Tag: government school

  • ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳನ್ನು ಹೊರಹಾಕಿದ ಸರ್ಕಾರಿ ಶಾಲೆ!

    ಆಂಗ್ಲ ಮಾಧ್ಯಮದಲ್ಲಿ ಕಲಿಯಲು ಬಂದ ಮಕ್ಕಳನ್ನು ಹೊರಹಾಕಿದ ಸರ್ಕಾರಿ ಶಾಲೆ!

    ಕಾರವಾರ: ತಮ್ಮ ಮಕ್ಕಳು ಉತ್ತಮ ಶಾಲೆಯಲ್ಲಿ ಕಲಿಬೇಕು. ಅದರಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಬೇಕು ಎನ್ನುವ ಆಸೆ ಬಹುತೇಕ ಪೋಷಕರಲ್ಲಿಯೂ ಇರುತ್ತದೆ. ಹೀಗಾಗಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷ ಲಕ್ಷ ಶುಲ್ಕ ಪಾವತಿಸಿ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಇದನ್ನು ಅರಿತ ಸರ್ಕಾರವು ಬಡವರು ಮಕ್ಕಳಿಗೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯ 26 ಕಡೆಗಳಲ್ಲಿ ಈ ವರ್ಷ ಮೊದಲ ಬಾರಿಗೆ ಒಂದನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿಯೂ ಇಂಗ್ಲಿಷ್ ಮಾಧ್ಯಮ ಪ್ರಾರಂಭವಾಗಿದೆ. ಜಿಲ್ಲೆಯ ಶಿರಸಿಯ ಶಾಸಕರ ಮಾದರಿ ಶಾಲೆಯಲ್ಲಿ ಎರಡು ವಾರದ ಹಿಂದೆ ಬಡ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ನೀಡಲಾಗಿತ್ತು. ಸರ್ಕಾರದ ಮಾರ್ಗದರ್ಶನದಂತೆ 30 ಜನರನ್ನು ಮಾತ್ರ ಅಗತ್ಯ ದಾಖಲೆಯೊಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಂತೆಯೇ ಹಲವು ಪೊಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲು ಮಾಡಿದ್ದಾರೆ. ಶಾಲೆ ಉತ್ತಮವಾಗಿದ್ದರಿಂದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳು ಸಹ ಇಲ್ಲಿ ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ 30 ಮಕ್ಕಳ ಸಂಖ್ಯೆ ಏಕಾಏಕಿ 69ಕ್ಕೆ ಏರಿಕೆಯಾಗಿದೆ.

    ಸರ್ಕಾರದ ಮಾರ್ಗದರ್ಶಿಯಂತೆ 30 ಜನರಿಗೆ ಮಾತ್ರ ಅವಕಾಶವಿದ್ದು 39 ಮಕ್ಕಳು ಹೆಚ್ಚುವರಿಯಾಗಿ ಸೇರಿಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಆಡಳಿತ ಮಂಡಳಿ (ಎಸ್‍ಡಿಎಂಸಿ) ಹಾಗೂ ಮುಖ್ಯ ಶಿಕ್ಷಕರು ತಮಗೆ ಬೇಕಾದವರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಉಳಿದ ಮಕ್ಕಳನ್ನು ಎರಡು ವಾರಗಳ ಕಾಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಶಾಲೆಯಿಂದ ಹೊರಹಾಕಿದ್ದಾರೆ. ಇದನ್ನು ಪ್ರಶ್ನಿಸಿ ಪೂಷಕರು ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಬಳಿ ಹೋದರೂ ಯಾವುದೇ ಪರಿಹಾರ ನೀಡದೇ ಕನ್ನಡ ಮಾಧ್ಯಮಕ್ಕೆ ಸೇರಿಸಿ ಎಂದು ನುಣಿಚಿಕೊಂಡಿದ್ದಾರೆ.

    ಶಾಸಕರು, ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಕೆ:
    ನಿಯಮದಂತೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಈಗ ಮಕ್ಕಳನ್ನು ಹೊರಹಾಕಲಾಗಿದೆ. ತಮಗೆ ಬೇಕಾದ ಮಕ್ಕಳಿಗೆ ಅವಕಾಶ ಕೊಡಲಾಗಿದೆ. ಸಂಖ್ಯೆ ಹೆಚ್ಚು ಆಗಿದ್ದಾಗ ಕೊನೆ ಪಕ್ಷ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬಹುದಿತ್ತು. ಆದರೆ ಅದನ್ನೂ ಕೂಡ ಮಾಡಲಿಲ್ಲ ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದ್ದಾರೆ.

    ಈವರೆಗೂ ಶಾಸಕರು ಹಾಗೂ ಶಿಕ್ಷಣಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ಮಕ್ಕಳು ಸರ್ಕಾರಿ ಶಾಲೆಯ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆಂಬ ಆಸೆ ಇತ್ತು. ಹೀಗಾಗಿ ಈ ಶಾಲೆಗೆ ಸೇರಿಸಿದ್ದೇವು ಎಂದು ಮಕ್ಕಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿದ ಕಿಚ್ಚ ಸುದೀಪ್ – ವಿಡಿಯೋ ನೋಡಿ

    ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿದ ಕಿಚ್ಚ ಸುದೀಪ್ – ವಿಡಿಯೋ ನೋಡಿ

    ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿ ತಮ್ಮಲ್ಲಿರುವ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ.

    ಇಂದು ಕೆಂಗೇರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಿಚ್ಚಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ಶೂ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೂ ವಿತರಣೆ ಕಾರ್ಯಕ್ರಮಕ್ಕೆ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಆಹ್ವಾನ ಮಾಡಿದ್ದರು.

    ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಸ್ವತಃ ತಾವೇ ಕೆಲವು ಮಕ್ಕಳಿಗೆ ಶೂ ತೊಡಿಸಿದ್ದು ವಿಶೇಷವಾಗಿತ್ತು.

