Tag: government school

  • ಹಲವು ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿದ ಬೆಂಗ್ಳೂರು ಗ್ರಾಮಾಂತರ ಡಿಸಿ

    ಹಲವು ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿದ ಬೆಂಗ್ಳೂರು ಗ್ರಾಮಾಂತರ ಡಿಸಿ

    ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರರವರು ಇಂದು ಹಲವು ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ ಸೇರಿದಂತೆ ನಾಡ ಕಚೇರಿಗೆ ತೆರಳಿದ ಜಿಲ್ಲಾಧಿಕಾರಿ ಜನಸ್ನೇಹಿ ವ್ಯವಸ್ಥೆಗೆ ಒತ್ತು ನೀಡಿದರು. ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮ ಬಾಲ್ಯದ ಜೀವನವನ್ನ ಮೆಲಕುಹಾಕಿದ್ದಾರೆ.

    ಶಾಲೆಯ ಬಿಸಿಯೂಟದ ಸ್ವಚ್ಛತೆ ಆಹಾರದ ಗುಣಮಟ್ಟವನ್ನ ವೀಕ್ಷಿಸಿ, ಮಕ್ಕಳಿಗೆ ತಯಾರು ಮಾಡಿದ್ದ ಕೇಸರಿಬಾತ್ ಸವಿದರು. ನಂತರ ಆಡಳಿತ ವ್ಯವಸ್ಥೆ ಚುರುಕುಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಿಡವಂದ ಗ್ರಾಮಕ್ಕೆ ತೆರಳಿ ನೀಲಗಿರಿ ತೆರವಾದ ಜಮೀನುಗಳ ಕೃಷಿ ಚಟುವಟಿಕೆ ವೀಕ್ಷಿಸಿ ರೈತರೊಂದಿಗೆ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿಯನ್ನ ತಿಳಿದು ಸರ್ಕಾರ ಹಾಗೂ ಇಲಾಖೆಯಿಂದ ಬರುವಂತಹ ಸವಲತ್ತುಗಳನ್ನ ಪಡೆಯುವಂತೆ ರೈತರಿಗೆ ವಿವರಿಸಿದ್ದಾರೆ.

    ಆಡಳಿತದ ಒತ್ತಡದ ಜಂಜಾಟದ ನಡುವೆ ಜಿಲ್ಲಾಧಿಕಾರಿ ರವೀಂದ್ರ ರವರ ಜನಸ್ನೇಹಿ ಜಿಲ್ಲಾಧಿಕಾರಿಗಳ ಆಡಳಿತ ವ್ಯವಸ್ಥೆಗೆ ನೆಲಮಂಗಲ ತಾಲೂಕಿನ ಎಲ್ಲೆಡೆ ಜನರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳಿಗೆ ಶುರುವಾಗಿದೆ ಕಾಯಕಲ್ಪ ಕಾರ್ಯ

    ಪ್ರವಾಹ ಪೀಡಿತ ಗ್ರಾಮಗಳ ಶಾಲೆಗಳಿಗೆ ಶುರುವಾಗಿದೆ ಕಾಯಕಲ್ಪ ಕಾರ್ಯ

    – ಶಿಕ್ಷಣ ಇಲಾಖೆಯ ಕೆಲಸಕ್ಕೆ ಗ್ರಾಮಸ್ಥರ ಮೆಚ್ಚುಗೆ

    ಬಾಗಲಕೋಟೆ: ನೆರೆ ಹಾವಳಿಗೆ ತುತ್ತಾಗಿದ್ದ ಜಿಲ್ಲೆಯ ನಾನಾ ಕಡೆಗಳಲ್ಲಿನ ಶಾಲಾ ಕಟ್ಟಡಗಳ ಕಾಯಕಲ್ಪ ಕಾರ್ಯ ಹಲವು ಆರೋಪಗಳ ಮಧ್ಯೆಯೂ ಭರದಿಂದ ಸಾಗುತ್ತಿದೆ.

    ಕೃಷ್ಣ, ಘಟಪ್ರಭ ಮತ್ತು ಮಲಪ್ರಭ ನದಿಯಲ್ಲಿ ಕಳೆದ ಆಗಸ್ಟ್‍ನಲ್ಲಿ ಉಂಟಾದ ನೆರೆಯಿಂದ ಸಾವಿರಾರು ಮನೆ, ದೇವಸ್ಥಾನ, ಸಮುದಾಯ ಭವನ ಸೇರಿದಂತೆ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಶಾಲಾ ಕಟ್ಟಡಗಳೂ ಅನೇಕ ಕಡೆಗಳಲ್ಲಿ ನೆಲಸಮಗೊಂಡು, ಬಹುತೇಕ ಕಡೆಗಳಲ್ಲಿ ಶಿಥಿಲಗೊಂಡಿದ್ದವು. ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲಾ ಕಟ್ಟಡಗಳೇ ಕೊಚ್ಚಿ ಹೋದ ಮೇಲೆ ಅಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆ ಹೇಗೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.

    ಮಕ್ಕಳ ಶಾಲಾ ಸಾಮಗ್ರಿಗಳು ನೆರೆಯಲ್ಲಿ ಹಾಳಾಗಿದ್ದರೆ, ಕಲಿಕೆ ಮುಂದುವರಿಸಲು ಶಾಲಾ ಕಟ್ಟಡಗಳೇ ಇಲ್ಲವಲ್ಲ. ಮುಂದೆ ಹೇಗೆ ಎನ್ನುವ ಚಿಂತೆಯ ಮಧ್ಯೆ ಅಲ್ಲಲ್ಲಿ ಶಾಲಾ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ತಾತ್ಕಾಲಿಕ ಶೆಡ್‍ಗಳ ನಿರ್ಮಾಣ ಮಾಡಿದ್ದ ಜಿಲ್ಲಾಡಳಿತ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ದುರಸ್ತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಆರೋಪಗಳು ಸಾಮಾನ್ಯವಾಗಿದ್ದವು.

    ಇಂತಹ ಆರೋಪಗಳ ನಡುವೆ ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ ಗ್ರಾಮಗಳ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿರುವುದು ನೆರೆ ಗ್ರಾಮಸ್ಥರ ಶ್ಲಾಘನೆಗೆ ಒಳಗಾಗಿದೆ. ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ 113 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 316 ಕೋಣೆಗಳ ದುರಸ್ತಿ ಕಾರ್ಯ ನಡೆದಿದೆ. ಇದಕ್ಕಾಗಿ 2.69 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ ಆಯಾ ಎಸ್‍ಡಿಎಂಸಿ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ.

