದ್ರಕ್ಕೆ ತಿಳಿಸಿ ಸರ್ಕಾರ ವಜಾ ಮಾಡಬೇಕು. ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ಆಗಲಿ, ಬೆಲ್ಲದ್ ಬಹಿರಂಗವಾಗಿ ಹೇಳಿದ್ದಾರೆ ಎಲ್ಲದರ ತನಿಖೆ ನಡೆಯಬೇಕು ಎಂದಿದ್ದಾರೆ. ಬಳಿಕ ತಮ್ಮ ಬಗ್ಗೆ ಆರೋಪ ಮಾಡಿರುವ ಹೆಚ್. ವಿಶ್ವನಾಥ್ ಕುರಿತು ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ.

  • ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಂದು ಕಡೆ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದರೆ. ಇನ್ನೊಂದೆಡೆ ಸ್ವಪಕ್ಷೀಯರೇ ಒಬ್ಬರಿಗೊಬ್ಬರು ಆರೋಪಗಳನ್ನು ಹೊರಿಸುತ್ತಿದ್ದಾರೆ. ಈ ನಡುವೆ ಬಿಜೆಪಿಯ ಶಾಸಕ ಅರವಿಂದ್ ಬೆಲ್ಲದ್ ಅವರು ತಮ್ಮ ಫೋನ್ ಕದ್ದಾಲಿಕೆಯಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

    ಈ ಹಿಂದೆ ಮೈತ್ರಿ ಸರ್ಕಾರದ ಮೇಲೆ ಬಿಜೆಪಿ ನಾಯಕರೇ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದರು. ಈಗ ಬಿಜೆಪಿ ಸರ್ಕಾರ ಇರುವಾಗಲೇ ಅವರದೇ ಶಾಸಕರು ಫೋನ್ ಕದ್ದಾಲಿಕೆ ಆರೋಪ ಮಾಡಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ವಿರುದ್ಧವೂ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇಲ್ಲಿ ಫೋನ್ ಕದ್ದಾಲಿಕೆ ಎಂದರೇನು? ಯಾರು ಮಾಡಬಹುದು? ಹೇಗೆ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ವಿವರಿಸಲಾಗಿದೆ. ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್

    ಕ್ರಿಮಿನಲ್ ಕೃತ್ಯ ಎಸಗಲಿರುವವರನ್ನು, ಎಸಗಿದವರನ್ನು ಎಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಅವರನ್ನು ಪತ್ತೆ ಹಚ್ಚಲು ಫೋನ್ ಕದ್ದಾಲಿಕೆ ಮಾಡಲಾಗುತ್ತದೆ. ಕಾನೂನಿನ ಅನ್ವಯ ಸರ್ಕಾರದ ಕೆಲವೇ ಇಲಾಖೆಗಳಿಗೆ ಮಾತ್ರ ಫೋನ್ ಕದ್ದಾಲಿಕೆ ಮಾಡಲು ಅವಕಾಶವಿದ್ದು, ಈಗ ಕೆಲವು ಸಮಾಜ ಘಾತುಕ ಶಕ್ತಿಗಳು ಫೋನ್ ಟ್ಯಾಪಿಂಗ್ ಮಾಡಲು ಆರಂಭಿಸಿವೆ. ಇಂದು ರಾಜಕಾರಣಿಗಳು, ಗಣ್ಯ ವ್ಯಕ್ತಿಗಳ ಫೋನ್ ಟ್ಯಾಪಿಂಗ್ ಹೆಚ್ಚಾಗುತ್ತಿದ್ದು, ಅಡಳಿತ ಪಕ್ಷದ ವಿರುದ್ಧ ವಿರೋಧಿ ಪಕ್ಷಗಳು ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿದೆ.

    ಏನಿದು ಫೋನ್ ಕದ್ದಾಲಿಕೆ?
    ವಿಶೇಷ ಎಲೆಕ್ಟ್ರಾನಿಕ್ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್ ಕದ್ದಾಲಿಕೆ. ಫೋನ್ ಕದ್ದಾಲಿಕೆಗೆ ಕಾನೂನಿನಡಿ ಅವಕಾಶವೂ ಇದೆ. ಆದರೆ ಇದಕ್ಕೆ ನಿರ್ದಿಷ್ಟ ರೀತಿ ನೀತಿಗಳಿವೆ. ಅದು ಹೊರತಾಗಿ ಕದ್ದಾಲಿಸಿದರೆ ಅದು ಕಾನೂನಿನ ಅಡಿ ಅಪರಾಧವಾಗುತ್ತದೆ. ಇದನ್ನೂ ಓದಿ: ವಿಶ್ವನಾಥ್ ಒರಿಜಿನಲ್ ಬಿಜೆಪಿ ಅಲ್ಲ – ರೇಣುಕಾಚಾರ್ಯ

