Tag: government

  • ಆದೇಶಕ್ಕೆ ಕ್ಯಾರೇ ಎನ್ನದ ಎಸ್‍ಪಿ ಮೇಲೆ ಸಿಎಂ ಗರಂ

    ಆದೇಶಕ್ಕೆ ಕ್ಯಾರೇ ಎನ್ನದ ಎಸ್‍ಪಿ ಮೇಲೆ ಸಿಎಂ ಗರಂ

    ವಿಜಯಪುರ: ತಾವು ಮಾಡಿದ ಆದೇಶಕ್ಕೆ ಕಿಮ್ಮತ್ತು ನೀಡದ ಕಾರಣ ಸಿಎಂ ಇಂದು ಎಸ್‍ಪಿ ಮೇಲೆ ಗರಂ ಆದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಲಾಲಬಾಹ್ದೂರು ಶಾಸ್ತ್ರೀ ಜಲಾಶಯಕ್ಕೆ ಬಾಗೀನ ಅರ್ಪಣೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್‍ಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದರು. ಹೆಲಿಕಾಪ್ಟರ್ ನಿಂದ ಕೆಳಗೆ ಇಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಸಿಎಂಗೆ ಗೌರವ ವಂದನೆ ಕೊಡಲು ಸಿದ್ಧವಾಗಿದ್ದರು. ಇದನ್ನೂ ಓದಿ: ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲು ನಿಷೇಧ: ಬೊಮ್ಮಾಯಿ ಆದೇಶ

    ಇದನ್ನ ನೋಡುತ್ತಿದ್ದಂತೆ ವಿಜಯಪುರ ಎಸ್‍ಪಿ ಆನಂದ್ ಕುಮಾರ್ ಮೇಲೆ ಸಿಎಂ ಗರಂ ಆಗಿದ್ದಾರೆ. ಇದು ಸರಿಯಲ್ಲ, ಇದರ ಬಗ್ಗೆ ನಾನು ಕ್ಲಿಯರ್ ಆಗಿ ಸೂಚನೆ ನೀಡಿದ್ದೇನೆ. ಅದಾದ ಮೇಲೂ ಇದನ್ನ ಮಾಡೋದು ಸರಿಯಲ್ಲ. ನಿಮ್ಮ ಜ್ಯೂನಿಯರ್ಸ್‍ಗಳಿಗೆ ಹೇಳಬೇಕಿತ್ತು ಎಂದು ಎಸ್‍ಪಿ ಮೇಲೆ ಸಿಎಂ ಆಕ್ರೋಶ ಹೊರಹಾಕಿದ್ದಾರೆ.

  • ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ – ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್

    ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ – ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್

    ದಾವಣಗೆರೆ: ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ. ನಮ್ಮ ಸರ್ಕಾರ ನೆಲಮಟ್ಟಕ್ಕಿಳಿಯುತ್ತದೆ, ಜನರಿಗೆ ಅಗತ್ಯ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುತ್ತದೆ. ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಹೇಳಿಕೆಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, 2013-18ರಲ್ಲಿ ಸಿದ್ದರಾಮಯ್ಯ ಸಿಎಂ ಅಗಿದ್ದು ಬಿಜೆಪಿ ತಪ್ಪಿನಿಂದ, ಬಿಜೆಪಿ, ಬಿಎಸ್‍ಆರ್, ಕೆಜೆಪಿ, ಮೂರು ಗುಂಪಾಗಿತ್ತು. ನಮ್ಮ ತಪ್ಪಿನಿಂದ ಅವರು ಅಧಿಕಾರಕ್ಕೆ ಬಂದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ತೆರಳಿ ಮಂಡಿಯೂರಿ ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ರು. ಅಂದೂ ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗಿತ್ತು ಜೆಡಿಎಸ್, ಕಾಂಗ್ರೆಸ್ ಒಳಜಗಳದಲ್ಲಿ ಸಿಎಂ ಆಗೋ ಕನಸು ಕಾಣುತ್ತಿದ್ದರು. ಕಾಂಗ್ರೆಸ್, ಜೆಡಿಎಸ್ ಶಾಸಕರು ಬೇಸತ್ತು ರಾಜೀನಾಮೆ ನೀಡಿ ಬಿಜೆಪಿಗೆ ಬಂದುದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸರ್ಕಾರ ಟೇಕಾಫ್ ಆಗಿಲ್ಲ – ಶಾಸಕರಲ್ಲಿ ಅಸಮಾಧಾನ ಇರೋದು ನಿಜ: ಸತೀಶ್ ಜಾರಕಿಹೊಳಿ

    2 ವರ್ಷ ಸಿಎಂ ಆಗಿದ್ದ ಬಿಎಸ್‍ವೈ ಸ್ವಯಂ ಪ್ರೇರಿತರಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ರು, ನಂತರ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆ, ಸರ್ಕಾರ ಟೇಕಾಫ್ ಆಗಲು ವಿಮಾನವಲ್ಲ, ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು, ಇನ್ನೂ 18 ತಿಂಗಳು ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ಸಿನಲ್ಲಿ ಮೂರ್ನಾಲ್ಕು ಜನ ಸಿಎಂ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್ಸಿನಲ್ಲಿ ಎ ಯಿಂದ ಝಡ್ ವರೆಗೂ ಸಿಎಂ ಅಭ್ಯರ್ಥಿಗಳಿದ್ದಾರೆ. ಆದರೆ ಬಿಜೆಪಿಯಲ್ಲಿ ಒಗ್ಗಟ್ಟಾಗಿ ಒಬ್ಬ ಸಿಎಂ ಆಯ್ಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ನಮ್ಮ ಸರ್ಕಾರ ಬುಲೆಟ್ ಟ್ರೈನ್ ಇದ್ದಂಗೆ, ಅದೇ ರೀತಿ ಕೆಲಸ ಮಾಡುತ್ತಿದ್ದೇವೆ: ಶ್ರೀ ರಾಮುಲು

    ಆನಂದ್ ಸಿಂಗ್ ಖಾತೆ ಖ್ಯಾತೆ ಯಾವುದು ಇಲ್ಲ, ಆನಂದ್ ಸಿಂಗ್ ಬಗ್ಗೆ ಸಿಎಂ ಅವರೊಂದಿಗೆ ನಾನೂ ರಾಜೂಗೌಡ, ಶಂಕರ ಮುನೇನಕೊಪ್ಪ ಮಾತನಾಡಿದ್ದೇವೆ, ಸಿಎಂ ಅವರು ವರಿಷ್ಠರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರುತ್ತಾರೆ. ಸದ್ಯದಲ್ಲಿ ತೀರ್ಮಾನವಾಗುತ್ತದೆ. ಎಲ್ಲವೂ ಸರಿಯಾಗುತ್ತದೆ. ನಾನು ಸಚಿವ ಸ್ಥಾನದ ಬಗ್ಗೆ ಯಾವುದೇ ನಿರೀಕ್ಷೆ ಮಾಡುವುದಿಲ್ಲ ಎಂದರು.