    ಸಂಪೂರ್ಣ ಹಾಳಾಗಿ ಬಿದ್ದು ಹೋದ ಶಾಲಾ ಕೊಠಡಿಗಳ ಬದಲಾಗಿ ಮಕ್ಕಳಿಗೆ ಶೈಕ್ಷಣಿಕ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ 94 ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಇಂತಹ 100 ಕೋಣೆಗಳ ಪುನರ್ ನಿರ್ಮಾಣಕ್ಕಾಗಿ 11.21 ಕೋಟಿ ರೂ.ಗಳ ಪ್ರಸ್ತಾವನೆ ಸಹ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುವ ಮಾಹಿತಿಯನ್ನು ಡಿಡಿಪಿಐ ಶ್ರೀಶೈಲ ಬಿರಾದಾರ ನೀಡಿದ್ದಾರೆ. ಜಿಲ್ಲೆಯ ಒಂಟಗೋಡಿ, ಬುದ್ನಿ ಬಿ.ಕೆಯಲ್ಲಿ ಪಿಇಎಸ್ ಸಂಸ್ಥೆಯು ಮಾದರಿ ಶಾಲೆಗಳ ನಿರ್ಮಾಣ ಕಾರ್ಯ ನಡೆದಿದೆ.

    ಮಣ್ಣೇರಿ, ಬೀರನೂರ, ತಳಕವಾಡಿ, ಢವಳೇಶ್ವರ ಗ್ರಾಮಗಳಲ್ಲಿ ವಿಪ್ರೋ ಸಂಸ್ಥೆಯವರ ಸಹಾಯಧನದಲ್ಲಿ ಹೊಸ ಶಾಲೆಗಳು ನಿರ್ಮಾಣಗೊಳ್ಳುತ್ತಿವೆ. ಶಾಲೆಗಳ ನಿರ್ಮಾಣ ಮತ್ತು ದುರಸ್ತಿ ಜತೆಗೆ ನೆರೆ ಹಾವಳಿಗೆ ತುತ್ತಾದ ಎಲ್ಲ ಗ್ರಾಮಗಳ ಶಾಲಾ ಮಕ್ಕಳಿಗೆ 2.39 ಲಕ್ಷ ಪುಸ್ತಕಗಳು ಸರಬರಾಜಾಗಿವೆ. ಬಾದಾಮಿ ತಾಲೂಕಿಗೆ 34 ಸಾವಿರ, ಹುನಗುಂದ ತಾಲೂಕಿಗೆ 75 ಸಾವಿರ, ಜಮಖಂಡಿ ತಾಲೂಕಿಗೆ 82 ಸಾವಿರ ಹಾಗೂ ಮುಧೋಳಕ್ಕೆ 48 ಸಾವಿರ ಹೊಸ ಪಠ್ಯ ಪುಸ್ತಕಗಳನ್ನು ಇಲಾಖೆ ಪೂರೈಕೆ ಮಾಡಿದೆ.

    ನೆರೆಯಲ್ಲಿ ಮಕ್ಕಳ ಶೂ, ಸಾಕ್ಸ್ ಕೂಡ ಹಾಳಾಗಿದ್ದು, 1,445 ಶಾಲೆಗಳಿಗೆ ಶೂ ಹಾಗೂ ಸಾಕ್ಸ್ ಗಳನ್ನು ಸಹ ಖರೀದಿಸಿ ವಿತರಿಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿದೆ. ಮಕ್ಕಳ ಕಲಿಕೆಗೆ ಅಗತ್ಯವಾದ ಬೋಧನಾ ಹಾಗೂ ಕಲಿಕಾ ಸಾಮಗ್ರಿಗಳಾದ ವಿವಿಧ ಮ್ಯಾಪ್ ಚಾರ್ಟ್ ಗಳು, ವಿಜ್ಞಾನದ ಉಪಕರಣಗಳು, ಗ್ಲೋಬ್ ಮುಂತಾದವುಗಳ ಖರೀದಿಗೆ ಈಗಾಗಲೇ 50 ಲಕ್ಷ ರೂ.ಗಳ ಅನುದಾನ ಸರ್ಕಾರದಿಂದ ಬಂದಿದೆ. ಶೀಘ್ರವೇ ನೆರೆ ಹಾವಳಿಯ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ತಲುಪಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಒಟ್ಟಾರೆ ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ನಿಗಾ ವಹಿಸಿ, ಕಲಿಕೆ ಪ್ರಕ್ರಿಯೆ ಎಂದಿನ ಹಾಗೆ ನಡೆಯುವಂತೆ ಸಹಜ ಸ್ಥಿತಿಗೆ ತರಬೇಕಿದೆ.

  • ಒಂದೂವರೆ ವರ್ಷದಿಂದ ಶಾಲೆಯಲ್ಲೇ ವಾಸಿಸ್ತಿದ್ದಾರೆ ಚಿಕ್ಕಮಗ್ಳೂರು ನೆರೆ ಸಂತ್ರಸ್ತರು

    ಒಂದೂವರೆ ವರ್ಷದಿಂದ ಶಾಲೆಯಲ್ಲೇ ವಾಸಿಸ್ತಿದ್ದಾರೆ ಚಿಕ್ಕಮಗ್ಳೂರು ನೆರೆ ಸಂತ್ರಸ್ತರು

    ಚಿಕ್ಕಮಗಳೂರು: ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಟುಂಬವೊಂದು ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರಿ ಶಾಲೆಯಲ್ಲೇ ವಾಸ ಮಾಡುತ್ತಿರುವ ಕರುಣಾಜನಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತಾತ್ಕಾಲಿಕವಾಗಿ ಇಲ್ಲಿ ಇರಿ, ಸೂಕ್ತ ಸೂರು ಒದಗಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು ಮತ್ತೆ ಇತ್ತ ತಲೆ ಹಾಕಲೇ ಇಲ್ಲ. ಅಧಿಕಾರಿಗಳು ಇಂದು ಬರುತ್ತಾರೆ, ನಾಳೆ ಬರುತ್ತಾರೆಂದು ಜಾತಕ ಪಕ್ಷಿಗಳಂತೆ ಕಾಯುತ್ತಿರೋ ಕುಟುಂಬ ಇಂದಿಗೂ ಸರ್ಕಾರಿ ಶಾಲೆಯಲ್ಲಿಯೇ ವಾಸ ಮಾಡುತ್ತಿದೆ. ನಾಲ್ಕು ಗೋಡೆ ಮಧ್ಯೆಯೇ ಅಡುಗೆ, ಊಟ-ತಿಂಡಿ, ವಾಸ, ನಿದ್ರೆ ಮಾಡುತ್ತಾರೆ. ಸ್ನಾನಕ್ಕೆ ಬಾತ್ ರೂಂ ಇಲ್ಲ. ಶೌಚಾಲಯವನ್ನ ಕೇಳೋದೇ ಬೇಡ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿತನಕ್ಕೆ ಈ ಕುಟುಂಬ ನಿರ್ಗತಿಕರಂತೆ ಬದುಕುವಂತಾಗಿದೆ.

    2019 ಅಲ್ಲ. 2018ರ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಮಲೆನಾಡಲ್ಲಿ ವರುಣನ ಅಬ್ಬರ ಹೇಳತೀರದ್ದಾಗಿತ್ತು. ಆಗ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಗಳಗಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲಿಗರ್ಡಿ ಗ್ರಾಮದ ರಾಘವೇಂದ್ರ ಭಟ್ ಹಾಗೂ ಶಾಂಭವಿ ದಂಪತಿಯ ಮನೆ ಮಳೆಗೆ ಆಹುತಿಯಾಗಿತ್ತು. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಜಯಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಾತ್ಕಾಲಿಕವಾಗಿ ಇಲ್ಲಿರಿ ಎಂದು ಐದು ವರ್ಷಗಳ ಹಿಂದೆಯೇ ಮುಚ್ಚಿದ ಶಾಲೆಗೆ ತಂದು ಕುಟುಂಬವನ್ನು ಬಿಟ್ಟಿದ್ದರು. ಬಿಟ್ಟು ಹೋದವರು ಮತ್ತೆ ಈ ಕಡೆ ಬಂದೇ ಇಲ್ಲ. ಈ ಕುಟುಂಬ ಮನೆಯ ಎಲ್ಲಾ ಸಾಮಾಗ್ರಿಗಳನ್ನ ಶಾಲೆಯ ಮುಂಭಾಗ ಜೋಡಿಸಿಕೊಂಡು ಒಂದು ಕೊಠಡಿಯಲ್ಲೇ ವಾಸ ಮಾಡುತ್ತಿದೆ. ಆಗೊಮ್ಮೆ-ಈಗೊಮ್ಮೆ ಬರೋ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಸದಸ್ಯರು ನಾಳೆ, ನಾಡಿದ್ದು ಅಂತ ನೆಪ ಹೇಳ್ತಿದ್ದಾರೆಯೇ ವಿನಃ ನೊಂದ ಕುಟುಂಬದ ನೆರವಿಗೆ ನಿಂತಿಲ್ಲ.

    2019ರ ಲೋಕಸಭೆ ಚುನಾವಣೆ ವೇಳೆ ಇದೇ ಶಾಲೆ ಮತದಾನದ ಕೇಂದ್ರವಾಗಿತ್ತು. ಆಗ ಈ ಕುಟುಂಬದವರು ಎರಡು ದಿನಗಳ ಕಾಲ ಬೀಗ ಹಾಕಿಕೊಂಡು ನೆಂಟರ ಮನೆಗೆ ಹೋಗಿದ್ದರು. ಬೂತ್ ವೀಕ್ಷಣೆಗೆ ಬಂದಿದ್ದ ತಹಶೀಲ್ದಾರ್, ನಿಮಗೆ ಇನ್ನೂ ಮನೆ ಕೊಟ್ಟಿಲ್ಲವಾ ಎಂದು ಕೇಳಿದ್ದರು. ಬಳಿಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಯವರಿಗೆ ಈ ಕುಟುಂಬಕ್ಕೆ ಬೇಗ ಮನೆ ಕಟ್ಟಿಕೊಡಿ ಎಂದು ಹೋಗಿದ್ದರು. ಆದರೆ ಇವರ ನೆರವಿಗೆ ಯಾರೂ ಬರಲೇ ಇಲ್ಲ. ಶಾಲೆ ಮುಚ್ಚಿದೆ. ಇರೋಕೆ ಸೂರಿಲ್ಲ ಎಂದು ಮಗನನ್ನ ಹಾಸ್ಟೆಲ್‍ನಲ್ಲಿ ಬಿಟ್ಟು ಈ ದಂಪತಿ ಶಾಲಾ ಕೊಠಡಿಯಲ್ಲಿ ವಾಸವಿದ್ದಾರೆ. 2019ರಲ್ಲಿ ಮಳೆಯಿಂದ ನೆಲೆ ಕಳೆದುಕೊಂಡವರಿಗೆ ಅಲ್ಪ-ಸ್ವಲ್ಪ ಪರಿಹಾರ ಬಂದಿದೆ. ಆದರೆ 2018ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಒಂದು ಆಶ್ರಯ ಯೋಜನೆ ಮನೆ ಕೂಡ ಕೊಟ್ಟಿಲ್ಲ ಅಂದರೆ ಇದು ವಿಪರ್ಯಸವೋ-ದುರಂತವೋ ದೇವರೇ ಬಲ್ಲ.

    ಇವರ ಮನೆ ಅರ್ಥಾತ್ ಶಾಲಾ ಕೊಠಡಿಗೆ ಶಾಸಕರಂತೂ ಬಂದೇ ಇಲ್ಲ. ಅಧಿಕಾರಿಗಳು ಬಂದಿಲ್ಲ. ಆಗೊಬ್ಬರು-ಈಗೊಬ್ಬರು ಬಂದರೂ ಯಾವುದೇ ಪ್ರಯೋಜನವಿಲ್ಲ. ಇರೋದು ಒಂದು ಎಕ್ರೆ ತೋಟ ಅದು ಹಳದಿ ಎಲೆ ರೋಗಕ್ಕೆ ಬಲಿಯಾಗಿ ಈ ಕುಟುಂಬದ ಬದುಕೇ ನಶ್ವರವಾಗಿದೆ. ತೋಟದಲ್ಲಿ ಫಸಲಿಲ್ಲ. ಇರೋಕೆ ಮನೆ ಇಲ್ಲ. ಈ ಮುಗ್ಧ ಜನಕ್ಕೆ ಪ್ರಶ್ನಿಸೋದು ಗೊತ್ತಿಲ್ಲ. ಆಕ್ರೋಶ ವ್ಯಕ್ತಪಡಿಸೋಕು ಬರಲ್ಲ. ಪರಿಹಾರ ಕೊಡುತ್ತಾರೆ ಎಂದು ಒಂದೂವರೆ ವರ್ಷದಿಂದ ಶಾಲೆಯಲ್ಲಿ ಬದುಕುತ್ತಿದ್ದಾರೆ. ಇವರ ಮುಗ್ಧತೆಯನ್ನೇ ಬಂಡವಾಳ ಮಾಡ್ಕೊಂಡಿರೋ ಅಧಿಕಾರಿಗಳು ಇತ್ತ ತಲೆ ಹಾಕದಿರೋದು ಮಾತ್ರ ಅರ್ಥರಹಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ.