    ಆಧುನಿಕ ತಂತ್ರಜ್ಞಾನ ಬೆಳೆದಂತೆ ಫೋನ್ ಕದ್ದಾಲಿಕೆ ಮಾಡಲೆಂದೇ ಹೊಸ ಸಾಧನಗಳು ತಯಾರಾಗಿವೆ. ಅಲ್ಲದೇ ದೇಶ ವಿದೇಶದಿಂದ ಫೋನ್ ಕದ್ದಾಲಿಕೆ ಮಾಡುವ ಸಾಧನಗಳು ಅಕ್ರಮವಾಗಿ ದೇಶದೊಳಗೆ ರವಾನಿಸುವ ಜಾಲವೂ ಹುಟ್ಟಿಕೊಂಡಿದೆ. ತಜ್ಞರ ಪ್ರಕಾರ ಈ ಸಾಧನಗಳು ಸುಮಾರು ಎರಡು ಕಿ.ಮೀ. ದೂರದ ವರೆಗಿನ ವ್ಯಕ್ತಿಗಳ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ.

    ಯಾರಿಗೆ ಅನುಮತಿ ಇದೆ?
    ಸಮಾಜ ಘಾತುಕ ಶಕ್ತಿಗಳ ಚಲನವಲನ, ಕ್ರಿಮಿನಲ್ ಸಂಚು, ದೇಶದ, ಗಣ್ಯರ ವಿರುದ್ಧ ದಾಳಿಯಂತಹ ಚಟುವಟಿಕೆಗಳನ್ನು ತಡೆಯಲು ಗುಪ್ತಚರ ಸಂಸ್ಥೆಗಳು ಫೋನ್ ಕದ್ದಾಲಿಕೆ ಮಾಡುತ್ತವೆ. ಸಿಬಿಐ, ಗುಪ್ತಚರ ಇಲಾಖೆ, ಕಂದಾಯ ಗುಪ್ತಚರ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೋಲಿಸ್ ಇಲಾಖೆ ಕದ್ದಾಲಿಕೆಯನ್ನು ಕಾನೂನಿನ ಅಡಿ ಮಾಡಬಹುದು. ಫೋನ್ ಕದ್ದಾಲಿಸಲು ಉಪಗ್ರಹ ಆಧಾರಿತ ವ್ಯವಸ್ಥೆಗಳು, ಟೆಲಿಫೋನ್ ಎಕ್ಸ್ ಚೇಂಜ್‍ನ ನೆರವಿನೊಂದಿಗೆ ಪ್ರತ್ಯೇಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಮೂಲಕ ಕದ್ದಾಲಿಕೆ ಮಾಡಲಾಗುತ್ತದೆ.

    ನಿಯಮ ಏನು ಹೇಳುತ್ತೆ: 1885ರ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 5 (2)ರಲ್ಲಿ 419ನೇ ಮತ್ತು 419ಎ ನಿಬಂಧನೆಗಳಲ್ಲಿ ಫೋನ್ ಕರೆಗಳ ಮಾಹಿತಿ ಪಡೆಯುವ, ಕೇಳುವ ಬಗ್ಗೆ ಹೇಳಲಾಗಿದೆ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ, ಭದ್ರತೆಗೆ ತೊಂದರೆಯಾಗುವ ವಿಚಾರಗಳಲ್ಲಿ ಫೋನ್ ಕದ್ದಾಲಿಕೆಗೆ ಅವಕಾಶವಿದ್ದು ಕ್ಯಾಬಿನೆಟ್ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ ಈ ಬಗ್ಗೆ ನಿರ್ಧಾರ ಕೈಗೊಂಡು, ಗೃಹ ಇಲಾಖೆಗೆ ಮಾಹಿತಿ ನೀಡಬೇಕು. ಈ ಬಗ್ಗೆ ಗೃಹ ಇಲಾಖೆ 2 ತಿಂಗಳೊಳಗೆ ಪರಿಶೀಲನೆ ನಡೆಸಿ ತೀರ್ಮಾನಿಸಬೇಕು. ಒಂದು ಬಾರಿ ಅನುಮತಿ ನೀಡಿದರೆ ಅದು 6 ತಿಂಗಳ ಅವಧಿಯದ್ದಾಗಿರುತ್ತದೆ. ಹೀಗೆ ಕದ್ದಾಲಿಕೆ ವೇಳೆ ಪಡೆದ ಮಾಹಿತಿಗಳನ್ನು ಬಳಸಿ 2 ತಿಂಗಳೊಳಗೆ ಅವುಗಳನ್ನು ನಾಶಪಡಿಸಬೇಕು. ಇದು ಹೊರತಾಗಿ ಕೋರ್ಟ್ ನಿರ್ದೇಶನದ ಮೇರೆಗೆ ಫೋನ್ ಕದ್ದಾಲಿಕೆಗೆ ಅವಕಾಶವಿದೆ.

