Tag: Government Schools

  • ನಾಲ್ಕು ಸರ್ಕಾರಿ ಶಾಲೆಗಳನ್ನ ದತ್ತು ಪಡೆದ ಕಿಚ್ಚ ಸುದೀಪ್

    ನಾಲ್ಕು ಸರ್ಕಾರಿ ಶಾಲೆಗಳನ್ನ ದತ್ತು ಪಡೆದ ಕಿಚ್ಚ ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ಆಟೋಚಾಲಕನ ತಂಗಿಯ ಮದುವೆಯ ಖರ್ಚನ್ನು ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.

    ಹೌದು..ನಟ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೂರು ಹಾಗೂ ಹಿರಿಯೂರು ತಾಲೂಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಾಗಿದೆ.

    ಪಿ. ಒಬವನಹಳ್ಳಿ, ಚಳ್ಳಕೆರೆ ಶಾಲೆ, ಪರುಶರಾಂಪುರ ಶಾಲೆ ಮತ್ತು ಚಿತ್ರದುರ್ಗದ ಶಾಲೆಯನ್ನು ದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿಯನ್ನು ವಹಿಸಿಕೊಂಡಿದ್ದಾರೆ. ಈ ಶಾಲೆಗಳಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ನೀಡುವುದಕ್ಕೆ ಟ್ರಸ್ಟ್ ಮುಂದಾಗಿದೆ.

    ಕಟ್ಟಡ ದುರಸ್ತಿ, ಶೌಚಾಲಯ ವ್ಯವಸ್ಥೆ, ಪೀಠೋಪಕರಣ, ಶಾಲೆಗಳಿಗೆ ಕಂಪ್ಯೂಟರ್ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಟ್ರಸ್ಟ್ ಹಮ್ಮಿಕೊಂಡಿದೆ. ಅಲ್ಲದೇ ಗುಣಮಟ್ಟದ ಶಿಕ್ಷಣ ಸೇರಿದ್ದಂತೆ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಕರೆತರುವ ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತಿದೆ. ಸುದೀಪ್ ಅವರ ಸಾಮಾಜಿಕ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ಈ ಹಿಂದೆಯೂ ಕೂಡ ಸುದೀಪ್ ಚಾರಿಟೇಬಲ್ ಟ್ರಸ್ಟ್ ಕಡೆಯಿಂದ ಈ ರೀತಿಯ ಸಾಮಾಜಿಕ ಕಾರ್ಯಗಳು ಆಗಿವೆ. ಲಾಕ್‍ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಬಡ ಜನರಿಗೆ ಸುದೀಪ್ ಟ್ರಸ್ಟ್ ಸಹಾಯ ಹಸ್ತ ಚಾಚಿತ್ತು. ಪೊಲೀಸರ ಸಹಯೋಗದಿಂದ ಟ್ರಸ್ಟ್ ಮೂಲಕ ಅಭಿಮಾನಿಗಳು ಪ್ಯಾಕೆಟ್‍ನಲ್ಲಿ ಆಹಾರವನ್ನು ತಂದು ಅಸಹಾಯಕರು, ವಿಕಲಚೇತನರು ಸೇರಿದಂತೆ ಅನೇಕರಿಗೆ ನೀಡಿದ್ದರು. ಜೊತೆಗೆ ರಸ್ತೆಯಲ್ಲಿರುವ ಶ್ವಾನಗಳಿಗೂ ಊಟ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು.

