Tag: government school

  • ಬೆಳಕು ಇಂಪ್ಯಾಕ್ಟ್: ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ತು ಶೌಚಾಲಯ

    ಬೆಳಕು ಇಂಪ್ಯಾಕ್ಟ್: ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸಿಕ್ತು ಶೌಚಾಲಯ

    ಬೀದರ್: ಅಂತು ಇಂತು ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ನರಕಯಾತನೆಯಿಂದ ಮುಕ್ತಿ ಸಿಕ್ಕಿದೆ. ಶಾಲೆಯ ವಿದ್ಯಾರ್ಥಿನಿಯರು ಶೌಚಾಲಯ ಇಲ್ಲದೆ ನಕತಯಾತನೆ ಪಡುತ್ತಿರುವ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಣು ತೆರಿಸಿತ್ತು. ಇದಕ್ಕೆ ಅಧಿಕಾರಿಗಳು ಕೂಡಲೇ ಸ್ಪಂದನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು ಆರು ಶೌಚಾಲಯ ನಿರ್ಮಾಣ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದು ನಿಮ್ಮ ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್.

    ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 160ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಜಯ ಸಿಕ್ಕಿದೆ. ಈ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 190 ವಿದ್ಯಾರ್ಥಿಗಳು ಇದ್ದು ಶೇಕಡ 80 ರಷ್ಟು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಶೌಚ ಮಾಡಲು ಶೌಚಾಲಯವಿಲ್ಲದೆ ಬಯಲಲ್ಲಿ ಶೌಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಾಚಿಕೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಹಂತಕ್ಕೆ ಬಂದಿದ್ದರು.

    ವಿದ್ಯಾರ್ಥಿನಿಯರು ಶೌಚಾಲಯವಿಲ್ಲದೆ ನರಕಯಾತನೆ ಪಡುತ್ತಿರುವ ಸುದ್ದಿಯನ್ನು ನಿಮ್ಮ ಪಬ್ಲಿಕ್ ಟಿವಿ `ಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚರಗೊಂಡ ಅಧಿಕಾರಿಗಳು 14ನೇ ಹಣಕಾಸು ಯೋಜನೆ ಅಡಿಯಲ್ಲಿ 1 ಲಕ್ಷ ರೂ. ವೆಚ್ಚ ಮಾಡಿ ಒಟ್ಟು ಆರು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ.

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದ್ದು ಸುದ್ದಿ ಪ್ರಸಾರವಾದ ನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದ್ರಲ್ಲಾ ಎಂಬ ಸಮಾಧಾನವಿದೆ. ಬಾಲಕಿಯರಿಗೆ ಅಷ್ಟೆ ಅಲ್ಲದೆ ಬಾಲಕರಿಗೂ ಶೌಚಾಲಯ ನಿಮಾರ್ಣ ಮಾಡಲು ಸ್ವತಃ ಶಾಲೆಯ ಶಿಕ್ಷಕರು ಪಣತೊಟ್ಟಿದ್ದು ಖುಷಿಯ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಬಾಲಕಿಯರ ನರಕಯಾತನೆ ಬಗ್ಗೆ ಸುದ್ದಿ ಮಾಡಿದ್ದಕ್ಕೆ ಇಂದು ಬಾಲಕಿಯರಿಗೆ ಬೆಳಕು ಸಿಕ್ಕಿದ್ದು ಸಂತೋಷದ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತ್ತ ಒಂದು ಸ್ಟೋರಿಗೆ ಮಾನವೀಯತೆಯ ಬೆಲೆ ನಮ್ಮಿಂದ ಸಿಕ್ಕಿದೆ ಎಂಬ ಖುಷಿ ನಿಮ್ಮ ಪಬ್ಲಿಕ್ ಟಿವಿಗೆ ಇದೆ. ಸ್ಪಂದನೆ ನೀಡಿದ ಜನಪತ್ರಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ವಿದ್ಯಾರ್ಥಿನಿಯರ ಪರವಾಗಿ ಧನ್ಯವಾದಗಳು.

