Tag: government school

  • ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

    ಶಾಲೆಗೆ ನುಗ್ಗಿ ಮಹಿಳಾ ಅಡುಗೆ ಸಹಾಯಕರನ್ನು ಹೊರಗೆ ಎಳೆದು ಗ್ರಾಮಸ್ಥರಿಂದ ಹಲ್ಲೆ

    ಮೈಸೂರು: ಮೂವರು ಮಹಿಳಾ ಅಡುಗೆ ಕೆಲಸಗಾರರಿಗೆ ಊರಿನ ಮುಖಂಡರು ತಮ್ಮ ಮಾತು ಕೇಳದೆ ಇದ್ದಿದ್ದಕ್ಕೆ ಕಿರುಕುಳ ನೀಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

    ಸವ್ವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಂಜುಳಾ, ದೇವಮ್ಮ, ಸಿದ್ದಮ್ಮ ಕಿರುಕುಳಕ್ಕೆ ಒಳಗಾದ ಮಹಿಳೆಯರು. ಶಾಲೆಯ ಆಂತರಿಕ ವಿಚಾರಕ್ಕೆ ಗ್ರಾಮದ ಮುಖಂಡರು ತಲೆ ಹಾಕಿದ್ದರು. ಇದರಿಂದಾಗಿ ಮೂವರು ಅಡುಗೆಯವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಹಿಳೆಯರು ನಮ್ಮ ಶಾಲೆಯ ವಿಚಾರಕ್ಕೆ ಬರದಂತೆ ಮನವಿ ಕೂಡ ಮಾಡಿಕೊಂಡಿದ್ದರು. ಇದರಿಂದ ಆಕ್ರೋಶಗೊಂಡು ಗ್ರಾಮದ ಮುಖಂಡರು ಈ ಕೃತ್ಯವನ್ನು ಎಸಗಿದ್ದಾರೆ.

    ಮಂಗಳವಾರ ಶಾಲೆಗೆ ನುಗ್ಗಿ ಗಲಾಟೆ ನಡೆಸಿರುವ ಕೆಲ ಗ್ರಾಮಸ್ಥರು ಅಡುಗೆ ಮಾಡುತ್ತಿದ್ದ ಮೂವರು ಅಡುಗೆಯವರನ್ನು ಶಾಲೆಯಿಂದ ಹೊರ ಹಾಕಿದ್ದಾರೆ. ಹೊರಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಮೂವರಿಗೂ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

    ಬೆಂಕಿ ಬಿಸಿನೀರು ಕೊಡದಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದು, ಈ ಎಲ್ಲಾ ದೃಶ್ಯಗಳು ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ. ಸದ್ಯಕ್ಕೆ ಅಡುಗೆ ತಯಾರಕರನ್ನು ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೆಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣಿತಾ ಸುಭಾಷ್

    ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣಿತಾ ಸುಭಾಷ್

    ಬೆಂಗಳೂರು: ಹಾಸನ ಜಿಲ್ಲೆಯ ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ನಟಿ ಪ್ರಣಿತಾ ಸುಭಾಷ್ 5 ಲಕ್ಷ ರೂ. ಸಹಾಯ ಧನ ನೀಡಿದ್ದು, ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಇಂದು ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ಸಮಿತಿಯ ರಾಜ್ಯ ಶಿಕ್ಷಣ ರಾಯಭಾರಿಯನ್ನಾಗಿ ನಟಿ ಪ್ರಣಿತಾ ಅವರನ್ನು ನೇಮಕ ಮಾಡಲಾಯಿತು. ಜವಾಬ್ದಾರಿ ಹೊತ್ತ ಪ್ರಣಿತಾ ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಳ್ಳುವ ಭರವಸೆ ನೀಡಿದರು. ಅಷ್ಟೇ ಅಲ್ಲದೆ ಆ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲು 5 ಲಕ್ಷ ರೂ. ಚೆಕ್ ನೀಡಿದ್ದಾರೆ.

     

    ಈ ಹಿಂದೆ ನಾನು ಟೀಚ್ ಫಾರ್ ಚೇಂಚ್ ಆಂದೋಲನದಲ್ಲಿ ಭಾಗಿಯಾಗಿದ್ದೆ. ಕೆಲ ಸರ್ಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದಾಗ ಅಲ್ಲಿನ ನೈಜ ಸ್ಥಿತಿ ಅರ್ಥವಾಯಿತು. ಮೂಲಸೌಲಭ್ಯಗಳಿಲ್ಲದೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಶಾಲೆಯಲ್ಲಿ ಶೌಚಾಲಯಗಳೇ ಇರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಯರೂ ಪರದಾಡುವಂತಾಗುತ್ತಿತ್ತು. ಈ ದುಸ್ಥಿತಿಯನ್ನು ಅರಿತು ನಾನು ಶಾಲೆಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರಕ್ಕೆ ಮುಂದಾಗಿರುವೆ ಎಂದು ಹೇಳಿದ್ದಾರೆ.

    ಮೀಟೂ ಅಭಿಯಾನದ ಮೂಲಕ ಮಹಿಳೆಯರಿಗೆ ಧ್ವನಿ ಸಿಕ್ಕಿದೆ. ಎಲ್ಲರೂ ಧೈರ್ಯವಾಗಿ ಮಾತನ್ನ ಹೊರಹಾಕುತ್ತಿದ್ದಾರೆ. ಆದರೆ ಸಿನಿಮಾ ರಂಗದಲ್ಲಿ ನನಗೆ ಯಾವುದೇ ರೀತಿಯ ಲೈಂಗಿಕ ಕಿರುಕುಳದ ಅನುಭವವಾಗಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬಿರುಕು ಬಿಟ್ಟಿರೋ ಗೋಡೆ, ಬೀಳೋ ಸ್ಥಿತಿಯಲ್ಲಿ ಮೇಲ್ಛಾವಣಿ- ಚಿಕ್ಕೋಡಿಯ ಸರ್ಕಾರಿ ಶಾಲೆಯ ದುಸ್ಥಿತಿ

    ಬಿರುಕು ಬಿಟ್ಟಿರೋ ಗೋಡೆ, ಬೀಳೋ ಸ್ಥಿತಿಯಲ್ಲಿ ಮೇಲ್ಛಾವಣಿ- ಚಿಕ್ಕೋಡಿಯ ಸರ್ಕಾರಿ ಶಾಲೆಯ ದುಸ್ಥಿತಿ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಣಕಾಪುರದಲ್ಲಿರೋ ಸರ್ಕಾರಿ ಕನ್ನಡ ಮತ್ತು ಮರಾಠಿ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದೆ. ಕಲಿಕೆಗೆ ಯೋಗ್ಯವಲ್ಲ ಅಂತಾ ನೋಟಿಸ್ ಕೊಟ್ಟ ಮೇಲೂ ಅದೇ ಶಾಲೆಯಲ್ಲಿ ಪಾಠ-ಪ್ರವಚನ ನಡೀತಿದೆ. ಮಕ್ಕಳು ಸಾವನ್ನು ಎದುರು ನೋಡುತ್ತಾ ಪಾಠ ಕೇಳುತ್ತಿದ್ದಾರೆ.


    700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿರೋ ಈ ಶಾಲೆ ಶಿಥಿಲಾವಸ್ಥೆ ತಲುಪಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಯಾವಾಗ ಬೇಕಾದ್ರೂ ಬೀಳಬಹುದು. ಇನ್ನು ಮಳೆ ಗಾಳಿ ಬಂದ್ರಂತೂ ಊರಿನ ಗ್ರಾಮಪಂಚಾಯತ್ ಕಚೇರಿಯ ಕಟ್ಟಡ ಮತ್ತು ದೇವಸ್ಥಾನವೇ ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠ ಶಾಲೆಯಾಗಿದೆ ಅಂತ ಶಿಕ್ಷಕ ಅವಧೂತ ಧನಗರ ತಿಳಿಸಿದ್ದಾರೆ.

    ಸುಮಾರು 70 ವರ್ಷಗಳ ಹಿಂದೆ ಗ್ರಾಮಸ್ಥರೇ ಹಣ ಸೇರಿಸಿ ಈ ಶಾಲೆಯನ್ನು ಕಟ್ಟಿದ್ದಾರೆ. ಹಾಗೆ ಕಟ್ಟಿದ ಕಟ್ಟಡಗಳು ಬೀಳೋ ಸ್ಥಿತಿಗೆ ಬಂದಿದೆ. ಈ ಬಗ್ಗೆ ಬೆಳಗಾವಿ ಡಿಸಿ, ಸಚಿವ ರಮೇಶ್ ಜಾರಕಿಹೊಳಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮದ 12 ಜನರು ಸೇರಿ ಶಾಲೆಯ ಅಭಿವೃದ್ಧಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸೋ ಎಚ್ಚರಿಕೆ ನೀಡಿರುವುದಾಗಿ ಎಸ್‍ಡಿಎಂಸಿ ಸದಸ್ಯ ಜಗದೀಶ ಹೇಳಿದ್ದಾರೆ.

    ಸರ್ಕಾರಿ ಶಾಲೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯೋ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಕೊಂಚ ಇತ್ತ ಕಡೆ ಗಮನಹರಿಸಿ ಜೀವ ಭಯದಲ್ಲಿ ಪಾಠ ಕಲಿಯುತ್ತಿರುವ ಮಕ್ಕಳ ರಕ್ಷಣೆಗೆ ನಿಲ್ಲಲಿ ಎಂಬುವುದೇ ಎಲ್ಲರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ-ಶಿಕ್ಷಣ ಇಲಾಖೆಯಿಂದ ನ್ಯೂ ರೂಲ್ಸ್

    ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ-ಶಿಕ್ಷಣ ಇಲಾಖೆಯಿಂದ ನ್ಯೂ ರೂಲ್ಸ್

    ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಇನ್ಮುಂದೆ ಖಾಸಗಿ ಶಾಲೆಗಳಂತೆ ಹೈಟೆಕ್ ಸ್ಪರ್ಶ ಸಿಗಲಿದೆ. ಪ್ರೈವೇಟ್ ಶಾಲೆಗಳಂತೆ ಹೊಸ ಹೊಸ ರೂಲ್ಸ್ ತರೋದಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಮೊದಲ ಹೆಜ್ಜೆ ಇರಿಸಿದೆ.

    ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಹೀಗಾಗಿ ಅನೇಕ ಹೊಸ ಕಾರ್ಯಕ್ರಮ ಜಾರಿಗೆ ತರುತ್ತಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಡೈರಿಯನ್ನ ಸರ್ಕಾರಿ ಶಾಲೆಗಳಲ್ಲೂ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಡೈರಿಯಲ್ಲಿ ಮಕ್ಕಳ ಹೋಮ್ ವರ್ಕ್, ವಿದ್ಯಾರ್ಥಿ ಸಂಬಂಧಿಸಿದ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನ ಪೋಷಕರಿಗೆ ನೀಡಲಾಗುತ್ತದೆ.

    ಡೈರಿ ನೀಡುವದರಿಂದ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿ ಪೋಷಕರಿಗೆ ಲಭ್ಯವಾಗುತ್ತದೆ. ಶಾಲೆಯ ಚಟುವಟಿಕೆಗಳ ಜೊತೆ ಮಕ್ಕಳ ಸುಧಾರಣೆಗೂ ಪೋಷಕರಿಗೆ ಸಲಹೆ ನೀಡಲು ಸಹಾಯವಾಗುತ್ತದೆ. ಖಾಸಗಿ ಶಾಲೆಗಳ ಡೈರಿಗಿಂತ ಸರ್ಕಾರಿ ಶಾಲೆಗಳ ಡೈರಿ ಕೊಂಚ ವಿಶಿಷ್ಠವಾಗಿರಲಿದೆ. ಪ್ರಮುಖ ಹಬ್ಬಗಳು, ಪ್ರಖ್ಯಾತ ವ್ಯಕ್ತಿಗಳ ಮಾಹಿತಿ, ರಜಾದಿನಗಳ ಮಾಹಿತಿ ಸೇರಿದಂತೆ ಇನ್ನಿತರ ಶೈಕ್ಷಣಿಕ ಮಾಹಿತಿಗಳು ಡೈರಿಯಲ್ಲಿ ಲಭ್ಯವಾಗಲಿದೆ.

    ಈಗಾಗಲೇ ಡೈರಿ ನೀಡುವ ಸಂಬಂಧ ಸರ್ಕಾರದ ಒಪ್ಪಿಗೆಗೆ ಕಡತವನ್ನ ಇಲಾಖೆ ಕಳಿಸಿದೆ. ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲಾ ಮಕ್ಕಳಿಗೆ ಡೈರಿ ಭಾಗ್ಯ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾವ ಖಾಸಗಿ ಶಾಲೆಗಿಂತ ಇದು ಕಮ್ಮಿಯಿಲ್ಲ – ಹಿರಿಯೂರಿನ ಸರ್ಕಾರಿ ಶಾಲೆ ನಮ್ಮ ಪಬ್ಲಿಕ್ ಹೀರೋ

    ಯಾವ ಖಾಸಗಿ ಶಾಲೆಗಿಂತ ಇದು ಕಮ್ಮಿಯಿಲ್ಲ – ಹಿರಿಯೂರಿನ ಸರ್ಕಾರಿ ಶಾಲೆ ನಮ್ಮ ಪಬ್ಲಿಕ್ ಹೀರೋ

    ಚಿತ್ರದುರ್ಗ: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯೋರೇ ಹೆಚ್ಚು. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜಡೆಗೊಂಡನಹಳ್ಳಿ ಸರ್ಕಾರಿ ಶಾಲೆ ಮಾತ್ರ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ. ಸುಂದರ ಪರಿಸರ, ಶಿಕ್ಷಣ ಹಾಗು ಶಾಲಾಭಿವೃದ್ಧಿಯಲ್ಲಿ ಖಾಸಗಿ ಶಾಲೆಗಳನ್ನೇ ಮೀರಿಸುವಂತಿದೆ. ಆ ಶಾಲೆಯೇ ಇಂದಿನ ನಮ್ಮ ಪಬ್ಲಿಕ್ ಹೀರೋ.

    ಕರ್ನಾಟಕ ರಾಜ್ಯದ ಯಾವ ಸರ್ಕಾರಿ ಶಾಲೆಗಳಲ್ಲೂ ಇಲ್ಲದ ಈಜುಕೊಳವನ್ನು ಇಲ್ಲಿ ನಿರ್ಮಿಸಲಾಗಿದೆ. ಗ್ರಾಮಸ್ಥರ ನೆರವಿನೊಂದಿಗೆ, ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಸೇರಿ ಶಾಲಾ ಆವರಣವನ್ನೇ ಸೊಬಗಿನ ವನವಾಗಿಸಿದ್ದಾರೆ. ಈ ಶಾಲಾ ಆವರಣದಲ್ಲೊಂದು ಕೊಳವೆ ಬಾವಿ ಕೊರೆಸಿ, ವಾಣ ವಿಲಾಸ ಸಾಗರ ಮಾದರಿಯ ಪುಟ್ಟ ಆಣೆಕಟ್ಟನ್ನು ನಿರ್ಮಿಸಲಾಗಿದೆ.

    ಸುಮಾರು ಎರಡು ಎಕರೆ ವಿಸ್ತೀರ್ಣವುಳ್ಳ ಶಾಲಾ ಆವರಣವನ್ನು ನಿರುಪಯುಕ್ತವಾಗಿ ಬಿಡದೇ ಹೂವು, ಹಣ್ಣು, ತರಕಾರಿ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಹೂವಿನ ಗಿಡಗಳು ಮತ್ತು ಹುಣಸೆ ಮರಗಳಿಂದ ಸುಮಾರು 2 ಲಕ್ಷದ 22 ಸಾವಿರ ಹಣ ಶಾಲೆಯ ಎಸ್.ಡಿ.ಎಂಸಿ ಖಾತೆಯಲ್ಲಿ ಉಳಿತಾಯವಾಗಿದೆ.

    ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಸಂಖ್ಯೆ ಸಹ ಹೆಚ್ಚಾಗಿದೆ. ಅಲ್ಲದೇ ಈ ಶಾಲೆಗೆ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಮತ್ತು ಜಿಲ್ಲೆ ಹಾಗು ವಿಭಾಗಮಟ್ಟದ ಅತ್ಯುತ್ತಮ ಪರಿಸರ ಮಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Er6sy3k8aK4

  • ಯೂರಿಯಾ ಮಿಶ್ರಿತ ಹಾಲು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥ!

    ಯೂರಿಯಾ ಮಿಶ್ರಿತ ಹಾಲು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥ!

    ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ಅಡುಗೆಯವರ ಎಡವಟ್ಟಿನಿಂದಾಗಿ ಯೂರಿಯಾ ಹಾಲು ಕುಡಿದ 19 ಮಕ್ಕಳು ಅಸ್ವಸ್ಥಗೊಂಡ ಘಟನೆ ಕೊಪ್ಪ ತಾಲೂಕು ಹರಹರಿಪುರ ಸಮೀಪದ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಕ್ಕಳು ಸದ್ಯ ಹರಿಹರಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಕೆಗೊಂಡ ಬಳಿಕ ಸಂಜೆ ಮನೆಗೆ ತೆರಳಿದ್ದಾರೆ. ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ನಿಲುವಾಗಿಲು ಮುಖ್ಯಶಿಕ್ಷಕ ಅಶೋಕ, ಹಿರಿಯ ಅಡುಗೆಯವರಾದ ಯಶೋದಮ್ಮ, ಅಡುಗೆ ಸಹಾಯಕರಾದ ಶಾರದಾ ಹಾಗೂ ಗುಲಾಬಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ನಡೆದದ್ದು ಏನು?
    ನಿಲುವಾಗಿಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಶನಿವಾರ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಲಾಗಿದೆ. ಹಾಲು ಕುಡಿಯುತ್ತಿದ್ದಂತೆ ಮಕ್ಕಳು ಹಾಲು ಕಹಿಯಾಗಿದೆ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣವೇ ಜಾಗೃತಗೊಂಡ ದೈಹಿಕ ಶಿಕ್ಷಣ ಶಿಕ್ಷಕರು ತಾವು ಸ್ಪಲ್ಪ ಹಾಲು ಕುಡಿದಿದ್ದಾರೆ. ಹಾಲು ವಿಷವಾಗಿದೆ ಅಂತ ಗೊತ್ತಾಗುತ್ತಿದ್ದಂತೆ ಮಕ್ಕಳಿಗೆ ಹಾಲು ಕುಡಿಯದಂತೆ ಸೂಚಿಸಿ, ಮುಖ್ಯಶಿಕ್ಷಕರಿಗೆ ಆ ವೇಳೆಗಾಗಲೇ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಿದ್ದಾರೆ. ಅದರೆ ಅಷ್ಟೊತ್ತಿಗಾಗಲೇ ಶಾಲೆಯ 19 ಮಕ್ಕಳು ಹಾಲನ್ನು ಸೇವಿಸಿಯಾಗಿತ್ತು.

    ಹಾಲು ಕುಡಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ವೇಳೆ ಹಾಲಿನಲ್ಲಿ ವಿಷಕಾರಿ ಯೂರಿಯಾ ಸೇರಿರುವುದು ಪತ್ತೆಯಾಗಿದೆ. ಹಾಲಿನಲ್ಲಿ ಯಾರು ಯೂರಿಯಾ ಬೆರೆಸಿದ್ದು ಹಾಗೂ ಶಾಲೆಗೆ ಅದು ಹೇಗೆ ಬಂತು ಎನ್ನವುದು ಅನುಮಾನ ವ್ಯಕ್ತವಾಗಿದೆ.

    ಯಶೋಧಮ್ಮ ಅವರು ಇಂದು ರಜೆ ಇದ್ದರು. ಹೀಗಾಗಿ ಶುಕ್ರವಾರವೇ ಹಾಲಿಗೆ ಬೇಕಾಗಿದ್ದ ಸಕ್ಕರೆ ಪ್ಯಾಕೇಟ್ ನೀಡಿ ಹೋಗಿದ್ದರು. ಅದನ್ನು ಪರಿಶೀಲನೆ ಮಾಡದೇ ಹಾಲಿಗೆ ಹಾಕಿದ್ದೇವೆ ಎಂದು ಸಹಾಯಕಿಯರಾದ ಗುಲಾಬಿ ಹಾಗೂ ಶಾರದಾ ತಿಳಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಯಶೋಧಮ್ಮ ಹಾಗೂ ಅಡುಗೆ ಸಹಾಯಕರ ನಡುವೆ ಜಗಳವಾಗಿತ್ತು. ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸಲು ಮಕ್ಕಳ ಜೀವನದ ಜೊತೆಗೆ ಆಟವಾಡಿದ್ದಾರೆ. ಇನ್ನು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

    ಅಶೋಕ ಅವರು ನಿಲುವಾಗಿಲು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರಾಗಿ ಬಂದ ಮೇಲೆ ಅನೇಕ ಬದಲಾವಣೆ ತಂದಿದ್ದರು. ಖಾಸಗಿ ಶಾಲೆಯಂತೆ ನರ್ಸರಿ ತರಗತಿಗಳನ್ನು ಪ್ರಾರಂಭಿಸಿದ್ದರು. ಇದರಿಂದಾಗಿ ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲೆಯ ಛಾವಣಿ ಕಿತ್ತುಹಾಕಿ ಗಣೇಶನ ಮೂರ್ತಿಯನ್ನು ಬೀದಿಗೆ ತಂದ ಎಂಜಿನಿಯರ್!

    ಶಾಲೆಯ ಛಾವಣಿ ಕಿತ್ತುಹಾಕಿ ಗಣೇಶನ ಮೂರ್ತಿಯನ್ನು ಬೀದಿಗೆ ತಂದ ಎಂಜಿನಿಯರ್!

    ದಾವಣಗೆರೆ: ಶಾಲೆಯಲ್ಲಿ ಗಣೇಶ ಮೂತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಕೇಳದ, ಎಂಜಿನಿಯರ್ ಅಧಿಕಾರಿಯೊಬ್ಬರು ಶಾಲೆಯ ಛಾವಣಿಯನ್ನು ತೆಗೆಸಿದ ಘಟನೆ ಹರಪನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

    ಎಂಜಿನಿಯರ್ ಮಹಾಂತೇಶ್ ಹಾಗೂ ಕಾರ್ಮಿಕ ನವಾಜ್ ಶಾಲೆಯ ಛಾವಣಿ ತೆಗೆಸಿ ಹಾಕಿದವರು. ಗುರುವಾರ ಬೆಳಗ್ಗೆ ಮಾದಾಪುರ ಗ್ರಾಮದ ಮಕ್ಕಳು ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿದ್ದರು. ಬಳಿಕ ಕೆಲವು ವಿದ್ಯಾರ್ಥಿಗಳನ್ನು ಬಿಟ್ಟು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು.

    ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯಕ್ಕೆಂದು ಶಾಲೆಗೆ ಬಂದ ಎಂಜಿನಿಯರ್ ಮಹಾಂತೇಶ್, ಕಾರ್ಮಿಕ ನವಾಜ್ ಅವರಿಗೆ ಹೇಳಿ ಛಾವಣಿ ತೆಗೆಸುತ್ತಿದ್ದರು. ಆಗ ಕೆಲ ವಿದ್ಯಾರ್ಥಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ, ಹಬ್ಬದ ನಂತರ ಶಾಲೆ ದುರಸ್ತಿ ಕಾರ್ಯ ಮಾಡುವಂತೆ ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮಾತನ್ನು ಕೇಳ ಎಂಜಿನಿಯರ್ ಛಾವಣಿ ತೆಗೆಸಿದ್ದಾರೆ.

    ಶಾಲೆಗೆ ಬಂದ ಸ್ಥಳೀಯರು ಎಂಜಿನಿಯರ್ ವರ್ತನೆಯಿಂದ ಗರಂ ಆಗಿದ್ದರು. ಮಹಾಂತೇಶ್ ಹಾಗೂ ನವಾಜ್‍ನನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಥಳಿಸಲು ಮುಂದಾಗಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮಹಾಂತೇಶ್ ಹಾಗೂ ನವಾಜ್‍ನನ್ನು ವಶಕ್ಕೆ ಪಡೆದು, ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಆರಾಧನೆ

    ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಆರಾಧನೆ

    ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಅಥರಗಾ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೊಂದರಲ್ಲಿ ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

    ಗ್ರಾಮದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಾಗಿರುವ ಇದು 106 ವರ್ಷದ ಹಳೆಯದಾಗಿದ್ದು, ಅಲ್ಲಿ ಈ ಶಾಲೆಯ ಶಿಕ್ಷಕ ರೇವಣಸಿದ್ದ ಎಂಬವರ ದೇವಾಲಯವನ್ನು ಕಟ್ಟಿಸಿದ್ದಾರೆ. ರೇವಣಸಿದ್ದ ಶಿಕ್ಷಕರು ವಿಜಯಪುರದ ಮನಗೂಳಿ ಗ್ರಾಮದಲ್ಲಿ 1925 ಜನಿಸಿ ನಂತರ ಶಿಕ್ಷಕರಾಗಿ ಅಥರಗಾ ಗ್ರಾಮದಲ್ಲಿ 30 ವರ್ಷ ಸೇವೆಸಲ್ಲಿದ್ದರು. ಅನಕ್ಷರತೆ, ಬಡತನ ಸೇರಿದಂತೆ ಶಾಲೆ ಬಿಟ್ಟ ಮಕ್ಕಳು ಹೆಚ್ಚಿಗಿದ್ದರು. ಆಗ ರೇವಣಸಿದ್ದ ಶಿಕ್ಷಕರು ದೊಡ್ಡವರಿಂದ ಹಿಡಿದು ಎಲ್ಲ ಮಕ್ಕಳಿಗೂ ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಿದ್ದರು.

    ಅದಕ್ಕಾಗಿ ಅವರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಅವರು ತೀರಿ ಹೋದ ಮೇಲೆ ಶಾಲೆಯಲ್ಲಿ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿ ದೇವಾಲಯವನ್ನೆ ಕಟ್ಟಿಸಿದ್ದಾರೆ. ಪ್ರತಿ ನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಅವರಿಗೆ ಪೂಜೆ ಪುನಸ್ಕಾರ ನೆರವೇರುಸುತ್ತಾ ಬಂದಿದ್ದು, ಅವರನ್ನು ದೇವರ ಸಮಾನರಾಗಿ ಕಾಣುತ್ತಾರೆ.

    ಗುರು ಬ್ರಹ್ಮ ಗುರು ವಿಷ್ಣು ಗುರುದೇವೊ ಮಹೇಶ್ವರ ಎಂಬಂತೆ ಇಲ್ಲಿ ರೇವಣಸಿದ್ದ ಶಿಕ್ಷಕರನ್ನು ದೇವರ ಸಮಾನರಾಗಿ ಕಾಣುವುದರ ಜೊತೆಗೆ ಅವರನ್ನು ದೇವರಂತೆ ಪೂಜಿಸುತ್ತಿರುವುದು ಶಿಕ್ಷಕ ವೃತ್ತಿಗೆ ಸಂದ ಅಭೂತ ಪೂರ್ವ ಗೌರವವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟ ಸಮ್ಮಿಶ್ರ ಸರ್ಕಾರ- ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರವೇ ಕೊಡಲಿಲ್ಲ

    ಸಂಸದರಿಗೆ ದುಬಾರಿ ಐಫೋನ್ ಗಿಫ್ಟ್ ಕೊಟ್ಟ ಸಮ್ಮಿಶ್ರ ಸರ್ಕಾರ- ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರವೇ ಕೊಡಲಿಲ್ಲ

    ಚಿಕ್ಕಬಳ್ಳಾಪುರ: ಒಂದು ಕಡೆ ರಾಜ್ಯದ ಸಂಸದರಿಗೆ ದುಬಾರಿ ಐಪೋನ್ ಕೊಟ್ಟಿರೋ ಸಮ್ಮಿಶ್ರ ಸರ್ಕಾರ ಹಾಗೂ ಸಚಿವರ ನಡೆ ಎಲ್ಲರ ಟೀಕೆಗೆ ಗುರಿಯಾಗಿದೆ. ಆದ್ರೆ ಇತ್ತ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳೆ ಕಳೆದರೂ ಪಾಪ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ್ತ್ರವೇ ಕೊಟ್ಟಿಲ್ಲ. ಹೈಸ್ಕೂಲ್ ಗೆ ಬರುತ್ತಿದ್ದಂತೆ ಚೂಡಿದಾರ ತೊಡಬೇಕಿದ್ದ ಹೆಣ್ಣು ಮಕ್ಕಳು ಇನ್ನೂ ಹಳೆಯ ಲಂಗ-ಸ್ಕರ್ಟ್ ಧರಿಸಿಯೇ ಶಾಲೆಗೆ ಬರುವಂತೆ ಜಿಲ್ಲೆಯ ವಿದ್ಯಾರ್ಥಿನಿಯರ ಸ್ಥಿತಿ

    ಚಿಕ್ಕಬಳ್ಳಾಪುರ ಇದುವರೆಗೂ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಿಲ್ಲ. 7ನೇ ತರಗತಿ ವರೆಗೂ ಲಂಗ ತೊಡುತ್ತಿದ್ದ ವಿದ್ಯಾರ್ಥಿನಿಯರು ಹೈ ಸ್ಕೂಲ್ ಮೆಟ್ಟಿಲೇರಿದ ಬಳಿಕ ಚೂಡಿದಾರ ತೊಡಬೇಕು. ಇಡೀ ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಸೇರಿ ಒಟ್ಟು 43,329 ಹೈಸ್ಕೂಲ್ ವಿದ್ಯಾರ್ಥಿಗಳಿದ್ದಾರೆ. ಕೆಲವರು ಯೂನಿಫಾರಂ ಇಲ್ಲದ ಕಾರಣ ಕಲರ್ ಬಟ್ಟೆ ತೊಟ್ಟು ಶಾಲೆಗಳಿಗೆ ಬರುತ್ತಿದ್ದರೆ, ಇನ್ನೂ ಕೆಲವರು ಹಳೆಯ ಯೂನಿಫಾರಂನ್ನೇ ಧರಿಸಿ ಶಾಲೆಗಳಿಗೆ ಬರುತ್ತಿದ್ದಾರೆ.

    ಇದರಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 8,388 ವಿದ್ಯಾರ್ಥಿನಿಯರಿದ್ದು, ಇವರಿಗೆಲ್ಲರಿಗೂ ಸಮವಸ್ತ್ರ ಭಾಗ್ಯ ಲಭಿಸಿಲ್ಲ. ಇದರಲ್ಲಿ 8ನೇ ತರಗತಿಯೇ ಒಟ್ಟು 5,205 ವಿದ್ಯಾರ್ಥಿನಿಯರಿದ್ದು, 7 ನೇ ತರಗತಿಯ ಲಂಗವನ್ನೇ ತೊಟ್ಟು ಹೈಸ್ಕೂಲ್‍ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲ ಶಾಲೆಗಳಲ್ಲಿನ 8ನೇ ತರಗತಿ ವಿದ್ಯಾರ್ಥಿನಿಯರು ಕಲರ್ ಡ್ರಸ್‍ಗಳಲ್ಲಿ ಶಾಲೆಗೆ ಬರ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನ ಕೇಳಿದ್ರೇ ರಾಜ್ಯ ಮಟ್ಟದಲ್ಲಿ ಟೆಂಡರ್ ಸಮಸ್ಯೆ ಆಗಿದೆ ಅದಷ್ಟು ಬೇಗ ಕೊಡುತ್ತೇವ ಅಂತಿದ್ದಾರೆ.

    ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕಾದ ಸರ್ಕಾರ ಇದುವರೆಗೂ ಒಂದು ಜೊತೆ ಸಮವಸ್ತ್ರವನ್ನೂ ಸಹ ವಿತರಿಸಿಲ್ಲ, ಹೀಗಾಗಿ ಸರ್ಕಾರಿ ಶಾಲೆಗೆ ಬರೋ ಮಕ್ಕಳು ಸ್ವಂತ ಹಣದಿಂದ ಸಮವಸ್ತ್ರ ಖರಿದಿಸೋ ಶಕ್ತಿ ಕೂಡ ಇರಲ್ಲ. ಒಂದು ಕಡೆ ಸಂಸದರಿಗೆ ಬೇಡದ ಇರೋ ಐಫೋನ್ ಕೊಡೋ ಸರ್ಕಾರ, ಇಲ್ಲಿ ಪಾಪ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡೋಕೆ ಮೀನಾಮೇಷ ಎಣಿಸ್ತಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಫ್ರೀ ಬಸ್ ಪಾಸ್: ಸಿಎಂ ಎಚ್‍ಡಿಕೆ

    ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಫ್ರೀ ಬಸ್ ಪಾಸ್: ಸಿಎಂ ಎಚ್‍ಡಿಕೆ

    ರಾಮನಗರ: ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಕೊಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಭರವಸೆ ಕೊಟ್ಟಿದ್ದಾರೆ.

    ಈ ಬಗ್ಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಉಚಿತ ಬಸ್ ಪಾಸ್ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು ಎಂದುಕೊಂಡಿದ್ದೇನೆ. ನಾಳೆ ನಮ್ಮ ಅಧಿಕಾರಿಗಳು ಸಭೆ ಕರೆದಿದ್ದಾರೆ. ಯಾವ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಅಂತಹ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಕೊಡುತ್ತೇವೆ ಎಂದು ಹೇಳಿದ್ದಾರೆ.

    ನೀವು ರಾಜಕೀಯ ಮಾಡಿದರೆ, ನನಗೆ ರಾಜಕೀಯ ಮಾಡಲು ಗೊತ್ತಿಲ್ಲವೇ? 50 ಸಾವಿರ, 1 ಲಕ್ಷ ಡೊನೇಷನ್ ಕೊಟ್ಟು ಓದುವವರಿಗೆ ನಿಮಗೆ ಯಾಕೆ ಉಚಿತವಾದ ಪಾಸ್ ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಯಾರು ಈ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಓದುತ್ತಾರೋ ಅಂತಹ ಮಕ್ಕಳಿಗೆ ಅಂದರೆ ಎಲ್ಲಾ ಸರ್ಕಾರಿ ಮಕ್ಕಳಿಗೂ ಉಚಿತ ಬಸ್ ಪಾಸ್ ಕೊಡುತ್ತೇವೆ. ಈ ಬಗ್ಗೆ ನಾಳೆ ಸಭೆ ಕರೆದು ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಇಂದು ಸಿಎಂ ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರವಾದ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ್ದಾರೆ.