Tag: government school

  • ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

    ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ

    ಯಾದಗಿರಿ: ಮಾಜಿಯಾಗಿದ್ದರು ತಾನೇ ಎಸ್‍ಡಿಎಂಸಿ ಹಾಲಿ ಅಧ್ಯಕ್ಷನೆಂದು ಯಾವುದೇ ಅನುಮತಿ ಇಲ್ಲದೇ ಶಾಲೆಯ ಅಡುಗೆ ಕೋಣೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

    yadagiri school

    ಗುರುಮಠಕಲ್ ತಾಲೂಕಿನ ಪುಟಪಾಕ್ ತಾಂಡಾದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ಏಕಾಏಕಿ ಯಾರಿಗೂ ಮಾಹಿತಿ ನೀಡದೇ ಎಸ್‍ಡಿಎಂಎಸಿ ಮಾಜಿ ಅಧ್ಯಕ್ಷ ಕಿಶಾನ್ ರಾಠೋಡ ನೆಲಸಮ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    yadagiri school

    ಶಿಕ್ಷಣ ಇಲಾಖೆಯು ಅಡುಗೆ ಕೋಣೆ ನಿರ್ಮಾಣ ಮಾಡಲು 4 ಲಕ್ಷ ರೂ. ಅನುದಾನ ಮಂಜೂರು ಮಾಡಿತ್ತು, ಆದರೆ ಹಳೇ ಅಡುಗೆ ಕೋಣೆಯು 2009ರ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಕಟ್ಟಡ ಸುಸಜ್ಜಿತವಾಗಿದ್ದ ಹಿನ್ನೆಲೆ ತಾಲೂಕು ಪಂಚಾಯತಿ ಇಂಜಿನಿಯರ್ ಅಧಿಕಾರಿಯವರು ಹಳೆಯ ಅಡುಗೆ ಕೋಣೆ ತೆರವು ಮಾಡಲು ಯಾವುದೇ ಅನುಮತಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಕಿಶಾನ್ ರಾಠೋಡ ಅಡುಗೆ ಕೋಣೆ ಡೆಮಾಲಿಷ್ ಮಾಡಲು ಯಾವುದೇ ಅನುಮತಿ ನೀಡದಿದ್ದರು, ಜೆಸಿಬಿ ಮೂಲಕ ಅಡುಗೆ ಕೋಣೆ ಡೆಮಾಲಿಷ್ ಮಾಡಿ ದರ್ಪ ಮೆರೆದಿದ್ದಾರೆ. ಅಡುಗೆ ಕೋಣೆ ಡೆಮಾಲಿಷ್ ಮಾಡಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆ ಮೇಲೆ ನಿರ್ಮಾಣವಾಯ್ತು ಉಗಿಬಂಡಿ

    ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆ ಮೇಲೆ ನಿರ್ಮಾಣವಾಯ್ತು ಉಗಿಬಂಡಿ

    ಚಿತ್ರದುರ್ಗ: ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯೋರೇ ಹೆಚ್ಚು. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಅನ್ನೋ ಆರೋಪ ನಿರಂತರ. ಇಂತಹ ಸಾಂಪ್ರದಾಯಿಕ ಮಾತುಗಳನ್ನು ಹುಸಿ ಮಾಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಯ ಮೇಲೆ ರೈಲೊಂದನ್ನು ಚಿತ್ರಿಸುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

    ಅಂಬಲಗೆರೆ ಶಾಲೆಯ ಶಿಕ್ಷಕರಾದ ನಾಗಭೂಷಣ್ ಅವರು ತುಂಬಾ ಶ್ರಮವಹಿಸಿ, ತಮ್ಮ ಸ್ವಂತ ಹಣ ಖರ್ಚುಮಾಡಿ ಅಂಬಲಗೆರೆಯ ಸರ್ಕಾರಿ ಶಾಲೆಯನ್ನು ತುಂಬಾ ಸುಂದರವಾಗಿ ಬದಲಾವಣೆ ಮಾಡಿದ್ದಾರೆ. ಹಿರಿಯೂರು ತಾಲೂಕಿನ ಶಿವನಗರ ಗ್ರಾಮದವರಾದ ನಾಗಭೂಷಣ್ ರವರು ಬಹುಮುಖ ಪ್ರತಿಭೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳಗುಡ್ಡದಿಂದ 2016ರಲ್ಲಿ ಈ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಕಲಿಸದೇ ಎಣಿಸುವ ಸಂಬಳ ನನ್ನದಲ್ಲ ಎಂಬ ಧ್ಯೇಯವಾಕ್ಯ ಪಾಲಿಸುತ್ತಿರುವ ಶಿಕ್ಷಕ ಎನಿಸಿರುವ ನಾಗಭೂಷನ್, ತುಂಬಾ ಹದಗೆಟ್ಟು, ಶಿಥಿಲಾವಸ್ಥೆಗೆ ತಲುಪಿದ್ದ ಶಾಲೆಯ ಗೋಡೆಗಳು, ಅರೆಬರೆ ಬಣ್ಣ, ಮಾಸಿದ ಹಂಚು, ಬಿದ್ದು ಹೋಗುವಂತಿದ್ದ ಶಾಲೆಯನ್ನು ಕೇವಲ ಆರೇ ತಿಂಗಳಲ್ಲಿ ಇಡೀ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಇದನ್ನೂ ಓದಿ: ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

    ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಹೊಂದಿರುವವರನ್ನು ನೋಡಬನ್ನಿ ನಮ್ಮೂರ ಶಾಲೆಯ ಚಂದವನ್ನು ಎಂದು ಖಾಸಗಿ ಶಾಲೆಯನ್ನು ನಾಚಿಸುವಂತೆ ಹೊಸ ರೂಪ ನೀಡಿ ಶಾಲೆಯನ್ನು ಮರು ನಿರ್ಮಾಣ ಮಾಡಿದ್ದಾರೆ. ಕನ್ನಡ ಶಿಕ್ಷಕರಾಗಿರುವ ನಾಗಭೂಷಣ್, ಶಾಲೆಯಲ್ಲಿ ಇಂಗ್ಲೀಷ್ ವಿಷಯ ಶಿಕ್ಷಕರಿಲ್ಲದ ಕಾರಣದಿಂದ ಇಂಗ್ಲೀಷ್ ಬೋಧನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಈ ಶಾಲೆಯ ದುಸ್ಥಿತಿ ಕಂಡು ನಾಗಭೂಷಣ್ ರವರು ಆರು ತಿಂಗಳ ಹಿಂದೆ ಒಂದು ಕೊಠಡಿಯನ್ನು ದತ್ತು ಪಡೆದು, ತಮ್ಮ ಸ್ವಂತ ಜೇಬಿನಿಂದ ಸುಮಾರು 2 ಲಕ್ಷ ರೂಗಳನ್ನು ವಿನಿಯೋಗಿಸಿ, ಈ ಶಾಲೆಗೆ ಸುಸಜ್ಜಿತ ಡೆಸ್ಕ್ ಗಳು, ಟಿ.ವಿ, ಕಂಪ್ಯೂಟರ್, ವೈಟ್ ಬೋರ್ಡ್, ಟೇಬಲ್, ಕುರ್ಚಿ, ನೆಲಕ್ಕೆ ಟೈಲ್ಸ್ ಹೊದಿಕೆಯ ವ್ಯವಸ್ಥೆ ಸೇರಿದಂತೆ ಈ ಶಾಲೆಯ ಗೋಡೆಗಳನ್ನು ಬಣ್ಣ ಬಣ್ಣಗಳಿಂದ ಸಿಂಗರಿಸುವ ಮೂಲಕ ಆಕರ್ಷಣೆಗೊಳಿಸಿದ್ದರು.

    ಈ ಕಾರ್ಯದಲ್ಲಿ ಸ್ಥಳೀಯ ಕಲಾವಿದರಾದ ವೀರೇಂದ್ರ ಅಂಬಲಗೆರೆ, ಶಿವಕುಮಾರ್ ಕಂದಿಕೆರೆ, ಶಾಲಾಭಿವೃದ್ಧಿ ಸಮಿತಿಯವರು, ಶಾಲೆಯ ವಿದ್ಯಾರ್ಥಿಗಳು ಸುಮಾರು 1 ಲಕ್ಷ ರೂ.ಗಳನ್ನು ಸಂಗ್ರಹಿಸಿ ಕೊಟ್ಟಿದ್ದು, ಈ ಹಣದಲ್ಲಿ ಇಡೀ ಶಾಲೆಯನ್ನು ಮರು ನಿರ್ಮಾಣ ಮಾಡಿದ್ದಾರೆ. ಈ ಕಾರ್ಯದಲ್ಲಿ ಕೋವಿಡ್ ಕಾರಣದಿಂದ ನಗರ ಬಿಟ್ಟು ಊರಿಗೆ ಮರಳಿದ್ದ ಹಲವು ಸ್ಥಳೀಯ ಯುವಕರು ಶಾಲೆಯ ಮರು ನಿರ್ಮಾಣಕ್ಕೆ ಕೈಜೋಡಿಸಿದ್ದು, ಸುಸ್ಥಿತಿಯಲ್ಲಿದ್ದ ಹಳೆಯ ಹಂಚುಗಳನ್ನು ಒಯ್ದು ತೊಳೆದು ತಂದು ಬಣ್ಣ ಹಚ್ಚಿ, ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ, ಆವರಣದಲ್ಲಿನ ಕಸ-ಕಡ್ಡಿ ತೆಗೆದು ಸ್ವಚ್ಛಗೊಳಿಸಿದ್ದಾರೆ. ಇಂತಹ ಹಲವು ಕೆಲಸಗಳನ್ನು ಈ ಯುವಕರು ಮಾಡಿದ್ದು, ಗಾರೆ ಕೆಲಸದವರಿಗೆ ಮಾತ್ರ ನಾವು ಕೂಲಿ ಕೊಡಲಾಗಿದೆ ಎಂಬುದಾಗಿ ನಾಗಭೂಷಣ್ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

    ಶಾಲೆಯಲ್ಲಿ ಕಲಿಕಾ ವ್ಯವಸ್ಥೆ ಸರಿಯಿಲ್ಲದಿದ್ದರೆ ಮಕ್ಕಳ ಮನಸ್ಸನ್ನು ಗೆಲ್ಲುವುದು ಅಸಾಧ್ಯ, ಎಂಬುದುನ್ನು ಅರಿತಿರುವ ನಾಗಭೂಷಣ್ ಮಕ್ಕಳಿಗೆ ಕಲಿಕೆಯಲ್ಲಿ ಸ್ವಯಂ ಆಸಕ್ತಿ ಮೂಡಿಸಲು ಅಗತ್ಯ ಕಲಿಕಾ ವಾತಾವರಣವೂ ಇರಬೇಕೆಂದು ತಮ್ಮ ಕುಟುಂಬಕ್ಕಿಂತಲೂ ಶಾಲೆಯನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ. ಅವರ ಬಹುಪಾಲು ಸಮಯ ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಪಾಲಾಗಿದೆ. ಇದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದೂರದ ಅಂಬಲಗೆರೆ ಗ್ರಾಮದಿಂದ ನಗರದ ವಿವಿಧ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ ಗ್ರಾಮದ ಬಹಳಷ್ಟು ಜನ ಮಕ್ಕಳನ್ನು ಪೋಷಕರು ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ.

  • ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಓರ್ವ ವಿದ್ಯಾರ್ಥಿ ಸಾವು, ಇಬ್ಬರು ಗಂಭೀರ

    ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಓರ್ವ ವಿದ್ಯಾರ್ಥಿ ಸಾವು, ಇಬ್ಬರು ಗಂಭೀರ

    ತುಮಕೂರು: ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ತಾಲ್ಲೂಕಿನ ಕರೀಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ಚಂದನ್(16) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಶಶಾಂಕ್(16) ಮತ್ತು ಪವನ್(22)ರನ್ನು ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕರೀಕೆರೆ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಸ್ತಂಭ ನಿಲ್ಲಿಸುವ ವೇಳೆ ಚಂದನ್, ಶಶಾಂಕ್, ಪವನ್ ವಿದ್ಯುತ್ ತಗುಲಿದೆ. ಹೀಗಾಗಿ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಚಂದನ್ ಕೊನೆಯುಸಿರೆಳೆದಿದ್ದಾರೆ.

