Tag: Government Transport employees

  • ಕರ್ತವ್ಯಕ್ಕೆ ಅಡ್ಡಿ- ಮೂವರು ಸಾರಿಗೆ ಸಿಬ್ಬಂದಿ ಅಮಾನತು

    ಕರ್ತವ್ಯಕ್ಕೆ ಅಡ್ಡಿ- ಮೂವರು ಸಾರಿಗೆ ಸಿಬ್ಬಂದಿ ಅಮಾನತು

    ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರದ ಅವಧಿಯಲ್ಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ತಡೆದು ಕರ್ತವ್ಯ ನಿರತ ಚಾಲಕ- ನಿರ್ವಾಹಕರಿಗೆ ಅವಮಾನಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ಎಚ್. ರಾಮನಗೌಡರ ಆದೇಶ ಹೊರಡಿಸಿದ್ದಾರೆ.

    ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದಲ್ಲಿ ಚಾಲಕ ಕಂ, ನಿರ್ವಾಹರಾದ ಶಿವಪ್ಪ ಡಿ.ದ್ಯಾಮಣ್ಣ, ಮಂಜುನಾಥ್ ಐ.ಮಡಿವಾಳ ಮತ್ತು ನಿನಾಯಕ ವೈ. ಕಲ್ಲಪ್ಪ ಅಮಾನತುಗೊಂಡಿರುವ ಸಿಬ್ಬಂದಿ. ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರ ಪೈಕಿ ಚಾಲಕ ಎಂ.ಕೆ. ಮದ್ನೂರ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ಅಮಾನತುಗೊಂಡಿದ್ದಾರೆ ಹಾಗೂ ಇನ್ನೋರ್ವ ಚಾಲಕ ನಾಗರಾಜ್.ಎಂ. ಭೂಮಣ್ಣ ಅವರನ್ನು ಈಗಾಗಲೇ ಚಿಕ್ಕೋಡಿ ವಿಭಾಗಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ.

    ಈ ಐದೂ ಜನ ಸಿಬ್ಬಂದಿ ಏಪ್ರಿಲ್ 14ರ ಬುಧವಾರ ಸಂಜೆ 4.25 ರ ಸಮಯದಲ್ಲಿ ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕೆ.ಎ. 25 ಎಫ್ 2670 ನೋಂದಣಿ ಸಂಖ್ಯೆಯ ಬಸ್ಸನ್ನು ಉಣಕಲ್ ಕೆರೆ ಹತ್ತಿರ ಶ್ರೀನಗರ ಕ್ರಾಸ್ ನಲ್ಲಿ ತಡೆದು ನಿಲ್ಲಿಸಿ ಕರ್ತವ್ಯದ ಮೇಲಿದ್ದ ಚಾಲಕ ಎಸ್.ಬಿ. ಹಿರೇಮಠ ಮತ್ತು ನಿರ್ವಾಹಕ ಎಚ್.ಜಿ.ಶಲವಡಿ ಅವರಿಗೆ ಹೂವಿನ ಮಾಲೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಹಾಜರಾಗಬಾರದೆಂದು ಬೆದರಿಕೆ ಹಾಕಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಈ ಐವರ ವಿರುದ್ಧ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಮೂವರು ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

  • ಕಲ್ಲೇಟಿಗೆ ಡ್ರೈವರ್ ಬಲಿ – ಕುಟುಂಬಕ್ಕೆ 30 ಲಕ್ಷ ಪರಿಹಾರ, ಒಬ್ಬರಿಗೆ ಉದ್ಯೋಗ

    ಕಲ್ಲೇಟಿಗೆ ಡ್ರೈವರ್ ಬಲಿ – ಕುಟುಂಬಕ್ಕೆ 30 ಲಕ್ಷ ಪರಿಹಾರ, ಒಬ್ಬರಿಗೆ ಉದ್ಯೋಗ

    – ಪತ್ರದ ಮೂಲಕ ಸಂತಾಪ ಸೂಚಿಸಿದ ಲಕ್ಷ್ಮಣ ಸವದಿ
    – ಇಂದು ರಾಜ್ಯದಲ್ಲಿ 5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ

    ಬೆಂಗಳೂರು: ಕಳೆದ ಕೆಲದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇದೀಗ ಹಿಂಸೆಗೆ ತಿರುಗಿದೆ. ಬಾಗಲಕೋಟೆಯಲ್ಲಿ ಸಾರಿಗೆ ನೌಕರ ಬಸ್ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದಾಗಿ ಬಸ್ ಚಾಲಕ ಮೃತಪಟ್ಟಿದ್ದರು. ಬಸ್ ಚಾಲಕ ಮೃತ ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರು ಆದ ಲಕ್ಷ್ಮಣ ಸವದಿ ಅವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ.

    ಮೃತಪಟ್ಟ ಸಾರಿಗೆ ಸಂಸ್ಥೆಯ ಬಸ್ ಚಾಲಕರಾದ ಅವಟಿ ಅವರಿಗೆ ಸಂತಾಪ ಸೂಚಿಸಿ, ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಮತ್ತು ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡುವುದಾಗಿ ಪತ್ರದ ಮೂಲಕ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಸಾರ್ವಜನಿಕರ ಹಿತದೃಷ್ಟಿಯಿಂದ ಇಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಷ್ಠಾವಂತ ಚಾಲಕರಾದ ಅವಟಿ ಅವರು ಜಮಖಂಡಿಯ ಸಮೀಪದಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಹಿಂಸಾಕೃತ್ಯ ಎಸಗಿದ ಪರಿಣಾಮವಾಗಿ ಅವರು ಮೃತಪಟ್ಟಿರುವುದು ತೀವ್ರ ದು:ಖದಾಯಕ ಸಂಗತಿಯಾಗಿದೆ. ಮೃತರ ಆತ್ಮಕ್ಕೆ ನಾನು ಶಾಂತಿ ಕೋರುತ್ತೇನೆ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳನ್ನು ತಿಳಿಸಬಯಸುತ್ತೇನೆ.

    ಈ ದುರ್ಘಟನೆಯ ವರದಿ ಬಂದ ತಕ್ಷಣವೇ ಮೃತರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಲು ಹಾಗೂ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸಾರಿಗೆ ನಿಗಮದಲ್ಲಿ ಉದ್ಯೋಗ ನೀಡಲು ಸೂಚಿಸಿದ್ದೇನೆ.

    ಶಾಂತಿಯುತವಾಗಿ ಮುಷ್ಕರ ನಡೆಸುತ್ತೇವೆ ಎಂದು ಮುಷ್ಕರ ನಿರತರು ಹೇಳುತ್ತಲೇ ತಮ್ಮ ಸಹೋದ್ಯೋಗಿಯ ಜೀವವನ್ನೇ ಬಲಿ ತೆಗೆದುಕೊಂಡಿರುವುದು ತೀವ್ರ ಖಂಡನೀಯವಾಗಿದೆ. ತಾವೂ ಕೆಲಸ ಮಾಡುವುದಿಲ್ಲ, ಇತರ ನಿಷ್ಠಾವಂತರಿಗೂ ಕೆಲಸ ಮಾಡಲು ಬಿಡುವುದಿಲ್ಲ ಎಂಬ ಪ್ರತಿಭಟನಾಕಾರರ ಧೋರಣೆ ಎಷ್ಟರ ಮಟ್ಟಿಗೆ ಸರಿ? ಈ ರೀತಿ ಹಿಂಸಾಕೃತ್ಯ ನಡೆಸುವವರನ್ನು ಸರ್ಕಾರವು ಎಂದಿಗೂ ಕ್ಷಮಿಸುವುದಿಲ್ಲ. ಈ ರೀತಿಯ ದುಷ್ಕೃತ್ಯ ನಡೆಸಿದರೆ ಕರ್ತವ್ಯಕ್ಕೆ ಹಾಜರಾಗುವ ನೌಕರರನ್ನು ವಿಚಲಿತಗೊಳಿಸಬಹುದು ಎಂದು ಕೆಲವರು ಹವಣಿಸಿದ್ದರೆ ಅದು ಯಶಸ್ವಿಯಾಗುವುದಿಲ್ಲ. ಏಕೆಂದರೆ ಈಗಾಗಲೇ ಮುಷ್ಕರ ನಿರತರ ಹಠಮಾರಿ ಧೋರಣೆ ಅನೇಕರಿಗೆ ಅರ್ಥವಾಗಿದೆ.