     

  • ಪರಿಸರ ದೇಗುಲ ಎನಿಸಿಕೊಂಡಿರೋ ನೆಲಮಂಗಲದ ಈ ಸರ್ಕಾರಿ ಶಾಲೆಗೆ ಬೇಕಿದೆ ಪ್ರೊಜೆಕ್ಟರ್

    ಪರಿಸರ ದೇಗುಲ ಎನಿಸಿಕೊಂಡಿರೋ ನೆಲಮಂಗಲದ ಈ ಸರ್ಕಾರಿ ಶಾಲೆಗೆ ಬೇಕಿದೆ ಪ್ರೊಜೆಕ್ಟರ್

    ಬೆಂಗಳೂರು: ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಗ್ರಾಮೀಣ ಪ್ರದೇಶದ ಹಳ್ಳಿಗಾಡುಗಳ ಸರ್ಕಾರಿ ಶಾಲೆಗಳು ಅವನತಿಯತ್ತ ಮುಖ ಮಾಡಿವೆ. ಆದರೆ ಸರ್ಕಾರಿ ಶಾಲೆಯೊಂದು ಸರ್ಕಾರದ ಅನುದಾನ, ಗ್ರಾಮಸ್ಥರ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಎಲ್ಲಾ ರೀತಿಯಲ್ಲೂ ಸದೃಢವಾಗಿ ಮಕ್ಕಳಿಗೆ ಓದು ಕಲಿಸಲು ಪೂರಕವಾಗಿದೆ. ಆದ್ರೆ ಮಕ್ಕಳಿಗೆ ಪ್ರಚಲಿತ ವಿದ್ಯಾಮಾನದ ಕೊರತೆ ಎದ್ದುಕಾಣಿಸುತ್ತಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳ ಹಾವಳಿಗಳ ನಡುವೆ ಶಿಕ್ಷಕರ ಕೌಶಲ್ಯದಿಂದ 2014 ರಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ, ಪರಿಸರ ದೇಗುಲ ಎಂಬ ಪ್ರಶಸ್ತಿಗೆ ಭಾಜನವಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಿಂದ ಬಿರುದು ಗಳಿಸಿತ್ತು.

    ನೆಲಮಂಗಲ ಪಟ್ಟಣಕ್ಕೆ ಸಮೀಪವಿರುವ ಈ ಶಾಲೆ 1961-62ರಲ್ಲಿ ಪ್ರಾರಂಭವಾಗಿದ್ದು ಅಂದಿನಿಂದ 10 ವರ್ಷಗಳ ಕಾಲ, ಸರ್ಕಾರಿ ಕಟ್ಟಡವಿಲ್ಲದೆ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲಾಗಿತ್ತು. ನಂತರದಲ್ಲಿ ಶಾಲೆಯ ನಿರ್ಮಾಣಕ್ಕೆ ಗ್ರಾಮದ ಸಿದ್ದಲಿಂಗಯ್ಯ ಹಾಗೂ ಸಹೋದರರು 10 ಕುಂಟೆಯ ಖಾಲಿ ನಿವೇಶನವನ್ನು ದಾನ ಮಾಡಿದ್ರು. ಆಗ ಸರ್ಕಾರದಿಂದ ಒಂದು ಕೊಠಡಿ ನಿರ್ಮಾಣ ಮಾಡಿದ್ದು, ಅಂದಿನಿಂದ ಇಂದಿನ ವರೆಗೂ ಉತ್ತಮವಾಗಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲದೆ ವಿದ್ಯಾಭ್ಯಾಸ ಸಾಗುತ್ತಿದೆ.

