Tag: government school

  • ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

    ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

    ಕೊಪ್ಪಳ: ಒಬ್ಬ ವ್ಯಕ್ತಿ ಆಸಕ್ತಿ ತೋರಿದರೆ ಏನು ಬೇಕಾದರೂ ಬದಲಾವಣೆ ತರಬಹುದು ಎಂಬುದಕ್ಕೆ ಈ ಎಂಟು ವರ್ಷದ ವಿದ್ಯಾರ್ಥಿಯೇ ಉದಾಹರಣೆಯಾಗಿದ್ದು, ಈತನ ಕೋರ್ಟ್ ಹೋರಾಟದಿಂದಾಗಿ ರಾಜ್ಯದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಇದೀಗ ಎರಡು ಜೊತೆ ಸಮವಸ್ತ್ರ ಸಿಗುವಂತಾಗಿದೆ.

    ಎರಡು ಜೊತೆ ಸಮವಸ್ತ್ರ ನೀಡುವುದಾಗಿ ಹೇಳಿದ್ದ ಸರ್ಕಾರ 2019-20ರ ಶೈಕ್ಷಣಿಕ ವರ್ಷದಲ್ಲಿ ಒಂದೇ ಜೊತೆ ನೀಡಿತ್ತು. ಸರ್ಕಾರದ ಕ್ರಮ ಖಂಡಿಸಿ, ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ದೇವಪ್ಪ ಬಸಪ್ಪ ಹರಿಜನ ಅವರ ಪುತ್ರ ಎಂಟು ವರ್ಷದ ಮಂಜುನಾಥ್ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದು, ಅಂತಿಮವಾಗಿ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀ ಮಾರಿ ಹಾಕಿ, ಎರಡು ಜೊತೆ ಸಮವಸ್ತ್ರಗಳನ್ನು ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

    ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಪಿ.ಎಂ.ನವಾಜ್ ಅವರಿದ್ದ ವಿಭಾಗೀಯಪೀಠ ವಿಚಾರಣೆಗೆ ನಡೆಸಿದ್ದು, ಸರ್ಕಾರವನ್ನು ತರಾಟೆ ತಗೆದುಕೊಂಡಿದೆ. ಕಾನೂನು ಉಲ್ಲಂಘನೆ ಅಷ್ಟೇ ಅಲ್ಲ ಇದು ಶುಚಿತ್ವ ಪ್ರಶ್ನೆಯೂ ಆಗಿದೆ. ಈ ವಿಚಾರದಲ್ಲಿ ಸರ್ಕಾರಗಳು ನೆಪ ಹೇಳಬಾರದು ಇಂತಹ ಸಾಮಾನ್ಯ ವಿಚಾರಗಳಿಗೆ ಜನ ಹೈಕೋರ್ಟ್‍ಗೆ ಬರಬೇಕೇ ಎಂದು ನ್ಯಾಯ ಪೀಠ ಸರ್ಕಾರದ ಕ್ರಮದ ವಿರುದ್ಧ ಕಿಡಿ ಕಾರಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡೂ ಸಮಾನ ಹೊಣೆಗಾರಿಕೆ ಹೊತ್ತು ವಿದ್ಯಾರ್ಥಿಗಳಿಗೆ ಸಮಸವಸ್ತ್ರ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ವಿಧ್ಯಾರ್ಥಿ ಪರವಾಗಿ ವಕೀಲ ಅಂಜಿತ್ ಶೆಟ್ಟಿ ಉಚಿತವಾಗಿ ವಾದ ಮಾಡಿದ್ದರು.

    ವಿದ್ಯಾರ್ಥಿಯ ವಾದ ಏನಿತ್ತು?
    ಸರ್ಕಾರವೇ ಎರಡು ಜೊತೆ ಬಟ್ಟೆಗಳನ್ನು ನೀಡುವದಾಗಿ ಈ ಹಿಂದೆ ಆದೇಶಿಸಿದೆ. ಆದರೆ, ಇದೀಗ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರವನ್ನು ಹಾಗೂ ಇನ್ನೊಂದು ಜೊತೆ ಕೇವಲ ಬಟ್ಟೆಯನ್ನು ನೀಡುತ್ತಿದೆ. ಅಲ್ಲದೆ, ಬಹುತೇಕ ಕಡೆ ಸಮವಸ್ತ್ರವನ್ನೇ ನೀಡಿಲ್ಲ. ಆದರೆ ಸರ್ಕಾರದ ಆದೇಶದ ಪ್ರಕಾರ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರಗಳನ್ನು ನೀಡಬೇಕು ಎಂಬುದು ವಿದ್ಯಾರ್ಥಿಯ ವಾದವಾಗಿತ್ತು.