    ಸುದೀಪ್ ಅವರು ಪೈಲ್ವಾನ್ ಮತ್ತು ಬಾಲಿವುಡ್‍ನ ದಬಾಂಗ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇನ್ನೂ ಕನ್ನಡದ ಕೋಟಿಗೊಬ್ಬ-3 ಬಹುತೇಕ ಕಂಪ್ಲಿಟ್ ಆಗಿದೆ. ತೆಲುಗಿನಲ್ಲಿ ಸೈರಾ ಚಿತ್ರವೂ ಮುಗಿದಿದೆ. ಈಗ ಅನೂಪ್ ಭಂಡಾರಿ ನಿರ್ದೇಶನದ ರಂಗ ಬಿಲ್ಲಾ ಬಾಷಾ ಸಿನಿಮಾ ಆರಂಭಿಸಲಿದ್ದಾರೆ.

    https://twitter.com/KicchafansKKSFA/status/1136924107830726657

  • ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮಾಜಿ ಸಿಎಂ ಹುಟ್ಟೂರಿನ ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗೆ ಫುಲ್ ಡಿಮ್ಯಾಂಡ್

    ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟೂರಿನಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪೋಷಕರು ಮುಗಿಬಿದ್ದಿದ್ದಾರೆ.

    ಸಿದ್ದರಾಮಯ್ಯರ ತವರೂರಾದ ಸಿದ್ದರಾಮನಹುಂಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರಿಗೆ ಕಿಂಚಿತ್ತು ಆಸಕ್ತಿ ಇಲ್ಲ. ಈ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಗಿದೆ. ಮೊದಲನೇ ವರ್ಷವೇ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಆಸಕ್ತಿ ಪೋಷಕರಿಂದ ವ್ಯಕ್ತವಾಗಿದೆ.

    ಸಿದ್ದರಾಮನಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾದ ಎಲ್‍ಕೆಜಿಯ ಇಂಗ್ಲೀಷ್ ಮಾಧ್ಯಮ ತರಗತಿಗೆ 30 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಎಲ್‍ಕೆಜಿ ಕನ್ನಡ ಮಾಧ್ಯಮಕ್ಕೆ ಒಂದೇ ಒಂದು ದಾಖಲಾತಿಯೂ ಆಗಿಲ್ಲ. ಹೀಗಾಗಿ ಒಂದನೇ ತರಗತಿಯ ಕನ್ನಡ ತರಗತಿಗಳು ಖಾಲಿ ಖಾಲಿಯಾಗಿವೆ.

    ಮೈಸೂರು ಜಿಲ್ಲೆಯ 29 ಶಾಲೆಗಳಲ್ಲೂ ಇದೆ ಸ್ಥಿತಿ ಇದೆ. ಜಿಲ್ಲೆಯ 46 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭವಾಗಿದೆ. ಇದರಲ್ಲಿ 29 ಕನ್ನಡ ಮಾಧ್ಯಮ ಶಾಲೆಗಳಿಗೆ ಪೋµಕರು ಮಕ್ಕಳನ್ನು ಕಳಿಸಿಲ್ಲ.

    30 ಸಾವಿರ ರೂ. ನೀಡಿ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮವಿರುವ ಖಾಸಗಿ ಶಾಲೆಗಳಿಗೆ ಕಳುಹಿಸಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸರ್ಕಾರವೇ ಇಂಗ್ಲೀಷ್ ಮಾಧ್ಯಮ ಆರಂಭಿಸಿದ್ದು ನಮಗೆ ಹೆಚ್ಚು ಅನುಕೂಲವಾಗಿದೆ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.

    ಇಂಗ್ಲೀಷ್ ಭಾಷೆಯ ಜ್ಞಾನ, ಸಂವಹನ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳನ್ನು ಖಾಸಗಿ ಸೇರಿಸಲು ಹೋದರೆ ನಮಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗುತ್ತದೆ. ಏಕೆಂದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ವ್ಯವಹಾರವಾಗಿ ಪರಿಣಮಿಸಿದೆ ಎಂದು ಪೋಷಕರು ಹೇಳಿದ್ದಾರೆ.

    ಮಾಜಿ ಸಿಎಂ ಹೇಳಿದ್ದೇನು?:
    ಸಿದ್ದರಾಮಯ್ಯನವರ ವಿರೋಧದ ನಡುವೆಯೂ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಆರಂಭಿಸಿ ಸವಾಲು ಹಾಕಿದರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸುವುದಕ್ಕೆ ವೈಯಕ್ತಿಕವಾಗಿ ವಿರೋಧ ವ್ಯಕ್ತಪಡಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು. ಈ ವಿಚಾರಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೆ ತಂದರೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಹಾಗೂ ತಡೆಹಿಡಿಯುತ್ತೇನೆ ಎಂದು ಹೇಳಿದ್ದರು.

    ಎಂ.ಮಹೇಶ್ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದಾಗ ಅವರಿಗೆ ಕರೆ ಮಾಡಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ವಿಚಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸದಂತೆ ಹೇಳಿದ್ದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡ ಅಂತ ಸೂಚಿಸಿದ್ದೆ ಎಂದು ತಿಳಿಸಿದ್ದರು.