    ಈ ಶಾಲೆಯಲ್ಲಿ 15 ಮಂದಿ ವಿದ್ಯಾರ್ಥಿಗಳು ಪಾಠ ಪ್ರವಚನ ಕಲಿಯುತ್ತಿರುವ ಜೊತೆಗೆ, ನೂರಾರು ಬಗೆಯ ಗಿಡ ಮೂಲಿಕೆಯ ಔಷಧಿ ಸಸ್ಯಗಳನ್ನ ಶಿಕ್ಷಕರು ವಿದ್ಯಾರ್ಥಿಗಳ ನೆರವಿನಿಂದ ಪಾಲನೆ-ಪೋಷಣೆ ಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ವಿವಿಧ ಜಾತಿಯ ಮರ-ಗಿಡಗಳನ್ನ ಬೆಳಸಲಾಗುತ್ತಿದೆ. ಈ ಮರ ಗಿಡಗಳಿಂದ ಉತ್ಪತ್ತಿಯಾಗುವ ಎಲೆ ಕಡ್ಡಿಗಳನ್ನು ಸಾವಯವ ಗುಂಡಿಯಲ್ಲಿ ಶೇಖರಣೆ ಮಾಡಿ ಸಾವಯವ ಗೊಬ್ಬರವನ್ನಾಗಿ ಮಾರ್ಪಡು ಮಾಡಲಾಗುತ್ತದೆ. ಅಲ್ಲದೆ ಪುಟಾಣಿ ಮಕ್ಕಳಿಗೆ ನೆರವಾಗಲು ಜಿಲ್ಲಾ ಪರಿಸರ ಮಿತ್ರ ಶಾಲೆ ಹಾಗೂ ಪರಿಸರ ದೇಗುಲ ಎಂಬ ಪ್ರಶಸ್ತಿಯಲ್ಲಿ ಬಂದ 20 ಸಾವಿರ ರೂಪಾಯಿಯನ್ನು ಬಳಸಿ ನಾಡಿನ ಸಂಸ್ಕೃತಿ ಹಾಗೂ ತಾಲೂಕಿನ ಸಂಸ್ಕೃತಿಯನ್ನ ಮೆರೆಯುವ ಚಿತ್ರಗಳನ್ನು ಶಾಲೆ ತುಂಬೆಲ್ಲಾ ಚಿತ್ರಿಸಿ ಶಿಕ್ಷಕರು ಮಾದರಿಯಾಗಿದ್ದಾರೆ. ಹೀಗಾಗಿ ಇನ್ನಷ್ಟು ಈ ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ, ಆಧುನಿಕ ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೊಜೆಕ್ಟರ್ ಬೇಕಾಗಿದೆ ಅಂತಾರೆ ಈ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು.

    ಒಟ್ಟಾರೆ ಖಾಸಗಿ ಶಾಲೆಗಳ ಹಾವಳಿಗಳ ಮಧ್ಯೆ ಸರ್ಕಾರಿ ಶಾಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ಗ್ರಾಮೀಣ ಶಾಲೆಯ ಮಕ್ಕಳು ಇನ್ನಷ್ಟು ಓದಿ ಕಲಿಯಲು ಹಾಗೂ ಪ್ರಚಲಿತ ವಿದ್ಯಮಾನದ ಅರಿವು ಪಡೆಯಲು ಸ್ಮಾರ್ಟ್‍ಕ್ಲಾಸ್ ಯೋಜನೆಗಾಗಿ ಪ್ರೋಜೆಕ್ಟರ್ ನೆರವಿನ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

     

  • ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

    ಗೋಡೆಯಲ್ಲಿ ಬಿರುಕು, ಬೀಳುವ ಸ್ಥಿತಿಯಲ್ಲಿ ಶಾಲೆ- ಗಂಡಾಂತರದಲ್ಲಿದೆ ಗಡಿನಾಡ ಕನ್ನಡ ಮಕ್ಕಳ ದೇಗುಲ

    ಬೆಳಗಾವಿ: ಹೆಸರಿಗೆ ಅದು ಸರ್ಕಾರಿ ಶಾಲೆ ಕಟ್ಟಡ. ಆದ್ರೆ ಅದನ್ನ ನೋಡಿದವರಿಗೆ ಮಾತ್ರ ಅದು ಶಾಲೆ ಅಂತ ಅನ್ನಿಸೋದೇ ಇಲ್ಲ. ಮಕ್ಕಳು ಸದಾ ಭಯದಲ್ಲೇ ಕುಳಿತು ಪಾಠ ಕೇಳಬೇಕು. ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರದವಾಡ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ದುಸ್ಥಿತಿ.

