Tag: government

  • ವೈದ್ಯರಿಗೆ ತಕ್ಷಣ ವೇತನವನ್ನು ನೀಡಿ ಗೌರವಯುತವಾಗಿ ನಡೆದುಕೊಳ್ಳಿ: ಡಾ. ವಿಶ್ವನಾಥ್

    ವೈದ್ಯರಿಗೆ ತಕ್ಷಣ ವೇತನವನ್ನು ನೀಡಿ ಗೌರವಯುತವಾಗಿ ನಡೆದುಕೊಳ್ಳಿ: ಡಾ. ವಿಶ್ವನಾಥ್

    ಬೆಂಗಳೂರು: ಕರ್ನಾಟಕದ್ಯಾಂತ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ನಾಲ್ಕು ತಿಂಗಳಿಂದ ವೇತನವನ್ನು ನೀಡದೆ ಕರ್ನಾಟಕದ ಸರ್ಕಾರ ಸತಾಯಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ವೇತನ ನೀಡದೆ ವೈದ್ಯರಿಗೆ ಹಿಂಸೆ ನೀಡುತ್ತಿರುವ ಸರ್ಕಾರದ ಈ ನಡೆ ಅಮಾನವೀಯ ಎಂದು ಆಮ್ ಆದ್ಮಿ ಪಾರ್ಟಿಯ ವೈದ್ಯಕೀಯ ಘಟಕದ ಅಧ್ಯಕ್ಷ ಮತ್ತು ವೈದ್ಯ ಡಾ. ವಿಶ್ವನಾಥ್ ಟೀಕಿಸಿದ್ದಾರೆ.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಾ. ವಿಶ್ವನಾಥ್ ಅವರು, ಕರ್ನಾಟಕ ಅಸೋಸಿಯೇಷನ್ ಫಾರ್ ರೆಸಿಡೆಂಟ್ ಡಾಕ್ಟರ್ಸ್ ಈ ಕುರಿತು ಒಂದು ಪಟ್ಟಿಯನ್ನು ನೀಡಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 16 ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ 53 ಆಸ್ಪತ್ರೆಗಳ ವೈದ್ಯರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಇವರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಒಂದು ವಾರದ ಒಳಗೆ ವೇತನವನ್ನು ನೀಡುವುದಾಗಿ ಹೇಳಿಕೆ ನೀಡಿದ್ದರೂ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

    ಕರ್ನಾಟಕ ಸರ್ಕಾರ ಕೊರೊನಾ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಮಾಡುತ್ತಿರುವ ವೈದ್ಯರಿಗೆ ತಕ್ಷಣ ವೇತನವನ್ನು ನೀಡಬೇಕು. ದೆಹಲಿ ಸರ್ಕಾರ ನೀಡುವಂತೆ ಕರ್ನಾಟಕದಲ್ಲಿ ಕೊರೊನಾ ಸೇವೆಯಲ್ಲಿ ಮಡಿದ ವೈದ್ಯರಿಗೆ ಪರಿಹಾರ ನೀಡಿ. ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.  ಇದನ್ನೂ ಓದಿ: ನಿರ್ಮಾಪಕ ದಿಲೀಪ್ ಕುಮಾರ್ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

    ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಯನಗರ ಅಸೆಂಬ್ಲಿಯ ಅಧ್ಯಕ್ಷ ಮಂಜುನಾಥ್ ಆರ್ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ, ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡಿ ಮಡಿದ ವೈದ್ಯರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡುತ್ತಿದೆ. ಕರ್ನಾಟಕ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಪಿಪಿಇ ಕಿಟ್ ಕೂಡ ನೀಡಿರಲಿಲ್ಲ. ಅಲ್ಲದೇ ವೇತನವನ್ನೇ ನೀಡದೆ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಟೀಕಿಸಿದರು.

    ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಡಾ. ರಮೇಶ್ ಮಾತನಾಡಿ, ವೈದ್ಯರ ಕರ್ತವ್ಯದ ಮಧ್ಯೆ ಮೂಗು ತೋರಿಸದೆ ಅವರಿಗೆ ಗೌರವ ನೀಡಬೇಕು ಎಂದು ತಿಳಿಸಿದರು.

    ಆಸ್ಪತ್ರೆಗಳಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ರೋಗಿಗಳು, ಅವರ ಕುಟುಂಬಸ್ಥರು, ಸ್ಥಳೀಯ ರಾಜಕೀಯ ನಾಯಕರು ವೈದ್ಯರ ಮೇಲೆ ಕೆಲಸದ ಸಮಯದಲ್ಲಿ ನಡೆಸುತ್ತಿರುವ ಹಲ್ಲೆಗಳು ವರದಿಯಾಗುತ್ತಿವೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ 70% ವೈದ್ಯರು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈದ್ಯರಿಗೆ ಗೌರವಯುತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುವುದೆ ಅವರಿಗೆ ವೈದ್ಯರ ದಿನದಂದು ನೀಡುವ ಗೌರವ ಎಂದು ಕೆ ಆರ್ ಪುರಂ ನ ಆಮ್ ಆದ್ಮಿ ಪಾರ್ಟಿಯ ಉಸ್ತುವಾರಿ ಡಾ. ಕೇಶವ್ ಅಭಿಪ್ರಾಯಪಟ್ಟರು.

  • ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

    ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

    ಚಿಕ್ಕಮಗಳೂರು: 2021ರ ಜನವರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಕೆ ಮಾಡಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಜಿಲ್ಲೆಗೆ ಎರಡರಂತೆ ಆಯ್ಕೆ ಮಾಡಿ ಕಳುಹಿಸಲು ಸರ್ಕಾರ ಸೂಚಿಸಿತ್ತು. ಇದರಂತೆ ಇದೀಗ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

    ಉತ್ತಮ ಅಭ್ಯಾಸಗಳನ್ನು ಅಳವಡಿಕೊಂಡಿರುವ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ತರೀಕೆರೆ ತಾಲೂಕಿನ ಸೊಕ್ಕೆ ಪ್ರೌಢ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಯಟ್ ಪ್ರಾಂಶುಪಾಲರಾದ ಪುಷ್ಪಲತಾ ಅವರು, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಕಾರಣ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಸರ್ಕಾರ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಶಾಲೆಗಳ 5 ಅಥವಾ 6 ನಿಮಿಷದ ವೀಡಿಯೋ ಜೊತೆ ಹೆಚ್ಚಿನ ವಿಡಿಯೋಗಳನ್ನು ಕಳುಹಿಸಲು ಅವಕಾಶ ನೀಡಿತ್ತು. ಅದರಂತೆ ಜಿಲ್ಲೆಯ ಎರಡು ಶಾಲೆಗಳ ವೀಡಿಯೋಗಳನ್ನು ಕಳುಹಿಸಿಕೊಡಲಾಗಿತ್ತು. ತರೀಕೆರೆ ತಾಲೂಕಿನ ಸೊಕ್ಕೆ ಸರಕಾರಿ ಪ್ರೌಢ ಶಾಲೆ ಹಾಗೂ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಶಾಲೆಯ ಶಿಕ್ಷಕರು ಬಹಳ ಹಿಂದಿನಿಂದಲೂ ಸಾಕಷ್ಟು ಉತ್ತಮವಾದಂತಹ ಅಭ್ಯಾಸಗಳನ್ನು ಮಕ್ಕಳಲ್ಲಿ ಮಾಡಿಸಿಕೊಂಡು ಬಂದಿದ್ದರು. ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಶಾಲೆಗಳು ಇವಾಗಿವೆ ಎಂದರು. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿ ಮಾನವೀಯತೆ ಮೆರೆದ ಶಿಕ್ಷಕ

    2 ಶಾಲೆಗಳು ಸುಮಾರು ಐದರಿಂದ ಆರು ನಿಮಿಷದ ವೀಡಿಯೋಗಳನ್ನು ನಮಗೆ ಕಳುಹಿಸಿಕೊಟ್ಟಿತ್ತು. ನಾವು ಆ ವಿಡಿಯೋಗಳನ್ನು ಧಾರವಾಡಕ್ಕೆ ಕಳುಹಿಸಿದ್ದೆವು. ಈಗ ರಾಜ್ಯದ ಶಾಲೆಗಳಲ್ಲಿ ಉತ್ತಮ ಅಭ್ಯಾಸಗಳನ್ನ ಮಾಡಿಕೊಂಡಿರುವ ಶಾಲೆಗಳ ಪಟ್ಟಿಯಲ್ಲಿ ನಮ್ಮ ಜಿಲ್ಲೆಯ ಎರಡು ಶಾಲೆಗಳು ಸೇರಿರುವುದು ಸಂತಸದ ವಿಷಯ. ಬೇರೆ ಜಿಲ್ಲೆಗಳಲ್ಲಿ ಒಂದೊಂದು ಶಾಲೆ ಸೇರಿಕೊಂಡಿದ್ದರೆ ನಮ್ಮ ಜಿಲ್ಲೆಯಲ್ಲಿ ಎರಡೂ ಶಾಲೆಗಳು ಸೇರಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.

    ಈ ರೀತಿ ಉತ್ತಮವಾದ ಅಭ್ಯಾಸಗಳಿಂದ ಆಯ್ಕೆಯಾದ ಶಾಲೆಗಳಿಗೆ ಸರ್ಕಾರದಿಂದ 5000 ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಈಗ ಆಯ್ಕೆಯಾಗಿರುವ ಶಾಲೆಗಳನ್ನು ರಾಜ್ಯ ಮಟ್ಟದಲ್ಲಿ ಆಯ್ಕೆ ಮಾಡಿರುವುದರಿಂದ ಮತ್ತೊಮ್ಮೆ ವಿಡಿಯೋಗಳನ್ನು ಮಾಡಿಕೊಡುವಂತೆ ಸೂಚನೆ ಬಂದಿದೆ. ಮುಂದಿನ ಹದಿನೈದು ದಿನಗಳ ಕಾಲಾವಕಾಶ ಇದೆ. ಆ ದಿನಗಳಲ್ಲಿ ನಾವು ಶಾಲೆಯ ಮತ್ತೊಂದು ವೀಡಿಯೋವನ್ನು ಮಾಡಿ ಕಳುಹಿಸಿಕೊಡಬೇಕಾಗಿದೆ. ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಊರಿನ ಸಾರ್ವಜನಿಕರ ಸಹಕಾರ ಪಡೆದು ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಂತೆ ವೀಡಿಯೋ ಚಿತ್ರೀಕರಣಕ್ಕೆ ತಿಳಿಸಿದ್ದೇವೆ ಅದನ್ನು ಮುಂದೆ ರಾಷ್ಟ್ರ ಮಟ್ಟದ ಆಯ್ಕೆಗಾಗಿ ಕಳುಹಿಸಿಕೊಡುತ್ತೇವೆ. ಈ ಶಾಲೆಗಳು ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.

