Tag: government school

  • ಪ್ರಾರ್ಥನಾ ಮಂದಿರವಾಯ್ತಾ ಶಿವಾಜಿನಗರ ಸರ್ಕಾರಿ ಶಾಲೆ?- ಶಾಲೆಯಲ್ಲಿ ಪ್ರತಿದಿನ ನಡೆಯುತ್ತೆ ಸಾಮೂಹಿಕ ಪ್ರಾರ್ಥನೆ

    ಪ್ರಾರ್ಥನಾ ಮಂದಿರವಾಯ್ತಾ ಶಿವಾಜಿನಗರ ಸರ್ಕಾರಿ ಶಾಲೆ?- ಶಾಲೆಯಲ್ಲಿ ಪ್ರತಿದಿನ ನಡೆಯುತ್ತೆ ಸಾಮೂಹಿಕ ಪ್ರಾರ್ಥನೆ

    ಬೆಂಗಳೂರು: ನಗರದ ಶಿವಾಜಿನಗರ ಸರ್ಕಾರಿ ಶಾಲೆಯನ್ನು ಧಾರ್ಮಿಕ ಪ್ರಾರ್ಥನಾ ಮಂದಿರದಂತೆ ಬದಲಾವಣೆ ಮಾಡಿರುವ ಆರೋಪ ಕೇಳಿಬಂದಿದೆ.

    ಸರ್ಕಾರಿ ಶಾಲೆಯಲ್ಲಿ ನಿಯಮದಂತೆ ಪಾಠ, ಪ್ರವಚನ ಹಾಗೂ ಶೈಕ್ಷಣಿಕ ಚಟುವಟಿಕೆ ನಡೆಯಬೇಕು. ಆದರೆ ಶಿವಾಜಿನಗರದ ಸರ್ಕಾರಿ ಶಾಲೆಯನ್ನು ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರದಂತೆ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಪ್ರಸ್ತುತ ಶಿವಾಜಿನಗರದ ಸರ್ಕಾರಿ ಶಾಲೆಯನ್ನು ಸಂಸ್ಥೆಯೊಂದು ದತ್ತು ಪಡೆದುಕೊಂಡಿದೆ. ದತ್ತು ಪಡೆದುಕೊಂಡ ಸಂಸ್ಥೆ ಶಾಲೆಯಲ್ಲಿ ಕೇವಲ ಒಂದು ಧರ್ಮದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿ ನೀಡುತ್ತಿದೆ ಎನ್ನಲಾಗಿದೆ. ಅಲ್ಲದೇ ಪ್ರತಿನಿತ್ಯ ನಡೆಯಬೇಕಾದ ರಾಷ್ಟ್ರಗೀತೆ ಗಾಯನ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಧಾರ್ಮಿಕ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಲಾಗಿದೆ.

    ಸರ್ಕಾರದಿಂದ ನಿಯೋಜನೆಗೊಂಡಿರುವ ಶಿಕ್ಷಕರು ಸಹ ಶಾಲೆಯ ತರಗತಿಯಲ್ಲಿ ನಡೆಯುವ ಧಾರ್ಮಿಕ ಪ್ರಾರ್ಥನೆಯನ್ನು ನಿರ್ಬಂಧಿಸಲು ಸಾಧ್ಯವಾಗಿಲ್ಲ. ಅಕ್ಷರ ಕಲಿಸುವ ಸರ್ಕಾರಿ ಶಾಲೆಯನ್ನು ಒಂದು ಸಮುದಾಯದ ಧಾರ್ಮಿಕ ಕೇಂದ್ರದಂತೆ ಬದಲಾಯಿಸಿಕೊಂಡಿದ್ದು ಸಾಮೂಹಿಕ ಪ್ರಾರ್ಥನಾ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳಲ್ಲಿ ಇಂತಹ ತಾರತಮ್ಯ ಭಾವನೆ ಬೆಳೆಸುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ಶಿಕ್ಷಕರು, ಶಾಲೆಯಲ್ಲಿ ಇಂತಹ ಪ್ರತ್ಯೇಕ ಪ್ರಾರ್ಥನಾ ಕೊಠಡಿ ಇಲ್ಲ. ಧಾರ್ಮಿಕ ಪ್ರಾರ್ಥನೆ ನಡೆಸುತ್ತಿರುವ ಕುರಿತು ಆರೋಪದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಇನ್ನು ಸ್ಥಳೀಯ ಬಿಎಓ ಪ್ರಭಾ ಅವರನ್ನು ಈ ಕುರಿತು ಪ್ರಶ್ನಿಸಿದರೆ, ಘಟನೆ ಕುರಿತು ತಮಗೆ ಮಾಹಿತಿ ಇಲ್ಲ. ಆರೋಪದ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    https://www.youtube.com/watch?v=br0nzNgS-bo

  • ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಹಾವೇರಿ: ಖಾಸಗಿ ಶಾಲೆಗಳ ಪ್ರಭಾವದಿಂದ ವರ್ಷದಿಂದ ವರ್ಷಕ್ಕೆ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯ ದಾಖಲಾತಿ ಹೆಚ್ಚಳ ಹಾಗೂ ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಬಳಗ ಹೊಸ ಪ್ಲಾನ್ ಮಾಡಿದ್ದಾರೆ. ಗ್ರಾಮದ ದಾನಿಗಳ ಸಹಾಯ ಪಡೆದು ಕಂಪ್ಯೂಟರ್, ಸ್ಮಾರ್ಟ ಕ್ಲಾಸ್, ಡೆಸ್ಕ್ ಸೇರಿದಂತೆ ಮೂಲಭೂತ ಸೌಕರ್ಯವನ್ನ ಶಾಲೆಗೆ ಪಡೆದುಕೊಂಡಿದ್ದಾರೆ. ಈ ಮೂಲಕ ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಮಾಡಿದ್ದಾರೆ.

    ಹೌದು, ಇದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು. ಕಳೆದ ಒಂದು ವರ್ಷದಿಂದ ಸರ್ಕಾರಿ ಶಾಲೆಯ ಚಿತ್ರಣವೇ ಬದಲಾವಣೆಯಾಗಿದೆ. ಪುಟ್ಟಗ್ರಾಮ ಹೊಸಕಟ್ಟಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಳೆದ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು. ಶಾಲೆಯ ಅಭಿವೃದ್ಧಿ ಪಡಿಸಲು ಶಿಕ್ಷಕರ ಬಳಗವು ಒಂದು ಹೊಸ ಪ್ಲಾನ್ ಮಾಡಿ, ಗ್ರಾಮದ ಮನೆ ಮನೆಗೆ ತೆರಳಿ ದಾನ ರೂಪದಲ್ಲಿ ಮೂಲಭೂತ ಸೌಕರ್ಯವನ್ನ ಕೇಳಿದ್ದಾರೆ. ಹೊಸಕಟ್ಟಿ ಗ್ರಾಮದ ಜನರಿಂದ 10 ರೂ. ನಿಂದ ಒಂದು ಸಾವಿರ ರೂ. ವರೆಗೂ ಹಣವನ್ನು ವಂತಿಕೆಯಾಗಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಗ್ರಾಮದ ಜನರು ಇದುವರೆಗೆ ಐದು ಕಂಪ್ಯೂಟರ್, ಒಂದೂವರೇ ಲಕ್ಷ ರುಪಾಯಿ ಖರ್ಚು ಮಾಡಿ ಡಿಜಿಟಲ್ ಕ್ಲಾಸ್ ರೂಂ ನಿರ್ಮಿಸಿ, ಖಾಸಗಿ ಶಾಲೆಗಳಿಗಿಂತ ನಾವು ಕಮ್ಮಿ ಇಲ್ಲ ಎಂದು ತಂತ್ರಜ್ಞಾನ ಬಳಿಸಿ ಮಕ್ಕಳಿಗೆ ಪಾಠಭೋಧನೆ ಮಾಡುತ್ತಿದ್ದಾರೆ. ಶಿಕ್ಷಕರು ಹಾಗೂ ಗ್ರಾಮಸ್ಥರ ಈ ಕಾರ್ಯದಿಂದ ಹೊಸಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

    ಪ್ರಸ್ತುತ ಗ್ರಾಮದ ಮಕ್ಕಳು ಖಾಸಗಿ ಶಾಲೆಗೆ ಹೋಗುವದನ್ನ ನಿಲ್ಲಿಸಿ, ಸರ್ಕಾರಿ ಶಾಲೆಯ ಕಡೆ ಬರುತ್ತಿದ್ದಾರೆ. 180 ಮಕ್ಕಳು ಇದ್ದ ಸಂಖ್ಯೆ ಈಗ 240 ಕ್ಕೆ ಏರಿಕೆಯಾಗಿದೆ. ಒಂಬತ್ತು ಜನ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಶನಿವಾರ ಮತ್ತು ಭಾನುವಾರು ಮಕ್ಕಳಿಗೆ ರಜೆ ನೀಡಿದ ಪ್ರತಿವಾರ ಒಬ್ಬರು ಸ್ಪೇಷಲ್ ಕ್ಲಾಸ್ ನೀಡುತ್ತಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಸರ್ಕಾರಿ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ.

