Tag: Government Staff

  • ರಾಯಚೂರಿನಲ್ಲಿ ಸರ್ಕಾರಿ ಕಚೇರಿಗಳ ಸಿಬ್ಬಂದಿ ನಾಪತ್ತೆ – ಭ್ರಷ್ಟಾಚಾರದ ಹೊಗೆ?

    ರಾಯಚೂರಿನಲ್ಲಿ ಸರ್ಕಾರಿ ಕಚೇರಿಗಳ ಸಿಬ್ಬಂದಿ ನಾಪತ್ತೆ – ಭ್ರಷ್ಟಾಚಾರದ ಹೊಗೆ?

    ರಾಯಚೂರು: ಜಿಲ್ಲೆಯಲ್ಲಿ ಒಬ್ಬರಾದ ಮೇಲೆ ಒಬ್ಬರು ಸರ್ಕಾರಿ ಸಿಬ್ಬಂದಿ ನಾಪತ್ತೆಯಾಗುತ್ತಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ. ರಾಯಚೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ನಾಪತ್ತೆ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಸರ್ಕಾರಿ ಕಚೇರಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

    ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯ ಸಿಬ್ಬಂದಿ ಶಿವಪ್ಪ ಆಗಸ್ಟ್ 24 ರಿಂದ ನಾಪತ್ತೆಯಾಗಿದ್ದಾರೆ. ಈಗಾಗಲೇ ಸಹಾಯಕ ಆಯುಕ್ತರ ಕಚೇರಿಯ ಸಿಬ್ಬಂದಿ ಪ್ರಕಾಶಬಾಬು ನಾಪತ್ತೆಯಾಗಿ ಐದು ದಿನಗಳಾಗಿವೆ. ನಾಪತ್ತೆಯಾಗಿರುವ ಸಿಬ್ಬಂದಿ ಶಿವಪ್ಪ ಪತ್ನಿಯಿಂದ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೂ ಪ್ರಕಾಶಬಾಬು ನಾಪತ್ತೆಯ ಪ್ರಕರಣ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದ್ದು ಈಗಾಗಲೇ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಸರ್ಕಾರಿ ಕಚೇರಿಯ ಸಿಬ್ಬಂದಿಗಳ ನಾಪತ್ತೆ ತೀವ್ರ ಕುತೂಹಲ ಮೂಡಿಸಿದೆ. ಹಲವಾರು ಅನುಮಾನಗಳಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಪತ್ತೆ ಪ್ರಕರಣಗಳ ಹಿಂದೆ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ಪ್ರಕರಣಗಳನ್ನ ಭೇದಿಸಲು ಪೊಲೀಸ್ ಇಲಾಖೆ ಈಗಾಗಲೇ ತಂಡಗಳನ್ನ ರಚಿಸಿದ್ದು, ತನಿಖೆ ಚುರುಕುಕೊಂಡಿದೆ. ಇದನ್ನೂ ಓದಿ: ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

  • ನಿರ್ದಿಷ್ಟ ಇಲಾಖೆಯ ಸರ್ಕಾರಿ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು: ಸಿಎಸ್

    ನಿರ್ದಿಷ್ಟ ಇಲಾಖೆಯ ಸರ್ಕಾರಿ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು: ಸಿಎಸ್

    ಬೆಂಗಳೂರು: ನಾವು ಸೂಚಿಸಿದ ಇಲಾಖೆಯ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು, ಕೆಲ ಇಲಾಖೆಗಳಲ್ಲಿ ಶೇ.100ರಷ್ಟು ಹಾಗೂ ಇನ್ನು ಕೆಲ ಇಲಾಖೆಗಳಲ್ಲಿ ಶೇ.50ರಷ್ಟು ಸಿಬ್ಬಂದಿ ರೊಟೇಷನ್ ಆಧಾರದಲ್ಲಿ ಕೆಲಸ ಮಾಡಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

    ಈ ಕುರಿತು ಆದೇಶ ಹೊರಡಿಸಿರುವ ಅವರು, ಕಂದಾಯ, ಗೃಹ, ಆರೋಗ್ಯ, ವೈದಕೀಯ, ಒಳಾಡಳಿತ ಸಿಬ್ಬಂದಿ ಶೇ.100ರಷ್ಟು ಕರ್ತವ್ಯಕ್ಕೆ ಹಾಜರಿರಬೇಕು. ಪಂಚಾಯತ್ ರಾಜ್, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ಆರ್ಥಿಕ, ಪಶುಸಂಗೋಪನೆ, ಕೃಷಿ, ಕಾರ್ಮಿಕ, ತೋಟಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳಲ್ಲಿ ಶೇ.50ರಷ್ಟು ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