  • ರಿಷಬ್ ಶೆಟ್ಟಿ ಚಿತ್ರ ಸ್ಫೂರ್ತಿ – ಸರ್ಕಾರಿ ಶಾಲೆ ದತ್ತು ಪಡೆದ ಅಕುಲ್ ಬಾಲಾಜಿ

    ರಿಷಬ್ ಶೆಟ್ಟಿ ಚಿತ್ರ ಸ್ಫೂರ್ತಿ – ಸರ್ಕಾರಿ ಶಾಲೆ ದತ್ತು ಪಡೆದ ಅಕುಲ್ ಬಾಲಾಜಿ

    ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಈ ಚಿತ್ರವನ್ನು ನೋಡಿ ಟಿವಿ ನಿರೂಪಕ ಅಕುಲ್ ಬಾಲಾಜಿ ಅವರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

    ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ಎಂದು ರಿಷಬ್ ಶೆಟ್ಟಿ ತಮ್ಮ ಚಿತ್ರದಲ್ಲಿ ತಿಳಿಸಿದ್ದರು. ಈ ಚಿತ್ರವನ್ನು ವೀಕ್ಷಿಸಿದ್ದ ಅಕುಲ್ ಅವರು ಇದರಿಂದ ಸ್ಫೂರ್ತಿ ಪಡೆದು, ಬೆಂಗಳೂರಿನ ಹೊರವಲಯದ ಲಗುಮೇನಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಸಿನಿಮಾ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ, ಒಬ್ಬರ ಜೀವನಕ್ಕೆ ಸ್ಫೂರ್ತಿ ನೀಡುವ ಶಕ್ತಿ ಸಿನಿಮಾಕ್ಕಿದೆ ಎನ್ನುವುದು ಈ ಮೂಲಕ ಸಾಬೀತಾಗಿದೆ.

    ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವ ಬಗ್ಗೆ ತಮ್ಮ ಗೆಳೆಯರು ಮತ್ತು ಕುಟುಂಬದ ಜತೆಗೆ ಚರ್ಚಿಸಿ ಅಕುಲ್ ಅದರ ಉಳಿವಿಗೆ ನೆರವಾಗಿದ್ದಾರೆ. ಈ ನಿರ್ಧಾರಕ್ಕೆ ಬರಲು ಸರ್ಕಾರಿ ಹಿ.ಪ್ರಾ. ಶಾಲೆ ಸಿನಿಮಾ ಕಾರಣ. ಸಿನಿಮಾ ನೋಡಿದ ಬಳಿಕ ಸರ್ಕಾರಿ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ತಿಳಿದು ಬೇಜಾರಾಯಿತು. ಆದರಿಂದ ಲಗುಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ.

    ನಾನು ಆಗಾಗ ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತೇನೆ. ಆದರಿಂದ ಶಾಲೆಯ ಬಗ್ಗೆ ಗಮನ ಹರಿಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ, ದತ್ತು ಪಡೆಯಲು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

    ಈ ಶಾಲೆಯಲ್ಲಿ 66 ಮಂದಿ ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷಕರಿದ್ದಾರೆ. ಈ ಇಬ್ಬರು ಶಿಕ್ಷಕರಲ್ಲಿ ಒಬ್ಬರು ವೈಯಕ್ತಿಕ ಕಾರಣಗಳಿಂದ ಇತ್ತೀಚೆಗಷ್ಟೇ ಕೆಲಸ ಬಿಟ್ಟಿದ್ದಾರೆ. ಇಲ್ಲಿ ಶೌಚಾಲಯ ಹಾಗೂ ಇತರೇ ಸೌಲಭ್ಯಗಳಿಲ್ಲದ ಕಾರಣ ಬಹುತೇಕ ವಿದ್ಯಾರ್ಥಿಗಳ ಶಾಲೆಗೆ ಬರುತ್ತಿರಲಿಲ್ಲ ಎಂದರು.

    ಈ ಶಾಲೆಗೆ ಭೇಟಿ ನೀಡಿದ ಬಳಿಕ ಸ್ವತಃ ಅಕುಲ್ ಅವರೇ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ, ತಾವೇ ಇನ್ನೊಬ್ಬ ಶಿಕ್ಷಕರನ್ನು ಶಾಲೆಗೆ ನೇಮಿಸಿ, ಅವರಿಗೆ ಸಂಬಳ ಕೂಡ ನೀಡುತ್ತಿದ್ದಾರೆ. ಸದ್ಯ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.  ಇದೇ ಮಾರ್ಚ್ ಕೊನೆಗೆ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು,  ಆ ದಿನವೇ ಅಧಿಕೃತವಾಗಿ ಅಕುಲ್ ಶಾಲೆಯನ್ನು ದತ್ತು ಪಡೆಯಲಿದ್ದಾರೆ.

  • ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    ಕೊಡಗಿನ ಶಿಕ್ಷಕನಿಂದ ಕಾನ್ಫರೆನ್ಸ್ ಕಾಲ್ ಟೀಚಿಂಗ್ – ಶಹಬ್ಬಾಸ್ ಎಂದ ಪೋಷಕರು

    – ಮುಳ್ಳೂರು ಶಾಲೆಯ ವಿದ್ಯಾರ್ಥಿಗಳಿಗೆ ಪಾಠ
    – ಶಾಲೆಯ ಆವರಣದಲ್ಲಿ ವಿಜ್ಞಾನ ಮಾದರಿ

    ಮಡಿಕೇರಿ: ಕೊಡಗಿನ ಸರ್ಕಾರಿ ಶಾಲೆಯ ಶಿಕ್ಷರೊಬ್ಬರು ಮಕ್ಕಳಿಗೆ ಉಪಯುಕ್ತವಾಗಲೆಂದು ಕಾನ್ಫರೆನ್ಸ್ ಕಾಲ್ ಟೀಚಿಂಗ್ ಮಾಡುವ ಮೂಲಕ ಪೋಷಕರ ಮನ ಗೆದ್ದಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವಿನೂತನ ಕಲಿಕೆ ವಿಧಾನವನ್ನು ಬಳಸಲಾಗುತ್ತಿದೆ. ಇಲ್ಲಿನ ಶಿಕ್ಷಕ ಸತೀಶ್ ಅವರು ಟೆಕ್ನಾಲಜಿ ಬಳಸಿ ವಿನೂತನ ರೀತಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

    ಇವರ ಈ ವಿಶೇಷ ಪಾಠದ ಪ್ಲಾನ್‍ನಿಂದ ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಕೂಡ ಸಂಜೆ ಮನೆಯಲ್ಲಿಯೇ ಸಂಜೆ ವೇಳೆ ಪಾಠ ಕೇಳ್ತಿದ್ದಾರೆ. ಶಾಲೆಯ ಪಾಠ ಅರ್ಥವಾಗದ ಮಕ್ಕಳು ಮತ್ತೆ ಪಾಠ ಕೇಳಿ ಕಲಿಯುತ್ತಿದ್ದಾರೆ. ಈ ವಿಭಿನ್ನ ಪ್ರಯೋಗ ಮಕ್ಕಳಿಗೂ, ಪೋಷಕರಿಗೂ ಖುಷಿ ಕೊಟ್ಟಿದೆ.