    ಶಿಥಿಲಾವಸ್ಥೆಯಲ್ಲಿರೋ ಗೋಡೆಗಳು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಶಾಲೆಯನ್ನು ದುರಸ್ತಿ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಡಿರುವ ಮನವಿಗೆ ಲೆಕ್ಕವೇ ಇಲ್ಲ. ಆದ್ರೆ ಯಾವ ಅಧಿಕಾರಿಯೂ ಕನ್ನಡ ಶಾಲೆಯನ್ನು ಉಳಿಸಲು ಮುಂದೆ ಬಂದಿಲ್ಲ.

    ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚುತ್ತಿದ್ರೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗ್ತಿಲ್ಲ ಅನ್ನೋದೇ ವಿಪರ್ಯಾಸ.

     

  • ಡಿಸ್ಟಿಂಕ್ಷನ್ ತೆಗೀರಿ, ವಿಮಾನದಲ್ಲಿ ಹಾರಿ- ಮಂಗ್ಳೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಬಂಪರ್ ಆಫರ್

    ಡಿಸ್ಟಿಂಕ್ಷನ್ ತೆಗೀರಿ, ವಿಮಾನದಲ್ಲಿ ಹಾರಿ- ಮಂಗ್ಳೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ಬಂಪರ್ ಆಫರ್

    ಮಂಗಳೂರು: ಸರ್ಕಾರಿ ಕನ್ನಡ ಶಾಲೆಗಳು ಅಂದ್ರೆ ಮೂಗು ಮುರಿಯೋರೆ ಜಾಸ್ತಿ. ತಮ್ಮ ಮಕ್ಕಳು ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ರೆ ಜ್ಞಾನ ಹೆಚ್ಚುತ್ತೆ ಅನ್ನೋದು ಪೋಷಕರ ನಂಬಿಕೆ. ಆದರೆ ಮಂಗಳೂರಿನಲ್ಲಿ ಸರ್ಕಾರಿ ಶಾಲಾ ಅಧ್ಯಾಪಕರು ಕನ್ನಡ ಶಾಲೆ ಉಳಿಸೋಕೆ ಹಾಗೂ ಪ್ರತಿಭೆಗಳನ್ನ ಬೆಳೆಸೋಕೆ ಅಂತಾ ವಿಭಿನ್ನ ಪ್ರಯತ್ನ ಮಾಡ್ತಿದ್ದಾರೆ.

    ಮಂಗಳೂರಿನ ರಥಬೀದಿಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾದ್ರೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಶಿಕ್ಷಕರು ವಿದ್ಯಾರ್ಥಿನಿಯರಿಗಾಗಿ ಈ ಬಂಪರ್ ಆಫರ್ ನೀಡಿದ್ದಾರೆ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿನಿಯರಿಗೆ ವಿಮಾನದಲ್ಲಿ ಬೆಂಗಳೂರಿಗೆ ಟೂರ್ ಕರೆದುಕೊಂಡು ಹೋಗೋ ಮಾತು ಕೊಟ್ಟಿದ್ದಾರೆ.

    ವಿದ್ಯಾರ್ಥಿನಿಯರಲ್ಲಿ ಕಲಿಕೆ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಕಳೆದ ವರ್ಷ ಶಿಕ್ಷಕರು ಇಂಥದ್ದೊಂದು ಆಫರ್ ಇಟ್ಟಿದ್ದರು. ಅದು ಫಲಕೊಟ್ಟಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದರು. ಜೊತೆಗೆ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಮೂವರು ವಿದ್ಯಾರ್ಥಿಗಳು ಜಿಲ್ಲೆಯ ಗಮನ ಸೆಳೆದಿದ್ದರು.

    ಖಾಸಗಿ ಶಾಲೆಗಳ ಅಬ್ಬರದ ಎದುರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸೋಕೆ ಅಧ್ಯಾಪಕರು ಮಾಡ್ತಿರೋ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

     

     

  • ಯಾದಗಿರಿ: 2 ತಿಂಗಳಿಂದ ತೊಗರಿಬೇಳೆ ಪೂರೈಕೆ ಸ್ಥಗಿತ- ಸಾಂಬಾರಿಲ್ಲದೆ ಬಿಸಿಯೂಟ ಮಾಡ್ತಿರೋ ಶಾಲಾ ಮಕ್ಕಳು