    ಇನ್ನು ಗ್ರಾಮದ ಜನರಿಗೆ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ಇದ್ದು, ಶಾಲೆಯನ್ನ ಇನ್ನು ಹೆಚ್ಚು ಅಭಿವೃದ್ದಿ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನ ಕೊಡಿಸುತ್ತೆವೆ ಎನ್ನುತ್ತಿದ್ದಾರೆ. ಶಾಲೆಯ ಶಿಕ್ಷಕರ ಬಳಗದ ಪರಿಶ್ರಮ ಹಾಗೂ ಗ್ರಾಮದ ದಾನಿಗಳಿಗೆ ಬಡಮಕ್ಕಳು ಡಿಜಿಟಲ್ ಶಿಕ್ಷಣ ಸೇರಿದಂತೆ ಕಂಪ್ಯೂಟರ್ ಶಿಕ್ಷಣವನ್ನ ಪಡೆದು ಜಿಲ್ಲೆಯಲ್ಲಿ ಮಾದರಿ ಶಾಲೆಯಲ್ಲಿಗೆ. ಗ್ರಾಮದ ಸರ್ಕಾರಿ ಶಾಲೆಯನ್ನ ಅಭಿವೃದ್ದಿ ಮಾಡಿದ ಹೊಸಕಟ್ಟಿ ಗ್ರಾಮಸ್ಥರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=o0_5VconZHU

  • ಪರಿಸರ ಸ್ನೇಹಿ ಶಾಲೆಗೆ ಹ್ಯಾಟ್ರಿಕ್ ಪ್ರಶಸ್ತಿ ಬರುವಂತೆ ಮಾಡಿದ್ರು ಮಾಲೂರಿನ ಮೇಷ್ಟ್ರು ಮುನಿನಾರಾಯಣ

    ಪರಿಸರ ಸ್ನೇಹಿ ಶಾಲೆಗೆ ಹ್ಯಾಟ್ರಿಕ್ ಪ್ರಶಸ್ತಿ ಬರುವಂತೆ ಮಾಡಿದ್ರು ಮಾಲೂರಿನ ಮೇಷ್ಟ್ರು ಮುನಿನಾರಾಯಣ

    ಕೋಲಾರ: ಅದು ಖಾಸಗಿ ಶಾಲೆಯನ್ನೇ ನಾಚಿಸುವಂತ ಪುಟ್ಟದಾದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಗಡಿನಾಡು ಕುಗ್ರಾಮವೊಂದರಲ್ಲಿರುವ ಪರಿಸರ ಸ್ನೇಹಿ ಶಾಲೆ ಇದಾಗಿದ್ದು, ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣ ಇಲ್ಲಿದೆ. ಈ ಪರಿಸರ ಸ್ನೇಹಿ ಶಾಲೆ ಹಾಗೂ ಶಿಕ್ಷಕನ ಸಾಧನೆಗೆ ಪರಿಸರ ಮಿತ್ರ ಪ್ರಶಸ್ತಿ ಕೂಡ ಲಭಿಸಿದೆ. ಈ ಶಾಲೆ ವೈಶಿಷ್ಟ್ಯ ಕುರಿತ ವಿಶೇಷ ಸುದ್ದಿ ಇಲ್ಲಿದೆ.

    ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಶಾಲೆ, ಇನ್ನೊಂದೆಡೆ ಹಸಿರಿನ ಮದ್ಯೆ ನಲಿದಾಡುತ್ತಿರೋ ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಕಲಿಯಲು ಹಾಗೂ ಕಲಿಸಲು ಬೇಕಾದ ಪೂರಕ ವಾತಾವರಣ ಇರುವ ಶಾಲೆ ಇರೋದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗೋಪಸಂದ್ರ ಎಂಬ ಕುಗ್ರಾಮದಲ್ಲಿ. ಈ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 45 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

    ವಿಶೇಷತೆ ಎಂದರೆ ಮೂರು ಬಾರಿ ಜಿಲ್ಲಾ ಮಟ್ಟದಲ್ಲಿ ನೀಡುವ ಪರಿಸರ ಮಿತ್ರ ಪ್ರಶಸ್ತಿಯನ್ನ ಗಳಿಸಿರುವ ಕೀರ್ತಿ ಈ ಶಾಲೆಗಿದೆ. ಹೀಗಾಗಿ ಇದನ್ನ ಪರಿಸರ ಪ್ರೇಮಿ ಶಾಲೆ ಎಂದೇ ಕರೆಯುತ್ತಾರೆ. ಶಾಲೆಯ ಅಂದವನ್ನ ಹೆಚ್ಚಿಸಿರುವ ಮುಖ್ಯಶಿಕ್ಷಕ ಮುನಿನಾರಾಯಣ ಅವರು ಶಾಲೆಯನ್ನ ಹಚ್ಚ ಹಸರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಶಾಲೆಗೆ ಒಮ್ಮೆ ಭೇಟಿ ನೀಡಿದರೆ ಸಾಕು ಸಸ್ಯ ಕಾಶಿಯಂತೆ ಭಾಸವಾಗುತ್ತೆ. ಇದರಿಂದ ಈ ಕನ್ನಡ ಮಾಧ್ಯಮ ಶಾಲೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಹಸಿರು ಶಾಲೆ ಪ್ರಶಸ್ತಿಯನ್ನು ಮೂರು ಬಾರಿ ಮುಡಿಗೇರಿಸಿಕೊಳ್ಳುವುದರ ಮೂಲಕ ಹ್ಯಾಟ್ರಿಕ್ ಸಾಧನೆಯನ್ನ ಮಾಡಿದೆ.