  • ಹಳೆಯ ಶಾಲೆಗೆ ಹೊಸ ಸ್ಪರ್ಶ- ಕುವೆಂಪು ಶತಮಾನೋತ್ಸವ ಶಾಲೆ ಕಲರ್‌ಫುಲ್‌

    ಹಳೆಯ ಶಾಲೆಗೆ ಹೊಸ ಸ್ಪರ್ಶ- ಕುವೆಂಪು ಶತಮಾನೋತ್ಸವ ಶಾಲೆ ಕಲರ್‌ಫುಲ್‌

    ಗದಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಜಾಸ್ತಿ. ಇಂದಿನ ದಿನಗಳಲ್ಲಂತೂ ಖಾಸಗಿ ಶಾಲೆಗಳು ಹೆಚ್ಚಾಗುತ್ತಿರುವ ಪರಿಣಾಮ ಅದೆಷ್ಟೋ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಆದರೆ ಗದಗ ತಾಲೂಕಿನ ಅಸುಂಡಿ ಗ್ರಾಮದ ಹಳೆಯದಾದ ಕುವೆಂಪು ಶತಮಾನೋತ್ಸವದ ಸರ್ಕಾರಿ ಶಾಲೆಯು ಯಾವ ಖಾಸಗಿ ಶಾಲೆಗೆ ಕಮ್ಮಿಯಿಲ್ಲ ಎನ್ನುವಂತಿದೆ.

    ಹಚ್ಚ ಹಸಿರುನಿಂದ ಕಂಗೊಳಿಸುವ ಶಾಲಾ ಪರಿಸರದಲ್ಲಿ ಮಕ್ಕಳು “ಅಕ್ಷರ” ಸಹ ಪಸರಿಸಿದ್ದಾರೆ. 2005ರಲ್ಲಿ ಈ ಶಾಲೆ ಶತಮಾನ ಕಂಡಿರುವುದರಿಂದ ಈಗ ಕುವೆಂಪು ಶತಮಾನೋತ್ಸವ ಶಾಲೆಯಾಗಿ, ಜಿಲ್ಲೆಗೆ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ಸಾವಿರಾರು ಜನರ ಬಾಳು ಬೆಳಗಿದ ಜ್ಞಾನ ವಿದ್ಯಾದೇಗುಲವಿದು. ಸದ್ಯ 345 ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವ ಶಾಲೆ ವರ್ಷದಿಂದ ವರ್ಷಕ್ಕೆ ತನ್ನ ದಾಖಲಾತಿ ಹೆಚ್ಚಿಸಿಕೊಳ್ಳುತ್ತಿದೆ.

    ಈ ವಿದ್ಯಾಪೀಠದಲ್ಲಿನ ಚಿಣ್ಣರ ಕೈಕುಂಚದಿಂದ ಅರಳತ್ತಿರುವ ಕಲಾಲೋಕದಿಂದ ಸಾಲು ಸಾಲು ಮರಗಳ ಸುಂದರ ಪರಿಸರದಲ್ಲಿ ಕಲರ್‍ಫುಲ್ ಅಕ್ಷರಗಳು ಮಿನುಗುತ್ತಿವೆ. ಹಚ್ಚ ಹಸಿರಿನ ನಡುವೆ ವಿದ್ಯಾರ್ಥಿಗಳ ಲೋಕವೇ ಅನಾವರಣವಾದಂತಿದೆ. ಈ ಸುಂದರ ಪ್ರಕೃತಿ ಮಡಿಲಲ್ಲಿ ವಿದ್ಯಾದೇವತೆ ಸರಸ್ವತಿಯೇ ಧರೆಗಿಳಿದು ಬರುವಂತಿದೆ. ಮೇಲಾಗಿ ಸರ್ಕಾರಿ ಶಾಲೆಗಳೆಂದರೆ ಒಂದು ಹೆಜ್ಜೆ ಹಿಂದೆಯಿಡುವ ವಿದ್ಯಾರ್ಥಿಗಳಿಗೆ ಈ ಶಾಲೆ ಮಾತ್ರ ಜ್ಞಾನಾರ್ಜನೆಯ ದೇಗುಲವಾಗಿದೆ.