    ಒಂದೊಮ್ಮೆ ಫೋನ್ ಕದ್ದಾಲಿಕೆಯಾದರೆ ವ್ಯಕ್ತಿಯ ಖಾಸಗಿ ತನಕ್ಕೆ ಧಕ್ಕೆ ತಂದದ್ದಕ್ಕಾಗಿ ಆತ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಬಹುದು. ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಬಹುದು. ಅಕ್ರಮ ಕದ್ದಾಲಿಕೆ ವಿಚಾರದ ಬಗ್ಗೆ ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆ26(ಬಿ) ಅಡಿಯಲ್ಲಿ ಕೋರ್ಟ್‍ಗೂ ದೂರು ನೀಡಬಹುದು. ಒಂದು ವೇಳೆ ಕದ್ದಾಲಿಸಿದ್ದು ಸಾಬೀತಾದರೆ ಅಪರಾಧಿಗೆ 3 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ.

  • ಕೊರೊನಾ ಕ್ರೂರತೆಗೆ 421 ಪೋಷಕರು ಬಲಿ – 5 ಮಕ್ಕಳು ಅನಾಥ

    ಕೊರೊನಾ ಕ್ರೂರತೆಗೆ 421 ಪೋಷಕರು ಬಲಿ – 5 ಮಕ್ಕಳು ಅನಾಥ

    ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾ ಮಹಾಮಾರಿಗೆ ಕಳೆದ ಒಂದು ವರ್ಷದಿಂದ ಸುಮಾರು 420 ಪಾಲಕರು ಬಲಿಯಾಗಿದ್ದಾರೆ.

    ಕೊರೊನಾ ಮಹಾಮಾರಿಯ ಆರ್ಭಟದಿಂದ ಈಗಾಗಲೇ ಸಾಕಷ್ಟು ಜನರ ಬದುಕು ಬೀದಿಗೆ ಬಂದಿದೆ. ಪೋಷಕರನ್ನು ಕಳೆದುಕೊಂಡು ರಾಜ್ಯದಲ್ಲಿ ಸಾಕಷ್ಟು ಮಕ್ಕಳು ಅನಾಥರಾಗಿದ್ದಾರೆ. ಸದ್ಯ 143 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಕಡು ಬಡತನದ 42 ಮಕ್ಕಳನ್ನು ಬಾಲ ಸ್ವರಾಜ್ಯ ಯೋಜನೆಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ:  ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್

    ಸಂಪೂರ್ಣವಾಗಿ ಪೋಷಕರನ್ನು ಕಳೆದುಕೊಂಡ 5 ಅನಾಥ ಮಕ್ಕಳು ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹುಮ್ನಬಾದ್ ತಾಲೂಕಿನಲ್ಲಿ 4 ಹಾಗೂ ಬೀದರ್ ನಗರದ ಓರ್ವ ಬಾಲಕ ಸೇರಿ ಜಿಲ್ಲೆಯಲ್ಲಿ ಒಟ್ಟು ಐದು ಬಾಲಕರು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

    ನಾಥ ಮಕ್ಕಳಿಗೆ ಸರ್ಕಾರದಿಂದ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕಾಗಿದ್ದು, ಸರ್ಕಾರದ ಬಾಲ ಸ್ವರಾಜ್ಯ ಯೋಜನೆಗೆ ಈ ಅನಾಥ ಮಕ್ಕಳ ಎಲ್ಲಾ ಮಾಹಿತಿ ನೀಡಲಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗಾ ಹೀರೆಮಠರವರು ತಿಳಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಕೊರತೆ ಮುಚ್ಚಿ ಹಾಕಲು ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್ ಗಾಂಧಿ

  • ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್‌ಗೆ ಕಡಿವಾಣ ಹಾಕಿ – ಸಿಎಂಗೆ ಪೋಷಕರ ಸಂಘಟನೆ ಮನವಿ

    ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್‌ಗೆ ಕಡಿವಾಣ ಹಾಕಿ – ಸಿಎಂಗೆ ಪೋಷಕರ ಸಂಘಟನೆ ಮನವಿ

    ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಶಾಲೆಗಳ ಶುಲ್ಕ ಗಲಾಟೆ ವಿಚಾರ ಸಿಎಂ ಅಂಗಳಕ್ಕೆ ತಲುಪಿದೆ. ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ಗೆ ಬ್ರೇಕ್ ಹಾಕುವಂತೆ ಸಿಎಂ ಯಡಿಯೂರಪ್ಪಗೆ ಪೋಷಕ ಸಂಘಟನೆಗಳು ಮನವಿ ಸಲ್ಲಿಸಿವೆ. ಈ ವರ್ಷವೂ ಶೇ.70 ಶುಲ್ಕ ಪಡೆಯಲು ಖಾಸಗಿ ಶಾಲೆಗಳಿಗೆ ಆದೇಶ ಹೊರಡಿಸಬೇಕು ಅಂತ ಸಿಎಂ ಯಡಿಯೂರಪ್ಪಗೆ ಕರ್ನಾಟಕ ರಾಜ್ಯ ಖಾಸಗೀ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಮನವಿ ಮಾಡಿದೆ.

    ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, ಸರ್ಕಾರ ಕೂಡಲೇ ಮದ್ಯೆ ಪ್ರವೇಶ ಮಾಡಿ ಶುಲ್ಕ ಗೊಂದಲ ನಿವಾರಿಸುವಂತೆ ಮನವಿ ಮಾಡಿದೆ. ಅಷ್ಟೆ ಅಲ್ಲದೆ 7 ಅಂಶಗಳ ಸರ್ಕಾರ ಕೂಡಲೇ ಜಾರಿಗೆ ತರಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

    ಪೋಷಕ ಸಂಘಟನೆಗಳ ಬೇಡಿಕೆಗಳು:
    ಆರ್.ಟಿ.ಇ ಅಡಿ ಒಂದು ವಿದ್ಯಾರ್ಥಿಗೆ ಸರ್ಕಾರ 16 ಸಾವಿರ ಶುಲ್ಕ ಖಾಸಗಿ ಶಾಲೆಗಳಿಗೆ ನೀಡುತ್ತಿದೆ. ಇದೇ ಶುಲ್ಕವನ್ನ ಖಾಸಗಿ ಶಾಲೆಗಳಿಗೂ ಪಡೆಯಬೇಕು ಅಂತ ಅಧಿಕೃತ ಆದೇಶ ಹೊರಡಿಸಬೇಕು.ಕಳೆದ ವರ್ಷದಂತೆ ಶೇ.70 ಬೋಧನಾ ಶುಲ್ಕ ಮಾತ್ರ ಈ ವರ್ಷ ಪಡೆಯುವಂತೆ ಆದೇಶ ಹೊರಡಿಸಬೇಕು. ಸರ್ಕಾರದ ಆದೇಶವನ್ನು ಪಾಲಿಸಿ, ನಿರ್ಧರಿಸಿದ ಆಧಿಕೃತ ಶುಲ್ಕವನ್ನು ಪಡೆದು ಶಾಲೆ ನಡೆಸೋದು ಕಷ್ಟ ಎಂದು ಹೇಳುವ ಕುಂದುಕೊರತೆಗಳನ್ನು ಮಾನ್ಯ ಮಾಡಿ ಅಂತಹ ಶಾಲೆಗಳಲ್ಲಿ ಪೇರೆಂಟ್ ಮತ್ತು ಟೀಚರ್ಸ್ ಅಸೋಸಿಯೇಷನ್ ರಚಿಸಿ ಅ ಶಾಲೆಗಳನ್ನು ನಡೆಸಲು ಅ ಸಂಘಗಳಿಗೆ ಅವಕಾಶ ಕೊಡಬೇಕು.