    ಶಾಲೆಯ ಆವರಣದ ಸುತ್ತಲೂ ಸೈನ್ಸ್ ಮಾಡೆಲ್‍ಗಳನ್ನು ನಿರ್ಮಿಸಲಾಗಿದೆ. ಈ ಮಾಡೆಲ್‍ಗಳನ್ನು ನೋಡಿ ಕಲಿತು, ಅದರ ಕೆಲಸದ ಬಗ್ಗೆ ಇಲ್ಲಿನ ಮಕ್ಕಳು ವಿವರಿಸುತ್ತಾರೆ. ಕಾಲೇಜು ಮಟ್ಟದ ಪ್ರಾಕ್ಟಿಕಲ್ ಟೀಚಿಂಗ್ ಕೂಡ ಅಲ್ಲಿದೆ. ಟೆಕ್ನಾಲಜಿಯನ್ನ ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಶಿಕ್ಷಕ ಸತೀಶ್ ಇಲ್ಲಿನ ಮಕ್ಕಳಿಗೆ ಕಲಿಸುತ್ತಿದ್ದಾರೆ.

    ಹೇಗೆ ಕಾನ್ಫರೆನ್ಸ್ ಕಾಲ್?
    ಸಿಟಿಯ ಹೈಫೈ ಶಾಲೆಗಳಲ್ಲಿ ಮಕ್ಕಳಿಗೆ ವಾಟ್ಸಾಪ್ ಗ್ರೂಪ್ ಮಾಡಿ ಟೀಚ್ ಮಾಡುವಂತಹದ್ದು ಗ್ರಾಮೀಣ ಭಾಗಕ್ಕೆ ಆಗಲ್ಲ, ಅದರ ಬದಲಿಗೆ ಬಂದಿರೋದೆ ಕಾನ್ಫರೆನ್ಸ್ ಕಾಲ್ ಟೀಚಿಂಗ್. ಇದು ತುಂಬಾ ಸಿಂಪಲ್. ಸಂಜೆ ಮಕ್ಕಳು ಮನೆಗೆ ಹೋದ್ಮೇಲೆ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಕಾನ್ಫರೆನ್ಸ್ ಕಾಲ್ ಟೀಚಿಂಗ್ ಸಮಯ ಫಿಕ್ಸ್ ಆಗಿರುತ್ತೆ. ಏಕಕಾಲದಲ್ಲಿ ಎಂಟರಿಂದ ಹತ್ತು ವಿದ್ಯಾರ್ಥಿಗಳನ್ನು ಕರೆಯಲ್ಲಿ ನಿರತರಾಗುವಂತೆ ಮಾಡಿ ಬೋಧನೆ ಮಾಡಬಹುದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪ್ರತಿನಿತ್ಯ ಈ ಮೂಲಕ ಗಮನಿಸಬಹುದು. ಕೆಲ ಮನೆಗಳಲ್ಲಿ ಪೋಷಕರು ಹಲವು ಕಾರಣಗಳಿಂದ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಅಂತಹ ಮಕ್ಕಳ ಬಗ್ಗೆ ಕೂಡ ನಿಗಾ ವಹಿಸಲು ಇದು ನೆರವಾಗುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.

    ಪ್ರಸ್ತುತ ನಾನು 3, 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನಕ್ಕೊಂದು ವಿಷಯದಂತೆ ಕಾನ್ಫರೆನ್ಸ್ ಕಾಲ್ ಮೂಲಕ ಬೋಧಿಸುತ್ತಿದ್ದೇನೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಕಲಿಯುತ್ತಿದ್ದು, ಸಂಜೆ ತಮ್ಮ ಬರವಣಿಗೆಗಳನ್ನು ಬೇಗ ಬೇಗ ಮುಗಿಸಿಕೊಂಡು ಶಿಕ್ಷಕರ ಕರೆಗಾಗಿ ಕಾಯುತ್ತಿರುತ್ತಾರೆ. ಇದಕ್ಕೆ ಪೋಷಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕಾನ್ಫರೆನ್ಸ್ ಕಾಲ್ ಟೀಚಿಂಗ್ ಬಳಿಕ ಅದನ್ನು ರೆಕಾರ್ಡ್ ಮಾಡಿಕೊಂಡು ಅತಿ ಉಪಯುಕ್ತ ತರಗತಿಗಳನ್ನು ಶಿಕ್ಷಕರು ಇತರ ಕೆಲಸದಲ್ಲಿ ನಿರತರಾದಾಗ ಮಕ್ಕಳಿಗೆ ಕೇಳಿಸುತ್ತಿದ್ದಾರೆ ಎಂದು ಸತೀಶ್ ಹೇಳಿದ್ದಾರೆ. ಸತೀಶ್ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಭೂತ ಬಂಗಲೆಯಂತಾದ ಸರ್ಕಾರಿ ಶಾಲೆ-ಪಾಳು ಬಿದ್ದ ಕಟ್ಟಡದಲ್ಲಿಯೇ ಮಕ್ಕಳಿಗೆ ಪಾಠ

    ಭೂತ ಬಂಗಲೆಯಂತಾದ ಸರ್ಕಾರಿ ಶಾಲೆ-ಪಾಳು ಬಿದ್ದ ಕಟ್ಟಡದಲ್ಲಿಯೇ ಮಕ್ಕಳಿಗೆ ಪಾಠ

    ಚಿತ್ರದುರ್ಗ: ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿ ತರೋದರ ಜೊತೆಗೆ ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆಯನ್ನು ನೀವು ನೋಡಿದ್ರೆ ಬಿಡುಗಡೆ ಆಗುತ್ತಿರೋ ಹಣವೆಲ್ಲಾ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಜಿಲ್ಲೆಯ ಹೊಳಲ್ಕರೆ ತಾಲೂಕಿನ ಕೊಳಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಭೂತ ಬಂಗಲೆಯಂತೆ ಕಾಣುತ್ತಿದೆ. ಇಂತಹ ಪಾಳು ಬಿದ್ದ ಕಟ್ಟಡದಲ್ಲಿಯೇ ಮಕ್ಕಳು ಪಾಠವನ್ನು ಕಲಿಯುತ್ತಿದ್ದಾರೆ.

    ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ ಉತ್ತಮ ವ್ಯವಸ್ಥೆ ಮಾತ್ರ ಈವರೆಗೆ ಕಲ್ಪಿಸಲಾಗಿಲ್ಲ. ಈ ಬಗ್ಗೆ ಕೇಳಿದ್ರೆ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯ ಶಿಕ್ಷಕ ಹನುಮಂತಪ್ಪ ಹೇಳುತ್ತಾರೆ.

    ಹಳೆಯ ಶಾಲಾ ಕೊಠಡಿಗಳಲ್ಲಿ ಇಂದಿಗೂ ಇಲ್ಲಿ ಶಾಲೆ ನಡೆಸಲಾಗುತ್ತಿದೆ. ಹೀಗಾಗಿ, ಮಳೆಗಾಲದಲ್ಲಂತೂ ಶಾಲೆಯ ಗೋಡಗಳು ಯಾವಾಗ ಕುಸಿಯುತ್ತವೆ ಎಂಬ ಆತಂಕದಿಂದ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುತ್ತಿದ್ದಾರೆ. ಬೇಸಿಗೆಯಲ್ಲಿ ಕಾದ ಕಬ್ಬಿಣದಂತಾದ ಮೇಲ್ಛಾವಣೆಯಿಂದ ತೂರಿ ಬರುವ ಬಿಸಿಲ ಜಳ ಮಕ್ಕಳ ಮೈ ಬೆವರುವಂತೆ ಸುಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ಡಿಡಿಪಿಐ ಕಚೇರಿವರೆಗೆ ಬಂದು ಧರಣಿ ನಡೆಸಿ ಶಾಲಾ ಕಟ್ಟಡಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

    ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಕೊಳಾಳು ಗ್ರಾಮದ ಸರ್ಕಾರಿ ಶಾಲೆ ದುಸ್ಥಿತಿಯಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕದಲ್ಲೇ ವಿದ್ಯಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಂತ ಖರ್ಚಿನಲ್ಲಿ ಶಾಲೆಗೆ, ಗ್ರಾಮಕ್ಕೆ ಬೆಳಕು ತಂದ್ರು ಶಿಕ್ಷಕ ಮೋಹನ್ ಕುಮಾರ್

    ಸ್ವಂತ ಖರ್ಚಿನಲ್ಲಿ ಶಾಲೆಗೆ, ಗ್ರಾಮಕ್ಕೆ ಬೆಳಕು ತಂದ್ರು ಶಿಕ್ಷಕ ಮೋಹನ್ ಕುಮಾರ್

    ರಾಯಚೂರು: ಏನೂ ಇಲ್ಲದ ಜಾಗದಲ್ಲಿ ಸುಂದರ ಶಾಲೆಯನ್ನ ಕಟ್ಟಿ “ಮಕ್ಕಳ ಕಾಡು” ಅಂತ ಹೆಸರಿಟ್ಟು ಮಾದರಿ ಶಾಲೆಯನ್ನಾಗಿ ಮಾಡುವ ಮೂಲಕ ಶಿಕ್ಷಕ ಮೋಹನ್ ಕುಮಾರ್ ಪಬ್ಲಿಕ್ ಹೀರೋ ಆಗಿದ್ದಾರೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಕೊರವಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಮೋಹನ್ ಕುಮಾರ್ ಸ್ವಂತ ಖರ್ಚಿನಲ್ಲಿ ಶಾಲೆಗೆ ವಿದ್ಯುತ್ ಅಳವಡಿಸಿ ಗ್ರಾಮಕ್ಕೆ ಬೆಳಕಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದ ಇವರು ಮೂಲತಃ ಮಂಡ್ಯದವರು. ಮೋಹನ್ ಕುಮಾರ್ ಅವಿರತ ಶ್ರಮದಿಂದ ಇಂದು ಈ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಸರ್ಕಾರಿ ಶಾಲೆಯನ್ನು ತಿದ್ದಿ ತೀಡಿದ್ದಾರೆ. ಮೋಹನ್ ಕುಮಾರ್ ಅವರ ಕೆಲಸವನ್ನು ಮೆಚ್ಚಿದ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ದಾನ ಮಾಡಲು ಮುಂದಾಗಿದ್ದಾರೆ.

    ಶಾಲೆಗೆ ಸ್ವಂತ ಖರ್ಚಿನಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿರೋ ಮೋಹನ್ ಕುಮಾರ್ ಈಗ ಗ್ರಾಮಕ್ಕೂ ಬೆಳಕಾಗಿದ್ದಾರೆ. ಸತತ ಆರು ಕಡೆ ಬೋರ್‍ವೆಲ್ ಕೊರೆಸಿ ವಿಫಲರಾದರೂ ಛಲ ಬಿಡದೆ, ಶಾಲೆಯಿಂದ ಒಂದು ಕಿ.ಮೀ ದೂರದಲ್ಲಿ ಬೋರ್‍ವೆಲ್ ಕೊರೆಸಿ ಕುಡಿಯುವ ನೀರಿನ ಬವಣೆ ನೀಗಿಸಲು ಶ್ರಮಿಸಿದ್ದಾರೆ. ಶಾಲೆಯ ಆವರಣದಲ್ಲಿ ಮಕ್ಕಳಿಂದಲೇ ಬೆಳೆಸುತ್ತಿರುವ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗ್ತಿದೆ. ಮೊದಲೆಲ್ಲಾ ಖಾಸಗಿ ಶಾಲೆಗಳತ್ತ ಮುಖ ಮಾಡಿದವರು ಈಗ ಸರ್ಕಾರಿ ಶಾಲೆಗೆ ಜೈ ಎನ್ನುತ್ತಿದ್ದಾರೆ. ಈಗ 234 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದು, ಇದಕ್ಕೆ ಶಿಕ್ಷಕ ಮೋಹನ್ ಅವರೇ ಕಾರಣ ಎಂದು ಗ್ರಾಮಸ್ಥರು ಶಿಕ್ಷಕರು ಕೆಲಸವನ್ನು ಶ್ಲಾಘಿಸುತ್ತಿದ್ದಾರೆ.

