Tag: government

  • ನಮಗೆ ಮೀಸಲಾತಿ ಬಗ್ಗೆ ಪಾಠ ಮಾಡುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

    ನಮಗೆ ಮೀಸಲಾತಿ ಬಗ್ಗೆ ಪಾಠ ಮಾಡುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಮೂಲಕ ಅಖಿಲ ಭಾರತ ಕೋಟಾದಡಿಯಲ್ಲಿ ಸೇರ್ಪಡೆಗೊಳ್ಳುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಬಿಜೆಪಿ ಈ ಬಗ್ಗೆ ಬೇರೆ ರೀತಿ ಉತ್ತರ ಕೊಡುತ್ತಿದೆ. ಮೀಸಲಾತಿ ಬಗ್ಗೆ ನಮಗೆ ಪಾಠ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ ಮೂರರಂದು ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಅಖಿಲ ಭಾರತ ಕೋಟಾದಡಿಯಲ್ಲಿ ಪಡೆದಿರುವ ಶೇಕಡಾ 15ರಷ್ಟು ಸೀಟುಗಳಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದರು. ಮೀಸಲಾತಿ ನಿರಾಕರಣೆಯಿಂದಾಗಿ 2017ರಿಂದ 11000 ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿರುವುದನ್ನು ಸೋನಿಯಾ ಗಾಂಧಿಯವರು ಪತ್ರದಲ್ಲಿ ಉಲ್ಲೇಖಿಸಿ ಅಖಿಲಭಾರತ ಕೋಟಾದಲ್ಲಿಯೂ ಒಬಿಸಿಗಳಿಗೆ ಮೀಸಲಾತಿ ನೀಡಬೇಕೆಂದು ಆಗ್ರಹ ಪಡಿಸಿದ್ದರು. ಇದಕ್ಕಾಗಿ ಸೋನಿಯಾಗಾಂಧಿಯವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

    ನನ್ನ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಹತ್ತು ವರ್ಷ ಯುಪಿಎ ಸರ್ಕಾರವಿದ್ದಾಗ ಒಬಿಸಿ ಮೀಸಲು ಬಗ್ಗೆ ಸೋನಿಯಾಗಾಂಧಿ ಅವರಿಗೆ ಜ್ಞಾನ ಇರಲಿಲ್ಲವೇ? ಎಂದು ಪ್ರಶ್ನಿಸಿದೆ. ಬಿಜೆಪಿಯ ಬಡವರ, ರೈತರ, ದಲಿತರ, ಹಿಂದುಳಿದ ಜಾತಿಗಳ ವಿರೋಧಿ ಎನ್ನುವದು ನನಗೆ ಗೊತ್ತಿದೆ. ಆದರೆ ಈ ಪಕ್ಷ ಇಷ್ಟೊಂದು ಬೌದ್ದಿಕ ದಿವಾಳಿತನದಿಂದ ಬಳಲುತ್ತಿದೆ ಎಂದು ಗೊತ್ತಿರಲಿಲ್ಲ. ಇತ್ತೀಚಿನ ಇತಿಹಾಸವನ್ನಾದರೂ ಸರಿಯಾಗಿ ಓದಿಕೊಂಡು ಪ್ರತಿಕ್ರಿಯಿಸಿ ಎಂದು ಅವರಿಗೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್

    ಬಿಜೆಪಿ ನಾಯಕರ ಗಮನಕ್ಕಾಗಿ ಕೆಲವು ವಾಸ್ತವಾಂಶಗಳನ್ನು ಮುಂದಿಡ ಬಯಸುತ್ತೇನೆ. ಮೊದಲನೇಯದಾಗಿ, ದೇಶದಲ್ಲಿಯೇ ಮೊದಲಬಾರಿ ಅತ್ಯಂತ ವೈಜ್ಞಾನಿಕವಾದ ಎಲ್.ಜಿ ಹಾವನೂರು ವರದಿಯ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ತಂದುಕೊಟ್ಟಿರುವುದು ರಾಜ್ಯದ ದೇವರಾಜ್ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ.

    ಎರಡನೇಯದಾಗಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಸಂವಿಧಾನಕ್ಕೆ 104ನೇ ತಿದ್ದುಪಡಿ ಮಾಡಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ಐಐಟಿ ಮತ್ತು ಐಐಎಂ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಯಿತು. ವಿ.ಪಿ ಸಿಂಗ್ ಅವರು ಮಂಡಲವರದಿ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾಗಿದ್ದ ಅರ್ಜುನ್ ಸಿಂಗ್ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಸಂವಿಧಾನಕ್ಕೆ 104ನೇ ತಿದ್ದುಪಡಿಯ ಮೂಲಕ ಮೀಸಲಾತಿ ಕಲ್ಪಿಸಿದ್ದರು ಎಂದು ಮಾಹಿತಿ ಹಂಚಿಕೊಂಡರು.

    ಮನಮೋಹನ್ ಸಿಂಗ್ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಾಗ ಅದನ್ನು ವಿರೋಧಿಸಿದ್ದು ಬಿಜೆಪಿ. ಭಾರತೀಯ ಜನತಾ ಪಕ್ಷ ಸೈದ್ಧಾಂತಿಕವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗೆ ವಿರುದ್ಧವಾಗಿರುವ ಪಕ್ಷ. ಆರ್‍ಎಸ್‍ಎಸ್‍ನ ಮೋಹನ್ ಭಾಗವತ ಅವರು ಬಹಿರಂಗವಾಗಿಯೇ ಮೀಸಲಾತಿ ವಿರೋಧಿಸಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ದಿವಂಗತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ಹುಟ್ಟಿನಿಂದಲೇ ಮೀಸಲಾತಿ ವಿರೋಧಿಯಾದ ಬಿಜೆಪಿ ಈಗ ರಾಜಕೀಯ ಅನಿವಾರ್ಯತೆಗೆ ಸಿಕ್ಕಿ ಮೀಸಲಾತಿಯನ್ನು ಒಪ್ಪಿಕೊಂಡಿದೆ ಅಷ್ಟೆ. ನಮ್ಮದು ಬದ್ಧತೆ, ಬಿಜೆಪಿಯದ್ದು ಆತ್ಮವಂಚನೆಯ ನಾಟಕ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಶೇಕಡಾ 15ರಷ್ಟು ಸೀಟುಗಳನ್ನು ಅಖಿಲಭಾರತ ಕೋಟಾಕ್ಕಾಗಿ ಕಿತ್ತುಕೊಂಡಿರುವುದೇ ಮಹಾದ್ರೋಹ. ಈ ನಿರ್ಧಾರವನ್ನು ಕೈಗೊಂಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ನಮ್ಮ ಭೂಮಿ, ನಮ್ಮವರ ತೆರಿಗೆ ಹಣದಿಂದ ನೀಡಿರುವ ವಿನಾಯಿತಿ-ರಿಯಾಯಿತಿಯಿಂದ ನಿರ್ಮಾಣಗೊಂಡ ವೈದ್ಯಕೀಯ ಕಾಲೇಜುಗಳ ಸೀಟನ್ನು ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಯಾಕೆ ಉಡುಗೊರೆಯಾಗಿ ನೀಡಬೇಕು? ಬಿಜೆಪಿ ನಾಯಕರು ಉತ್ತರಿಸಬೇಕಾಗುತ್ತದೆ ಎಂದರು.

    ಅಖಿಲಭಾರತ ಕೋಟಾಕ್ಕಾಗಿ ರಾಜ್ಯದ ಮೆಡಿಕಲ್ ಕಾಲೇಜುಗಳ ಸೀಟುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದನ್ನು ನಾನು ಮುಖ್ಯಮಂತ್ರಿಯಾಗಿರುವಾಗಲೇ ವಿರೋಧಿಸಿದ್ದೆ. ತಮಿಳುನಾಡು ಸರ್ಕಾರ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ. ಅದರ ಮುಂದಿನ ವಿಚಾರಣೆ ಆಗಸ್ಟ್ 3ಕ್ಕೆ ಇದೆ. ನ್ಯಾಯಾಲಯದ ತೀರ್ಪಿನಿಂದ ಮುಖ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಅಖಿಲಭಾರತ ಕೋಟಾದಡಿಯಲ್ಲಿಯೂ ಒಬಿಸಿಗಳಿಗೆ ಶೇಕಡಾ 27ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಹಿಂದುಳಿದ ಜಾತಿಯ ಬಗ್ಗೆ ಪ್ರಧಾನಿಗಳ ಈ ಕಾಳಜಿಯ ನಾಟಕಕ್ಕೆ ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯೂ ಕಾರಣವಾಗಿರಬಹುದು. ಉಳಿದಂತೆ ಪ್ರಧಾನಿಯವರ ಈ ಘೋಷಣೆಯಲ್ಲಿ ಯಾವುದೇ ಬದ್ಧತೆ ಇಲ್ಲ ಎಂದು ಟೀಕೆ ವ್ಯಕ್ತಪಡಿಸಿದರು.

  • ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ: ಡಾ.ಗುರುರಾಜ ಕರ್ಜಗಿ

    ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ: ಡಾ.ಗುರುರಾಜ ಕರ್ಜಗಿ

    ಬೆಂಗಳೂರು: ಪ್ರೀತಿಯಿಂದ ಕನ್ನಡ ಕಲಿಸುವ ಕೆಲಸವಾಗಬೇಕು ಹೊರತು ಸರ್ಕಾರದ ಆದೇಶಗಳು, ಒತ್ತಾಯಗಳಿಂದ ಕನ್ನಡ ಕಲಿಸುವ ಕೆಲಸ ಅಸಾಧ್ಯ. ಜನರ ಹೃದಯದಲ್ಲಿ ಕನ್ನಡ ಭಾಷೆ ಕಲಿಯುವ ಇಚ್ಛೆ ಮೂಡಬೇಕು ಎಂದು ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟಿದ್ದಾರೆ.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಜಾಗೃತಿ ಸಮಿತಿಯ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಬೆಂಗಳೂರಿನ ನಹಾದೇವ ದೇಸಾಯಿ ಸಭಾಂಗಣದಲ್ಲಿ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಗುರುರಾಜ ಕರ್ಜಗಿ, ಕನ್ನಡದ ಜಾತ್ರೆಗಳು, ಉತ್ಸವಗಳು, ಕಾರ್ಯಕ್ರಮಗಳ ಕನ್ನಡದ ತೋರಣಗಳಂತೆ ಕಾಣುತ್ತವೆ. ಕನ್ನಡಕ್ಕೆ ತೋರಣದ ಜೊತೆ ಹೂರಣವೂ ಬೇಕು. ಹೀಗಾಗಿ ಕನ್ನಡ ಭಾಷೆಯ ಹೂರಣದ ಕೆಲಸವಾಗಬೇಕು ಎಂದು ತಿಳಿಸಿದರು.