  • ಇದು ಸಮಾಜದ ಸಭೆ ವಿನಯ್ ಕುಲಕರ್ಣಿ ವಿಷಯ ಬೇಡ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಇದು ಸಮಾಜದ ಸಭೆ ವಿನಯ್ ಕುಲಕರ್ಣಿ ವಿಷಯ ಬೇಡ: ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಳಗಾವಿ: ಇಂದು ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಅವರ ಬಿಡುಗಡೆ ಹಿನ್ನೆಲೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದ್ದಾರೆ.

    ಶನಿವಾರ ಬೆಳಗಾವಿಯಲ್ಲಿ ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2 ರಲ್ಲಿ ಮೀಸಲಾತಿ ನೀಡಲು ಸರ್ಕಾರ ಕೇಳಿರುವ ಸಮಯಾವಕಾಶದ ವೇಳೆ ಸರ್ಕಾರ ಗಮನ ಸೆಳೆಯಲು ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಸಮಾಜ ಸಭೆಯಲ್ಲಿ ವಿನಯ್ ಕುಲಕರ್ಣಿ ಕುರಿತು ಮಾತನಾಡುವುದು ಸೂಕ್ತವಲ್ಲ ಎಂದಿದ್ದಾರೆ.   ಇದನ್ನೂ ಓದಿ:ಜೈಲಿಗೆ ಬಂದು ಸಾಕಷ್ಟು ಓದುವುದನ್ನು ಕಲಿತೆ, ಇದು ನನ್ನ ಜೀವನದಲ್ಲಿ ಅತೀ ದೊಡ್ಡ ಬದಲಾವಣೆ: ವಿನಯ್ ಕುಲಕರ್ಣಿ

    ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2 ರಲ್ಲಿ ಮೀಸಲಾತಿ ನೀಡಲು ಸರ್ಕಾರ ಸೆಪ್ಟೆಂಬರ್ 15ರವರೆಗೆ ಕಾಲಾವಕಾಶವನ್ನು ಕೇಳಿದೆ. ಆದ್ದರಿಂದ ಸರ್ಕಾರಕ್ಕೆ ನಮ್ಮ ವಿಚಾರವನ್ನು ಮನದಟ್ಟಾಗಿಸುವ ಉದ್ದೇಶದಿಂದ ಆಗಸ್ಟ್ 26ರಿಂದ ಅಕ್ಟೋಬರ್ ಒಂದರವರೆಗೂ ರಾಜ್ಯ ಮಟ್ಟದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರದ ಮಲೆ ಮಹಾದೇಶ್ವರ ಬೆಟ್ಟದಿಂದ ಈ ಪಂಚಮಸಾಲಿ ಪತ್ರಿಜ್ಞಾ ಪಂಚಾಯತಿ ಎಂಬ ಅಭಿಯಾನ ಆರಂಭಗೊಳ್ಳಲಿದೆ. ಇದರಲ್ಲಿ ಗೌಡ ಲಿಂಗಾಯತರು, ದೀಕ್ಷ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು ಭಾಗಿಯಾಗಲಿದ್ದಾರೆ. ಈ ಅಭಿಯಾನ ಎಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ನುಡಿದಿದ್ದಾರೆ.

    ಈ ಅವಧಿಯಲ್ಲಿಯೇ ಸರ್ಕಾರ ಪ್ರವರ್ಗ 2 ರಲ್ಲಿ ಮೀಸಲಾತಿಯ ಭರವಸೆಯನ್ನು ಈಡೇರಿಸಬೇಕಾಗಿದೆ. ಈಗಾಗಲೇ ಸಿಎಂ ಬೊಮ್ಮಾಯಿ ನಮ್ಮನ್ನ ಭೇಟಿಯಾಗಿದ್ದು, ಕಾಲಾವಕಾಶ ಕೇಳಿದ್ದಾರೆ. ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ. ಜೊತೆಗೆ ಪಂಚಮಸಾಲಿ ಲಿಂಗಾಯತರನ್ನು ಬೇರೆ-ಬೇರೆ ಹೆಸರುಗಳಿಂದ ಕರೆಯುತ್ತಾರೆ ಅವರೆಲ್ಲರನ್ನು ಒಗ್ಗೂಡಿಸಿ ಹಕ್ಕೋತ್ತಾಯ ಮಂಡಿಸಲೆಂದೇ ಮಲೆ ಮಹಾದೇಶ್ವರ ಬೆಟ್ಟದಿಂದ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್‍ಗೆ ಥಿಯೇಟರ್ ಬಂದ್ ಹೈ ಎಂದ ರಾಜೂ ಗೌಡ

  • 5 ವರ್ಷ ಸ್ವತಂತ್ರ ಸರ್ಕಾರ ಬಂದ್ರೆ ದೇಶ ನೋಡುವಂತ ಕ್ರಾಂತಿಕಾರಿ ಬದಲಾವಣೆ ಆಗುತ್ತೆ: ಎಚ್.ಡಿ.ಕೆ

    5 ವರ್ಷ ಸ್ವತಂತ್ರ ಸರ್ಕಾರ ಬಂದ್ರೆ ದೇಶ ನೋಡುವಂತ ಕ್ರಾಂತಿಕಾರಿ ಬದಲಾವಣೆ ಆಗುತ್ತೆ: ಎಚ್.ಡಿ.ಕೆ

    ನೆಲಮಂಗಲ: 5 ವರ್ಷ ಸ್ವತಂತ್ರ ಸರ್ಕಾರ ಬಂದರೆ ದೇಶ ನೋಡುವಂತ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದು ನೆಲಮಂಗಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆಂಗಲ್ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀ ಕೃಷ್ಣರುಕ್ಮಿಣಿ ಅಮ್ಮನವರ ದೇವಾಲಯ ಉದ್ಘಾಟನೆ ವೇಳೆ ಮಾತನಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ರು ಹಳ್ಳಿಗಳಲ್ಲಿ ಉತ್ತಮವಾದ ವಾತಾವರಣ ಕಾಣ್ತಾ ಇಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಲು ಆಗಲಿಲ್ಲ, ನನಗೆ 5 ವರ್ಷದ ಸರ್ಕಾರ ಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ

    ನಾನು ಈ ರಾಜಕಾರಣಕ್ಕೆ ಬಂದಿದ್ದೆ ಆಕಸ್ಮಿಕ ಅದರಲ್ಲೂ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದು, ಆಶ್ಚರ್ಯ ರೀತಿಯಲ್ಲಿ ಆಗಿದ್ದಾಗಿದೆ. ನಾನು ಎಂದು ಈ ನಾಡಿನ ಜನತೆಗೆ ಮೋಸ ಮಾಡಿಲ್ಲ. ಎರಡು ಬಾರಿ ಮುಖ್ಯಮಂತ್ರಿ ಅದಾಗ್ಲೂ ಕೂಡ ಮೋಸ ಮಾಡಿಲ್ಲ, ಈ ನಾಡಿನ ಭವಿಷ್ಯಕ್ಕಾಗಿ ನನ್ನದೇ ಕಲ್ಪನೆ ಇದೆ. ಜನರ ಆರ್ಶಿವಾದದಿಂದ 5 ವರ್ಷ ಸ್ವತಂತ್ರ ಸರ್ಕಾರ ಬಂದರೆ ದೇಶ ನೋಡುವಂತ ಕ್ರಾಂತಿಕಾರಿ ಬದಲಾವಣೆ ತರುವುದು ನನ್ನ ಗುರಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‍ರಿಂದ ಕೊಡಗಿನ ಅಂಕಿತಾ ಸುರೇಶ್‍ಗೆ 10 ಲಕ್ಷ ರೂ. ಪುರಸ್ಕಾರ

    ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಹಾಗೂ ಶ್ರೀ ಕೃಷ್ಣರುಕ್ಮಿಣಿ ಅಮ್ಮನವರ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಖರ್ಚಾಗುತ್ತಿಲ್ಲ, ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

    ಖರ್ಚಾಗುತ್ತಿಲ್ಲ, ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

    ಬೆಂಗಳೂರು: ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮುಂದೆ ಉದ್ದುದ್ದ ಸಾಲುಗಳು ಸಾಮಾನ್ಯವಾಗಿತ್ತು. ಬಳಿಕ ಸರ್ಕಾರ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಿಸಿಕೊಂಡಿತೋ ಆಗ ಖಾಸಗಿ ಆಸ್ಪತ್ರೆಗಳ ಮುಂದೆ ಇದ್ದ ಕ್ಯೂ ಇದ್ದಕ್ಕಿದ್ದ ಹಾಗೆ ಮಾಯವಾಗಲು ಶುರುವಾಯ್ತು. ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಪರಿಣಾಮ ಸದ್ಯ, ಕೂಡಿಟ್ಟ ಲಸಿಕೆ ಖರ್ಚಾಗದ ಕಾರಣ ವಾಪಸ್ ಖರೀದಿಸಿ ಎಂದು ಖಾಸಗಿ ಆಸ್ಪತ್ರೆ ಮನವಿ ಮಾಡುತ್ತಿದೆ.

    ಕೇಂದ್ರ ಸರ್ಕಾರ ಉಚಿತ ಲಸಿಕೆ ಕೊಡುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆ ಕಡೆ ಮುಖಮಾಡದ ಜನ ತಜ್ಞರ ಅಭಿಪ್ರಾಯದ ಪ್ರಕಾರ ಇಷ್ಟೊತ್ತಿಗಾಗಲೇ ಕೊರೊನಾ ಮೂರನೇ ಅಲೆ ಅಪ್ಪಳಿಸಬೇಕಿತ್ತು. ಆದರೆ ಅದೃಷ್ಟವಶಾತ್ ಪರಿಸ್ಥಿತಿ ಹತೋಟಿಯಲ್ಲಿದೆ. ಇದರ ನಡುವೆ ಕೊರೊನಾದಿಂದ ಪರಾಗಲಿರುವ ದೊಡ್ಡ ಅಸ್ತ್ರ ಎಂದರೆ ಅದು ಲಸಿಕೆ ಮಾತ್ರ. ಹೀಗಾಗಿ ಲಸಿಕೆಗೂ ಬೇಡಿಕೆ ಹೆಚ್ಚಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಶೇಖರಣೆ ಮಾಡಿಟ್ಟುಕೊಂಡು ಜನರು ಬಾರದೆ ಗೋಳಾಡುತ್ತಿವೆ. ಮೊದಲು ಲಸಿಕೆ ಉಚಿತವಾಗಿ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ ಕೇಳಿದ ಪರಿಣಾಮ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿಕೊಂಡಿತು. ಹೀಗಾಗಿ ಶೇ.75 ಸರ್ಕಾರಿ ಆಸ್ಪತ್ರೆಗಳಿಗೆ ಶೇ.25 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗೆ ಲಸಿಕೆಯನ್ನು ಕೇಂದ್ರ ಸರಬರಾಜು ಮಾಡುತ್ತಿದೆ. ಶೇ.25 ರಷ್ಟು ಲಸಿಕೆ ಮಾತ್ರ ಖಾಸಗಿ ಕ್ಚೇತ್ರಕ್ಕೆ ಸಿಗುತ್ತಿದ್ದರೂ ಅದನ್ನು ಖರ್ಚು ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಚಿಂತೆಗೆ ಬಿದ್ದಿದೆ. ಇದಕ್ಕೆ ಕಾರಣ ಸರ್ಕಾರ ಲಸಿಕೆ ಉಚಿತವಾಗಿ ಕೊಡುತ್ತಿರುವ ಹಿನ್ನೆಲೆ ಜನರು ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಲಸಿಕೆ ಪಡೆದುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ತಾಯಿ ಮೊಬೈಲ್ ಕೊಡಿ ಪ್ಲೀಸ್ ಎಂದ ಬಾಲಕಿಗೆ ಸಿಕ್ತು ಫೋನ್