    ಯಾದಗಿರಿ: 2 ತಿಂಗಳಿಂದ ತೊಗರಿಬೇಳೆ ಪೂರೈಕೆ ಸ್ಥಗಿತ- ಸಾಂಬಾರಿಲ್ಲದೆ ಬಿಸಿಯೂಟ ಮಾಡ್ತಿರೋ ಶಾಲಾ ಮಕ್ಕಳು

    ಯಾದಗಿರಿ: ಸರ್ಕಾರ ವಿದ್ಯಾರ್ಥಿಗಳ ಹಸಿವನ್ನು ತಣಿಸಲು ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದರೆ ಯಾದಗಿರಿ ಜಿಲ್ಲೆಯ ಮಕ್ಕಳು ಬಿಸಿಯೂಟಕ್ಕೆ ಬೇಕಾದ ಸಾಂಬಾರ್‍ನಿಂದ ವಂಚಿತರಾಗಿದ್ದಾರೆ. ಸಾಂಬಾರ್ ಇಲ್ಲದೇ ಅನ್ನ ತಿನ್ನುವ ದುಸ್ಥಿತಿ ಜಿಲ್ಲೆಯಲ್ಲಿ ತಲೆದೋರಿದೆ. ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಎರಡು ತಿಂಗಳಿನಿಂದ ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ.

    ಯಾದಗಿರಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗೋದಾಮಿನಲ್ಲಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವಷ್ಟು ತೊಗರಿ ಬೇಳೆ ಸಂಗ್ರಹ ಮಾಡಿದ್ರು. ಆದ್ರೆ ತೊಗರಿ ಬೇಳೆ ವಿದ್ಯಾರ್ಥಿಗಳ ಹಸಿವನ್ನು ತಣಿಸದೇ ಗೋದಾಮಿನಲ್ಲಿಯೇ ಕೊಳೆಯುವಂತಾಗಿದೆ. ಸರ್ಕಾರ ಶಾಲಾ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಿಸಲು ಹಾಗೂ ಪೌಷ್ಠಿಕಾಂಶ ಹೆಚ್ಚಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಬಿಸಿಯೂಟ ಯೋಜನೆಗೆಂದೇ ಸರ್ಕಾರ ಕೋಟ್ಯಾನುಟ್ಟಗಲೇ ಹಣ ಖರ್ಚು ಮಾಡುತ್ತಿದ್ದೆ. ಆದ್ರೆ ಸರ್ಕಾರದ ಯೋಜನೆ ಬಡ ಮಕ್ಕಳಿಗೆ ಮುಟ್ಟದೆ ಗೋದಾಮಿನಲ್ಲಿಯೇ ಕೊಳೆಯುತ್ತಿದೆ.

    ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ ತಾಲೂಕಿನಲ್ಲಿ 1,404 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ತೊಗರಿ ಬೇಳೆ ಪೂರೈಸಲು ಟೆಂಡರ್ ಕರೆದು ಸಂಬಂಧಿಸಿದ ಟೆಂಡರ್ ಗುತ್ತಿಗೆದಾರರು ಶಾಲೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ತೊಗರಿ ಬೇಳೆಯನ್ನು ಶಾಲೆಗೆ ಪೂರೈಸಬೇಕಿತ್ತು. ಆದರೆ ಯಾದಗಿರಿ ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ತೊಗರಿ ಬೇಳೆ ಪೂರೈಕೆ ಮಾಡಿಲ್ಲ.