    ಶಾಲೆಯಲ್ಲಿ ಕೇವಲ 5 ಕೊಠಡಿ ಇರುವುದರಿಂದ ದಾನಿಗಳ ನೆರವಿನಿಂದ ಮೋಹನ್ ಕುಮಾರ್ ಸದ್ಯ ಗುಡಿಸಲು ಮಾದರಿಯ ಕೆಲ ಶಾಲಾ ಕೊಠಡಿ ನಿರ್ಮಿಸಿದ್ದಾರೆ. ಜನಪ್ರತಿನಿಧಿಗಳ ಬೆನ್ನುಬಿದ್ದು 300 ಮೀಟರ್ ಕಾಂಪೌಂಡ್, ಗೇಟ್ ವ್ಯವಸ್ಥೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ಫೋಸಿಸ್‍ನವರು ಈ ಶಾಲೆಗೆ 5 ಕಂಪ್ಯೂಟರ್ ನೀಡಿದ್ದಾರೆ, ಸೆಲ್ಕೋಸೋಲಾರ್ ಕಂಪನಿ ಸ್ಮಾರ್ಟ್ ಕ್ಲಾಸ್ ಅಳವಡಿಸಿದ್ದಾರೆ. ಈ ಶಾಲೆಗೆ ಬರುತ್ತಿರುವ ಪ್ರತಿ ಮಕ್ಕಳಿಗೂ ಐಡಿ ಕಾರ್ಡ್ ನೀಡಿ ಶಿಸ್ತುಪಾಲನೆ ಮಾಡಲಾಗುತ್ತಿದೆ.

    ಶಾಲೆಯ ಏಳಿಗೆಗಾಗಿ ಹಾಗೂ ಮಕ್ಕಳನ್ನ ಶಾಲೆಗೆ ಕರೆತರಬೇಕು ಅನ್ನೋ ಕಾರಣಕ್ಕೆ ಶಾಲಾ ಅಭಿವೃದ್ದಿಗೆ ಮುಂದಾದ ಶಿಕ್ಷಕ ಮೋಹನ್ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.

    https://www.youtube.com/watch?v=Gvhdclsw3GU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ಉಡುಪಿ: ಖಾಸಗಿ ಶಾಲೆಗಳ ಆರ್ಭಟ ಮತ್ತು ಪೋಷಕರ ಅತಿಯಾದ ಆಂಗ್ಲ ಮಾಧ್ಯಮದ ಒಲವಿನಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆದರೆ ಉಡುಪಿಯ ಬ್ರಹ್ಮಾವರ ತಾಲೂಕಿನ ಬಾರಾಳಿಯ ಶಿಕ್ಷಕರಾದ ರಾಜಾರಾಮ್ ಅವರು ಕನ್ನಡ ಶಾಲೆಗಳ ಉಳಿಸಲು ಹಗಲಿರುಳು ಪ್ರಯತ್ನ ಮಾಡುತ್ತಿದ್ದಾರೆ.

    ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ್ ಅವರು, ಬೆಳಗ್ಗೆ 7 ಗಂಟೆಗೆ ಎದ್ದು ಶಾಲೆಯ ಬಸ್ಸಿನ ಚಾಲಕನ ಸೀಟು ಏರಿ 87 ಮಕ್ಕಳನ್ನು ಕರೆದುಕೊಂಡು ಬೆಳಗ್ಗೆ 9.15ಕ್ಕೆ ಶಾಲೆಗೆ ಬರುತ್ತಾರೆ. ಮತ್ತೆ ಸಂಜೆ ತರಗತಿ ಬಿಟ್ಟ ಕೂಡಲೇ ಎಲ್ಲಾ ಮಕ್ಕಳನ್ನು ಮನೆಗೆ ಬಿಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಹಳ್ಳಿಗಾಡಿನ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದಾಗ ಶಾಲೆಯ ಹಳೆ ವಿದ್ಯಾರ್ಥಿ ವಿಜಯ ಹೆಗ್ಡೆ ಎಂಬುವವರು ಸ್ಕೂಲ್ ಬಸ್ ಖರೀದಿಸಿ ಶಾಲೆಗೆ ಕೊಟ್ಟಿದ್ದಾರೆ. ಬಸ್‍ಗೆ ಚಾಲಕ ಹಾಗೂ ಸಹಾಯಕ, ಡೀಸೆಲ್ ಹಾಗೂ ನಿರ್ವಹಣೆ ಮಾಡಲು ತಿಂಗಳಿಗೆ ಸಾವಿರಾರು ರೂ. ಖರ್ಚಾಗುತ್ತಿತ್ತು. ಶಾಲೆಯಲ್ಲಿ ಹೆಚ್ಚಿನ ಅನುದಾನ ಇಲ್ಲದೇ ಬಸ್ ಓಡಾಟ ನಿಲ್ಲಿಸಬೇಕೆಂದಿದ್ದಾಗ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ ಅವರು ತಾವು ಡ್ರೈವರ್ ಆಗಲು ಮುಂದೆ ಬಂದಿದ್ದಾರೆ. ದಿನಕ್ಕೆ 8 ಟ್ರಿಪ್ ಡ್ರೈವರ್ ಆಗಿ ಕೆಲಸ ಮಾಡುವ ರಾಜಾರಾಮ್ ಮೇಷ್ಟ್ರು, ಬಸ್ ನಿರ್ವಹಣೆಗೆ ಈವರೆಗೆ 70 ಸಾವಿರ ರೂ. ಸಂಬಳದ ಹಣ ಖರ್ಚು ಮಾಡಿದ್ದಾರೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಉಳಿದಂತೆ ದೈಹಿಕ ಶಿಕ್ಷಣದ ಜೊತೆಗೆ ವಿಜ್ಞಾನ ಮತ್ತು ಗಣಿತವನ್ನೂ ಬೋಧಿಸುತ್ತಾರೆ.

    ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಕಳೆದ 2 ಎರಡು ವರ್ಷದಿಂದ ಈ ಎಲ್ಲಾ ಸೇವೆಯನ್ನು ಒಂದು ದಿನವೂ ತಪ್ಪದೆ ಮಾಡುತ್ತಿರುವ ರಾಜಾರಾಮ್ ಮೇಷ್ಟ್ರು, ಮಕ್ಕಳು ಹಾಗೂ ಪೋಷಕರು ಸೇರಿದಂತೆ ಸಹ ಶಿಕ್ಷಕರ ಅಕ್ಕರೆಗೆ ಪಾತ್ರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಮಕ್ಕಳ ಅಕ್ಷರ ಆಸಕ್ತಿಗೆ ಬೇಕಿದೆ ಸೂರು

    ಹಳ್ಳಿ ಮಕ್ಕಳ ಅಕ್ಷರ ಆಸಕ್ತಿಗೆ ಬೇಕಿದೆ ಸೂರು

    ಕೋಲಾರ: ಬಿರುಕು ಬಿಟ್ಟಿರುವ ಶಾಲಾ ಕೊಠಡಿ, ಬೀಳುವ ಸ್ಥಿತಿಯಲ್ಲಿರೋ ಕಿಟಕಿಗಳು ಇದು ಕೋಲಾರ ತಾಲೂಕಿನ ತಲಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆ ಯಾವಾಗ ಬೀಳುತ್ತೋ ಎಂಬ ಭಯದಲ್ಲಿ ಶಿಕ್ಷಕರು ಪಾಠ ಮಾಡಿದ್ರೆ, ಜೀವದ ಹಂಗು ತೊರೆದು ಮಕ್ಕಳು ಪಾಠ ಕೇಳುತ್ತಾರೆ.

    ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬರೋಬ್ಬರಿ 65 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುದ್ದಾರೆ. ಖಾಸಗಿ ಶಾಲೆಗಳ ಪ್ರಬಲ ಪೈಪೋಟಿಯ ಮಧ್ಯೆಯೂ ಈ ಶಾಲೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಬರುತ್ತಿದ್ದಾರೆ. ಕಿತ್ತು ತಿನ್ನುವ ಬಡತನವಿದ್ದರೂ ಓದಿ ಸಾಧಿಸಬೇಕೆಂಬ ಛಲವನ್ನು ಈ ಶಾಲೆಯ ವಿದ್ಯಾರ್ಥಿಗಳು ಹೊಂದಿದ್ದಾರೆ.

    ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಎರಡು ಕೊಠಡಿಗಳ ಕಿಟಕಿ ಬಾಗಿಲುಗಳು ಕಿತ್ತು ಹೋಗಿದ್ದು ಬೀಳುವ ಹಂತ ತಲುಪಿದೆ. ಮಕ್ಕಳು ಯಾವಾಗ ಗೋಡೆ ಕುಸಿಯುತ್ತೋ ಎಂಬ ಭಯದಲ್ಲೇ ದಿನ ದೂಡುತ್ತಿದ್ದಾರೆ. ಸದ್ಯ ಶಿಕ್ಷಕರು ವರಾಂಡದಲ್ಲಿ ಪಾಠ ಹೇಳಿ ಕೊಡುತ್ತಿದ್ದಾರೆ. ಮಳೆ ಬಂತೆಂದರೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಇನ್ನೂ ಈ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಹಲವೆಡೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದೇ ಶಾಲೆಯನ್ನು ಮುಚ್ಚಲಾಗುತ್ತಿದೆ. ಆದ್ರೆ ಇಲ್ಲಿ ಮೂಲಭೂತ ಸೌಕರ್ಯ ಇಲ್ಲದಿದ್ದರೂ ಕಲಿಯಬೇಕೆಂದು ಬರುವ ಈ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸಮಸ್ಯೆ ಪರಿಹರಿಸಿಲ್ಲ. ದಯವಿಟ್ಟು ಬೆಳಕು ಮೂಲಕವಾದ್ರೂ ನಮಗೆ ಸಹಾಯ ಮಾಡಿ ಅಂತ ಈ ಮಕ್ಕಳು ಪಬ್ಲಿಕ್ ಟಿವಿಗೆ ಬಂದಿದ್ದಾರೆ.

    https://www.youtube.com/watch?v=dVXklPj4W28

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 50ಕ್ಕೂ ಹೆಚ್ಚು ಮಕ್ಕಳಿದ್ದಲ್ಲಿ ಈಗ 3 ವಿದ್ಯಾರ್ಥಿಗಳು- ಇದು ಬಂಡೆಮ್ಮ ಸರ್ಕಾರಿ ಶಾಲೆಯ ಕಥೆ

    50ಕ್ಕೂ ಹೆಚ್ಚು ಮಕ್ಕಳಿದ್ದಲ್ಲಿ ಈಗ 3 ವಿದ್ಯಾರ್ಥಿಗಳು- ಇದು ಬಂಡೆಮ್ಮ ಸರ್ಕಾರಿ ಶಾಲೆಯ ಕಥೆ

    ಗದಗ: ಜಿಲ್ಲೆಯ ನರಗುಂದ ತಾಲೂಕಿನ ಬಂಡೆಮ್ಮ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹೇಳೋಕೆ ಸರ್ಕಾರಿ ಶಾಲೆಯಾದ್ರು ಇಲ್ಲಿ ಇರೋದು ಮಾತ್ರ ಕೇವಲ 3 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕ.

