Tag: government school

  • ಪುಟ್ಟ ಗ್ರಾಮದ ಸರ್ಕಾರಿ ಶಾಲೆಯ ಚಿಕ್ಕ ಮಕ್ಕಳಿಗೂ ಗೊತ್ತು ಜಪಾನಿ ಭಾಷೆ

    ಪುಟ್ಟ ಗ್ರಾಮದ ಸರ್ಕಾರಿ ಶಾಲೆಯ ಚಿಕ್ಕ ಮಕ್ಕಳಿಗೂ ಗೊತ್ತು ಜಪಾನಿ ಭಾಷೆ

    -ಜಪಾನಿ ಭಾಷೆ ಜೊತೆ ರೋಬೋಟಿಕ್ ತಂತ್ರಜ್ಞಾನದ ಕಲಿಕೆ

    ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೂರರದರಾಜ್ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಜಪಾನಿ ಭಾಷೆ ಕಲಿಯುತ್ತಿದ್ದಾರೆ.

    ಶಾಲೆಯಲ್ಲಿ ಕಡಿಮೆ ಸೌಲಭ್ಯಗಳಿದ್ದರೂ ಮಕ್ಕಳು ಮಾತ್ರ ರೋಬೋಟಿಕ್ಸ್ ಮತ್ತು ತಂತ್ರಜ್ಞಾನಾಧರಿತ ವಿಷಯಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಇದರ ಜೊತೆಗೆ ಆನ್‍ಲೈನ್ ತರಗತಿ ಮೂಲಕ ಜಪಾನಿ ಭಾಷೆಯನ್ನು ಸುಮಾರು 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

    ಕಳೆದ ವರ್ಷ ಸರ್ಕಾರಿ ಶಾಲೆಯ ನಾಲ್ಕರಿಂದ ಎಂಟನೇ ವರ್ಗದ ಮಕ್ಕಳಿಗೆ ವಿದೇಶಿ ಭಾಷೆಯ ಕಲಿಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಡಿ 70 ವಿದ್ಯಾರ್ಥಿಗಳು ಜಪಾನಿ ಭಾಷೆ ಕಲಿಯುತ್ತಿದ್ದಾರೆ. ಇಂಟರ್‍ನೆಟ್ ಸಹಾಯದಿಂದ ಮಕ್ಕಳು ಜಪಾನಿ ಪದಗಳನ್ನು ಭಾಷಾಂತರ ಮಾಡಿಕೊಳ್ಳುತ್ತಾರೆ. ಇನ್ನು ಕೆಲ ಮಕ್ಕಳು ಮಕ್ಕಳು ರೋಬೋಟಿಕ್ಸ್ ತಂತ್ರಜ್ಞಾನ ಕಲಿಯಲು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎಂದು ಶಾಲೆಯ ಶಿಕ್ಷಕ ದಾದಾಸಾಹೇಬ್ ನವಪೂತ್ ಹೇಳುತ್ತಾರೆ.

    ಮಕ್ಕಳಿಗೆ ಜಪಾನಿ ಭಾಷೆ ಕಲಿಯಲು ಪಠ್ಯಪುಸ್ತಕ ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲ. ಶಾಲೆಯ ಇಂಟರ್‍ನೆಟ್ ಬಳಸಿ ಮಕ್ಕಳು ಒಂದೆಡೆ ಸೇರಿ ಒಗ್ಗಟ್ಟಾಗಿ ಜಪಾನಿ ಭಾಷೆ ಕಲಿಯುತ್ತಿದ್ದಾರೆ. ಇನ್ನು ಮಕ್ಕಳ ಆಸಕ್ತಿ ಕಂಡ ಜಿಲ್ಲೆಯ ಭಾಷಾ ತಜ್ಞ ಸುನಿಲ್ ಜುಗದೌ ಉಚಿತವಾಗಿ ಪಾಠ ಮಾಡುತ್ತಿದ್ದಾರೆ.