    5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ
    ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ 10 ದಿನಗಳಲ್ಲಿ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಬಸ್ಸುಗಳ ಸೇವೆ ಸಿಗದೆ ಪರಿತಪಿಸುವಂತಾಗಿರುವುದು ದುರ್ದೈವದ ಸಂಗತಿಯಾಗಿದೆ. ಆದರೆ ನಮ್ಮ ಕರೆಗೆ ಓಗುಟ್ಟು ಅನೇಕ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಇಂದು 5,300ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿರುವುದಕ್ಕೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ನನ್ನ ಹಾರ್ದಿಕ ಅಭಿನಂದನೆಗಳು.

    ನಾನು ಈಗಾಗಲೇ ತಿಳಿಸಿದಂತೆ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ನಂತರ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೂ ಸಾರಿಗೆ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವಂಥ ವಿಪರ್ಯಾಸದ ಕ್ರಮಕ್ಕೆ ಕೆಲವರು ಪ್ರಚೋದನೆ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಎದುರಾಗಿದೆ. ಅಷ್ಟೇಅಲ್ಲ ಸಾರಿಗೆ ನಿಗಮಗಳಿಗೆ ಬರಬೇಕಾಗಿದ್ದ ಆದಾಯ ಸ್ಥಗಿತಗೊಂಡು ಈವರೆಗೆ ಸುಮಾರು 187 ಕೋಟಿ ರೂ. ಗಿಂತಲೂ ಹೆಚ್ಚು ಮೊತ್ತದ ಹಾನಿಯಾಗಿದೆ. ಈ ರೀತಿಯ ಬೆಳವಣಿಗೆಗಳಿಂದ ಸಾರಿಗೆ ನಿಗಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

    ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಾರ್ವಜನಿಕ ಸೇವೆಗೆ ಮುಂದಾಗಿದ್ದ ಬಸ್ಸುಗಳ ಪೈಕಿ ಕೆಲವು ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟ ಮತ್ತು ಹಿಂಸಾಚಾರಗಳಿಂದಾಗಿ ಈವರೆಗೆ ಒಟ್ಟು 80 ಬಸ್ಸುಗಳು ಜಖಂಗೊಂಡಿದ್ದು, ಸಾರಿಗೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ಹಾನಿ ಹೆಚ್ಚುವಂತಾಗಿದೆ. ಇದರಿಂದ ಪರೋಕ್ಷವಾಗಿ ನಮ್ಮ ನಿಗಮಗಳ ನೌಕರರ ಮಿತ್ರರಿಗೇ ನಷ್ಟವಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಈ ರೀತಿಯ ಹಿಂಸಾಚಾರಗಳಿಂದ ಯಾವ ಪುರುಷಾರ್ಥವನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮುಷ್ಕರ ನಿರತರು ಅರಿತುಕೊಳ್ಳಬೇಕು.

    ಶಾಂತಿ ಮತ್ತು ಸಹನೆಯ ಧೋರಣೆಯನ್ನು ನಮ್ಮ ಸರ್ಕಾರ ತಳೆದಿದ್ದು, ಇದನ್ನು ಯಾರೂ ದುರುಪಯೋಗಪಡಿಸಿಕೊಳ್ಳಲು ಮುಂದಾಗಬಾರದು. ಒಂದು ವೇಳೆ ಅಹಿತಕರ ಘಟನೆಯಂಥ ಕೃತ್ಯಗಳಿಗೆ ಮುಂದಾದರೆ ಅವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ನಮ್ಮ ನೌಕರ ಬಾಂಧವರು ಸ್ವಯಂಪ್ರೇರಿತರಾಗಿ ಕೆಲಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ತಡೆಯುವ, ಬೆದರಿಸುವ ಮತ್ತು ಅವರ ಮೇಲೆ ಹಲ್ಲೆ ನಡೆಸುವ ಪ್ರಯತ್ನಗಳು ಹಲವು ಕಡೆ ನಡೆದಿವೆ. ಈ ರೀತಿಯ ದುಂಡಾವರ್ತನೆ ನಡೆಸುವವರು ಯಾರೇ ಆಗಿರಲಿ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.


    ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ
    ಸಾರಿಗೆ ನೌಕರರ ಬೇಡಿಕೆ ಬಗ್ಗೆ ಪ್ರಸಿದ್ಧ ಸಿನಿಮಾ ನಟರಾದ ಶ್ರೀ ಯಶ್ ಅವರೂ ಸೇರಿದಂತೆ ಕೆಲವರು ನನ್ನೊಂದಿಗೆ ಚರ್ಚಿಸಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ನನಗೂ ಸಹಾನುಭೂತಿಯಿದೆ. ಆದರೆ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಮ್ಮ ನೌಕರ ಬಂಧುಗಳು ಕರ್ತವ್ಯಕ್ಕೆ ಹಾಜರಾಗಿ ಮುಷ್ಕರ ಸ್ಥಗಿತಗೊಳಿಸಿದರೆ ಮತ್ತೆ ಮಾತುಕತೆ ಪ್ರಕ್ರಿಯೆ ಮುಂದುವರೆದು ನೌಕರರಿಗೇ ಹೆಚ್ಚಿನ ಅನುಕೂಲವಾಗುತ್ತದೆ. ಆದರೆ ಕೆಲವು ಪಟ್ಟಭದ್ರರ ಚಿತಾವಣೆಯಿಂದ ಇದು ಕೈಗೂಡುತ್ತಿಲ್ಲ.

    ಇನ್ನಾದರೂ ಸರ್ಕಾರದ ಸಕಾರಾತ್ಮಕ ಮನಸ್ಸನ್ನು ಅರ್ಥಮಾಡಿಕೊಂಡು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮತ್ತೊಮ್ಮೆ ನಮ್ಮ ನೌಕರ ವರ್ಗದವರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಎಂದು ಪತ್ರದಲ್ಲಿ ತಿಳಿಸಿದ್ದಾರೆ.

  • ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಾರಿಗೆ ನೌಕರರು

    ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಾರಿಗೆ ನೌಕರರು

    – ಹಲವು ಬೇಡಿಕೆ ಈಡೇರಿಸುವಂತೆ ಪತ್ರದಲ್ಲಿ ಮನವಿ

    ಮಡಿಕೇರಿ: ಆರನೇ ವೇತನ ಜಾರಿಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಕೊಡಗಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.

    ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆಯಿಂದಲೇ ಬಸ್ಸುಗಳು ಮಡಿಕೇರಿಯ ಡಿಪೋ ಬಿಟ್ಟು ರಸ್ತೆಗೆ ಇಳಿಯಲಿಲ್ಲ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಖಾಸಗಿ ಬಸ್ ಮತ್ತು ಕ್ಯಾಬ್ ಗಳು ತಮ್ಮ ಸೇವೆ ಆರಂಭಿಸಿದ್ದರಿಂದ ಪ್ರಯಾಣಿಕರು ನಿರಾಳರಾದರು. ಸರ್ಕಾರಿ ಬಸ್ ಒಂದೇ ಒಂದು ಕೂಡ ಡಿಪೋ ಬಿಟ್ಟು ಹೊರಗೆ ಬಾರದಿದ್ದರಿಂದ ಮಡಿಕೇರಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಹೊಡೆಯುತಿತ್ತು. ದೂರ ದೂರದ ಹೊರ ಜಿಲ್ಲೆಗಳಿಗೆ ಹೋಗಬೇಕಾಗಿದ್ದ ಕೆಲವರು ಬಸ್‍ಗಳ ವ್ಯವಸ್ಥೆ ಇಲ್ಲದೆ ಪರದಾಡಿದರು.

    ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಗಮಿಸಿದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಮುಷ್ಕರ ನಡೆಸುವ ಮೂಲಕ ನಿಮ್ಮ ಸಂಸ್ಥೆಗೆ ನೀವೇ ನಷ್ಟ ಮಾಡುತ್ತಿದ್ದೀರಿ. ಅನ್ನ ಕೊಡುವ ಸಂಸ್ಥೆಗೆ ಮಣ್ಣು ಹಾಕುತ್ತಿದ್ದೀರಿ ಎಂದು ಗರಂ ಆದರು. ಅಷ್ಟೇ ಅಲ್ಲ ನಿಮ್ಮ ಪ್ರತಿಭಟನೆಯನ್ನು ಕೈಬಿಡಿ, ನಾವು ಕೂಡ ಕಳೆದ ಒಂದು ವರ್ಷದಿಂದ ಅರ್ಧ ಸಂಬಳ ತೆಗೆದುಕೊಳ್ಳುತ್ತಿದ್ದೇವೆ. ಕೋವಿಡ್ ನಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇದು ಸರಿಯಾದ ಬಳಿಕ ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ ಎಂದರು. ಇದಕ್ಕೆ ನೌಕರರು ಕೂಡ ಸರ್ಕಾರ ಈಗ ಆರನೇ ವೇತನ ಜಾರಿಮಾಡಲಿ, ಆರ್ಥಿಕ ಸಂಕಷ್ಟದಿಂದ ಹೊರಬಂದ ಬಳಿಕವೇ ನಮಗೆ ಸಮಾನ ವೇತನ ನೀಡಲಿ ಎಂದು ಆಗ್ರಹಿಸಿ ಅಪ್ಪಚ್ಚು ರಂಜನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  • ಬೇಡಿಕೆಗಳ ಈಡೇರಿಕೆಗೆ ಬೋಂಡಾ, ಬಜ್ಜಿ ಮಾರಿ ಸಾರಿಗೆ ನೌಕರರ ಪ್ರತಿಭಟನೆ

    ಬೇಡಿಕೆಗಳ ಈಡೇರಿಕೆಗೆ ಬೋಂಡಾ, ಬಜ್ಜಿ ಮಾರಿ ಸಾರಿಗೆ ನೌಕರರ ಪ್ರತಿಭಟನೆ

    ಹಾವೇರಿ: ಒಂಬತ್ತು ಬೇಡಿಕೆಗಳ ಈಡೇರಿಕೆಗಾಗಿ ಬೋಂಡಾ, ಬಜ್ಜಿ, ಮಿರ್ಚಿ, ಟೀ ಮಾರಾಟ ಮಾಡಿ ಸಾರಿಗೆ ನೌಕರರು ರಾಣೇಬೆನ್ನೂರು ನಗರದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಬಳಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ, ಆರೋಗ್ಯ ಭಾಗ್ಯ ವಿಮಾ ಯೋಜನೆ, ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ಜಾರಿ ಸೇರಿದಂತೆ ವಿವಿಧ ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

    ಈ ವೇಳೆ ಸಾರಿಗೆ ನೌಕರರು ಬೋಂಡಾ, ಬಜ್ಜಿ, ಮಿರ್ಚಿ, ಟೀ ತಯಾರಿಸಿ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಾರಿಗೆ ನೌಕರರ ಬೇಡಿಕೆ ಈಡೇರಿಸುವವರೆಗೆ ದಿನಕ್ಕೊಂದು ರೀತಿಯಲ್ಲಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧಾರ ಮಾಡಿದ್ದು, ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.