    ಉಳಿದ ಇಲಾಖೆಗಳಿಗೆ ವಿನಾಯಿತಿ ನೀಡಲಾಗಿದ್ದು, ಅಗತ್ಯ ಇದ್ದಾಗ ಕಾರ್ಯದರ್ಶಿಯವರು ಸೂಚನೆ ನೀಡಿದ ತಕ್ಷಣ ಕೆಲಸಕ್ಕೆ ಹಾಜರಾಗಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ದೃಷ್ಟಿಹೀನ, ದೈಹಿಕ ಅಂಗವೈಕಲ್ಯ, ಗರ್ಭಿಣಿ ಮಹಿಳಾ ಸಿಬ್ಬಂದಿ ಕಚೇರಿ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಈ ಆದೇಶ ಮೇ 12ರ ವರೆಗೂ ಜಾರಿಯಲ್ಲಿ ಇರುತ್ತದೆ ಎಂದು ರವಿಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

  • ದುಷ್ಕರ್ಮಿಗಳಿಂದ ಬಸ್ಸಿಗೆ ಕಲ್ಲು ತೂರಾಟ – ಮುಂಭಾಗದ ಗಾಜು ಪುಡಿ ಪುಡಿ

    ದುಷ್ಕರ್ಮಿಗಳಿಂದ ಬಸ್ಸಿಗೆ ಕಲ್ಲು ತೂರಾಟ – ಮುಂಭಾಗದ ಗಾಜು ಪುಡಿ ಪುಡಿ

    ಬಳ್ಳಾರಿ: ಸಾರಿಗೆ ನೌಕರರ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಬಳ್ಳಾರಿಯಲ್ಲಿ ತಡರಾತ್ರಿ ಮತ್ತೊಂದು ಬಸ್ಸಿಗೆ ಕಲ್ಲೂ ತೂರಾಟ ಮಾಡಲಾಗಿದೆ.

    ಹೊಸಪೇಟೆಯಿಂದ ಬಳ್ಳಾರಿಗೆ ಬರುತ್ತಿದ್ದ ಬಸ್, ಅಲ್ಲಿಪುರ ಬಳಿ ಬರುತ್ತಿದ್ದಂತೆಯೇ ಕಲ್ಲು ತೂರಿ ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಕಲ್ಲು ಹೊಡೆದಿದ್ದರಿಂದ ಬಸ್ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿದೆ. ಈ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

    ನಿನ್ನೆ ಮಧ್ಯಾಹ್ನ ಎರಡು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಸಾರಿಗೆ ನೌಕರ ಮುಷ್ಕರದ ನಡುವೆಯೂ ಬಸ್ ಸಂಚಾರಕ್ಕೆ ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಹೆಲ್ಮೆಟ್ ಹಾಕಿಕೊಂಡು ಬಂದು ಬಸ್ಸಿನ ಗ್ಲಾಸ್ ಹೊಡೆದಿದ್ದಾರೆ. ಈ ಬಸ್ಸುಗಳನ್ನು ಬಳ್ಳಾರಿ ಗ್ರಾಮೀಣ ಠಾಣೆಗೆ ರವಾನಿಸಲಾಗಿತ್ತು.

    ಒಟ್ಟು ಈವರೆಗೂ ಬಳ್ಳಾರಿ ಜಿಲ್ಲೆಯಾದ್ಯಂತ ಮೂರು ಬಸ್ಸಿಗೆ ಕಲ್ಲೂ ತೂರಾಟ ನಡೆಸಲಾಗಿದೆ. ನಿನ್ನೆ ರಾತ್ರಿ ನಡೆದ ಘಟನೆ ಸಂಬಂಧ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

  • ವೈದ್ಯರು, ಸರ್ಕಾರಿ ಸಿಬ್ಬಂದಿ ಹಿತಕ್ಕಾಗಿ ಪಣ – 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರಿಸಿದ ಉಡುಪಿ ಅಬಕಾರಿ ಇಲಾಖೆ

    ವೈದ್ಯರು, ಸರ್ಕಾರಿ ಸಿಬ್ಬಂದಿ ಹಿತಕ್ಕಾಗಿ ಪಣ – 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರಿಸಿದ ಉಡುಪಿ ಅಬಕಾರಿ ಇಲಾಖೆ

    ಉಡುಪಿ: ಮದ್ಯವ್ಯಸನಿಗಳ ಹಿತ ಕಾಯ್ದು ಸರ್ಕಾರದ ಬೊಕ್ಕಸ ತುಂಬಿಸುವುದು ಅಬಕಾರಿ ಇಲಾಖೆಯ ಕೆಲಸ. ಆದರೆ ಕೊರೊನಾ ವೈರಸ್‍ನಿಂದ ಭಾರತ ಲಾಕ್‍ಡೌನ್ ಆಗಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ಉಡುಪಿ ಅಬಕಾರಿ ಇಲಾಖೆ ಜನ ಮೆಚ್ಚುವ ಕೆಲಸ ಮಾಡಿದೆ.

    ಉಡುಪಿ ಅಬಕಾರಿ ಇಲಾಖೆ ಮಹಾಮಾರಿ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸರ್ಕಾರಿ ಸಿಬ್ಬಂದಿಗಾಗಿ 5 ಸಾವಿರ ಲೀಟರ್ ಸ್ಯಾನಿಟೈಸರ್ ತಯಾರು ಮಾಡಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಉಡುಪಿಯಲ್ಲಿ ತಯಾರು ಮಾಡಿದ ಸ್ಯಾನಿಟೈಸರ್ ರಾಜ್ಯಕ್ಕೆ ಮಾದರಿಯಾಗಿದೆ. ದೇಶಾದ್ಯಂತ ಕೊರೊನಾ ವೈರಸ್ ವಿಪರೀತ ಹರಡಲು ಶುರುವಾದಾಗ ಸ್ಯಾನಿಟೈಸರ್ ಮತ್ತು ಮಾಸ್‍ಗಾಗಿ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಲಾಗಿತ್ತು. ಕಂಪನಿಗಳಲ್ಲೂ ಸ್ಟಾಕ್ ಸಂಪೂರ್ಣ ಖಾಲಿಯಾಯಿತು. ರಾಜ್ಯ ಸಂಪೂರ್ಣ ಲಾಕ್‍ಡೌನ್ ಆದ ಸಂದರ್ಭ ಅಬಕಾರಿ ಇಲಾಖೆಗೆ ಪರ್ಯಾಯ ಜವಾಬ್ದಾರಿಯೊಂದನ್ನು ಹೊತ್ತುಕೊಂಡಿತು. ತನ್ನ ಇಲಾಖೆಯ ಮೂಲಕ ವೈದ್ಯಕೀಯ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸ್ಯಾನಿಟೈಸರ್ ತಯಾರು ಮಾಡಿಕೊಡಲು ಇಲಾಖೆ ಪಣ ತೊಟ್ಟಿತ್ತು.

    ಕೊರೊನಾ ವಿರುದ್ಧ ಹೋರಾಡುವ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ಕಂದಾಯ ಇಲಾಖೆ ಹೀಗೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ, ಪೊಲೀಸರಿಗೆ ಅಗತ್ಯವಾದ ಸ್ಯಾನಿಟೈಸರ್ ತಯಾರು ಮಾಡಿ ಉಡುಪಿಯ ಅಬಕಾರಿ ಇಲಾಖೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಬಕಾರಿ ಇಲಾಖೆ ಔಷಧ ನಿಯಂತ್ರಣ ಇಲಾಖೆಯಿಂದ ಸ್ಯಾನಿಟೈಸರ್ ತಯಾರಿಸಲು ಐದು ವರ್ಷಕ್ಕೆ ಪರವಾನಗಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗೆ ಈಗಾಗಲೇ 4,000 ಲೀಟರ್ ಸ್ಯಾನಿಟೈಸರನ್ನು ತಯಾರು ಮಾಡಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಇನ್ನೂ 2,000 ಲೀಟರ್ ಸ್ಯಾನಿಟೈಸರ್ ಗೆ ಬೇಡಿಕೆಯಿದೆ.

    375 ml ಸ್ಯಾನಿಟೈಸರ್ ಬಾಟಲಿಗೆ ಮಾರುಕಟ್ಟೆಯಲ್ಲಿ 197.50 ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಅಬಕಾರಿ ಇಲಾಖೆ ಸ್ಯಾನಿಟೈಸರ್ ಬಾಟಲಿಗೆ 96 ರೂಪಾಯಿ ಮಾತ್ರ ನಿಗದಿ ಮಾಡಿದೆ. ಇದರ ಖರ್ಚನ್ನು ಉಡುಪಿ ಜಿಲ್ಲಾಡಳಿತವು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಭರಿಸುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಬಕಾರಿ ಇಲಾಖೆಯ ಉಪ ಆಯುಕ್ತ ನಾಗೇಶ್ ಕುಮಾರ್, ಪಡುಬಿದ್ರೆಯ ಡಿಸ್ಟಿಲರಿ ಘಟಕದಲ್ಲಿ ನಾವು ಸ್ಯಾನಿಟೈಸರ್ ತಯಾರು ಮಾಡುತ್ತಿದ್ದೇವೆ. ಸರ್ಕಾರಿ ಇಲಾಖೆಗೆ ನಾವು ನಿಗದಿತ ಪ್ರಮಾಣದಲ್ಲಿ ಇದನ್ನು ಪೂರೈಕೆ ಮಾಡುತ್ತಿದ್ದೇವೆ. ಕಳ್ಳಬಟ್ಟಿ ಸಾರಾಯಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ತಡೆಯುವ ಜವಾಬ್ದಾರಿ ಜೊತೆ ಸರ್ಕಾರಿ ಎಂಎಸ್‍ಐಎಲ್‍ಗೆ ರಕ್ಷಣೆ ಕೊಡುತ್ತಿದ್ದೇವೆ. ಈ ನಡುವೆ ಜನ ಹಿತವಾದ ಕೆಲಸ ಮಾಡುತ್ತಿದ್ದೇವೆ ಎಂಬ ತೃಪ್ತಿ ಇಲಾಖೆಗೆ ಇದೆ. ಯಾವುದೇ ಕಾರಣಕ್ಕೂ ಇದನ್ನು ದುರುಪಯೋಗ ಮಾಡಬಾರದು. ಸ್ಯಾನಿಟೈಸರ್ ನಲ್ಲಿ ವಿಷಕಾರಿ ಅಂಶಗಳು ಇವೆ ಎಂದು ಅವರು ಮಾಹಿತಿ ನೀಡಿದರು.