    ಇದೀಗ ಮೃತ ಚಂದನ್ ಕುಟುಂಬಕ್ಕೆ ಇಲಾಖೆಯಿಂದ ಆರ್ಥಿಕ ನೆರವು ನೀಡುತ್ತೇವೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಇಲಾಖೆ ಭರಿಸುತ್ತದೆ ಎಂದು ಡಿಡಿಪಿಐ ನಂಜಪ್ಪ ಹೇಳಿದ್ದಾರೆ. ಈ ಪ್ರಕರಣ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಳುಗಳ ಆರೋಗ್ಯ ವಿಚಾರಿಸಲು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:10 ಸಾವಿರ ಮಂದಿಯಿಂದ ಮೆರವಣಿಗೆ – ಕೊರೊನಾ ರೂಲ್ಸ್ ಉಲ್ಲಂಘನೆ

  • ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್

    ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್

    ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಈ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮೇಲೆ ಸಾರ್ವಜನಿಕರು ಭರವಸೆ ಹೊಂದಿರುವುದರ ದ್ಯೋತಕವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಇಂದು ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದೇರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಸಚಿವರು ಪರಿಶೀಲಿಸಿದರು. ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ನೆಲಗದೇರನಹಳ್ಳಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿಗಾಗಿ ಹಲವು ಕಡೆಗಳಿಂದ ಬೇಡಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲಾ ದಾಖಲಾತಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳು ಮತ್ತು ಪೋಷಕರನ್ನು ಮಾತನಾಡಿಸಿದರು. ಇದನ್ನೂ ಓದಿ: ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

    ಶಾಲೆಯಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಸದಸ್ಯರು ಮತ್ತು ಶಿಕ್ಷಕರೊಂದಿಗೆ ಸಚಿವರು ಚರ್ಚೆ ನಡೆಸಿದರು. ಮೊದಲೆಲ್ಲಾ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೊಂದಲು ಪ್ರಭಾವ ತರುವುದನ್ನು ಕಾಣುತ್ತಿದ್ದೆವು. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿರುವುದರಿಂದ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಹಲವಾರು ಮಂದಿ ಶಾಸಕರು ಮತ್ತು ಸಚಿವರ ಮೂಲಕ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ರಾಜ್ಯದೆಲ್ಲೆಡೆ ದಾಖಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಚಂದನಾ ದೂರದರ್ಶನ ವಾಹಿನಿಯಲ್ಲಿ ಸಂವೇದ ಪಾಠಗಳು ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

  • ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್

    ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹಾಗೂ ಬಿಗ್‍ಬಾಸ್ ಸೀಸನ್-2 ರ ಸ್ಪರ್ಧಿ ಅನಿತಾ ಭಟ್‍ರವರು ಕನ್ನಡವನ್ನು ತಪ್ಪಾಗಿ ಬಳಸಿದ ನೆಟ್ಟಿಗರೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಂಕಷ್ಟದ ಬಳಿಕ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಟ್ವೀಟ್‍ವೊಂದಕ್ಕೆ ಅನಿತಾ ಭಟ್‍ರವರು ಹೌದು, ನಾನು ಕೂಡ ಓದಿದ್ದು ಸರ್ಕಾರಿ ಶಾಲೆಯಲ್ಲಿಯೇ ಎಂದು ಪ್ರತಿಕ್ರಿಯಿಸಿದ್ದರು.

    ಇದಕ್ಕೆ ನೆಟ್ಟಿಗರೊಬ್ಬರು ನೀವು ಓದಿದ್ದು ಸರ್ಕಾರಿ ಶಾಲೆಯಲ್ಲಿ ಸಂತೋಷ. ನಿಮ್ಮ ಮಕ್ಕಳು? ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ, ನನ್ನ ಮಕ್ಕಳನ್ನು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದ್ದೇನೆ. ಈ ಮಾತನ್ನು ಹೇಳುವ ಹೆದೆಗಾರಿಕೆ ಇರಬೇಕಲ್ಲವೇ? ನನ್ನ ರಕ್ತದ, ನನ್ನಿಂದ ಜನ್ಮ ಪಡೆದವರ ರಕ್ತದ ಕಣ ಕಣವೂ ಕನ್ನಡವೇ ಎಂದು ಹೇಳಿದ್ದಾರೆ.

    ಇದರಿಂದ ರೊಚ್ಚಿಗೆದ್ದ ಅನಿತಾ ಭಟ್‍ರವರು, ಹೆದಗಾರಿಕೆ ಅಲ್ಲ. ಎದೆಗಾರಿಕೆ, ಕನ್ನಡ ಶಾಲೆಯಲ್ಲಿ ಓದಿದರೆ ಸಾಕಾಗೋದಿಲ್ಲ. ಅ ಕಾರಕ್ಕೂ, ಹ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ, ಆಮೇಲೆ ಬೇರೆಯವರನ್ನ ಆಡಿಕೊಳ್ಳಬಹುದಂತೆ ನಮಸ್ಕಾರ.