    ಹಿಂದೆ ಸರಿಯುತ್ತಿರುವ ಖಾಸಗಿ ಆಸ್ಪತ್ರೆಗಳು:
    ಈಗ ಶೇ.25 ಲಸಿಕೆ ಮಾತ್ರ ಇದ್ದರು ಜನರು ಬಾರದೆ ಖಾಸಗಿ ಆಸ್ಪತ್ರೆಗಳಿಗೆ ತಳಮಳ ಶುರುವಾಗಿದೆ. ಮೂರನೇ ಅಲೆ ಮನಗಂಡು ಸರ್ಕಾರಕ್ಕೆ 15 ಲಕ್ಷ ಡೋಸ್‍ಗೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿತ್ತು. ಆದರೆ ಜನರು ಉಚಿತವಾಗಿ ಲಸಿಕೆ ಪಡೆಯಲು ಮುಂದಾಗಿರುವ ಹಿನ್ನೆಲೆ ಅರ್ಧಕ್ಕರ್ಧ ಲಸಿಕೆ ಅಂದರೆ 7.50 ಲಕ್ಷ ಡೋಸ್ ಮಾತ್ರ ಸಾಕು ಎಂದು ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹೇಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‍ಗೆ 630 ರೂ ಹಾಗೂ ಸೇವಾ ಶುಲ್ಕ 150 ಸೇರಿಸಿ ಪ್ರತಿ ಡೋಸ್ ಗೆ 780 ರೂ. ಪಡೆದುಕೊಳ್ಳುತ್ತಿದೆ. ಇದೇ ರೀತಿ ಕೋವ್ಯಾಕ್ಸಿನ್‍ಗೆ 1260 ರೂ. ಹಾಗೂ ಸೇವಾ ಶುಲ್ಕ 150 ಸೇರಿಸಿ 1,410 ರೂ. ಅನ್ನು ಜನರಿಂದ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೋವಿಶೀಲ್ಡ್‍ಗೆ 630 ರೂ ಮತ್ತು ಕೋವ್ಯಾಕ್ಸಿನ್‍ಗೆ 1260 ರೂ.ಗೆ ಖಾಸಗಿ ಕ್ಷೇತ್ರಕ್ಕೆ ಮಾರಾಟ ಮಾಡುತ್ತಿದೆ. ಆದರೆ ಈಗ ಸರ್ಕಾರದಿಂದ ಕೊಂಡುಕೊಂಡಿರುವ ಲಸಿಕೆ ಖರ್ಚಾಗದೆ ಖಾಸಗಿ ಆಸ್ಪತ್ರೆಗಳು ಕಂಗಾಲಾಗಿ ಕೂತಿದೆ. ಇದನ್ನೂ ಓದಿ: ಕೋವಿಡ್ ಲಸಿಕೆ ಬಗ್ಗೆ ಯಾದಗಿರಿ ಜನರಲ್ಲಿ ಮೂಢನಂಬಿಕೆ

    ವಾಪಸ್ ಖರೀದಿಗೆ ಚಿಂತನೆ:
    ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಅಧ್ಯಕ್ಷ ಮನವಿ ಮಾಡಿಕೊಂಡಿದೆ. ಕನಿಷ್ಠ ಪಕ್ಷ ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಸರ್ಕಾರವೇ ವಾಪಸ್ ಖರೀದಿಸಿ ಸೇವಾ ಶುಲ್ಕ ಮಾತ್ರ ತಮಗೆ ಪಾವತಿಸಿದರೆ ಸಾಕು ಎಂಬ ನಿಲುವಿಗೆ ಖಾಸಗಿ ಆಸ್ಪತ್ರೆಗಳು ಬಂದಿದೆ. ಹೀಗಾಗಿ ಮೊದಲು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕೆಯನ್ನು ವಾಪಾಸ್ ಖರೀದಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಸರ್ಕಾರದ ಖರ್ಚಿನಲ್ಲಿ ಪುನಃ ಲಸಿಕೆ ಖರೀದಿಸುವುದು ಆಗುವ ಮಾತಲ್ಲ. ಹೀಗಾಗಿ ಸಿಎಸ್‍ರ್ ಫಂಡ್ ಬಂಡವಾಳ ಮಾಡಿಕೊಂಡು ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಖರೀದಿಸಲು ಪಾಲಿಕೆ ಮುಂದಾಗಿದೆ. ಈ ಮೂಲಕ ಅದನ್ನೂ ಸೇವಾ ಶುಲ್ಕ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಲಸಿಕೆ ಹಂಚಿಕೆ ಮಾಡುವ ಲೆಕ್ಕಾಚಾರ ಬಿಬಿಎಂಪಿಯದ್ದು. ಮೂರನೇ ಅಲೆ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆ ಸಾವಧಾನವಾಗಿ ಉಚಿತ ಲಸಿಕೆ ಹಾಕಿಸಿಕೊಳ್ಳಲು ಜನರು ಮನಸ್ಸು ಮಾಡಿದ್ದಾರೆ. ಇದರಿಂದ ಲಸಿಕೆ ಕೂಡಿಟ್ಟು, ಮಾರಾಟ ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಕಂಗೆಟ್ಟು ಹೋಗಿವೆ. ಈಗ ಸರ್ಕಾರವೇ ಲಸಿಕೆ ಕೊಂಡುಕೊಳ್ಳಲಿ ಎಂದು ಖಾಸಗಿ ಆಸ್ಪತ್ರೆಗಳು ಮನವಿ ಮಾಡಿಕೊಳ್ಳುತ್ತಿದೆ.

  • ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ

    ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ

    ಬೆಂಗಳೂರು: ರಾಜ್ಯದ ಸಾವಿರಾರು ಜನರು ಕೋವಿಡ್‍ಗೆ ಬಲಿಯಾಗುತ್ತಿದ್ದಾಗ ನೆರವಿಗೆ ಬಾರದೇ ಅವಿತು ಕುಳಿತು ಈಗ ದಿಢೀರ್ ಪ್ರತ್ಯಕ್ಷರಾಗಿರುವ ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆಯ ಬದಲು ಹೆಣಾಶೀರ್ವಾದ ಯಾತ್ರೆ ಮಾಡುವುದು ಸೂಕ್ತ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗದೀಶ್ ವಿ.ಸದಂ ಅವರು, ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕಲ್ಪಿಸುವುದನ್ನು ಸರ್ಕಾರ ನಿರ್ಲಕ್ಷಿಸಿತು. ಪರಿಣಾಮವಾಗಿ, ಮೂರು ಲಕ್ಷಕ್ಕೂ ಅಧಿಕ ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ವಿರೋಧಪಕ್ಷ ಹೇಳುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್ ಬುಲೆಟಿನ್ ಪ್ರಕಾರ ಆಗಸ್ಟ್ 2ರ ತನಕ 36 ಸಾವಿರ ಜನರು ಮೃತಪಟ್ಟಿದ್ದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ಡೆತ್ ಆಡಿಟ್‍ನಲ್ಲಿ ಆಗಸ್ಟ್ 2ರ ತನಕ ಕೇವಲ 14,371 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಒಂದೊಂದು ಕಡೆ ಒಂದೊಂದು ಅಂಕಿಅಂಶ ಹೇಳುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

    ಸುತ್ತಮುತ್ತಲಿನ ಮನೆಗಳನ್ನು ಸಮೀಕ್ಷೆ ನಡೆಸಿದಾಗ ಹಾಗೂ ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ಮೂರು ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿರುವ ಸುಳಿವು ಸಿಗುತ್ತಿದೆ. ಬಿಜೆಪಿ ನಾಯಕರು ಜನಾಶೀರ್ವಾದ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುವ ಬದಲು ಹೆಣಾಶೀರ್ವಾದ ಹೆಸರಿನಲ್ಲಿ ಸ್ಮಶಾನಕ್ಕೆ ಹೋಗಿ, ನಿಜಕ್ಕೂ ಕೋವಿಡ್‍ನಿಂದ ಮೃತಪಟ್ಟ ಎಷ್ಟು ಶವಗಳು ಅಲ್ಲಿಗೆ ಬಂದಿವೆ ಎಂದು ವಿಚಾರಿಸಲಿ ಎಂದು ವಾಗ್ದಾಳಿ ನಡೆಸಿದರು.

    ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ 20 ಎಸ್‍ಸಿ/ಎಸ್‍ಟಿ, 27 ಒಬಿಸಿ ಸಚಿವರಿದ್ದಾರೆ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ ಸತ್ಯವೇನೆಂದರೆ, ಅವರೆನ್ನಲ್ಲ ಕೇವಲ ನಾಮಕಾವಸ್ಥೆಗೆ ಸಚಿವರನ್ನಾಗಿ ಮಾಡಲಾಗಿದೆ. ಆ ಸಚಿವರ ಅಧಿಕಾರವನ್ನೆಲ್ಲಾ ಪ್ರಧಾನಿ ಮೋದಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆ 47 ಸಚಿವರು ಸಣ್ಣ ಕಡತಕ್ಕೆ ಸಹಿ ಹಾಕಬೇಕಾದರೂ ಮೋದಿಯವರ ಅಪ್ಪಣೆ ಪಡೆಯಬೇಕಾಗಿದೆ. ಇನ್ನು ಅವರು ತಮ್ಮ ಸಮುದಾಯದ ಜನರ ಹಿತ ಕಾಪಾಡುವುದು ದೂರದ ಮಾತು. ಕಳೆದ ಏಳು ವರ್ಷಗಳಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಮೋದಿ ಏನು ಮಾಡಿದ್ದಾರೆ? ತೆಲಂಗಾಣ ಸರ್ಕಾರವು ಎಲ್ಲಾ ದಲಿತ ಕುಟುಂಬಗಳಿಗೆ 10 ಲಕ್ಷ ರೂಪಾಯಿ ನೀಡುವ ಯೋಜನೆ ಘೋಷಿಸಿದೆ. ಅಲ್ಲಿ ಸಾಧ್ಯವಾಗುವ ಇಂತಹ ಯೋಜನೆ ನಮ್ಮಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಕರ್ನಾಟಕ ಸರ್ಕಾರಕ್ಕೂ ದಲಿತರ ಮೇಲೆ ಕಾಳಜಿ ಇದ್ದರೆ ಅಂತಹದೇ ಯೋಜನೆ ಘೋಷಿಸಲಿ ಎಂದು ಆಗ್ರಹಿಸಿದರು.

    ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವಷ್ಟು ಹಣ ಸ್ವಿಸ್ ಬ್ಯಾಂಕ್‍ನಲ್ಲಿದ್ದು, ಅದನ್ನು ಭಾರತಕ್ಕೆ ತರುವುದಾಗಿ 2014ರಲ್ಲಿ ಬಿಜೆಪಿ ಹೇಳಿತ್ತು. ಇದನ್ನು ನಂಬಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದರು. ಆದರೆ ಈಗ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಲೂ ಕಷ್ಟಪಡುವಂತಹ ದುಃಸ್ಥಿತಿಗೆ ಜನರನ್ನು ಮೋದಿ ಸರ್ಕಾರ ತಂದಿದೆ. ಅಗತ್ಯ ವಸ್ತುಗಳ ಬೆಲೆ ದಿನದಿನಕ್ಕೆ ಏರುತ್ತಲೇ ಇದೆ. 80 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಎಣ್ಣೆಯ ಬೆಲೆ 150 ರೂಪಾಯಿಗೂ ಅಧಿಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ತೆರಿಗೆಯನ್ನು ಏರಿಸಿದ್ದರಿಂದ ಭಾರತೀಯರು ಪೆಟ್ರೋಲ್, ಡೀಸೆಲ್‍ಗೆ ದುಬಾರಿ ಬೆಲೆ ತೆರಬೇಕಾಗಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ 9 ರೂ. ಇದ್ದ ಕೇಂದ್ರ ಸರ್ಕಾರದ ತೆರಿಗೆಯನ್ನು ಮೋದಿ ಸರ್ಕಾರ ಹಂತಹಂತವಾಗಿ 32 ರೂ.ಗೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ (ಎಲ್‍ಪಿಜಿ) ಸಿಲೆಂಡರ್ ಸಬ್ಸಿಡಿಯನ್ನು ರದ್ದುಪಡಿಸಿದ್ದರಿಂದ 450 ರೂಪಾಯಿಗೆ ಜನರಿಗೆ ಸಿಗುತ್ತಿದ್ದ ಸಿಲೆಂಡರ್‍ಗೆ ಈಗ 900 ರೂಪಾಯಿ ಕೊಡಬೇಕಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಸದಂ ಅವರು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಸೆಪ್ಟೆಂಬರ್ 13 ರಿಂದ 10 ದಿನ ವಿಧಾನಮಂಡಲದ ಅಧಿವೇಶನ

    ನೋಟು ಬದಲಾವಣೆಯಿಂದ ದೇಶಕ್ಕೆ ಭಾರೀ ಲಾಭವಾಗುತ್ತದೆ, ಕಪ್ಪುಹಣವೇ ಇಲ್ಲವಾಗುತ್ತದೆ ಎಂದು ನಂಬಿದ ಜನರು ಅಂದು ಕಷ್ಟಗಳನ್ನು ಸಹಿಸಿಕೊಂಡರು. ಆದರೆ ನೋಟು ಬದಲಾವಣೆಯಿಂದ ಎಷ್ಟು ಕಪ್ಪುಹಣ ನಾಶವಾಗಿದೆ ಎಂಬ ಮಾಹಿತಿಯನ್ನು ಆರ್‍ಬಿಐ ಈವರೆಗೂ ನೀಡಿಲ್ಲ. ಚುನಾವಣೆ ಬಂತೆಂದರೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸಾವಿರಾರು ರೂಪಾಯಿಯನ್ನು ಮನೆಮನೆಗೆ ಹಂಚುತ್ತವೆ. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನು ಖರೀದಿಸಲು ನೂರಾರು ಕೋಟಿ ರೂಪಾಯಿಯನ್ನು ಬಿಜೆಪಿ ಖರ್ಚು ಮಾಡುತ್ತದೆ. ನೋಟು ಬದಲಾವಣೆ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಇವೆಲ್ಲ ಸಾರಿ ಸಾರಿ ಹೇಳುತ್ತಿವೆ ಎಂದು ಹೇಳಿದರು.

    ಬಿಜೆಪಿಯ ದೇಶಪ್ರೇಮ, ಹಿಂದುತ್ವ ಕೇವಲ ಭಾಷಣಕ್ಕೆ ಹಾಗೂ ಗಲಭೆ ಸೃಷ್ಟಿಸುವುದಕ್ಕೆ ಸೀಮಿತ. ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳಿದವರು ಹಿಂದುಳಿದ ರಾಷ್ಟ್ರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಗಡಿಯಲ್ಲಿ ಈಗಲೂ ನಮ್ಮ ಯೋಧರು ಹುತಾತ್ಮರಾಗುತ್ತಿದ್ದರೂ ಸರ್ಜಿಕಲ್ ಸ್ಟ್ರೈಕ್ ಎಂಬ ಹಳೇ ಕಥೆಯನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗೋಶಾಲೆಗಳು ಅಕ್ರಮದ ಕೇಂದ್ರಬಿಂದುವಾಗಿದ್ದರೂ ಕೇಳುವವರು ಇಲ್ಲವಾಗಿದೆ. ಪಾಕಿಸ್ತಾನ ಸೇನೆಯಿಂದ ಬಂಧಿತರಾಗಿರುವ ಭಾರತದ ಪುತ್ರ ಕುಲಭೂಷಣ್ ಜಾಧವ್‍ರನ್ನು ಮರಳಿ ಕರೆತರುವುದರಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ಕೃಷಿ ಕಾಯಿದೆ, ಸಿಎಎ, ಎನ್‍ಆರ್‍ಸಿ ಮುಂತಾದವುಗಳಿಗೆ ತಿದ್ದುಪಡಿ ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದರಿಂದ ಎಪಿಎಂಸಿಗಳಲ್ಲಿ ವಹಿವಾಟು ಕಡಿಮೆಯಾಗಿ ಮುಚ್ಚಿಹೋಗಲಿದೆ. ನಂತರ ಖಾಸಗಿಯವರು ಎಪಿಎಂಸಿಯ ಸ್ಥಾನದಲ್ಲಿ ಬಂದು ರೈತರಿಗೆ ಕಿರುಕುಳ ನೀಡಲಿವೆ ಎಂದು ಸದಂ ಬೇಸರ ವ್ಯಕ್ತಪಡಿಸಿದರು.

    ಭಾರತದ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ಚುನಾವಣೆ ಬಂದಾಗಲೂ ನೀರವ್ ಹಾಗೂ ಮಲ್ಯ ಕೆಲವೇ ದಿನಗಳಲ್ಲಿ ಬರುತ್ತಾರೆಂದು ಸುಳ್ಳು ಸುದ್ದಿಯನ್ನು ಬಿಜೆಪಿ ಹಬ್ಬಿಸುತ್ತದೆ. ಆದರೆ ಅವರು ಮಾತ್ರ ಭಾರತೀಯರ ದುಡ್ಡಿನಿಂದ ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಜಗದೀಶ್ ವಿ.ಸದಂ ಆಕ್ರೊಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖೂಬಾ ಕಾರ್ಯಕ್ರಮದಲ್ಲಿ ನಾಡಬಂದೂಕು ಸಿಡಿಸಿದ ಪ್ರಕರಣ- ಮೂವರು ಕಾನ್‍ಸ್ಟೇಬಲ್‍ಗಳ ಅಮಾನತು

    ಆಮ್ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‍ರವರು ಮಾತನಾಡಿ, ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ. ಜನರಿಗೆ ಮಾತ್ರ ಬಿಗಿ ನಿಯಮಗಳನ್ನು ಜಾರಿಗೆ ತಂದು, ಸಚಿವರು ಮಾತ್ರ ಸ್ವೇಚ್ಛಾಚಾರದಿಂದ ಸಾವಿರಾರು ಬೆಂಬಲಿಗರನ್ನು ಸೇರಿಸುವುದು ಎಷ್ಟು ಸರಿ? ರಾಜ್ಯದಲ್ಲಿ ಬಿಜೆಪಿ ಸಚಿವರಿಗೇ ಒಂದು ಕಾನೂನು, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಈ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ ಸಚಿವರುಗಳು ತಮ್ಮ ನಡೆಯನ್ನು ಬದಲಿಸಿಕೊಳ್ಳದಿರುವುದು ದುರಂತ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸಂಭ್ರಮಿಸಿದಂತೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಖೂಬಾ ಅಭಿಮಾನಿಗಳು ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

  • ಬೊಮ್ಮಾಯಿ ಸರ್ಕಾರಕ್ಕೆ ಮೊದಲ ದಿನವೇ ಗ್ರಹಣ ಹಿಡಿದಿದೆ: ಎಚ್.ಕೆ.ಪಾಟೀಲ್

    ಬೊಮ್ಮಾಯಿ ಸರ್ಕಾರಕ್ಕೆ ಮೊದಲ ದಿನವೇ ಗ್ರಹಣ ಹಿಡಿದಿದೆ: ಎಚ್.ಕೆ.ಪಾಟೀಲ್

    ರಾಯಚೂರು: ಸರ್ಕಾರವನ್ನು ಅಸ್ಥಿರಗೊಳಿಸುವ, ಕಾಲೆಳೆಯುವ ಬಿಜೆಪಿ ಶಾಸಕರ ಮನಸ್ಥಿತಿಯಿಂದ ಬೊಮ್ಮಾಯಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ, ಬೊಮ್ಮಾಯಿ ಸರ್ಕಾರಕ್ಕೆ ಮೊದಲ ದಿನವೇ ಗ್ರಹಣ ಹಿಡಿದಿದೆ ಅಂತ ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಕಲಬುರಗಿ ವಿಭಾಗೀಯ ಕಾಂಗ್ರೆಸ್ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಆನಂದ ಸಿಂಗ್ ರಾಜೀನಾಮೆಯ ಧಮ್ಕಿ ಕೊಟ್ಟಿದ್ದಾರೆ. ರಾಜೀನಾಮೆ ಇಂದು ಕೊಡ್ತಾರೆ, ನಾಳೆ ಕೊಡುತ್ತಾರೆ ಎಂದು ವಿಚಾರಗಳು ಡೋಲಮಾನವಾಗಿವೆ. ಮಂತ್ರಿಗಳಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚಿಂತನೆಯಿಲ್ಲಾ. ಎಲ್ಲರ ಚಿಂತೆ, ಚಿಂತನೆ ಬಹಳ ದೊಡ್ಡ ಖಾತೆ, ಹಣ ಇರುವ ಖಾತೆ ಬೇಕಾಗಿತ್ತು ಅನ್ನೋದರ ಕಡೆಯಿದೆ ಎಂದರು. ಇದನ್ನೂ ಓದಿ:  ಅಫ್ಘಾನ್‍ನಲ್ಲಿ ಹಸುವಿನ ವೇಷ ತೊಟ್ಟ ತಾಲಿಬಾನ್ ರಾಕ್ಷಸರು – ಷರಿಯತ್ ಕಾನೂನು ಪಾಲಿಸಲು ಕಟ್ಟಪ್ಪಣೆ

    ರಾಜ್ಯದ ಅಭಿವೃದ್ಧಿ ಒಂದು ಅಂಶವಲ್ಲ ಅಂತ ಬೊಮ್ಮಾಯಿ ಸರ್ಕಾರ ನಿರ್ಣಯಿಸಿದಂತಿದೆ. ಇಂತಹ ಕೆಟ್ಟ ವಾತಾವರಣರಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಸರ್ಕಾರವಾಗುವುದಿಲ್ಲ. ಅಧಿಕಾರಕ್ಕೆ ಬಂದ ಮೊದಲ ಒಂದೆರಡು ದಿನ ಬೊಮ್ಮಾಯಿ ತೆಗೆದುಕೊಂಡ ನಿರ್ಧಾರಗಳು ನಮಗೂ ಮೆಚ್ಚಿಗೆ ಆಗಿದ್ದವು. ಆದರೆ ಸಚಿವ ಸ್ಥಾನದ ಅಸಮಧಾನಗಳು ಸರ್ಕಾರವನ್ನು ಹೆಚ್ಚು ದಿನ ಉಳಿಯದಂತೆ ಮಾಡುತ್ತವೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಆರೋಪ ಮಾಡಿದ್ದಾರೆ.

  • ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

    – ಹಾಜರಾತಿ ಕಡ್ಡಾಯ ಅಲ್ಲ

    ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲೆಗಳು ಆರಂಭ ಮಾಡುವ ವಿಚಾರವಾಗಿ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

    ಆಗಸ್ಟ್ 23 ರಿಂದ ರಾಜ್ಯಾದ್ಯಂತ 9 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ಆರಂಭಗೊಳಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ನಿತ್ಯ ಅರ್ಧ ದಿನ ಮಾತ್ರ ತರಗತಿ ನಡೆಸಲು ಸರ್ಕಾರ ಸೂಚಿಸಿದೆ. ಸೋಮವಾರ ದಿಂದ ಶುಕ್ರವಾರ 10 ರಿಂದ 1.30 ತರಗತಿ ಮಾಡಬೇಕು, ಶನಿವಾರ 10 ರಿಂದ 12.50 ವರೆಗೆ ಕ್ಲಾಸ್ ಮಾಡಬೇಕು, ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಶಾಲೆಗಳಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

    ಮಕ್ಕಳು ಮನೆಯಿಂದ ನೀರು, ಉಪಹಾರ ತರಲು ಅವಕಾಶವಿದ್ದು, ಶಾಲೆಗಳಲ್ಲಿ ಕುಡಿಯುವ ಬಿಸಿ ನೀರು ವ್ಯವಸ್ಥೆ ಮಾಡಬೇಕು. ಹಾಜರಾತಿ ಕಡ್ಡಾಯ ಅಲ್ಲ, ಆನ್‍ಲೈನ್ ನಲ್ಲಿ ಬೇಕಾದರು ಕೂಡ ಹಾಜರಾತಿ ಆಗಬಹುದು. ಒಂದು ತಂಡದಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಇರಬೇಕು. ವಿದ್ಯಾರ್ಥಿಗಳು ಪೆನ್ನು, ಪುಸ್ತಕ, ರಬ್ಬರ್ ಸೇರಿದಂತೆ ಯಾವ ವಸ್ತುಗಳನ್ನು ಹಂಚಿಕೊಳ್ಳಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

    ಮಾರ್ಗಸೂಚಿಯಲ್ಲಿ ಏನಿದೆ?

    ನಿತ್ಯ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ತಾಪಮಾನ ಪರಿಶೀಲನೆ ಮಾಡಬೇಕು. ಡೆಸ್ಕ್ ನಲ್ಲಿ ಕೂರಿಸುವುದು, ವಿದ್ಯಾರ್ಥಿಯಗಳ ಆಗಮನ ಮತ್ತು ನಿರ್ಗಮದ ವೇಳೆ ಶಾಲಾ-ಕಾಲೇಜುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು. ಶಾಲಾ-ಕಾಲೇಜು ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸ್ಯಾನಿಟೈಸ್ ವ್ಯವಸ್ಥೆ ಶಾಲಾ-ಕಾಲೇಜುಗಳಲ್ಲಿ ಮಾಡಬೇಕು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಶಾಲೆ ಪ್ರವೇಶ ಇಲ್ಲ. ಪ್ರಾರ್ಥನೆ ಸಮಯ, ಊಟದ ಸಮಯದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಗುಂಪು ಕ್ರೀಡೆಗಳ ಆಯೋಜನೆ ಮಾಡುವಾಗ ಎಚ್ಚರವಹಿಸಬೇಕು. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದರೆ ಕಡ್ಡಾಯವಾಗಿ ಅದನ್ನ ಕ್ಲೋಸ್ ಮಾಡಬೇಕು. ಶಾಲಾ-ಕಾಲೇಜು ಕ್ಯಾಂಪಸ್ ಗೆ ಸಾರ್ವಜನಿಕ ನಿಷೇಧ ಹೇರಬೇಕು. ವಿದ್ಯಾರ್ಥಿಗಳು ಲೈಬ್ರರಿಗಳಲ್ಲಿ ಕುಳಿತು ಓದಲು ನಿಷೇಧ. ಪುಸ್ತಕ ಪಡೆದು ಮನೆಯಲ್ಲಿ ಓದುವ ನಿಯಮ ಪಾಲನೆ ಮಾಡಬೇಕು. ಶಾಲಾ-ಕಾಲೇಜುಗಳ ಹಂತದ ಕ್ರೀಡಾ ಕೂಟಗಳ ಆಯೋಜನೆ ಮಾಡಬಾರದು.

    ಬಿಸಿಯೂಟ ಬದಲಾಗಿ ದಿನಸಿ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ನಿಯಮ ಮುಂದುವರೆಸಬೇಕು. ತರಗತಿಗಳು ಮುಗಿದ ಮೇಲೆ ನಿತ್ಯ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಲು ಅಗತ್ಯ ಕ್ರಮವಹಿಸಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶ ನೀಡಬಾರದು. ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೊಠಡಿ ತೆರೆಯಬೇಕು. ಆರೋಗ್ಯ ವ್ಯತ್ಯಾಸ ಕಂಡು ಬರೋ ವಿದ್ಯಾರ್ಥಿಗೆ ಈ ಕೊಠಡಿ ಕೂರಿಸಲು ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವ್ಯವಸ್ಥೆ ಮಾಡಲು ಕ್ರಮವಹಿಸಬೇಕು.

  • ಕಾಬೂಲ್ ವಶ – ತಾಲಿಬಾನ್‍ಗೆ ಶರಣಾದ ಅಫ್ಘನ್ ಸರ್ಕಾರ

    ಕಾಬೂಲ್ ವಶ – ತಾಲಿಬಾನ್‍ಗೆ ಶರಣಾದ ಅಫ್ಘನ್ ಸರ್ಕಾರ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದೆ. ರಾಜಧಾನಿ ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶ ಪಡೆದು ಇಂದು ಸಂಪೂರ್ಣ ನಗರವನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಫ್ಘನ್ ಸರ್ಕಾರ ತಾಲಿಬಾನ್ ಶರಣಾಗಿದೆ.

    ಕೆಲದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು. ಇದೀಗ ತಾಲಿಬಾನಿಗಳು ರಾಜಧಾನಿ ಕಾಬೂಲ್‍ಗೆ ಪ್ರವೇಶಪಡೆದು ಆಫ್ಘನ್ ಸರ್ಕಾರದಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡಿದೆ. ಶಾಂತಿಯುತವಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

    ಸಂಪೂರ್ಣ ಆಫ್ಘಾನಿಸ್ತಾನವನ್ನು 7 ದಿನಗಳಲ್ಲಿ ವಶಪಡಿಸಿಕೊಳ್ಳುತ್ತೇವೆ ಎಂದು ತಾಲಿಬಾನಿಗಳು ಘೋಷಿಸಿದ ಬೆನ್ನಲ್ಲೇ ದಾಳಿ ತೀವ್ರಗೊಂಡು ಕಾಬೂಲ್‍ನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶಿಸುತ್ತಿದ್ದಂತೆ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಏರ್‍ಲಿಫ್ಟ್ ಮೂಲಕ ಸ್ಥಾಳಾಂತರಿಸಿತು. ಅಫ್ಘನ್ ಭದ್ರತಾ ಪಡೆಗಳು ಮತ್ತು ಅಂತಾರಾಷ್ಟ್ರೀಯ ಮಿತ್ರಪಡೆಯ ಸೈನಿಕರು ತಾಲಿಬಾನಿಗಳ ವಿರುದ್ಧ ಹೋರಾಡಿ ರಾಜಧಾನಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದರು ಅದು ವಿಫಲಗೊಂಡಿದೆ.

    90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚಾರ ಇಲಾಖೆ ಕಳೆದ ವಾರ ಭವಿಷ್ಯ ನುಡಿದಿತ್ತು. ಅದರಂತೆ ಇಂದು ಕಾಬೂಲ್ ಕೂಡ ತಾಲಿಬಾನ್ ವಶವಾಗಿದೆ.

  • ಅಮೃತ ಮಹೋತ್ಸವಕ್ಕೆ ಸರ್ಕಾರದಿಂದ 11 ಅಮೃತ ಕಾರ್ಯಕ್ರಮಗಳು

    ಅಮೃತ ಮಹೋತ್ಸವಕ್ಕೆ ಸರ್ಕಾರದಿಂದ 11 ಅಮೃತ ಕಾರ್ಯಕ್ರಮಗಳು

    ಬೆಂಗಳೂರು: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವನ ಸವಿ ನೆನಪಿಗಾಗಿ ಕರ್ನಾಟಕ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.


    1. ಅಮೃತ ಗ್ರಾಮ ಪಂಚಾಯತಿಗಳು:
    ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುವುದು.

    2. ಅಮೃತ ಗ್ರಾಮೀಣ ವಸತಿ ಯೋಜನೆ:
    ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ವಸತಿ ರಹಿತ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸಲಾಗುವುದು.

    3. ಅಮೃತ ರೈತ ಉತ್ಪಾದಕ ಸಂಸ್ಥೆಗಳು:
    ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ ನೀಡಲಾಗುವುದು.

    4. ಅಮೃತ ನಿರ್ಮಲ ನಗರ:
    ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ.ಗಳನ್ನು ಒದಗಿಸಲಾಗುವುದು.

    5. ಅಮೃತ ಶಾಲಾ ಸೌಲಭ್ಯ ಯೋಜನೆ:
    ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ. ಗಳಂತೆ 75 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಇದನ್ನೂ ಓದಿ: ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

    6. ಅಮೃತ ಅಂಗನವಾಡಿ ಕೇಂದ್ರಗಳು:
    ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ 7.5 ಕೋಟಿ ರೂ. ಗಳನ್ನು ಹಣ ವಿನಿಯೋಗಿಸಲಾಗುವುದು.

    7. ಅಮೃತ ಸ್ವಸಹಾಯ ಕಿರು ಉದ್ದಿಮೆಗಳು:
    ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರೂ. ನಂತೆ 75 ಕೋಟಿ ರೂ. ಬೀಜ ಧನವನ್ನು ಒದಗಿಸಲಾಗುವುದು.

    8. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ:
    ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುವುದು.

    9. ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ:
    ಆಯ್ದ 750 ಪ್ರಾಥಮಿಕ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುವುದು.

    10. ಅಮೃತ ಕೌಶಲ್ಯ ತರಬೇತಿ ಯೋಜನೆ:
    ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಅಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಯನ್ನು 112 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.

    11. ಅಮೃತ ಕ್ರೀಡಾ ದತ್ತು ಯೋಜನೆ:
    ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾಪಟುಗಳ ಸಾಧನೆ ಗಮನಾರ್ಹವಾದುದು. ಮುಂದಿನ ಪ್ಯಾರೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನಗೊಳಿಸಲಾಗುವುದು.