    ಇನ್ನು ಶಾಲಾ ಆವರಣದಲ್ಲಿ ಮಾವು, ಬಾಳೆ, ಪಪ್ಪಾಯ, ನೇರಳೆ, ಗಸಗಸೆ, ನುಗ್ಗೆ, ಟೀಕ್, ಮೈಸೂರು ಮಲ್ಲಿಗೆ ಸೇರಿದಂತೆ ನಾನಾ ಬಗೆಯ ಹೂವು, ಹಣ್ಣು, ತರಕಾರಿ ಗಿಡಗಳನ್ನ ಬೆಳೆಸುವುದರ ಜೊತೆಗೆ ಪೋಷಣೆ ಮಾಡಲಾಗುತ್ತಿದೆ. ಒಂದರಿಂದ 5ನೇ ತರಗತಿಯವರೆಗೆನ 45 ವಿದ್ಯಾರ್ಥಿಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕ ಮುನಿನಾರಾಯಣ ಅವರ ಪರಿಶ್ರಮದಿಂದಾಗಿ ಶಾಲೆಯ ಆವರಣ ಹಸಿರಿನ ಸಿರಿಯಿಂದ ನಳ ನಳಿಸುವಂತೆ ಮಾಡಿದ್ದಾರೆ.

    ಗ್ರಾಮಸ್ಥರ ಸಹಕಾರದಿಂದಾಗಿ ಶಾಲಾ ಆವರಣದ ಸುತ್ತಲೂ ಕಾಪೌಂಡ್ ನಿರ್ಮಾಣ ಮಾಡಿ ಆವರಣದಲ್ಲಿ ಇಂಗು ಗುಂಡಿ, ನೀರಿನ ಮಿತಬಳಕೆಗಾಗಿ ತುಂತುರು ನೀರಾವರಿ, ಶಾಲಾ ಆವರಣದಲ್ಲಿ ಸಂಗ್ರಹವಾದ ಕಸವನ್ನ ಗಿಡಮರಗಳಿಗೆ ಮರುಬಳಕೆ ಮಾಡುವಂತಹ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೂ ಕೂಡ ಇಲ್ಲಿನ ತರಕಾರಿಗಳನ್ನು ಬಳಸಲಾಗುತ್ತಿದೆ. ವಿನೂತನ ಕೈತೊಳೆಯುವ ಘಟಕವನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇನ್ನು ಬೃಹದಾಕಾರವಾಗಿ ಬೆಳೆದಿರುವ ಈ ಮರಗಳಲ್ಲಿ ಪಕ್ಷಿಗಳ ಕಲರವ ಪರಿಸರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

    ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಮರಗಿಡಗಳಿಂದ ಕಂಗೊಳಿಸುತ್ತಿರುವ ಈ ಶಾಲೆ ಹಲವಾರು ಶಾಲೆಗಳಿಗೆ ಮಾದರಿಯಾಗಿದೆ.

    https://www.youtube.com/watch?v=XdDsZcSRQew

  • ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಪರ್ ಗಿಫ್ಟ್

    ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಪರ್ ಗಿಫ್ಟ್

    ವಿಜಯಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ವಿಮುಕ ಆಗಿ ಹೊರಟಿವೆ. ಸರ್ಕಾರಿ ಶಾಲೆಗಳಿಗೆ ಜನರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಚಿವ ಎಂ.ಬಿ.ಪಾಟೀಲ್ ಪ್ಲಾನ್ ಮಾಡಿದ್ದಾರೆ.

    ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಬಂದಾಗ ಜಿಲ್ಲಾ ಕೇಂದ್ರ ಮತ್ತು ತಾಲೂಕಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆ ಕಾರ್ಯಕ್ರಮ ಆಯೋಜಿಸುತ್ತದೆ. ಆದರೆ ಈ ಬಾರಿ ವಿಜಯಪುರದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್,ವಿಜಯಪುರ ತಾಲೂಕಿನ 100 ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಮಾಡಿಸಿದ್ದಾರೆ. ಶಾಸಕರ ಅನುದಾನದಲ್ಲಿ ಒಂದು ಶಾಲೆಗೆ 1 ಲಕ್ಷ ರೂ.ಯಂತೆ ಡಿಜಿಟಲ್ ಕೋಣೆ ಮಾಡಲಾಗಿದೆ. ಕಬ್ಬಿಣದ ಕಡಲೆಯಂತಿರುವ ವಿಜ್ಞಾನ, ಗಣಿತ ಮತ್ತು ಇಂಗ್ಲೀಷ್ ಸೇರಿದಂತೆ ಕಠಿಣ ವಿಷಯಗಳು ಮಕ್ಕಳಿಗೆ ಸರಳವಾಗಿ ಅರ್ಥವಾಗಲು ಎಲ್‍ಇಡಿ ಟಿವಿ ಅಳವಡಿಸಲಾಗಿದೆ. ಎಲ್‍ಇಡಿಯಲ್ಲಿ ವಿಷಯಕ್ಕೆ ತಕ್ಕಂತೆ ವಿಡಿಯೋ ಹಾಗು ಚಿತ್ರಗಳು ಬರೋದ್ರಿಂದ ಮಕ್ಕಳ ಮನದಲ್ಲಿ ವಿಷಯಗಳು ಅಚ್ಚಳಿಯದೇ ಉಳಿಯುತ್ತದೆ.