    ಕನ್ನಡವನ್ನು ದೈಹಿಕವಾಗಿ, ಭಾವನಾತ್ಮಕವಾಗಿ, ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಬೆಳೆಸುವ ಕೆಲಸವಾಗಬೇಕು. ಸಾಹಿತಿಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. ಹೀಗೆ ರಚಿತಗೊಂಡ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವು ಆಗಬೇಕು. ಜೀವನ ಮಾರ್ಗಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಲು ಮುಂದಾಗುತ್ತಾರೆ. ಕನ್ನಡದಿಂದಲೂ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬುದು ಪೋಷಕರಿಗೆ ಅರ್ಥವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೊಂದು ಕನ್ನಡ ಮಾಧ್ಯಮ ಮಾದರಿ ಶಾಲೆಗಳನ್ನು ತೆರೆದು ಅಲ್ಲಿನ ಮಕ್ಕಳು ತಾಂತ್ರಿಕ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಯಶಸ್ವಿಯಾಗುತ್ತಾರೆ ಎಂಬುದನ್ನು ಸಾಬೀತುಪಡಿಸಬೇಕು. ಆಗ ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಾರೆ. ಕನ್ನಡ ಜಾಗೃತಿ ಸಮಿತಿ ಸದಸ್ಯರು ತಮ್ಮ ಊರುಗಳಲ್ಲಿ ವಾರಕ್ಕೊಂದು ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಜನಸಾಮಾನ್ಯರಿಗೆ ಕನ್ನಡ ಭಾಷೆಯನ್ನು ತಲುಪಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ

    ಸಂಸ್ಕøತಿ ಚಿಂತಕ ಸುಚೇಂದ್ರ ಪ್ರಸಾದ್ ಮಾತನಾಡಿ, ಮನೋ ವಿಕೃತಿಗಳನ್ನು ತೊಡೆಯದೆ ಜಾಗೃತಿ ಆಗಲು ಸಾಧ್ಯವಿಲ್ಲ. ನಮ್ಮ ಭಾಷೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಪ್ರಾಧಿಕಾರ, ಜಾಗೃತಿ ಸಮಿತಿಗಳು ರಚನೆಗೊಂಡಲೇ ಕನ್ನಡಿಗರು ಜಾಗೃತಗೊಳ್ಳಬೇಕಿತ್ತು. ಇದಾಗದಿರುವುದು ದುರದೃಷ್ಟಕರ. ಭಾಷೆಯ ಬದ್ಧತೆಯ ಕೆಲಸಗಳನ್ನು ಮರೆತು ಅಧಿಕಾರದ ಗಾದಿಗಾಗಿ ತಾ ಮುಂದು ನಾ ಮುಂದು ಎಂದು ಮುಗಿ ಬೀಳುವಲ್ಲೇ ಹೆಚ್ಚಿನ ಮಂದಿ ನಿರತರಾಗಿರುವುದು ಬೇಸರದ ಸಂಗತಿ ಎಂದು ನುಡಿದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಮಾತನಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡದ ಕಾವಲುಪಡೆಯಂತೆ ಕೆಲಸ ಮಾಡಬೇಕು. ಸದಸ್ಯರು ತಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಆಶಯಗಳನ್ನು ಗುರುತಿಸಿಕೊಂಡು ಕನ್ನಡದ ಕೆಲಸಗಳನ್ನು ಮಾಡಬೇಕು. ಕನ್ನಡ ಕಾಯಕ ವರ್ಷದ ಶಪಥವನ್ನು ಈಡೀರಿಸುವ ನಿಟ್ಟಿನಲ್ಲಿ ಬಹಳ ಗಟ್ಟಿತನದಿಂದ ಕನ್ನಡದ ಕಾಯಕವನ್ನು ಮಾಡಬೇಕು ಎಂದು ಸೂಚಿಸಿದರು.

    ಕಾರ್ಯಕ್ರಮಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.

  • ಬೊಮ್ಮಾಯಿ ಸ್ವತಂತ್ರವಾಗಿ ಆಡಳಿತ ನಡೆಸೋದು ಸಾಧ್ಯನಾ?: ಸಿದ್ದರಾಮಯ್ಯ

    ಬೊಮ್ಮಾಯಿ ಸ್ವತಂತ್ರವಾಗಿ ಆಡಳಿತ ನಡೆಸೋದು ಸಾಧ್ಯನಾ?: ಸಿದ್ದರಾಮಯ್ಯ

    – ಸಿಎಂ ಬದಲಾದ ತಕ್ಷಣ ಬಜೆಪಿ ಐಡಿಯಾಲಜಿ ಬದಲಾಗುತ್ತಾ?

    ಮೈಸೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯನಾ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಹೆಸರು ಸೂಚಿಸಿರುವುದು ಯಡಿಯೂರಪ್ಪ. ಈ ಕಾರಣದಿಂದ ಸರ್ಕಾರದ ಮೇಲೆ ಬಿಎಸ್‍ವೈ ಸಹಜವಾಗಿಯೇ ಹಿಡಿತ ಹೊಂದಿರುತ್ತಾರೆ. ಹೀಗಿರುವಾಗ ಬೊಮ್ಮಾಯಿ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಕ್ಷಣದಲ್ಲೇ ನಾನು ಬೊಮ್ಮಯಿ ಬಗ್ಗೆ ಏನೂ ಹೇಳುವುದಿಲ್ಲ. ಅವರ ಆಡಳಿತವನ್ನು ಕಾದು ನೋಡೋಣ. ಈಗಲೇ ಅವರನ್ನು ಸುಮ್ಮನೆ ದೂರುವುದಿಲ್ಲ ಎಂದರು.