    ಆರ್.ಟಿ.ಇ ನಿಯಮದ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರು- ಶಿಕ್ಷಕರ ಮಂಡಳಿ ರಚನೆ ಮಾಡಬೇಕು. ಈ ಮಂಡಳಿ ಆಯಾ ವರ್ಷಗಳ ಖರ್ಚು ವೆಚ್ಚ ಪರಿಶೀಲನೆ ಮಾಡಿ ಶುಲ್ಕ ನಿಗಧಿ ಮಾಡಬೇಕು. ಮಂಡಳಿ ನಿರ್ಧಾರ ಶಾಲಾ ವೆಬ್ ಸೈಟ್ ಮತ್ತು ಶಾಲಾ ಬೋರ್ಡ್ ನಲ್ಲಿ ಹಾಕಬೇಕು.ಶುಲ್ಕ ನಿಗಧಿ ಸಂಬಂಧ ತಮಿಳುನಾಡು, ಮಹಾರಾಷ್ಟ್ರ,ರಾಜಸ್ಥಾನ ಮಾದರಿಯಲ್ಲಿ ಶುಲ್ಕ ನಿಗಧಿ ಸಮಿತಿ ರಚಿಸಬೇಕು.ಶಾಲೆಗಳು ಶುಲ್ಕ ವಿಚಾರಕ್ಕೆ ವಿದ್ಯಾರ್ಥಿಯ ಮೇಲೆ ಕ್ರಮ ಕೈಗೊಂಡರೆ ಅಂತ ಶಾಲೆಗಳ ಮಾನ್ಯತೆಯನ್ನ 24 ಗಂಟೆ ಒಳಗೆ ರದ್ದು ಮಾಡಲು ಸರ್ಕಾರ ಆದೇಶ ಹೊರಡಿಸಿಬೇಕು ಅಂತ ಸರ್ಕಾರವನ್ನ ಒತ್ತಾಯಿಸಿದ್ದಾರೆ.

  • ತೈಲ ಬೆಲೆ ಏರಿಕೆ ವಿರೋಧಿಸಿ ಬೈಕ್‍ನ್ನು ಕೆರೆಗೆ ಎಸೆದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ತೈಲ ಬೆಲೆ ಏರಿಕೆ ವಿರೋಧಿಸಿ ಬೈಕ್‍ನ್ನು ಕೆರೆಗೆ ಎಸೆದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ಹೈದರಾಬಾದ್: ದೇಶಾದ್ಯಂತ ಇಂಧನ ಬೆಲೆ ಗಗನಕ್ಕೆ ಏರಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ತೆಲಂಗಾಣದಲ್ಲಿ ಬೈಕ್ ಒಂದನ್ನು ಕೆರೆಗೆ ಎಸೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ದೇಶದಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ತೆಲಂಗಾಣದಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿ ನಗರದ ಪಕ್ಕದಲ್ಲಿದ್ದ ಹುಸೇನ್ ಸಾಗರ್ ಕೆರೆಗೆ ಬೈಕ್ ಒಂದನ್ನು ಎಸೆದು ಆಕ್ರೋಶ ಹೊರಹಾಕಿದೆ. ಇದೀಗ ಈ ಬೈಕ್ ಎಸೆಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ರಾತ್ರೋರಾತ್ರಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ, ಬೆಳಗ್ಗೆ ನೆಲಸಮ

    ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಎನ್, ಉತ್ತಮ್ ಕುಮಾರ್ ರೆಡ್ಡಿ, ಎ ರೇವಂತ್ ರೆಡ್ಡಿ, ಪೊನ್ನಮ್ ಪ್ರಭಾಕರ್, ಜಯಪ್ರಕಾಶ್ ರೆಡ್ಡಿ, ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದು, ಸ್ಥಳೀಯ ಪೆಟ್ರೋಲ್ ಬಂಕ್‍ನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ದೇಶದಲ್ಲಿ ಹೆಚ್ಚಳವಾಗಿರುವ ಪೆಟ್ರೋಲ್, ಡೀಸೆಲ್ ಸೇರಿ ತೈಲ ಬೆಲೆ ಇಳಿಕೆಯಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಪೆಟ್ರೋಲ್ ಬೆಲೆ ವಿರೋಧಿಸಿ ಪ್ರತಿಭಟನೆಯಲ್ಲಿ ಬೈಕ್‍ನ್ನು ಎಸೆದ ವೀಡಿಯೋ ನೋಡಿದ ಸಾವಿರಾರು ಮಂದಿ ನೆಟ್ಟಿಗರು, ಈ ಪ್ರತಿಭಟನೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿ, ವಿವಿಧ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.