    ಈಗಾಗಲೇ ಲೋಡ್ ಶೆಡ್ಡಿಂಗ್ ಶುರುವಾಗಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಎಲ್‍ಇಡಿ ಟಿವಿಗಳಿಗೆ ಸೋಲಾರ್ ಹಾಕಿಸಿದ್ದು, ತಡೆಯಿಲ್ಲದೆ 8 ಗಂಟೆ ನಿರಂತರ ಅಭ್ಯಾಸ ಮಾಡಬಹುದು. ಈ ಯೋಜನೆಗೆ ಟೆಲ್ಕೋ ಸೋಲಾರ್ ಕಂಪನಿ ಕೈ ಜೋಡಿಸಿದ್ದು, ಅರ್ಧದಷ್ಟು ಹಣ ಕಂಪನಿ, ಉಳಿದ ಅರ್ಧ ಹಣ ಶಾಸಕರ ಅನುದಾನದಲ್ಲಿ ಸಿಗುತ್ತದೆ.

  • 2 ಕೊಠಡಿಗಳಿರುವ ಶಾಲೆಯಲ್ಲಿ 1-5 ತರಗತಿವರೆಗೆ ಶಿಕ್ಷಣ: ಜೀವಭಯದಲ್ಲೇ ಪಾಠ ಕೇಳ್ತಿದ್ದಾರೆ ಮಕ್ಕಳು

    2 ಕೊಠಡಿಗಳಿರುವ ಶಾಲೆಯಲ್ಲಿ 1-5 ತರಗತಿವರೆಗೆ ಶಿಕ್ಷಣ: ಜೀವಭಯದಲ್ಲೇ ಪಾಠ ಕೇಳ್ತಿದ್ದಾರೆ ಮಕ್ಕಳು

    ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲದೇ ಶಾಲೆಗಳು ಮುಚ್ಚಲ್ಪಡುತ್ತಿವೆ. ಆದರೆ ಆನೇಕಲ್ ತಾಲೂಕಿನ ಹೊನ್ನಕಳಸಾಪುರ ಗ್ರಾಮದಲ್ಲಿ ಮಕ್ಕಳಿದ್ದರೂ ಶಾಲೆಯೇ ಸರಿಯಾಗಿಲ್ಲ.

    ಹೌದು. ಎರಡು ಕೊಠಡಿಗಳಿರುವ ಈ ಶಾಲೆಯಲ್ಲಿ 1 ರಿಂದ 5 ತರಗತಿಯವರೆಗೆ 30 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಜೀವ ಭಯದಲ್ಲೇ ಪಾಠ ಕೇಳಬೇಕಾಗಿದೆ. ಮೆಲ್ಛಾವಣಿ ಶಿಥಿಲಗೊಂಡಿದ್ದು ಸಿಮೆಂಟ್ ಉದುರುತ್ತಿದೆ. ಜೊತೆಗೆ ಮಳೆಯಿಂದಾಗಿ ನೀರು ಸೋರಿಕೆಯಾಗಿ ಗೋಡೆಗಳೂ ಬಿರುಕುಬಿಟ್ಟಿವೆ.

    ಹೀಗಾಗಿ ಶಿಕ್ಷಕರು ಮಕ್ಕಳನ್ನು ಸ್ವಲ್ಪ ಸರಿಯಿರುವ ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳುತ್ತಿದ್ದಾರೆ. 5 ತಿಂಗಳ ಹಿಂದೆ ಸ್ಥಳೀಯ ಶಾಸಕ ಬಿ.ಶಿವಣ್ಣ ಭೇಟಿ ನೀಡಿದ್ದಾಗ ಶಾಲೆ ಸರಿಪಡಿಸುವ ಭರವಸೆ ನೀಡಿದ್ದರು. ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

  • ಕಿತ್ತು ಹೋದ ಮೇಲ್ಛಾವಣಿ- ಶಾಲೆಯ ಹೊರಗಡೆ ಕುಳಿತು ಪಾಠ ಕೇಳ್ತಿದ್ದಾರೆ ವಿದ್ಯಾರ್ಥಿಗಳು

    ಕಿತ್ತು ಹೋದ ಮೇಲ್ಛಾವಣಿ- ಶಾಲೆಯ ಹೊರಗಡೆ ಕುಳಿತು ಪಾಠ ಕೇಳ್ತಿದ್ದಾರೆ ವಿದ್ಯಾರ್ಥಿಗಳು

    ರಾಮನಗರ: ಸರ್ಕಾರಿ ಶಾಲೆಯೊಂದರ ಕಟ್ಟಡ ಹಾಳಾಗಿದ್ದು, ಮಕ್ಕಳ ಜೀವಕ್ಕೆ ಕುತ್ತು ತರುವ ಸ್ಥಿತಿ ತಲುಪಿದೆ. ಇದಕ್ಕೆ ಸಾಕ್ಷಿಯಾಗಿರೋದು ಇಂಧನ ಸಚಿವರ ತವರು ಜಿಲ್ಲೆಯ ಸರ್ಕಾರಿ ಶಾಲೆ.

    ಹಾಳಾಗಿರೋ ಶಾಲಾ ಕಟ್ಟಡ. ಅಲ್ಲಲ್ಲಿ ಕಿತ್ತು ಹೋಗಿರೋ ಮೇಲ್ಛಾವಣಿ. ಹೊರಭಾಗದಲ್ಲಿಯೇ ಕುಳಿತು ಪಾಠ ಕೇಳುತ್ತಿರೋ ವಿದ್ಯಾರ್ಥಿಗಳು. ಇದು ಸಿದ್ದರಾಮಯ್ಯ ಸರ್ಕಾರದ ಮಾದರಿ ಸರ್ಕಾರಿ ಶಾಲೆಯ ಈಗಿನ ದುಸ್ಥಿತಿ.

    ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯವರೆಗೂ ಇದ್ದು, 92 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಕಳಪೆ ಕಾಮಗಾರಿಯಿಂದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು ಕಿತ್ತು ಬೀಳುತ್ತಿದೆ. ಮಳೆ ಬೇರೆ ಜೋರಾಗಿ ಬರುತ್ತಿದ್ದು ಕಟ್ಟಡ ಯಾವಾಗ ಬೀಳುತ್ತೋ ಎಂದು ಮಕ್ಕಳು ಶಾಲೆ ಹೊರಗೆ ಪಾಠ ಕೇಳುತ್ತಿದ್ದಾರೆ.

    ಶೌಚಾಲಯಗಳು ಸಹ ಹದಗೆಟ್ಟಿದ್ದು ಗಿಡಗಂಟೆಗಳು ಬೆಳೆದು ಹಾವು, ಹಲ್ಲಿಗಳ ವಾಸಸ್ಥಾನವಾಗಿದೆ. ಸಾಕಷ್ಟು ಬಾರಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಕರೇ ಬೇಸರ ವ್ಯಕ್ತಪಡಿಸುತ್ತಾರೆ.

  • ಶಿಕ್ಷಕರ ಪರಿಶ್ರಮದಿಂದಾಗಿ SSLC ಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸ್ತಿದೆ ದಾವಣಗೆರೆಯ ಈ ಶಾಲೆ!

    ಶಿಕ್ಷಕರ ಪರಿಶ್ರಮದಿಂದಾಗಿ SSLC ಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸ್ತಿದೆ ದಾವಣಗೆರೆಯ ಈ ಶಾಲೆ!

    ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲ್ಲ. ಹಾಗಾಗಿ ಫಲಿತಾಂಶ ಕಡಿಮೆ ಬರುತ್ತೆ ಅನ್ನೋ ಕೊಂಕಿದೆ. ಆದರೆ ಜಿಲ್ಲೆಯೆ ತುರ್ಚಘಟ್ಟ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಲವು ವರ್ಷಗಳಿಂದ ಶೇ.97ರಷ್ಟು ಫಲಿತಾಂಶ ದಾಖಲಾಗುತ್ತಿದೆ.

    ಹೌದು, ಈ ವಿಶೇಷ ಸಾಧನೆಗೆ ಕಾರಣ ಶಾಲೆಯ ಶಿಕ್ಷಕ ರಾಮರೆಡ್ಡಿ ಅವರ ಪರಿಶ್ರಮ. ರಾಮರೆಡ್ಡಿ ಅವರಿಂದಾಗಿ ತುರ್ಚಘಟ್ಟ ಗ್ರಾಮದ ಆಂಜನೇಯ ಸರ್ಕಾರಿ ಪ್ರೌಢಶಾಲೆ ಕಳೆದ ಹಲವಾರು ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ಪಡೆಯುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ಪಟ್ಟಿಗೆ ಸೇರಿದೆ.

    ತಾವು ಈ ಶಾಲೆಗೆ ಬಂದ ಮೇಲೆ ಶಾಲೆಯ ಪಾಠದ ಜೊತೆಗೆ ಮಕ್ಕಳನ್ನ ಗುಂಪುಗಳನ್ನಾಗಿ ಮಾಡಿ ಆ ಗುಂಪುಗಳನ್ನ ದತ್ತು ಪಡೆದು ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಜೊತೆಗೆ ಮನೆ ಮನೆ ಪಾಠದ ಯೋಜನೆ ಹಮ್ಮಿಕೊಂಡು ಫಲಿತಾಂಶ ಹೆಚ್ಚಿಸಿದ್ದಾರೆ.

    ವಿದ್ಯಾರ್ಥಿಗಳು ಪೋಷಕರ ಜೊತೆ ಅವರವರ ಮನೆಯಲ್ಲಿ ಸಮಾಲೋಚನಾ ಸಭೆ ನಡೆಸಿ ವಿದ್ಯಾರ್ಥಿಗಳ ಬೌದ್ಧಿಕ ದೌರ್ಬಲ್ಯತೆಗೆ ಕಾರಣ ಪತ್ತೆ ಹಚ್ಚಿ ಪರಿಹಾರ ಕೈಗೊಳ್ಳುತ್ತಾರೆ. ಜೊತೆಗೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಕ್ಕಿಂತ ನಿಸರ್ಗದ ಮಡಿಲಲ್ಲಿ ಪಾಠ ಮಾಡಿ ವಿದ್ಯಾರ್ಥಿಗಳ ಓದಿನ ಆಸಕ್ತಿ ಹೆಚ್ಚಿಸುತ್ತಿದ್ದಾರೆ.

    ಇವರ ಈ ಯೋಜನೆಗಳನ್ನು ಪ್ರತಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿಕೊಂಡರೆ ಖಾಸಗಿ ಶಾಲೆಗಿಂತಲೂ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

     

  • ಈ ಶಾಲೆಯ ಮಕ್ಕಳು 2 ವರ್ಷದಿಂದ ಬಿಸಿಯೂಟದ ರುಚಿಯನ್ನೇ ಕಂಡಿಲ್ಲ!

    ಈ ಶಾಲೆಯ ಮಕ್ಕಳು 2 ವರ್ಷದಿಂದ ಬಿಸಿಯೂಟದ ರುಚಿಯನ್ನೇ ಕಂಡಿಲ್ಲ!

    ಯಾದಗಿರಿ: ಶಾಲೆ ಪ್ರಾರಂಭವಾಗಿ ಎರಡು ವರ್ಷ ಕಳೆದ್ರೂ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೂ ಇದೂವರೆಗೂ ಬಿಸಿಯೂಟದ ರುಚಿಯನ್ನು ಮಾತ್ರ ಕಂಡಿಲ್ಲ.

    ಹೌದು. ಈ ಹಿಂದೆ ಶಿಕ್ಷಕರು ಇಲ್ಲವೆಂಬ ಕಾರಣ ನೀಡಿ ಅಲ್ಲಿಪೂರದ ಶಾಲೆಯನ್ನು ಮುಚ್ಚಲಾಗಿತ್ತು. 2015ರಲ್ಲಿ ಶಿಕ್ಷಕರ ನೇಮಕ ಮಾಡಿದ ಬಳಿಕ ಸದ್ಯ 25 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಆದ್ರೆ ಶಾಲೆಗೆ ಬರುವ ಬಡ ಕುಟುಂಬದ ಮಕ್ಕಳಿಗೆ ಮಾತ್ರ ಬಿಸಿಯೂಟ ಇಲ್ಲದಂತಾಗಿದೆ. ಶಾಲೆ ಮುಚ್ಚುವ ಮುನ್ನ ಸರ್ಕಾರದ ಬಿಸಿಯೂಟ ಯೋಜನೆಯಲ್ಲಿ ಸಾಮಗ್ರಿಗಳು, ಅಡುಗೆ ಸಾಹಯಕರನ್ನು ಸಹ ನೇಮಿಸಿಲಾಗಿತ್ತು.

    ಶಾಲೆ ಪುನರಾರಂಭವಾಗಿ ಎರಡು ವರ್ಷ ಕಳೆದ್ರೂ ಇದೂವರೆಗೂ ಮಕ್ಕಳಿಗಾಗಿ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿಲ್ಲ. ಹೀಗಾಗಿ ಶಾಲೆಯಲ್ಲಿರುವ ಬಿಸಿಯೂಟದ ಕೋಣೆಗೆ ಬೀಗ ಹಾಕಲಾಗಿದೆ. ಅಡುಗೆ ಕೋಣೆಯಲ್ಲಿ ಗ್ಯಾಸ್, ಪಾತ್ರೆಗಳು ಸೇರಿದಂತೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ. ಈ ಕುರಿತು ಶಾಲೆಯ ಮುಖ್ಯ ಗುರುಗಳು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ.

    ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರೋದ್ರಿಂದ ಪಕ್ಕದ 1 ಕಿ.ಮೀ. ದೂರದಲ್ಲಿರುವ ಸಮನಾಪೂರ ಸರ್ಕಾರಿ ಶಾಲೆಯಿಂದ ಬಿಸಿಯೂಟ ತರಿಸಬೇಕಾಗಿದೆ. ಹೀಗಾಗಿ ಸರ್ಕಾರ ವಾಹನದ ವ್ಯವಸ್ಥೆಯನ್ನು ಮಾಡಬೇಕಿದೆ ಎಂದು ಶಾಲೆಯ ಮುಖ್ಯಗುರುಗಳಾದ ಅಶೋಕ್ ಹೇಳುತ್ತಾರೆ.

    ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಉತ್ತಮಪಡಿಸಲು ಸರ್ಕಾರವು ಬಿಸಿ ಊಟ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ವಿದ್ಯಾರ್ಥಿಗಳು ಯಾವಾಗ ನಮಗೆ ನಮ್ಮ ಶಾಲೆಯಲ್ಲೇ ಬಿಸಿ ಊಟ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಲಿಯುತ್ತಿದ್ದಾರೆ.

     

     

  • ಬಿಸಿ ಊಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ಬಿಸಿ ಊಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

    ಗದಗ: ತಾಲೂಕಿನ ಅಂತೂರು ಬೆಂತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಆತಂಕಕಾರಿ ಘಟನೆ ಶನಿವಾರ ನಡೆದಿದೆ.

    ಉಪ್ಪಿಟ್ಟು ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವರಿಗೆ ವಾಂತಿಯಾಗಿದ್ದು, ಇನ್ನು ಕೆಲವರಿಗೆ ತಲೆ ಸುತ್ತು ಬಂದಿದೆ ಎಂದು ಹೇಳಲಾಗಿದೆ.

    108 ಅಂಬುಲೆನ್ಸ್ ಮಾಹಿತಿ ನೀಡಿದ್ರೂ ಸರಿಯಾದ ವೇಳೆಗೆ ಬರಲಿಲ್ಲ. ಹೀಗಾಗಿ ಅಸ್ವಸ್ಥಗೊಂಡ ಮಕ್ಕಳಿಗೆ ಶಾಲೆಯ ಆವರಣದಲ್ಲೇ ಚಿಕಿತ್ಸೆ ನೀಡಲಾಗಿದೆ. 15ಕ್ಕೂ ಹೆಚ್ಚು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ವಿಷಯ ಗೊತ್ತಾಗಿ ಬಿಸಿ ಊಟ ತಯಾರಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ತಿಳಿಯಲಾಗಿದೆ.

  • ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

    ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

    ವಿಜಯಪುರ: ಸರ್ಕಾರಿ ಶಾಲೆ ಅಂದ್ರೆ ಹೀಗಿರ್ಬೇಕಪ್ಪಾ ಎನ್ನುವಂತಿದೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡದ ಈ ಶಾಲೆಯಲ್ಲಿ ಏನಿಲ್ಲ ಅಂತ ಹುಡುಕಬೇಕು. ಅಷ್ಟರ ಮಟ್ಟಿಗೆ ಈ ಶಾಲೆ ಎಲ್ಲಾ ವಿಧವಾದ ಸೌಲಭ್ಯಗಳನ್ನು ಪಡೆದಿದೆ.

    ಮುಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಸಿಗೆಯಲ್ಲೂ ಹಸಿರ ಹೊದಿಕೆ ಹೊದ್ದಿದೆ. ಇಲ್ಲಿ ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಹೈಟೆಕ್ ಶಿಕ್ಷಣ ಕೊಡಲಾಗ್ತಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಶೌಚಾಲಯ ವ್ಯವಸ್ಥೆಯೂ ಈ ಶಾಲೆಯಲ್ಲಿದೆ.

    ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ 112 ವಿವಿಧ ಗಿಡಗಳನ್ನು ಬೆಳಯಲಾಗಿದೆ. ಅಲ್ಲದೆ ಚಿಕ್ಕತೋಟದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಸೊಪ್ಪು ತರಕಾರಿ ಬೆಳೆಯಲಾಗಿದೆ. ಜೊತೆಗೆ ಹೂವನ್ನೂ ಬೆಳೆಯಲಾಗಿದೆ. ಇದ್ರಿಂದ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಆರೋಗ್ಯ ವರ್ಧಿಸೋ ವಾತಾವರಣ ನಿರ್ಮಾಣವಾಗಿದೆ.

    ಇದೆಲ್ಲದಕ್ಕೂ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಹಾಗೂ ಶಿಕ್ಷಕರ ಪ್ರೋತ್ಸಾಹವೇ ಕಾರಣ ಅಂತ ವಿದ್ಯಾರ್ಥಿಗಳು ಹೇಳುತ್ತಾರೆ.

    https://www.youtube.com/watch?v=tnaQJ9vMD60