    ಬೊಮ್ಮಾಯಿ ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಎಸ್.ಆರ್ ಬೊಮ್ಮಾಯಿಯವರ ಗುಣ ಮಗನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಮಗ ಕುಡುಕನಾದ. ಗಾಂಧಿ ಮಗ ಗಾಂಧಿಯಾಗಲಿಲ್ಲ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: 2023ಕ್ಕೆ ವಿಜಯೇಂದ್ರರನ್ನ ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಆನಂದ್ ಆಸ್ನೋಟಿಕರ್

    ಮುಖ್ಯಮಂತ್ರಿ ಬದಲಾದರೆ ಎಲ್ಲವೂ ಬದಲಾಗುತ್ತಾ? ಯಡಿಯೂರಪ್ಪ ಇಳಿದಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ? ಕೋಮುವಾದ ಹೊರಟುಹೋಗುತ್ತಾ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

    ಹಿಂದುತ್ವದ ಅವರ ಅಜೆಂಡಾ ಬದಲಾಗುತ್ತಾ? ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಹಾಗಾಗಿ ಬಿಜೆಪಿ ಸರ್ಕಾರದಿಂದ ಯಾವುದೇ ನಿರೀಕ್ಷೆ ಮಾಡುವುದಿಲ್ಲ. ಆದರೆ ಬೊಮ್ಮಾಯಿ ಆರ್.ಎಸ್.ಎಸ್ ನಿಂದ ಬಂದವರಲ್ಲ ಅವರಿಗೆ ಒಂದು ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದು ಅಭಿಪ್ರಾಯಪಟ್ಟರು.

    ಸೂಪರ್ ಸಿಎಂ ಎಂಬ ಆರೋಪದಿಂದ ಮುಕ್ತನಾದೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂದ್ರೆ ಸೂಪರ್ ಸಿಎಂ ಆಗಿದ್ದೆ ಎಂಬುದು ಅವರ ಮಾತಿನ ಅರ್ಥನಾ? ಅದನ್ನು ಒಪ್ಪಿಕೊಂಡಂತೆ ಅಲ್ವ? ಇನ್ನೂ ಮೂರು ತಿಂಗಳು ಏನು ಮಾತನಾಡಲ್ಲ ಮುಂದೆ ನೋಡೋಣ ಎಂದರು.

  • ಹಿಂದೂ ಧಾರ್ಮಿಕ ದತ್ತಿ ಇಲಾಖೆ, ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ

    ಹಿಂದೂ ಧಾರ್ಮಿಕ ದತ್ತಿ ಇಲಾಖೆ, ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ

    – ಸರ್ಕಾರದಿಂದ ಅಧಿಕೃತ ಆದೇಶ

    ಮಂಗಳೂರು: ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಕುರಿತು ಎದ್ದಿರುವ ಚರ್ಚೆಯ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ.

    ರಾಜ್ಯದ 757 ಪ್ರಾರ್ಥನಾ ಕೇಂದ್ರಗಳಿಗೆ ಹಾಗೂ 111 ವರ್ಷಾಸನ ಪಡೆಯುತ್ತಿರುವ ಪ್ರಾರ್ಥನಾ ಕೇಂದ್ರಗಳಿಗೆ ಸರ್ಕಾರ ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನೀಡುತ್ತಿದ್ದ ಅನುದಾನ ತಡೆ ಹಿಡಿದಿದ್ದು, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸೂಚನೆಯಂತೆ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ಕೊಡುವ ಹಕ್ಕಿದೆ: ಸಚಿವ ಕೋಟ

    ಇನಾಂ ರದ್ದತಿ ಕಾಯ್ದೆ 1977 ರ ಪರಿಹಾರಾರ್ಥವಾಗಿ ನೀಡುತ್ತಿರುವ ತಸ್ತಿಕ್ ಮತ್ತು ವರ್ಷಾಸನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಸ್ಥಾನಗಳಿಂದ ನೀಡುವ ಬದಲು, ಇನ್ನು ಮುಂದೆ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಮೂಲಕ ತಸ್ತಿಕ್ ಮತ್ತು ವರ್ಷಾಸನ ನೀಡಲು ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವರದಿಯನ್ನಾಧರಿಸಿ ಸರ್ಕಾರ ಆದೇಶ ನೀಡಿದೆ.

  • ರಾಷ್ಟ್ರ ಮೊದಲು ಎನ್ನುವ ಮಂತ್ರದೊಂದಿಗೆ ಮುನ್ನಡೆಯಬೇಕು: ಮೋದಿ

    ರಾಷ್ಟ್ರ ಮೊದಲು ಎನ್ನುವ ಮಂತ್ರದೊಂದಿಗೆ ಮುನ್ನಡೆಯಬೇಕು: ಮೋದಿ

    ನವದೆಹಲಿ: ರಾಷ್ಟ್ರ ಯಾವಾಗಲೂ ಮೊದಲು ಎನ್ನುವ ಮಂತ್ರದೊಂದಿಗೆ ದೇಶವು ಮುನ್ನಡೆಯಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕಿ ಬಾತ್‍ನಲ್ಲಿ ಹೇಳಿದ್ದಾರೆ.

    ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಭಾರತ ಚೋಡೊ ಆಂದೋಲನ(ಭಾರತ ಬಿಟ್ಟು ತೊಲಗಿ) ಆರಂಭಿಸಿದ್ದರು. ಅದೇ ರೀತಿಯ ವಿಭಿನ್ನವಾದ ಚಳವಳಿ ಈಗಿನ ಸಂದರ್ಭದಲ್ಲಿ ಅಗತ್ಯವಿದೆ. ಪ್ರತಿಯೊಬ್ಬ ಭಾರತೀಯ ಭಾರತ ಜೋಡೊ ಆಂದೋಲನ (ಭಾರತ ಜೋಡಿಸಿ ಆಂದೋಲನ) ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಸಂಪೂರ್ಣ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಈ ಆಂದೋಲನವು ದೇಶವನ್ನು ಒಗ್ಗೂಡಿಸಲು ಪೂರಕವಾಗುವಂತೆ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ರಾಷ್ಟ್ರ ಯಾವಾಗಲೂ ಮೊದಲು ಎನ್ನುವ ಮಂತ್ರದೊಂದಿಗೆ ದೇಶವು ಮುನ್ನಡೆಯಬೇಕು ಎಂದಿದ್ದಾರೆ.

     

    ಮುಂದಿನ ಆಗಸ್ಟ್ 15ರಂದು ಭಾರತದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಲಿದೆ. ಈ ಅಮೃತ ಮಹೋತ್ಸವವನ್ನು ದೇಶದಾದ್ಯಂತ ಸಂಭ್ರಮದಿದಂದ ಆಚರಿಸಲಾಗುವುದು. ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ರಾಷ್ಟ್ರಗೀತೆಯನ್ನು ಗರಿಷ್ಠ ಸಂಖ್ಯೆಯಲ್ಲಿ ಭಾರತೀಯರು ಹಾಡುವಂತೆ ಸಂಸ್ಕøತಿ ಸಚಿವಾಲಯ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿಯೇ rashtragan.in ವೆಬ್‍ಸೈಟ್ ಆರಂಭಿಸಲಾಗಿದೆ. ಈ ವೆಬ್‍ಸೈಟ್ ನೆರವಿನಿಂದ ರಾಷ್ಟ್ರೀಯ ಗೀತೆಯನ್ನು ಹಾಡುವ ಮೂಲಕ ದಾಖಲಿಸಬಹುದು ಎಂದು ವಿವರಿಸಿದ್ದಾರೆ. ಜುಲೈ 26ರಂದು ಕಾರ್ಗಿಲ್ ವಿಜಯ ದಿನ ಆಚರಿಸಲಾಗುತ್ತಿದೆ. 1999ರಲ್ಲಿ ಹುತಾತ್ಮರಾದ ಯೋಧರಿಗೆ ದೇಶದ ಜನತೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದಿದ್ದಾರೆ.

  • ಯಾರ ನಾಯಕತ್ವವೇ ಆಗಲಿ, ಐದು ವರ್ಷ ಸರ್ಕಾರ ಇರಲಿ: ಬಾಲಕೃಷ್ಣ

    ಯಾರ ನಾಯಕತ್ವವೇ ಆಗಲಿ, ಐದು ವರ್ಷ ಸರ್ಕಾರ ಇರಲಿ: ಬಾಲಕೃಷ್ಣ

    ಹಾಸನ: ಐದು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆದರೂ ನಮಗೆ ತೊಂದರೆ ಇಲ್ಲ. ಆದರೆ ಸರ್ಕಾರ ಐದು ವರ್ಷ ಪೂರೈಸಲಿ ಎಂದು ಹಾಸನ ಜಿಲ್ಲೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದಾರೆ.

    ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಬಾಲಕೃಷ್ಣ, ಮುಖ್ಯಮಂತ್ರಿ ಬದಲಾವಣೆ ವಿಚಾರ ನಮ್ಮ ಪಕ್ಷದ ಚೌಕಟ್ಟಿನ ವಿಚಾರವಲ್ಲ. ಹೀಗಾಗಿ ಅದರ ಬಗ್ಗೆ ಮಾತನಾಡಲ್ಲ. ಆದರೆ ಸರ್ಕಾರ ಐದು ವರ್ಷ ಪೂರೈಸಲಿ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಿ. ಕೊರೊನಾದಿಂದ ಅಭಿವೃದ್ಧಿ ಕುಂಠಿತವಾಗಿದೆ. ಇನ್ನೇನು ಕೊರೊನ ಎರಡನೇ ಅಲೆ ಮುಗಿಯುತ್ತಾ ಬಂದಿದೆ. ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಹತ್ತು ಕೋಟಿ ಅನುದಾನದಲ್ಲಿ ಆರು ಕೋಟಿ ಅನುದಾನ ನೀವು ತೆಗೆದುಕೊಂಡರೆ, ನಾಲ್ಕು ಕೋಟಿಯಷ್ಟನ್ನಾದರು ನಮಗೆ ಕೊಡಿ. ಇದರಲ್ಲಿ ತಾರತಮ್ಯ ಮಾಡಬೇಡಿ ಎಂದರು. ಇದನ್ನೂ ಓದಿ: ಸಿಎಂ ರೇಸ್‍ನಲ್ಲಿ ಸ್ಲೈಡಿಂಗ್ ಆಗಲು ಹೋಗಲ್ಲ: ಆರ್.ಅಶೋಕ್

    ಇಂದಿನ ವಿದ್ಯಮಾನ, ಚರ್ಚೆ ಒಳಿತಾಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈಗ ಅವರ ಪಕ್ಷದಲ್ಲೇ ಕೆಸರೆರೆಚಾಟ ಆಗುತ್ತಿದೆ. ಯಡಿಯೂರಪ್ಪ ಅವರು ಹಿರಿಯರಿದ್ದಾರೆ, ಅದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಅವರ ಪಕ್ಷದಲ್ಲೇ ಪರ ವಿರೋಧ ಮಾತನಾಡುತ್ತಿದ್ದಾರೆ. ಆದರೆ ನಾವು ಅವರ ಪಕ್ಷದ ವಿಚಾರದ ಬಗ್ಗೆ ಮಾತನಾಡಲ್ಲ. ಐದು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆದರೂ ನಮಗೆ ತೊಂದರೆ ಇಲ್ಲ. ಆದರೆ ಯಾರೇ ಮುಖ್ಯಮಂತ್ರಿ ಆದರೂ ಒಳ್ಳೆಯ ಆಡಳಿತ ನೀಡಲಿ ಎಂಬುದಷ್ಟೇ ನಮ್ಮ ಆಶಯ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

  • ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಿಧನ

    ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಿಧನ

    ಕೊಪ್ಪಳ: ಜಿಲ್ಲೆಯ ಹಿರಿಯ ಹೋರಾಟಗಾರ, ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಿಠ್ಠಪ್ಪ ಗೋರಂಟ್ಲಿ(78) ಅವರು ಇಂದು ರಾತ್ರಿ ಭಾಗ್ಯನಗರದ ಅವರ ನಿವಾಸದಲ್ಲಿ ಹೃದಯಾಘತದಿಂದ ಮೃತಪಟ್ಟಿದ್ದಾರೆ.

    ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಹಲವು ವಿಷಯಗಳ ಕುರಿತು, ಹಲವು ವಿಚಾರಗಳ ಕುರಿತು ನೇರ ಹಾಗೂ ನಿಷ್ಠೂರತೆಯಿಂದ ಬರವಣಿಗೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಜಿಲ್ಲಾ ಹೋರಾಟದ ವಿಚಾರ, ತುಂಗಭದ್ರಾ ಜಲಾಶಯದ ಹೂಳಿನ ವಿಚಾರ, ಕೈಗಾರಿಕೆಗಳ ಕಾರ್ಮಿಕರ ಶೋಷಣೆಯ ವಿಚಾರ ಸೇರಿದಂತೆ ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು.

    ಸುದೀರ್ಘ ಹೋರಾಟದ ಜೀವನವೇ ಅವರದ್ದಾಗಿತ್ತು. ವಿವಿಧ ಪತ್ರಿಕೆಗಳಲ್ಲಿಯೂ ಪತ್ರಕರ್ತ, ಅಂಕಣಕಾರರಾಗಿ ಲೇಖನಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ರಾಜ್ಯ ಮಟ್ಟದಲ್ಲಿ ಇವರ ದೊಡ್ಡ ಸ್ನೇಹ ಬಳಗವನ್ನು ಹೊಂದಿದವರಾಗಿದ್ದರು. ಇದನ್ನೂ ಓದಿ:ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ಬಡತನದಲ್ಲಿಯೇ ಜೀವನ ಸವೆಸಿದ್ದ ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿ ಅವರು ನೇಕಾರಿಕೆಯನ್ನು ಮಾಡಿದ್ದರು. ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿಯೂ ಧ್ವನಿ ಎತ್ತಿ ಸರ್ಕಾರ ಇತ್ತ ತಿರುಗಿ ನೋಡುವಂತೆ ಮಾಡಿದ್ದರು. ಇವರು 4ನೇ ತರಗತಿ ಶಿಕ್ಷಣ ಪಡೆದರೂ 20ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದರು. ಹಲವು ಕವನ ಸಂಕಲನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಹೆಸರು ಮಾಡಿದ್ದರು. ಇವರ ಸಮಗ್ರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ನೂರಾರು ಸಂಘ ಸಂಸ್ಥೆಗಳು ಇವರ ಜೀವನ ಸಾಧನೆಗೆ, ಜನ ಸೇವೆಗೆ ಸನ್ಮಾನಿಸಿ ಗೌರವಿಸಿದ್ದವು.

    78ರ ಇಳಿ ವಯಸ್ಸಿನಲ್ಲೂ ಯುವ ಉತ್ಸಾಹಿಗಳಂತೆ ನಗು ನಗುತ್ತಲೇ ಎಲ್ಲರೊಂದಿಗೆ ಬೆರೆತು ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದರು. ಸತ್ಸಂಗ, ಆಧ್ಯಾತ್ಮ, ವೈಚಾರಿಕತೆ ಇವರಲ್ಲಿ ಹಾಸು ಹೊಕ್ಕಾಗಿತ್ತು. ಇವರು ರಾಜಕೀಯ ರಂಗದಲ್ಲೂ ತಮ್ಮದೇ ಚಾಪು ಮೂಡಿಸಿದ್ದರು. ಈ ಹಿಂದೆ ತಾಪಂ ಸದಸ್ಯರಾಗಿ, ಮಂಡಲ ಪ್ರಧಾನರಾಗಿ ಸೇವೆ ಮಾಡಿದ್ದರು. ಇಂದು ರಾತ್ರಿ ಆರೋಗ್ಯದಲ್ಲಿ ದಿಡೀರ್ ಏರುಪೇರಾಗಿ ಮೃತಪಟ್ಟಿದ್ದಾರೆ. ಇವರ ಅಗಲಿಕೆಯು ಇಡೀ ಸಾಹಿತ್ಯ ವಲಯಕ್ಕೆ, ಮಾಧ್ಯಮ ವಲಯಕ್ಕೆ, ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ವಿಠ್ಠಪ್ಪ ಗೋರಂಟ್ಲಿ ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಕೊಪ್ಪಳ ಮೀಡಿಯಾ ಕ್ಲಬ್ ಸೇರಿದಂತೆ ಸಾಹಿತ್ಯ ಬಳಗವು ಕಂಬನಿ ಮಿಡಿದಿದ್ದು, ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

  • ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ಡಿಸಿಎಂ

    ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ಡಿಸಿಎಂ

    -ಅನ್ ಅಕಾಡೆಮಿ ಜೊತೆ ಸರ್ಕಾರದ ಒಪ್ಪಂದ

    ಬೆಂಗಳೂರು: ರಾಷ್ಟ್ರೀಯ ಮಟ್ಟದ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡುವುದಕ್ಕೆ ರಾಜ್ಯ ಸರ್ಕಾರವು ದೇಶದ ಹೆಸರಾಂತ ಆನ್‍ಲೈನ್ ಕಲಿಕಾ ವೇದಿಕೆ ‘ಅನ್ ಅಕಾಡೆಮಿ’ ಜೊತೆ ಒಪ್ಪಂದ ಮಾಡಿಕೊಂಡಿದೆ.

    ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರ ಸಮಕ್ಷಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಪ್ರಭಾಕರ್ ಹಾಗೂ ಅನ್ ಅಕಾಡೆಮಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿವೇಕ್ ಸಿನ್ಹಾ ಒಪ್ಪಂದಕ್ಕೆ ಸಹಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ಈ ಒಪ್ಪಂದವು ಮೂರು ವರ್ಷ, ಅಂದರೆ 2021ರಿಂದ 2024ರವರೆಗೆ ಜಾರಿಯಲ್ಲಿರುತ್ತದೆ. ಈ ಮೂರು ವರ್ಷಗಳ ಅವಧಿಯಲ್ಲಿ ಪ್ರತೀ ವರ್ಷ 1,500 ವಿದ್ಯಾರ್ಥಿಗಳಂತೆ ಒಟ್ಟು 4,500 ವಿದ್ಯಾರ್ಥಿಗಳಿಗೆ ಅನ್ ಅಕಾಡೆಮಿ ಉಚಿತ ತರಬೇತಿ ನೀಡಲಿದೆ. ಪ್ರತಿ 6 ತಿಂಗಳಿಗೊಮ್ಮೆ ಆನ್‍ಲೈನ್ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಆಯ್ಕೆಯಾಗುವ 750 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಹಾಗೂ ಆ ವಿದ್ಯಾರ್ಥಿಗಳನ್ನು ಯಾವುದೇ ಶುಲ್ಕವಿಲ್ಲದೆ ಅನ್ ಅಕಾಡೆಮಿ ಚಂದಾದಾರರನ್ನಾಗಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಾನು ಸನ್ಯಾಸತ್ವ ಪಡೆದಿಲ್ಲ: ಚೈತ್ರಾ ಕೊಟ್ಟೂರು ಸ್ಪಷ್ಟನೆ

    ಸರ್ಕಾರಿ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಪಾಲಿಟೆಕ್ನಿಕ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷ ಅಥವಾ ಫ್ರೀ ಫೈನಲ್ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು ಆಗಿದ್ದು, ಪ್ರಸ್ತುತ ಕೇಂದ್ರ ಆಡಳಿತ ಸೇವೆ, ಬ್ಯಾಂಕಿಂಗ್, ಗ್ರೂಪ್ ಸಿ ಸೇರಿದಂತೆ ವಿವಿಧ ವಲಯಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿಗೆ ಪ್ರತಿ ವರ್ಷ ಕೇಂದ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳುತ್ತಿದೆ. ಆದರೆ ಈ ಆಯ್ಕೆಯಲ್ಲಿ ಕನ್ನಡದ ವಿದ್ಯಾರ್ಥಿಗಳು ಹಿಂದೆ ಬೀಳುತ್ತಿದ್ದಾರೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಅನ್ ಅಕಾಡೆಮಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಕೋಚಿಂಗ್ ಮೂಲಕ ನಮ್ಮ ವಿದ್ಯಾರ್ಥಿಗಳ ಪರೀಕ್ಷಾ ಸಾಮಥ್ರ್ಯ ಹೆಚ್ಚಿಸಲಾಗುವುದು. ಉತ್ತಮ ಫಲಿತಾಂಶ ಸಾಧಿಸಲಾಗುವುದು ಎಂದು ಅವರು ವಿವರಿಸಿದರು.

    ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿ ಇನ್ನು ಕೆಲ ಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

  • ಚುನಾವಣೆ ಬಗ್ಗೆ ಭವಿಷ್ಯ ನುಡಿಯಲು ಕೊರವಂಜಿಗಳಿದ್ದಾರೆ: ರೇವಣ್ಣ ವ್ಯಂಗ್ಯ

    ಚುನಾವಣೆ ಬಗ್ಗೆ ಭವಿಷ್ಯ ನುಡಿಯಲು ಕೊರವಂಜಿಗಳಿದ್ದಾರೆ: ರೇವಣ್ಣ ವ್ಯಂಗ್ಯ

    ಹಾಸನ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂಬ ಭವಿಷ್ಯ ನುಡಿಯಲು ನಮ್ಮಬಳಿ  ಕೊರವಂಜಿಗಳಿದ್ದಾರೆ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್‍ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: 1.25 ಲಕ್ಷಕ್ಕೆ ಮಾರಾಟವಾದ ಎರಡು ಬಂಡೂರು ಟಗರು

    ಹಾಸನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದೇ ವೇಳೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಡಿಕೆಶಿ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಚುನಾವಣೆ ಕುರಿತಾಗಿ ಭವಿಷ್ಯ ಹೇಳಲು ನಮ್ಮಬಳಿ ಮೂವರು ಕೊರವಂಜಿಗಳಿದ್ದಾರೆ. ದೊಡ್ಡವರ ಕಥೆ ನಾನೇನು ಹೇಳಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಂದ್ರಜಿತ್‍ಗೆ ಬೆದರಿಕೆ ಕರೆ – ದರ್ಶನ್ ಹಿಂಬಾಲಕರ ವಿರುದ್ಧ ದೂರು

    ಸರ್ಕಾರ ಕೂಡಲೇ ಕೊರೊನಾ ಮೂರನೇ ಅಲೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಹಾಸನ ಜಿಲ್ಲಾಧಿಕಾರಿ ಈಗಾಗಲೇ ಮೂರನೇ ಅಲೆಗೆ ಏನುಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಸರ್ಕಾರ ಇದುವರೆಗೂ ಏನನ್ನೂ ಮಾಡಿಲ್ಲ. ಮೂರನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಸರ್ಕಾರ ಕೂಡಲೇ ಎಲ್ಲಾ ಆಸ್ಪತ್ರೆಗಳಲ್ಲೂ ಕನಿಷ್ಟ ನೂರು ಬೆಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳು ಕಳುಹಿಸಿಕೊಟ್ಟಿರುವ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

  • ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಬೆಂಗಳೂರು: ರಾಜ್ಯದ ಸಾರಿಗೆ ನೌಕರರಿಗೆ ಕೋವಿಡ್ ಸೋಂಕು ತಗುಲಿರುವುದು ಹಾಗೂ ಅವರು ಮೃತಪಟ್ಟಿರುವುದರ ಬಗ್ಗೆ ಸಾರಿಗೆ ಇಲಾಖೆಯ ಬಳಿ ಮಾಹಿತಿಯೇ ಇಲ್ಲದಿರುವುದು ಸರ್ಕಾರದ ಬೇಜಾವಾಬ್ದಾರಿತನವನ್ನು ತೋರಿಸುತ್ತದೆ ಎಂದು ಎಎಪಿಯ ರಾಜ್ಯ ಯುವಘಟಕದ ಅಧ್ಯಕ್ಷರಾದ ಮುಕುಂದ್ ಗೌಡರವರು ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಕುಂದ್ ಗೌಡರವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸರ್ಕಾರವು ಪ್ರಮುಖ ಬೇಡಿಕೆಯನ್ನೇ ಈಡೇರಿಸದಿದ್ದರೂ, ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಮರಳಿದ್ದರು. ಮೊದಲಿನಿಂದಲೂ ನೌಕರರನ್ನು ತಾತ್ಸಾರದಿಂದ ನೋಡುತ್ತಿದ ಸಾರಿಗೆ ಇಲಾಖೆಯು ಮುಷ್ಕರದ ನಂತರ ಅವರನ್ನು ಶತ್ರುಗಳಂತೆ ಕಾಣುತ್ತಿದೆ. ಕೋವಿಡ್‍ಗೆ ಬಲಿಯಾದ ನೌಕರರಿಗೆ ಪರಿಹಾರ ನೀಡುವುದು ಹಾಗಿರಲಿ, ಎಷ್ಟು ನೌಕರರಿಗೆ ಸೋಂಕು ತಗುಲಿದೆ ಎಂಬ ಅಂಕಿಅಂಶ ಕೂಡ ಸರ್ಕಾರದ ಬಳಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ 

    ಸಾರಿಕೆ ನೌಕರರು ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವುದು, ಮೃತಪಟ್ಟಿರುವುದು ಹಾಗೂ ಪರಿಹಾರ ವಿತರಣೆ ಮಾಹಿತಿ ತಿಳಿಯಲು ನಾವು ಆರ್‍ಟಿಐ ಅರ್ಜಿ ಸಲ್ಲಿಸಿದ್ದೆವು. ನಾವು ಕೇಳಿದ ಮೂರು ಪ್ರಶ್ನೆಗಳಿಗೂ ಇಲಾಖೆಯು ತಮ್ಮ ಬಳಿ ಮಾಹಿತಿ ಇಲ್ಲವೆಂದು ಉತ್ತರ ನೀಡಿದೆ. ಅಧಿಕಾರಿಗಳ ಮಾಹಿತಿ ಹೊಂದಿರುವ ಸರ್ಕಾರವು ನೌಕರರನ್ನು ಮಾತ್ರ ಇಷ್ಟು ಕೇವಲವಾಗಿ ನೋಡುತ್ತಿರುವುದು ದುರಂತ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಇದು ಎತ್ತಿ ತೋರಿಸುತ್ತದೆ. ಕಷ್ಟಪಟ್ಟು ದುಡಿಯುವ ಕಾರ್ಮಿಕರನ್ನು ಹೀನಾಯವಾಗಿ ಕಾಣುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕಾರ್ಮಿಕರು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ ಎಂಬುದನ್ನು ಸಾರಿಗೆ ಸಚಿವರಾದ ಲಕ್ಷಣ್ ಸವದಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ಸಿಬ್ಬಂದಿ ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದು ಭಾಷಣ ಬಿಗಿಯುವ ಸಾರಿಗೆ ಸಚಿವರು ನೌಕರರ ಹಿತಕಾಪಾಡಲು ಏನು ಮಾಡಿದ್ದಾರೆ? ನೌಕರರಿಗೆ ಉಚಿತ ಸ್ಯಾನಿಟೈಸರ್ ನೀಡಲೂ ಅವರಿಗೆ ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್‍ನಿಂದ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಲು ಯಾವ ಕ್ರಮವನ್ನೂ ಅವರು ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮೃತಪಟ್ಟ ಪ್ರತಿಯೊಬ್ಬ ನೌಕರರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ಎಷ್ಟು ಸಿಬ್ಬಂದಿಗೆ ಸೋಂಕು ತಗುಲಿತ್ತು, ಎಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ, ಎಷ್ಟು ಮಂದಿಗೆ ಪರಿಹಾರ ದೊರೆತಿದೆ ಎಂಬ ಅಂಶವನ್ನು ಶೀಘ್ರವೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.