    ಜನವರಿ ತಿಂಗಳಲ್ಲಿ ತೊಗರಿ ಬೇಳೆ ಪೂರೈಸಲು ಬೀದರ್‍ನ ಖಾಸಗಿ ಸಂಸ್ಥೆಯವರು ಟೆಂಡರ್ ಪಡೆದಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತೊಗರಿ ಬೇಳೆಯ ದರ ಅನುಮೋದನೆಯಾದ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡದ ಹಿನ್ನಲೆ ಗುತ್ತಿಗೆದಾರರು ತೊಗರಿ ಬೇಳೆಯನ್ನು ಶಾಲೆಗಳಿಗೆ ಪೂರೈಕೆ ಮಾಡದೆ ಸ್ಥಗಿತಗೊಳಿಸಿದ್ದಾರೆ. ಜನವರಿ ತಿಂಗಳು ಬಿಟ್ಟು ಅಧಿಕಾರಿಗಳು ಫೆಬ್ರವರಿ ತಿಂಗಳಲ್ಲಿ ಶಾಲೆಗಳಿಗೆ ತೊಗರಿ ಬೇಳೆ ಪೂರೈಸಲು ಟೆಂಡರ್ ಕರೆದಿದ್ದಾರೆ. ಕಲಬುರಗಿ ಮೂಲದ ಹನುಮಾನ್ ಟ್ರೇಡರ್ಸ್ ಗುತ್ತಿಗೆ ಪಡೆದಿದ್ದು ದರ ಅನುಮೋದನೆಯಾಗಿದೆ. 1132 ಕ್ವಿಂಟಾಲ್ ತೊಗರಿ ಬೇಳೆಗೆ ಪ್ರತಿ ಕ್ವಿಂಟಾಲ್ಗೆ 5307 ರೂ. ನಂತೆ ಪೂರೈಸಬೇಕೆಂದು ಗುತ್ತಿಗೆ ನೀಡಲಾಗಿದೆ.

    ಇಷ್ಟಾದ್ರೂ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿಷ್ಕಾಳಜಿಗೆ ಇಬ್ಬರ ನಡುವೆ ಕೂಸು ಬಡವಾಯಿತೆಂಬಂತೆ ವಿದ್ಯಾರ್ಥಿಗಳು ನಲುಗಿ ಹೋಗಿದ್ದಾರೆ. ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ಶಾಲೆಗಳಿಗೆ ತೊಗರಿ ಬೇಳೆ ಪೂರೈಕೆ ಮಾಡಿಲ್ಲ. ಅಕ್ಷರ ದಾಸೋಹ ಅಧಿಕಾರಿಗಳು ತೊಗರಿ ಬೇಳೆ ಪೂರೈಸದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಹಾರ ಇಲಾಖೆ ಅಧಿಕಾರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಬರಿ ಅನ್ನ ತಿನ್ನುವಂತಾಗಿದೆ. ಸ್ವಲ್ಪ ಮಟ್ಟಿಗೆ ತರಕಾರಿ ಹಾಕಿ ಚಿತ್ರಾನ್ನ ಮಾಡಿ ಮಕ್ಕಳಿಗೆ ನೀಡಲಾಗುತ್ತಿದೆ. ಆದ್ರೆ ತರಕಾರಿ ಮಾತ್ರ ಯಾವುದಕ್ಕೂ ಸರಿ ಹೋಗುತ್ತಿಲ್ಲ. ಮಕ್ಕಳಿಗೆ ತೊಗರಿ ಸಾಂಬಾರ್ ಇದ್ರೆ ಊಟ ಮಾಡಲು ಅನುಕೂಲ ಜೊತೆ ಪೌಷ್ಠಿಕತೆ ಸಿಗಲಿದೆ.

    ಕೆಲ ಶಾಲೆ ವಿದ್ಯಾರ್ಥಿಗಳು ಶಾಲೆಯಲ್ಲಿ ನೀಡಿದ ಅನ್ನದ ಜೊತೆ ಮಧ್ಯಾಹ್ನ ದೂರದ ಮನೆಗೆ ಹೋಗಿ ಸಾಂಬಾರ್ ತೆಗೆದುಕೊಂಡು ಬಂದು ಪರಸ್ಪರ ಹಂಚಿಕೊಂಡು ಊಟ ಮಾಡುವಂತಹ ದುಸ್ಥಿತಿ ತಲೆದೊರಿದೆ. ಕಳೆದ ಎರಡು ತಿಂಗಳಿನಿಂದ ತೊಗರಿ ಬೇಳೆ ಪೂರೈಕೆ ನಿಂತಿದ್ರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಮುಂದಿನ ತಿಂಗಳು ಶೈಕ್ಷಣಿಕ ವರ್ಷ ಮುಕ್ತಾಯ ಆಗಲಿದೆ. ಆದ ಕಾರಣ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತೊಗರಿ ಬೇಳೆ ಪೂರೈಸುವ ಕೆಲಸ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕಿದೆ.