Tag: government school

  • ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್

    ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್

    ಹೈದರಾಬಾದ್/ಉಡುಪಿ: ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ತಾವೇ ಬಸ್ ಚಾಲಕರಾಗಿರುವ ಫೋಟೋ ಟ್ವೀಟ್ ಮಾಡಿ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

    ಬಸ್ ಖರೀದಿಗೆ ಯೋಚನೆ ಮಾಡಿದ್ದ ರಾಜರಾಮ್ ಅವರು ತಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳ, ಶಿಕ್ಷಕರ ಸಹಾಯ ಪಡೆದು ಖರೀದಿ ಮಾಡಿದ್ದಾರೆ. ಖರೀದಿ ಏನೋ ಆಯ್ತು ಚಾಲಕನನನ್ನು ನೇಮಿಸಬೇಕಾದರೆ ಪ್ರತಿ ತಿಂಗಳು 7 ಸಾವಿರ ರೂ. ಸಂಬಳ ನೀಡಬೇಕಿತ್ತು. ಸದ್ಯದ ಆರ್ಥಿಕ ಸಂಪನ್ಮೂಲದಲ್ಲಿ ಇದು ಕಷ್ಟವಾದ ಕಾರಣ ರಾಜರಾಮ್ ಅವರೇ ಚಾಲಕರಾಗಿದ್ದಾರೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರು ಒಳಗೊಂಡಂತೆ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

    ಶಾಲೆಯ ಅವಧಿ ಮುಕ್ತಾಯವಾಗುತ್ತಿದ್ದಂತೆ ರಾಜರಾಮ್ ತಾವೇ ಶಾಲಾ ಬಸ್ಸನ್ನು ಚಲಾಯಿಸಿಕೊಂಡು ಪ್ರತಿ ವಿದ್ಯಾರ್ಥಿಯನ್ನು ಮನೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಯ ಬಸ್ಸಿನ ಇಂಧನ ಹಾಗೂ ಇತರೇ ಖರ್ಚುಗಳನ್ನು ಅವರೇ ಭರಿಸುತ್ತಿದ್ದಾರೆ.

    ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ಪಾಠ ಮಾಡುವುದರೊಂದಿಗೆ ದೈಹಿಕ ಶಿಕ್ಷಕರು ಸಹ ಆಗಿದ್ದಾರೆ. ಬೆಳಗ್ಗೆ 5.30ಕ್ಕೆ ಕಾರ್ಯ ಪ್ರವೃತ್ತರಾಗುವ ರಾಜರಾಮ್ 6 ಗಂಟೆಯಿಂದ ವಿದ್ಯಾರ್ಥಿಗಳಿಗೆ ಹೈಜಂಪ್, ಬ್ಯಾಡ್ಮಿಂಟನ್ ತರಬೇತಿ ನೀಡುತ್ತಾರೆ. ಬಳಿಕ 7.30ಕ್ಕೆ ಸಿದ್ಧರಾಗಿ 8 ಗಂಟೆಗೆ ಬಸ್ಸಿನ ಚಾಲಕನ ಸೀಟ್‍ನಲ್ಲಿ ಕೂತರೇ ಮತ್ತೆ ಮನೆಗೆ ಹಿಂದಿರುಗುವುದು ಸಂಜೆ 5.30ಕ್ಕೆ. ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ.

    ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದು, ಶಾಲೆಯಲ್ಲಿ 90 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

  • ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆಜಿ ಮಕ್ಕಳಿಗಿಲ್ಲ ಸರ್ಕಾರದ ಬಿಸಿಯೂಟ!

    ಸರ್ಕಾರಿ ಶಾಲೆಯಲ್ಲಿಯೇ ಎಲ್ ಕೆಜಿ ಮಕ್ಕಳಿಗಿಲ್ಲ ಸರ್ಕಾರದ ಬಿಸಿಯೂಟ!

    ಶಿವಮೊಗ್ಗ: ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಎಲ್‍ಕೆಜಿ ಆರಂಭಿಸಿದೆ. ಆದರೆ ಸರ್ಕಾರ ಮಾತ್ರ ಎಲ್‍ಕೆಜಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೆ ತಾರತಮ್ಯ ಮಾಡುತ್ತಿದೆ. ಇದು ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಉಂಟೂರು ಕಟ್ಟೆ ಕೈಮರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸ್ಥಿತಿ.

    ಒಂದು ಕಾಲದಲ್ಲಿ 250 ರಿಂದ 300 ಮಕ್ಕಳು ಓದುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 67 ಮಕ್ಕಳಿದ್ದಾರೆ. ಖಾಸಗಿ ಶಾಲೆಯ ಹಾವಳಿಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿದೆ. ಆದರೆ ಶಾಲಾಭಿವೃದ್ಧಿ ಸಮಿತಿ ಒಂದು ಒಳ್ಳೆಯ ಮಾದರಿ ಶಾಲೆಯನ್ನಾಗಿಸಲು ಎಲ್‍ಕೆಜಿ ಆರಂಭಿಸಿದೆ. ಕಳೆದ ವರ್ಷ ಎಲ್‍ಕೆಜಿಗೆ ಸೇರಿದ್ದ 17 ಮಕ್ಕಳು ಈ ವರ್ಷ ಇದೇ ಶಾಲೆಯ ಒಂದನೇ ತರಗತಿ ಸೇರಿರುವುದು ಖುಷಿಯ ವಿಚಾರವಾಗಿದೆ.

    ಶಿಕ್ಷಣ ಇಲಾಖೆ ಎಲ್‍ಕೆಜಿ ಸೇರಿರುವ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. 1ನೇ ತರಗತಿಯಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ಮಕ್ಕಳು ಬಿಸಿಯೂಟ ಮಾಡುವಾಗ, ಎಲ್‍ಕೆಜಿ ಮಕ್ಕಳಿಗೆ ಊಟ ನೀಡದೇ ತಾರತಮ್ಯ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ರೆ ಬಿಸಿಯೂಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

    ಶಾಲಾಭಿವೃದ್ಧಿ ಸಮಿತಿಯವರು ದಾನಿಗಳಿಂದ ದವಸ-ಧಾನ್ಯ ತಂದು ಕೊಟ್ಟು ಎಲ್‍ಕೆಜಿ ಕಂದಮ್ಮಗಳಿಗೆ ಅಡುಗೆ ಮಾಡಿ ಕೊಡಿ ಎಂದು ಮನವಿ ಮಾಡಲಾಗಿತ್ತು. ಆದ್ರೆ ನಿಯಮಾವಳಿಗಳಲ್ಲಿ ಅವಕಾಶ ಇಲ್ಲವೆಂದು ಶಿಕ್ಷಣ ಇಲಾಖೆಯವರು ಕಠೋರ ನಿಲುವು ತಾಳಿದ್ದಾರೆ. ಮಕ್ಕಳಿಗೆ ಅಡುಗೆ ಮಾಡಿಕೊಡಲು ಅವಕಾಶ ನೀಡದೆ ತೊಂದರೆ ಕೊಡುತ್ತಿದ್ದಾರೆ.

    ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದ ಮೂರು ವರ್ಷದಲ್ಲಿ 45 ಸರ್ಕಾರಿ ಪ್ರಾಥಮಿಕ ಶಾಲೆಗಳು ಬಾಗಿಲು ಹಾಕಲಾಗಿದೆ. ಇರುವ ಶಾಲೆಗಳು ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚುವ ಹಂತದಲ್ಲಿವೆ. ಇಂತಹ ಹೊತ್ತಿನಲ್ಲಿ ಶಾಲಾಭಿವೃದ್ಧಿ ಸಮಿತಿ ಮಕ್ಕಳ ದಾಖಲಾತಿಗೆ ನಡೆಸಿದ ಈ ಪ್ರಯತ್ನವನ್ನು ಶಿಕ್ಷಣ ಇಲಾಖೆ ಪ್ರೋತ್ಸಾಹಿಸಬೇಕಿತ್ತು. ಆದರೆ, ನಿಯಮಾವಳಿಗಳ ಹೆಸರಿನಲ್ಲಿ ಹತ್ತು-ಹದಿನೈದು ಮಕ್ಕಳಿಗೆ ಊಟ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸಮಸ್ಯೆ ಪರಿಹರಿಸಿಕೊಳ್ಳಲು ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    https://www.youtube.com/watch?v=Z-N1iCGguh0

  • ಶಾಲೆಗೆ ತಡವಾಗಿ ಬಂದಿದ್ದಕ್ಕೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್!

    ಶಾಲೆಗೆ ತಡವಾಗಿ ಬಂದಿದ್ದಕ್ಕೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್!

    ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಕಾಳಜಿ ಇದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಸುದ್ದಿ ಓದಲೇ ಬೇಕು. ಸಿಎಂ.ಕುಮಾರಸ್ವಾಮಿ ತವರು ಜಿಲ್ಲೆಯಲ್ಲಿ ಒಂದು ಪೈಶಾಚಿಕ ಕೃತ್ಯ ನಡೆದಿದೆ.

    ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಈಗಾಗಲೇ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಶಾಲೆಗೆ ತಡವಾಗಿ ಬಂದ ಗಂಡು ಮಕ್ಕಳಿಗೆ, ಹೆಣ್ಣು ಮಕ್ಕಳ ಟಾಯ್ಲೆಟ್ ಕ್ಲೀನ್ ಮಾಡಿಸಿ ಮಕ್ಕಳಿಗೆ ಶಿಕ್ಷಕರು ಶಿಕ್ಷೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಲಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಮೂರನೇ ತರಗತಿ ವಿದ್ಯಾರ್ಥಿಗಳಿಂದ ಸ್ವಚ್ಛತೆ ನಡೆಸಿದ್ದು, ಪುಟಾಣಿ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ್ದು ಎಷ್ಟು ಸರಿ ಎಂದು ಪೋಷಕರು ಶಿಕ್ಷಕರ ಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಖಾಸಗಿ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಇಂತಹ ಎಡವಟ್ಟುಗಳಿಗೆ ಶಿಕ್ಷಕರು ಬ್ರೇಕ್ ಹಾಕಬೇಕಿದೆ.

  • ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!

    ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!

    ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪ್ರಭಾವಿ ಸಚಿವರಾಗಿದ್ದ ಎ ಮಂಜು ಮತ್ತು ಹಾಲಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಪ್ರತಿನಿಧಿಸೋ ಕ್ಷೇತ್ರದಲ್ಲಿ ಬರೋ ಸರ್ಕಾರಿ ಪ್ರೌಢಶಾಲೆ ಕುಸಿಯುವ ಹಂತದಲ್ಲಿದೆ.

    ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದಲ್ಲಿರುವ ಪ್ರೌಢಶಾಲೆಯ ಕಟ್ಟಡ ನಿರಂತರ ಮಳೆಯಿಂದಾಗಿ ಕುಸಿಯುವಂತಾಗಿದೆ. ಆದ್ರೆ ವಿದ್ಯಾರ್ಥಿಗಳು ಅದೇ ಕಟ್ಟಡದಲ್ಲಿ ವಿಧಿ ಇಲ್ಲದೆ ಕುಳಿತುಕೊಳ್ಳುವ ಅನಿವಾರ್ಯ ಸ್ಥಿತಿ ಇದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವಿದ್ಯಾರ್ಥಿಗಳು ಪ್ರಾಣ ಭಯದೊಂದಿದೆ ತರಗತಿಯಲ್ಲಿ ಕುಳಿತುಕೊಂಡು ಆತಂಕದಿಂದಲೇ ಪಾಠ ಕೇಳುತ್ತಿದ್ದಾರೆ.

    ಈ ಕುರಿತಂತೆ ಈಗಾಗಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸಹ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಜೊತೆಗೆ ವಿದ್ಯಾರ್ಥಿಗಳು ಸಹ ಕಟ್ಟಡ ಸರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

  • ಬಿಸಿಯೂಟ ತಿಂದು ಕಲುಷಿತ ನೀರಿನಲ್ಲಿ ತಟ್ಟೆ ತೊಳೆಯುತ್ತಿರೋ ಮಕ್ಕಳು- ಇದು ಶಿಕ್ಷಣ ಸಚಿವರ ಜಿಲ್ಲೆಯ ದುಸ್ಥಿತಿ

    ಬಿಸಿಯೂಟ ತಿಂದು ಕಲುಷಿತ ನೀರಿನಲ್ಲಿ ತಟ್ಟೆ ತೊಳೆಯುತ್ತಿರೋ ಮಕ್ಕಳು- ಇದು ಶಿಕ್ಷಣ ಸಚಿವರ ಜಿಲ್ಲೆಯ ದುಸ್ಥಿತಿ

    ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳು ತಟ್ಟೆ ತೊಳೆಯಲು ನೀರು ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೊಂಬುಡಿಕ್ಕಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಬಿಸಿಯೂಟ ಸೇವಿಸಿ ತಟ್ಟೆ ತೊಳೆಯಲು ನೀರಿಲ್ಲದೇ ಶಾಲೆಯಿಂದ ಒಂದು ಕಿಲೋ ಮೀಟರ್ ದೂರ ಹೋಗಿ ಹಳ್ಳದಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿ ತಟ್ಟೆ ತೊಳೆಯುವ ಸ್ಥಿತಿ ಎದುರಾಗಿದೆ.

    ವಾಟರ್ ಮ್ಯಾನ್‍ಗಳ ತಿಕ್ಕಾಟದಿಂದ ಮಕ್ಕಳು ಈ ರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ರು.

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್
  • ಮುಚ್ಚಿದ್ದ ಸರ್ಕಾರಿ ಶಾಲೆಗೆ  ಪುನರ್ ಜನ್ಮ ನೀಡಿದ ಅನ್ನೇಹಾಲ್ ಗ್ರಾಮಸ್ಥರು

    ಮುಚ್ಚಿದ್ದ ಸರ್ಕಾರಿ ಶಾಲೆಗೆ ಪುನರ್ ಜನ್ಮ ನೀಡಿದ ಅನ್ನೇಹಾಲ್ ಗ್ರಾಮಸ್ಥರು

    ಚಿತ್ರದುರ್ಗ: ಖಾಸಗಿ ಶಾಲೆಗಳ ಭರಾಟೆಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎನ್ನುವುದು ಅನೇಕರ ಕಳವಳ. ಆದರೆ ಮೂರು ವರ್ಷದಿಂದ ಮುಚ್ಚಿದ್ದ ಜಿಲ್ಲೆಯ ಸರ್ಕಾರಿ ಶಾಲೆಗೆ ಅನ್ನೇಹಾಲ್ ಗ್ರಾಮಸ್ಥರು ಪುನರ್ ಜನ್ಮ ನೀಡಿದ್ದಾರೆ.

    ಚಿತ್ರದುರ್ಗದ ತಾಲೂಕು ಅನ್ನೇಹಾಲ್ ಗ್ರಾಮಸ್ಥರು ಸಹ ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿದ್ದರು. ಹೀಗಾಗಿ ತಮ್ಮ ಮಕ್ಕಳನ್ನು ಸಮೀಪದ ನಗರಗಳ ಕಾನ್ವೆಂಟ್‍ಗಳಿಗೆ ಸೇರಿಸಿದ್ದರು. ಆದರೆ ಬರಗಾಲದಿಂದ ಖಾಸಗಿ ಸಂಸ್ಥೆಗಳ ದುಬಾರಿ ಶುಲ್ಕದಿಂದ ಕಂಗೆಟ್ಟ ಅವರು ತಮ್ಮ ಗ್ರಾಮದಲ್ಲಿದ್ದ ಸರ್ಕಾರಿ ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ತಮ್ಮ ಮಕ್ಕಳನ್ನು ಅಲ್ಲಿಗೆ ಈಗ ಕಳುಹಿಸುತ್ತಿದ್ದಾರೆ.

    ಅನ್ನೇಹಾಲ್ ಗ್ರಾಮಸ್ಥರ ಒತ್ತಾಯದಿಂದ 2017 ಜೂನ್ 9ರಂದು ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ನೇಮಿಸಿ ಶಾಲೆ ಪ್ರಾರಂಭಿಸಿತು. ಆಗ 1 ರಿಂದ 5ನೇ ತರಗತಿಗಳು ಪ್ರಾರಂಭವಾಯಿತು. ಸುಮಾರು 60 ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಯಾದರು. ಆದರೆ ಶಿಕ್ಷಕ ಸಮಸ್ಯೆ ಕಾಡುತ್ತಿರುವುದನ್ನು ಅರಿತ ಗ್ರಾಮಸ್ಥರು ತಮ್ಮ ಹಣದಲ್ಲಿಯೇ ಹೆಚ್ಚುವರಿಯಾಗಿ 6 ಜನ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ.

    ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಸದ್ಯ ಶಾಲೆಗೆ ವಾಹನದ ವ್ಯವಸ್ಥೆ ಕೂಡಾ ಮಾಡಲಾಗಿದೆ. ಮಕ್ಕಳ ಸಂಖ್ಯೆ 100 ಗಡಿ ದಾಟಿದೆ. ಅಲ್ಲದೇ ಕಡಿಮೆ ಖರ್ಚಿನಲ್ಲಿ ಖಾಸಗಿ ಶಾಲೆಗಿಂತಲೂ ಉತ್ತಮ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗುತ್ತಿದೆ ಎಂದು ಗ್ರಾಮಸ್ಥರು ಪಬ್ಲಿಕ್ ಟಿವಿ ಜೊತೆಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಮೂರು ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆ ಪ್ರಾರಂಭಿಸಿ, ಅಭಿವೃದ್ಧಿಗೆ ಶ್ರಮಿಸುವ ಮೂಲಕ ಅನ್ನೇಹಾಲ್ ಗ್ರಾಮಸ್ಥರು ಇತರರಿಗೆ ಮಾದರಿಯಾಗಿದ್ದಾರೆ.

    https://www.youtube.com/watch?v=qqaFFCFnAi4

  • ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

    ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

    ಚೆನ್ನೈ: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವರ್ಗಾವಣೆಗೊಂಡು ಬೇರೆ ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳು ಸರ್, ಪ್ಲೀಸ್ ನಮ್ಮನ್ನು ಬಿಟ್ಟು ಹೋಗ್ಬೇಡಿ ಅಂತಾ ಮುತ್ತಿಗೆ ಹಾಕಿದ್ದಾರೆ.

    ತಮಿಳುನಾಡು ರಾಜ್ಯದ ತಿರುವಳ್ಳರ್ ಇಲಾಖೆಯ ವೇಲಿಯಾ ಗ್ರಾಮದ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ.ಭಗವಾನ್ (28) ಅವರಿಗೆ ಬೇರೆ ಊರಿಗೆ ವರ್ಗಾವಣೆ ಆಗಿತ್ತು. ಬುಧವಾರ ವೇಲಿಯಾ ಗ್ರಾಮದ ಶಾಲೆಯಲ್ಲಿ ಕೊನೆಯ ದಿನದ ಡ್ಯುಟಿ ಮುಗಿಸಿ ವರ್ಗಾವಣೆ ಪತ್ರ ಪಡೆದು ಹೋಗುತ್ತಿದ್ದರು.

    ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆಯಾಗುತ್ತಿರುವ ಸುದ್ದಿ ಕೇಳಿದ ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡಿ ಅಂತಾ ಭಗವಾನ್ ಅವರಿಗೆ ಮುತ್ತಿಗೆ ಹಾಕಿ ಕಣ್ಣೀರು ಹಾಕಿದ್ದಾರೆ. ಭಗವಾನ್ ಶಾಲೆಯಲ್ಲಿ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಮಕ್ಕಳ ವಿರೋಧದ ಕಾರಣ ಭಗವಾನ್ ಅವರ ವರ್ಗಾವಣೆಯ ಆದೇಶವನ್ನು 10 ದಿನಗಳವರೆಗೆ ಮುಖ್ಯಶಿಕ್ಷಕ ಅರವಿಂದನ್ ತಡೆಹಿಡಿದಿದ್ದಾರೆ.

    ಬುಧವಾರ ನಾನು 10 ಗಂಟೆಗೆ ಹೊಸ ಶಾಲೆಗೆ ಹಾಜರಾಗಬೇಕಿತ್ತು. ಹೋಗುವ ವೇಳೆ ಬಂದ ಮಕ್ಕಳು ನನಗೆ ಮುತ್ತಿಗೆ ಹಾಕಿ ತಡೆದಿದಲ್ಲದೇ, ನನ್ನ ಬೈಕ್ ಕೀ ಮತ್ತು ಬ್ಯಾಗ್ ಕಸಿದುಕೊಂಡರು. ಮಕ್ಕಳನ್ನು ನೋಡಿದಾಗ ನನ್ನ ಸೇವೆಗೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಪಡೆದಿದ್ದೇನೆ ಎಂಬುವುದು ಮನವರಿಕೆ ಆಯಿತು ಎಂದು ಶಿಕ್ಷಕ ಭಗವಾನ್ ಒಂದು ಕ್ಷಣ ಭಾವುಕರಾದ್ರು.

    ಭಗವಾನ್ ಶಿಕ್ಷಕರೇ ಶಾಲೆಯಲ್ಲಿ ಇಂಗ್ಲಿಷ್ ಬೋಧನೆ ಮಾಡಬೇಕೆಂದು ಮಕ್ಕಳು ಹಾಗು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಭಗವಾನ್ ತಮ್ಮ ಸರಳ ವ್ಯಕ್ತಿತ್ವದಿಂದ ಮಕ್ಕಳಿಗೆ ತುಂಬಾ ಹತ್ತಿರವಾಗಿದ್ದರು. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಕ್ಕಳಿಗೆ ಉತ್ಸಾಹದಿಂದ ಪಾಠ ಮಾಡುತ್ತಿದ್ದರು. ಮಕ್ಕಳ ಮನವಿಯ ಮೇರೆಗೆ 10 ದಿನಗಳವರೆಗೆ ಭಗವಾನ್ ಅವರ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ ಎಂದು ಮುಖ್ಯ ಶಿಕ್ಷಕ ಅರವಿಂದನ್ ಸ್ಪಷ್ಟಪಡಿಸಿದ್ದಾರೆ.

  • ನಾನ್ಯಾರು ಶಾಲೆ ದತ್ತು ತೆಗೆದುಕೊಳ್ಳೋಕೆ? ಯಾರಪ್ಪನ ಆಸ್ತಿಯನ್ನ ಯಾರು ದತ್ತು ತೆಗೆದುಕೊಳ್ಳೋದು: ನಟ ಪ್ರಕಾಶ್ ರೈ

    ನಾನ್ಯಾರು ಶಾಲೆ ದತ್ತು ತೆಗೆದುಕೊಳ್ಳೋಕೆ? ಯಾರಪ್ಪನ ಆಸ್ತಿಯನ್ನ ಯಾರು ದತ್ತು ತೆಗೆದುಕೊಳ್ಳೋದು: ನಟ ಪ್ರಕಾಶ್ ರೈ

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಳ್ಳೋಕೆ ನಾನ್ಯಾರು, ನಾನು ನನ್ನ ಕೈಲಾದ ಅಳಿಲು ಸೇವೆಯನ್ನಷ್ಟೇ ನಾನು ಮಾಡುತ್ತಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ನಟ ಪ್ರಕಾಶ್ ರೈ, ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸಾಮಾನ್ಯ ಶಿಕ್ಷಣ ಅನ್ನೋದು ಎಲ್ಲರ ಹಕ್ಕು ಎಲ್ಲರಿಗೂ ಸಿಗಬೇಕಿದೆ. ಆದರೆ ಈಗ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಪ್ರಕಾಶ್ ರೈ ಸರ್ಕಾರಿ ಶಾಲೆಗಳನ್ನ ದತ್ತು ತೆಗೆದುಕೊಳ್ತಾರೆ ಅನ್ನೋದು ಮಾರ್ಖತನದ ಮಾತು. ನಾನ್ಯಾರು ದತ್ತು ತೆಗೆದುಕೊಳ್ಳೋಕೆ? ಯಾರಪ್ಪನ ಆಸ್ತಿಯನ್ನು ಯಾರು ದತ್ತು ತೆಗೆದುಕೊಳ್ಳೋದು? ಇದು ದತ್ತು ತೆಗೆದುಕೊಳ್ಳೋದು ಅಲ್ಲ, ಈಗಾಗಲೇ ಹಲವು ಅಧ್ಯಾಪಕರು ಹಾಗೂ ಕೆಲ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಿದ್ದಾರೆ. ಅವರ ಕೆಲಸಕ್ಕೆ ನಾನು ಬೆನ್ನು ತಟ್ಟಿ ಪ್ರೋತ್ಸಾಹಿಸಿ ನನ್ನಿಂದ ಆಗುವ ಅಳಿಲು ಸೇವೆ ಮಾಡಲು ಬಂದಿದ್ದೇನೆ ಎಂದರು.

    ಗೌರಿ ಹಂತಕರ ಪತ್ತೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಪ್ರಕಾಶ್ ರೈ, ಇಷ್ಟು ದಿನ ಎಸ್‍ಐಟಿ ಹಂತಕರನ್ನು ಹಿಡಿದಿಲ್ಲ ಎಂದು ಹೇಳುತ್ತಿದ್ದೀರಿ. ಆದರೆ ಈಗ ಎಸ್‍ಐಟಿ ಹಂತಕರನ್ನ ಹಿಡಿಯುತ್ತಿದೆ. ತನಿಖೆ ಕೊನೆ ಹಂತಕ್ಕೆ ಬಂದಿದೆ. ಹೀಗಾಗಿ ಯಾರು ಯಾರ ಮೇಲೆ ಅಪವಾದ ಹೊರಿಸುವುದು ಬೇಡ. ಎಸ್‍ಐಟಿಯೇ ಒಂದು ಸಂಸ್ಥೆಯ ಮೇಲೆ ಹೇಳ್ತಿದೆ. ಆದರೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ತನಿಖೆ ಮುಗಿಯಲಿ ಅಂತಿಮವಾಗಿ ಸತ್ಯ ತಿಳಿದು ಹಂತಕ ಯಾರು ಯಾಕೆ ಮಾಡಿದ್ದಾರೆ ಅಂತ ಗೊತ್ತಾಗಲಿ. ಸಮಾಜದಲ್ಲಿ ಮುಂದೆ ಮತ್ತೊಂದು ಗೌರಿಯ ಹತ್ಯೆ ಆಗದಂತೆ ಯೋಚನೆ ಮಾಡೋಣ ಎಂದು ಹೇಳಿದರು.

  • ಸರ್ಕಾರಿ ಶಾಲೆಗಳಿಗೆ ಪ್ರಕಾಶ್ ರೈ ಭೇಟಿ-ಮೆಣಸಗೆರೆ ಶಾಲೆಯನ್ನ ದತ್ತು ಪಡೆದ ರೈ

    ಸರ್ಕಾರಿ ಶಾಲೆಗಳಿಗೆ ಪ್ರಕಾಶ್ ರೈ ಭೇಟಿ-ಮೆಣಸಗೆರೆ ಶಾಲೆಯನ್ನ ದತ್ತು ಪಡೆದ ರೈ

    ಮಂಡ್ಯ: ಖ್ಯಾತ ನಟರಾದ ಪ್ರಕಾಶ್ ರೈ ಜಿಲ್ಲೆಯಲ್ಲಿನ ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಕೆ.ಆರ್.ಪೇಟೆ, ಪಾಂಡವಪುರ ಮತ್ತು ಮೆಣಸಗೆರೆ ಗ್ರಾಮದ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

    ಮೆಣಸೆಗೆರೆ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಪ್ರಕಾಶ್ ರೈ, ಕೆ.ಆರ್.ಪೇಟೆ ಹಾಗು ಪಾಂಡವಪುರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಈ ಮೂರು ಶಾಲೆಗಳ ಅಭಿವೃದ್ಧಿಯನ್ನು ಪ್ರಕಾಶ್ ರೈಯವರ ಟ್ರಸ್ಟ್ ನಿಂದ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಶಾಲೆಗೆ ಭೇಟಿ ನೀಡಿದ್ದ ವೇಳೆ ಪ್ರಕಾಶ್ ರೈ ಕೆಲ ಸಮಯವನ್ನು ಮಕ್ಕಳೊಂದಿಗೆ ಕಳೆದಿದ್ದು, ಟ್ವಿಟ್ಟರ್‍ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಶಾಲೆಯ ಮಕ್ಕಳು, ಶಿಕ್ಷಕರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಬಡ ಮಕ್ಕಳಿಗೂ ಎಲ್ಲ ಗುಣಮಟ್ಟದ ಶಿಕ್ಷಣ ಸಿಗಬೇಕು ಅಂತಾ ಬರೆದುಕೊಂಡಿದ್ದಾರೆ.

    ಈ ಹಿಂದೆ ಪ್ರಕಾಶ್ ರೈ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲಾರಹಟ್ಟಿ ಗ್ರಾಮವನ್ನು ದತ್ತು ಪಡೆದುಕೊಂಡಿದ್ದರು.

  • ಗಣಿತ ಸಮಸ್ಯೆ ಬಿಡಿಸಲಿಲ್ಲವೆಂದು 8 ವರ್ಷದ ಬಾಲಕನ ಗಂಟಲಿಗೆ ಕೋಲಿನಿಂದ ಚುಚ್ಚಿದ ಶಿಕ್ಷಕಿ

    ಗಣಿತ ಸಮಸ್ಯೆ ಬಿಡಿಸಲಿಲ್ಲವೆಂದು 8 ವರ್ಷದ ಬಾಲಕನ ಗಂಟಲಿಗೆ ಕೋಲಿನಿಂದ ಚುಚ್ಚಿದ ಶಿಕ್ಷಕಿ

    ಅಹ್ಮದ್‍ನಗರ: ಗಣಿತ ಸಮಸ್ಯೆ ಬಿಡಿಸಲಿಲ್ಲ ಎಂದು ಕೋಪಗೊಂಡ ಶಿಕ್ಷಕಿಯೋರ್ವಳು 8 ವರ್ಷದ ಬಾಲಕನ ಗಂಟಲಿಗೆ ಮರದ ಕೋಲಿನಿಂದ ಚುಚ್ಚಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

    ಮಹಾರಾಷ್ಟ್ರದ ಪಿಂಪಲ್ಗಾಂವ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘೋರ ಕೃತ್ಯ ನಡೆದಿದ್ದು, ಬಾಲಕ ರೋಹನ್ ಡಿ ಜಂಜೀರ್ ಹಲ್ಲೆಗೊಳಗಾದ ಬಾಲಕ. ಘಟನೆಯಿಂದ ರೋಹನ್ ನ ಅನ್ನನಾಳ ಮತ್ತು ವಾಯುನಾಳಗಳಿಗೆ ತೀವ್ರ ಏಟಾಗಿದ್ದು, ಸದ್ಯ ಮಾತನಾಡಲು ಸಾಧ್ಯವಾಗುತ್ತಿಲ್ಲ.

    ಶಿಕ್ಷಕಿ ಹಲ್ಲೆ ನಡೆಸಿದ ತಕ್ಷಣ ರೋಹನ್ ಗಂಟಲಿನಿಂದ ರಕ್ತಸ್ರಾವವಾಗಿದೆ. ಘಟನೆಯನ್ನು ಕಣ್ಣಾರೆ ಕಂಡ ಇತರೆ ವಿದ್ಯಾರ್ಥಿಗಳು ಕಿರುಚಿಕೊಂಡಿದ್ದಾರೆ. ಕೂಗು ಕೇಳಿ ಸಿಬ್ಬಂದಿಗಳು ಶಾಲಾ ಕೊಠಡಿಗೆ ದೌಡಾಯಿಸಿದ್ದಾರೆ. ಬಳಿಕ ರೋಹನ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಪುಣೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಸದ್ಯಕ್ಕೆ ರೋಹನ್ ಪುಣೆ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಬಾಲಕನ ಮೇಲೆ ದರ್ಪ ತೋರಿದ ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ಆದ್ರೆ ಇದೂವರೆಗೂ ಆಕೆಯ ಬಂಧನವಾಗಿಲ್ಲ. ಬಾಲಕನ ಆರೋಗ್ಯ ಸ್ವಲ್ಪ ಮಟ್ಟಿಗೆ ಸುಧಾರಣೆಯಾದ ಬಳಿಕ ಆತನ ಬಳಿಯಿಂದ ಹೇಳಿಕೆ ಪಡೆದುಕೊಳ್ಳುತ್ತೇವೆ. ಬೇಕಿದ್ದಲ್ಲಿ ದೂರಿನ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.