  • ಸಂಕಷ್ಟದಲ್ಲಿರುವ ಶಾಲೆ, ದೇವಸ್ಥಾನಕ್ಕೆ ಜಾಗತಿಕ ಬಂಟರ ಸಂಘ ನೆರವು: ಐಕಳ ಹರೀಶ್ ಶೆಟ್ಟಿ

    ಸಂಕಷ್ಟದಲ್ಲಿರುವ ಶಾಲೆ, ದೇವಸ್ಥಾನಕ್ಕೆ ಜಾಗತಿಕ ಬಂಟರ ಸಂಘ ನೆರವು: ಐಕಳ ಹರೀಶ್ ಶೆಟ್ಟಿ

    ಮಂಗಳೂರು: ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಈಗಾಗಲೇ ನೆರವು ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ ಅದನ್ನು ಮುಂದುವರಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ಪ್ರಥಮ ಗ್ರಾಮ ವಾಸ್ತವ್ಯ ನಡೆದ ಕುತ್ಲೂರು ಸರ್ಕಾರಿ ಶಾಲೆಗೆ ಪೀಠೋಪಕರಣ ಹಾಗೂ ಅತಿಥಿ ಉಪನ್ಯಾಸಕರಿಗೆ ಗೌರವಧನ ವಿತರಿಸಲಾಯಿತು. ಆ ಬಳಿಕ ಮಾತನಾಡಿದ ಹರೀಶ್ ಶೆಟ್ಟಿ, ಉತ್ತಮ ಶಿಕ್ಷಣದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಮುಂಬೈ ಉದ್ಯಮಿಗಳು, ದಾನಿಗಳ ಸಹಾಯದಿಂದ ಸಾಮಾಜಿಕ ಸೇವೆಯನ್ನು ಮಾಡುತ್ತಿವೆ ಎಂದು ಭರವಸೆ ನೀಡಿದರು.

    ಕಳೆದ ಎರಡು ವರ್ಷಗಳಿಂದ ಸಂಘದಿಂದ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ವಿಶೇಷ ನೆರವನ್ನು ನೀಡುತ್ತಾ ಬರಲಾಗಿದೆ. ಸಹಕಾರ ಕೇಳಿ ಬಂದ ಯಾವುದೇ ಮನವಿಯನ್ನು ಈವರೆಗೆ ತಿರಸ್ಕಾರ ಮಾಡಿಲ್ಲ. ಜಾಗತಿಕ ಬಂಟರ ಸಂಘದಿಂದ ಕುತ್ಲೂರು ಶಾಲೆಯ ಪೀಠೋಪಕರಣಕ್ಕೆ ಮತ್ತು ಆ ಶಾಲೆಯ ಅತಿಥಿ ಉಪನ್ಯಾಸಕರಿಗೆ ಗೌರವ ಧನ ಚೆಕ್ ಹಸ್ತಾಂತರ ಮಾಡಲಾಗಿದೆ. ಕುತ್ಲೂರು ಶಾಲೆಯನ್ನು ಸಂಘ ದತ್ತು ತೆಗೆದುಕೊಳ್ಳುವ ಬೇಡಿಕೆ ಬಂದಿದ್ದು, ಸಂಘದ ಸಭೆಯಲ್ಲಿ ಪ್ರಸ್ತಾಪ ಮಾಡಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಕುತ್ಲೂರು ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ರಾಮಚಂದ್ರ ಭಟ್ ಮಾತನಾಡಿ, ಜಾಗತಿಕ ಬಂಟರ ಸಂಘದಿಂದ ಶಾಲೆಗೆ ನೀಡಿದ ಸಹಕಾರ ನಿಜಕ್ಕೂ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಶಾಲೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದ್ದು, ಶಾಲೆಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.

    ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮವಾಸ್ತವ್ಯ, ಬ್ರ್ಯಾಂಡ್ ಮಂಗಳೂರು, ಪತ್ರಕರ್ತರಿಗೆ ಕಾರ್ಯಾಗಾರ, ಪತ್ರಕರ್ತರ ಆರೋಗ್ಯ ಶಿಬಿರದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಗ್ರಾಮವಾಸ್ತವ್ಯದಲ್ಲಿ ಪತ್ರಕರ್ತರ ಸಂಘ ನೀಡಿದ ಬಹುತೇಕ ಬೇಡಿಕೆಗಳನ್ನು ದಾನಿಗಳು, ಅಧಿಕಾರಿಗಳ ಸಹಕಾದಿಂದ ಈಡೇರಿಸಲಾಗಿದೆ ಎಂದರು.

    ಈ ಕಾರ್ಯಕ್ರಮದಲ್ಲಿ ದಾನಿಗಳಾದ ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ಆನಂದ್ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಕೋಟ್ಯಾನ್ ಪಡು ವಂದಿಸಿದರು.

  • ತಮ್ಮದೆ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿದ ಚಿತ್ರಕಲಾ ವಿದ್ಯಾರ್ಥಿಗಳು

    ತಮ್ಮದೆ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿದ ಚಿತ್ರಕಲಾ ವಿದ್ಯಾರ್ಥಿಗಳು

    ಚಿತ್ರದುರ್ಗ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಹಿರಿಯೂರು ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಿದೆ. ಶಿಕ್ಷಣ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಂತೆ ಎಲ್ಲಾ ಆಯಾಮದಲ್ಲಿ ಶಾಲೆ ಪೈಪೋಟಿ ನೀಡುತ್ತಿದ್ದು, ಈಗ ತನ್ನ ವಿಶೇಷ ಆಕರ್ಷಕ ಸೊಬಗಿನಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

    ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಗೆ ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರಿನಿಂದ ಇಂದು ಆಗಮಿಸಿದ್ದು ಬಣ್ಣದ ಮೆರೆಗು ನೀಡಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯು ಇಲ್ಲಿಯವರಿಗೂ ಸುಮಾರು 150 ಸರ್ಕಾರಿ ಶಾಲೆಗೆ ಬಣ್ಣದ ಮೆರಗು ನೀಡಿದೆ. ಈಗ 151ನೇ ಸರ್ಕಾರಿ ಶಾಲೆಯಾಗಿ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ತಂಡ ಭೇಟಿ ನೀಡಿದೆ.

    ಸುಮಾರು 50 ಜನ ಚಿತ್ರಕಲಾ ವಿದ್ಯಾರ್ಥಿಗಳು ಬಂದಿದ್ದು, ಶಾಲೆಯ ಗೊಡೆಯ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಮೆರಗು ನೀಡಿದ್ದಾರೆ. ಎಲ್‍ಕೆಜಿ, ಯುಕೆಜಿ ತರಗತಿಯಿಂದ ಏಳನೇ ತರಗತಿಯ ಮಕ್ಕಳಿಗೆ ಹೂವು, ತರಕಾರಿ, ಹಣ್ಣು, ಆಟಿಕೆ ವಸ್ತುಗಳು, ಪ್ರಾಣಿ-ಪಕ್ಷಿ, ನದಿ ಸರೋವರ, ಬೆಟ್ಟಗುಡ್ಡಗಳ ಚಿತ್ರವನ್ನು ಚಿತ್ರಕಲಾ ವಿದ್ಯಾರ್ಥಿಗಳು ಬಿಡಿಸಿದ್ದಾರೆ. ಚಿತ್ರದುರ್ಗದ ಕೋಟೆ, ಗಾಂಧಿಜೀ, ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಹೀಗೆ ಅನೇಕ ಶ್ರೇಷ್ಠ ಸಾಧಕ ಭಾವಚಿತ್ರವನ್ನು ಎಂಟನೇ ತರಗತಿಯಿಂದ 10ನೇ ತರಗತಿಯ ಕೊಠಡಿಯಲ್ಲಿ ಬಿಡಿಸಲಾಗಿದೆ.

    ಈ ಚಿತ್ರಕಲಾ ವಿದ್ಯಾರ್ಥಿಗಳು ಬೆಂಗಳೂರು ಯೂನಿವರ್ಸಿಟಿ, ಚಿತ್ರಕಲಾ ಪರಿಷತ್, ಕಲಾಮಂದಿರ ಬೆಂಗಳೂರು, ದಾವಣಗೆರೆ ವಿದ್ಯಾರ್ಥಿಗಳು ಬಂದಿದ್ದಾರೆ. ಇವರು ಬೇರೆ ಬೇರೆ ಕಡೆ ವಿದ್ಯಾಭ್ಯಾಸ ಮಾಡಿ ಬಂದಿದ್ದು, ಈಗಾಗಲೇ ಹಾಸನ ಬೆಂಗಳೂರು ದಾವಣಗೆರೆ ಮೈಸೂರು ರಾಜ್ಯದ ವಿವಿಧ ಕಡೆ ಶಾಲೆಗಳಿಗೆ ಭೇಟಿ ಕೊಟ್ಟು ಚಿತ್ರಗಳನ್ನು ಬಿಡಿಸಿದ್ದಾರೆ. ಯಾವುದೇ ಹಣವನ್ನು ಪಡೆಯುದೇ ಅವರ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಾತ್ರ ನಾವು ಈ ರೀತಿಯಾದ ಚಿತ್ರಗಳನ್ನು ಬರೆಯುತ್ತಿರುವುದಾಗಿ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

    ಕೆಲವು ಶಾಲೆಗಳಿಗೆ ಅಲ್ಲಿನ ಗ್ರಾಮಸ್ಥರು ಸಹ ಬಣ್ಣದ ವ್ಯವಸ್ಥೆ ಮಾಡಿರುತ್ತಾರೆ. ಅದರ ಜೊತೆಗೆ ನಾವು ಕೂಡ ಒಂದಿಷ್ಟು ಹಣವನ್ನು ಹಾಕಿ ಬಣ್ಣವನ್ನ ತೆಗೆದುಕೊಂಡು ಚಿತ್ರವನ್ನು ಬಿಡಿಸುತ್ತೇವೆ. ನಾವು ಓದಿದ ಸೇವೆಗೋಸ್ಕರ ಹೀಗೊಂದು ಸರ್ಕಾರಿ ಶಾಲೆಗಳಲ್ಲಿ ಚಿತ್ರ ಬರೆಯುತ್ತಿದ್ದೇವೆ. ಸಮಾಜಕ್ಕೆ ಸಂದೇಶವನ್ನು ಕೊಡುವಂತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಾಗಿಲು ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಶ್ರಮಿಸುತ್ತಿದ್ದೇವೆ ಎಂದು ಚಿತ್ರಕಲಾ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರು ಹಾಗೂ ಸರ್ಕಾರಿ ಶಾಲೆ ಶಿಕ್ಷಕರು ಫುಲ್ ಫಿದಾ ಆಗಿದ್ದಾರೆ.

  • ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ

    – ಒಂದೇ ರೂಮಿನಲ್ಲಿ 1 ರಿಂದ 4ರವರೆಗೆ ಕ್ಲಾಸ್
    – ಹೆಡ್ ಮೇಷ್ಟ್ರಿಗೆ ಇಲ್ಲ ಜಾಗ

    ಚಿಕ್ಕಮಗಳೂರು: ಒಂದೇ ರೂಮಿನೊಳಗೆ ನಾಲ್ಕು ದಿಕ್ಕಿಗೆ ನಿಂತು ನಾಲ್ಕು ಟೀಚರ್ ಪಾಠ ಮಾಡುತ್ತಾರೆ. ನಮ್ ಟೀಚರ್ ಹೇಳೋ ಪಾಠವನ್ನ ಮಾತ್ರ ಕೇಳ್ಬೇಕು. ಬೇರೆಯವ್ರು ಹೇಳೋದ್ನ ಕೇಳಂಗಿಲ್ಲ. ಮಕ್ಕಳಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ಶಿಕ್ಷಕರು ಪಾಠವನ್ನಂತು ಮಾಡ್ಲೇಬೇಕು. ಇದು ಕಾಫಿನಾಡಿನ ಸರ್ಕಾರಿ ಕನ್ನಡ ಶಾಲೆಯ ಕಥೆ. ಕ್ಲಾಸ್ ರೂಂ ಒಂದೇ. ಪಾಠ ಮಾಡೋ ಶಿಕ್ಷಕರು ನಾಲ್ಕು ಜನ. ಕೇಳೋ ಮಕ್ಕಳು 45. ಎಲ್ಲರೂ ಬೇರೆ-ಬೇರೆ ತರಗತಿಯವ್ರು. ಯಾವ ಶಿಕ್ಷಕರು ಯಾವ ಪಾಠವನ್ನ ಯಾವ ತರಗತಿಯವ್ರಿಗೆ ಮಾಡ್ತಿದ್ದಾರೆ ಅನ್ನೋದು ಮಕ್ಕಳಿಗಲ್ಲ ಶಿಕ್ಷಕರಿಗೆ ಕನ್ಫ್ಯೂಸ್. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಟೀಚರ್ ಪಾಠ ಮಾಡ್ತಾರೆ, ಮಕ್ಕಳು ಅದನ್ನ ಕೇಳ್ತಿದ್ದಾರೆ.

    ಕಡೂರು ತಾಲೂಕಿನ ಕೆ.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ 2007ರವರಗೆ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಾಗಿತ್ತು. ಸರ್ಕಾರ ಈ ಶಾಲೆಯನ್ನು 2008ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಎಂದು ಮೇಲ್ದರ್ಜೆಗೇರಿಸಿದೆ. ಆದ್ರೆ ಶಾಲೆಗೆ ಕೊಡಬೇಕಾದ ಮೂಲಭೂತ ಸೌಕರ್ಯವನ್ನು ಕೊಟ್ಟೇ ಇಲ್ಲ. ಅಂದು ಇದ್ದ ಐದೇ ಕೊಠಡಿಯಲ್ಲಿ ಪಾಠ-ಪ್ರವಚನ ನಡೆಯುತ್ತಿತ್ತು. ಮಳೆ-ಗಾಳಿಗೆ ಎರಡು ಕೊಠಡಿಗಳು ಹಾಳಾಗಿದ್ದು ಅಲ್ಲಿ ಮಕ್ಕಳನ್ನು ಕೂರಿಸ್ತಿಲ್ಲ. ಉಳಿದ ಮೂರು ಕೊಠಡಿಯಲ್ಲಿ ಒಂದರಲ್ಲಿ 1ನೇ ತರಗತಿಯಿಂದ 4ನೇ ತರಗತಿ ಮಕ್ಕಳು. ಮತ್ತೊಂದರಲ್ಲಿ ಐದನೇ ತರಗತಿಯಿಂದ 6 ನೇ ತತರಗತಿ ಮಕ್ಕಳು. ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏಳನೇ ತರಗತಿ ಮಕ್ಕಳು. ಹೆಡ್ ಮಾಸ್ಟ್ರು ಮೀಟಿಂಗ್ ಅಂದ್ರೆ ಆ ಮಕ್ಕಳು ಹೊರಗೆ ಹೋಗಬೇಕಾಗುತ್ತದೆ. ಇದೇ ರೀತಿ ಮೂರು ವರ್ಷದಿಂದ ನಡೆದುಕೊಂಡು ಬಂದಿದೆ.

    ಪೂರ್ವ ದಿಕ್ಕಿಗೆ 1ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಪಶ್ಚಿಮಕ್ಕೆ 2ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕಿ. ಉತ್ತರಕ್ಕೆ 3, ದಕ್ಷಿಣಕ್ಕೆ 4ನೇ ತರಗತಿ ಮಕ್ಕಳು, ಎದುರಿಗೆ ಶಿಕ್ಷಕರು. ಇಲ್ಲಿ ಒಬ್ಬೊರಿಗೊಬ್ಬುರು ಬೆನ್ ಹಾಕಿಕೊಂಡೇ ಪಾಠ ಕೇಳಬೇಕು. ಇಲ್ಲಿ ಒಂದೇ ಕೊಠಡಿಯೊಳಗೆ ಏಕಕಾಲಕ್ಕೆ ನಾಲ್ಕು ಕ್ಲಾಸ್ ನೆಡೆಯುತ್ತವೆ. ದಯವಿಟ್ಟು ಮೂರು ರೂಂ ಕೊಡಿ ಎಂದು ಮೂರು ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಸರ್ಕಾರಕ್ಕೆ ಮನವಿ ಮಾಡ್ತಿದ್ದಾರೆ. ಆದ್ರೆ ಯಾರೂ ಸ್ಪಂದಿಸಿಲ್ಲ. ಎಸ್‍ಡಿಎಂಸಿ. ಸದಸ್ಯರು ಕೊಟ್ಟ ಮನವಿಗಳಿಗೆ ಸಹಿ ಹಾಕಿ-ಹಾಕಿ ಕೈ ನೋವಾಗಿದೆ ಅಷ್ಟು ಮನವಿ ಮಾಡಿದ್ದೀವಿ ಎನ್ನುತ್ತಾರೆ. ಅಧಿಕಾರಿಗಳು ಮನವಿ ಪತ್ರಗಳನ್ನು ಇಸ್ಕೊಂಡ್ರೇ ವಿನಃ ಬಿಲ್ಡಿಂಗ್ ಮಾತ್ರ ಕೊಟ್ಟಿಲ್ಲ.

    ಈ ಊರಲ್ಲಿ ಶ್ರೀಮಂತರಿಲ್ಲ. ಇರೋರೆಲ್ಲಾ ಹಿಂದುಳಿದ ವರ್ಗ, ಅಲೆಮಾರಿ ಹಾಗೂ ಯಾದವ ಜನಾಂಗಕ್ಕೆ ಸೇರಿದವರು. ಎಲ್ಲರೂ ಕೂಲಿ ಮಾಡಿಕೊಂಡೆ ಬದುಕ್ತಿರೋರು. ಇವ್ರಿಗೆ ಕಾನ್ವೆಂಟ್‍ಗಳಲ್ಲಿ ಓದಿಸೋ ಶಕ್ತಿಯೂ ಇಲ್ಲ. ಮಕ್ಕಳು ನಮ್ಮಂತಾಗೋದು ಬೇಡ ಎಂದು ಶಾಲೆಗೆ ಕಳಿಸಿ ಕೂಲಿಗೆ ಹೋಗ್ತಿದ್ದಾರೆ. ಆದ್ರೆ ಸರ್ಕಾರ ಉಚಿತ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ಕಾಣ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಲ್ಲ ಎಂದೇಳೋ ಸರ್ಕಾರ ಉಳಿಯೋಕೆ ಬೇಕಾದ್ದನ್ನು ಮಾಡ್ತಿಲ್ಲ. ಈ ರೀತಿ ಸೌಲಭ್ಯ ಕೊಟ್ರೆ ಮಕ್ಕಳು ಓದು-ಬರಹ ಕಲಿಯೋದಾದ್ರು ಹೇಗೆ? ಇಲ್ಲಿ ಸಮರ್ಪಕವಾದ ಶಿಕ್ಷಕರಿದ್ದಾರೆ. ಮಕ್ಕಳೂ ಇದ್ದಾರೆ. ಆದರೆ ಬಿಲ್ಡಿಂಗ್ ಇಲ್ಲ. ಇದು ಹೀಗೆ ಮುಂದುವರೆದ್ರೆ ನಾಳೆ ಮಕ್ಕಳು ಹೆತ್ತವರ ಜೊತೆ ಕೂಲಿಗೆ ಹೋಗ್ತಾರೆ ಶಾಲೆಗೆ ಬೀಗ ಬೀಳುತ್ತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಬಿಲ್ಡಿಂಗ್‍ಗಾಗಿ ಸಂಸದೆ ಶೋಭಾ ಕರಂದ್ಲಾಜೆಗೂ ಮನವಿ ಮಾಡಿದ್ದಾರೆ. ಆದರೆ ಅವರು ಇದು ನನ್ನ ವ್ಯಾಪ್ತಿಗೆ ಬರಲ್ಲ ಅಂದ್ರಂತೆ. ಶಾಸಕ ಬೆಳ್ಳಿ ಪ್ರಕಾಶ್‍ಗೆ ಮನವಿ ಮಾಡಿದ್ದಾರೆ. ಅವರು ಕೇವಲ ಆಯ್ತು ಎಂದು ಸುಮ್ಮನಾಗಿದ್ದಾರೆ. ಅಧಿಕಾರಿಗಳಿಗೆ ಕೊಟ್ಟ ಮನವಿ ಪತ್ರಗಳಿಗೆ ಇಂದಿಗೂ ಬೆಲೆ ಸಿಕ್ಕಿಲ್ಲ. ಊರಿನ ಜನ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಎಂದು ಹೇಳಿದ್ದಾರೆ. ಆ ಪರ್ವ ಈ ಬಡ ಮಕ್ಕಳ ಶಾಲೆಯಿಂದಲೇ ಆರಂಭವಾಗಲಿ ಅನ್ನೋದು ಸ್ಥಳೀಯರ ಅಶಯವಾಗಿದೆ.

  • ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ

    ಕೊಪ್ಪಳ: ಅಧುನಿಕ ಯುಗದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ. ಶಿಕ್ಷಕರ ಪ್ರಯತ್ನದಿಂದ ಅಲ್ಲಿನ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗುತ್ತಿದೆ.

    ಕೊಪ್ಪಳ ತಾಲೂಕಿನ ಉಪಳಾಪೂರ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಉಪಳಾಪೂರ ಮಕ್ಕಳಿಗೆ ಪ್ರೂಜೆಕ್ಟರ್ ಮೂಲಕ ಶಿಕ್ಷಣ ನೀಡಲಾಗುತ್ತದೆ. ಶಾಲೆಯ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಶಾಲೆಯಲ್ಲಿ ಪ್ರೂಜೆಕ್ಟರ್ ಅಳವಡಿಕೆ ಮಾಡಲಾಗಿದೆ. ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

    ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ನಲಿ ಕಲಿ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯ ನಲಿ ಕಲಿ ಕೊಠಡಿಯನ್ನು ಉತ್ತಮವಾಗಿ ವಿನ್ಯಾಸ ಮಾಡಲಾಗಿದೆ. ಉಪಳಾಪೂರ ಶಾಲೆಯ ಶಿಕ್ಷಕ ಮಹೇಶ್ ತಮ್ಮ ಸ್ವಂತ ಹಣದಿಂದ ನಲಿ ಕಲಿ ಕೊಠಡಿಯನ್ನು ವಿನ್ಯಾಸ ಮಾಡಿದ್ದಾರೆ. ಉಪಳಾಪರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಲಿ ಕಲಿ ಕೊಠಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಡೀ ನಲಿ ಕಲಿ ಕೊಠಡಿಯನ್ನು ಶಿಕ್ಷಕರೇ ಪೈಟಿಂಗ್ ಮಾಡಿದ್ದಾರೆ. ಥರ್ಮಕೋಲ್ ಬಳಸಿ ಪಿಓಪಿ ಮಾದರಿಯಲ್ಲಿ ಕೊಠಡಿ ವಿನ್ಯಾಸ ಮಾಡಿದ್ದಾರೆ.

    ಪೇಪರ್ ಸೀಟ್‍ಗಳನ್ನು ಕಟ್ ಮಾಡಿ ಕಾಗುಣಿತ ಹೊಂದಿಸುವ ಮಾದರಿಯಲ್ಲಿ ಶಿಕ್ಷಕರು ಡಿಸೈನ್ ಮಾಡಿದ್ದಾರೆ. ಅದೇ ರೀತಿ ಗೋಡೆಯನ್ನು ನಲಿ ಕಲಿ ಮಾದರಿಯಲ್ಲಿ ಮೂರು ಮಕ್ಕಳಿಗೊಂದು ಬೋರ್ಡ್ ನಿರ್ಮಿಸಿದ್ದಾರೆ. ನಲಿ ಕಲಿ ಕೊಠಡಿಯಲ್ಲಿ ಆಡಿಯೋ ಸಾಂಗ್ಸ್ ಮೂಲಕ ಪಾಠ ಮಾಡಲಾಗುತ್ತದೆ. ಜೊತೆಗೆ ಶಾಲೆಯ ಹೊರಗಡೆ ಮಕ್ಕಳಿಗೆ ಲೈಬ್ರರಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ.

  • ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸೇವಿಸಿ ಪರಿಶೀಲಿಸಿದ ರಾಯಚೂರು ಎಸ್ಪಿ

    ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

    ರಾಯಚೂರು ನಗರದ ಪೊಲೀಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿ ಮಕ್ಕಳು ಹೆಚ್ಚಾಗಿ ಓದುವ ಶಾಲೆಯಲ್ಲಿನ ಆಹಾರ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು.

    ಶಾಲೆಯಲ್ಲಿ ತಯಾರಾದ ಬಿಸಿಯೂಟದ ಗುಣಮಟ್ಟವನ್ನು ಪರೀಕ್ಷಿಸಿ ಬಳಿಕ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಬಿಸಿಯೂಟ ಸೇವಿಸಿದರು. ಶಾಲೆಯ ಮಕ್ಕಳೊಂದಿಗೆ ಮಾತನಾಡಿ ಶಾಲೆಯ ಬಗ್ಗೆ ಮತ್ತು ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಕಷ್ಟಪಟ್ಟು ಚೆನ್ನಾಗಿ ಓದಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಮಕ್ಕಳಿಗೆ ಕರೆ ನೀಡಿದರು.

  • ಮಕ್ಕಳ ಹಬ್ಬ – ಶಾಲಾ ಮಕ್ಕಳಿಂದ ಆಕರ್ಷಣೀಯ ಕಲಾಕೃತಿ ತಯಾರು

    ಮಕ್ಕಳ ಹಬ್ಬ – ಶಾಲಾ ಮಕ್ಕಳಿಂದ ಆಕರ್ಷಣೀಯ ಕಲಾಕೃತಿ ತಯಾರು

    ದಾವಣಗೆರೆ: ಕಚ್ಚಾ ವಸ್ತುಗಳಿಂದ ಕಾರಂಜಿ, ಪೇಪರ್ ನಿಂದ ಟೋಪಿ, ಕಲರ್ ಕಲರ್ ಕನ್ನಡಕ, ವಿವಿಧ ತರಹದ ಹೂವುಗಳು, ಗಣಿತ ಕಲಾಕೃತಿಗಳು. ಹೀಗೆ ಹತ್ತಾರು ಕಲಾಕೃತಿಗಳನ್ನು ಮಕ್ಕಳ ಹಬ್ಬದಲ್ಲಿ ದಾವಣಗೆರೆ ಸರ್ಕಾರಿ ಶಾಲೆಯ ಮಕ್ಕಳು ತಯಾರಿಸಿದ್ದಾರೆ.

    ದಾವಣಗೆರೆ ನಗರದ ಸಮೀಪದ ಹಳೇ ಕುಂದುವಾಡ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಮಕ್ಕಳ ವಿಜ್ಞಾನ ಹಬ್ಬವನ್ನು ಆಯೋಜಿಸಲಾಗಿತ್ತು.