    ಅ ಕಾರಕ್ಕೆ ಅ ಕಾರವನ್ನೇ ಉಪಯೋಗಿಸೋದು ಗ್ರಾಂಥಿಕ ಕನ್ನಡ ಅಲ್ಲ. ಯಾವುದೇ ಪ್ರದೇಶಕ್ಕೆ ಹೋದರು ಸ್ಲಾಗ್ ಹಾಗೂ ಅಸೆಟ್ ಬದಲಾಗುತ್ತೆಯೇ ಹೊರತು ವ್ಯಾಕರಣವಾಗಲಿ, ಲಿಪಿಯಾಗಲಿ, ಅಕ್ಷರಗಳಾಗಲಿ ಬದಲಾಗುವುದಿಲ್ಲ. ಇದರ ಬಗ್ಗೆ ಸ್ಪೇಸ್ ಮಾಡೋಣ ಎಂದು ಮರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಬಿಗ್‍ಬಾಸ್ ಮನೆಗೆ ಪಿಕ್‍ನಿಕ್‍ಗೆ ಬಂದಂತೆ ವರ್ತನೆ- ರೊಚ್ಚಿಗೆದ್ದ ನಿಧಿ

  • ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ

    ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ

    – ಬೃಹತ್ ಜನಜಾಗೃತಿ ಕಾರ್ಯಕ್ರಮ

    ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಶುಲ್ಕಗಳು, ಸರ್ಕಾರಿ ಶಾಲೆಗಳ ದುವ್ರ್ಯವಸ್ಥೆ, ಖಾಸಗಿ ಶಿಕ್ಷಕರ ಸಮಸ್ಯೆ, ಶುಲ್ಕ ನಿಯಂತ್ರಣ ಪ್ರಾಧಿಕಾರದ ರಚನೆ ಸೇರಿದಂತೆ ಹಲವಾರು ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರವು ಸಂಪೂರ್ಣ ವೈಫಲ್ಯಗೊಂಡಿದೆ. ಈ ಗೊಂದಲ ನಿವಾರಣೆಗಾಗಿ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ ಮತ್ತು ಜನಗಾಗೃತಿ ಕಾರ್ಯಕ್ರಮ ನಡೆಯಲಿದೆ.

    ಸರ್ಕಾರದ ಹೊಣೆಗೇಡಿತನದ ಪರಿಣಾಮವಾಗಿ ಇಂದು ರಾಜ್ಯದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಶಾಲಾ ಶುಲ್ಕ ಗಳ ವಿಚಾರದಲ್ಲಿಯೂ ಸಹ ಪೋಷಕ ವರ್ಗ ಸಮಸ್ಯೆಗೀಡಾಗಿದೆ. ಈ ಎಲ್ಲ ಗೊಂದಲಗಳಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಬಗೆಹರಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಸಾವಿರಾರು ಕಾರ್ಯಕರ್ತರು ಸತತ 15 ದಿನಗಳ ಕಾಲ ರಾಜ್ಯದಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕನಿಷ್ಠ 5 ಲಕ್ಷ ಮನೆಗಳಿಗೆ ತೆರಳಿ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಾಂದೋಲನ ಕಾರ್ಯ ಕ್ರಮವನ್ನು ನಡೆಸುವವರಿದ್ದಾರೆ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಪತ್ರಿಕಾಗೋಷ್ಠಿ ನಡೆಸಿ ಸಮಗ್ರ ಚಿತ್ರಣ ನೀಡಿದರು. ಇದನ್ನೂ ಓದಿ: ಕರ್ನಾಟಕ ನಂಬರ್ 1 ಕೈಗಾರಿಕಾ ಸ್ನೇಹಿ ರಾಜ್ಯವಾಗುತ್ತೆ: ಜಗದೀಶ್ ಶೆಟ್ಟರ್

    ಕರಪತ್ರ, ಎಲ್.ಇ.ಡಿ ವಾಹನ, ವಿಚಾರಗೋಷ್ಠಿಗಳು, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿಸಲು ಈಗಾಗಲೇ ಹಲವು ರೂಪುರೇಷೆಗಳನ್ನು ಪಕ್ಷವು ಕೈಗೊಂಡಿದೆ ಎಂದು ಮಾಹಿತಿ ಹಂಚಿಕೊಂಡರು.

  • ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

    ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

    ಚಿಕ್ಕಮಗಳೂರು: 2021ರ ಜನವರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಉತ್ತಮ ಅಭ್ಯಾಸಗಳನ್ನು ಅಳವಡಿಕೆ ಮಾಡಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಜಿಲ್ಲೆಗೆ ಎರಡರಂತೆ ಆಯ್ಕೆ ಮಾಡಿ ಕಳುಹಿಸಲು ಸರ್ಕಾರ ಸೂಚಿಸಿತ್ತು. ಇದರಂತೆ ಇದೀಗ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

    ಉತ್ತಮ ಅಭ್ಯಾಸಗಳನ್ನು ಅಳವಡಿಕೊಂಡಿರುವ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಯಲಗುಡಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ತರೀಕೆರೆ ತಾಲೂಕಿನ ಸೊಕ್ಕೆ ಪ್ರೌಢ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಯಟ್ ಪ್ರಾಂಶುಪಾಲರಾದ ಪುಷ್ಪಲತಾ ಅವರು, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಕಾರಣ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಸರ್ಕಾರ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿರುವ ಶಾಲೆಗಳ 5 ಅಥವಾ 6 ನಿಮಿಷದ ವೀಡಿಯೋ ಜೊತೆ ಹೆಚ್ಚಿನ ವಿಡಿಯೋಗಳನ್ನು ಕಳುಹಿಸಲು ಅವಕಾಶ ನೀಡಿತ್ತು. ಅದರಂತೆ ಜಿಲ್ಲೆಯ ಎರಡು ಶಾಲೆಗಳ ವೀಡಿಯೋಗಳನ್ನು ಕಳುಹಿಸಿಕೊಡಲಾಗಿತ್ತು. ತರೀಕೆರೆ ತಾಲೂಕಿನ ಸೊಕ್ಕೆ ಸರಕಾರಿ ಪ್ರೌಢ ಶಾಲೆ ಹಾಗೂ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಶಾಲೆಯ ಶಿಕ್ಷಕರು ಬಹಳ ಹಿಂದಿನಿಂದಲೂ ಸಾಕಷ್ಟು ಉತ್ತಮವಾದಂತಹ ಅಭ್ಯಾಸಗಳನ್ನು ಮಕ್ಕಳಲ್ಲಿ ಮಾಡಿಸಿಕೊಂಡು ಬಂದಿದ್ದರು. ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಶಾಲೆಗಳು ಇವಾಗಿವೆ ಎಂದರು. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕ ಪರ್ಸ್ ಹಿಂದಿರುಗಿಸಿ ಮಾನವೀಯತೆ ಮೆರೆದ ಶಿಕ್ಷಕ

    2 ಶಾಲೆಗಳು ಸುಮಾರು ಐದರಿಂದ ಆರು ನಿಮಿಷದ ವೀಡಿಯೋಗಳನ್ನು ನಮಗೆ ಕಳುಹಿಸಿಕೊಟ್ಟಿತ್ತು. ನಾವು ಆ ವಿಡಿಯೋಗಳನ್ನು ಧಾರವಾಡಕ್ಕೆ ಕಳುಹಿಸಿದ್ದೆವು. ಈಗ ರಾಜ್ಯದ ಶಾಲೆಗಳಲ್ಲಿ ಉತ್ತಮ ಅಭ್ಯಾಸಗಳನ್ನ ಮಾಡಿಕೊಂಡಿರುವ ಶಾಲೆಗಳ ಪಟ್ಟಿಯಲ್ಲಿ ನಮ್ಮ ಜಿಲ್ಲೆಯ ಎರಡು ಶಾಲೆಗಳು ಸೇರಿರುವುದು ಸಂತಸದ ವಿಷಯ. ಬೇರೆ ಜಿಲ್ಲೆಗಳಲ್ಲಿ ಒಂದೊಂದು ಶಾಲೆ ಸೇರಿಕೊಂಡಿದ್ದರೆ ನಮ್ಮ ಜಿಲ್ಲೆಯಲ್ಲಿ ಎರಡೂ ಶಾಲೆಗಳು ಸೇರಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.

    ಈ ರೀತಿ ಉತ್ತಮವಾದ ಅಭ್ಯಾಸಗಳಿಂದ ಆಯ್ಕೆಯಾದ ಶಾಲೆಗಳಿಗೆ ಸರ್ಕಾರದಿಂದ 5000 ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಈಗ ಆಯ್ಕೆಯಾಗಿರುವ ಶಾಲೆಗಳನ್ನು ರಾಜ್ಯ ಮಟ್ಟದಲ್ಲಿ ಆಯ್ಕೆ ಮಾಡಿರುವುದರಿಂದ ಮತ್ತೊಮ್ಮೆ ವಿಡಿಯೋಗಳನ್ನು ಮಾಡಿಕೊಡುವಂತೆ ಸೂಚನೆ ಬಂದಿದೆ. ಮುಂದಿನ ಹದಿನೈದು ದಿನಗಳ ಕಾಲಾವಕಾಶ ಇದೆ. ಆ ದಿನಗಳಲ್ಲಿ ನಾವು ಶಾಲೆಯ ಮತ್ತೊಂದು ವೀಡಿಯೋವನ್ನು ಮಾಡಿ ಕಳುಹಿಸಿಕೊಡಬೇಕಾಗಿದೆ. ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಊರಿನ ಸಾರ್ವಜನಿಕರ ಸಹಕಾರ ಪಡೆದು ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಂತೆ ವೀಡಿಯೋ ಚಿತ್ರೀಕರಣಕ್ಕೆ ತಿಳಿಸಿದ್ದೇವೆ ಅದನ್ನು ಮುಂದೆ ರಾಷ್ಟ್ರ ಮಟ್ಟದ ಆಯ್ಕೆಗಾಗಿ ಕಳುಹಿಸಿಕೊಡುತ್ತೇವೆ. ಈ ಶಾಲೆಗಳು ರಾಷ್ಟ್ರಮಟ್ಟದಲ್ಲೂ ಪ್ರಶಸ್ತಿ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.

  • ರಾಮನಗರದ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

    ರಾಮನಗರದ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ

    – ಟೊಯೋಟಾ ಕಿರ್ಲೋಸ್ಕರ್ ನೆರವಿನಿಂದ ಹೈಟೆಕ್ ಆದ ಸರ್ಕಾರಿ ಶಾಲೆ
    – 4.75 ಕೋಟಿ ರೂ. ವೆಚ್ಚದಲ್ಲಿ ಕಾಲೇಜಿಗೆ ಹೊಸ ಕಟ್ಟಡ

    ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಮರು ನಿರ್ಮಾಣ ಮಾಡಿರುವ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರಕಾರದ ಅನುದಾನದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬುಧವಾರ ಲೋಕಾರ್ಪಣೆ ಮಾಡಿದರು.

    ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ:
    ಸುಮಾರು 4.28 ಕೋಟಿ ರೂ. ವೆಚ್ಚದಲ್ಲಿ 22 ಕೊಠಡಿಗಳನ್ನು ನಿರ್ಮಾಣ ಮಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಇಡೀ ಕನ್ನಡ ಮಾದರಿ ಪ್ರಾಥಮಿಕ ಶಾಲೆಗೆ ಜಾಗತಿಕ ಗುಣಮಟ್ಟದ ಸ್ಪರ್ಶ ನೀಡಿದೆ. ಖಾಸಗಿ ಮಾತ್ರವಲ್ಲದೆ, ಜಾಗತಿಕ ಮಟ್ಟದ ಯಾವ ಶಾಲೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಿದೆ. ಸುಸಜ್ಜಿತ ಲ್ಯಾಬ್, ಅಡುಗೆ ಮನೆ, ಹೈಟೆಕ್ ಗ್ರಂಥಾಲಯ, ಅಂಗನವಾಡಿ ಮಕ್ಕಳಿಗೂ ಒಂದು ಕೊಠಡಿ, ಸ್ಮಾರ್ಟ್ ಕ್ಲಾಸ್ ರೂಮ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಡೀ ಜಿಲ್ಲೆಯಲ್ಲಿ ಅತ್ಯುತ್ತಮ ಸೌಲಭ್ಯಗಳುಳ್ಳ ಸರಕಾರಿ ಶಾಲೆ ಇದಾಗಿದೆ. ಕಂಪನಿಯ ಆಡಳಿತ ಮಂಡಳಿ ತನ್ನ ಸಿಎಸ್‍ಆರ್ ನಿಧಿಯಿಂದ ಈ ಶಾಲೆ ಆಧುನೀಕರಣಗೊಳಿಸಿದೆ.

    ಶಾಲೆಯ ಕಟ್ಟಡ ಲೋಕಾರ್ಪಣೆ ಬಳಿಕ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು, ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಟೊಯೋಟಾ ಕಿರ್ಲೋಸ್ಕರ್ ಕಂಪನಿ ನೆರವು ನೀಡಿರುವುದು ಸಂತಸ ಉಂಟು ಮಾಡಿದೆ. ಈ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಶಾಲೆ- ಕಾಲೇಜುಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನು ಸರ್ಕಾರ ಮಾಡುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡುತ್ತಿದ್ದೇವೆ ಎಂದು ಅಶ್ವತ್ಥನಾರಾಯಣ ಅವರು ಹೇಳಿದರು.

    ನೂತನ ಕಟ್ಟಡ ಲೋಕಾರ್ಪಣೆ:
    ಇದೇ ವೇಳೆ ಡಿಸಿಎಂ ಅವರು ಪ್ರಥಮ ದರ್ಜೆ ಕಾಲೇಜನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು. 1982-83ರಲ್ಲಿ ಆರಂಭವಾದ ಈ ಕಾಲೇಜು ರಾಮನಗರದ ಮಟ್ಟಿಗೆ ಒಂದು ಪ್ರಮುಖ ಲ್ಯಾಂಡ್‍ಮಾರ್ಕ್ ಆಗಿದ್ದು, ಇದೀಗ ಡಿಸಿಎಂ ಒತ್ತಾಸೆಯಿಂದ ಅತ್ಯಾಧುನಿಕ ಕಟ್ಟಡವೊಂದು ತಲೆಎತ್ತಿದೆ. ಸುಮಾರು 4.75 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು, 648 ಚ.ಮೀ ವಿಸ್ತೀರ್ಣವುಳ್ಳ ಕಟ್ಟಡದಲ್ಲಿ ಎನ್‍ಎಸ್‍ಎಸ್, ಎನ್‍ಸಿಸಿ, ಪ್ರಯೋಗಾಲಯ ಹಾಗೂ ಕ್ಲಾಸ್ ರೂಮ್‍ಗಳಿವೆ.

    ಈ ಕಾಲೇಜಿನಲ್ಲಿರುವ ಒಟ್ಟು 29 ತರಗತಿ ಕೊಠಡಿಗಳ ಪೈಕಿ, 8 ತರಗತಿ ಕೊಠಡಿಗಳನ್ನು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಈ ಕೊಠಡಿಗಳಲ್ಲಿ ಪ್ರೊಜೆಕ್ಟರ್, ಯುಪಿಎಸ್, ಆಕ್ಸೆಸ್ ಪಾಯಿಂಟುಗಳು, ಆಂಡ್ರಾಯ್ಡ್ ಬಾಕ್ಸ್‍ಗಳು, ವೈಟ್ ಬೋರ್ಡುಗಳಿವೆ. ಆಧುನಿಕ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇದು ಸಹಾಯಕಾರಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಡಿಜಿಟಲ್ ಕಲಿಕೆಯ ಸೌಕರ್ಯ ದೊರೆಯಬೇಕು ಎನ್ನುವ ಸದುದ್ದೇಶ ಈ ಯೋಜನೆಯ ಹಿಂದಿದೆ ಎಂದು ಡಿಸಿಎಂ ಹೇಳಿದರು.

    ಖಾಸಗಿ ಸಹಭಾಗಿತ್ವ ಬೇಕು
    ಕಾಲೇಜು ಕಟ್ಟಡ ಉದ್ಘಾಟನೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, ರಾಜ್ಯವು ಶೈಕ್ಷಣಿಕವಾಗಿ ಉತ್ತಮ ವಾತಾವರಣ ಹೊಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಇಡೀ ಶೈಕ್ಷಣಿಕ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಆಧುನೀಕರಣಗೊಳಿಸಲು ಖಾಸಗಿಯರ ನೆರವು ಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ರಾಜ್ಯ ಸರ್ಕಾರ ಶಿಕ್ಷಣದ ಬೆಳವಣಿಗೆಗಾಗಿ ಉಪಕ್ರಮವನ್ನು ಶುರು ಮಾಡಿದ್ದು, ಇದರ ಅಡಿಯಲ್ಲಿ ಖಾಸಗಿ ವಲಯದ ಅನೇಕ ಧಾನಿಗಳು ನೆರವಿಗೆ ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವ ಸರ್ಕಾರದ ಉದ್ದೇಶಕ್ಕೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಉಪಕ್ರಮದಡಿ ಕಾಗ್ನಿಸೆಂಟ್ ಸಂಸ್ಥೆ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಉಪಯೋಗಕ್ಕಾಗಿ 12,000 ಡೀಬಾಂಡೆಡ್ ಕಂಪ್ಯೂಟರ್ ಗಳನ್ನು ನೀಡಿದ್ದು, ಅವುಗಳಲ್ಲಿ 40 ಕಂಪ್ಯೂಟರ್‍ಗಳನ್ನು ಈ ಕಾಲೇಜಿಗೆ ಒದಗಿಸಿ ಒಂದು ಕಂಪ್ಯೂಟರ್ ಪ್ರಯೋಗಾಲಯವನ್ನೂ ರೂಪಿಸಲಾಗಿದೆ. ಈಗ ಈ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

    ಈ ಸಂದರ್ಭದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ ಮುಂತಾದವರು ಭಾಗವಹಿಸಿದ್ದರು.

  • ಹಳ್ಳಿಯಲ್ಲಿ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿದ ಶಿಕ್ಷಕರು

    ಹಳ್ಳಿಯಲ್ಲಿ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿದ ಶಿಕ್ಷಕರು

    – ದೇವಸ್ಥಾನಕ್ಕೆ ಮೀಸಲಿಟ್ಟಿದ್ದ ಹಣ ನೀಡಿದ ಗ್ರಾಮಸ್ಥರು

    ಚಿಕ್ಕಮಗಳೂರು: ಸರ್ಕಾರಿ ಶಾಲೆ ಇಂದೋ, ನಾಳೆಯೋ ಎನ್ನುತ್ತಿದೆ ಹೀಗೆ ಬಿಟ್ಟರೆ ಆಗುವುದಿಲ್ಲ ಎಂದು ಹಳ್ಳಿಗರ ಸಹಕಾರದಲ್ಲಿ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಪ್ರತಿ ಮನೆಯಿಂದ ಚಂದಾ ಎತ್ತಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ್ದಾರೆ. ತಾಲೂಕಿನ ಗಡಿಗ್ರಾಮ ಸಿರಿಬಡಿಗೆ ಶಾಲೆಯೇ ಶಿಕ್ಷಕರಿಂದ ಮರುಜನ್ಮ ಪಡೆದ ಶಾಲೆ. 1 ರಿಂದ 7ನೇ ತರಗತಿವರೆಗಿನ ಈ ಶಾಲೆಯಲ್ಲಿ ಪ್ರಸ್ತುತ 48 ಮಕ್ಕಳಿದ್ದಾರೆ. ಕೊರೊನಾ ಬಳಿಕ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸುಮಾರು 20 ಮಕ್ಕಳು ಈಗ ಈ ಶಾಲೆಗೆ ಸೇರಿದ್ದಾರೆ. ಎಂಟು ಕೊಠಡಿಗಳಿವೆ. ಆದರೆ ಶಾಲೆಯ ಮೇಲ್ಛಾವಣಿ ಸಂಪೂರ್ಣ ಹಾಳಾಗಿತ್ತು. ಹೆಂಚುಗಳೂ ಒಡೆದು ಹೋಗಿದ್ದವು. ಶಾಲೆ ಕಳೆದ ಎಂಟು ವರ್ಷಗಳಿಂದ ಸುಣ್ಣ-ಬಣ್ಣ ಕಂಡಿರಲಿಲ್ಲ. ಹಾಗಾಗಿ ಸಿ.ಆರ್.ಪಿ. ಹಾಗೂ ಎಸ್.ಡಿ.ಎಂ.ಸಿ. ಮೀಟಿಂಗ್‍ನಲ್ಲಿ ಶಿಕ್ಷಕರು ಹಾಗೂ ಗ್ರಾಮಸ್ಥರು ಮಾತುಕತೆಯಲ್ಲಿ ಶಾಲೆಗೆ ಹೊಸ ರೂಪ ನೀಡಿಲು ತೀರ್ಮಾನ ಕೈಗೊಂಡಿದ್ದಾರೆ.

    ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ತೀರ್ಮಾನದಂತೆ ಶಾಲೆಗೆ ಪುನರ್ಜನ್ಮ ಸಿಕ್ಕಿದೆ. ಊರಿನ ಮುಖಂಡರು ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ನಮ್ಮೂರ ಶಾಲೆ ನಮ್ಮೂರ ದೇವಸ್ಥಾನವಿದ್ದಂತೆ ಎಂದು ಹಳ್ಳಿಗರು ಸಂಪೂರ್ಣ ಬೆಂಬಲ ನೀಡಿದ ಪರಿಣಾಮ ಅವನತಿಯ ಅಂಚಿನಲ್ಲಿದ್ದ ಸರ್ಕಾರಿ ಶಾಲೆ ಇಂದು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಗ್ರಾಮದಲ್ಲಿ ಚಂದಾ ಎತ್ತಿದ ಹಣದಿಂದ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡಿ ಇಡೀ ಶಾಲೆಗೆ ಬಣ್ಣ ಹೊಡೆಸಿ ಮಕ್ಕಳು ಕೂರಲು ಕುರ್ಚಿ-ಮೇಜಿನ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಕರಿಗೆ ಮಕ್ಕಳು ಹಾಗೂ ಶಾಲೆ ಮೇಲಿರೋ ಪ್ರೀತಿಗೆ ಸ್ಥಳೀಯರು ಕೂಡ ಅವರ ಕಾರ್ಯಕ್ಕೆ ಕೈಜೋಡಿದ್ದಾರೆ.

    ಎರಡೇ ಗಂಟೆಗೆ 35 ಸಾವಿರ ಸಂಗ್ರಹ : ಊರಿನ ಮುಖಂಡರ ಜೊತೆ ಗ್ರಾಮದಲ್ಲಿ ಹೊರಟ ಶಿಕ್ಷಕರಿಗೆ ಹಳ್ಳಿಯ ಸಹೃದಯಿಗಳು ಎರಡೇ ಗಂಟೆಗೆ 35 ಸಾವಿರ ಹಣ ನೀಡಿದ್ದಾರೆ. ಯಾರ ಮನೆ ಬಾಗಿಲಿಗೆ ಹೋದರೂ ಯಾರೂ ಕೂಡ ಬರಿಗೈಲಿ ಕಳಿಸಿಲ್ಲ. ತಮ್ಮ ಶಕ್ತಿಗನುಸಾರವಾಗಿ 100 ರಿಂದ 1000 ರೂಪಾಯಿವರೆಗೆ ಹಣ ನೀಡಿದ್ದಾರೆ. ಕೆಳಗಿನ ಸಿರಿಬಡಿಗೆ, ಮೇಲಿನ ಸಿರಿಬಡಿಗೆ ಎರಡೂ ಏರಿಯಾವನ್ನೂ ಸುತ್ತುವಷ್ಟರಲ್ಲಿ ಗ್ರಾಮಸ್ಥರ ಕೈಯಲ್ಲಿ 35 ಸಾವಿರ ಹಣವಿತ್ತು. ಆ ಹಣವನ್ನ ಗ್ರಾಮಸ್ಥರು ಶಿಕ್ಷಕರು ಕೈಗೆ ನೀಡಿದ್ದಾರೆ. ಆ ಹಣಕ್ಕೆ ಶಿಕ್ಷಕರು ತಾವೂ ಒಂದಿಷ್ಟು ಹಣ ಸೇರಿಸಿ ಶಾಲೆಗೆ ಹೊಸ ಭಾಷ್ಯ ಬರೆದಿದ್ದಾರೆ.

    ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನೂ ಕೊಟ್ರು : ಗ್ರಾಮದಲ್ಲಿ ಎರಡು ಎಕರೆ ಗ್ರಾಮ ಠಾಣಾ ಜಾಗವಿತ್ತು. ಅದು ಪಾಳು ಬಿದ್ದಿತ್ತು. ಪಾಳು ಬೀಳೋದು ಯಾಕೆಂದು ಅದನ್ನ 11 ಸಾವಿರಕ್ಕೆ ಗುತ್ತಿಗೆ ನೀಡಿದ್ದರು. ಆ ಹಣವನ್ನ ಕೆಳಗಿನ ಸಿರಿಬಡಿಗೆ ಹಾಗೂ ಮೇಲಿನ ಸಿರಿಬಡಿಗೆ ಗ್ರಾಮದಲ್ಲಿನ ದೇವರಿಗೆಂದು ತಲಾ 5,500 ರೂ. ಹಣವನ್ನ ಹಂಚಿಕೊಂಡು ದೇವಸ್ಥಾನದ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದರು. ಶಾಲೆಗೆ ಸುಣ್ಣ-ಬಣ್ಣ ಹೊಡೆಸುತ್ತಾರೆಂದು ಎರಡು ಏರಿಯಾದ ಜನರೂ ಮಾತನಾಡಿಕೊಂಡು ಆ ಹಣವನ್ನ ಹಾಗೆಯೇ ತಂದು ಶಿಕ್ಷಕರ ಕೈಗಿಟ್ಟಿದ್ದಾರೆ. ದೇವರ ಅಭಿವೃದ್ಧಿಗೆಂದು ಇಟ್ಟಿದ್ದ ಹಣ ಶಾಲೆಯ ಅಭಿವೃದ್ಧಿಗೆ ಸೇರಿತು. ನಮ್ಮೂರ ದೇವಸ್ಥಾನ ಹಾಗೂ ನಮ್ಮ ಮಕ್ಕಳು ಓದೋ ಶಾಲೆ ಎರಡೂ ನಮಗೆ ಬೇರೆ-ಬೇರೆ ಅಲ್ಲ ಅನ್ನೋದು ನಮ್ಮ ಭಾವನೆ ಅಂತಾರೆ ಊರಿನ ಮುಖಂಡರು.

    ಸರ್ಕಾರದಿಂದ ಹಣವಿಲ್ಲ : ಶಾಲಾ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಈ ಹಿಂದೆ ವರ್ಷಕ್ಕೆ ಆರು ಸಾವಿರ ಹಣ ಬರುತ್ತಿತ್ತು. ಅದು ಎರಡು ಕಂತಿನಲ್ಲಿ ಮೂರು-ಮೂರು ಸಾವಿರ ಬರುತ್ತಿತ್ತು. ಆ ಹಣ ಸಾಲುತ್ತಿರಲಿಲ್ಲ. ಕಳೆದೊಂದು ವರ್ಷದಿಂದ ಕೊರೊನಾ ಕಾಲದಲ್ಲಿ ಆ ಹಣವೂ ಬಂದಿಲ್ಲ. ಹಾಗಾಗಿ, ಸ್ಥಳೀಯರು ಹಾಗೂ ಶಿಕ್ಷಕರೇ ಮಾತನಾಡಿಕೊಂಡು ಊರಲ್ಲಿ ಮನೆ-ಮನೆಯಿಂದ ಚಂದಾ ಎತ್ತಿ ತಮ್ಮೂರಿನ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿ ಹೊಸ ರೂಪ ನೀಡಿದ್ದಾರೆ. ಸ್ಥಳೀಯರ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಹಳ್ಳಿಗರ ಈ ಹೃದಯ ಶ್ರೀಮಂತಿಕೆಗೆ ಅಭಿನಂದನೆ ಸಲ್ಲಿಸಿದೆ.

  • ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ಸರ್ಕಾರಿ ಶಾಲೆಯಲ್ಲಿ ಆಕಸ್ಮಿಕ ಬೆಂಕಿ- ಬಿಸಿಯೂಟದ ದವಸ ಧಾನ್ಯ ಭಸ್ಮ

    ರಾಯಚೂರು: ಸರ್ಕಾರಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪುಸ್ತಕ, ಬಿಸಿಯೂಟದ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿರುವ ಘಟನೆ ದೇವದುರ್ಗದ ಜಾಲಹಳ್ಳಿಯ ಶಾಲೆಯಲ್ಲಿ ನಡೆದಿದೆ.

    ಜಾಲಹಳ್ಳಿಯ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಬಿಸಿಯೂಟದ ದವಸ ಧಾನ್ಯ, ಬೈಸಿಕಲ್, ಪುಸ್ತಕಗಳು ಸೇರಿ ವಿವಿಧ ವಸ್ತುಗಳು ಬೆಂಕಿಗಾಹುತಿಯಾಗಿವೆ. 35 ಚೀಲ ಅಕ್ಕಿ, 10 ಬೈಸಿಕಲ್ ಹಾಗೂ ಕೋಣೆಯಲ್ಲಿದ್ದ ನೋಟ್ ಪುಸ್ತಕ ಸುಟ್ಟುಹೋಗಿವೆ.

    ಅಗ್ನಿಶಾಮಕದಳ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿನಂದಿಸಿದ್ದಾರೆ. ಬೆಳಗಿನ ಜಾವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಶಾಲೆಯಿಂದ ಹೊಗೆ ಬರುತ್ತಿರುವುದನ್ನ ಗಮನಿಸಿ ಮುಖ್ಯೋಪಾಧ್ಯಾಯರು ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಅವಘಡ ಕುರಿತಾಗಿ ಮುಖ್ಯೋಪಾಧ್ಯಾಯ ಶಾಕೀಲ್ ಸಾಬ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.