     

  • ಉಪ್ಪೂರು ಬೈಕಾಡಿಯಲ್ಲಿ ನೆರೆ ಭೀತಿ- ಸರ್ಕಾರ ಶಾಲೆ ಸುತ್ತ ನದಿ ನೀರು

    ಉಪ್ಪೂರು ಬೈಕಾಡಿಯಲ್ಲಿ ನೆರೆ ಭೀತಿ- ಸರ್ಕಾರ ಶಾಲೆ ಸುತ್ತ ನದಿ ನೀರು

    ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಇಂದು ರೆಡ್, ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

    ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯ ನದಿಗಳು ತುಂಬಿ ಹರಿಯುತ್ತಿದೆ. ಇನ್ನೆರಡು ದಿನ ಮಳೆ ಮುಂದುವರಿದರೆ ನದಿ ಸಾಲುಗಳಲ್ಲಿ ನೆರೆಯ ವಾತಾವರಣ ಸೃಷ್ಟಿಯಾಗಲಿದೆ. ಉಡುಪಿ ನಗರದಲ್ಲಿ ಹರಿಯುವ ಸ್ವರ್ಣ, ಸೀತಾ ನದಿ ತುಂಬಿ ಹರಿಯುತ್ತಿದೆ. ಕುಂದಾಪುರ ಬೈಂದೂರು ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತ ಆಗಿದೆ.

    ನದಿ ತೀರದಲ್ಲಿ ಮನೆಗಳನ್ನು ಕಟ್ಟಿ ಕೊಂಡವರಲ್ಲಿ ಕೊಂಚ ಆತಂಕ ಸೃಷ್ಟಿಯಾಗಿದೆ. ನದಿಪಾತ್ರದವರು ಎಚ್ಚರಿಕೆಯಿಂದ ಇರಬೇಕು, ನೀರಿನ ಮಟ್ಟ ಹೆಚ್ಚಾದರೆ ಇತರ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧವಿರಬೇಕು ಎಂದು ಸ್ಥಳೀಯ ಆಡಳಿತಗಳು ಸಂದೇಶ ರವಾನಿಸಿದೆ.

    ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ 50ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ. ನಾಡದೋಣಿ ಮೀನುಗಾರಿಕೆಯವರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಬೈಕಾಡಿ, ಉಪ್ಪೂರು, ಹಕ್ಲಾಡಿ, ಹೈಕಾಡಿ ನಾವುಂದ ಬಡಾಕೆರೆ ಮತ್ತಿತರ ನದಿ ಪಾತ್ರದ ಭಾಗಗಳಲ್ಲಿ ನೆರೆಯ ವಾತಾವರಣ ಇದೆ.

  • ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಡ್ಮಿಶನ್ ಆರಂಭ

    ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಡ್ಮಿಶನ್ ಆರಂಭ

    ನವದೆಹಲಿ: ಕೊರೊನಾ ಆತಂಕದ ನಡುವೆಯೇ ದೆಹಲಿಯ ಆಪ್ ಸರ್ಕಾರ ಸರ್ಕಾರಿ ಶಾಲೆಗಳ ನೋಂದಣಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ.

    ಕೇವಲ ಆರು ಮತ್ತು ಒಂಬತ್ತನೇ ತರಗತಿಗಳಿಗೆ ನೋಂದಣಿ ಆರಂಭವಾಗಿದ್ದು, ಎಲ್ಲ ಪ್ರಕ್ರಿಯೆ ಆನ್‍ಲೈನ್ ಮೂಲಕ ನಡೆಯಲಿದೆ. ಆರು ಮತ್ತು ಒಂಬತ್ತನೇ ತರಗತಿಗೆ ಅಡ್ಮಿಷನ್ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಕೋಡ್ ಜುಲೈ 17ರಿಂದ ಜನರೇಟ್ ಮಾಡಲಾಗುವುದು.

    ಪೋಷಕರು ಶಾಲೆಗೆ ಬಂದು ಮಕ್ಕಳ ದಾಖಲಾತಿ ಪಡೆಯಲು ಸರ್ಕಾರ ನಿರ್ಬಂಧ ಹೇರಿದೆ. ಎಲ್ಲ ಪ್ರಕ್ರಿಯೆಗಳು ಆನ್‍ಲೈನ್ ಮೂಲಕವೇ ನಡೆಯಲಿದೆ. ಪೋಷಕರು ಶಾಲೆಗಳಿಗೆ ಬಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲ್ಲ. ಈ ಹಿನ್ನೆಲೆ ಸರ್ಕಾರದ ಈ ಆದೇಶ ಹೊರಡಿಸಿದೆ. ಆದ್ರೆ ಶಾಲೆಗಳು ಯಾವಾಗ ಆರಂಭವಾಗುತ್ತೆ ಅನ್ನೋದನ್ನ ಸರ್ಕಾರ ತಿಳಿಸಿಲ್ಲ.

  • ಸರ್ಕಾರಿ ಶಾಲಾ ಮಕ್ಕಳ ಗೋಳು ಕೇಳೋವರು ಯಾರು?

    ಸರ್ಕಾರಿ ಶಾಲಾ ಮಕ್ಕಳ ಗೋಳು ಕೇಳೋವರು ಯಾರು?

    -ಪಾಠವಿಲ್ಲದೆ ಕಂಗಾಲಾದ ಸರ್ಕಾರಿ ಶಾಲಾ ಮಕ್ಕಳು

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಎಫೆಕ್ಟ್ ಸರ್ಕಾರಿ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಪಾಠ ಕೇಳುವ ಸಮಯದಲ್ಲಿ ಪಾಠದಿಂದ ವಂಚನೆಗೆ ಒಳಗಾಗ್ತಿವೆ. ಖಾಸಗಿ ಶಾಲೆಗಳಿಗೆ ಪ್ರೀತಿ ತೋರಿರುವ ಸರ್ಕಾರ, ಸರ್ಕಾರಿ ಶಾಲೆಗಳನ್ನೆ ಮರೆತಿದೆ.

    ಮಹಾ ಮಾರಿ ಕೊರೊನಾ ಹೊಡೆತ ಸರ್ಕಾರಿ ಶಾಲಾ ಮಕ್ಕಳಿಗೆ ಎಫೆಕ್ಟ್ ಜೋರಾಗಿಯೇ ಬಿದ್ದಿದೆ. ಮಕ್ಕಳ ಭವಿಷ್ಯದ ಮೇಲೆ ಕರಿನೆರಳು ಮೂಡುವಂತೆ ಮಾಡಿದೆ. ಶೈಕ್ಷಣಿಕ ವರ್ಷ ಪ್ರಾರಂಭ ಮಾಡಿ ಪಾಠ ಕೇಳಬೇಕಿದ್ದ ಮಕ್ಕಳು, ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಸರ್ಕಾರ ಮಾತ್ರ ಇದರ ಬಗ್ಗೆ ಮಾತ್ರ ಚಿಂತೆ ಮಾಡಿದಂತೆ ಕಾಣಿಸುತ್ತಿಲ್ಲ. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದ ಶಿಕ್ಷಣ ಇಲಾಖೆ ಸುಮ್ಮನೆ ಕುಳಿತಿದ್ದು, ನಮಗೂ ನ್ಯಾಯ ಕೊಡಿ ಎಂದು ಸರ್ಕಾರಿ ಶಾಲೆಯ ಮಕ್ಕಳು ಕೇಳುತ್ತಿದ್ದಾರೆ.

    ಖಾಸಗಿ ಶಾಲೆಗಳಿಗೂ ಈ ಕೊರೊನಾ ಎಫೆಕ್ಟ್ ತಟ್ಟಿದೆ. ಆದರೆ ಸರ್ಕಾರ ಆನ್‍ಲೈನ್‍ನಲ್ಲಿ ಪಾಠ ಮಾಡಲು ಅವಕಾಶ ಕೊಟ್ಟಿದೆ. ಹೀಗಾಗಿ ಈಗಾಗಲೇ ಖಾಸಗಿ ಶಾಲೆಗಳು ಆನ್‍ಲೈನ್ ತರಗತಿ ಪ್ರಾರಂಭ ಮಾಡಿವೆ. ಇಷ್ಟು ಹೊತ್ತಿಗಾಗಲೇ ಸರ್ಕಾರಿ ಶಾಲೆಗಳು ಪ್ರಾರಂಭ ಆಗಬೇಕಿತ್ತು. ಇನ್ನು ಶಾಲೆ ಯಾವಾಗ ಪ್ರಾರಂಭ ಆಗುತ್ತೆ ಅಂತ ಗೊತ್ತಿಲ್ಲ. ಹೀಗಿರುವಾಗಿ ಪಾಠ ಮಾಡೋದು ಎಲ್ಲಿ? ಖಾಸಗಿ ಶಾಲೆಗಳಂತೆ ಆನ್‍ಲೈನ್ ತರಗತಿ ಸಾಧ್ಯವಿಲ್ಲ. ಹಳ್ಳಿ ಪ್ರದೇಶಗಳಲ್ಲಿ ಇಂಟರ್ ನೆಟ್ ಸೌಲಭ್ಯ ಇರೋದಿಲ್ಲ. ಮೊಬೈಲ್, ಲ್ಯಾಪ್‍ಟಾಪ್ ವ್ಯವಸ್ಥೆ ಇಲ್ಲ. ಹೀಗಿರುವಾಗ ಆನ್‍ಲೈನ್ ತರಗತಿ ಸಾಧ್ಯವಿಲ್ಲ. ಹೀಗಾಗಿ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎಂದು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳುತ್ತಾರೆ.

    ರಾಜ್ಯದಲ್ಲಿ ಸುಮಾರು 50 ರಿಂದ 60 ಸಾವಿರ ಸರ್ಕಾರಿ ಶಾಲೆಗಳಿಗೆ. ಲಕ್ಷದಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇವರಿಗೆಲ್ಲ ನ್ಯಾಯ ಕೊಡಬೇಕಾದದ್ದು ಸರ್ಕಾರದ ಕೆಲಸವಾಗಿದೆ.

  • ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಜೇಬಿನಲ್ಲಿದ್ದ ಎಲ್ಲ ಹಣ ಕೊಟ್ಟ ಶಾಸಕ

    ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಜೇಬಿನಲ್ಲಿದ್ದ ಎಲ್ಲ ಹಣ ಕೊಟ್ಟ ಶಾಸಕ

    ಚಿಕ್ಕೋಡಿ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಜೇಬಿನಲ್ಲಿದ್ದ ಎಲ್ಲ ಹಣವನ್ನು ಕುಡಚಿ ಶಾಸಕ ಪಿ.ರಾಜೀವ್ ನೀಡಿದ್ದಾರೆ. ಶಾಲೆಯ ಬೆಳವಣಿಗೆ ಕಂಡು ಮತ್ತಷ್ಟು ಅಭಿವೃದ್ಧಿ ಆಗಲಿ ಎಂದು ತನ್ನ ಜೇಬಿನಲ್ಲಿದ್ದ ಎಲ್ಲಾ ಹಣ ನೀಡಿದರು.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಕುಡಚಿ ಶಾಸಕ ಪಿ ರಾಜೀವ್ ಭೇಟಿ ನೀಡಿದ್ದರು. ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟದಲ್ಲಿ ಅಭಿವೃದ್ಧಿ ಆಗಿರುವ ಈ ಶಾಲೆಯನ್ನ ಕಂಡು ಸಂತಸಗೊಂಡ ರಾಜೀವ್ ಅವರು ತನ್ನ ಜೇಬಿನಲ್ಲಿದ್ದ 18 ಸಾವಿರ ರೂ. ಅನ್ನು ಶಾಲೆ ಅಭಿವೃದ್ಧಿಗಾಗಿ ಶಿಕ್ಷಕರಿಗೆ ನೀಡಿದರು.

    ಇದೇ ವೇಳೆ ಶಾಲೆ ಅನುದಾನಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ನಿಡಗುಂದಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ ಖಾಸಗಿ ಶಾಲೆಗಳಂತೆ ಡಿಜಿಟಲ್ ಕ್ಲಾಸ್ ರೂಮ್ ಹಾಗೂ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಾವಿಣ್ಯರನ್ನಾಗಿ ಮಾಡುತ್ತಿರುವ ಶಾಲಾ ಮುಖ್ಯೋಪಾಧ್ಯಯ ವೀರಣ್ಣಾ ಮಡಿವಾಳರ ಅವರನ್ನ ಶಾಸಕರು ಹಾಡಿ ಹೊಗಳಿದರು. ಜೊತೆಗೆ ನಿಮ್ಮ ಈ ಸಾರ್ಥಕ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

  • ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಬಿಸಿಯೂಟ- ಮುಖ್ಯ ಶಿಕ್ಷಕ ಅಮಾನತು

    ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಬಿಸಿಯೂಟ- ಮುಖ್ಯ ಶಿಕ್ಷಕ ಅಮಾನತು

    ಮೈಸೂರು: ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಬಿಸಿಯೂಟ ನೀಡುವ ಮೂಲಕ ನಿರ್ಲಕ್ಷ್ಯ ತೋರಿದ್ದ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

    ಜಿಲ್ಲೆಯ ಹೆಚ್.ಡಿ ಕೋಟೆ ಪಟ್ಟಣದ ಆದರ್ಶ ಶಾಲೆಯ ಚಂದ್ರಶೇಖರ್ ಅಮಾನತುಗೊಂಡ ಮುಖ್ಯ ಶಿಕ್ಷಕ. ಹುಳು ಮಿಶ್ರಿತ ಬಿಸಿಯೂಟ ನೀಡಿದ್ದರಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ನಂತರ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಎರಡು ತಿಂಗಳ ಹಿಂದೆ ಈ ಘಟನೆ ಸಂಭವಿಸಿತ್ತು. ಇದಕ್ಕೆ ಮುಖ್ಯ ಶಿಕ್ಷಕನ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ ವೇಳೆ ತಿಳಿದು ಬಂದಿದ್ದು, ಘಟನೆ ಬಳಿಕ ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ್ದ ಜಿಲ್ಲಾಧಿಕಾರಿಗಳ ತಂಡ, ಹುಳು ಮಿಶ್ರಿತ ಬಿಸಿಯೂಟ ಬಡಿಸಿರುವುದು ಸಾಬೀತಾಗಿತ್ತು. ಹೀಗಾಗಿ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಜಾರಿ ಮಾಡಿದ್ದಾರೆ.

  • ಪ್ರತಿನಿತ್ಯ ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ

    ಪ್ರತಿನಿತ್ಯ ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ ಐಎಎಸ್ ಅಧಿಕಾರಿ

    ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಾಣಧಿಕಾರಿ ಫೌಜಿಯಾ ತರನುಮ್‍ರವರು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡುತ್ತಾ ಮಾದರಿಯಾಗಿದ್ದಾರೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಮ್ಮ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪಾಸಾಗಲೇಬೇಕು ಅಂತ ಫೌಜಿಯಾ ಅವರು ಗುರಿ ಇಟ್ಟಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಟೊಂಕ ಕಟ್ಟಿ ನಿಂತು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಫೌಜಿಯಾರವರು ತಾವೇ ಶಿಕ್ಷಕಿಯಾಗಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ಕೊಟ್ಟು. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ.

    ಈ ಬಾರಿ ಏನಾದರೂ ಮಾಡಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ತಮ್ಮ ಜಿಲ್ಲೆಯನ್ನ ಟಾಪ್ 10 ಸ್ಥಾನದಲ್ಲಿ ತರಲೇಬೇಕು ಅಂತ ಗುರಿ ಇಟ್ಟುಕೊಂಡಿರೋ ಸಿಇಒ, ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನ ರೂಪಿಸಿದ್ದಾರೆ. ಪ್ರತಿ ದಿನ ತಾವು ಜಿಲ್ಲೆಯ ಯಾವುದೇ ಗ್ರಾಮ್ಕಕ್ಕೆ ಹೋದರೂ ಅಲ್ಲಿನ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ಕೊಟ್ಟು ಪಾಠ ಪ್ರವಚನ ಮಾಡ್ತಿದ್ದು, ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳಿಂದ ಆತ್ಮಸ್ಥೈರ್ಯ ತುಂಬುವ ಕಾಯಕ ಮಾಡ್ತಿದ್ದಾರೆ.

    ಸ್ವತಃ ತಾವೇ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಮಾಡೋ ಸಿಇಒ ಫೌಜಿಯಾ ಅವರು, ಮೊದಲಿಗೆ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ನಡೆಸಿ ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗುವಂತೆ ವಿಶೇಷ ತರಗತಿಗಳನ್ನ ಮಾಡುವಂತೆ ಸೂಚಿಸಿದ್ದಾರೆ. ತದನಂತರ ಮನೆಯಲ್ಲಿ ಬೆಳಗಿನ ಜಾವ ಬೇಗ ಎದ್ದು ಮಕ್ಕಳು ಓದುವಂತೆ ಮಾಡಲು ಮಿಸ್ಡ್ ಕಾಲ್ ಕಾರ್ಯಕ್ರಮ ರೂಪಿಸಿದ್ದಾರೆ.

    ವಿದ್ಯಾರ್ಥಿಗಳಲ್ಲೇ 4 ತಂಡಗಳಾಗಿ ಮಾಡಿ ಆ ವಿದ್ಯಾರ್ಥಿಗಳ ಹೊಣೆಯನ್ನ ಆಯಾ ಶಾಲೆಯ ಶಿಕ್ಷಕರಿಗೆ ಹೊರಿಸಿ ದತ್ತು ನಿಯಮ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪರೀಕ್ಷೆ ಅಂದರೆ ಸಾಕು ವಿದ್ಯಾರ್ಥಿಗಳು ಭಯಪಡ್ತಾರೆ ಅಂತ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ತಾವೇ ಮಾಡೆಲ್ ಪಬ್ಲಿಕ್ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನ ಹೋಗಲಾಡಿಸುವ ಕಾಯಕಕ್ಕೆ ಮುಂದಾಗಿದ್ದಾರೆ. ಸಿಇಒ ಕಾರ್ಯ ವೈಖರಿಗೆ ಸ್ವತಃ ಶಿಕ್ಷಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಶಿಕ್ಷಕರು ಸಹ ಹಬ್ಬ ಹರಿದಿನ, ರಜಾ ಅಂತ ಕಾಲ ಕಳೆಯದೆ ವಿದ್ಯಾರ್ಥಿಗಳನ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಜ್ಜುಗೊಳಿಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಜೀವನದ ಅತಿ ಮುಖ್ಯವಾದ ಘಟ್ಟವಾಗಿದ್ದು, ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳು ಪಾಸಾಗಬೇಕು ಅಂತ ಸಿಇಒ ಗುರಿ ಹೊಂದಿದ್ದಾರೆ. ಆನೇಕ ಕಾರ್ಯಕ್ರಮಗಳನ್ನ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

    ಎರಡು ವರ್ಷದ ಹಿಂದೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಜಾರಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ ಬಾರಿ 20ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಈ ವರ್ಷ ಟಾಪ್ 10 ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯೂ ಬರಬೇಕು ಅಂತ ಫೌಜಿಯಾ ಅವರು ಶ್ರಮ ಪಡುತ್ತಿದ್ದಾರೆ.

  • ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ

    ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ

    ಯಾದಗಿರಿ: ದೇವಸ್ಥಾನ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಕಟ್ಟಡ ಧ್ವಂಸ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರಾಮನಾಯಕನ ತಾಂಡದಲ್ಲಿ ನಡೆದಿದೆ.

    ರಾಮನಾಯಕ ತಾಂಡದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡವನ್ನು ದೇವಸ್ಥಾನ ಕಟ್ಟುವ ಸಲುವಾಗಿ ಕೆಡವಿ ಹಾಕಲಾಗಿದೆ. ಆದರೆ ಸರ್ಕಾರದ ಕಟ್ಟಡ ಕೆಡವಲು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ ಈ ಕೃತ್ಯ ನಡೆಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

    ಹೊಸ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸದ ಮೇಲೆ ಹಳೆ ಕಟ್ಟಡ ಮೇಲೆ ಕಣ್ಣಿಟ್ಟಿರುವ ಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಮತ್ತು ಗ್ರಾಮ ಕೆಲ ಮುಖಂಡರಗಳು ಮುಂದೆ ನಿಂತು ಸ್ವತಃ ಕಟ್ಟಡ ಧ್ವಂಸಗೊಳಿಸುತ್ತಿರುವ ಹಿನ್ನೆಲೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಕೆಲ ಗ್ರಾಮಸ್ಥರ ವಿರೋಧ ಇದ್ದರು ಅವರ ಮಾತಿಗೆ ಕೇರ್ ಮಾಡದೆ ಕಟ್ಟಡ ಕೆಡವಲಾಗುತ್ತಿದೆ.

    ಶಾಲೆಗೂ ನನಗೂ ಸಂಬಂಧವಿಲ್ಲ ಎಂದ ಶಾಲಾ ಮುಖ್ಯ ಶಿಕ್ಷಕ ಗುಂಡಪ್ಪ ಮತ್ತು ಬಿಇಓ ಸಮಜಾಯಿಷಿ ನೀಡುತ್ತಿದ್ದು, ಶಾಲೆ ಮುಖ್ಯ ಶಿಕ್ಷಕ ಮತ್ತು ಬಿಇಓ ಸಹ ಇದರಲ್ಲಿ ಶಾಮೀಲಾಗಿರುವ ಆರೋಪ ಸಹ ಕೇಳಿ ಬರುತ್ತಿದೆ.

  • ಶಾಸಕರನ್ನು ಅಡ್ಡಗಟ್ಟಿದ ಐವರು ವಿದ್ಯಾರ್ಥಿನಿಯರು

    ಶಾಸಕರನ್ನು ಅಡ್ಡಗಟ್ಟಿದ ಐವರು ವಿದ್ಯಾರ್ಥಿನಿಯರು

    ಶಿವಮೊಗ್ಗ : ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ರಾತ್ರಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಐವರು ವಿದ್ಯಾರ್ಥಿನಿಯರು ಅಡ್ಡಗಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

    ರಾತ್ರಿ ಸಮಯದಲ್ಲಿ ಐವರು ವಿದ್ಯಾರ್ಥಿನಿಯರು ತಮ್ಮ ಕಾರನ್ನು ಅಡ್ಡ ಹಾಕಿದ್ದಕ್ಕೆ ಅವಕ್ಕಾದ ಶಾಸಕರು ಕಾರು ನಿಲ್ಲಿಸಿ, ಏನಮ್ಮಾ ಕಾರು ಏಕೆ ಅಡ್ಡ ಹಾಕುತ್ತಿದ್ದೀರಿ ಏನು ನಿಮ್ಮ ಸಮಸ್ಯೆ ಎಂದು ಪ್ರಶ್ನಿಸಿದರು.ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ನಾವು ನಮ್ಮ ಶಾಲೆಗೆ ಈ ಹಿಂದೆ ಎರಡು ಬಾರಿ ಆಹ್ವಾನಿಸಿದ್ದೇವು. ಆದರೂ ನೀವು ಬಂದಿಲ್ಲ ನಮ್ಮ ಶಾಲೆಗೂ ಬನ್ನಿ ನಮ್ಮ ಶಾಲೆಗೂ ಏನಾದರೂ ಕೊಡುಗೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಆಗ ಶಾಸಕರು ಅಷ್ಟೇನಾ, ಇದಕ್ಕೆ ಕಾರು ಅಡ್ಡ ಹಾಕಿದ್ದ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೊಸನಗರ ತಾಲೊಕಿನ ನೂಲಿಗ್ಗೇರಿ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಶುಕ್ರವಾರ ರಾತ್ರಿ ಭಾಗವಹಿಸಿದ್ದರು. ಸಾಂಸ್ಕೃತಿಕ ಸಂಭ್ರಮಕ್ಕೆ ಚಾಲನೆ ನೀಡಿದ ಶಾಸಕರು ಮಕ್ಕಳಿಗೆ ಕೆಲವು ನೀತಿಪಾಠ ಹೇಳಿದ್ದರು. ಅಲ್ಲದೇ ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಒಂದು ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ಸಹ ನೀಡಿದರು.

    ಶಾಸಕರ ಮಾತನ್ನು ಆಲಿಸಿದ್ದ ನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಪೃಥ್ವಿ, ಪ್ರಕೃತಿ, ರಂಜಿತಾ, ಕೀರ್ತಿ, ಪೂರ್ಣಿಮಾ ಶಾಸಕರು ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ ಅಡ್ಡಗಟ್ಟಿದ್ದಾರೆ. ತಮ್ಮ ಶಾಲೆಗೆ ಆಹ್ವಾನಿಸಿ ಬೇಡಿಕೆ ಮುಂದಿಟ್ಟಿದ್ದಾರೆ.

    ವಿದ್ಯಾರ್ಥಿನಿಯರ ಧೈರ್ಯ ಮತ್ತು ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಆರಗ ಜ್ಞಾನೇಂದ್ರ, ಮುಂದಿನ ದಿನದಲ್ಲಿ ನಿಮ್ಮ ಶಾಲೆಯ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆ ನೀಡಿದರು. ಅಲ್ಲದೇ ನಿಮ್ಮ ಶಾಲೆಗೆ ಬೇಕಾದ ಸೌಕರ್ಯದ ಬಗ್ಗೆ ಪಟ್ಟಿ ಮಾಡಿ ಸಲ್ಲಿಸಲು ಸೂಚಿಸಿದರು. ಈ ವಿದ್ಯಾರ್ಥಿನಿಯರ ಧೈರ್ಯ ಮತ್ತು ಕಾಳಜಿಗೆ ಸಾರ್ವಜನಿಕರು ಸಹ ಪ್ರಶಂಸಿದ್ದಾರೆ.