    ಮುಖ್ಯವಾಗಿ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಸಾಂಪ್ರದಾಯಿಕ ಶೈಲಿಯ ಪಂಚೆ, ಅಂಗಿ, ಟವಲ್, ಟೋಪಿ ಧರಿಸಿ ಗಮನ ಸೆಳೆದರು. ಜೊತೆಗೆ ವಿದ್ಯಾರ್ಥಿಗಳು ಗಾಂಧೀಜಿ, ಅಂಬೇಡ್ಕರ್, ರೈತ, ಒನಕೆ ಒಬವ್ವ, ಭುವನೇಶ್ವರಿ ವೇಷಭೂಷಣ ಧರಿಸಿ ಗ್ರಾಮದ ತುಂಬಾ ಡ್ರಮ್ ಸೆಟ್ ಭಾರಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

    ಎರಡು ದಿನ ನಡೆಯುವ ಈ ಹಬ್ಬದಲ್ಲಿ ಮಕ್ಕಳು ವಿವಿಧ ರೀತಿಯಲ್ಲಿ ಕಲಾಕೃತಿಗಳು, ವಿಜ್ಞಾನ ವಸ್ತುಗಳನ್ನು ತಯಾರಿಸಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಇಓ ಸಿದ್ದಪ್ಪ, ವೈಜ್ಞಾನಿಕವಾಗಿ ಕಲಿಯಲು ಈ ಕಲಿಕಾ ಹಬ್ಬ ಸಹಕಾರಿಯಾಗಲಿದೆ. ವಿಜ್ಞಾನ, ಗಣಿತ ಕಷ್ಟ ಎನ್ನುತ್ತಾರೆ. ಈ ಕಲಿಕಾ ಹಬ್ಬದಿಂದ ಈ ವಿಷಯಗಳು ಸುಲಭ ಎನ್ನುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.

    ಒಟ್ಟಾರೆ ಎರಡು ದಿನಗಳ ಈ ಕಲಿಕಾ ಹಬ್ಬದಲ್ಲಿ ಮಕ್ಕಳು, ವೈಜ್ಞಾನಿಕ ಕಿಟ್ ಬಳಸಿ ವಿವಿಧ ವಸ್ತುಗಳನ್ನು ತಯಾರಿಸಲಿದ್ದು, ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

  • ಬಯಲಿನಲ್ಲೇ ಮಕ್ಕಳಿಗೆ ಪಾಠ- ಸಚಿವರ ಕ್ಷೇತ್ರದ ಶಾಲೆಯ ಕಥೆ

    ಬಯಲಿನಲ್ಲೇ ಮಕ್ಕಳಿಗೆ ಪಾಠ- ಸಚಿವರ ಕ್ಷೇತ್ರದ ಶಾಲೆಯ ಕಥೆ

    -ಸುಡುವ ಬಿಸಿಲಲ್ಲಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು

    ಚಿತ್ರದುರ್ಗ: ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳ ದಿನದಿಂದ ದಿನಕ್ಕೆ ತೆರೆಯ ಹಿಂದೆ ಸರಿಯುತ್ತಿವೆ. ಕಟ್ಟಡವಿದ್ದರೆ ಮಕ್ಕಳಿಲ್ಲ, ಮಕ್ಕಳಿದ್ದರೆ ಕಟ್ಟಡವಿಲ್ಲ ಎಂಬಂತಾಗಿದೆ ಸರ್ಕಾರಿ ಶಾಲೆಗಳ ಸ್ಥಿತಿ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಸಚಿವರ ಕ್ಷೇತ್ರದಲ್ಲಿಯ ಸರ್ಕಾರಿ ಶಾಲೆಯ ಮಕ್ಕಳು ಬಿಸಿಲಿನಲ್ಲಿಯೇ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ. ಮಕ್ಕಳು ಬಯಲಿನಲ್ಲಿ ಕುಳಿತು ಪಾಠ ಕೇಳುವ ದೃಶ್ಯವನ್ನು ನೋಡಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಜ್ಯದ ಗಡಿಭಾಗದಲ್ಲಿರುವ ಈ ಸರ್ಕಾರಿ ಶಾಲೆ ಶಿಥಿಲಾವಸ್ಥೆಗೆ ತಲುಪಿ ಹಲವು ವರ್ಷಗಳೇ ಕಳೆದಿವೆ. ಮೇಲ್ಛಾವಣೆಯ ಸಿಮೆಂಟ್ ತುಂಡುಗಳು ವಿದ್ಯಾರ್ಥಿಗಳ ಮೇಲೆ ಬಿದ್ದು ಗಾಯಗೊಳಿಸುತ್ತಿವೆ. ಅಲ್ಲದೇ ಶಾಲೆಯ ಕೊಠಡಿಗಳ ಬಾಗಿಲು ಕಿಟಕಿಗಳು ಸಹ ಸಂಪೂರ್ಣ ಹಾಳಾಗಿದ್ದೂ, ಪಾಳುಬಿದ್ದ ಮನೆಯಂತಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಠ ಕೇಳಲು ಹಿಂದೇಟು ಹಾಕುತ್ತಿದ್ದು, ಪ್ರಾಣಭಯದಿಂದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸುತ್ತಿಲ್ಲ. ಇದನ್ನರಿತ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಯಲು ರಂಗಮಂದಿರದ ಆಶ್ರಯ ಪಡೆದಿದ್ದಾರೆ.

    ನಾನು ಈ ಜಿಲ್ಲೆಗೆ ಬಂದು ಕೇವಲ ಎರಡು ತಿಂಗಳಾಗಿದೆ. ಕೋನಾಪುರ ಶಾಲೆ ಸ್ಥಿತಿ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಸಂಸದರ ನಿಧಿಯಿಂದ ತ್ವರಿತವಾಗಿ ಶಾಲಾ ಕಟ್ಟಡ ರಿಪೇರಿ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಹೇಳುತ್ತಾರೆ.

    ಶಿಥಿಲಾವಸ್ಥೆಯಲ್ಲಿರುವ ಕೋನಾಪುರ ಶಾಲೆಯ ವಿದ್ಯಾರ್ಥಿಗಳಿಗೆ ಬಯಲು ರಂಗಮಂದಿರವೇ ಆಸರೆಯಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದ ಪೋಷಕರು ಹಾಗು ವಿದ್ಯಾರ್ಥಿಗಳು ಹೋರಾಟ ಮಾಡುತ್ತಾ ಬಂದಿದ್ದಾರೆ. ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅಥವಾ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಬಯಲು ಪಾಠವೇ ವಿದ್ಯಾರ್ಥಿಗಳಿಗೆ ನಿರಂತರವಾಗಿದೆ. ಸುಡು ಬಿಸಿಲಲ್ಲಿ ಕುಳಿತು ಪಾಠ ಕೇಳುವ ಮಕ್ಕಳ ಸ್ಥಿತಿ ಕಂಡು ಪೋಷಕರ ಮನ ಕಲುಕುತ್ತಿದೆ. ಹೀಗಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದೂ, ತುರ್ತಾಗಿ ಶಾಲಾ ಕೊಠಡಿ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.