Tag: government school

  • ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಪ್ರಧಾನಿ ಮೋದಿ ಬರೆದಿರುವ ಎಕ್ಸಾಂ ವಾರಿಯರ್ಸ್ ಪುಸ್ತಕ

    ಇನ್ಮುಂದೆ ಸರ್ಕಾರಿ ಶಾಲೆಗಳಲ್ಲಿ ಪ್ರಧಾನಿ ಮೋದಿ ಬರೆದಿರುವ ಎಕ್ಸಾಂ ವಾರಿಯರ್ಸ್ ಪುಸ್ತಕ

    ಬೆಂಗಳೂರು : ಜೀವನ ಮತ್ತು ಪರೀಕ್ಷೆ ಎದುರಿಸುವುದು ಹೇಗೆ, ಸವಾಲುಗಳನ್ನ ಧೈರ್ಯವಾಗಿ ಸ್ವೀಕಾರ ಮಾಡೋದು ಹೇಗೆ ಅನ್ನೋ ಮಾಹಿತಿಯುಳ್ಳ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಎಕ್ಸಾಂ ವಾರಿಯರ್ಸ್ ಪುಸ್ತಕ ಇನ್ನುಂದೆ ಸರ್ಕಾರಿ ಶಾಲೆಗಳಲ್ಲಿ ಲಭ್ಯವಾಗಲಿದೆ. ಪ್ರತಿ ಶಾಲೆಯಲ್ಲಿ ಈ ಪುಸ್ತಕ ಖರೀದಿ ಮಾಡಬೇಕು ಅಂತ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಮೋದಿ ಅವರು ಬರೆದಿರುವ ಈ ಪುಸ್ತಕವನ್ನ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ವಿಶಿಷ್ಟ ಪುಸ್ತಕವನ್ನು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಓದಬೇಕಾದ ಅವಶ್ಯಕತೆ ಇದೆ. ಹೀಗಾಗಿ ಪ್ರತಿ ಶಾಲೆಯಲ್ಲಿ ಈ ಪುಸ್ತಕ ಖರೀದಿ ಮಾಡುವಂತೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಶಾಲೆಯ ಸಂಚಿತ ನಿಧಿಯಿಂದ ಪುಸ್ತಕ ಖರೀದಿ ಮಾಡುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

    ಎಸ್.ಎಸ್.ಎಲ್.ಸಿ ತರಗತಿಗಳಲ್ಲಿ 50ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢ ಶಾಲೆಗಳು ಒಂದು ಪುಸ್ತಕ ಹಾಗೂ 50 ಕ್ಕಿಂತಲೂ ಹೆಚ್ಚು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇರುವ ಸರ್ಕಾರಿ ಪ್ರೌಢ ಶಾಲೆಗಳು 02 ಪುಸ್ತಕಗಳಂತೆ ಖರೀದಿಸಬೇಕು ಅಂತ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಮಕ್ಕಳ ಪರೀಕ್ಷಾ ಆತಂಕ ದೂರ ಮಾಡೋದು ಹೇಗೆ, ವಿದ್ಯಾರ್ಥಿಗಳ ಜೀವನದ ಸವಾಲುಗಳು ಏನು ಅನ್ನೋದನ್ನ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ಪುಸ್ತಕ ಓದಿ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಲಿ ಅನ್ನೊ ನಿಟ್ಟಿನಲ್ಲಿ ಸಚಿವರು ಈ ನಿರ್ಧಾರ ಮಾಡಿದ್ದಾರೆ.

  • ಸರ್ಕಾರಿ ಶಾಲೆಯಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಸಚಿವರಿಗೆ ಮನವಿ

    ಸರ್ಕಾರಿ ಶಾಲೆಯಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಸಚಿವರಿಗೆ ಮನವಿ

    ಬಳ್ಳಾರಿ/ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಹಿರಿಯ ಕರಾಟೆ ತರಬೇತುದಾರರು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿಂದು ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿಯಾದ ಕರಾಟೆ ಹಿರಿಯ ತರಬೇತುದಾರರ ನಿಯೋಗ, ಪ್ರೌಢ ಶಾಲೆಗಳ ವಿದ್ಯಾರ್ಥಿನಿಯರಲ್ಲಿ ಆತ್ಮರಕ್ಷಣೆ ಹೆಚ್ಚಿಸುವ ಸಲುವಾಗಿ ಈ ಕರಾಟೆ ತರಬೇತಿ ಮುಖ್ಯವಾಗಿದೆ. ಹೀಗಾಗಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಸಚಿವರಲ್ಲಿ ಕೋರಿದ್ದಾರೆ.

    ಹಿರಿಯ ತರಬೇತುದಾರರ ಮನವಿಯನ್ನು ಆಲಿಸಿದ ಸಚಿವ ಸುರೇಶ್ ಕುಮಾರ್, ಕರಾಟೆ ತರಬೇತಿ ಪುನರಾರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಳ್ಳಾರಿಯ ಹಿರಿಯ ತರಬೇತುದಾರರಾದ ಕಟ್ಟೇಸ್ವಾಮಿ, ಸುಭಾಷ್ ಚಂದ್ರ, ಕೊಪ್ಪಳದ ಹಿರಿಯ ತರಬೇತುದಾರ ಮೌನೇಶ ವಡ್ಡಟಿ, ವಿಜಯಪುರದ ಹಿರಿಯ ತರಬೇತುದಾರ ಶಿವಕುಮಾರ ಶಾರದಳ್ಳಿ ಸೇರಿದಂತೆ ಅನೇಕರು ಸಚಿವರಿಗೆ ಈ ಮನವಿ ಮಾಡಿದ್ದಾರೆ.

  • ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಬಹಳ ಮಂದಿ, ಪಾಳು ಬೀಳೋ ಸ್ಥಿತಿಯಲ್ಲಿರೋ ಕಟ್ಟಡಗಳು, ಮುರಿದ ಕಿಟಕಿಗಳು, ಬಾಗಿಲುಗಳೇ ಇಲ್ಲದ ಕೊಠಡಿಗಳು ಈ ತರ ಸರ್ಕಾರಿ ಶಾಲೆಗಳಲ್ಲಿ ನಾನಾ ಸಮಸ್ಯೆಗಳು, ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅಂದ-ಚೆಂದವಾಗಿ ಕಂಗೊಳಿಸುತ್ತಿದೆ.

    ಅಂದಹಾಗೆ ಶಾಲೆಯ ಗೋಡೆಗಳ ಮೇಲೆ 3ಡಿ ಮಾದರಿಯಲ್ಲಿ ಬಸ್, ರೈಲು, ವಿಮಾನದ ಚಿತ್ರಗಳನ್ನ ಬಿಡಿಸಲಾಗಿದ್ದು, ಶಾಲೆಯ ಅಂದ ಚೆಂದವೇ ಬದಲಾಗಿ ಹೋಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಜೊತೆಗೂಡಿ ಗ್ರಾಮಪಂಚಾಯತಿ ಅನುದಾನ ಪಡೆದು ಶಾಲೆಯ ಗೋಡೆಗಳ ಮೇಲೆ ಈ ಚಿತ್ರಗಳನ್ನ ಬಿಡಿಸಲಾಗಿದ್ದು ಶಾಲೆಯ ರೂಪವೇ ಬದಲಾಗಿ ಬಣ್ಣ ಬಣ್ಣಗಳಿಂದ ಮಿಂಚುತ್ತಿದೆ.

    ಶಾಲೆಯ ಹೊರಭಾಗದ ಗೋಡೆಗಳ ಮೇಲೆ ರೈಲು, ಬಸ್, ವಿಮಾನ ಹಾಗೂ ಹಡುಗು ಸೇರಿದಂತೆ ಶಾಲೆಯ ಕೊಠಡಿಗಳ ಒಳಭಾಗದಲ್ಲಿ ಶಿಡ್ಲಘಟ್ಟ ರೇಷ್ಮೆ ನಗರಿ ಅನ್ನೋ ಖ್ಯಾತಿ ಪ್ರತೀಕವಾಗಿ ರೇಷ್ಮೆ ಹುಳು. ಚಂದ್ರಿಕೆ ಹಾಗೂ ರೈತನ ಚಿತ್ರ ಬಿಡಿಸಲಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭವಾಗಿ 75 ವರ್ಷಗಳ ಕಳೆದ ಹಿನ್ನೆಲೆ ಅಮೃತ ಮಹೋತ್ಸವ ಸಮಾರಂಭ ನಡೆಸಿ, ಶಿಕ್ಷಣ ಇಲಾಖಾಧಿಕಾರಿಗಳು, ಹಾಗೂ ತಹಶೀಲ್ದಾರ್ ರನ್ನ ಶಾಲೆಗೆ ಆಹ್ವಾನಿಸಿ, ನೂತನ ಚಿತ್ರಗಳನ್ನು ಉದ್ಘಾಟನೆ ಮಾಡಲಾಗಿದೆ.

    ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸಾಕಷ್ಟು ಶ್ರಮಿಸುತ್ತಿದ್ದು, ಶಾಲೆಗಾಗಿ 9 ಎಕೆರೆ ಭೂಮಿಯನ್ನ ಮೀಸಲಿಡಲಾಗಿದೆ. ಈ ಜಾಗದಲ್ಲಿ ನೂರಾರು ಮರ ಗಿಡಗಳನ್ನ ಬೆಳೆಸಲಾಗುತ್ತಿದೆ. ಮತ್ತೊಂದೆಡೆ ಇದೇ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರ ಬಾ ಪುಲೆ ಹೆಸರನ್ನ ನಾಮಕರಣ ಮಾಡಲಾಗಿದೆ. ಸದ್ಯ ಶಾಲೆ ಬಣ್ಣ ಬಣ್ಣದ ಚಿತ್ರಗಳಿಂದ ಮಿರ ಮಿರ ಮಿಂಚುತ್ತಿದ್ದು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೂ ಶಾಲೆ ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

  • ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೂ ಹೈಟೆಕ್ ಶಿಕ್ಷಣ ಭಾಗ್ಯ

    ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೂ ಹೈಟೆಕ್ ಶಿಕ್ಷಣ ಭಾಗ್ಯ

    ಬೀದರ್: ರಾಜ್ಯದ ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಸಮಸ್ಯೆ ಕಾಡುತ್ತಿದೆ. ಆದರೆ ಜಿಲ್ಲೆಯ ಔರಾದ್ ತಾಲೂಕಿನ 20 ಕುಗ್ರಾಮದ ಸರ್ಕಾರಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಇಂದು ಹೈಟೆಕ್ ಶಿಕ್ಷಣ ಭಾಗ್ಯ ಲಭಿಸಿದೆ.

    ರೈತ ಸಂಘ, ರಿಲಯನ್ಸ್ ಫೌಂಡೇಶನ್, ಮೇಂಡಾ ಫೌಂಡೇಶನ್ ಮತ್ತು ಸೇಲ್ಕಾ ಫೌಂಡೇಶನ್ ಸಯೋಗದಲ್ಲಿ ಒಟ್ಟು 2 ಲಕ್ಷ ರೂ. ಹಣ ಖರ್ಚು ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಭಾಗ್ಯ ದೊರಕಿಸಿ ಕೊಡಲಾಗಿದೆ. ಔರಾದ್ ತಾಲೂಕಿನ ಬೋರ್ಗಿ, ನಾಗೂರು ಎಂ, ಲಿಂಗದಹಳ್ಳಿ, ಜೀರ್ಗಾ ಕೆ, ಚಟ್ನಹಳ್ಳಿ, ಹಾಲಿಹಿಪ್ಪರ್ಗಾ, ಸೇರಿದಂತೆ ಒಟ್ಟು 20 ಸರ್ಕಾರಿ ಶಾಲೆಗಳಲ್ಲಿ ಸದ್ಯ ಸ್ಮಾರ್ಟ್ ಕ್ಲಾಸ್ ಭಾಗ್ಯ ಲಭಿಸುತ್ತಿದೆ.

    ಪ್ರಮುಖವಾಗಿ ಬೋರ್ಗಿಯ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ದೊರಕಿದೆ. 130 ವಿದ್ಯಾರ್ಥಿಗಳು ಹೈಟೆಕ್ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್ ಜೊತೆಗೆ ‘ಪಂಚಸೂತ್ರ’ ಮತ್ತು ‘ನಲಿಕಲಿ’ ಎಂಬ ವಿಶೇಷ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನ ಬಳಿಸಿಕೊಂಡು ದೃಶ್ಯ ಮತ್ತು ಆಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

  • ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ದೊರೆಯುತ್ತೆ: ಯದುವೀರ್

    ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ದೊರೆಯುತ್ತೆ: ಯದುವೀರ್

    ಮಂಡ್ಯ: ಪ್ರಸಕ್ತ ದಿನಮಾನಗಳಲ್ಲಿ ಮಕ್ಕಳಿಗೆ ಶಿಕ್ಷಣ ಎನ್ನುವುದು ಬಹಳ ಮುಖ್ಯ. ಆದ್ದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಶಿಕ್ಷಣವನ್ನು ಕೊಡಿಸಿ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕರೆ ನೀಡಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದ ಮಾದರಿ ಸರ್ಕಾರಿ ಶಾಲೆಯನ್ನು ಉದ್ಘಾಟಿಸಿ ಮಾತಾನಾಡಿದ ಯದುವೀರ್ ಅವರು, ಮಕ್ಕಳಿಗೆ ಶಿಕ್ಷಣ ಎನ್ನುವುದು ಬಹಳ ಮುಖ್ಯವಾದದ್ದು. ಬದುಕನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮಹರಿಸಬೇಕು. ಸದ್ಯ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲೇ ಉತ್ತಮವಾದ ಶಿಕ್ಷಣ ದೊರಕುತ್ತಿದೆ. ಆದಷ್ಟು ಸರ್ಕಾರಿ ಶಾಲೆಗಳ ಕಡೆಗೆ ಪೋಷಕರು ಹೆಚ್ಚು ಒತ್ತು ನೀಡಬೇಕು ಎಂದರು.

    ಕಬ್ಬಾರೆ ಗ್ರಾಮದಲ್ಲಿ ಇದ್ದ ಸರ್ಕಾರಿ ಶಾಲೆಯೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು, ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದಾಗಿದ್ದರು. ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂದು ಬೆಂಗಳೂರಿನ ಎಂಟೆಕ್ ಖಾಸಗಿ ಕಂಪನಿಯನ್ನು ಹಳೆಯ ವಿದ್ಯಾರ್ಥಿಗಳು ಕೇಳಿಕೊಂಡಿದ್ದರು. ಇದ್ದಕ್ಕೆ ಸ್ಪಂದಿಸಿದ ಕಂಪನಿಯವರು ಶಾಲೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಈ ಮಾದರಿ ಶಾಲೆಯನ್ನು ಇಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಗಿಡಕ್ಕೆ ನೀರು ಹಾಕಿ ನಂತರ ದೀಪ ಬೆಳಗುವ ಮೂಲಕ ಶಾಲೆಯನ್ನು ಉದ್ಘಾಟನೆ ಮಾಡಿದರು. ಈ ವೇಳೆ ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾಕರಾಣಿ, ಎಂಟೆಕ್ ಕಂಪನಿಯ ಮುಖ್ಯಸ್ಥರು, ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.

  • ಶಿಥಿಲಾವಸ್ಥೆಗೆ ತಲುಪಿದ ಸ್ವತಂತ್ರ ಪೂರ್ವದ ಸರ್ಕಾರಿ ಶಾಲೆ – ಜೀವಭಯದಲ್ಲಿ ವಿದ್ಯಾರ್ಥಿಗಳು

    ಶಿಥಿಲಾವಸ್ಥೆಗೆ ತಲುಪಿದ ಸ್ವತಂತ್ರ ಪೂರ್ವದ ಸರ್ಕಾರಿ ಶಾಲೆ – ಜೀವಭಯದಲ್ಲಿ ವಿದ್ಯಾರ್ಥಿಗಳು

    ಚಿತ್ರದುರ್ಗ: ಭಾರತ ಹಳ್ಳಿಗಳ ದೇಶ ಹೀಗಾಗಿ ಹಳ್ಳಿಗಳ ಅಭಿವೃದ್ಧಿಯಿಂದಲೇ ರಾಷ್ಟ್ರದ ಅಭಿವೃದ್ಧಿ ಸಾಧ್ಯವೆಂದು ಮನಗೊಂಡ ಸರ್ಕಾರಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಸೌಲಭ್ಯಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸುತ್ತಿವೆ. ಶಾಲಾ ಅಭಿವೃದ್ಧಿಯ ಚರ್ಚೆಗಳಿಗಾಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಸಹ ಖರ್ಚು ಮಾಡಲಾಗ್ತಿದೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಕಂದವಾಡಿ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ದುಸ್ಥಿತಿ ನೋಡಿದರೆ ಸರ್ಕಾರದ ಹಣ ಎಲ್ಲಿ ಖರ್ಚಾಗ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ.

    ಈ ಶಾಲೆಯು 1947ರಲ್ಲಿ ಭಾರತಕ್ಕೆ ಸ್ವತಂತ್ರ ಬರುವ ಮುನ್ನ ನಿರ್ಮಾಣವಾದ ಶಾಲೆಯಾಗಿದೆ. ಅಂದಿನಿಂದ ಇಂದಿನವರೆಗೂ ಈ ಶಾಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿಲ್ಲ. ಹೀಗಾಗಿ ಈ ಶಾಲೆಯ ಗೋಡೆಗಳು ಶಿಥಿಲಾವಸ್ಥೆಗೆ ತಲುಪಿ ಬಿರುಕುಬಿಟ್ಟಿವೆ. ಹೀಗಾಗಿ ಒಮ್ಮೆ ಜೋರಾಗಿ ಮಳೆ ಬಂದರೆ ಸಾಕು ಆಗಲೋ ಈಗಲೋ ಬೀಳುವ ಸ್ಥಿತಿಗೆ ತಲುಪಿದೆ.

    ಹಳೆಯ ಶಾಲಾ ಕೊಠಡಿಗಳಲ್ಲಿಯೇ ಇಂದಿಗೂ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಆದ್ದರಿಂದ ಮಳೆಗಾಲದಲ್ಲಂತೂ ಶಾಲೆಯ ಗೋಡೆಗಳು ಯಾವಾಗ ಕುಸಿಯುತ್ತವೆ ಎಂಬ ಆತಂಕದಿಂದ ಮಕ್ಕಳು ಅವರ ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುವ ಸ್ಥಿತಿಯಿದೆ. ಅಲ್ಲದೆ ಬೇಸಿಗೆಯಲ್ಲಿ ಕಾದ ಕಬ್ಬಿಣದಂತಾದ ಕೆಂಪು ಹೆಂಚಿನ ಮೇಲ್ಛಾವಣಿಯಿಂದ ತೂರಿ ಬರೋ ಬಿಸಿಲ ಜಳ ಮಕ್ಕಳ ಮೈ ಸುಡುತ್ತಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದೆ ಹಿಡಿಶಾಪ ಹಾಕುತಿದ್ದಾರೆ.

    ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲೆಗೆ ಉತ್ತಮ ವ್ಯವಸ್ಥೆ ಮಾತ್ರ ಈವರೆಗೆ ಕಲ್ಪಿಸಲಾಗಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರನ್ನು ಕೇಳಿದರೆ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ಈ ಸಮಾಜಕ್ಕೆ ನೀಡಿದ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ಜೀವಭಯದಿಂದ ಪಾಠ ಕೇಳುವಂತಾಗಿದೆ.

  • ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

    ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ ಸರ್ಕಾರಿ ಶಾಲೆ – ಶಿಕ್ಷಕನ ಪರಿಶ್ರಮಕ್ಕೆ ಗ್ರಾಮಸ್ಥರು ಫಿದಾ

    ಚಿತ್ರದುರ್ಗ: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ಸರ್ಕಾರಿ ಶಾಲೆಯು ಸಹ ಖಾಸಗಿ ಶಾಲೆಗಳಿಗಿಂತ ಕಮ್ಮಿ ಏನಿಲ್ಲ ಎಂಬುದನ್ನು ಸಾಭೀತು ಮಾಡಲು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಅಜ್ಜನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಂಜಪ್ಪ ಮುಂದಾಗಿದ್ದಾರೆ.

    ಚಿತ್ರಕಲೆ ಪ್ರಾವಿಣ್ಯತೆ ಹೊಂದಿರುವ ಚಳ್ಳಕೆರೆಯ ಕಲಾವಿದರನ್ನು ಕರೆಸಿ, ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಪ್ರವಚನ ಅರ್ಥವಾಗುವಂತೆ ಗೋಡೆಯ ಮೇಲೆ ಬಣ್ಣ ಬಣ್ಣದ ಸುಂಧರ ಚಿತ್ತಾರಗಳನ್ನು ಅರಳಿಸಿರುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಜ್ಜನಹಳ್ಳಿಯ ಸರ್ಕಾರಿ ಶಾಲೆಯ ನಲಿ-ಕಲಿ ಕೊಠಡಿ ಮತ್ತು ಕಲಿಕೆಯ ಪಯಣಕ್ಕೆ ಸಿದ್ಧತೆಗೊಂಡಿರುವ ಚಿಣ್ಣರ ಎಕ್ಸ್ ಪ್ರೆಸ್ ರೈಲು ಅನಾವರಣಗೊಂಡಿದೆ.

    ಸತತ 4-5 ವರ್ಷಗಳಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಎಸ್.ಡಿ.ಎಮ್.ಸಿ.ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ವನ ಮಹೋತ್ಸವ ಕಾರ್ಯಕ್ರಮದ ಮೂಲಕ 150*130 ಅಡಿ ವಿಸ್ತೀರ್ಣವನ್ನು ಹೊಂದಿರುವ ವಿಶಾಲವಾದ ಶಾಲಾ ಮೈದಾನದಲ್ಲಿ ಕೊಠಡಿಗಳನ್ನು ಹೊರತುಪಡಿಸಿ ಉಳಿದಿರುವ ಮೈದಾನದ ತುಂಬೆಲ್ಲಾ ವಿವಿಧ ಜಾತಿಯ ಸುಮಾರು 160 ಕ್ಕೂ ಹೆಚ್ಚು ಸಸಿಗಳನ್ನು ಸಾಲು ಸಾಲಾಗಿ ನೆಟ್ಟು ಪೋಷಿಸಿಲಾಗುತ್ತಿದೆ. ಈಗ ಶಾಲಾ ಆವರಣದಲ್ಲಿರುವ ಎಲ್ಲಾ ಸಸಿಗಳು ಬೆಳೆದು ಬೃಹತ್ ಮರಗಳಾಗಿವೆ. ಸದ್ಯ ಬರದ ನಾಡಿನಲ್ಲಿ ಈ ಶಾಲಾ ಪರಿಸರ ಒಂದು ಸುಂದರ ವನವಂತಾಗಿದೆ.