    ಕೇವಲ ನಾಲ್ಕು ಗೋಡೆಗಳ ಮಧ್ಯೆ ವಿದ್ಯೆ ಆಲಿಯುವ ವಿದ್ಯಾರ್ಥಿಗಳು ಇಲ್ಲಿನ ಸ್ವಚ್ಛ ಪರಿಸರದ ವಾತಾವರಣದಲ್ಲೇ ಪಾಠ ಕಲಿಯುತ್ತಾರೆ. ಹೆಸರೇ ಹೇಳುವಂತೆ ಕುವೆಂಪುವಿನ ರಸಕಾವ್ಯದ ಕವಿತೆಯಷ್ಟೇ ಪಾವಿತ್ರ್ಯತೆಯನ್ನು ಶಾಲೆ ಹೊಂದಿದೆ. ಇಲ್ಲಿಯ ಮಕ್ಕಳು ಇಲ್ಲಿಯ ಪರಿಸರ, ಶಿಕ್ಷಣ ನೋಡಿ ಖಾಸಗಿ ಶಾಲೆಯಿಂದ ನಮ್ಮ ಶಾಲೆಗೆ ಬರುತ್ತಿದ್ದಾರೆ. ಮನೆ ಸಿಂಗಾರ ಮಾಡಿದಂತೆ ನಮ್ಮ ಶಾಲೆಕೂಡ ಶೃಂಗಾರಗೊಂಡಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಹೇಳಿದ್ದಾರೆ.

    ವಿದ್ಯಾರ್ಥಿಗಳೇ ಕೈಯಲ್ಲಿ ಕುಂಚ ಹಿಡಿದು ಮರಗಳಿಗೆ ಅಲಂಕಾರ ಮಾಡಿ ಕಲಾಲೋಕವನ್ನು ಸೃಷ್ಠಿಸುತ್ತಿದ್ದಾರೆ. ಶಾಲಾ ಆವರಣದ ಪ್ರತಿ ಮರಗಳಲ್ಲಿಯೂ ತಮ್ಮ ಪಠ್ಯಾನುಸಾರದ ಚಿತ್ರಣಗಳನ್ನು ಬಿಡಿಸಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಯೂಟ್ಯೂಬ್, ವಾಟ್ಸಪ್, ಗೂಗಲ್, ಟ್ವಿಟರ್ ನಂತಹ ಮಾಹಿತಿ ಕೂಡ ಗಿಡಗಳಲ್ಲಿ ಚಿತ್ರಿಸಲಾಗಿದೆ. ಸೌರಮಂಡಲ, ಸೂರ್ಯಗ್ರಹಣ, ಚಂದ್ರ ಗ್ರಹಣ ಸೇರಿದಂತೆ ಹೀಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಬಣ್ಣಗಳ ಚಿತ್ತಾರದ ಮೂಲಕ ಪ್ರದರ್ಶಿಸಿದ್ದಾರೆ. ಈ ಮೂಲಕ ನಮ್ಮ ಶಾಲೆಯೇ ಗ್ರೇಟ್ ಅಂತ ತೋರಿಸುತ್ತಿದ್ದಾರೆ ಎಂದು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶಾಲೆಗೆ ಬರುವುದಕ್ಕೆ ಖುಷಿಯಾಗುತ್ತದೆ. ಇಲ್ಲಿ ಗಿಡಗಳಿಗೆ ನೀರುನಿಸಿ ಮಕ್ಕಳಂತೆ ಜೋಪಾನ ಮಾಡಿದ್ದೇವೆ. ಶಾಲೆ ಬಿಟ್ಟು ಹೋಗುವುದಕ್ಕೆ ಮನಸ್ಸು ಬರುವುದಿಲ್ಲ ಎಂದು ಶಾಲಾ ವಿದ್ಯಾರ್ಥಿಗಳು ಹೇಳುತ್ತಾರೆ.

    ಕುವೆಂಪು ಶತಮಾನೋತ್ಸವ ಸಂಭ್ರಮದಲ್ಲಿರುವ ಅಸುಂಡಿ ಶಾಲಾ ಆವರಣದಲ್ಲಿ 750ಕ್ಕೂ ಅಧಿಕ ವಿವಿಧ ಜಾತಿಯ ಗಿಡಮರಗಳಿವೆ. 200 ತೆಂಗು, 50 ಪಪ್ಪಾಯಿ, 50 ಪೇರಲ, 25 ಹುಣಸೆ, 90 ಮಾವು, 10 ಆಲದಮರ, ಬೇವು, 200 ತೇಗ ಸೇರಿದಂತೆ ನೂರಾರು ಗಿಡಗಳನ್ನು ನೆಡಲಾಗಿದೆ. ಸರ್ಕಾರದ ಅನುದಾನ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆದರು ಕೂಡ ಇಂದಿನ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚತ್ತಿವೆ. ಆದರೆ ಗದುಗಿನ ಅಸುಂಡಿ ಕುವೆಂಪು ಶಾಲೆ ಮಾತ್ರ ಇತರೆ ಶಾಲೆಗಳಿಗೆ ಸೃಜನಾತ್ಮಕ ಮಾದರಿ ಶಾಲೆಯಾಗಿದೆ.

  • ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

    ವಿಜಯವಾಡ: ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

    ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸುವ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ, ರಾಜಕಾರಣಿ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ವೇಳೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಜಗನ್, ನಿಮ್ಮ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.

    ಮಾತ್ರವಲ್ಲದೆ ಸರ್, ವೆಂಕಯ್ಯ ನಾಯ್ಡು ಅವರೇ ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅವರಿಗೂ ಇದೇ ರೀತಿಯ ಪ್ರಶ್ನೆ ಕೇಳಿದ್ದು, ನಿಮಗೆ ಮೂವರು ಪತ್ನಿಯರು, ನಾಲ್ಕೈದು ಮಕ್ಕಳಿದ್ದಾರೆ. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ಎಂದು ಕೇಳಿದ್ದಾರೆ.

    ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಆ ಎಲ್ಲ ನಾಯಕರು ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಎಂದು ಸವಾಲು ಎಸೆದಿದ್ದಾರೆ.

    ಇಂದು ನಾವು ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ. ಇಂಗ್ಲಿಷ್ ಇಲ್ಲದೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ನಮ್ಮ ಎಲ್ಲ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿರಬೇಕು ಎಂದು ಪ್ರತಿಪಾದಿಸಿದರು.

    1ರಿಂದ 6ನೇ ತರಗತಿಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020-21) ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಲಿದೆ ಎಂದು ರೆಡ್ಡಿ ಇದೇ ವೇಳೆ ಘೋಷಿಸಿದರು. ಇದಾದ ಒಂದರಿಂದ ನಾಲ್ಕು ವರ್ಷಗಳಲ್ಲಿ 10ನೇ ತರಗತಿ ವರೆಗೆ ಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ ತೆಲುಗು ಅಥವಾ ಉರ್ದು ಕಡ್ಡಾಯ ವಿಷಯವಾಗಲಿದೆ ಎಂದರು.

  • ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

    – ಮಸೀದಿಯಲ್ಲಿ ಪ್ರಾರ್ಥನೆಗೆ ನಿಷೇಧ

    ಶ್ರೀನಗರ: ಕಣಿವೆ ರಾಜ್ಯ ಸದ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಎರಡು ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ವಿಕೃತಿ ಮೆರೆದ ಪರಿಣಾಮ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ನಿಷೇಧ ಹೇರಲಾಗಿದೆ.

    ಗುರುವಾರ ರಾತ್ರಿ ದುಷ್ಕರ್ಮಿಗಳು ಎರಡು ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಚವಾಲ್ಗಾಮ್ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬೆಂಕಿ ಹಚ್ಚಿ, ಬಳಿಕ ಅದೇ ರೀತಿ ವಾಡೂನಲ್ಲಿರುವ ಮತ್ತೊಂದು ಶಾಲೆಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಶುಕ್ರವಾರ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ನಡೆಯಬೇಕಿದ್ದ ಸಾಮೂಹಿಕ ನಮಾಜ್ ಅನ್ನು ನಿಷೇಧಿಸಲಾಗಿತ್ತು. ಈ ವೇಳೆ ಈ ನಿರ್ಧಾರವನ್ನು ವಿರೋಧಿಸಿ ಶ್ರೀನಗರದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಅವರ ವಾಹನಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆಗ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

    ಈ ಹಿಂದೆ ಗುರುವಾರ ಸಂಜೆ ಕಾಶ್ಮೀರದಲ್ಲಿ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದರು. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದರು. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.