  • ಕೊರೊನಾ ಮೂರನೇ ಅಲೆ ಮಕ್ಕಳಿಗೆ ತೊಂದರೆ – ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿ ಸಿದ್ದರಾಮಯ್ಯ

    ಕೊರೊನಾ ಮೂರನೇ ಅಲೆ ಮಕ್ಕಳಿಗೆ ತೊಂದರೆ – ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿ ಸಿದ್ದರಾಮಯ್ಯ

    ಬೆಂಗಳೂರು: ಮೂರನೇ ಅಲೆ ಮಕ್ಕಳಿಗೆ ಬರಬಹುದು. ತಜ್ಞರು ಸಹ ಇದನ್ನ ಹೇಳಿದ್ದಾರೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳು ಇದೆ. ಮೂರು ಸಮಯ ಇದೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಡ್ ಆಕ್ಸಿಜನ್ ಎಲ್ಲವೂ ಸಿದ್ಧತೆ ಮಾಡಿಕೊಳ್ಳಬೇಕು. 12 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಕೊಡಬಹುದು. ಗರ್ಭಿಣಿ ಸ್ತ್ರೀಯರಿಗೂ ಸಹ ಲಸಿಕೆ ಹಾಕಬಹುದು. ಆದ್ರೆ ಕೊಡ್ತಿಲ್ಲ ಹೀಗಾಗಿ ಮಕ್ಕಳ ಮೇಲೆ ಮೂರನೇ ಅಲೆ ಬರುತ್ತೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ಹಾಕದ ಕಾರಣ ಅವರ ಮೇಲೆ ಪರಿಣಾಮ ಆಗಲಿದೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

    ಕೊರೊನಾ ಸಂತ್ರಸ್ತರ ಮನೆಗೆ ಕಾಂಗ್ರೆಸ್ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹೈಕಮಾಂಡ್ ನಿಂದ ಆದೇಶ ಬಂದಿದ್ದು, ಕೊರೊನಾ ಸಂತ್ರಸ್ತರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ. ಪರಿಹಾರ ನೀಡಿ ಅವರ ದುಃಖದಲ್ಲಿ ಭಾಗಿಯಾಗಿ, ದಿನಸಿ ಸಾಮಗ್ರಿಗಳನ್ನು ನೀಡಲು ಹೇಳಿದ್ದಾರೆ. ಜುಲೈ ಒಂದರಿಂದ ಪ್ರತಿಯೊಬ್ಬ ಸಂತ್ರಸ್ತರ ಮನೆಗೆ ಭೇಟಿ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು– ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಅಧಿಕಾರಿಗೆ ಸೂಚನೆ

  • ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ – ವಿಶ್ವನಾಥ್ ವಾಗ್ದಾಳಿ

    ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ – ವಿಶ್ವನಾಥ್ ವಾಗ್ದಾಳಿ

    ಮೈಸೂರು: ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಡೆಲ್ಟಾ ಅಲೆ ಮತ್ತು ಕೊರೊನಾ ಮೂರನೇ ಅಲೆ ಶುರುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಯಾಕೆ ಬೇಕು ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಇಲಾಖೆ ನಿರ್ಧಾರವನ್ನು ಖಂಡಿಸಿ ಮಾತನಾಡಿದ ಅವರು, ಸಾವಿನ ಕೂಪಕ್ಕೆ ಮಕ್ಕಳನ್ನು ತಳ್ಳುವ ಕೆಲಸ ಇದು. ಶಿಕ್ಷಣ ಇಲಾಖೆ ಮಾಜಿ ಸಚಿವರ ಜೊತೆ ಹಾಲಿ ಸಚಿವರು ಚರ್ಚೆ ಮಾಡಬೇಕಿತ್ತು. ಯಾರದ್ದೋ ಮಾತು ಕೇಳಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ ಎಂದು ಟೀಕಿಸಿದರು.

    ಪರೀಕ್ಷೆ ಬರೆಯಲು ಬರುವ ಮಕ್ಕಳ ಆರೋಗ್ಯ ಜವಾಬ್ದಾರಿ ಯಾರದ್ದು? ಯಾಕೆ ಶಿಕ್ಷಣ ಸಚಿವರು ಈ ರೀತಿಯ ಈಗೋ ತೋರಿಸುತ್ತಿದ್ದಾರೆ. ಮಕ್ಕಳನ್ನು ಸಾಯಿಸಲು, ಶಿಕ್ಷಕರನ್ನು ಸಾಯಿಸಲು ಈ ಪರೀಕ್ಷೆ ಮಾಡುತ್ತೀದ್ದಿರಾ? ಮಕ್ಕಳನ್ನು ಸಾಯಿಸಿ ಅವರ ಪೋಷಕರ ಸಾಯಿಸಲು ಮುಂದಾಗಿದ್ದೀರಾ? ಪರೀಕ್ಷೆ ಮಾಡುವ ಹಠ ಶಿಕ್ಷಣ ಸಚಿವರಿಗೆ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡುವ ನಿರ್ಧಾರಕ್ಕೆ ಬಂದಿದ್ದೀರಾ ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನನಗೆ ಎಲ್ಲಾ ಗೊತ್ತು ಎಂಬ ಈಗೋ ಮಂತ್ರಿಗೆ ಇರಬಾರದು. ಪಾಠವೇ ಇಲ್ಲದೇ ಪರೀಕ್ಷೆ? ಇದು ಮೂರ್ಖತನ ಹೀಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡಬೇಕು ಎಂಬ ತೀರ್ಮಾನ ಹಿಂಪಡೆಯಿರಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಅರಣ್ಯದಲ್ಲಿ ಕಾಣೆಯಾಗಿದ್ದ 110ರ ವೃದ್ಧ ನಾಲ್ಕು ದಿನಗಳ ಬಳಿಕ ಪತ್ತೆ