    ಶಾಲೆಯ ಅಭಿವೃದ್ಧಿ ಹಾಗೂ ಕಾರ್ಯ ಚಟುವಟಿಕೆಗಳನ್ನು ಕೆಲವೊಮ್ಮೆ ರಜಾದಿನಗಳಲ್ಲೂ ನಿಸ್ವಾರ್ಥದಿಂದ ಮಾಡುತ್ತಾ ಬಂದಿದ್ದಾರೆ. ಈ ಸಂಬಂಧ ಶಿಕ್ಷಕ ಮಂಜಪ್ಪನವರ ಕುಟುಂಬದ ಸದಸ್ಯರು ಅವರೊಂದಿಗೆ ಮುನಿಸಿಕೊಂಡಿದ್ದುಂಟು. ಆದರೂ, ಸಹ ಅವರ ವೈಯುಕ್ತಿಕ ಕೆಲಸಗಳನ್ನೂ ಬದಿಗಿಟ್ಟು ಶಾಲೆಯ ಆವರಣದಲ್ಲಿ ಸುಂದರ ಪರಿಸರ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಮಾಡಿರುವ ಸೇವೆಗೆ ಗ್ರಾಮಸ್ಥರು ಫುಲ್ ಫಿದಾ ಆಗಿದ್ದಾರೆ.

    ಸತತ 10 ವರ್ಷಗಳಿಂದ ತಮ್ಮ ಛಲ ಬಿಡದೆ ಮಾಡಿದ ಶ್ರಮ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದೆ. ಇದು ಶಿಕ್ಷಕರಿಗೆ ತೃಪ್ತಿ ಮತ್ತು ಸಮಾಧಾನ ತಂದಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ ಖಾಸಗಿ ಶಾಲೆಯನ್ನೇ ಮೀರಿಸುವಂತಿರುವ ಸರ್ಕಾರಿ ಶಾಲೆಯಲ್ಲಿ ಇರುವ ಇವರೊಬ್ಬರೇ ಶಿಕ್ಷಕರು ಇಷ್ಟೆಲ್ಲಾ ಸೇವೆ ಮಾಡುತ್ತಿದ್ದಾರೆ.

    ಸಾಧನೆಯ ಗುರಿಯೆಂಬುದು ಅನಂತ ಮತ್ತು ಅಪರಿಮಿತ ಎಂಬಂತೆ ಶಿಕ್ಷಕ ಮಂಜಪ್ಪ ಅವರು, ಸದರಿ ಶಾಲೆಯ 10 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಈ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ, ಉತ್ತಮ ವಾತಾವರಣವನ್ನು ಕಲ್ಪಿಸಿರುವ ಹಾಗೂ ನಿರಂತರ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಿರುವ ಗ್ರಾಮದ ಹಳೆಯ ವಿದ್ಯಾರ್ಥಿಗಳು, ಶಾಲಾ ಎಸ್.ಡಿ.ಎಂ.ಸಿ. ಸಮುದಾಯ ವರ್ಗದವರಿಗೆ ಹಾಗೂ ಸದಾ ಎಲ್ಲಾ ಕಾರ್ಯಗಳಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ.

  • ಸರ್ಕಾರಿ ಶಾಲೆಗಳ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಲು ಕ್ರಮ: ಸಚಿವ ಸುರೇಶ್ ಕುಮಾರ್

    ಸರ್ಕಾರಿ ಶಾಲೆಗಳ ಹೆಸರಿಗೆ ಆಸ್ತಿ ನೋಂದಣಿ ಮಾಡಿಸಲು ಕ್ರಮ: ಸಚಿವ ಸುರೇಶ್ ಕುಮಾರ್

    ಶಿವಮೊಗ್ಗ: ಸರ್ಕಾರಿ ಶಾಲೆಗಳ ಆಸ್ತಿಪಾಸ್ತಿಗಳನ್ನು ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕೆ.ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಜಿಲ್ಲೆಯ ಸಾಗರ ತಾಲೂಕಿನ ಚದರವಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಸುರೇಶ್ ಕುಮಾರ್ ಮಾತನಾಡಿದರು. ಖಾಸಗಿ ಶಾಲೆಗಳ ಆಕರ್ಷಣೆ ಕಡಿಮೆ ಮಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಹ ವಾತಾವರಣ ಸೃಷ್ಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ.

    ಸಾಂದರ್ಭಿಕ ಚಿತ್ರ

    ಶಾಲೆಗಳ ದುರಸ್ತಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 530 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ 34.48 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಸಾಗರ ತಾಲೂಕಿನಲ್ಲಿ 134 ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಜಿಲ್ಲೆಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದರು.

    ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಸೆಪ್ಟಂಬರಿನಿಂದ ನವೆಂಬರ್ ಒಳಗಾಗಿ ಆಯೋಜಿಸಲು ಸೂಚನೆ ನೀಡಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರತಾಳು ಹಾಲಪ್ಪ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ರಾಘವೇಂದ್ರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

  • ಗ್ರಾಮಸ್ಥರ ಕೈಗೆ ‘ಪೆನ್ಸಿಲ್’ ಕೊಟ್ಟ ವಿದ್ಯಾರ್ಥಿಗಳು- ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಸುಮ್ನೆನಾ!

    ಗ್ರಾಮಸ್ಥರ ಕೈಗೆ ‘ಪೆನ್ಸಿಲ್’ ಕೊಟ್ಟ ವಿದ್ಯಾರ್ಥಿಗಳು- ಸರ್ಕಾರಿ ಶಾಲೆ ಮಕ್ಕಳು ಅಂದ್ರೆ ಸುಮ್ನೆನಾ!

    – ಶಿಕ್ಷಕ ಬಿ.ಕೊಟ್ರೇಶ್ ವಿನೂತನ ಪ್ರಯೋಗಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ

    ರಾಯಚೂರು: ಸರ್ಕಾರಿ ಶಾಲೆಗಳು ಅಂದ್ರೆ ಮೂಗುಮುರಿಯುವವರೇ ಹೆಚ್ಚು. ಆದರೆ ರಾಯಚೂರಿನ ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೇ ಹೋಗಿ ಯಾವ ಖಾಸಗಿ ಶಾಲೆಯ ಮಕ್ಕಳು ಮಾಡದ ಕೆಲಸವನ್ನ ಮಾಡುತ್ತಿದ್ದಾರೆ. ಪೆನ್ಸಿಲ್ ಅನ್ನೋ ಶಾಲಾ ಪತ್ರಿಕೆಯನ್ನು ಹೊರತಂದು ಗ್ರಾಮಸ್ಥರು ಓದುವಂತೆ ಮಾಡಿದ್ದಾರೆ. ಶಾಲೆಯ ಶಿಕ್ಷಕ ಬಿ.ಕೊಟ್ರೇಶ್ ನೇತೃತ್ವದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಪೆನ್ಸಿಲ್ ದ್ವೈಮಾಸ ಪತ್ರಿಕೆಯನ್ನ ಹೊರತರುತ್ತಿದ್ದಾರೆ.

    ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಈ ಪತ್ರಿಕೆಯಲ್ಲಿ ಶೈಕ್ಷಣಿಕ ವಿಚಾರಗಳ ಬಗ್ಗೆ ಶಿಕ್ಷಕರ ಒಂದೆರಡು ಲೇಖನಗಳು ಬರೆದ್ರೆ, ಉಳಿದೆಲ್ಲಾ ಸುದ್ದಿ, ಲೇಖನಗಳನ್ನ ಮಕ್ಕಳೆ ಬರೆಯುತ್ತಾರೆ. ಗ್ರಾಮದ ಸಮಸ್ಯೆಗಳು, ವಿಶೇಷತೆಗಳು, ಸಂದರ್ಶನಗಳು ಸೇರಿ ವಿವಿಧ ಲೇಖನಗಳನ್ನ ಮಕ್ಕಳಿಂದಲೇ ಬರೆಸುತ್ತಾರೆ. ಮಕ್ಕಳ ಈ ಪೆನ್ಸಿಲ್ ಪತ್ರಿಕೆ ವರದಿಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ಕೆಲಸ ಮಾಡಿದ್ದು ಇದೆ. ವಿದ್ಯಾರ್ಥಿಗಳ ಬುದ್ದಿ ಶಕ್ತಿ ಹೆಚ್ವಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಕ್ಕೆ ಕೈಹಾಕಿದ ಶಿಕ್ಷಕರು ಯಶಸ್ವಿಯಾಗಿ ಪತ್ರಿಕೆಯನ್ನು ಮುಂದುವರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೆಯನ್ನ ಹೊರತರಲಾಗುತ್ತಿದ್ದು, ಮೊದಲೆಲ್ಲಾ ಮುದ್ರಣ ವೆಚ್ಚವನ್ನ ಶಿಕ್ಷಕರೇ ಬರಿಸುತ್ತಿದ್ದರು. ಈಗ ಗ್ರಾಮಸ್ಥರು ಸಹಾಯಕ್ಕೆ ಮುಂದಾಗಿದ್ದಾರೆ. ಪಾಠದ ಜೊತೆ ಮಕ್ಕಳಲ್ಲಿ ಪತ್ರಿಕೆಯ ಮೂಲಕ ಸೃಜನಾತ್ಮಕತೆ ಬೆಳೆಸಲು ಶಿಕ್ಷಕರು ಪ್ರಯತ್ನ ನಡೆಸಿದ್ದಾರೆ.

    ಒಟ್ಟು 310 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಎಂಟು ಜನ ಶಿಕ್ಷಕರಿದ್ದಾರೆ. ಕೇವಲ ಪಠ್ಯ ಶಿಕ್ಷಣಕ್ಕೆ ಗಂಟು ಬೀಳದೆ ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿರುವುದಕ್ಕೆ ಮಕ್ಕಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಶಿಕ್ಷಕ ಬಿ.ಕೊಟ್ರೇಶ್ ಎಲ್ಲಾ ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಾಯ ಪಡೆದು ಶಾಲೆಯ ವಾತಾವರಣವನ್ನೇ ಬದಲಿಸಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನ ಶಾಲೆಗೆ ಕರೆತರಲು ನಾನಾ ಯೋಜನೆಗಳನ್ನ ಜಾರಿಗೆ ತರುವ ಸರ್ಕಾರ ಇಂತಹ ಉತ್ಸಾಹಿ ಶಿಕ್ಷಕರ ಯಶಸ್ವಿ ಪ್ರಯೋಗಗಳಿಗೆ ಮನ್ನಣೆ ಕೊಡಬೇಕಿದೆ.

    ಗುಜರಾತಿನ ಬರೋಡಾದ ಮಹಾರಾಜ್ ಸಯ್ಯಾಜಿರಾವ್ ವಿವಿ ಕೊಡಮಾಡುವ ಯೂತ್ ಐಕಾನ್ ಯುಗಾಂತರ -2020 ರಾಷ್ಟಮಟ್ಟದ ಪ್ರಶಸ್ತಿಗೆ ಶಿಕ್ಷಕ ಕೊಟ್ರೇಶ್ ಆಯ್ಕೆಯಾಗಿದ್ದಾರೆ. ಪೆನ್ಸಿಲ್ ಪತ್ರಿಕೆಯ ಮೂಲಕ ಗ್ರಾಮದಲ್ಲಾದ ಬದಲಾವಣೆ ಹಾಗೂ ಮಕ್ಕಳ ಪತ್ರಿಕೆಯಿಂದ ಗ್ರಾಮಸ್ಥರ ಮೇಲಾದ ಪ್ರಭಾವ ಹಿನ್ನೆಲೆ ಶಿಕ್ಷಕ ಕೊಟ್ರೇಶ್ ರನ್ನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  • ಬಿಸಿಯೂಟ ಸೇವನೆ ಶಾಲಾ ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಬಿಸಿಯೂಟ ಸೇವನೆ ಶಾಲಾ ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಬಾಗಲಕೋಟೆ: ಬಿಸಿಯೂಟ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಅನ್ನ-ಸಾಂಬರ್ ಬಿಸಿಯೂಟ ಸೇವಿಸಿದ್ರು. ಬಳಿಕ ಬಿಸಿಯೂಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಶಾಲಾ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನ ರನ್ನಬೆಳಗಲಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು.

    ನಂತರ ಇನ್ನುಳಿದ ಮಕ್ಕಳಿಗೂ ಹೊಟ್ಟೆನೋವು ಕಾಣಿಕೊಂಡ ಪರಿಣಾಮ, ಬಿಸಿಯೂಟ ಸೇವಿಸಿದ 56 ಶಾಲಾ ಮಕ್ಕಳನ್ನೂ 108 ವಾಹನದ ಮೂಲಕ ಮುಧೋಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ವೈದ್ಯರು ತಪಾಸಣೆ ಮಾಡಿದ್ದು ಯಾವುದೇ ಅಪಾಯ ಇಲ್ಲ ಎಂದು ಡಿಎಚ್‍ಓ ಅನಂತ್ ದೇಸಾಯಿ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಯೂಟಕ್ಕೆ ಮಾಡಲಾಗಿದ್ದ ಸಾಂಬರ್ ಗೆ ಬಳಸಿದ ತರಾಕಾರಿಗಳು ಕೊಳೆತಿದ್ದು, ಸಾಂಬರ್ ನಲ್ಲಿ ಹಲ್ಲಿ ಬಿದ್ದು ಈ ಆವಾಂತರಕ್ಕೆ ಕಾರಣವಾಗಿದೆ ಎಂದು ಮಕ್ಕಳ ಪೋಷಕರು ಶಾಲಾ ಸಿಬ್ಬಂದಿಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೇ ಇಂತಹ ಬೇಜವಾಬ್ದಾರಿ ಸಿಬ್ಬಂದಿಯ ಮೇಲೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಇತ್ತ ವೈದ್ಯರು ಆಹಾರದಲ್ಲಿ ಕಣ್ತಪ್ಪಿನಿಂದ ಏನೋ ಕಲಬೆರಿಕೆ ಯಾಗಿರೋದು ಮಕ್ಕಳು ಅಸ್ವಸ್ಥಗೊಳ್ಳಲು ಕಾರಣ ಎಂದು ಹೇಳಿದ್ದಾರೆ. ಸ್ಥಳಕ್ಕೆ ಡಿಡಿಪಿಐ ಹಾಗೂ ಮುಧೋಳ ತಹಶೀಲ್ದಾರ್ ಹಾಗೂ ಸಿಪಿಐ ಎಚ್ ಆರ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.