    2019-20ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಸೇರಿದಂತೆ RTE ಅಡಿ ಪ್ರವೇಶ ಪಡೆದಿರುವ ಮಕ್ಕಳಿಗೆ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರ ಮಾತ್ರ ವಿತರಿಸಲಾಗಿದೆ. ಎರಡನೇ ಜೊತೆಯನ್ನು ಕೇವಲ ಬಟ್ಟೆಯನ್ನು ಮಾತ್ರ ನೀಡಿದೆ, ಇನ್ನೂ ಕೆಲವೆಡೆ ಬಟ್ಟೆಯನ್ನು ಸಹ ನೀಡಿಲ್ಲ. ಇದರಿಂದ ಬಡ ಮಕ್ಕಳು ಹಾಗೂ ಅವರ ಪೋಷಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅನೇಕ ಶಾಲೆಗಳಲ್ಲಿ ಇನ್ನೂ ಸಹ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರವನ್ನೂ ವಿತರಿಸಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವಿದ್ಯಾರ್ಥಿಯ ವಾದವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಏನಿದು ಪ್ರಕರಣ:
    ಸರ್ಕಾರ 2015-16ನೇ ಶೈಕ್ಷಣಿಕ ಸಾಲಿನಿಂದ ಎರಡು ಜೊತೆ ಸಮವಸ್ತ್ರ ನೀಡುವಂತೆ ಆದೇಶ ಹೊರಡಿಸಿತ್ತು. 2015-16ನೇ ಶೈಕ್ಷಣಿಕ ವರ್ಷದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಾಗಿತ್ತು. ಆದೇಶ ಹೊರಡಿಸಿದ ವರ್ಷ ಮಾತ್ರ ಸರ್ಕಾರ ಎರಡು ಜೊತೆ ಸಮವಸ್ತ್ರ ನೀಡಿತ್ತು. ನಂತರದ ವರ್ಷಗಳಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಒಂದೇ ಜೊತೆ ಸಮವಸ್ತ್ರವನ್ನು ನೀಡಲಾಗಿತ್ತು. ಅಲ್ಲದೆ, 2018-19 ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡುವಲ್ಲಿ ಸರ್ಕಾರ ತಕರಾರು ಎತ್ತಿತ್ತು. ಕಳೆದ ವರ್ಷವೂ ಸಹ ಒಂದರಿಂದ ಎಂಟನೆ ತರಗತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದೇ ಜೊತೆ ಸಮವಸ್ತ್ರ ನೀಡಿತ್ತು. ಹೀಗಾಗಿ ಸರ್ಕಾರದ ಕ್ರಮ ಪ್ರಶ್ನಿಸಿ ವಿದ್ಯಾರ್ಥಿ ಹೈ ಕೋರ್ಟ್ ಮೆಟ್ಟಿಲೇರಿದ್ದ.

  • ಕುಸಿದ ಶಾಲಾ ಮೇಲ್ಛಾವಣಿ- ರಜೆ ಇದ್ದ ಕಾರಣ ತಪ್ಪಿದ ಅವಘಡ

    ಕುಸಿದ ಶಾಲಾ ಮೇಲ್ಛಾವಣಿ- ರಜೆ ಇದ್ದ ಕಾರಣ ತಪ್ಪಿದ ಅವಘಡ

    ಕಾರವಾರ: ಮಳೆಯ ಆರ್ಭಟದಿಂದ ತೇವವಾಗಿದ್ದ ಶಾಲೆಯ ಮೇಲ್ಛಾವಣಿ ಇಂದು ಕುಸಿದು ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾದ ಬಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದೆ.

    70 ವರ್ಷದ ಹಿಂದೆ ನಿರ್ಮಿಸಿದ್ದ ಹಳೆಯ ಕಟ್ಟಡ ಇದಾಗಿದ್ದು ಮಳೆಯಿಂದಾಗಿ ಕಟ್ಟಡ ಕುಸಿಯುವ ಹಂತ ತಲುಪಿತ್ತು. ಆದರೂ ಈ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಇದೇ ಕೊಠಡಿಯಲ್ಲಿ ಕ್ರೀಡಾ ವಸ್ತುಗಳನ್ನು ಇರಿಸಲಾಗುತ್ತಿತ್ತು. ಮೇಲ್ಛಾವಣಿ ಶಿಥಿಲಗೊಂಡ ಕುರಿತು ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ.

    ಅದೃಷ್ಟವಶಾತ್ ಇಂದು ಭಾನುವಾರವಾಗಿ ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ಭೇಟಿ ನೀಡಿಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಪೋಷಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

  • ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

    ರಕ್ಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

    ಚಂಡೀಗಡ: ಹರ್ಯಾಣದ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದು, ಶಾಲೆಗೆ ಹೋಗುವಾಗ ಪ್ರತಿದಿನ ಎದುರಿಸಬೇಕಾದ ಕಿರುಕುಳದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    7 ರಿಂದ 12 ನೇ ತರಗತಿಯವರೆಗಿನ ಮಾನೇಸರ್‍ ನ ಸರ್ಕಾರಿ ಶಾಲೆಯ ಐದು ವಿದ್ಯಾರ್ಥಿನಿಯರು, ತಮ್ಮ ಶಾಲೆಗೆ ಭದ್ರತಾ ಸಿಬ್ಬಂದಿ ನೇಮಕವಾಗಿಲ್ಲ. ನಮ್ಮ ಶಾಲೆಗೆ ಕಾಪೌಂಡ್ ಇಲ್ಲ. ಅದ್ದರಿಂದ ನಮ್ಮ ಶಾಲೆಗೆ ಹೊರಗಿನಿಂದ ಯುವಕರು ಬಂದು ಕಿರುಕುಳ ನೀಡುತ್ತಾರೆ. ನಮಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

    ವರದಿಯ ಪ್ರಕಾರ ಈ ಶಾಲೆಯಲ್ಲಿ ಸುಮಾರು 600 ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ತಡೆಗೋಡೆ ಇಲ್ಲವಾದರಿಂದ ಅವರಣದೊಳಗೆ ಯಾರು ಬೇಕಾದರು ಬರಬಹುದು. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ಯುವಕರು ಕುಡಿದು ಶಾಲೆಯ ಅವರಣಕ್ಕೆ ಬಂದು ಹುಡುಗಿಯರನ್ನು ಚುಡಾಯಿಸುವುದು, ಕೆಟ್ಟ ಪದಗಳಲ್ಲಿ ನಿಂದಿಸುವುದು ಮಾಡುತ್ತಾರೆ ಎನ್ನಲಾಗಿದೆ.

    ಈ ಶಾಲಾ ಕಾಪೌಂಡ್ ಒಳಗೆ ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಚಾಯತ್ ಕಟ್ಟಡ, ಅಂಗನವಾಡಿ ಮತ್ತು ಉದ್ಯಾನವನವಿದೆ. ಹಾಗಾಗಿ ಇಲ್ಲಿಗೆ ಯಾವಾಗಲು ಜನರು ಬರುತ್ತಿರುತ್ತಾರೆ. ಇದರಲ್ಲಿ ಕೆಲ ಯುವಕರು ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಬೇಸತ್ತ ಬಾಲಕಿಯರು ಈಗ ಕೋರ್ಟ್‍ಗೆ ಹೋಗಿದ್ದಾರೆ.

    “ನಮ್ಮ ಶಾಲಾ ಆವರಣವನ್ನು ಶೈಕ್ಷಣಿಕೇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಸರಿಯಾದ ತಡೆ ಗೋಡೆಯ ಕೊರತೆಯಿಂದಾಗಿ, ಸಮಾಜವಿರೋಧಿ ಅಂಶಗಳು ಶಾಲಾ ಆವರಣಕ್ಕೆ ಸುಲಭವಾಗಿ ಪ್ರವೇಶಿಸುತ್ತೀವೆ. ಈ ರೀತಿಯ ತೊಂದರೆಯಿಂದ ಶಾಲಾ ಆಡಳಿತ ಮಂಡಳಿ ಆಟದ ವ್ಯವಸ್ಥೆಯನ್ನು ಶಾಲೆಯ ಒಳಗೆ ಮಾಡಿದೆ” ಎಂದು ವಿದ್ಯಾರ್ಥಿನಿಯರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಈ ವಾರದ ಆರಂಭದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗಿತ್ತು.

    ಇದು ನಮ್ಮ ಶಿಕ್ಷಣದ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಈ ವಿಚಾರವಾಗಿ ಪದೇ ಪದೇ ಮನವಿಯನ್ನು ಮಾಡಿದ್ದರು ನಿರ್ಲಕ್ಷಿಸಿದ್ದಾರೆ ಎಂದು ಬಾಲಕಿಯರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 2 ರೊಳಗೆ ಪ್ರತಿಕ್ರಿಯೆ ನೀಡುವಂತೆ ಹರ್ಯಾಣ ಸರ್ಕಾರಕ್ಕೆ ಸೂಚಿಸಿದೆ.

  • ಸರ್ಕಾರಿ ಶಾಲೆಯಲ್ಲಿ ಮತಾಂತರ ಆರೋಪ – ಕ್ರಮಕೈಗೊಳ್ಳಲು ಹಿಂದೂ ಸಂಘಟನೆಗಳ ಆಗ್ರಹ

    ಸರ್ಕಾರಿ ಶಾಲೆಯಲ್ಲಿ ಮತಾಂತರ ಆರೋಪ – ಕ್ರಮಕೈಗೊಳ್ಳಲು ಹಿಂದೂ ಸಂಘಟನೆಗಳ ಆಗ್ರಹ

    ಸಾಂದರ್ಭಿಕ ಚಿತ್ರ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಿಷನರಿಗಳು ಸರ್ಕಾರಿ ಶಾಲೆಗಳ ಮೂಲಕ ಮತಾಂತರದ ಹುನ್ನಾರ ನಡೆಸಿವೆ ಎಂದು ಜಿಲ್ಲಾ ಹಿಂದೂ ಪರ ಸಂಘಟನೆಗಳು ಆರೋಪ ಮಾಡಿವೆ.

    ಜಿಲ್ಲೆಯ ಹಲವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಂಚೆಯ ಮೂಲಕ ಕೆಲವು ವಿವಾದಾತ್ಮಕ ಪುಸ್ತಕಗಳು ತಲುಪಿದ್ದು, ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದೂ ಪರ ಸಂಘಟನೆಗಳ ಮುಖಂಡರು, ಕೊಡಗಿನಲ್ಲಿ ಧರ್ಮ ಪ್ರಚಾರ ಮಾಡಲು ಈ ರೀತಿ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗಿದೆ. ಜಿಲ್ಲಾಡಳಿದ ಗಮನಕ್ಕೆ ಬಾರದೇ ಪುಸ್ತಕ ವಿತರಣೆ ಆಗಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯ ನಾಲ್ಕೇರಿ, ಬಾಳೆಲೆ, ಬಿರುನಾಣಿ, ಶೆಟ್ಟಿಗೇರಿ, ಕುರ್ಚಿ, ಕಿರಗೂರು, ಬಾಡಗ, ಕಾನ್‍ಬೈಲ್, ಶ್ರೀಮಂಗಲ ಸೇರಿದಂತೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಕನ್ನಡ ಭಾಷೆಯಲ್ಲಿ ಸತ್ಯಮೇವ ಜಯತೆ, ಯೋಹಾನನು ಬರೆದ ಸುವಾರ್ತೆ ಹಾಗೂ ಕೊಡವ ಭಾಷೆಯಲ್ಲಿ ತರ್ಜುಮೆಗೊಂಡಿರುವ ಬೈಬಲ್ ದೇವಡ ಪುದಿಯ ಒಪ್ಪಂದ ಪುಸ್ತಕಗಳನ್ನು ಅಂಚೆ ಮೂಲಕ ಶಿವಮೊಗ್ಗದಿಂದ ಸಂಸ್ಥೆಯೊಂದು ತಲುಪಿಸಿದೆ. ಈ ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಸರ್ಕಾರದ ಆದೇಶವನ್ನು ದುರ್ಬಳಕ್ಕೆ ಮಾಡಿಕೊಂಡು ಕೇವಲ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಆಂಚೆ ಮೂಲಕ ಕಳುಹಿಸಿಕೊಟ್ಟಿರುವುದರ ಹಿಂದೆ ವ್ಯವಸ್ಥಿತ ಮತಾಂತರಿಗಳ ಜಾಲವಿದೆ. ಈ ಕೊಡಲೇ ಪುಸ್ತಕಗಳನ್ನು ಹಿಂಪಡೆದು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂಪರ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

  • ಸರ್ಕಾರಿ ಶಾಲೆಯನ್ನು ಉಳಿಸಿದ ಮಲ್ಲಿಗೆ ಹೂವು

    ಸರ್ಕಾರಿ ಶಾಲೆಯನ್ನು ಉಳಿಸಿದ ಮಲ್ಲಿಗೆ ಹೂವು

    ಮಂಗಳೂರು: ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳು ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಂದ ಮುಚ್ಚುವ ಸ್ಥಿತಿಗೆ ತಪುಪಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಾಲೆಯೊಂದರ ಆವರಣದಲ್ಲಿ ಬೆಳೆದ ಮಲ್ಲಿಗೆ ಹೂಗಳೇ ಶಿಕ್ಷಕರನ್ನು ನೇಮಿಸಿ ಆ ಶಾಲೆಯನ್ನೂ ಉಳಿಸಿದೆ.

    ಹೌದು. ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವುದೇ ಖಾಸಗಿ ಶಾಲೆಗಿಂತಲೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣ ಶಾಲೆಯ ಹೂದೋಟದಲ್ಲಿರುವ ಮಲ್ಲಿಗೆ ಹೂವು. 12 ವರ್ಷಗಳ ಹಿಂದೆ ಕೇವಲ 7 ಮಕ್ಕಳನ್ನು ಹೊಂದಿ ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಈ ಮಲ್ಲಿಗೆ ಹೂವು ಉಳಿಸಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಹೇಳಿದ್ದಾರೆ.

    2013ರಲ್ಲಿ ಶಾಲಾಭಿವೃದ್ಧಿ ಸಮಿತಿ ಶಾಲೆಯ ತೋಟದಲ್ಲಿ 10 ಮಲ್ಲಿಗೆ ಗಿಡಗಳನ್ನು ತಂದು ನೆಟ್ಟಿದ್ದರು. ದಿನಕಳೆದಂತೆ ಗಿಡಗಳಲ್ಲಿ ಅರಳಿದ ಮಲ್ಲಿಗೆಯನ್ನು ಒಟ್ಟು ಸೇರಿಸಿದಾಗ ದೊಡ್ಡ ಮೊತ್ತ ಶಾಲೆಯ ಕೈ ಸೇರುತ್ತಿತ್ತು. ಸದ್ಯ 30 ಮಲ್ಲಿಗೆ ಬುಡಗಳನ್ನು ಹೊಂದಿರುವ ಈ ಶಾಲೆ ವಾರ್ಷಿಕ 40 ರಿಂದ 45 ಸಾವಿರ ರೂಪಾಯಿ ಆದಾಯ ಪಡೆಯುತ್ತಿದೆ. ಇದೇ ಆದಾಯದಲ್ಲಿ ಇಬ್ಬರು ಗೌರವ ಶಿಕ್ಷಕರನ್ನು ನೇಮಕ ಮಾಡಿದ್ದು ಮಲ್ಲಿಗೆ ಮಾರಾಟದಿಂದ ಬಂದ ಹಣದಲ್ಲೇ ಸಂಬಳ ನೀಡಲಾಗುತ್ತಿದೆ. ದಾನಿಗಳ ಸಹಾಯದಿಂದ ಹೆಚ್ಚುವರಿ ತರಗತಿ ಕೊಠಡಿ, ಛಾವಣಿ ದುರಸ್ತಿ, ಶೌಚಾಲಯ ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಸದ್ಯ ಈ ಶಾಲೆಯಲ್ಲಿ 80 ಮಕ್ಕಳು ಕಲಿಯುತ್ತಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸೀಕ್ವೆರಾ ತಿಳಿಸಿದ್ದಾರೆ.

    ಒಟ್ಟಾರೆ ಮುಚ್ಚುವ ಸ್ಥಿತಿಯಲ್ಲಿದ್ದ ಓಜಲ ಸರಕಾರಿ ಶಾಲೆಯ ಸಿಬ್ಬಂದಿ ಹಾಗೂ ಪೋಷಕರ ಶ್ರಮದಿಂದಾಗಿ ಮತ್ತೆ ಅಭಿವೃದ್ಧಿ ಕಂಡಿದೆ. ಈ ಶಾಲೆಯ ಮಾದರಿಯನ್ನು ರಾಜ್ಯದ ಎಲ್ಲಾ ಶಾಲೆಗಳು ಅಳವಡಿಸಿಕೊಂಡರೆ ಆರ್ಥಿಕ ವಿಷಯದಲ್ಲಿ ಸ್ವಾವಲಂಬಿಗಳಾಗಿ ಮತ್ತಷ್ಟು ಅಭಿವೃದ್ಧಿ ಪಡಿಸಬಹುದು.

  • ಸರ್ಕಾರಿ ಶಾಲೆ ಸಿಸಿಟಿವಿ ಕ್ಯಾಮೆರಾ ಕಿತ್ತು ಕಲ್ಲಿನಿಂದ ಜಜ್ಜಿದ

    ಸರ್ಕಾರಿ ಶಾಲೆ ಸಿಸಿಟಿವಿ ಕ್ಯಾಮೆರಾ ಕಿತ್ತು ಕಲ್ಲಿನಿಂದ ಜಜ್ಜಿದ

    ಧಾರವಾಡ: ಸರ್ಕಾರಿ ಶಾಲೆಯ ಸಿಸಿಟಿವಿ ಕ್ಯಾಮೆರಾ ಕಿತ್ತು ವ್ಯಕ್ತಿಯೋರ್ವ ಕಲ್ಲಿನಿಂದ ಜಜ್ಜಿ ಧ್ವಂಸಗೊಳಿಸಿದ್ದಾನೆ. ಜಿಲ್ಲೆಯ ಉಪ್ಪಿನ ಬೆಟಗೇರಿಯ ಶಾಲೆಯಲ್ಲಿ ಪುಂಡರು ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿದ್ದಾರೆ.

    ಕ್ಯಾಮೆರಾ ಹಿಂದಿನಿಂದ ಬಂದ ವ್ಯಕ್ತಿ ಕಿತ್ತುಕೊಂಡು ಹೋಗಿ ಕೊಂಚ ದೂರದಲ್ಲಿ ಕಲ್ಲಿನಿಂದ ಜಜ್ಜಿದ್ದಾನೆ. ಶಾಲೆಯ ನೀರಿನ ಟ್ಯಾಂಕರ್ ಬಳಿ ಅಳವಡಿಸಿದ್ದ ಇನ್ನೊಂದು ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.

    ಇಂದು ಬೆಳಗ್ಗೆ ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಗ್ರಾಮ ಪಂಚಾಯ್ತಿಯವರು ಪುಂಡನಿಗಾಗಿ ಹುಡುಕಾಟ ನಡೆಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ರೈಲ್ವೇ ಸ್ಟೇಷನ್‍ಗೆ ಹೋಗಿ ನಿತ್ಯ ರೈಲಿನಲ್ಲಿ ಓದುತ್ತಿರುವ ಮಕ್ಕಳು

    ರೈಲ್ವೇ ಸ್ಟೇಷನ್‍ಗೆ ಹೋಗಿ ನಿತ್ಯ ರೈಲಿನಲ್ಲಿ ಓದುತ್ತಿರುವ ಮಕ್ಕಳು

    ಬೆಂಗಳೂರು: ದುಡಿಯುವವನಿಗೆ ಒಂದು ಕಾಲ, ಹಾಗೇ ಅರಸನಿಗೆ ಒಂದು ಕಾಲ ಎಂಬ ಮಾತು ಕೇಳ್ತಿರಾ. ಈಗ ಇದು ಕೊಂಚ ಅಪ್‍ಡೇಟ್ ಆಗಿದೆ. ಖಾಸಗಿ ಶಾಲೆಗಳ ಟ್ರೆಂಡ್ ಒಂದ್ ಕಾಲ, ಈಗ ಸರ್ಕಾರಿ ಶಾಲೆಗಳ ಟ್ರೆಂಡ್ ಕಾಲ ಶುರುವಾಗಿದೆ.

    ಬೆಂಗಳೂರಿನ ಮೂಡಲಪಾಳ್ಯದಲ್ಲಿರೊ ರೈಲ್ವೇ ಸ್ಟೇಷನ್‍ನಲ್ಲಿ ನಿತ್ಯ ಮಕ್ಕಳು ಓದುವುದಕ್ಕಾಗಿ ರೈಲು ಹತ್ತುತ್ತಾರೆ ಹಾಗೂ ಇಳಿಯುತ್ತಾರೆ. ಬಡ ಮಕ್ಕಳನ್ನು ಆಕರ್ಷಿಸಲು ಹಾಗೂ ಸರ್ಕಾರಿ ಶಾಲೆಗೆ ಹೊಸ ಲುಕ್ ಕೊಡಲು ಹೀಗೆ ವಿಭಿನ್ನ ಪೇಂಟಿಂಗ್ ಮಾಡಲಾಗಿದೆ. ಈ ಸರ್ಕಾರಿ ಶಾಲೆಯನ್ನು ನಂಬಿರುವ ಬಡ ಮಕ್ಕಳಿಗೆ ಈಗ ವಿದ್ಯೆ ಜೊತೆಗೆ ಖುಷಿಯೂ ಫ್ರೀ ಆಗಿ ಸಿಕ್ಕಿದೆ. ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ವತಿಯಿಂದ ಹೀಗೆ ಶಾಲೆಗೆ ಹೊಸ ರಂಗು ನೀಡಿದ್ದಾರೆ.

    ಸರ್ಕಾರಿ ಶಾಲೆ ಎಂದರೆ ಮಕ್ಕಳು ಬರುವ ಸಂಖ್ಯೆ ಕಡಿಮೆ ಆಗಿದೆ. ಸರ್ಕಾರಿ ಶಾಲೆ ಮಕ್ಕಳನ್ನು ಆರ್ಕಷಿಸುವ ಸಲುವಾಗಿ ಇಲ್ಲಿ ಬದಲಾವಣೆ ಮಾಡಬೇಕು ಎಂದು ನಮ್ಮ ವಾರ್ಡಿನ ರಾಜ್ಯ ನಾಮಫಲಕ ಕಲಾವಿದರ ಸಂಘದ ಯುವಕರು ಸೇರಿ ರೈಲಿನ ಪೇಟಿಂಗ್ ಮಾಡಲಾಗಿದೆ. ಈಗಾಗಲೇ ಬೇರೆ ಶಾಲೆಯಲ್ಲಿ ಗಿಡ-ಮರ ಚಿತ್ರ, ಸಾಹಿತಿಗಳ ಚಿತ್ರ ಕಾಮನ್ ಆಗಿತ್ತು. ವಿಭಿನ್ನವಾಗಿ ಇರಲಿ ಎಂದು ಈ ರೈಲಿನ ಪೇಟಿಂಗ್ ಮಾಡಿದ್ದೇವೆ ಎಂದು ಕಾರ್ಪೋರೇಟರ್ ದಾಸೇಗೌಡರು ತಿಳಿಸಿದ್ದಾರೆ.

    ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಸಿಎಂಗೆ ಪತ್ರ ಬರೆದು 3 ವರ್ಷ ಸರ್ಕಾರಿ ಶಾಲೆ ಹೈಟೆಕ್ ಮಾಡ್ತೀವಿ. ಇದರಲ್ಲಿ ನಟ ರಿಷಭ್ ಶೆಟ್ಟಿ, ನಟಿ ಪ್ರಣಿತಾ ಹೀಗೆ ಹಲವರು ಕೈ ಜೋಡಿಸ್ತಾರೆ ಎಂದಿದ್ದು, ಸಿಎಂ ಸಹ ಶಿಕ್ಷಣ ಇಲಾಖೆ ಗಮನ ಹರಿಸುವಂತೆ ಸೂಚನೆ ನೀಡಿದ್ದಾರೆ.

  • ಸಿಎಂ ಬರುತ್ತಿದ್ದಾರೆ ಎಂದು ನಾಡಗೀತೆ ಕಲಿಯುತ್ತಿರುವ ಮಕ್ಕಳು

    ಸಿಎಂ ಬರುತ್ತಿದ್ದಾರೆ ಎಂದು ನಾಡಗೀತೆ ಕಲಿಯುತ್ತಿರುವ ಮಕ್ಕಳು

    – ರಾಜ್ಯ ಗಡಿ ಭಾಗದಲ್ಲಿ ಕನ್ನಡಕಿಲ್ಲ ಆದ್ಯತೆ

    ಬೀದರ್: ಸಿಎಂ ಇದೇ ತಿಂಗಳು 27 ರಂದು ಗಡಿ ಜಿಲ್ಲೆ ಬೀದರ್‍ನ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗಾಗಲೇ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ರಸ್ತೆ, ಕುಡಿಯುವ ನೀರು. ಶಾಲೆಯ ಕಟ್ಟಡ ಕಾಮಗಾರಿ ಆರಂಭಿಸಿದ್ದಾರೆ.

    ಅಲ್ಲದೇ ಉಜಳಾಂಬ ಗ್ರಾಮ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿನ ಮಕ್ಕಳಿಗೆ ಸರಿಯಾಗಿ ನಾಡಗೀತೆಯನ್ನು ಕೂಡ ಹಾಡಲು ಬರುತ್ತಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ಬಂದ ಸಮಯದಲ್ಲಿ ನಾಡಗೀತೆ ಬರದೆ ಮುಜಗರ ಅನುಭವಿಸಬಾರದು ಎಂದು ಅಲ್ಲಿನ ಶಿಕ್ಷಕರು ಪಠ್ಯದಲ್ಲಿರೋ ನಾಡ ಗೀತೆಯನ್ನು ಮಕ್ಕಳ ಮುಂದಿಟ್ಟು ಕಂಠಪಾಠ ಮಾಡಿಸುತ್ತಿದ್ದಾರೆ.

    ಗಡಿ ಜಿಲ್ಲೆಯಲ್ಲಿ ಸರಿಯಾದ ಕನ್ನಡ ಶಿಕ್ಷಕರ ನೇಮಕಾವಾಗದೆ ಇರೋದು, ಕನ್ನಡ ಶಾಲೆ ಸರಿಯಾದ ರೀತಿಯ ನಿರ್ವಹಣೆ ಇಲ್ಲದೆ ಇರುವುದರಿಂದ ಮಕ್ಕಳಿಗೆ ನಾಡಗೀತೆಯನ್ನು ಸಹ ಹಾಡಲು ಬಾರದು ಪರಸ್ಥಿತಿ ನಿರ್ಮಾಣವಾಗಿದೆ. ಆದರೆ ಕಂಠಪಾಠ ಮಾಡಿದ ಮಕ್ಕಳಿಗೆ ನಾಡಗೀತೆ ಅರ್ಥ ಗೊತ್ತಿಲ್ಲ. ಗಡಿ ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದರೆ ಕನ್ನಡ ಭಾಷೆ ಅಳಿವಿನಂಚಿಗೆ ಬಂದು ನಿಲ್ಲುತ್ತೆ ಅನ್ನೋದು ಸ್ಥಳೀಯ ಕನ್ನಡಿಗರ ಆತಂಕವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡ್ತೀವಿ:ಹೆಚ್.ಡಿ ರೇವಣ್ಣ

    ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡ್ತೀವಿ:ಹೆಚ್.ಡಿ ರೇವಣ್ಣ

    – ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ

    ಹಾಸನ: ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಎಂದು ಎಲ್ಲಾ ಹೇಳಿದರು. ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ. ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡಿತ್ತೀವಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

    ಜಿಲ್ಲೆಯಲ್ಲಿ ತಣ್ಣೀರುಹಳ್ಳದಲ್ಲಿರುವ ಚೆಸ್ಕಾಂ ಮುಖ್ಯ ಕಾರ್ಯಪಾಲನಾ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2006ರಲ್ಲಿ ನಮ್ಮ ಸರ್ಕಾರದಲ್ಲಿ ಗ್ಯಾಂಗ್ ಮ್ಯಾನ್ ಗಳನ್ನು ನೇಮಕ ಮಾಡಿದ್ದೇವು. ಆದರೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದೆ ಶೋಭಕ್ಕ ಸೇರಿ ಇವರೆಲ್ಲರೂ ರೇವಣ್ಣನ ಕಡೆಯವರು ಎಂದು ಲೈನ್‍ಮೆನ್ ನೇಮಕಾತಿಯನ್ನು ವಜಾ ಮಾಡಿದರು ಎಂದು ಆರೋಪಿಸಿದರು.

    2006ರಲ್ಲಿ ನಮ್ಮ ಸರ್ಕಾರದಲ್ಲಿ 450 ಚೆಸ್ಕಾಂ ಸಬ್ ಸ್ಟೇಷನ್ ಮಾಡಿದ್ದೆ. ಈಗ ಎಲ್ಲಾ ಆನ್ ಲೈನ್ ಗೀನ್ ಲೈನ್ ಅಂತಾರೆ ಆಗ ಯಾವುದೂ ಇರಲಿಲ್ಲ. ಈ ವಿಚಾರವಾಗಿ ಹಿಂದಿನ ಸರ್ಕಾರ ಏನು ಮಾಡಿದೆ ಎಂದು ಹೇಳಲಿ ನೋಡೋಣ. ಈ ಹಿಂದೆ ಕೆಇಬಿಗೆ 200 ಕೋಟಿ ಅನುದಾನ ಕೊಡಿಸಿದ್ದಕ್ಕೆ ನನಗೆ 10 ಕೋಟಿ ಲಂಚ ಕೊಡೋಕೆ ಬಂದಿದ್ದರು. ನಾನು ಲಂಚ ತೆಗೆದುಕೊಳ್ಳಲಿಲ್ಲಾ ಆದರ ಬದಲಾಗಿ ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಬ್ಲಾಕ್ ಮಾಡಿ ಎಂದು ಮಾಡಿಸಿದ್ದೀನಿ ಎಂದು ತಿಳಿಸಿದರು.

    ಕಳೆದ 2006ರಲ್ಲಿ ನಾವು ಚನ್ನರಾಯಪಟ್ಟಣ, ಹೊಳೆನರಸೀಪುರಕ್ಕೆ 35 ಸಾವಿರ ಟ್ರಾನ್ಸ್ ಫಾರ್ಮರ್‍ ಗಳನ್ನು ತರಿಸಿದ್ದೇವು. ಸರ್ಕಾರ ಬಿದ್ದ ತಕ್ಷಣ ಎಲ್ಲಾ ಟ್ರಾನ್ಸ್ ಫಾರ್ಮರ್‍ ಗಳನ್ನು ತುಂಬಿಕೊಂಡು ಹೋಗಿದ್ದರು. ಈಗ ರೈತರು ಯಾರೆಲ್ಲ ಟ್ರಾನ್ಸ್ ಫಾರ್ಮರ್ ಕೇಳಿದರೆ ಎಲ್ಲರಿಗೂ ಕೊಡಿ ಎಂದು ಹೇಳಿದರು.

    ತುಮಕೂರಿಗೆ 25 ಟಿಎಂಸಿ ನೀರು ಮೊದಲು ನೀಡಿದ್ದು ನಾವು ಈಗ ಹೊಸ ಎಂಪಿ ಬಂದಿದ್ದಾರೆ ಹೇಗೆ ನೀರು ಕೊಡಿಸುತ್ತಾರೆ ನೋಡೋಣ. ಇಡೀ ರಾಜ್ಯದಲ್ಲಿ ನನ್ನ ಮೇಲೆ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ಏಕೈಕ ಪ್ರತಿನಿಧಿ ನಾನು, ಯಡಿಯೂರಪ್ಪ ಸರ್ಕಾರದಲ್ಲಿ ನನ್ನ ಮೇಲೆ ತನಿಖೆ ಮಾಡಿದರು. ನನ್ನ ಜೊತೆ ಕೆಲ ಒಳ್ಳೆಯ ಅಧಿಕಾರಿಗಳ ಮೇಲೆ ತನಿಖೆ ಮಾಡಿಸಿದರಿ ಎಂದು ಕಿಡಿಕಾರಿದರು.

    ಖಾಸಗಿಯವರ ಪೈಪೋಟಿ ಮೇಲೆ ನಾವು ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುತ್ತಿದ್ದೇವೆ. ಈ ಬಾರಿ 1000 ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ ಕೇಂದ್ರ ಸರ್ಕಾರ ಜನರಿಗೆ ಏನು ಮಾಡಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಿರುಗಾಳಿ ಸಹಿತ ಮಳೆ- ನೆಲಕ್ಕುರುಳಿದ ಸರ್ಕಾರಿ ಶಾಲೆ ಗೋಡೆಗಳು

    ಬಿರುಗಾಳಿ ಸಹಿತ ಮಳೆ- ನೆಲಕ್ಕುರುಳಿದ ಸರ್ಕಾರಿ ಶಾಲೆ ಗೋಡೆಗಳು

    ಬೆಳಗಾವಿ: ಕಳೆದ ಒಂದು ವಾರದಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯ ಎರಡು ಕಟ್ಟಡದ ಗೋಡೆಗಳು ನೆಲಕ್ಕುರಳಿವೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿಗಳ ಗೋಡೆಗಳು ಕುಸಿದು ಬಿದ್ದಿವೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಸಂದರ್ಭದಲ್ಲಿ ಈ ಗೋಡೆಗಳು ಕುಸಿದಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

    ಶಿಥಿಲಾವಸ್ಥೆಯಲ್ಲಿ ಈ ಶಾಲೆ ಇದ್ದರೂ ದುರಸ್ಥಿ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡದೆ ಇರುವುದು ಗೋಡೆ ಕುಸಿತಕ್ಕೆ ಕಾರಣವಾಗಿದೆ. ಇನ್ನೂ ಶಾಲೆಯ ಎರಡು ಕೊಠಡಿಗಳ ಗೋಡೆ ಕುಸಿತಗೊಂಡಿರುವ ಕಾರಣ ಮಕ್ಕಳು ಈ ಶಾಲೆಯಲ್ಲಿ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಕೊಠಡಿಗಳು ಇಲ್ಲದ ಕಾರಣ ಇರುವ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಕಲಿಸಲಾಗುತ್ತಿದೆ.

    ಶಿಥಿಲಾವಸ್ಥೆಯಲ್ಲಿರುವ ಶಾಲೆಯನ್ನು ಅದಷ್ಟು ಬೇಗ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.