  • ಪ್ರಸಂಗ ಬಂದರೆ ಜಾರಕಿಹೊಳಿ ಮಂತ್ರಿ ಆಗ್ತಾರೆ: ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ

    ಪ್ರಸಂಗ ಬಂದರೆ ಜಾರಕಿಹೊಳಿ ಮಂತ್ರಿ ಆಗ್ತಾರೆ: ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ

    ಬಾಗಲಕೋಟೆ: ಪ್ರಸಂಗ ಬಂದರೆ ರಮೇಶ್ ಜಾರಕಿಹೊಳಿ ಮಂತ್ರಿ ಆಗುತ್ತಾರೆ. ನಮ್ಮೆಲ್ಲಾ ಮಂತ್ರಿ ಮಂಡಳದ ಪ್ರಯತ್ನ ಅದೇ ಆಗಿರುತ್ತೆ ಎಂದು ಬಾಗಲಕೋಟೆಯಲ್ಲಿ ಸಚಿವ ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    34 ಮಂತ್ರಿ ಬಿಟ್ಟು ಮಾಡುವುದಕ್ಕೆ ಆಗುವುದಿಲ್ಲ. ಅದರಲ್ಲಿ ಫಿಟ್ ಮಾಡುವ ಪ್ರಯತ್ನ ಮಾಡುತ್ತೇವೆ. ಇನ್ನೂ ಎರಡು ವರ್ಷ ರಮೇಶ್ ಜಾರಕಿಹೊಳಿ ಶಾಸಕರಾಗಿರುತ್ತಾರೆ. ಪ್ರಸಂಗ ಬಂದರೆ ಮಂತ್ರಿ ಆಗುತ್ತಾರೆ ಎಂದು ಉಮೇಶ್ ಕತ್ತಿ ಭವಿಷ್ಯ ನುಡಿದರು.

    ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವ ಪ್ರಸಂಗವೇ ಬರಲ್ಲ. ನನ್ನಷ್ಟೇ ವಯಸ್ಸಿನವರಿದ್ದಾರೆ. ನನ್ನ ಆತ್ಮೀಯ ಸ್ನೇಹಿತ, ಅವರೊಂದಿಗೆ ಮಾತನಾಡುತ್ತಿರುತ್ತೇನೆ. ಮತ್ತೆ ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡುವುದು ಸಿಎಂಗೆ ಬಿಟ್ಟಿದ್ದು. ನಾನು ರಮೇಶ್ ಒಂದೇ ಜಿಲ್ಲೆಯವರು, ಆತ್ಮೀಯರು. ಕ್ಯಾಸೆಟ್ ಗಳನ್ನ ನಿರ್ಮಾಣ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಗೆ ಆ ಕ್ರೀಯೇಟ್ ಕ್ಯಾಸೆಟ್ ನಿಂದ ನೋವಾಗಿದೆ. ಅವರು ಬಹಳ ಸರಳ ವ್ಯಕ್ತಿ. ಕ್ರಿಯೆಟ್ ಕ್ಯಾಸೆಟ್ ಗಳಿಂದ ದುಃಖವಾಗಿದ್ದು ನಿಜವೆಂದರು.

    ಶಾಲೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದು, ಆಗ ಯಾವ ರೀತಿ ಇರಬೇಕೆಂದು ಹೇಳಿದ್ದಾರೆ. ಈ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ತೀರ್ಮಾನ ತೆಗೆದುಕೊಳ್ಳುತ್ತಾರೆ. ಜುಲೈಯೊಳಗೆ ಶಾಲೆಗಳು ಆರಂಭವಾಗಬಹುದು. ಮೂರನೇ ಅಲೆ ಇದೆ, ಒಂದು ಎರಡು ಬಂದು ಹೋಯ್ತು. ಮೂರನೇ ಅಲೆ ಯಾವಾಗ ಎಲ್ಲಿ ಬರುತ್ತೆ ಗೊತ್ತಿಲ್ಲ. ಈ ಅಲೆ ಬರುತ್ತಾನೆ ಇರುತ್ತವೆ. ಒಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸವೂ ನಡೆಯಬೇಕು. ವ್ಯಾಪಾರ ಉದ್ಯೋಗವೂ ನಡೆಯಬೇಕು. ಈ ಅಲ್ಲದೇ ಇದರ ಜೊತೆ ನಾವು ಹೇಗೆ ಬದುಕಬೇಕು ಎಂದು ನಾವು ನೀವು ನಿರ್ಧರಿಸಬೇಕು. ಶಾಲಾರಂಭ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಉಮೇಶ್ ಕತ್ತಿ ಸುಳಿವು ಕೊಟ್ಟರು.

    ದೇಗುಲ ಆರಂಭ ವಿಚಾರಕ್ಕೆ ಬಹುತೇಕ ರಾಜ್ಯವೇ ಅನ್ ಲಾಕ್ ಆಗಿದೆ. ಹಂತ ಹಂತವಾಗಿ ಅನ್ ಲಾಕ್ ಮಾಡುತ್ತಾರೆ. ದೇಗುಲಗಳು ಬಹಳ ದಿನಗಳಿಂದ ಲಾಕ್ ಇವೆ. ಒಮ್ಮೆಲೆ ದೇಗುಲ ಬಾಗಿಲು ತೆರೆದರೆ ಜನ ದಟ್ಟಣೆ ಆಗಬಾರದೆಂದು ಕ್ರಮೇಣ ಮಾಡುತ್ತಾರೆ. ಎಲ್ಲವನ್ನೂ ಹಂತ ಹಂತವಾಗಿ ಸರ್ಕಾರ ಮಾಡುತ್ತದೆ. ಇನ್ನೂ ಎಂಟು ಹತ್ತು ದಿನಗಳಲ್ಲಿ ದೇಗುಲ ಓಪನ್ ಆಗಲಿದೆ ಎಂದರು.

    ಮೊದಲು ಕಾಂಗ್ರೆಸ್ ನಲ್ಲಿ ಸರಿಮಾಡಿ. ಆಮೇಲೆ ಬಿಜೆಪಿಯೊಳಗೆ ಕೈ ಹಾಕಿ ಎಂದು ಎಸ್.ಆರ್ ಪಾಟೀಲ್ ಗೆ ಕತ್ತಿ ತಿರುಗೇಟು ನೀಡಿದ್ದು, ನೀವು ವಿರೋಧ ಪಕ್ಷದ ನಾಯಕರಾಗಿ. ಸಿದ್ದರಾಮಯ್ಯಯೋ, ಡಿಕೆಶಿಯೋ, ದಲಿತ ಮುಖ್ಯಮಂತ್ರಿ ಎಂದು ಮೊದಲು ತೀರ್ಮಾನ ಮಾಡಿ ಎಂದು ಬಿಜೆಪಿಯಲ್ಲಿ ಸಿಎಂ ಬದಲಾವಣೆ ಕಚ್ಚಾಟಕ್ಕೆ ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಹೇಳಿಕೆಗೆ ಉಮೇಶ್ ಕತ್ತಿ ಟಾಂಗ್ ನೀಡಿದ್ದಾರೆ.  ಇದನ್ನೂ ಓದಿ: ಸೋಮಣ್ಣ ಪ್ರತಿಷ್ಠಾನದಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

  • ಸರ್ಕಾರದ ರೂಲ್ಸ್ ಬ್ರೇಕ್ – ಬಿಎಂಟಿಸಿಯಲ್ಲಿ ಶೇ.100 ಪ್ರಯಾಣಿಕರ ಪ್ರಯಾಣ

    ಸರ್ಕಾರದ ರೂಲ್ಸ್ ಬ್ರೇಕ್ – ಬಿಎಂಟಿಸಿಯಲ್ಲಿ ಶೇ.100 ಪ್ರಯಾಣಿಕರ ಪ್ರಯಾಣ

    ಬೆಂಗಳೂರು: ಕೊರೊನಾ ಅನ್‍ಲಾಕ್ 2 ನಲ್ಲಿ ರಾಜ್ಯ ಸರ್ಕಾರ ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿಸಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವೀಕೆಂಡ್ ಕರ್ಫ್ಯೂ ಬಳಿಕ ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಈ ಮಧ್ಯೆ ಬಿಎಂಟಿಸಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಶೇ.100 ಪ್ರಯಾಣಿಕರನ್ನು ಬಸ್‍ನಲ್ಲಿ ತುಂಬಿಕೊಂಡು ಸಾಗುತ್ತಿದೆ.

    ಶುಕ್ರವಾರ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಶುರುವಾದ ಬಳಿಕ ಬಿಎಂಟಿಸಿ ಬಸ್‍ಗಳ ಸಂಖ್ಯೆಯನ್ನು ಶೇ.30 ರಷ್ಟು ಕಡಿಮೆ ಮಾಡಿ 1000 – 1200 ಬಸ್ ಗಳನ್ನು ರಸ್ತೆಗೆ ಇಳಿಸಿತ್ತು. ಇಂದು ವೀಕೆಂಡ್ ಕರ್ಫ್ಯೂ ಕೊನೆಗೊಂಡಿದ್ದು, 3500 ರಿಂದ 4000 ಬಿಎಂಟಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಿದೆ. ಸರ್ಕಾರ ಶೇ. 50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಲು ಆದೇಶ ನೀಡಿದೆ. ಆದರೆ ಸರ್ಕಾರ ಹೇಳಿದ್ದ ರೂಲ್ಸ್ ನ್ನು ಸಂಪೂರ್ಣವಾಗಿ ಬಿಎಂಟಿಸಿ ಬಸ್ ಸಿಬ್ಬಂದಿ ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನೂ ಓದಿ: ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಕಡಿತ 

    ಶೇ.50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಬಿಎಂಟಿಸಿಯಲ್ಲಿ ಶೇ.100 ರಷ್ಟು ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ಸರ್ಕಾರದ ಆದೇಶ ಒಂದೇ ವಾರಕ್ಕೆ ಹಳ್ಳ ಹಿಡಿದಿದೆ. ಕೊರೊನಾ ಇನ್ನೂ ಮುಗಿದಿಲ್ಲ, ಎರಡನೇ ಅಲೆ ಅಬ್ಬರ ಕಡಿಮೆಯಾಗಿದೆ. ಜೊತೆಗೆ ಮೂರನೇ ಅಲೆಯ ಆತಂಕದೊಂದಿಗೆ ಡೆಲ್ಟಾ ಪ್ಲಸ್ ವೈರಾಣುವಿನ ಭಯ ಕೂಡ ಶುರುವಾಗಿದೆ. ಇತಂಹ ಸಮಯದಲ್ಲಿ ಬಿಎಂಟಿಸಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಮತ್ತೆ ಕೊರೊನಾ ಕೇಸ್ ಹೆಚ್ಚಾಗಲು ಕಾರಣವಾಗುವ ಸಾಧ್ಯತೆಯಿದೆ.

  • ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರ ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

    ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರ ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

    ಬೆಂಗಳೂರು: ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರಕ್ಕೆ ಬಂದು ರಾಜಕಾರಣ ಮಾಡುತ್ತಿದೆ. ವಿಧಾನಸಭೆಯಿಂದ ಪಂಚಾಯಿತಿ ಮೆಂಬರ್ ವರೆಗೆ ಖರೀದಿ ಮಾಡುವ ನಡವಳಿಕೆ ಇಟ್ಟುಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.

    ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿ.ಕೆ ಪಾಳ್ಯದಲ್ಲಿ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಹಾಗೂ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ನೇತೃತ್ವದಲ್ಲಿ 40 ಸಾವಿರ ದಿನಸಿ ಕಿಟ್ ಗಳನ್ನು ಹಂಚುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಪಾಪದ ಹಣವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಸೂಸೈಡ್ ಮಾಡಿಕೊಳ್ಳೋಕೆ ಯಾಕೆ ಹೋದರು ಎನ್ನುವುದು ತಿಳಿದಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಈತನೇ ಕಿಂಗ್ ಪಿನ್ ಆಗಿ ಕೆಲಸ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಅರಸಿಕೇರೆಯಲ್ಲಿ ಸ್ಪರ್ಧೆ ಮಾಡಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಂಪಾದನೆ ಆದ ಕಳ್ಳಹಣದಲ್ಲಿ ಜನಪ್ರತಿನಿಧಿಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ. ನಾಯಕರನ್ನು ಕೊಂಡುಕೊಳ್ಳುವ ಕೆಲಸ ವಿಧಾನಸಭೆಯಲ್ಲಿ ಶುರುವಾಗಿ ಇದೀಗ ಸ್ಥಳೀಯ ಮಟ್ಟಕ್ಕೆ ವಿಸ್ತರಣೆ ಮಾಡಲಾಗಿದೆ.

    ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ನಡವಳಿಕೆಯನ್ನು ಬಿಡಬೇಕು. ತುರ್ತು ಪರಿಸ್ಥಿತಿ ಘೋಷಣೆ ಮಾಡದೆ ಇದ್ದರು ಸಹ ಈಗ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಬದ್ದವಾಗಿ ಸಂವಿಧಾನದ ಪ್ರಕಾರ ಯಾವುದೇ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ಕೇವಲ ಸರ್ಕಾರದ ಆದೇಶದ ಮೇಲೆ ಮಾಡುತ್ತಿದ್ದು, ಜನಸಾಮಾನ್ಯರು ಜಾಗೃತರಾಗಬೇಕು ಇಲ್ಲದಿದ್ದರೆ, ಮುಂದಿನ ದಿನಗಳು ಇನ್ನಷ್ಟು ದುಸ್ಥರವಾಗುತ್ತೆ. ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಫುಡ್ ಕಿಟ್‍ಗಳ ಮೇಲೆ ಬಿಜೆಪಿಯವರು ತಮ್ಮ ಫೋಟೋ ಹಾಕಿಸಿ ಪ್ರಚಾರ ಪಡೆಯುತ್ತಿದ್ದು, ಮಹಾದಾನಿಗಳು ಎಂದು ಪ್ರಚಾರ ಪಡೆದು ಅದರಲ್ಲೂ ಸಹ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಸರ್ಕಾರದ ವಿರುದ್ಧ ಹಾರಿಹಾಯ್ದರು. ಇದನ್ನೂ ಓದಿ:ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

  • ಸರ್ಕಾರದ ಶ್ವಾಸಕೋಶ ಸರಿಯಾಗಿದೆ, ಸಹಜವಾಗಿ ಉಸಿರಾಡುತ್ತಿದೆ, ತುಂಬಾನೇ ಗಟ್ಟಿಯಾಗಿವೆ: ಜೋಶಿ

    ಸರ್ಕಾರದ ಶ್ವಾಸಕೋಶ ಸರಿಯಾಗಿದೆ, ಸಹಜವಾಗಿ ಉಸಿರಾಡುತ್ತಿದೆ, ತುಂಬಾನೇ ಗಟ್ಟಿಯಾಗಿವೆ: ಜೋಶಿ

    ಧಾರವಾಡ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ, ಪ್ರಧಾನಿ ತೀರ್ಮಾನಿಸಿದಾಗ ವಿಸ್ತರಣೆಯಾಗುತ್ತದೆ. ರಾಜ್ಯ ಸರ್ಕಾರದ ಶ್ವಾಸಕೋಶ ಸರಿಯಾಗಿದೆ. ಸಹಜವಾಗಿ ಉಸಿರಾಡುತ್ತಿದೆ. ತುಂಬಾನೆ ಗಟ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸಂಪುಟ ಪ್ರಧಾನಿ ತೀರ್ಮಾನದ ಮೇಲೆ ವಿಸ್ತರಣೆ, ಪುನರ್ ರಚನೆ ಆಗುತ್ತದೆ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಅದರ ಬಗ್ಗೆ ಮೊದಲೇ ನಮ್ಮ ಸರ್ಕಾರದಲ್ಲಿ ಗೊತ್ತಾಗುವುದಿಲ್ಲ. ಹೀಗಾಗಿ ನಾನು ಉತ್ತರಿಸಲು ಅರ್ಹನಲ್ಲ ಎಂದರು.

    ರಾಜ್ಯ ಸರ್ಕಾರಕ್ಕೆ ಉಸಿರಾಟದ ಸಮಸ್ಯೆ ಇದೆಯಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜೋಶಿ, ಸರ್ಕಾರದ ಶ್ವಾಸಕೋಶ ಈಗ ಸರಿಯಾಗಿವೆ, ಸಹಜವಾಗಿ ಉಸಿರಾಡುತ್ತಿದೆ, ಶ್ವಾಸಕೋಶಗಳು ತುಂಬಾನೇ ಗಟ್ಟಿಯಾಗಿವೆ ಹಾಗಾಗಿ ಸರಿಯಾಗಿ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಕಚ್ಚಾಟ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಾ.ಸುಧಾಕರ್

    ಸುತ್ತೂರು ಮಠಕ್ಕೆ ರಾಜಕಾರಣಿಗಳ ಭೇಟಿ ವಿಚಾರವಾಗಿ ಮಾತನಾಡಿ, ಶ್ರೀಗಳ ಮಾತೋಶ್ರೀ ನಿಧನರಾಗಿದ್ದರು. ಅವರನ್ನು ಭೇಟಿಯಾಗಲು ಕೆಲವರು ಹೋಗುತ್ತಿದ್ದಾರೆ, ಎಲ್ಲವನ್ನೂ ರಾಜಕೀಯ ಅಂದರೆ ಹೇಗೆ, ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

    ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎನ್ನುವ ಸಿ.ಪಿ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯೋಗೇಶ್ವರ್ ಯಾವ ವಿ.ವಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಅಲ್ಲೇ ಫಲಿತಾಂಶ ಬರುತ್ತೆ. ಅವರು ಪರೀಕ್ಷೆ ಬರೆದ ವಿವಿಯ ಕುಲಪತಿ ಅರುಣ್ ಸಿಂಗ್ ಅವರು ಈಗಾಗಲೇ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದರು.

  • ಎನ್‍ಡಿಪಿಎಸ್ ಕಾಯ್ದೆ ಜಾರಿಗೆ ನಿಯಮ ರೂಪಿಸಲಾಗುವುದು: ಬಸವರಾಜ ಬೊಮ್ಮಾಯಿ

    ಎನ್‍ಡಿಪಿಎಸ್ ಕಾಯ್ದೆ ಜಾರಿಗೆ ನಿಯಮ ರೂಪಿಸಲಾಗುವುದು: ಬಸವರಾಜ ಬೊಮ್ಮಾಯಿ

    ಬೆಂಗಳೂರು: ಮಾದಕ ವಸ್ತುಗಳ ನಿಯಂತ್ರಣಕ್ಕೆ ರೂಪಿಸಲಾಗಿರುವ NDPS (ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್) ಕಾಯ್ದೆಗೆ ರಾಜ್ಯದಲ್ಲಿ ನಿಯಮಾವಳಿ ರೂಪಿಸುವ ಮೂಲಕ ಆ ಕಾಯಿದೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಇದರೊಂದಿಗೆ ಮಾದಕ ವಸ್ತುಗಳ ವಿರುದ್ಧದ ನಮ್ಮ ಹೋರಾಟ ಮತ್ತಷ್ಟು ಪ್ರಬಲವಾಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.

    ಬೆಂಗಳೂರಿನಲ್ಲಿ ಶನಿವಾರ ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ NDPS ಕಾನೂನನ್ನು ರೂಪಿಸಿದೆ. ಈ ಕಾನೂನನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಹಾಗೂ ಮತ್ತಷ್ಟು ಗಟ್ಟಿಯಾಗಿ ಜಾರಿಗೊಳಿಸಬೇಕೆಂಬುದು ನಮ್ಮ ದೃಢ ನಿರ್ಧಾರ.ಹೀಗಾಗಿ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ನ್ಯಾಷನಲ್ ಲಾ ಸ್ಕೂಲ್ ಜತೆ ಸಭೆ ನಡೆದಿದ್ದು ಕಾನೂನಿನನ್ವಯ ನಿಯಮ ರೂಪಿಸಿ ಜಾರಿಗೆ ತರಲು ಅಧ್ಯಯನ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ: ರಮೇಶ್ ಜಾರಕಿಹೊಳಿ

    ಡಾರ್ಕ್ ವೆಬ್ ಮೂಲಕ ಸರಬರಾಜಾಗುತ್ತಿದ್ದ ಮಾದಕ ವಸ್ತುಗಳನ್ನು ನಮ್ಮ ಪೊಲೀಸರು ನಿಯಂತ್ರಿಸಿದ್ದಾರೆ. ಡಾರ್ಕ್ ವೆಬ್ ಅಪರಾಧ ಪತ್ತೆಯಿಂದ ಹಲವಾರು ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಅದರ ಆಧಾರದ ಮೇಲೆ ಹಲವಾರು ದಾಳಿಗಳು ನಡೆದಿವೆ. ಅಂತರಾಷ್ಟ್ರೀಯ ಮಟ್ಟದ ಪ್ಲೇಯರ್ ಗಳನ್ನು ಪತ್ತೆ ಮಾಡಿ ಬಂಧಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

    ಕರ್ನಾಟಕ ಪೊಲೀಸರ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ:

    ಡ್ರಗ್ಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಕರ್ನಾಟಕ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸರ ಡ್ರಗ್ ವಿರೋಧಿ ಕಾರ್ಯಾಚರಣೆಯಿಂದ ಬೇರೆ ಎಲ್ಲ ತನಿಖಾ ಏಜೆನ್ಸಿಗಳು ಜಾಗೃತವಾದವು ಅನ್ನುವುದು ಬಹಳ ಮುಖ್ಯ. ಸಾಮಾನ್ಯವಾಗಿ ಇದುವರೆಗೆ ಬೇರೆ ಏಜೆನ್ಸಿಗಳು ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುತ್ತಿದ್ದವು. ಆದರೆ ಈಗ ಕರ್ನಾಟಕ ಪೊಲೀಸರು ಅಪರಾಧ ಪತ್ತೆ ವಿಚಾರದಲ್ಲಿ ಬೇರೆ ಸಂಸ್ಥೆಗಳನ್ನು ಜಾಗೃತಗೊಳಿಸುತ್ತಿವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

    50 ಕೋಟಿ ಮೊತ್ತದ ಮಾದಕವಸ್ತುಗಳ ನಾಶ:
    2020 21 ನೇ ಸಾಲಿನಲ್ಲಿ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿ ರುವ 3000 ಕೆಜಿ ಗಿಂತಲೂ ಹೆಚ್ಚು ತೂಕದ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಪ್ರಕಾರ ನಾಶಪಡಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತುಗಳು ಅಪಾರ ಪ್ರಮಾಣದ ಜನರ ಆರೋಗ್ಯವನ್ನು ಹಾಳು ಮಾಡುತ್ತಿದ್ದವು. ಆ ಅಪಾಯವನ್ನು ನಮ್ಮ ಪೊಲೀಸರು ತಪ್ಪಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಇದನ್ನೂ ಓದಿ: 67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೊಮ್ಮಾಯಿ ಪೊಲೀಸರಿಗೆ ಮಾದಕವಸ್ತು ತಡೆ ಮತ್ತು ನಾಶಪಡಿಸುವ ಕುರಿತು ಪ್ರಮಾಣ ವಚನ ಬೋಧಿಸಿದರು. ಇದುವರೆಗಿನ ಡ್ರಗ್ಸ್ ವಿರುದ್ಧದ ಹೋರಾಟದ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಮಾಣದ ವಿವಿಧ ರೀತಿಯ ಮಾದಕ ವಸ್ತುಗಳನ್ನು ಒಂದೇ ವರ್ಷದಲ್ಲಿ ವಶಪಡಿಸಿಕೊಂಡಿರುವುದು ಐತಿಹಾಸಿಕ. ಇದು ಕರ್ನಾಟಕ ಪೊಲೀಸರ ಸಣ್ಣ ಸಾಧನೆಯೇನಲ್ಲ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ದಾಳಿಗಳು ನಡೆದವು. ಇದರ ಜಾಡು ಹಿಡಿದು ರಾಜ್ಯದ ಇತರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ಮಾದಕ ವಸ್ತುಗಳ ಜಾಲವನ್ನು ನಮ್ಮ ಪೊಲೀಸರು ಭೇದಿಸಿದರು. ಅದೆಷ್ಟೋ ಯುವಕರು, ಕುಟುಂಬಗಳು ಮಾದಕ ವಸ್ತುಗಳಿಂದ ಹಾಳಾಗುವುದನ್ನು ತಪ್ಪಿಸಿದರು ಎಂದು ಬಸರಾಜ್ ಬೊಮ್ಮಾಯಿ ಹೇಳಿದರು

  • ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ – ಮುಷ್ಕರ ಮಾಡದಂತೆ ಆದೇಶ

    ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ – ಮುಷ್ಕರ ಮಾಡದಂತೆ ಆದೇಶ

    ಬೆಂಗಳೂರು: ರಾಜ್ಯದಲ್ಲಿ ಅನ್‍ಲಾಕ್ ಆದ ನಂತರ ಬಸ್ ಸಂಚಾರ ಶುರುವಾಗಿದೆ. ಆದರು ಇನ್ನೂ ಮೊದಲ ರೀತಿಯಲ್ಲಿ ಎಲ್ಲಾ ಬಸ್‍ಗಳು ಸರಿಯಾಗಿ ರಸ್ತೆಗೆ ಇಳಿದಿಲ್ಲ. ಈ ಮಧ್ಯೆ ಸರ್ಕಾರಕ್ಕೆ ಶಾಕ್ ನೀಡಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಇದೀಗ ಸಾರಿಗೆ ನೌಕರರಿಗೆ ಸರ್ಕಾರವೇ ಚಮಕ್ ನೀಡಿದೆ.

    ಜುಲೈ 5ರ ಬಳಿಕ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ತಯಾರು ನಡೆಸಿದ್ದರು. ಇದನ್ನು ಅರಿತ ಸರ್ಕಾರ ಈ ಹಿನ್ನೆಲೆ ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 1 ರಿಂದ ಡಿ.31 ರವರೆಗೆ ಸಾರಿಗೆ ನೌಕರರ ಮುಷ್ಕರ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು: ಸವದಿ ಉಡಾಫೆ ಹೇಳಿಕೆ

    ಸದ್ಯ ಕೋವಿಡ್ ನಿಂದ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹಾಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯ 3ರ ಉಪವಿಭಾಗ 1ರ ಅನ್ವಯ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶವನ್ನು ಹೊರಡಿಸಿದೆ. ಇದರಿಂದ ಇದೀಗ ಸಾರಿಗೆ ನೌಕರರಿಗೆ ಹಿನ್ನಡೆ ಆದಂತಾಗಿದೆ.