  • ಕ್ಯೂನಲ್ಲಿ ನಿಂತು ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು: ಸುರೇಶ್ ಕುಮಾರ್ ಕನಸು

    ಕ್ಯೂನಲ್ಲಿ ನಿಂತು ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು: ಸುರೇಶ್ ಕುಮಾರ್ ಕನಸು

    ಚಾಮರಾಜನಗರ: ಸರ್ಕಾರಿ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕ್ಯೂನಲ್ಲಿ ನಿಂತು ಸೇರಿಸುವಂತಾಗಬೇಕು. ಆ ಮಟ್ಟಿಗೆ ಸರ್ಕಾರಿ ಶಾಲೆಗಳನ್ನು ಇನ್ನು ಮೂರು ವರ್ಷಗಳಲ್ಲಿ ಸುಧಾರಣೆ ಮಾಡುವ ಕನಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆ ಪಚ್ಚೆದೊಡ್ಡಿಯಲ್ಲಿ ಶಾಲಾ ವಾಸ್ತವ್ಯ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಇದರಿಂದ ಅವರ ಜೀವನವೂ ಸುಧಾರಣೆಯಾಗಲಿದೆ ಎಂದರು.

    ಈ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗೆ ಪ್ರೌಢಶಿಕ್ಷಣ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಪೂರೈಸುವುದಾಗಿ ತಿಳಿಸಿದರು. ಹಾಗೆಯೇ ಈ ಪ್ರಶ್ನೆ ಪತ್ರಿಕೆಗಳು ಮುಖ್ಯ ಪರೀಕ್ಷೆಯ ಮಾದರಿಯಲ್ಲೇ ಇರಲಿದೆ. ಇದರಿಂದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಎದುರಿಸಲು ಸುಲಭವವಾಗಲಿದೆ ಎಂದು ಮಾಹಿತಿ ನೀಡಿದರು.

    ಶಿಕ್ಷಣ ಸಚಿವರಾದ ನಂತರ ರಾಜ್ಯದಲ್ಲಿ ಇದು ಅವರ ಮೂರನೇ ಶಾಲಾ ವಾಸ್ತವ್ಯವಾಗಿದೆ. ಮೊದಲನೇಯದಾಗಿ ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ನಂತರ ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ವಾಸ್ತವ್ಯ ಮಾಡಿದ್ದರು. ಇದೀಗ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

    6ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ 5 ಕಿ.ಮೀ ದೂರದ ಅಜ್ಜಿಪುರಕ್ಕೆ ಕಾಡಿನ ನಡುವೆ ಕಲ್ಲು, ಮುಳ್ಳು ಹಾಗೂ ಕಡಿದಾದ ಹಾದಿಯಲ್ಲಿ ಮಕ್ಕಳು ನಡೆದು ಹೋಗಬೇಕು. ಕಾಡುಪ್ರಾಣಿಗಳ ಹಾವಳಿ ಬೇರೆ ಇದೆ. ನಡೆಯುವುದರಲ್ಲೇ ಸಾಕಷ್ಟು ಕಾಲ ವ್ಯಯವಾಗುವುದರಿಂದ ವಿದ್ಯಾಭ್ಯಾಸಕ್ಕೆ ಪೆಟ್ಟು ಬೀಳುತ್ತಿದೆ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ನಮಗೆ ರಸ್ತೆ ಬೇಕು, ವಾಹನ ವ್ಯವಸ್ಥೆಬೇಕು ಎಂದು ಮನವಿ ಮಾಡಿಕೊಂಡರು.

    ಮಕ್ಕಳ ಸಮಸ್ಯೆಗೆ ಸ್ಪಂಧಿಸಿದ ಸಚಿವ ಸುರೇಶ್ ಕುಮಾರ್ ಅವರು, ಹತ್ತು ದಿನಗಳಲ್ಲಿ ಕಾಡಿನ ರಸ್ತೆಯ ಜಂಗಲ್ ಕಟಿಂಗ್ ಮಾಡಿ, ಅಜ್ಜಿಪುರಕ್ಕೆ ವ್ಯಾನ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಇದೇ ವೇಳೆ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಗ್ರಾಮಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ ಸೌಲಭ್ಯ ಕಲ್ಪಿಸಿ, ತಿಂಗಳಲ್ಲಿ ಎರಡು ಬಾರಿ ಪಡಿತರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಕೂತು ಊಟ ಮಾಡಿದರು.