    ಹೌದು, ಬಂಡೆಮ್ಮ ನಗರದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓರ್ವ ಶಿಕ್ಷಕನಿದ್ದು ಕೇವಲ 3 ಜನ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕ ಎಚ್.ಎಸ್ ಸುಂಕದ ಈ ಮೂರು ಮಕ್ಕಳ ಪೋಷಕರನ್ನು ಕಾಡಿ, ಬೇಡಿ, ಕರೆತರುತ್ತಾರೆ. ನರಗುಂದ ಪಟ್ಟಣದಿಂದ 6 ಕಿಲೋಮೀಟರ್ ದೂರದಲ್ಲಿರುವ ಬಂಡೆಮ್ಮ ನಗರದಲ್ಲಿ 50 ಕ್ಕೂ ಹೆಚ್ಚು ರೈತ ಕುಟುಂಬಗಳಿವೆ. ಈಗ ಶಾಲೆಗೆ ಬರೋ ಮಕ್ಕಳಲ್ಲಿ ಕೇವಲ 3 ವಿದ್ಯಾರ್ಥಿಗಳಿದ್ದು, ಅಕ್ಷರಶಃ ಬಂಡೆಮ್ಮನಗರದ ಪ್ರಾಥಮಿಕ ಶಾಲೆ ಅನಾಥವಾಗಿದೆ.

    ನಾನೊಬ್ಬ ಪದವಿಧರನಾಗಿ ನನ್ನಲ್ಲಿರುವ ಜ್ಞಾನವನ್ನ ಮಕ್ಕಳಿಗೆ ಹೇಳಬೇಕೆಂಬ ಆಸೆ, ಆದ್ರೆ ಈ ಶಾಲೆಗೆ ಮಕ್ಕಳೇ ಬರೋದಿಲ್ಲ. ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿಕೊಂಡರು ಪ್ರಯೋಜವಾಗ್ತಿಲ್ಲ. ಸುಖಾ ಸುಮ್ಮನೇ ತಿಂಗಳ ಸಂಬಳ ಪಡೆಯೋಕೆ ಮನಸ್ಸು ಒಪ್ಪುತ್ತಿಲ್ಲ ಅಂತ ಶಾಲೆಯ ಶಿಕ್ಷಕ ಎಚ್.ಎಸ್ ಸುಂಕದ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

    ಇನ್ನು ಗದಗ ಜಿಲ್ಲೆಯ ಬಂಡೆಮ್ಮ ನಗರದಲ್ಲಿ 2000 ರಲ್ಲಿ ಕಿರಿಯ ಪ್ರಾಥಮಿಕ ಶಾಲೆ ತೆರೆಯಲಾಯಿತು. ಮೊದ ಮೊದಲು 50 ಕ್ಕೂ ಹೆಚ್ಚು ಮಕ್ಕಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈಗ 3+1 ಅನ್ನೊ ಹಾಗೆ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಶಾಲೆಯಲ್ಲಿ 1 ರಿಂದ 5 ತರಗತಿ ಇದ್ದು, 1ನೇ ಕ್ಲಾಸ್ ಅಪ್ಸಾನಾ, 2ನೇ ಕ್ಲಾಸ್ ಸುಭಾಷ್ ಕುಳಗೇರಿ, 5 ನೇ ಕ್ಲಾಸ್ ಕೌಸರ್ ಬಾನು ಎಂಬ ಮೂವರು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ.

    ಶಾಲೆಯಲ್ಲಿ ಇರೋ ಮೂರು ಮಕ್ಕಳಲ್ಲಿ ಕೆಲವೊಮ್ಮೆ ಯಾವೊಂದು ಮಗುವೂ ತರಗತಿಗೆ ಹಾಜರಾಗಲ್ಲ. ಆ ವೇಳೆ ಶಿಕ್ಷಕ ಒಬ್ಬನೆ ಕಾಲ ಕಳೆಯಬೇಕು. ಬಿಸಿಯೂಟ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಇಲ್ಲಿ ಮರಿಚಿಕೆಯಾಗಿವೆ. ಈಗ ಬಂಡೆಮ್ಮ ನಗರದ ಸರ್ಕಾರಿ ಶಾಲೆಗೆ ಮುಚ್ಚುವ ಭೀತಿ ಎದುರಾಗಿದೆ. ಇನ್ನು ಏನ್ ಸರ್ ಈ ಶಾಲೆಯ ಕಥೆ. ಸಮಸ್ಯೆ ಪರಿಹರಿಸೋಕೆ ಏನ್ ಮಾಡ್ತೀರಾ ಅಂತ ಡಿಡಿಪಿಐ ಅವರನ್ನು ಕೇಳಿದ್ರೆ, ನನ್ನ ಗಮನಕ್ಕೆ ಈ ವಿಷಯ ಬಂದಿಲ್ಲ. ನೋಡೋಣ ಅಧಿಕಾರಿಗಳೊಂದಿಗೆ ಮಾತನಾಡುತ್ತೀನಿ ಅಂತ ಶಿಕ್ಷಣ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಾರೆ.

    ಶಾಲೆಯಲ್ಲಿ ನಿತ್ಯ ಕೇಳಿಬರಬೇಕಿದ್ದ ಚಿಣ್ಣರ ಕಲರವ ಇಲ್ಲಿ ಮಾಯವಾಗಿದೆ. ಇಲ್ಲಿ ಶಿಕ್ಷಕರ ಪಾಠ ನಿಂತು ಹೋಗಿವೆ. ಶಾಲಾ ಕಟ್ಟಡವೀಗ ವಿಷಾದ ತುಂಬಿದ ಸೌಧದಂತಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲೇ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv